03 – ಮಾನವರು

ಇವು ಸರ್ವಶಕ್ತನಾದ ದೇವರ ಪವಿತ್ರ ಮಾತುಗಳು.
ಮಾನವರ ಮಾತುಗಳಲ್ಲಿ ನಮಗೆ ಆಸಕ್ತಿ ಇಲ್ಲ.
ದೇವರನ್ನು ಪ್ರೀತಿಸುವ ಯಾರಿಗಾದರೂ... ದೇವರು ಇದರ ಬಗ್ಗೆ ಹೀಗೆ ಹೇಳುತ್ತಾನೆ: ಮಾನವರು.

ಟಾಪ್ 3 ಅತ್ಯಂತ ಮಹತ್ವದ ಪದ್ಯಗಳು

ನನ್ನ ಅಂತರಿಂದ್ರಿಯಗಳನ್ನು ಉಂಟುಮಾಡಿದವನೂ, ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನಲ್ಲವೋ? ನೀನು ನನ್ನನ್ನು ಅದ್ಭುತವಾಗಿಯೂ, ವಿಚಿತ್ರವಾಗಿಯೂ ರಚಿಸಿದ್ದರಿಂದ, ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು, ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ.

ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವುದರಿಂದ ಯೆಹೂದ್ಯನು ಅಥವಾ ಗ್ರೀಕನು ಎಂದಾಗಲೀ, ಆಳು ಅಥವಾ ಒಡೆಯ ಎಂದಾಗಲೀ, ಗಂಡು ಹಾಗೂ ಹೆಣ್ಣು ಎಂದಾಗಲೀ ಭೇದವಿಲ್ಲ.

ಭೂಲೋಕದವರು ದೇವರ ದೃಷ್ಟಿಯಲ್ಲಿ ಕೆಟ್ಟ ನಡತೆಯಿಂದ ದೋಷಿಗಳಾಗಿದ್ದರು. ಹಿಂಸೆ ಮತ್ತು ಅನ್ಯಾಯ ಭೂಮಿಯನ್ನು ತುಂಬಿಕೊಂಡಿತ್ತು. ದೇವರು ಭೂಮಿಯನ್ನು ನೋಡಿದಾಗ ಅದು ಕೆಟ್ಟುಹೋಗಿ ಕಲುಷಿತಗೊಂಡಿತ್ತು. ಭೂನಿವಾಸಿಗಳೆಲ್ಲರೂ ತಮ್ಮ ನಡವಳಿಕೆಯನ್ನು ಕೆಡಿಸಿಕೊಂಡಿದ್ದರು.

ಕ್ಯಾನೊನಿಕಲ್ ಕ್ರಮದಲ್ಲಿ ಪ್ರತಿ ವಚನ - 141 ಭಾಗಗಳು

ಆಮೇಲೆ ದೇವರು, ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟು ಮಾಡೋಣ. ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ, ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ, ಪ್ರಾಣಿಗಳ ಮೇಲೆಯೂ, ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಕೀಟಗಳ ಮೇಲೆಯೂ ಎಲ್ಲಾ ಭೂಮಿಯ ಮೇಲೆಯೂ ದೊರೆತನಮಾಡಲಿ ಅಂದನು. ಹೀಗೆ ದೇವರು; “ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು. ದೇವರ ಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು. ಅವರನ್ನು ಗಂಡುಹೆಣ್ಣಾಗಿ ಸೃಷ್ಟಿ ಮಾಡಿದನು.” ಇದಲ್ಲದೆ ದೇವರು ಅವರನ್ನು ಆಶೀರ್ವದಿಸಿ, “ನೀವು ಬಹು ಸಂತಾನವುಳ್ಳವರಾಗಿ ಹೆಚ್ಚಿರಿ. ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನ ಮಾಡಿರಿ” ಎಂದು ಅವರಿಗೆ ಹೇಳಿದನು. ಅಲ್ಲದೆ ದೇವರು, “ಇಗೋ, ಸಮಸ್ತ ಭೂಮಿಯ ಮೇಲಿರುವ ಬೀಜವುಳ್ಳ ಎಲ್ಲಾ ಪೈರುಗಳನ್ನೂ, ಬೀಜವುಳ್ಳ ಎಲ್ಲಾ ಹಣ್ಣಿನ ಮರಗಳನ್ನೂ ನಿಮಗೆ ಆಹಾರಕ್ಕಾಗಿ ಕೊಟ್ಟಿದ್ದೇನೆ ಇದಲ್ಲದೆ ಭೂಮಿಯ ಮೇಲೆ ತಿರುಗಾಡುವ ಮೃಗಗಳು, ಆಕಾಶದಲ್ಲಿ ಹಾರಾಡುವ ಪಕ್ಷಿಗಳು, ನೆಲದಲ್ಲಿ ಹರಿದಾಡುವ ಕ್ರಿಮಿಕೀಟಗಳು ಮೊದಲಾದ ಜೀವಿಗಳಿಗೆ ಹಸುರಾದ ಸಸ್ಯಗಳನ್ನೆಲ್ಲಾ ಆಹಾರಕ್ಕಾಗಿ ಕೊಟ್ಟಿದ್ದೇನೆ” ಎಂದು ಹೇಳಿದನು. ಅದು ಹಾಗೆಯೇ ಆಯಿತು.

ಹೀಗಿರಲು ಯೆಹೋವನಾದ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ಸೃಷ್ಟಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು. ಆಗ ಮನುಷ್ಯನು ಬದುಕುವ ಪ್ರಾಣಿಯಾದನು.

ಅನಂತರ ಯೆಹೋವನಾದ ದೇವರು, “ಮನುಷ್ಯನು ಒಂಟಿಯಾಗಿರುವುದು ಒಳ್ಳೆಯದಲ್ಲ. ಅವನಿಗೆ ಸರಿಯಾದ ಸಹಕಾರಿಯನ್ನು ಉಂಟುಮಾಡುವೆನು” ಅಂದನು.

“ಈಗ ಸರಿ, ಈಕೆಯು ನನ್ನ ಎಲುಬುಗಳಿಂದ ಬಂದ ಎಲುಬು, ನನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ. ಈಕೆಯು ಮನುಷ್ಯನಿಂದ ಉತ್ಪತ್ತಿಯಾದ ಕಾರಣ ನಾರೀ ಎನ್ನಿಸಿಕೊಳ್ಳುವಳು” ಅಂದನು. ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗಿರುವರು. ಆ ಮನುಷ್ಯನು ಮತ್ತು ಅವನ ಹೆಂಡತಿ ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ.

ನೀನು ಪುನಃ ಮಣ್ಣಿಗೆ ಸೇರುವ ತನಕ ಬೆವರು ಸುರಿಸುತ್ತಾ ಬೇಕಾದ ಆಹಾರವನ್ನು ಸಂಪಾದಿಸಬೇಕು. ನೀನು ಮಣ್ಣಿನಿಂದ ತೆಗೆಯಲ್ಪಟ್ಟವನಾಗಿರುವುದರಿಂದ ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ” ಎಂದು ಹೇಳಿದನು.

ಆದಾಮನ ವಂಶದವರ ದಾಖಲೆ: ದೇವರು ಸೃಷ್ಟಿಕಾಲದಲ್ಲಿ ಮನುಷ್ಯನನ್ನು ತನ್ನ ಹೋಲಿಕೆಗನುಸಾರವಾಗಿ ಸೃಷ್ಟಿ ಮಾಡಿದನು. ಅವರನ್ನು ಗಂಡು ಮತ್ತು ಹೆಣ್ಣಾಗಿ ಉಂಟು ಮಾಡಿದನು. ಇದಲ್ಲದೆ, ಅವರನ್ನು ಸೃಷ್ಟಿಸಿದ ದಿನದಲ್ಲಿ, ಅವರನ್ನು ಆಶೀರ್ವದಿಸಿ ಅವರಿಗೆ “ಮನುಷ್ಯ” ಎಂದು ಹೆಸರಿಟ್ಟನು.

ಆಗ ಯೆಹೋವನು, “ನನ್ನ ಆತ್ಮವು ಮನುಷ್ಯರಲ್ಲಿ ಶಾಶ್ವತವಾಗಿ ಹೆಣಗಲು ಸಾಧ್ಯವಿಲ್ಲ; ಏಕೆಂದರೆ ಅವರು ರಕ್ತಮಾಂಸ ಹೊಂದಿರುವ ಮರ್ತ್ಯರೇ. ಅವರು ನೂರ ಇಪ್ಪತ್ತು ವರ್ಷ ಬದುಕುವರು” ಅಂದನು.

ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿರುವುದನ್ನೂ, ಅವರು ತಮ್ಮ ಹೃದಯದಲ್ಲಿ ಯೋಚಿಸುವುದೆಲ್ಲವು ಯಾವಾಗಲೂ ಕೆಟ್ಟ ಆಲೋಚನೆಗಳನ್ನೇ ಮಾಡುತ್ತಿರುವುದನ್ನು ಯೆಹೋವನು ನೋಡಿದನು. ಯೆಹೋವನು ಭೂಮಿಯ ಮೇಲೆ ಮನುಷ್ಯರನ್ನು ಉಂಟುಮಾಡಿದ್ದಕ್ಕೆ ವ್ಯಥೆಪಟ್ಟು, ತನ್ನ ಹೃದಯದಲ್ಲಿ ನೊಂದುಕೊಂಡನು.

ಭೂಲೋಕದವರು ದೇವರ ದೃಷ್ಟಿಯಲ್ಲಿ ಕೆಟ್ಟ ನಡತೆಯಿಂದ ದೋಷಿಗಳಾಗಿದ್ದರು. ಹಿಂಸೆ ಮತ್ತು ಅನ್ಯಾಯ ಭೂಮಿಯನ್ನು ತುಂಬಿಕೊಂಡಿತ್ತು. ದೇವರು ಭೂಮಿಯನ್ನು ನೋಡಿದಾಗ ಅದು ಕೆಟ್ಟುಹೋಗಿ ಕಲುಷಿತಗೊಂಡಿತ್ತು. ಭೂನಿವಾಸಿಗಳೆಲ್ಲರೂ ತಮ್ಮ ನಡವಳಿಕೆಯನ್ನು ಕೆಡಿಸಿಕೊಂಡಿದ್ದರು.

ಅದರ ಸುವಾಸನೆಯು ಯೆಹೋವನಿಗೆ ಗಮಗಮಿಸಲು ಆತನು ಹೃದಯದೊಳಗೆ, “ಮನುಷ್ಯರ ಹೃದಯದ ಆಲೋಚನೆ ಚಿಕ್ಕಂದಿನಿಂದಲೇ ಕೆಟ್ಟದ್ದು, ಆದರೂ ನಾನು ಇನ್ನು ಮೇಲೆ ಅವರ ನಿಮಿತ್ತವಾಗಿ ಭೂಮಿಯನ್ನು ಶಪಿಸುವುದಿಲ್ಲ. ನಾನು ಎಲ್ಲಾ ಜೀವಿಗಳನ್ನೂ ಈಗ ನಾಶಮಾಡಿದಂತೆ ಇನ್ನು ಮೇಲೆ ನಾಶ ಮಾಡುವುದಿಲ್ಲ.

ಏಕೆಂದರೆ ಪ್ರತಿದೇಹಿಗೂ ರಕ್ತವೇ ಪ್ರಾಣಾಧಾರ. ಅಂತಹ ರಕ್ತವನ್ನು ನೀವು ಯಜ್ಞವೇದಿಗೆ ಎರಚಿ ನಿಮಗೋಸ್ಕರ ದೋಷಪರಿಹಾರ ಮಾಡಿಕೊಳ್ಳಬೇಕೆಂದು ನಿಮಗೆ ಅನುಗ್ರಹ ಮಾಡಿದ್ದೇನೆ. ರಕ್ತವು ಪ್ರಾಣಾಧಾರವಾಗಿರುವ ಕಾರಣ ಅದರಿಂದ ದೋಷಪರಿಹಾರ ಆಗುತ್ತದಷ್ಟೆ.

“ಯೆಹೋವನೇ ಸಾಯಿಸುವವನೂ ಬದುಕಿಸುವವನೂ; ಪಾತಾಳದಲ್ಲಿ ದೊಬ್ಬುವವನೂ ಮೇಲಕ್ಕೆ ಬರಮಾಡುವವನೂ ಆತನೇ.

ಆದರೆ ಯೆಹೋವನು ಸಮುವೇಲನಿಗೆ, “ನೀನು ಅವನ ಸೌಂದರ್ಯವನ್ನೂ, ಎತ್ತರವನ್ನೂ ನೋಡಬೇಡ; ನಾನು ಅವನನ್ನು ನಿರಾಕರಿಸಿದ್ದೇನೆ. ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯದ ಮತ್ತು ಅಂತರಂಗದ ಸೌಂದರ್ಯ ನೋಡುವವನಾಗಿದ್ದಾನೆ” ಅಂದನು.

“ಏನೂ ಇಲ್ಲದವನಾಗಿ ತಾಯಿಯ ಗರ್ಭದಿಂದ ಬಂದೆನು; ಏನೂ ಇಲ್ಲದವನಾಗಿಯೇ ಗತಿಸಿಹೋಗುವೆನು; ನನಗಿರುವುದನ್ನೆಲ್ಲ ಯೆಹೋವನೇ ಕೊಟ್ಟನು, ಅವುಗಳನ್ನು ಯೆಹೋವನೇ ತೆಗೆದುಕೊಂಡನು; ಯೆಹೋವನ ನಾಮಕ್ಕೆ ಸ್ತೋತ್ರವಾಗಲಿ” ಎಂದು ಹೇಳಿದನು.

ಆಹಾ, ಆತನು ತನ್ನ ಸೇವಕರಲ್ಲಿಯೂ ನಂಬಿಕೆಯನ್ನಿಡುವುದಿಲ್ಲ, ತನ್ನ ದೂತರ ಮೇಲೆ ತಪ್ಪುಹೊರಿಸುತ್ತಾನೆ. ಧೂಳಿನಲ್ಲಿರುವ ಅಸ್ತಿವಾರದ ಮೇಲೆ, ಮಣ್ಣಿನಿಂದಾದ ಶರೀರಗಳೆಂಬ ಮನೆಗಳೊಳಗೆ ವಾಸಿಸುವವರಲ್ಲಿ ಇನ್ನೆಷ್ಟೋ ಹೆಚ್ಚಾಗಿ ತಪ್ಪು ಕಂಡುಹಿಡಿಯಬಹುದು. ಅವರು ದೀಪದ ಹುಳದಂತೆ ಅಳಿದು ಹೋಗುತ್ತಾರೆ.

ನಾವಾದರೋ ನಿನ್ನೆ ಹುಟ್ಟಿದವರು, ನಮಗೆ ಏನೂ ತಿಳಿಯದು. ಭೂಲೋಕದಲ್ಲಿನ ನಮ್ಮ ದಿನಗಳು ನೆರಳಿನಂತಿವೆಯಷ್ಟೆ.

ನೀನು ನನ್ನನ್ನು ನಿರ್ಮಿಸಿ ರೂಪಿಸಿದ್ದರೂ, ಈಗ ಮನಸ್ಸನ್ನು ಬೇರೆ ಮಾಡಿಕೊಂಡು ನನ್ನನ್ನು ನಾಶ ಮಾಡಿಬಿಡುವೆಯಾ? ನೀನು ನನ್ನನ್ನು ಜೇಡಿಮಣ್ಣಿನಿಂದಲೇ ರೂಪಿಸಿದ್ದೀಯೆಂದು ಕೃಪೆಮಾಡಿ ನೆನಸಿಕೋ. ನನ್ನನ್ನು ತಿರುಗಿ ಮಣ್ಣಾಗುವಂತೆ ಮಾಡುವೆಯಾ? ನೀನು ನನ್ನನ್ನು ಹಾಲಿನಂತೆ ಹೊಯ್ದು, ಮೊಸರಿನ ಹಾಗೆ ಹೆಪ್ಪುಗಟ್ಟಿಸಿದಿಯಲ್ಲಾ. ನನ್ನನ್ನು ಎಲುಬು ನರಗಳಿಂದ ಹೆಣೆದು ಮಾಂಸಚರ್ಮಗಳಿಂದ ಹೊದಿಸಿದಿ. ನೀನು ನನಗೆ ಜೀವವನ್ನು ಅನುಗ್ರಹಿಸಿ ಕೃಪೆತೋರಿಸಿದ್ದಿ; ನಿನ್ನ ಪರಾಂಬರಿಕೆ ನನ್ನ ಆತ್ಮವನ್ನು ಕಾಪಾಡಿದೆ.

ಪ್ರತಿ ಪ್ರಾಣಿಯ ಪ್ರಾಣವು, ಸಮಸ್ತ ಮನುಷ್ಯರ ಆತ್ಮಗಳೂ ಯೆಹೋವನ ಕೈಯಲ್ಲಿರುವವು.

“ಮಾನವ ಜನ್ಮ ಪಡೆದವನು, ಅಲ್ಪಾಯುಷ್ಯನಾಗಿಯೂ, ಕಳವಳದಿಂದ ತುಂಬಿದವನಾಗಿಯೂ ಇರುವನು. ಹೂವಿನ ಹಾಗೆ ಅರಳಿ ಬಾಡುವನು, ನೆರಳಿನಂತೆ ನಿಲ್ಲದೆ ಓಡಿಹೋಗುವನು.

ಮನುಷ್ಯನ ದಿನಗಳು ಇಷ್ಟೇ ಎಂಬುದು ತೀರ್ಮಾನವಾಗಿದೆಯಲ್ಲಾ; ಅವನ ತಿಂಗಳುಗಳ ಲೆಕ್ಕವು ನಿನಗೆ ಗೊತ್ತು; ದಾಟಲಾರದ ಗಡಿಗಳನ್ನು ಅವನಿಗೆ ನೇಮಿಸಿದ್ದಿ.

ಹೀಗಿರಲು ಅಧರ್ಮವನ್ನು ನೀರಿನಂತೆ ಕುಡಿಯುತ್ತಾ ಅಸಹ್ಯನೂ, ಕೆಟ್ಟವನೂ ಆದ ನರಜನ್ಮದವನು ಮತ್ತೂ ಅಶುದ್ಧನಲ್ಲವೇ!

ನಾನು ಹಿಂದಿರುಗದ ದಾರಿಯನ್ನು, ಕೆಲವು ವರ್ಷಗಳೊಳಗೆ ಹಿಡಿಯುವೆನು.”

ಹೀಗಿರುವಲ್ಲಿ ನರಹುಳವು ಅಶುದ್ಧವಾದದ್ದು! ನರಕ್ರಿಮಿಯು ಎಷ್ಟೋ ಅಪವಿತ್ರವಾಗಿದ್ದಾನೆ!”

ನನ್ನ ನ್ಯಾಯವನ್ನು ತಪ್ಪಿಸಿದ ದೇವರಾಣೆ, ನನ್ನ ಆತ್ಮವನ್ನು ವ್ಯಥೆಪಡಿಸಿರುವ ಸರ್ವಶಕ್ತನಾದ ದೇವರಾಣೆ, ನನ್ನ ತುಟಿಗಳು ಅನ್ಯಾಯವನ್ನು ನುಡಿಯುವುದೇ ಇಲ್ಲ, ನನ್ನ ನಾಲಿಗೆಯು ಎಂದಿಗೂ ಮೋಸದ ಮಾತುಗಳನ್ನಾಡುವುದಿಲ್ಲ.

ನಾನು ದೇವರಾತ್ಮನಿಂದಲೇ ನಿರ್ಮಿತನಾಗಿದ್ದೇನೆ, ನನ್ನ ಜೀವವು ಸರ್ವಶಕ್ತನಾದ ದೇವರ ಶ್ವಾಸದಿಂದುಂಟಾಗಿದೆ.

ಮನುಷ್ಯನು ಎಷ್ಟು ಮಾತ್ರದವನು, ಅವನನ್ನು ನೀನು ಏಕೆ ಸ್ಮರಿಸಬೇಕು? ಮಾನವನು ಎಷ್ಟರವನು? ಅವನಲ್ಲಿ ಏಕೆ ಲಕ್ಷ್ಯವಿಡಬೇಕು?

ಅವನನ್ನು ದೇವರಿಗಿಂತ ಸ್ವಲ್ಪವೇ ಕಡಿಮೆಯಾಗಿ ಸೃಷ್ಟಿ ಮಾಡಿದಿಯಲ್ಲಾ; ಪ್ರಭಾವವನ್ನೂ ಮತ್ತು ಮಾನವನ್ನೂ ಅವನಿಗೆ ಕಿರೀಟವಾಗಿ ಇಟ್ಟಿದ್ದಿ. ನೀನು ಸೃಷ್ಟಿಸಿದ ಎಲ್ಲಾ ವಸ್ತುಗಳ ಮೇಲೆ ಪ್ರಭುತ್ವವನ್ನು ಅವನಿಗೆ ಅನುಗ್ರಹಿಸಿದಿ. ನೀನು ಎಲ್ಲಾ ಕುರಿ, ದನಗಳನ್ನು ಮಾತ್ರವೇ ಅಲ್ಲದೆ ಕಾಡುಮೃಗಗಳು, ಆಕಾಶದ ಪಕ್ಷಿಗಳು, ಸಮುದ್ರದ ಮೀನುಗಳು, ಅದರಲ್ಲಿ ಸಂಚರಿಸುವ ಸಕಲವಿಧವಾದ ಜೀವಜಂತುಗಳು, ಇವೆಲ್ಲವನ್ನೂ ಅವನಿಗೆ ಅಧೀನಮಾಡಿದ್ದೀಯಲ್ಲವೇ.

ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನದು. ದುರ್ಮತಿಗಳು ತಮ್ಮ ಮನಸ್ಸಿನಲ್ಲಿ, “ದೇವರೇ ಇಲ್ಲ” ಎಂದು ಅಂದುಕೊಳ್ಳುತ್ತಾರೆ; ಅವರು ಕೆಟ್ಟುಹೋದವರು; ಹೇಯವಾದ ಅಕ್ರಮಗಳನ್ನು ನಡೆಸುತ್ತಾರೆ. ಅವರಲ್ಲಿ ಒಳ್ಳೆಯದನ್ನು ಮಾಡುವವರೇ ಇಲ್ಲ. ಮನುಷ್ಯರಲ್ಲಿ ತನ್ನ ಸಾನ್ನಿಧ್ಯವನ್ನು ಅಪೇಕ್ಷಿಸುವ ಬುದ್ಧಿವಂತರು ಇದ್ದಾರೋ, ಎಂದು ಯೆಹೋವನು ಆಕಾಶದಿಂದ ಮನುಷ್ಯರನ್ನು ನೋಡಲಾಗಿ, ಒಳ್ಳೆಯದನ್ನು ಮಾಡುವವನು ಇಲ್ಲ, ಒಬ್ಬನಾದರೂ ಇಲ್ಲ. ಪ್ರತಿಯೊಬ್ಬನೂ ದಾರಿತಪ್ಪಿದವನು, ಎಲ್ಲರೂ ಕೆಟ್ಟು ಹೋದವರೇ.

ದಾವೀದನ ಕೀರ್ತನೆ. ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನದು; ಲೋಕವೂ ಮತ್ತು ಅದರ ನಿವಾಸಿಗಳೂ ಆತನವೇ. ಆತನೇ ಅದರ ಅಸ್ತಿವಾರವನ್ನು ಸಾಗರದ ಮೇಲೆ ಹಾಕಿದವನು; ಅದನ್ನು ಜಲರಾಶಿಗಳ ಮೇಲೆ ಸ್ಥಿರಪಡಿಸಿದವನು ಆತನೇ.

ಯೆಹೋವನು ಆಕಾಶದಿಂದ ಮನುಷ್ಯರೆಲ್ಲರನ್ನು ನೋಡುತ್ತಾನೆ; ತಾನಿರುವ ಸ್ಥಾನದಿಂದ ಭೂನಿವಾಸಿಗಳೆಲ್ಲರನ್ನು ದೃಷ್ಟಿಸುತ್ತಾನೆ. ಅವರೆಲ್ಲರ ಹೃದಯಗಳನ್ನು ನಿರ್ಮಿಸಿದವನೂ, ಅವರ ಕೃತ್ಯಗಳನ್ನೆಲ್ಲಾ ವಿವೇಚಿಸುವವನೂ ಆತನೇ.

“ಯೆಹೋವನೇ, ನನಗೆ ಅವಸಾನವುಂಟೆಂದೂ, ನನ್ನ ಜೀವಮಾನವು ಅತ್ಯಲ್ಪವೆಂದೂ, ನಾನು ಎಷ್ಟೋ ಅಸ್ಥಿರನೆಂದೂ ನನಗೆ ತಿಳಿಯಪಡಿಸು. ನನ್ನ ಆಯುಷನ್ನು ಗೇಣುದ್ದವಾಗಿ ಮಾಡಿದ್ದೀಯಲ್ಲಾ; ನನ್ನ ಜೀವಿತಕಾಲ ನಿನ್ನ ಎಣಿಕೆಯಲ್ಲಿ ಏನೂ ಅಲ್ಲ” ಅಂದೆನು. ಮನುಷ್ಯನೆಂಬವನು ಎಷ್ಟು ಸ್ಥಿರನೆಂದು ಕಂಡರೂ ಬರಿ ಉಸಿರೇ. ಸೆಲಾ

ನೀನು ನರನನ್ನು ಪಾಪದ ನಿಮಿತ್ತ ಗದರಿಸಿ ಶಿಕ್ಷಿಸುವಾಗ, ಅವನ ಚೆಲುವಿಕೆಯು ನುಸಿ ಹತ್ತಿತೋ ಎಂಬಂತೆ ಹಾಳಾಗಿ ಹೋಗುತ್ತದೆ. ಮನುಷ್ಯನೆಂಬವನು ಬರಿ ಉಸಿರೇ. ಸೆಲಾ

ಹುಟ್ಟಿದಂದಿನಿಂದ ನಾನು ಪಾಪಿಯೇ; ಮಾತೃಗರ್ಭವನ್ನು ಹೊಂದಿದ ದಿನದಿಂದ ದ್ರೋಹಿಯೇ.

ಕುಗ್ಗಿದ ಮನಸ್ಸೇ ದೇವರಿಗೆ ಇಷ್ಟವಾದ ಯಜ್ಞ; ದೇವರೇ, ಪಶ್ಚಾತ್ತಾಪದಿಂದ ಜಜ್ಜಿಹೋದ ಮನಸ್ಸನ್ನು ನೀನು ತಿರಸ್ಕರಿಸುವುದಿಲ್ಲ.

ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ಆರಿಸಿಕೊಂಡದ್ದು; ಮಹಲಾತ್ ಎಂಬ ರಾಗದ ಪ್ರಕಾರ ಹಾಡತಕ್ಕದ್ದು; ದಾವೀದನ ಪದ್ಯ. ದುರ್ಮತಿಗಳು, “ದೇವರಿಲ್ಲ” ಎಂದು ತಮ್ಮ ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ; ಅವರು ಕೆಟ್ಟವರು; ಅಸಹ್ಯವಾದ ಅಕ್ರಮಗಳನ್ನು ನಡೆಸುತ್ತಾರೆ; ಅವರಲ್ಲಿ ಒಳ್ಳೆಯದನ್ನು ಮಾಡುವವರೇ ಇಲ್ಲ. ಮನುಷ್ಯರಲ್ಲಿ ತನ್ನ ಸಾನ್ನಿಧ್ಯವನ್ನು ಅಪೇಕ್ಷಿಸುವ ಬುದ್ಧಿವಂತರು ಇದ್ದಾರೋ ಎಂದು ದೇವರು ಆಕಾಶದಿಂದ ಮನುಷ್ಯರನ್ನು ನೋಡಲಾಗಿ, ಒಳ್ಳೆಯದನ್ನು ನಡೆಸುವವರು ಒಬ್ಬರೂ ಇಲ್ಲ; ಅವರೆಲ್ಲರೂ ದ್ರೋಹಿಗಳಾಗಿ ಕೆಟ್ಟುಹೋದವರೇ.

ಅವರು ಮಾಂಸಮಾತ್ರದವರೂ, ಶ್ವಾಸವನ್ನು ತಿರುಗಿ ಪಡೆಯದವರಾಗಿದ್ದಾರೆ ಎಂಬುದನ್ನು ನೆನಪುಮಾಡಿಕೊಳ್ಳುತ್ತಿದ್ದನು.

ನನ್ನ ಆಯುಷ್ಯವು ಎಷ್ಟು ಅಲ್ಪವೆಂದೂ, ಎಂಥಾ ವ್ಯರ್ಥ ಜೀವಿತಕ್ಕಾಗಿ ಮನುಷ್ಯರನ್ನು ನಿರ್ಮಿಸಿದ್ದಿ ಎಂದೂ ಜ್ಞಾಪಿಸಿಕೋ. ತಮ್ಮನ್ನು ಪಾತಾಳಕ್ಕೆ ತಪ್ಪಿಸಿಕೊಂಡು, ಮರಣಹೊಂದದೆ ಚಿರಂಜೀವಿಯಾಗಿರುವವರು ಯಾರು? ಸೆಲಾ

ನಮ್ಮ ಆಯುಷ್ಕಾಲವು ಎಪ್ಪತ್ತು ವರ್ಷ, ಬಲ ಹೆಚ್ಚಿದರೆ ಎಂಭತ್ತು; ಕಷ್ಟಸಂಕಟಗಳೇ ಅದರ ಆಡಂಬರ. ಅದು ಬೇಗನೆ ಗತಿಸಿಹೋಗುತ್ತದೆ; ನಾವು ಹಾರಿ ಹೋಗುತ್ತೇವೆ.

ನಮ್ಮ ದಿನಗಳು ಕೊಂಚವೇ ಎಂದು ಎಣಿಸಿಕೊಳ್ಳುವ ಹಾಗೆ ನಮಗೆ ಕಲಿಸು; ಆಗ ಜ್ಞಾನದ ಹೃದಯವನ್ನು ಪಡೆದುಕೊಳ್ಳುವೆವು.

ನನ್ನ ಜೀವಮಾನವು ಸಂಜೆಯ ನೆರಳಿನಂತಿದೆ; ನಾನು ಬಾಡಿಹೋದ ಹುಲ್ಲಿನಂತಿದ್ದೇನೆ. ಯೆಹೋವನೇ, ನೀನಾದರೋ ಸದಾ ಸಿಂಹಾಸನಾರೂಢನಾಗಿರುವಿ; ನಿನ್ನ ನಾಮವು ತಲತಲಾಂತರಕ್ಕೂ ಸ್ಮರಿಸಲ್ಪಡುವುದು.

ನಾವು ರೂಪಗೊಂಡಿದ್ದನ್ನು ಆತನು ಬಲ್ಲನು; ನಾವು ಧೂಳಾಗಿದ್ದೇವೆ ಎಂಬುವುದನ್ನು ನೆನಪುಮಾಡಿಕೊಳ್ಳುತ್ತಾನೆ. ಮನುಷ್ಯನ ಆಯುಷ್ಕಾಲವು ಹುಲ್ಲಿನಂತಿದೆ; ಅವನು ಅಡವಿಯ ಹೂವಿನ ಹಾಗೆ ಶೋಭಿಸುತ್ತಾನೆ. ಗಾಳಿ ಬಡಿಯುತ್ತಲೇ ಅದು ಹೋಗುವುದು; ಅದರ ಸ್ಥಳವು ಅದನ್ನು ತಿರುಗಿ ಕಾಣುವುದಿಲ್ಲ.

ನೀನು ವಿಮುಖನಾಗಲು ತಲ್ಲಣಿಸುತ್ತವೆ; ಅವುಗಳ ಶ್ವಾಸವನ್ನು ತೆಗೆದುಬಿಡಲು ಅವು ಸತ್ತು ತಿರುಗಿ ಮಣ್ಣಿಗೆ ಸೇರುತ್ತವೆ.

ಪರಲೋಕವು ಯೆಹೋವನದು; ಭೂಲೋಕವನ್ನು ಮಾನವ ಸಂತಾನಕ್ಕೆ ಕೊಟ್ಟಿದ್ದಾನೆ. ಸತ್ತವರು ಯೆಹೋವನನ್ನು ಸ್ತುತಿಸುವುದಿಲ್ಲ; ಮೌನಲೋಕವನ್ನು ಸೇರಿದವರಲ್ಲಿ ಯಾರೂ ಆತನನ್ನು ಕೀರ್ತಿಸುವುದಿಲ್ಲ.

ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ. ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ ತಿಳಿದುಕೊಂಡಿದ್ದೀ; ನಾನು ಕುಳಿತುಕೊಳ್ಳುವುದು, ಏಳುವುದು ನಿನಗೆ ಗೊತ್ತಿದೆ, ದೂರದಿಂದಲೇ ನನ್ನ ಆಲೋಚನೆಗಳನ್ನು ಬಲ್ಲವನಾಗಿರುತ್ತಿ. ನಾನು ನಡೆಯುವುದನ್ನು, ಮಲಗುವುದನ್ನು ಶೋಧಿಸಿ ಗ್ರಹಿಸಿಕೊಳ್ಳುತ್ತಿ, ನನ್ನ ನಡತೆಯೆಲ್ಲಾ ನಿನಗೆ ಗೋಚರವಾಗಿದೆ. ಯೆಹೋವನೇ, ನನ್ನ ನಾಲಿಗೆಯ ಮಾತುಗಳಲ್ಲಿ, ನೀನು ಅರಿಯದೆ ಇರುವಂಥದು ಒಂದೂ ಇಲ್ಲ.

ನನ್ನ ಅಂತರಿಂದ್ರಿಯಗಳನ್ನು ಉಂಟುಮಾಡಿದವನೂ, ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನಲ್ಲವೋ? ನೀನು ನನ್ನನ್ನು ಅದ್ಭುತವಾಗಿಯೂ, ವಿಚಿತ್ರವಾಗಿಯೂ ರಚಿಸಿದ್ದರಿಂದ, ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು, ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ. ನಾನು ಗುಪ್ತಸ್ಥಳದಲ್ಲಿ ಏರ್ಪಡುತ್ತಾ, ಭೂಗರ್ಭದಲ್ಲಿ ರಚಿಸಲ್ಪಡುತ್ತಾ ಇದ್ದಾಗ, ನನ್ನ ಅಸ್ಥಿಪಂಜರವು ನಿನಗೆ ಮರೆಯಾಗಿದ್ದಿಲ್ಲ. ನಾನು ಇನ್ನೂ ಕೇವಲ ಪಿಂಡವಾಗಿರುವಾಗ, ನಿನ್ನ ಕಣ್ಣುಗಳು ನನ್ನನ್ನು ನೋಡಿದವು, ನನ್ನ ಆಯುಷ್ಕಾಲದ ಪ್ರಥಮದಿನವು ಪ್ರಾರಂಭವಾಗುವ ಮೊದಲೇ, ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು. ದೇವರೇ, ನಿನ್ನ ಸಂಕಲ್ಪಗಳು ನನ್ನ ಎಣಿಕೆಯಲ್ಲಿ ಎಷ್ಟೋ ಗೌರವವಾಗಿವೆ, ಅವುಗಳು ಎಷ್ಟೋ ಅಸಂಖ್ಯವಾಗಿವೆ. ಅವುಗಳನ್ನು ಲೆಕ್ಕಿಸುವುದಾದರೆ ಸಮುದ್ರದ ಮರಳಿಗಿಂತ ಹೆಚ್ಚಾಗಿವೆ, ನಾನು ಎಚ್ಚರವಾಗಲು ಮೊದಲಿನಂತೆಯೇ ನಿನ್ನ ಬಳಿಯಲ್ಲಿರುತ್ತೇನೆ.

ಮನುಷ್ಯನು ಬರೀ ಉಸಿರೇ, ಅವನ ಜೀವಕಾಲವು ಬೇಗನೆ ಗತಿಸಿಹೋಗುವ ನೆರಳಿನಂತಿದೆ.

ಪ್ರಭುಗಳಲ್ಲಾಗಲಿ, ಮನುಷ್ಯರಲ್ಲಾಗಲಿ ಭರವಸವಿಡಬೇಡಿರಿ, ಅವರು ಸಹಾಯ ಮಾಡ ಶಕ್ತರಲ್ಲ, ಉಸಿರು ಹೋಗಲು ಅವರು ಮಣ್ಣಿಗೆ ಸೇರುತ್ತಾರೆ, ಅವರ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವುದು.

ವಕ್ರಹೃದಯರು ಯೆಹೋವನಿಗೆ ಅಸಹ್ಯರು, ಸನ್ಮಾರ್ಗಿಗಳು ಆತನ ದಯೆಗೆ ಪಾತ್ರರು.

ರಾಜನ ಸಂಕಲ್ಪಗಳು ಯೆಹೋವನ ಕೈಯಲ್ಲಿ ಇರುವ ನೀರಿನ ಕಾಲುವೆಗಳಂತೆ ಇವೆ, ಆತನು ತನಗೆ ಬೇಕಾದ ಕಡೆಗೆ ಅದನ್ನು ತಿರುಗಿಸುತ್ತಾನೆ. ನರನ ನಡತೆಯು ಸ್ವಂತ ದೃಷ್ಟಿಗೆ ಸರಿಯಾಗಿ ಕಾಣುತ್ತವೆ, ಯೆಹೋವನು ಹೃದಯಗಳನ್ನೇ ಪರೀಕ್ಷಿಸುವನು.

ಬಡವರು ಮತ್ತು ಸಿರಿವಂತರು ಸ್ಥಿತಿಯಲ್ಲಿ ಎದುರುಬದುರಾಗಿದ್ದಾರೆ, ಯೆಹೋವನೇ ಅವರನ್ನೆಲ್ಲಾ ಸೃಷ್ಟಿಸಿದನು.

ತಾಯಿಯ ಗರ್ಭದಿಂದ ಹೇಗೆ ಬಂದನೋ ಹಾಗೆಯೇ ಏನೂ ಇಲ್ಲದವನಾಗಿ ಗತಿಸಿ ಹೋಗುವನು. ಅವನು ಪ್ರಯಾಸಪಟ್ಟರೂ, ತನ್ನ ಕೈಯಲ್ಲಿ ಏನೂ ತೆಗೆದುಕೊಂಡು ಹೋಗುವುದಿಲ್ಲ.

ಸುಗಂಧತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ, ಮತ್ತು ಜನನ ದಿನಕ್ಕಿಂತ ಮರಣ ದಿನವೇ ಮೇಲು.

ಪಾಪಮಾಡದೇ ಧರ್ಮವನ್ನೇ ಆಚರಿಸುತ್ತಿರುವ ಸತ್ಪುರುಷರು ಲೋಕದಲ್ಲಿ ಇಲ್ಲವೇ ಇಲ್ಲ.

ಗಾಳಿಯನ್ನು ತಡೆಯುವ ಶಕ್ತಿಯು ಹೇಗೆ ಯಾರಿಗೂ ಇಲ್ಲವೋ, ಹಾಗೆಯೇ ತಮ್ಮ ಮರಣ ದಿನವನ್ನು ತಡೆಯುವ ಶಕ್ತಿಯು ಯಾರಿಗೂ ಇಲ್ಲ. ಯುದ್ಧ ಕಾಲದಲ್ಲಿ ಹೇಗೆ ವಿರಾಮ ದೊರೆಯುವುದಿಲ್ಲವೋ, ಹಾಗೆಯೇ ದುಷ್ಟನಿಗೆ ದುಷ್ಟತನದಿಂದ ಬಿಡುಗಡೆಯೇ ಇಲ್ಲ.

ಈ ಲೋಕದಲ್ಲಿ ನಡೆಯುವ ಎಲ್ಲಾ ಸಂಗತಿಗಳಿಗೂ ಕೆಟ್ಟ ಪ್ರತಿಫಲ ಉಂಟು ಮತ್ತು ಎಲ್ಲರಿಗೂ ಒಂದೇ ಗತಿಯಾಗುವುದು. ಇದಲ್ಲದೆ ಮನುಷ್ಯರ ಹೃದಯದಲ್ಲಿ ಕೆಟ್ಟತನವು ತುಂಬಿದೆ. ಅವರು ಬದುಕಿರುವ ತನಕ ಹುಚ್ಚುತನವು ಅವರ ಮನಸ್ಸನ್ನು ಹಿಡಿದಿರುವುದು. ಅನಂತರ ಅವರು ಸಾಯುತ್ತಾರೆ.

ಗಾಳಿಯ ಮಾರ್ಗವನ್ನೂ, ಗರ್ಭಿಣಿಯ ಗರ್ಭದಲ್ಲಿ ಎಲುಬುಗಳು ಬೆಳೆಯುವ ರೀತಿಯನ್ನೂ, ನೀನು ಹೇಗೆ ತಿಳಿಯುವುದಿಲ್ಲವೋ ಹಾಗೆಯೇ, ಸರ್ವಶಕ್ತನಾದ ದೇವರ ಕಾರ್ಯವನ್ನು ಅರಿಯುವುದಿಲ್ಲ.

ಆಹಾ, ವಾಣಿಯು ಮತ್ತೆ ಕೇಳಿಸಿ, “ಕೂಗು ಎನ್ನುತ್ತದೆ” ಅದಕ್ಕೆ ನಾನು, “ಏನು ಕೂಗಲಿ?” ಎಂದು ಕೇಳಲು, “ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ, ಅದರ ಲಾವಣ್ಯವೆಲ್ಲಾ ಅಡವಿಯ ಹೂವಿನಂತಿದೆ. ಯೆಹೋವನ ಶ್ವಾಸವು ಅದರ ಮೇಲೆ ಬೀಸುವುದರಿಂದ ಹುಲ್ಲು ಒಣಗಿ ಹೋಗುವುದು, ಹೂವು ಬಾಡಿ ಹೋಗುವುದು. ನಿಶ್ಚಯವಾಗಿ ಜನರು ಹುಲ್ಲೇ ಹುಲ್ಲು!

ಆಕಾಶಮಂಡಲವನ್ನು ಉಂಟುಮಾಡಿ ಹರಡಿ ಭೂಮಂಡಲವನ್ನೂ, ಅದರಲ್ಲಿನ ಉತ್ಪತ್ತಿಯನ್ನೂ ವಿಸ್ತರಿಸಿ ಲೋಕದ ಜನರಿಗೆ ಪ್ರಾಣವನ್ನು, ಹೌದು, ಭೂಜನರಿಗೆ ಜೀವಾತ್ಮವನ್ನೂ ದಯಪಾಲಿಸುವ ಯೆಹೋವನೆಂಬ ದೇವರು ಹೀಗೆನ್ನುತ್ತಾನೆ,

ನಿನ್ನನ್ನು ಗರ್ಭದಿಂದಲೂ ರೂಪಿಸುತ್ತಾ ಬಂದಿರುವ ನಿನ್ನ ವಿಮೋಚಕನಾದ ಯೆಹೋವನು ಹೀಗೆನ್ನುತ್ತಾನೆ, “ಸರ್ವವನ್ನು ಉಂಟುಮಾಡಿದ ಕರ್ತನಾದ ಯೆಹೋವನು ನಾನೇ, ನಾನೊಬ್ಬನೇ ಗಗನಮಂಡಲವನ್ನು ಹರಡಿ, ಭೂಮಂಡಲವನ್ನು ವಿಸ್ತರಿಸಿದ್ದೇನೆ.

ನಾನೇ, ನಾನೇ ನಿನ್ನನ್ನು ಸಂತೈಸುವವನು. ಮರ್ತ್ಯಮನುಷ್ಯನಿಗೆ, ಹುಲ್ಲಿನ ಗತಿಗೆ ಬರುವ ನರಜನ್ಮದವನಿಗೆ ಭಯಪಡುವ ನೀನು ಎಂಥವನು?

ನಾವೆಲ್ಲರೂ ಕುರಿಗಳಂತೆ ದಾರಿತಪ್ಪಿ ಹೋಗಿದ್ದೆವು, ಪ್ರತಿಯೊಬ್ಬನೂ ತನ್ನ ತನ್ನ ದಾರಿಯನ್ನು ಹಿಡಿಯುತ್ತಿದ್ದನು; ನಮ್ಮೆಲ್ಲರ ದೋಷಫಲವನ್ನೂ ಯೆಹೋವನು ಅವನ ಮೇಲೆ ಹಾಕಿದನು.

ಯೆಹೋವನು ಹೀಗೆನ್ನುತ್ತಾನೆ, “ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ. ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ, ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ, ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ.

ನಾವೆಲ್ಲರು ಅಶುದ್ಧನ ಹಾಗಿದ್ದೇವೆ, ನಮ್ಮ ಧರ್ಮಕಾರ್ಯಗಳೆಲ್ಲಾ ಹೊಲೆಯ ಬಟ್ಟೆಯಂತಿವೆ; ನಾವೆಲ್ಲರೂ ಎಲೆಗಳೋಪಾದಿಯಲ್ಲಿ ಒಣಗಿಹೋಗಿದ್ದೇವೆ; ನಮ್ಮ ಅಪರಾಧಗಳು ಬಿರುಗಾಳಿಯ ಪ್ರಕಾರ ನಮ್ಮನ್ನು ಬಡಿದುಕೊಂಡು ಹೋಗಿವೆ. ಈಗ ನಿನ್ನ ಹೆಸರೆತ್ತಿ ಪ್ರಾರ್ಥಿಸಿ, ನಿನ್ನನ್ನು ಆಶ್ರಯಿಸಲು ತ್ರಾಣ ತಂದುಕೊಳ್ಳುವವನು ಎಲ್ಲಿಯೂ ಇಲ್ಲ; ನೀನು ನಮಗೆ ವಿಮುಖನಾಗಿ ನಮ್ಮನ್ನು ನಮ್ಮ ಅಪರಾಧಗಳಿಗೆ ವಶಮಾಡಿದ್ದಿಯಲ್ಲಾ. ಈಗಲಾದರೋ ಯೆಹೋವನೇ, ನೀನು ನಮ್ಮ ತಂದೆಯಾಗಿದ್ದಿ; ನೀನು ಕುಂಬಾರನು, ನಾವು ಜೇಡಿಮಣ್ಣು, ನಾವೆಲ್ಲರೂ ನಿನ್ನ ಕೈಕೆಲಸವೇ.

“ನಾನು ನಿನ್ನನ್ನು ಗರ್ಭದಲ್ಲಿ ರೂಪಿಸುವುದಕ್ಕೆ ಮುಂಚೆ ತಿಳಿದಿದ್ದೆನು; ನೀನು ಉದರದಿಂದ ಬರುವುದಕ್ಕೆ ಮೊದಲೇ ನಿನ್ನನ್ನು ಪ್ರತಿಷ್ಠಿಸಿದ್ದೆನು. ಜನಾಂಗಗಳಿಗೆ ಪ್ರವಾದಿಯನ್ನಾಗಿ ನಿನ್ನನ್ನು ನೇಮಿಸಿದ್ದೇನೆ” ಎಂಬ ವಾಕ್ಯವನ್ನು ದಯಪಾಲಿಸಿದನು.

ಇಗೋ, ನೀವೆಲ್ಲರೂ ನಿಮ್ಮ ದುಷ್ಟಹೃದಯದ ಹಟದಂತೆ ನಡೆಯುತ್ತಾ ನನ್ನನ್ನು ಕೇಳದೆ ನಿಮ್ಮ ಪೂರ್ವಿಕರಿಗಿಂತ ಹೆಚ್ಚು ಕೇಡನ್ನು ಮಾಡಿದ್ದರಿಂದಲೂ,

ಯೆಹೋವನು ಹೀಗೆನ್ನುತ್ತಾನೆ, “ಮಾನವ ಮಾತ್ರದವರಲ್ಲಿ ಭರವಸವಿಟ್ಟು, ನರಜನ್ಮದವರನ್ನು ತನ್ನ ಭುಜಬಲವೆಂದು ತಿಳಿದು, ಯೆಹೋವನನ್ನು ತೊರೆಯುವ ಮನಸ್ಸುಳ್ಳವನು ಶಾಪಗ್ರಸ್ಥನು.

ಹೃದಯವು ಎಲ್ಲಾದಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ತಿಳಿದವರು ಯಾರು? ಯೆಹೋವನಾದ ನಾನು ಪ್ರತಿಯೊಬ್ಬನಿಗೂ ಕರ್ಮಫಲವನ್ನು ಅವನವನ ನಡತೆಗೆ ತಕ್ಕ ಹಾಗೆ ಕೊಡಬೇಕೆಂದು, ಹೃದಯವನ್ನು ಪರೀಕ್ಷಿಸುವವನೂ, ಅಂತರಿಂದ್ರಿಯವನ್ನು ಶೋಧಿಸುವವನೂ ಆಗಿದ್ದೇನೆ.

ಇಗೋ, ಸಕಲ ನರಪ್ರಾಣಿಗಳು ನನ್ನವೇ; ತಂದೆಯೇನು, ಮಗನೇನು, ನರಪ್ರಾಣಿಗಳೆಲ್ಲವೂ ನನ್ನ ಅಧೀನದಲ್ಲಿವೆ; ಪಾಪಮಾಡುವ ಪ್ರಾಣಿಯೇ ಸಾಯುವನು.

ನಾನು ನಿಮಗೆ ಹೊಸ ಮನಸ್ಸನ್ನು ಕೊಟ್ಟು, ನಿಮ್ಮಲ್ಲಿ ನೂತನ ಸ್ವಭಾವವನ್ನು ಹುಟ್ಟಿಸುವೆನು; ಕಲ್ಲಾದ ಹೃದಯವನ್ನು ನಿಮ್ಮೊಳಗಿಂದ ತೆಗೆದು, ಮೃದುವಾದ ಹೃದಯವನ್ನು ನಿಮಗೆ ದಯಪಾಲಿಸುವೆನು.

ಕರ್ತನಾದ ಯೆಹೋವನು ನಿಮಗೆ ಹೀಗೆ ಹೇಳುತ್ತಾನೆ, ‘ಇಗೋ, ನಾನು ನಿಮ್ಮೊಳಗೆ ಶ್ವಾಸವನ್ನು ಊದುವೆನು; ನೀವು ಬದುಕುವಿರಿ. ನಾನು ನಿಮ್ಮ ಮೇಲೆ ನರಗಳನ್ನು ಹಬ್ಬಿಸಿ, ಮಾಂಸವನ್ನು ತಂದು, ಚರ್ಮವನ್ನು ಹೊದಿಸಿ, ನಿಮ್ಮಲ್ಲಿ ಶ್ವಾಸವನ್ನು ತುಂಬುವೆನು; ಆಗ ನೀವು ಬದುಕಿ ನಾನೇ ಯೆಹೋವನು ಎಂದು ತಿಳಿದುಕೊಳ್ಳುವಿರಿ.’”

ಯೇಸು ಜನರ ಗುಂಪುಗಳನ್ನು ನೋಡಿ ಅವರು ಕುರುಬನಿಲ್ಲದ ಕುರಿಗಳ ಹಾಗೆ ಚದುರಿರುವುದನ್ನು ಕಂಡು ಅವರ ಮೇಲೆ ಕನಿಕರಪಟ್ಟನು.

ನಿಮ್ಮ ತಲೆಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಆದುದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚು ಬೆಲೆಬಾಳುವವರಾಗಿದ್ದೀರಿ.

ಒಳ್ಳೆಯವನು ತನ್ನ ಹೃದಯವೆಂಬ ಒಳ್ಳೆಯ ಬೊಕ್ಕಸದೊಳಗಿನಿಂದ ಒಳ್ಳೆಯದನ್ನೇ ಹೊರಗೆ ತೆಗೆಯುತ್ತಾನೆ. ಕೆಟ್ಟವನು ತನ್ನ ಹೃದಯವೆಂಬ ಕೆಟ್ಟ ಬೊಕ್ಕಸದೊಳಗಿನಿಂದ ಕೆಟ್ಟವುಗಳನ್ನು ಹೊರಗೆ ತೆಗೆಯುತ್ತಾನೆ.

ಆದರೆ ಬಾಯೊಳಗಿಂದ ಹೊರ ಬರುವಂಥವುಗಳು ಹೃದಯದಿಂದ ಬರುತ್ತವೆ. ಇವೇ ಮನುಷ್ಯನನ್ನು ಅಶುದ್ಧಿಮಾಡುವವು. ಏಕೆಂದರೆ ಹೃದಯದಿಂದ ಕೆಟ್ಟ ಆಲೋಚನೆಗಳು, ಕೊಲೆ, ವ್ಯಭಿಚಾರ, ಜಾರತ್ವ, ಕಳ್ಳತನ, ಸುಳ್ಳುಸಾಕ್ಷಿ ಮತ್ತು ದೂಷಣೆಗಳು ಹೊರಟು ಬರುತ್ತವೆ.

ಆದರೆ ಯೇಸು, “ಮಕ್ಕಳನ್ನು ಬಿಡಿರಿ. ನನ್ನ ಹತ್ತಿರ ಬರುವುದಕ್ಕೆ ಅವರಿಗೆ ಅಡ್ಡಿಮಾಡಬೇಡಿರಿ. ಏಕೆಂದರೆ ಪರಲೋಕ ರಾಜ್ಯವು ಇಂಥವರದೇ” ಎಂದು ಹೇಳಿದನು.

ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಆತ್ಮವು ಸಿದ್ಧವಾಗಿದೆ ಆದರೆ ದೇಹವು ಬಲಹೀನವಾಗಿದೆ” ಎಂದು ಹೇಳಿದನು.

ಒಳಗಿನಿಂದ ಅಂದರೆ ಮನುಷ್ಯರ ಹೃದಯದೊಳಗಿನಿಂದ ಬರುವ ದುರಾಲೋಚನೆಗಳು, ಹಾದರ, ಕಳ್ಳತನ, ಕೊಲೆ, ವ್ಯಭಿಚಾರ, ದುರಾಶೆ, ಕೆಡುಕುತನ, ಮೋಸ, ಕಾಮಾಭಿಲಾಷೆ, ಹೊಟ್ಟೆಕಿಚ್ಚು, ಅಪನಿಂದೆ, ಗರ್ವ, ಬುದ್ಧಿಗೇಡಿತನ ಇವೇ ಮೊದಲಾದವುಗಳು ಹೊರಡುತ್ತವೆ. ಈ ಎಲ್ಲಾ ಕೆಡುಕುಗಳು ಮಾನವನ ಅಂತರಂಗದಿಂದಲೇ ಉದ್ಭವಿಸಿ ಅವನನ್ನು ಅಶುದ್ಧ ಮಾಡುತ್ತವೆ.”

ದೇವರಾದರೋ ಸೃಷ್ಟಿಯ ಮೊದಲಿನಿಂದಲೇಮನುಷ್ಯರನ್ನು ಗಂಡುಹೆಣ್ಣಾಗಿ ಉಂಟುಮಾಡಿದನು. ಈ ಕಾರಣದಿಂದ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗಿರುವರು. ಹೀಗಿರುವಲ್ಲಿ ಅವರು ಇನ್ನು ಇಬ್ಬರಲ್ಲ ಒಂದೇ ಶರೀರವಾಗಿದ್ದಾರೆ. ಆದ್ದರಿಂದ ದೇವರು ಕೂಡಿಸಿದ್ದನ್ನು ಮನುಷ್ಯನು ಅಗಲಿಸಬಾರದು” ಎಂದು ಹೇಳಿದನು.

ಯೇಸು ಅವನಿಗೆ, “ನನ್ನನ್ನು ಒಳ್ಳೆಯವನೆಂದು ಯಾಕೆ ಕರೆಯುತ್ತೀ? ದೇವರೊಬ್ಬನೇ ಹೊರತು ಮತ್ತಾರೂ ಒಳ್ಳೆಯವರಲ್ಲ.

ಒಳ್ಳೆಯವನು ತನ್ನ ಹೃದಯವೆಂಬ ಒಳ್ಳೆಯ ಬೊಕ್ಕಸದೊಳಗಿನಿಂದ ಒಳ್ಳೆಯದನ್ನು ತರುತ್ತಾನೆ; ಕೆಟ್ಟವನು ಕೆಟ್ಟಬೊಕ್ಕಸದೊಳಗಿನಿಂದ ಕೆಟ್ಟದ್ದನ್ನು ತರುತ್ತಾನೆ; ಹೃದಯದಲ್ಲಿ ತುಂಬಿರುವುದೇ ಬಾಯಿಂದ ಹೊರಡುವುದು.

ಅಷ್ಟುಮಾತ್ರವಲ್ಲ, ನಿಮ್ಮ ತಲೆ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಹೆದರಬೇಡಿರಿ, ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.

ಆದರೂ ಯಾರಾರು ಆತನನ್ನು ಸ್ವೀಕರಿಸಿದರೋ, ಅಂದರೆ ಆತನ ಹೆಸರಿನಲ್ಲಿ ನಂಬಿಕೆಯಿಟ್ಟರೋ ಅವರಿಗೆ ದೇವರ ಮಕ್ಕಳಾಗುವ ಅಧಿಕಾರವನ್ನು ಆತನು ಕೊಟ್ಟನು. ಇವರು ರಕ್ತಸಂಬಂಧದಿಂದಾಗಲಿ, ಶರೀರದ ಇಚ್ಛೆಯಿಂದಾಗಲಿ, ಪುರುಷ ಸಂಕಲ್ಪದಿಂದಾಗಲಿ ಹುಟ್ಟಿದವರಲ್ಲ; ದೇವರಿಂದಲೇ ಹುಟ್ಟಿದವರು.

ಆದರೆ ಯೇಸು ಎಲ್ಲವನ್ನೂ ಬಲ್ಲವನಾದುದರಿಂದ ಅವರಿಗೆ ವಶವಾಗಲಿಲ್ಲ, ಆತನು ಪ್ರತಿ ಮನುಷ್ಯನ ಆಂತರ್ಯವನ್ನು ತಿಳಿದವನಾದ ಕಾರಣ ಯಾರೂ ಯಾವ ಮನುಷ್ಯನ ವಿಷಯದಲ್ಲಿಯೂ ಆತನಿಗೆ ಸಾಕ್ಷಿ ಕೊಡಬೇಕಾದ ಅಗತ್ಯವಿರಲಿಲ್ಲ.

ಯೇಸು ಅವನಿಗೆ, “ನಾನು ನಿಜನಿಜವಾಗಿ ಹೇಳುತ್ತೇನೆ, ಒಬ್ಬನುಹೊಸದಾಗಿ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು,” ಎಂದು ಉತ್ತರ ಕೊಟ್ಟನು. ನಿಕೊದೇಮನು ಆತನನ್ನು, “ಮನುಷ್ಯನು ಮುದುಕನಾದ ಮೇಲೆ ತಿರುಗಿ ಹುಟ್ಟುವುದು ಹೇಗೆ? ಅವನು ತನ್ನ ತಾಯಿಯ ಗರ್ಭದಲ್ಲಿ ಎರಡನೆಯ ಸಾರಿ ಪ್ರವೇಶಿಸಿ ಹುಟ್ಟುವುದಕ್ಕಾದೀತೇ?” ಎಂದು ಕೇಳಿದನು. ಅದಕ್ಕೆ ಯೇಸು “ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ನೀರಿನಿಂದಲೂ ಮತ್ತು ಆತ್ಮನಿಂದಲೂ ಹುಟ್ಟದಿದ್ದರೆ ಅವನು ದೇವರ ರಾಜ್ಯದಲ್ಲಿ ಪ್ರವೇಶಿಸಲಾರನು. ದೇಹದಿಂದ ಹುಟ್ಟಿದ್ದು ದೇಹವೇ, ಆತ್ಮನಿಂದ ಹುಟ್ಟಿದ್ದು ಆತ್ಮವೇ. ‘ನೀವು ಹೊಸದಾಗಿ ಹುಟ್ಟಬೇಕು’ ಎಂದು ನಾನು ನಿನಗೆ ಹೇಳಿದ್ದರಿಂದ ಆಶ್ಚರ್ಯಪಡಬೇಡ

“ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.

ಆ ತೀರ್ಪು ಏನೆಂದರೆಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕೃತ್ಯಗಳು ಕೆಟ್ಟವುಗಳಾಗಿರುವುದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಪ್ರೀತಿಸಿದರು.

ಆತನು ಅವರಿಗೆ, “ನೀವು ಕೆಳಗಿನವರು; ನಾನು ಮೇಲಿನಿಂದ ಬಂದವನು. ನೀವು ಈ ಲೋಕದವರು; ನಾನು ಈ ಲೋಕದವನಲ್ಲ. ಆದುದರಿಂದ ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರೆಂದು ನಿಮಗೆ ನಾನು ಹೇಳಿದೆನು. ನೀವುನನ್ನನ್ನು ಯಾರೆಂದು ನಂಬದೆ ಹೋದರೆ ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ” ಎಂದು ಹೇಳಿದನು.

ತಾನೇ ಎಲ್ಲರಿಗೂ ಜೀವಶ್ವಾಸ ಹಾಗೂ ಜೀವಿಸುವುದಕ್ಕೆ ಬೇಕಾದದ್ದೆಲ್ಲವನ್ನೂ ಕೊಡುವವನಾಗಿರಲಾಗಿ ಕೊರತೆಯಿದ್ದವನಂತೆ ಮನುಷ್ಯರ ಕೈಗಳಿಂದ ಸೇವೆಹೊಂದುವವನೂ ಅಲ್ಲ. ದೇವರು ಒಬ್ಬ ಮನುಷ್ಯನಿಂದ ಎಲ್ಲಾ ಜನಾಂಗಗಳನ್ನು ಸೃಷ್ಟಿಸಿ, ಅವರವರು ಇರತಕ್ಕ ಕಾಲಗಳನ್ನೂ ಹಾಗು ಅವರವರ ನಿವಾಸಗಳ ಮೇರೆಗಳನ್ನೂ ನಿಷ್ಕರ್ಷಿಸಿ ಭೂಮಂಡಲದಲ್ಲೆಲ್ಲಾ ಅವರನ್ನು ಇರಿಸಿ, ಒಂದು ವೇಳೆ ಅವರು ತಡವಾಗಿಯಾದರೂ ತನ್ನನ್ನು ಕಂಡುಕೊಂಡಾರೇನೋ ಎಂದು ತನ್ನನ್ನು ಹುಡುಕುವವರನ್ನಾಗಿ ಮಾಡಿದನು. ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ. ಏಕೆಂದರೆ ಆತನಲ್ಲಿಯೇ ನಾವು ಜೀವಿಸುತ್ತೇವೆ, ಚಲಿಸುತ್ತೇವೆ ಮತ್ತು ಇರುತ್ತೇವೆ. ನಿಮ್ಮ ಕವಿಗಳಲ್ಲಿ ಕೆಲವರು, ‘ನಾವು ಆತನ ಸಂತಾನದವರೇ’ ಎಂದು ಹೇಳಿದ್ದಾರೆ.

ಅನೀತಿಯಿಂದ ಸತ್ಯವನ್ನು ಅಡ್ಡಿಮಾಡುವವರಾದ ದುಷ್ಟಮನುಷ್ಯರ ಎಲ್ಲಾ ವಿಧವಾದ ಭಕ್ತಿಹೀನತೆಯ ಮೇಲೆಯೂ, ದುಷ್ಟತನದ ಮೇಲೆಯೂ ದೇವರ ಕೋಪವು ಪರಲೋಕದಿಂದ ಇಳಿದುಬರುತ್ತದೆ,

ತಾವು ಜ್ಞಾನಿಗಳೆಂದು ಹೇಳಿಕೊಂಡು ಹುಚ್ಚರಾದರು. ಲಯವಿಲ್ಲದ ದೇವರ ಮಹಿಮೆಯನ್ನು ಅವರು ನಾಶವಾಗುವ ಮನುಷ್ಯ, ಪಶು, ಪಕ್ಷಿ, ಸರಿಸೃಪಗಳು ಇತ್ಯಾದಿಗಳ ರೂಪಗಳೊಂದಿಗೆ ಬದಲಿಸಿಕೊಂಡರು. ಆದಕಾರಣ ಅವರು ಮನಸ್ಸಿನ ದುರಾಶೆಗಳಂತೆ ನಡೆದು ತಮ್ಮ ತಮ್ಮ ದೇಹಗಳನ್ನು ತಮ್ಮೊಳಗೆ ಮಾನಹೀನಮಾಡಿಕೊಳ್ಳಲಿ ಎಂದು ದೇವರು ಅವರನ್ನು ಹೊಲಸಾದ ಕೆಟ್ಟ ನಡತೆಗಳಿಗೆ ಒಪ್ಪಿಸಿಬಿಟ್ಟನು.

ಬದಲಾಗಿ, “ನಿನ್ನ ಮಾತಿನಲ್ಲೇ ನೀನು ನೀತಿವಂತನೆಂದು ವ್ಯಕ್ತವಾಗಬೇಕು, ವ್ಯಾಜ್ಯವೆದ್ದಾಗ ನೀನು ವಿಜಯಶಾಲಿ ಆಗಬೇಕು.” ಎಂದು ಗ್ರಂಥಗಳಲ್ಲಿ ಬರೆದಿರುವ ಹಾಗೆಯೇ, ಎಲ್ಲಾ ಮಾನವರು ಸುಳ್ಳುಗಾರರಾದರೂ, ದೇವರು ಮಾತ್ರ ಸತ್ಯವಂತನೇ.

ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ, “ನೀತಿವಂತನು ಇಲ್ಲ, ಒಬ್ಬನಾದರೂ ಇಲ್ಲ; ತಿಳಿವಳಿಕೆಯುಳ್ಳವನು ಇಲ್ಲ, ದೇವರನ್ನು ಹುಡುಕುವವನು ಇಲ್ಲ. ಎಲ್ಲರೂ ದಾರಿತಪ್ಪಿ ನಡೆಯುತ್ತಾ, ಕೆಟ್ಟುಹೋಗಿದ್ದಾರೆ. ಒಳ್ಳೆಯದನ್ನು ಮಾಡುವವನು ಇಲ್ಲ, ಒಬ್ಬನಾದರೂ ಇಲ್ಲ.

ಎಲ್ಲರೂ ಪಾಪ ಮಾಡಿ ದೇವರ ಮಹಿಮೆಯನ್ನು ಹೊಂದದೇ ಹೋಗಿದ್ದಾರೆ.

ಈ ವಿಷಯ ಹೇಗೆಂದರೆ ಒಬ್ಬ ಮನುಷ್ಯನಾದ ಆದಾಮನಿಂದಲೇ ಪಾಪವೂ ಲೋಕದೊಳಗೆ ಪ್ರವೇಶಿಸಿತು ಮತ್ತು ಮರಣವು ಪಾಪದ ನಿಮಿತ್ತ, ಹಾಗು, ಮರಣವು ಎಲ್ಲರು ಪಾಪಮಾಡಿದ್ದರಿಂದ ಎಲ್ಲರಿಗೂ ಪ್ರಾಪ್ತಿಯಾಯಿತು.

ಕ್ರಿಸ್ತ ಯೇಸುವಿನೊಂದಿಗೆ ಸೇರುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡವರಾದ ನಾವೆಲ್ಲರೂ ಆತನ ಮರಣದಲ್ಲಿ ಪಾಲುಗಾರರಾಗುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡೆವೆಂದು ನಿಮಗೆ ತಿಳಿಯದೋ? ಹೀಗಿರಲಾಗಿ ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಆತನ ಮರಣದಲ್ಲಿ ಪಾಲುಗಾರರಾಗಿ ಆತನೊಂದಿಗೆ ಹೂಣಲ್ಪಟ್ಟೆವು. ಆದ್ದರಿಂದ ಕ್ರಿಸ್ತನು ಸತ್ತು ತಂದೆಯ ಮಹಿಮೆಯಿಂದ ಜೀವಿತನಾಗಿ ಎಬ್ಬಿಸಲ್ಪಟ್ಟಂತೆಯೇ ನಾವು ಕೂಡ ಜೀವದಿಂದೆದ್ದು ನೂತನ ಜೀವದಲ್ಲಿ ನಡೆದುಕೊಳ್ಳಬೇಕು. ಹೇಗೆಂದರೆ ನಾವು ಆತನ ಮರಣಕ್ಕೆ ಸದೃಶ್ಯವಾದ ಮರಣವನ್ನು ಹೊಂದಿ ಆತನಲ್ಲಿ ಐಕ್ಯವಾಗಿದ್ದರೆ ಆತನ ಪುನರುತ್ಥಾನಕ್ಕೆ ಸದೃಶವಾದ ಪುನರುತ್ಥಾನವನ್ನೂ ಹೊಂದಿ ಆತನಲ್ಲಿ ಐಕ್ಯವಾಗುವೆವು. ನಮಗೆ ತಿಳಿದಿರುವಂತೆ, ನಮ್ಮ ಪಾಪಾಧೀನಸ್ವಭಾವವು ನಾಶವಾಗಿ, ನಾವು ಇನ್ನೂ ಪಾಪದ ವಶದಲ್ಲಿರದಂತೆ ನಮ್ಮ ಪೂರ್ವಸ್ವಭಾವವು ಕ್ರಿಸ್ತನ ಕೂಡ ಶಿಲುಬೆಗೆ ಹಾಕಲ್ಪಟ್ಟಿದೆ. ಸತ್ತವನು ಪಾಪದ ವಶದಿಂದ ಬಿಡುಗಡೆ ಹೊಂದಿದ್ದಾನೆ. ಇದಲ್ಲದೆ ನಾವು ಕ್ರಿಸ್ತನೊಡನೆ ಸತ್ತ ಪಕ್ಷದಲ್ಲಿ ಆತನೊಡನೆ ಜೀವಿಸುವೆವೆಂದು ನಂಬುತ್ತೇವೆ. ನಮಗೆ ತಿಳಿದಿರುವಂತೆ, ಕ್ರಿಸ್ತನು ಸತ್ತ ಮೇಲೆ ಜೀವಿತನಾಗಿ ಎದ್ದು ಬಂದದ್ದರಿಂದ ಆತನು ಇನ್ನು ಮುಂದೆ ಸಾಯತಕ್ಕವನಲ್ಲ, ಮರಣವು ಆತನ ಮೇಲೆ ಆಳ್ವಿಕೆ ನಡಿಸುವುದಿಲ್ಲ. ಆತನು ಸತ್ತದ್ದು ಒಂದೇ ಸಾರಿ ಅದು ಪಾಪದ ಪಾಲಿಗೆ; ಆತನು ಜೀವಿಸುವುದು ದೇವರಿಗಾಗಿಯೇ, ಅದೇ ಪ್ರಕಾರ ನೀವು ಸಹ ನಿಮ್ಮನ್ನು ಕ್ರಿಸ್ತ ಯೇಸುವಿನ ಐಕ್ಯದಿಂದ ಪಾಪದ ಪಾಲಿಗೆ ಸತ್ತವರೂ, ದೇವರಿಗಾಗಿ ಜೀವಿಸುವವರೂ ಎಂದು ಎಣಿಸಿಕೊಳ್ಳಿರಿ. ಹೀಗಿರುವುದರಿಂದ ಸಾವಿಗೆ ಒಳಗಾಗುವ ಈ ನಿಮ್ಮ ದೇಹದ ಮೇಲೆ ಪಾಪವನ್ನು ಆಳಗೊಡಿಸಿ ನೀವು ದೇಹದ ದುರಾಶೆಗಳಿಗೆ ಒಳಪಡಬೇಡಿರಿ. ಇದು ಮಾತ್ರವಲ್ಲದೆ ನೀವು ನಿಮ್ಮ ದೇಹದ ಅಂಗಗಳನ್ನು ಪಾಪಕ್ಕೆ ಒಪ್ಪಿಸುವವರಾಗಿದ್ದು, ಅವುಗಳನ್ನು ದುಷ್ಟತ್ವವನ್ನು ನಡಿಸುವ ಸಾಧನಗಳಾಗಿ ಮಾಡಬೇಡಿರಿ; ನೀವು ಸತ್ತವರೊಳಗಿಂದ ಜೀವಿತರಾಗಿರಲಾಗಿ ನಿಮ್ಮನ್ನು ದೇವರಿಗೆ ಒಪ್ಪಿಸಿಕೊಟ್ಟು, ನಿಮ್ಮ ದೇಹದ ಅಂಗಗಳನ್ನು ನೀತಿಯ ಆಯುಧಗಳನ್ನಾಗಿ ಆತನಿಗೆ ಸಮರ್ಪಿಸಿರಿ.

ನಿಮ್ಮ ಶರೀರ ಭಾವದ ಬಲಹೀನತೆಯ ದೆಸೆಯಿಂದ ನಾನು ಲೋಕದ ರೀತಿಯಾಗಿ ಮಾತನಾಡುತ್ತೇನೆ. ದುಷ್ಟತನವನ್ನು ಮಾಡುವುದಕ್ಕಾಗಿ ನಿಮ್ಮ ಅಂಗಗಳನ್ನು ಬಂಡುತನಕ್ಕೂ, ದುಷ್ಟತನಕ್ಕೂ ದಾಸರನ್ನಾಗಿ ಒಪ್ಪಿಸಿ ಕೊಟ್ಟಿದ್ದಂತೆಯೇ ಈಗ ಪರಿಶುದ್ಧರಾಗುವುದಕ್ಕಾಗಿ ನಿಮ್ಮ ಅಂಗಗಳನ್ನು ನೀತಿಗೆ ದಾಸರನ್ನಾಗಿ ಒಪ್ಪಿಸಿಕೊಡಿರಿ.

ನಾವು ಶರೀರಾಧೀನ ಸ್ವಭಾವವನ್ನು ಅನುಸರಿಸುತ್ತಿದ್ದಾಗ ಧರ್ಮಶಾಸ್ತ್ರದಿಂದಲೇ ಪ್ರೇರಿತವಾದ ಪಾಪಾದಾಶೆಗಳು ನಮ್ಮ ಅಂಗಗಳಲ್ಲಿ ಸಕ್ರಿಯವಾಗಿ ಮರಣಕ್ಕೆ ಫಲವನ್ನು ಹುಟ್ಟಿಸುತ್ತಿದ್ದವು.

ನನ್ನಲ್ಲಿ ಅಂದರೆ ನನ್ನ ಶರೀರಾಧೀನಸ್ವಭಾವದಲ್ಲಿ ಒಳ್ಳೆಯದೇನೂ ವಾಸವಾಗಿಲ್ಲವೆಂದು ನನಗೆ ತಿಳಿದಿದೆ ಒಳ್ಳೆಯದನ್ನು ಮಾಡುವುದಕ್ಕೆ ನನಗೇನೋ ಮನಸ್ಸುಂಟು ಆದರೆ ಅದನ್ನು ಮಾಡುವುದಕ್ಕೆ ನನ್ನಿಂದಾಗದು.

ಅಯ್ಯೋ, ನಾನು ಎಂಥ ದುರವಸ್ಥೆಯಲ್ಲಿ ಬಿದ್ದ ಮನುಷ್ಯನು! ಇಂಥ ಮರಣಕ್ಕೆ ಒಳಗಾದ ಈ ದೇಹದಿಂದ ನನ್ನನ್ನು ಬಿಡಿಸುವವನು ಯಾರು?

ಧರ್ಮಶಾಸ್ತ್ರವು ನಮ್ಮ ಶರೀರಾಧೀನಸ್ವಭಾವದ ನಿಮಿತ್ತ ದುರ್ಬಲವಾಗಿ ಯಾವ ಕೆಲಸವನ್ನು ಮಾಡಲಾರದೆ ಇತ್ತೋ, ಅದನ್ನು ದೇವರೇ ಮಾಡಿದನು. ಹೇಗೆಂದರೆ ಆತನು ಪಾಪನಿವಾರಣೆಗಾಗಿ ತನ್ನ ಮಗನನ್ನು ಪಾಪಾಧೀನವಾದ ಶರೀರ ರೂಪದಲ್ಲಿ ಕಳುಹಿಸಿಕೊಟ್ಟು ಶರೀರದಲ್ಲಿಯೇ ಪಾಪಕ್ಕೆ ಮರಣದಂಡನೆಯನ್ನು ವಿಧಿಸಿದನು. ಹೀಗಿರಲು ಶರೀರಭಾವಕ್ಕೆ ಅನುಸಾರವಾಗಿ ನಡೆಯದೆ ಪವಿತ್ರಾತ್ಮನಿಗನುಸಾರವಾಗಿ ನಡೆಯುವವರಾದ ನಮ್ಮಲ್ಲಿ ಧರ್ಮಶಾಸ್ತ್ರದ ನಿಯಮವು ನೆರವೇರುವುದಕ್ಕಾಗಿ ಹಾಗೆ ಮಾಡಿದನು. ಶರೀರಭಾವವನ್ನು ಅನುಸರಿಸುವವರು ಅದಕ್ಕೆ ಸಂಬಂಧಪಟ್ಟವುಗಳ ಮೇಲೆ ಮನಸ್ಸಿಡುತ್ತಾರೆ, ಪವಿತ್ರಾತ್ಮನನ್ನುಸರಿಸುವವರು ಪವಿತ್ರಾತ್ಮನಿಗೆ ಸಂಬಂಧಪಟ್ಟವುಗಳ ಮೇಲೆ ಮನಸ್ಸಿಡುತ್ತಾರೆ. ಶರೀರಭಾವದ ವಿಷಯಗಳ ಮೇಲೆ ಮನಸ್ಸಿಡುವುದು ಮರಣ; ಪವಿತ್ರಾತ್ಮನ ವಿಷಯಗಳ ಮೇಲೆ ಮನಸ್ಸಿಡುವುದು ನಿತ್ಯಜೀವವೂ ಮತ್ತು ಮನಶಾಂತಿಯೂ ಆಗಿದೆ. ಯಾಕೆಂದರೆ ಶರೀರಭಾವಗಳ ಮೇಲೆ ಮನಸ್ಸಿಡುವುದು ದೇವರಿಗೆ ವಿರುದ್ಧವಾಗಿದೆ; ಅಂಥ ಮನಸ್ಸು ಧರ್ಮನಿಯಮಕ್ಕೆ ಒಳಪಡುವುದೂ ಇಲ್ಲ, ಒಳಪಡುವುದಕ್ಕಾಗುವುದೂ ಇಲ್ಲ. ಶರೀರಭಾವಾಧೀನವಾಗಿರುವವರು ದೇವರನ್ನು ಮೆಚ್ಚಿಸಲಾರರು. ಆದಾಗ್ಯೂ, ನೀವೂ ದೇವರ ಆತ್ಮನ ಸ್ವಭಾವದ ಮೇಲೆ ಆತುಕೊಂಡು ಜೀವಿಸುವವರೇ ಹೊರತು ದೇಹಸ್ವಭಾವದವರಲ್ಲಾ. ನಿಮ್ಮಲ್ಲಿ ದೇವರ ಆತ್ಮನು ವಾಸವಾಗಿರುವುದಾದರೆ ನೀವು ಶರೀರ ಭಾವಾಧೀನರಲ್ಲ, ದೇವರಾತ್ಮನಿಗೆ ಅಧೀನರಾಗಿದ್ದೀರಿ. ಯಾರಲ್ಲಿ ಕ್ರಿಸ್ತನ ಆತ್ಮನು ಇಲ್ಲವೋ ಅವನು ಕ್ರಿಸ್ತನವನಲ್ಲ.

ನೀವು ಶರೀರಭಾವವನ್ನು ಅನುಸರಿಸಿ ಬದುಕಿದರೆ ಸಾಯುವುದು ನಿಶ್ಚಯ; ನೀವು ಪವಿತ್ರಾತ್ಮನಿಂದ ದೇಹದ ದುರಭ್ಯಾಸಗಳನ್ನು ನಾಶ ಮಾಡುವುದಾದರೆ ಜೀವಿಸುವಿರಿ.

ಆ ಮಾತಿನ ಅರ್ಥವೇನಂದರೆ ಶರೀರಸಂಬಂಧವಾಗಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ. ವಾಗ್ದಾನ ಸಂಬಂಧವಾಗಿ ಹುಟ್ಟಿದವರೇ ಅಬ್ರಹಾಮನ ಸಂತತಿಯವರೆಂದು ಎಣಿಸಲ್ಪಡುವರು ಎಂಬುದು.

ದೇಹದ ಆಸೆಗಳನ್ನು ಪೂರೈಸುವುದಕ್ಕಾಗಿ ಚಿಂತಿಸದೇ ಕರ್ತನಾದ ಯೇಸು ಕ್ರಿಸ್ತನನ್ನು ಧರಿಸಿಕೊಳ್ಳಿರಿ.

ಪ್ರಾಪಂಚಿಕನಾದವನು ದೇವರಾತ್ಮನ ವಿಷಯಗಳನ್ನು ಬೇಡವೆನ್ನುತ್ತಾನೆ; ಅವು ಅವನಿಗೆ ಹುಚ್ಚುಮಾತನಾಗಿ ತೋರುತ್ತವೆ; ಅವು ಆಧ್ಯಾತ್ಮದ ಮೂಲಕ ತಿಳಿದುಕೊಳ್ಳ ಬೇಕಾಗಿರುವುದರಿಂದ ಅವನು ಅವುಗಳನ್ನು ಗ್ರಹಿಸಲಾರನು.

ನೀವು ದೇವರ ಆಲಯವಾಗಿದ್ದೀರೆಂದೂ ದೇವರ ಆತ್ಮನು ನಿಮ್ಮಲ್ಲಿ ವಾಸಮಾಡುತ್ತಾನೆಂದೂ ನಿಮಗೆ ಗೊತ್ತಿಲ್ಲವೋ? ಯಾವನಾದರೂ ದೇವರ ಆಲಯವನ್ನು ನಾಶಪಡಿಸಿದರೆ ದೇವರು ಅವನನ್ನು ನಾಶಪಡಿಸುವನು. ಯಾಕೆಂದರೆ ದೇವರ ಆಲಯವು ಪವಿತ್ರವಾದದ್ದು ಆ ಆಲಯವು ನೀವೇ ಆಗಿದ್ದೀರಿ.

ನೀವು ನಿಮ್ಮ ಸ್ವಂತ ಸೊತ್ತಲ್ಲವೆಂದು ಮತ್ತು ದೇವರಿಂದ ದಾನವಾಗಿ ಲಭಿಸಿದ ಪವಿತ್ರಾತ್ಮನು ನಿಮ್ಮೊಳಗೆ ನೆಲೆಗೊಂಡಿರುವುದರಿಂದ ನಿಮ್ಮ ದೇಹವು ದೇವರ ಪವಿತ್ರಾಲಯವಾಗಿದೆಂಬುದು ನಿಮಗೆ ತಿಳಿಯದೋ? ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು ಆದಕಾರಣ ನಿಮ್ಮ ದೇಹದ ಮೂಲಕ ದೇವರನ್ನು ಮಹಿಮೆಪಡಿಸಿರಿ.

ಮನುಷ್ಯನ ಮೂಲಕ ಮರಣ ಉಂಟಾದ ಕಾರಣ, ಮನುಷ್ಯನ ಮೂಲಕವೇ ಸತ್ತವರಿಗೆ ಪುನರುತ್ಥಾನವುಂಟಾಗಿದೆ. ಆದಾಮನಿಂದ ಹೇಗೆ ಎಲ್ಲರೂ ಸಾಯುವವರಾದರೋ ಅದೇ ಪ್ರಕಾರ ಯೇಸು ಕ್ರಿಸ್ತನಿಂದ ಎಲ್ಲರೂ ಬದುಕುವವರಾದರು.

ಎಲ್ಲಾ ಶರೀರಗಳು ಒಂದೇ ವಿಧವಾದವುಗಳಲ್ಲ; ಮನುಷ್ಯನ ಶರೀರ ಬೇರೆ, ಪಶುಗಳ ಶರೀರ ಬೇರೆ, ಪಕ್ಷಿಗಳ ಶರೀರ ಬೇರೆ, ಮೀನುಗಳದು ಬೇರೆ.

ಸತ್ತವರಿಗಾಗುವ ಪುನರುತ್ಥಾನವು ಅದೇ ಪ್ರಕಾರವಾಗಿರುವುದು. ಬಿತ್ತುವಂಥದ್ದು ಅಳಿದುಹೊಗುವಂಥದ್ದು. ಪುನರುತ್ಥಾನವಾಗುವಂಥದ್ದು ಅಮರವಾದದ್ದು. ಹೀನಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಮಹಿಮೆಯಲ್ಲಿ ಪುನರುತ್ಥಾನಹೊಂದುವುದು; ನಿರ್ಬಲಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಬಲಹೊಂದಿ ಪುನರುತ್ಥಾನಹೊಂದುವುದು; ಬಿತ್ತಿದ್ದು ಪ್ರಾಕೃತ ದೇಹವಾಗಿ ಬಿತ್ತಲ್ಪಡುತ್ತದೆ, ಪುನರುತ್ಥಾನಹೊಂದುವಂಥದ್ದು ಆತ್ಮೀಕ ದೇಹ. ಪ್ರಾಕೃತದೇಹ ಇರುವುದಾದರೆ ಆತ್ಮೀಕ ದೇಹವೂ ಇರುವುದು ಸತ್ಯ. “ಮೊದಲನೆಯ ಮನುಷ್ಯನಾದ ಆದಾಮನು ಜೀವ ಪಡೆದ ವ್ಯಕ್ತಿ” ಎಂಬುದಾಗಿ ಪವಿತ್ರ ಗ್ರಂಥದಲ್ಲಿ ಬರೆದದೆಯಲ್ಲಾ. ಕಡೆ ಆದಾಮನಾದರೋ ಜೀವ ಕೊಡುವ ಆತ್ಮನಾದನು. ಆತ್ಮೀಕವಾದದ್ದು ಮೊದಲು ಬಂದದ್ದಲ್ಲಾ, ಪ್ರಾಕೃತವಾದದ್ದು ಮೊದಲನೆಯದು; ಅನಂತರ ಆತ್ಮೀಕವಾದದ್ದು. ಮೊದಲನೆಯ ಮನುಷ್ಯನು ಮಣ್ಣಿನಿಂದ ಮಾಡಲ್ಪಟ್ಟವನು; ಭೂಮಿಗೆ ಸೇರಿದವನು, ಎರಡನೆಯ ಮನುಷ್ಯನು ಪರಲೋಕದಿಂದ ಬಂದವನು. ಮಣ್ಣಿನಿಂದ ಹುಟ್ಟಿದವನು ಎಂಥವನೋ ಮಣ್ಣಿಗೆ ಸಂಬಂಧಪಟ್ಟವರೂ ಅಂಥವರೇ ಆಗಿರುತ್ತಾರೆ; ಪರಲೋಕದಿಂದ ಬಂದಾತನು ಎಂಥವನೋ ಪರಲೋಕಕ್ಕೆ ಸಂಬಂಧಪಟ್ಟವರೂ ಅಂಥವರೇ. ನಾವು ಮಣ್ಣಿನಿಂದ ಹುಟ್ಟಿದವನ ಸಾರೂಪ್ಯವನ್ನು ಧರಿಸಿಕೊಂಡಿರುವ ಪ್ರಕಾರ ಪರಲೋಕದಿಂದ ಬಂದಾತನ ಸಾರೂಪ್ಯವನ್ನೂ ಧರಿಸಿಕೊಳ್ಳಬೇಕು. ಸಹೋದರರೇ, ನಾನು ಹೇಳುವುದೇನಂದರೆ, ರಕ್ತ ಮಾಂಸಗಳು ದೇವರ ರಾಜ್ಯವನ್ನು ವಶಪಡಿಸಿಕೊಳ್ಳಲಾರದು; ಅಂತೆಯೇ, ಅಳಿದುಹೋಗುವಂಥದ್ದು ಅಮರತ್ವಕ್ಕೆ ಬಾಧ್ಯವಾಗಲು ಸಾಧ್ಯವಿಲ್ಲ.

ಆದ್ದರಿಂದ ನಾವು ಧೈರ್ಯಗೆಡುವುದಿಲ್ಲ. ನಮ್ಮ ದೇಹವು ನಾಶವಾಗುತ್ತಾ ಇದ್ದರೂ ನಮ್ಮ ಅಂತರಂಗವು ದಿನೇ ದಿನೇ ಹೊಸದಾಗುತ್ತಾ ಬರುತ್ತದೆ.

ಭೂಮಿಯ ಮೇಲಿರುವ ನಮ್ಮ ಈ ದೇಹವೆಂಬ ಗುಡಾರವು ಅಳಿದುಹೊದರೂ, ದೇವರಿಂದ ನಿರ್ಮಿತವಾಗಿರುವ ಒಂದು ಕಟ್ಟಡವು ಪರಲೋಕದಲ್ಲಿ ನಮಗುಂಟೆಂದು ಬಲ್ಲೆವು; ಅದು ಮನುಷ್ಯನ ಕೈಗಳಿಂದ ಕಟ್ಟಿರುವ ಮನೆಯಲ್ಲ ಬದಲಾಗಿ ಶಾಶ್ವತವಾದ ಮನೆಯಾಗಿದೆ. ನಾವು ಈ ದೇಹದಲ್ಲಿರುವವರೆಗೆ ನರಳುತ್ತಾ; ಪರಲೋಕದಿಂದ ದೊರಕುವ ನಮ್ಮ ನಿವಾಸವನ್ನು ದೇಹದ ಮೇಲೆ ನಾವು ಎಂದು ಧರಿಸಿಕೊಳ್ಳುತ್ತೇವೋ ಎಂದು ಹಾತೊರೆಯುತ್ತೇವೆ. ಅದನ್ನು ಧರಿಸಿಕೊಂಡಾಗ ನಾವು ಬೆತ್ತಲೆಯಾಗಿ ಇರಲಾರೆವು. ಏಕೆಂದರೆ, ಈ ದೇಹವೆಂಬ ಗುಡಾರದಲ್ಲಿರುವವರಾದ ನಾವು ಭಾರಹೊತ್ತುಕೊಂಡವರಾಗಿ ನರಳುತ್ತೇವೆ; ಈ ದೇಹವು ಕಳಚಿಹೋಗಬೇಕೆಂಬುದು ನಮ್ಮ ಬಯಕೆ ಅಲ್ಲ; ಬದಲಾಗಿ ಅದರ ಮೇಲೆ ಧರಿಸಿಕೊಳ್ಳಬೇಕೆಂಬುದೇ. ಆದ್ದರಿಂದ ನಶ್ವರವಾದದ್ದು ಅಳಿದುಹೋಗಿ ಅಮರವಾದದ್ದು ಉಳಿಯುವಂತೆ ಅಪೇಕ್ಷಿಸುತ್ತೇವೆ.

ಪ್ರಿಯರೇ, ಈ ವಾಗ್ದಾನಗಳು ನಮಗಿರುವುದರಿಂದ, ನಾವು ದೇಹಾತ್ಮಗಳ ಕಲ್ಮಷವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತೆಯ ಸಂಪೂರ್ಣತೆಗೆ ಪ್ರಯತ್ನಿಸೋಣ.

ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವುದರಿಂದ ಯೆಹೂದ್ಯನು ಅಥವಾ ಗ್ರೀಕನು ಎಂದಾಗಲೀ, ಆಳು ಅಥವಾ ಒಡೆಯ ಎಂದಾಗಲೀ, ಗಂಡು ಹಾಗೂ ಹೆಣ್ಣು ಎಂದಾಗಲೀ ಭೇದವಿಲ್ಲ.

ನಾನು ಹೇಳುವುದೇನಂದರೆ ಪವಿತ್ರಾತ್ಮನನ್ನು ಅನುಸರಿಸಿ ನಡೆದುಕೊಳ್ಳಿರಿ, ಆಗ ನೀವು ಶರೀರಭಾವದ ಅಭಿಲಾಷೆಗಳನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವುದಿಲ್ಲ. ಏಕೆಂದರೆ ಶರೀರಾಭಿಲಾಷೆಯೂ ಆತ್ಮನಿಗೆ ವಿರುದ್ಧವಾಗಿದೆ, ಆತ್ಮನ ಅಭಿಲಾಷೆಯು ಶರೀರಭಾವಕ್ಕೆ ವಿರುದ್ಧವಾಗಿದೆ. ನೀವು ಮಾಡಲಿಚ್ಚಿಸುವುದನ್ನು ಮಾಡದಂತೆ ಇವು ಒಂದಕ್ಕೊಂದು ಹೋರಾಡುತ್ತವೆ.

ಕ್ರಿಸ್ತ ಯೇಸುವಿನಲ್ಲಿರುವವರು ತಮ್ಮ ಶರೀರಭಾವವನ್ನು ಅದರ ವಿಷಯಾಭಿಲಾಷೆ, ಸ್ವೇಚ್ಛಾಭಿಲಾಷೆಗಳ ಸಹಿತವಾಗಿ ಶಿಲುಬೆಗೆ ಹಾಕಿದವರಾಗಿದ್ದಾರೆ.

ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶವನ್ನು ಕೊಯ್ಯುವನು. ಆತ್ಮನ ಕುರಿತಾಗಿ ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು.

ನಾವೆಲ್ಲರೂ ಪೂರ್ವದಲ್ಲಿ ಅವರ ಹಾಗೆಯೇ ಇದ್ದೆವು, ಶರೀರಭಾವದ ಆಸೆಗಳಿಗೆ ಅಧೀನರಾಗಿ, ಶಾರೀರಿಕ ಹಾಗೂ ಮಾನಸಿಕ ಇಚ್ಛೆಗಳನ್ನು ಈಡೇರಿಸುತ್ತಾ ಬಂದೆವು. ಸ್ವಭಾವತಃ ನಾವು ಸಹ ಇತರರಂತೆಯೇ ದೇವರ ಕೋಪಕ್ಕೆ ಗುರಿಯಾಗಿದ್ದೆವು.

ಅವರ ಮನಸ್ಸಿಗೆ ಕತ್ತಲು ಕವಿದಿದೆ, ಅವರು ತಮ್ಮ ಕಠಿಣವಾದ ಹೃದಯದ ನಿಮಿತ್ತದಿಂದಲೂ ಮತ್ತು ತಮ್ಮಲ್ಲಿರುವ ಅಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ ದೂರವಾಗಿದ್ದಾರೆ.

ನನಗಂತೂ ಬದುಕುವುದೆಂದರೆ ಕ್ರಿಸ್ತನೇ, ಸಾಯುವುದು ಲಾಭವೇ.

ನಿಜವಾದ ಸುನ್ನತಿಯವರು ಯಾರೆಂದರೆ, ದೇವರಾತ್ಮನಿಂದ ಪ್ರೇರಿತರಾಗಿ ಆರಾಧಿಸುವವರೂ, ಕ್ರಿಸ್ತ ಯೇಸುವಿನಲ್ಲಿ ಹರ್ಷಗೊಳ್ಳುವವರೂ, ಶರೀರಸಂಬಂಧವಾದವುಗಳಲ್ಲಿ ಭರವಸವಿಲ್ಲದವರೂ ಆಗಿರುವ ನಾವುಗಳೇ.

ಯಾಕೆಂದರೆ ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ. ಅವರ ವಿಷಯದಲ್ಲಿ ನಿಮಗೆ ಎಷ್ಟೋ ಸಾರಿ ಹೇಳಿದೆನು, ಈಗಲೂ ಅಳುತ್ತಾ ಹೇಳುತ್ತೇನೆ. ನಾಶನವೇ ಅವರ ಅಂತ್ಯಾವಸ್ಥೆ, ಹೊಟ್ಟೆಯೇ ಅವರ ದೇವರು, ನಾಚಿಕೆಪಡಿಸುವ ಕೆಲಸಗಳಲ್ಲಿಯೇ ಅವರಿಗೆ ಘನತೆ, ಅವರು ಪ್ರಪಂಚದ ಕಾರ್ಯಗಳ ಕುರಿತು ಚಿಂತಿಸುವವರು. ನಾವಾದರೋ ಪರಲೋಕದ ಪ್ರಜೆಗಳು, ಕರ್ತನಾದ ಯೇಸು ಕ್ರಿಸ್ತನು ಅಲ್ಲಿಂದಲೇ ರಕ್ಷಕನಾಗಿ ಬರುವುದನ್ನು ಎದುರುನೋಡುತ್ತಾ ಇದ್ದೇವೆ. ಆತನು ಎಲ್ಲವನ್ನೂ ತನಗೆ ಅಧೀನಮಾಡಿಕೊಳ್ಳಲಾಗುವ ಪರಾಕ್ರಮವನ್ನು ಹೊಂದಿದವನಾಗಿ ದೀನಾವಸ್ಥೆಯುಳ್ಳ ನಮ್ಮ ದೇಹವನ್ನು ಪ್ರಭಾವವುಳ್ಳ ತನ್ನ ದೇಹದಂತೆ ರೂಪಾಂತರಪಡಿಸುವನು.

ಮೋಸಕರವಾದ ಮತ್ತು ವ್ಯರ್ಥವಾದ ತತ್ವಜ್ಞಾನ ಬೋಧನೆಯಿಂದ ಯಾರೂ ನಿಮ್ಮನ್ನು ವಶಮಾಡಿಕೊಳ್ಳದಂತೆ ಎಚ್ಚರಿಕೆಯಾಗಿರಿ. ಇವುಗಳು ಮನುಷ್ಯರ ಸಂಪ್ರದಾಯಗಳಿಗೆ ಮತ್ತು ಪ್ರಾಪಂಚಿಕ ಮೂಲ ಬೋಧನೆಗಳಿಗೆ ಸಂಬಂಧಿಸಿದವುಗಳೇ ಹೊರತು ಕ್ರಿಸ್ತನಿಗಲ್ಲ.

ಈ ಜ್ಞಾನದಲ್ಲಿ ಗ್ರೀಕನು ಮತ್ತು ಯೆಹೂದ್ಯನು ಎಂಬ ಭೇದವಿಲ್ಲ, ಸುನ್ನತಿಮಾಡಿಸಿಕೊಂಡವರು ಮತ್ತು ಸುನ್ನತಿ ಮಾಡಿಸಿಕೊಳ್ಳದವರು ಎಂಬ ಭೇದವಿಲ್ಲ, ನಾಗರಿಕ, ಅನಾಗರಿಕನು ಎಂಬ ಭೇದವಿಲ್ಲ, ದಾಸನು, ಸ್ವತಂತ್ರನು ಎಂಬ ಭೇದವಿಲ್ಲ, ಆದರ ಬದಲಾಗಿ ಕ್ರಿಸ್ತನೇ ಸಮಸ್ತವೂ ಹಾಗೂ ಸಮಸ್ತರಲ್ಲಿಯೂ ಇರುವಾತನಾಗಿದ್ದಾನೆ.

ಶಾಂತಿದಾಯಕನಾದ ದೇವರು ತಾನೇ ನಿಮ್ಮನ್ನು ಪರಿಪೂರ್ಣವಾಗಿ ಶುದ್ಧೀಕರಿಸಲಿ. ನಮ್ಮ ಕರ್ತನಾದ ಯೇಸು ಕ್ರಿಸ್ತನು ಹಿಂತಿರುಗಿ ಬರುವಾಗ ನಿಮ್ಮ ಆತ್ಮ, ಪ್ರಾಣ ಮತ್ತು ಶರೀರಗಳು ದೋಷವಿಲ್ಲದೆ ಪರಿಪೂರ್ಣವಾಗಿ ಕಾಣಿಸಿಕೊಳ್ಳುವಂತೆ ಕಾಪಾಡಲ್ಪಡಲಿ.

ನಾವು ಲೋಕದೊಳಕ್ಕೆ ಏನೂ ತೆಗೆದುಕೊಂಡು ಬರಲಿಲ್ಲವಾದ್ದರಿಂದ, ಅದರೊಳಗಿಂದ ಏನೂ ತೆಗೆದುಕೊಂಡು ಹೋಗಲಾರೆವು.

ದೇವರು ನಮಗೆ ಕೊಟ್ಟಿರುವ ಆತ್ಮವು ಬಲ, ಪ್ರೀತಿ, ಸಂಯಮಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ.

ಮನುಷ್ಯರು ಸ್ವಾರ್ಥಚಿಂತಕರೂ, ಹಣದಾಸೆಯವರೂ, ಬಡಾಯಿಕೊಚ್ಚುವವರೂ, ಅಹಂಕಾರಿಗಳೂ, ದೂಷಕರೂ, ತಂದೆತಾಯಿಗಳಿಗೆ ಅವಿಧೇಯರೂ, ಉಪಕಾರ ನೆನಸದವರೂ, ದೇವಭಯವಿಲ್ಲದವರೂ, ಮಮತೆಯಿಲ್ಲದವರೂ, ಸಮಾಧಾನಹೊಂದದವರೂ, ಚಾಡಿಹೇಳುವವರೂ, ದಮೆಯಿಲ್ಲದವರೂ, ಕ್ರೂರರೂ, ಒಳ್ಳೆಯದನ್ನು ದ್ವೇಷಿಸುವವರೂ, ದ್ರೋಹಿಗಳೂ, ದುಡುಕುವವರೂ, ದುರಹಂಕಾರವುಳ್ಳವರೂ, ದೇವರನ್ನು ಪ್ರೀತಿಸುವುದಕ್ಕಿಂತ ಅಧಿಕವಾಗಿ ಭೋಗವನ್ನೇ ಪ್ರೀತಿಸುವವರೂ, ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು. ಇಂಥವರ ಸಹವಾಸವನ್ನೂ ಮಾಡದಿರು.

ಶುದ್ಧರಿಗೆ ಎಲ್ಲವೂ ಶುದ್ಧವೇ; ಆದರೆ ಅಶುದ್ಧರಿಗೂ, ನಂಬಿಕೆಯಿಲ್ಲದವರಿಗೂ ಯಾವುದೂ ಶುದ್ಧವಲ್ಲ; ಅವರ ಬುದ್ಧಿಯೂ ಮನಸ್ಸಾಕ್ಷಿಯೂ ಎರಡೂ ಅಶುದ್ಧವಾಗಿವೆ. ಅವರು ತಾವು ದೇವರನ್ನು ಅರಿತವರೆಂದು ಹೇಳಿಕೊಳ್ಳುತ್ತಾರೆ; ಆದರೆ ಅವರ ನಡತೆ ತದ್ವಿರುದ್ಧವಾಗಿರುತ್ತದೆ. ಅವರು ಅಸಹ್ಯ ಕೃತ್ಯಗಳಲ್ಲಿ ಭಾಗವಹಿಸುವವರೂ, ದೇವರಿಗೆ ಅವಿಧೇಯರೂ ಆಗಿರುವುದರಿಂದ ದೇವರನ್ನು ತಮ್ಮ ಕೃತ್ಯಗಳಿಂದಲೇ ಅಲ್ಲಗಳೆಯುತ್ತಾರೆ ಹಾಗು ಸತ್ಕಾರ್ಯವನ್ನು ಮಾಡಲು ಅಯೋಗ್ಯರಾಗಿದ್ದಾರೆಂದು ಸಾಬಿತುಪಡಿಸುತ್ತಾರೆ.

“ಮನುಷ್ಯನು ಎಷ್ಟು ಮಾತ್ರದವನು, ಅವನನ್ನು ನೀನು ಯಾಕೆ ನೆನಪಿಸಿಕೊಳ್ಳಬೇಕು? ಮಾನವನು ಎಷ್ಟರವನು, ಅವನಲ್ಲಿ ಯಾಕೆ ಲಕ್ಷ್ಯವಿಡಬೇಕು? ನೀನು ಮನುಷ್ಯನನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಉಂಟುಮಾಡಿದ್ದಿಯಲ್ಲಾ. ಮಹಿಮೆಯನ್ನೂ ಗೌರವವನ್ನೂ ಅವನಿಗೆ ಕಿರೀಟವಾಗಿ ಇಟ್ಟಿದ್ದೀ. ಎಲ್ಲವನ್ನೂ ಅವನ ಪಾದಗಳ ಕೆಳಗೆ ಹಾಕಿ ಅವನಿಗೆ ಅಧೀನಮಾಡಿದ್ದೀಯಲ್ಲವೇ” ಎಂದು ಪವಿತ್ರಶಾಸ್ತ್ರದಲ್ಲಿ ಒಬ್ಬನು ಒಂದೆಡೆ ಸಾಕ್ಷಿ ಹೇಳಿದನು. ಆತನು ಎಲ್ಲವನ್ನೂ ಮಾನವಕುಲಕ್ಕೆ ಅಧೀನ ಮಾಡಿದ್ದಾನೆಂಬುದರಲ್ಲಿ ಅವನಿಗೆ ಒಂದನ್ನಾದರೂ ಅಧೀನಮಾಡದೆ ಬಿಡಲಿಲ್ಲವೆಂದು ಹೇಳಿದ ಹಾಗಾಯಿತು. ಆದರೆ ಎಲ್ಲವೂ ಅವನಿಗೆ ಅಧೀನವಾಗಿರುವುದಾಗಿ ನಾವು ಇನ್ನು ಕಂಡಿಲ್ಲ.

ಇದಲ್ಲದೆ ಮಕ್ಕಳು ರಕ್ತ ಮಾಂಸಧಾರಿಗಳು ಆಗಿರುವುದರಿಂದ ಯೇಸು ಸಹ ಅವರಂತೆಯೇ ಆದನು. ತನ್ನ ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ನಾಶಮಾಡುವುದಕ್ಕೂ, ಮರಣ ಭಯದಿಂದ ತಮ್ಮ ಜೀವಮಾನದಲ್ಲೆಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸುವುದಕ್ಕೂ ಅವರಂತೆ ರಕ್ತಮಾಂಸಧಾರಿಯಾದನು.

ಏಕೆಂದರೆ ದೇವರ ವಾಕ್ಯವು ಸಜೀವವಾದದ್ದು, ಸಕ್ರಿಯವಾದದ್ದು ಮತ್ತು ಯಾವ ಇಬ್ಬಾಯಿ ಕತ್ತಿಗಿಂತಲೂ ಹರಿತವಾದದ್ದು ಆಗಿದ್ದು, ಪ್ರಾಣ ಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದಾಗಿದ್ದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದ್ದೂ ಆಗಿದೆ. ಆತನ ದೃಷ್ಟಿಗೆ ಮರೆಯಾಗಿರುವ ಒಂದು ಸೃಷ್ಟಿಯೂ ಇಲ್ಲ. ಆತನ ಕಣ್ಣಿಗೆ ಮರೆಯಾದದ್ದು ಒಂದೂ ಇಲ್ಲ ಎಲ್ಲವೂ ನಗ್ನವಾಗಿಯೂ ಬಟ್ಟಬಯಲಾಗಿಯೂ ಇದೆ. ಅಂಥವನಿಗೆ ನಾವು ಲೆಕ್ಕಕೊಡಬೇಕಾಗಿದೆ.

ಒಂದೇ ಸಾರಿ ಸಾಯುವುದೂ ಆ ಮೇಲೆ ನ್ಯಾಯತೀರ್ಪು ಮನುಷ್ಯರಿಗೆ ಹೇಗೆ ನೇಮಕವಾಗಿದೆಯೋ,

ಆದರೆ ಪ್ರತಿಯೊಬ್ಬನು ತನ್ನ ಸ್ವಂತ ದುರಾಶೆಗಳಿಂದ ಸೆಳೆಯಲ್ಪಟ್ಟು ಮರುಳುಗೊಂಡವನಾಗಿ ಶೋಧಿಸಲ್ಪಡುತ್ತಾನೆ. ಆ ಮೇಲೆ ದುರಾಶೆಯು ಗರ್ಭಧರಿಸಿ ಪಾಪವನ್ನು ಹೆರುತ್ತದೆ. ಪಾಪವು ಪೂರ್ಣವಾಗಿ ಬೆಳೆದು ಮರಣವನ್ನು ತರುತ್ತದೆ. ನನ್ನ ಪ್ರಿಯ ಸಹೋದರರೇ, ಮೋಸಹೋಗಬೇಡಿರಿ.

ಆತ್ಮವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದಾಗಿದೆ.

“ಈಹೊತ್ತು ಇಲ್ಲವೆ ನಾಳೆ ನಾವು ಇಂಥ ಪಟ್ಟಣಕ್ಕೆ ಹೋಗಿ ಅಲ್ಲಿ ಒಂದು ವರ್ಷವಿದ್ದು ವ್ಯಾಪಾರ ಮಾಡಿ ಲಾಭವನ್ನು ಸಂಪಾದಿಸುತ್ತೇವೆ” ಎನ್ನುವವರೇ ಕೇಳಿರಿ. ನಾಳೆ ಏನಾಗುವುದೋ ನಿಮಗೆ ತಿಳಿಯದು. ನಿಮ್ಮ ಜೀವಮಾನವು ಎಂಥದ್ದು? ನೀವು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆಮೇಲೆ ಕಾಣದೆ ಹೋಗುವ ಹಬೆಯಂತಿದ್ದೀರಿ.

ಏಕೆಂದರೆ ಪವಿತ್ರಗ್ರಂಥದಲ್ಲಿ ಬರೆದಿರುವಂತೆ: “ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ. ಅದರ ಮಹಿಮೆಯೆಲ್ಲಾ ಹುಲ್ಲಿನ ಹೂವಿನಂತಿದೆ. ಹುಲ್ಲು ಒಣಗಿ ಹೋಗುವುದು. ಅದರ ಹೂವು ಉದುರಿ ಹೋಗುವುದು.

ಪ್ರಿಯರೇ, ಪ್ರವಾಸಿಗಳು ಮತ್ತು ಪರದೇಶಸ್ಥರು ಆಗಿರುವ ನೀವು ನಿಮ್ಮ ಆತ್ಮದ ವಿರುದ್ಧವಾಗಿ ಯುದ್ಧ ಮಾಡುವ ಶಾರೀರಿಕ ದುರಾಶೆಗಳಿಗೆ ದೂರವಾಗಿರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಿನ ಪ್ರೀತಿಯು ಅವನಲ್ಲಿಲ್ಲ. ಲೋಕದಲ್ಲಿರುವ ಶರೀರದಾಶೆ, ಕಣ್ಣಿನಾಶೆ, ಬದುಕುಬಾಳಿನ ಗರ್ವ, ಇವು ತಂದೆಗೆ ಸಂಬಂಧಪಟ್ಟವುಗಳಲ್ಲ. ಲೋಕಕ್ಕೆ ಸಂಬಂಧಪಟ್ಟವುಗಳಾಗಿವೆ. ಲೋಕವೂ ಅದರ ಆಸೆಯೂ ಗತಿಸಿಹೋಗುತ್ತವೆ. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಸದಾಕಾಲಕ್ಕೂ ಇರುವನು.

ಇಗೋ, ನಾವು ದೇವರ ಮಕ್ಕಳೆಂದು ಕರೆಯಲ್ಪಡುವುದರಲ್ಲಿ ತಂದೆಯು ಎಂಥಾ ಪ್ರೀತಿಯನ್ನು ನಮ್ಮ ಮೇಲೆ ಇಟ್ಟಿದ್ದಾನಲ್ಲಾ! ನಾವು ಆತನ ಮಕ್ಕಳಾಗಿದ್ದೇವೆ. ಲೋಕವು ಆತನನ್ನು ಅರ್ಥಮಾಡಿಕೊಳ್ಳದೆ ಇರುವುದರಿಂದ ನಮ್ಮನ್ನೂ ಅರ್ಥಮಾಡಿಕೊಳ್ಳುವುದಿಲ್ಲ.

ಬೆಂಕಿಯ ಬಾಯಲ್ಲಿ ಇರುವವರನ್ನು ಎಳೆದು ಸಂರಕ್ಷಿಸಿರಿ, ಕೆಲವರನ್ನು ಭಯಪಡುತ್ತಾ ಕರುಣಿಸಿರಿ. ಶಾರೀರಿಕ ನಡತೆಯಿಂದ ಹೊಲಸಾದ ಅವರ ಉಡುಪನ್ನೂ ಸಹ ಹಗೆಮಾಡಿರಿ.

ನೋಡಿರಿ, ಆತನು ಮೇಘಗಳೊಂದಿಗೆ ಬರುತ್ತಾನೆ, ಎಲ್ಲರ ಕಣ್ಣುಗಳು ಆತನನ್ನು ನೋಡುವವು, ಆತನನ್ನು ಇರಿದವರು ಸಹ ಅದನ್ನು ಕಾಣುವರು, ಭೂಮಿಯಲ್ಲಿರುವ ಎಲ್ಲಾ ಕುಲದವರು ಆತನ ನಿಮಿತ್ತ ದುಃಖಿಸುವರು. ಹೌದು, ಹಾಗೆಯೇ ಆಗುವುದು. ಆಮೆನ್.

Kannada - ಕನ್ನಡ - KN

KNIRV'19 - Kannada Indian Revised Version - 2019

This Bible text is from Kannada Indian Revised Version IRV 2019
https://open.bible/bibles/kannada-bridge-text-bible/
provided by: Bridge Connectivity Solutions Pvt Ltd, available by Creative Commons CC-BY-SA-4.0,
and this new compilation is shared as www.creativecommons.org/licenses/by-sa/4.0.
Languages are made available to you by www.ipedge.net