29 – ರಾಕ್ಷಸರು

ಇವು ಸರ್ವಶಕ್ತನಾದ ದೇವರ ಪವಿತ್ರ ಮಾತುಗಳು.
ಮಾನವರ ಮಾತುಗಳಲ್ಲಿ ನಮಗೆ ಆಸಕ್ತಿ ಇಲ್ಲ.
ದೇವರನ್ನು ಪ್ರೀತಿಸುವ ಯಾರಿಗಾದರೂ... ದೇವರು ಇದರ ಬಗ್ಗೆ ಹೀಗೆ ಹೇಳುತ್ತಾನೆ: ರಾಕ್ಷಸರು.

ಟಾಪ್ 3 ಅತ್ಯಂತ ಮಹತ್ವದ ಪದ್ಯಗಳು

ಹೇಗೆಂದರೆ ದೇವದೂತರು ಪಾಪಮಾಡಿದಾಗ ದೇವರು ಅವರನ್ನು ಸುಮ್ಮನೆ ಬಿಡದೆ ನರಕಕ್ಕೆ ದೊಬ್ಬಿ ನ್ಯಾಯತೀರ್ಪನ್ನು ಹೊಂದುವುದಕ್ಕಾಗಿ ಸಂಕೋಲೆಗಳಿಂದ ಬಂಧಿಸಿ ಕತ್ತಲೆಯ ಕೂಪಕ್ಕೆ ಒಪ್ಪಿಸಿದನು.

ಆದರೂ ಮುಂಬರುವ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳ ನುಡಿಗಳಿಗೂ, ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತ ನಂಬಿಕೆಯಿಂದ ಭ್ರಷ್ಟರಾಗುವರೆಂದು ದೇವರಾತ್ಮನು ಸ್ಪಷ್ಟವಾಗಿ ಹೇಳುತ್ತಿದ್ದಾನೆ.

ಆಹಾ, ಉದಯನಕ್ಷತ್ರವೇ, ಉದಯಪುತ್ರನೇ, ಆಕಾಶದಿಂದ ನೀನು ಹೇಗೆ ಬಿದ್ದೆ! ಜನಾಂಗಗಳನ್ನು ಸ್ವಾಧೀನಪಡಿಸಿಕೊಂಡ ನೀನು ಭೂಮಿಗೆ ಹೇಗೆ ತಳಲ್ಪಟ್ಟಿದ್ದೀ! ನೀನು ನಿನ್ನ ಮನಸ್ಸಿನಲ್ಲಿ, ‘ನಾನು ಆಕಾಶಕ್ಕೆ ಏರಿ, ನನ್ನ ಸಿಂಹಾಸನವನ್ನು ದೇವರ ನಕ್ಷತ್ರಗಳಿಗಿಂತ ಘನತೆಗೇರಿಸಿ, ಉತ್ತರದಿಕ್ಕಿನ ಕಟ್ಟಕಡೆಯಿರುವ ಸಮೂಹ ಪರ್ವತದ ಮೇಲೆ ಆಸೀನನಾಗುವೆನು. ಉನ್ನತವಾದ ಮೇಘಮಂಡಲದ ಮೇಲೆ ಏರಿ ಮಹೋನ್ನತನಿಗೆ ಸಮಾನನಾಗುವೆನು’ ಎಂದುಕೊಂಡೆಯಲ್ಲಾ! ಆದರೆ ನೀನು ಪಾತಾಳಕ್ಕೆ, ಅಧೋಲೋಕದ ಅಗಾಧ ಸ್ಥಳಗಳಿಗೆ ತಳ್ಳಲ್ಪಡುವೆ.

ಕ್ಯಾನೊನಿಕಲ್ ಕ್ರಮದಲ್ಲಿ ಪ್ರತಿ ವಚನ - 173 ಭಾಗಗಳು

ಯೆಹೋವನಾದ ದೇವರು ಉಂಟುಮಾಡಿದ ಎಲ್ಲಾ ಕಾಡುಮೃಗಗಳಲ್ಲಿ ಸರ್ಪವು ಅತಿ ಯುಕ್ತಿಯುಳ್ಳದ್ದಾಗಿತ್ತು. ಸರ್ಪವು ಸ್ತ್ರೀಯ ಬಳಿಗೆ ಬಂದು, “ಏನಮ್ಮಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನು ನೀವು ತಿನ್ನಬಾರದೆಂದು ದೇವರು ಅಪ್ಪಣೆ ಕೊಟ್ಟಿರುವುದು ನಿಜವೋ?” ಎಂದು ಕೇಳಲು. ಆ ಸ್ತ್ರೀಯು ಸರ್ಪಕ್ಕೆ, “ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ತಿನ್ನಬಹುದು, ಆದರೆ ತೋಟದ ಮಧ್ಯದಲ್ಲಿರುವ ಆ ಮರದ ಹಣ್ಣಿನ ವಿಷಯವಾಗಿ, ‘ನೀವು ಇದನ್ನು ತಿನ್ನಲೂ ಬಾರದು, ಮುಟ್ಟಲೂ ಕೂಡದು, ತಿಂದರೆ ಸಾಯುವಿರಿ’ ಎಂದು ದೇವರು ಹೇಳಿದ್ದಾನೆ” ಅಂದಳು. ಆಗ ಸರ್ಪವು ಸ್ತ್ರೀಗೆ, “ನೀವು ನಿಶ್ಚಯವಾಗಿ ಸಾಯುವುದಿಲ್ಲ. ನೀವು ಇದರ ಹಣ್ಣನ್ನು ತಿಂದ ಕ್ಷಣವೇ ನಿಮ್ಮ ಕಣ್ಣುಗಳು ತೆರೆಯುವವು, ನೀವು ದೇವರುಗಳಂತೆ ಆಗಿ ಒಳ್ಳೆಯದರ ಮತ್ತು ಕೆಟ್ಟದ್ದರ ಬೇಧವನ್ನು ತಿಳಿಯುವಿರಿ, ಇದು ದೇವರಿಗೆ ಚೆನ್ನಾಗಿ ಗೊತ್ತು” ಎಂದು ಹೇಳಿತು. ಆಗ ಸ್ತ್ರೀಯು ಆ ಮರದ ಹಣ್ಣು ತಿನ್ನುವುದಕ್ಕೆ ಉತ್ತಮವಾಗಿಯೂ, ನೋಡುವುದಕ್ಕೆ ರಮ್ಯವಾಗಿಯೂ, ಜ್ಞಾನೋದಯಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಇದೆ ಎಂದು ತಿಳಿದು ಅದನ್ನು ತೆಗೆದುಕೊಂಡು ತಿಂದಳು ಮತ್ತು ಸಂಗಡ ಇದ್ದ ಗಂಡನಿಗೂ ಕೊಡಲೂ, ಅವನೂ ತಿಂದನು.

ಯೆಹೋವನಾದ ದೇವರು ಆ ಸ್ತ್ರೀಗೆ, “ಇದೇನು ನೀನು ಮಾಡಿದ್ದು?” ಎಂದು ಕೇಳಲು, ಆ ಸ್ತ್ರೀಯು, “ಸರ್ಪವು ನನ್ನನ್ನು ವಂಚಿಸಿತು, ನಾನು ತಿಂದೆನು” ಎಂದು ಉತ್ತರ ಕೊಟ್ಟಳು. ಆಗ ಯೆಹೋವನಾದ ದೇವರು ಸರ್ಪಕ್ಕೆ; “ನೀನು ಈ ಕಾರ್ಯವನ್ನು ಮಾಡಿದ್ದರಿಂದ ಎಲ್ಲಾ ಪಶುಗಳಲ್ಲಿಯೂ ಅಡವಿಯ ಎಲ್ಲಾ ಕಾಡುಮೃಗಗಳಲ್ಲಿಯೂ ಶಾಪಗ್ರಸ್ತನಾಗಿರುವೆ. ನೀನು ಹೊಟ್ಟೆಯಿಂದ ಹರಿದು ನಿನ್ನ ಜೀವಮಾನದ ದಿನಗಳಲ್ಲೆಲ್ಲಾ ಮಣ್ಣನ್ನೇ ತಿನ್ನುವಿ. ನಿನಗೂ, ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವುದು. ನೀನು ಅವನ ಹಿಮ್ಮಡಿಯನ್ನು ಕಚ್ಚುವಿ” ಎಂದು ಹೇಳಿದನು.

ಭೂಮಿಯ ಮೇಲೆ ಮನುಷ್ಯರ ಸಂಖ್ಯೆ ಹೆಚ್ಚಾಯಿತು. ಇವರಿಗೆ ಹುಟ್ಟಿದ ಹೆಣ್ಣುಮಕ್ಕಳು ಸೌಂದರ್ಯವುಳ್ಳವರಾಗಿರುವುದನ್ನು ನೋಡಿ ದೇವಪುತ್ರರು ತಮಗೆ ಇಷ್ಟವಾದವರನ್ನು ಹೆಂಡತಿಯರನ್ನಾಗಿ ಮಾಡಿಕೊಂಡರು. ಆಗ ಯೆಹೋವನು, “ನನ್ನ ಆತ್ಮವು ಮನುಷ್ಯರಲ್ಲಿ ಶಾಶ್ವತವಾಗಿ ಹೆಣಗಲು ಸಾಧ್ಯವಿಲ್ಲ; ಏಕೆಂದರೆ ಅವರು ರಕ್ತಮಾಂಸ ಹೊಂದಿರುವ ಮರ್ತ್ಯರೇ. ಅವರು ನೂರ ಇಪ್ಪತ್ತು ವರ್ಷ ಬದುಕುವರು” ಅಂದನು. ಅನಂತರ ದೇವಪುತ್ರರು ಮನುಷ್ಯ ಪುತ್ರಿಯರೊಂದಿಗೆ ಸಂಗಮಿಸಿದಾಗ ಮಕ್ಕಳು ಹುಟ್ಟಿದರು. ಆ ಕಾಲದಿಂದಲೂ ಅದಾದ ನಂತರವೂ ಜಗದಲ್ಲಿ ನೆಫೀಲಿಯರು ಇದ್ದರು. ಇವರೇ ಪೂರ್ವಕಾಲದಲ್ಲಿ ಪ್ರಸಿದ್ಧರಾಗಿದ್ದ ಪರಾಕ್ರಮಶಾಲಿಗಳು ಎಂದು ಹೆಸರಾದವರು.

ಅವರು ಇದುವರೆಗೆ ಪೂಜಿಸುತ್ತಿದ್ದ ಅಜದೇವತೆಗಳಿಗೆ ಇನ್ನು ಮುಂದೆ ಬಲಿಕೊಟ್ಟು ದೇವದ್ರೋಹಿಗಳಾಗಬಾರದು. ಅವರಿಗೂ ಮತ್ತು ಅವರ ಸಂತತಿಯವರಿಗೂ ಇದು ಶಾಶ್ವತನಿಯಮ.’

“‘ಸತ್ತವರಲ್ಲಿ ವಿಚಾರಿಸುವವರ ಮತ್ತು ಮಂತ್ರವಾದಿಗಳ ಹತ್ತಿರ ಹೋಗಬಾರದು; ಅವರ ಆಲೋಚನೆಯನ್ನು ಕೇಳಿ ಅಶುದ್ಧರಾಗಬಾರದು. ನಾನು ನಿಮ್ಮ ದೇವರಾದ ಯೆಹೋವನು.

“‘ಯಾವನಾದರೂ ಸತ್ತವರಲ್ಲಿ ವಿಚಾರಿಸುವವರ ಅಥವಾ ಬೇತಾಳಿಕರ ಬಳಿಗೆ ಹೋಗಿ ಅವರ ಆಲೋಚನೆ ಕೇಳಿಕೊಂಡು ದೇವದ್ರೋಹಿಯಾದರೆ, ನಾನು ಆ ಮನುಷ್ಯನಿಗೆ ವಿಮುಖನಾಗಿ ಅವನನ್ನು ಕುಲದಿಂದ ತೆಗೆದುಹಾಕುವೆನು.

“‘ಸತ್ತವರಲ್ಲಿ ವಿಚಾರಿಸುವವರೂ, ಬೇತಾಳಿಕರೂ ಅವರು ಸ್ತ್ರೀಯರಾಗಲಿ ಅಥವಾ ಪುರುಷರಾಗಲಿ ಅವರು ಮರಣಶಿಕ್ಷೆ ಹೊಂದಬೇಕು. ಕಲ್ಲೆಸೆದು ಅವರನ್ನು ಕೊಲ್ಲಬೇಕು, ಆ ಶಿಕ್ಷೆಗೆ ಅವರೇ ಕಾರಣರು’” ಎಂದು ಹೇಳಿದನು.

ಆ ಸ್ತ್ರೀಯರು ತಮ್ಮ ದೇವತೆಗಳಿಗೆ ಮಾಡಿದ ಔತಣದ ಯಜ್ಞಗಳಿಗೆ ಇಸ್ರಾಯೇಲರನ್ನು ಆಹ್ವಾನಿಸಿದರು. ಇವರು ಆ ಭೋಜನವನ್ನು ಮಾಡಿ ಅವರ ದೇವತೆಗಳಿಗೆ ನಮಸ್ಕರಿಸುವವರಾದರು. ಹೀಗೆ ಇಸ್ರಾಯೇಲರು ಪೆಗೋರದ ಬಾಳನ ಭಕ್ತರಾದರು. ಯೆಹೋವನ ಕೋಪವು ಅವರ ಮೇಲೆ ಹೆಚ್ಚಾಯಿತು.

ಮಕ್ಕಳನ್ನು ಬಲಿಕೊಡುವವರು, ಕಣಿಹೇಳುವವರು, ಶಕುನನೋಡುವವರು, ಯಂತ್ರ ಮಂತ್ರಗಳನ್ನು ಮಾಡುವವರು, ಮಾಟಗಾರರು, ತಂತ್ರಗಾರರು, ಸತ್ತವರಲ್ಲಿ ವಿಚಾರಿಸುವವರು, ಬೇತಾಳ, ಪ್ರೇತ, ಭೂತ ಎಂದು ಪೂಜಿಸುವವರು ಯಾರೂ ನಿಮ್ಮಲ್ಲಿ ಇರಬಾರದು.

ದೇವರೇ ಅಲ್ಲದ ಕ್ಷುದ್ರದೇವತೆಗಳಿಗೂ, ಪೂರ್ವಿಕರು ಭಜಿಸದೆ ಇದ್ದ ಮತ್ತು ತಮಗೆ ಮೊದಲಿನಿಂದಲೂ ಗೊತ್ತಿಲ್ಲದೆ ಇರುವ ನೂತನದೇವತೆಗಳಿಗೂ ಬಲಿಯನ್ನರ್ಪಿಸಿದರು.

ಈ ಇಸ್ರಾಯೇಲರು ಯೆಹೋವನ ದೃಷ್ಟಿಯಲ್ಲಿ ಕೆಟ್ಟದನ್ನು ಮಾಡಿದರು ಹಾಗೂ ಬಾಳನನ್ನು ಸೇವಿಸಿದರು.

ಫಿಲಿಷ್ಟಿಯರು ದೇವರ ಮಂಜೂಷವನ್ನು ಎಬೆನೆಜೆರಿನಿಂದ ಅಷ್ಡೋದಿನಲ್ಲಿರುವ ದಾಗೋನನ ಗುಡಿಗೆ ತೆಗೆದುಕೊಂಡು ಹೋಗಿ ಅಲ್ಲಿ ದಾಗೋನನ ಮಗ್ಗುಲಲ್ಲೇ ಇಟ್ಟರು. ಅಷ್ಡೋದಿನವರು ಮರುದಿನ ಬೆಳಿಗ್ಗೆ ಎದ್ದು ನೋಡಲಾಗಿ ದಾಗೋನ್ ವಿಗ್ರಹವು ಯೆಹೋವನ ಮಂಜೂಷದ ಮುಂದೆ ಬೋರಲಬಿದ್ದಿರುವುದನ್ನು ಕಂಡು ಅದನ್ನು ಎತ್ತಿ ತಿರುಗಿ ಅದರ ಸ್ಥಳದಲ್ಲಿಟ್ಟರು. ಮಾರನೆಯ ದಿನ ಬೆಳಿಗ್ಗೆ ನೋಡುವಾಗ ದಾಗೋನನ ತಲೆಯೂ, ಕೈಗಳೂ ಕಡಿಯಲ್ಪಟ್ಟು ಹೊಸ್ತಿಲಿನ ಮೇಲೆ ಬಿದ್ದಿದ್ದವು; ಮುಂಡ ಮಾತ್ರ ಯೆಹೋವನ ಮಂಜೂಷದ ಮುಂದೆ ಬಿದ್ದಿತ್ತು; ಆದ್ದರಿಂದ ಈ ದಿನದ ವರೆಗೂ ದಾಗೋನನ ಯಾಜಕರೂ ಮತ್ತು ದಾಗೋನನ ಮನೆಗೆ ಬರುವವರೆಲ್ಲರೂ ಅಷ್ಡೋದಿನ ಗುಡಿಯ ಹೊಸ್ತಿಲನ್ನು ಇಂದಿಗೂ ತುಳಿಯದಿರುವುದಕ್ಕೆ ಇದೇ ಕಾರಣ. ಯೆಹೋವನ ಹಸ್ತವು ಅಷ್ಡೋದಿನವರಿಗೆ ಬಾಧಕವಾಗಿತ್ತು; ಆತನು ಆ ನಗರದಲ್ಲಿಯೂ, ಅದರ ಗ್ರಾಮಗಳಲ್ಲಿಯೂ ಗಡ್ಡೆ ರೋಗವನ್ನು ಬರಮಾಡಿ ಅವರನ್ನು ನಾಶಮಾಡಿದನು. ಅಷ್ಡೋದಿನ ಜನರು ಅದನ್ನು ನೋಡಿ, “ಇಸ್ರಾಯೇಲಿನ ದೇವರ ಮಂಜೂಷವು ನಮ್ಮ ಬಳಿಯಲ್ಲಿ ಇರಬಾರದು; ಏಕೆಂದರೆ ಆತನ ಹಸ್ತವು ನಮಗೂ, ನಮ್ಮ ದೇವರಾದ ದಾಗೋನನಿಗೂ ಬಾಧಕವಾಗಿದೆ” ಎಂದು ಹೇಳಿ

ಯೆಹೋವನ ಆತ್ಮವು ಸೌಲನನ್ನು ಬಿಟ್ಟು ಹೋಯಿತು; ಯೆಹೋವನು ಕಳುಹಿಸಿದ ದುರಾತ್ಮವು ಬಂದು ಅವನನ್ನು ಪೀಡಿಸುತ್ತಿದ್ದರಿಂದ ಅವನ ಸೇವಕರು ಅವನಿಗೆ, “ಇಗೋ, ದೇವರಿಂದ ಬಂದ ದುರಾತ್ಮವು ನಿನ್ನನ್ನು ಪೀಡಿಸುತ್ತಾ ಇದೆ. ಸ್ವಾಮೀ, ಅಪ್ಪಣೆಯಾಗಲಿ; ನಿನ್ನ ಸನ್ನಿಧಿಯಲ್ಲಿ ನಿಂತಿರುವ ನಿನ್ನ ಸೇವಕರಾದ ನಾವು ಹೋಗಿ ಕಿನ್ನರಿ ನುಡಿಸುವುದರಲ್ಲಿ ನಿಪುಣನಾದ ಒಬ್ಬನನ್ನು ಹುಡುಕಿ ತರುತ್ತೇನೆ. ಯೆಹೋವನಿಂದ ಕಳುಹಿಸಲ್ಪಟ್ಟ ದುರಾತ್ಮವು ನಿನ್ನ ಮೇಲೆ ಬರುವಾಗ ಅವನು ಕಿನ್ನರಿ ನುಡಿಸಿದರೆ ನಿನಗೆ ಉಪಶಮನವಾಗುವುದು” ಎಂದು ಹೇಳಿದರು.

ದೇವರಿಂದ ಕಳುಹಿಸಲ್ಪಟ್ಟ ದುರಾತ್ಮವು ಸೌಲನ ಮೇಲೆ ಬಂದಾಗ ದಾವೀದನು ಕಿನ್ನರಿಯನ್ನು ನುಡಿಸುವನು; ಅದರಿಂದ ದುರಾತ್ಮವು ಸೌಲನನ್ನು ಬಿಟ್ಟುಹೋಗುವುದು; ಅವನು ಉಪಶಮನಹೊಂದಿ ಚೆನ್ನಾಗಿರುತ್ತಿದ್ದನು.

ಮರುದಿನ ದೇವರಿಂದ ಕಳುಹಿಸಲ್ಪಟ್ಟ ದುರಾತ್ಮವು ಸೌಲನ ಮೇಲೆ ಬಂದದ್ದರಿಂದ ಅವನು ಬುದ್ಧಿಗೆಟ್ಟು ಮನೆಯೊಳಗೆ ಕೂಗುತ್ತಿದ್ದನು. ಅವನ ಕೈಯಲ್ಲಿ ಒಂದು ಈಟಿ ಇತ್ತು. ದಾವೀದನು ವಾಡಿಕೆಯ ಪ್ರಕಾರ ಕಿನ್ನರಿಯನ್ನು ನುಡಿಸುತ್ತಾ ಇದ್ದನು.

ಒಂದು ದಿನ ಸೌಲನು ಕೈಯಲ್ಲಿ ಈಟಿಯನ್ನು ಹಿಡಿದುಕೊಂಡು ತನ್ನ ಮನೆಯಲ್ಲಿ ಕುಳಿತುಕೊಂಡಿದ್ದಾಗ ಯೆಹೋವನಿಂದ ಕಳುಹಿಸಲ್ಪಟ್ಟ ದುರಾತ್ಮವು ಅವನ ಮೇಲೆ ಬಂದಿತು.

ಅವನು ಚೀದೋನ್ಯರ ಅಷ್ಟೋರೆತ್ ದೇವತೆಯನ್ನೂ, ಅಮ್ಮೋನಿಯರ ಮಿಲ್ಕೋಮ್ ಎಂಬ ಅಸಹ್ಯ ವಿಗ್ರಹವನ್ನು ಆರಾಧಿಸತೊಡಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು. ಅವನ ತಂದೆಯಾದ ದಾವೀದನು ಪೂರ್ಣಮನಸ್ಸಿನಿಂದ ಯೆಹೋವನನ್ನು ಸೇವಿಸಿದಂತೆ ಅವನು ಸೇವಿಸಲಿಲ್ಲ. ಅವನು ಯೆರೂಸಲೇಮಿನ ಮೂಡಲಲ್ಲಿರುವ ಗುಡ್ಡದಲ್ಲಿ ಮೋವಾಬ್ಯರ ಕೆಮೋಷ್ ಎಂಬ ಅಸಹ್ಯ ವಿಗ್ರಹಕ್ಕೂ ಮತ್ತು ಅಮ್ಮೋನಿಯರ ಮೋಲೆಕ್ ಎಂಬ ಅಸಹ್ಯ ವಿಗ್ರಹಕ್ಕೂ ಪೂಜಾಸ್ಥಳಗಳನ್ನು ಕಟ್ಟಿಸಿದನು.

ಅದಕ್ಕೆ ಮೀಕಾಯೆಹುವು “ಅದಿರಲಿ, ಈಗ ಯೆಹೋವನ ವಾಕ್ಯವನ್ನು ಕೇಳು, ಯೆಹೋವನು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡದ್ದನ್ನೂ ಪರಲೋಕಸೈನ್ಯಗಳು ಆತನ ಎಡಬಲಗಳಲ್ಲಿ ನಿಂತಿದ್ದನ್ನೂ ಕಂಡೆನು. ಯೆಹೋವನು ತನ್ನ ಹತ್ತಿರ ನಿಂತವರನ್ನು, ‘ಅಹಾಬನು ಹತನಾಗಿ ಬೀಳುವಂತೆ ಅವನನ್ನು ರಾಮೋತ್ ಗಿಲ್ಯಾದಿನ ಯುದ್ಧಕ್ಕೆ ಹೋಗಲು ಯಾರು ಪ್ರೇರೇಪಿಸುವಿರಿ’ ಎಂದು ಕೇಳಿದಾಗ ಒಬ್ಬನು ಒಂದು ರೀತಿಯಾಗಿ, ಇನ್ನೊಬ್ಬನು ಇನ್ನೊಂದು ರೀತಿಯಾಗಿ ಉತ್ತರಕೊಟ್ಟರು. ಕೊನೆಯಲ್ಲಿ ಒಂದು ಆತ್ಮವು ಯೆಹೋವನ ಮುಂದೆ ಬಂದು ನಿಂತು ಅವನಿಗೆ, ‘ನಾನು ಹೋಗಿ ಅವರನ್ನು ಪ್ರೇರೇಪಿಸುವೆನು’ ಅಂದಿತು. ‘ಹೇಗೆ ಪ್ರೇರೇಪಿಸುವಿ?’ ಎಂದು ಯೆಹೋವನು ಕೇಳಲು ಅದು, ‘ನಾನು ಅಸತ್ಯವನ್ನಾಡುವ ಆತ್ಮವಾಗಿ ಅವನ ಎಲ್ಲಾ ಪ್ರವಾದಿಗಳಲ್ಲಿ ಸೇರುವೆನು’ ಎಂದು ಉತ್ತರಕೊಟ್ಟಿತು. ಆಗ ಆತನು ಅದಕ್ಕೆ, ‘ಹೋಗಿ ಅದರಂತೆ ಮಾಡು ಅವನನ್ನು ಪ್ರೇರೇಪಿಸಿ ಸಫಲವಾಗುವಿ’ ಅಂದನು. ನೋಡು ಯೆಹೋವನು ನಿನ್ನ ವಿಷಯದಲ್ಲಿ ಕೇಡು ನುಡಿದು ನಿನ್ನ ಎಲ್ಲಾ ಪ್ರವಾದಿಗಳಲ್ಲಿ ಅಸತ್ಯವನ್ನಾಡುವ ಆತ್ಮವನ್ನು ಕಳುಹಿಸಿದ್ದಾನೆ” ಎಂದು ಹೇಳಿದನು.

ತಮ್ಮ ದೇವರಾದ ಯೆಹೋವನ ಆಜ್ಞೆಗಳನ್ನೆಲ್ಲಾ ಮೀರಿ ಎರಡು ಎರಕದ ಬಸವನಮೂರ್ತಿಗಳು, ಅಶೇರ ವಿಗ್ರಹಸ್ತಂಭ ಇವುಗಳನ್ನು ಮಾಡಿಕೊಂಡರು. ಆಕಾಶಸೈನ್ಯ, ಬಾಳ್ ದೇವತೆ ಇವುಗಳನ್ನು ಪೂಜಿಸಿದರು. ತಮ್ಮ ಗಂಡು ಹೆಣ್ಣು ಮಕ್ಕಳನ್ನು ಆಹುತಿ ಕೊಟ್ಟರು. ಯೆಹೋವನ ದೃಷ್ಟಿಯಲ್ಲಿ ನೀಚಕೃತ್ಯಗಳಾಗಿರುವ ಕಣಿಹೇಳುವುದು, ಮಾಟ ಮಂತ್ರಗಳನ್ನು ಮಾಡುವುದು ಮೊದಲಾದ ದುಷ್ಕೃತ್ಯಗಳಿಗೆ ತಮ್ಮನ್ನು ತೊಡಗಿಸಿಕೊಂಡು, ಯೆಹೋವನಿಗೆ ಕೋಪವನ್ನೆಬ್ಬಿಸಿದರು.

ಇದಲ್ಲದೆ, ಯೋಷೀಯನು ಸತ್ತವರಲ್ಲಿ ವಿಚಾರಿಸುವವರನ್ನೂ, ಭೂತ ಪ್ರೇತ ಆರಾಧಕರನ್ನೂ, ಯೆರೂಸಲೇಮ್, ಯೆಹೂದ ಪ್ರಾಂತ್ಯ ಇವುಗಳಲ್ಲಿದ್ದ ಎಲ್ಲಾ ತೆರಾಫೀಮ್ ಎಂಬ ಬೊಂಬೆಗಳನ್ನೂ, ಮೂರ್ತಿಗಳನ್ನೂ ಎಲ್ಲಾ ಅಸಹ್ಯ ವಿಗ್ರಹಗಳನ್ನೂ ತೆಗೆದುಹಾಕಿ ಯಾಜಕನಾದ ಹಿಲ್ಕೀಯನಿಗೆ ಯೆಹೋವನ ಆಲಯದಲ್ಲಿ ಸಿಕ್ಕಿದ್ದ ಧರ್ಮೋಪದೇಶಗ್ರಂಥದಲ್ಲಿದ್ದ ಆಜ್ಞೆಗಳನ್ನು ನೆರವೇರಿಸಿದನು.

ಸೌಲನು ಯೆಹೋವನ ಮಾತು ಕೇಳದೆ ಆತನಿಗೆ ವಿರೋಧವಾಗಿ ದ್ರೋಹ ಮಾಡಿದ್ದರಿಂದಲೂ, ಯೆಹೋವನ ಸನ್ನಿಧಿಯಲ್ಲಿ ವಿಚಾರಿಸದೇ, ಭೂತ, ಪ್ರೇತಗಳನ್ನು ನಂಬಿ ದೇವ ದ್ರೋಹಿಯಾದುದರಿಂದ ಅವನಿಗೆ ಇಂಥ ಮರಣವಾಯಿತು.

ಸೈತಾನನು ಇಸ್ರಾಯೇಲರಿಗೆ ವಿರುದ್ಧ ಎದ್ದು, ಇಸ್ರಾಯೇಲರ ಜನಗಣತಿ ಮಾಡುವುದಕ್ಕೆ ದಾವೀದನನ್ನು ಪ್ರೇರೇಪಿಸಿದನು.

ಯಾರೊಬ್ಬಾಮನು ತಾನು ಏರ್ಪಡಿಸಿದ ಪೂಜಾ ಸ್ಥಳಗಳಿಗಾಗಿ ಹಾಗೂ ಹೋರಿಕುರಿಗಳ ಮೂರ್ತಿ ಪೂಜೆಗಳಿಗಾಗಿ ಬೇರೆ ಪೂಜಾರಿಗಳನ್ನು ನೇಮಿಸಿದನು.

ಇದಲ್ಲದೆ ಅವನು ತನ್ನ ಮಕ್ಕಳನ್ನು ಬೆನ್ ಹಿನ್ನೋಮ್ ತಗ್ಗಿನಲ್ಲಿ ಅಗ್ನಿಪ್ರವೇಶ ಮಾಡಿಸಿದನು. ಕಣಿಹೇಳಿಸುವುದು, ಶಕುನನೋಡಿಸುವುದು, ಯಂತ್ರಹಾಕಿಸುವುದು, ತಂತ್ರಮಂತ್ರಗಳನ್ನು ಮಾಡಿಸುವುದು, ಸತ್ತವರಲ್ಲಿ ವಿಚಾರಿಸುವವರು ಮತ್ತು ಭೂತ ಪ್ರೇತಗಳನ್ನು ಆರಾಧಿಸುವವರು ತಮ್ಮ ದುಷ್ಕೃತ್ಯಗಳಿಂದ ಯೆಹೋವನಿಗೆ ಕೋಪವನ್ನೆಬ್ಬಿಸಿದನು.

ಒಂದು ದಿನ ದೇವದೂತರು ಯೆಹೋವನ ಸನ್ನಿಧಿಗೆ ಬರುವಾಗ ಸೈತಾನನು (ಆಪಾದಕ ದೂತನು) ಅವರ ಜೊತೆಯಲ್ಲಿ ಬಂದನು. ಯೆಹೋವನು ಸೈತಾನನನ್ನು, “ಎಲ್ಲಿಂದ ಬಂದೆ?” ಎಂದು ಕೇಳಲು ಸೈತಾನನು ಯೆಹೋವನಿಗೆ, “ಭೂಲೋಕದಲ್ಲಿ ಸಂಚರಿಸುತ್ತಾ, ಅಲ್ಲಲ್ಲಿ ತಿರುಗುತ್ತಾ ಇದ್ದು ಬಂದೆನು” ಎಂದು ಹೇಳಿದನು. ಆಗ ಯೆಹೋವನು, “ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟೆಯಾ? ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ, ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ, ಯಥಾರ್ಥಚಿತ್ತನೂ ಆಗಿದ್ದಾನೆ. ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವುದಿಲ್ಲ” ಎಂದು ಸೈತಾನನಿಗೆ ಹೇಳಿದನು. ಅದಕ್ಕೆ ಸೈತಾನನು, “ಯೋಬನು ನಿನ್ನಲ್ಲಿ ಭಯಭಕ್ತಿಯನ್ನು ಲಾಭವಿಲ್ಲದೆ ಇಟ್ಟಿದ್ದಾನೋ? ನೀನು ಅವನಿಗೂ, ಅವನ ಮನೆಗೂ, ಅವನ ಎಲ್ಲಾ ಸ್ವತ್ತಿಗೂ ಸುತ್ತು ಮುತ್ತಲು ನಿನ್ನ ಕೃಪೆಯ ಬೇಲಿಯನ್ನು ಹಾಕಿದ್ದೀಯಲ್ಲಾ. ಅವನು ಕೈಹಾಕಿದ ಕೆಲಸವನ್ನು ನೀನು ಸಫಲಪಡಿಸುತ್ತಿರುವುದರಿಂದ ಅವನ ಸಂಪತ್ತು ದೇಶದಲ್ಲಿ ವೃದ್ಧಿಯಾಗುತ್ತಾ ಬಂದಿದೆ. ಆದರೆ ನಿನ್ನ ಕೈಚಾಚಿ ಅವನ ಸೊತ್ತನ್ನೆಲ್ಲಾ ಅಳಿಸಿಬಿಡು. ಆಗ ಅವನು ನಿನ್ನ ಎದುರಿಗೆ ನಿನ್ನನ್ನು ದೂಷಿಸದೇ ಬಿಡುವನೇ?” ಎಂದನು. ಯೆಹೋವನು ಸೈತಾನನಿಗೆ, “ನೋಡು, ಅವನ ಸ್ವಾಸ್ತ್ಯವೆಲ್ಲಾ ನಿನ್ನ ಕೈಯಲ್ಲಿದೆ. ಆದರೆ ಅವನ ಮೈಮೇಲೆ ಮಾತ್ರ ಕೈಹಾಕಬೇಡ” ಎಂದು ಅಪ್ಪಣೆಕೊಟ್ಟನು. ಆಗ ಸೈತಾನನು ಯೆಹೋವನ ಸನ್ನಿಧಾನದಿಂದ ಹೊರಟುಹೋದನು.

ದೇವದೂತರು ಇನ್ನೊಂದು ದಿನ ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಬಂದಾಗ, ಸೈತಾನನೂ ಅವರ ಸಂಗಡ ಬಂದು ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಂಡನು. ಯೆಹೋವನು, “ಎಲ್ಲಿಂದ ಬಂದೆ?” ಎಂದು ಸೈತಾನನನ್ನು ಕೇಳಲು ಸೈತಾನನು ಯೆಹೋವನಿಗೆ, “ಭೂಲೋಕದಲ್ಲಿ ಸಂಚರಿಸುತ್ತಾ, ಅಲ್ಲಲ್ಲಿ ತಿರುಗುತ್ತಾ ಇದ್ದು ಬಂದೆನು” ಎಂದನು. ಆಗ ಯೆಹೋವನು ಸೈತಾನನಿಗೆ, “ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟೆಯಾ? ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವುದಿಲ್ಲ. ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ, ಯಥಾರ್ಥಚಿತ್ತನೂ ಆಗಿದ್ದಾನೆ. ಅವನನ್ನು ಕಾರಣವಿಲ್ಲದೆ ನಾಶಮಾಡುವುದಕ್ಕೆ ನೀನು ನನ್ನನ್ನು ಪ್ರೇರೇಪಿಸಿದರೂ ಅವನು ತನ್ನ ಯಥಾರ್ಥತ್ವವನ್ನು ಬಿಡದೆ ಇದ್ದಾನೆ” ಎಂದನು. ಯೆಹೋವನ ಆ ಮಾತಿಗೆ ಸೈತಾನನು, “ಚರ್ಮಕ್ಕೆ ಚರ್ಮ ಎಂಬಂತೆ ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವುದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು. ಆದರೆ ನಿನ್ನ ಕೈಚಾಚಿ ಅವನ ಅಸ್ತಿಮಾಂಸಗಳನ್ನು ಹೊಡೆ. ಆಗ ಅವನು ನಿನ್ನ ಮುಖದೆದುರಿಗೆ ನಿನ್ನನ್ನು ದೂಷಿಸದೆ ಬಿಡುವುದಿಲ್ಲ” ಎಂದನು. ಯೆಹೋವನು ಸೈತಾನನಿಗೆ, “ನೋಡು, ಅವನು ನಿನ್ನ ಕೈಯಲ್ಲಿ ಒಪ್ಪಿಸಿದ್ದೇನೆ. ಅವನ ಪ್ರಾಣವನ್ನು ಉಳಿಸಬೇಕು” ಎಂದು ಅಪ್ಪಣೆ ಕೊಟ್ಟನು. ಆಗ ಸೈತಾನನು ಯೆಹೋವನ ಸನ್ನಿಧಾನದಿಂದ ಹೊರಟು ಯೋಬನ ಅಂಗಾಲು ಮೊದಲುಗೊಂಡು ನಡುನೆತ್ತಿಯವರೆಗೂ ಕೆಟ್ಟ ಹುಣ್ಣುಗಳನ್ನು ಹುಟ್ಟಿಸಿ ಅವನನ್ನು ಬಾಧಿಸಿದನು.

ಅವರು ತಮ್ಮ ಗಂಡು ಹೆಣ್ಣು ಮಕ್ಕಳನ್ನು ಭೂತಗಳಿಗೆ ಬಲಿಕೊಟ್ಟರು. ಕಾನಾನ್ಯರ ಮೂರ್ತಿಗಳ ಅರ್ಪಣೆಗೋಸ್ಕರ, ತಮ್ಮ ಮಕ್ಕಳ ನಿರಪರಾಧ ರಕ್ತವನ್ನು ಸುರಿಸಿದರು; ಇಂಥ ಕೊಲೆಗಳಿಂದ ದೇಶವನ್ನು ಹೊಲೆಮಾಡಿದರು.

ಬರುತ್ತಿರುವ ನಿನ್ನನ್ನು ಎದುರುಗೊಳ್ಳುವುದಕ್ಕೆ ಪಾತಾಳವು ತಳಮಳಪಡುತ್ತದೆ. ನಿನಗೋಸ್ಕರ ಸತ್ತವರನ್ನು, ಅಂದರೆ ಭೂಲೋಕದಲ್ಲಿ ಮುಖಂಡರಾಗಿದ್ದವರೆಲ್ಲರನ್ನು ಎಚ್ಚರಗೊಳಿಸಿ, ಜನಾಂಗಗಳ ಸಕಲ ಅರಸರನ್ನು ಅವರವರ ಆಸನಗಳಿಂದ ಎಬ್ಬಿಸುತ್ತದೆ. ಅವರೆಲ್ಲರು ನಿನ್ನನ್ನು ಕುರಿತು, ‘ನೀನು ಸಹ ನಮ್ಮ ಹಾಗೆ ಬಲಹೀನನಾಗಿದ್ದೀ? ನಮಗೆ ಸರಿಸಮಾನನಾಗಿದ್ದೀ?’ ಎಂದು ಮಾತನಾಡಿಕೊಳ್ಳುವರು. ನಿನ್ನ ವೈಭವವೂ ವೀಣಾನಾದದೊಂದಿಗೆ ಪಾತಾಳಕ್ಕೆ ತಳ್ಳಲ್ಪಟ್ಟಿವೆ. ನಿನಗೆ ಹುಳಗಳೇ ಹಾಸಿಗೆ, ಕ್ರಿಮಿಗಳೇ ನಿನ್ನ ಹೊದಿಕೆಯು.

ಆಹಾ, ಉದಯನಕ್ಷತ್ರವೇ, ಉದಯಪುತ್ರನೇ, ಆಕಾಶದಿಂದ ನೀನು ಹೇಗೆ ಬಿದ್ದೆ! ಜನಾಂಗಗಳನ್ನು ಸ್ವಾಧೀನಪಡಿಸಿಕೊಂಡ ನೀನು ಭೂಮಿಗೆ ಹೇಗೆ ತಳಲ್ಪಟ್ಟಿದ್ದೀ! ನೀನು ನಿನ್ನ ಮನಸ್ಸಿನಲ್ಲಿ, ‘ನಾನು ಆಕಾಶಕ್ಕೆ ಏರಿ, ನನ್ನ ಸಿಂಹಾಸನವನ್ನು ದೇವರ ನಕ್ಷತ್ರಗಳಿಗಿಂತ ಘನತೆಗೇರಿಸಿ, ಉತ್ತರದಿಕ್ಕಿನ ಕಟ್ಟಕಡೆಯಿರುವ ಸಮೂಹ ಪರ್ವತದ ಮೇಲೆ ಆಸೀನನಾಗುವೆನು. ಉನ್ನತವಾದ ಮೇಘಮಂಡಲದ ಮೇಲೆ ಏರಿ ಮಹೋನ್ನತನಿಗೆ ಸಮಾನನಾಗುವೆನು’ ಎಂದುಕೊಂಡೆಯಲ್ಲಾ! ಆದರೆ ನೀನು ಪಾತಾಳಕ್ಕೆ, ಅಧೋಲೋಕದ ಅಗಾಧ ಸ್ಥಳಗಳಿಗೆ ತಳ್ಳಲ್ಪಡುವೆ.

ನಿನ್ನನ್ನು ನೋಡುವವರು ನಿನ್ನನ್ನು ದಿಟ್ಟಿಸಿ ನೋಡಿ, ಯೋಚಿಸುತ್ತಾ, ‘ಭೂಮಿಯನ್ನು ನಡುಗಿಸಿ, ರಾಜ್ಯಗಳನ್ನು ಕದಲಿಸಿ ಪಟ್ಟಣಗಳನ್ನು ನಾಶಮಾಡಿ, ಲೋಕವನ್ನು ಕಾಡನ್ನಾಗಿ ಮಾಡಿ, ಸೆರೆಹಿಡಿದವರನ್ನು ಮನೆಗೆ ಬಿಡದೆ ಇದ್ದವನು ಈ ಮನುಷ್ಯನೋ?’ ಎಂದುಕೊಳ್ಳುವರು.

ಎಲೈ, ಎಲ್ಲಾ ಫಿಲಿಷ್ಟಿಯರೇ, ನಿಮ್ಮನ್ನು ಹೊಡೆದ ಕೋಲು ಮುರಿದುಹೋಯಿತೆಂದು ಉಲ್ಲಾಸಗೊಳ್ಳದಿರಿ; ಏಕೆಂದರೆ ನಾಗರ ಹಾವಿನ ಸಂತಾನದಿಂದ ವಿಷಸರ್ಪವು ಉಂಟಾಗುವುದು. ಅದರ ಸಂತತಿಯು ಹಾರುವ ಸರ್ಪವೇ.

ಆ ದಿನದಲ್ಲಿ ಯೆಹೋವನು ಕಠಿಣವೂ, ಮಹತ್ವವೂ, ಬಲವೂ ಆಗಿರುವ ತನ್ನ ಖಡ್ಗದಿಂದ ವೇಗವಾಗಿ ಓಡುವ ಸರ್ಪವಾದ ಲೆವಿಯಾತಾನವನ್ನೂ, ಡೊಂಕಾಗಿ ಹರಿಯುವ ಸರ್ಪವಾದ ಲೆವಿಯಾತಾನವನ್ನೂ, ಮತ್ತು ಮಹಾನದಿಯಲ್ಲಿ ಘಟಸರ್ಪವನ್ನೂ ಕೊಂದುಹಾಕುವನು.

ದಕ್ಷಿಣ ಸೀಮೆಯ ನೀರಾನೆಯ ವಿಷಯವಾದ ದೈವೋಕ್ತಿ. ರಾಯಭಾರಿಗಳು ಗಂಡು ಕತ್ತೆಗಳ ಬೆನ್ನುಗಳ ಮೇಲೆ ತಮ್ಮ ಧನವನ್ನೂ, ಒಂಟೆಗಳ ಡುಬ್ಬಗಳ ಮೇಲೆ ತಮ್ಮ ದ್ರವ್ಯವನ್ನೂ ಹೊರಿಸಿಕೊಂಡು, ಮೃಗೇಂದ್ರ, ಸಿಂಹ, ಸರ್ಪ, ಹಾರುವ ಉರಿಮಂಡಲ ಇವುಗಳಿಂದ ಭಯಂಕರವಾಗಿಯೂ, ಶ್ರಮಸಂಕಟಗಳನ್ನು ಉಂಟು ಮಾಡುವ ದೇಶದ ಮಾರ್ಗವಾಗಿ ನಿಷ್ಪ್ರಯೋಜಕವಾದ ಜನಾಂಗದ ಬಳಿಗೆ ಹೋಗುತ್ತಾರೆ.

“ಜನಾಂಗಗಳಲ್ಲಿ ಪ್ರಚುರಪಡಿಸಿರಿ, ಧ್ವಜವೆತ್ತಿ ಪ್ರಕಟಿಸಿರಿ, ಮರೆಮಾಡದೆ ಹೀಗೆ ಸಾರಿರಿ, ‘ಬಾಬೆಲ್ ಶತ್ರುವಶವಾಯಿತು, ಬೇಲ್ ದೇವತೆಯು ನಾಚಿಕೆಗೊಂಡಿದೆ, ಮೆರೋದಾಕ್ ದೇವತೆಯು ಬೆಚ್ಚಿಬಿದ್ದಿದೆ, ಅದರ ಮೂರ್ತಿಗಳು ಅವಮಾನಕ್ಕೆ ಗುರಿಯಾಗಿವೆ, ಅದರ ಬೊಂಬೆಗಳು ಚೂರುಚೂರಾಗಿವೆ.

“ನರಪುತ್ರನೇ, ನೀನು ತೂರಿನ ಅರಸನ ವಿಷಯದಲ್ಲಿ ಶೋಕ ಗೀತೆಯನ್ನು ಹಾಡು, ಅವನಿಗೆ ಹೀಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನೀನು ಸರ್ವಸುಲಕ್ಷಣ ಶಿರೋಮಣಿ, ಪೂರ್ಣಜ್ಞಾನಿ, ಪರಿಪೂರ್ಣಸುಂದರಿ. ದೇವರ ಉದ್ಯಾನವನವಾದ ಏದೆನಿನಲ್ಲಿ ನೀನಿದ್ದೆ; ಮಾಣಿಕ್ಯ, ಪುಷ್ಯರಾಗ, ಪಚ್ಚೆ, ಪೀತರತ್ನ, ವಜ್ರ, ವೈಡೂರ್ಯ, ನೀಲ ಗೋಮೇಧಿಕ, ಕೆಂಪು ಸ್ಫಟಿಕ, ಚಿನ್ನ ಈ ಅಮೂಲ್ಯ ರತ್ನಗಳಿಂದ ಭೂಷಿತವಾಗಿದ್ದೆ. ನಿನ್ನಲ್ಲಿರುವ ಈ ರತ್ನಗಳು ನಿನ್ನ ಸೃಷ್ಟಿಯ ದಿನದಲ್ಲಿ ಸಿದ್ಧವಾದವು. “‘ನೀನು ರೆಕ್ಕೆತೆರೆದು ನೆರಳು ನೀಡುವ ಕೆರೂಬಿಯಾಗಿದ್ದೆ; ನಾನು ನಿನ್ನನ್ನು ದೇವರ ಪರಿಶುದ್ಧ ಪರ್ವತದಲ್ಲಿ ನೆಲೆಗೊಳಿಸಿದೆನು; ನೀನು ಅಮೂಲ್ಯ ರತ್ನಗಳ ಕೆಂಡದ ಮಧ್ಯದಲ್ಲಿ ವಿಹಾರ ಮಾಡುತ್ತಿದ್ದೆ. ನಿನ್ನ ಸೃಷ್ಟಿಯ ದಿನದಿಂದ ನಿನ್ನಲ್ಲಿ ಅಪರಾಧವು ಸಿಕ್ಕುವ ತನಕ ನಿನ್ನ ನಡತೆಯು ನಿರ್ದೋಷವಾಗಿ ಕಾಣುತ್ತಿತ್ತು.

“‘ನಿನ್ನ ಮಿತಿಯಿಲ್ಲದ ವ್ಯಾಪಾರದಿಂದ ನಿನ್ನಲ್ಲಿ ಬಲಾತ್ಕಾರವು ತುಂಬಿ ನೀನು ಪಾಪಿಯಾದೆ. ಆದಕಾರಣ ನಾನು ನಿನ್ನನ್ನು ದೇವರ ಪರ್ವತದಿಂದ ಅಪವಿತ್ರನೆಂದು ತಳ್ಳಿಬಿಟ್ಟೆನು; ಹೌದು, ನೆರಳು ನೀಡುವ ಕೆರೂಬಿಯೇ, ಬೆಂಕಿಯ ಕಲ್ಲುಗಳ ಮಧ್ಯದಿಂದ ನಿನ್ನನ್ನು ನಾಶಮಾಡುವೆನು. “‘ನಿನ್ನ ಸೌಂದರ್ಯದ ನಿಮಿತ್ತ ನಿನ್ನ ಹೃದಯವು ಉಬ್ಬಿಕೊಂಡಿತು; ನಿನ್ನ ಪ್ರಕಾಶದ ನಿಮಿತ್ತ ನಿನ್ನ ಬುದ್ಧಿಯನ್ನು ಹಾಳು ಮಾಡಿಕೊಂಡೆ; ನಾನು ನಿನ್ನನ್ನು ನೆಲಕ್ಕೆ ಹಾಕಿ, ನಿನ್ನನ್ನು ಅರಸರು ನೋಡುವಂತೆ ಅವರ ಕಣ್ಣ ಮುಂದೆ ಹಾಕುವೆನು. ನಿನ್ನ ಅಪಾರವಾದ ಅಪರಾಧಗಳಿಂದಲೂ, ಅನ್ಯಾಯವಾದ ವ್ಯಾಪಾರದಿಂದಲೂ ನಿನ್ನಲ್ಲಿನ ಪವಿತ್ರಾಲಯಗಳನ್ನು ಹೊಲಸು ಮಾಡಿದೆ; ಆದುದರಿಂದ ನಾನು ನಿನ್ನೊಳಗಿಂದ ಬೆಂಕಿಯನ್ನು ಬರಮಾಡಿದೆನು, ಅದು ನಿನ್ನನ್ನು ನುಂಗಿತು, ನೋಡುವವರೆಲ್ಲರ ಕಣ್ಣೆದುರಿಗೆ ನಿನ್ನನ್ನು ಬೂದಿ ಮಾಡಿಬಿಟ್ಟೆನು. ಜನಾಂಗಗಳಲ್ಲಿ ನಿನ್ನನ್ನು ಬಲ್ಲವರೆಲ್ಲರೂ ನಿನ್ನ ಗತಿಗೆ ಬೆಚ್ಚಿ ಬೆರಗಾಗುವರು; ನೀನು ಸಂಪೂರ್ಣ ನಾಶವಾಗಿ ಇನ್ನೆಂದಿಗೂ ಇಲ್ಲದಂತಾಗುವೆ.’”

ಆ ಮೇಲೆ ಅವನು ನನಗೆ, “ದಾನಿಯೇಲನೇ, ಭಯಪಡಬೇಡ, ನೀನು ದೈವಸಂಕಲ್ಪವನ್ನು ವಿಮರ್ಶಿಸುವುದಕ್ಕೂ, ನಿನ್ನನ್ನು ನಿನ್ನ ದೇವರ ಮುಂದೆ ತಗ್ಗಿಸಿಕೊಳ್ಳುವುದಕ್ಕೂ ಮನಸ್ಸಿಟ್ಟ ಮೊದಲನೆಯ ದಿನದಲ್ಲಿಯೇ ನಿನ್ನ ವಿಜ್ಞಾಪನೆಯು ದೇವರಿಗೆ ಮುಟ್ಟಿತು; ಆ ವಿಜ್ಞಾಪನೆಯ ನಿಮಿತ್ತವೇ ನಾನು ಬಂದೆನು. ಪಾರಸಿಯ ರಾಜ್ಯದ ದಿವ್ಯಪಾಲಕನು ಇಪ್ಪತ್ತೊಂದು ದಿನ ನನ್ನನ್ನು ತಡೆಯಲು ಇಗೋ, ಪ್ರಧಾನ ದಿವ್ಯಪಾಲಕರಲ್ಲೊಬ್ಬನಾದ ಮೀಕಾಯೇಲನು ನನ್ನ ಸಹಾಯಕ್ಕೆ ಬಂದನು; ಅಲ್ಲಿ ಪಾರಸಿಯ ರಾಜರ ಸಂಗಡ ಹೋರಾಡಿ,

ಎಂದು ಅರಿಕೆಮಾಡಲು ಅವನು ನನಗೆ ಹೀಗೆ ಹೇಳಿದನು, “ನಾನು ನಿನ್ನ ಬಳಿಗೆ ಏಕೆ ಬಂದೆನೆಂಬುದು ನಿನಗೆ ಗೊತ್ತಲ್ಲವೆ; ಈಗ ನಾನು ಪಾರಸಿಯ ರಾಜ್ಯದ ದಿವ್ಯ ಪಾಲಕನೊಂದಿಗೆ ಹೋರಾಡಲು ಹಿಂದಿರುಗಬೇಕು; ನಾನು ಆ ಹೋರಾಟವನ್ನು ತೀರಿಸಿದ ಕೂಡಲೆ ಆಹಾ, ಗ್ರೀಕ್ ರಾಜ್ಯದ ದಿವ್ಯಪಾಲಕನು ಎದುರು ಬೀಳುವನು. ಆದರೂ ಸತ್ಯಶಾಸನದಲ್ಲಿ ಲಿಖಿತವಾದದ್ದನ್ನು ಈಗ ನಿನಗೆ ತಿಳಿಸುವೆನು. ಇವರಿಬ್ಬರೊಂದಿಗೆ ಹೋರಾಡುವಲ್ಲಿ ನಿಮ್ಮ ಪಾಲಕನಾದ ಮೀಕಾಯೇಲನ ಹೊರತು ನನಗೆ ಬೆಂಬಲರಾಗತಕ್ಕವರು ಇನ್ನಾರೂ ಇಲ್ಲ ಎಂದನು.”

ಅನಂತರ ಮಹಾಯಾಜಕನಾದ ಯೆಹೋಶುವನು ಯೆಹೋವನ ದೂತನ ಮುಂದೆ ನಿಂತಿರುವುದನ್ನು ಯೆಹೋವನು ನನಗೆ ತೋರಿಸಿದನು. ಸೈತಾನನು ಯೆಹೋಶುವನಿಗೆ ಪ್ರತಿವಾದಿಯಾಗಿ ಅವನ ಬಲಗಡೆಯಲ್ಲಿ ನಿಂತಿದ್ದನು. ಆಗ ಯೆಹೋವನ ದೂತನು ಸೈತಾನನಿಗೆ, “ಯೆಹೋವನು ನಿನ್ನನ್ನು ಖಂಡಿಸಲಿ! ಹೌದು, ಯೆರೂಸಲೇಮನ್ನು ಆರಿಸಿಕೊಂಡಿರುವ ಯೆಹೋವನು ನಿನ್ನನ್ನು ಖಂಡಿಸಲಿ! ಅದು ಉರಿಯುವ ಬೆಂಕಿಯಿಂದ ಎಳೆದ ಕೊಳ್ಳಿಯಾಗಿದೆಯಲ್ಲಾ?” ಎಂದು ಹೇಳಿದನು.

ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಆ ದಿನದಲ್ಲಿ ನಾನು ವಿಗ್ರಹಗಳನ್ನು ದೇಶದೊಳಗಿಂದ ನಿರ್ನಾಮಮಾಡುವೆನು, ಅವು ಇನ್ನು ಯಾರ ನೆನಪಿಗೂ ಬರುವುದಿಲ್ಲ; ಅಲ್ಲದೆ ಸುಳ್ಳು ಪ್ರವಾದಿಗಳನ್ನೂ, ದುರಾತ್ಮವನ್ನೂ ದೇಶದೊಳಗಿಂದ ತೊಲಗಿಸಿಬಿಡುವೆನು.

ಆಗ ಯೇಸು ಸೈತಾನನಿಂದ ಶೋಧಿಸಲ್ಪಡುವುದಕ್ಕಾಗಿ ದೇವರಾತ್ಮನು ಆತನನ್ನು ಅಡವಿಗೆ ನಡೆಸಿದನು. ಆತನು ನಲವತ್ತು ದಿನ ಹಗಲಿರುಳು ಉಪವಾಸವಿದ್ದ ತರುವಾಯ ಆತನಿಗೆ ಹಸಿವಾಯಿತು. ಆಗ ಸೈತಾನನು ಆತನ ಬಳಿಗೆ ಬಂದು, “ನೀನು ದೇವರ ಮಗನಾಗಿದ್ದರೆ ಈ ಕಲ್ಲುಗಳಿಗೆ ರೊಟ್ಟಿಯಾಗುವಂತೆ ಅಪ್ಪಣೆಕೊಡು” ಎಂದು ಹೇಳಲು, ಯೇಸು, “‘ಮನುಷ್ಯನು ರೊಟ್ಟಿ ತಿಂದ ಮಾತ್ರದಿಂದ ಬದುಕುವುದಿಲ್ಲ, ಆದರೆ ದೇವರ ಬಾಯಿಂದ ಬರುವ ಪ್ರತಿಯೊಂದು ನುಡಿಯಿಂದಲೂ ಬದುಕುವನು’ ಎಂದು ಬರೆದಿದೆ” ಅಂದನು. ಆಗ ಸೈತಾನನು ಯೇಸುವನ್ನು ಪರಿಶುದ್ಧ ಪಟ್ಟಣಕ್ಕೆ ಕರೆದುಕೊಂಡು ಹೋಗಿ ದೇವಾಲಯದ ಗೋಪುರದ ಮೇಲೆ ನಿಲ್ಲಿಸಿ ಯೇಸುವಿಗೆ, “ನೀನು ದೇವರ ಮಗನೇ ಆಗಿದ್ದರೆ ಇಲ್ಲಿಂದ ಕೆಳಕ್ಕೆ ದುಮುಕು; ‘ದೇವರು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆಕೊಡುವನು; ನಿನ್ನ ಕಾಲು ಕಲ್ಲಿಗೆ ತಗಲದಂತೆ ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು’ ಎಂಬುದಾಗಿ ಬರೆದಿದೆಯಲ್ಲಾ” ಎಂದು ಹೇಳಿದನು. ಅದಕ್ಕೆ ಯೇಸು, “ನಿನ್ನ ದೇವರಾಗಿರುವ ಕರ್ತನನ್ನು ಪರೀಕ್ಷಿಸಬಾರದು ಎಂಬುದಾಗಿಯೂ ಬರೆದಿದೆ” ಅಂದನು. ಬಳಿಕ ಸೈತಾನನು ಆತನನ್ನು ಬಹಳ ಎತ್ತರವಾದ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಆತನಿಗೆ ತೋರಿಸಿ, ಯೇಸುವಿಗೆ, “ನೀನು ನನಗೆ ಅಡ್ಡಬಿದ್ದು ನನ್ನನ್ನು ಆರಾಧಿಸಿದರೆ ಇವುಗಳನ್ನೆಲ್ಲಾ ನಿನಗೆ ಕೊಡುವೆನು” ಅಂದನು. ಯೇಸು ಅವನಿಗೆ, “ಸೈತಾನನೇ, ನೀನು ತೊಲಗಿ ಹೋಗು. ‘ನಿನ್ನ ದೇವರಾಗಿರುವ ಕರ್ತನನ್ನು ಮಾತ್ರ ಆರಾಧಿಸಬೇಕು ಆತನೊಬ್ಬನನ್ನೇ ಸೇವಿಸಬೇಕು’ಎಂಬುದಾಗಿ ಬರೆದಿದೆಯಲ್ಲಾ” ಎಂದು ಹೇಳಿದನು. ಆಗ ಸೈತಾನನು ಆತನನ್ನು ಬಿಟ್ಟು ಹೊರಟು ಹೋದನು, ಆಗ ದೇವದೂತರು ಬಂದು ಆತನಿಗೆ ಉಪಚಾರ ಮಾಡಿದರು.

ಆತನ ಸುದ್ದಿಯು ಸಿರಿಯಾದಲ್ಲೆಲ್ಲಾ ಹಬ್ಬಿದ್ದರಿಂದ ಅಸ್ವಸ್ಥರಾದವರನ್ನು, ಅಂದರೆ ನಾನಾ ರೀತಿಯ ರೋಗಗಳಿಂದ ಮತ್ತು ವೇದನೆಗಳಿಂದ ಕಷ್ಟಪಡುವವರನ್ನೂ, ದೆವ್ವಹಿಡಿದವರನ್ನೂ ಮೂರ್ಛಾರೋಗಿಗಳನ್ನೂ ಪಾರ್ಶ್ವವಾಯುವಿನವರನ್ನೂ ಆತನ ಬಳಿಗೆ ಕರತಂದರು; ಆತನು ಅವರನ್ನು ಸ್ವಸ್ಥಮಾಡಿದನು.

“ನನ್ನನ್ನು ಕರ್ತನೇ, ಕರ್ತನೇ ಅನ್ನುವವರೆಲ್ಲರು ಪರಲೋಕ ರಾಜ್ಯವನ್ನು ಪ್ರವೇಶಿಸುವುದಿಲ್ಲ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನು ಮಾತ್ರ ಪರಲೋಕ ರಾಜ್ಯಕ್ಕೆ ಪ್ರವೇಶಿಸುವನು. ಕರ್ತನೇ, ಕರ್ತನೇ, ನಿನ್ನ ಹೆಸರಿನಲ್ಲಿ ನಾವು ಪ್ರವಾದನೆ ಮಾಡಲಿಲ್ಲವೇ? ನಿನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೇ? ನಿನ್ನ ಹೆಸರಿನಲ್ಲಿ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ತೀರ್ಪಿನ ದಿನದಲ್ಲಿ ಎಷ್ಟೋ ಜನರು ನನಗೆ ಹೇಳುವರು. ಆಗ ನಾನು ಅವರಿಗೆ, ‘ನಿಮ್ಮ ಗುರುತೇ ನನಗಿಲ್ಲ; ದುಷ್ಟತನ ಮಾಡುವ ನೀವು, ನನ್ನಿಂದ ತೊಲಗಿಹೋಗಿರಿ,’ ಎಂದು ಹೇಳಿಬಿಡುವೆನು.

ಸಂಜೆಯಾಗಲು ದೆವ್ವಹಿಡಿದ ಬಹಳ ಜನರನ್ನು ಆತನ ಬಳಿಗೆ ಕರೆತಂದರು; ಆತನು ಮಾತು ಮಾತ್ರದಿಂದಲೇ ದೆವ್ವಗಳನ್ನು ಬಿಡಿಸಿದ್ದಲ್ಲದೆ ಅಸ್ವಸ್ಥರಾದವರೆಲ್ಲರನ್ನು ವಾಸಿಮಾಡಿದನು.

ಆಮೇಲೆ ಆತನು ಆಚೇದಡಕ್ಕೆ ಗದರೇನರ ಸೀಮೆಗೆ ಬಂದಾಗ ದೆವ್ವಹಿಡಿದವರಿಬ್ಬರು ಸಮಾಧಿಯ ಗವಿಗಳೊಳಗಿಂದ ಹೊರಟು ಆತನೆದುರಿಗೆ ಬಂದರು. ಅವರು ಮಹಾಕ್ರೂರಿಗಳಾಗಿದ್ದುದರಿಂದ ಆ ದಾರಿಯಲ್ಲಿ ಯಾರೂ ತಿರುಗಾಡುತ್ತಿರಲಿಲ್ಲ. ಅವರು, “ದೇವರ ಕುಮಾರನೇ, ನಮ್ಮ ಗೊಡವೆ ನಿನಗೇಕೆ? ಕಾಲ ಬರುವುದಕ್ಕಿಂತ ಮೊದಲೇ ನಮ್ಮನ್ನು ದಂಡಿಸುವುದಕ್ಕೆ ಇಲ್ಲಿಗೆ ಬಂದಿರುವೆಯಾ” ಎಂದು ಕೂಗಿದರು. ಅವರಿಂದ ಸ್ವಲ್ಪ ದೂರದಲ್ಲಿ ಬಹಳ ಹಂದಿಗಳ ಒಂದು ಹಿಂಡು ಮೇಯುತ್ತಿತ್ತು. ಆ ದೆವ್ವಗಳು, “ನೀನು ನಮ್ಮನ್ನು ಇವರೊಳಗಿಂದ ಹೊರಡಿಸುವುದಾದರೆ ಆ ಹಂದಿಯ ಗುಂಪಿನೊಳಗೆ ನಮ್ಮನ್ನು ಕಳುಹಿಸಿಕೊಡು” ಎಂದು ಬೇಡಿಕೊಂಡವು. ಆತನು ಅವುಗಳಿಗೆ, “ಹೋಗಿರಿ” ಅನ್ನಲು ಅವು ಹೊರಗೆ ಬಂದು ಹಂದಿಗಳೊಳಗೆ ಹೊಕ್ಕವು; ಅ ಕ್ಷಣವೇ ಆ ಗುಂಪೆಲ್ಲಾ ಓಡಿ ಕಡಿದಾದ ಸ್ಥಳದಿಂದ ಸಮುದ್ರದೊಳಗೆ ಬಿದ್ದು ನೀರಿನಲ್ಲಿ ಮುಳುಗಿ ಸತ್ತು ಹೋದವು. ಹಂದಿಗಳನ್ನು ಮೇಯಿಸುವವರು ಊರೊಳಕ್ಕೆ ಓಡಿಹೋಗಿ ಇದೆಲ್ಲವನ್ನು ದೆವ್ವಹಿಡಿದವರ ಸಂಗತಿ ಸಹಿತವಾಗಿ ತಿಳಿಸಲು;

ಅವರು ಹೊರಟುಹೋಗುತ್ತಿರುವಾಗ ದೆವ್ವಹಿಡಿದ ಒಬ್ಬ ಮೂಕನನ್ನು ಯೇಸುವಿನ ಬಳಿಗೆ ಕರೆತಂದರು. ದೆವ್ವ ಬಿಡಿಸಿದ ಮೇಲೆ ಮೂಕನಾಗಿದ್ದ ಅವನು ಮಾತನಾಡುವವನಾದನು. ಅದಕ್ಕೆ ಜನರು, “ಇಸ್ರಾಯೇಲಿನಲ್ಲಿ ಇಂಥ ಕಾರ್ಯವನ್ನು ಇದುವರೆಗೂ ಯಾರೂ ನೋಡಲಿಲ್ಲವೆಂದು” ಆಶ್ಚರ್ಯಚಕಿತರಾದರು. ಆದರೆ ಫರಿಸಾಯರು, “ಇವನು ದೆವ್ವಗಳ ಒಡೆಯನ ಸಹಾಯದಿಂದಲೇ ದೆವ್ವಗಳನ್ನು ಬಿಡಿಸುತ್ತಾನೆ” ಎಂದು ಹೇಳಿದರು.

ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ ದೆವ್ವಗಳನ್ನು ಬಿಡಿಸುವುದಕ್ಕೂ ಎಲ್ಲಾ ಬಗೆಯ ರೋಗಗಳನ್ನೂ ಎಲ್ಲಾ ರೀತಿಯ ಬೇನೆಗಳನ್ನೂ ವಾಸಿಮಾಡುವುದಕ್ಕೂ ಅಧಿಕಾರ ಕೊಟ್ಟನು.

ರೋಗಿಗಳನ್ನು ಸ್ವಸ್ಥಮಾಡಿರಿ, ಸತ್ತವರನ್ನು ಬದುಕಿಸಿರಿ, ಕುಷ್ಠರೋಗಿಗಳನ್ನು ಶುದ್ಧಮಾಡಿರಿ, ದೆವ್ವಗಳನ್ನು ಬಿಡಿಸಿರಿ; ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ.

ದೆವ್ವ ಹಿಡಿದ ಕುರುಡನೂ, ಮೂಕನೂ ಆಗಿರುವ ಒಬ್ಬನನ್ನು ಯೇಸುವಿನ ಬಳಿಗೆ ಕರೆತಂದರು. ಆತನು ಅವನನ್ನು ಸ್ವಸ್ಥಮಾಡಲು ಆ ಮೂಕನಿಗೆ ಮಾತು ಹಾಗೂ ದೃಷ್ಟಿ ಎರಡೂ ಬಂದವು. ಅದಕ್ಕೆ ಜನರೆಲ್ಲರೂ ಬೆರಗಾಗಿ, “ಈತನು ದಾವೀದನ ಕುಮಾರನೇ ಇರಬಹುದೇನೋ” ಎಂದು ಮಾತನಾಡಿಕೊಳ್ಳುತ್ತಿದ್ದರು.

ಆದರೆ ಫರಿಸಾಯರು ಅದನ್ನು ಕೇಳಿ, “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೆಯೇ ಹೊರತು ಬೇರೆ ರೀತಿಯಿಂದ ಅಲ್ಲ” ಅಂದರು. ಆತನು ಅವರ ಆಲೋಚನೆಗಳನ್ನು ತಿಳಿದುಕೊಂಡು ಅವರಿಗೆ ಹೇಳಿದ್ದೇನೆಂದರೆ, “ಯಾವ ರಾಜ್ಯವಾದರೂ ತನ್ನಲ್ಲಿ ಭೇದ ಹುಟ್ಟಿದರೆ ವಿಭಜನೆಯಾಗಿ ಹಾಳಾಗುವುದು. ತನ್ನಲ್ಲಿ ಭೇದ ಉಂಟಾಗಿ ವಿಭಜನೆಯಾದ ಯಾವ ಪಟ್ಟಣವಾದರೂ ಮನೆಯಾದರೂ ನೆಲೆಯಾಗಿ ನಿಲ್ಲದು. ಅದರಂತೆ ಸೈತಾನನು ಸೈತಾನನನ್ನು ಹೊರಡಿಸಿದರೆ ತನ್ನ ವಿರುದ್ಧವಾಗಿ ಹೋರಾಡಿದ ಹಾಗಾಯಿತು, ಹಾಗಾದರೆ ಅವನ ರಾಜ್ಯವು ಹೇಗೆ ನಿಂತಿತು? ನಾನು ಬೆಲ್ಜೆಬೂಲನಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮ ಶಿಷ್ಯರು ಯಾರ ಬಲದಿಂದ ಬಿಡಿಸುತ್ತಾರೆ? ಆದುದರಿಂದ ಅವರೇ ನಿಮಗೆ ನ್ಯಾಯತೀರಿಸುವರು. ನಾನು ದೇವರ ಆತ್ಮನ ಬಲದಿಂದಲೇ ದೆವ್ವಗಳನ್ನು ಬಿಡಿಸುವುದಾದರೆ ದೇವರ ರಾಜ್ಯವು ನಿಮ್ಮ ಹತ್ತಿರಕ್ಕೆ ಬಂದಿತಲ್ಲಾ? ಇದಲ್ಲದೆ ಒಬ್ಬನು ಮೊದಲು ಬಲಿಷ್ಠನನ್ನು ಕಟ್ಟಿಹಾಕದೆ ಆ ಬಲಿಷ್ಠನ ಮನೆಗೆ ನುಗ್ಗಿ ಅವನ ಸೊತ್ತನ್ನು ಸುಲುಕೊಳ್ಳುವುದು ಹೇಗೆ? ಕಟ್ಟಿಹಾಕಿದ ಮೇಲೆ ಅವನ ಮನೆಯನ್ನು ಸುಲುಕೊಂಡಾನು. ನನ್ನ ಸಂಗಡ ಇರದವನು ನನಗೆ ವಿರೋಧಿ. ನನ್ನ ಜೊತೆಯಲ್ಲಿ ಒಟ್ಟುಗೂಡಿಸದವನು ಚದುರಿಸುವವನಾಗಿದ್ದಾನೆ. ಆದಕಾರಣ ನಿಮಗೆ ಹೇಳುತ್ತೇನೆ ಮನುಷ್ಯರು ಮಾಡುವ ಪ್ರತಿಯೊಂದು ಪಾಪಕ್ಕೂ ದೂಷಣೆಗೂ ಕ್ಷಮಾಪಣೆ ಉಂಟಾಗುವುದು. ಆದರೆ ಪವಿತ್ರಾತ್ಮನಿಗೆ ವಿರುದ್ಧವಾಗಿ ನುಡಿಯುವ ದೂಷಣೆಗೆ ಕ್ಷಮಾಪಣೆಯಿರುವುದಿಲ್ಲ. ಯಾವನಾದರೂ ಮನುಷ್ಯಕುಮಾರನಿಗೆ ವಿರುದ್ಧವಾಗಿ ಮಾತನಾಡಿದರೆ ಅದು ಅವನಿಗೆ ಕ್ಷಮಿಸಲ್ಪಡುವುದು, ಪವಿತ್ರಾತ್ಮನಿಗೆ ವಿರುದ್ಧವಾಗಿ ಮಾತನಾಡಿದರೆ ಅದು ಅವನಿಗೆ ಈ ಲೋಕದಲ್ಲಾಗಲಿ ಮುಂಬರುವ ಲೋಕದಲ್ಲಾಗಲಿ ಕ್ಷಮಿಸಲ್ಪಡುವುದಿಲ್ಲ.

“ದೆವ್ವವು ಒಬ್ಬ ಮನುಷ್ಯನನ್ನು ಬಿಟ್ಟು ಹೋದ ಮೇಲೆ ವಿಶ್ರಾಂತಿಯನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ತಿರುಗಾಡುತ್ತದೆ. ವಿಶ್ರಾಂತಿ ಸಿಕ್ಕದ ಕಾರಣ ಅದು, ‘ನಾನು ಬಿಟ್ಟು ಬಂದ ನನ್ನ ಮನೆಗೆ ತಿರುಗಿ ಹೋಗುತ್ತೇನೆ’ ಅಂದುಕೊಂಡು ಬಂದು ಆ ಮನೆ ಒಕ್ಕಲಿಲ್ಲದ್ದೂ, ಗುಡಿಸಿ, ಅಲಂಕರಿಸಿರುವುದನ್ನು ಕಂಡು, ತರುವಾಯ ಹೊರಟುಹೋಗಿ ತನಗಿಂತ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ತನ್ನೊಂದಿಗೆ ಕರೆದುಕೊಂಡು ಬರುವುದು. ಅವು ಒಳ ನುಗ್ಗಿ ಅಲ್ಲಿ ವಾಸ ಮಾಡುವವು. ಆಗ ಆ ಮನುಷ್ಯನ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದಾಗುವುದು. ಇದರಂತೆಯೇ ಈ ದುಷ್ಟ ಸಂತತಿಗೆ ಆಗುವುದು” ಅಂದನು.

ಯಾವನಾದರೂ ಪರಲೋಕ ರಾಜ್ಯದ ವಾಕ್ಯವನ್ನು ಕೇಳಿ ತಿಳಿದುಕೊಳ್ಳದೆ ಇದ್ದರೆದುಷ್ಟನು ಬಂದು ಆತನ ಹೃದಯದಲ್ಲಿ ಬಿತ್ತಿದ್ದನ್ನು ತೆಗೆದು ಹಾಕುತ್ತಾನೆ. ಇವನೇ ಬೀಜ ಬಿದ್ದ ದಾರಿಯ ಮಗ್ಗುಲಾಗಿರುವನು.

ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕ ರಾಜ್ಯವು ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ. ಆದರೆ ಜನರು ನಿದ್ರೆ ಮಾಡುವ ಸಮಯದಲ್ಲಿ ಅವನ ವೈರಿಯು ಬಂದು ಗೋದಿಯ ನಡುವೆ ಕಳೆಯನ್ನು ಬಿತ್ತಿ ಹೋದನು. ಗೋದಿಯು ಬೆಳೆದು ಫಲ ಬಿಟ್ಟಾಗ ಕಳೆಯು ಸಹ ಕಾಣ ಬಂದಿತು. ಆಗ ಯಜಮಾನನ ಆಳುಗಳು ಅವನ ಬಳಿಗೆ ಬಂದು, ‘ಅಯ್ಯಾ ನೀನು ನಿನ್ನ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದ್ದಿಯಲ್ಲಾ ಕಳೆ ಎಲ್ಲಿಂದ ಬಂದಿತು?’ ಎಂದು ಕೇಳಿದರು. ಅದಕ್ಕೆ ಅವನು, ‘ಇದು ವೈರಿ ಮಾಡಿದ ಕೆಲಸ’ ಎಂದು ಹೇಳಿದನು, ಅದಕ್ಕೆ ಆಳುಗಳು ಅವನಿಗೆ, ‘ಹಾಗಾದರೆ ನಾವು ಹೋಗಿ ಅದನ್ನು ಕಿತ್ತುಹಾಕುವುದು ನಿಮಗೆ ಇಷ್ಟವಿದೆಯೋ?’ ಎಂದು ಕೇಳಿದರು.

ಹೊಲವೆಂದರೆ ಈ ಲೋಕ. ಒಳ್ಳೆಯ ಬೀಜವೆಂದರೆರಾಜ್ಯದ ಮಕ್ಕಳು. ಕಳೆಯೆಂದರೆ ದುಷ್ಟನ ಮಕ್ಕಳು. ಅದನ್ನು ಬಿತ್ತುವ ವೈರಿ ಎಂದರೆ ಸೈತಾನನು. ಸುಗ್ಗಿಯ ಕಾಲವೆಂದರೆ ಯುಗದ ಸಮಾಪ್ತಿ. ಕೊಯ್ಯುವವರು ಅಂದರೆ ದೇವದೂತರು. ಹೀಗಿರಲಾಗಿ ಹೇಗೆ ಕಳೆಯನ್ನು ಆರಿಸಿ ತೆಗೆದು ಸುಟ್ಟುಬಿಡುತ್ತಾರೋ ಹಾಗೆಯೇ ಯುಗದ ಸಮಾಪ್ತಿಯಲ್ಲಿ ಸಂಭವಿಸುವುದು.

ಪರಲೋಕ ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು.ಭೂಲೋಕದಲ್ಲಿ ನೀನು ಯಾವುದನ್ನು ಕಟ್ಟುತ್ತೀಯೋ ಅದು ಪರಲೋಕದಲ್ಲಿಯೂ ಕಟ್ಟಲ್ಪಟ್ಟಿರುವುದು. ಮತ್ತು ಭೂಲೋಕದಲ್ಲಿ ನೀನು ಯಾವುದನ್ನು ಬಿಚ್ಚುತ್ತೀಯೋ ಅದು ಪರಲೋಕದಲ್ಲಿಯೂ ಬಿಚ್ಚಲ್ಪಟ್ಟಿರುವುದು” ಅಂದನು.

ಅಂದಿನಿಂದ ಯೇಸು ಕ್ರಿಸ್ತನು ತಾನು ಯೆರೂಸಲೇಮಿಗೆ ಹೋಗಿ ಹಿರಿಯರಿಂದಲೂ ಮುಖ್ಯಯಾಜಕರಿಂದಲೂ ಶಾಸ್ತ್ರಿಗಳಿಂದಲೂ ಬಹು ಕಷ್ಟಗಳನ್ನನುಭವಿಸಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಎಬ್ಬಿಸಲ್ಪಡುವುದು ಅಗತ್ಯವೆಂದು ತನ್ನ ಶಿಷ್ಯರಿಗೆ ಹೇಳುವುದಕ್ಕೆ ಪ್ರಾರಂಭಿಸಿದನು. ಆಗ ಪೇತ್ರನು ಆತನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ, “ಕರ್ತನೇ, ದೇವರು ಅದನ್ನು ನಿನಗೆ ಬರಗೊಡಿಸದಿರಲಿ; ನಿನಗೆ ಹೀಗೆ ಎಂದಿಗೂ ಆಗಬಾರದು” ಎಂದು ಆತನನ್ನು ಗದರಿಸುವುದಕ್ಕೆ ಪ್ರಾರಂಭಿಸಿದನು. ಆತನು ತಿರುಗಿಕೊಂಡು ಪೇತ್ರನಿಗೆ, “ಸೈತಾನನೇ, ನನ್ನನ್ನು ಬಿಟ್ಟು ತೊಲಗಿ ಹೋಗು. ನನಗೆ ನೀನು ಅಡ್ಡಿಯಾಗಿದ್ದಿ, ಏಕೆಂದರೆ ನೀನು ದೇವರ ವಿಷಯಗಳ ಬಗ್ಗೆ ಯೋಚಿಸದೇ ಮನುಷ್ಯರ ವಿಷಯಗಳ ಬಗ್ಗೆ ಯೋಚಿಸುತ್ತೀ” ಎಂದು ಹೇಳಿದನು.

“ಕರ್ತನೇ ನನ್ನ ಮಗನನ್ನು ಕರುಣಿಸು, ಅವನು ಮೂರ್ಛೆರೋಗದಿಂದ ಬಹಳ ಕಷ್ಟಪಡುತ್ತಿದ್ದಾನೆ. ಅನೇಕ ಬಾರಿ ಬೆಂಕಿಯಲ್ಲಿಯೂ, ನೀರಿನಲ್ಲಿಯೂ ಬೀಳುತ್ತಾನೆ. ಅವನನ್ನು ನಿನ್ನ ಶಿಷ್ಯರ ಬಳಿಗೆ ಕರತಂದಿದ್ದೆನು. ಆದರೆ ಗುಣಪಡಿಸುವುದಕ್ಕೆ ಅವರಿಂದ ಆಗಲಿಲ್ಲ” ಅಂದನು. ಅದಕ್ಕೆ ಯೇಸು, “ಎಲಾ ಅಪನಂಬಿಕೆಯುಳ್ಳ ವಕ್ರಬುದ್ಧಿಯುಳ್ಳ ಸಂತಾನವೇ, ನಾನು ಇನ್ನೆಷ್ಟು ಕಾಲ ನಿಮ್ಮ ಸಂಗಡ ಇರಲಿ? ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ? ಅವನನ್ನು ಇಲ್ಲಿ ನನ್ನ ಬಳಿಗೆ ಕರತನ್ನಿರಿ” ಅಂದನು. ಯೇಸು ಅವನ ಮೇಲಿದ್ದ ದೆವ್ವವನ್ನು ಗದರಿಸಲು ಆ ದೆವ್ವವು ಅವನನ್ನು ಬಿಟ್ಟುಹೋಯಿತು. ಆ ಕ್ಷಣವೇ ಆ ಹುಡುಗನಿಗೆ ಸ್ವಸ್ಥವಾಯಿತು.

“ಭೂಲೋಕದಲ್ಲಿ ನೀವು ಏನೇನು ಕಟ್ಟುತ್ತೀರೋ ಅದು ಪರಲೋಕದಲ್ಲಿಯೂ ಕಟ್ಟಲ್ಪಡುವುದು. ಮತ್ತು ಭೂಲೋಕದಲ್ಲಿ ಏನೇನು ಬಿಚ್ಚುತ್ತೀರೋ ಅದು ಪರಲೋಕದಲ್ಲಿಯೂ ಬಿಚ್ಚಲ್ಪಡುವುದು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

ಹಾವುಗಳೇ, ಸರ್ಪಜಾತಿಯವರೇ, ನರಕದಂಡನೆಯಿಂದ ಹೇಗೆ ನೀವು ತಪ್ಪಿಸಿಕೊಳ್ಳುವಿರಿ?

ಆ ಮೇಲೆ ಆತನು ಎಡಗಡೆಯಲ್ಲಿರುವವರಿಗೆ, ‘ಶಾಪಗ್ರಸ್ತರೇ, ನನ್ನನ್ನು ಬಿಟ್ಟು ಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ ಹೋಗಿರಿ.

ಆತನು ನಲವತ್ತು ದಿನ ಅಡವಿಯಲ್ಲಿ ಕಾಡುಮೃಗಗಳೊಂದಿಗೆ ಇದ್ದು ಸೈತಾನನಿಂದ ಶೋಧಿಸಲ್ಪಟ್ಟನು ಮತ್ತು ದೇವದೂತರು ಯೇಸುವಿಗೆ ಉಪಚಾರ ಮಾಡಿದರು.

ಬಳಿಕ ಅವರು ಕಪೆರ್ನೌಮೆಂಬ ಊರಿಗೆ ಹೋದರು. ಸಬ್ಬತ್ ದಿನವಾದಾಗ ಯೇಸು ಸಭಾಮಂದಿರಕ್ಕೆ ಹೋಗಿ ಉಪದೇಶ ಮಾಡತೊಡಗಿದನು. ಜನರು ಆತನ ಬೋಧನೆಯನ್ನು ಕೇಳಿ ಆತ್ಯಾಶ್ಚರ್ಯಪಟ್ಟರು; ಏಕೆಂದರೆ ಆತನು ಶಾಸ್ತ್ರಿಗಳಂತೆ ಬೋಧಿಸದೆ ಅಧಿಕಾರವಿದ್ದವನಂತೆ ಅವರಿಗೆ ಬೋಧಿಸುತ್ತಿದ್ದನು. ಆಗ ಅವರ ಸಭಾಮಂದಿರದಲ್ಲಿ ದೆವ್ವಹಿಡಿದ ಒಬ್ಬ ಮನುಷ್ಯನಿದ್ದನು. ಆ ದೆವ್ವವು, “ನಜರೇತಿನ ಯೇಸುವೇ, ನಮ್ಮ ಗೊಡವೆ ನಿನಗೇಕೆ? ನೀನು ನಮ್ಮನ್ನು ನಾಶಮಾಡುವುದಕ್ಕೆ ಬಂದೆಯಾ? ನೀನು ಯಾರೆಂದು ನಾನು ಬಲ್ಲೆನು. ನೀನು ದೇವರಿಂದ ಬಂದ ಪರಿಶುದ್ಧನು” ಎಂದು ಕೂಗಿ ಹೇಳಿತು. ಯೇಸು ಅದನ್ನು ಗದರಿಸಿ, “ಸುಮ್ಮನಿರು, ಅವನನ್ನು ಬಿಟ್ಟು ಹೊರಗೆ ಬಾ” ಎಂದನು. ಆ ದೆವ್ವವು ಅವನನ್ನು ಒದ್ದಾಡಿಸಿ ಗಟ್ಟಿಯಾಗಿ ಕೂಗುತ್ತಾ, ಅವನೊಳಗಿಂದ ಹೊರಗೆ ಬಂದಿತು. ಜನರೆಲ್ಲರೂ ಬೆರಗಾಗಿ, “ಇದೇನು? ಅಧಿಕಾರಸಹಿತವಾದ ಹೊಸ ಬೋಧನೆ! ಈತನು ದೆವ್ವಗಳಿಗೂ ಸಹ ಆಜ್ಞಾಪಿಸುತ್ತಾನೆ, ಅವು ಈತನಿಗೆ ವಿಧೇಯವಾಗುತ್ತವೆ!” ಎಂದು ತಮ್ಮತಮ್ಮೊಳಗೆ ವಿಚಾರಮಾಡಿಕೊಂಡರು.

ಸಂಜೆಯಾಗಿ ಹೊತ್ತು ಮುಳುಗಿದ ಮೇಲೆ ಜನರು ಅಸ್ವಸ್ಥರಾದವರನ್ನೂ, ದೆವ್ವಹಿಡಿದವರನ್ನೂ ಆತನ ಬಳಿಗೆ ಕರತಂದರು. ಊರಿನವರೆಲ್ಲಾ ಬಾಗಿಲಿನ ಮುಂದೆ ಒಟ್ಟುಗೂಡಿದ್ದರು. ಆಗ ಆತನು ನಾನಾ ರೀತಿಯ ರೋಗಗಳಿಂದ ಅಸ್ವಸ್ಥರಾಗಿದ್ದ ಬಹು ಜನರನ್ನು ಸ್ವಸ್ಥಮಾಡಿ ಅನೇಕ ದೆವ್ವಗಳನ್ನು ಬಿಡಿಸಿದನು. ಆದರೆ ಅವುಗಳಿಗೆ ತಾನು ಇಂಥವನೆಂದು ತಿಳಿದಿದ್ದರಿಂದ ಆತನು ಅವುಗಳನ್ನು ಮಾತನಾಡಗೊಡಿಸಲಿಲ್ಲ.

ಬಳಿಕ ಆತನು ಗಲಿಲಾಯದಲ್ಲೆಲ್ಲಾ ಹೋಗಿ ಅವರ ಸಭಾಮಂದಿರಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ದೆವ್ವಗಳನ್ನು ಬಿಡಿಸುತ್ತಾ ಇದ್ದನು.

ಮತ್ತು ದೆವ್ವಗಳು ಆತನನ್ನು ಕಂಡಾಗಲ್ಲೆಲ್ಲಾ ಆತನ ಪಾದಕ್ಕೆ ಬಿದ್ದು “ನೀನು ದೇವಕುಮಾರನು” ಎಂದು ಕೂಗುತ್ತಿದ್ದವು. ಆದರೆ ಆತನು ತಾನು ಇಂಥವನೆಂಬುದಾಗಿ ಯಾರಿಗೂ ಪ್ರಕಟಿಸಬಾರದೆಂದು ಅವರಿಗೆ ಬಹು ಖಂಡಿತವಾಗಿ ಆಜ್ಞಾಪಿಸಿದನು.

ಆತನು ಅಪೊಸ್ತಲರೆಂದು ಹೆಸರಿಟ್ಟಂಥ ಹನ್ನೆರಡು ಮಂದಿಯನ್ನು ತನ್ನ ಸಂಗಡ ಇರಬೇಕೆಂತಲೂ, ಸುವಾರ್ತೆಯನ್ನು ಸಾರುವುದಕ್ಕೆ ಅವರನ್ನು ಕಳುಹಿಸಬೇಕೆಂತಲೂ, ದೆವ್ವಗಳನ್ನು ಬಿಡಿಸುವ ಅಧಿಕಾರ ಉಳ್ಳವರಾಗಿರಬೇಕೆಂತಲೂ ನೇಮಿಸಿದನು.

ಇದಲ್ಲದೆ ಯೆರೂಸಲೇಮಿನಿಂದ ಬಂದಿದ್ದ ಶಾಸ್ತ್ರಿಗಳು, “ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆಂತಲೂ ಇವನು ದೆವ್ವಗಳ ಒಡೆಯನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೆಂತಲೂ” ಹೇಳುತ್ತಿದ್ದರು. ಆತನು ಅವರನ್ನು ಹತ್ತಿರಕ್ಕೆ ಕರೆದು ಅವರಿಗೆ ಸಾಮ್ಯರೂಪವಾಗಿ ಹೇಳಿದ್ದೇನಂದರೆ, “ಸೈತಾನನು ಸೈತಾನನನ್ನು ಬಿಡಿಸುವುದುಂಟೇ? ಯಾವುದೇ ಒಂದು ರಾಜ್ಯವು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ಆ ರಾಜ್ಯವು ಉಳಿಯದು; ಹಾಗೆಯೇ ಒಂದು ಮನೆಯು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ಆ ಮನೆಯು ಉಳಿಯದು. ಅದರಂತೆ ಸೈತಾನನು ತನಗೆ ವಿರೋಧವಾಗಿ ಎದ್ದು ತನ್ನಲ್ಲಿ ವಿಭಾಗಿಸಲ್ಪಟ್ಟರೆ ಅವನು ಉಳಿಯದೆ ನಾಶವಾಗಿ ಹೋಗುವನು. ಅದಲ್ಲದೆ ಒಬ್ಬನು ಮೊದಲು ಬಲಿಷ್ಠನನ್ನು ಕಟ್ಟಿಹಾಕದೆ ಆ ಬಲಿಷ್ಠನ ಮನೆಯನ್ನು ನುಗ್ಗಿ ಅವನ ಆಸ್ತಿಯನ್ನು ಕದಿಯಲು ಸಾಧ್ಯವಿಲ್ಲ; ಕಟ್ಟಿಹಾಕಿದ ಮೇಲೆ ಅವನ ಮನೆಯನ್ನು ಕೊಳ್ಳೆಹೊಡೆಯಬಹುದು. ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ಮನುಷ್ಯರು ಮಾಡುವ ಎಲ್ಲಾ ಪಾಪಗಳಿಗೂ ದೂಷಣೆಗಳಿಗೂ ಕ್ಷಮಾಪಣೆ ಸಿಕ್ಕುವುದು. ಆದರೆ ಪವಿತ್ರಾತ್ಮನನ್ನು ದೂಷಿಸಿದವನು ಎಂದಿಗೂ ಕ್ಷಮಾಪಣೆ ಹೊಂದಲಾರನು; ಅವನು ಶಾಶ್ವತವಾದ ಪಾಪದೊಳಗೆ ಸೇರಿದವನಾದನು” ಎಂದು ಹೇಳಿದನು. ಅವರು “ಈತನಲ್ಲಿ ಅಶುದ್ಧಾತ್ಮವಿದೆ” ಎಂದು ಹೇಳುತ್ತಿದ್ದರಿಂದ ಯೇಸು ಇದನ್ನು ಹೇಳಿದನು.

ಆ ಬಿತ್ತುವವನು ವಾಕ್ಯವೆಂಬ ಬೀಜವನ್ನು ಬಿತ್ತುತ್ತಾನೆ. ಕೆಲವರು ವಾಕ್ಯವನ್ನು ಕೇಳಿದ ಕೂಡಲೇ ಸೈತಾನನು ಬಂದು ಅವರಲ್ಲಿ ಬಿತ್ತಿದ್ದ ವಾಕ್ಯವನ್ನು ತೆಗೆದುಬಿಡುತ್ತಾನೆ. ಇವರೇ ದಾರಿಯ ಮಗ್ಗುಲಲ್ಲಿ ಬಿತ್ತಲ್ಪಟ್ಟ ಬೀಜವಾಗಿರುವರು.

ಯೇಸು ದೋಣಿಯಿಂದ ಇಳಿದು ಬಂದ ಕೂಡಲೆ ದೆವ್ವ ಹಿಡಿದ ಒಬ್ಬ ಮನುಷ್ಯನು ಸಮಾಧಿಯ ಗವಿಗಳೊಳಗಿಂದ ಬಂದು ಆತನನ್ನು ಸಂಧಿಸಿದನು. ಅವನಿಗೆ ಸಮಾಧಿಯಲ್ಲಿನ ಗವಿಗಳೇ ವಾಸಸ್ಥಳವಾಗಿತ್ತು. ಅವನನ್ನು ಅನೇಕಸಾರಿ ಬೇಡಿಗಳಿಂದ ಮತ್ತು ಸರಪಣಿಗಳಿಂದ ಕಟ್ಟಿದ್ದರೂ ಅವನು ಸರಪಣಿಗಳನ್ನು ಕಿತ್ತು ಬೇಡಿಗಳನ್ನು ತುಂಡುತುಂಡು ಮಾಡುಬಿಡುತಿದ್ದನು; ಅವನನ್ನು ಯಾರೂ ಯಾವ ಸರಪಣಿಯಿಂದಲೂ ಕಟ್ಟಲಾರದೆ ಹೋದರು; ಅವನನ್ನು ಹತೋಟಿಗೆ ತರುವುದಕ್ಕೆ ಯಾರಿಂದಲೂ ಆಗಲಿಲ್ಲ. ಅವನು ರಾತ್ರಿ ಮತ್ತು ಹಗಲು ಸಮಾಧಿಯ ಗವಿಗಳಲ್ಲಿ ಮತ್ತು ಗುಡ್ಡಗಳ ಮೇಲೆ ಆರ್ಭಟಿಸುತ್ತಾ ಚೂಪಾದ ಕಲ್ಲುಗಳಿಂದ ತನ್ನನ್ನು ಗಾಯಮಾಡಿಕೊಳ್ಳುತ್ತಾ ಇದ್ದನು. ಅವನು ಯೇಸುವನ್ನು ದೂರದಿಂದ ಕಂಡು ಓಡಿಬಂದು ಆತನಿಗೆ ಅಡ್ಡಬಿದ್ದು, ಮಹಾಶಬ್ದದಿಂದ ಆರ್ಭಟಿಸಿ, “ಯೇಸುವೇ, ಮಹೋನ್ನತನಾದ ದೇವರ ಮಗನೇ, ನನ್ನ ಗೊಡವೆ ನಿನಗೇಕೆ? ದೇವರಾಣೆ ನನ್ನನ್ನು ಹಿಂಸಿಸಬೇಡ ಎಂದು ನಿನ್ನನ್ನು ನಾನು ಬೇಡಿಕೊಳ್ಳುತ್ತೇನೆ” ಎಂದು ಹೇಳಿದನು. ಏಕೆಂದರೆ ಯೇಸು, “ಅಶುದ್ಧಾತ್ಮವೇ ಇವನನ್ನು ಬಿಟ್ಟುಹೋಗು” ಎಂದು ಆಜ್ಞಾಪಿಸಿದ್ದನು. ಯೇಸು, “ನಿನ್ನ ಹೆಸರು ಏನೆಂದು” ಅವನನ್ನು ಕೇಳಿದ್ದಕ್ಕೆ ಅವನು, “ನನ್ನ ಹೆಸರು ದಂಡು; ಯಾಕೆಂದರೆ ನಾವು ಬಹು ಮಂದಿ ಇದ್ದೇವೆ” ಎಂದು ಹೇಳಿ, ನಮ್ಮನ್ನು ಈ ಪ್ರಾಂತ್ಯದಿಂದ ಹೊರಡಿಸಬೇಡ ಎಂದು ಆತನನ್ನು ಬಹಳವಾಗಿ ಬೇಡಿಕೊಂಡವು. ಅಲ್ಲಿಯ ಗುಡ್ಡದಲ್ಲಿ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು. ಆ ಅಶುದ್ಧಾತ್ಮಗಳು, “ಆ ಹಂದಿಗಳೊಳಗೆ ಸೇರಿಕೊಳ್ಳುವುದಕ್ಕೆ ನಮ್ಮನ್ನು ಕಳುಹಿಸಿಕೊಡು” ಎಂದು ಆತನನ್ನು ಬೇಡಿಕೊಂಡವು. ಆತನು ಅವುಗಳಿಗೆ ಅನುಮತಿಸಲು ಆ ದೆವ್ವಗಳು ಆ ಮನುಷ್ಯನಿಂದ ಹೊರಗೆ ಬಂದು ಹಂದಿಗಳೊಳಗೆ ಪ್ರವೇಶಿಸಿದವು; ಅಲ್ಲಿ ಹೆಚ್ಚುಕಡಿಮೆ ಎರಡು ಸಾವಿರ ಹಂದಿಗಳಿದ್ದವು. ಆ ಹಂದಿಗಳು ಓಡಿ ಹೋಗಿ ಇಳಿಜಾರು ಸ್ಥಳದಿಂದ ಸಮುದ್ರದೊಳಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರು ಕಟ್ಟಿ ಸತ್ತುಹೋದವು. ಅವುಗಳನ್ನು ಮೇಯಿಸುವವರು ಓಡಿಹೋಗಿ ನಡೆದಿರುವ ಸಂಗತಿಯನ್ನು ಆ ಊರಲ್ಲಿಯೂ ಪಕ್ಕದ ಹಳ್ಳಿಗಳಲ್ಲಿಯೂ ತಿಳಿಸಲು ಜನರು ನಡೆದ ಸಂಗತಿ ಏನೆಂದು ನೋಡುವುದಕ್ಕೆ ಹೊರಟು ಯೇಸು ಇದ್ದಲ್ಲಿಗೆ ಬಂದರು. ಆ ದೆವ್ವಹಿಡಿದಿದ್ದವನು ಅಂದರೆ ದೆವ್ವಗಳ ದಂಡಿನಿಂದ ಬಂಧಿಸಲ್ಪಟ್ಟವನು, ಬಟ್ಟೆಗಳನ್ನು ಹಾಕಿಕೊಂಡು ಸುಬುದ್ಧಿಯಿಂದ ಕುಳಿತಿರುವುದನ್ನು ನೋಡಿ ಹೆದರಿದರು. ನಡೆದ ಸಂಗತಿಯನ್ನು ನೋಡಿದ್ದವರು ಆ ದೆವ್ವಹಿಡಿದವನಿಗೆ ಸಂಭವಿಸಿದೆಲ್ಲವನ್ನು ಮತ್ತು ಹಂದಿಗಳ ವಿಷಯವನ್ನೂ ಅವರಿಗೆ ವಿವರಿಸಿದರು. ಆಗ ಅವರು ಯೇಸುವಿಗೆ ತಮ್ಮ ಸೀಮೆಯನ್ನು ಬಿಟ್ಟು ಹೋಗಬೇಕೆಂದು ಬೇಡಿಕೊಂಡರು. ಆತನು ದೋಣಿಯನ್ನು ಹತ್ತುವಾಗ ಆ ದೆವ್ವಗಳ ಬಂಧನದಿಂದ ಬಿಡುಗಡೆ ಹೊಂದಿದವನು, ನಾನು ನಿನ್ನ ಬಳಿಯಲ್ಲಿಯೇ ಇರುತ್ತೇನೆಂದು ಆತನನ್ನು ಬೇಡಿದನು. ಆದರೆ ಯೇಸು ಅವನ ಬೇಡಿಕೆಯನ್ನು ಒಪ್ಪದೆ ಅವನಿಗೆ, “ನೀನು ನಿನ್ನ ಮನೆಗೂ ನಿನ್ನ ಜನರ ಬಳಿಗೂ ಹೋಗಿ ಕರ್ತನು ನಿನ್ನಲ್ಲಿ ಕರುಣೆಯಿಟ್ಟು ನಿನಗೆ ಏನೇನು ಉಪಕಾರಗಳನ್ನು ಮಾಡಿದ್ದಾನೋ ಅದನ್ನು ಹೇಳು” ಅಂದನು.

ತಾನು ಆಯ್ಕೆಮಾಡಿಕೊಂಡ ಹನ್ನೆರಡು ಮಂದಿ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದನು. ಕಳುಹಿಸುವಾಗ ಆತನು ಅವರಿಗೆ ದೆವ್ವಗಳ ಮೇಲೆ ಅಧಿಕಾರ ಕೊಟ್ಟು,

ಅವರು ಹೊರಟು ಹೋಗಿ ಜನರಿಗೆ, “ನೀವು ನಿಮ್ಮ ಪಾಪಗಳನ್ನು ಬಿಟ್ಟು ಮಾನಸಾಂತರ ಹೊಂದಬೇಕು” ಎಂದು ಸಾರಿ ಹೇಳಿದರು. ಅನೇಕ ದೆವ್ವಗಳನ್ನು ಬಿಡಿಸಿ ಅನೇಕ ರೋಗಿಗಳಿಗೆ ಎಣ್ಣೆ ಹಚ್ಚಿ ಗುಣಪಡಿಸಿದರು.

ಕೂಡಲೆ ಒಬ್ಬ ಹೆಂಗಸು ಆತನ ಸುದ್ದಿಯನ್ನು ಕೇಳಿ ಬಂದು ಆತನ ಪಾದಕ್ಕೆ ಬಿದ್ದಳು. ಆಕೆಯ ಮಗಳಿಗೆ ದೆವ್ವ ಹಿಡಿದಿತ್ತು. ಆ ಹೆಂಗಸು ಸುರೋಪೊಯಿನಿಕ್ಯದಲ್ಲಿ ಹುಟ್ಟಿದ ಗ್ರೀಕಳಾಗಿದ್ದಳು. ಆಕೆಯು ತನ್ನ ಮಗಳಿಗೆ ಹಿಡಿದಿದ್ದ ದೆವ್ವವನ್ನು ಬಿಡಿಸಬೇಕೆಂದು ಆತನನ್ನು ಬೇಡಿಕೊಂಡಾಗ, ಆತನು ಆಕೆಗೆ, “ಮೊದಲು ಮಕ್ಕಳು ತಿಂದು ತೃಪ್ತಿಯಾಗಲಿ; ಮಕ್ಕಳು ತಿನ್ನುವ ರೊಟ್ಟಿಯನ್ನು ತೆಗೆದು ನಾಯಿಮರಿಗಳಿಗೆ ಹಾಕುವುದು ಸರಿಯಲ್ಲ” ಎಂದು ಹೇಳಿದನು. ಆದರೆ ಅದಕ್ಕೆ ಆಕೆಯು, “ಹೌದು ಕರ್ತನೇ, ಮೇಜಿನ ಕೆಳಗಿರುವ ನಾಯಿಮರಿಗಳಂತೂ ಮಕ್ಕಳ ಕೈಯಿಂದ ಬೀಳುವ ರೊಟ್ಟೀತುಂಡುಗಳನ್ನು ತಿನ್ನುತ್ತವಲ್ಲಾ” ಎಂದು ಉತ್ತರಕೊಡಲು ಆತನು, “ಆಕೆಗೆ ನೀನು ಕೊಟ್ಟಿರುವ ಈ ಉತ್ತರದ ನಿಮಿತ್ತ ದೆವ್ವವು ನಿನ್ನ ಮಗಳನ್ನು ಬಿಟ್ಟು ಹೋಗಿದೆ, ನೀನು ಹೋಗು” ಅಂದನು. ಆಕೆಯು ತನ್ನ ಮನೆಗೆ ಹೋಗಿ ನೋಡಲಾಗಿ ಆ ಹುಡುಗಿಯು ಹಾಸಿಗೆಯ ಮೇಲೆ ಮಲಗಿದ್ದಳು; ದೆವ್ವ ಅವಳನ್ನು ಬಿಟ್ಟು ಹೋಗಿತ್ತು.

ಇದಲ್ಲದೆ ಆತನು, ಮನುಷ್ಯಕುಮಾರನು ಬಹು ಕಷ್ಟಗಳನ್ನು ಅನುಭವಿಸಿ ಹಿರಿಯರಿಂದಲೂ, ಮುಖ್ಯಯಾಜಕರಿಂದಲೂ, ಶಾಸ್ತ್ರಿಗಳಿಂದಲೂ ತಿರಸ್ಕರಿಸಲ್ಪಟ್ಟವನಾಗಿ ಕೊಲ್ಲಲ್ಪಟ್ಟು ಮೂರು ದಿನಗಳ ನಂತರ ಜೀವಿತನಾಗಿ ಎದ್ದು ಬರಬೇಕಾಗಿದೆ ಎಂದು ಉಪದೇಶಮಾಡುವುದಕ್ಕೆ ಪ್ರಾರಂಭಿಸಿದನು. ಆತನು ಈ ಮಾತನ್ನು ಸ್ಪಷ್ಟವಾಗಿ ಹೇಳಿದನು. ಆಗ ಪೇತ್ರನು ಆತನನ್ನು ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ “ನೀನು ಹೀಗೆ ಹೇಳುವುದು ಸರಿಯಲ್ಲ” ಎಂದು ಗದರಿಸಿದನು. ಆದರೆ ಯೇಸು ಹಿಂತಿರುಗಿ ತನ್ನ ಶಿಷ್ಯರನ್ನು ನೋಡಿ ಪೇತ್ರನನ್ನು ಗದರಿಸಿ, “ಸೈತಾನನೇ, ನನ್ನನ್ನು ಬಿಟ್ಟು ತೊಲಗಿ ಹೋಗು! ನಿನ್ನ ಯೋಚನೆ ಮನುಷ್ಯರದಾಗಿದೆಯೇ ಹೊರತು ದೇವರದಲ್ಲ” ಎಂದು ಹೇಳಿದನು.

ಅದಕ್ಕೆ ಆ ಗುಂಪಿನಲ್ಲಿ ಒಬ್ಬನು, “ಬೋಧಕನೇ, ನನ್ನ ಮಗನನ್ನು ನಿನ್ನ ಬಳಿಗೆ ಕರೆದುಕೊಂಡು ಬಂದೆನು; ಅವನಿಗೊಂದು ದೆವ್ವ ಹಿಡಿದದೆ ಅದು ಅವನನ್ನು ಮೂಗನನ್ನಾಗಿಸಿದೆ. ಅದು ಎಲ್ಲಿ ಅವನ ಮೇಲೆ ಬಂದರೂ ಅವನನ್ನು ನೆಲಕ್ಕೆ ಕೆಡವುತ್ತದೆ; ಆಗ ಅವನು ನೊರೆಸುರಿಸುತ್ತಾನೆ, ಕರಕರನೆ ಹಲ್ಲು ಕಡಿಯುತ್ತಾನೆ ಮತ್ತು ಮರಗಟ್ಟಿದವನಂತೆ ಆಗುತ್ತಾನೆ. ಅದನ್ನು ಬಿಡಿಸಬೇಕೆಂದು ನಿನ್ನ ಶಿಷ್ಯರಿಗೆ ಕೇಳಿಕೊಂಡೆನು, ಆದರೆ ಅವರ ಕೈಯಿಂದ ಆಗದೆಹೋಯಿತು” ಎಂದು ಉತ್ತರ ಕೊಟ್ಟನು. ಅದಕ್ಕಾತನು, “ಎಲಾ, ಅಪನಂಬಿಕೆಯುಳ್ಳಂಥ ಸಂತಾನವೇ, ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇರಲಿ! ಇನ್ನೆಷ್ಟು ದಿನ ನಿಮ್ಮನ್ನು ಸಹಿಸಿಕೊಳ್ಳಲಿ? ಅವನನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ” ಅಂದನು. ಆಗ ಅವರು ಆ ಹುಡುಗನನ್ನು ಯೇಸುವಿನ ಬಳಿಗೆ ತೆಗೆದುಕೊಂಡು ಬಂದರು. ಆತನನ್ನು ಕಂಡಕೂಡಲೆ ಆ ದೆವ್ವವು ಹುಡುಗನನ್ನು ಬಹಳವಾಗಿ ಒದ್ದಾಡಿಸಲು ಅವನು ನೆಲಕ್ಕೆ ಬಿದ್ದು ನೊರೆಸುರಿಸುತ್ತಾ ಹೊರಳಾಡಿದನು. ಯೇಸು ಅವನ ತಂದೆಯನ್ನು, “ಇವನಿಗೆ ಹೀಗಾಗಿ ಎಷ್ಟು ಕಾಲವಾಯಿತು?” ಎಂದು ಕೇಳಿದಾಗ ಅವನು, “ಚಿಕ್ಕಂದಿನಲ್ಲಿಯೇ ಬಂದಿದೆ; ಮತ್ತು ಇವನನ್ನು ಕೊಲ್ಲಬೇಕೆಂದು ಪದೇಪದೇ ಬೆಂಕಿಯಲ್ಲಿಯೂ ನೀರಿನಲ್ಲಿಯೂ ಕೆಡವಿತು; ನಿನ್ನ ಕೈಯಲ್ಲಿ ಏನಾದರೂ ಆಗುವ ಹಾಗಿದ್ದರೆ ನಮ್ಮ ಮೇಲೆ ಕನಿಕರವಿಟ್ಟು ನಮಗೆ ಸಹಾಯಮಾಡು” ಅಂದನು. ಯೇಸು ಅವನಿಗೆ, “‘ನಿನ್ನ ಕೈಯಲ್ಲಿ ಆಗುವ ಹಾಗಿದ್ದರೆ ಅನ್ನುತ್ತೀಯೋ’? ನಂಬುವವನಿಗೆ ಎಲ್ಲವೂ ಸಾಧ್ಯ!” ಎಂದು ಹೇಳಿದನು. ಕೂಡಲೆ ಆ ಹುಡುಗನ ತಂದೆಯು, “ನಂಬುತ್ತೇನೆ, ನನಗೆ ಅಪನಂಬಿಕೆ ಇಲ್ಲದಂತೆ ಸಹಾಯಮಾಡು” ಎಂದು ಕೂಗಿ ಹೇಳಿದನು. ಆಗ ಯೇಸು ಜನರ ಗುಂಪು ಓಡಿಬರುವುದನ್ನು ಕಂಡು ಆ ದೆವ್ವವನ್ನು ಗದರಿಸಿ, “ಎಲೈ, ಕಿವುಡಾದ ಮೂಗದೆವ್ವವೇ, ಇವನನ್ನು ಬಿಟ್ಟು ಹೋಗು; ಇನ್ನೆಂದಿಗೂ ಇವನೊಳಗೆ ಪ್ರವೇಶಿಸಕೂಡದೆಂದು ನಾನು ನಿನಗೆ ಅಪ್ಪಣೆಕೊಡುತ್ತೇನೆ” ಅಂದನು. ಆಗ ಅದು ಅಬ್ಬರಿಸಿ ಹುಡುಗನನ್ನು ಒದ್ದಾಡಿಸಿ ಬಿಟ್ಟುಹೋಯಿತು. ಆ ಹುಡುಗನು ಸತ್ತಹಾಗೆ ಬಿದ್ದಿದ್ದರಿಂದ ಬಹುಜನರು, “ಸತ್ತುಹೋದನು” ಎಂದು ಅಂದುಕೊಂಡರು. ಆದರೆ ಯೇಸು ಅವನನ್ನು ಕೈಹಿಡಿದು ಎಬ್ಬಿಸಲು ಹುಡುಗನು ಎದ್ದು ನಿಂತನು. ಯೇಸು ಮನೆಗೆ ಬಂದಾಗ ಆತನ ಶಿಷ್ಯರು, “ಅದನ್ನು ಬಿಡಿಸಲಿಕ್ಕೆ ನಮ್ಮಿಂದ ಏಕೆ ಆಗಲಿಲ್ಲವೆಂದು” ಆತನನ್ನು ಏಕಾಂತದಲ್ಲಿ ಕೇಳಿದರು. ಅದಕ್ಕೆ ಆತನು, “ಈ ಬಗೆಯ ದೆವ್ವಗಳು ದೇವರಪ್ರಾರ್ಥನೆಯಿಂದಲೇ ಹೊರತು ಬೇರೆ ಯಾವ ರೀತಿಯಿಂದಲೂ ಬಿಟ್ಟು ಹೋಗುವುದಿಲ್ಲವೆಂದು” ಅವರಿಗೆ ಹೇಳಿದನು.

ವಾರದ ಮೊದಲನೆಯ ದಿನ ಬೆಳಿಗ್ಗೆ ಯೇಸು ಜೀವಿತನಾಗಿ ಎದ್ದ ಮೇಲೆ ಮಗ್ದಲದ ಮರಿಯಳಿಗೆ ಮೊದಲು ಕಾಣಿಸಿಕೊಂಡನು. ಆತನು ಆಕೆಯನ್ನು ಏಳು ದೆವ್ವಗಳಿಂದ ಬಿಡಿಸಿದ್ದನು.

ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆ ಹೊಂದುವನು; ನಂಬದೇ ಹೋಗುವವನು ದಂಡನೆಗೆ ಗುರಿಯಾಗುವನು. “ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು, ಹೊಸ ಭಾಷೆಗಳಲ್ಲಿ ಮಾತನಾಡುವರು;

ಯೇಸು ಪವಿತ್ರಾತ್ಮಭರಿತನಾಗಿ ಯೊರ್ದನ್ ಹೊಳೆಯಿಂದ ಹಿಂತಿರುಗಿ ಬಂದು ದೇವರಾತ್ಮನಿಂದ, ನಲವತ್ತು ದಿನ ಮರುಭೂಮಿಯಲ್ಲಿ ನಡಿಸಲ್ಪಡುತ್ತಾ, ಸೈತಾನನಿಂದ ಶೋಧಿಸಲ್ಪಟ್ಟನು. ಆ ದಿನಗಳಲ್ಲಿ ಆತನು ಏನನ್ನೂ ತಿನ್ನಲಿಲ್ಲ. ಆ ದಿನಗಳು ಮುಗಿದ ಮೇಲೆ ಆತನಿಗೆ ಹಸಿವಾಯಿತು. ಆಗ ಸೈತಾನನು ಆತನಿಗೆ, “ನೀನು ದೇವರ ಮಗನಾಗಿದ್ದರೆ ಈ ಕಲ್ಲನ್ನು ರೊಟ್ಟಿಯಾಗುವಂತೆ ಅಪ್ಪಣೆ ಕೊಡು” ಎಂದು ಹೇಳಲು, ಯೇಸು ಅವನಿಗೆ, “‘ಮನುಷ್ಯನು ರೊಟ್ಟಿ ತಿಂದ ಮಾತ್ರದಿಂದ ಬದುಕುವುದಿಲ್ಲ’ ಎಂದು ಬರೆದದೆ” ಎಂದು ಉತ್ತರಕೊಟ್ಟನು. ಬಳಿಕ ಸೈತಾನನು ಆತನನ್ನು ಎತ್ತರಕ್ಕೆ ಕರೆದುಕೊಂಡು ಹೋಗಿ, ಕ್ಷಣಮಾತ್ರದಲ್ಲಿ ಲೋಕದ ಎಲ್ಲಾ ರಾಜ್ಯಗಳನ್ನು ಆತನಿಗೆ ತೋರಿಸಿ, “ಇವೆಲ್ಲವುಗಳ ಅಧಿಕಾರವನ್ನೂ ಇವುಗಳ ವೈಭವವನ್ನೂ ನಿನಗೆ ಕೊಡುವೆನು; ಇದೆಲ್ಲಾ ನನಗೆ ಕೊಡಲ್ಪಟ್ಟಿದೆ, ಇದನ್ನು ನನ್ನ ಮನಸ್ಸು ಬಂದವನಿಗೆ ಕೊಡುತ್ತೇನೆ; ನೀನು ನನ್ನ ಮುಂದೆ ಅಡ್ಡಬಿದ್ದರೆ ಇದೆಲ್ಲಾ ನಿನ್ನದಾಗುವುದು” ಎಂದು ಆತನಿಗೆ ಹೇಳಿದನು. ಅದಕ್ಕೆ ಯೇಸು, “‘ನಿನ್ನ ದೇವರಾಗಿರುವ ಕರ್ತನನ್ನು ಆರಾಧಿಸಿ, ಆತನೊಬ್ಬನನ್ನೇ ಸೇವಿಸಬೇಕು’ ಎಂಬುದಾಗಿ ಬರೆದದೆ” ಎಂದು ಉತ್ತರಕೊಟ್ಟನು. ಇದಲ್ಲದೆ ಸೈತಾನನು ಆತನನ್ನು ಯೆರೂಸಲೇಮಿಗೆ ಕರೆದುಕೊಂಡು ಹೋಗಿ ದೇವಾಲಯದ ಗೋಪುರದ ತುದಿಯಲ್ಲಿ ನಿಲ್ಲಿಸಿ ಆತನಿಗೆ, “ನೀನು ದೇವರ ಮಗನಾಗಿದ್ದರೆ ಇಲ್ಲಿಂದ ಕೆಳಕ್ಕೆ ಧುಮುಕು. ‘ನಿನ್ನನ್ನು ಕಾಯುವುದಕ್ಕೆ ಕರ್ತನು ತನ್ನ ದೂತರಿಗೆ ಅಪ್ಪಣೆ ಕೊಡುವನು; ಮತ್ತು ನಿನ್ನ ಕಾಲು ಕಲ್ಲಿಗೆ ತಗಲದಂತೆ ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು’ ಎಂಬುದಾಗಿ ಬರೆದದೆಯಲ್ಲಾ” ಎಂದು ಹೇಳಿದನು. ಅದಕ್ಕೆ ಆತನು, “‘ನಿನ್ನ ದೇವರಾಗಿರುವ ಕರ್ತನನ್ನು ಪರೀಕ್ಷಿಸಬಾರದೆಂದು’ ಹೇಳಿದೆ” ಎಂದು ಉತ್ತರ ಕೊಟ್ಟನು. ಹೀಗೆ ಸೈತಾನನು ನಾನಾ ವಿಧದಲ್ಲಿ ಶೋಧಿಸಿದ ನಂತರ, ತಕ್ಕ ಸಮಯ ಬರುವ ತನಕ ಆತನನ್ನು ಬಿಟ್ಟು ಹೊರಟುಹೋದನು.

ಆತನ ಮಾತು ಅಧಿಕಾರವುಳ್ಳದ್ದಾಗಿದ್ದದರಿಂದ ಅವರು ಆತನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟರು. ಆ ಸಭಾಮಂದಿರದಲ್ಲಿ ದೆವ್ವಹಿಡಿದ ಒಬ್ಬ ಮನುಷ್ಯನಿದ್ದನು. ಆತನು, “ನಜರೇತಿನ ಯೇಸುವೇ, ನಮ್ಮ ಗೊಡವೆ ನಿನಗೇಕೆ? ನಮ್ಮನ್ನು ನಾಶಮಾಡುವುದಕ್ಕೆ ಬಂದೆಯಾ? ನಿನ್ನನ್ನು ಬಲ್ಲೆವು. ನೀನು ದೇವರಿಂದ ಬಂದ ಪರಿಶುದ್ಧನೇ” ಎಂದು ಜೋರಾಗಿ ಕೂಗಿ ಹೇಳಿದನು. ಯೇಸು ದೆವ್ವವನ್ನು ಗದರಿಸಿ, “ಸುಮ್ಮನಿರು, ಇವನನ್ನು ಬಿಟ್ಟು ಹೋಗು” ಎನ್ನಲಾಗಿ ಆ ದೆವ್ವವು ಅವನನ್ನು ಎಲ್ಲರ ನಡುವೆ ಬೀಳಿಸಿ ಅವನಿಗೆ ಯಾವ ಕೇಡನ್ನೂ ಮಾಡದೆ ಬಿಟ್ಟುಹೋಯಿತು. ಅದಕ್ಕೆ ಎಲ್ಲರು ಬೆರಗಾಗಿ, “ಇದೆಂಥ ಮಾತಾಗಿರಬಹುದು? ಈತನು ಅಧಿಕಾರದಿಂದಲೂ, ಬಲದಿಂದಲೂ ದೆವ್ವಗಳಿಗೆ ಅಪ್ಪಣೆಕೊಡುತ್ತಾನೆ, ಅವು ಬಿಟ್ಟು ಹೋಗುತ್ತವೆ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.

ಸಂಜೆಯಾದಂತೆ ಜನರು ವಿವಿಧ ರೋಗಗಳಿಂದ ಅಸ್ವಸ್ಥವಾದವರನ್ನೆಲ್ಲಾ ಆತನ ಹತ್ತಿರಕ್ಕೆ ಕರತರಲು; ಆತನು ಪ್ರತಿಯೊಬ್ಬರ ಮೇಲೆಯೂ ಕೈಯಿಟ್ಟು ಅವರನ್ನು ವಾಸಿಮಾಡಿದನು. ದೆವ್ವಗಳು ಸಹ, ನೀನು ದೇವಕುಮಾರನು ಎಂದು ಅಬ್ಬರಿಸಿ, ಅನೇಕರನ್ನು ಬಿಟ್ಟುಹೋದವು. ಆತನು ಕ್ರಿಸ್ತನೆಂದು ದೆವ್ವಗಳಿಗೆ ಸ್ಪಷ್ಟವಾಗಿ ತಿಳಿದಿದ್ದರಿಂದ ಆತನು ಅವುಗಳನ್ನು ಮಾತನಾಡದಂತೆ ಗದರಿಸಿದನು.

ಆ ಜನರು ಆತನ ಉಪದೇಶವನ್ನು ಕೇಳುವುದಕ್ಕೂ ತಮ್ಮ ರೋಗಗಳನ್ನು ವಾಡಿಸಿಮಾಡಿಸಿಕೊಳ್ಳುವುದಕ್ಕೂ ಬಂದಿದ್ದರು. ದೆವ್ವಪೀಡಿತರು ಸಹ ಬಂದು ಸ್ವಸ್ಥರಾದರು.

ಅದೇ ಗಳಿಗೆಯಲ್ಲಿ ಆತನು ಅನೇಕರನ್ನು ರೋಗ, ಕಾಯಿಲೆ, ದೆವ್ವ ಇಂಥವುಗಳಿಂದ ಪೀಡಿತರಾದವರನ್ನು ವಾಸಿಮಾಡಿದನು ಮತ್ತು ಅನೇಕ ಕುರುಡರಿಗೆ ಕಣ್ಣಿನ ದೃಷ್ಟಿ ದಯಪಾಲಿಸಿದನು.

ದೆವ್ವಗಳ ಕಾಟದಿಂದಲೂ ರೋಗಗಳಿಂದಲೂ ಗುಣಹೊಂದಿದ ಕೆಲವು ಮಂದಿ ಹೆಂಗಸರು ಸಹ ಇದ್ದರು. ಈ ಹೆಂಗಸರು ಯಾರಾರೆಂದರೆ, ಏಳು ದುರಾತ್ಮಗಳಿಂದ ಬಿಡುಗಡೆ ಹೊಂದಿದ್ದ ಮಗ್ದಲದ ಮರಿಯಳು,

ಈ ಸಾಮ್ಯದ ಅರ್ಥವೇನಂದರೆ, ಆ ಬೀಜವೆಂದರೆ ದೇವರ ವಾಕ್ಯ. ಕೆಲವರು ವಾಕ್ಯವನ್ನು ಕೇಳಿದ ಕೂಡಲೆ ಸೈತಾನನು ಬಂದು ಅವರು ನಂಬಿ ರಕ್ಷಣೆ ಹೊಂದಬಾರದೆಂದು ವಾಕ್ಯವನ್ನು ಅವರ ಹೃದಯದಿಂದ ತೆಗೆದುಬಿಡುತ್ತಾನೆ. ಇವರೇ ದಾರಿಯ ಮಗ್ಗುಲಲ್ಲಿ ಬಿದ್ದಿರುವ ಬೀಜಗಳು.

ಯೇಸು ದಡಕ್ಕೆ ಇಳಿಯುತ್ತಲೇ ಆ ಊರಿನವನಾದ ಒಬ್ಬ ಮನುಷ್ಯನು ಆತನೆದುರಿಗೆ ಬಂದನು. ಅವನಿಗೆ ದೆವ್ವಗಳು ಹಿಡಿದಿದ್ದವು. ಅವನು ಬಹುಕಾಲದಿಂದ ವಸ್ತ್ರವನ್ನೇ ಧರಿಸದೆ ಮನೆಯಲ್ಲಿ ವಾಸಿಸದೆ ಸಮಾಧಿಯ ಗವಿಗಳಲ್ಲಿಯೇ ಇರುತ್ತಿದ್ದನು. ಇವನು ಯೇಸುವನ್ನು ಕಂಡು ಆರ್ಭಟಿಸಿ ಆತನ ಮುಂದೆ ಅಡ್ಡಬಿದ್ದು ಮಹಾಶಬ್ದದಿಂದ, “ಯೇಸುವೇ, ಪರಾತ್ಪರನಾದ ದೇವರ ಮಗನೇ, ನನ್ನ ಗೊಡವೆ ನಿನಗೇಕೆ? ನನ್ನನ್ನು ಕಾಡಬೇಡವೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ” ಅಂದನು. ಏಕೆಂದರೆ, ಈ ಮನುಷ್ಯನನ್ನು ಬಿಟ್ಟುಹೋಗಬೇಕೆಂದು ಆತನು ಆ ದೆವ್ವಕ್ಕೆ ಅಪ್ಪಣೆ ಕೊಟ್ಟಿದ್ದನು. ಅದು ಬಹು ಕಾಲದಿಂದ ಅವನನ್ನು ಹಿಡಿದಿತ್ತು; ಇದಲ್ಲದೆ ಅವನನ್ನು ಕಾವಲಲ್ಲಿಟ್ಟು ಸರಪಣಿಗಳಿಂದಲೂ ಬೇಡಿಗಳಿಂದಲೂ ಬಂಧಿಸಿದ್ದರೂ ಅವನು ಅವುಗಳನ್ನು ಮುರಿದುಹಾಕುತ್ತಿದ್ದನು; ಮತ್ತು ಆ ದೆವ್ವವು ಅವನನ್ನು ನಿರ್ಜನ ಪ್ರದೇಶಗಳಿಗೆ ಓಡಿಸುತ್ತಿತ್ತು. ಯೇಸುವು ಅವನಿಗೆ, “ನಿನ್ನ ಹೆಸರೇನೆಂದು?” ಕೇಳಲು ಅವನು, “ನನ್ನ ಹೆಸರು ದಂಡು” ಅಂದನು, ಏಕೆಂದರೆ ಬಹಳ ದೆವ್ವಗಳು ಅವನೊಳಗೆ ಹೊಕ್ಕಿದವು. ಪಾತಾಳಕ್ಕೆ ಹೋಗಿಬಿಡುವಂತೆ ನಮಗೆ ಆಜ್ಞೆಮಾಡಬೇಡವೆಂದು ಅವು ಆತನನ್ನು ಬೇಡಿಕೊಂಡವು. ಅಲ್ಲಿಯ ಗುಡ್ಡದ ಮೇಲೆ ಹಂದಿಗಳ ಹಿಂಡು ಮೇಯುತ್ತಿತ್ತು. ಆ ದೆವ್ವಗಳು, ಆ ಹಂದಿಗಳೊಳಗೆ ಸೇರಿಕೊಳ್ಳುವುದಕ್ಕೆ ನಮಗೆ ಅಪ್ಪಣೆಕೊಡಬೇಕೆಂದು ಯೇಸುವನ್ನು ಬೇಡಿಕೊಂಡವು. ಆತನು ಆಗಲಿ ಎಂದು ಅವುಗಳಿಗೆ ಅಪ್ಪಣೆಕೊಡಲು, ದೆವ್ವಗಳು ಆ ಮನುಷ್ಯನೊಳಗಿಂದ ಹೊರಗೆ ಬಂದು ಹಂದಿಗಳೊಳಗೆ ಹೊಕ್ಕವು. ಆ ಹಂದಿಗಳು ಉಗ್ರವಾಗಿ ಓಡಿ ಕಡಿದಾದ ಸ್ಥಳದಿಂದ ಕೆರೆಯೊಳಗೆ ಬಿದ್ದು ಉಸಿರುಕಟ್ಟಿ ಸತ್ತು ಹೋದವು. ಮೇಯಿಸುವವರು ನಡೆದದ್ದನ್ನು ಕಂಡು ಓಡಿ ಹೋಗಿ ಆ ಊರಲ್ಲಿಯೂ ಹಳ್ಳಿಗಳಲ್ಲಿಯೂ ಅದನ್ನು ತಿಳಿಸಲು, ಜನರು ನಡೆದ ಸಂಗತಿಯನ್ನು ನೋಡುವುದಕ್ಕೆ ಹೊರಟು ಯೇಸುವಿದ್ದಲ್ಲಿಗೆ ಬಂದಾಗ ದೆವ್ವಗಳು ಬಿಟ್ಟುಹೋಗಿದ್ದ ಆ ಮನುಷ್ಯನು ಬಟ್ಟೆಯನ್ನು ಧರಿಸಿಕೊಂಡು ಸ್ವಸ್ಥಬುದ್ಧಿಯಿಂದ ಯೇಸುವಿನ ಪಾದಗಳ ಬಳಿಯಲ್ಲಿ ಕುಳಿತಿರುವುದನ್ನು ಕಂಡು ಹೆದರಿದರು. ನಡೆದ ಸಂಗತಿಯನ್ನು ನೋಡಿದವರು ಆ ದೆವ್ವಹಿಡಿದಿದ್ದವನಿಗೆ ಬಿಡುಗಡೆಯಾದ ರೀತಿಯನ್ನು ಅವರಿಗೆ ತಿಳಿಸಲು, ಗೆರಸೇನರ ಸುತ್ತಲಿರುವ ಸೀಮೆಯವರಿಗೆಲ್ಲಾ ಮಹಾ ಭಯ ಉಂಟಾದದ್ದರಿಂದ ಅವರು ಆತನನ್ನು, ನೀನು ನಮ್ಮನ್ನು ಬಿಟ್ಟುಹೋಗಬೇಕೆಂದು ಬೇಡಿಕೊಂಡರು. ಆತನು ದೋಣಿಯನ್ನು ಹತ್ತಿ ಹಿಂತಿರುಗಿ ಹೋದನು. ಹೊರಡುವಾಗ ದೆವ್ವಗಳಿಂದ ಬಿಡುಗಡೆಯಾದ ಆ ಮನುಷ್ಯನು, ನಾನು ನಿನ್ನ ಜೊತೆಯಲ್ಲಿಯೇ ಇರುತ್ತೇನೆ ಎಂದು ಆತನನ್ನು ಬೇಡಿಕೊಂಡಾಗ, ಆತನು, “ನೀನು ನಿನ್ನ ಮನೆಗೆ ಹಿಂತಿರುಗಿ ಹೋಗಿ ದೇವರು ನಿನಗೆ ಏನೇನು ಉಪಕಾರಗಳನ್ನು ಮಾಡಿದನೋ ಅದನ್ನೆಲ್ಲಾ ನಿನ್ನವರಿಗೆ ವಿವರವಾಗಿ ಹೇಳು” ಎಂದು ಅವನನ್ನು ಕಳುಹಿಸಿಬಿಟ್ಟನು. ಅವನು ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರಗಳನ್ನು ಆ ಊರಲ್ಲೆಲ್ಲಾ ಸಾರಿದನು.

ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು ಅವರಿಗೆ ಎಲ್ಲಾ ದೆವ್ವಗಳನ್ನು ಬಿಡಿಸುವ ಮತ್ತು ರೋಗಗಳನ್ನು ವಾಸಿಮಾಡುವ ಶಕ್ತಿ ಮತ್ತು ಅಧಿಕಾರಗಳನ್ನು ಕೊಟ್ಟು,

ಆಗ ಆ ಗುಂಪಿನಲ್ಲಿದ್ದ ಒಬ್ಬನು, “ಬೋಧಕನೇ, ನನ್ನ ಮಗನನ್ನು ಕಟಾಕ್ಷಿಸು ಎಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. ನನಗೆ ಇವನೊಬ್ಬನೇ ಮಗನು. ಇವನನ್ನು ದೆವ್ವಹಿಡಿಯುತ್ತದೆ, ಹಿಡಿಯುತ್ತಲೇ ಕೂಗಿಕೊಳ್ಳುತ್ತಾನೆ. ಅದು ಬಾಯಲ್ಲಿ ನೊರೆ ಬರುವಷ್ಟು ಇವನನ್ನು ಒದ್ದಾಡಿಸುತ್ತದೆ ಮತ್ತು ಬಹು ಕಷ್ಟಕೊಟ್ಟು ತೊಂದರೆಪಡಿಸಿದ ಹೊರತು ಬಿಟ್ಟುಬಿಡುವುದಿಲ್ಲ. ಅದನ್ನು ಬಿಡಿಸಬೇಕೆಂದು ನಿನ್ನ ಶಿಷ್ಯರನ್ನು ಬೇಡಿಕೊಂಡೆನು. ಆದರೆ ಅವರಿಂದ ಆಗದೆಹೋಯಿತು” ಎಂದು ಹೇಳಿದನು. ಅದಕ್ಕೆ ಯೇಸು, “ಎಲಾ ಅಪನಂಬಿಕೆಯುಳ್ಳಂಥ ಮೂರ್ಖಸಂತಾನವೇ, ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇದ್ದು ನಿಮ್ಮನ್ನು ಸಹಿಸಿಕೊಳ್ಳಲಿ?” ಎಂದು ಹೇಳಿದನು. ಮತ್ತು ಆ ಮನುಷ್ಯನಿಗೆ “ನಿನ್ನ ಮಗನನ್ನು ಇಲ್ಲಿಗೆ ಕರೆದುಕೊಂಡು ಬಾ” ಅಂದನು. ಆ ಹುಡುಗನು ಇನ್ನೂ ಬರುತ್ತಿರುವಾಗಲೇ ಆ ದೆವ್ವವು ಅವನನ್ನು ನೆಲಕ್ಕೆ ಅಪ್ಪಳಿಸಿ ಬಹಳವಾಗಿ ಒದ್ದಾಡಿಸಿತು. ಆದರೆ ಯೇಸು ಆ ದೆವ್ವವನ್ನು ಗದರಿಸಿ ಆ ಹುಡುಗನಿಗೆ ವಾಸಿಮಾಡಿ ಅವನ ತಂದೆಗೆ ಒಪ್ಪಿಸಿದನು. ಅದನ್ನು ನೋಡಿ ಎಲ್ಲರು ದೇವರ ಮಹತ್ಕಾರ್ಯಕ್ಕೆ ಬೆರಗಾದರು. ಯೇಸುಮಾಡಿದ ಎಲ್ಲಾ ಮಹತ್ಕಾರ್ಯಗಳಿಗೆ ಎಲ್ಲರೂ ಆಶ್ಚರ್ಯಪಡುತ್ತಿರಲಾಗಿ, ಆತನು ತನ್ನ ಶಿಷ್ಯರಿಗೆ,

ತರುವಾಯ ಆ ಎಪ್ಪತ್ತು ಮಂದಿಯು ಸಂತೋಷವುಳ್ಳವರಾಗಿ ಹಿಂತಿರುಗಿ ಬಂದು, “ಕರ್ತನೇ, ದೆವ್ವಗಳು ಕೂಡಾ ನಿನ್ನ ಹೆಸರಿನಲ್ಲಿ ನಮಗೆ ಅಧೀನವಾಗುತ್ತವೆ” ಅಂದರು. ಯೇಸು ಅವರಿಗೆ, “ಸೈತಾನನು ಮಿಂಚಿನಂತೆ ಆಕಾಶದಿಂದ ಬೀಳುವುದನ್ನು ಕಂಡೆನು. ನೋಡಿರಿ, ಹಾವುಗಳನ್ನೂ ಚೇಳುಗಳನ್ನೂ ವೈರಿಯ ಸಮಸ್ತ ಬಲವನ್ನೂ ತುಳಿಯುವುದಕ್ಕೆ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವುದೂ ನಿಮಗೆ ಕೇಡು ಮಾಡುವುದೇ ಇಲ್ಲ. ಆದರೂ ದೆವ್ವಗಳು ನಮಗೆ ಅಧೀನವಾಗಿವೆ ಎಂದು ಸಂತೋಷಪಡದೆ ನಿಮ್ಮ ಹೆಸರುಗಳು ಪರಲೋಕದಲ್ಲಿ ಬರೆಯಲ್ಪಟ್ಟಿವೆ ಎಂದು ಸಂತೋಷಪಡಿರಿ” ಎಂದು ಹೇಳಿದನು.

ಒಮ್ಮೆ ಯೇಸು ಮೂಗದೆವ್ವವನ್ನು ಬಿಡಿಸುತ್ತಿದ್ದನು. ಆ ದೆವ್ವವು ಬಿಟ್ಟು ಹೋದ ಮೇಲೆ ಮೂಕನು ಮಾತನಾಡಿದನು; ಅದನ್ನು ನೋಡಿದ ಜನರು ಆಶ್ಚರ್ಯಪಟ್ಟರು. ಆದರೆ ಅವರಲ್ಲಿ ಕೆಲವರು, “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ” ಅಂದರು. ಬೇರೆ ಕೆಲವರು ಆತನನ್ನು ಪರೀಕ್ಷಿಸುವುದಕ್ಕಾಗಿ, “ನೀನು ಪರಲೋಕದಿಂದ ಒಂದು ಸೂಚಕಕಾರ್ಯವನ್ನು ಮಾಡಿತೋರಿಸು” ಎಂದು ಕೇಳಿದರು. ಯೇಸು ಅವರ ಆಲೋಚನೆಗಳನ್ನು ಅರಿತುಕೊಂಡು ಅವರಿಗೆ ಹೇಳಿದ್ದೇನಂದರೆ, “ತಮ್ಮತಮ್ಮೊಳಗೆ ಭೇದ ಹುಟ್ಟಿದ ರಾಜ್ಯವು ನಾಶವಾಗುವುದು ಮತ್ತು ತನ್ನಲ್ಲಿ ಕಚ್ಚಾಡಿ ಭೇದಹುಟ್ಟಿಸುವ ಕುಟುಂಬ ಬಿದ್ದುಹೋಗುವುದು. ಅದರಂತೆ ಸೈತಾನ ಪಕ್ಷದವರು ಒಬ್ಬರ ವಿರುದ್ಧ ಒಬ್ಬರು ಜಗಳ ಆಡಿದರೆ ಅವನ ರಾಜ್ಯವು ಹೇಗೆ ಉಳಿದೀತು? ಬೆಲ್ಜೆಬೂಲನ ಬಲದಿಂದ ದೆವ್ವಗಳನ್ನು ಬಿಡಿಸುತ್ತೀ ಎಂದು ನನಗೆ ಹೇಳುತ್ತೀರಲ್ಲಾ, ನಾನು ಬೆಲ್ಜೆಬೂಲನ ಬಲದಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮವರು ಯಾರ ಬಲದಿಂದ ಬಿಡಿಸುತ್ತಾರೆ? ಆದುದರಿಂದ ನೀವು ಹೇಳುವುದು ತಪ್ಪೆಂದು ನಿಮ್ಮವರೇ ತೀರ್ಪುಕೊಡುವರು. ನಾನು ದೇವರ ಬಲದಿಂದಲೇ ದೆವ್ವಗಳನ್ನು ಬಿಡಿಸುವುದಾದರೆ ದೇವರ ರಾಜ್ಯವು ನಿಮ್ಮಲ್ಲಿಗೆ ಈಗಾಗಲೇ ಬಂದಿದೆ ಎಂಬುದು ಸ್ಪಷ್ಟ.

“ಒಬ್ಬ ಬಲಿಷ್ಠನು ಸರ್ವಾಯುಧಗಳನ್ನು ಧರಿಸಿಕೊಂಡು ತನ್ನ ಮನೆಯನ್ನು ಕಾಪಾಡಿಕೊಂಡಿರುವಾಗ ಅವನ ವಸ್ತುಗಳು ಭದ್ರವಾಗಿಯೇ ಇರುವವು; ಆದರೆ ಅವನಿಗಿಂತ ಬಲಿಷ್ಠನು ಬಂದು ಅವನನ್ನು ಗೆದ್ದು ಅವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು, ಸುಲಿಗೆಮಾಡಿದ್ದನ್ನು ಹಂಚಿಕೊಡುತ್ತಾನೆ. ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನ ಜೊತೆಯಲ್ಲಿ ಒಟ್ಟುಗೂಡಿಸದವನು ಚದರಿಸುವವನಾಗುತ್ತಾನೆ. “ಬೋಧನೆಯನ್ನು ಮುಂದುವರಿಸುತ್ತಾ ಯೇಸು, ದೆವ್ವವು ಮನುಷ್ಯನನ್ನು ಬಿಟ್ಟುಹೋದ ಮೇಲೆ ವಿಶ್ರಾಂತಿಯನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ತಿರುಗಾಡುತ್ತದೆ. ವಿಶ್ರಾಂತಿ ಸಿಕ್ಕದ ಕಾರಣ ಅದು, ‘ನಾನು ಬಿಟ್ಟು ಬಂದ ನನ್ನ ಮನೆಗೆ ಹಿಂತಿರುಗಿ ಹೋಗುತ್ತೇನೆ’ ಅಂದುಕೊಂಡು ಬಂದು, ಆ ಮನೆ ಗುಡಿಸಿ ವ್ಯವಸ್ಥಿತವಾಗಿರುವುದನ್ನು ಕಂಡು ಹೊರಟುಹೋಗಿ, ತನಗಿಂತ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬರುವುದು. ಅವು ಒಳಹೊಕ್ಕು ಅಲ್ಲಿ ವಾಸಮಾಡುವವು, ಆಗ ಆ ಮನುಷ್ಯನ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗುವುದು” ಅಂದನು.

ಅಲ್ಲಿ ಹದಿನೆಂಟು ವರ್ಷಗಳಿಂದ ದುರಾತ್ಮನಿಂದ ಬಾಧಿತಳಾಗಿ ಬೆನ್ನು ಬಗ್ಗಿ ಹೋಗಿ ಗೂನಿಯಾಗಿದ್ದು ಸ್ವಲ್ಪವಾದರೂ ಮೈಯನ್ನು ಮೇಲಕ್ಕೆ ಎತ್ತಲಾರದೆ ಇದ್ದ ಒಬ್ಬ ಹೆಂಗಸು ಇದ್ದಳು.

ಹಾಗಾದರೆ ಹದಿನೆಂಟು ವರ್ಷಗಳ ತನಕ ಸೈತಾನನು ಕಟ್ಟಿ ಹಾಕಿದ್ದವಳೂ ಅಬ್ರಹಾಮನ ವಂಶದವಳೂ ಆಗಿರುವ ಈಕೆಯನ್ನು ಸಬ್ಬತ್ ದಿನದಲ್ಲಿ ಈ ಬಂಧನದಿಂದ ಬಿಡಿಸಬಾರದೋ?” ಎಂದು ಕೇಳಿದನು.

ಆಗ ಸೈತಾನನು ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತನೆಂಬ ಯೂದನಲ್ಲಿ ಪ್ರವೇಶಿಸಲು, ಅವನು ಮುಖ್ಯಯಾಜಕರ ಬಳಿಗೂ ಕಾವಲಿನ ದಳವಾಯಿಗಳ ಬಳಿಗೂ ಹೋಗಿ ತಾನು ಯೇಸುವನ್ನು ಹಿಡಿದುಕೊಡುವ ಉಪಾಯವನ್ನು ಕುರಿತು ಅವರ ಸಂಗಡ ಮಾತನಾಡಿದನು.

“ಸೀಮೋನನೇ, ಸೀಮೋನನೇ, ನೋಡು, ಸೈತಾನನು ನಿನ್ನನ್ನು ಗೋದಿಯಂತೆ ಕೇರಬೇಕೆಂದು ಅಪ್ಪಣೆ ಕೇಳಿಕೊಂಡನು. ಆದರೆ ನಿನ್ನ ನಂಬಿಕೆ ಕುಂದಿಹೋಗಬಾರದೆಂದು ನಾನು ನಿನ್ನ ವಿಷಯದಲ್ಲಿ ದೇವರಿಗೆ ವಿಜ್ಞಾಪನೆ ಮಾಡಿಕೊಂಡೆನು. ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ದೃಢಪಡಿಸು” ಎಂದು ಹೇಳಿದನು.

ಸೈತಾನನು ನಿಮ್ಮ ತಂದೆ, ನೀವು ಆತನಿಗೆ ಸೇರಿದವರಾಗಿದ್ದು ನಿಮ್ಮ ತಂದೆಯ ದುರಾಶೆಗಳನ್ನೇ ನೀವು ಮಾಡಬಯಸುತ್ತೀರಿ. ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನೆಲೆಗೊಂಡಿಲ್ಲ. ಏಕೆಂದರೆ ಅವನಲ್ಲಿ ಸತ್ಯವೇ ಇಲ್ಲ. ಅವನು ತನ್ನ ಸ್ವಭಾವಕ್ಕನುಸಾರವಾಗಿ ಸುಳ್ಳಾಡುತ್ತಾನೆ, ಏಕೆಂದರೆ ಅವನು ಸುಳ್ಳುಗಾರನೂ ಮತ್ತು ಸುಳ್ಳಿನ ತಂದೆಯೂ ಆಗಿದ್ದಾನೆ.

ಈ ಮಾತುಗಳ ದೆಸೆಯಿಂದ ಯೆಹೂದ್ಯರ ಮಧ್ಯದಲ್ಲಿ ಪುನಃ ಬೇಧ ಉಂಟಾಯಿತು. ಅವರಲ್ಲಿ ಅನೇಕರು ಆತನಿಗೆ, “ದೆವ್ವ ಹಿಡಿದಿದೆ, ಹುಚ್ಚನಾಗಿದ್ದಾನೆ, ನೀವು ಏಕೆ ಆತನ ಮಾತುಗಳನ್ನು ಕೇಳುತ್ತೀರಿ?” ಎಂದರು. ಇನ್ನು ಕೆಲವರು, “ಇವು ದೆವ್ವಹಿಡಿದವನ ಮಾತುಗಳಲ್ಲ, ದೆವ್ವವು ಕುರುಡನ ಕಣ್ಣುಗಳನ್ನು ತೆರೆಯಲು ಸಾಧ್ಯವೇ?” ಎಂದರು.

ಅವರು ಭೋಜನಕ್ಕೆ ಕುಳಿತುಕೊಂಡಿದ್ದರು, ಅಷ್ಟರೊಳಗೆ ಸೈತಾನನು ಸೀಮೋನನ ಮಗನಾದ ಇಸ್ಕರಿಯೋತ ಯೂದನ ಹೃದಯದಲ್ಲಿ ಯೇಸುವನ್ನು ಹಿಡಿದುಕೊಡಬೇಕೆಂಬ ಆಲೋಚನೆಯನ್ನು ಹುಟ್ಟಿಸಿದನು.

ಅದಕ್ಕೆ ಯೇಸು, “ನಾನು ಈ ರೊಟ್ಟಿಯ ತುಂಡನ್ನು ಅದ್ದಿ ಯಾರಿಗೆ ಕೊಡುತ್ತೇನೋ ಅವನೇ!” ಎಂದು ಉತ್ತರಿಸಿ ಆ ರೊಟ್ಟಿಯ ತುಂಡನ್ನು ಅದ್ದಿ, ತೆಗೆದು, ಸೀಮೋನ್ ಇಸ್ಕರಿಯೋತನ ಮಗನಾದ ಯೂದನಿಗೆ ಕೊಟ್ಟನು. ಅವನು ಆ ರೊಟ್ಟಿಯ ತುಂಡನ್ನು ತೆಗೆದುಕೊಂಡ ಕೂಡಲೇ, ಸೈತಾನನು ಅವನೊಳಗೆ ಪ್ರವೇಶಿಸಿದನು. ಆಗ ಯೇಸು ಅವನಿಗೆ, “ನೀನು ಮಾಡುವುದನ್ನು ಬೇಗನೇ ಮಾಡು” ಎಂದು ಹೇಳಿದನು.

ಆಗ ಪೇತ್ರನು; “ಅನನೀಯನೇ, ನೀನು ಆ ಹೊಲದ ಕ್ರಯದಲ್ಲಿ ಒಂದು ಭಾಗವನ್ನು ಬಚ್ಚಿಟ್ಟುಕೊಂಡು ಪವಿತ್ರಾತ್ಮನನ್ನು ವಂಚಿಸುವಂತೆ ಸೈತಾನನು ನಿನ್ನ ಹೃದಯದಲ್ಲಿ ಏಕೆ ತುಂಬಿಸಿಕೊಂಡಿ? ಆ ಆಸ್ತಿ ಮೊದಲು ನಿನ್ನದಾಗಿಯೇ ಇತ್ತಲ್ಲವೇ. ಮಾರಿದ ಮೇಲೆ ಬಂದ ಹಣವು ನಿನ್ನ ಅಧೀನದಲ್ಲೇ ಇತ್ತಲ್ಲವೇ, ನೀನು ಈ ಕಾರ್ಯವನ್ನು ನಿನ್ನ ಹೃದಯದಲ್ಲಿ ಯೋಚಿಸಿಕೊಂಡದ್ದು ಏಕೆ? ನೀನು ಸುಳ್ಳಾಡಿದ್ದು ಮನುಷ್ಯರಿಗಲ್ಲ, ದೇವರಿಗೆ” ಅಂದನು.

ಯೆರೂಸಲೇಮಿನ ಸುತ್ತಮುತ್ತಲಿನ ಊರುಗಳ ಜನರು ಸಹ ರೋಗಿಗಳನ್ನೂ, ದೆವ್ವ ಪೀಡಿತರನ್ನು ಹೊತ್ತುಕೊಂಡು ಗುಂಪುಗುಂಪಾಗಿ ಬರುತ್ತಿದ್ದರು; ಅವರೆಲ್ಲರೂ ಗುಣಮುಖರಾಗುತ್ತಿದ್ದರು.

ಏಕೆಂದರೆ ಅನೇಕರೊಳಗಿಂದ ದೆವ್ವಗಳು ಮಹಾಶಬ್ದದಿಂದ ಕೂಗಿ ಹೊರಗೆ ಬಂದವು; ಮತ್ತು ಅನೇಕ ಪಾರ್ಶ್ವವಾಯು ರೋಗಿಗಳೂ ವಿಕಲಾಂಗರು ಸ್ವಸ್ಥರಾದರು.

ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮದಿಂದಲೂ, ಬಲದಿಂದಲೂ ಅಭಿಷೇಕಿಸಿದನು; ದೇವರು ಆತನ ಸಂಗಡ ಇದ್ದುದರಿಂದ ಆತನು ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾ; ಸೈತಾನನಿಂದ ಬಾಧಿಸಲ್ಪಟ್ಟವರನ್ನು ಗುಣಪಡಿಸುತ್ತಾ ಸಂಚರಿಸಿದನು; ಇದೆಲ್ಲಾ ನಿಮಗೆ ಗೊತ್ತಾಗಿರುವ ಸಂಗತಿಯೇ.

ಆದರೆ ಆ ಮಂತ್ರವಾದಿಯಾದ ಎಲುಮನು (ಎಲುಮನೆಂಬ ಹೆಸರಿಗೆ ಮಂತ್ರವಾದಿಯೆಂದರ್ಥ) ಅವರನ್ನು ವಿರೋಧಿಸಿದನು; ಅಧಿಪತಿಯು ಕ್ರಿಸ್ತನಲ್ಲಿ ನಂಬಿಕೆಯಿಡದಂತೆ ಅಡ್ಡಿಮಾಡಲು ಪ್ರಯತ್ನಿಸಿದನು. ಆಗ ಪೌಲನೆನಿಸಿಕೊಳ್ಳುವ ಸೌಲನು ಪವಿತ್ರಾತ್ಮಭರಿತನಾಗಿ, ಅವನನ್ನು ದೃಷ್ಟಿಸಿನೋಡಿ; “ಸೈತಾನನ ಮಗನೇ, ಮೋಸದಿಂದಲೂ, ಎಲ್ಲಾ ಕೆಟ್ಟತನದಿಂದಲೂ ತುಂಬಿರುವವನೇ, ಎಲ್ಲಾ ನೀತಿಗೂ ವಿರೋಧಿಯೇ, ನೀನು ಕರ್ತನ ನೇರವಾದ ಮಾರ್ಗಗಳನ್ನು ಡೊಂಕು ಮಾಡುವುದನ್ನು ಬಿಡುವುದಿಲ್ಲವೋ? ಇಗೋ, ಕರ್ತನು ನಿನಗೆ ವಿರುದ್ಧವಾಗಿ ಕೈ ಎತ್ತಿದ್ದಾನೆ; ನೀನು ಕುರುಡನಾಗಿ ಕೆಲವು ಕಾಲ ಸೂರ್ಯನನ್ನು ನೋಡದೆ ಇರುವಿ” ಎಂದು ಹೇಳಿದನು. ಆ ಕ್ಷಣವೇ ಅವನಿಗೆ ಕಣ್ಣು ಮೊಬ್ಬಾಗಿ ಕತ್ತಲೆ ಕವಿಯಿತು; ಅವನು ಕೈಹಿಡಿದು ಆಧಾರ ಕೊಡುವವರನ್ನು ಹುಡುಕುತ್ತಾ ತಿರುಗಾಡಿದನು. ಅಧಿಪತಿಯು ಆ ಸಂಗತಿಯನ್ನು ನೋಡಿ ಕರ್ತನ ಬೋಧನೆಗೆ ಅತ್ಯಾಶ್ಚರ್ಯಪಟ್ಟು ನಂಬುವವನಾದನು.

ಬಳಿಕ ಪ್ರಾರ್ಥನೆ ನಡೆಯುವ ಆ ಸ್ಥಳಕ್ಕೆ ನಾವು ಹೋಗುತ್ತಿರುವಾಗ ಗಾರುಡಗಾತಿಯಾದ ಒಬ್ಬ ದಾಸಿಯು ನಮ್ಮೆದುರಿಗೆ ಬಂದಳು. ಅವಳು ಕಣಿ ಹೇಳುವುದರಿಂದ ಅವಳ ಯಜಮಾನರಿಗೆ ಬಹು ಆದಾಯವಾಗುತ್ತಿತ್ತು. ಪೌಲನೂ, ನಾವೂ ಹೋಗುತ್ತಿರುವಾಗ ಅವಳು ನಮ್ಮ ಹಿಂದೆ ಬಂದು; “ಈ ಮನುಷ್ಯರು ಪರಾತ್ಪರನಾದ ದೇವರ ಸೇವಕರು; ನಿಮಗೆ ರಕ್ಷಣೆಯ ಮಾರ್ಗವನ್ನು ಸಾರುತ್ತಾರೆ” ಎಂದು ಕೂಗಿ ಹೇಳುತ್ತಿದ್ದಳು. ಅನೇಕ ದಿನ ಅವಳು ಹೀಗೆ ಮಾಡುತ್ತಿದ್ದುದರಿಂದ ಪೌಲನು ಬಹಳವಾಗಿ ಬೇಸರಗೊಂಡು ಹಿಂತಿರುಗಿ ಅವಳೊಳಗಿದ್ದ ದುರಾತ್ಮಕ್ಕೆ; “ಅವಳನ್ನು ಬಿಟ್ಟುಹೋಗು ಎಂದು ಯೇಸು ಕ್ರಿಸ್ತನ ಹೆಸರಿನಲ್ಲಿ ನಿನಗೆ ಆಜ್ಞಾಪಿಸುತ್ತೇನೆ” ಎಂದು ಹೇಳಿದನು. ಅದೇ ಗಳಿಗೆಯಲ್ಲಿಯೇ ಅದು ಬಿಟ್ಟು ಹೋಯಿತು. ಅವಳ ಯಜಮಾನರು ತಮ್ಮ ಆದಾಯದ ನಿರೀಕ್ಷೆ ತಪ್ಪಿತಲ್ಲಾ ಎಂದು ತಿಳಿದು ಪೌಲನನ್ನೂ ಮತ್ತು ಸೀಲನನ್ನೂ ಹಿಡಿದು ಮಾರುಕಟ್ಟೆಯ ಸ್ಥಳಕ್ಕೆ ಅಧಿಕಾರಿಗಳ ಬಳಿಗೆ ಎಳೆದುಕೊಂಡು ಹೋದರು.

ದೇವರು ಪೌಲನ ಕೈಯಿಂದ ವಿಶೇಷವಾದ ಮಹತ್ಕಾರ್ಯಗಳನ್ನು ನಡಿಸುತ್ತಾ ಇದ್ದುದರಿಂದ, ಜನರು ಅವನ ಮೈಮೇಲಿನಿಂದ ಕೈವಸ್ತ್ರಗಳನ್ನೂ, ರುಮಾಲುಗಳನ್ನೂ ತಂದು ರೋಗಿಗಳ ಮೇಲೆ ಹಾಕಲು ಅವರ ರೋಗಗಳು ವಾಸಿಯಾದವು, ದುರಾತ್ಮಗಳೂ ಬಿಟ್ಟುಹೋದವು.

ದುರಾತ್ಮಗಳನ್ನೂ ಬಿಡಿಸುವವರೆನಿಸಿಕೊಂಡು, ದೇಶಸಂಚಾರಿಗಳಾದ ಯೆಹೂದ್ಯರಿದ್ದರು. ಅವರಲ್ಲಿ ಕೆಲವರು ದುರಾತ್ಮ ಪೀಡಿತರ ಮೇಲೆ; “ಪೌಲನು ಸಾರುವ ಯೇಸುವಿನ ಆಣೆ” ಎಂದು ಹೇಳಿ ಕರ್ತನಾದ ಯೇಸುವಿನ ಹೆಸರನ್ನು ಪ್ರಯೋಗಮಾಡುವುದಕ್ಕೆ ತೊಡಗಿದರು. ಮುಖ್ಯಯಾಜಕ ಸ್ಕೇವನೆಂಬ ಒಬ್ಬ ಯೆಹೂದ್ಯನ ಏಳು ಮಂದಿ ಮಕ್ಕಳೂ ಹಾಗೆ ಮಾಡುತ್ತಿದ್ದರು. ಆದರೆ ದುರಾತ್ಮವು ಅವರಿಗೆ; “ಯೇಸುವಿನ ಗುರುತು ನನಗುಂಟು, ಪೌಲನನ್ನೂ ಬಲ್ಲೆನು, ಆದರೆ ನೀವು ಯಾರು?” ಎಂದು ಹೇಳಿತು; ಮತ್ತು ದುರಾತ್ಮ ಹಿಡಿದಿದ್ದ ಆ ಮನುಷ್ಯನು ಅವರ ಮೇಲೆ ಹಾರಿ ಬಿದ್ದು, ಅವರನ್ನೂ ಸೋಲಿಸಿ ಸದೆಬಡಿದಿದ್ದರಿಂದ ಅವರು ಗಾಯಗೊಂಡು ಬೆತ್ತಲೆಯಾಗಿ ಆ ಮನೆಯೊಳಗಿಂದ ಓಡಿಹೋದರು.

ಇದಲ್ಲದೆ ಮಾಟ ಮಂತ್ರಗಳನ್ನು ನಡಿಸಿದವರಲ್ಲಿ ಅನೇಕರು ತಮ್ಮ ಮಾಟಮಂತ್ರಗಳ ಪುಸ್ತಕಗಳನ್ನು ತಂದು, ಕೂಡಿಸಿ ಎಲ್ಲರ ಮುಂದೆ ಸುಟ್ಟುಬಿಟ್ಟರು. ಅವುಗಳ ಮೌಲ್ಯವನ್ನು ಲೆಕ್ಕಮಾಡಿ ಐವತ್ತು ಸಾವಿರ ಬೆಳ್ಳಿ ನಾಣ್ಯ ಆಯಿತೆಂದು ತಿಳಿದುಕೊಂಡರು.

ನಾನು ನಿನ್ನ ಸ್ವಂತ ಜನರಿಂದಲೂ, ಅನ್ಯಜನರಿಂದಲೂ ನಿನ್ನನ್ನು ರಕ್ಷಿಸುವೆನು. ಅವರು ಕತ್ತಲೆಯಿಂದ ಬೆಳಕಿಗೂ, ಸೈತಾನನ ಅಧಿಕಾರದಿಂದ ದೇವರ ಕಡೆಗೂ ತಿರುಗಿಕೊಂಡು, ನನ್ನಲ್ಲಿ ನಂಬಿಕೆಯಿಡುವುದರಿಂದ ಪಾಪಕ್ಷಮಾಪಣೆಯನ್ನೂ, ಪರಿಶುದ್ಧರೊಂದಿಗೆ ಹಕ್ಕನ್ನೂ ಹೊಂದುವಂತೆ, ಅವರ ಕಣ್ಣುಗಳನ್ನು ತೆರೆಯಬೇಕೆಂದು ಅವರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ’ ಅಂದನು.

ಹೇಗೆಂದರೆ ಮರಣವಾಗಲಿ, ಜೀವವಾಗಲಿ, ದೇವದೂತರಾಗಲಿ, ದುರಾತ್ಮಗಳಾಗಲಿ, ಈಗಿನ ಸಂಗತಿಗಳಾಗಲಿ, ಮುಂದಣ ಸಂಗತಿಗಳಾಗಲಿ, ಮಹತ್ವಗಳಾಗಲಿ, ಮೇಲಣ ಲೋಕವಾಗಲಿ, ಕೆಳಗಣ ಲೋಕವಾಗಲಿ, ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲು ಸಾಧ್ಯವಿಲ್ಲವೆಂದು ನಾವು ಬಲ್ಲವರಾಗಿದ್ದೇವೆ.

ದೇವರ ಉತ್ತರವೇನೆಂದರೆ, “ಬಾಳನ ವಿಗ್ರಹಕ್ಕೆ ಅಡ್ಡಬೀಳದೆ ಇರುವ ಏಳುಸಾವಿರ ಪುರುಷರನ್ನು ನನಗಾಗಿ ಉಳಿಸಿಕೊಂಡಿದ್ದೇನೆ” ಎಂಬುದೇ.

ಶಾಂತಿದಾಯಕನಾದ ದೇವರು ಶೀಘ್ರವಾಗಿ ಸೈತಾನನನ್ನು ನಿಮ್ಮ ಕಾಲುಗಳ ಕೆಳಗೆ ಹಾಕಿ ತುಳಿದು ಜಜ್ಜಿಬಿಡುವನು. ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ.

ಅವನನ್ನು ಸೈತಾನನಿಗೆ ಒಪ್ಪಿಸಿರಿ ಯಾಕೆಂದರೆ ಕರ್ತನಾದ ಯೇಸುವಿನ ಪ್ರತ್ಯಕ್ಷತೆಯ ದಿನದಲ್ಲಿ ಅಂಥವನ ಆತ್ಮವು ರಕ್ಷಣೆ ಹೊಂದುವುದಕ್ಕಾಗಿ ಅವನ ಶರೀರಭಾವವು ನಾಶವಾಗುವಂತೆ ಕರ್ತನಾದ ಯೇಸುವಿನ ಶಕ್ತಿಯಿಂದ ತೀರ್ಪು ಮಾಡಿದ್ದೇನೆ.

ಪ್ರಾರ್ಥನೆಗೆ ಸಮಯ ಕೊಡುವುದಕ್ಕಾಗಿ ನೀವು ಪರಸ್ಪರ ಸಮ್ಮತಿಯಿಂದ ಸ್ವಲ್ಪ ಕಾಲ ಅಗಲಿ ಇರಬಹುದೇ ಹೊರತು ಅನ್ಯತಾ ಹಾಗೆ ಮಾಡಬಾರದು. ಸೈತಾನನು ನಿಮಗೆ ಸ್ವಯಂ ನಿಯಂತ್ರಣವಿಲ್ಲದಿರುವುದನ್ನು ನೋಡಿ ನಿಮಗೆ ದುಷ್ಪ್ರೇರಣೆಗೆ ಎಡೆ ಮಾಡದಂತೆ ತಿರುಗಿ ಕೂಡಿಕೊಳ್ಳಿರಿ.

ಆದರೆ ಅನ್ಯಜನರು ತಾವು ಅರ್ಪಿಸುವ ಬಲಿಗಳನ್ನು ದೇವರಿಗಲ್ಲ, ದೆವ್ವಗಳಿಗೆ ಅರ್ಪಿಸುತ್ತಾರೆಂಬುದು ನನ್ನ ಅಭಿಪ್ರಾಯವು. ನೀವು ದೆವ್ವಗಳೊಡನೆ ಪಾಲುಗಾರರಾಗಿರಬೇಕೆಂಬುದು ನನ್ನ ಇಷ್ಟವಲ್ಲ. ನೀವು ಕರ್ತನ ಪಾನಪಾತ್ರೆಯಲ್ಲಿಯೂ ಹಾಗೂ ದೆವ್ವಗಳ ಪಾನಪಾತ್ರೆಯಲ್ಲಿಯೂ ಕುಡಿಯಲಾರಿರಿ. ಕರ್ತನ ಪಂಕ್ತಿಯಲ್ಲಿಯೂ ಮತ್ತು ದೆವ್ವಗಳ ಪಂಕ್ತಿಯಲ್ಲಿಯೂ ಊಟಮಾಡಲಾರಿರಿ. ಕರ್ತನಿಗೆ ಕೋಪವನ್ನುಂಟುಮಾಡಿ ರೇಗಿಸಬೇಕೆಂದಿದ್ದೇವೋ? ಆತನಿಗಿಂತಲೂ ನಾವು ಬಲಿಷ್ಠರೋ?

ಸೈತಾನನು ನಮ್ಮನ್ನು ವಂಚಿಸಬಾರದೆಂದು ಹೀಗೆ ಮಾಡಿದೆನು. ಅವನ ಕುತಂತ್ರಗಳನ್ನು ನಾವು ಚೆನ್ನಾಗಿ ತಿಳಿದಿದ್ದೇವಲ್ಲಾ.

ನಾವು ಸಾರುವ ಸುವಾರ್ತೆಯು ಕೆಲವರಿಗೆ ಮರೆಯಾಗಿರುವುದಾದರೆ ನಾಶಮಾರ್ಗದಲ್ಲಿರುವವರಿಗೇ ಅದು ಮರೆಯಾಗಿರುವುದು. ಇವರಲ್ಲಿ ದೇವರ ಪ್ರತಿರೂಪವಾಗಿರುವ ಕ್ರಿಸ್ತನ ತೇಜಸ್ಸನ್ನು ತೋರಿಸುವ ಸುವಾರ್ತೆಯ ಬೆಳಕನ್ನು ನೋಡಬಾರದೆಂದು ಈ ಲೋಕದ ದೇವರು ನಂಬಿಕೆಯಿಲ್ಲದವರ ಮನಸ್ಸನ್ನು ಕುರುಡು ಮಾಡಿದ್ದಾನೆ.

ಬೆಳಕಿಗೂ, ಕತ್ತಲೆಗೂ ಅನ್ಯೋನ್ಯತೆಯೇನು? ಕ್ರಿಸ್ತನಿಗೂ ಸೈತಾನನಿಗೂ ಒಪ್ಪಂದವೇನು? ವಿಶ್ವಾಸಿಗೂ ಅವಿಶ್ವಾಸಿಗೂ ಪಾಲುಗಾರಿಕೆಯೇನು?

ನಾವು ಉಪಯೋಗಿಸುವ ಆಯುಧಗಳು ಲೋಕದ ಆಯುಧಗಳಲ್ಲ. ಅವು ದೇವರ ಎಣಿಕೆಯಲ್ಲಿ ಬಲವಾಗಿದ್ದು ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ. ನಾವು ದೇವಜ್ಞಾನಕ್ಕೆ ವಿರೋಧವಾಗಿ ಏಳುವ ಅಹಂಭಾವಗಳನ್ನು ಧ್ವಂಸಮಾಡಿ, ಪ್ರತಿಯೊಂದು ಆಲೋಚನೆಗಳನ್ನೂ ಕ್ರಿಸ್ತನಿಗೆ ವಿಧೇಯರಾಗುವಂತೆ ಸೆರೆಹಿಡಿದು,

ಆದರೆ ಹೇಗೆ ಹವ್ವಳು ಸರ್ಪದ ಕುಯುಕ್ತಿಗೆ ಒಳಗಾಗಿ ಮೋಸಹೋದಳೋ ಹಾಗೆ ನಿಮ್ಮ ಮನಸ್ಸು ಕ್ರಿಸ್ತನ ವಿಷಯದಲ್ಲಿರಬೇಕಾದ ಯಥಾರ್ಥತ್ವವನ್ನೂ ಶುದ್ಧತ್ವವನ್ನೂ ಬಿಟ್ಟು ಕೆಟ್ಟುಹೋದೀತೆಂದು ನನಗೆ ಭಯವಾಗಿದೆ.

ಆದರೆ ಅಂಥವರು ಸುಳ್ಳು ಅಪೊಸ್ತಲರೂ, ಮೋಸಗಾರರಾದ ಕೆಲಸದವರೂ, ಕ್ರಿಸ್ತನ ಅಪೊಸ್ತಲರಾಗಿ ಕಾಣಿಸುವುದಕ್ಕೆ ವೇಷಹಾಕಿಕೊಳ್ಳುವವರೂ ಆಗಿದ್ದಾರೆ. ಇದೇನೂ ಆಶ್ಚರ್ಯವಲ್ಲ. ಸೈತಾನನು ತಾನೇ ಪ್ರಕಾಶ ರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳುವಾಗ, ಅವನ ಸೇವಕರೂ ಸಹ ನೀತಿಗೆ ಸೇವಕರಾಗಿ ಕಾಣಿಸುವುದಕ್ಕೆ ವೇಷಹಾಕಿಕೊಳ್ಳುವುದು ಆಶ್ಚರ್ಯವೇನಲ್ಲ. ಅವರ ಅಂತ್ಯಾವಸ್ಥೆಯು ಅವರ ಕೃತ್ಯಗಳಿಗೆ ತಕ್ಕಂತೆಯೇ ಇರುವುದು.

ಈ ಕಾರಣದಿಂದಲೂ ಮತ್ತು ನನಗೆ ತಿಳಿಸಲ್ಪಟ್ಟ ರಹಸ್ಯಗಳು ಬಹು ವಿಶೇಷವಾಗಿರುವುದರಿಂದಲೂ ನಾನು ಹೊಗಳಿಕೊಳ್ಳದೇ ಸುಮ್ಮನಿರುತ್ತೇನೆ. ನಾನು ನನ್ನನ್ನು ಅತಿಶಯವಾಗಿ ಹೆಚ್ಚಿಸಿಕೊಳ್ಳಬಾರದೆಂದು ಒಂದು ಶೂಲವು ನನ್ನನ್ನು ತಿವಿಯುವುದಕ್ಕಾಗಿ ನನ್ನ ದೇಹದೊಳಗೆ ಇರಿಸಲಾಗಿದೆ. ನಾನು ಅಹಂಕಾರಪಡದ ಹಾಗೆ ಇದು ನನ್ನನ್ನು ತಿವಿತಿವಿದು ಸೈತಾನನ ದೂತನಂತೆ ಕಾಡಿಸುತ್ತಿತ್ತು.

ಈ ಲೋಕದಲ್ಲಿ ಮಾತ್ರವಲ್ಲದೆ ಮುಂಬರುವ ಲೋಕದಲ್ಲಿಯೂ ಹೆಸರುಗೊಂಡವರೆಲ್ಲರ ಎಲ್ಲಾ ನಾಮಗಳ ಮೇಲೆಯೂ ಪರಲೋಕದಲ್ಲಿ ಆತನನ್ನು ತನ್ನ ಬಲಗಡೆಯಲ್ಲಿ ಕುಳ್ಳಿರಿಸಿಕೊಂಡನು.

ಪೂರ್ವದಲ್ಲಿ ನೀವು ಇಹಲೋಕದ ಪದ್ಧತಿಗೆ ಅನುಸಾರವಾಗಿಯೂ, ವಾಯುಮಂಡಲದಲ್ಲಿ ಅಧಿಕಾರ ನಡಿಸುವ ಅಧಿಪತಿಗೆ ಅಂದರೆ ಅವಿಧೇಯತೆಯ ಮಕ್ಕಳಲ್ಲಿ ಈಗ ಕೆಲಸ ನಡೆಸುವ ಆತ್ಮನಿಗನುಸಾರವಾಗಿ ಜೀವನ ನಡಿಸಿದ್ದೀರಿ.

ದೇವರು ನಮ್ಮ ಕರ್ತನಾದ ಕ್ರಿಸ್ತಯೇಸುವಿನಲ್ಲಿ ಮಾಡಿದ ನಿತ್ಯಸಂಕಲ್ಪದ ಮೇರೆಗೆ ತನ್ನ ನಾನಾ ವಿಧವಾದ ಜ್ಞಾನವು, ಪರಲೋಕದಲ್ಲಿ ರಾಜತ್ವಗಳಿಗೂ, ಅಧಿಕಾರಗಳಿಗೂ ಈಗ ಸಭೆಯ ಮೂಲಕ ಗೊತ್ತಾಗಬೇಕೆಂದು ಉದ್ದೇಶಿಸಿದನು.

“ಕೋಪಗೊಳ್ಳಬೇಕಾಗಿ ಬಂದರೂ ಪಾಪಮಾಡಬೇಡಿರಿ,” ಸೂರ್ಯನು ಮುಳುಗುವುದಕ್ಕಿಂತ ಮೊದಲೇ ನಿಮ್ಮ ಸಿಟ್ಟು ತೀರಿಹೋಗಲಿ. ಸೈತಾನನಿಗೆ ಅವಕಾಶಕೊಡಬೇಡಿರಿ.

ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವುದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ. ನಮಗೆ ಹೋರಾಟವಿರುವುದು ಮನುಷ್ಯಮಾತ್ರದವರ ಸಂಗಡವಲ್ಲ. ರಾಜತ್ವಗಳ ಮೇಲೆಯೂ, ಅಧಿಕಾರಿಗಳ ಮೇಲೆಯೂ, ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ, ಆಕಾಶ ಮಂಡಲಗಳಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ. ಆದ್ದರಿಂದ ಆ ದುಷ್ಟ ದಿನದಲ್ಲಿ ವೈರಿಗಳನ್ನು ಎದುರಿಸುವುದಕ್ಕೂ ಮಾಡಬೇಕಾದದ್ದೆಲ್ಲವನ್ನು ಮಾಡಿ ದೃಢವಾಗಿ ನಿಲ್ಲುವುದಕ್ಕೂ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ.

ಎಲ್ಲಾದಕ್ಕಿಂತ ಹೆಚ್ಚಾಗಿ ನಂಬಿಕೆಯೆಂಬ ಗುರಾಣಿಯನ್ನು ಹಿಡಿದುಕೊಳ್ಳಿರಿ. ಅದರಿಂದ ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ನಂದಿಸುವುದಕ್ಕೆ ಶಕ್ತರಾಗುವಿರಿ.

ಆತನು ದೊರೆತನಗಳನ್ನೂ ಮತ್ತು ಅಧಿಕಾರಗಳನ್ನೂ ನಿರಾಯುಧರನ್ನಾಗಿ ಮಾಡಿ, ತನ್ನ ಶಿಲುಬೆಯ ಮೂಲಕ ಅವುಗಳನ್ನು ಜಯಿಸಿ ಬಹಿರಂಗಪಡಿಸಿದನು.

ಯಾಕೆಂದರೆ ನಿಮ್ಮ ಬಳಿಗೆ ಬರುವುದಕ್ಕೆ ನಮಗೆ ಮನಸ್ಸಿತ್ತು. ಹೇಗೂ ಪೌಲನೆಂಬ ನಾನು ಒಂದೆರಡು ಸಾರಿ ಬರುವುದಕ್ಕೆ ಪ್ರಯತ್ನ ಮಾಡಿದ್ದೆನು. ಆದರೆ ಸೈತಾನನು ನನಗೆ ಅಡ್ಡಿ ಮಾಡಿದನು.

ಯಾರೂ ಯಾವ ವಿಧದಲ್ಲಿಯೂ ನಿಮ್ಮನ್ನು ಮೋಸಗೊಳಿಸದಂತೆ ನೋಡಿಕೊಳ್ಳಿರಿ, ಯಾಕೆಂದರೆ ಮೊದಲು ನಂಬಿಕೆಯ ಭ್ರಷ್ಟತೆಯುಂಟಾಗಿ ನಾಶನದ ಮಗನಾದ ಅಧರ್ಮ ಪುರುಷನು ಬಯಲಿಗೆ ಬಾರದ ಹೊರತು ಆ ದಿನವು ಬರುವುದಿಲ್ಲ. ಯಾವುದು ದೇವರೆನಿಸಿಕೊಳ್ಳುತ್ತದೋ ಯಾವುದು ಆರಾಧಿಸಲ್ಪಡುತ್ತದೋ ಅದನ್ನೆಲ್ಲಾ ನಾಶನಕ್ಕೆ ಅಧೀನನಾದ ಆ ಪುರುಷನು ಎದುರಿಸಿ ಅದಕ್ಕಿಂತ ಮೇಲಾಗಿ ತನ್ನನ್ನು ತಾನೇ ಹೆಚ್ಚಿಸಿಕೊಂಡು ತಾನು ದೇವರೆಂದು ಘೋಷಿಸಿಕೊಂಡು ದೇವರ ಗರ್ಭಗುಡಿಯಲ್ಲೇ ಕುಳಿತುಕೊಳ್ಳುತ್ತಾನೆ. ನಾನು ನಿಮ್ಮ ಸಂಗಡ ಇದ್ದಾಗ ಈ ಸಂಗತಿಗಳನ್ನು ಹೇಳಿದ್ದು ಜ್ಞಾಪಕವಿಲ್ಲವೋ? ಇದಲ್ಲದೆ ಅವನು ನೇಮಕವಾದ ಸಮಯದಲ್ಲೇ ಹೊರತು ಬಯಲಿಗೆ ಬರುವುದಕ್ಕೆ ಏನು ಅಡ್ಡಿ ಮಾಡುತ್ತದೋ ಅದು ನಿಮಗೆ ತಿಳಿದೇ ಇದೆ. ಅಧರ್ಮವು ಈಗಲೂ ಗುಪ್ತವಾಗಿ ತನ್ನ ಕಾರ್ಯವನ್ನು ಸಾಧಿಸುತ್ತದೆ, ಆದರೆ ತಡೆಗಟ್ಟುವವನು ದಾರಿಬಿಡುವ ತನಕ ಅದು ಗುಪ್ತವಾಗಿಯೇ ಇರುವುದು. ಆಗ ಅಧರ್ಮಸ್ವರೂಪನು ಕಾಣಿಸಿಕೊಳ್ಳುವನು, ಅವನನ್ನು ಯೇಸು ಕರ್ತನು ತನ್ನ ಬಾಯಿಯ ಉಸಿರಿನಿಂದ ಕೊಲ್ಲುವನು, ತನ್ನ ಬರುವಿಕೆಯ ಪ್ರತ್ಯಕ್ಷತೆಯಿಂದ ಸಂಹರಿಸುವನು. ಆ ಅಧರ್ಮಸ್ವರೂಪನು, ಸೈತಾನನ ಕಾರ್ಯಕ್ಕೆ ಅನುಸಾರವಾಗಿ, ಅದು ಸುಳ್ಳಾದ ಸಕಲವಿಧವಾದ ಮಹತ್ಕಾರ್ಯ, ಸೂಚಕಕಾರ್ಯ, ಅದ್ಭುತಕಾರ್ಯ ಇವುಗಳಿಂದಲೂ, ದುರ್ನೀತಿಯ ಎಲ್ಲಾ ವಂಚನೆಯಿಂದಲೂ ಕೂಡಿ ನಾಶದ ಮಾರ್ಗದಲ್ಲಿರುವವರಿಗೋಸ್ಕರವಾಗಿ ಬರುವನು. ಯಾಕೆಂದರೆ ಅವರು ಸತ್ಯವನ್ನು ಪ್ರೀತಿಸದೆ ನಿರಾಕರಿಸಿದ್ದರಿಂದ ರಕ್ಷಣೆಯನ್ನು ಹೊಂದದೆ ನಾಶವಾಗುತ್ತಾರೆ.

ಆದರೆ ಕರ್ತನು ನಂಬಿಗಸ್ತನು, ಆತನು ನಿಮ್ಮನ್ನು ದೃಢಪಡಿಸಿ ನೀವು ಕೆಡುಕನ ಕೈಗೆ ಸಿಕ್ಕದಂತೆ ಕಾಪಾಡುವನು.

ಹುಮೆನಾಯನೂ ಅಲೆಕ್ಸಾಂದರನೂ ಇಂಥವರೇ. ಇವರು ದೇವದೂಷಣೆ ಮಾಡಬಾರದೆಂಬುದನ್ನು ಕಲಿತುಕೊಳ್ಳುವಂತೆ ಇವರನ್ನು ಸೈತಾನನಿಗೆ ಒಪ್ಪಿಸಿಕೊಟ್ಟೆನು.

ಅವನು ಹೊಸದಾಗಿ ಸಭೆಯಲ್ಲಿ ಸೇರಿದವನಾಗಿರಬಾರದು, ಅಂಥವನಾದರೆ ಉಬ್ಬಿಕೊಂಡು ಸೈತಾನನಿಗೆ ಪ್ರಾಪ್ತವಾದ ಶಿಕ್ಷಾವಿಧಿಗೆ ಒಳಗಾದಾನು. ಇದಲ್ಲದೆ ಅವನು ಹೊರಗಣವರಿಂದ ಒಳ್ಳೆಯವನೆನ್ನಿಸಿಕೊಂಡಿರಬೇಕು, ಇಲ್ಲದಿದ್ದರೆ ನಿಂದೆಗೆ ಗುರಿಯಾಗುವನು ಮತ್ತು ಸೈತಾನನ ತಂತ್ರಗಳೊಳಗೆ ಸಿಕ್ಕಿಬಿದ್ದಾನು.

ಆದರೂ ಮುಂಬರುವ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳ ನುಡಿಗಳಿಗೂ, ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತ ನಂಬಿಕೆಯಿಂದ ಭ್ರಷ್ಟರಾಗುವರೆಂದು ದೇವರಾತ್ಮನು ಸ್ಪಷ್ಟವಾಗಿ ಹೇಳುತ್ತಿದ್ದಾನೆ.

ಇಷ್ಟರೊಳಗೆ ಕೆಲವರು ಅಡ್ಡದಾರಿ ಹಿಡಿದು ಸೈತಾನನನ್ನು ಹಿಂಬಾಲಿಸಿದ್ದಾರೆ.

ದೇವರು ನಮಗೆ ಕೊಟ್ಟಿರುವ ಆತ್ಮವು ಬಲ, ಪ್ರೀತಿ, ಸಂಯಮಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ.

ಸೈತಾನನ ಬಲೆಗೆ ಬಿದ್ದವರಾದ ಇವರು ಒಂದು ವೇಳೆ ತಪ್ಪಿಸಿಕೊಂಡು ದೇವರ ಚಿತ್ತವನ್ನು ಅನುಸರಿಸುವುದಕ್ಕೆ ಶಕ್ತರಾದಾರು.

ಇದಲ್ಲದೆ ಮಕ್ಕಳು ರಕ್ತ ಮಾಂಸಧಾರಿಗಳು ಆಗಿರುವುದರಿಂದ ಯೇಸು ಸಹ ಅವರಂತೆಯೇ ಆದನು. ತನ್ನ ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ನಾಶಮಾಡುವುದಕ್ಕೂ,

ದೇವರು ಒಬ್ಬನೇ ಎಂದು ನೀನು ನಂಬುತ್ತೀ; ಹಾಗೆ ನಂಬುವುದು ಸರಿ. ಆದರೆ ದೆವ್ವಗಳು ಸಹ ಹಾಗೆಯೇ ನಂಬಿ ಹೆದರಿ ನಡುಗುತ್ತವೆ.

ಆದರೆ ತೀಕ್ಷ್ಣವಾದ ಮತ್ಸರವೂ, ಸ್ವಾರ್ಥಾಭಿಲಾಶೆಯೂ ನಿಮ್ಮ ಹೃದಯದೊಳಗೆ ಇರುವುದಾದರೆ ನೀವು ಸತ್ಯಕ್ಕೆ ವಿರೋಧವಾಗಿ ಸುಳ್ಳಾಡಿ ಹೊಗಳಿಕೊಳ್ಳಬೇಡಿರಿ. ಅದು ಮೇಲಿಂದ ಬಂದ ಜ್ಞಾನವಲ್ಲ. ಅದು ಭೂಸಂಬಂಧವಾದದ್ದು, ಲೌಕಿಕವಾದುದು, ದೆವ್ವಗಳಿಗೆ ಸಂಬಂಧಪಟ್ಟದ್ದು.

ಹೀಗಿರಲಾಗಿ ದೇವರಿಗೆ ಅಧೀನರಾಗಿದ್ದು ಸೈತಾನನನ್ನು ಎದುರಿಸಿರಿ, ಆಗ ಅವನು ನಿಮ್ಮನ್ನು ಬಿಟ್ಟು ಓಡಿ ಹೋಗುವನು.

ಸ್ವಸ್ಥಚಿತ್ತರಾಗಿರಿ ಎಚ್ಚರವಾಗಿರಿ. ನಿಮ್ಮ ವಿರೋಧಿಯಾಗಿರುವ ಸೈತಾನನು ಘರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗಾಡುತ್ತಿದ್ದಾನೆ.

ಹೇಗೆಂದರೆ ದೇವದೂತರು ಪಾಪಮಾಡಿದಾಗ ದೇವರು ಅವರನ್ನು ಸುಮ್ಮನೆ ಬಿಡದೆ ನರಕಕ್ಕೆ ದೊಬ್ಬಿ ನ್ಯಾಯತೀರ್ಪನ್ನು ಹೊಂದುವುದಕ್ಕಾಗಿ ಸಂಕೋಲೆಗಳಿಂದ ಬಂಧಿಸಿ ಕತ್ತಲೆಯ ಕೂಪಕ್ಕೆ ಒಪ್ಪಿಸಿದನು.

ಪ್ರಿಯ ಮಕ್ಕಳೇ, ಇದು ಅಂತ್ಯ ಕಾಲವಾಗಿದೆ. ಕ್ರಿಸ್ತವಿರೋಧಿಯು ಬರುತ್ತಾನೆಂದು ನೀವು ಕೇಳಿದ್ದೀರಿ. ಈಗಾಗಲೇ ಕ್ರಿಸ್ತವಿರೋಧಿಗಳು ಅನೇಕರಿದ್ದಾರೆ. ಆದ್ದರಿಂದ ಇದು ಅಂತ್ಯ ಕಾಲವಾಗಿದೆ ಎಂದು ನಾವು ಬಲ್ಲವರಾಗಿದ್ದೇವೆ. ಅವರು ನಮ್ಮಿಂದ ಹೊರಟುಹೋದವರು. ಏಕೆಂದರೆ ಅವರು ನಮ್ಮವರಾಗಿರಲಿಲ್ಲ. ಅವರು ನಮ್ಮವರಾಗಿದ್ದರೆ, ನಮ್ಮ ಜೊತೆಯಲ್ಲೇ ಇರುತ್ತಿದ್ದರು. ಆದರೆ ಅವರು ನಮ್ಮಿಂದ ಹೊರಟುಹೋದುದರಿಂದ ಅವರೆಲ್ಲರೂ ನಮ್ಮವರಲ್ಲವೆಂಬುದು ಸ್ಪಷ್ಟವಾಗಿ ತೋರಿಬಂದಿದೆ. ಆದರೆ ನೀವು ಪವಿತ್ರನಾಗಿರುವಾತನಿಂದ ಅಭಿಷೇಕವನ್ನು ಹೊಂದಿದವರಾಗಿದ್ದೀರಿ ಎಂಬ ಸತ್ಯವನ್ನೂ ತಿಳಿದವರಾಗಿದ್ದೀರಿ. ನೀವು ಸತ್ಯವನ್ನು ತಿಳಿಯದವರಲ್ಲ. ನೀವು ಸತ್ಯವನ್ನು ತಿಳಿದಿರುವುದರಿಂದಲೂ ಯಾವ ಸುಳ್ಳೂ ಸತ್ಯದಿಂದ ಹುಟ್ಟಿ ಬರುವುದಿಲ್ಲವೆಂಬುದನ್ನು ನೀವು ತಿಳಿದವರಾಗಿರುವುದರಿಂದಲೂ ನಾನು ನಿಮಗೆ ಬರೆದೆನು. ಸುಳ್ಳುಗಾರನು ಯಾರು? ಯೇಸುವನ್ನು ಕ್ರಿಸ್ತನಲ್ಲ ಎಂದು ಅಲ್ಲಗಳೆಯುವವನು ಸುಳ್ಳುಗಾರನಾಗಿದ್ದಾಯೇ ಹೊರತು ಮತ್ತಾರು ಆಗಿರಲು ಸಾಧ್ಯ? ತಂದೆಯನ್ನೂ ಮಗನನ್ನೂ ಅಲ್ಲಗಳೆಯುವವನು ಕ್ರಿಸ್ತವಿರೋಧಿಯಾಗಿದ್ದಾನೆ.

ಪಾಪಮಾಡುವವನು ಸೈತಾನನಿಗೆ ಸಂಬಂಧಪಟ್ಟವನಾಗಿದ್ದಾನೆ. ಏಕೆಂದರೆ ಆದಿಯಿಂದಲೂ ಸೈತಾನನು ಪಾಪಮಾಡುವವನಾಗಿದ್ದಾನೆ. ಆದ್ದರಿಂದ ಸೈತಾನನ ಕೆಲಸಗಳನ್ನು ನಾಶಮಾಡುವುದಕ್ಕೋಸ್ಕರ ದೇವಕುಮಾರನು ಪ್ರತ್ಯಕ್ಷನಾದನು. ದೇವರಿಂದ ಹುಟ್ಟಿದವನು ಪಾಪಮಾಡುವುದಿಲ್ಲ. ಏಕೆಂದರೆ ದೇವರ ಸ್ವಭಾವವು ಅವನಲ್ಲಿ ನೆಲೆಗೊಂಡಿದೆ. ಅವನು ದೇವರಿಂದ ಹುಟ್ಟಿದ ಕಾರಣ ಪಾಪಮಾಡಲಾರನು. ಆದ್ದರಿಂದ ದೇವರ ಮಕ್ಕಳು ಯಾರೆಂಬುದು ಹಾಗೂ ಸೈತಾನನ ಮಕ್ಕಳು ಯಾರೆಂಬುದು ಇದರಿಂದ ತಿಳಿದುಬರುತ್ತದೆ. ನೀತಿಯನ್ನು ಅನುಸರಿಸದವರೂ ತನ್ನ ಸಹೋದರನನ್ನು ಪ್ರೀತಿಸದವರೂ ದೇವರಿಗೆ ಸಂಬಂಧಪಟ್ಟವರಲ್ಲ.

ಪ್ರಿಯರೇ, ಅನೇಕ ಸುಳ್ಳುಪ್ರವಾದಿಗಳು ಲೋಕದೊಳಗೆ ಬಂದಿರುವುದರಿಂದ ನೀವು ಎಲ್ಲಾ ಆತ್ಮಗಳ ನುಡಿಗಳನ್ನು ನಂಬದೆ ಆಯಾ ಆತ್ಮಗಳ ನುಡಿಗಳು ದೇವರಿಂದ ಪ್ರೇರಿತವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು.

ದೇವರಾತ್ಮ ಪ್ರೇರಿತವಾದ ನುಡಿಗಳು ಎಂದು ತಿಳಿದುಕೊಳ್ಳುವುದು ಹೇಗೆಂದರೆ, ಯೇಸು ಕ್ರಿಸ್ತನು ಮನುಷ್ಯ ರೂಪವನ್ನು ಧರಿಸಿಕೊಂಡು ಬಂದನು ಎಂದು ಒಪ್ಪಿಕೊಳ್ಳುವ ಆತ್ಮವು ದೇವರಿಂದ ಪ್ರೇರಿತವಾಗಿ ಬಂದದ್ದಾಗಿದೆ. ಯೇಸುಕ್ರಿಸ್ತನನ್ನು ಒಪ್ಪಿಕೊಳ್ಳದಿರುವ ಪ್ರತಿಯೊಂದು ಆತ್ಮವು ದೇವರಿಂದ ಬಂದದ್ದಲ್ಲ. ಅದು ಕ್ರಿಸ್ತವಿರೋಧಿಯ ಆತ್ಮವಾಗಿದೆ. ಅದು ಬರುತ್ತದೆಂಬುದನ್ನು ನೀವು ಕೇಳಿದ್ದೀರಲ್ಲಾ. ಅದು ಈಗಾಗಲೇ ಲೋಕದಲ್ಲಿ ಇದೆ.

ಇಡೀ ಲೋಕವು ಕೆಡುಕನ ವಶದಲ್ಲಿ ಇದ್ದರು ಸಹ ನಾವು ದೇವರಿಗೆ ಸಂಬಂಧಪಟ್ಟವರಾಗಿದ್ದೇವೆಂಬುದು ನಮಗೆ ತಿಳಿದಿದೆ.

ಏಕೆಂದರೆ, ಯೇಸುಕ್ರಿಸ್ತನು ಮನುಷ್ಯನಾಗಿ ಬಂದನು ಎಂಬುದನ್ನು ಒಪ್ಪದೆ ಇರುವ ಅನೇಕ ಮೋಸಗಾರರು ಲೋಕದೊಳಗೆ ಹೊರಟು ಬಂದಿದ್ದಾರೆ. ಇಂಥವರೇ, ಯೇಸುವನ್ನು ಒಪ್ಪದ ಮೋಸಗಾರರೂ, ಕ್ರಿಸ್ತವಿರೋಧಿಗಳು ಆಗಿದ್ದಾರೆ. ನೀವು ಪ್ರಯಾಸಪಟ್ಟು ಮಾಡಿದವುಗಳನ್ನು, ಕಳೆದುಕೊಳ್ಳದೆ ಪೂರ್ಣ ಪ್ರತಿಫಲವನ್ನು ಹೊಂದುವಂತೆ ಜಾಗರೂಕರಾಗಿರಿ. ಕ್ರಿಸ್ತನ ಉಪದೇಶದಲ್ಲಿ ನೆಲೆಗೊಳ್ಳದೆ ಅದನ್ನು ಮೀರಿ ಹೋಗುವವನಲ್ಲಿ ದೇವರಿಲ್ಲ. ಆ ಉಪದೇಶದಲ್ಲಿ ನೆಲೆಗೊಂಡಿರುವವನಿಗೆ ತಂದೆಯ ಮತ್ತು ಮಗನ ಅನ್ಯೋನ್ಯತೆ ಇರುತ್ತದೆ. ಈ ಉಪದೇಶವನ್ನು ಮೀರಿದ ಯಾವನಾದರೂ ನಿಮ್ಮ ಬಳಿಗೆ ಬಂದರೆ ಅವನನ್ನು ಮನೆಯೊಳಗೆ ಸೇರಿಸಿಕೊಳ್ಳಬೇಡಿರಿ. ಅವನಿಗೆ ಶುಭವಾಗಲಿ ಎಂದು ಹೇಳಬೇಡಿರಿ. ಏಕೆಂದರೆ, ಅವನಿಗೆ ಶುಭವಾಗಲಿ ಎಂದು ಹರಸುವವನು ಅವನ ದುಷ್ಕೃತ್ಯಗಳಲ್ಲಿ ಪಾಲುಗಾರನಾಗುತ್ತಾನೆ.

ತಮ್ಮ ಅಧಿಕಾರದ ಸ್ಥಾನವನ್ನು ಕಾಪಾಡಿಕೊಳ್ಳದೆ, ತಮ್ಮ ಸ್ವಂತ ವಾಸಸ್ಥಾನವನ್ನು ಬಿಟ್ಟ ದೇವದೂತರಿಗೆ ದೇವರು ನಿತ್ಯವಾದ ಬೇಡಿಗಳನ್ನು ಹಾಕಿ, ಮಹಾದಿನದಲ್ಲಿ ಆಗುವ ತೀರ್ಪಿಗಾಗಿ ಅವರನ್ನು ಕತ್ತಲೆಯೊಳಗೆ ಕಾದಿರಿಸಿದ್ದಾನೆ.

ಆದರೂ ಪ್ರಧಾನ ದೇವದೂತನಾದ ಮೀಕಾಯೇಲನು ಮೋಶೆಯ ದೇಹದ ವಿಷಯದಲ್ಲಿ ಸೈತಾನನೊಂದಿಗೆ ವಾಗ್ವಾದ ಮಾಡಿದಾಗ, ಅವನು ಸೈತಾನನಿಗೆ ವಿರೋಧವಾಗಿ ಒಂದೂ ನಿಂದೆಯ ಮಾತನಾಡದೆ, “ಕರ್ತನು ನಿನ್ನನ್ನು ಗದರಿಸಲಿ” ಎಂದನು.

ನಾನು ನಿನ್ನ ಸಂಕಟವನ್ನೂನಿನ್ನ ಬಡತನವನ್ನೂ ಬಲ್ಲೆನು, ಆದರೂ ನೀನು ಐಶ್ವರ್ಯವಂತನೇ. ಇದಲ್ಲದೆತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುವವರು ನಿನ್ನ ವಿಷಯವಾಗಿ ದೂಷಿಸುವುದನ್ನು ಬಲ್ಲೆನು. ಅವರು ಯೆಹೂದ್ಯರಲ್ಲ, ಸೈತಾನನಸಭಾಮಂದಿರದವರಾಗಿದ್ದಾರೆ. ನಿನಗೆ ಸಂಭವಿಸಬಹುದಾದ ಬಾಧೆಗಳಿಗೆ ಹೆದರಬೇಡ. ಇಗೋ,ನಿಮ್ಮನ್ನು ಪರೀಕ್ಷಿಸಲು ಸೈತಾನನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ಹಾಕುವುದಕ್ಕಿದ್ದಾನೆ ಮತ್ತುಹತ್ತು ದಿನಗಳ ತನಕ ನಿಮಗೆ ಸಂಕಟವಿರುವುದು.ನೀನು ಸಾಯುವ ತನಕನಂಬಿಗಸ್ತನಾಗಿರು, ನಾನು ನಿನಗೆಜೀವದ ಕಿರೀಟವನ್ನು ಕೊಡುವೆನು.

ನೀನು ವಾಸಮಾಡುವ ಸ್ಥಳವನ್ನು ಬಲ್ಲೆನು.ಅದು ಸೈತಾನ ಸಿಂಹಾಸನವಿರುವ ಸ್ಥಳವಾಗಿದೆ. ನೀನು ನನ್ನ ಹೆಸರನ್ನು ದೃಢವಾಗಿ ಹಿಡಿದುಕೊಂಡಿರುವಿ. ಸೈತಾನನ ನಿವಾಸವಾದ ನಿನ್ನ ಪಟ್ಟಣದಲ್ಲಿ ನನಗೆ ನಂಬಿಗಸ್ತ ಸಾಕ್ಷಿಯಾದ ಅಂತಿಪನು ಕೊಲ್ಲಲ್ಪಟ್ಟಾಗಲೂ ನನ್ನಲ್ಲಿಟ್ಟಿರುವ ನಂಬಿಕೆಯನ್ನು ನೀನು ನಿರಾಕರಿಸಲಿಲ್ಲ.

“ಆದರೆ ಥುವತೈರದಲ್ಲಿರುವ ಉಳಿದವರಿಗೆ, ಅಂದರೆ ಸೈತಾನನಿಂದ ಪ್ರೇರಿತವಾದ ದುರ್ಬೋಧನೆಯ ಆಳವನ್ನು ಯಾರಾರು ತಿಳಿಯದೆಯೂ ಅದನ್ನು ಅವಲಂಬಿಸದೆಯೂ ಇರುತ್ತಾರೋ ಅವರಿಗೆ ಹೇಳುವುದೇನಂದರೆ, ನಾನುಮತ್ತೊಂದು ಭಾರವನ್ನು ನಿಮ್ಮ ಮೇಲೆ ಹಾಕುವುದಿಲ್ಲ.

ತಾವು ಯೆಹೂದ್ಯರೆಂದು ಸುಳ್ಳಾಗಿ ಕೊಚ್ಚಿಕೊಳ್ಳುವ ಕೆಲವರನ್ನುಸೈತಾನನ ಸಭಾಮಂದಿರದಿಂದ ಕರೆಯಿಸುವೆನು. ಅವರುನಿನ್ನ ಪಾದಕ್ಕೆ ಬಿದ್ದು ನಮಸ್ಕರಿಸುವಂತೆಯೂ, ನಿನ್ನ ಬಗ್ಗೆ ನನಗಿರುವ ಪ್ರೀತಿ ಅವರಿಗೆ ತಿಳಿಯುವಂತೆ ಮಾಡುವೆನು.

ಐದನೆಯ ದೇವದೂತನು ತುತ್ತೂರಿಯನ್ನೂದಿದಾಗ ಆಕಾಶದಿಂದ ಭೂಮಿಗೆ ಬಿದ್ದ ಒಂದು ನಕ್ಷತ್ರವನ್ನು ಕಂಡೆನು. ಅವನಿಗೆ ಅಧೋಲೋಕಕ್ಕೆ ಹೋಗುವ ಕೂಪದ ಬೀಗದ ಕೈ ಕೊಡಲ್ಪಟ್ಟಿತು. ಅವನು ಅಧೋಲೋಕದ ಕೂಪವನ್ನು ತೆರೆಯಲು ಕೂಪದಿಂದ ಬಂದ ಹೊಗೆ ದೊಡ್ಡ ಕುಲುಮೆಯ ಹೊಗೆಯಂತೆ ಏರಿತು. ಕೂಪದ ಹೊಗೆಯಿಂದ ಸೂರ್ಯನೂ ಆಕಾಶವೂ ಕಪ್ಪಾಗಿ ಹೋದವು. ಹೊಗೆಯೊಳಗಿಂದ ಮಿಡತೆಗಳು ಭೂಮಿಯ ಮೇಲೆ ಹೊರಟುಬಂದವು. ಭೂಮಿಯಲ್ಲಿರುವ ಚೇಳುಗಳಿಗಿರುವಂಥ ಶಕ್ತಿಯನ್ನು ಅವುಗಳಿಗೆ ಕೊಡಲಾಯಿತು. ಭೂಮಿಯ ಮೇಲಿರುವ ಹುಲ್ಲನ್ನಾಗಲಿ ಯಾವ ಹಣ್ಣು ತರಕಾರಿಗಳನ್ನಾಗಲಿ, ಮರವನ್ನಾಗಲಿ ನಾಶಮಾಡದೆ, ಹಣೆಯ ಮೇಲೆ ದೇವರ ಮುದ್ರೆಯಿಲ್ಲದವರಾದ ಮನುಷ್ಯರನ್ನು ಮಾತ್ರ ನಾಶಮಾಡಬಹುದೆಂದು ಅವುಗಳಿಗೆ ಅಪ್ಪಣೆಯಾಯಿತು. ಅವರನ್ನು ಕೊಲ್ಲದೆ ಐದು ತಿಂಗಳುಗಳವರೆಗೂ ಹಿಂಸಿಸುವುದಕ್ಕೆ ಅಧಿಕಾರವು ದೊರೆಯಿತು. ಅವರಿಗುಂಟಾದ ಯಾತನೆಯು ಮನುಷ್ಯನಿಗೆ ಚೇಳು ಕಡಿತದಿಂದುಂಟಾಗುವ ಯಾತನೆಗೆ ಸಮಾನವಾಗಿತ್ತು. ಆ ಕಾಲದಲ್ಲಿ ಮನುಷ್ಯರು ಮರಣವನ್ನು ಬಯಸುವರು, ಆದರೆ ಅದು ಪ್ರಾಪ್ತವಾಗುವುದಿಲ್ಲ. ಸಾಯಬೇಕೆಂದು ಕೋರುವರು, ಆದರೆ ಮೃತ್ಯುವು ಅವರನ್ನು ಬಿಟ್ಟು ಓಡಿಹೋಗುವುದು. ಆ ಮಿಡತೆಗಳ ರೂಪವು ಯುದ್ಧಕ್ಕೆ ಸನ್ನದ್ಧವಾಗಿರುವ ಕುದುರೆಗಳ ರೂಪದಂತೆ ಇತ್ತು. ಅವುಗಳ ತಲೆಯ ಮೇಲೆ ಚಿನ್ನದ ಕಿರೀಟಗಳಂತೆಯೂ, ಅವುಗಳ ಮುಖಗಳು ಮನುಷ್ಯರ ಮುಖಗಳಂತೆಯೂ ಇದ್ದವು. ಅವುಗಳ ಕೂದಲು ಸ್ತ್ರೀಯರ ಕೂದಲಿನಂತೆಯೂ ಹಲ್ಲುಗಳು ಸಿಂಹದ ಹಲ್ಲುಗಳಂತೆಯೂ ಇದ್ದವು. ಅವುಗಳಿಗೆ ಉಕ್ಕಿನ ಕವಚಗಳಂತಿದ್ದ ಕವಚಗಳು ಇದ್ದವು. ಅವುಗಳ ರೆಕ್ಕೆಗಳ ಶಬ್ದವು ಯುದ್ಧಕ್ಕೆ ಓಡುವ ರಥಾಶ್ವಗಳ ಶಬ್ದದಂತೆ ಇತ್ತು. ಚೇಳಿಗಿರುವಂತೆ ಅವುಗಳಿಗೆ ಬಾಲಗಳೂ, ಕೊಂಡಿಗಳೂ ಇದ್ದವು. ಮನುಷ್ಯರನ್ನು ಐದು ತಿಂಗಳುಗಳವರೆಗೂ ಪೀಡಿಸುವ ಸಾಮರ್ಥ್ಯವು ಅವುಗಳ ಬಾಲಗಳಲ್ಲಿಯೇ ಇರುವುದು. ಅಧೋಲೋಕದ ಅಧಿಕಾರಿಯಾದ ದೂತನೇ ಅವುಗಳನ್ನಾಳುವ ಅರಸನು. ಅವನಿಗೆ ಇಬ್ರಿಯ ಭಾಷೆಯಲ್ಲಿ ಅಬದ್ದೋನನೆಂತಲೂ, ಗ್ರೀಕ್ ಭಾಷೆಯಲ್ಲಿ ಅಪೊಲ್ಲುವೋನನೆಂತಲೂ ಹೆಸರುಂಟು.

ಉಪದ್ರವಗಳಿಂದ ಸಾಯದೆ ಉಳಿದ ಜನರು ತಾವೇ ಮಾಡಿಕೊಂಡ ವಿಗ್ರಹಗಳನ್ನು ಬಿಟ್ಟು ದೇವರ ಕಡೆಗೆ ತಿರುಗಲಿಲ್ಲ. ಅವರು ಭೂತ, ಪ್ರೇತಗಳ ಪೂಜೆಯನ್ನೂ ಬಂಗಾರ, ಬೆಳ್ಳಿ, ತಾಮ್ರ, ಕಲ್ಲು, ಮರ ಮೊದಲಾದವುಗಳಿಂದ ಮಾಡಲ್ಪಟ್ಟ ನೋಡಲಾರದೆ, ಕೇಳಲಾರದೆ, ನಡೆಯಲಾರದೆ ಇರುವ ವಿಗ್ರಹಗಳ ಪೂಜೆಯನ್ನೂ ಬಿಡಲಿಲ್ಲ.

ಅವರು ತಮ್ಮ ಸಾಕ್ಷಿಗಳನ್ನು ಹೇಳಿ ಮುಗಿಸಿದ ನಂತರ, ಅಧೋಲೋಕದಿಂದ ಬರುವ ಮೃಗವು ಇವರ ಮೇಲೆ ಯುದ್ಧಮಾಡಿ ಇವರನ್ನು ಜಯಿಸಿ ಕೊಲ್ಲುವುದು.

ಪರಲೋಕದಲ್ಲಿ ಮತ್ತೊಂದು ಚಿಹ್ನೆಯು ಕಾಣಿಸಿತು. ಅಲ್ಲಿ ಕೆಂಪು ಘಟಸರ್ಪವೊಂದು ಇತ್ತು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳು ಇದ್ದವು. ಅದರ ತಲೆಗಳ ಮೇಲೆ ಏಳು ಕಿರೀಟಗಳು ಇದ್ದವು. ಅದು ತನ್ನ ಬಾಲದಿಂದ ಆಕಾಶದ ನಕ್ಷತ್ರಗಳಲ್ಲಿ ಮೂರರಲ್ಲೊಂದು ಭಾಗವನ್ನು ಎಳೆದು ಭೂಮಿಗೆ ಎಸೆಯಿತು. ಹೆರುತ್ತಿದ್ದ ಆ ಸ್ತ್ರೀಯು ಹೆತ್ತ ಕೂಡಲೇ ಆಕೆಯ ಮಗುವನ್ನು ನುಂಗಿಬಿಡಬೇಕೆಂದು ಆ ಘಟಸರ್ಪವು ಆಕೆಯ ಮುಂದೆ ನಿಂತುಕೊಂಡಿತ್ತು.

ಪರಲೋಕದಲ್ಲಿ ಯುದ್ಧ ನಡೆಯಿತು. ಮೀಕಾಯೇಲನೂ ಅವನ ದೂತರೂ ಘಟಸರ್ಪದ ವಿರುದ್ಧ ಯುದ್ಧ ಮಾಡಿದರು. ಘಟಸರ್ಪವೂ ಅವನ ದೂತರೂ ಯುದ್ಧ ಮಾಡಿ ಕಾದಾಡಿದರು. ಆದರೆ ಘಟಸರ್ಪಕ್ಕೆ ಸಾಕಷ್ಟು ಸಾಮರ್ಥ್ಯವಿಲ್ಲದ್ದರಿಂದ ಅದು ಸೋಲನ್ನಪ್ಪಿತು. ಹೀಗೆ ಪರಲೋಕದಲ್ಲಿ ಅವರಿಗೂ ಸ್ಥಳವಿಲ್ಲದಂತಾಯಿತು. ಭೂಲೋಕದವರನ್ನೆಲ್ಲಾ ಮರುಳುಗೊಳಿಸಿ ಪಾಪ ಮಾಡಿಸುತ್ತಿದ್ದ ಆ ಮಹಾ ಘಟಸರ್ಪವು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಆ ಪುರಾತನ ಸರ್ಪವನ್ನು ಭೂಮಿಗೆ ತಳ್ಳಲಾಯಿತು. ಅವನ ದೂತರು ಅವನೊಂದಿಗೆ ದೊಬ್ಬಲ್ಪಟ್ಟರು. ಆಗ ಪರಲೋಕದಲ್ಲಿ ಮಹಾಶಬ್ದವನ್ನು ಕೇಳಿದೆನು. ಅದು, “ಈಗ ನಮ್ಮ ದೇವರ ರಕ್ಷಣೆಯೂ, ಶಕ್ತಿಯೂ, ರಾಜ್ಯವೂ, ಆತನ ಕ್ರಿಸ್ತನ ಅಧಿಪತ್ಯ ಆರಂಭವಾಗಿದೆ. ಹಗಲಿರುಳು ನಮ್ಮ ಸಹೋದರರನ್ನು ಕುರಿತು ನಮ್ಮ ದೇವರ ಮುಂದೆ ಸದಾ ದೂರು ಹೇಳುತ್ತಿದ್ದ ದೂರುಗಾರನು ದೊಬ್ಬಲ್ಪಟ್ಟಿದ್ದಾನೆ. ಅವರು ಮರಣದವರೆಗೆ ತಮ್ಮ ಪ್ರಾಣವನ್ನು ಪ್ರೀತಿಸದೆ, ಯಜ್ಞದ ಕುರಿಮರಿಯಾದಾತನ ರಕ್ತದಿಂದಲೂ ತಮ್ಮ ಸಾಕ್ಷಿಯ ವಾಕ್ಯದಿಂದಲೂ ಅವನನ್ನು ಜಯಿಸಿದರು. ಆದ್ದರಿಂದ ಪರಲೋಕವೇ, ಅದರಲ್ಲಿ ವಾಸಮಾಡುವವರೇ, ಹರ್ಷಗೊಳ್ಳಿರಿ. ಆದರೆ ಭೂಮಿ, ಸಮುದ್ರಗಳೇ ನಿಮ್ಮ ದುರ್ಗತಿಯನ್ನು ಏನೆಂದು ಹೇಳಲಿ ಏಕೆಂದರೆ ಸೈತಾನನು ತನಗಿರುವ ಕಾಲವು ಇನ್ನು ಸ್ವಲ್ಪಮಾತ್ರವೆಂದು ತಿಳಿದು ಮಹಾ ರೋಷವುಳ್ಳವನಾಗಿ ನಿಮ್ಮ ಕಡೆಗೆ ಇಳಿದು ಬಂದಿದ್ದಾನೆ” ಎಂಬುದಾಗಿ ಹೇಳಿತು.

ಘಟಸರ್ಪನು ತಾನು ದೊಬ್ಬಲ್ಪಟ್ಟು ಭೂಮಿಗೆ ಬಿದ್ದಿರುವುದನ್ನು ಗ್ರಹಿಸಿಕೊಂಡು, ಗಂಡು ಮಗುವನ್ನು ಹೆತ್ತ ಸ್ತ್ರೀಯನ್ನು ಹಿಂಸಿಸುವುದಕ್ಕೆ ಅಟ್ಟಿಸಿಕೊಂಡು ಹೋಯಿತು. ಆದರೆ ಆ ಸ್ತ್ರೀಯು ಮರುಭೂಮಿಯಲ್ಲಿದ್ದ ತನ್ನ ಸ್ಥಳಕ್ಕೆ ಹಾರಿಹೋಗುವುದಕ್ಕಾಗಿ ಆಕೆಗೆ ದೊಡ್ಡ ಹದ್ದಿನ ಎರಡು ರೆಕ್ಕೆಗಳು ಕೊಡಲ್ಪಟ್ಟವು. ಅಲ್ಲಿ ಆಕೆಯು ಒಂದು ಕಾಲ, ಎರಡು ಕಾಲ, ಅರ್ಧ ಕಾಲ ಸರ್ಪನಿಗೆ ಸಿಗದಂತೆ ಪೋಷಣೆ ಹೊಂದಿದಳು. ಆ ಸರ್ಪನು ಪ್ರವಾಹದಿಂದ ಸ್ತ್ರೀಯನ್ನು ಸೆಳೆದುಕೊಂಡು ಹೋಗಬೇಕೆಂದು ಆಕೆಯ ಹಿಂದೆ ತನ್ನ ಬಾಯೊಳಗಿಂದ ನೀರನ್ನು ನದಿಯಂತೆ ಸುರಿಸಿದನು. ಆದರೆ ಭೂಮಿಯು ಆ ಸ್ತ್ರೀಗೆ ಸಹಾಯಮಾಡಿತು. ಅದು ತನ್ನ ಬಾಯಿ ತೆರೆದು ಘಟಸರ್ಪನು ತನ್ನ ಬಾಯೊಳಗಿಂದ ಬಿಟ್ಟ ನದಿಯನ್ನು ನುಂಗಿಬಿಟ್ಟಿತ್ತು. ಆಗ ಘಟಸರ್ಪನು ಸ್ತ್ರೀಯ ಮೇಲೆ ಬಹು ಕೋಪಗೊಂಡು, ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಅಂದರೆ, ದೇವರ ಆಜ್ಞೆಗಳನ್ನು ಕೈಗೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೊಂದಿದವರ ಮೇಲೆ ಯುದ್ಧಮಾಡುವುದಕ್ಕೆ ಹೊರಟು, ಸಮುದ್ರ ತೀರದ ಮರಳಿನ ಮೇಲೆ ನಿಂತನು.

ಸಮುದ್ರದಿಂದ ಒಂದು ಮೃಗವು ಏರಿಬರುವುದನ್ನು ಕಂಡೆನು. ಅದಕ್ಕೆ ಏಳು ತಲೆಗಳೂ, ಹತ್ತು ಕೊಂಬುಗಳೂ, ಕೊಂಬುಗಳ ಮೇಲೆ ಹತ್ತು ಕಿರೀಟಗಳೂ, ಹಣೆಗಳ ಮೇಲೆ ದೇವದೂಷಣೆಯ ನಾಮಗಳೂ ಇದ್ದವು. ನಾನು ಕಂಡ ಮೃಗವು ಚಿರತೆಯಂತಿತ್ತು ಅದರ ಕಾಲುಗಳು ಕರಡಿಯ ಕಾಲುಗಳಂತೆಯೂ ಅದರ ಬಾಯಿ ಸಿಂಹದ ಬಾಯಿಯಂತೆಯೂ ಇದ್ದವು. ಅದಕ್ಕೆ ಘಟಸರ್ಪನು ಶಕ್ತಿಯನ್ನೂ, ಸಿಂಹಾಸನವನ್ನೂ, ಮಹಾ ಅಧಿಕಾರವನ್ನೂ ಕೊಟ್ಟನು. ಅದರ ತಲೆಗಳಲ್ಲಿ ಒಂದು ತಲೆ ಗಾಯಹೊಂದಿ ಸಾಯುವ ಹಾಗಿರುವುದನ್ನು ಕಂಡೆನು. ಆ ಮರಣಕರವಾದ ಗಾಯವು ವಾಸಿಯಾಯಿತು, ಭೂಲೋಕದವರೆಲ್ಲರು ಆ ಮೃಗವನ್ನು ನೋಡುತ್ತಾ ಆಶ್ಚರ್ಯಪಟ್ಟರು. ಘಟಸರ್ಪನು ಆ ಮೃಗಕ್ಕೆ ಅಧಿಕಾರವನ್ನು ಕೊಟ್ಟವನಾದ್ದರಿಂದ ಅವರು ಆ ಘಟಸರ್ಪನಿಗೆ ಆರಾಧನೆ ಮಾಡಿದರು. ಇದಲ್ಲದೆ ಆ ಮೃಗಕ್ಕೂ ಆರಾಧನೆ ಮಾಡಿ, “ಈ ಮೃಗಕ್ಕೆ ಸಮಾನರು ಯಾರು? ಇದರ ವಿರುದ್ಧ ಯುದ್ಧ ಮಾಡುವುದಕ್ಕೆ ಯಾರು ಶಕ್ತರು?” ಎಂದರು. ಬಡಾಯಿಮಾತುಗಳನ್ನೂ ದೂಷಣೆಯ ಮಾತುಗಳನ್ನೂ ಆಡುವ ಬಾಯಿ ಅದಕ್ಕೆ ಕೊಡಲ್ಪಟ್ಟಿತು ಮತ್ತು ನಲವತ್ತೆರಡು ತಿಂಗಳ ಪರ್ಯಂತರ ತನ್ನ ಕಾರ್ಯಗಳನ್ನು ನಡಿಸುವ ಅಧಿಕಾರವೂ ಅದಕ್ಕೆ ಕೊಡಲ್ಪಟ್ಟಿತು. ಆ ಮೃಗವು ಬಾಯಿದೆರೆದು ದೇವರನ್ನು ದೂಷಿಸಿದ್ದಲ್ಲದೆ ಆತನ ನಾಮವನ್ನೂ, ಆತನು ವಾಸಿಸುವ ನಿವಾಸವನ್ನೂ, ಪರಲೋಕ ನಿವಾಸಿಗಳನ್ನೂ ದೂಷಿಸಿತು. ಇದಲ್ಲದೆ ದೇವಜನರ ಮೇಲೆ ಯುದ್ಧ ಮಾಡಿ ಅವರನ್ನು ಜಯಿಸುವುದಕ್ಕೆ ಅದಕ್ಕೆ ಅಧಿಕಾರ ಕೊಡಲ್ಪಟ್ಟಿತು ಮತ್ತು ಸಕಲ ಕುಲ, ಜನ, ಭಾಷೆ, ಜನಾಂಗಗಳ ಮೇಲೆ ಅದಕ್ಕೆ ಅಧಿಕಾರವು ಕೊಡಲ್ಪಟ್ಟಿತು. ಜಗದುತ್ಪತ್ತಿಗೆ ಮೊದಲೇ ಕೊಯ್ಯಲ್ಪಟ್ಟ ಕುರಿಮರಿಯಾದಾತನ ಬಳಿಯಲ್ಲಿರುವ ಜೀವಬಾಧ್ಯರ ಪುಸ್ತಕದಲ್ಲಿ ಯಾರಾರ ಹೆಸರುಗಳು ಬರೆದಿರುವುದಿಲ್ಲವೋ ಆ ಭೂನಿವಾಸಿಗಳೆಲ್ಲರೂ ಅದಕ್ಕೆ ಆರಾಧನೆ ಮಾಡುವರು. ಕಿವಿಯುಳ್ಳವನು ಕೇಳಲಿ, ಸೆರೆಹಿಡಿಯುವವನು ತಾನೇ ಸೆರೆಗೆ ಹೋಗುವನು, ಕತ್ತಿಯಿಂದ ಕೊಲ್ಲುವವನು ಕತ್ತಿಯಿಂದಲೇ ಸಾಯುವನು. ಇದರಲ್ಲಿ ದೇವಜನರಿಗೆ ತಾಳ್ಮೆಯೂ ನಂಬಿಕೆಯೂ ಅಗತ್ಯವಾಗಿರಬೇಕಾಗಿದೆ.

ಮತ್ತೊಂದು ಮೃಗವು ಭೂಮಿಯೊಳಗಿಂದ ಬರುವುದನ್ನು ಕಂಡೆನು. ಇದಕ್ಕೆ ಕುರಿಮರಿಗಿರುವಂತೆ ಎರಡು ಕೊಂಬುಗಳಿದ್ದವು, ಅದು ಘಟಸರ್ಪದಂತೆ ಮಾತನಾಡಿತು. ಈ ಮೃಗವು ಮೊದಲನೆಯ ಮೃಗದ ಎದುರು ತನ್ನ ಅಧಿಕಾರವನ್ನೆಲ್ಲಾ ನಡೆಸಿ, ಮರಣಕರವಾದ ಗಾಯ ವಾಸಿಯಾದ ಮೊದಲನೆಯ ಮೃಗಕ್ಕೆ ಭೂಲೋಕವೂ ಭೂನಿವಾಸಿಗಳೂ ಆರಾಧಿಸುವಂತೆ ಮಾಡಿತು. ಇದು ಜನರ ಮುಂದೆ ಬೆಂಕಿ ಆಕಾಶದಿಂದ ಭೂಮಿಗೆ ಇಳಿದುಬರುವಂತಹ ಅದ್ಭುತಕಾರ್ಯಗಳನ್ನು ಮಾಡುತ್ತಾ, ಆ ಮೊದಲನೆಯ ಮೃಗದ ಸನ್ನಿಧಿಯಲ್ಲಿ ಮಹತ್ಕಾರ್ಯಗಳನ್ನು ಮಾಡುವ ಅಧಿಕಾರವಿರುವುದರಿಂದ ಭೂನಿವಾಸಿಗಳನ್ನು ಮರಳುಗೊಳಿಸಿತ್ತು. ಅವರಿಗೆ, ಕತ್ತಿಯಿಂದ ಗಾಯಹೊಂದಿ ಸಾಯದೆ ಬದುಕಿದ ಮೃಗದ ಘನಕ್ಕಾಗಿ ವಿಗ್ರಹವನ್ನು ಮಾಡಿಸಿಕೊಳ್ಳಬೇಕೆಂದು ಬೋಧಿಸಿತು. ಇದಲ್ಲದೆ ಆ ಮೃಗದ ವಿಗ್ರಹಕ್ಕೆ ಜೀವಕೊಡುವ ಸಾಮರ್ಥ್ಯವು ಇದಕ್ಕೆ ದೊರೆಯಿತು. ಆ ಮೃಗದ ವಿಗ್ರಹವು ಮಾತನಾಡುವುದಲ್ಲದೆ, ತನ್ನನ್ನು ಆರಾಧಿಸದವರೆಲ್ಲರಿಗೂ ಮರಣದಂಡನೆಯಾಗುವಂತೆ ಮಾಡುವ ಶಕ್ತಿಯು ಆದಕ್ಕಿತ್ತು. ಈ ಎರಡನೆಯ ಮೃಗವು, ದೊಡ್ಡವರು, ಚಿಕ್ಕವರು, ಐಶ್ವರ್ಯವಂತರು, ಬಡವರು, ಸ್ವತಂತ್ರರು, ದಾಸರು ಎಲ್ಲರೂ ತಮ್ಮತಮ್ಮ ಬಲಗೈಯ ಮೇಲಾಗಲಿ, ಹಣೆಯ ಮೇಲಾಗಲಿ ಗುರುತನ್ನು ಹೊಂದಬೇಕೆಂದು ಒತ್ತಾಯ ಮಾಡಿತ್ತು. ಆ ಗುರುತು ಯಾರಿಗಿಲ್ಲವೋ ಅವರು ಕ್ರಯ ವಿಕ್ರಯಗಳನ್ನು ನಡೆಸಲು ಸಾಧ್ಯವಿರಲಿಲ್ಲ. ಆ ಗುರುತು ಯಾವುದೆಂದರೆ ಮೊದಲನೆಯ ಮೃಗದ ಹೆಸರು ಅಥವಾ ಅದರ ಹೆಸರನ್ನು ಸೂಚಿಸುವ ಸಂಖ್ಯೆ. ಇದನ್ನು ಗ್ರಹಿಸಲು ಜ್ಞಾನವು ಅಗತ್ಯವಾಗಿದೆ. ಬುದ್ಧಿವಂತನು ಆ ಮೃಗದ ಸಂಖ್ಯೆಯನ್ನು ಎಣಿಸಲಿ, ಅದು ಒಬ್ಬ ಮನುಷ್ಯನನ್ನು ಸೂಚಿಸುವ ಸಂಖ್ಯೆಯಾಗಿದೆ. ಅದರ ಸಂಖ್ಯೆಯು 666.

ಅವನ ಹಿಂದೆ ಮೂರನೆಯ ದೇವದೂತನು ಬಂದು, “ಯಾವನಾದರೂ ಯಾವುದೇ ಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸಿ ತನ್ನ ಹಣೆಯ ಮೇಲಾಗಲಿ ಕೈಯ ಮೇಲಾಗಲಿ ಅದರ ಗುರುತು ಹಾಕಿಸಿಕೊಂಡಿದ್ದರೆ, ಅವನೂ ಸಹ ದೇವರ ಕೋಪವೆಂಬ ಪಾತ್ರೆಯಲ್ಲಿ ಏನೂ ಬೆರಸದೇ ಹಾಕಿದ ದೇವರ ರೌದ್ರವೆಂಬ ದ್ರಾಕ್ಷಾರಸವನ್ನು ಕುಡಿಯುವನು. ಪರಿಶುದ್ಧ ದೇವದೂತರ ಮುಂದೆಯೂ ಯಜ್ಞದ ಕುರಿಮರಿಯಾದಾತನ ಮುಂದೆಯೂ ಬೆಂಕಿಯಿಂದಲೂ ಗಂಧಕದಿಂದಲೂ ಯಾತನೆಪಡುವನು. ಅಂಥವರ ಯಾತನೆಯ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರುತ್ತಾ ಹೋಗುತ್ತದೆ, ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವವರಾಗಲಿ, ಅದರ ಹೆಸರಿನ ಗುರುತನ್ನು ಹೊಂದಿದವರಾಗಲಿ ಹಗಲೂ ರಾತ್ರಿ ವಿಶ್ರಾಂತಿಯಿಲ್ಲದೆ ಇರುವರು” ಎಂದು ಮಹಾಶಬ್ದದಿಂದ ಹೇಳಿದನು.

ಐದನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಮೃಗದ ಸಿಂಹಾಸನದ ಮೇಲೆ ಸುರಿಯಲು ಅದರ ರಾಜ್ಯವು ಕತ್ತಲಾಯಿತು. ಜನರು ಯಾತನೆಯಿಂದ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡು,

ಆಗ ಘಟಸರ್ಪದ ಬಾಯಿಂದ, ಮೃಗದ ಬಾಯಿಂದ ಮತ್ತು ಸುಳ್ಳುಪ್ರವಾದಿಯ ಬಾಯಿಂದ ಕಪ್ಪೆಗಳಂತಿದ್ದ ಮೂರು ಅಶುದ್ಧಾತ್ಮಗಳು ಬರುವುದನ್ನು ಕಂಡೆನು. ಇವು ಸೂಚಕಕಾರ್ಯಗಳನ್ನು ಮಾಡುವ ಭೂತಾತ್ಮಗಳಾಗಿದ್ದು ಭೂಲೋಕದ ಎಲ್ಲಾ ರಾಜರುಗಳ ಬಳಿಗೆ ಹೋಗಿ ಸರ್ವಶಕ್ತನಾದ ದೇವರ ಮಹಾದಿನದ ಯುದ್ಧಕ್ಕಾಗಿ ಅವರನ್ನು ಕೂಡಿಸುತ್ತಿದ್ದವು.

ಏಳು ಬಟ್ಟಲುಗಳನ್ನು ಹಿಡಿದಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು, “ಬಾ, ಬಹಳ ನೀರುಗಳ ಮೇಲೆ ಕುಳಿತ್ತಿರುವ ಮಹಾ ಜಾರಸ್ತ್ರೀಗೆ ಆಗುವ ನ್ಯಾಯತೀರ್ಪನ್ನು ನಿನಗೆ ತೋರಿಸುತ್ತೇನೆ. ಅವಳೊಂದಿಗೆ ಭೂರಾಜರು ಜಾರತ್ವ ಮಾಡಿದರು ಮತ್ತು ಭೂನಿವಾಸಿಗಳು ಆಕೆಯ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು” ಎಂದು ನನಗೆ ಹೇಳಿದನು. ಆಗ ಅವನು ದೇವರಾತ್ಮವಶನಾದ ನನ್ನನ್ನು ಎತ್ತಿಕೊಂಡು ಮರುಭೂಮಿಗೆ ಹೋದನು. ಅಲ್ಲಿ ನಾನು ಕಡುಗೆಂಪು ಬಣ್ಣದ ಮೃಗದ ಮೇಲೆ ಕುಳಿತಿದ್ದ ಒಬ್ಬ ಸ್ತ್ರೀಯನ್ನು ಕಂಡೆನು. ಆ ಮೃಗದ ಮೈಮೇಲೆಲ್ಲಾ ದೂಷಣೆಗಳಿಂದ ಕೂಡಿದ್ದ ಹೆಸರುಗಳು ತುಂಬಿದ್ದವು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು. ಆ ಸ್ತ್ರೀಯು ಧೂಮ್ರವರ್ಣದ ವಸ್ತ್ರಗಳನ್ನೂ ರಕ್ತಾಂಬರವನ್ನೂ ಧರಿಸಿಕೊಂಡು ಚಿನ್ನ, ರತ್ನ, ಮುತ್ತುಗಳಿಂದ ಅಲಂಕರಿಸಿಕೊಂಡಿದ್ದಳು. ಆಕೆಯು ತನ್ನ ಕೈಯಲ್ಲಿ ಅಸಹ್ಯವಾದವುಗಳಿಂದಲೂ ಮತ್ತು ತನ್ನ ಅಶುದ್ಧ ಜಾರತ್ವಗಳಿಂದಲೂ ತುಂಬಿದ ಚಿನ್ನದ ಬಟ್ಟಲನ್ನು ಹಿಡಿದುಕೊಂಡಿದ್ದಳು. ಅವಳ ಹಣೆಯ ಮೇಲೆ, “ಮಹತ್ತಾದ ಬಾಬೆಲೆಂಬ ಭೂಮಿಯಲ್ಲಿರುವ ಜಾರಸ್ತ್ರೀಯರ ಅಸಹ್ಯವಾದ ಕಾರ್ಯಗಳ ಮಾತೆ” ಎಂಬ ಹೆಸರನ್ನು ಬರೆಯಲಾಗಿತ್ತು. ಆ ಸ್ತ್ರೀಯು ನೀತಿವಂತರ ರಕ್ತವನ್ನೂ ಯೇಸುವಿಗೋಸ್ಕರ ಸಾಕ್ಷಿನೀಡಿ ಹತರಾದವರ ರಕ್ತವನ್ನು ಕುಡಿದು ಮತ್ತಳಾಗಿರುವುದನ್ನು ಕಂಡೆನು. ನಾನು ಅವಳನ್ನು ನೋಡಿ ಅತ್ಯಾಶ್ಚರ್ಯಪಟ್ಟೆನು. ಆದರೆ ಆ ದೇವದೂತನು ನನ್ನನ್ನು ಕುರಿತು ಹೇಳಿದ್ದೇನಂದರೆ “ನೀನು ಆಶ್ಚರ್ಯ ಪಡುತ್ತಿರುವುದೇತಕ್ಕೆ? ಆ ಸ್ತ್ರೀಯ ವಿಷಯವಾಗಿಯೂ, ಅವಳ ವಾಹನವಾಗಿದ್ದ ಮೃಗದ ವಿಷಯವಾಗಿಯೂ, ಏಳು ತಲೆಗಳೂ ಹತ್ತು ಕೊಂಬುಗಳುಳ್ಳ ಮೃಗ ಇರುವ ಗೂಢಾರ್ಥವನ್ನು ನಾನು ನಿನಗೆ ವಿವರಿಸುತ್ತೇನೆ.

ನೀನು ಕಂಡ ಆ ಮೃಗವು ಮೊದಲು ಇದದ್ದೂ, ಈಗ ಇಲ್ಲದ್ದೂ, ಮತ್ತು ಅಧೋಲೋಕದೊಳಗಿನಿಂದ ಏರಿ ಬಂದು ವಿನಾಶಕ್ಕೆ ಹೋಗುವುದಕ್ಕಾಗಿರುವುದೂ ಆಗಿದೆ. ಈ ಲೋಕವು ಸೃಷ್ಟಿಯಾದಂದಿನಿಂದ ಯಾರ ಹೆಸರುಗಳು ಜೀವಬಾಧ್ಯರ ಪುಸ್ತಕದಲ್ಲಿ ಬರೆದಿರುವುದಿಲ್ಲವೋ, ಅವರು ಈ ಮೃಗವನ್ನು ನೋಡಿ ಇದು ಮೊದಲು ಇದ್ದಿತ್ತು, ಈಗ ಇಲ್ಲ, ಆದರೆ ಇನ್ನು ಮುಂದೆ ಬರಲಿದೆ ಎಂದು ಆಶ್ಚರ್ಯಪಡುವರು. “ಇದನ್ನು ಗ್ರಹಿಸಿಕೊಳ್ಳಲು ಜ್ಞಾನವೂ, ವಿವೇಕವೂ ಬೇಕು. ಆ ಏಳು ತಲೆಗಳು ಆ ಹೆಂಗಸು ಕುಳಿತುಕೊಂಡಿರುವ ಏಳು ಬೆಟ್ಟಗಳಾಗಿವೆ. ಇದಲ್ಲದೆ ಅವು ಏಳು ರಾಜರುಗಳೂ ಆಗಿದ್ದಾರೆ. ಅವರಲ್ಲಿ ಐದು ರಾಜರು ಬಿದ್ದಿದ್ದಾರೆ. ಒಬ್ಬನು ಇದ್ದಾನೆ. ಮತ್ತೊಬ್ಬನು ಇನ್ನು ಬಂದಿಲ್ಲ. ಅವನು ಬಂದಾಗ ಸ್ವಲ್ಪ ಕಾಲ ಇರಬೇಕಾಗುತ್ತದೆ. ಇದಲ್ಲದೆ ಮೊದಲಿದ್ದು ಈಗ ಇಲ್ಲದಿರುವ ಆ ಮೃಗವು ತಾನೇ ಎಂಟನೆಯ ಅರಸನು. ಆದರೆ ಅವನು ಆ ಏಳು ರಾಜರುಗಳಲ್ಲಿ ಒಬ್ಬನಾಗಿದ್ದಾನೆ, ಅವನು ನಾಶಕ್ಕೆ ಹೋಗುವನು. “ನೀನು ನೋಡಿದ ಆ ಹತ್ತು ಕೊಂಬುಗಳು ಇನ್ನೂ ರಾಜ್ಯವನ್ನು ಹೊಂದದಿರುವ ಹತ್ತು ರಾಜರುಗಳಾಗಿದ್ದಾರೆ. ಆದರೆ ಅವು ರಾಜರಂತೆ ಒಂದು ಗಳಿಗೆಯವರೆಗೆ ಆಳುವ ಅಧಿಕಾರವನ್ನು ಮೃಗದೊಂದಿಗೆ ಹೊಂದುವರು. ಅವರು ಏಕ ಮನಸ್ಸುಳ್ಳವರಾಗಿ ತಮ್ಮ ಬಲವನ್ನೂ ಅಧಿಕಾರವನ್ನೂ ಮೃಗಕ್ಕೆ ಕೊಡುವರು.

ಅವರು ಯಜ್ಞದ ಕುರಿಮರಿಯಾದಾತನಿಗೆ ವಿರುದ್ಧವಾಗಿ ಯುದ್ಧ ಮಾಡುವರು. ಆದರೆ ಆತನು ಕರ್ತರ ಕರ್ತನೂ ರಾಜಾಧಿರಾಜನೂ ಆಗಿರುವುದರಿಂದ ಕುರಿಮರಿಯು ಅವರನ್ನು ಜಯಿಸುವನು ಮತ್ತು ದೇವರು ಕರೆದವರೂ, ದೇವರು ಆದುಕೊಂಡವರೂ, ನಂಬಿಗಸ್ತರೂ ಆಗಿರುವ ಆತನವರು ಕುರಿಮರಿಯೊಂದಿಗೆ ಜಯದಲ್ಲಿ ಪಾಲುಗಾರರಾಗುವರು.” ಇನ್ನೂ ಆ ದೇವದೂತನು ನನಗೆ ಹೇಳಿದ್ದೇನಂದರೆ, “ಆ ಜಾರಸ್ತ್ರೀ ಕುಳಿತ್ತಿದ್ದ ನೀರನ್ನು ನೀನು ನೋಡಿದೆಯಲ್ಲ, ಅವು ಜನಾಂಗಳನ್ನು, ಜನ ಸಮೂಹಗಳನ್ನು, ರಾಷ್ಟ್ರಗಳನ್ನು, ಭಾಷೆಗಳನ್ನು ಸೂಚಿಸುತ್ತದೆ ಎಂದನು. ಇದಲ್ಲದೆ ನೀನು ನೋಡಿದ ಹತ್ತು ಕೊಂಬುಗಳು ಮತ್ತು ಮೃಗವನ್ನು ಕಂಡೆಯಲ್ಲ? ಅವುಗಳು ಜಾರಸ್ತ್ರೀಯನ್ನು ದ್ವೇಷಿಸಿ, ಅವಳನ್ನು ಗತಿಯಿಲ್ಲದವಳನ್ನಾಗಿಯೂ ಬಟ್ಟೆ ಇಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು, ಅವಳನ್ನು ಬೆಂಕಿಯಲ್ಲಿ ಸುಟ್ಟುಬಿಡುವರು. ಏಕೆಂದರೆ ದೇವರು ತನ್ನ ವಾಕ್ಯವನ್ನು ನೆರವೇರಿಸುವುದಕ್ಕಾಗಿಯೂ, ನೆರವೇರಿಸುವಂತೆಯೂ ತನ್ನ ಚಿತ್ತವನ್ನು ಅವರು ಒಂದೇ ಅಭಿಪ್ರಾಯವುಳ್ಳವರಾಗಿ ತಮ್ಮ ಅಧಿಕಾರವನ್ನು ಮೃಗಕ್ಕೆ ಕೊಡುವುದಕ್ಕೂ ಇದನ್ನು ಅವುಗಳ ಹೃದಯಗಳಲ್ಲಿ ಇರಿಸಿದ್ದನು. ನೀನು ಕಂಡ ಆ ಸ್ತ್ರೀಯು ಭೂರಾಜರ ಮೇಲೆ ಆಳುವ ಅಧಿಕಾರ ಹೊಂದಿದ ಮಹಾನಗರಿಯೇ ಆಗಿದೆ.”

ಅವನು ಬಲವಾದ ಧ್ವನಿಯಿಂದ ಕೂಗುತ್ತಾ “ಬಿದ್ದಳು, ಬಿದ್ದಳು, ಬಾಬೆಲ್ ಎಂಬ ಮಹಾನಗರಿಯು ಬಿದ್ದಳು! ಅವಳು ದೆವ್ವಗಳ ವಾಸಸ್ಥಾನವೂ, ಎಲ್ಲಾ ದುರಾತ್ಮಗಳಿಗೂ, ಅಶುದ್ಧವಾದ ಹಾಗೂ ಅಸಹ್ಯವಾದ ಸಕಲ ವಿಧವಾದ ಪಕ್ಷಿಗಳಿಗೂ ಗೂಡೂ ಆದಳು.

ತರುವಾಯ ಆ ಮೃಗವೂ, ಭೂರಾಜರೂ, ಅವರ ಸೈನ್ಯಗಳವರೂ ಆ ಕುದುರೆಯ ಮೇಲೆ ಕುಳಿತಿದ್ದವನ ಮೇಲೆಯೂ ಆತನ ಸೈನ್ಯದ ಮೇಲೆಯೂ ಯುದ್ಧಮಾಡುವುದಕ್ಕಾಗಿ ಕೂಡಿಬಂದಿರುವುದನ್ನು ಕಂಡೆನು. ಆಗ ಆ ಮೃಗವನ್ನು ಸೆರೆಹಿಡಿಯಲಾಯಿತು. ಇದಲ್ಲದೆ ಮೃಗದ ಪರವಾಗಿ ಮಹತ್ಕಾರ್ಯಗಳನ್ನು ಮಾಡಿ, ಮೃಗದ ಗುರುತು ಹಾಕಿಸಿಕೊಂಡವರನ್ನೂ ಅದರ ವಿಗ್ರಹಕ್ಕೆ ಆರಾಧಿಸಿದವರನ್ನೂ ಮರುಳುಗೊಳಿಸಿದ ಆ ಸುಳ್ಳುಪ್ರವಾದಿಯೂ ಅದರೊಂದಿಗೆ ಸೆರೆಸಿಕ್ಕಿದನು. ಇವರಿಬ್ಬರನ್ನೂ ಜೀವಸಹಿತವಾಗಿ ಗಂಧಕದಿಂದ ಉರಿಯುವ ಬೆಂಕಿಯ ಕೆರೆಗೆ ಹಾಕಲಾಯಿತು. ಉಳಿದವರು ಆ ಕುದುರೆಯ ಮೇಲೆ ಕುಳಿತಿದ್ದಾತನ ಬಾಯಿಂದ ಬಂದ ಇಬ್ಬಾಯಿ ಕತ್ತಿಯಿಂದ ಹತರಾದರು, ಪಕ್ಷಿಗಳೆಲ್ಲಾ ಅವರ ಮಾಂಸವನ್ನು ಹೊಟ್ಟೆತುಂಬಾ ತಿಂದವು.

ಆಗ ಒಬ್ಬ ದೇವದೂತನು ಅಧೋಲೋಕದ ಬೀಗದ ಕೈಯನ್ನೂ ಮತ್ತು ದೊಡ್ಡ ಸರಪಣಿಯನ್ನೂ ಕೈಯಲ್ಲಿ ಹಿಡಿದುಕೊಂಡು ಪರಲೋಕದಿಂದ ಇಳಿದು ಬರುವುದನ್ನು ಕಂಡೆನು. ಅವನು ಪಿಶಾಚಿಯೂ ಸೈತಾನನೂ ಆಗಿರುವ ಪುರಾತನ ಸರ್ಪವೆಂಬ ಘಟಸರ್ಪವನ್ನು ಹಿಡಿದು ಸಾವಿರ ವರ್ಷ ಬಂಧನದಲ್ಲಿಟ್ಟನು. ಆ ಸಾವಿರ ವರ್ಷ ಮುಗಿಯುವ ತನಕ ಸೈತಾನನು ಇನ್ನೂ ಜನಾಂಗಗಳನ್ನು ಮೋಸಗೊಳಿಸದಂತೆ ದೇವದೂತನು ಅವನನ್ನು ಅಧೋಲೋಕಕ್ಕೆ ತಳ್ಳಿ ಬಾಗಿಲು ಮುಚ್ಚಿ ಅದಕ್ಕೆ ಮುದ್ರೆಹಾಕಿದನು. ಆ ಸಾವಿರ ವರ್ಷಗಳಾದ ಮೇಲೆ ಅವನಿಗೆ ಸ್ವಲ್ಪಕಾಲ ಬಿಡುಗಡೆ ಆಗುವುದು.

ಆ ಸಾವಿರ ವರ್ಷಗಳು ಮುಗಿದ ಮೇಲೆ ಸೈತಾನನಿಗೆ ಸೆರೆಯಿಂದ ಬಿಡುಗಡೆಯಾಗುವುದು. ಅವನು ಹೊರಗೆ ಬಂದು ಭೂಮಿಯ ನಾಲ್ಕು ದಿಕ್ಕುಗಳಲ್ಲಿರುವ ದೇಶಗಳನ್ನು ಮೋಸಗೊಳಿಸಿ, ಗೋಗ್ ಮತ್ತು ಮಾಗೋಗ್ ಎಂಬ ಜನಾಂಗಗಳನ್ನು ಮರುಳುಗೊಳಿಸಿ ಯುದ್ಧಕ್ಕೆ ಸೇರಿಸುವನು. ಅವರ ಸಂಖ್ಯೆಯು ಸಮುದ್ರದ ಮರಳಿನಷ್ಟಿರುವುದು. ಅವರು ಭೂಮಿಯಲ್ಲೆಲ್ಲಾ ಹರಡಿಕೊಂಡು ದೇವಜನರ ಪಾಳೆಯಕ್ಕೂ ಆ ಪ್ರಿಯ ಪಟ್ಟಣಕ್ಕೂ ಮುತ್ತಿಗೆ ಹಾಕುವರು. ಆದರೆ ಪರಲೋಕದಿಂದ ಬೆಂಕಿ ಇಳಿದು ಬಂದು ಅವರನ್ನು ದಹಿಸಿಬಿಡುವುದು.

ಇದಲ್ಲದೆ ಅವರನ್ನು ಮೋಸಗೊಳಿಸಿದ ಪಿಶಾಚನು ಬೆಂಕಿ ಗಂಧಕಗಳು ಉರಿಯುವ ಕೆರೆಯಲ್ಲಿ ದೊಬ್ಬಲ್ಪಟ್ಟನು. ಅಲ್ಲಿ ಮೃಗವೂ, ಸುಳ್ಳುಪ್ರವಾದಿಯೂ ಸಹ ಇದ್ದಾರೆ. ಅವರು ಹಗಲಿರುಳು ಯುಗಯುಗಾಂತರಗಳಲ್ಲಿಯೂ ಯಾತನೆ ಪಡುತ್ತಿರುವರು.

Kannada - ಕನ್ನಡ - KN

KNIRV'19 - Kannada Indian Revised Version - 2019

This Bible text is from Kannada Indian Revised Version IRV 2019
https://open.bible/bibles/kannada-bridge-text-bible/
provided by: Bridge Connectivity Solutions Pvt Ltd, available by Creative Commons CC-BY-SA-4.0,
and this new compilation is shared as www.creativecommons.org/licenses/by-sa/4.0.
Languages are made available to you by www.ipedge.net