02 – ದೇವ

ಇವು ಸರ್ವಶಕ್ತನಾದ ದೇವರ ಪವಿತ್ರ ಮಾತುಗಳು.
ಮಾನವರ ಮಾತುಗಳಲ್ಲಿ ನಮಗೆ ಆಸಕ್ತಿ ಇಲ್ಲ.
ದೇವರನ್ನು ಪ್ರೀತಿಸುವ ಯಾರಿಗಾದರೂ... ದೇವರು ಇದರ ಬಗ್ಗೆ ಹೀಗೆ ಹೇಳುತ್ತಾನೆ: ದೇವ.

ಟಾಪ್ 3 ಅತ್ಯಂತ ಮಹತ್ವದ ಪದ್ಯಗಳು

“ನಾನೇ ಆದಿಯೂ ಅಂತ್ಯವೂ, ಇರುವಾತನೂ, ಇದ್ದಾತನೂ, ಬರುವಾತನೂ, ಸರ್ವಶಕ್ತನೂ” ಎಂದು ದೇವರಾದ ಕರ್ತನು ಹೇಳುತ್ತಾನೆ.

“ಜಗತ್ತನ್ನೂ ಅದರಲ್ಲಿರುವ ಎಲ್ಲವುಗಳನ್ನೂ, ಉಂಟುಮಾಡಿದ ದೇವರು ಭೂಮ್ಯಾಕಾಶಗಳ ಒಡೆಯನಾಗಿರುವುದರಿಂದ ಆತನು ಕೈಯಿಂದ ಕಟ್ಟಿರುವ ಗುಡಿಗಳಲ್ಲಿ ವಾಸಮಾಡುವವನಲ್ಲ;

ಆತನ ದೃಷ್ಟಿಗೆ ಮರೆಯಾಗಿರುವ ಒಂದು ಸೃಷ್ಟಿಯೂ ಇಲ್ಲ. ಆತನ ಕಣ್ಣಿಗೆ ಮರೆಯಾದದ್ದು ಒಂದೂ ಇಲ್ಲ ಎಲ್ಲವೂ ನಗ್ನವಾಗಿಯೂ ಬಟ್ಟಬಯಲಾಗಿಯೂ ಇದೆ. ಅಂಥವನಿಗೆ ನಾವು ಲೆಕ್ಕಕೊಡಬೇಕಾಗಿದೆ.

ಕ್ಯಾನೊನಿಕಲ್ ಕ್ರಮದಲ್ಲಿ ಪ್ರತಿ ವಚನ - 186 ಭಾಗಗಳು

ಆದಿಯಲ್ಲಿ ದೇವರು ಆಕಾಶವನ್ನು, ಭೂಮಿಯನ್ನು ಸೃಷ್ಟಿಮಾಡಿದನು.

ಅಬ್ರಾಮನು ತೊಂಭತೊಂಭತ್ತು ವರ್ಷದವನಾದಾಗ ಯೆಹೋವನು ಅವನಿಗೆ ದರ್ಶನದಲ್ಲಿ, “ನಾನು ಸರ್ವಶಕ್ತನಾದ ದೇವರು; ನನ್ನೆದುರಿನಲ್ಲಿ ದೋಷ ಇಲ್ಲದವನಾಗಿ ನಡೆದುಕೊ.

ಅದಕ್ಕೆ ಮೋಶೆಯು ದೇವರಿಗೆ, “ನಾನು ಇಸ್ರಾಯೇಲರ ಬಳಿಗೆ ಹೋಗಿ, ‘ನಿಮ್ಮ ಪೂರ್ವಿಕರ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ’ ಎಂದು ಹೇಳಿದಾಗ, ನನಗೆ ಒಂದು ವೇಳೆ ಅವರು, ಆತನ ಹೆಸರು ಏನು? ಎಂದು ಕೇಳಿದರೆ ನಾನೇನು ಉತ್ತರಕೊಡಬೇಕು” ಎಂದನು. ದೇವರು ಮೋಶೆಗೆ, “ಇರುವಾತನೇ ಆಗಿದ್ದೇನೆ” ಎಂದು ಹೇಳಿದನು. “ಮತ್ತು ನೀನು ಇಸ್ರಾಯೇಲರಿಗೆ, ಇರುವಾತನೆಂಬುವವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಎಂದು ಹೇಳಬೇಕು” ಅಂದನು. ದೇವರು ಪುನಃ ಮೋಶೆಗೆ ಹೇಳಿದ್ದೇನೆಂದರೆ, “ನೀನು ಇಸ್ರಾಯೇಲರಿಗೆ, ನಿಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್, ಯಾಕೋಬರ ದೇವರಾಗಿರುವ ಯೆಹೋವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ” ಎಂದು ಹೇಳಬೇಕು. ಇದು ಸದಾಕಾಲಕ್ಕೂ ಇರುವ ನನ್ನ ಹೆಸರು. ಇದು ತಲಾಂತರಕ್ಕೂ ನನ್ನನ್ನು ಸ್ಮರಿಸಬೇಕಾದ ನಾಮ.

ನನ್ನ ಬಲವೂ, ಕೀರ್ತನೆಯೂ ಯಾಹುವೇ. ಆತನಿಂದ ನನಗೆ ರಕ್ಷಣೆ ಉಂಟಾಯಿತು. ನಮ್ಮ ದೇವರು ಆತನೇ, ಆತನನ್ನು ಸ್ತುತಿಸುವೆನು, ನಮ್ಮ ಪೂರ್ವಿಕರ ದೇವರು ಆತನೇ, ಆತನ ಮಹಿಮೆಯನ್ನು ಪ್ರಖ್ಯಾತಿಪಡಿಸುವೆವು. ಯೆಹೋವನು ಯುದ್ಧವೀರನು; ಯೆಹೋವ ಎಂಬುದು ಆತನ ನಾಮವಾಗಿದೆ.

ಯೆಹೋವನೇ, ನಿನ್ನ ಬಲಗೈಯಲ್ಲಿರುವ ಶಕ್ತಿ ಎಷ್ಟೋ ಮಹಿಮೆಯುಳ್ಳದ್ದಾಗಿದೆ. ಯೆಹೋವನೇ, ನಿನ್ನ ಬಲಗೈ ಶತ್ರುಗಳನ್ನು ಪುಡಿಪುಡಿಮಾಡಿಬಿಡುತ್ತದೆ.

ಯೆಹೋವನು ಮೋಶೆಗೆ ಎದುರಾಗಿ ಹೋಗುತ್ತಾ ಪ್ರಕಟಿಸಿ ಹೇಳಿದ್ದೇನೆಂದರೆ; “ಯೆಹೋವನೆಂಬ ದೇವರು ಕರುಣಾಳುವು, ಕೃಪಾಳುವು, ದೀರ್ಘಶಾಂತವುಳ್ಳವನು, ಪ್ರೀತಿಯುಳ್ಳವನು ಹಾಗು ನಂಬಿಗಸ್ತನಾದ ದೇವರು ಆಗಿದ್ದೇನೆ; ಸಾವಿರಾರು ತಲೆಮಾರುಗಳವರೆಗೂ ದಯೆತೋರಿಸುವವನು; ದೋಷಾಪರಾಧ ಪಾಪಗಳನ್ನು ಕ್ಷಮಿಸುವವನು; ಆದರೂ ಅಪರಾಧಿಗಳನ್ನು ಶಿಕ್ಷಿಸದೆ ಬಿಡುವುದಿಲ್ಲ; ತಂದೆಗಳ ದೋಷಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಮಾರುಗಳವರೆಗೆ ಬರಮಾಡುವವನು ಆಗಿದ್ದಾನೆ” ಎಂಬುದೇ.

ಏಕೆಂದರೆ ತೀಕ್ಷ್ಣತೆಯುಳ್ಳವನು ಎಂಬ ಹೆಸರುಳ್ಳ ಯೆಹೋವನು ತನಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸದ್ದರಿಂದ ನೀವು ಬೇರೆ ಯಾವ ದೇವರ ಮುಂದೆಯೂ ಅಡ್ಡಬೀಳಬಾರದು.

ಆದರೆ ನನ್ನ ಜೀವದಾಣೆ, ಯೆಹೋವನ ಮಹಿಮೆಯು ಭೂಲೋಕದಲ್ಲೆಲ್ಲಾ ತುಂಬಿರುವುದು.

ದೇವರು ಮನುಷ್ಯನಂತೆ ಎರಡು ಮಾತಿನವನಲ್ಲ. ಮಾನವನಂತೆ ಮನಸ್ಸನ್ನು ಬದಲಾಯಿಸುವವನಲ್ಲ. ತಾನು ಹೇಳಿದ ಪ್ರಕಾರ ನಡೆಯದಿರುತ್ತಾನೆಯೇ? ಮಾತುಕೊಟ್ಟ ನಂತರ ನೆರವೇರಿಸುವುದಿಲ್ಲವೋ?

ನಿಮ್ಮ ದೇವರಾದ ಯೆಹೋವನು ತನಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸದೆ ಉರಿಯುವ ಬೆಂಕಿಯಂತೆ ದ್ರೋಹಿಗಳನ್ನು ದಹಿಸಿಬಿಡುವವನಾಗಿದ್ದಾನೆಂದು ತಿಳಿಯಿರಿ.

ಯೆಹೋವನೊಬ್ಬನೇ ದೇವರು, ಬೇರೆ ದೇವರೇ ಇಲ್ಲವೆಂದು ನೀವು ತಿಳಿದುಕೊಳ್ಳುವುದಕ್ಕಾಗಿ ಇದೆಲ್ಲಾ ನಿಮಗೆ ಮಾತ್ರ ತೋರಿಸಿದ್ದಾನೆ. ಆತನು ನಿಮ್ಮ ಶಿಕ್ಷಣಕ್ಕೋಸ್ಕರ ಆಕಾಶದಿಂದ ತನ್ನ ಸ್ವರವನ್ನು ನಿಮಗೆ ಕೇಳಿಸುವಂತೆ ಮಾಡಿದನು; ಮತ್ತು ತನ್ನ ಮಹಾ ಅಗ್ನಿಜ್ವಾಲೆಯನ್ನು ಭೂಮಿಯ ಮೇಲೆ ತೋರಿಸಿದನು. ಅದಲ್ಲದೆ ಆ ಅಗ್ನಿಜ್ವಾಲೆಯೊಳಗಿಂದ ಆತನು ಆಡಿದ ಮಾತುಗಳನ್ನು ಕೇಳಿಸುವಂತೆ ಮಾಡಿದನು.

ಇಸ್ರಾಯೇಲರೇ, ಕೇಳಿರಿ, ನಮ್ಮ ದೇವರಾದ ಯೆಹೋವನು ಒಬ್ಬನೇ ದೇವರು;

ಆದುದರಿಂದ ನಿಮ್ಮ ದೇವರಾದ ಯೆಹೋವನೊಬ್ಬನೇ ದೇವರೆಂದು ತಿಳಿದುಕೊಳ್ಳಬೇಕು. ಆತನು ನಂಬಿಗಸ್ತನಾದ ದೇವರು; ತನ್ನನ್ನು ಪ್ರೀತಿಸಿ ತನ್ನ ಆಜ್ಞೆಗಳನ್ನು ಅನುಸರಿಸುವವರಿಗೆ ತಾನು ಮಾಡಿದ ವಾಗ್ದಾನವನ್ನೂ ಮತ್ತು ಕೃಪೆಯನ್ನೂ ಅವರ ಸಂತತಿಯವರಲ್ಲಿ ಸಾವಿರ ತಲೆಗಳವರೆಗೂ ನೆರವೇರಿಸುವವನಾಗಿಯೂ ಮತ್ತು ತನ್ನನ್ನು ತಿರಸ್ಕರಿಸಿದವರಿಗೆ ಪ್ರತಿಯಾಗಿ ನಾಶವನ್ನು ಉಂಟುಮಾಡುವವನಾಗಿಯೂ ಇದ್ದಾನೆಂದು ತಿಳಿದುಕೊಳ್ಳಿರಿ. ಹಗೆ ಮಾಡುವವರ ವಿಷಯದಲ್ಲಿ ತಡಮಾಡದೆ ಆಗಲೇ ಮುಯ್ಯಿತೀರಿಸುವನು.

ನಿಮ್ಮ ದೇವರಾದ ಯೆಹೋವನು ದೇವಾಧಿದೇವನಾಗಿಯೂ, ಕರ್ತರ ಕರ್ತನಾಗಿಯೂ ಇದ್ದಾನೆ. ಆತನು ಪರಮದೇವರೂ, ಪರಾಕ್ರಮಿಯೂ ಮತ್ತು ಭಯಂಕರನೂ ಆಗಿದ್ದಾನೆ. ಆತನು ಪಕ್ಷಪಾತ ಮಾಡುವವನಲ್ಲ ಹಾಗೂ ಲಂಚತೆಗೆದುಕೊಳ್ಳುವವನಲ್ಲ.

ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡೆಸುವುದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಮತ್ತು ಯಥಾರ್ಥನೂ ಆಗಿದ್ದಾನೆ.

ಆದಿಯಿಂದಲೂ ದೇವರೇ ನಿಮಗೆ ನಿವಾಸಸ್ಥಾನವಾಗಿದ್ದಾನಲ್ಲಾ; ಸದಾ ದೇವರ ಹಸ್ತವೇ ನಿಮಗೆ ಆಧಾರ. ಆತನು “ನಿಮ್ಮೆದುರಿನಿಂದ ಶತ್ರುಗಳನ್ನು ಹೊರಡಿಸಿ ಅವರನ್ನು ಸಂಹರಿಸಿರಿ” ಎಂದು ಆಜ್ಞಾಪಿಸಿದನು;

“ಯೆಹೋವನಂಥ ಪರಿಶುದ್ಧನು ಇಲ್ಲವೇ ಇಲ್ಲ; ನಿನ್ನ ಹೊರತು ದೇವರು ಯಾರೂ ಇಲ್ಲ ನಮ್ಮ ದೇವರಂತಹ ಸಮಾನವಾದ ಆಶ್ರಯವಿಲ್ಲ.

“ದೇವರು ನಿಜವಾಗಿ ಭೂಲೋಕದಲ್ಲಿ ವಾಸಿಸುವನೋ? ಆಕಾಶವೂ ಉನ್ನತೋನ್ನತವಾದ ಆಕಾಶವೂ ನಿನ್ನ ವಾಸಕ್ಕೆ ಸಾಲದು. ಹೀಗಿರುವಲ್ಲಿ ನಾನು ಕಟ್ಟಿಸಿದ ಈ ಮಂದಿರವು ಹೇಗೆ ಸಾಕಾದೀತು?

ಆದರೂ ಯೆಹೋವನು ಅವರನ್ನು ಸಂಪೂರ್ಣವಾಗಿ ಹಾಳುಮಾಡಲಿಲ್ಲ. ಅವರನ್ನು ಈ ಕಾಲದಲ್ಲಿಯೂ ತನ್ನ ಸನ್ನಿಧಿಯಿಂದ ತಳ್ಳಿಬಿಡಲಿಲ್ಲ. ತಾನು ಅಬ್ರಹಾಮ್, ಇಸಾಕ್, ಯಾಕೋಬರೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ನೆನಪು ಮಾಡಿಕೊಂಡು ಅವರಿಗೆ ದಯೆ ತೋರಿಸಿ, ಅವರ ಮೇಲೆ ಅನುಕಂಪಗೊಂಡನು.

ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನು ಒಳ್ಳೆಯವನು; ಆತನ ಕೃಪೆಯು ಶಾಶ್ವತವಾಗಿರುವುದು.

ನನ್ನ ಮಗನಾದ ಸೊಲೊಮೋನನೇ, ನೀನಂತೂ ನಿನ್ನ ತಂದೆಯ ದೇವರನ್ನು ಅರಿತುಕೊಂಡು ಸಂಪೂರ್ಣಹೃದಯದಿಂದಲೂ, ಮನಸ್ಸಂತೋಷದಿಂದಲೂ ಆತನನ್ನೇ ಸೇವಿಸು. ಯೆಹೋವನು ಎಲ್ಲಾ ಹೃದಯಗಳನ್ನು ವಿಚಾರಿಸುವವನೂ, ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವನೂ ಆಗಿರುತ್ತಾನಲ್ಲಾ. ನೀನು ಆತನನ್ನು ಹುಡುಕುವುದಾದರೆ ಆತನು ನಿನಗೆ ಸಿಕ್ಕುವನು. ಆತನನ್ನು ಕಡೆಗಣಿಸಿದರೆ ಆತನು ನಿನ್ನನ್ನು ಶಾಶ್ವತವಾಗಿ ತಳ್ಳಿಬಿಡುವನು.

ಯೆಹೋವನೇ, ಎಲ್ಲಾ ಮಹಿಮೆ, ವೈಭವ, ಪರಾಕ್ರಮ, ಪ್ರಭಾವ, ಪ್ರತಾಪ, ಪ್ರತಿಭೆ ಎಲ್ಲವೂ ನಿನ್ನವೆ. ಭೂಮ್ಯಾಕಾಶಗಳಲ್ಲಿ ಇರುವದೆಲ್ಲಾ ನಿನ್ನದೇ. ಯೆಹೋವನೇ ರಾಜ್ಯವು ನಿನ್ನದು. ನೀನು ಮಹೋನ್ನತನಾಗಿ ಸರ್ವವನ್ನು ಆಳುವವನಾಗಿರುತ್ತೀ. ಪ್ರಭಾವ ಐಶ್ವರ್ಯಗಳು ನಿನ್ನ ಸನ್ನಿಧಿಯಿಂದ ಬರುತ್ತವೆ. ನೀನು ಸರ್ವಾಧಿಕಾರಿಯು. ಬಲಪರಾಕ್ರಮಗಳು ನಿನ್ನ ಹಸ್ತದಲ್ಲಿರುತ್ತವೆ. ಎಲ್ಲಾ ಮಹಿಮೆಗೂ, ಶಕ್ತಿಗೂ ನೀನೇ ಮೂಲನು.

“ಯೆಹೋವನೇ, ನಮ್ಮ ಪೂರ್ವಿಕರ ದೇವರೇ, ಪರಲೋಕದಲ್ಲಿ ದೇವರಾಗಿ ಇರುವಾತನು ನೀನಲ್ಲವೋ? ನೀನು ಜನಾಂಗಗಳನ್ನೂ, ಎಲ್ಲಾ ರಾಜ್ಯಗಳನ್ನು ಆಳುವವನಾಗಿರುವೆ. ಬಲ, ಪರಾಕ್ರಮಗಳು ನಿನ್ನ ಕೈಗಳಲ್ಲಿ ಇರುತ್ತವೆ: ನಿನ್ನೆದುರಿನಲ್ಲಿ ನಿಲ್ಲುವವರು ಯಾರಿದ್ದಾರೆ?

ಯೆಹೋವನೇ, ಇಸ್ರಾಯೇಲ್ ದೇವರೇ, ಈಗಿರುವಷ್ಟು ಜನರನ್ನು ನಮ್ಮಲ್ಲಿ ಉಳಿಸಿದ್ದರಿಂದ ನೀನು ಧರ್ಮಸ್ವರೂಪನೆಂದು ಪ್ರಕಟವಾಯಿತು. ನಾವಾದರೋ ನಿನ್ನ ದೃಷ್ಟಿಯಲ್ಲಿ ಅಪರಾಧಿಗಳು. ಈ ನಮ್ಮ ದುಷ್ಕೃತ್ಯದ ನಿಮಿತ್ತವಾಗಿ ನಿನ್ನೆದುರಿನಲ್ಲಿ ನಿಲ್ಲಲಾರೆವು” ಎಂದು ಬೇಡಿಕೊಂಡೆನು.

ಯೆಹೋವನೇ ನೀನೊಬ್ಬನೇ ದೇವರು; ನೀನು ಉನ್ನತೋನ್ನತವಾದ ಆಕಾಶವನ್ನೂ, ಅದರ ಸೈನ್ಯವನ್ನೂ, ಭೂಮಿಯನ್ನೂ ಅದರ ಮೇಲಿರುವುದನ್ನೂ, ಸಮುದ್ರಗಳನ್ನೂ ಎಲ್ಲಾ ಜಲಚರಗಳನ್ನೂ ಉಂಟುಮಾಡಿ, ಸಮಸ್ತ ಪ್ರಾಣಿಗಳಿಗೂ ಜೀವಕೊಡುವಾತನಾಗಿರುತ್ತೀ. ಆಕಾಶಸೈನ್ಯದವರು ನಿನ್ನನ್ನು ಆರಾಧಿಸುತ್ತಾರೆ.

ದೇವರ ಅಗಾಧಗಳನ್ನು ಕಂಡುಕೊಳ್ಳಬಲ್ಲೆಯಾ? ಸರ್ವಶಕ್ತನಾದ ದೇವರನ್ನು ಸಂಪೂರ್ಣವಾಗಿ ಗ್ರಹಿಸಿಕೊಳ್ಳಬಹುದೋ?

“ನೀನು ಸಕಲ ಕಾರ್ಯಗಳನ್ನು ನಡೆಸಬಲ್ಲೆಯೆಂತಲೂ, ಯಾವ ಸಂಕಲ್ಪವೂ ನಿನಗೆ ಅಸಾಧ್ಯವಲ್ಲವೆಂತಲೂ ತಿಳಿದುಕೊಂಡೇ ಇದ್ದೇನೆ.

ಪರಲೋಕದಲ್ಲಿ ಆಸೀನನಾಗಿರುವಾತನು ಅದಕ್ಕೆ ನಗುವನು; ಕರ್ತನು ಅವರನ್ನು ಪರಿಹಾಸ್ಯಮಾಡುವನು.

ದೇವರು ನ್ಯಾಯಕ್ಕೆ ಸರಿಯಾಗಿ ತೀರ್ಪುಕೊಡುವವನು; ಆತನು ಯಾವಾಗಲೂ ದುಷ್ಟರ ವಿಷಯದಲ್ಲಿ ಕೋಪವುಳ್ಳವನು.

ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನದು. ದುರ್ಮತಿಗಳು ತಮ್ಮ ಮನಸ್ಸಿನಲ್ಲಿ, “ದೇವರೇ ಇಲ್ಲ” ಎಂದು ಅಂದುಕೊಳ್ಳುತ್ತಾರೆ; ಅವರು ಕೆಟ್ಟುಹೋದವರು; ಹೇಯವಾದ ಅಕ್ರಮಗಳನ್ನು ನಡೆಸುತ್ತಾರೆ. ಅವರಲ್ಲಿ ಒಳ್ಳೆಯದನ್ನು ಮಾಡುವವರೇ ಇಲ್ಲ. ಮನುಷ್ಯರಲ್ಲಿ ತನ್ನ ಸಾನ್ನಿಧ್ಯವನ್ನು ಅಪೇಕ್ಷಿಸುವ ಬುದ್ಧಿವಂತರು ಇದ್ದಾರೋ, ಎಂದು ಯೆಹೋವನು ಆಕಾಶದಿಂದ ಮನುಷ್ಯರನ್ನು ನೋಡಲಾಗಿ, ಒಳ್ಳೆಯದನ್ನು ಮಾಡುವವನು ಇಲ್ಲ, ಒಬ್ಬನಾದರೂ ಇಲ್ಲ. ಪ್ರತಿಯೊಬ್ಬನೂ ದಾರಿತಪ್ಪಿದವನು, ಎಲ್ಲರೂ ಕೆಟ್ಟು ಹೋದವರೇ.

ಭುಜಬಲವನ್ನು ಪ್ರಯೋಗಿಸಿ, ಶರಣಾಗತರನ್ನು ವಿರೋಧಿಗಳಿಂದ ರಕ್ಷಿಸುವಾತನೇ, ನಿನ್ನ ಪ್ರೀತಿಯನ್ನು ವಿಶೇಷವಾಗಿ ತೋರಿಸು.

ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ. ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ.

ದಾವೀದನ ಕೀರ್ತನೆ. ಯೆಹೋವನು ನನಗೆ ಕುರುಬನು; ಕೊರತೆಪಡೆನು.

ಯೆಹೋವನ ಧ್ವನಿಯು ಎಷ್ಟೋ ಬಲವುಳ್ಳದ್ದು, ಎಷ್ಟೋ ಗಂಭೀರವಾದದ್ದು.

ಯೆಹೋವನು ಆಕಾಶದಿಂದ ಮನುಷ್ಯರೆಲ್ಲರನ್ನು ನೋಡುತ್ತಾನೆ; ತಾನಿರುವ ಸ್ಥಾನದಿಂದ ಭೂನಿವಾಸಿಗಳೆಲ್ಲರನ್ನು ದೃಷ್ಟಿಸುತ್ತಾನೆ.

ದುಷ್ಟನು ನೀತಿವಂತನಿಗೆ ವಿರುದ್ಧವಾಗಿ ಆಲೋಚಿಸುತ್ತಾನೆ; ಅವನನ್ನು ನೋಡಿ ಹಲ್ಲುಕಡಿಯುತ್ತಾನೆ. ಆದರೆ ಕರ್ತನು ಅವನಿಗೆ ಶಿಕ್ಷಾಕಾಲ ಬರುತ್ತದೆಂದು ನಗುತ್ತಾನೆ.

ಏಕೆಂದರೆ, ದೇವರು ಭೂಲೋಕಕ್ಕೆಲ್ಲಾ ರಾಜನು; ಆತನನ್ನು ಜ್ಞಾನಯುಕ್ತರಾಗಿ ಕೀರ್ತಿಸಿರಿ. ದೇವರು ಸರ್ವಾಧಿಪತ್ಯವನ್ನು ವಹಿಸಿಕೊಂಡಿದ್ದಾನೆ; ಆತನು ತನ್ನ ಪರಿಶುದ್ಧ ಸಿಂಹಾಸನದಲ್ಲಿ ಆಸೀನನಾಗಿದ್ದಾನೆ.

ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಬೇಡ; ನಿನ್ನ ಪರಿಶುದ್ಧಾತ್ಮವನ್ನು ನನ್ನಿಂದ ತೆಗೆಯಬೇಡ.

ಯೆಹೋವನೇ, ನನ್ನ ಮೊರೆಯನ್ನು ಲಾಲಿಸು; ನಿನ್ನ ಕೃಪೆಯು ಶುಭಕರವಾಗಿದೆಯಲ್ಲಾ. ಕರುಣಾನಿಧಿಯೇ, ನನ್ನನ್ನು ಕಟಾಕ್ಷಿಸು.

ಆತನ ಪ್ರಭಾವವುಳ್ಳ ನಾಮಕ್ಕೆ ಸದಾಕಾಲಕ್ಕೂ ಸ್ತುತಿ ಇರಲಿ; ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿರಲಿ. ಆಮೆನ್. ಆಮೆನ್.

ಕರ್ತನೇ, ನೀನು ಒಳ್ಳೆಯವನೂ, ಕ್ಷಮಿಸುವವನೂ, ನಿನಗೆ ಮೊರೆಯಿಡುವವರೆಲ್ಲರಲ್ಲಿ ಕೃಪಾಪೂರ್ಣನೂ ಆಗಿದ್ದಿಯಲ್ಲಾ.

ಕರ್ತನೇ, ದೇವರುಗಳಲ್ಲಿ ನಿನಗೆ ಸಮಾನನೇ ಇಲ್ಲ; ನಿನ್ನ ಕೃತ್ಯಗಳಿಗೆ ಸರಿಯಾದದ್ದು ಇನ್ನೊಂದಿಲ್ಲ. ಕರ್ತನೇ, ನಿನ್ನಿಂದುಂಟಾದ ಎಲ್ಲಾ ಜನಾಂಗಗಳು ಬಂದು, ನಿನಗೆ ಅಡ್ಡಬಿದ್ದು ನಿನ್ನ ನಾಮವನ್ನು ಘನಪಡಿಸುವವು. ಮಹೋನ್ನತನು, ಮಹತ್ಕಾರ್ಯಗಳನ್ನು ನಡೆಸುವವನು ನೀನು; ನೀನೊಬ್ಬನೇ ದೇವರು.

ಕರ್ತನೇ, ನೀನು ಕನಿಕರವೂ, ದಯೆಯೂ ಉಳ್ಳ ದೇವರು; ದೀರ್ಘಶಾಂತನು, ಬಹಳ ಪ್ರೀತಿಯೂ, ನಂಬಿಕೆಯೂ ಉಳ್ಳವನು.

ನೀತಿ ಮತ್ತು ನ್ಯಾಯಗಳು ನಿನ್ನ ಸಿಂಹಾಸನದ ಅಸ್ತಿವಾರವು; ನಿನ್ನ ಸಾನ್ನಿಧ್ಯದೂತರು ಪ್ರೀತಿ ಮತ್ತು ಸತ್ಯತೆಗಳೇ.

ಬೆಟ್ಟಗಳು ಉಂಟಾಗುವುದಕ್ಕಿಂತ ಮೊದಲೇ, ಭೂಮಿಯೂ ಅದರ ದೇಶಗಳೂ ನಿರ್ಮಾಣವಾಗುವುದಕ್ಕಿಂತ ಮೊದಲೇ, ಯುಗಯುಗಾಂತರಗಳಲ್ಲಿಯೂ ನೀನೇ ದೇವರು.

ಯೆಹೋವನೇ, ನೀನು ಭೂಲೋಕದ ಸರ್ವಾಧಿಕಾರಿ; ಎಲ್ಲಾ ದೇವರುಗಳಲ್ಲಿ ಮಹೋನ್ನತನು ನೀನೇ.

ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ; ಜನಾಂಗಗಳು ನಡುಗಲಿ. ಕೆರೂಬಿಯರ ಮಧ್ಯದಲ್ಲಿ ಆಸೀನನಾಗಿರುವಾತನು ಆಳುತ್ತಾನೆ; ಭೂಮಿಯು ಕಂಪಿಸಲಿ.

ನಮ್ಮ ಯೆಹೋವ ದೇವರನ್ನು ಘನಪಡಿಸಿರಿ; ಆತನ ಪರಿಶುದ್ಧಪರ್ವತದ ಕಡೆಗೆ ಅಡ್ಡಬೀಳಿರಿ. ನಮ್ಮ ಯೆಹೋವ ದೇವರು ಪರಿಶುದ್ಧನು.

ಯೆಹೋವನು ಒಳ್ಳೆಯವನು; ಆತನ ಕೃಪೆಯು ಯುಗಯುಗಕ್ಕೂ, ಆತನ ಸತ್ಯತೆಯು ತಲತಲಾಂತರಕ್ಕೂ ಇರುವವು.

ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದಿ; ಗಗನಮಂಡಲವು ನಿನ್ನ ಕೈಕೆಲಸವಾಗಿದೆ. ಅವು ನಾಶವಾಗುವವು; ಆದರೆ ನೀನು ಶಾಶ್ವತವಾಗಿರುತ್ತಿ. ಅವೆಲ್ಲವೂ ವಸ್ತ್ರದಂತೆ ಹಳೆಯದಾಗುವವು. ಉಡುಪಿನಂತೆ ಅವುಗಳನ್ನು ಬದಲಿಸುತ್ತಿ; ಅವು ಮಾರ್ಪಡುವವು. ನೀನಾದರೋ ಏಕರೀತಿಯಾಗಿರುತ್ತಿ; ನಿನ್ನ ವರ್ಷಗಳು ಮುಗಿದುಹೋಗುವುದಿಲ್ಲ.

ಯೆಹೋವನು ಕನಿಕರವೂ, ದಯೆಯೂ, ದೀರ್ಘಶಾಂತಿಯೂ, ಪೂರ್ಣಪ್ರೀತಿಯೂ ಉಳ್ಳವನು.

ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ, ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ಕೃಪೆಯು ಅಷ್ಟು ಅಪಾರವಾಗಿದೆ. ಪೂರ್ವಕ್ಕೂ, ಪಶ್ಚಿಮಕ್ಕೂ ಎಷ್ಟು ದೂರವೋ, ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ.

ಆದರೆ ಯೆಹೋವನಲ್ಲಿ ಭಯಭಕ್ತಿಯುಳ್ಳವರ ಮೇಲೆ, ಆತನ ದಯೆಯು ಯುಗಯುಗಾಂತರಗಳವರೆಗೂ ಇರುತ್ತದೆ. ಆತನ ನಿಬಂಧನೆಗಳನ್ನು ಕೈಕೊಂಡು, ಆತನ ವಿಧಿಗಳನ್ನು ನೆನಪಿನಲ್ಲಿಟ್ಟುಕೊಂಡು ನಡೆಯುವವರ ಮಕ್ಕಳು ಮೊಮ್ಮಕ್ಕಳವರೆಗೂ ಆತನು ತನ್ನ ನೀತಿಯನ್ನು ಸಾಧಿಸುವನು. ಯೆಹೋವನು ಮೇಲಣ ಲೋಕದಲ್ಲಿ ತನ್ನ ಸಿಂಹಾಸನವನ್ನು ಸ್ಥಾಪಿಸಿದ್ದಾನೆ; ಆತನು ಸಮಸ್ತವನ್ನೂ ಆಳುತ್ತಾನೆ.

ನನ್ನ ಮನವೇ, ಯೆಹೋವನನ್ನು ಕೊಂಡಾಡು. ಯೆಹೋವನೇ, ನನ್ನ ದೇವರೇ, ನೀನು ಸರ್ವೋತ್ತಮನು; ಪ್ರಭಾವ ಮತ್ತು ಮಹತ್ವಗಳಿಂದ ಭೂಷಿತನಾಗಿರುವೆ. ಬೆಳಕನ್ನು ವಸ್ತ್ರದಂತೆ ಹೊದ್ದುಕೊಂಡಿರುವೆ; ಆಕಾಶವನ್ನು ಗುಡಾರದಂತೆ ಎತ್ತಿ ಹರಡಿರುವೆ.

ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾಗಿರುವುದು.

ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನು; ಆತನ ಪ್ರಭಾವವು ಮೇಲಣ ಲೋಕಕ್ಕಿಂತಲೂ ಉನ್ನತವಾಗಿದೆ.

ನಮ್ಮ ದೇವರು ಪರಲೋಕದಲ್ಲಿದ್ದಾನೆ; ಆತನು ತನಗೆ ಬೇಕಾದುದನ್ನೆಲ್ಲಾ ಮಾಡುತ್ತಾನೆ.

ಯೆಹೋವನು ಭೂಮಿಯಲ್ಲಿಯೂ, ಆಕಾಶದಲ್ಲಿಯೂ, ಸಮುದ್ರಗಳಲ್ಲಿಯೂ, ಬೇರೆ ಎಲ್ಲಾ ಜಲರಾಶಿಗಳಲ್ಲಿಯೂ ತನಗೆ ಬೇಕಾದದ್ದನ್ನು ಮಾಡುತ್ತಾನೆ.

ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ, ಆತನು ಒಳ್ಳೆಯವನು. ಆತನ ಪ್ರೀತಿಯು ಶಾಶ್ವತವಾದದ್ದು.

ಕರ್ತರ ಕರ್ತನಿಗೆ ಕೃತಜ್ಞತಾಸ್ತುತಿ ಮಾಡಿರಿ, ಆತನ ಪ್ರೀತಿಯು ಶಾಶ್ವತವಾದದ್ದು.

ಆತನು ಆಕಾಶವನ್ನು ಜ್ಞಾನದಿಂದ ನಿರ್ಮಿಸಿದ್ದಾನೆ, ಆತನ ಪ್ರೀತಿಯು ಶಾಶ್ವತವಾದದ್ದು.

ಪರಲೋಕದಲ್ಲಿರುವ ದೇವರಿಗೆ ಕೃತಜ್ಞತಾಸ್ತುತಿ ಮಾಡಿರಿ, ಆತನ ಪ್ರೀತಿಯು ಶಾಶ್ವತವಾದದ್ದು.

ನಾನು ನಿನ್ನ ಆತ್ಮಕ್ಕೆ ತಪ್ಪಿಸಿಕೊಳ್ಳುವಂತೆ ಎಲ್ಲಿಗೆ ಹೋಗಲಿ? ನಿನ್ನ ಕಣ್ಣಿಗೆ ಮರೆಯಾಗುವಂತೆ ಎಲ್ಲಿಗೆ ಓಡಲಿ? ಮೇಲಣ ಲೋಕಕ್ಕೆ ಏರಿಹೋದರೆ ಅಲ್ಲಿ ನೀನಿರುತ್ತಿ, ಪಾತಾಳಕ್ಕೆ ಹೋಗಿ ಮಲಗಿಕೊಂಡೇನೆಂದರೆ ಅಲ್ಲಿಯೂ ನೀನಿರುವಿ.

ಯೆಹೋವನು ಮಹೋನ್ನತನೂ, ಮಹಾಸ್ತುತಿಪಾತ್ರನೂ ಆಗಿದ್ದಾನೆ, ಆತನ ಮಹತ್ತು ಅಪಾರವಾದದ್ದು.

ಅವರು ನಿನ್ನ ಮಹಾಪ್ರಭಾವಯುಕ್ತವಾದ ಮಹಿಮೆಯನ್ನು ಕೊಂಡಾಡುವರು, ನಿನ್ನ ಅದ್ಭುತಕಾರ್ಯಗಳನ್ನೂ ಧ್ಯಾನಿಸುವೆನು.

ಯೆಹೋವನು ದಯೆಯು, ಕನಿಕರವು ಉಳ್ಳವನು, ದೀರ್ಘಶಾಂತನು, ಪ್ರೀತಿಪೂರ್ಣನು ಆಗಿದ್ದಾನೆ.

ಯೆಹೋವನ ಮಾರ್ಗಗಳೆಲ್ಲಾ ನೀತಿಯುಳ್ಳವುಗಳು, ಆತನು ಎಲ್ಲಾ ಕಾರ್ಯಗಳಲ್ಲಿ ಕೃಪೆ ತೋರಿಸುವವನು. ಯೆಹೋವನಿಗೆ ಮೊರೆಯಿಡುವವರು, ಯಥಾರ್ಥವಾಗಿ ಮೊರೆಯಿಡುವುದಾದರೆ ಆತನು ಹತ್ತಿರವಾಗಿಯೇ ಇದ್ದಾನೆ.

ಭೂಮಿ, ಆಕಾಶ, ಸಾಗರ, ಜಲಚರ ಇವುಗಳನ್ನು ನಿರ್ಮಿಸಿದವನೂ, ವಾಗ್ದಾನವನ್ನು ಯಾವಾಗಲೂ ನೆರವೇರಿಸುವವನೂ, ಹಿಂಸೆಗೆ ಗುರಿಯಾದವರ ನ್ಯಾಯವನ್ನು ಸ್ಥಾಪಿಸುವವನೂ, ಹಸಿದವರಿಗೆ ಆಹಾರ ಕೊಡುವವನೂ ಆತನೇ. ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುತ್ತಾನೆ.

ಅವನು ನಕ್ಷತ್ರಗಳ ಸಂಖ್ಯೆಯನ್ನು ಗೊತ್ತುಮಾಡಿ, ಪ್ರತಿಯೊಂದಕ್ಕೂ ಹೆಸರಿಟ್ಟಿದ್ದಾನೆ. ನಮ್ಮ ಕರ್ತನು ದೊಡ್ಡವನೂ, ಪರಾಕ್ರಮಿಯೂ ಆಗಿದ್ದಾನೆ, ಆತನ ಜ್ಞಾನವು ಅಪರಿಮಿತವಾಗಿದೆ.

ನನ್ನನ್ನು ಪ್ರೀತಿಸುವವರನ್ನು ನಾನು ಪ್ರೀತಿಸುತ್ತೇನೆ, ಆತುರದಿಂದ ಹುಡುಕುವವರು ನನ್ನನ್ನು ಕಂಡುಕೊಳ್ಳುವರು.

ಯೆಹೋವನ ದೃಷ್ಟಿಯು ಎಲ್ಲೆಲ್ಲಿಯೂ ಇರುವುದು, ಆತನು ಕೆಟ್ಟವರನ್ನು ಮತ್ತು ಒಳ್ಳೆಯವರನ್ನು ನೋಡುತ್ತಲೇ ಇರುವನು.

ಆಕಾಶಕ್ಕೆ ಏರಿ ಇಳಿದಿರುವವನಾರು? ಮುಷ್ಠಿಯಲ್ಲಿ ಗಾಳಿಯನ್ನು ಕೂಡಿಸಿರುವವರು ಯಾರು? ತನ್ನ ಬಟ್ಟೆಯಲ್ಲಿ ನೀರನ್ನು ಮೂಟೆಕಟ್ಟಿರುವವರು ಯಾರು? ಭೂಮಿಯ ಎಲ್ಲೆಗಳನ್ನೆಲ್ಲಾ ಸ್ಥಾಪಿಸಿರುವವರು ಯಾರು? ಅವನ ಹೆಸರೇನು? ಅವನ ಮಗನ ಹೆಸರೇನು? ನೀನೇ ಬಲ್ಲವನು.

ಗವಿಯೊಳಗೆ ನುಗ್ಗು, ಯೆಹೋವನ ಭಯಂಕರತನಕ್ಕೂ, ಅತ್ಯುನ್ನತ ಮಹಿಮೆಗೂ ಹೆದರಿ ಭೂಮಿಯಲ್ಲಿ ಅವಿತುಕೋ.

ಆಗ ಒಬ್ಬನು ಮತ್ತೊಬ್ಬನಿಗೆ, “ಸೇನಾಧೀಶ್ವರನಾದ ಯೆಹೋವನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು, ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿದೆ” ಎಂದು ಕೂಗಿ ಹೇಳಿದನು.

ಸೇನಾಧೀಶ್ವರನಾದ ಯೆಹೋವನನ್ನೇ ಪ್ರತಿಷ್ಠೆಪಡಿಸಿರಿ; ಆತನಿಗೆ ಹೆದರಿಕೊಳ್ಳಿರಿ, ನಡುಗಿರಿ.

ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವುದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರೂ, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬುದು ಆತನ ಹೆಸರು.

ಆ ಅಂಕುರದ ಮೇಲೆ ಜ್ಞಾನ ವಿವೇಕದಾಯಕ ಆತ್ಮ, ಆಲೋಚನಾ ಪರಾಕ್ರಮಗಳನ್ನು ಹುಟ್ಟಿಸುವ ಆತ್ಮ, ತಿಳಿವಳಿಕೆಯನ್ನೂ ಮತ್ತು ಯೆಹೋವನ ಭಯವನ್ನೂ ಉಂಟುಮಾಡುವ ಆತ್ಮ, ಅಂತು ಯೆಹೋವನ ಆತ್ಮವೇ ನೆಲೆಗೊಂಡಿರುವುದು.

ಹೀಗಿರಲು ಯೆಹೋವನು ನಿಮಗೆ ಕೃಪೆತೋರಿಸಬೇಕೆಂದು ಕಾದಿರುವನು; ನಿಮ್ಮನ್ನು ಕರುಣಿಸಬೇಕೆಂದು ಉನ್ನತೋನ್ನತವಾಗಿ ಕಾಣಿಸಿಕೊಳ್ಳುವನು; ಯೆಹೋವನು ನ್ಯಾಯಸ್ವರೂಪನಾದ ದೇವರು; ಆತನಿಗಾಗಿ ಕಾದಿರುವವರೆಲ್ಲರೂ ಧನ್ಯರು.

ಏಕೆಂದರೆ ಯೆಹೋವನು ನಮ್ಮ ನ್ಯಾಯಾಧಿಪತಿ, ಯೆಹೋವನು ನಮಗೆ ಆಜ್ಞೆಕೊಡುವಾತನು, ಯೆಹೋವನು ನಮ್ಮ ರಾಜನು, ಆತನೇ ನಮ್ಮನ್ನು ರಕ್ಷಿಸುವನು.

ಸಕಲ ಜನಾಂಗಗಳು ಆತನ ದೃಷ್ಟಿಯಲ್ಲಿ ಏನೂ ಇಲ್ಲದಂತಿವೆ, ಅವು ಆತನ ಎಣಿಕೆಯಲ್ಲಿ ಶುದ್ಧಶೂನ್ಯವೇ. ಹೀಗಿರಲು ದೇವರನ್ನು ಯಾರಿಗೆ ಹೋಲಿಸುವಿರಿ? ಅಥವಾ ಯಾವ ರೂಪವನ್ನು ಆತನಿಗೆ ಸಮಾನ ಮಾಡುವಿರಿ?

ಭೂಮಂಡಲ ನಿವಾಸಿಗಳು ಮಿಡತೆಗಳಂತೆ ಸಣ್ಣಗೆ ಕಾಣಿಸುವಷ್ಟು ಉನ್ನತವಾದ ಆಕಾಶದಲ್ಲಿ ಆತನು ಆಸೀನನಾಗಿದ್ದಾನೆ; ಆಕಾಶಮಂಡಲವನ್ನು ನಾರುಬಟ್ಟೆಯಂತೆ ಹರಡಿ ನಿವಾಸದ ಗುಡಾರದಂತೆ ಎತ್ತಿ ಕಟ್ಟಿದ್ದಾನೆ.

ನೀನು ಗ್ರಹಿಸಲಿಲ್ಲವೋ? ಕೇಳಲಿಲ್ಲವೋ? ಯೆಹೋವನು ನಿರಂತರ ದೇವರೂ, ಭೂಮಿಯ ಕಟ್ಟಕಡೆಗಳನ್ನು ನಿರ್ಮಿಸಿದವನೂ ಆಗಿದ್ದಾನೆ. ಆತನು ದಣಿದು ಬಳಲುವುದಿಲ್ಲ, ಆತನ ವಿವೇಕವು ಪರಿಶೋಧನೆಗೆ ಅಗಮ್ಯ.

ನಾನೇ ಯೆಹೋವನು; ಇದೇ ನನ್ನ ನಾಮವು; ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಸಲ್ಲಗೊಡಿಸೆನು, ನನ್ನ ಸ್ತೋತ್ರವನ್ನು ವಿಗ್ರಹಗಳ ಪಾಲು ಮಾಡೆನು.

ಯೆಹೋವನ ಮಾತೇನೆಂದರೆ, ‘ನೀವು ನನ್ನ ಸಾಕ್ಷಿ, ನಾನು ಆರಿಸಿಕೊಂಡಿರುವ ಸೇವಕನು. ನೀವು ನನ್ನನ್ನು ತಿಳಿದು ನಂಬಿ, ನನ್ನನ್ನೇ ದೇವರು ಎಂದು ಗ್ರಹಿಸುವ ಹಾಗೆ ಇದನ್ನು ನಡೆಸಿದೆನು. ನನಗಿಂತ ಮೊದಲು ಯಾವ ದೇವರೂ ಇರಲಿಲ್ಲ, ನನ್ನ ಅನಂತರದಲ್ಲಿಯೂ ಇರುವುದಿಲ್ಲ. ನಾನೇ, ನಾನೇ ಯೆಹೋವನು, ನನ್ನ ಹೊರತು ಯಾವ ರಕ್ಷಕನೂ ಇಲ್ಲ.

ಇಸ್ರಾಯೇಲರ ಅರಸನೂ, ವಿಮೋಚಕನೂ ಆಗಿರುವ ಸೇನಾಧೀಶ್ವರನಾದ ಯೆಹೋವನು ಹೀಗೆನ್ನುತ್ತಾನೆ, “ನಾನೇ ಆದಿಯೂ, ನಾನೇ ಅಂತ್ಯವೂ. ನನ್ನ ಹೊರತು ಬೇರೆ ಯಾವ ದೇವರೂ ಇಲ್ಲ.

ನಿನ್ನನ್ನು ಗರ್ಭದಿಂದಲೂ ರೂಪಿಸುತ್ತಾ ಬಂದಿರುವ ನಿನ್ನ ವಿಮೋಚಕನಾದ ಯೆಹೋವನು ಹೀಗೆನ್ನುತ್ತಾನೆ, “ಸರ್ವವನ್ನು ಉಂಟುಮಾಡಿದ ಕರ್ತನಾದ ಯೆಹೋವನು ನಾನೇ, ನಾನೊಬ್ಬನೇ ಗಗನಮಂಡಲವನ್ನು ಹರಡಿ, ಭೂಮಂಡಲವನ್ನು ವಿಸ್ತರಿಸಿದ್ದೇನೆ.

ಪೂರ್ವದಿಂದ ಪಶ್ಚಿಮದ ತನಕ ಇರುವವರೆಲ್ಲರೂ ಇದನ್ನು ನೋಡಿ, ನನ್ನ ಹೊರತು ಯಾರೂ ಇಲ್ಲ, ನಾನೇ ಯೆಹೋವನು. ನಾನು ಬೆಳಕನ್ನು, ಕತ್ತಲನ್ನು ನಿರ್ಮಿಸಿದವನು, ಮೇಲನ್ನೂ, ಕೇಡನ್ನೂ ಬರಮಾಡುವವನು, ಈ ಸಮಸ್ತ ಕಾರ್ಯಗಳನ್ನು ನಡೆಸುವ ಯೆಹೋವನು ನಾನೇ ಎಂದು ತಿಳಿದುಕೊಳ್ಳುವರು.

ಆಕಾಶಮಂಡಲವನ್ನು ಸೃಷ್ಟಿಸಿದ ಯೆಹೋವನ ಮಾತನ್ನು ಕೇಳಿರಿ, ಆತನೇ ದೇವರು. ಭೂಲೋಕವನ್ನು ನಿರ್ಮಿಸಿ ರೂಪಿಸಿ ಸ್ಥಾಪಿಸಿದನು. ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು. ಈತನು ಹೀಗೆನ್ನುತ್ತಾನೆ, “ನಾನೇ ಯೆಹೋವನು, ಇನ್ನು ಯಾರೂ ಇಲ್ಲ.

ಹೇಳಿರಿ, ನಿಮ್ಮ ನ್ಯಾಯಗಳನ್ನು ಮುಂದಕ್ಕೆ ತನ್ನಿರಿ, ನಿಮ್ಮ ದೇವರುಗಳು ತಮ್ಮತಮ್ಮೊಳಗೆ ಆಲೋಚಿಸಿಕೊಳ್ಳಲಿ. ಪೂರ್ವದಿಂದಲೂ ಈ ಸಂಗತಿಯನ್ನು ಪ್ರಕಟಿಸಿದವರು ಯಾರು? ಅದು ನಡೆಯುವುದಕ್ಕೆ ಮೊದಲೇ ಯಾರು ತಿಳಿಸಿದರು? ಯೆಹೋವನಾದ ನಾನೇ ಅಲ್ಲವೇ? ನನ್ನ ಹೊರತು ಬೇರೆ ದೇವರು ಇಲ್ಲವೇ ಇಲ್ಲ, ನನ್ನ ಹೊರತಾಗಿ ಸತ್ಯಸ್ವರೂಪನೂ, ರಕ್ಷಕನಾದ ದೇವರು ಇಲ್ಲವೇ ಇಲ್ಲ. ಎಲ್ಲಾ ದಿಗಂತಗಳವರೇ, ನನ್ನ ಕಡೆಗೆ ತಿರುಗಿಕೊಳ್ಳಿರಿ, ರಕ್ಷಣೆಯನ್ನು ಹೊಂದಿಕೊಳ್ಳಿರಿ. ಏಕೆಂದರೆ ನಾನೇ ದೇವರು, ನನ್ನ ಹೊರತು ಯಾರೂ ಇಲ್ಲ.

ಪುರಾತನವಾದ ಹಳೆಯ ಸಂಗತಿಗಳನ್ನು ಜ್ಞಾಪಿಸಿಕೊಳ್ಳಿರಿ; ನಾನೇ ದೇವರು, ಇನ್ನು ಯಾರೂ ಇಲ್ಲ; ನಾನೇ ದೇವರು, ನನಗೆ ಸರಿಸಮಾನನು ಇಲ್ಲ. ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ. ‘ನನ್ನ ಸಂಕಲ್ಪವು ನಿಲ್ಲುವುದು, ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವೆನು’ ಎಂದು ಹೇಳಿ ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನಕಾಲದಲ್ಲಿಯೇ ಅರುಹಿದ್ದೇನೆ.

“ನಿನ್ನ ಸೃಷ್ಟಿಕರ್ತನೇ ನಿನ್ನ ಪತಿ, ಆತನ ಹೆಸರು ಸೇನಾಧೀಶ್ವರನಾದ ಯೆಹೋವ; ಇಸ್ರಾಯೇಲಿನ ಸದಮಲಸ್ವಾಮಿಯು ನಿನ್ನ ನ್ಯಾಯಸ್ಥಾಪಕನಾಗಿದ್ದಾನೆ; ಸರ್ವಲೋಕದ ದೇವರೆಂಬ ನಾಮಧೇಯವನ್ನು ಹೊಂದಿರುವನು.

ಯೆಹೋವನು ಹೀಗೆನ್ನುತ್ತಾನೆ, “ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ. ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ, ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ, ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ.

ಸದಮಲನೆನಿಸಿಕೊಂಡು ಶಾಶ್ವತಲೋಕದಲ್ಲಿ ನಿತ್ಯನಿವಾಸಿಯಾದ ಮಹೋನ್ನತನು ಹೀಗೆನ್ನುತ್ತಾನೆ, “ಉನ್ನತಲೋಕವೆಂಬ ಪವಿತ್ರಾಲಯದಲ್ಲಿ ವಾಸಿಸುವ ನಾನು, ಜಜ್ಜಿಹೋದ ದೀನಮನದೊಂದಿಗೆ ಇದ್ದುಕೊಂಡು, ದೀನನ ಆತ್ಮವನ್ನೂ ಜಜ್ಜಿಹೋದವನ ಮನಸ್ಸನ್ನೂ ಉಜ್ಜೀವಿಸುವವನಾಗಿದ್ದೇನೆ.

ಯೆಹೋವನು ಹೀಗೆನ್ನುತ್ತಾನೆ: “ಆಕಾಶವು ನನಗೆ ಸಿಂಹಾಸನ, ಭೂಮಿಯು ನನಗೆ ಪಾದಪೀಠ. ನೀವು ನನಗೆ ಇನ್ನೆಂಥಾ, ಮನೆಯನ್ನು ಕಟ್ಟಿಕೊಡುವಿರಿ? ನನ್ನ ವಿಶ್ರಾಂತಿಗೆ ತಕ್ಕ ಸ್ಥಳವು ಎಂಥದು?

ಯೆಹೋವನಾದರೋ ಸತ್ಯದೇವರು; ಆತನು ಚೈತನ್ಯಸ್ವರೂಪನಾದ ದೇವನೂ ಮತ್ತು ಶಾಶ್ವತ ರಾಜನೂ ಆಗಿದ್ದಾನೆ. ಆತನ ಕೋಪಕ್ಕೆ ಭೂಲೋಕವು ನಡುಗುತ್ತದೆ, ಜನಾಂಗಗಳು ಆತನ ರೋಷವನ್ನು ತಾಳಲಾರವು.

ಆತನು ತನ್ನ ಶಕ್ತಿಯಿಂದ ಭೂಮಿಯನ್ನು ನಿರ್ಮಿಸಿ, ತನ್ನ ಜ್ಞಾನದಿಂದ ಲೋಕವನ್ನು ಸ್ಥಾಪಿಸಿ, ತನ್ನ ವಿವೇಕದಿಂದ ಆಕಾಶಮಂಡಲವನ್ನು ಹರಡಿದ್ದಾನೆ.

ಈ ನಿಮಿತ್ತವಾಗಿ, ಇಗೋ, ಇದೊಂದೇ ಸಲ ನನ್ನ ಭುಜಬಲವನ್ನೂ ಪರಾಕ್ರಮವನ್ನೂ ಅವರಿಗೆ ತಿಳಿಯಪಡಿಸುವೆನು, ಹೌದು, ಗ್ರಹಿಸಮಾಡುವೆನು; ನನ್ನ ನಾಮಧೇಯವು “ಯೆಹೋವ” ಎಂದು ಅವರಿಗೆ ಗೊತ್ತಾಗುವುದು.

ದೂರದಲ್ಲಿಯೂ ಇರುವವನಲ್ಲವೋ? ನನ್ನ ಕಣ್ಣಿಗೆ ಬೀಳದಂತೆ ಯಾರಾದರೂ ಗುಪ್ತಸ್ಥಳಗಳಲ್ಲಿ ತನ್ನನ್ನು ತಾನೇ ಮರೆಮಾಡಿಕೊಂಡಾನೇ? ನಾನು ಭೂಮ್ಯಾಕಾಶಗಳಲ್ಲಿಯೂ ವ್ಯಾಪಿಸಿರುವವನಲ್ಲವೆ.”

‘ನಾನು ನಿನ್ನನ್ನು ಪ್ರೀತಿಸಿರುವುದು ಶಾಶ್ವತ ಪ್ರೇಮದಿಂದಲೇ; ಆದಕಾರಣ ನಿನ್ನನ್ನು ಮಮತೆಯಿಂದ ಸೆಳೆದುಕೊಂಡಿದ್ದೇನೆ,

ನೆರೆಹೊರೆಯವರೂ, ಅಣ್ಣತಮ್ಮಂದಿರೂ ಒಬ್ಬರಿಗೊಬ್ಬರು, ‘ಯೆಹೋವನ ಜ್ಞಾನವನ್ನು ಪಡೆಯಿರಿ’ ಎಂದು ಇನ್ನು ಮೇಲೆ ಬೋಧಿಸಬೇಕಾಗಿರುವುದಿಲ್ಲ; ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ನನ್ನ ಜ್ಞಾನವನ್ನು ಪಡೆದಿರುವರು. ನಾನು ಅವರ ಅಪರಾಧವನ್ನು ಕ್ಷಮಿಸಿ ಅವರ ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವುದಿಲ್ಲ. ಇದು ಯೆಹೋವನ ನುಡಿ” ಎಂಬುದೇ.

“ಆಹಾ! ಕರ್ತನಾದ ಯೆಹೋವನೇ! ನೀನು ಭುಜವನ್ನೆತ್ತಿ ನಿನ್ನ ಮಹಾ ಶಕ್ತಿಯಿಂದ ಭೂಮ್ಯಾಕಾಶಗಳನ್ನು ಸೃಷ್ಟಿಸಿದ್ದಿ; ಯಾವ ಕಾರ್ಯವೂ ನಿನಗೆ ಅಸಾಧ್ಯವಲ್ಲ. ನೀನು ಸಾವಿರಾರು ತಲೆಗಳವರೆಗೆ ದಯೆತೋರಿಸುವವನೂ, ತಂದೆಗಳ ದೋಷಫಲವನ್ನು ಅವರ ತರುವಾಯ ಮಕ್ಕಳ ಮಡಲಿಗೆ ಹಾಕುವವನೂ ಆಗಿದ್ದೀ. ನೀನು ಮಹಾ ಪರಾಕ್ರಮಿಯಾದ ದೇವರು; ಸೇನಾಧೀಶ್ವರನಾದ ಯೆಹೋವನೆಂಬುದು ನಿನ್ನ ಹೆಸರಾಗಿದೆ.

“ಇಗೋ, ನಾನು ಯೆಹೋವನು, ನರಪ್ರಾಣಿಗೆಲ್ಲಾ ದೇವರು; ನನಗೆ ಅಸಾಧ್ಯವಾದದ್ದುಂಟೋ?

“ದೇವರ ನಾಮಕ್ಕೆ ಯುಗಯುಗಾಂತರಗಳಲ್ಲಿಯೂ ಸ್ತುತಿಸ್ತೋತ್ರ ಉಂಟಾಗಲಿ! ಜ್ಞಾನ ತ್ರಾಣಗಳು ಆತನವುಗಳೇ. ಕಾಲ ಸಮಯಗಳನ್ನು ಮಾರ್ಪಡಿಸುತ್ತಾನೆ, ರಾಜರನ್ನು ಕಡೆಗಣಿಸುತ್ತಾನೆ, ನೆಲೆಸುವಂತೆ ಮಾಡುತ್ತಾನೆ; ಜ್ಞಾನಿಗಳ ಜ್ಞಾನವು, ವಿವೇಕಿಗಳ ವಿವೇಕವು ಆತನ ವರವೇ. ಆತನು ಅಗಾಧ ವಿಷಯಗಳನ್ನೂ ಗೂಢಾರ್ಥಗಳನ್ನೂ ಬಯಲಿಗೆ ತರುತ್ತಾನೆ; ಕಗ್ಗತ್ತಲೆಯಲ್ಲಿ ಅಡಗಿರುವುದೂ ಆತನಿಗೆ ಗೋಚರವಾಗುವುದು; ತೇಜಸ್ಸು ಆತನಲ್ಲೇ ನೆಲೆಗೊಂಡಿದೆ.

ನಾನು ನಿನ್ನನ್ನು ಶಾಶ್ವತವಾಗಿ ವರಿಸುವೆನು; ಹೌದು, ನೀತಿ, ನ್ಯಾಯ, ಪ್ರೀತಿ ಮತ್ತು ದಯೆಗಳಿಂದ ನಿನ್ನನ್ನು ವರಿಸುವೆನು.

ಯೆಹೋವನೆಂಬುದೇ ಆತನನ್ನು ಸ್ಮರಿಸುವ ನಾಮಧೇಯ.

ಇಗೋ, ಪರ್ವತಗಳನ್ನು ರೂಪಿಸಿ, ಗಾಳಿಯನ್ನು ನಿರ್ಮಿಸಿ, ತನ್ನ ಸಂಕಲ್ಪವನ್ನು ಮನುಷ್ಯರಿಗೆ ವ್ಯಕ್ತಗೊಳಿಸಿ, ಉದಯವನ್ನು ಅಂಧಕಾರವನ್ನಾಗಿ ಮಾಡಿ ಮತ್ತು ಭೂಮಿಯ ಉನ್ನತ ಪ್ರದೇಶಗಳನ್ನು ತುಳಿದುಬಿಡುವಾತನು” ಸೇನಾಧೀಶ್ವರ ದೇವರಾದ ಯೆಹೋವನೆಂಬುದೇ ನನ್ನ ನಾಮಧೇಯ.

ಯೆಹೋವನು ಸ್ವಗೌರವವನ್ನು ಕಾಪಾಡಿಕೊಳ್ಳುವ ದೇವರು. ಆತನು ಮುಯ್ಯಿತೀರಿಸುವವನು; ಹೌದು ಯೆಹೋವನು ಮುಯ್ಯಿತೀರಿಸುವವನು, ಕೋಪಭರಿತನು; ಯೆಹೋವನು ತನ್ನ ವಿರೋಧಿಗಳಿಗೆ ಮುಯ್ಯಿತೀರಿಸುತ್ತಾನೆ. ತನ್ನ ಶತ್ರುಗಳ ಮೇಲೆ ದೀರ್ಘರೋಷವಿಡುತ್ತಾನೆ. ಯೆಹೋವನು ದೀರ್ಘಶಾಂತನಾಗಿದ್ದರೂ ಆತನ ಶಕ್ತಿಯು ಅಪಾರ, ಅಪರಾಧಿಗಳನ್ನು ಶಿಕ್ಷಿಸದೆ ಬಿಡನು; ಯೆಹೋವನು ಬಿರುಗಾಳಿಯಲ್ಲಿಯೂ, ತುಫಾನಿನಲ್ಲಿಯೂ ನಡೆಯುತ್ತಾನೆ; ಮೋಡಗಳು ಆತನ ಹೆಜ್ಜೆಯಿಂದೇಳುವ ಧೂಳು.

ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಮಹಿಮೆಯ ಜ್ಞಾನವು ತುಂಬಿಕೊಂಡಿರುವುದು.’

ನಿನ್ನ ದೇವರಾದ ಯೆಹೋವನು ನಿನ್ನ ಮಧ್ಯದಲ್ಲಿ ಶೂರನಾಗಿದ್ದಾನೆ, ನಿನ್ನನ್ನು ರಕ್ಷಿಸುವನು; ನಿನ್ನಲ್ಲಿ ಉಲ್ಲಾಸಿಸೇ ಉಲ್ಲಾಸಿಸುವನು; ತನ್ನ ಪ್ರೀತಿಯಲ್ಲಿ ನಿನ್ನ ಜೀವನವನ್ನು ನೂತನಗೊಳಿಸುವನು; ನಿನ್ನಲ್ಲಿ ಆನಂದಿಸಿ ಹರ್ಷಧ್ವನಿಗೈಯುವನು.

ಆದರೆ ನಾನು ನಿಮಗೆ ಹೇಳುವುದೇನಂದರೆ, ಆಣೆಯನ್ನೇ ಇಡಬೇಡಿರಿ. ಆಕಾಶದ ಮೇಲೆ ಆಣೆ ಇಡಬೇಡಿರಿ; ಅದು ದೇವರ ಸಿಂಹಾಸನವು. ಭೂಮಿಯ ಮೇಲೆ ಆಣೆ ಇಡಬೇಡಿ ಅದು ಆತನ ಪಾದಪೀಠ. ಯೆರೂಸಲೇಮಿನ ಮೇಲೆ ಆಣೆ ಇಡಬೇಡಿ;ಅದು ಆ ಮಹಾ ರಾಜನ ಪಟ್ಟಣವಾಗಿದೆ.

ಆದುದರಿಂದ ಪರಲೋಕದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣನಾಗಿರುವ ಹಾಗೆಯೇ ನೀವೂ ಪರಿಪೂರ್ಣರಾಗಿರಿ.

ಆದುದರಿಂದ ನೀವು ಹೀಗೆ ಪ್ರಾರ್ಥನೆಮಾಡಬೇಕು,

ನಮ್ಮನ್ನು ಶೋಧನೆಯೊಳಗೆ ಸೇರಿಸದೆ ಕೆಡುಕನಿಂದ; ನಮ್ಮನ್ನು ತಪ್ಪಿಸು

ಅದೇ ಸಮಯದಲ್ಲಿ ಯೇಸು ಹೇಳಿದ್ದೇನೆಂದರೆ, “ತಂದೆಯೇ! ಪರಲೋಕದ ಭೂಲೋಕದ ಒಡೆಯನೇ, ನೀನು ಜ್ಞಾನಿಗಳಿಗೂ ಬುದ್ಧಿವಂತರಿಗೂ ಈ ವಿಷಯಗಳನ್ನು ಮರೆಮಾಡಿ ಚಿಕ್ಕ ಮಕ್ಕಳಿಗೆ ಅದನ್ನು ಪ್ರಕಟಪಡಿಸಿರುವಿ ಎಂದು ನಿನ್ನನ್ನು ಕೊಂಡಾಡುತ್ತೇನೆ.

ಯೇಸು ಅವರನ್ನು ದೃಷ್ಟಿಸಿ ನೋಡಿ “ಇದು ಮನುಷ್ಯರಿಂದ ಅಸಾಧ್ಯ. ಆದರೆ ದೇವರಿಗೆ ಎಲ್ಲವು ಸಾಧ್ಯವೇ” ಅಂದನು.

‘ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು’ ಎಂದು ದೇವರು ನಿಮಗೆ ನುಡಿದಿದ್ದನ್ನು ನೀವು ಓದಲಿಲ್ಲವೇ. ಆತನು ಸತ್ತವರಿಗೆ ದೇವರಲ್ಲ, ಆದರೆ ಜೀವಿಸುವವರಿಗೆ ದೇವರಾಗಿದ್ದಾನೆ” ಎಂದು ಹೇಳಿದನು.

“ಇದಲ್ಲದೆ ಮನುಷ್ಯಕುಮಾರನು ತನ್ನ ಮಹಿಮೆಯಿಂದ ಸಮಸ್ತ ದೇವದೂತರೊಂದಿಗೆ ಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕುಳಿತುಕೊಳ್ಳುವನು; ಆಗ ಎಲ್ಲಾ ದೇಶಗಳ ಜನರನ್ನೂ ಆತನ ಸಮ್ಮುಖದಲ್ಲಿ ತಂದು ಸೇರಿಸುವರು. ಕುರುಬನು ಕುರಿಗಳನ್ನೂ, ಆಡುಗಳನ್ನೂ ಬೇರ್ಪಡಿಸುವ ಪ್ರಕಾರ ಆತನು ಅವರನ್ನು ಬೇರ್ಪಡಿಸುವನು.

ಯೇಸು ಅವರ ಹತ್ತಿರಕ್ಕೆ ಬಂದು, “ಪರಲೋಕದಲ್ಲಿಯೂ, ಭೂಲೋಕದಲ್ಲಿಯೂ ಇರುವ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ. ಆದುದರಿಂದ ನೀವು ಹೊರಟುಹೋಗಿ ಎಲ್ಲಾ ಜನಾಂಗಗಳನ್ನು ಶಿಷ್ಯರನ್ನಾಗಿ ಮಾಡಿ; ಅವರಿಗೆ ತಂದೆ, ಮಗ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿರಿ.

ಯೇಸು ಅವರನ್ನು ದೃಷ್ಟಿಸಿ ನೋಡಿ “ಇದು ಮನುಷ್ಯರಿಗೆ ಅಸಾಧ್ಯ; ದೇವರಿಗೆ ಅಸಾಧ್ಯವಲ್ಲ. ದೇವರಿಗೆ ಎಲ್ಲವೂ ಸಾಧ್ಯವೇ” ಅಂದನು.

ಅದಕ್ಕೆ ಯೇಸು, “‘ಇಸ್ರಾಯೇಲ್ ಜನರೇ ಕೇಳಿ, ನಮ್ಮ ದೇವರಾದ ಕರ್ತನುಒಬ್ಬನೇ ದೇವರು.

ಯೇಸುವು “ಹೌದು ನಾನೇ! “ಇದಲ್ಲದೆಮನುಷ್ಯಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಆಸೀನನಾಗಿರುವುದನ್ನೂ, ಆಕಾಶದ ಮೇಘಗಳಲ್ಲಿ ಬರುವುದನ್ನೂ ನೀವು ನೋಡುವಿರಿ” ಎಂದನು.

ಯೇಸು ಪವಿತ್ರಾತ್ಮಭರಿತನಾಗಿ ಯೊರ್ದನ್ ಹೊಳೆಯಿಂದ ಹಿಂತಿರುಗಿ ಬಂದು ದೇವರಾತ್ಮನಿಂದ,

ನಿಮ್ಮ ತಂದೆಯು ಕರುಣೆಯುಳ್ಳವನಾಗಿರುವ ಪ್ರಕಾರವೇ ನೀವೂ ಕರುಣೆಯುಳ್ಳವರಾಗಿರಿ.

ಅದೇ ಗಳಿಗೆಯಲ್ಲಿ ಆತನು ಪವಿತ್ರಾತ್ಮನನಿಂದ ಉಲ್ಲಾಸಗೊಂಡು ಹೇಳಿದ್ದೇನಂದರೆ, “ತಂದೆಯೇ, ಪರಲೋಕ ಮತ್ತು ಭೂಲೋಕಗಳ ಒಡೆಯನೇ, ನೀನು ಜ್ಞಾನಿಗಳಿಗೂ ಮತ್ತು ವಿವೇಕಿಗಳಿಗೂ ಈ ವಿಷಯಗಳನ್ನು ಮರೆಮಾಡಿ, ಮಕ್ಕಳಿಗೆ ಪ್ರಕಟಮಾಡಿರುವುದರಿಂದ ನಿನ್ನನ್ನು ಕೊಂಡಾಡುತ್ತೇನೆ. ಹೌದು, ತಂದೆಯೇ, ಹೀಗೆ ಮಾಡುವುದೇ ಒಳ್ಳೆಯದೆಂದು ನಿನ್ನ ದೃಷ್ಟಿಗೆ ತೋರಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ.

ಅದಕ್ಕಾತನು, “ನೀವು ಪ್ರಾರ್ಥಿಸುವಾಗ ಈ ರೀತಿಯಾಗಿ ಪ್ರಾರ್ಥಿಸಿರಿ, “ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ.

ಆದಿಯಲ್ಲಿ ವಾಕ್ಯವಿತ್ತು; ಆ ವಾಕ್ಯವು ದೇವರೊಂದಿಗಿತ್ತು; ಆ ವಾಕ್ಯವು ದೇವರಾಗಿತ್ತು. ಆ ವಾಕ್ಯವೆಂಬಾತನು ಆದಿಯಲ್ಲಿ ದೇವರೊಂದಿಗಿದ್ದನು. ಸಮಸ್ತವೂ ಆತನ ಮೂಲಕವಾಗಿ ಸೃಷ್ಟಿಯಾಯಿತು. ಸೃಷ್ಟಿಯಾದ ಎಲ್ಲವುಗಳಲ್ಲಿ ಆತನಿಲ್ಲದೆ ಒಂದಾದರೂ ಸೃಷ್ಟಿಯಾಗಲಿಲ್ಲ.

“ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.

ತಂದೆಯಾದ ದೇವರು ತನ್ನ ಮಗನನ್ನು ಪ್ರೀತಿಸಿ ಎಲ್ಲವನ್ನೂ ಆತನ ಕೈಯಲ್ಲಿ ಕೊಟ್ಟಿದ್ದಾನೆ.

ದೇವರು ಆತ್ಮನಾಗಿದ್ದಾನೆ, ಮತ್ತು ಆತನನ್ನು ಆರಾಧಿಸುವವರುಆತ್ಮನಿಂದಲೂ ಮತ್ತು ಸತ್ಯದಿಂದಲೂ ಆರಾಧಿಸಬೇಕಾಗಿದೆ” ಎಂದನು.

ಯೇಸು ಅವರಿಗೆ “ನಾನೇ ಜೀವದ ರೊಟ್ಟಿ ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗುವುದಿಲ್ಲ; ನನ್ನನ್ನು ನಂಬುವವನಿಗೆ ಎಂದಿಗೂಬಾಯಾರಿಕೆಯಾಗುವುದಿಲ್ಲ.

ನಾನೇ ಜೀವದ ರೊಟ್ಟಿ

ನಾನೇ ಪರಲೋಕದಿಂದ ಇಳಿದು ಬಂದ ಜೀವವುಳ್ಳ ರೊಟ್ಟಿ. ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಸದಾ ಕಾಲವು ಬದುಕುವನು; ಮತ್ತು ನಾನು ಕೊಡುವ ರೊಟ್ಟಿ ನನ್ನ ದೇಹವೇ, ಅದನ್ನು ಲೋಕದ ಜೀವಕ್ಕಾಗಿ ಕೊಡುವೆನು” ಎಂದು ಹೇಳಿದನು.

ಯೇಸು ಪುನಃ ಜನರೊಂದಿಗೆ ಮಾತನಾಡುತ್ತಾ, “ನಾನೇ ಲೋಕದ ಬೆಳಕಾಗಿದ್ದೇನೆ. ನನ್ನನ್ನು ಹಿಂಬಾಲಿಸುವವನು ಎಂದಿಗೂ ಕತ್ತಲೆಯಲ್ಲಿ ನಡೆಯುವುದಿಲ್ಲ, ಆದರೆ ಅವನು ಜೀವದ ಬೆಳಕನ್ನು ಹೊಂದಿರುವನು” ಎಂದು ಹೇಳಿದನು.

ನನ್ನ ವಿಷಯವಾಗಿ ಸಾಕ್ಷಿ ನೀಡುವವನು ನಾನೇ ಮತ್ತು ನನ್ನನ್ನು ಕಳುಹಿಸಿದ ತಂದೆಯೂ ನನ್ನ ವಿಷಯವಾಗಿ ಸಾಕ್ಷಿ ನೀಡುತ್ತಾನೆ” ಎಂದನು.

ಆತನು ಅವರಿಗೆ, “ನೀವು ಕೆಳಗಿನವರು; ನಾನು ಮೇಲಿನಿಂದ ಬಂದವನು. ನೀವು ಈ ಲೋಕದವರು; ನಾನು ಈ ಲೋಕದವನಲ್ಲ.

ಯೇಸು, “ನಿಮಗೆ ನಾನು ನಿಜನಿಜವಾಗಿ ಹೇಳುತ್ತೇನೆ;ಅಬ್ರಹಾಮನು ಹುಟ್ಟುವುದಕ್ಕಿಂತ ಮುಂಚಿನಿಂದಲೂ ನಾನು ಇದ್ದೇನೆ” ಎಂದನು.

“ನಾನೇ ಒಳ್ಳೆಯ ಕುರುಬನು. ಒಳ್ಳೆಯ ಕುರುಬನು ತನ್ನ ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ.

ಯೇಸು ಆಕೆಗೆ, “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವನು ಸತ್ತರೂ ಬದುಕುವನು,

ಯೇಸು ಅವನಿಗೆ, “ನಾನೇ ಮಾರ್ಗವೂ, ಸತ್ಯವೂ ಮತ್ತುಜೀವವೂ ಆಗಿದ್ದೇನೆ. ನನ್ನ ಮೂಲಕವಲ್ಲದೆ ಯಾರೂ ತಂದೆಯ ಬಳಿಗೆ ಬರಲಾರರು. ನೀವು ನನ್ನನ್ನು ತಿಳಿದಿದ್ದರೆ ನನ್ನ ತಂದೆಯನ್ನೂ ಸಹ ತಿಳಿಯುತ್ತಿದ್ದಿರಿ. ಈಗಿನಿಂದ ನೀವು ಆತನನ್ನು ತಿಳಿದಿದ್ದೀರಿ ಮತ್ತು ಆತನನ್ನು ನೋಡಿದ್ದೀರಿ” ಎಂದು ಹೇಳಿದನು.

ಆದರೆ ಆ ಸಹಾಯಕನು, ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಪವಿತ್ರಾತ್ಮನೇ ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನೆಲ್ಲಾ ನಿಮ್ಮ ನೆನಪಿಗೆ ತಂದುಕೊಡುವನು.

ತನ್ನ ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವುದೂ ಇಲ್ಲ.

ಆತನು ಅವರಿಗೆ “ನಾನೇ ಆತನು” ಎಂದು ಹೇಳಿದಾಗ ಅವರು ಹಿಂದಕ್ಕೆ ಸರಿದು ನೆಲಕ್ಕೆ ಬಿದ್ದರು.

“ಕರ್ತನೇ, ಎಲ್ಲರ ಹೃದಯವನ್ನು ಬಲ್ಲಾತನೇ, ಯೂದನು ಅಪೊಸ್ತಲತನವೆಂಬ ಈ ಸೇವಾಸ್ಥಾನದಿಂದ ಭ್ರಷ್ಟನಾಗಿ ತಾನು ಹೋಗ ತಕ್ಕ ಸ್ಥಳಕ್ಕೆ ಹೋಗಿರುವುದರಿಂದ ಆ ಸ್ಥಾನವನ್ನು ಹೊಂದುವುದಕ್ಕೆ ಈ ಇಬ್ಬರಲ್ಲಿ ನೀನು ಆರಿಸಿ ಕೊಂಡವನನ್ನು ತೋರಿಸಿಕೊಡು” ಎಂದು ಪ್ರಾರ್ಥಿಸಿದರು.

ಆದರೂ ಪರಾತ್ಪರನಾದ ದೇವರು ಮನುಷ್ಯರ ಕೈಯಿಂದ ಕಟ್ಟಿದ ನಿವಾಸಗಳಲ್ಲಿ ವಾಸಮಾಡುವವನಲ್ಲ. “‘ಆಕಾಶವು ನನಗೆ ಸಿಂಹಾಸನ, ಭೂಮಿಯು ನನ್ನ ಪಾದಗಳಿಗೆ ಪೀಠ; ನೀವು ನನಗೆ ಎಂಥ ಮನೆಯನ್ನು ಕಟ್ಟಿಕೊಡುವಿರಿ? ನನ್ನ ವಿಶ್ರಾಂತಿಗೆ ತಕ್ಕ ಸ್ಥಳವು ಯಾವುದು?

“ಜಗತ್ತನ್ನೂ ಅದರಲ್ಲಿರುವ ಎಲ್ಲವುಗಳನ್ನೂ, ಉಂಟುಮಾಡಿದ ದೇವರು ಭೂಮ್ಯಾಕಾಶಗಳ ಒಡೆಯನಾಗಿರುವುದರಿಂದ ಆತನು ಕೈಯಿಂದ ಕಟ್ಟಿರುವ ಗುಡಿಗಳಲ್ಲಿ ವಾಸಮಾಡುವವನಲ್ಲ;

ಅನೀತಿಯಿಂದ ಸತ್ಯವನ್ನು ಅಡ್ಡಿಮಾಡುವವರಾದ ದುಷ್ಟಮನುಷ್ಯರ ಎಲ್ಲಾ ವಿಧವಾದ ಭಕ್ತಿಹೀನತೆಯ ಮೇಲೆಯೂ, ದುಷ್ಟತನದ ಮೇಲೆಯೂ ದೇವರ ಕೋಪವು ಪರಲೋಕದಿಂದ ಇಳಿದುಬರುತ್ತದೆ, ಯಾಕೆಂದರೆ ದೇವರ ವಿಷಯವಾಗಿ ತಿಳಿಯಬಹುದಾದದ್ದು ಅವರ ಮನಸ್ಸಿಗೆ ಸ್ಪಷ್ಟವಾಗಿ ತಿಳಿದಿದೆ. ಅದನ್ನು ಅವರಿಗೆ ದೇವರೇ ಸ್ಪಷ್ಟವಾಗಿ ತಿಳಿಸಿರುವನು. ಹೇಗೆಂದರೆ ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯ ಶಕ್ತಿಯೂ, ದೈವತ್ವವೂ, ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತದೆ. ಹೀಗಿರುವುದರಿಂದ ಅವರು ನೆಪವನ್ನು ಹೇಳಲು ಆಗುವುದಿಲ್ಲ.

ಆದರೆ ನಾವು ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ದೃಢಪಡಿಸಿದ್ದಾನೆ.

ಹೇಗೆಂದರೆ ಮರಣವಾಗಲಿ, ಜೀವವಾಗಲಿ, ದೇವದೂತರಾಗಲಿ, ದುರಾತ್ಮಗಳಾಗಲಿ, ಈಗಿನ ಸಂಗತಿಗಳಾಗಲಿ, ಮುಂದಣ ಸಂಗತಿಗಳಾಗಲಿ, ಮಹತ್ವಗಳಾಗಲಿ, ಮೇಲಣ ಲೋಕವಾಗಲಿ, ಕೆಳಗಣ ಲೋಕವಾಗಲಿ, ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲು ಸಾಧ್ಯವಿಲ್ಲವೆಂದು ನಾವು ಬಲ್ಲವರಾಗಿದ್ದೇವೆ.

ಆಹಾ ದೇವರ ಐಶ್ವರ್ಯವೂ, ಜ್ಞಾನವೂ, ವಿವೇಕವೂ ಅಗಾಧ. ಆತನ ನ್ಯಾಯತೀರ್ಪುಗಳು ಎಷ್ಟೋ ಆಗಮ್ಯವಾದದ್ದು. ಆತನ ಮಾರ್ಗಗಳು ಆಗೋಚರವಾದವುಗಳೂ ಆಗಿವೆ. “ಕರ್ತನ ಮನಸ್ಸನ್ನು ತಿಳಿದುಕೊಂಡವರಾರು? ಆತನಿಗೆ ಆಲೋಚನಾಕರ್ತನಾಗಿದ್ದವನು ಯಾರು? ಮುಂಗಡವಾಗಿ ಆತನಿಗೆ ಕೊಟ್ಟು ಆನಂತರ ಪ್ರತಿಫಲವನ್ನು ತೆಗೆದುಕೊಳ್ಳುವವನು ಯಾರು?” ಸಮಸ್ತವೂ ಆತನಿಂದ ಉತ್ಪತ್ತಿಯಾಗಿ, ಆತನಿಂದ ನಡೆಯುತ್ತಾ, ಇರುವುದೆಲ್ಲವೂ ಅತನಿಗೋಸ್ಕರವೇ. ಆತನಿಗೇ ಸದಾಕಾಲವೂ ಮಹಿಮೆಯುಂಟಾಗಲಿ ಸ್ತೋತ್ರ. ಅಮೆನ್.

ದೇವರ ರಾಜ್ಯವು ಮಾತಿನಲ್ಲಿ ಅಲ್ಲ, ಶಕ್ತಿಯಲ್ಲಿ ಅಡಗಿದೆ.

“ನಮಗಾದರೋ ಒಬ್ಬನೇ ತಂದೆಯಾದ ದೇವರು; ಆತನೇ ಸಮಸ್ತಕ್ಕೂ ಮೂಲಕಾರಣನು; ನಾವು ಜೀವಿಸುವುದು ಆತನಿಗಾಗಿಯೇ, ಮತ್ತು ಒಬ್ಬನೇ ಕರ್ತನಾದ ಯೇಸು ಕ್ರಿಸ್ತನೆಂಬ ಏಕ ಕರ್ತನು ನಮಗಿದ್ದಾನೆ. ಆತನ ಮುಖಾಂತರವೇ ಸಮಸ್ತವೂ ಉಂಟಾಯಿತು. ನಾವೂ ಆತನ ಮುಖಾಂತರ ಉಂಟಾದೆವು.”

ಈ ಪರಾಕ್ರಮ ಶಕ್ತಿಯಿಂದಲೇ ದೇವರು ಕ್ರಿಸ್ತನನ್ನು ಮರಣದಿಂದ ಎಬ್ಬಿಸಿ, ಸಕಲ ರಾಜತ್ವ, ಅಧಿಕಾರ, ಅಧಿಪತ್ಯ ಮತ್ತು ಪ್ರಭುತ್ವಗಳ ಮೇಲೆಯೂ ಈ ಲೋಕದಲ್ಲಿ ಮಾತ್ರವಲ್ಲದೆ ಮುಂಬರುವ ಲೋಕದಲ್ಲಿಯೂ ಹೆಸರುಗೊಂಡವರೆಲ್ಲರ ಎಲ್ಲಾ ನಾಮಗಳ ಮೇಲೆಯೂ ಪರಲೋಕದಲ್ಲಿ ಆತನನ್ನು ತನ್ನ ಬಲಗಡೆಯಲ್ಲಿ ಕುಳ್ಳಿರಿಸಿಕೊಂಡನು. ಇದಲ್ಲದೆ ದೇವರು ಸಮಸ್ತವನ್ನೂ ಯೇಸುಕ್ರಿಸ್ತನ ಪಾದದ ಕೆಳಗೆ ಅಧೀನಮಾಡಿ, ಸಭೆಗಾಗಿ ಎಲ್ಲಾದರ ಮೇಲೆ ಆತನನ್ನು ಶಿರಸ್ಸಾಗಿ ನೇಮಿಸಿದನು. ಸಭೆಯು ಕ್ರಿಸ್ತನ ದೇಹವಾಗಿದೆ, ಎಲ್ಲವನ್ನೂ ಎಲ್ಲಾ ವಿಧದಲ್ಲೂ ಪೂರೈಸುವಾತನಿಂದ ಅದು ಸಂಪೂರ್ಣತೆಯುಳ್ಳದ್ದಾಗಿದೆ.

ಆದರೆ ಕರುಣಾನಿಧಿಯಾಗಿರುವ ದೇವರು ನಮ್ಮನ್ನು ಪ್ರೀತಿಸಿದ ಮಹಾ ಪ್ರೀತಿಯ ನಿಮಿತ್ತ,

ಇದರಿಂದ ಆತನ ಮೂಲಕ ಉಭಯತ್ರರು ಒಂದೇ ಆತ್ಮನಲ್ಲಿ ತಂದೆಯ ಬಳಿಗೆ ಪ್ರವೇಶಿಸಲು ಮಾರ್ಗವಾಯಿತು.

ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ. ಆತನು ಎಲ್ಲರ ಮೇಲಿರುವವನೂ, ಎಲ್ಲರ ಮುಖಾಂತರ ಕಾರ್ಯ ನಡಿಸುವವನೂ, ಎಲ್ಲರಲ್ಲಿ ವಾಸಿಸುವವನೂ ಆಗಿದ್ದಾನೆ.

ದೇವರ ಪವಿತ್ರಾತ್ಮನನ್ನು ದುಃಖಪಡಿಸಬೇಡಿರಿ. ಆತನಲ್ಲಿಯೇ ವಿಮೋಚನೆಯ ದಿನಕ್ಕಾಗಿ ಮುದ್ರೆ ಹೊಂದಿದ್ದೀರಲ್ಲಾ.

ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ, ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ. ಆದ್ದರಿಂದ ಸ್ವರ್ಗ ಮರ್ತ್ಯ ಪಾತಾಳಗಳಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಮೊಣಕಾಲೂರಿ ಅಡ್ಡಬಿದ್ದು, ತಂದೆಯಾದ ದೇವರ ಮಹಿಮೆಗಾಗಿ ಪ್ರತಿಯೊಂದು ನಾಲಿಗೆಯು ಯೇಸು ಕ್ರಿಸ್ತನನ್ನು ಕರ್ತನೆಂದು ಅರಿಕೆಮಾಡುವುದು.

ಕ್ರಿಸ್ತನು ಅದೃಶ್ಯನಾದ ದೇವರ ಪ್ರತಿರೂಪನೂ, ಸೃಷ್ಟಿಗೆಲ್ಲಾ ಜೇಷ್ಠಪುತ್ರನೂ ಆಗಿದ್ದಾನೆ. ಭೂಪರಲೋಕಗಳಲ್ಲಿರುವ ದೃಶ್ಯ ಅದೃಶ್ಯವಾದವುಗಳೆಲ್ಲವೂ, ಸಿಂಹಾಸನಗಳಾಗಲಿ, ಪ್ರಭುತ್ವಗಳಾಗಲಿ, ದೊರೆತನಗಳಾಗಲಿ, ಅಧಿಕಾರಗಳಾಗಲಿ ಆತನಿಂದ ಸೃಷ್ಟಿಸಲ್ಪಟ್ಟವು. ಸರ್ವವೂ ಆತನ ಮುಖಾಂತರವಾಗಿ ಆತನಿಗೋಸ್ಕರವಾಗಿ ಸೃಷ್ಟಿಸಲ್ಪಟ್ಟಿತು. ಆತನು ಎಲ್ಲಕ್ಕೂ ಮೊದಲು ಇದ್ದಾತನು, ಆತನಲ್ಲಿ ಸಮಸ್ತವು ಒಂದಾಗಿ ನೆಲೆಗೊಂಡಿದ್ದೆ. ಸಭೆಯೆಂಬ ದೇಹಕ್ಕೆ ಆತನು ತಲೆಯಾಗಿದ್ದಾನೆ, ಆತನೇ ಆದಿಸಂಭೂತನು, ಎಲ್ಲಾದರಲ್ಲಿ ಆತನು ಮೊದಲಿಗನಾಗುವುದಕ್ಕಾಗಿ ಸತ್ತವರೊಳಗಿಂದ ಮೊದಲು ಎದ್ದು ಬಂದವನು ಆತನೇ. ಏಕೆಂದರೆ ಆತನಲ್ಲಿಯೇ ತನ್ನ ಸರ್ವಸಂಪೂರ್ಣತೆಯು ವಾಸವಾಗಿರಬೇಕೆಂತಲೂ,

ದೇವರ ಸರ್ವಸಂಪೂರ್ಣತೆಯು ಕ್ರಿಸ್ತನ ದೇಹದಲ್ಲಿ ವಾಸಮಾಡುತ್ತಿದೆ, ಆತನು ಎಲ್ಲಾ ದೊರೆತನಗಳಿಗೂ ಹಾಗೂ ಅಧಿಕಾರಿಗಳಿಗೂ ತಲೆಯಾಗಿರುವುದರಿಂದ ಆತನಲ್ಲಿದ್ದುಕೊಂಡೇ ನೀವು ಪರಿಪೂರ್ಣತೆಯನ್ನು ಹೊಂದಿದವರಾಗಿದ್ದೀರಿ.

ಸರ್ವಯುಗಗಳ ಅರಸನೂ, ಅಮರನೂ, ಅದೃಶ್ಯನೂ ಆಗಿರುವ ಏಕ ದೇವರಿಗೆ ಘನವೂ ಮಹಿಮೆಯೂ ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್.

ತಾನೊಬ್ಬನೇ ಅಮರತ್ವವುಳ್ಳವನೂ ಅಗಮ್ಯವಾದ ಬೆಳಕಿನಲ್ಲಿ ವಾಸಮಾಡುವವನೂ ಆಗಿದ್ದಾನೆ. ಮನುಷ್ಯರಲ್ಲಿ ಯಾರೂ ಆತನನ್ನು ಕಾಣಲಿಲ್ಲ, ಯಾರೂ ಕಾಣಲಾರರು. ಆತನಿಗೆ ಮಾನವೂ ನಿತ್ಯಾಧಿಪತ್ಯವೂ ಎಂದೆಂದಿಗೂ ಇರಲಿ. ಆಮೆನ್.

ದೇವರು ಪುರಾತನ ಕಾಲದಲ್ಲಿ ನಮ್ಮ ಪೂರ್ವಿಕರ ಸಂಗಡ ಪ್ರವಾದಿಗಳ ಮುಖಾಂತರ ಹಲವಾರು ವಿಧದಲ್ಲಿ, ಅನೇಕಸಾರಿ ಮಾತನಾಡಿದ್ದಾನೆ. ಆದರೆ ಈ ಅಂತ್ಯ ದಿನಗಳಲ್ಲಿ ನಮ್ಮ ಸಂಗಡ ಮಗನ ಮುಖಾಂತರ ಮಾತನಾಡಿದ್ದಾನೆ. ಆತನನ್ನು ಎಲ್ಲದಕ್ಕೂ ಬಾಧ್ಯಸ್ಥನನ್ನಾಗಿ ನೇಮಿಸಿದನು ಮತ್ತು ಆತನ ಮೂಲಕವೇ ಇಡೀ ವಿಶ್ವವನ್ನು ಉಂಟುಮಾಡಿದನು. ಈತನು ದೇವರ ಮಹಿಮೆಯ ಪ್ರಕಾಶವೂ, ಆತನ ವ್ಯಕ್ತಿತ್ವದ ಪ್ರತಿರೂಪವೂ, ತನ್ನ ಶಕ್ತಿಯುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ ಪಾಪಗಳನ್ನು ಶುದ್ಧಿಮಾಡಿ, ಉನ್ನತದಲ್ಲಿರುವ ಮಹೋನ್ನತನಾದ ದೇವರ ಬಲಗಡೆಯಲ್ಲಿ ಕುಳಿತುಕೊಂಡನು.

ಆದರೆ ಮಗನ ವಿಷಯದಲ್ಲಿಯಾದರೋ, “ದೇವರೇ ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು. ನೀತಿದಂಡವೇ ನಿನ್ನ ರಾಜದಂಡವಾಗಿದೆ.

ಆತನ ದೃಷ್ಟಿಗೆ ಮರೆಯಾಗಿರುವ ಒಂದು ಸೃಷ್ಟಿಯೂ ಇಲ್ಲ. ಆತನ ಕಣ್ಣಿಗೆ ಮರೆಯಾದದ್ದು ಒಂದೂ ಇಲ್ಲ ಎಲ್ಲವೂ ನಗ್ನವಾಗಿಯೂ ಬಟ್ಟಬಯಲಾಗಿಯೂ ಇದೆ. ಅಂಥವನಿಗೆ ನಾವು ಲೆಕ್ಕಕೊಡಬೇಕಾಗಿದೆ.

ಏಕೆಂದರೆ ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ.

ಯೇಸು ಕ್ರಿಸ್ತನು ನಿನ್ನೇ ಇದ್ದ ಹಾಗೆಯೇ, ಈ ಹೊತ್ತು, ನಿರಂತರವೂ ಇರುವನು.

ಎಲ್ಲಾ ಒಳ್ಳೆಯ ವರಗಳು ಮತ್ತು ಪರಿಪೂರ್ಣವಾದ ವರಗಳು ಮೇಲಿನಿಂದ ಬಂದವುಗಳೇ, ಅವು ಸಕಲ ವಿಧವಾದ ಬೆಳಕಿಗೆ ಮೂಲಕರ್ತನಾದ ದೇವರಿಂದ ಇಳಿದು ಬರುತ್ತವೆ; ಆತನು ನೆರಳಿನಂತೆ ಬದಲಾಗುವವನಲ್ಲ, ಚಂಚಲಚಿತ್ತನೂ ಅಲ್ಲ.

ದೇವರು ಒಬ್ಬನೇ ಎಂದು ನೀನು ನಂಬುತ್ತೀ; ಹಾಗೆ ನಂಬುವುದು ಸರಿ. ಆದರೆ ದೆವ್ವಗಳು ಸಹ ಹಾಗೆಯೇ ನಂಬಿ ಹೆದರಿ ನಡುಗುತ್ತವೆ.

ಆತನು ಪರಲೋಕಕ್ಕೆ ಹೋಗಿ ದೇವರ ಬಲಗಡೆಯಲ್ಲಿದ್ದಾನೆ, ದೇವದೂತರು, ಅಧಿಕಾರಿಗಳು ಮತ್ತು ಶಕ್ತಿಗಳೂ ಆತನ ಸ್ವಾಧೀನವಾಗಿವೆ.

ಏಕೆಂದರೆ, “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ” ಎಂಬ ವಾಣಿಯು ಮಹೋನ್ನತವಾದ ಮಹಿಮೆಯಿಂದ ಆತನಿಗೆ ಉಂಟಾದದ್ದರಲ್ಲಿ ಆತನು ತಂದೆಯಾದ ದೇವರಿಂದ ಗೌರವವನ್ನೂ, ಮಹಿಮೆಯನ್ನೂ ಹೊಂದಿದನಲ್ಲವೇ.

ನಾವು ಆತನಿಂದ ಕೇಳಿ ನಿಮಗೆ ತಿಳಿಸುತ್ತಿರುವ ಸಂದೇಶ ಯಾವುದೆಂದರೆ; ದೇವರು ಬೆಳಕಾಗಿದ್ದಾನೆ; ಮತ್ತು ಆತನಲ್ಲಿ ಸ್ವಲ್ಪವೂ ಕತ್ತಲೆಯಿಲ್ಲ ಎಂಬುದೇ.

ಪ್ರೀತಿ ಇಲ್ಲದವನು ದೇವರನ್ನು ಬಲ್ಲವನಲ್ಲ. ಏಕೆಂದರೆ ದೇವರು ಪ್ರೀತಿಸ್ವರೂಪನಾಗಿದ್ದಾನೆ.

ಹೀಗೆ ದೇವರು ನಮ್ಮಲ್ಲಿಟ್ಟಿರುವ ಪ್ರೀತಿಯನ್ನು ನಾವು ತಿಳಿದುಕೊಂಡಿದ್ದೇವೆ. ಅದನ್ನು ನಂಬಿದ್ದೇವೆ. ದೇವರು ಪ್ರೀತಿಸ್ವರೂಪಿ, ಪ್ರೀತಿಯಲ್ಲಿ ನೆಲೆಗೊಂಡಿರುವವನು ದೇವರಲ್ಲಿ ನೆಲೆಗೊಂಡಿದ್ದಾನೆ. ದೇವರು ಅವನಲ್ಲಿ ನೆಲೆಗೊಂಡಿದ್ದಾನೆ.

ಇದಲ್ಲದೆ ಸಾಕ್ಷಿ ಕೊಡುವವರು ಮೂವರಿದ್ದಾರೆ. ಆತ್ಮ, ನೀರು, ರಕ್ತ ಎಂಬ ಮೂರು ಸಾಕ್ಷಿಗಳುಂಟು. ಈ ಮೂರು ಒಂದೇ ಅಭಿಪ್ರಾಯವನ್ನು ಒಪ್ಪಿಕೊಳ್ಳುತ್ತವೆ.

ದೇವರ ಮಗನು ಈ ಲೋಕಕ್ಕೆ ಬಂದು ನಾವು ಸತ್ಯವಾಗಿರುವಾತನನ್ನು ಅರಿತುಕೊಳ್ಳುವ ಹಾಗೆ ನಮಗೆ ವಿವೇಕವನ್ನು ಕೊಟ್ಟಿದ್ದಾನೆಂಬುದು ನಮಗೆ ಗೊತ್ತಿದೆ, ಮತ್ತು ನಾವು ದೇವರ ಮಗನಾದ ಯೇಸುಕ್ರಿಸ್ತನಲ್ಲಿ ಇರುವವರಾಗಿ ಸತ್ಯದೇವರಾಗಿರುವಾತನಲ್ಲಿದ್ದೇವೆ. ಈ ಕ್ರಿಸ್ತನೇ ಸತ್ಯದೇವರೂ, ನಿತ್ಯಜೀವವೂ ಆಗಿದ್ದಾನೆ.

ನಮ್ಮ ರಕ್ಷಕನಾದ ಒಬ್ಬನೇ ದೇವರಿಗೆ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ಮಹಿಮೆ, ಮಹತ್ವ, ಅಧಿಪತ್ಯ ಮತ್ತು ಅಧಿಕಾರಗಳು ಎಲ್ಲಾ ಕಾಲಗಳಲ್ಲಿ ಮೊದಲು ಇದ್ದ ಹಾಗೆ ಈಗಲೂ ಯಾವಾಗಲೂ ಸಲ್ಲಲ್ಲಿ. ಆಮೆನ್.

“ನಾನೇ ಆದಿಯೂ ಅಂತ್ಯವೂ, ಇರುವಾತನೂ, ಇದ್ದಾತನೂ, ಬರುವಾತನೂ, ಸರ್ವಶಕ್ತನೂ” ಎಂದು ದೇವರಾದ ಕರ್ತನು ಹೇಳುತ್ತಾನೆ.

“ಸಾರ್ದಿಸಿನಲ್ಲಿರುವ ಸಭೆಯ ದೂತನಿಗೆ ಬರೆ,ದೇವರ ಏಳು ಆತ್ಮಗಳನ್ನು ಮತ್ತು ಏಳು ನಕ್ಷತ್ರಗಳನ್ನು ಹೊಂದಿರುವವನು ಹೇಳುವುದೇನಂದರೆ, ನಿನ್ನ ಕೃತ್ಯಗಳನ್ನು ನಾನು ಬಲ್ಲೆನು.ಜೀವಿಸುವವನು ಎಂಬ ಹೆಸರು ನಿನಗಿದ್ದರೂ ನೀನುಸತ್ತವನಾಗಿರುವೆ.

ಕೂಡಲೆ ನಾನು ದೇವರಾತ್ಮವಶನಾದೆನು, ಆಗ ಇಗೋ ಪರಲೋಕದಲ್ಲಿ ಒಂದು ಸಿಂಹಾಸನವಿತ್ತು. ಸಿಂಹಾಸನದ ಮೇಲೆ ಒಬ್ಬನು ಕುಳಿತಿದ್ದನು. ಕುಳಿತಿದ್ದವನು ಕಣ್ಣಿಗೆ ಸೂರ್ಯಕಾಂತಿ ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದನು. ಸಿಂಹಾಸನದ ಸುತ್ತಲೂ ಪಚ್ಚೆಯಂತೆ ತೋರುತ್ತಿದ್ದ ಕಾಮನಬಿಲ್ಲು ಇತ್ತು. ಇದಲ್ಲದೆ ಸಿಂಹಾಸನದ ಸುತ್ತಲೂ ಇಪ್ಪತ್ನಾಲ್ಕು ಸಿಂಹಾಸನಗಳಿದ್ದವು. ಆ ಸಿಂಹಾಸನಗಳ ಮೇಲೆ ಶುಭ್ರವಸ್ತ್ರ ಧರಿಸಿಕೊಂಡಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಕುಳಿತಿದ್ದರು. ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿದ್ದವು. ಸಿಂಹಾಸನದಿಂದ ಮಿಂಚು, ಗುಡುಗು, ಗರ್ಜನೆಗಳು ಹೊರ ಹೊಮ್ಮುತ್ತಿದ್ದವು. ಆ ಸಿಂಹಾಸನ ಮುಂದೆ ದೇವರ ಏಳು ಆತ್ಮಗಳನ್ನು ಸೂಚಿಸುವ ಏಳು ದೀಪಗಳು ಉರಿಯುತ್ತಿದ್ದವು. ಇದಲ್ಲದೆ ಸಿಂಹಾಸನದ ಮುಂದೆ ಸ್ಫಟಿಕಕ್ಕೆ ಸಮಾನವಾದ ಗಾಜಿನ ಸಮುದ್ರವಿದ್ದ ಹಾಗೆ ಕಾಣಿಸಿತು. ಸಿಂಹಾಸನದ ಮಧ್ಯದಲ್ಲಿ ಅದರ ನಾಲ್ಕು ಕಡೆಗಳಲ್ಲಿ ನಾಲ್ಕು ಜೀವಿಗಳಿದ್ದವು. ಅವುಗಳಿಗೆ ಹಿಂದೆಯೂ ಮುಂದೆಯೂ ತುಂಬಾ ಕಣ್ಣುಗಳಿದ್ದವು. ಮೊದಲನೆಯ ಜೀವಿಯು ಸಿಂಹದಂತಿತ್ತು, ಎರಡನೆಯ ಜೀವಿಯು ಹೋರಿಯಂತಿತ್ತು, ಮೂರನೆಯ ಜೀವಿಯ ಮುಖವು ಮನುಷ್ಯನ ಮುಖದಂತಿತ್ತು, ನಾಲ್ಕನೆಯ ಜೀವಿಯು ಹಾರುವ ಹದ್ದಿನಂತಿತ್ತು. ಆ ನಾಲ್ಕು ಜೀವಿಗಳಿಗೆ ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು. ಸುತ್ತಲೂ ಒಳಗೂ ತುಂಬಾ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳು ವಿಶ್ರಮಿಸಿಕೊಳ್ಳದೆ, “ದೇವರಾದ ಕರ್ತನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು, ಆತನು ಸರ್ವಶಕ್ತನು, ಇರುವಾತನು, ಇದ್ದಾತನು, ಬರುವಾತನು” ಎಂದು ಹೇಳುತ್ತಿದ್ದವು. ಯುಗಯುಗಾಂತರಗಳಲ್ಲಿಯೂ ಜೀವಿಸುವವನಾಗಿ ಸಿಂಹಾಸನದ ಮೇಲೆ ಕುಳಿತಿರುವಾತನಿಗೆ ಆ ಜೀವಿಗಳು ಮಹಿಮೆ ಗೌರವ ಕೃತಜ್ಞತಾಸ್ತುತಿಗಳನ್ನು ಸಲ್ಲಿಸುತ್ತಿರುವಾಗ, ಆ ಇಪ್ಪತ್ನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಕುಳಿತಾತನ ಪಾದಕ್ಕೆ ಅಡ್ಡಬಿದ್ದು, ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ, “ಕರ್ತನೇ ನಮ್ಮ ದೇವರೇ ನೀನು ಮಹಿಮೆಯನ್ನು, ಗೌರವವನ್ನು, ಬಲವನ್ನು ಹೊಂದುವುದಕ್ಕೆ ಯೋಗ್ಯನಾಗಿದ್ದೀ, ಏಕೆಂದರೆ ಸಮಸ್ತವನ್ನು ಸೃಷ್ಟಿಸಿದಾತನು ನೀನೇ. ಎಲ್ಲವೂ ನಿನ್ನ ಚಿತ್ತದಿಂದಲೇ ಇದ್ದವು ಮತ್ತು ನಿನ್ನ ಚಿತ್ತದಿಂದಲೇ ನಿರ್ಮಿತವಾದವು” ಎಂದು ಹೇಳುತ್ತಾ ಯುಗಯುಗಾಂತರಗಳಲ್ಲಿಯೂ ಜೀವಿಸುವಾತನನ್ನು ಆರಾಧಿಸುತ್ತಿದ್ದರು.

ಸಿಂಹಾಸನವು, ನಾಲ್ಕು ಜೀವಿಗಳೂ ಇದ್ದ ಸ್ಥಳಕ್ಕೂ ಮತ್ತು ಹಿರಿಯರು ಇದ್ದ ಸ್ಥಳಕ್ಕೂ ಮಧ್ಯದಲ್ಲಿ ಒಂದು ಕುರಿಮರಿಯು ವಧಿಸಲ್ಪಟಂತೆ ನಿಂತಿರುವುದನ್ನು ಕಂಡೆನು. ಅದಕ್ಕೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು. ಅವು ಏನೆಂದರೆ ಭೂಮಿಯ ಮೇಲೆಲ್ಲಾ ಕಳುಹಿಸಲ್ಪಟ್ಟಿರುವ ದೇವರ ಏಳು ಆತ್ಮಗಳೇ.

ಇದಲ್ಲದೆ ಆಕಾಶದಲ್ಲಿಯೂ, ಭೂಮಿಯ ಮೇಲೆಯೂ, ಭೂಮಿಯ ಕೆಳಗಡೆಯೂ, ಸಮುದ್ರದಲ್ಲಿಯೂ ಇರುವ ಎಲ್ಲಾ ಸೃಷ್ಟಿಗಳೂ ಅಂದರೆ ಭೂಮ್ಯಾಕಾಶ ಸಮುದ್ರಗಳೊಳಗೆ ಇರುವುದೆಲ್ಲವೂ, “ಸಿಂಹಾಸನದ ಮೇಲೆ ಕುಳಿತಿದ್ದಾತನಿಗೂ ಕುರಿಮರಿಯಾದಾತನಿಗೂ ಸ್ತೋತ್ರ, ಗೌರವ, ಮಹಿಮೆ, ಅಧಿಪತ್ಯಗಳು ಯುಗಯುಗಾಂತರಗಳಲ್ಲಿಯೂ ಇರಲಿ” ಎಂದು ಹೇಳುವುದನ್ನು ಕೇಳಿದೆನು.

ಆ ದೂತನು, “ನೀವೆಲ್ಲರೂ ದೇವರಿಗೆ ಭಯಪಟ್ಟು ಆತನಿಗೆ ಮಹಿಮೆಯನ್ನು ಸಲ್ಲಿಸಿರಿ. ಏಕೆಂದರೆ ಆತನು ನ್ಯಾಯತೀರ್ಪು ಮಾಡುವ ಸಮಯವು ಬಂದಿದೆ. ಭೂಲೋಕ ಪರಲೋಕಗಳನ್ನೂ, ಸಮುದ್ರವನ್ನೂ, ನೀರಿನ ಬುಗ್ಗೆಗಳನ್ನೂ ಉಂಟುಮಾಡಿದಾತನನ್ನು ಆರಾಧಿಸಿರಿ” ಎಂದು ಮಹಾಧ್ವನಿಯಿಂದ ಹೇಳಿದನು.

ತರುವಾಯ ಬಹುದೊಡ್ಡ ಜನರ ಸಮೂಹದ ಶಬ್ದವು ಜಲಪ್ರವಾಹದ ಘೋಷದಂತೆಯೂ ಭಯಂಕರವಾದ ಗುಡುಗಿನ ಶಬ್ದದಂತೆಯೂ ಇದ್ದ ಒಂದು ಸ್ವರವನ್ನು ಕೇಳಿದೆನು. ಅದು, “ಹಲ್ಲೆಲೂಯಾ, ಸರ್ವಶಕ್ತನಾಗಿರುವ ನಮ್ಮ ದೇವರಾದ ಕರ್ತನು ಆಳುತ್ತಾನೆ.

ಆತನ ವಸ್ತ್ರದ ಮೇಲೂ, ತೊಡೆಯ ಮೇಲೂ “ರಾಜಾಧಿರಾಜನೂ ಕರ್ತಾಧಿ ಕರ್ತನೂ” ಎಂಬ ಹೆಸರು ಬರೆದಿದೆ.

ಪಟ್ಟಣದಲ್ಲಿ ನಾನು ದೇವಾಲಯವನ್ನು ಕಾಣಲಿಲ್ಲ. ಏಕೆಂದರೆ ಸರ್ವಶಕ್ತನಾಗಿರುವ ದೇವರಾದ ಕರ್ತನೂ ಯಜ್ಞದ ಕುರಿಮರಿಯಾದಾತನೂ ಅದರ ದೇವಾಲಯವಾಗಿದ್ದಾರೆ. ಪಟ್ಟಣಕ್ಕೆ ಬೆಳಕು ಕೊಡಲು ಸೂರ್ಯನಾಗಲಿ ಚಂದ್ರನಾಗಲಿ ಬೇಕಾಗಿರಲಿಲ್ಲ, ಏಕೆಂದರೆ ಅದಕ್ಕೆ ದೇವರ ಮಹಿಮೆಯೇ ಪ್ರಕಾಶವನ್ನು ಕೊಡುತ್ತಿತ್ತು. ಯಜ್ಞದ ಕುರಿಮರಿಯಾದಾತನೇ ಅದರ ದೀಪವು.

ನಾನೇಆದಿಯೂ, ಅಂತ್ಯವೂ,ಮೊದಲನೆಯವನೂ, ಕಡೆಯವನೂ,ಪ್ರಾರಂಭವೂ, ಸಮಾಪ್ತಿಯೂ ಆಗಿದ್ದೇನೆ.

Kannada - ಕನ್ನಡ - KN

KNIRV'19 - Kannada Indian Revised Version - 2019

This Bible text is from Kannada Indian Revised Version IRV 2019
https://open.bible/bibles/kannada-bridge-text-bible/
provided by: Bridge Connectivity Solutions Pvt Ltd, available by Creative Commons CC-BY-SA-4.0,
and this new compilation is shared as www.creativecommons.org/licenses/by-sa/4.0.
Languages are made available to you by www.ipedge.net