31 – ಇವ್ಯಾಂಜಲಿಸಂ

ಇವು ಸರ್ವಶಕ್ತನಾದ ದೇವರ ಪವಿತ್ರ ಮಾತುಗಳು.
ಮಾನವರ ಮಾತುಗಳಲ್ಲಿ ನಮಗೆ ಆಸಕ್ತಿ ಇಲ್ಲ.
ದೇವರನ್ನು ಪ್ರೀತಿಸುವ ಯಾರಿಗಾದರೂ... ದೇವರು ಇದರ ಬಗ್ಗೆ ಹೀಗೆ ಹೇಳುತ್ತಾನೆ: ಇವ್ಯಾಂಜಲಿಸಂ.

ಟಾಪ್ 3 ಅತ್ಯಂತ ಮಹತ್ವದ ಪದ್ಯಗಳು

ಆದರೆ ಅವರು ನಂಬದೆ ಇರುವುದರಿಂದ ಆತನ ನಾಮವನ್ನು ಹೇಳಿಕೊಳ್ಳುವುದಾದರೂ ಹೇಗೆ? ಮತ್ತು ಆತನ ಸುದ್ದಿಯನ್ನು ಕೇಳದಿರುವಲ್ಲಿ ಆತನನ್ನು ನಂಬುವುದಾದರೂ ಹೇಗೆ? ಪ್ರಚಾರಪಡಿಸುವವನಿಲ್ಲದೆ ಕೇಳುವುದಾದರೂ ಹೇಗೆ? ಸುವಾರ್ತೆಸಾರುವವರನ್ನು ಕಳುಹಿಸದೆ ಸಾರುವುದು ಹೇಗೆ? ಇದಕ್ಕೆ ಸರಿಯಾಗಿ “ಶುಭದ ಸುವಾರ್ತೆಯನ್ನು ಸಾರುವವರ ಪಾದಗಳು ಎಷ್ಟೋ ಮನೋಹರವಾಗಿವೆ” ಎಂದು ಬರೆದಿದೆ.

ರಕ್ಷಣಾ ಮಾರ್ಗದಲ್ಲಿರುವವರಲ್ಲಿಯೂ ಮತ್ತು ನಾಶನದ ಮಾರ್ಗದಲ್ಲಿರುವವರಲ್ಲಿಯೂ ನಾವು ದೇವರಿಗೆ ಕ್ರಿಸ್ತನ ಪರಿಮಳವಾಗಿದ್ದೇವೆ. ನಾವು ವಿನಾಶಮಾರ್ಗದಲ್ಲಿರುವವರಿಗೆ ಮೃತ್ಯುಕಾರಕ ಗಂಧ; ರಕ್ಷಣಾಮಾರ್ಗದಲ್ಲಿರುವವರಿಗೆ ಸಜೀವದಾಯಕ ಸುಗಂಧ. ಇಂಥ ಕಾರ್ಯಗಳಿಗೆ ಯಾರು ಯೋಗ್ಯರು?

ಯಾರಾದರೂ ನಿಮ್ಮನ್ನು ಸೇರಿಸಿಕೊಳ್ಳದೆಯೂ ನಿಮ್ಮ ವಾಕ್ಯಗಳನ್ನೂ ಕೇಳದೆಯೂ ಹೋದರೆ ನೀವು ಆ ಮನೆಯನ್ನಾಗಲಿ ಆ ಊರನ್ನಾಗಲಿ ಬಿಟ್ಟು ಹೊರಡುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ. ನ್ಯಾಯವಿಚಾರಣೆಯ ದಿನದಲ್ಲಿ ಅಂಥ ಊರಿನ ಗತಿಯು ಸೊದೋಮ್ ಗೊಮೋರಗಳ ಸೀಮೆಯ ಗತಿಗಿಂತಲೂ ಕಠಿಣವಾಗಿರುವುದು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

ಕ್ಯಾನೊನಿಕಲ್ ಕ್ರಮದಲ್ಲಿ ಪ್ರತಿ ವಚನ - 307 ಭಾಗಗಳು

ಭೂಮಿಯು ಇರುವವರೆಗೆ ಬಿತ್ತುವ ಕಾಲವೂ ಕೊಯ್ಯುವ ಕಾಲವೂ ಚಳಿಯೂ, ಮಳೆಯೂ, ಬೇಸಿಗೆ ಕಾಲವೂ, ಹಿಮಕಾಲವೂ, ಹಗಲೂ, ಇರುಳೂ ಇವುಗಳ ಕ್ರಮ ನಿಂತುಹೋಗುವುದಿಲ್ಲ” ಎಂದನು.

ಅದಕ್ಕೆ ಮೋಶೆಯು ಉತ್ತರವಾಗಿ, “ಅವರು ನನ್ನನ್ನು ನಂಬದೆ, ನನ್ನ ಮಾತಿಗೆ ಕಿವಿಗೊಡದೆ, ಯೆಹೋವನು ನಿನಗೆ ಕಾಣಿಸಿಕೊಂಡೇ ಇಲ್ಲ ಎಂದು ಹೇಳಬಹುದು?” ಎಂದನು.

ಆಗ ಮೋಶೆಯು ಯೆಹೋವನಿಗೆ, “ಕರ್ತನೇ, ನಾನು ಮೊದಲಿನಿಂದಲೂ, ನೀನು ನಿನ್ನ ದಾಸನ ಸಂಗಡ ಮಾತನಾಡಿದ ಮೇಲೆಯೂ ನಾನು ವಾಕ್ಚಾತುರ್ಯವಿಲ್ಲದವನು. ನಾನು ತೊದಲುವವನಾಗಿದ್ದು ನನ್ನ ನಾಲಿಗೆಯೂ ಮಂದವಾಗಿವೆ” ಎಂದು ಹೇಳಿದನು. ಅದಕ್ಕೆ ಯೆಹೋವನು ಅವನಿಗೆ, “ಮನುಷ್ಯರಿಗೆ ಬಾಯಿಕೊಟ್ಟವನು ಯಾರು? ಒಬ್ಬನನ್ನು ಮೂಕನಾಗಿ, ಕಿವುಡನಾಗಿ, ದೃಷ್ಠಿಯುಳ್ಳವನಾಗಿ ಹಾಗೂ ಕುರುಡನಾಗಿ ಉಂಟುಮಾಡಿದವನಾರು? ಯೆಹೋವನಾದ ನಾನೇ ಅಲ್ಲವೇ? ಹಾಗಾದರೆ ಈಗಲೇ ನೀನು ಹೊರಡು, ನಾನು ನಿನ್ನಗೆ ಮಾತನಾಡಲು ಬೇಕಾದ ಸಾಮರ್ಥ್ಯವನ್ನು ಕೊಡುತ್ತಾ, ನೀನು ಮಾತನಾಡಬೇಕಾದದ್ದನ್ನು ನಿನಗೆ ಬೋಧಿಸುವೆನು” ಎಂದು ಹೇಳಿದನು.

ಅದಕ್ಕೆ ಮೋಶೆಯು, “ಕರ್ತನೇ, ದಯವಿಟ್ಟು ನೀನು ಬೇರೊಬ್ಬನನ್ನು ಕಳುಹಿಸಬೇಕು” ಎಂದನು. ಆಗ ಯೆಹೋವನು ಮೋಶೆಯ ಮೇಲೆ ಕೋಪಗೊಂಡು ಅವನಿಗೆ, “ಲೇವಿಯನಾದ ಆರೋನನು ನಿನ್ನ ಸಹೋದರನಲ್ಲವೇ? ಅವನು ಚೆನ್ನಾಗಿ ಮಾತನಾಡಬಲ್ಲವನೆಂದು ನನಗೆ ತಿಳಿದಿದೆ. ಅವನೇ ನಿನ್ನನ್ನು ಎದುರುಗೊಳ್ಳುವುದಕ್ಕೆ ಬರುತ್ತಾನೆ. ಅವನು ನಿನ್ನನ್ನು ನೋಡಿದಾಗ ಅವನು ತನ್ನ ಹೃದಯದಲ್ಲಿ ಸಂತೋಷಿಸುವನು. ನೀನು ಅವನ ಸಂಗಡ ಮಾತನಾಡಿ ಹೇಳಬೇಕಾದ ಮಾತುಗಳನ್ನು ಅವನಿಗೆ ತಿಳಿಸಿಕೊಡು. ನಿನ್ನ ಬಾಯಿಗೂ ಅವನ ಬಾಯಿಗೂ ಸಹಾಯವಾಗಿದ್ದು ನೀವು ಮಾಡಬೇಕಾದದ್ದನ್ನು ಬೋಧಿಸುವೆನು. ಅವನು ನಿನಗೆ ಬದಲಾಗಿ ಜನರ ಸಂಗಡ ಮಾತನಾಡುವನು. ಅವನು ನಿನಗೆ ಬಾಯಂತಿರುವನು. ನೀನು ಅವನಿಗೆ ದೇವರಂತಿರುವಿ.

ನಾನು ಮೋಶೆಗೆ ವಾಗ್ದಾನ ಮಾಡಿದಂತೆ ನೀವು ಕಾಲಿಡುವ ಸ್ಥಳಗಳನ್ನೆಲ್ಲಾ ನಿಮಗೆ ಕೊಟ್ಟಿದ್ದೇನೆ.

ಎಲ್ಲಾ ಭೂನಿವಾಸಿಗಳೇ ಯೆಹೋವನಿಗೆ ಕೀರ್ತನೆಯನ್ನು ಹಾಡಿರಿ. ಆತನ ರಕ್ಷಣೆಯನ್ನು ಪ್ರತಿನಿತ್ಯವೂ ಸಾರಿಹೇಳಿರಿ. ಜನಾಂಗಗಳಲ್ಲಿ ಆತನ ಘನತೆಯನ್ನು ಎಲ್ಲಾ ಜನರಲ್ಲಿ ಆತನ ಅದ್ಭುತಕೃತ್ಯಗಳನ್ನೂ ಪ್ರಸಿದ್ಧಿಪಡಿಸಿರಿ.

ನೀನು ನೀತಿಯನ್ನು ಸಾಧಿಸಿದ ಶುಭಸಮಾಚಾರವನ್ನು, ಧಾರಳವಾಗಿ ಮಹಾಸಭೆಯಲ್ಲಿ ಪ್ರಕಟಿಸಿದೆನು; ಯೆಹೋವನೇ, ನೀನೇ ಬಲ್ಲೆ. ನಿನ್ನ ನೀತಿಸಾಧನೆಯನ್ನು ಮರೆಮಾಡಲಿಲ್ಲ; ನಿನ್ನ ನಂಬಿಕೆಯನ್ನೂ, ರಕ್ಷಣೆಯನ್ನೂ ಪ್ರಸಿದ್ಧಪಡಿಸಿದೆನು; ನಿನ್ನ ಕೃಪಾಸತ್ಯತೆಗಳನ್ನು ಮಹಾಸಮುದಾಯದಲ್ಲಿ ತಿಳಿಸದೆ ಇರಲಿಲ್ಲ.

ನನ್ನ ಬಾಯಿ ನಿನ್ನ ನೀತಿಯನ್ನು, ರಕ್ಷಣೆಯನ್ನು ಹಗಲೆಲ್ಲಾ ವರ್ಣಿಸುತ್ತಿರುವುದು; ಆದರೂ ಅವುಗಳ ವಿವರಣೆ ನನಗೆ ಅಸಾಧ್ಯ. ಕರ್ತನಾದ ಯೆಹೋವನೇ, ನಾನು ನಿನ್ನ ಮಹತ್ತರವಾದ ಕೃತ್ಯಗಳನ್ನು ಸ್ಮರಿಸುವವನಾಗಿ ನಿನ್ನೊಬ್ಬನ ನೀತಿಯನ್ನೇ ಪ್ರಕಟಪಡಿಸುವೆನು. ದೇವರೇ, ನೀನು ಬಾಲ್ಯದಿಂದಲೂ ನನ್ನನ್ನು ಉಪದೇಶಿಸುತ್ತಾ ಬಂದಿದ್ದಿ. ನಾನು ನಿನ್ನ ಅದ್ಭುತಕೃತ್ಯಗಳನ್ನು ಇಂದಿನ ವರೆಗೂ ಪ್ರಚುರಪಡಿಸುತ್ತಿದ್ದೇನೆ. ದೇವರೇ, ನಾನು ನರೆಯ ಮುದುಕನಾದಾಗಲೂ ಕೈಬಿಡಬೇಡ; ಆಗ ಮುಂದಿನ ತಲೆಯವರಿಗೆ ನಿನ್ನ ಭುಜಬಲವನ್ನು ಸಾರುವೆನು, ತಲತಲಾಂತರದವರಿಗೆಲ್ಲಾ ನಿನ್ನ ಪ್ರತಾಪವನ್ನು ಪ್ರಕಟಿಸುವೆನು.

ಯೆಹೋವನಿಗೆ ಹಾಡಿರಿ; ಆತನ ನಾಮವನ್ನು ಕೊಂಡಾಡಿರಿ. ಆತನ ರಕ್ಷಣೆಯನ್ನು ಪ್ರತಿನಿತ್ಯವೂ ಸಾರಿ ಹೇಳಿರಿ. ಜನಾಂಗಗಳಲ್ಲಿ ಆತನ ಘನತೆಯನ್ನೂ, ಎಲ್ಲಾ ಜನರಲ್ಲಿ ಆತನ ಅದ್ಭುತಕೃತ್ಯಗಳನ್ನೂ ಪ್ರಸಿದ್ಧಪಡಿಸಿರಿ.

ನಿನ್ನ ಕಟ್ಟಳೆಗಳ ವಿಷಯವಾಗಿ, ಅರಸುಗಳ ಮುಂದೆಯೂ ಮಾತನಾಡುವೆನು, ನಾಚಿಕೆಪಡುವುದಿಲ್ಲ.

ಅಳುತ್ತಾ ಬಿತ್ತುವವರು, ಹಾಡುತ್ತಾ ಕೊಯ್ಯುವರು, ದುಃಖಿಸುತ್ತಾ ಬೀಜವನ್ನು ತೆಗೆದುಕೊಂಡು ಹೋಗುವವನು, ಹರ್ಷಿಸುತ್ತಾ ಸಿವುಡುಗಳನ್ನು ಹೊತ್ತುಕೊಂಡು ಬರುವನು.

ಯೆಹೋವನೇ, ನನ್ನ ಬಾಯಿಗೆ ಕಾವಲಿರಿಸು, ನನ್ನ ತುಟಿಗಳೆಂಬ ಕದವನ್ನು ಕಾಯಿ.

ಜನರು ವಂಶ ಪಾರಂಪರ್ಯವಾಗಿ ನಿನ್ನ ಕೃತ್ಯಗಳನ್ನು ಹೊಗಳುವರು, ನಿನ್ನ ಮಹತ್ಕಾರ್ಯಗಳನ್ನು ವರ್ಣಿಸುವರು.

ಅಧರ್ಮಿಯ ಸಂಬಳವು ಮೋಸ, ನೀತಿಯನ್ನು ಬಿತ್ತುವವನು ಲಾಭವನ್ನು ಪಡೆಯುವನು.

ಧರ್ಮಾತ್ಮನ ಫಲ ಜೀವವೃಕ್ಷ, ಜ್ಞಾನಿಯು ಆತ್ಮಗಳನ್ನು ಆಕರ್ಷಿಸುವನು.

ಹಸನ್ಮುಖ ಹೃದಯಕ್ಕೆ ಆನಂದ, ಶುಭಸಮಾಚಾರ ದೇಹಕ್ಕೆ ಆರೋಗ್ಯ. ಜೀವಪ್ರದವಾದ ಗದರಿಕೆಗೆ ಕಿವಿಗೊಡುವವನು, ಜ್ಞಾನಿಗಳ ನಡುವೆ ನೆಲೆಗೊಳ್ಳುವನು. ಶಿಕ್ಷೆಯನ್ನು ತಿರಸ್ಕರಿಸುವವನು ತನ್ನನ್ನೇ ನಿರಾಕರಿಸಿಕೊಳ್ಳುವನು, ಗದರಿಕೆಯನ್ನು ಕೇಳುವವನು ಬುದ್ಧಿಯನ್ನು ಪಡೆಯುವನು. ಯೆಹೋವನ ಭಯವೇ ಜ್ಞಾನೋಪದೇಶ, ಗೌರವಕ್ಕೆ ಮೊದಲು ವಿನಯ.

ಸವಿನುಡಿಯು ಜೇನುಕೊಡ, ಅದು ಆತ್ಮಕ್ಕೆ ಸಿಹಿ, ಎಲುಬಿಗೆ ಕ್ಷೇಮ.

ಮಿತವಾಗಿ ಮಾತನಾಡುವವನು ಜ್ಞಾನಿ, ಶಾಂತಾತ್ಮನು ವಿವೇಕಿ. ಮೂಢನು ಕೂಡ ಸುಮ್ಮನಿದ್ದರೆ ಜ್ಞಾನಿಯೆಂತಲೂ, ತುಟಿಗಳನ್ನು ಬಿಗಿಹಿಡಿದರೆ ವಿವೇಕಿಯೆಂತಲೂ ಅನ್ನಿಸಿಕೊಳ್ಳುವನು.

ಮೂಢನಿಗೆ ವಿವೇಕವು ಅನಿಷ್ಟ; ಸ್ವಭಾವವನ್ನು ಹೊರಪಡಿಸಿಕೊಳ್ಳುವುದೇ ಅವನಿಗಿಷ್ಟ.

ಜ್ಞಾನಹೀನನ ತುಟಿಗಳು ಜಗಳವನ್ನು ಉಂಟುಮಾಡುತ್ತವೆ, ಅವನ ಬಾಯಿ ಪೆಟ್ಟುತಿನ್ನುವುದಕ್ಕೆ ಕೂಗಿಕೊಳ್ಳುತ್ತದೆ. ಜ್ಞಾನಹೀನನಿಗೆ ಬಾಯಿ ನಾಶ, ತುಟಿಗಳು ಪಾಶ.

ಗಮನಿಸದೆ ಉತ್ತರಕೊಡುವವನು, ಮೂರ್ಖನೆಂಬ ಅವಮಾನಕ್ಕೆ ಗುರಿಯಾಗುವನು.

ಜೀವ ಮತ್ತು ಮರಣಗಳು ನಾಲಿಗೆಯ ವಶ, ವಚನಪ್ರಿಯರು ಅದರ ಫಲವನ್ನು ಅನುಭವಿಸುವರು,

ಬಳಲಿ ಬಾಯಾರಿದವನಿಗೆ ತಣ್ಣೀರು ಹೇಗೋ, ದೇಶಾಂತರದಿಂದ ಬಂದ ಒಳ್ಳೆಯ ಸಮಾಚಾರವು ಹಾಗೆಯೇ.

ಹರಿಯುವ ಸಮಯ, ಹೊಲಿಯುವ ಸಮಯ, ಸುಮ್ಮನಿರುವ ಸಮಯ, ಮಾತನಾಡುವ ಸಮಯ,

ಗಾಳಿಯನ್ನು ನೋಡುತ್ತಲೇ ಇರುವವನು ಬೀಜವನ್ನು ಬಿತ್ತುವುದಿಲ್ಲ, ಮೋಡಗಳನ್ನು ಗಮನಿಸುತ್ತಲೇ ಇರುವವನು ಪೈರನ್ನು ಕೊಯ್ಯುವುದಿಲ್ಲ.

ಮುಂಜಾನೆ ಬೀಜ ಬಿತ್ತು; ಸಂಜೆಯ ತನಕ ಕೈಯನ್ನು ಹಿಂದಕ್ಕೆ ತೆಗೆಯಬೇಡ, ಇದು ಸಫಲವಾಗುವುದೋ ಅಥವಾ ಅದು ಸಫಲವಾಗುವುದೋ, ಇಲ್ಲವೇ ಒಂದು ವೇಳೆ ಎರಡೂ ಒಳ್ಳೆಯದಾಗುವುದೋ ನಿನಗೆ ತಿಳಿಯದು.

ಪ್ರಸಂಗಿಯು ಜ್ಞಾನಿಯಾಗಿದ್ದು, ಜನರಿಗೆ ತಿಳಿವಳಿಕೆಯನ್ನು ಬೋಧಿಸುತ್ತಾ ಬಂದನು, ಅನೇಕಾನೇಕ ಜ್ಞಾನೋಕ್ತಿಗಳನ್ನು ಧ್ಯಾನಿಸಿ, ಪರೀಕ್ಷಿಸಿ ಕ್ರಮಪಡಿಸಿದನು. ಪ್ರಸಂಗಿಯು ಯಥಾರ್ಥ ಭಾವದಿಂದ ರಚಿಸಿದ ಒಪ್ಪಿಗೆಯ ಸತ್ಯದ ಮಾತುಗಳನ್ನು ಹುಡುಕಿ ಆರಿಸಿದನು.

ಆಗ, “ಯಾರನ್ನು ಕಳುಹಿಸಲಿ? ಯಾರು ನಮಗೋಸ್ಕರ ಹೋಗುವನು?” ಎಂಬ ಕರ್ತನ ನುಡಿಯನ್ನು ಕೇಳಿ, “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದೆನು.

ಅದಕ್ಕೆ ಆತನು, “ನೀನು ಈ ಜನರ ಬಳಿಗೆ ಹೋಗಿ, ನೀವು ಕಿವಿಯಾರೆ ಕೇಳಿದರೂ ತಿಳಿಯಬಾರದು, ಕಣ್ಣಾರೆ ಕಂಡರೂ ಗ್ರಹಿಸಬಾರದು ಎಂದು ತಿಳಿಸಿ, ಕಣ್ಣಿನಿಂದ ನೋಡದಂತೆಯೂ, ಕಿವಿಯಿಂದ ಕೇಳದಂತೆಯೂ, ತಮ್ಮ ಹೃದಯದಿಂದ ಗ್ರಹಿಸಿ ನನ್ನ ಕಡೆಗೆ ತಿರಿಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೊಂದದಂತೆ ಈ ಜನರ ಹೃದಯವನ್ನು ಕೊಬ್ಬಿಸಿ, ಕಿವಿಯನ್ನು ಮಂದಗೊಳಿಸಿ, ಅವರ ಕಣ್ಣಿಗೆ ಅಂಟು ಬಳಿ” ಎಂದು ನನಗೆ ಹೇಳಿದನು. ಅದಕ್ಕೆ ನಾನು, “ಕರ್ತನೇ, ಇದು ಎಷ್ಟರವರೆಗೆ?” ಎಂದು ಕೇಳಲು ಅದಕ್ಕೆ ಆತನು, “ಯೆಹೋವನು ಜನರನ್ನು ದೂರ ತೊಲಗಿಸಿ ದೇಶದಲ್ಲಿ ನಾಶ ಹೆಚ್ಚಾಗಿ ಪಟ್ಟಣಗಳು ನಿವಾಸಿಗಳಿಲ್ಲದೆ, ಮನೆಗಳು ಜನರಿಲ್ಲದೆ, ದೇಶವು ಸಂಪೂರ್ಣವಾಗಿ ಹಾಳಾಗುವವರೆಗೂ ಇದೇ ರೀತಿ ಇರುವುದು.

ದೇವರ ಉಪದೇಶವನ್ನೂ, ದೇವರ ಸಾಕ್ಷಿಯನ್ನೂ ವಿಚಾರಿಸುವ” ಎಂದು ಅವರು ಹೇಳದಿದ್ದರೆ ಅವರಿಗೆ ಎಂದಿಗೂ ಬೆಳಗಾಗುವುದಿಲ್ಲ.

ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವುದಿಲ್ಲ, ಯಾರೂ ಹಾಳು ಮಾಡುವುದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವುದು.

ಶುಭಸಮಾಚಾರವನ್ನು ತಿಳಿಸಬಲ್ಲ ಚೀಯೋನೇ, ನೀನು ಉನ್ನತಪರ್ವತವನ್ನು ಏರು; ಸುವರ್ತಮಾನವನ್ನು ಪ್ರಕಟಿಸಬಲ್ಲ ಯೆರೂಸಲೇಮೇ, ನಿನ್ನ ಧ್ವನಿಯನ್ನು ಗಟ್ಟಿಯಾಗಿ ಎತ್ತು, ನಿರ್ಭಯವಾಗಿ ಎತ್ತಿ, ಯೆಹೂದದ ಪಟ್ಟಣಗಳಿಗೆ, “ಇಗೋ, ನಿಮ್ಮ ದೇವರು!

ಪರ್ವತಗಳ ಮೇಲೆ ತ್ವರೆಪಡುತ್ತಾ, ಶುಭಸಮಾಚಾರವನ್ನು ತಂದು, ಸಮಾಧಾನವನ್ನು ಸಾರುವ ದೂತನ ಪಾದಗಳು ಎಷ್ಟೋ ಅಂದವಾಗಿವೆ! ಶುಭವರ್ತಮಾನವನ್ನು, ಶುಭದ ಸುವಾರ್ತೆಯನ್ನು ತಂದು, ರಕ್ಷಣೆಯನ್ನು ಪ್ರಕಟಿಸುತ್ತಾ, “ನಿನ್ನ ದೇವರು ರಾಜ್ಯಭಾರವನ್ನು ವಹಿಸಿದ್ದಾನೆ” ಎಂದು ಚೀಯೋನಿಗೆ ತಿಳಿಸುವವನಾಗಿದ್ದಾನೆ.

ಕರ್ತನಾದ ಯೆಹೋವನ ಆತ್ಮವು ನನ್ನ ಮೇಲೆ ಇದೆ, ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವುದಕ್ಕೆ ಅಭಿಷೇಕಿಸಿದನು; ಮನಮುರಿದವರನ್ನು ಕಟ್ಟಿ ವಾಸಿಮಾಡುವುದಕ್ಕೂ, ಸೆರೆಯವರಿಗೆ ಬಿಡುಗಡೆಯಾಗುವುದನ್ನು, ಬಂದಿಗಳಿಗೆ ಕದ ತೆರೆಯುವುದನ್ನು ಪ್ರಸಿದ್ಧಿಪಡಿಸುವುದಕ್ಕೂ, ಯೆಹೋವನು ನೇಮಿಸಿರುವ ಶುಭವರ್ಷ, ನಮ್ಮ ದೇವರು ಮುಯ್ಯಿತೀರಿಸುವ ದಿನ ಇವುಗಳನ್ನು ಪ್ರಚುರಗೊಳಿಸುವುದಕ್ಕೂ, ದುಃಖಿತರೆಲ್ಲರನ್ನು ಸಂತೈಸುವುದಕ್ಕೂ, ಚೀಯೋನಿನಲ್ಲಿ ಶೋಕಿಸುವವರಿಗೆ ಬೂದಿಗೆ ಬದಲಾಗಿ ಶಿರೋಭೂಷಣ, ದುಃಖವಿದ್ದಲ್ಲಿ ಆನಂದತೈಲ, ಕುಂದಿದ ಮನಕ್ಕೆ ಪ್ರತಿಯಾಗಿ ಉತ್ಸಾಹ ಸ್ತೋತ್ರದ ವಸ್ತ್ರ ಇವುಗಳನ್ನು ಒದಗಿಸಿಕೊಡುವುದಕ್ಕೂ ಆತನು ನನ್ನನ್ನು ಕಳುಹಿಸಿದ್ದಾನೆ. ಯೆಹೋವನು ತನ್ನ ಪ್ರಭಾವಕ್ಕೋಸ್ಕರ ಹಾಕಿದ ನೀತಿವೃಕ್ಷಗಳು ಎಂಬ ಬಿರುದು ಇವರಿಗಾಗುವುದು.

ಅದಕ್ಕೆ ನಾನು, “ಅಯ್ಯೋ, ಕರ್ತನಾದ ಯೆಹೋವನೇ, ನಾನು ಮಾತು ಬಲ್ಲವನಲ್ಲ, ಬಾಲಕನು” ಎಂದು ಅರಿಕೆ ಮಾಡಿದೆನು. ಆಗ ಯೆಹೋವನು ನನಗೆ, “ಬಾಲಕನು ಎನ್ನಬೇಡ; ನಾನು ಯಾರ ಬಳಿಗೆ ನಿನ್ನನ್ನು ಕಳುಹಿಸುತ್ತೇನೋ ಅವರೆಲ್ಲರ ಬಳಿಗೆ ನೀನು ಖಂಡಿತವಾಗಿ ಹೋಗುವಿ; ನಾನು ಆಜ್ಞಾಪಿಸುವುದನ್ನೆಲ್ಲಾ ಖಂಡಿತವಾಗಿ ನುಡಿಯುವಿ. ಅವರಿಗೆ ಅಂಜಬೇಡ; ನಿನ್ನನ್ನು ಉದ್ಧರಿಸಲು ನಾನೇ ನಿನ್ನೊಂದಿಗಿರುವೆನು, ಇದು ಯೆಹೋವನಾದ ನನ್ನ ಮಾತು” ಎಂದು ಹೇಳಿದನು. ಆಗ ಯೆಹೋವನು ಕೈಚಾಚಿ ನನ್ನ ಬಾಯನ್ನು ಮುಟ್ಟಿ, “ಇಗೋ, ನಿನ್ನ ಬಾಯಲ್ಲಿ ನನ್ನ ಮಾತುಗಳನ್ನು ಇಟ್ಟಿದ್ದೇನೆ;

ಯೆಹೋವನು ಹೀಗೆನ್ನುತ್ತಾನೆ, “ಇಗೋ, ನನ್ನ ಜನರನ್ನು ಹಿಡಿಯುವುದಕ್ಕೆ ಬಹು ಮಂದಿ ಬೆಸ್ತರನ್ನು ಕರೆಯಿಸುವೆನು; ಆ ಮೇಲೆ ಎಲ್ಲಾ ಬೆಟ್ಟಗುಡ್ಡಗಳಿಂದಲೂ, ಬಂಡೆಗಳ ಸಂದುಗೊಂದುಗಳಿಂದಲೂ ಅವರನ್ನು ಹೊರಡಿಸಿ, ಬೇಟೆಯಾಡುವುದಕ್ಕೆ ಬಹುಜನ ಬೇಡರನ್ನು ಕರೆಯಿಸುವೆನು.

ಆತನು ನನಗೆ, “ನರಪುತ್ರನೇ, ನಿನಗೆ ಸಿಕ್ಕಿದ ಈ ಸುರುಳಿಯನ್ನು ತಿನ್ನು; ಅನಂತರ ನೀನು ಹೋಗಿ (ಇದರಲ್ಲಿನ ಸಂಗತಿಗಳನ್ನು) ಇಸ್ರಾಯೇಲ್ ವಂಶದವರಿಗೆ ಸಾರು” ಎಂದು ಅಪ್ಪಣೆಕೊಟ್ಟನು. ನಾನು ಬಾಯಿ ತೆರೆದೆ, ಆತನು ಆ ಸುರುಳಿಯನ್ನು ನನಗೆ ತಿನ್ನಿಸಿದನು. ಆಗ ಆತನು ನನಗೆ, “ನರಪುತ್ರನೇ, ನಾನು ಕೊಡುವ ಈ ಸುರುಳಿಯನ್ನು ತಿಂದು ಹೊಟ್ಟೆ ತುಂಬಿಸಿಕೋ” ಎಂದು ಹೇಳಲು ಅದನ್ನು ತಿಂದುಬಿಟ್ಟೆನು; ಅದು ನನ್ನ ಬಾಯಿಯಲ್ಲಿ ಜೇನಿನಂತೆ ಸಿಹಿಯಾಗಿತ್ತು. ಆಮೇಲೆ ಆತನು ನನಗೆ ಹೀಗೆಂದನು, “ನರಪುತ್ರನೇ, ನೀನು ಇಸ್ರಾಯೇಲ್ ವಂಶದವರ ಬಳಿಗೆ ಹೋಗಿ ನಾನು ತಿಳಿಸುವ ಮಾತುಗಳನ್ನು ಅವರಿಗೆ ಹೇಳು.

ಜ್ಞಾನಿಗಳು ತೇಜೋಮಯವಾದ ಆಕಾಶಮಂಡಲದಂತೆ ಪ್ರಕಾಶಿಸುವರು. ಬಹಳ ಜನರನ್ನು ಸದ್ಧರ್ಮಿಗಳನ್ನಾಗಿ ಮಾಡುವವರು ಯುಗಯುಗಾಂತರಗಳಲ್ಲಿಯೂ ನಕ್ಷತ್ರಗಳ ಹಾಗೆ ಹೊಳೆಯುವರು.

ಯೆಹೋವನ ವಾಕ್ಯವು ಯೋನನಿಗೆ ಎರಡನೆಯ ಸಾರಿ ಉಂಟಾಯಿತು. ಅದೇನೆಂದರೆ “ನೀನು ಹೊರಟು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ನಾನು ನಿನಗೆ ಆಜ್ಞಾಪಿಸುವ ಸಂದೇಶವನ್ನು ಸಾರು” ಎಂದು ಹೇಳಿದನು.

ಯೋನನು ಪಟ್ಟಣವನ್ನು ಪ್ರವೇಶಿಸಿ ಒಂದು ದಿನದಷ್ಟು ದೂರ ಪ್ರಯಾಣಮಾಡಿದ ನಂತರ “ನಲವತ್ತು ದಿನಗಳಾದ ಮೇಲೆ ನಿನೆವೆಯು ಕೆಡವಲ್ಪಡುವುದು” ಎಂದು ಸಾರತೊಡಗಿದನು. ಇದನ್ನು ಕೇಳಿ ನಿನೆವೆಯವರು ದೇವರಲ್ಲಿ ನಂಬಿಕೆಯಿಟ್ಟು ಉಪವಾಸವನ್ನು ಮಾಡಬೇಕೆಂದು ಸಾರಿ ಹೇಳಿದರು; ದೊಡ್ಡವರು ಮೊದಲುಗೊಂಡು ಚಿಕ್ಕವರ ತನಕ ಎಲ್ಲರೂ ಗೋಣಿತಟ್ಟನ್ನು ಸುತ್ತಿಕೊಂಡರು. ಆ ಸುದ್ದಿಯು ನಿನೆವೆಯ ಅರಸನಿಗೆ ತಿಳಿಯಲು ಅವನು ಸಿಂಹಾಸನದಿಂದ ಎದ್ದು, ತನ್ನ ನಿಲುವಂಗಿಯನ್ನು ತೆಗೆದುಬಿಟ್ಟು, ಗೋಣಿತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕುಳಿತುಕೊಂಡನು. ಇದಲ್ಲದೆ ಅರಸನು ತನ್ನ ಮತ್ತು ರಾಜ್ಯಾಧಿಕಾರಿಗಳ ಆಜ್ಞೆಯನ್ನು ನಿನೆವೆಯಲ್ಲಿ ಹೊರಡಿಸಿ ಹೇಳಿದ್ದೇನೆಂದರೆ: “ಜನ, ಪಶು, ಮಂದೆ, ಹಿಂಡು ಇವುಗಳು ಸಹ ಏನೂ ರುಚಿ ನೋಡುವುದಾಗಲೀ, ತಿನ್ನುವುದಾಗಲೀ, ಕುಡಿಯುವುದಾಗಲೀ ಮಾಡಬಾರದು. ಜನರಿಗೂ ಪಶುಗಳಿಗೂ ಗೋಣಿತಟ್ಟು ಹೊದಿಕೆಯಾಗಲಿ; ಎಲ್ಲರೂ ದೇವರಿಗೆ ಬಲವಾಗಿ ಮೊರೆಯಿಡಲಿ; ಒಬ್ಬೊಬ್ಬನು ತನ್ನ ತನ್ನ ದುರ್ಮಾರ್ಗಗಳನ್ನೂ, ತಾನು ನಡಿಸುತ್ತಿದ್ದ ಹಿಂಸೆಯನ್ನೂ ತೊರೆದು ಬಿಡಲಿ. ದೇವರು ಒಂದು ವೇಳೆ ಮನಮರುಗಿ, ಮನಸ್ಸನ್ನು ಬದಲಾಯಿಸಿಕೊಂಡು ತನ್ನ ಉಗ್ರಕೋಪವನ್ನು ತೊರೆದರೆ, ನಾವು ನಾಶವಾಗದೆ ಉಳಿದೇವು” ಎಂಬುದನ್ನು ನಿನೆವೆಯಲ್ಲೆಲ್ಲಾ ಸಾರಿಸಿದನು. ದೇವರು ನಿನೆವೆಯವರ ಕೃತ್ಯಗಳನ್ನು ನೋಡಿ, ಅವರು ತಮ್ಮ ದುರ್ಮಾರ್ಗತನದಿಂದ ತಿರುಗಿಕೊಂಡರೆಂದು ತಿಳಿದು ತನ್ನ ಮನಸ್ಸನ್ನು ಬದಲಾಯಿಸಿ, ತಾನು ಅವರಿಗೆ ಮಾಡುವೆನೆಂದು ಪ್ರಕಟಿಸಿದ್ದ ಕೇಡನ್ನು ಮಾಡದೆ ಬಿಟ್ಟನು.

ನೋಡಿರಿ ಆ ಶುಭಸಮಾಚಾರವನ್ನು ತಂದು, ಸಮಾಧಾನವನ್ನು ಪರ್ವತಗಳ ಮೇಲೆ ಸಾರುವ ದೂತನ ಪಾದಗಳು ಮೇಲೆ ತ್ವರೆಪಡುತ್ತವೆ! ಯೆಹೂದವೇ, ನಿನ್ನ ಹಬ್ಬಗಳನ್ನು ಆಚರಿಸಿಕೋ, ನಿನ್ನ ಹರಕೆಗಳನ್ನು ಸಲ್ಲಿಸು; ಆ ದುಷ್ಟರು ಇನ್ನು ಮುಂದೆ ನಿನ್ನನ್ನು ಮುತ್ತಿಗೆ ಹಾಕಿ ಸೋಲಿಸಲು ಸಾಧ್ಯವಿಲ್ಲ, ಏಕೆಂದರೆ ಅವನು ಸಂಪೂರ್ಣ ನಾಶವಾಗಿದ್ದಾನೆ.

ಆ ದಿನಗಳಲ್ಲಿ ಸ್ನಾನಿಕನಾದ ಯೋಹಾನನೆಂಬುವವನು ಯೂದಾಯದ ಅಡವಿಯಲ್ಲಿ ಬೋಧನೆ ಮಾಡುತ್ತಾ, ಹೇಳಿದ್ದೇನೆಂದರೆ, “ಪಶ್ಚಾತ್ತಾಪಪಡಿರಿ; ಏಕೆಂದರೆ ಪರಲೋಕ ರಾಜ್ಯವು ಸಮೀಪಿಸುತ್ತಿದೆ.”

ಆದರೆ ಯೋಹಾನನು ಫರಿಸಾಯರಲ್ಲಿಯೂ ಸದ್ದುಕಾಯರಲ್ಲಿಯೂ ಅನೇಕರು ತನ್ನಿಂದ ದೀಕ್ಷಾಸ್ನಾನಮಾಡಿಸಿಕೊಳ್ಳುವುದಕ್ಕೆ ಬರುವುದನ್ನು ಕಂಡು ಅವರಿಗೆ, “ಎಲೈ ಸರ್ಪಸಂತತಿಯವರೇ, ಮುಂದೆ ಬರಲಿರುವ ದೈವಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮ್ಮನ್ನು ಎಚ್ಚರಿಸಿದವರಾರು? ನೀವು ಮಾನಸಾಂತರ ಹೊಂದಿರುವಿರಿ ಎಂಬುದಕ್ಕೆ ಯೋಗ್ಯವಾದ ಫಲವನ್ನು ತೋರಿಸಿರಿ.

ಯೇಸು, “‘ಮನುಷ್ಯನು ರೊಟ್ಟಿ ತಿಂದ ಮಾತ್ರದಿಂದ ಬದುಕುವುದಿಲ್ಲ, ಆದರೆ ದೇವರ ಬಾಯಿಂದ ಬರುವ ಪ್ರತಿಯೊಂದು ನುಡಿಯಿಂದಲೂ ಬದುಕುವನು’ ಎಂದು ಬರೆದಿದೆ” ಅಂದನು.

ಅಂದಿನಿಂದ ಯೇಸು, “ಪಶ್ಚಾತ್ತಾಪಪಡಿರಿ ಪರಲೋಕ ರಾಜ್ಯವು ಸಮೀಪಿಸಿತು” ಎಂದು ಸಾರುವುದಕ್ಕೆ ಪ್ರಾರಂಭಿಸಿದನು.

ಅವರಿಗೆ ಆತನು, “ನನ್ನನ್ನು ಹಿಂಬಾಲಿಸಿರಿ, ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು” ಎಂದು ಹೇಳುತ್ತಲೇ, ತಕ್ಷಣ ಅವರು ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು. ಯೇಸು ಅಲ್ಲಿಂದ ಮುಂದೆ ಹೋಗುತ್ತಿರುವಾಗ ಇನ್ನಿಬ್ಬರು ಅಣ್ಣ ತಮ್ಮಂದಿರನ್ನು ಅಂದರೆ ಜೆಬೆದಾಯನ ಮಗನಾದ ಯಾಕೋಬನನ್ನೂ ಅವನ ತಮ್ಮನಾದ ಯೋಹಾನನ್ನೂ ಕಂಡನು; ಇವರು ತಮ್ಮ ತಂದೆಯಾದ ಜೆಬೆದಾಯನ ಸಂಗಡ ದೋಣಿಯಲ್ಲಿ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದರು. ಆತನು ಅವರನ್ನು ಕರೆದನು. ಕೂಡಲೆ ಅವರು ದೋಣಿಯನ್ನು ಮತ್ತು ತಮ್ಮ ತಂದೆಯನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.

ಬಳಿಕ ಯೇಸು ಗಲಿಲಾಯದಲ್ಲೆಲ್ಲಾ ಸಂಚರಿಸಿ ಅಲ್ಲಿಯವರ ಸಭಾಮಂದಿರಗಳಲ್ಲಿ ಉಪದೇಶ ಮಾಡುತ್ತಾ, ದೇವರ ರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಜನರ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು.

“ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು. ಸಂತೋಷಪಡಿರಿ, ಉಲ್ಲಾಸಪಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವುದು; ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನೂ ಅವರು ಹೀಗೆಯೇ ಹಿಂಸೆಪಡಿಸಿದರಲ್ಲಾ. “ನೀವು ಭೂಮಿಗೆ ಉಪ್ಪಾಗಿದ್ದೀರಿ. ಉಪ್ಪು ಸಪ್ಪಗಾದರೆ ಅದಕ್ಕೆ ಬೇರೆ ಯಾವುದರಿಂದ ಉಪ್ಪಿನ ರುಚಿಯನ್ನು ಕೊಡಲು ಸಾಧ್ಯ? ಜನರು ಅದನ್ನು ಹೊರಗೆಹಾಕಿ ದಾರಿಹೋಕರು ತುಳಿಯುವುದಕ್ಕೆ ಅದು ಯೋಗ್ಯವೇ ಹೊರತು ಮತ್ತ್ಯಾವ ಕೆಲಸಕ್ಕೂ ಬರುವುದಿಲ್ಲ.

ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಬೆಟ್ಟದ ಮೇಲೆ ಕಟ್ಟಲ್ಪಟ್ಟಿರುವ ಊರು ಮರೆಯಾಗಿರಲಾರದು. ಮತ್ತು ಯಾರೂ ದೀಪವನ್ನು ಹತ್ತಿಸಿ ಕೊಳಗದೊಳಗೆ ಇಡುವುದಿಲ್ಲ; ದೀಪಸ್ತಂಭದ ಮೇಲೆಯೇ ಇಡುತ್ತಾರೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕು ಕೊಡುವುದು. ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಆಗ ಅವರು ನಿಮ್ಮ ಒಳ್ಳೆಯ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.

“ಭೂಲೋಕದಲ್ಲಿ ಸಂಪತ್ತು ಮಾಡಿ ಇಟ್ಟುಕೊಳ್ಳಬೇಡಿರಿ; ಇಲ್ಲಿ ಅದು ನುಸಿ ಹಿಡಿದು, ಕಿಲುಬು ಹತ್ತಿ ಕೆಟ್ಟುಹೋಗುವುದು; ಇಲ್ಲಿ ಕಳ್ಳರು ಕನ್ನಾಕೊರೆದು ಕದಿಯುವರು. ಆದರೆ ಪರಲೋಕದಲ್ಲಿ ಸಂಪತ್ತು ಮಾಡಿ ಇಟ್ಟುಕೊಳ್ಳಿರಿ; ಅಲ್ಲಿ ಅದು ನುಸಿ ಹಿಡಿದು, ಕಿಲುಬು ಹತ್ತಿ ಕೆಟ್ಟುಹೋಗುವುದಿಲ್ಲ; ಅಲ್ಲಿ ಕಳ್ಳರು ಕನ್ನಾಕೊರೆಯುವುದೂ ಇಲ್ಲ. ಕದಿಯುವುದೂ ಇಲ್ಲ, ನಿನ್ನ ಸಂಪತ್ತು ಇದ್ದಲ್ಲಿಯೇ ನಿನ್ನ ಮನಸ್ಸು ಇರುತ್ತದಷ್ಟೆ.

ಶಿಷ್ಯರಲ್ಲಿ ಬೇರೊಬ್ಬನು, “ಕರ್ತನೇ, ನಾನು ಮೊದಲು ಹೋಗಿ ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮಾಡಿ ಬರುವಂತೆ ನನಗೆ ಅಪ್ಪಣೆಯಾಗಬೇಕು” ಅನ್ನಲಾಗಿ, ಯೇಸು ಅವನಿಗೆ, “ನನ್ನನ್ನು ಹಿಂಬಾಲಿಸು, ಸತ್ತವರೇ ತಮ್ಮವರಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಲಿ” ಎಂದು ಹೇಳಿದನು.

ಯೇಸು ಅಲ್ಲಿಂದ ಹಾದು ಹೋಗುತ್ತಿರುವಾಗ, ಸುಂಕ ಸಂಗ್ರಹಣೆ ಕಟ್ಟೆಯಲ್ಲಿ ಕುಳಿತಿದ್ದ ಮತ್ತಾಯನೆಂಬ ಒಬ್ಬ ಮನುಷ್ಯನನ್ನು ನೋಡಿ, “ನನ್ನನ್ನು ಹಿಂಬಾಲಿಸು” ಎಂದು ಅವನನ್ನು ಕರೆಯಲು ಅವನು ಎದ್ದು ಆತನನ್ನು ಹಿಂಬಾಲಿಸಿದನು.

ತರುವಾಯ ಯೇಸು ಎಲ್ಲಾ ಪಟ್ಟಣಗಳಲ್ಲೂ ಹಳ್ಳಿಗಳಲ್ಲೂ ಸಂಚರಿಸುತ್ತಾ ಅವರ ಸಭಾಮಂದಿರಗಳಲ್ಲಿ ಉಪದೇಶಮಾಡುತ್ತಾ ರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು.

ಆತನು ತನ್ನ ಶಿಷ್ಯರಿಗೆ, “ಬೆಳೆಯು ಬಹಳ ಇದೆ, ಆದರೆ ಕೆಲಸದವರು ಸ್ವಲ್ಪ. ಆದುದರಿಂದ ಬೆಳೆಯ ಯಜಮಾನನನ್ನು, ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಿಕೊಡಬೇಕೆಂದು ಬೇಡಿಕೊಳ್ಳಿರಿ” ಎಂದು ಹೇಳಿದನು.

‘ಪರಲೋಕ ರಾಜ್ಯವು ಸಮೀಪವಾಯಿತೆಂದು’ ಸಾರಿಹೇಳುತ್ತಾ ಹೋಗಿರಿ. ರೋಗಿಗಳನ್ನು ಸ್ವಸ್ಥಮಾಡಿರಿ, ಸತ್ತವರನ್ನು ಬದುಕಿಸಿರಿ, ಕುಷ್ಠರೋಗಿಗಳನ್ನು ಶುದ್ಧಮಾಡಿರಿ, ದೆವ್ವಗಳನ್ನು ಬಿಡಿಸಿರಿ; ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ.

ನಿಮ್ಮ ಕೈ ಚೀಲಗಳಲ್ಲಿ ಚಿನ್ನ, ಹಣ ದುಡ್ಡುಗಳನ್ನೂ, ದಾರಿಗೆ ಪ್ರಯಾಣದ ಚೀಲಗಳನ್ನೂ, ಎರಡು ಅಂಗಿ, ಚಪ್ಪಲಿ, ಕೋಲು ಮೊದಲಾದವುಗಳನ್ನೂ ತೆಗೆದುಕೊಳ್ಳಬೇಡಿರಿ. ಆಳು ತನ್ನ ಆಹಾರಕ್ಕೆ ಯೋಗ್ಯನಾಗಿದ್ದಾನೆ. ನೀವು ಯಾವುದೇ ಊರಿಗೆ ಅಥವಾ ಹಳ್ಳಿಗೆ ಪ್ರವೇಶಿಸಿದಾಗ ಅಲ್ಲಿ ಯೋಗ್ಯರು ಯಾರೆಂದು ವಿಚಾರಣೆ ಮಾಡಿ ಮುಂದಕ್ಕೆ ಹೊರಡುವ ತನಕ ಅ ಊರಲ್ಲೇ ಇರಿ. ಆ ಮನೆಯೊಳಗೆ ಹೋಗುವಾಗ ಶುಭವಾಗಲಿ ಅನ್ನಿರಿ. ಆ ಮನೆಯವರು ಯೋಗ್ಯರಾಗಿದ್ದರೆ ನಿಮ್ಮ ಸಮಾಧಾನವು ಅವರಿಗೆ ಬರಲಿ; ಅಯೋಗ್ಯರಾಗಿದ್ದರೆ ನಿಮ್ಮ ಸಮಾಧಾನವು ನಿಮಗೆ ಹಿಂದಿರುಗಿ ಬರಲಿ.

ಯಾರಾದರೂ ನಿಮ್ಮನ್ನು ಸೇರಿಸಿಕೊಳ್ಳದೆಯೂ ನಿಮ್ಮ ವಾಕ್ಯಗಳನ್ನೂ ಕೇಳದೆಯೂ ಹೋದರೆ ನೀವು ಆ ಮನೆಯನ್ನಾಗಲಿ ಆ ಊರನ್ನಾಗಲಿ ಬಿಟ್ಟು ಹೊರಡುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ. ನ್ಯಾಯವಿಚಾರಣೆಯ ದಿನದಲ್ಲಿ ಅಂಥ ಊರಿನ ಗತಿಯು ಸೊದೋಮ್ ಗೊಮೋರಗಳ ಸೀಮೆಯ ಗತಿಗಿಂತಲೂ ಕಠಿಣವಾಗಿರುವುದು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

“ನೋಡಿರಿ, ತೋಳಗಳ ನಡುವೆ ಕುರಿಗಳನ್ನು ಕಳುಹಿಸುವಂತೆ ನಾನು ನಿಮ್ಮನ್ನು ಕಳುಹಿಸಿಕೊಡುತ್ತಿದ್ದೇನೆ. ಆದುದರಿಂದ ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರಿ. ಇದಲ್ಲದೆ ಜನರ ವಿಷಯದಲ್ಲಿ ಎಚ್ಚರವಾಗಿರಿ; ಅವರು ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಎಳೆದುಕೊಂಡು ಹೋಗುವರು; ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಚಾವಟಿಗಳಿಂದ ಹೊಡೆಯುವರು. ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಪತಿಗಳ ಮುಂದೆಯೂ ಅರಸುಗಳ ಮುಂದೆಯೂ ಕರೆದುಕೊಂಡು ಹೋಗುವರು. ಹೀಗೆ ಅವರಿಗೂ ಅನ್ಯಜನಗಳಿಗೂ ಸಾಕ್ಷಿಯಾಗುವಿರಿ.

ಆದರೆ ಅವರು ನಿಮ್ಮನ್ನು ಒಪ್ಪಿಸಿಕೊಡುವಾಗ ಏನು ಮಾತನಾಡಬೇಕು ಎಂದು ಚಿಂತೆಮಾಡಬೇಡಿರಿ; ಆಡತಕ್ಕ ಮಾತು ಆ ಸಮಯದಲ್ಲಿ ನಿಮಗೆ ಗೋಚರವಾಗುವುದು. ಮಾತನಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮನೇ ನಿಮ್ಮ ಮುಖಾಂತರವಾಗಿ ಮಾತನಾಡುವನು.

ಇದಲ್ಲದೆ ಸಹೋದರನು ಸಹೋದರನನ್ನು, ತಂದೆಯು ಮಗನನ್ನು, ಮರಣಕ್ಕೆ ಒಪ್ಪಿಸುವರು; ಮಕ್ಕಳು ತಂದೆತಾಯಿಗಳ ಮೇಲೆ ತಿರುಗಿಬಿದ್ದು ಅವರನ್ನು ಕೊಲ್ಲಿಸುವರು. ಮತ್ತು ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ದ್ವೇಷಿಸುವರು. ಆದರೆ ಕಡೆಯವರೆಗೂ ತಾಳಿಕೊಳ್ಳುವವನು ರಕ್ಷಣೆಹೊಂದುವನು. ಒಂದು ಊರಲ್ಲಿ ನಿಮ್ಮನ್ನು ಹಿಂಸೆಪಡಿಸಿದರೆ ಮತ್ತೊಂದು ಊರಿಗೆ ಓಡಿಹೋಗಿರಿ; ಮನುಷ್ಯಕುಮಾರನು ಬರುವಷ್ಟರಲ್ಲಿ ನೀವು ಇಸ್ರಾಯೇಲ್ ಜನರ ಊರುಗಳನ್ನು ಸಂಚರಿಸಿ ಮುಗಿಸಿರುವುದಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

“ಹಾಗಾದರೆ ಯಾವನು ಮನುಷ್ಯರ ಮುಂದೆ ತಾನು ನನ್ನವನೆಂದು ಒಪ್ಪಿಕೊಳ್ಳುವನೋ, ನಾನು ಸಹ ಅವನನ್ನು ನನ್ನವನೆಂದು ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ಒಪ್ಪಿಕೊಳ್ಳುವೆನು. ಆದರೆ ಯಾವನು ಮನುಷ್ಯರ ಮುಂದೆ ತಾನು ನನ್ನವನಲ್ಲವೆಂದು ಹೇಳುವನೋ ಅವನನ್ನು ನಾನು ಸಹ ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ನನ್ನವನಲ್ಲವೆಂದು ಹೇಳುವೆನು.

“ಭೂಲೋಕದ ಮೇಲೆ ಸಮಾಧಾನ ತರುವುದಕ್ಕೆ ಬಂದೆನೆಂದು ನೆನಸಬೇಡಿರಿ; ಸಮಾಧಾನವನ್ನು ಹುಟ್ಟಿಸುವುದಕ್ಕೆ ನಾನು ಬಂದಿಲ್ಲ, ಖಡ್ಗವನ್ನು ಹಾಕುವುದಕ್ಕೆ ಬಂದೆನು. ಹೇಗೆಂದರೆ ಮಗನಿಗೂ ತಂದೆಗೂ, ಮಗಳಿಗೂ ತಾಯಿಗೂ, ಸೊಸೆಗೂ ಅತ್ತೆಗೂ ಭೇದಹುಟ್ಟಿಸುವುದಕ್ಕೆ ಬಂದೆನು. ಹೀಗೆ ಒಬ್ಬ ಮನುಷ್ಯನಿಗೆ ಅವನ ಮನೆಯವರೇ ಶತ್ರುಗಳಾಗಿರುವರು. ತಂದೆಯ ಮೇಲಾಗಲಿ ತಾಯಿಯ ಮೇಲಾಗಲಿ ನನ್ನ ಮೇಲೆ ಇಡುವುದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ; ಮಗನ ಮೇಲಾಗಲಿ ಮಗಳ ಮೇಲಾಗಲಿ ನನ್ನ ಮೇಲೆ ಇಡುವುದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ. ಮತ್ತು ಯಾವನಾದರೂ ತನ್ನ ಶಿಲುಬೆಯನ್ನು ತೆಗೆದುಕೊಂಡು ನನ್ನನ್ನು ಹಿಂಬಾಲಿಸದಿದ್ದರೆ ನನ್ನ ಶಿಷ್ಯನಾಗಲು ಯೋಗ್ಯನಲ್ಲ. ತನ್ನ ಪ್ರಾಣವನ್ನು ಕಂಡುಕೊಂಡವನು ಅದನ್ನು ಕಳೆದುಕೊಳ್ಳುವನು; ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಂಡವನು ಅದನ್ನು ಕಂಡುಕೊಳ್ಳುವನು. “ನಿಮ್ಮನ್ನು ಸ್ವೀಕರಿಸುವವನು ನನ್ನನ್ನು ಸ್ವೀಕರಿಸುವವನಾಗಿದ್ದಾನೆ;ನನ್ನನ್ನು ಸ್ವೀಕರಿಸುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸ್ವೀಕರಿಸುವವನಾಗಿದ್ದಾನೆ.

ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ ಅಪ್ಪಣೆಕೊಡುವುದನ್ನು ಮುಗಿಸಿದ ಬಳಿಕ ಅವರ ಪಟ್ಟಣಗಳಲ್ಲಿ ಉಪದೇಶಮಾಡುವುದಕ್ಕೂ ಬೋಧಿಸುವುದಕ್ಕೂ ಅಲ್ಲಿಂದ ಹೊರಟು ಹೋದನು.

ಕುರುಡರು ನೋಡುತ್ತಿದ್ದಾರೆ, ಕುಂಟರು ನಡೆಯುತ್ತಿದ್ದಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಿದ್ದಾರೆ, ಕಿವುಡರು ಕೇಳುತ್ತಿದ್ದಾರೆ, ಸತ್ತವರು ಜೀವದಿಂದ ಎಬ್ಬಿಸಲ್ಪಡುತ್ತಿದ್ದಾರೆ, ಮತ್ತು ಬಡವರಿಗೆ ಸುವಾರ್ತೆಯು ಸಾರಲ್ಪಡುತ್ತಿದ್ದೆ. ನನ್ನ ವಿಷಯದಲ್ಲಿ ಆಪಾದಿಸದವನೇ ಧನ್ಯನು” ಎಂದು ಹೇಳಿದನು.

ಸ್ನಾನಿಕ ಯೋಹಾನನ ಕಾಲದಿಂದ ಈ ವರೆಗೂ ಪರಲೋಕ ರಾಜ್ಯವು ಬಲವಂತಕ್ಕೆ ಗುರಿಯಾಗುತ್ತಿದೆ. ಬಲಾತ್ಕಾರಿಗಳು ಒತ್ತಾಯದಿಂದ ಅದನ್ನು ಸ್ವಾಧೀನಮಾಡಿಕೊಳ್ಳುತ್ತಿದ್ದಾರೆ.

ನಿನೆವೆ ಪಟ್ಟಣದವರು ಯೋನನು ಸಾರಿದ ವಾಕ್ಯವನ್ನು ಕೇಳಿ ಮಾನಸಾಂತರಪಟ್ಟರು. ಇಗೋ, ಇಲ್ಲಿ ಯೋನನಿಗಿಂತಲೂ ಹೆಚ್ಚಿನವನಿದ್ದಾನೆ. ನ್ಯಾಯ ವಿಚಾರಣೆಯಲ್ಲಿ ನಿನೆವೆ ಪಟ್ಟಣದವರು ಈ ಸಂತತಿಯವರೊಂದಿಗೆ ಎದ್ದು ನಿಂತು ಇವರನ್ನು ಖಂಡಿಸುವರು.

ಆಗ ಆತನು ಅವರಿಗೆ ಸಾಮ್ಯರೂಪವಾಗಿ ಅನೇಕ ಸಂಗತಿಗಳನ್ನು ಹೇಳಿದನು. “ಕೇಳಿರಿ, ಬಿತ್ತುವವನು ಬಿತ್ತುವುದಕ್ಕೆ ಹೊರಟನು. ಅವನು ಬಿತ್ತುವಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದವು. ಹಕ್ಕಿಗಳು ಬಂದು ಅವುಗಳನ್ನು ತಿಂದು ಬಿಟ್ಟವು. ಕೆಲವು ಬೀಜಗಳು ಬಹಳ ಮಣ್ಣಿಲ್ಲದ ಬಂಡೆಯ ನೆಲದಲ್ಲಿ ಬಿದ್ದವು. ಮಣ್ಣು ತೆಳ್ಳಗಿದ್ದುದರಿಂದ ಅವು ಬೇಗ ಮೊಳೆತವು. ಆದರೆ ಬಿಸಿಲೇರಿದಾಗ ಬೇರಿಲ್ಲದ ಕಾರಣ ಬಾಡಿ ಒಣಗಿಹೋದವು. ಮತ್ತೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು, ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು. ಇನ್ನು ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದು ಕೆಲವು ನೂರರಷ್ಟು ಕೆಲವು ಅರವತ್ತರಷ್ಟು, ಕೆಲವು ಮೂವತ್ತರಷ್ಟು ಫಲವನ್ನು ಕೊಟ್ಟವು.

“ಬಿತ್ತುವವನ ವಿಷಯವಾದ ಸಾಮ್ಯದ ಅರ್ಥವನ್ನು ಕೇಳಿರಿ. ಯಾವನಾದರೂ ಪರಲೋಕ ರಾಜ್ಯದ ವಾಕ್ಯವನ್ನು ಕೇಳಿ ತಿಳಿದುಕೊಳ್ಳದೆ ಇದ್ದರೆದುಷ್ಟನು ಬಂದು ಆತನ ಹೃದಯದಲ್ಲಿ ಬಿತ್ತಿದ್ದನ್ನು ತೆಗೆದು ಹಾಕುತ್ತಾನೆ. ಇವನೇ ಬೀಜ ಬಿದ್ದ ದಾರಿಯ ಮಗ್ಗುಲಾಗಿರುವನು. ಬಂಡೆಯ ನೆಲದಲ್ಲಿ ಬಿತ್ತಲ್ಪಟ್ಟವನು ಯಾರೆಂದರೆ, ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಸ್ವೀಕರಿಸಿದರೂ, ತನಗೆ ಬೇರಿಲ್ಲದ ಕಾರಣ ಇವನು ಸ್ವಲ್ಪ ಕಾಲ ಮಾತ್ರವೇ ಇದ್ದು ಆ ವಾಕ್ಯದ ನಿಮಿತ್ತವಾಗಿ ಸಂಕಟವಾಗಲಿ ಹಿಂಸೆಯಾಗಲಿ ಬಂದರೆ ಕೂಡಲೆ ಎಡವಿ ಬೀಳುತ್ತಾನೆ. ಮುಳ್ಳುಗಿಡಗಳ ನೆಲದಲ್ಲಿ ಬಿತ್ತಲ್ಪಟ್ಟಂಥವನು ಯಾರೆಂದರೆ, ವಾಕ್ಯವನ್ನು ಕೇಳಿದಾಗ್ಯೂ ಪ್ರಪಂಚದ ಚಿಂತೆಯೂ, ಐಶ್ವರ್ಯದ ಮೋಸತನವೂ ಆ ವಾಕ್ಯವನ್ನು ಅಡಗಿಸಿಬಿಡುವುದರಿಂದ ಫಲವನ್ನು ಕೊಡದೇ ಇರುತ್ತಾನೆ. ಒಳ್ಳೆಯ ಮಣ್ಣಿನಲ್ಲಿ ಬಿತ್ತಲ್ಪಟ್ಟಂಥವನು ಯಾರೆಂದರೆ, ವಾಕ್ಯವನ್ನು ಕೇಳಿ ತಿಳಿದುಕೊಂಡು ಫಲವಂತನಾಗಿ ನೂರರಷ್ಟಾಗಲಿ, ಅರವತ್ತರಷ್ಟಾಗಲಿ, ಮೂವತ್ತರಷ್ಟಾಗಲಿ ಫಲವನ್ನು ಕೊಡುವವನೇ” ಎಂದು ಹೇಳಿದನು.

ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು. ಅದೇನೆಂದರೆ, “ಪರಲೋಕರಾಜ್ಯವು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ. ಒಬ್ಬ ಮನುಷ್ಯನು ಅದನ್ನು ತೆಗೆದುಕೊಂಡು ಹೋಗಿ ತನ್ನ ಹೊಲದಲ್ಲಿ ಬಿತ್ತಿದನು. ಅದು ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದೆ. ಆದರೂ ಬೆಳೆದ ಮೇಲೆ ಎಲ್ಲಾ ಸಸ್ಯಗಳಿಗಿಂತ ದೊಡ್ಡದಾಗಿ ಮರವಾಗುತ್ತದೆ. ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸ ಮಾಡುತ್ತವೆ” ಎಂದು ಹೇಳಿದನು.

ಅದಕ್ಕೆ ಆತನು “ಪರಲೋಕದ ನನ್ನ ತಂದೆಯು ನೆಡದೆ ಇರುವ ಗಿಡಗಳನ್ನೆಲ್ಲಾ ಬೇರುಸಹಿತ ಕಿತ್ತುಹಾಕಲಾಗುವುದು.

ಅನಂತರ ಯೇಸು ತನ್ನ ಶಿಷ್ಯರಿಗೆ ಹೇಳಿದ್ದೇನೆಂದರೆ “ಯಾವನಾದರೂ ನನ್ನನ್ನು ಹಿಂಬಾಲಿಸುವುದಕ್ಕೆ ಬಯಸಿದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಂಡವನು ಅದನ್ನು ಕಂಡುಕೊಳ್ಳುವನು. ಒಬ್ಬ ಮನುಷ್ಯನು ಭೂಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಅವನ ಪ್ರಾಣವನ್ನು ಕಳೆದುಕೊಂಡರೆ ಅವನಿಗೆ ಪ್ರಯೋಜನವೇನು? ಅಥವಾ ಒಬ್ಬನು ತನ್ನ ಪ್ರಾಣಕ್ಕೆ ಬದಲಿಗೆ ಏನು ಕೊಟ್ಟಾನು? ಮನುಷ್ಯಕುಮಾರನು ತನ್ನ ತಂದೆಯ ಮಹಿಮೆಯೊಡನೆ ತನ್ನ ದೂತರ ಸಮೇತವಾಗಿ ಬರುವನು. ಆಗ ಆತನು ಒಬ್ಬೊಬ್ಬನಿಗೆ ಅವನು ಮಾಡಿದ ಕೆಲಸಕ್ಕೆ ತಕ್ಕಂತೆ ಪ್ರತಿಫಲವನ್ನು ಕೊಡುವನು.

ಮತ್ತು ನನ್ನ ಹೆಸರಿನ ನಿಮಿತ್ತ ಮನೆಗಳನ್ನಾಗಲಿ, ಸಹೋದರರನ್ನಾಗಲಿ, ಸಹೋದರಿಯರನ್ನಾಗಲಿ, ತಂದೆಯನ್ನಾಗಲಿ, ತಾಯಿಯನ್ನಾಗಲಿ, ಮಕ್ಕಳನ್ನಾಗಲಿ, ಭೂಮಿಯನ್ನಾಗಲಿ, ತೊರೆದುಬಿಟ್ಟಿರುವ ಪ್ರತಿಯೊಬ್ಬನೂ ಎಲ್ಲವನ್ನೂ ನೂರರಷ್ಟು ಹೊಂದುವನು. ಅಲ್ಲದೆ ನಿತ್ಯಜೀವಕ್ಕೆ ಬಾಧ್ಯನಾಗುವನು.

“ಪರಲೋಕ ರಾಜ್ಯವು ತನ್ನ ದ್ರಾಕ್ಷಾತೋಟಕ್ಕೆ ಕೂಲಿಯಾಳುಗಳನ್ನು ಗೊತ್ತುಮಾಡಲು ಬೆಳಗ್ಗೆ ಹೊರಟ ಒಬ್ಬ ತೋಟದ ಯಜಮಾನನಿಗೆ ಹೋಲಿಕೆಯಾಗಿದೆ. ಅವನು ದಿನಕ್ಕೆ ಒಂದು ಬೆಳ್ಳಿ ನಾಣ್ಯದಂತೆ ಕೂಲಿಯಾಳುಗಳೊಂದಿಗೆ ಒಪ್ಪಂದ ಮಾಡಿದ ನಂತರ ಅವರನ್ನು ದ್ರಾಕ್ಷಾತೋಟಕ್ಕೆ ಕಳುಹಿಸಿದನು. ಅವನು ಪುನಃ ಸುಮಾರುಒಂಭತ್ತು ಗಂಟೆಗೆ ಸಂತೆಯ ಸ್ಥಳಕ್ಕೆ ಹೋಗಿ ಕೆಲಸವಿಲ್ಲದೆ ಸುಮ್ಮನೇ ನಿಂತಿದ್ದ ಬೇರೆ ಕೆಲವರು ಕೂಲಿಯಾಳುಗಳನ್ನು ಕಂಡು, ಅವರಿಗೆ, ‘ನೀವು ಸಹ ನನ್ನ ದ್ರಾಕ್ಷಾತೋಟಕ್ಕೆ ಹೋಗಿರಿ; ನಿಮಗೆ ಸರಿಯಾದ ಕೂಲಿಯನ್ನು ಕೊಡುತ್ತೇನೆ’ ಅಂದನು. ಆಗ ಅವರು ಕೆಲಸಕ್ಕೆ ಹೋದರು. ಅವನು ಪುನಃ ಸುಮಾರು ಹನ್ನೆರಡು ಗಂಟೆಗೆ ಮತ್ತುಮೂರು ಗಂಟೆಗೆ ಹೋಗಿ ಅದೇ ಪ್ರಕಾರ ಮಾಡಿದನು. ಮತ್ತೊಂದು ಸಾರಿಸಾಯಂಕಾಲ ಐದು ಗಂಟೆಗೆ ಅವನು ಹೋಗಿ ಬೇರೆ ಕೆಲವರು ಸುಮ್ಮನೇ ನಿಂತಿರುವುದನ್ನು ಕಂಡು ಅವರನ್ನು, ‘ದಿನವೆಲ್ಲಾ ಇಲ್ಲಿ ಸುಮ್ಮನೇ ನಿಂತಿರುವುದೇಕೆ?’ ಎಂದು ಕೇಳಿದನು. ಅವರು ಅವನಿಗೆ, ‘ಯಾರೂ ನಮ್ಮನ್ನು ಕೂಲಿಗೆ ಕರೆಯಲಿಲ್ಲ’ ಎಂದರು, ಆಗ ಅವನು ಅವರಿಗೆ, ‘ನೀವು ಸಹ ನನ್ನ ದ್ರಾಕ್ಷಾತೋಟಕ್ಕೆ ಹೋಗಿರಿ’ ಅಂದನು. ಸಂಜೆಯಾದಾಗ ದ್ರಾಕ್ಷಾತೋಟದ ಯಜಮಾನನು ತನ್ನ ಮೇಲ್ವಿಚಾರಕನಿಗೆ, ‘ಆ ಕೂಲಿಯಾಳುಗಳನ್ನು ಕರೆದು ಕಡೆಗೆ ಬಂದವರಿಂದ ಪ್ರಾರಂಭಿಸಿ ಮೊದಲು ಬಂದವರ ತನಕ ಕೂಲಿ ಕೊಡು’ ಎಂದು ಹೇಳಿದನು. ಆಗ ಸಾಯಂಕಾಲ ಐದು ಗಂಟೆಗೆ ಬಂದು ಕೆಲಸ ಮಾಡಿದವರು ಬಂದಾಗ, ಪ್ರತಿಯೊಬ್ಬನಿಗೂ ಒಂದೊಂದು ಬೆಳ್ಳಿ ನಾಣ್ಯ ಸಿಕ್ಕಿತು. ಮೊದಲು ಬಂದವರು ಬಂದಾಗ ತಮಗೆ, ಹೆಚ್ಚು ದೊರೆಯುವುದೆಂದು ನೆನಸಿದರು. ಆದರೆ ಅವರಿಗೂ ಒಂದೊಂದು ಬೆಳ್ಳಿ ನಾಣ್ಯ ಸಿಕ್ಕಿತು. ಅವರು ಅದನ್ನು ತೆಗೆದುಕೊಂಡು ತೋಟದ ಯಜಮಾನನಿಗೆ ವಿರುದ್ಧವಾಗಿ ಗುಣಗುಟ್ಟಿ, ‘ಕಡೆಗೆ ಬಂದ ಇವರು ಒಂದು ಗಂಟೆ ಮಾತ್ರ ಕೆಲಸ ಮಾಡಿದ್ದಾರೆ. ನಾವು ದಿನವೆಲ್ಲಾ ಬಿಸಲಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಆದರೆ ನೀನು ಅವರನ್ನು ನಮಗೆ ಸಮನಾಗಿ ಮಾಡಿದ್ದೀಯೆ’ ಅಂದರು. ಅದಕ್ಕೆ ಯಜಮಾನನು ಅವರಲ್ಲಿ ಒಬ್ಬನಿಗೆ, ‘ಸ್ನೇಹಿತನೇ ನಾನು ನಿನಗೆ ಅನ್ಯಾಯ ಮಾಡಲಿಲ್ಲ. ನೀನು ನನ್ನ ಸಂಗಡ ಒಂದು ಬೆಳ್ಳಿಯ ನಾಣ್ಯಕ್ಕೆ ಒಪ್ಪಂದ ಮಾಡಿಕೊಳ್ಳಲಿಲ್ಲವೆ? ನಿನ್ನ ಕೂಲಿಯನ್ನು ತೆಗೆದುಕೊಂಡು ಹೋಗು ನಿನಗೆ ಕೊಟ್ಟಂತೆ ಕಡೆಗೆ ಬಂದವರಿಗೂ ಕೊಡುವುದು ನನ್ನ ಇಷ್ಟ. ನನ್ನ ಸ್ವಂತ ಸೊತ್ತನ್ನು ನನ್ನ ಇಷ್ಟದಂತೆ ಮಾಡಲು ನನಗೆ ಅಧಿಕಾರವಿಲ್ಲವೋ? ನಾನು ಉದಾರಿಯಾಗಿರುವುದಕ್ಕೆ ನೀನೇಕೆ ಹೊಟ್ಟೆಕಿಚ್ಚುಪಟ್ಟುಕೊಳ್ಳುವಿ?’ ಎಂದು ಹೇಳಿದನು.

“ಪರಲೋಕ ರಾಜ್ಯವು ತನ್ನ ಮಗನ ಮದುವೆಯ ಔತಣವನ್ನು ಏರ್ಪಡಿಸಿದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ. ಅವನು ಮದುವೆಗೆ ಆಹ್ವಾನಿತರಾಗಿದ್ದವರನ್ನು ಕರೆಯುವುದಕ್ಕೆ ತನ್ನ ಆಳುಗಳನ್ನು ಕಳುಹಿಸಿದನು, ಆದರೆ ಬರುವುದಕ್ಕೆ ಅವರಿಗೆ ಮನಸ್ಸಿರಲಿಲ್ಲ. ಅರಸನು ತಿರುಗಿ ಬೇರೆ ಆಳುಗಳನ್ನು ಕರೆದು, ‘ನೀವು ಊಟಕ್ಕೆ ಆಹ್ವಾನಿತರ ಬಳಿಗೆ ಹೋಗಿ ಇಗೋ, ಔತಣ ಸಿದ್ಧವಾಗಿದೆ; ನನ್ನ ಎತ್ತುಗಳನ್ನೂ, ಕೊಬ್ಬಿದ ಹೋರಿಗಳನ್ನೂ ವಧಿಸಿದ್ದೇನೆ; ಎಲ್ಲಾ ಸಿದ್ಧವಾಗಿದೆ; ಮದುವೆಯ ಔತಣಕ್ಕೆ ಬನ್ನಿರಿ’ ಎಂಬುದಾಗಿ ಅವರಿಗೆ ಹೇಳಿರೆಂದು ಅಪ್ಪಣೆ ಕೊಟ್ಟು ಕಳುಹಿಸಿದನು. ಆದರೆ ಅವರು ಆಹ್ವಾನವನ್ನು ಅಲಕ್ಷ್ಯಮಾಡಿ, ಒಬ್ಬನು ತನ್ನ ಹೊಲಕ್ಕೆ ಒಬ್ಬನು ತನ್ನ ವ್ಯಾಪಾರಕ್ಕೆ ಹೋಗಿಬಿಟ್ಟರು; ಉಳಿದವರು ಅವನ ಆಳುಗಳನ್ನು ಹಿಡಿದು ಅವಮಾನಮಾಡಿ ಕೊಂದು ಹಾಕಿದರು. ಅರಸನು ಅದನ್ನು ಕೇಳಿ, ಸಿಟ್ಟುಗೊಂಡು, ತನ್ನ ಸೈನ್ಯಗಳನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹರಿಸಿ ಅವರ ಪಟ್ಟಣವನ್ನು ಸುಟ್ಟುಬಿಟ್ಟನು.

ಆಗ ತನ್ನ ಆಳುಗಳಿಗೆ, ‘ಮದುವೆಯ ಔತಣವು ಸಿದ್ಧವಾಗಿದೆ ಸರಿ, ಆದರೆ ಆಹ್ವಾನಿತರು ಯೋಗ್ಯರಾಗಿರಲಿಲ್ಲ. ಆದುದರಿಂದ ನೀವು ಈಗ ಮುಖ್ಯರಸ್ತೆಗೆ ಹೋಗಿ ಕಂಡ ಕಂಡವರನ್ನೆಲ್ಲಾ ಮದುವೆಯ ಔತಣಕ್ಕೆ ಕರೆಯಿರಿ’ ಎಂದು ಹೇಳಿದನು. ಆ ಆಳುಗಳು ಮುಖ್ಯರಸ್ತೆಗಳಿಗೆ ಹೋಗಿ ಕೆಟ್ಟವರು ಒಳ್ಳೆಯವರೆನ್ನದೇ ಕಂಡವರನ್ನೆಲ್ಲಾ ಒಟ್ಟುಗೂಡಿಸಿ ಕರೆದುಕೊಂಡು ಬಂದರು. ಹೀಗೆ ಮದುವೆಯ ಮಂಟಪವು ಅತಿಥಿಗಳಿಂದ ತುಂಬಿಹೋಯಿತು.

“ಆಗ ನಿಮ್ಮನ್ನು ಕಷ್ಟಸಂಕಟಗಳಿಗೆ ಗುರಿಮಾಡಿ ಕೊಲ್ಲುವರು; ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲಾ ಜನಾಂಗಗಳವರು ದ್ವೇಷಿಸುವರು. ಆಗ ಅನೇಕರು ಎಡವಿ ಹಿಂಜರಿದು ಒಬ್ಬರನ್ನೊಬ್ಬರು ಹಿಡಿದುಕೊಡುವರು; ಒಬ್ಬರ ಮೇಲೊಬ್ಬರು ದ್ವೇಷ ಮಾಡುವರು. ಬಹು ಮಂದಿ ಸುಳ್ಳುಪ್ರವಾದಿಗಳು ಸಹ ಎದ್ದು ಅನೇಕರನ್ನು ಮೋಸಗೊಳಿಸುವರು.

ಇದಲ್ಲದೆರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಆಗ ಅಂತ್ಯವು ಬರುವುದು.

ಯೇಸು ಅವರ ಹತ್ತಿರಕ್ಕೆ ಬಂದು, “ಪರಲೋಕದಲ್ಲಿಯೂ, ಭೂಲೋಕದಲ್ಲಿಯೂ ಇರುವ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ. ಆದುದರಿಂದ ನೀವು ಹೊರಟುಹೋಗಿ ಎಲ್ಲಾ ಜನಾಂಗಗಳನ್ನು ಶಿಷ್ಯರನ್ನಾಗಿ ಮಾಡಿ; ಅವರಿಗೆ ತಂದೆ, ಮಗ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿರಿ. ನಾನು ನಿಮಗೆ ಆಜ್ಞಾಪಿಸಿದ ಎಲ್ಲವನ್ನು ಅನುಸರಿಸುವುದಕ್ಕೆ ಅವರಿಗೆ ಉಪದೇಶ ಮಾಡಿರಿ. ಹಾಗುಇಗೋ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿನವೂ ನಿಮ್ಮ ಸಂಗಡ ಇರುತ್ತೇನೆ” ಎಂದು ಹೇಳಿದನು.

ಯೋಹಾನನು ಬಂದು ಜನರಿಗೆ, ನೀವು ಪಾಪಗಳ ಕ್ಷಮಾಪಣೆಗಾಗಿ ಪಶ್ಚಾತ್ತಾಪದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಉಪದೇಶಿಸುತ್ತಾ ಅಡವಿಯಲ್ಲಿ ದೀಕ್ಷಾಸ್ನಾನಮಾಡಿಸುತ್ತಾ ಇದ್ದನು.

ಯೋಹಾನನು ಬಂಧಿತನಾದ ತರುವಾಯ ಯೇಸು ಗಲಿಲಾಯಕ್ಕೆ ಬಂದು ದೇವರ ಸುವಾರ್ತೆಯನ್ನು ಹೀಗೆ ಸಾರಿ ಹೇಳಿದನು, “ಕಾಲವು ಪರಿಪೂರ್ಣವಾಯಿತು, ದೇವರ ರಾಜ್ಯವು ಸಮೀಪಿಸಿತು; ಪಶ್ಚಾತ್ತಾಪಪಟ್ಟು ಸುವಾರ್ತೆಯನ್ನು ನಂಬಿರಿ.”

ಯೇಸು ಗಲಿಲಾಯ ಸಮುದ್ರದ ಬಳಿಯಲ್ಲಿ ಹೋಗುತ್ತಿರುವಾಗ ಸೀಮೋನನು ಮತ್ತು ಅವನ ತಮ್ಮನಾದ ಅಂದ್ರೆಯನು ಸಮುದ್ರದಲ್ಲಿ ಬಲೆ ಬೀಸುವುದನ್ನು ಕಂಡನು. ಅವರು ಬೆಸ್ತರಾಗಿದ್ದರು. ಯೇಸು ಅವರಿಗೆ, “ನನ್ನನ್ನು ಹಿಂಬಾಲಿಸಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು” ಎಂದು ಹೇಳಿದನು. ಕೂಡಲೆ ಅವರು ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.

ಆತನು ಅವರಿಗೆ, “ನಾವು ಸಮೀಪದಲ್ಲಿರುವ ಬೇರೆ ಊರುಗಳಿಗೆ ಹೋಗೋಣ; ಅಲ್ಲಿಯೂ ನಾನು ಸುವಾರ್ತೆಯನ್ನು ಸಾರಬೇಕು; ಇದಕ್ಕಾಗಿಯೇ ನಾನು ಇಲ್ಲಿಗೆ ಹೊರಟು ಬಂದಿದ್ದೇನೆ” ಎಂದು ಹೇಳಿದನು.

ಆತನು ಅಲ್ಲಿಂದ ಹೋಗುತ್ತಿರುವಾಗ ಸುಂಕ ವಸೂಲಿಮಾಡುವ ಸ್ಥಳದಲ್ಲಿ ಕುಳಿತಿದ್ದ ಅಲ್ಫಾಯನ ಮಗನಾದ ಲೇವಿಯನ್ನು ನೋಡಿ, “ನನ್ನನ್ನು ಹಿಂಬಾಲಿಸು” ಎಂದು ಅವನನ್ನು ಕರೆಯಲು, ಅವನು ಎದ್ದು ಯೇಸುವನ್ನು ಹಿಂಬಾಲಿಸಿದನು.

ಆತನು ಅಪೊಸ್ತಲರೆಂದು ಹೆಸರಿಟ್ಟಂಥ ಹನ್ನೆರಡು ಮಂದಿಯನ್ನು ತನ್ನ ಸಂಗಡ ಇರಬೇಕೆಂತಲೂ, ಸುವಾರ್ತೆಯನ್ನು ಸಾರುವುದಕ್ಕೆ ಅವರನ್ನು ಕಳುಹಿಸಬೇಕೆಂತಲೂ, ದೆವ್ವಗಳನ್ನು ಬಿಡಿಸುವ ಅಧಿಕಾರ ಉಳ್ಳವರಾಗಿರಬೇಕೆಂತಲೂ ನೇಮಿಸಿದನು.

“ಕೇಳಿರಿ! ಬಿತ್ತುವವನು ಬಿತ್ತುವುದಕ್ಕೆ ಹೊರಟನು. ಬಿತ್ತುವಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದವು; ಪಕ್ಷಿಗಳು ಬಂದು ಅವುಗಳನ್ನು ತಿಂದುಬಿಟ್ಟವು. ಬೇರೆ ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಬಂಡೆಯ ನೆಲದ ಮೇಲೆ ಬಿದ್ದವು; ಅಲ್ಲಿ ಮಣ್ಣು ಆಳವಾಗಿಲ್ಲದ್ದರಿಂದ ಅವು ಬೇಗ ಮೊಳೆತವು; ಆದರೆ ಬಿಸಿಲೇರಿದಾಗ ಬಾಡಿ, ಬೇರಿಲ್ಲದ ಕಾರಣ ಒಣಗಿ ಹೋದವು. ಮತ್ತೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು; ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟದ್ದರಿಂದ ಅವು ಫಲಕೊಡಲಿಲ್ಲ. ಇನ್ನು ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದು ಮೊಳೆತು ಬೆಳೆದು ಬಂದು ಫಲಕೊಟ್ಟವು; ಅವುಗಳಲ್ಲಿ ಕೆಲವು ಮೂವತ್ತರಷ್ಟು, ಕೆಲವು ಅರುವತ್ತರಷ್ಟು, ಕೆಲವು ನೂರರಷ್ಟು ಫಲವನ್ನು ಕೊಟ್ಟವು.” ಮತ್ತು ಆತನು “ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ” ಅಂದನು. ಆತನು ಒಬ್ಬನೇ ಇದ್ದಾಗ, ಆತನಿಗೆ ಹತ್ತಿರವಾಗಿದ್ದವರು ಹನ್ನೆರಡು ಮಂದಿ ಶಿಷ್ಯರ ಸಂಗಡ ಆ ಸಾಮ್ಯಗಳ ವಿಷಯವಾಗಿ ಆತನನ್ನು ಕೇಳಿದರು. ಆತನು ಅವರಿಗೆ, “ದೇವರ ರಾಜ್ಯದ ರಹಸ್ಯ ನಿಮಗೆ ದೊರೆತಿದೆ; ಆದರೆ ಹೊರಗಿನವರಿಗೆ ಎಲ್ಲವನ್ನು ಸಾಮ್ಯಗಳ ರೂಪದಲ್ಲಿ ಹೇಳಿದ್ದೇನೆ.” “ಅವರು ಕಣ್ಣಾರೆ ಕಂಡರೂ ಗ್ರಹಿಸಲಿಲ್ಲ, ಕಿವಿಯಾರೆ ಕೇಳಿದರೂ ತಿಳಿದುಕೊಳ್ಳಲಿಲ್ಲ, ಹಾಗೆ ಕಂಡು ತಿಳಿದುಕೊಂಡಿದ್ದರೆ ಅವರು ದೇವರ ಕಡೆಗೆ ತಿರುಗಿಕೊಂಡು ಪಾಪಕ್ಷಮೆಯನ್ನು ಹೊಂದುತ್ತಿದ್ದರು.”

ಅನಂತರ ಆತನು ಅವರಿಗೆ ಹೇಳಿದ್ದೇನಂದರೆ, “ಈ ಸಾಮ್ಯದ ಅರ್ಥ ನಿಮಗೆ ಗೊತ್ತಾಗಲಿಲ್ಲವೋ? ಹಾಗಾದರೆ ಎಲ್ಲಾ ಸಾಮ್ಯಗಳನ್ನು ಹೇಗೆ ತಿಳಿದುಕೊಳ್ಳುವಿರಿ? ಆ ಬಿತ್ತುವವನು ವಾಕ್ಯವೆಂಬ ಬೀಜವನ್ನು ಬಿತ್ತುತ್ತಾನೆ. ಕೆಲವರು ವಾಕ್ಯವನ್ನು ಕೇಳಿದ ಕೂಡಲೇ ಸೈತಾನನು ಬಂದು ಅವರಲ್ಲಿ ಬಿತ್ತಿದ್ದ ವಾಕ್ಯವನ್ನು ತೆಗೆದುಬಿಡುತ್ತಾನೆ. ಇವರೇ ದಾರಿಯ ಮಗ್ಗುಲಲ್ಲಿ ಬಿತ್ತಲ್ಪಟ್ಟ ಬೀಜವಾಗಿರುವರು. “ಅದೇ ಪ್ರಕಾರ ಬೇರೆ ಕೆಲವರು ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾರೆ; ಆದರೆ ಅವರಿಗೆ ಬೇರಿಲ್ಲದ ಕಾರಣ ಇವರು ಸ್ವಲ್ಪ ಕಾಲ ಮಾತ್ರವೇ ಇದ್ದು, ಬಳಿಕ ಆ ವಾಕ್ಯದ ನಿಮಿತ್ತವಾಗಿ ಸಂಕಟವಾಗಲಿ ಹಿಂಸೆಯಾಗಲಿ ಬಂದರೆ ಬೇಗ ಎಡವಿಬೀಳುತ್ತಾರೆ; ಇವರೇ ಬಂಡೆಯ ನೆಲದಲ್ಲಿ ಬಿತ್ತಲ್ಪಟ್ಟ ಬೀಜವಾಗಿರುವರು. “ಇನ್ನು ಕೆಲವರು ಮುಳ್ಳುಗಿಡಗಳಲ್ಲಿ ಬಿದ್ದ ಬೀಜವಾಗಿರುವವರು; ಇವರು ವಾಕ್ಯವನ್ನು ಕೇಳಿದಾಗ್ಯೂ ಪ್ರಪಂಚದ ಚಿಂತೆಗಳೂ, ಐಶ್ವರ್ಯದಿಂದುಂಟಾಗುವ ವ್ಯಾಮೋಹವೂ, ಇತರ ವಿಷಯಗಳ ಮೇಲಣ ಆಸೆಗಳೂ ಸೇರಿ ಆ ವಾಕ್ಯವನ್ನು ಅಡಗಿಸಿಬಿಡುವುದರಿಂದ ನಿಷ್ಫಲರಾಗಿರುತ್ತಾರೆ. ಮತ್ತೆ ಕೆಲವರು ವಾಕ್ಯವನ್ನು ಕೇಳಿ ಕೈಕೊಂಡು ಮೂವತ್ತರಷ್ಟಾಗಲಿ ಅರವತ್ತರಷ್ಟಾಗಲಿ ನೂರರಷ್ಟಾಗಲಿ ಫಲವನ್ನು ಕೊಡುತ್ತಾರೆ; ಇವರೇ ಒಳ್ಳೆಯ ನೆಲದಲ್ಲಿ ಬಿದ್ದ ಬೀಜವಾಗಿರುವವರು” ಅಂದನು.

ಇದಲ್ಲದೆ ಆತನು ಅವರಿಗೆ ಮತ್ತೆ ಹೇಳಿದೇನಂದರೆ; “ಒಬ್ಬನು ಭೂಮಿಯಲ್ಲಿ ಬೀಜವನ್ನು ಬಿತ್ತಿದ ನಂತರ ಅವನು ರಾತ್ರಿಯಲ್ಲಿ ಮಲಗಿದ್ದಾಗಲೂ, ಹಗಲು ಎಚ್ಚರವಿರುವಾಗಲೂ ಅವನಿಗೆ ತಿಳಿಯದ ರೀತಿಯಲ್ಲಿ ಆ ಬೀಜದ ಸಸಿ ಮೊಳೆತು ಬೆಳೆಯುವುದು. ಇದರಂತೆ ದೇವರ ರಾಜ್ಯವೂ ಕೂಡ. ಭೂಮಿಯು ಮೊದಲು ಮೊಳಕೆಯನ್ನೂ, ಆ ಮೇಲೆ ತೆನೆಯನ್ನೂ, ತರುವಾಯ ತೆನೆಯಲ್ಲಿ ತುಂಬಾ ಕಾಳನ್ನೂ ತನ್ನಷ್ಟಕ್ಕೆ ತಾನೇ ಹುಟ್ಟಿಸುತ್ತದೆ. ಆದರೆ ಫಲಮಾಗಿದಾಗ ಸುಗ್ಗಿಕಾಲ ಬಂದಿತೆಂದು ವ್ಯವಸಾಯಗಾರನು ಅದನ್ನು ಕೊಯ್ಯಲು ಕುಡುಗೋಲನ್ನು ಬಳಸುತ್ತಾನೆ” ಅಂದನು.

ಇನ್ನೂ ಆತನು ಹೇಳಿದ್ದು; “ದೇವರ ರಾಜ್ಯವನ್ನು ಯಾವುದಕ್ಕೆ ಹೋಲಿಸೋಣ? ಯಾವ ಸಾಮ್ಯದಿಂದ ಅದನ್ನು ತೋರಿಸಿಕೊಡೋಣ? ಅದು ಸಾಸಿವೆ ಕಾಳಿನಂತಿರುತ್ತದೆ. ನೆಲದಲ್ಲಿ ಬಿತ್ತುವಾಗ ಅದು ಭೂಮಿಯಲ್ಲಿರುವ ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದೆ. ಬಿತ್ತಿದ ಮೇಲೆ ಅದು ಬೆಳೆದು ಎಲ್ಲಾ ಗಿಡಗಳಿಗಿಂತ ದೊಡ್ಡದಾಗಿ ದೊಡ್ಡದೊಡ್ಡ ಕೊಂಬೆಗಳನ್ನು ಬಿಡುವುದರಿಂದ ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ನೆರಳಿನಲ್ಲಿ ವಾಸಮಾಡುವುದಕ್ಕಾಗುತ್ತದೆ” ಅಂದನು.

ಆದರೆ ಯೇಸು ಅವನ ಬೇಡಿಕೆಯನ್ನು ಒಪ್ಪದೆ ಅವನಿಗೆ, “ನೀನು ನಿನ್ನ ಮನೆಗೂ ನಿನ್ನ ಜನರ ಬಳಿಗೂ ಹೋಗಿ ಕರ್ತನು ನಿನ್ನಲ್ಲಿ ಕರುಣೆಯಿಟ್ಟು ನಿನಗೆ ಏನೇನು ಉಪಕಾರಗಳನ್ನು ಮಾಡಿದ್ದಾನೋ ಅದನ್ನು ಹೇಳು” ಅಂದನು. ಅವನು ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರಗಳನ್ನು ದೆಕಪೊಲಿ ಎಂಬ ಸೀಮೆಯಲ್ಲಿ ಸಾರುವುದಕ್ಕೆ ಪ್ರಾರಂಭಿಸಿದನು; ಎಲ್ಲರೂ ಆಶ್ಚರ್ಯಪಟ್ಟರು.

ತಾನು ಆಯ್ಕೆಮಾಡಿಕೊಂಡ ಹನ್ನೆರಡು ಮಂದಿ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದನು. ಕಳುಹಿಸುವಾಗ ಆತನು ಅವರಿಗೆ ದೆವ್ವಗಳ ಮೇಲೆ ಅಧಿಕಾರ ಕೊಟ್ಟು, “ಕೋಲು ಹೊರತು ಪ್ರಯಾಣಕ್ಕೆ ಏನೂ ತೆಗೆದುಕೊಂಡು ಹೋಗಬೇಡಿರಿ; ಬುತ್ತಿ, ಚೀಲ, ಸೊಂಟಪಟ್ಟಿಯಲ್ಲಿ ಹಣ ಬೇಡ. ಚಪ್ಪಲಿಗಳನ್ನು ಹಾಕಿಕೊಳ್ಳಬಹುದು, ಆದರೆ ಎರಡು ಅಂಗಿಗಳನ್ನು ಧರಿಸಬೇಡಿರಿ” ಎಂದು ಅಪ್ಪಣೆಕೊಟ್ಟನು. ಇದಲ್ಲದೆ ಆತನು ಅವರಿಗೆ, “ನೀವು ಎಲ್ಲಿಯಾದರೂ ಒಂದು ಮನೆಗೆ ಹೋದಾಗ ಆ ಸ್ಥಳದಿಂದ ಹೊರಡುವವರೆಗೂ ಅಲ್ಲೇ ಉಳಿದುಕೊಳ್ಳಿರಿ.

ಮತ್ತು ಯಾವ ಸ್ಥಳದವರಾದರೂ ನಿಮ್ಮನ್ನು ಸೇರಿಸಿಕೊಳ್ಳದೆಯೂ ನೀವು ಹೇಳುವುದನ್ನು ಕೇಳದೆಯೂ ಹೋದರೆ ಆ ಸ್ಥಳದಿಂದ ಹೊರಡುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ; ಅದು ಅವರ ವಿರುದ್ಧ ಸಾಕ್ಷಿಯಾಗಿರಲಿ” ಎಂದು ಹೇಳಿದನು. ಅವರು ಹೊರಟು ಹೋಗಿ ಜನರಿಗೆ, “ನೀವು ನಿಮ್ಮ ಪಾಪಗಳನ್ನು ಬಿಟ್ಟು ಮಾನಸಾಂತರ ಹೊಂದಬೇಕು” ಎಂದು ಸಾರಿ ಹೇಳಿದರು.

ಆತನು ಇನ್ನೂ ಅವರಿಗೆ, “ನೀವು ನಿಮ್ಮ ಸಂಪ್ರದಾಯಗಳನ್ನು ಪಾಲಿಸುವುದಕ್ಕಾಗಿ ಬಹು ಜಾಣತನದಿಂದದೇವರ ಆಜ್ಞೆಯನ್ನು ನಿರ್ಲಕ್ಷಿಸುತ್ತೀರಿ;

ಇದಲ್ಲದೆ ಅವರಲ್ಲಿ ಕೆಲವು ಸಣ್ಣ ಮೀನುಗಳಿದ್ದವು; ಆತನು ಅವುಗಳಿಗಾಗಿ ದೇವರಿಗೆ ಸ್ತೋತ್ರಮಾಡಿ, ಇವುಗಳನ್ನೂ ಹಂಚಿಕೊಡಿರಿ ಎಂದು ಶಿಷ್ಯರಿಗೆ ಅಪ್ಪಣೆ ಕೊಟ್ಟನು. ಜನರು ತಿಂದು ತೃಪ್ತರಾದರು. ಉಳಿದ ತುಂಡುಗಳನ್ನು ಒಟ್ಟುಗೂಡಿಸಲಾಗಿ ಏಳು ಬುಟ್ಟಿಗಳು ತುಂಬಿದವು. ಊಟಮಾಡಿದವರು ಹೆಚ್ಚುಕಡಿಮೆ ನಾಲ್ಕು ಸಾವಿರ ಗಂಡಸರಿದ್ದರು.

ಆ ಮೇಲೆ ಆತನು ತನ್ನ ಶಿಷ್ಯರ ಜೊತೆಗೆ ಜನರ ಗುಂಪನ್ನೂ ಹತ್ತಿರ ಕರೆದು ಅವರಿಗೆ ಹೇಳಿದ್ದೇನಂದರೆ, “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು; ಆದರೆ ನನ್ನ ನಿಮಿತ್ತವಾಗಿಯೂ, ಸುವಾರ್ತೆಯ ನಿಮಿತ್ತವಾಗಿಯೂ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಉಳಿಸಿಕೊಳ್ಳುವನು. ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ತನ್ನ ಸ್ವಂತ ಪ್ರಾಣವನ್ನೇ ನಷ್ಟಪಡಿಸಿಕೊಂಡರೆ ಅವನಿಗೆ ಲಾಭವೇನು? ಒಬ್ಬನು ತನ್ನ ಪ್ರಾಣಕ್ಕೆ ಬದಲಾಗಿ ಏನು ಈಡು ಕೊಡಲಾದೀತು?

ವ್ಯಭಿಚಾರಿಣಿಯಂತಿರುವ ಈ ಪಾಪಿಷ್ಠ ಪೀಳಿಗೆಯವರಲ್ಲಿ ಯಾರು ನನ್ನನ್ನೂ, ನನ್ನ ಮಾತುಗಳನ್ನೂ ಕುರಿತು ನಾಚಿಕೆಪಡುವರೋ, ಅಂಥವರನ್ನು ಕುರಿತು ಮನುಷ್ಯಕುಮಾರನು, ತಾನು ತನ್ನ ತಂದೆಯ ಪ್ರಭಾವದೊಡನೆ ಪರಿಶುದ್ಧ ದೇವದೂತರ ಸಮೇತವಾಗಿ ಬರುವಾಗ, ನಾಚಿಕೆಪಡುವನು” ಎಂದನು.

ಅದಕ್ಕೆ ಯೇಸು, “ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾರು ನನ್ನ ನಿಮಿತ್ತವೂ, ಸುವಾರ್ತೆಯ ನಿಮಿತ್ತವೂ ಮನೆಯನ್ನಾಗಲಿ, ಸಹೋದರರನ್ನಾಗಲಿ, ಸಹೋದರಿಯರನ್ನಾಗಲಿ, ತಾಯಿಯನ್ನಾಗಲಿ, ತಂದೆಯನ್ನಾಗಲಿ, ಮಕ್ಕಳನ್ನಾಗಲಿ, ಹೊಲಗದ್ದೆಗಳನ್ನಾಗಲಿ ಬಿಟ್ಟು ಬಿಟ್ಟಿರುವನೋ, ಅವನಿಗೆ ಈ ಕಾಲದಲ್ಲಿಯೇ ಮನೆ, ಸಹೋದರರು, ಸಹೋದರಿಯರು, ತಾಯಿ, ಮಕ್ಕಳು, ಹೊಲಗದ್ದೆಗಳು ಇವೆಲ್ಲವೂ ಹಿಂಸೆಗಳ ಸಹಿತವಾಗಿ ನೂರರಷ್ಟು ಸಿಕ್ಕೇ ಸಿಗುತ್ತವೆ ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವುದು.

“ಆದರೆ ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಜನರು ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಎಳೆದುಕೊಂಡು ಹೋಗುವರು. ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು, ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಕಾರಿಗಳ ಮತ್ತು ಅರಸುಗಳ ಮುಂದೆ ಅವರಿಗೆ ಸಾಕ್ಷಿಗಳಾಗಿ ನಿಲ್ಲಿಸುವರು, ಆದರೆ ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು.

“ನಿಮ್ಮನ್ನು ಹಿಡಿದುಕೊಂಡು ಹೋಗಿ ಒಪ್ಪಿಸುವಾಗ ಏನು ಹೇಳಬೇಕು ಎಂದು ಮುಂಚಿತವಾಗಿಯೇ ಚಿಂತಿಸಬೇಡಿರಿ, ನೀವು ಏನು ಹೇಳಬೇಕೋ ಅದು ನಿಮಗೆ ಆ ಗಳಿಗೆಯಲ್ಲಿ ಕೊಡಲ್ಪಡುವುದು, ಏಕೆಂದರೆ ಮಾತನಾಡುವವರು ನೀವಲ್ಲ, ಆದರೆ ಪವಿತ್ರಾತ್ಮನೇ ನಿಮ್ಮ ಮೂಲಕವಾಗಿ ಮಾತನಾಡುವನು,

ಇದಲ್ಲದೆ ಸಹೋದರನು ಸಹೋದರನನ್ನೂ, ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು. ಮಕ್ಕಳು ಹೆತ್ತವರಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು, ಮತ್ತು ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ದ್ವೇಷಿಸುವರು, ಆದರೆ ಕೊನೆಯವರೆಗೂ ತಾಳುವವನೇ ರಕ್ಷಣೆ ಹೊಂದುವನು.”

ಆ ಮೇಲೆ ಅವರಿಗೆ, “ನೀವು ಲೋಕದ ಎಲ್ಲಾ ಕಡೆಗಳಿಗೂ ಹೋಗಿ ಸೃಷ್ಟಿಗಳಿಗೆಲ್ಲಾ ಸುವಾರ್ತೆಯನ್ನು ಸಾರಿರಿ. ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆ ಹೊಂದುವನು; ನಂಬದೇ ಹೋಗುವವನು ದಂಡನೆಗೆ ಗುರಿಯಾಗುವನು.

ಅನಂತರ ಅವರು ಹೊರಟುಹೋಗಿ ಎಲ್ಲಾ ಕಡೆಗಳಲ್ಲಿಯೂ ಸುವಾರ್ತೆಯನ್ನು ಸಾರಿದರು; ಮತ್ತು ಕರ್ತನು ಅವರ ಸಂಗಡ ಕೆಲಸ ಮಾಡುತ್ತಾ ಸೂಚಕಕಾರ್ಯಗಳಿಂದ ಸುವಾರ್ತೆಯ ವಾಕ್ಯವನ್ನು ದೃಢಪಡಿಸುತ್ತಾ ಇದ್ದನು.

ಪ್ರಾರಂಭದಿಂದಲೂ ಕಣ್ಣಾರೆ ಕಂಡು ಸುವಾರ್ತಾವಾಕ್ಯವನ್ನು ಸಾರುತ್ತಿದ್ದವರು ನಮಗೆ ತಿಳಿಸಿದ ಪ್ರಕಾರ ಆ ಘಟನೆಗಳನ್ನು,

ನಮ್ಮ ದೇವರು ಅತ್ಯಂತಕರುಣೆಯಿಂದ ದಯಪಾಲಿಸುವ ಪಾಪಕ್ಷಮೆಯೆಂಬ ರಕ್ಷಣೆಯ ತಿಳಿವಳಿಕೆಯನ್ನು ಆತನ ಪ್ರಜೆಗೆ ತಿಳಿಸಿಕೊಡುವವನಾಗಿಯೂ ಇರುವಿ. ಆ ಕರುಣೆಯಿಂದಲೇ ನಮಗೆ ಮೇಲಿನಿಂದ ಅರುಣೋದಯವು ಉಂಟಾಗಿ,

ಆ ದೂತನು ಅವರಿಗೆ, “ಹೆದರಬೇಡಿರಿ, ಕೇಳಿರಿ; ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭವಾರ್ತೆಯನ್ನು ನಿಮಗೆ ತಿಳಿಸುತ್ತೇನೆ.

ಆತನು ಯೊರ್ದನ್ ಹೊಳೆಯ ಸುತ್ತಲಿರುವ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಜನರಿಗೆ, ನೀವು ಪಾಪ ಕ್ಷಮಾಪಣೆಗಾಗಿ ಪಶ್ಚಾತ್ತಾಪದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಸಾರಿ ಹೇಳುತ್ತಿದ್ದನು. ಇದು ಯೆಶಾಯನೆಂಬ ಪ್ರವಾದಿಯ ಗ್ರಂಥದಲ್ಲಿ ಬರೆದಿರುವ ಮಾತಿಗೆ ಅನುಸಾರವಾಗಿ ನಡೆಯಿತು. ಆ ಮಾತು ಏನೆಂದರೆ, “‘ಕರ್ತನ ದಾರಿಯನ್ನು ಸಿದ್ಧಮಾಡಿರಿ, ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ. ಎಲ್ಲಾ ಹಳ್ಳಕೊಳ್ಳಗಳು ಮುಚ್ಚಲ್ಪಡುವವು, ಎಲ್ಲಾ ಬೆಟ್ಟಗುಡ್ಡಗಳು ತಗ್ಗಿಸಲ್ಪಡುವುದು, ಡೊಂಕಾಗಿರುವಂಥದು ನೆಟ್ಟಗಾಗುವುದು, ಕೊರಕಲಾದ ದಾರಿಗಳು ಸಮವಾಗುವವು. ಎಲ್ಲಾ ಮನುಷ್ಯರೂ ದೇವರಿಂದಾಗುವ ರಕ್ಷಣೆಯನ್ನು ಕಾಣುವರು’ ಎಂಬುದಾಗಿ ಮರುಭೂಮಿಯಲ್ಲಿ ಕೂಗುವವನ ಶಬ್ದವದೆ” ಎಂಬುದೇ.

ಇನ್ನು ಬೇರೆ ಅನೇಕ ಮಾತುಗಳಿಂದ ಆತನು ಇಸ್ರಾಯೇಲ್ ಜನರಿಗೆ ಬುದ್ಧಿಹೇಳಿ ಶುಭವಾರ್ತೆಯನ್ನು ಸಾರುತ್ತಿದ್ದನು.

“ಕರ್ತನ ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು ಬಡವರಿಗೆ ಶುಭವಾರ್ತೆಯನ್ನು ಸಾರುವುದಕ್ಕಾಗಿ ಅಭಿಷೇಕಿಸಿರುವನು. ಸೆರೆಯಲ್ಲಿರುವವರನ್ನು ಬಿಡುಗಡೆಮಾಡುವುದಕ್ಕೂ, ಮತ್ತು ಕುರುಡರಿಗೆ ಕಣ್ಣು ಬರುವುದಕ್ಕೂ ಹಿಂಸಿಸಲ್ಪಟ್ಟವರನ್ನು ಬಿಡಿಸಿ ಕಳುಹಿಸುವುದಕ್ಕೂ

ಆದರೆ ಆತನು ಅವರಿಗೆ, “ನಾನು ದೇವರ ರಾಜ್ಯದ ಸುವಾರ್ತೆಯನ್ನು ಬೇರೆ ಊರುಗಳಿಗೂ ಸಾರಿ ಹೇಳಬೇಕಾಗಿದೆ; ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ” ಎಂದು ಹೇಳಿದನು.

ಮಾತನಾಡುವುದನ್ನು ಮುಗಿಸಿದ ಮೇಲೆ ಸೀಮೋನನಿಗೆ, “ಆಳವಾದ ಸ್ಥಳಕ್ಕೆ ದೋಣಿಯನ್ನು ನಡೆಸಿ ಮೀನುಹಿಡಿಯಲು ನಿಮ್ಮ ಬಲೆಗಳನ್ನು ಬೀಸಿರಿ” ಎಂದು ಹೇಳಿದನು. ಅದಕ್ಕೆ ಸೀಮೋನನು, “ಗುರುವೇ, ನಾವು ರಾತ್ರಿಯೆಲ್ಲಾ ಪ್ರಯತ್ನಪಟ್ಟರೂ ಏನೂ ಸಿಕ್ಕಲಿಲ್ಲ; ಆದರೆ ನಿನ್ನ ಮಾತಿನ ಮೇಲೆ ಬಲೆಗಳನ್ನು ಬೀಸುತ್ತೇವೆ” ಅಂದನು. ಅವರು ಬಲೆಗಳನ್ನು ಬೀಸಿದ ಮೇಲೆ ಮೀನುಗಳು ರಾಶಿರಾಶಿಯಾಗಿ ಬಲೆಗೆ ಸಿಕ್ಕಿಕೊಂಡಿದ್ದರ ಪರಿಣಾಮ ಬಲೆಗಳು ಹರಿದುಹೋಗುವಂತ್ತಿದವು. ಆಗ ಅವರು ಮತ್ತೊಂದು ದೋಣಿಯಲ್ಲಿದ್ದ ತಮ್ಮ ಸಂಗಡಿಗರನ್ನೂ ಕರೆದು, ನೀವು ಬಂದು ನಮಗೆ ನೆರವಾಗಬೇಕೆಂದು ಸನ್ನೆಮಾಡಿದರು. ಅವರು ಬಂದು ಆ ಎರಡು ದೋಣಿಗಳಲ್ಲಿ ಮೀನುಗಳನ್ನು ತುಂಬಿಸಲು, ಅವು ಮುಳುಗುವ ಹಾಗಾದವು. ಸೀಮೋನ್ ಪೇತ್ರನು ಇದನ್ನು ಕಂಡು ಯೇಸುವಿನ ಮೊಣಕಾಲಿಗೆ ಬಿದ್ದು, “ಕರ್ತನೇ, ನಾನು ಪಾಪಾತ್ಮನು; ನನ್ನನ್ನು ಬಿಟ್ಟುಹೋಗು” ಅಂದನು. ಏಕೆಂದರೆ ಅವನಿಗೂ ಅವನ ಸಂಗಡ ಇದ್ದವರೆಲ್ಲರಿಗೂ ತಾವು ಹಿಡಿದ ಮೀನುಗಳ ನಿಮಿತ್ತ ಆಶ್ಚರ್ಯಪಟ್ಟಿದ್ದರು. ಸೀಮೋನನ ಸಂಗಡಿಗರಾಗಿದ್ದ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೂ ಹಾಗೆಯೇ ಆಶ್ಚರ್ಯಪಟ್ಟರು. ಯೇಸು ಸೀಮೋನನಿಗೆ, “ಅಂಜಬೇಡ, ಇಂದಿನಿಂದ ನೀನು ಮನುಷ್ಯರನ್ನು ಹಿಡಿಯುವ ಬೆಸ್ತನಾಗಿರುವಿ” ಎಂದು ಹೇಳಿದನು. ಅವರು ತಮ್ಮ ದೋಣಿಗಳನ್ನು ದಡಕ್ಕೆ ತಂದು ಮತ್ತು ಎಲ್ಲವನ್ನು ಬಿಟ್ಟು ಅಂದಿನಿಂದ ಯೇಸುವನ್ನು ಹಿಂಬಾಲಿಸಿದರು.

ಅನಂತರ ಯೇಸು ಹೊರಟು ಸುಂಕ ವಸೂಲಿಮಾಡುವ ಸ್ಥಳದಲ್ಲಿ ಕುಳಿತಿದ್ದ ಲೇವಿಯೆಂಬ ಒಬ್ಬ ಸುಂಕದವನನ್ನು ಕಂಡು, “ನನ್ನನ್ನು ಹಿಂಬಾಲಿಸು” ಎಂದು ಅವನನ್ನು ಕರೆಯಲು, ಅವನು ಎಲ್ಲವನ್ನೂ ಬಿಟ್ಟು ಎದ್ದು ಆತನ ಹಿಂದೆ ಹೋದನು.

ಆ ದಿನದಲ್ಲಿ ಸಂತೋಷಿಸಿ, ಕುಣಿದಾಡುವಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವುದು ಎಂದು ತಿಳಿದುಕೊಳ್ಳಿರಿ. ಈ ಜನರ ಪೂರ್ವಿಕರು ಪ್ರವಾದಿಗಳಿಗೂ ಹಾಗೆಯೇ ಮಾಡಿದರು.

ಹೀಗಿರಲು ಯೇಸು ಅವರಿಗೆ ಪ್ರತ್ಯುತ್ತರವಾಗಿ, “ನೀವು ಹೋಗಿ ಕಂಡು ಕೇಳಿದವುಗಳನ್ನು ಯೋಹಾನನಿಗೆ ತಿಳಿಸಿರಿ; ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಜೀವದಿಂದ ಎಬ್ಬಿಸಲ್ಪಡುತ್ತಾರೆ, ಬಡವರಿಗೆ ಸುವಾರ್ತೆಯು ಸಾರಲ್ಪಡುತ್ತಿದೆ. ನನ್ನ ವಿಷಯದಲ್ಲಿ ಸಂಶಯಪಡದವನೇ ಧನ್ಯನು” ಎಂದು ಹೇಳಿದನು.

ತರುವಾಯ ಯೇಸು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಊರುಗಳಲ್ಲಿಯೂ ಗ್ರಾಮಗಳಲ್ಲಿಯೂ ಸಂಚರಿಸಿದನು. ಆತನ ಸಂಗಡ ಹನ್ನೆರಡು ಮಂದಿ ಶಿಷ್ಯರೂ,

“ಬಿತ್ತುವವನು ಬೀಜವನ್ನು ಬಿತ್ತುವುದಕ್ಕೆ ಹೊರಟನು. ಅವನು ಬಿತ್ತುವಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದು ತುಳಿಯಲ್ಪಟ್ಟವು, ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಅವುಗಳನ್ನು ತಿಂದುಬಿಟ್ಟವು. ಬೇರೆ ಕೆಲವು ಬೀಜಗಳು ಬಂಡೆಯ ಮೇಲೆ ಬಿದ್ದವು. ಅವು ಮೊಳೆತು ಬಂದರೂ ತೇವವಿಲ್ಲದ ಕಾರಣ ಒಣಗಿಹೋದವು. ಮತ್ತೆ ಕೆಲವು ಬೀಜಗಳು ಮುಳ್ಳುಪೊದೆಗಳೊಳಗೆ ಬಿದ್ದವು. ಮುಳ್ಳುಗಳು ಅವುಗಳೊಂದಿಗೆ ಬೆಳೆದು ಅವುಗಳನ್ನು ಅದುಮಿಬಿಟ್ಟವು. ಇನ್ನು ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದು, ಮೊಳೆತು, ನೂರರಷ್ಟು ಫಲವನ್ನು ಕೊಟ್ಟವು.” ಈ ಮಾತುಗಳನ್ನು ಹೇಳಿ ಆತನು, “ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ” ಎಂದು ಕೂಗಿ ಹೇಳಿದನು. ಯೇಸುವಿನ ಶಿಷ್ಯರು ಈ ಸಾಮ್ಯದ ಅರ್ಥವೇನೆಂದು ಆತನನ್ನು ಕೇಳಿದಾಗ, ಆತನು, “ದೇವರ ರಾಜ್ಯದ ಗುಟ್ಟುಗಳನ್ನು ತಿಳಿಯುವ ವರವು ನಿಮಗೆ ಕೊಡಲಾಗಿದೆ, ಉಳಿದವರಿಗೆ ‘ಕಣ್ಣಿದ್ದರೂ ನೋಡದಂತೆಯೂ, ಕೇಳಿಸಿಕೊಂಡರೂ ಗ್ರಹಿಸದಂತೆಯೂ’ ಸಾಮ್ಯರೂಪವಾಗಿ ಹೇಳಲಾಗುತ್ತದೆ.

ಈ ಸಾಮ್ಯದ ಅರ್ಥವೇನಂದರೆ, ಆ ಬೀಜವೆಂದರೆ ದೇವರ ವಾಕ್ಯ. ಕೆಲವರು ವಾಕ್ಯವನ್ನು ಕೇಳಿದ ಕೂಡಲೆ ಸೈತಾನನು ಬಂದು ಅವರು ನಂಬಿ ರಕ್ಷಣೆ ಹೊಂದಬಾರದೆಂದು ವಾಕ್ಯವನ್ನು ಅವರ ಹೃದಯದಿಂದ ತೆಗೆದುಬಿಡುತ್ತಾನೆ. ಇವರೇ ದಾರಿಯ ಮಗ್ಗುಲಲ್ಲಿ ಬಿದ್ದಿರುವ ಬೀಜಗಳು. ಕೆಲವರು ವಾಕ್ಯವನ್ನು ಕೇಳಿದಾಗಲೇ ಅದನ್ನು ಸಂತೋಷದಿಂದ ಅಂಗೀಕರಿಸುತ್ತಾರೆ; ಇವರಿಗೆ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರವೇ ನಂಬಿಕೊಂಡಿದ್ದು ಶೋಧನೆಯ ಕಾಲದಲ್ಲಿ ಬಿದ್ದು ಹೋಗುತ್ತಾರೆ. ಇವರೇ ಬಂಡೆಯ ಮೇಲೆ ಬೀಳಲ್ಪಟ್ಟ ಬೀಜಗಳು. ಇನ್ನು ಕೆಲವರು ವಾಕ್ಯವನ್ನು ಕೇಳಿದ ಮೇಲೆ ಬರಬರುತ್ತಾ ಈ ಜೀವನದಲ್ಲಿ ಆಗುವ ಚಿಂತೆ, ಐಶ್ವರ್ಯ ಭೋಗಗಳಿಂದ ಅಡಗಿಸಲ್ಪಟ್ಟು ಫಲವನ್ನು ಕೊಡಲಾರದವರು, ಮುಳ್ಳುಗಿಡಗಳಲ್ಲಿ ಬಿದ್ದ ಬೀಜವಾಗಿರುವವರು. ಮತ್ತೆ ಕೆಲವರು ವಾಕ್ಯವನ್ನು ಕೇಳಿ ಸುಗುಣವುಳ್ಳ ತಮ್ಮ ಒಳ್ಳೆಯ ಹೃದಯದಲ್ಲಿ ಅದನ್ನು ಸಂಗ್ರಹಿಸಿ ಇಟ್ಟುಕೊಂಡು ತಾಳ್ಮೆಯಿಂದ ಫಲವನ್ನು ಕೊಡುತ್ತಾರೆ. ಇವರೇ ಒಳ್ಳೆಯ ನೆಲದಲ್ಲಿ ಬಿದ್ದ ಬೀಜಗಳು.

ಆತನು, “ನೀನು ನಿನ್ನ ಮನೆಗೆ ಹಿಂತಿರುಗಿ ಹೋಗಿ ದೇವರು ನಿನಗೆ ಏನೇನು ಉಪಕಾರಗಳನ್ನು ಮಾಡಿದನೋ ಅದನ್ನೆಲ್ಲಾ ನಿನ್ನವರಿಗೆ ವಿವರವಾಗಿ ಹೇಳು” ಎಂದು ಅವನನ್ನು ಕಳುಹಿಸಿಬಿಟ್ಟನು. ಅವನು ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರಗಳನ್ನು ಆ ಊರಲ್ಲೆಲ್ಲಾ ಸಾರಿದನು.

ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು ಅವರಿಗೆ ಎಲ್ಲಾ ದೆವ್ವಗಳನ್ನು ಬಿಡಿಸುವ ಮತ್ತು ರೋಗಗಳನ್ನು ವಾಸಿಮಾಡುವ ಶಕ್ತಿ ಮತ್ತು ಅಧಿಕಾರಗಳನ್ನು ಕೊಟ್ಟು, ದೇವರ ರಾಜ್ಯದ ವಿಷಯವನ್ನು ಸಾರುವುದಕ್ಕೂ ಅಸ್ವಸ್ಥರಾದವರನ್ನು ಸ್ವಸ್ಥಮಾಡುವುದಕ್ಕೂ ಅವರನ್ನು ಕಳುಹಿಸಿದನು. ಕಳುಹಿಸುವಾಗ ಅವರಿಗೆ ಹೇಳಿದ್ದೇನಂದರೆ, “ನಿಮ್ಮ ಪ್ರಯಾಣಕ್ಕಾಗಿ ಏನನ್ನೂ ತೆಗೆದುಕೊಂಡು ಹೋಗಬೇಡಿರಿ, ಕೋಲು, ಚೀಲ, ಬುತ್ತಿ, ಹಣ ಬೇಡ; ಎರಡಂಗಿಗಳಿರಬಾರದು. ಇದಲ್ಲದೆ ಆ ಊರಿನಿಂದ ಹೊರಡುವ ತನಕ ನೀವು ಯಾವ ಮನೆಯಲ್ಲಿ ಇಳಿದುಕೊಂಡಿರುವಿರೋ, ಆ ಮನೆಯಲ್ಲೇ ಉಳಿದುಕೊಳ್ಳಿರಿ.

ಮತ್ತು ಯಾವ ಊರಿನವರಾದರೂ ನಿಮ್ಮನ್ನು ಸ್ವೀಕರಿಸಿಕೊಳ್ಳದೆ ಹೋದರೆ ಆ ಊರನ್ನು ನೀವು ಬಿಟ್ಟುಹೊರಡುವಾಗ ನಿಮ್ಮ ಕಾಲಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ; ಅದು ಅವರ ವಿರುದ್ಧ ಸಾಕ್ಷಿಯಾಗಿರಲಿ” ಅಂದನು. ಆಗ ಅವರು ಹೊರಟು ಗ್ರಾಮಗಳಿಗೆ ಹೋಗಿ, ಸುವಾರ್ತೆಯನ್ನು ಸಾರುತ್ತಾ ಎಲ್ಲಾ ಕಡೆಗಳಲ್ಲಿಯೂ ರೋಗಿಗಳನ್ನು ವಾಸಿಮಾಡುತ್ತಿದ್ದರು.

ಇದಲ್ಲದೆ ಆತನು ಎಲ್ಲರಿಗೂ ಹೇಳಿದ್ದೇನಂದರೆ, “ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ತಾನು ನಿರಾಕರಿಸಿ ಪ್ರತಿದಿನವು ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು, ಆದರೆ ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಉಳಿಸಿಕೊಳ್ಳುವನು. ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ತನ್ನನ್ನೇ ತಾನು ಹಾಳುಮಾಡಿಕೊಂಡರೆ ಅಥವಾ ನಷ್ಟಪಡಿಸಿಕೊಂಡರೆ ಅವನಿಗೆ ಪ್ರಯೋಜನವೇನು?

ಯಾವನು ನನಗೂ ನನ್ನ ಮಾತುಗಳಿಗೂ ನಾಚಿಕೊಳ್ಳುತ್ತಾನೋ, ಅವನಿಗೆ ಮನುಷ್ಯಕುಮಾರನು ತನಗೂ ತನ್ನ ತಂದೆಗೂ ಪರಿಶುದ್ಧ ದೂತರಿಗೂ ಇರುವ ಮಹಾಪ್ರಭಾವದೊಡನೆ ಬರುವಾಗ ಅವನ ಕುರಿತು ನಾಚಿಕೊಳ್ಳುವನು.

ಯೇಸು ಮತ್ತೊಬ್ಬನಿಗೆ, “ನನ್ನನ್ನು ಹಿಂಬಾಲಿಸು” ಎಂದು ಹೇಳಲು ಅವನು, “ಕರ್ತನೇ, ನಾನು ಮೊದಲು ಹೋಗಿ ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮಾಡಿ ಬರುವಂತೆ ನನಗೆ ಅಪ್ಪಣೆಯಾಗಬೇಕು” ಅಂದನು. ಆದರೆ ಯೇಸು ಅವನಿಗೆ, “ಸತ್ತವರೇ ತಮ್ಮವರಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಲಿ, ನೀನಂತೂ ಹೋಗಿ ದೇವರ ರಾಜ್ಯವನ್ನು ಪ್ರಸಿದ್ಧಿಪಡಿಸು” ಎಂದು ಹೇಳಿದನು.

ಇನ್ನೊಬ್ಬನು ಸಹ, “ಕರ್ತನೇ, ನಾನು ನಿನ್ನನ್ನು ಹಿಂಬಾಲಿಸುತ್ತೇನೆ, ಆದರೆ ಮೊದಲು ನನ್ನ ಮನೆಯವರಿಗೆ ಬೀಳ್ಕೊಟ್ಟು ಬರುವುದಕ್ಕೆ ನನಗೆ ಅಪ್ಪಣೆಯಾಗಬೇಕು” ಅಂದನು. ಯೇಸು ಅವನಿಗೆ, “ಯಾವನಾದರೂ ನೇಗಿಲಿನ ಮೇಲೆ ತನ್ನ ಕೈಯನ್ನಿಟ್ಟು ಹಿಂದಕ್ಕೆ ನೋಡಿದರೆ ಅವನು ದೇವರ ರಾಜ್ಯಕ್ಕೆ ತಕ್ಕವನಲ್ಲ” ಎಂದು ಹೇಳಿದನು.

ಇದಾದ ಮೇಲೆ ಕರ್ತನು ಇನ್ನೂ ಎಪ್ಪತ್ತು ಮಂದಿಯನ್ನು ತನ್ನ ಶಿಷ್ಯರನ್ನಾಗಿ ನೇಮಿಸಿ, ಅವರನ್ನು ಇಬ್ಬಿಬ್ಬರಾಗಿ ತಾನು ಹೋಗಬೇಕೆಂದಿದ್ದ ಪ್ರತಿಯೊಂದು ಊರಿಗೂ ಪ್ರತಿಯೊಂದು ಸ್ಥಳಕ್ಕೂ ಮುಂದಾಗಿ ಕಳುಹಿಸಿದನು.

ಕಳುಹಿಸುವಾಗ ಅವರಿಗೆ ಹೇಳಿದ್ದೇನಂದರೆ, “ಬೆಳೆಯು ಹೇರಳವಾಗಿದೆ, ಕೊಯ್ಲುಗಾರರು ಕೆಲವರೂ ಮಾತ್ರ ಇದ್ದಾರೆ; ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸಬೇಕೆಂದು ಬೆಳೆಯ ಯಜಮಾನನನ್ನು ಬೇಡಿಕೊಳ್ಳಿರಿ.

ಹೋಗಿರಿ, ತೋಳಗಳ ನಡುವೆ ಕುರಿಮರಿಗಳಂತೆ ನಾನು ನಿಮ್ಮನ್ನು ಕಳುಹಿಸಿಕೊಡುತ್ತಿದ್ದೇನೆ. ನೋಡಿರಿ, ನೀವು ಹೋಗುವಾಗ ಹಣದ ಚೀಲವನ್ನಾಗಲಿ, ಪ್ರವಾಸದ ಚೀಲವನ್ನಾಗಲಿ, ಕಾಲಿಗೆ ಕೆರಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ. ದಾರಿಯಲ್ಲಿ ಯಾರಿಗೂ ವಂದಿಸಬೇಡಿರಿ.

ಆದರೆ ನೀವು ಯಾವ ಊರಿಗಾದರೂ ಹೋದ ಮೇಲೆ ಆ ಜನರು ನಿಮ್ಮನ್ನು ಸ್ವೀಕರಿಸದ್ದಿದ್ದರೆ, ನೀವು ಆ ಊರ ಬೀದಿಗಳಿಗೆ ಬಂದು, ‘ನಮ್ಮ ಪಾದಗಳಿಗೆ ಅಂಟಿರುವ ನಿಮ್ಮ ಊರಿನ ಧೂಳನ್ನು ಕೂಡ ನಿಮ್ಮ ವಿರುದ್ಧವಾಗಿ ಝಾಡಿಸಿಬಿಡುತ್ತೇವೆ. ಆದಾಗ್ಯೂ ದೇವರ ರಾಜ್ಯವು ಸಮೀಪಿಸಿದೆ ಎಂಬುದನ್ನು ಮಾತ್ರ ನೀವು ಗಮನದಲ್ಲಿಡಿ’ ಎಂಬುದಾಗಿ ಹೇಳಿರಿ. ಆ ದಿನದಲ್ಲಿ ಅಂತಹ ಊರಿನ ಗತಿಯು ಸೊದೋಮ್ ಊರಿನ ಗತಿಗಿಂತಲೂ ಕಠಿಣವಾಗಿರುವುದು ಎಂದು ನಿಮಗೆ ಹೇಳುತ್ತೇನೆ.

ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನು ಕೇಳುವವನಾಗಿದ್ದಾನೆ, ನಿಮ್ಮನ್ನು ತಿರಸ್ಕರಿಸುವವನು ನನ್ನನ್ನು ತಿರಸ್ಕರಿಸುವವನಾಗಿದ್ದಾನೆ, ನನ್ನನ್ನು ತಿರಸ್ಕಾರ ಮಾಡುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ತಿರಸ್ಕಾರ ಮಾಡುವವನಾಗಿದ್ದಾನೆ” ಅಂದನು.

ನ್ಯಾಯ ವಿಚಾರಣೆಯಲ್ಲಿ ನಿನೆವೆ ಪಟ್ಟಣದವರು ಈ ಸಂತತಿಯವರೊಂದಿಗೆ ನಿಂತು ಇವರನ್ನು ಅಪರಾಧಿಗಳೆಂದು ಖಂಡಿಸುವರು. ಅವರು ಯೋನನು ಸಾರಿದ ವಾಕ್ಯವನ್ನು ಕೇಳಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡರು. ಆದರೆ ಇಗೋ, ಯೋನನಿಗಿಂತಲೂ ಉನ್ನತನಾದವನು ಇಲ್ಲಿದ್ದಾನೆ.

“ನಾನು ನಿಮಗೆ ಹೇಳುತ್ತೇನೆ, ಯಾವನು ಮನುಷ್ಯರ ಮುಂದೆ ತಾನು ನನ್ನವನೆಂದು ಒಪ್ಪಿಕೊಳ್ಳುತ್ತಾನೋ, ಮನುಷ್ಯಕುಮಾರನು ಸಹ ಆ ವ್ಯಕ್ತಿಯನ್ನು ದೇವದೂತರ ಮುಂದೆ ತನ್ನವನೆಂದು ಒಪ್ಪಿಕೊಳ್ಳುವನು. ಆದರೆ ಯಾವನು ಮನುಷ್ಯರ ಮುಂದೆ ತಾನು ನನ್ನವನಲ್ಲವೆಂದು ಹೇಳುವನೋ ಅವನನ್ನು ನಾನು ದೇವದೂತರ ಮುಂದೆ ನನ್ನವನಲ್ಲವೆಂದು ಹೇಳುವೆನು.

ಅವರು ನಿಮ್ಮನ್ನು ಸಭಾಮಂದಿರಗಳಿಗೂ, ಸಭಾಮಂದಿರಗಳ ಅಧಿಕಾರಿಗಳ ಎದುರಿಗೂ, ಅಧಿಪತಿಗಳ ಎದುರಿಗೂ, ಹಿಡಿದುಕೊಂಡು ಹೋಗುವಾಗ ಹೇಗೆ ಉತ್ತರ ಕೊಡಬೇಕು? ಏನು ಉತ್ತರ ಕೊಡಬೇಕು? ಏನು ಹೇಳಬೇಕು? ಎಂದು ಚಿಂತೆಮಾಡಬೇಡಿರಿ. ಏಕೆಂದರೆ ನೀವು ಹೇಳತಕ್ಕದ್ದನ್ನು ಪವಿತ್ರಾತ್ಮನು ಆ ಗಳಿಗೆಯಲ್ಲಿಯೇ ನಿಮಗೆ ಕಲಿಸಿಕೊಡುವನು” ಅಂದನು.

ನಿಮಗಿರುವುದನ್ನು ಮಾರಿಬಿಟ್ಟು ದಾನಧರ್ಮ ಮಾಡಿರಿ. ನಶಿಸದ ಹಣಚೀಲಗಳನ್ನು ಗಳಿಸಿಕೊಳ್ಳಿರಿ. ಪರಲೋಕದಲ್ಲಿ ಲಯವಾಗದ ಸಂಪತ್ತನ್ನು ಇಟ್ಟುಕೊಳ್ಳಿರಿ. ಅದನ್ನು ಕದಿಯುವುದಕ್ಕೆ ಕಳ್ಳನು ಸಮೀಪಕ್ಕೆ ಬರಲಾರನು. ಅವು ನುಸಿ ಹಿಡಿದು ನಾಶವಾಗುವುದಿಲ್ಲ. ನಿಮ್ಮ ಗಂಟು ಇದ್ದಲ್ಲಿಯೇ ನಿಮ್ಮ ಮನಸ್ಸು ಇರುತ್ತದಷ್ಟೆ.

ನಾನು ಭೂಮಿಯಲ್ಲಿ ಸಮಾಧಾನವನ್ನುಂಟು ಮಾಡುವುದಕ್ಕೆ ಬಂದೆನೆಂದು ಭಾವಿಸುತ್ತೀರೋ? ಅದಕ್ಕೆ ಬರಲಿಲ್ಲ, ಭಿನ್ನಭೇದಗಳನ್ನು ಉಂಟುಮಾಡುವದಕ್ಕೆ ಬಂದೆನೆಂದು ನಿಮಗೆ ಒತ್ತಿ ಹೇಳುತ್ತೇನೆ. ಹೇಗೆಂದರೆ, ಒಂದೇ ಮನೆಯಲ್ಲಿರುವ ಐದು ಮಂದಿಯೊಳಗೆ ಇಬ್ಬರಿಗೆ ವಿರೋಧವಾಗಿ ಮೂವರು, ಮೂವರಿಗೆ ವಿರೋಧವಾಗಿ ಇಬ್ಬರೂ ಏಳುವರು. ಮಗನಿಗೆ ವಿರೋಧವಾಗಿ ತಂದೆಯು, ತಂದೆಗೆ ವಿರೋಧವಾಗಿ ಮಗನು, ಮಗಳಿಗೆ ವಿರೋಧವಾಗಿ ತಾಯಿಯು, ತಾಯಿಗೆ ವಿರೋಧವಾಗಿ ಮಗಳು, ಸೊಸೆಗೆ ವಿರೋಧವಾಗಿ ಅತ್ತೆಯು. ಅತ್ತೆಗೆ ವಿರೋಧವಾಗಿ ಸೊಸೆಯು ಪರಸ್ಪರ ಭಿನ್ನಭೇದವುಳ್ಳವರಾಗಿ ವಿಂಗಡಿಸಿ ಹೋಗುವರು” ಅಂದನು.

ಹಾಗಲ್ಲವೆಂದು ನಿಮಗೆ ಹೇಳುತ್ತೇನೆ. ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನೀವೆಲ್ಲರೂ ಅವರಂತೆ ನಾಶವಾಗುವಿರಿ” ಎಂದು ಹೇಳಿದನು.

ಯೇಸು ಅವನಿಗೆ ಹೇಳಿದ್ದೇನಂದರೆ, “ಒಬ್ಬ ಮನುಷ್ಯನು ಮಹಾ ಔತಣ ಮಾಡಿಸಿ ಅನೇಕರನ್ನು ಆಮಂತ್ರಿಸಿದನು. ಊಟವು ಸಿದ್ಧವಾದಾಗ, ಅವನು ಊಟಕ್ಕೆ ಆಹ್ವಾನಿಸಲ್ಪಟ್ಟವರ ಬಳಿಗೆ ಬಂದು, ‘ಈಗ ಔತಣವು ಸಿದ್ಧವಾಗಿದೆ ಊಟಕ್ಕೆ ಬರಬೇಕು’ ಎಂದು ಹೇಳುವುದಕ್ಕೆ ತನ್ನ ಆಳನ್ನು ಕಳುಹಿಸಿದನು. ಆದರೆ ಅವರೆಲ್ಲರೂ ಒಂದೇ ಮನಸ್ಸಿನಿಂದ ನೆವ ಹೇಳುವುದಕ್ಕೆ ತೊಡಗಿದರು. ಮೊದಲನೆಯವನು ಆ ಆಳನ್ನು ನೋಡಿ, ‘ನಾನು ಒಂದು ಹೊಲವನ್ನು ಕ್ರಯಕ್ಕೆ ತೆಗೆದುಕೊಂಡಿದ್ದೇನೆ, ಅದನ್ನು ಹೋಗಿ ನೋಡಬೇಕಾಗಿದೆ. ನನ್ನನ್ನು ಕ್ಷಮಿಸಬೇಕು’ ಎಂದು ಕೇಳಿಕೊಂಡನು. ಮತ್ತೊಬ್ಬನು, ‘ನಾನು ಐದು ಜೋಡಿ ಎತ್ತುಗಳನ್ನು ಕೊಂಡುಕೊಂಡಿದ್ದೇನೆ, ಅವುಗಳನ್ನು ಪರೀಕ್ಷಿಸುವುದಕ್ಕೆ ಹೋಗುತ್ತಿದ್ದೇನೆ, ನನ್ನನ್ನು ಕ್ಷಮಿಸಬೇಕು’ ಎಂದು ಕೇಳಿಕೊಂಡನು. ಇನ್ನೊಬ್ಬನು, ‘ನಾನು ಮದುವೆಮಾಡಿಕೊಂಡಿದ್ದೇನೆ, ಆದುದರಿಂದ ನಾನು ಬರುವುದಕ್ಕಾಗುವುದಿಲ್ಲ’ ಅಂದನು. ಆ ಆಳು ಬಂದು ತನ್ನ ಯಜಮಾನನಿಗೆ ಈ ಸಂಗತಿಗಳನ್ನು ತಿಳಿಸಲು ಮನೆಯ ಯಜಮಾನನು ಸಿಟ್ಟುಗೊಂಡು ಆಳಿಗೆ, ‘ನೀನು ತಟ್ಟನೆ ಈ ಊರಿನ ಬೀದಿಬೀದಿಗೂ ಸಂದುಸಂದಿಗೂ ಹೋಗಿ ಬಡವರು, ಅಂಗಹೀನರು, ಕುರುಡರು, ಕುಂಟರು, ಇಂಥವರನ್ನು ಇಲ್ಲಿಗೆ ಕರೆದುಕೊಂಡು ಬಾ’ ಎಂದು ಹೇಳಿದನು. ಬಳಿಕ ಆ ಆಳು, ‘ಅಯ್ಯಾ, ನೀನು ಅಪ್ಪಣೆಕೊಟ್ಟಂತೆ ಮಾಡಿದ್ದಾಯಿತು. ಆದರೂ ಇನ್ನೂ ಸ್ಥಳ ಉಳಿದಿದೆ’ ಅಂದನು. ಆಗ ಆ ಯಜಮಾನನು ತನ್ನ ಆಳಿಗೆ ಹೇಳಿದ್ದೇನೆಂದರೆ, ‘ನೀನು ಹಾದಿಗಳಿಗೂ ಬೀದಿಗಳಿಗೂ ಹೋಗಿ ಅಲ್ಲಿ ಸಿಕ್ಕಿದವರನ್ನು ಬಲವಂತಮಾಡಿ ಒಳಕ್ಕೆ ಕರೆದುಕೊಂಡು ಬಾ, ನನ್ನ ಮನೆ ತುಂಬಲಿ. ಆದರೆ ಔತಣಕ್ಕೆ ಮೊದಲು ಆಮಂತ್ರಿಸಲ್ಪಟ್ಟವರಲ್ಲಿ ಒಬ್ಬನಾದರೂ ನಾನು ಮಾಡಿಸಿದ ಅಡಿಗೆಯ ರುಚಿಯನ್ನು ಸವಿಯಬಾರದು’ ಎಂದು ನಿಮಗೆ ಹೇಳುತ್ತೇನೆ” ಅಂದನು.

“ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆತಾಯಿ, ಹೆಂಡತಿ, ಮಕ್ಕಳು, ಅಣ್ಣತಮ್ಮಂದಿರು, ಅಕ್ಕತಂಗಿಯರು ಇವರನ್ನೂ ತನ್ನ ಪ್ರಾಣವನ್ನು ಸಹ ಹಗೆಮಾಡದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು. ಯಾವನಾದರೂ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರದ ಹೊರತು ಅವನು ನನ್ನ ಶಿಷ್ಯನಾಗಿರಲಾರನು.

ಹಾಗೆಯೇ ನಿಮ್ಮಲ್ಲಿ ಯಾವನೇ ಆಗಲಿ ತನಗಿರುವುದನ್ನೆಲ್ಲಾ ಬಿಟ್ಟುಬಿಡದೆ ಹೋದರೆ ಅವನು ನನ್ನ ಶಿಷ್ಯನಾಗಿರಲಾರನು. “ಉಪ್ಪಂತೂ ಒಳ್ಳೆಯ ಪದಾರ್ಥವೇ. ಉಪ್ಪು ಸಪ್ಪಗಾದರೆ ಅದಕ್ಕೆ ಇನ್ನಾತರಿಂದ ರುಚಿಬರಿಸಲು ಸಾಧ್ಯ?

ಅದರಂತೆ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವುದಕ್ಕೆ ಅವಶ್ಯವಿಲ್ಲದ ತೊಂಬತ್ತೊಂಬತ್ತು ಮಂದಿ ನೀತಿವಂತರಿಗಿಂತ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯವಾಗಿ ಪರಲೋಕದಲ್ಲಿ ಹೆಚ್ಚು ಸಂತೋಷವುಂಟಾಗುವುದೆಂದು ನಿಮಗೆ ಹೇಳುತ್ತೇನೆ.

ಅದರಂತೆ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯದಲ್ಲಿ ದೇವದೂತರ ಮುಂದೆ ಸಂತೋಷವಾಗುವುದೆಂದು ನಿಮಗೆ ಹೇಳುತ್ತೇನೆ” ಅಂದನು.

ಮನುಷ್ಯಕುಮಾರನು ದಾರಿತಪ್ಪಿ ಹೋದದ್ದನ್ನು ಹುಡುಕಿ ರಕ್ಷಿಸುವುದಕ್ಕೆ ಬಂದನು” ಎಂದು ಹೇಳಿದನು.

ಆ ದಿನಗಳಲ್ಲಿ ಒಂದು ದಿನ ಆತನು ದೇವಾಲಯದಲ್ಲಿ ಜನರಿಗೆ ಉಪದೇಶಮಾಡುತ್ತಾ ಸುವಾರ್ತೆಯನ್ನು ಸಾರುತ್ತಿರಲಾಗಿ ಮುಖ್ಯಯಾಜಕರೂ ಶಾಸ್ತ್ರಿಗಳೂ ಸಭೆಯ ಹಿರಿಯರನ್ನು ಕೂಡಿಸಿಕೊಂಡು ಫಕ್ಕನೆ ಬಂದು,

ಆದರೆ ಇವೆಲ್ಲಾ ನಡೆಯುವುದಕ್ಕಿಂತ ಮುಂಚೆ ಅವರು ನಿಮ್ಮನ್ನು ಹಿಡಿದು ಸಭಾಮಂದಿರಗಳ ಮತ್ತು ಸೆರೆಮನೆಯ ಅಧಿಕಾರಿಗಳ ವಶಕ್ಕೆ ಕೊಟ್ಟು, ನನ್ನ ಹೆಸರಿನ ನಿಮಿತ್ತವಾಗಿ ಅರಸುಗಳ ಮುಂದೆಯೂ ಅಧಿಪತಿಗಳ ಮುಂದೆಯೂ ಕರೆದುಕೊಂಡುಹೋಗಿ ಹಿಂಸೆಪಡಿಸುವರು. ಇದು ಸಾಕ್ಷಿಹೇಳುವುದಕ್ಕೆ ನಿಮಗೆ ಅನುಕೂಲವಾಗುವುದು.

ಆದುದರಿಂದ ಏನು ಉತ್ತರ ಕೊಡಬೇಕೆಂಬ ವಿಷಯದಲ್ಲಿ ನೀವು ಮುಂದಾಗಿ ಯೋಚಿಸುವುದಿಲ್ಲವೆಂದು ನಿಮ್ಮ ಮನಸ್ಸಿನಲ್ಲಿ ನಿಶ್ಚಯಮಾಡಿಕೊಳ್ಳಿರಿ. ಏಕೆಂದರೆ ನಿಮ್ಮ ವಿರೋಧಿಗಳೆಲ್ಲರೂ ಎದುರು ನಿಲ್ಲುವುದಕ್ಕೂ ಎದುರು ಮಾತನಾಡುವುದಕ್ಕೂ ಆಗದಂಥ ಬಾಯನ್ನೂ, ಬುದ್ಧಿಯನ್ನೂ ನಾನೇ ನಿಮಗೆ ಕೊಡುತ್ತೇನೆ.

ಆದರೆ ತಂದೆತಾಯಿಗಳೂ, ಅಣ್ಣತಮ್ಮಂದಿರೂ, ಬಂಧುಬಾಂಧವರೂ. ಸ್ನೇಹಿತರೂ ನಿಮ್ಮನ್ನು ಅವರಿಗೆ ಒಪ್ಪಿಸಿಕೊಡುವರು ಮತ್ತು ನಿಮ್ಮಲ್ಲಿ ಕೆಲವರನ್ನು ಕೊಲ್ಲಿಸುವರು. ಇದಲ್ಲದೆ ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ಹಗೆಮಾಡುವರು.

ಮತ್ತು ಆತನು, “ನಿಮ್ಮನ್ನು ನಾನು ಹಣ, ಕೈಚೀಲ ಜೋಡುಗಳಿಲ್ಲದೆ ಕಳುಹಿಸಿದಾಗ ನಿಮಗೆ ಏನಾದರೂ ಕೊರತೆಯಾಯಿತೋ?” ಎಂದು ಕೇಳಲು ಅವರು ಏನೂ ಇಲ್ಲವೆಂದು ಉತ್ತರಕೊಟ್ಟರು. ಅದಕ್ಕೆ ಆತನು, “ಈಗಲಾದರೋ ಹಣವಿದ್ದವನು ಅದನ್ನು ತೆಗೆದುಕೊಳ್ಳಲಿ, ಕೈಚೀಲವಿರುವವನು ಅದನ್ನು ತೆಗೆದುಕೊಳ್ಳಲಿ, ಮತ್ತು ಕತ್ತಿಯಿಲ್ಲದವನು ತನ್ನ ಮೇಲಂಗಿಯನ್ನು ಮಾರಿ ಒಂದು ಕತ್ತಿಯನ್ನು ಕೊಂಡುಕೊಳ್ಳಲಿ.

ಅದಲ್ಲದೆ ಜನರು ಪಾಪಕ್ಷಮಾಪಣೆಗೋಸ್ಕರ ಪಶ್ಚಾತ್ತಾಪಟ್ಟು, ದೇವರ ಕಡೆಗೆ ತಿರುಗಿಕೊಳ್ಳಬೇಕೆಂಬ ಈ ಸುವಾರ್ತೆಯು ಯೆರೂಸಲೇಮ್ ಮೊದಲುಗೊಂಡು ಸಮಸ್ತ ದೇಶದವರಿಗೂ ಆತನ ಹೆಸರಿನಲ್ಲಿ ಸಾರಲ್ಪಡಬೇಕು’ ಎಂದು ಬರೆದದೆ. ಇವುಗಳ ವಿಷಯದಲ್ಲಿ ನೀವೇ ಸಾಕ್ಷಿ ಹೇಳುವವರಾಗಿದ್ದೀರಿ.

ಆದರೂ ಯಾರಾರು ಆತನನ್ನು ಸ್ವೀಕರಿಸಿದರೋ, ಅಂದರೆ ಆತನ ಹೆಸರಿನಲ್ಲಿ ನಂಬಿಕೆಯಿಟ್ಟರೋ ಅವರಿಗೆ ದೇವರ ಮಕ್ಕಳಾಗುವ ಅಧಿಕಾರವನ್ನು ಆತನು ಕೊಟ್ಟನು. ಇವರು ರಕ್ತಸಂಬಂಧದಿಂದಾಗಲಿ, ಶರೀರದ ಇಚ್ಛೆಯಿಂದಾಗಲಿ, ಪುರುಷ ಸಂಕಲ್ಪದಿಂದಾಗಲಿ ಹುಟ್ಟಿದವರಲ್ಲ; ದೇವರಿಂದಲೇ ಹುಟ್ಟಿದವರು.

ಮರುದಿನ ಯೇಸು ಗಲಿಲಾಯಕ್ಕೆ ಹೋಗಬೇಕೆಂದಿರುವಾಗ ಫಿಲಿಪ್ಪನನ್ನು ಕಂಡು, “ನನ್ನನ್ನು ಹಿಂಬಾಲಿಸು” ಎಂದನು.

ಯೇಸು ಅವನಿಗೆ, “ನಾನು ನಿಜನಿಜವಾಗಿ ಹೇಳುತ್ತೇನೆ, ಒಬ್ಬನುಹೊಸದಾಗಿ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು,” ಎಂದು ಉತ್ತರ ಕೊಟ್ಟನು. ನಿಕೊದೇಮನು ಆತನನ್ನು, “ಮನುಷ್ಯನು ಮುದುಕನಾದ ಮೇಲೆ ತಿರುಗಿ ಹುಟ್ಟುವುದು ಹೇಗೆ? ಅವನು ತನ್ನ ತಾಯಿಯ ಗರ್ಭದಲ್ಲಿ ಎರಡನೆಯ ಸಾರಿ ಪ್ರವೇಶಿಸಿ ಹುಟ್ಟುವುದಕ್ಕಾದೀತೇ?” ಎಂದು ಕೇಳಿದನು. ಅದಕ್ಕೆ ಯೇಸು “ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ನೀರಿನಿಂದಲೂ ಮತ್ತು ಆತ್ಮನಿಂದಲೂ ಹುಟ್ಟದಿದ್ದರೆ ಅವನು ದೇವರ ರಾಜ್ಯದಲ್ಲಿ ಪ್ರವೇಶಿಸಲಾರನು. ದೇಹದಿಂದ ಹುಟ್ಟಿದ್ದು ದೇಹವೇ, ಆತ್ಮನಿಂದ ಹುಟ್ಟಿದ್ದು ಆತ್ಮವೇ. ‘ನೀವು ಹೊಸದಾಗಿ ಹುಟ್ಟಬೇಕು’ ಎಂದು ನಾನು ನಿನಗೆ ಹೇಳಿದ್ದರಿಂದ ಆಶ್ಚರ್ಯಪಡಬೇಡ ಗಾಳಿಯು ಇಷ್ಟ ಬಂದ ಕಡೆ ಬೀಸುತ್ತದೆ. ನೀನು ಅದರ ಶಬ್ದವನ್ನು ಕೇಳುತ್ತೀ, ಆದರೆ ಅದು ಎಲ್ಲಿಂದ ಬರುತ್ತದೋ ಎಲ್ಲಿಗೆ ಹೋಗುತ್ತದೋ ನಿನಗೆ ತಿಳಿಯದು. ಆತ್ಮನಿಂದ ಹುಟ್ಟಿದವರೆಲ್ಲರೂ ಅದರಂತೆಯೇ” ಎಂದನು.

ನಿನಗೆ ನಿಜನಿಜವಾಗಿ ಹೇಳುತ್ತೇನೆ, ನಾವು ತಿಳಿದಿರುವುದನ್ನು ಮಾತನಾಡುತ್ತೇವೆ ಮತ್ತು ನೋಡಿದ್ದಕ್ಕೆ ಸಾಕ್ಷಿ ಕೊಡುತ್ತೇವೆ. ಆದರೂ ನೀವು ನಮ್ಮ ಸಾಕ್ಷಿಯನ್ನು ಸ್ವೀಕರಿಸುವುದಿಲ್ಲ. ನಾನು ಭೂಲೋಕದ ಕಾರ್ಯಗಳನ್ನು ಕುರಿತು ನಿಮಗೆ ಹೇಳಿದರೆ ನೀವು ನಂಬುವುದಿಲ್ಲ, ಪರಲೋಕದ ಕಾರ್ಯಗಳನ್ನು ಕುರಿತು ನಿಮಗೆ ಹೇಳಿದರೆ ಹೇಗೆ ನಂಬುವಿರಿ?

“ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು. ದೇವರು ತನ್ನ ಮಗನ ಮುಖಾಂತರ ಲೋಕಕ್ಕೆ ರಕ್ಷಣೆಯಾಗಬೇಕೆಂದು ಆತನನ್ನು ಕಳುಹಿಸಿಕೊಟ್ಟನೇ ಹೊರತು ಅಪರಾಧಿಯೆಂದು ಖಂಡಿಸಲಿಕ್ಕೆ ಕಳುಹಿಸಲಿಲ್ಲ. ಆತನನ್ನು ನಂಬುವವನಿಗೆ ನ್ಯಾಯತೀರ್ಪು ಆಗುವುದಿಲ್ಲ, ಆದರೆ ನಂಬದವನಿಗೆ ಆಗಲೇ ತೀರ್ಪಾಯಿತು. ಏಕೆಂದರೆ, ಅವನು ದೇವರ ಒಬ್ಬನೇ ಮಗನ ಹೆಸರಿನ ಮೇಲೆ ನಂಬಿಕೆ ಇಡಲಿಲ್ಲ. ಆ ತೀರ್ಪು ಏನೆಂದರೆಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕೃತ್ಯಗಳು ಕೆಟ್ಟವುಗಳಾಗಿರುವುದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಪ್ರೀತಿಸಿದರು. ಕೆಟ್ಟದ್ದನ್ನು ಮಾಡುವವರು ತಮ್ಮ ದುಷ್ಕೃತ್ಯಗಳು ಬಹಿರಂಗವಾಗಬಾರದೆಂದು ಬೆಳಕಿಗೆ ಬರುವುದಿಲ್ಲ ಮತ್ತು ಬೆಳಕನ್ನು ದ್ವೇಷಿಸುತ್ತಾರೆ. ಆದರೆ ಸತ್ಯವನ್ನು ಅನುಸರಿಸಿ ನಡೆಯುವವನು ತಾನು ದೇವರಿಂದ ನಡಿಸಿಕೊಂಡು ಬಂದವನಾಗಿ ತನ್ನ ಕೃತ್ಯಗಳನ್ನು ಪ್ರಕಟಪಡಿಸುವುದಕ್ಕಾಗಿ ಬೆಳಕಿಗೆ ಬರುತ್ತಾನೆ.”

ಆತನ ಮಗನನ್ನು ನಂಬುವವನಿಗೆ ನಿತ್ಯಜೀವ ಉಂಟು. ಮಗನಿಗೆ ಅವಿಧೇಯನಾಗುವವನು ಜೀವವನ್ನು ಕಾಣುವುದೇ ಇಲ್ಲ. ಆದರೆ ದೇವರ ಕೋಪವು ಅವನ ಮೇಲೆ ನೆಲೆಗೊಂಡಿರುವುದು.”

‘ಇನ್ನೂ ನಾಲ್ಕು ತಿಂಗಳುಗಳಾದ ಮೇಲೆ ಸುಗ್ಗಿಯು ಬರುವುದೆಂದು ನೀವು ಹೇಳುವುದುಂಟಷ್ಟೆ’? ಇಗೋ, ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ಹೊಲಗಳನ್ನು ನೋಡಿರಿ. ಅವು ಬಲಿತು ಬೆಳ್ಳಗಾಗಿ ಕೊಯ್ಲಿಗೆ ಸಿದ್ಧವಾಗಿದೆಯೆಂದು ನಿಮಗೆ ಹೇಳುತ್ತೇನೆ. ಕೊಯ್ಯುವವನಿಗೆ ಈಗಲೇ ಕೂಲಿ ದೊರೆಯುತ್ತದೆ. ಅವನು ನಿತ್ಯಜೀವಕ್ಕೆ ಫಲವನ್ನು ಕೂಡಿಸಿಡುತ್ತಾನೆ. ಹೀಗೆ ಬಿತ್ತುವವನಿಗೂ ಮತ್ತು ಕೊಯ್ಯುವವನಿಗೂ ಒಟ್ಟಿಗೆ ಸಂತೋಷವಾಗುವುದು. ‘ಬಿತ್ತುವವನೊಬ್ಬನು, ಕೊಯ್ಯುವವನು ಬೇರೊಬ್ಬನು’ ಎಂದು ಹೇಳುವ ಮಾತು ಇದರಲ್ಲಿ ಸತ್ಯವಾಗಿದೆ. ನೀವು ಪ್ರಯಾಸ ಪಡದಂಥ ಬೆಳೆಯನ್ನು ಕೊಯ್ಯುವುದಕ್ಕೆ ನಾನು ನಿಮ್ಮನ್ನು ಕಳುಹಿಸಿದೆನು, ಬೇರೊಬ್ಬರು ಪ್ರಯಾಸಪಟ್ಟರು, ನೀವು ಅವರ ಕಷ್ಟದಲ್ಲಿ ಸೇರಿದ್ದೀರಿ” ಎಂದು ಹೇಳಿದನು.

ನಿಮಗೆ ನಿಜನಿಜವಾಗಿ ಹೇಳುತ್ತೇನೆ ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿದಾತನನ್ನು ನಂಬುವವನು ನಿತ್ಯ ಜೀವವನ್ನು ಹೊಂದಿದ್ದಾನೆ, ಅವನು ಖಂಡನೆಗೆ ಗುರಿಯಾಗುವುದಿಲ್ಲ, ಮರಣದಿಂದ ಪಾರಾಗಿ ಜೀವದಲ್ಲಿ ಸೇರಿದ್ದಾನೆ.

ಆದುದರಿಂದ ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರೆಂದು ನಿಮಗೆ ನಾನು ಹೇಳಿದೆನು. ನೀವುನನ್ನನ್ನು ಯಾರೆಂದು ನಂಬದೆ ಹೋದರೆ ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ” ಎಂದು ಹೇಳಿದನು.

ಆಗ ಯೇಸು ತನ್ನನ್ನು ನಂಬಿದ ಯೆಹೂದ್ಯರಿಗೆ, “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡಿರುವುದಾದರೆ, ನಿಜವಾಗಿಯೂ ನೀವು ನನ್ನ ಶಿಷ್ಯರಾಗಿರುವಿರಿ. ಇದಲ್ಲದೆ ನೀವು ಸತ್ಯವನ್ನು ತಿಳಿದುಕೊಳ್ಳುವಿರಿ ಮತ್ತು ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವುದು” ಎಂದು ಹೇಳಿದನು.

ನನ್ನನ್ನು ಕಳುಹಿಸಿದಾತನ ಕ್ರಿಯೆಗಳನ್ನು ನಾವು ಹಗಲಿರುವಾಗಲೇ ಮಾಡಬೇಕು. ರಾತ್ರಿ ಬರುತ್ತದೆ, ಅದು ಬಂದಾಗ ಯಾರೂ ಕೆಲಸ ಮಾಡಲಾರರು.

“ನಿಮಗೆನಿಜನಿಜವಾಗಿ ಹೇಳುತ್ತೇನೆ, ಕುರಿಹಟ್ಟಿಯೊಳಗೆ ಬಾಗಿಲಿನಿಂದ ಬಾರದೆ, ಬೇರೆ ಕಡೆಯಿಂದ ಹತ್ತಿ ಬರುವವನು ಕಳ್ಳನೂ, ದರೋಡೆಕೋರನೂ ಆಗಿದ್ದಾನೆ.

ನನ್ನನ್ನು ತಿರಸ್ಕರಿಸಿ ನನ್ನ ಮಾತುಗಳನ್ನು ಸ್ವೀಕರಿಸದೆ ಇರುವವನಿಗೆ ತೀರ್ಪುಮಾಡುವಂಥದ್ದು ಒಂದು ಇದೆ. ಅದು ನಾನು ಆಡುವ ಮಾತೇ, ಕಡೆಯ ದಿನದಲ್ಲಿ ಅದೇ ಅವನಿಗೆ ತೀರ್ಪುಮಾಡುವುದು. ಏಕೆಂದರೆ ಇದನ್ನು ನನ್ನಷ್ಟಕ್ಕೆ ನಾನೇ ಮಾತನಾಡುತ್ತಿಲ್ಲ. ನನ್ನನ್ನು ಕಳುಹಿಸಿ ಕೊಟ್ಟ ತಂದೆಯೇ, ನಾನು ಏನು ಹೇಳಬೇಕು ಮತ್ತು ಹೇಗೆ ಮಾತನಾಡಬೇಕು, ಎಂಬುದಾಗಿ ನನಗೆ ಆಜ್ಞಾಪಿಸಿದ್ದಾನೆ.

ಯೇಸು ಅವನಿಗೆ, “ನಾನೇ ಮಾರ್ಗವೂ, ಸತ್ಯವೂ ಮತ್ತುಜೀವವೂ ಆಗಿದ್ದೇನೆ. ನನ್ನ ಮೂಲಕವಲ್ಲದೆ ಯಾರೂ ತಂದೆಯ ಬಳಿಗೆ ಬರಲಾರರು.

ಆದರೆ ಯೇಸುವೇ ದೇವಕುಮಾರನಾದ ಕ್ರಿಸ್ತನೆಂದು ನೀವು ನಂಬುವಂತೆಯೂ, ನಂಬಿ ಆತನ ಹೆಸರಿನಲ್ಲಿ ನಿತ್ಯ ಜೀವವನ್ನು ಪಡೆದುಕೊಳ್ಳುವಂತೆಯೂ ಇಷ್ಟೆಲ್ಲಾ ಬರೆದಿದೆ.

ಆತನು ಅವರಿಗೆ, “ನೀವು ದೋಣಿಯ ಬಲಗಡೆಯಲ್ಲಿ ಬಲೆಯನ್ನು ಬೀಸಿರಿ; ಆಗ ನಿಮಗೆ ಸಿಕ್ಕುತ್ತವೆ” ಎಂದು ಹೇಳಿದನು. ಅವರು ಬಲೆ ಬೀಸಿದಾಗ ಮೀನುಗಳು ರಾಶಿ ರಾಶಿಯಾಗಿ ಬಲೆಗೆ ಬಂದು ಸೇರಿದ್ದರಿಂದ, ಅವರಿಗೆ ಬಲೆಯನ್ನು ಎಳೆಯುವುದಕ್ಕೆ ಸಾಧ್ಯವಾಗದೆ ಹೋಯಿತು. ಆಗ ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು ಪೇತ್ರನಿಗೆ, “ಆತನು ಕರ್ತನೇ” ಎಂದು ಹೇಳಿದನು. ಸೀಮೋನ್ ಪೇತ್ರನು ಅದನ್ನು ಕೇಳಿ ತಾನು ತೆಗೆದು ಬಿಟ್ಟಿದ್ದ ತನ್ನ ಮೇಲಂಗಿಯನ್ನು ಸುತ್ತಿಕೊಂಡು ಸಮುದ್ರದೊಳಗೆ ಧುಮುಕಿದನು. ದಡವು ದೂರವಿರಲಿಲ್ಲ, ಹೆಚ್ಚು ಕಡಿಮೆ ಇನ್ನೂರು ಅಡಿ ದೂರವಿತ್ತು. ಉಳಿದ ಶಿಷ್ಯರು ಮೀನು ತುಂಬಿದ್ದ ಆ ಬಲೆಯನ್ನು ಎಳೆಯುತ್ತಾ ದೋಣಿಯಲ್ಲಿಯೇ ಬಂದರು. ಅವರು ದಡಕ್ಕೆ ಬಂದು ಸೇರಿದಾಗ, ಕೆಂಡಗಳನ್ನೂ ಅವುಗಳ ಮೇಲೆ ಇಟ್ಟಿದ್ದ ಮೀನುಗಳನ್ನು ಮತ್ತು ರೊಟ್ಟಿಯನ್ನು ಕಂಡರು. ಯೇಸು ಅವರಿಗೆ, “ನೀವು ಈಗ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿರಿ” ಎಂದು ಹೇಳಲು, ಸೀಮೋನ್ ಪೇತ್ರನು ದೋಣಿಯನ್ನು ಹತ್ತಿ ಬಲೆಯನ್ನು ದಡಕ್ಕೆ ಎಳದುಕೊಂಡು ಬಂದನು. ಅದು ನೂರೈವತ್ಮೂರು ದೊಡ್ಡ ಮೀನುಗಳಿಂದ ತುಂಬಿತ್ತು. ಅಷ್ಟು ಮೀನುಗಳು ಇದ್ದರೂ ಬಲೆಯು ಹರಿದಿರಲಿಲ್ಲ.

ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬರಲು ನೀವು ಶಕ್ತಿಯನ್ನು ಹೊಂದಿದವರಾಗಿ ಯೆರೂಸಲೇಮಿನಲ್ಲಿಯೂ, ಯೂದಾಯದ ಎಲ್ಲಾ ಸ್ಥಳದಲ್ಲಿಯು, ಸಮಾರ್ಯ ಸೀಮೆಗಳಲ್ಲಿಯೂ, ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರುವಿರಿ” ಅಂದನು.

ಆದರೂ ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದೆಂದು ದೇವರು ಹೇಳುತ್ತಾನೆ” ಎಂಬುದೇ.

ಪೇತ್ರನು ಅವರಿಗೆ, “ನಿಮ್ಮ ಪಾಪಗಳು ಕ್ಷಮಿಸಲ್ಪಡುವುದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರೂ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿಕೊಳ್ಳಲಿ, ಆಗ ನೀವು ಪವಿತ್ರಾತ್ಮದಾನವನ್ನು ಹೊಂದುವಿರಿ. ಆ ವಾಗ್ದಾನವು ನಿಮಗೂ, ನಿಮ್ಮ ಮಕ್ಕಳಿಗೂ, ಅಂತೂ ನಮ್ಮ ದೇವರಾಗಿರುವ ಕರ್ತನು ತನ್ನ ಕಡೆಗೆ ಕರೆಯುವ ದೂರದಲ್ಲಿರುವ ಎಲ್ಲರಿಗೂ ಇರುವುದಾಗಿದೆ” ಎಂದು ಹೇಳಿದನು. ಬೇರೆ ಅನೇಕ ವಿಧವಾದ ಮಾತುಗಳಿಂದ ಅವನು ಖಂಡಿತವಾಗಿ ಸಾಕ್ಷಿನುಡಿದು, “ಈ ದುಷ್ಟ ಪೀಳಿಗೆಯಿಂದ ನಿಮ್ಮನ್ನು ಸಂರಕ್ಷಿಸಿಕೊಳ್ಳಿರಿ” ಎಂದು ಅವರನ್ನು ಎಚ್ಚರಿಸಿದನು.

ಅವನ ಬೋಧನೆಯನ್ನು ಅಂಗೀಕರಿಸಿದ ಅನೇಕರು ದೀಕ್ಷಾಸ್ನಾನಮಾಡಿಸಿ ಕೊಂಡರು. ಆ ದಿನ ಸುಮಾರು ಮೂರು ಸಾವಿರ ಜನರು ಅವರೊಂದಿಗೆ ಸೇರಿಕೊಂಡರು.

ಅವರೆಲ್ಲರೂ ದೇವರನ್ನು ಕೊಂಡಾಡುವವರಾಗಿಯೂ, ಜನರೆಲ್ಲರ ದಯವನ್ನು ಹೊಂದುವವರಾಗಿಯೂ ಇದ್ದರು. ಕರ್ತನು ರಕ್ಷಣೆಯ ಮಾರ್ಗದಲ್ಲಿರುವವರನ್ನು ಪ್ರತಿದಿನ ಅವರೊಂದಿಗೆ ಸಭೆಗೆ ಸೇರಿಸುತ್ತಿದ್ದನು.

ಆದುದರಿಂದ ನಿಮ್ಮ ಪಾಪಗಳನ್ನು ಅಳಿಸಿಬಿಡುವ ಹಾಗೆ ನೀವು ಪಶ್ಚಾತ್ತಾಪಪಟ್ಟು ಆತನ ಕಡೆಗೆ ತಿರುಗಿಕೊಳ್ಳಿರಿ. ಹಾಗೆ ತಿರುಗಿದರೆ ಕರ್ತನ, ಸನ್ನಿಧಾನದಿಂದ ಪುನರುಜ್ಜೀವನದ ಕಾಲಗಳು ಒದಗಿ ಆತನು ನಿಮಗೆ ನೇಮಕವಾಗಿರುವ ಕ್ರಿಸ್ತನಾದ ಯೇಸುವನ್ನು ಕಳುಹಿಸಿಕೊಡುವನು. ಆದರೆ ಸಮಸ್ತವನ್ನು ಸರಿಮಾಡುವ ಕಾಲವು ಬರುವ ತನಕ ಪರಲೋಕವೇ ಕ್ರಿಸ್ತನ ಸ್ಥಾನವಾಗಿರಬೇಕು. ಆ ಕಾಲದ ವಿಷಯವಾಗಿ ದೇವರು ಪೂರ್ವದಲ್ಲಿದ್ದ ತನ್ನ ಪರಿಶುದ್ಧ ಪ್ರವಾದಿಗಳ ಮುಖಾಂತರ ಹೇಳಿಸಿದ್ದಾನೆ.

ಆದರೆ ವಾಕ್ಯವನ್ನು ಕೇಳಿದವರಲ್ಲಿ ಅನೇಕರು ನಂಬಿದರು; ಗಂಡಸರ ಸಂಖ್ಯೆ ಸುಮಾರು ಐದು ಸಾವಿರಕ್ಕೆ ಏರಿತು.

ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಗುವುದಿಲ್ಲ; ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರಿಗೆ ಕೊಟ್ಟಿರುವ ಮತ್ತ್ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವುದಿಲ್ಲ” ಎಂದು ಹೇಳಿದನು.

ಪೇತ್ರ ಮತ್ತು ಯೋಹಾನನ್ನು ಧೈರ್ಯದಿಂದ ಮಾತನಾಡುವುದನ್ನು ಆ ಜನರೆಲ್ಲರೂ ನೋಡಿ ಅವರು ಶಾಸ್ತ್ರಭ್ಯಾಸಮಾಡದ ಸಾಮಾನ್ಯರೆಂದು ತಿಳಿದು ಆಶ್ಚರ್ಯಪಟ್ಟರು.

ಆಗ ಅವರನ್ನು ಕರೆಯಿಸಿ ಯೇಸುವಿನ ಹೆಸರನ್ನು ಎಲ್ಲೂ ಎತ್ತಬಾರದು ಹಾಗು ಉಪದೇಶ ಮಾಡಬಾರದು ಎಂದು ಅವರಿಗೆ ಖಂಡಿತವಾಗಿ ಅಪ್ಪಣೆಕೊಟ್ಟರು. ಅದಕ್ಕೆ ಪೇತ್ರ ಮತ್ತು ಯೋಹಾನನ್ನು; ಅವರಿಗೆ “ದೇವರ ಮಾತನ್ನು ಕೇಳುವುದಕ್ಕಿಂತ ನಿಮ್ಮ ಮಾತನ್ನು ಕೇಳುವುದು ಸರಿಯೇ? ಅದು ದೇವರ ಮುಂದೆ ನ್ಯಾಯವೋ? ನೀವೇ ತೀರ್ಪು ಮಾಡಿಕೊಳ್ಳಿರಿ; ನಾವಂತೂ ಕಂಡು ಕೇಳಿದ್ದನ್ನು ಹೇಳದೆ ಇರಲಾರೆವು” ಎಂದು ಉತ್ತರಕೊಟ್ಟರು.

ಕರ್ತನೇ, ಈಗ ನೀನು ಅವರ ಬೆದರಿಕೆಗಳನ್ನು ನೋಡಿ ನಿನ್ನ ಪವಿತ್ರ ಸೇವಕನಾದ ಯೇಸುವಿನ ಹೆಸರಿನ ಮೂಲಕವಾಗಿ ರೋಗ ಪರಿಹಾರವೂ, ಸೂಚಕಕಾರ್ಯಗಳೂ, ಅದ್ಭುತಕಾರ್ಯಗಳೂ ಜರಗುವಂತೆ ನಿನ್ನ ಕೈಚಾಚುತ್ತಿರುವಲ್ಲಿ, ನಿನ್ನ ದಾಸರು, ನಿನ್ನ ವಾಕ್ಯವನ್ನು ಧೈರ್ಯದಿಂದ ಹೇಳುವ ಹಾಗೆ ಅನುಗ್ರಹಿಸು” ಅಂದರು. ಹೀಗೆ ಪ್ರಾರ್ಥನೆ ಮಾಡಿದ ಕೂಡಲೇ ಅವರು ನೆರೆದಿದ್ದ ಸ್ಥಳವು ನಡುಗಿತು. ಅವರೆಲ್ಲರು ಪವಿತ್ರಾತ್ಮ ಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಹೇಳತೊಡಗಿದರು.

ಮತ್ತು ಕರ್ತನಾದ ಯೇಸುವಿನ ಪುನರುತ್ಥಾನಕ್ಕೆ ಅಪೊಸ್ತಲರು ಬಹು ಬಲವಾಗಿ ಸಾಕ್ಷಿ ಹೇಳುತ್ತಿದ್ದರು; ದೇವರ ದಯವು ಅವರೆಲ್ಲರ ಮೇಲೆ ಪೂರ್ಣವಾಗಿತ್ತು.

ಅಪೊಸ್ತಲರನ್ನು ಕರತಂದು ಹಿರೀಸಭೆಯ ಮುಂದೆ ನಿಲ್ಲಿಸಲು ಮಹಾಯಾಜಕನು ಅವರನ್ನು ವಿಚಾರಣೆಮಾಡುತ್ತಾ, “ನೀವು ಈ ಹೆಸರಿನಲ್ಲಿ ಉಪದೇಶಮಾಡಲೇ ಬಾರದೆಂದು ನಾವು ನಿಮಗೆ ಕಟ್ಟಪ್ಪಣೆ ಕೊಡಲಿಲ್ಲವೇ? ಆದರೂ ನೀವು ಯೆರೂಸಲೇಮನ್ನು ನಿಮ್ಮ ಉಪದೇಶದಿಂದ ತುಂಬಿಸಿದಿರಿ, ಮತ್ತು ಆ ವ್ಯಕ್ತಿಯ ರಕ್ತಕ್ಕೆ ನಾವೇ ಹೊಣೆಗಾರರು ಎಂದು ನಮ್ಮನ್ನು ಜವಾಬ್ಧಾರರನ್ನಾಗಿ ಮಾಡಲು ನೀವು ಪ್ರಯತ್ನಿಸುತ್ತಿದ್ದೀರಿ” ಎಂದು ಹೇಳಿದನು. ಪೇತ್ರನೂ ಉಳಿದ ಅಪೊಸ್ತಲರೂ ಅವರಿಗೆ, “ನಾವು ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ.

ಅವರು ಅವನ ಮಾತಿಗೆ ಒಪ್ಪಿ ಅಪೊಸ್ತಲರನ್ನು ಕರೆಯಿಸಿ, ಹೊಡಿಸಿ ಯೇಸುವಿನ ಹೆಸರನ್ನು ಹೇಳಿ ಮಾತನಾಡಲೇಬಾರದೆಂದು ಅಪ್ಪಣೆಕೊಟ್ಟು ಅವರನ್ನು ಬಿಟ್ಟುಬಿಟ್ಟರು. ಅಪೊಸ್ತಲರು ತಾವು ಯೇಸುವಿನ ಹೆಸರಿನ ನಿಮಿತ್ತವಾಗಿ ಅವಮಾನಪಡುವುದಕ್ಕೆ ಯೋಗ್ಯರೆನಿಸಿಕೊಂಡೆವೆಂದು ಸಂತೋಷಪಟ್ಟರು. ಹಿರೀಸಭೆಯ ಎದುರಿನಿಂದ ಹೊರಟುಹೋಗಿ, ಪ್ರತಿದಿನ ಎಡೆಬಿಡದೆ ದೇವಾಲಯದಲ್ಲಿಯೂ, ಮನೆಮನೆಗಳಲ್ಲಿಯೂ, ಉಪದೇಶಮಾಡುತ್ತಾ ಕ್ರಿಸ್ತನಾದ ಯೇಸುವಿನ ಕುರಿತು ಶುಭವರ್ತಮಾನವನ್ನು ಸಾರುತ್ತಾ ಇದ್ದರು.

ಚದರಿಹೋದವರು ಅಲ್ಲಲ್ಲಿ ಹೋಗಿ ಸುವಾರ್ತೆಯನ್ನು ಸಾರುತ್ತಿದ್ದರು. ಫಿಲಿಪ್ಪನು ಸಮಾರ್ಯವೆಂಬ ಪಟ್ಟಣಕ್ಕೆ ಹೋಗಿ ಕ್ರಿಸ್ತನ ವಿಷಯವಾಗಿ ಅಲ್ಲಿರುವವರಿಗೆ ಪ್ರಚುರಪಡಿಸಿದನು.

ಆದರೆ ಫಿಲಿಪ್ಪನು ದೇವರ ರಾಜ್ಯದ ವಿಷಯದಲ್ಲಿಯೂ ಯೇಸು ಕ್ರಿಸ್ತನ ಹೆಸರಿನ ವಿಷಯದಲ್ಲಿಯೂ ಶುಭವರ್ತಮಾನವನ್ನು ಸಾರಲು ಗಂಡಸರೂ ಹೆಂಗಸರೂ ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡರು.

ಹೀಗಿರಲಾಗಿ ಅವರು ಕರ್ತನ ವಾಕ್ಯವನ್ನು ಪ್ರಮಾಣಪೂರ್ವಕವಾಗಿ ಹೇಳಿದ ಮೇಲೆ ಯೆರೂಸಲೇಮಿಗೆ ಹಿಂತಿರುಗಿ ಬಂದು ಸಮಾರ್ಯದವರ ಅನೇಕ ಊರುಗಳಲ್ಲಿ ಸುವಾರ್ತೆಯನ್ನು ಸಾರಿದರು.

ಫಿಲಿಪ್ಪನು ಬೋಧಿಸುವುದಕ್ಕೆ ತೊಡಗಿ ಅದೇ ವಚನವನ್ನು ಆಧಾರಮಾಡಿಕೊಂಡು ಅವನಿಗೆ ಯೇಸುವಿನ ವಿಷಯವಾದ ಸುವಾರ್ತೆಯನ್ನು ತಿಳಿಸಿದನು. ಅವರು ದಾರಿಯಲ್ಲಿ ಹೋಗುತ್ತಿರುವಾಗ ನೀರಿರುವ ಜಾಗಕ್ಕೆ ಬಂದರು. ಕಂಚುಕಿಯು, “ಆಗೋ, ನೀರು; ನನಗೆ ದೀಕ್ಷಾಸ್ನಾನವಾಗುವುದಕ್ಕೆ ಅಡ್ಡಿ ಏನು?” ಎಂದು ಹೇಳಿ ರಥವನ್ನು ನಿಲ್ಲಿಸು ಎಂದು ಅಪ್ಪಣೆ ಕೊಟ್ಟನು; ಫಿಲಿಪ್ಪನು ಕಂಚುಕಿಯು ಇಬ್ಬರೂ ನೀರಿನೊಳಗೆ ಇಳಿದರು. ಫಿಲಿಪ್ಪನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು.

ತರುವಾಯ ಫಿಲಿಪ್ಪನು ಅಜೋತ್ ಎಂಬಲ್ಲಿ ಕಾಣಿಸಿಕೊಂಡು ಅಲ್ಲಿಂದ ಕೈಸರೈಯದ ತನಕ ಎಲ್ಲಾ ಊರುಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ಹೋದನು.

ಆದರೆ ಬಾರ್ನಬನು ಅವನನ್ನು ಕೈಹಿಡಿದು, ಅಪೊಸ್ತಲರ ಬಳಿಗೆ ಕರೆದುಕೊಂಡುಹೋಗಿ, ಅವನು ದಮಸ್ಕದ ದಾರಿಯಲ್ಲಿ ಕರ್ತನನ್ನು ಕಂಡದ್ದನ್ನೂ, ಕರ್ತನು ಅವನ ಸಂಗಡ ಮಾತನಾಡಿದ್ದನ್ನೂ, ದಮಸ್ಕದೊಳಗೆ ಯೇಸುವಿನ ಹೆಸರಿನಲ್ಲಿ ಧೈರ್ಯದಿಂದ ಪ್ರಚಾರ ಮಾಡಿದ್ದನ್ನೂ ಅವರಿಗೆ ವಿವರವಾಗಿ ಹೇಳಿದನು. ಆ ಮೇಲೆ ಸೌಲನು ಯೆರೂಸಲೇಮಿನಲ್ಲಿದ್ದುಕೊಂಡು ಅವರಲ್ಲಿ ಬರುತ್ತಾ ಹೋಗುತ್ತಾ ಕರ್ತನ ಹೆಸರಿನಲ್ಲಿ ಧೈರ್ಯದಿಂದ ಬೋಧಿಸತೊಡಗಿದನು. ಮತ್ತು ಗ್ರೀಕ್ ಭಾಷೆಯನ್ನಾಡುವ ಯೆಹೂದ್ಯರ ಸಂಗಡ ಮಾತನಾಡಿ ತರ್ಕಮಾಡುತ್ತಿದ್ದನು. ಆದರೆ ಅವರು ಅವನನ್ನು ಕೊಲ್ಲುವುದಕ್ಕೆ ಪ್ರಯತ್ನ ಮಾಡುತ್ತಿದ್ದರು.

ಎಲ್ಲಾ ಜನರಿಗೂ ಕರ್ತನಾಗಿರುವ ಯೇಸು ಕ್ರಿಸ್ತನ ಮೂಲಕ ದೇವರು ಸಮಾಧಾನದ ಶುಭಸಮಾಚಾರವನ್ನು ಪ್ರಕಟಿಸುತ್ತಾ ಇಸ್ರಾಯೇಲ್ ಜನರಿಗೆ ಅನುಗ್ರಹಿಸಿದ ವಾಕ್ಯವು ನಿಮಗೇ ತಿಳಿದಿದೆ. ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಯೋಹಾನನು ಸಾರಿದ ತರುವಾಯ ಈ ವಾಕ್ಯವು ಗಲಿಲಾಯದಿಂದ ಪ್ರಾರಂಭವಾಗಿ, ಯೂದಾಯದಲ್ಲೆಲ್ಲಾ ಪ್ರಬಲವಾಯಿತು.

ಆತನೇ ಜೀವವಿರುವವರಿಗೂ, ಸತ್ತವರಿಗೂ ನ್ಯಾಯಾಧಿಪತಿಯಾಗಿ ದೇವರಿಂದ ನೇಮಕವಾದವನು ಎಂಬುದನ್ನು ಜನರಿಗೆ ಸಾರಿ, ಸಾಕ್ಷಿ ಹೇಳಬೇಕೆಂದು ದೇವರು ನಮಗೆ ಅಪ್ಪಣೆಕೊಟ್ಟನು. ಆತನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ಆತನ ಹೆಸರಿನ ಮೂಲಕವಾಗಿ ಪಾಪ ಕ್ಷಮಾಪಣೆಯನ್ನು ಹೊಂದುವನೆಂದು ಆತನ ವಿಷಯದಲ್ಲಿ ಪ್ರವಾದಿಗಳೆಲ್ಲರು ಸಾಕ್ಷಿ ಹೇಳಿದ್ದಾರೆ” ಅಂದನು. ಪೇತ್ರನು, ಈ ವಾಕ್ಯಗಳನ್ನು ಇನ್ನೂ ಹೇಳುತ್ತಿರುವಾಗಲೇ, ಅವನ ವಾಕ್ಯಗಳನ್ನು ಕೇಳಿದವರೆಲ್ಲರ ಮೇಲೆ ಪವಿತ್ರಾತ್ಮನು ಇಳಿದನು.

ಅನ್ಯಜನರು ಸಹ ದೇವರ ವಾಕ್ಯವನ್ನು ಅಂಗೀಕರಿಸಿದರೆಂಬ ಸಮಾಚಾರವನ್ನು ಅಪೊಸ್ತಲರೂ ಯೂದಾಯದಲ್ಲಿದ್ದ ಸಹೋದರರೂ ಕೇಳಿದರು.

ಆ ಮನುಷ್ಯನ ಮನೆಯೊಳಗೆ ನಾವು ಸೇರಲು ಅವನು ನಮಗೆ, ಒಬ್ಬ ದೇವದೂತನು ನನ್ನ ಮನೆಯಲ್ಲಿ ನಿಂತಿರುವುದನ್ನು ಕಂಡೆನು. ಆ ದೂತನು; “ನೀನು ಯೊಪ್ಪಕ್ಕೆ ಜನರನ್ನು ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರೆಯಿಸು. ಅವನು ನಿನಗೆ ಸಂದೇಶವನ್ನು ಹೇಳುವನು, ಆ ಸಂದೇಶದಿಂದ ನಿನಗೂ ನಿನ್ನ ಮನೆಯವರೆಲ್ಲರಿಗೂ ರಕ್ಷಣೆಯಾಗುವದು” ಎಂದು ಹೇಳಿದನೆಂಬುದಾಗಿ ತಿಳಿಸಿದನು.

ಈ ಮಾತುಗಳನ್ನು ಅವರು ಕೇಳಿ ಆಕ್ಷೇಪಣೆ ಮಾಡುವುದನ್ನು ಬಿಟ್ಟು; “ಹಾಗಾದರೆ ದೇವರು ಅನ್ಯಜನರಿಗೂ ಜೀವಕೊಡಬೇಕೆಂದು ಅವರ ಮನಸ್ಸುಗಳನ್ನು ತನ್ನ ಕಡೆಗೆ ತಿರುಗಿಸಿದ್ದಾನೆ” ಎಂದು ದೇವರನ್ನು ಕೊಂಡಾಡಿದರು.

ಅವರಲ್ಲಿ ಕುಪ್ರದ್ವೀಪದವರು ಕೆಲವರೂ, ಕುರೇನ್ಯದವರು ಕೆಲವರೂ, ಅಂತಿಯೋಕ್ಯಕ್ಕೆ ಬಂದು, ಗ್ರೀಕರೊಂದಿಗೆ ಮಾತನಾಡಿ ಕರ್ತನಾದ ಯೇಸುವಿನ ವಿಷಯವಾದ ಸುವಾರ್ತೆಯನ್ನು ಸಾರಿದರು. ಕರ್ತನ ಹಸ್ತವು ಅವರೊಂದಿಗಿದ್ದ ಕಾರಣ ಬಹು ಜನರು ನಂಬಿ ಕರ್ತನ ಕಡೆಗೆ ತಿರುಗಿಕೊಂಡರು.

ಆ ರಕ್ಷಕನೇ ಯೇಸು, ಆತನ ಆಗಮನಕ್ಕೆ ಮೊದಲು ಯೋಹಾನನು ಇಸ್ರಾಯೇಲ್ ಜನರೆಲ್ಲರಿಗೆ, ನೀವು ದೇವರ ಕಡೆಗೆ ತಿರುಗಿಕೊಂಡು ಪಶ್ಚಾತ್ತಾಪದ ದೀಕ್ಷಾಸ್ನಾನಮಾಡಿಸಿಕೊಳ್ಳಬೇಕೆಂದು ಸಾರಿದನು.

“ದೇವರು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನವನ್ನು ನಮ್ಮ ಮಕ್ಕಳಿಗೋಸ್ಕರ ನೆರವೇರಿಸಿದ್ದಾನೆಂಬ ಶುಭಸಮಾಚಾರವನ್ನು ನಾವು ನಿಮಗೆ ಸಾರುವವರಾಗಿದ್ದೇವೆ. ಆತನು ಯೇಸುವನ್ನು ಮರಣದಿಂದ ಎಬ್ಬಿಸಿದ್ದರಲ್ಲಿ;

ಮುಂದಿನ ಸಬ್ಬತ್ ದಿನದಲ್ಲಿ ಹೆಚ್ಚುಕಡಿಮೆ ಇಡೀ ಊರಿನವರು ದೇವರ ವಾಕ್ಯವನ್ನು ಕೇಳುವುದಕ್ಕೆ ಸೇರಿಬಂದರು.

ಆಗ ಪೌಲನೂ, ಬಾರ್ನಬನೂ ಧೈರ್ಯದಿಂದ ಮಾತನಾಡಿ; ದೇವರ ವಾಕ್ಯವನ್ನು ಮೊದಲು ನಿಮಗೇ ಹೇಳುವುದು ಅಗತ್ಯವಾಗಿತ್ತು; ಆದರೆ ನೀವು ಅದನ್ನು ತಳ್ಳಿಬಿಟ್ಟು ನಿಮ್ಮನ್ನು ನಿತ್ಯಜೀವಕ್ಕೆ ಅಪಾತ್ರರೆಂದು ತೀರ್ಪು ಮಾಡಿಕೊಂಡಿದ್ದರಿಂದ ಇಗೋ, ನಾವು ನಿಮ್ಮನ್ನು ಬಿಟ್ಟು ಅನ್ಯಜನರ ಕಡೆಗೆ ಹೋಗುತ್ತೇವೆ. ಹಾಗೆಯೇ ಕರ್ತನು ನಮಗೆ ಅಪ್ಪಣೆ ಕೊಟ್ಟಿದ್ದಾನೆ, ಹೇಗೆಂದರೆ; ನೀನು ಲೋಕದ ಕಟ್ಟಕಡೆಯ ವರೆಗೆ ರಕ್ಷಕನಾಗಿರುವಂತೆ ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ನೇಮಿಸಿದ್ದೇನೆ ಎಂದು ದೇವರು ಹೇಳಿದ್ದಾನೆ ಎಂದರು.

ಅಲ್ಲಿದ್ದ ಅನ್ಯಜನರು ಆ ಮಾತನ್ನು ಕೇಳಿ ಸಂತೋಷಪಟ್ಟು, ದೇವರ ವಾಕ್ಯವನ್ನು ಹೊಗಳಿದರು. ಮತ್ತು ನಿತ್ಯಜೀವಕ್ಕೆ ನೇಮಿಸಲ್ಪಟ್ಟವರೆಲ್ಲರೂ ನಂಬಿದರು. ಕರ್ತನ ವಾಕ್ಯವು ಆ ಸೀಮೆಯ ಎಲ್ಲಾ ಕಡೆಗಳಲ್ಲಿ ಹಬ್ಬುತ್ತಾ ಬಂದಿತು.

ಆದರೆ ಯೆಹೂದ್ಯರು ತಮ್ಮ ಮತಕ್ಕೆ ಸೇರಿದ್ದ ಭಕ್ತೆಯರಾದ ಕುಲೀನ ಸ್ತ್ರೀಯರನ್ನೂ, ಊರಿನ ಪ್ರಮುಖರನ್ನೂ, ಹುರಿದುಂಬಿಸಿ ಪೌಲ ಮತ್ತು ಬಾರ್ನಬರ ವಿರೋಧವಾಗಿ ಹಿಂಸೆಯನ್ನೆಬ್ಬಿಸಿ ಅವರನ್ನು ತಮ್ಮ ಪ್ರದೇಶದಿಂದ ಆಚೆಗೆ ಅಟ್ಟಿಬಿಟ್ಟರು. ಪೌಲ ಬಾರ್ನಬರು ತಮ್ಮ ಕಾಲಿಗೆ ಹತ್ತಿದ್ದ ಧೂಳನ್ನು ಝಾಡಿಸಿಬಿಟ್ಟು ಇಕೋನ್ಯಕ್ಕೆ ಹೋದರು.

ಇಕೋನ್ಯದಲ್ಲಿ ಪೌಲ ಮತ್ತು ಬಾರ್ನಬರು ಅದೇ ಪ್ರಕಾರವಾಗಿ ಯೆಹೂದ್ಯರ ಸಭಾಮಂದಿರದೊಳಗೆ ಹೋಗಿ ಪ್ರೇರಣಾತ್ಮಕವಾದ ಬೋಧನೆ ನೀಡಿ ಮಾತನಾಡಿದ್ದರಿಂದ ಯೆಹೂದ್ಯರಲ್ಲಿಯೂ, ಗ್ರೀಕರಲ್ಲಿಯೂ ಬಹುಮಂದಿ ಕರ್ತನಾದ ಯೇಸುಕ್ರಿಸ್ತನನ್ನು ನಂಬುವವರಾದರು. ಆದರೆ ನಂಬದೆ ಹೋದ ಯೆಹೂದ್ಯರು, ಅನ್ಯಜನರ ಮನಸ್ಸನ್ನು ಈ ಸಹೋದರರ ವಿರುದ್ಧವಾಗಿ ಪ್ರಚೋದಿಸಿ ಕೆಡಿಸಿದರು.

ಹೀಗಿರಲಾಗಿ ಅವರು ಬಹುಕಾಲ ಅಲ್ಲಿದ್ದು ಕರ್ತನು ಅವರ ಕೈಯಿಂದ ಸೂಚಕಕಾರ್ಯಗಳೂ, ಅದ್ಭುತಕಾರ್ಯಗಳೂ ನಡೆಯುವಂತೆ ದಯಪಾಲಿಸಿ ತನ್ನ ಕೃಪಾವಾಕ್ಯಕ್ಕೆ ಸಾಕ್ಷಿಕೊಟ್ಟಿದ್ದರಿಂದ ಆತನ ಮೇಲೆ ಭರವಸವಿಟ್ಟು ಧೈರ್ಯದಿಂದ ಮಾತನಾಡುತ್ತಿದ್ದರು.

“ಜನರೇ, ನೀವು ಹೀಗೇಕೆ ಮಾಡುತ್ತೀರೀ? ನಾವೂ ಮನುಷ್ಯರೇ, ನಿಮ್ಮಂಥ ಸ್ವಭಾವವುಳ್ಳವರು. ನೀವು ಈ ವ್ಯರ್ಥವಾದ ಕೆಲಸಗಳನ್ನು ಬಿಟ್ಟುಬಿಟ್ಟು ಭೂಮ್ಯಾಕಾಶಗಳನ್ನೂ, ಸಮುದ್ರವನ್ನೂ, ಅವುಗಳಲ್ಲಿರುವ ಸಮಸ್ತವನ್ನೂ ಸೃಷ್ಟಿಮಾಡಿದ ಜೀವಸ್ವರೂಪನಾದ ದೇವರ ಕಡೆಗೆ ತಿರುಗಿಕೊಳ್ಳಬೇಕೆಂಬ ಸುವಾರ್ತೆಯನ್ನು ನಿಮಗೆ ಸಾರಿಹೇಳುವವರಾಗಿದ್ದೇವೆ.

ಮರುದಿನ ಪೌಲನು, ಬಾರ್ನಬನ ಜೊತೆಯಲ್ಲಿ ದೆರ್ಬೆಗೆ ಹೊರಟನು. ಆ ಊರಿನಲ್ಲಿ ಅವರು ಸುವಾರ್ತೆಯನ್ನು ಸಾರಿ ಅನೇಕರನ್ನು ಶಿಷ್ಯರನ್ನಾಗಿ ಮಾಡಿದ ಮೇಲೆ ಹಿಂತಿರುಗಿ ಲುಸ್ತ್ರಕ್ಕೂ, ಇಕೋನ್ಯಕ್ಕೂ, ಅಂತಿಯೋಕ್ಯಕ್ಕೂ ಬಂದರು. ಅಲ್ಲಿ ಶಿಷ್ಯರ ಮನಸ್ಸುಗಳನ್ನು ದೃಢಪಡಿಸಿ ಕ್ರಿಸ್ತ ನಂಬಿಕೆಯಲ್ಲಿ ಸ್ಥಿರವಾಗಿ ನಿಲ್ಲಿರಿ ಎಂದು ಪ್ರೋತ್ಸಾಹಿಸಿದರು. ನಾವು ಬಹು ಸಂಕಟಗಳನ್ನು ತಾಳಿ ದೇವರ ರಾಜ್ಯದೊಳಗೆ ಸೇರಬೇಕಾಗಿದೆ ಎಂದು ಬೋಧಿಸಿದರು.

“ಸಹೋದರರೇ, ಅನ್ಯಜನರು ನನ್ನ ಬಾಯಿಂದ ಸುವಾರ್ತೆಯ ವಾಕ್ಯವನ್ನು ಕೇಳಿ ನಂಬಬೇಕೆಂದು ದೇವರು ಬಹಳ ದಿನಗಳ ಹಿಂದೆ ನಿಮ್ಮೊಳಗಿಂದ ನನ್ನನ್ನು ಆರಿಸಿಕೊಂಡದ್ದು ನಿಮಗೇ ತಿಳಿದಿದೆ.

ಆಸ್ಯಸೀಮೆಯಲ್ಲಿ ವಾಕ್ಯವನ್ನು ಹೇಳಬಾರದೆಂದು ಪವಿತ್ರಾತ್ಮನು ತಡೆದ್ದುದರಿಂದ ಅವರು ಫ್ರುಗ್ಯ, ಗಲಾತ್ಯ ಸೀಮೆಯನ್ನು ಹಾದುಹೋಗಿ, ಮೂಸ್ಯಕ್ಕೆ ಹತ್ತಿರವಾಗಿ ಬಂದಾಗ, ಬಿಥೂನ್ಯಕ್ಕೆ ಹೋಗುವ ಪ್ರಯತ್ನಮಾಡಿದರು. ಅಲ್ಲಿಯೂ ಯೇಸುವಿನ ಆತ್ಮನು ಅವರನ್ನು ಹೋಗಗೊಡಿಸಲಿಲ್ಲ. ಆಗ ಅವರು ಮೂಸ್ಯದ ಮುಖಾಂತಾರವಾಗಿ ತ್ರೋವಕ್ಕೆ ಬಂದರು. ಆ ರಾತ್ರಿ ಪೌಲನಿಗೆ ಒಂದು ದರ್ಶನವಾಯಿತು, ಏನೆಂದರೆ, ಮಕೆದೋನ್ಯ ದೇಶದವನಾದ ಒಬ್ಬ ಮನುಷ್ಯನು ನಿಂತುಕೊಂಡು; “ನೀನು ಸಮುದ್ರವನ್ನು ದಾಟಿ ಮಕೆದೋನ್ಯಕ್ಕೆ ಬಂದು ನಮಗೆ ನೆರವಾಗಬೇಕೆಂದು” ಅವನನ್ನು ಬೇಡಿಕೊಳ್ಳುತ್ತಿದ್ದನು. ಅವನಿಗೆ ಆ ದರ್ಶನವಾದ ಮೇಲೆ, ಆ ಸೀಮೆಯವರಿಗೆ ಸುವಾರ್ತೆಯನ್ನು ಸಾರುವುದಕ್ಕೆ ದೇವರು ನಮ್ಮನ್ನು ಕರೆದಿದ್ದಾನೆಂದು ನಾವು ನಿಶ್ಚಯಿಸಿಕೊಂಡು, ಕೂಡಲೆ ಮಕೆದೋನ್ಯಕ್ಕೆ ಹೊರಟುಹೋಗುವ ಪ್ರಯತ್ನಮಾಡಿದೆವು.

ಆಗ ಅವನು; ದೀಪ ತರಬೇಕೆಂದು ಕೂಗಿ ಒಳಕ್ಕೆ ಹಾರಿ ಭಯದಿಂದ ನಡುಗುತ್ತಾ ಪೌಲ ಮತ್ತು ಸೀಲರ ಮುಂದೆ ಆಡ್ಡಬಿದ್ದನು. ಮತ್ತು ಅವರನ್ನು ಹೊರಗೆ ಕರೆದುಕೊಂಡು ಬಂದು; “ಸ್ವಾಮಿಗಳೇ, ನಾನು ರಕ್ಷಣೆಹೊಂದುವುದಕ್ಕೆ ಏನು ಮಾಡಬೇಕೆಂದು?” ಕೇಳಲು, ಅವರು; “ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆ ಹೊಂದುವಿ, ನಿನ್ನ ಮನೆಯವರೂ ರಕ್ಷಣೆಹೊಂದುವರು” ಎಂದು ಹೇಳಿ,

ಪೌಲನು ತನ್ನ ಪದ್ಧತಿಯ ಪ್ರಕಾರ ಅಲ್ಲಿದ್ದವರ ಬಳಿಗೆ ಹೋಗಿ ಮೂರು ಸಬ್ಬತ್ ದಿನಗಳಲ್ಲಿ ದೇವರ ವಾಕ್ಯದಿಂದ ಅವರ ಸಂಗಡ ವಾದಿಸಿ, ಆಯಾ ವಾಕ್ಯಗಳ ಅರ್ಥವನ್ನು ವಿವರಿಸಿ; ಕ್ರಿಸ್ತನು ಬಾಧೆಯನ್ನನುಭವಿಸಿ ಸತ್ತು, ಎದ್ದು ಬರುವುದು ಅಗತ್ಯವೆಂತಲೂ “ನಾನು ನಿಮಗೆ ಪ್ರಸಿದ್ಧಿಪಡಿಸುವ ಯೇಸುವೇ ಆ ಕ್ರಿಸ್ತನೆಂತಲೂ” ಸ್ಥಿರಪಡಿಸಿದನು. ಅವರಲ್ಲಿ ಕೆಲವರೂ ದೈವಭಕ್ತರಾದ ಗ್ರೀಕರ ದೊಡ್ಡ ಗುಂಪು ಮತ್ತು ಪ್ರಮುಖ ಸ್ತ್ರೀಯರಲ್ಲಿ ಅನೇಕರೂ ಒಡಂಬಟ್ಟು ಪೌಲ ಮತ್ತು ಸೀಲರನ್ನು ಸೇರಿಕೊಂಡರು.

ಆ ಸಭೆಯವರು ದೇವರ ವಾಕ್ಯವನ್ನು ಸಿದ್ಧ ಮನಸ್ಸಿನಿಂದ ಅಂಗೀಕರಿಸಿ ಇವರು ಹೇಳುವ ಮಾತು ಹೌದೋ ಅಲ್ಲವೋ ಎಂದು ಕಂಡುಕೊಳ್ಳಲು ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸುತ್ತಿದ್ದದರಿಂದ ಅವರು ಥೆಸಲೋನಿಕದವರಿಗಿಂತ ಸದ್ಗುಣವುಳವರಾಗಿದ್ದರು.

ಪೌಲನು ಅರಿಯೊಪಾಗದ ಮಧ್ಯದಲ್ಲಿ ನಿಂತುಕೊಂಡು ಹೇಳಿದ್ದೇನಂದರೆ; “ಅಥೇನೆಯ ಜನರೇ, ನೀವು ಎಲ್ಲಾದರಲ್ಲಿಯೂ ಅತಿ ದೈವಭಕ್ತಿವಂತರೆಂದು ನನಗೆ ತೋರುತ್ತಿದೆ. ನಾನು ನಿಮ್ಮ ಪಟ್ಟಣದಲ್ಲಿ ತಿರುಗಾಡುತ್ತಾ ನೀವು ಪೂಜಿಸುವ ದೇವತಾ ಪ್ರತಿಮೆಗಳನ್ನು ಚೆನ್ನಾಗಿ ನೋಡುತ್ತಾ ಇದ್ದಾಗ ಒಂದು ಬಲಿಪೀಠವು ನನ್ನ ಕಣ್ಣಿಗೆ ಬಿತ್ತು; ಅದರ ಮೇಲೆ ‘ತಿಳಿಯದ ದೇವರಿಗೆ’ ಎಂದು ಬರೆದಿತ್ತು; ಆದಕಾರಣ ನೀವು ಯಾವುದನ್ನು ತಿಳಿಯದೆ ಪೂಜಿಸುತ್ತಿದ್ದೀರೋ ಅದನ್ನೇ ನಿಮಗೆ ತಿಳಿಯಪಡಿಸುತ್ತೇನೆ, ಕೇಳಿರಿ ಅಂದನು. “ಜಗತ್ತನ್ನೂ ಅದರಲ್ಲಿರುವ ಎಲ್ಲವುಗಳನ್ನೂ, ಉಂಟುಮಾಡಿದ ದೇವರು ಭೂಮ್ಯಾಕಾಶಗಳ ಒಡೆಯನಾಗಿರುವುದರಿಂದ ಆತನು ಕೈಯಿಂದ ಕಟ್ಟಿರುವ ಗುಡಿಗಳಲ್ಲಿ ವಾಸಮಾಡುವವನಲ್ಲ; ತಾನೇ ಎಲ್ಲರಿಗೂ ಜೀವಶ್ವಾಸ ಹಾಗೂ ಜೀವಿಸುವುದಕ್ಕೆ ಬೇಕಾದದ್ದೆಲ್ಲವನ್ನೂ ಕೊಡುವವನಾಗಿರಲಾಗಿ ಕೊರತೆಯಿದ್ದವನಂತೆ ಮನುಷ್ಯರ ಕೈಗಳಿಂದ ಸೇವೆಹೊಂದುವವನೂ ಅಲ್ಲ. ದೇವರು ಒಬ್ಬ ಮನುಷ್ಯನಿಂದ ಎಲ್ಲಾ ಜನಾಂಗಗಳನ್ನು ಸೃಷ್ಟಿಸಿ, ಅವರವರು ಇರತಕ್ಕ ಕಾಲಗಳನ್ನೂ ಹಾಗು ಅವರವರ ನಿವಾಸಗಳ ಮೇರೆಗಳನ್ನೂ ನಿಷ್ಕರ್ಷಿಸಿ ಭೂಮಂಡಲದಲ್ಲೆಲ್ಲಾ ಅವರನ್ನು ಇರಿಸಿ, ಒಂದು ವೇಳೆ ಅವರು ತಡವಾಗಿಯಾದರೂ ತನ್ನನ್ನು ಕಂಡುಕೊಂಡಾರೇನೋ ಎಂದು ತನ್ನನ್ನು ಹುಡುಕುವವರನ್ನಾಗಿ ಮಾಡಿದನು. ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ. ಏಕೆಂದರೆ ಆತನಲ್ಲಿಯೇ ನಾವು ಜೀವಿಸುತ್ತೇವೆ, ಚಲಿಸುತ್ತೇವೆ ಮತ್ತು ಇರುತ್ತೇವೆ. ನಿಮ್ಮ ಕವಿಗಳಲ್ಲಿ ಕೆಲವರು, ‘ನಾವು ಆತನ ಸಂತಾನದವರೇ’ ಎಂದು ಹೇಳಿದ್ದಾರೆ. “ನಾವು ದೇವರ ಸಂತಾನದವರಾದ ಮೇಲೆ ದೇವರು ಮನುಷ್ಯನ ಶಿಲ್ಪವಿದ್ಯೆಯಿಂದಲೂ, ಕಲ್ಪನೆಯಿಂದಲೂ ಕೆತ್ತಿರುವ ಚಿನ್ನ, ಬೆಳ್ಳಿ ಮತ್ತು ಕಲ್ಲುಗಳಿಗೆ ಸಮಾನವೆಂದು ನಾವು ಭಾವಿಸಬಾರದು. ಆ ಆಜ್ಞಾನದ ಕಾಲಗಳನ್ನು ದೇವರು ಗಣನೆಗೆ ತೆಗೆದುಕೊಳ್ಳಲಿಲ್ಲ; ಈಗಲಾದರೋ ಆತನು ನಾಲ್ಕು ದಿಕ್ಕಿನಲ್ಲಿರುವ ಮನುಷ್ಯರೆಲ್ಲರೂ ಪಶ್ಚಾತ್ತಾಪಪಟ್ಟು ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪ್ಪಣೆಕೊಡುತ್ತಿದ್ದಾನೆ. ಏಕೆಂದರೆ, ಆತನು ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವುದಕ್ಕೆ ಒಂದು ದಿನವನ್ನು ಗೊತ್ತು ಮಾಡಿದ್ದಾನೆ. ಅವನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ ಇದನ್ನು ನಂಬುವುದಕ್ಕೆ ಎಲ್ಲರಿಗೂ ದೃಷ್ಟಾಂತವನ್ನು ಕೊಟ್ಟಿದ್ದಾನೆ” ಅಂದನು.

ಅಷ್ಟರೊಳಗೆ ಅಲೆಕ್ಸಾಂದ್ರಿಯದಲ್ಲಿ ಹುಟ್ಟಿದ ಅಪೊಲ್ಲೋಸನೆಂಬ ಒಬ್ಬ ಯೆಹೂದ್ಯನು ಎಫೆಸಕ್ಕೆ ಬಂದನು. ಅವನು ವಾಕ್ಚಾತುರ್ಯವುಳ್ಳವನೂ ಧರ್ಮಶಾಸ್ತ್ರಗಳಲ್ಲಿ ಪ್ರವೀಣನೂ ಆಗಿದ್ದನು. ಅವನು ಕರ್ತನ ಮಾರ್ಗದ ವಿಷಯದಲ್ಲಿ ಉಪದೇಶ ಹೊಂದಿದವನಾಗಿದ್ದನು ಮತ್ತು ಆಸಕ್ತ ಮನಸ್ಸುಳ್ಳವನಾಗಿದ್ದು ಯೋಹಾನನು ಮಾಡಿಸಿದ ದೀಕ್ಷಾಸ್ನಾನವನ್ನು ಮಾತ್ರ ಬಲ್ಲವನಾದರೂ ಯೇಸುವಿನ ಸಂಗತಿಗಳನ್ನು ಸೂಕ್ಷ್ಮವಾಗಿ ಹೇಳಿ ಉಪದೇಶಿಸಿದನು. ಅವನು ಸಭಾಮಂದಿರದಲ್ಲಿ ಧೈರ್ಯದಿಂದ ಮಾತನಾಡುವುದಕ್ಕೆ ಪ್ರಾರಂಭಿಸಿದನು. ಅವನ ಮಾತುಗಳನ್ನು ಪ್ರಿಸ್ಕಿಲ್ಲಳೂ ಮತ್ತು ಅಕ್ವಿಲನೂ ಕೇಳಿ ಅವನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ದೇವರ ಮಾರ್ಗವನ್ನು ಅವನಿಗೆ ಇನ್ನೂ ಸೂಕ್ಷ್ಮವಾಗಿ ವಿವರಿಸಿದರು.

ಆ ಪಟ್ಟಣದಲ್ಲಿ ಪೌಲನು ಸಭಾಮಂದಿರದೊಳಗೆ ಹೋಗಿ, ಮೂರು ತಿಂಗಳು ಅಲ್ಲೇ ದೇವರ ರಾಜ್ಯದ ವಿಷಯಗಳನ್ನು ಕುರಿತು, ವಾದಿಸುತ್ತಾ ಜನರನ್ನು ಒಡಂಬಡಿಸುತ್ತಾ ಧೈರ್ಯದಿಂದ ಮಾತನಾಡಿದನು. ಕೆಲವರು ತಮ್ಮ ಮನಸ್ಸುಗಳನ್ನು ಕಠಿಣಮಾಡಿಕೊಂಡು ಒಡಂಬಡದೆ ಗುಂಪುಕೂಡಿದ ಜನರ ಮುಂದೆ ಈ ಮಾರ್ಗವು ಕೆಟ್ಟದ್ದೆಂದು ಹೇಳಲು ಅವನು ಅವರನ್ನು ಬಿಟ್ಟುಹೋಗಿ ಶಿಷ್ಯರನ್ನು ಬೇರೆಮಾಡಿ ತುರನ್ನ ಎಂಬುವನ ತರ್ಕಶಾಲೆಯಲ್ಲಿ ಪ್ರತಿದಿನವೂ ವಾದಿಸಿದನು. ಇದು ಎರಡು ವರ್ಷಗಳ ವರೆಗೂ ನಡೆದಿದ್ದರಿಂದ ಅಸ್ಯಸೀಮೆಯಲ್ಲಿ ವಾಸವಾಗಿದ್ದ ಎಲ್ಲಾ ಯೆಹೂದ್ಯರೂ, ಗ್ರೀಕರೂ, ಕರ್ತನ ವಾಕ್ಯವನ್ನು ಕೇಳಿದರು.

ನಾನು ನಿಮಗೆ ಹಿತಕರವಾದದ್ದೆಲ್ಲವನ್ನು ಹೇಳುವುದಕ್ಕೂ, ಸಭೆಯಲ್ಲಿಯೂ, ಮನೆಮನೆಯಲ್ಲಿಯೂ, ಉಪದೇಶಿಸುವದಕ್ಕೂ ಹಿಂತೆಗೆಯದೆ ಯೆಹೂದ್ಯರಿಗೂ, ಗ್ರೀಕರಿಗೂ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಬೇಕೆಂತಲೂ, ನಮ್ಮ ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡಬೇಕೆಂತಲೂ ದೃಢವಾಗಿ ಬೋಧಿಸುವವನಾಗಿದ್ದೆನು, ಇದೆಲ್ಲಾ ನಿಮಗೇ ತಿಳಿದಿದೆ. ಇಗೋ, ನಾನು ಈಗ ಪವಿತ್ರಾತ್ಮನ ನಿರ್ಬಂಧವುಳ್ಳವನಾಗಿ ಯೆರೂಸಲೇಮಿಗೆ ಹೋಗುತ್ತಿದ್ದೇನೆ. ಅಲ್ಲಿ ನನಗೆ ಏನು ಸಂಭವಿಸುವುದೋ ನಾನರಿಯೆನು. ನಿನಗೆ ಬೇಡಿಗಳೂ, ಹಿಂಸೆಗಳೂ ಕಾದುಕೊಂಡಿವೆ ಎಂದು ಪವಿತ್ರಾತ್ಮನು ಎಲ್ಲಾ ಪಟ್ಟಣಗಳಲ್ಲಿಯೂ ನನಗೆ ಎಚ್ಚರಿಕೆ ನೀಡಿದ್ದಾನೆ ಎಂಬುದನ್ನು ಬಲ್ಲೆನು. ಆದರೆ ಪ್ರಾಣವನ್ನು ಉಳಿಸಿಕೊಳ್ಳುವುದೇ ಶ್ರೇಷ್ಠವೆಂದು ನಾನು ಎಣಿಸುವುದಿಲ್ಲ; ದೇವರ ಕೃಪೆಯ ವಿಷಯವಾದ ಸುವಾರ್ತೆಯನ್ನು ಆಸಕ್ತಿಯಿಂದ ಸಾಕ್ಷ್ಯಪೂರಕವಾಗಿ ಸಾರುವ ನಿಯೋಗವನ್ನು ಕರ್ತನಾದ ಯೇಸುವಿನಿಂದ ನಾನು ಹೊಂದಿದ್ದೇನೆ ಈ ನಿಯೋಗವನ್ನು ಪೂರ್ಣಗೊಳಿಸುವುದೊಂದೇ ನನ್ನ ಅಪೇಕ್ಷೆಯಾಗಿದೆ.

ನೀನು ಕಂಡು, ಕೇಳಿದ ವಿಷಯದಲ್ಲಿ ಎಲ್ಲಾ ಮನುಷ್ಯರ ಮುಂದೆ ಆತನಿಗೆ ಸಾಕ್ಷಿಯಾಗಿರಬೇಕು.

ಅಂದು ರಾತ್ರಿ ಕರ್ತನು ಪೌಲನ ಬಳಿಯಲ್ಲಿ ನಿಂತುಕೊಂಡು; “ಧೈರ್ಯದಿಂದಿರು; ನೀನು ಯೆರೂಸಲೇಮಿನಲ್ಲಿ ನನ್ನ ಸಂಗತಿಯನ್ನೆಲ್ಲಾ ಸಾಕ್ಷಿಯಾಗಿ ಹೇಳಿದಂತೆಯೇ ರೋಮಾಪುರದಲ್ಲಿಯೂ ಸಾಕ್ಷಿಹೇಳಬೇಕಾಗುವುದು” ಅಂದನು.

ನೀನು ಎದ್ದು, ನಿಂತುಕೋ. ನಿನ್ನನ್ನು ನನ್ನ ಸೇವಕನಾಗಿಯೂ, ಸಾಕ್ಷಿಯಾಗಿಯೂ ನೇಮಿಸುವುದಕ್ಕೋಸ್ಕರ ನಿನಗೆ ಕಾಣಿಸಿಕೊಂಡಿದ್ದೇನೆ. ಈಗಲೂ, ಮುಂದೆಯೂ ನಿನಗೆ ತೋರಿಸಲಿರುವ ದರ್ಶನಗಳಲ್ಲಿಯೂ, ನಿನಗೆ ಕಾಣಿಸಿಕೊಂಡದ್ದನ್ನು ಕುರಿತು ನೀನು ನನ್ನ ಸಾಕ್ಷಿಯಾಗಿರಬೇಕು.

ಅವರು ಕತ್ತಲೆಯಿಂದ ಬೆಳಕಿಗೂ, ಸೈತಾನನ ಅಧಿಕಾರದಿಂದ ದೇವರ ಕಡೆಗೂ ತಿರುಗಿಕೊಂಡು, ನನ್ನಲ್ಲಿ ನಂಬಿಕೆಯಿಡುವುದರಿಂದ ಪಾಪಕ್ಷಮಾಪಣೆಯನ್ನೂ, ಪರಿಶುದ್ಧರೊಂದಿಗೆ ಹಕ್ಕನ್ನೂ ಹೊಂದುವಂತೆ, ಅವರ ಕಣ್ಣುಗಳನ್ನು ತೆರೆಯಬೇಕೆಂದು ಅವರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ’ ಅಂದನು.

ಆದರೆ ನಾನು ದೇವರಿಂದ ಸಹಾಯವನ್ನು ಪಡೆದು ಈ ದಿನದವರೆಗೂ ಸುರಕ್ಷಿತವಾಗಿದ್ದು ಚಿಕ್ಕವರಿಗೂ, ದೊಡ್ಡವರಿಗೂ ಸಾಕ್ಷಿಹೇಳುವವನಾಗಿದ್ದೇನೆ. ಪ್ರವಾದಿಗಳೂ, ಮೋಶೆಯೂ ಮುಂದೆ ಆಗುವುದನ್ನು ಕುರಿತು ತಿಳಿಸಿದ ಸಂಗತಿಗಳನ್ನೇ, ಹೊರತು ನಾನು ಇನ್ನೇನೂ ಹೇಳುವವನಲ್ಲ. ಆ ಸಂಗತಿಗಳು ಏನೆಂದರೆ; ಕ್ರಿಸ್ತನು ಬಾಧೆಪಟ್ಟು ಸಾಯಬೇಕಾದವನು ಮತ್ತು ಆತನು ಸತ್ತವರೊಳಗಿಂದ ಮೊದಲನೆಯವನಾಗಿ ಎದ್ದು ಯೆಹೂದ್ಯರಿಗೂ, ಅನ್ಯಜನರಿಗೂ ಬೆಳಕನ್ನು ಪ್ರಸಿದ್ಧಿಪಡಿಸುವವನಾಗಿರುವನು” ಎಂಬುದೇ.

ತರುವಾಯ ಅವನು ತಾನೇ ಬಾಡಿಗೆಗೆ ತೆಗೆದುಕೊಂಡಿದ್ದ ಮನೆಯಲ್ಲಿ ಎರಡು ವರ್ಷಗಳ ಕಾಲ ಇದ್ದು, ತನ್ನ ಬಳಿಗೆ ಬರುವವರೆಲ್ಲರನ್ನು ಆದರದಿಂದ ಬರಮಾಡಿಕೊಳ್ಳುತ್ತಿದ್ದನು. ಯಾವ ಅಡ್ಡಿಯೂ ಇಲ್ಲದೆ, ತುಂಬಾ ಧೈರ್ಯದಿಂದ ದೇವರ ರಾಜ್ಯದ ಕುರಿತು ಬೋಧಿಸುತ್ತಾ, ಕರ್ತನಾದ ಯೇಸು ಕ್ರಿಸ್ತನ ವಿಷಯವಾಗಿ ಉಪದೇಶಮಾಡುತ್ತಾ ಇದ್ದನು.

ಮೊದಲು ನಿಮ್ಮ ನಂಬಿಕೆಯು ಲೋಕದಲ್ಲೆಲ್ಲಾ ಪ್ರಸಿದ್ಧಿಗೆ ಬಂದದ್ದರಿಂದ ನಿಮ್ಮೆಲ್ಲರ ವಿಷಯವಾಗಿ ಯೇಸು ಕ್ರಿಸ್ತನ ಮೂಲಕ ನನ್ನ ದೇವರಿಗೆ ಸ್ತೋತ್ರ ಮಾಡುತ್ತೇನೆ.

ಗ್ರೀಕರಿಗೂ ಇತರ ಜನಗಳಿಗೂ, ಜ್ಞಾನಿಗಳಿಗೂ, ಮೂಢರಿಗೂ ತೀರಿಸಬೇಕಾದ ಒಂದು ಋಣ ನನ್ನ ಮೇಲಿದೆ. ಹೀಗಿರುವುದರಿಂದ ರೋಮಾಪುರದಲ್ಲಿರುವ ನಿಮಗೆ ಸಹ ಸುವಾರ್ತೆಯನ್ನು ಸಾರುವುದಕ್ಕೆ ನಾನಂತೂ ಸಿದ್ಧವಾಗಿದ್ದೇನೆ. ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೊಳ್ಳುವವನಲ್ಲ. ಆ ಸುವಾರ್ತೆಯು ಮೊದಲು ಯೆಹೂದ್ಯರಿಗೆ ಆ ಮೇಲೆ ಗ್ರೀಕರಿಗೆ ಅಂತೂ ನಂಬುವವರೆಲ್ಲರಿಗೂ ರಕ್ಷಣೆ ಉಂಟುಮಾಡುವ ದೇವರ ಬಲಸ್ವರೂಪವಾಗಿದೆ.

ಆದರೆ ನಾವು ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ದೃಢಪಡಿಸಿದ್ದಾನೆ.

ಯಾಕೆಂದರೆ ಪಾಪವು ಕೊಡುವ ಸಂಬಳ ಮರಣ; ದೇವರ ಕೃಪಾವರವು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿರುವ ನಿತ್ಯಜೀವವೇ ಆಗಿದೆ.

ಅದೇನೆಂದರೆ ನೀನು ಯೇಸುವನ್ನೇ ಕರ್ತನೆಂದು ಬಾಯಿಂದ ಅರಿಕೆಮಾಡಿಕೊಂಡು ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ಹೃದಯದಿಂದ ನಂಬಿದರೆ ನಿನಗೆ ರಕ್ಷಣೆಯಾಗುವುದು ಎಂಬುದೇ. ಹೃದಯದಿಂದ ನಂಬುವುದರ ಮೂಲಕ ನೀತಿಯು ದೊರಕುತ್ತದೆ. ಬಾಯಿಂದ ಅರಿಕೆಮಾಡುವುದರ ಮೂಲಕ ರಕ್ಷಣೆಯಾಗುತ್ತದೆ. “ಆತನ ಮೇಲೆ ನಂಬಿಕೆಯಿಡುವ ಒಬ್ಬನಾದರೂ ಆಶಾಭಂಗಪಡುವುದಿಲ್ಲವೆಂದು” ಧರ್ಮಶಾಸ್ತ್ರವು ಹೇಳುತ್ತದೆ. ಈ ವಿಷಯದಲ್ಲಿ ಯೆಹೂದ್ಯರಿಗೂ ಅಥವಾ ಗ್ರೀಕನಿಗೂ ಹೆಚ್ಚು ಕಡಿಮೆ ಏನೂ ಇಲ್ಲ. ಎಲ್ಲರಿಗೂ ಒಬ್ಬನೇ ಕರ್ತನು; ಆತನು ತನ್ನ ನಾಮವನ್ನು ಹೇಳಿಕೊಳ್ಳುವವರಿಗೆ ಹೇರಳವಾಗಿ ಕೊಡುವುದಕ್ಕೆ ಶಕ್ತನಾಗಿದ್ದಾನೆ. ಆದ್ದರಿಂದ ಕರ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೂ ರಕ್ಷಣೆಯಾಗುವುದೆಂದು ಬರೆದಿದೆ.

ಆದರೆ ಅವರು ನಂಬದೆ ಇರುವುದರಿಂದ ಆತನ ನಾಮವನ್ನು ಹೇಳಿಕೊಳ್ಳುವುದಾದರೂ ಹೇಗೆ? ಮತ್ತು ಆತನ ಸುದ್ದಿಯನ್ನು ಕೇಳದಿರುವಲ್ಲಿ ಆತನನ್ನು ನಂಬುವುದಾದರೂ ಹೇಗೆ? ಪ್ರಚಾರಪಡಿಸುವವನಿಲ್ಲದೆ ಕೇಳುವುದಾದರೂ ಹೇಗೆ? ಸುವಾರ್ತೆಸಾರುವವರನ್ನು ಕಳುಹಿಸದೆ ಸಾರುವುದು ಹೇಗೆ? ಇದಕ್ಕೆ ಸರಿಯಾಗಿ “ಶುಭದ ಸುವಾರ್ತೆಯನ್ನು ಸಾರುವವರ ಪಾದಗಳು ಎಷ್ಟೋ ಮನೋಹರವಾಗಿವೆ” ಎಂದು ಬರೆದಿದೆ.

ಆದರೂ ಆ ಶುಭವರ್ತಮಾನಕ್ಕೆ ಎಲ್ಲರೂ ಕಿವಿಗೊಡಲಿಲ್ಲ. ಈ ವಿಷಯದಲ್ಲಿ ಯೆಶಾಯನು, “ಕರ್ತನೇ, ನಾವು ಸಾರಿದ ಸುವಾರ್ತೆಯನ್ನು ಯಾರು ನಂಬಿದರು?” ಎಂದು ನುಡಿಯುತ್ತಾನೆ.

ಆದಕಾರಣ ಸಾರಿದ ಸುವಾರ್ತೆಯನ್ನು ಕೇಳುವುದರಿಂದ ನಂಬಿಕೆಯು ಹುಟ್ಟುತ್ತದೆ, ಕೇಳಿಸಿಕೊಳ್ಳುವುದು ಕ್ರಿಸ್ತನ ವಾಕ್ಯವಾಗಿದೆ. ಆದರೂ “ಅವರಿಗೆ ಕೇಳಿಸಲಿಲ್ಲವೇನೋ?” ಎಂದು ಹೇಳುತ್ತೇನೆ. ಹೌದು ನಿಶ್ಚಯವಾಗಿ ಕೇಳಿಸಿಕೊಂಡಿದ್ದರು. “ಸಾರುವವರ ಧ್ವನಿಯು ಭೂಮಿಯಲ್ಲೆಲ್ಲಾ ಪ್ರಸರಿಸಿತು, ಅವರ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿದವು.”

ನಾನು ಯೆರೂಸಲೇಮ್ ಮೊದಲುಗೊಂಡು ಇಲ್ಲುರಿಕ ಸೀಮೆಯ ಸುತ್ತಮುತ್ತ ಪ್ರಯಾಣಿಸಿ ಕ್ರಿಸ್ತನ ಸುವಾರ್ತೆಯ ಸಾರೋಣವನ್ನು ಪೂರೈಸಿದ್ದೇನೆ.

ಅನಾದಿಯಿಂದ ಗುಪ್ತವಾಗಿದ್ದ ಮರ್ಮವು ಈಗ ಪ್ರಕಾಶಕ್ಕೆ ಬಂದು ನಿತ್ಯನಾದ ದೇವರ ಅಪ್ಪಣೆಯ ಪ್ರಕಾರ ಪ್ರವಾದಿಗಳ ಶಾಸ್ತ್ರಗಳ ಮೂಲಕ ಅನ್ಯಜನರೆಲ್ಲರಿಗೂ ನಂಬಿಕೆಯೆಂಬ ವಿಧೇಯತ್ವವನ್ನು ಉಂಟುಮಾಡುವುದಕ್ಕೋಸ್ಕರ ತಿಳಿಸಲ್ಪಟ್ಟಿದೆ. ಪೂರ್ವಕಾಲಗಳಲ್ಲಿ ಮರೆಯಾಗಿದ್ದು ಈಗ ಬೆಳಕಿಗೆ ಬಂದಿರುವಂತಹದ್ದೂ, ಈ ಮರ್ಮಕ್ಕೆ ಅನುಸಾರ ಎಂದರೆ ಯೇಸು ಕ್ರಿಸ್ತನ ವಿಷಯವಾದಂಥ ಹಾಗೂ ನಾನು ಸಾರುವಂಥ ಸುವಾರ್ತೆಗನುಸಾರವಾಗಿ ನಿಮ್ಮನ್ನು ಸ್ಥಿರಪಡಿಸುವುದಕ್ಕೆ ಶಕ್ತನಾಗಿರುವ,

ಕ್ರಿಸ್ತನು ನನ್ನನ್ನು ಕಳುಹಿಸಿದ್ದು ದೀಕ್ಷಾಸ್ನಾನಮಾಡಿಸುವುದಕ್ಕಲ್ಲ ಆದರೆ ಸುವಾರ್ತೆಯನ್ನು ಸಾರುವುದಕ್ಕಾಗಿಯೇ. ಅದನ್ನು ಮನುಷ್ಯಜ್ಞಾನದ ಮಾತುಗಳಿಂದ ಸಾರಬೇಕೆಂದು ಕಳುಹಿಸಲಿಲ್ಲ; ಹಾಗೆ ಸಾರಿದರೆ ಕ್ರಿಸ್ತನ ಶಿಲುಬೆಯ ಶಕ್ತಿಯು ಮಾತಿನ ಚತುರತೆಯಿಂದ ನಿರರ್ಥಕವಾಗಿ ಹೋಗುತ್ತದೆ. ಶಿಲುಬೆಯ ಸಂದೇಶವು ನಾಶನದ ಮಾರ್ಗದಲ್ಲಿರುವವರಿಗೆ ಹುಚ್ಚುತನವಾಗಿದೆ, ಆದರೆ ರಕ್ಷಣೆಯ ಮಾರ್ಗದಲ್ಲಿರುವ ನಮಗೆ ಇದು ದೇವರ ಶಕ್ತಿಯಾಗಿದೆ. “ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು, ವಿವೇಕಿಗಳ ವಿವೇಕವನ್ನು ವಿಫಲಗೊಳಿಸುವೆನು.” ಎಂದು ಬರೆಯಲ್ಪಟ್ಟಿದೆ.

ಲೋಕವು ತನ್ನ ಜ್ಞಾನದಿಂದ ದೇವರನ್ನು ತಿಳಿದುಕೊಳ್ಳದೆ ಹೋದದ್ದರಿಂದ; ಮೂರ್ಖತನವೆನಿಸಿಕೊಂಡಿರುವ ನಮ್ಮ ಬೋಧನೆಯ ಮೂಲಕ ನಂಬುವವರನ್ನು ರಕ್ಷಿಸುವುದು ದೇವರಿಗೆ ಹಿತವೆಂದು ತೋರಿತು. ಯೆಹೂದ್ಯರು ಸೂಚಕಕಾರ್ಯಗಳನ್ನು ಕೇಳುತ್ತಾರೆ, ಗ್ರೀಕರು ಜ್ಞಾನವನ್ನು ಹುಡುಕುತ್ತಾರೆ; ನಾವಾದರೋ ಶಿಲುಬೆಗೆ ಹಾಕಲ್ಪಟ್ಟ ಕ್ರಿಸ್ತನನ್ನು ಸಾರುತ್ತೇವೆ; ಕ್ರಿಸ್ತನ ಸಂದೇಶವು ಯೆಹೂದ್ಯರಿಗೆ ವಿಘ್ನವೂ ಮತ್ತು ಗ್ರೀಕರಿಗೆ ಮೂರ್ಖತನವೂ ಆಗಿದೆ. ಆದರೆ ದೇವರಿಂದ ಕರಿಸಿಕೊಂಡವರಾದ ಯೆಹೂದ್ಯರಿಗಾಗಲಿ, ಗ್ರೀಕರಿಗಾಗಲಿ ಕ್ರಿಸ್ತನೇ ದೇವರ ಶಕ್ತಿಯೂ ಮತ್ತು ದೇವರ ಜ್ಞಾನವೂ ಆಗಿರುವಾತನೆಂದು ನಾವು ಸಾರುತ್ತೇವೆ. ದೇವರ ಬುದ್ಧಿಹೀನತೆಯು ಮನುಷ್ಯರ ಜ್ಞಾನಕ್ಕಿಂತಲೂ ಶ್ರೇಷ್ಠವಾದದ್ದು, ದೇವರ ಬಲಹೀನತೆಯು ಮನುಷ್ಯರ ಬಲಕ್ಕಿಂತಲೂ ಶಕ್ತಿಯುಳ್ಳದ್ದಾಗಿದೆ.

ಸಹೋದರರೇ, ನಾನು ಗುಪ್ತವಾಗಿದ್ದ ದೇವರ ಸತ್ಯಾರ್ಥಗಳನ್ನು ತಿಳಿಸುವವನಾಗಿ ನಿಮ್ಮ ಬಳಿಗೆ ಬಂದಾಗ ವಾಕ್ಚಾತುರ್ಯದಿಂದಾಗಲಿ, ಜ್ಞಾನದಿಂದಾಗಲಿ ಬರಲಿಲ್ಲ. ನಾನು ಶಿಲುಬೆಗೆ ಹಾಕಲ್ಪಟ್ಟ ಯೇಸು ಕ್ರಿಸ್ತನನ್ನೇ ಹೊರತು ಬೇರೆ ಯಾವುದನ್ನೂ ತಿಳಿಯದವನಾಗಿ ನಿಮ್ಮಲ್ಲಿ ಇರುವೆನೆಂದು ತೀರ್ಮಾನಿಸಿಕೊಂಡೆನು. ಇದಲ್ಲದೆ ನಾನು ನಿಮ್ಮಲ್ಲಿಗೆ ಬಂದಾಗ ನಿಮ್ಮ ಬಳಿಯಲ್ಲಿ ಬಲಹೀನನೂ, ಭಯಪಡುವವನೂ, ಬಹು ನಡುಗುವವನೂ ಆಗಿದ್ದೆನು. ನಿಮ್ಮ ನಂಬಿಕೆಯು ಮನುಷ್ಯಜ್ಞಾನವನ್ನು ಆಧಾರ ಮಾಡಿಕೊಳ್ಳದೆ ದೇವರ ಶಕ್ತಿಯನ್ನು ಆಧಾರಮಾಡಿಕೊಳ್ಳಬೇಕೆಂದು ನನ್ನ ಬೋಧನೆಯಲ್ಲಿಯೂ, ಪ್ರಸಂಗದಲ್ಲಿಯೂ ಮನವೊಲಿಸುವ ಜ್ಞಾನವಾಕ್ಯಗಳನ್ನು ನಾನು ಪ್ರಯೋಗಿಸದೇ ದೇವರಾತ್ಮನ ಬಲವನ್ನು ತೋರ್ಪಡಿಸುವ ವಾಕ್ಯಗಳನ್ನೇ ಪ್ರಯೋಗಿಸಿದೆನು.

ಆದರೆ ಪರಿಪಕ್ವತೆಯುಳ್ಳವರ ಮಧ್ಯದಲ್ಲಿ ಜ್ಞಾನವನ್ನೇ ಹೇಳುತ್ತೇವೆ. ಅದು ಇಹಲೋಕದ ಜ್ಞಾನವಲ್ಲ, ಗತಿಸಿ ಹೋಗುವ ಇಹಲೋಕಾಧಿಕಾರಿಗಳ ಜ್ಞಾನವೂ ಅಲ್ಲ. ಇದುವರೆಗೆ ಗುಪ್ತವಾಗಿದ್ದ ಸತ್ಯಾರ್ಥವನ್ನು ತಿಳಿಸುವಲ್ಲಿ ದೇವರ ಜ್ಞಾನವನ್ನೇ ಹೇಳುತ್ತೇವೆ. ಅದು ಯಾವುದೆಂದರೆ ದೇವರು ನಮ್ಮ ಮಹಿಮೆಗಾಗಿ ಲೋಕೋತ್ಪತ್ತಿಗಿಂತ ಮೊದಲೇ ನೇಮಿಸಿ ಮರೆಮಾಡಿದ್ದ ದೇವರ ಜ್ಞಾನದ ಮರ್ಮವೇ ಆಗಿದೆ. ಇದನ್ನು ಇಹಲೋಕಾಧಿಕಾರಿಗಳಲ್ಲಿ ಯಾರೂ ಅರಿತಿರಲಿಲ್ಲ; ಅರಿತಿದ್ದರೆ ಅವರು ಮಹಿಮೆಯುಳ್ಳ ಕರ್ತನನ್ನು ಶಿಲುಬೆಗೆ ಹಾಕಿಸುತ್ತಿರಲಿಲ್ಲ; ಆದರೆ ದೇವರ ವಾಕ್ಯಗಳಲ್ಲಿ ಬರೆದಿರುವ ಪ್ರಕಾರ, “ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಮಾಡಿರುವಂಥದೆಲ್ಲವನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಅದರ ಭಾವನೆಯು ಮನುಷ್ಯನ ಹೃದಯದಲ್ಲಿ ಹುಟ್ಟಲಿಲ್ಲ.”

ನಮಗಾದರೋ ದೇವರು ತನ್ನ ಆತ್ಮನ ಮೂಲಕ ಅದನ್ನು ಪ್ರಕಟಪಡಿಸಿದನು. ಆ ಆತ್ಮನು ಎಲ್ಲಾ ವಿಷಯಗಳನ್ನು, ದೇವರ ಅಗಾಧವಾದ ವಿಷಯಗಳನ್ನು ಕೂಡ ಪರಿಶೋಧಿಸುವವನಾಗಿದ್ದಾನೆ. ಮನುಷ್ಯನೊಳಗಿನ ಆಲೋಚನೆಗಳು ಅವನಲ್ಲಿರುವ ಮನುಷ್ಯತ್ಮನಿಗಲ್ಲದೆ ಮತ್ತಾರಿಗೆ ತಿಳಿಯುವುದು? ಹಾಗೆಯೇ ದೇವರಾಲೋಚನೆಗಳನ್ನು ದೇವರ ಆತ್ಮನೇ ಹೊರತು ಬೇರೆ ಯಾರಿಂದಲೂ ಗ್ರಹಿಸಲು ಸಾಧ್ಯವಿಲ್ಲ. ನಾವು ಇಹಲೋಕದ ಆತ್ಮವನ್ನು ಹೊಂದದೆ ದೇವರು ನಮಗೆ ಉಚಿತವಾಗಿ ದಯಪಾಲಿಸಿರುವ ವರಗಳನ್ನು ತಿಳಿದುಕೊಳ್ಳುವುದಕ್ಕಾಗಿ ದೇವರಿಂದ ಬಂದ ಆತ್ಮವನ್ನೇ ಹೊಂದಿದವರಾಗಿದ್ದೇವೆ. ಇವುಗಳನ್ನು ಮನುಷ್ಯ ಜ್ಞಾನವು ಕಲಿಸಿದ ಮಾತುಗಳಿಂದ ಹೇಳದೆ ಪವಿತ್ರಾತ್ಮನೇ ಕಲಿಸಿಕೊಟ್ಟ ಮಾತುಗಳಿಂದ ಹೇಳಿ ಆತ್ಮೀಕವಾದವುಗಳನ್ನು ಆತ್ಮೀಕರಾದವರಿಗೆ ಯುಕ್ತವಾದ ರೀತಿಯಲ್ಲಿ ಸ್ಪಷ್ಟಪಡಿಸುತ್ತೇವೆ.

ಪ್ರಾಪಂಚಿಕನಾದವನು ದೇವರಾತ್ಮನ ವಿಷಯಗಳನ್ನು ಬೇಡವೆನ್ನುತ್ತಾನೆ; ಅವು ಅವನಿಗೆ ಹುಚ್ಚುಮಾತನಾಗಿ ತೋರುತ್ತವೆ; ಅವು ಆಧ್ಯಾತ್ಮದ ಮೂಲಕ ತಿಳಿದುಕೊಳ್ಳ ಬೇಕಾಗಿರುವುದರಿಂದ ಅವನು ಅವುಗಳನ್ನು ಗ್ರಹಿಸಲಾರನು. ಪವಿತ್ರಾತ್ಮನಿಂದ ನಡಿಸಿಕೊಳ್ಳುವವನೋ ಎಲ್ಲವನ್ನೂ ವಿವೇಚಿಸಿ ತಿಳಿದುಕೊಳ್ಳುತ್ತಾನೆ; ಆದರೆ ಅವನಿಗೆ ಯಾರೂ ವಿವೇಚಿಸಿ ತಿಳಿಸಿಕೊಡಬೇಕಾಗಿಲ್ಲ. “ಕರ್ತನ ಮನಸ್ಸನ್ನು ತಿಳಿದುಕೊಂಡು ಆತನಿಗೆ ಉಪದೇಶಿಸುವವನಾರು?” ಎಂದು ಬರೆದಿದೆಯಲ್ಲಾ. ನಾವಾದರೋ ಕ್ರಿಸ್ತನ ಮನಸ್ಸನ್ನು ಹೊಂದಿದವರಾಗಿದ್ದೇವೆ.

ಆದರೆ ಸಹೋದರರೇ ನಾನಂತೂ ಆತ್ಮೀಕರೊಂದಿಗೆ ಮಾತನಾಡುವಂತೆ ನಿಮ್ಮ ಸಂಗಡ ಮಾತನಾಡದೆ ಪ್ರಾಪಂಚಿಕರೂ ಕ್ರಿಸ್ತನ ವಿಷಯದಲ್ಲಿ ಎಳೆಗೂಸುಗಳೂ ಆಗಿರುವವರ ಹಾಗೆ ನಿಮ್ಮ ಸಂಗಡ ಮಾತನಾಡಬೇಕಾಯಿತು. ನಿಮಗೆ ಹಾಲು ಕುಡಿಸಿದೆನು ಆಹಾರ ಕೊಡಲಿಲ್ಲ. ಆಹಾರವನ್ನು ತಿನ್ನುವುದಕ್ಕೆ ನೀವು ಇನ್ನೂ ಸಮರ್ಥರಾಗಿರಲಿಲ್ಲ. ಈಗಲೂ ನೀವು ಸಮರ್ಥರಾಗಿಲ್ಲ.

ನಾನು ಸಸಿಯನ್ನು ನೆಟ್ಟೆನು. ಅಪೊಲ್ಲೋಸನು ನೀರನ್ನು ಹೊಯ್ಯಿದನು. ಆದರೆ ಅದನ್ನು ಬೆಳೆಸಿದವನು ದೇವರೇ. ಹೀಗಿರಲಾಗಿ ನೆಡುವವನಾಗಲಿ, ನೀರುಹೊಯ್ಯುವವನಾಗಲಿ ಮುಖ್ಯವಾದವನಲ್ಲ. ಬೆಳೆಸುವ ದೇವರೇ ಪ್ರಾಮುಖ್ಯವಾದಾತನು. ನೆಡುವವನೂ, ನೀರು ಹೊಯ್ಯುವವನೂ ಸರಿಸಮಾನರೇ ಆಗಿದ್ದಾರೆ. ಆದರೆ ಪ್ರತಿಯೊಬ್ಬನಿಗೆ ಅವನವನ ಶಮ್ರಕ್ಕೆ ತಕ್ಕಂತೆ ಕೂಲಿಯು ದೊರೆಯುವುದು. ನಾವು ದೇವರ ಜೊತೆಕೆಲಸದವರು. ನೀವು ದೇವರ ಹೊಲವೂ. ದೇವರ ಮಂದಿರವೂ ಆಗಿದ್ದೀರಿ.

ದೇವರು ನನಗೆ ಕೊಟ್ಟ ಕೃಪೆಯ ಪ್ರಕಾರ ನಾನು ಜಾಣ್ಮೆಯುಳ್ಳ ಪ್ರವೀಣನಾದ ಶಿಲ್ಪಿಯಂತೆ ಅಸ್ತಿವಾರ ಹಾಕಿದೆನು. ಮತ್ತೊಬ್ಬನು ಅದರ ಮೇಲೆ ಕಟ್ಟುತ್ತಾನೆ. ಆದರೆ ತಾನು ಅದರ ಮೇಲೆ ಹೇಗೆ ಕಟ್ಟುತ್ತಿದ್ದೇನೆಂದು ಪ್ರತಿಯೊಬ್ಬನು ಎಚ್ಚರಿಕೆಯಿಂದಿರಬೇಕು. ಯೇಸು ಕ್ರಿಸ್ತನೆಂಬ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ. ಆ ಅಸ್ತಿವಾರದ ಮೇಲೆ ಚಿನ್ನ, ಬೆಳ್ಳಿ, ರತ್ನಗಳು, ಕಟ್ಟಿಗೆ, ಹುಲ್ಲು, ಆಪು ಮುಂತಾದವುಗಳಲ್ಲಿ ಯಾವುದರಿಂದ ಕಟ್ಟಿದರೂ, ಅವನವನ ಕೆಲಸವು ಪ್ರಕಟವಾಗುವುದು. ಕ್ರಿಸ್ತನು ಬರುವ ದಿನವು ಬೆಂಕಿಯೊಡನೆ ಉದಯವಾಗಿ ಆ ಕೆಲಸವನ್ನು ಸ್ಪಷ್ಟವಾಗಿ ತೋರಿಸುವುದು. ಅವನವನ ಕೆಲಸವೆಂಥದೆಂಬುದನ್ನು ಆ ಬೆಂಕಿ ಶೋಧಿಸುವುದು. ಒಬ್ಬನು ಆ ಅಸ್ತಿವಾರದ ಮೇಲೆ ಕಟ್ಟಿದ್ದು ಉಳಿದರೆ ಅವನಿಗೆ ಪ್ರತಿಫಲ ಸಿಕ್ಕುವುದು. ಒಬ್ಬನು ಕಟ್ಟಿದ್ದು ಸುಟ್ಟು ಹೋದರೆ ಅವನಿಗೆ ನಷ್ಟವಾಗುವುದು. ತಾನಾದರೋ ರಕ್ಷಣೆ ಹೊಂದುವನು. ಆದರೆ ಬೆಂಕಿಯೊಳಗಿಂದ ತಪ್ಪಿಸಿಕೊಂಡವನ ಹಾಗಿರುವನು.

ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಕೊಳ್ಳುವುದಕ್ಕೆ ನನಗೇನೂ ಆಸ್ಪದವಿಲ್ಲ; ಸಾರಲೇ ಬೇಕೆಂಬ ನಿರ್ಬಂಧ ನನ್ನ ಮೇಲಿದೆ, ನಾನು ಸುವಾರ್ತೆಯನ್ನು ಸಾರದಿದ್ದರೆ ನನ್ನ ಗತಿಯನ್ನು ಏನೆಂದು ಹೇಳಲಿ!

ನಾನು ಸ್ವಂತ ಇಷ್ಟದಿಂದ ಈ ಕೆಲಸವನ್ನು ಮಾಡಿದರೆ ನನಗೆ ಪ್ರತಿಫಲ ದೊರೆಯುವುದು; ಇಲ್ಲದಿದ್ದರೂ ಈ ಕರ್ತವ್ಯ ನನ್ನ ವಶಕ್ಕೆ ಒಪ್ಪಿಸಿಕೊಡಲ್ಪಟ್ಟಿದೆ. ಹಾಗಾದರೆ ನನಗೆ ಸಿಗುವ ಬಹುಮಾನವೇನು? ನಾನು ಸುವಾರ್ತೆಯನ್ನು ಸಾರುವಾಗ ಅದರಿಂದ ದೊರೆಯುವ ಪ್ರತಿಫಲವನ್ನು ಪಡೆಯದೇ ಅದನ್ನು ಉಚಿತವಾಗಿ ಸಾರುವುದೇ ನನಗೆ ದೊರೆಯುವ ಪ್ರತಿಫಲವಾಗಿದೆ.

ನಾನು ಎಲ್ಲಾ ವಿಷಯಗಳಲ್ಲಿ ಸ್ವತಂತ್ರನಾಗಿದ್ದರೂ ಹೆಚ್ಚು ಜನರನ್ನು ಸಂಪಾದಿಸಿಕೊಳ್ಳಬೇಕೆಂದು ನಾನು ಎಲ್ಲರಿಗೂ ದಾಸನಾದೆನು. ಯೆಹೂದ್ಯರನ್ನು ಸಂಪಾದಿಸಿಕೊಳ್ಳುವುದಕ್ಕೆ ಯೆಹೂದ್ಯರಿಗೆ ಯೆಹೂದ್ಯನಂತಾದೆನು. ನಾನು ಧರ್ಮಶಾಸ್ತ್ರಕ್ಕೆ ಅಧೀನನಲ್ಲದವನಾದರೂ, ಧರ್ಮಶಾಸ್ತ್ರಕ್ಕೆ ಅಧೀನರಾದವರನ್ನು ಸಂಪಾದಿಸಿಕೊಳ್ಳುವುದಕ್ಕಾಗಿ ಅವರಿಗೋಸ್ಕರ ಧರ್ಮಶಾಸ್ತ್ರಕ್ಕೆ ಅಧೀನನಂತಾದೆನು. ನಾನು ದೇವರ ಧರ್ಮಶಾಸ್ತ್ರ ಇಲ್ಲದವನಲ್ಲ, ಕ್ರಿಸ್ತನ ನಿಯಮಕ್ಕೊಳಗಾದವನೇ; ಆದರೂ ಧರ್ಮಶಾಸ್ತ್ರಕ್ಕೆ ಹೊರತಾದವರನ್ನು ಸಂಪಾದಿಸಿಕೊಳ್ಳುವುದಕ್ಕಾಗಿ ಧರ್ಮಶಾಸ್ತ್ರ ಬಾಹಿರನಂತಾದೆನು. ಬಲವಿಲ್ಲದವರನ್ನು ಸಂಪಾದಿಸುವುದಕ್ಕಾಗಿ ನಾನೂ ಬಲವಿಲ್ಲದವನಾದೆನು. ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಎಲ್ಲರಿಗೂ ಎಲ್ಲರಂತಾದೆನು.

ನನಗೆ ಪ್ರವಾದನ ವರವಿದ್ದರೂ, ಎಲ್ಲಾ ರಹಸ್ಯಗಳೂ, ಸಕಲ ವಿಧವಾದ ವಿದ್ಯೆಗಳನ್ನು ತಿಳಿದ್ದರೂ, ಬೆಟ್ಟಗಳನ್ನೂ ತೆಗೆದಿಡುವುಷ್ಟು ನಂಬಿಕೆಯಿದ್ದರೂ, ಪ್ರೀತಿಯಿಲ್ಲದವನಾಗಿದ್ದರೆ ನಾನು ಏನೂ ಅಲ್ಲದವನಾಗಿದ್ದೇನೆ. ನನಗಿರುವುದೆಲ್ಲವನ್ನು ಬಡವರಿಗೆ ಅನ್ನದಾನಮಾಡಿದರೂ, ನನ್ನ ದೇಹವನ್ನು ಸುಡುವುದಕ್ಕೆ ಒಪ್ಪಿಸಿದರೂ, ಪ್ರೀತಿಯು ನನಗಿಲ್ಲದಿದ್ದರೆ ನನಗೇನು ಪ್ರಯೋಜನವಿಲ್ಲ. ನಾನು ಬರಿದಾಗಿರುವನು.

ಸಹೋದರರೇ, ನಾನು ನಿಮಗೆ ತಿಳಿಸಿದ ಸುವಾರ್ತೆಯನ್ನು ನಿಮ್ಮ ನೆನಪಿಗೆ ತರುತ್ತೇನೆ; ನೀವು ಅದನ್ನು ಸ್ವೀಕರಿಸಿ, ಅದರಲ್ಲಿ ನಿಂತಿದ್ದೀರಿ. ನಾನು ನಿಮಗೆ ಸಾರಿದ ಸುವಾರ್ತೆಯನ್ನು ನೀವು ದೃಢವಾಗಿ ಹಿಡಿದುಕೊಂಡರೆ ನಿಮಗೆ ರಕ್ಷಣೆಯಾಗುತ್ತದೆ. ಇಲ್ಲದಿದ್ದರೆ ನಿಮ್ಮ ನಂಬಿಕೆಯು ನಿರರ್ಥಕವಾಗುತ್ತದೆ.

ಆದರೆ ನಾನು ಈಗ ಎಂಥವನಾಗಿದ್ದೇನೊ ಅದು ದೇವರ ಕೃಪೆಯಿಂದಲೇ ಮತ್ತು ಆತನ ಕೃಪೆಯು ನನ್ನಲ್ಲಿ ನಿಷ್ಫಲವಾಗಲಿಲ್ಲ. ನಾನು ಅವರೆಲ್ಲರಿಗಿಂತಲೂ ಹೆಚ್ಚಾಗಿ ಪ್ರಯಾಸಪಟ್ಟೆನು. ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿರುವ ದೇವರ ಕೃಪೆಯೇ. ಆದ್ದರಿಂದ ನಾನಾದರೇನು ಅಥವಾ ಅವರಾದರೇನು, ಈ ರೀತಿಯಾಗಿ ನಾವೆಲ್ಲರೂ ಸುರ್ವಾತೆಯನ್ನು ಸಾರಿದ್ದೇವೆ; ಅದನ್ನು ನೀವು ನಂಬಿದಿರಿ.

ಮೂರ್ಖನೇ; ನೀನು ಬಿತ್ತುವ ಬೀಜವು ಸಾಯದಿದ್ದರೆ, ಅದು ಜೀವ ತಾಳುವುದುಂಟೆ? ಇಲ್ಲ. ನೋಡು; ಒಂದು ವೇಳೆ ಗೋದಿಯಕಾಳನ್ನಾಗಲಿ ಬೇರೆ ಯಾವುದೇ ಬೀಜವನ್ನಾಗಲಿ ಬಿತ್ತುವಾಗ ಬರೀ ಕಾಳನ್ನೇ ಹೊರತು ಮುಂದೆ ಬೆಳೆಯಬೇಕಾದ ಗಿಡವನ್ನು ಬಿತ್ತುವುದಿಲ್ಲ.

ಕ್ರಿಸ್ತನ ಮುಖಾಂತರ ನಮ್ಮನ್ನು ವಿಜಯೋತ್ಸವದತ್ತ ನಡೆಸುವ ಹಾಗೂ ನಮ್ಮ ಮೂಲಕವಾಗಿ ತನ್ನ ಜ್ಞಾನವೆಂಬ ಸುವಾಸನೆಯನ್ನು ಎಲ್ಲಾ ಸ್ಥಳಗಳಲ್ಲಿ ಹರಡಿಸಿದ ದೇವರಿಗೆ ಸ್ತೋತ್ರವಾಗಲಿ. ರಕ್ಷಣಾ ಮಾರ್ಗದಲ್ಲಿರುವವರಲ್ಲಿಯೂ ಮತ್ತು ನಾಶನದ ಮಾರ್ಗದಲ್ಲಿರುವವರಲ್ಲಿಯೂ ನಾವು ದೇವರಿಗೆ ಕ್ರಿಸ್ತನ ಪರಿಮಳವಾಗಿದ್ದೇವೆ. ನಾವು ವಿನಾಶಮಾರ್ಗದಲ್ಲಿರುವವರಿಗೆ ಮೃತ್ಯುಕಾರಕ ಗಂಧ; ರಕ್ಷಣಾಮಾರ್ಗದಲ್ಲಿರುವವರಿಗೆ ಸಜೀವದಾಯಕ ಸುಗಂಧ. ಇಂಥ ಕಾರ್ಯಗಳಿಗೆ ಯಾರು ಯೋಗ್ಯರು?

ಎಷ್ಟೋ ಮಂದಿ ದೇವರ ವಾಕ್ಯವನ್ನು ಕಲಬೆರಕೆ ಮಾಡಿ ವ್ಯಾಪಾರಮಾಡುತ್ತಾರೆ. ನಾವು ಹಾಗಲ್ಲ; ದೇವರಿಂದಲೇ ನಿಯೋಜಿತರಾಗಿ, ದೇವರ ಸಮಕ್ಷಮದಲ್ಲಿ, ಕ್ರಿಸ್ತ ಅನ್ಯೋನ್ಯತೆಯಲ್ಲಿ ನಾವು ಯಥಾರ್ಥವಾದುದನ್ನೇ ಉಪದೇಶಿಸುವವರು.

ಕಲ್ಲಿನ ಮೇಲೆ ಕೊರೆಯಲಾದ ಮೃತ್ಯುಕಾರಕವಾದ ಈ ಶಾಸನ ಅಷ್ಟು ಮಹಿಮೆಯಿಂದ ಕೂಡಿದ್ದಾಗಿತ್ತು. ಆ ಮಹಿಮೆಯಿಂದ ಮೋಶೆಯ ಮುಖವನ್ನು ಆವರಿಸಿದ್ದ ಮಹಿಮೆಯೂ ಕುಂದಿಹೋಗುವಂಥದ್ದಾಗಿದ್ದರೂ ಆ ಮಹಿಮೆಯಿಂದಾಗಿ ಆತನ ಮುಖವನ್ನು ದಿಟ್ಟಿಸಿ ನೋಡಲು ಇಸ್ರಾಯೇಲರಿಗೆ ಆಗಲಿಲ್ಲ. ಹೀಗಿದ್ದ ಮೇಲೆ ದೇವರಾತ್ಮಸಂಬಂಧವಾದ ಈ ಸೇವೆಯು ಇನ್ನೆಷ್ಟು ಮಹಿಮೆಯಿಂದ ಇರಬೇಕಲ್ಲವೇ? ಅಪರಾಧ ನಿರ್ಣಯಕ್ಕೆ ಸಾಧನವಾಗಿರುವ ಸೇವೆಯು ಮಹಿಮೆಹೊಂದಿರಲಾಗಿ, ನೀತಿಗೆ ಸಾಧನವಾಗಿರುವ ಸೇವೆಯು ಇನ್ನೆಷ್ಟೋ ಅಧಿಕ ಮಹಿಮೆಯುಳ್ಳದ್ದಾಗಿ ಇರತ್ತದಲ್ಲವೋ? ಅಧಿಕವಾದ ಮಹಿಮೆಯುಳ್ಳದ್ದು ಬಂದದ್ದರಿಂದ ಮೊದಲಿದ್ದ ಮಹಿಮೆಯು ಅದರ ಎದುರು ಮಹಿಮೆಯಿಲ್ಲದಂತಾಯಿತು. ಅಳಿದು ಹೋಗುವಂಥದ್ದೇ, ಅಷ್ಟು ಪ್ರಭಾವವುಳ್ಳದ್ದಾಗಿದ್ದರೆ ಶಾಶ್ವತವಾಗಿ ಉಳಿಯುವಂಥದ್ದು ಮತ್ತೆಷ್ಟು ಹೆಚ್ಚಾದ ಪ್ರಭಾವವುಳ್ಳದ್ದಾಗಿರಬೇಕಲ್ಲವೋ?

ನಮಗೆ ಇಂಥ ಭರವಸೆ ಇರುವುದರಿಂದಲೇ ನಾವು ಇಷ್ಟು ಧೈರ್ಯದಿಂದ ಇದ್ದೇವೆ.

ಇವೆಲ್ಲವುಗಳು ದೇವರಿಂದಲೇ ಉಂಟಾದದ್ದು. ದೇವರು ಕ್ರಿಸ್ತನ ಮೂಲಕ ನಮ್ಮನ್ನು ತನಗೆ ಸಂಧಾನಪಡಿಸಿಕೊಂಡು, ಸಂಧಾನಮಾಡುವ ಸೇವೆಯನ್ನು ನಮಗೆ ಅನುಗ್ರಹಿಸಿದ್ದಾನೆ; ಹೇಗೆಂದರೆ, ಕ್ರಿಸ್ತನಲ್ಲಿ ದೇವರು ಜಗತ್ತನ್ನು ತನ್ನೊಡನೆ ಸಂಧಾನಮಾಡಿಕೊಳ್ಳುತ್ತಿದ್ದಾನೆ; ಮನುಷ್ಯರ ಅಪರಾಧಗಳನ್ನು ಅವರ ಲೆಕ್ಕಕ್ಕೆ ಹಾಕದೇ, ಈ ಸಂಧಾನದ ಸಂದೇಶವನ್ನು ಎಲ್ಲರಿಗೂ ಸಾರುವಂತೆ ಅದನ್ನು ನಮ್ಮ ಮೇಲೆ ಹೊರಿಸಿದ್ದಾನೆ.

ಆದ್ದರಿಂದ ನಾವು ಕ್ರಿಸ್ತನ ರಾಯಭಾರಿಗಳು. ದೇವರೇ ನಮ್ಮ ಮುಖಾಂತರ ಕರೆನೀಡುತ್ತಿದ್ದಾನೆ. ದೇವರೊಡನೆ ನೀವು ಸಂಧಾನಮಾಡಿಕೊಳ್ಳಿರೆಂದು ಕ್ರಿಸ್ತನ ಹೆಸರಿನಲ್ಲಿ ನಾವು ನಿಮ್ಮನ್ನು ವಿನಂತಿಸುತೇವೆ.

“ಸುಪ್ರಸನ್ನತೆಯ ಕಾಲದಲ್ಲಿ ನಿನ್ನ ಮನವಿಯನ್ನು ಕೇಳಿದೆನು, ರಕ್ಷಣೆಯ ದಿನದಲ್ಲಿ ನಿನಗೆ ಸಹಾಯ ಮಾಡಿದೆನು” ಎಂದು ದೇವರು ಹೇಳುತ್ತಾನಲ್ಲಾ. ನೋಡಿ, ಈಗಲೇ ಆ ಸುಪ್ರಸನ್ನತೆಯ ಕಾಲವು; ಇಂದೇ ಆ ರಕ್ಷಣೆಯ ದಿನ.

ನಮ್ಮ ಸೇವೆಯು ಯಾರ ಮುಂದೆಯೂ ಅವಹೇಳನಕ್ಕೆ ಗುರಿಯಾಗದಂತೆ, ನಾವು ಯಾರಿಗೂ ಅಡ್ಡಿಯನ್ನು ಒಡ್ಡಲಿಲ್ಲ.

ದೇವರ ಚಿತ್ತಾನುಸಾರವಾಗಿರುವ ದುಃಖವು ರಕ್ಷಣೆಗೆ ಕಾರಣವಾಗುವ ಮಾನಸಾಂತರವನ್ನುಂಟು ಮಾಡುತ್ತದೆ, ಆ ಮಾನಸಾಂತರದಲ್ಲಿ ಪಶ್ಚಾತ್ತಾಪಕ್ಕೆ ಆಸ್ಪದವಿಲ್ಲ; ಆದರೆ ಲೋಕದವರಿಗಿರುವಂಥ ದುಃಖವು ಮರಣವನ್ನುಂಟುಮಾಡುತ್ತದೆ.

ಆದರೆ ಮಿತವಾಗಿ ಬಿತ್ತುವವನು ಮಿತವಾಗಿ ಕೊಯ್ಯುವನು. ಹೇರಳವಾಗಿ ಬಿತ್ತುವವನು ಹೇರಳವಾಗಿ ಕೊಯ್ಯುತ್ತಾನೆ. ಇದು ನಿಮಗೆ ತಿಳಿದಿರಲಿ.

ಬಿತ್ತುವವನಿಗೆ ಬೀಜವನ್ನೂ, ತಿನ್ನುವವನಿಗೆ ಆಹಾರವನ್ನು ಕೊಡುವಾತನು ನಿಮಗೂ ಬಿತ್ತುವುದಕ್ಕೆ ಬೀಜವನ್ನು ಕೊಟ್ಟು ಅದನ್ನು ಹೆಚ್ಚಿಸಿ ನಿಮ್ಮ ಧರ್ಮಕಾರ್ಯಗಳಿಂದಾಗುವ ಫಲಗಳನ್ನು ವೃದ್ಧಿಪಡಿಸುವನು.

ನಿಮಗೆ ಆಚೆಯಿರುವ ಸೀಮೆಗಳಲ್ಲಿಯೂ ಸುವಾರ್ತೆಯನ್ನು ಸಾರುವೆವೆಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದೆವಷ್ಟೇ. ಮತ್ತೊಬ್ಬರ ಜಾಗದಲ್ಲಿ ಸಿದ್ಧವಾಗಿ ನಮಗೆ ಸಿಕ್ಕಿದ ಫಲವನ್ನು ಕುರಿತು ನಾವು ಹೆಚ್ಚಳಪಡುವುದಿಲ್ಲ.

ನೀವು ಅಭಿವೃದ್ಧಿಹೊಂದಬೇಕೆಂದು ನನ್ನನ್ನು ನಾನೇ ತಗ್ಗಿಸಿಕೊಂಡು ದೇವರ ಸುವಾರ್ತೆಯನ್ನು ನಿಮಗೆ ಉಚಿತವಾಗಿ ಸಾರಿದರಲ್ಲಿ ಪಾಪಮಾಡಿದ್ದೇನೋ?

ಆದರೂ ನಾವು ನಿಮಗೆ ಸಾರಿದ ಸುವಾರ್ತೆಗೆ ವಿರುದ್ಧವಾದದ್ದನ್ನು, ನಾವೇ ಆಗಲಿ ಅಥವಾ ಪರಲೋಕದಿಂದ ಬಂದ ದೇವದೂತನೇ ಆಗಲಿ, ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗಲಿ. ನಾವು ಮೊದಲು ಹೇಳಿದಂತೆಯೇ ಈಗಲೂ ನಾನು ತಿರುಗಿ ಹೇಳುತ್ತೇನೆ. ನೀವು ಸ್ವೀಕರಿಸಿದ ಸುವಾರ್ತೆಗೆ ವಿರುದ್ಧವಾದದ್ದನ್ನು ಯಾವನಾದರೂ ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗುವನು.

ನಾನೀಗ ಯಾರನ್ನು ಒಲಿಸಿಕೊಳ್ಳುತ್ತಾ ಇದ್ದೇನೆ? ಮನುಷ್ಯರನ್ನೋ? ದೇವರನ್ನೋ? ನಾನು ಮನುಷ್ಯರನ್ನು ಮೆಚ್ಚಿಸುವುದಕ್ಕೆ ಪ್ರಯತ್ನಿಸುತ್ತಾ ಇದ್ದೇನೋ? ಇನ್ನೂ ಮನುಷ್ಯರನ್ನು ಮೆಚ್ಚಿಸುವವನಾಗಿದ್ದರೆ ನಾನು ಕ್ರಿಸ್ತನ ಸೇವಕನಲ್ಲ. ಸಹೋದರರೇ, ನಾನು ಸಾರಿದ ಸುವಾರ್ತೆಯಂತೂ ಕೇವಲ ಮನುಷ್ಯನಿಂದ ಬಂದದ್ದಲ್ಲವೆಂದು ನೀವು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ.

ನಾನು ಸಹ ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ, ಇನ್ನು ಜೀವಿಸುವವನು ನಾನಲ್ಲ, ಕ್ರಿಸ್ತನು ನನ್ನಲ್ಲಿ ಜೀವಿಸುತ್ತಾನೆ. ಈಗ ಶರೀರದಲ್ಲಿರುವ ನಾನು ಜೀವಿಸುವುದು ಹೇಗೆಂದರೆ ದೇವಕುಮಾರನ ಮೇಲಣ ನಂಬಿಕೆಯಿಂದಲೇ. ಆತನು ನನ್ನನ್ನು ಪ್ರೀತಿಸಿ ನನಗಾಗಿ ತನ್ನನ್ನು ಒಪ್ಪಿಸಿಕೊಟ್ಟನು.

ಮೋಸಹೋಗಬೇಡಿರಿ. ದೇವರನ್ನು ಅಪಹಾಸ್ಯ ಮಾಡಲಾಗುವುದಿಲ್ಲ. ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು. ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶವನ್ನು ಕೊಯ್ಯುವನು. ಆತ್ಮನ ಕುರಿತಾಗಿ ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು.

ಇದಲ್ಲದೆ ಆತನು ಬಂದು ದೂರವಾಗಿದ್ದ ನಿಮಗೂ ಮತ್ತು ಸಮೀಪವಾಗಿದ್ದವರಿಗೂ ಸಮಾಧಾನವನ್ನು ಸಾರಿದನು.

ಆತನು ಕೆಲವರನ್ನು ಅಪೊಸ್ತಲರನ್ನಾಗಿಯೂ, ಕೆಲವರನ್ನು ಪ್ರವಾದಿಗಳನ್ನಾಗಿಯೂ, ಕೆಲವರನ್ನು ಸುವಾರ್ತಿಕರನ್ನಾಗಿಯೂ, ಕೆಲವರನ್ನು ಸಭಾಪಾಲಕರನ್ನಾಗಿಯೂ, ಬೋಧಕರನ್ನಾಗಿಯೂ ನೇಮಿಸಿದನು. ನಾವೆಲ್ಲರೂ ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಉಂಟಾಗುವ ಐಕ್ಯತೆಯನ್ನು ಹೊಂದಿ, ಪರಿಪಕ್ವತೆಯನ್ನು ಪಡೆದು, ಕ್ರಿಸ್ತನ ಪರಿಪೂರ್ಣತೆಯ ಮಟ್ಟವನ್ನು ತಲುಪುವ ತನಕ, ದೇವಜನರನ್ನು ದೇವರ ಸೇವೆಗೆ ಸಿದ್ಧಗೊಳಿಸುವುದಕ್ಕೂ, ಕ್ರಿಸ್ತನ ದೇಹವೆಂಬ ಸಭೆಯು ಅಭಿವೃದ್ಧಿಯಾಗುವುದಕ್ಕೋಸ್ಕರವೂ ಆತನು ಇವರನ್ನು ನೇಮಿಸಿದನು. ಆದ್ದರಿಂದ ನಾವು ಇನ್ನು ಮೇಲೆ ಕೂಸುಗಳಾಗಿರದೇ, ದುರ್ಜನರ ವಂಚನೆಗಳಿಗೂ, ಕುಯುಕ್ತಿಗೂ ಒಳಬಿದ್ದು, ನಾನಾ ಉಪದೇಶಗಳಿಂದ ಕಂಗೆಟ್ಟು ಗಾಳಿಯಿಂದ ಅತ್ತಿತ್ತ ಓಲಾಡುವವರ ಹಾಗಿರದೇ,

ಕ್ರಿಸ್ತನು ನಮ್ಮನ್ನು ಪ್ರೀತಿಸಿ ನಮ್ಮೆಲ್ಲರಿಗೋಸ್ಕರ ತನ್ನನ್ನೇ ದೇವರಿಗೆ ಸುವಾಸನೆಯಾದ ಕಾಣಿಕೆಯಾಗಿಯೂ, ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.

ನಾನು ಮಾತನಾಡಲು ಬಾಯಿ ತೆರೆಯುವಾಗ ಪೂರ್ವಕಾಲದಲ್ಲಿ ಗುಪ್ತವಾಗಿದ್ದ ಸುವಾರ್ತಾಸತ್ಯಗಳನ್ನು ಭಯವಿಲ್ಲದೆ ತಿಳಿಸುವುದಕ್ಕೆ ಬೇಕಾದ ಮಾತುಗಳನ್ನು ದೇವರು ನನಗೆ ಅನುಗ್ರಹಿಸಬೇಕೆಂದು ಪ್ರಾರ್ಥಿಸಿರಿ. ಆ ಸುವಾರ್ತೆಯ ನಿಮಿತ್ತವಾಗಿ ರಾಯಭಾರಿಯಾದ ನಾನು ಸೆರೆಮನೆಯಲ್ಲಿ ಬಿದ್ದಿದ್ದೇನಲ್ಲಾ. ಅದರ ವಿಷಯದಲ್ಲಿ ನಾನು ಮಾತನಾಡಬೇಕಾದ ಹಾಗೆಯೇ ಧೈರ್ಯವಾಗಿ ನಾನು ಮಾತನಾಡುವಂತೆ ನನಗಾಗಿ ಬೇಡಿಕೊಳ್ಳಿರಿ.

ಇದಲ್ಲದೆ ಸಹೋದರರಲ್ಲಿ ಬಹಳ ಜನರು ನನ್ನ ಬಂಧನದಿಂದಲೇ ಕರ್ತನಲ್ಲಿ ಭರವಸವುಳ್ಳವರಾಗಿ ದೇವರ ವಾಕ್ಯವನ್ನು ನಿರ್ಭಯದಿಂದ ಹೇಳುವುದಕ್ಕೆ ಇನ್ನೂ ಹೆಚ್ಚು ಧೈರ್ಯಹೊಂದಿದ್ದಾರೆ. ಕೆಲವರು ಹೊಟ್ಟೆಕಿಚ್ಚುಪಟ್ಟು ಭೇದ ಹುಟ್ಟಿಸಬೇಕೆಂಬ ಮನಸ್ಸಿನಿಂದ ಮತ್ತು ಬೇರೆ ಕೆಲವರು ಒಳ್ಳೆಯ ಭಾವದಿಂದ ಕ್ರಿಸ್ತನನ್ನು ಪ್ರಚುರಪಡಿಸುತ್ತಾರೆ. ಇವರಂತೂ ನಾನು ಸುವಾರ್ತೆಯ ವಿಷಯದಲ್ಲಿ ಉತ್ತರ ಹೇಳುವುದಕ್ಕಾಗಿ ಇಲ್ಲಿ ಹಾಕಲ್ಪಟ್ಟಿದ್ದೆನೆಂದು ತಿಳಿದು ಪ್ರೀತಿಯಿಂದ ಪ್ರಸಿದ್ಧಿಪಡಿಸುತ್ತಿದ್ದಾರೆ. ಆ ಬೇರೆ ತರದವರಾದರೋ ನಾನು ಬೇಡಿಯಿಂದ ಬಂಧಿತನಾಗಿರುವಾಗಲೂ ನನಗೆ ಸಂಕಟವನ್ನು ಹೆಚ್ಚಿಸಬೇಕೆಂದು ಯೋಚಿಸಿ, ಪ್ರಾಮಾಣಿಕವಲ್ಲದ ಸ್ವಾರ್ಥ ಉದ್ದೇಶದಿಂದ ಕ್ರಿಸ್ತನನ್ನು ಪ್ರಸಿದ್ಧಿಪಡಿಸುತ್ತಾರೆ. ಹೇಗಾದರೇನು? ಯಾವ ರೀತಿಯಿಂದಾದರೂ ಸರಿಯೇ ಕಪಟದಿಂದಾಗಲಿ ಅಥವಾ ಸತ್ಯದಿಂದಾಗಲಿ ಕ್ರಿಸ್ತನನ್ನು ಪ್ರಸಿದ್ಧಿಪಡಿಸುವುದುಂಟು, ಇದಕ್ಕೆ ನಾನು ಸಂತೋಷಿಸುತ್ತೇನೆ, ಮುಂದೆಯೂ ಸಂತೋಷಿಸುವೆನು.

ಆಕಾಶದ ಕೆಳಗಿರುವ ಸರ್ವ ಸೃಷ್ಟಿಗೂ ಸಾರಲ್ಪಟ್ಟಂತಹ ಮತ್ತು ನೀವು ಕೇಳಿದಂತಹ ಸುವಾರ್ತೆಯಿಂದ ಉಂಟಾದ ನಿರೀಕ್ಷೆಯಿಂದ ಕದಲಿಹೋಗದಂತೆ ನಂಬಿಕೆಯಲ್ಲಿ ದೃಢವಾಗಿರಿ ಮತ್ತು ನೆಲೆಗೊಂಡಿರಿ. ಇದೇ ಸುವಾರ್ತೆಗೆ ಪೌಲನೆಂಬ ನಾನು ಸೇವಕನಾಗಿದ್ದೇನೆ. ನಾನು ಈಗ ನಿಮಗೋಸ್ಕರ ಅನುಭವಿಸುತ್ತಿರುವ ಬಾಧೆಗಳಲ್ಲಿ ನನಗೆ ಸಂತೋಷವಿದೆ. ಕ್ರಿಸ್ತನ ಯಾತನೆಗಳಲ್ಲಿ ಕೊರತೆಯಾಗಿರುವುದನ್ನು ಆತನ ಸಭೆಯೆಂಬ ದೇಹಕೋಸ್ಕರ ನಾನು ನನ್ನ ದೇಹದಲ್ಲಿ ಅನುಭವಿಸಿ ತೀರಿಸುತ್ತೇನೆ. ದೇವರ ಸಂಕಲ್ಪದ ಮೇರೆಗೆ ನಿಮ್ಮ ಪ್ರಯೋಜನಕ್ಕೋಸ್ಕರವಾಗಿ ನಾನು ಸಭೆಗೆ ಸೇವಕನಾದೆನು. ದೇವರು ತನ್ನ ವಾಕ್ಯವನ್ನು ಸಂಪೂರ್ಣವಾಗಿ ತಿಳಿಸುವ ಕಾರ್ಯವನ್ನು ನನಗೆ ದಯಪಾಲಿಸಿದನು. ಈ ರಹಸ್ಯವಾದ ಸತ್ಯವಾಕ್ಯವು ಹಿಂದಿನ ಯುಗಯುಗಗಳಿಂದಲೂ, ತಲತಲಾಂತರಗಳಿಂದಲೂ ಮರೆಯಾಗಿತ್ತು, ಆದರೆ ಈಗ ದೇವರು ಅದನ್ನು ತನ್ನ ದೇವಜನರಿಗೆ ಪ್ರಕಟಿಸಿದ್ದಾನೆ. ಈ ಮರ್ಮದ ಮಹಿಮಾತಿಶಯವು ಎಷ್ಟೆಂಬುದನ್ನು ಅನ್ಯಜನಗಳಿಗೂ ತಿಳಿಸಲಿಕ್ಕೆ ದೇವರು ಇಚ್ಛಿಸಿದನು. ಈ ಮರ್ಮವು ಏನೆಂದರೆ ಮಹಿಮೆಯ ನಿರೀಕ್ಷೆಗೆ ಆಧಾರನಾಗಿರುವ ಕ್ರಿಸ್ತನು ನಿಮ್ಮಲ್ಲಿದ್ದಾನೆಂಬುದೇ. ನಾವು ಆತನನ್ನು ಸಾರುತ್ತಲಿದ್ದೇವೆ, ಸಕಲರಿಗೂ ಬುದ್ಧಿ ಹೇಳುತ್ತಾ, ಸರ್ವರಿಗೂ ಪೂರ್ಣಜ್ಞಾನವನ್ನು ಉಪದೇಶಿಸುತ್ತಾ, ದೇವರ ಮುಂದೆ ಎಲ್ಲರನ್ನೂ ಕ್ರಿಸ್ತನಲ್ಲಿ ಪ್ರವೀಣರನ್ನಾಗಿ ನಿಲ್ಲಿಸುವುದಕ್ಕೆ ಪ್ರಯತ್ನಿಸುತ್ತಿದ್ದೇವೆ.

ಕರ್ತನಿಂದ ಬಾಧ್ಯತೆಯೆಂಬ ಪ್ರತಿಫಲವನ್ನು ಹೊಂದುವಿರೆಂದು ತಿಳಿದುಕೊಂಡು ಕರ್ತನಾದ ಕ್ರಿಸ್ತನನ್ನು ಸೇವಿಸುವವರಾಗಿರಿ.

ಕ್ರಿಸ್ತನ ಮರ್ಮವನ್ನು ಅಂದರೆ ಸುರ್ವಾತೆಯನ್ನು ನಾವು ಸಾರುವುದಕ್ಕೆ ದೇವರು ನಮಗೆ ಬಾಗಿಲನ್ನು ತೆರೆದು ಕೊಡುವುದಕ್ಕಾಗಿ ನಮಗೋಸ್ಕರವಾಗಿ ಪ್ರಾರ್ಥಿಸಿರಿ. ಈ ಸುರ್ವಾತೆಯ ನಿಮಿತ್ತವೇ ನಾನು ಸೆರೆಯಲ್ಲಿದ್ದೇನಲ್ಲಾ. ನಾನು ಆ ಸತ್ಯಾರ್ಥವನ್ನು ಹೇಳಬೇಕಾದ ರೀತಿಯಲ್ಲಿ ಸ್ಪಷ್ಟವಾಗಿ ಹೇಳುವಂತೆ ಪ್ರಾರ್ಥಿಸಿರಿ. ಸಮಯವನ್ನು ಸದುಪಯೋಗಿಸಿಕೊಂಡು ಹೊರಗಿನವರೊಂದಿಗೆ ಜ್ಞಾನವುಳ್ಳವರಾಗಿ ನಡೆದುಕೊಳ್ಳಿರಿ. ನಿಮ್ಮ ಸಂಭಾಷಣೆಯು ಯಾವಾಗಲೂ ಕೃಪೆಯುಳ್ಳದ್ದಾಗಿಯೂ, ಉಪ್ಪಿನಂತೆ ರುಚಿಕರವಾಗಿಯೂ ಇರಲಿ. ಹೀಗೆ ನೀವು ಪ್ರತಿಯೊಬ್ಬರಿಗೂ ಯಾವಾವ ರೀತಿಯಲ್ಲಿ ಉತ್ತರಹೇಳಬೇಕು ಎಂಬುದನ್ನು ತಿಳಿದುಕೊಳ್ಳುವಿರಿ.

ಯಾಕೆಂದರೆ ನಾವು ನಿಮ್ಮಲ್ಲಿ ಸಾರಿದ ಸುವಾರ್ತೆಯು ಬರೀ ಮಾತಾಗಿ ಬಾರದೆ ಶಕ್ತಿಯೊಡನೆಯೂ ಪವಿತ್ರಾತ್ಮದೊಡನೆಯೂ ಮತ್ತು ಬಹು ನಿಶ್ಚಯದೊಡನೆಯೂ ಬಂತೆಂಬುದನ್ನು ನೀವೂ ಬಲ್ಲಿರಿ. ಯಾಕೆಂದರೆ ನಾವು ನಿಮ್ಮಲ್ಲಿದ್ದುಕೊಂಡು ನಿಮಗೋಸ್ಕರ ಹೇಗೆ ವರ್ತಿಸಿದ್ದೇವೆಂಬುದನ್ನು ನೀವು ಗಮನಿಸಿದ್ದೀರಿ. ಇದಲ್ಲದೆ ನೀವು ಬಹಳ ಹಿಂಸೆಯನ್ನು ಅನುಭವಿಸಬೇಕಾಗಿ ಬಂದಿದ್ದರೂ ಪವಿತ್ರಾತ್ಮನಿಂದುಂಟಾದ ಆನಂದದೊಡನೆ ದೇವರ ವಾಕ್ಯವನ್ನು ಅಂಗೀಕರಿಸಿ, ನಮ್ಮನ್ನು ಮತ್ತು ಕರ್ತನಾದ ಯೇಸುವನ್ನು ಅನುಸರಿಸುವವರಾದಿರಿ.

ನಮಗೆ ಫಿಲಿಪ್ಪಿ ಪಟ್ಟಣದಲ್ಲಿ ಹಿಂಸೆಯೂ ಅವಮಾನವೂ ಮೊದಲು ಸಂಭವಿಸಿತ್ತಾದರೂ, ನಾವು ನಮ್ಮ ದೇವರ ಮೂಲಕ ಧೈರ್ಯಗೊಂಡು ಬಹು ವಿರೋಧವನ್ನು ಎದುರಿಸುವವರಾಗಿ ನಿಮಗೆ ದೇವರ ಸುವಾರ್ತೆಯನ್ನು ತಿಳಿಸಿದ್ದೇವೆಂಬುದನ್ನು ನೀವೇ ಬಲ್ಲಿರಿ. ಯಾಕೆಂದರೆ ನಮ್ಮ ಬೋಧನೆಯು ತಪ್ಪಾದದ್ದಲ್ಲ, ಅಶುದ್ಧವಾದದ್ದೂ ಅಲ್ಲ, ಮೋಸವೂ ಅಲ್ಲ. ದೇವರು ನಮ್ಮನ್ನು ಯೋಗ್ಯರೆಂದೆಣಿಸಿ, ಸುವಾರ್ತೆಯನ್ನು ನಮ್ಮ ವಶಕ್ಕೆ ಒಪ್ಪಿಸಿದನು. ಆದುದರಿಂದ ಮನುಷ್ಯರನ್ನು ಮೆಚ್ಚಿಸುವುದಕ್ಕಾಗಿಯಲ್ಲ ಹೃದಯವನ್ನು ಪರಿಶೋಧಿಸುವ ದೇವರನ್ನೇ ಮೆಚ್ಚಿಸಬೇಕೆಂದು ಮಾತನಾಡುತ್ತಿದ್ದೇವೆ. ನಿಮಗೆ ತಿಳಿದಿರುವ ಪ್ರಕಾರ ನಾವು ಎಂದಿಗೂ ಯಾರ ಮುಖಸ್ತುತಿಯನ್ನೂ ಮಾಡಿಲ್ಲ ಮತ್ತು ದುರಾಶೆಯನ್ನು ಮರೆಮಾಡುವುಕ್ಕಾಗಿ ವೇಷವನ್ನು ಹಾಕಿಕೊಂಡಿಲ್ಲ. ಇದಕ್ಕೆ ದೇವರೇ ಸಾಕ್ಷಿ. ಇದಲ್ಲದೆ ನಾವು ಯೇಸು ಕ್ರಿಸ್ತನ ಅಪೊಸ್ತಲರಾಗಿರುವುದರಿಂದ ನಮಗೆ ಗೌರವವನ್ನು ತೋರಿಸಬೇಕೆಂದು ಹೇಳಬಹುದಾಗಿದ್ದರೂ, ಮನುಷ್ಯರಿಂದ ಬರುವ ಮಾನವನ್ನು ನಿಮ್ಮಿಂದಾಗಲಿ, ಇತರರಿಂದಾಗಲಿ ಪಡೆದುಕೊಳ್ಳಲು ಅಪೇಕ್ಷಿಸಲಿಲ್ಲ. ಆದರೆ ತಾಯಿಯೂ ತನ್ನ ಮಕ್ಕಳನ್ನು ಪ್ರೀತಿಯಿಂದ ಪೋಷಿಸುವ ಹಾಗೆ ನಾವು ನಿಮ್ಮ ಮಧ್ಯದಲ್ಲಿ ವಾತ್ಸಲ್ಯದಿಂದ ನಡೆದುಕೊಂಡಿದ್ದೇವೆ. ನೀವು ನಮಗೆ ಅತಿಪ್ರಿಯರಾದ ಕಾರಣ ನಾವು ನಿಮ್ಮಲ್ಲಿ ಮಮತೆಯುಳ್ಳವರಾಗಿ ದೇವರ ಸುವಾರ್ತೆಯನ್ನು ಹೇಳುವುದಕ್ಕೆ ಮಾತ್ರವಲ್ಲದೆ ನಿಮಗಾಗಿ ಪ್ರಾಣವನ್ನೇ ಕೊಡಲೂ ಸಂತೋಷದಿಂದ ಸಿದ್ಧರಾಗಿದ್ದೆವು. ಸಹೋದರರೇ, ನಾವು ನಿಮ್ಮಲ್ಲಿ ಯಾರಿಗೂ ಹೊರೆಯಾಗಬಾರದೆಂದು ಹಗಲಿರುಳು ದುಡಿಯುತ್ತಾ ದೇವರ ಸುವಾರ್ತೆಯನ್ನು ನಿಮಗೆ ಸಾರಿದೆವು. ಆ ನಮ್ಮ ಕಷ್ಟವೂ ಪ್ರಯಾಸಗಳು ನಿಮ್ಮ ನೆನಪಿನಲ್ಲಿರಲಿ.

ಆ ದಿನದಲ್ಲಿ ಆತನು ಬರುವಾಗ ತನ್ನ ಪರಿಶುದ್ಧ ಜನರಿಂದ ಮಹಿಮೆ ಹೊಂದಿದವನಾಗಿಯೂ ಮತ್ತು ನಾವು ನಿಮಗೆ ಹೇಳಿದ ಸಾಕ್ಷಿಯನ್ನು ನಂಬಿದವರೆಲ್ಲರ ಮೂಲಕ ತನ್ನ ವಿಷಯದಲ್ಲಿ ಆಶ್ಚರ್ಯ ಹುಟ್ಟಿಸುವನು.

ನೀವು ಹೀಗೆ ರಕ್ಷಿಸಲ್ಪಟ್ಟು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮಹಿಮೆಯನ್ನು ಸಂಪಾದಿಸಿಕೊಳ್ಳಬೇಕೆಂದು ದೇವರು ನಮ್ಮ ಸುವಾರ್ತೆಯ ಮೂಲಕವಾಗಿ ನಿಮ್ಮನ್ನು ಕರೆದನು. ಹೀಗಿರುವುದರಿಂದ ಸಹೋದರರೇ, ದೃಢವಾಗಿ ನಿಲ್ಲಿರಿ. ನಾವು ಮಾತಿನಿಂದಾಗಲಿ, ಪತ್ರದ ಮೂಲಕವಾಗಲಿ ನಿಮಗೆ ಬೋಧಿಸಿದ ಸಂಪ್ರದಾಯಗಳನ್ನು ಭದ್ರವಾಗಿ ಹಿಡಿದುಕೊಂಡಿರಿ.

ಕ್ರಿಸ್ತ ನಂಬಿಕೆಯ ಶ್ರೇಷ್ಠ ಹೋರಾಟವನ್ನು ಮಾಡು, ನಿತ್ಯಜೀವವನ್ನು ಹಿಡಿದುಕೋ. ಅದಕ್ಕಾಗಿ ನೀನು ದೇವರಿಂದ ಕರೆಯಲ್ಪಟ್ಟಿದಿ ಮತ್ತು ನೀನು ಅನೇಕ ಸಾಕ್ಷಿಗಳ ಮುಂದೆ ಒಳ್ಳೆಯ ಪ್ರತಿಜ್ಞೆಯನ್ನು ಮಾಡಿದಿಯಲ್ಲಾ.

ಆದ್ದರಿಂದ ನೀನು ನಮ್ಮ ಕರ್ತನನ್ನು ಕುರಿತು ಹೇಳುವ ಸಾಕ್ಷಿಯ ವಿಷಯದಲ್ಲಾಗಲಿ ಆತನ ಸೆರೆಯವನಾದ ನನ್ನ ವಿಷಯದಲ್ಲಾಗಲಿ ನಾಚಿಕೆ ಪಡದೆ, ದೇವರ ಬಲವನ್ನು ಆಶ್ರಯಿಸಿ ನನ್ನೊಂದಿಗೆ ಸುವಾರ್ತೆಗೋಸ್ಕರ ಕಷ್ಟವನ್ನನುಭವಿಸು. ಆತನು ನಮ್ಮಲ್ಲಿರುವ ಸುಕೃತ್ಯಗಳನ್ನು ನೋಡಿದ್ದರಿಂದಲ್ಲ, ತನ್ನ ಸಂಕಲ್ಪವನ್ನು ಅನುಸರಿಸಿ ಕೃಪೆಯಿಂದಲೇ ನಮ್ಮನ್ನು ರಕ್ಷಿಸಿ ಪರಿಶುದ್ಧರಾಗುವುದಕ್ಕೆ ಕರೆದನು. ಆತನು ಅನಾದಿಕಾಲದಲ್ಲಿ ಆ ಕೃಪೆಯನ್ನು ಕ್ರಿಸ್ತ ಯೇಸುವಿನಲ್ಲಿ ನಮಗೆ ಅನುಗ್ರಹಿಸಿ, ಈಗ ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನ ಪ್ರತ್ಯಕ್ಷತೆಯ ಮೂಲಕ ಅದನ್ನು ಪ್ರಕಟಪಡಿಸಿದ್ದಾನೆ. ಈತನು ಮರಣವನ್ನು ನಿರ್ಮೂಲಗೊಳಿಸಿ ಸುವಾರ್ತೆಯ ಮೂಲಕ ಜೀವವನ್ನೂ ಅಮರತ್ವವನ್ನೂ ಬೆಳಕಿಗೆ ತಂದಿದ್ದಾನೆ. ಆ ಸುವಾರ್ತೆಗೋಸ್ಕರ ನಾನು ಪ್ರಚಾರಕನಾಗಿಯೂ, ಅಪೊಸ್ತಲನಾಗಿಯೂ ಮತ್ತು ಬೋಧಕನಾಗಿಯೂ ನೇಮಿಸಲ್ಪಟ್ಟೆನು. ಅದರ ನಿಮಿತ್ತದಿಂದಲೇ ಈ ಕಷ್ಟಗಳನ್ನು ಅನುಭವಿಸುತ್ತಾ ಇದ್ದೇನೆ. ಆದರೂ ನಾನು ನಾಚಿಕೆಪಡುವುದಿಲ್ಲ. ನಾನು ನಂಬಿರುವಾತನನ್ನು ಬಲ್ಲೆನು. ಆತನು ನನಗೆ ಒಪ್ಪಿಸಿಕೊಟ್ಟಿರುವುದನ್ನು ಆತನು ಆ ದಿನದವರೆಗೆ ಕಾಪಾಡುವುದಕ್ಕೆ ಶಕ್ತನಾಗಿದ್ದಾನೆಂದು ದೃಢವಾಗಿ ನಂಬಿದ್ದೇನೆ.

ನೀನು ಅನೇಕ ಸಾಕ್ಷಿಗಳ ಮುಂದೆ ನನ್ನಿಂದ ಕೇಳಿದ ಉಪದೇಶವನ್ನು ಇತರರಿಗೆ ಬೋಧಿಸಲು ಶಕ್ತರಾದ, ನಂಬಿಗಸ್ತರಾದ ಜನರಿಗೆ ಅದನ್ನು ಒಪ್ಪಿಸಿಕೊಡು.

ಆದಕಾರಣ ದೇವರು ಆರಿಸಿಕೊಂಡವರು ಸಹ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು ನಿತ್ಯ ಮಹಿಮೆಯ ಸಹಿತವಾಗಿ ಹೊಂದಬೇಕೆಂದು ನಾನು ಅವರಿಗೋಸ್ಕರ ಎಲ್ಲವನ್ನು ತಾಳಿಕೊಳ್ಳುತ್ತೇನೆ. ಈ ಮಾತು ನಂಬತಕ್ಕದ್ದಾಗಿದೆ, ಅದೇನೆಂದರೆ “ನಾವು ಆತನೊಡನೆ ಸತ್ತಿದ್ದರೆ ಆತನೊಡನೆ ಜೀವಿಸುವೆವು, ಸಹಿಸಿಕೊಳ್ಳುವವರಾಗಿದ್ದರೆ ಆತನೊಡನೆ ಆಳುವೆವು. ನಾವು ಯೇಸುವಿನವರಲ್ಲವೆಂದು ಹೇಳಿದರೆ ಆತನು ನಮ್ಮನ್ನು ತನ್ನವರಲ್ಲವೆಂದು ಹೇಳುವನು.

ಈ ಸಂಗತಿಗಳನ್ನು ಸಭೆಯವರ ಜ್ಞಾಪಕಕ್ಕೆ ತರಬೇಕು. ಕೇಳುವವರಿಗೆ ಕೇಡನ್ನುಂಟುಮಾಡುವುದಲ್ಲದೇ, ಯಾವ ಪ್ರಯೋಜನಕ್ಕೂ ಬಾರದ ತರ್ಕ ವಾಗ್ವಾದಗಳನ್ನು ಮಾಡಬಾರದೆಂದು, ಅವರಿಗೆ ದೇವರ ಸನ್ನಿಧಿಯಲ್ಲಿ ಖಂಡಿತವಾಗಿ ಹೇಳು. ನೀನು ದೇವರಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವುದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು. ಪ್ರಾಪಂಚಿಕವಾದ ವ್ಯರ್ಥ ಹರಟೆ ಮಾತುಗಳಿಂದ ದೂರವಾಗಿರು, ಅವುಗಳಿಗೆ ಮನಸ್ಸುಕೊಡುವವರು ಹೆಚ್ಚೆಚ್ಚಾಗಿ ಭಕ್ತಿಹೀನರಾಗುವರು.

ದೇವರ ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತನಾಗಿರು. ಪೂರ್ಣ ದೀರ್ಘಶಾಂತಿಯಿಂದ ಉಪದೇಶಿಸುತ್ತಾ ಖಂಡಿಸು, ಗದರಿಸು, ಎಚ್ಚರಿಸು. ಯಾಕೆಂದರೆ ಜನರು ಸ್ವಸ್ಥಬೋಧನೆಯನ್ನು ಒಪ್ಪಲಾರದ ಕಾಲವು ಬರುತ್ತದೆ. ಅದರಲ್ಲಿ ಅವರು ಕಿವಿಗೆ ಇಂಪಾಗುವ ಹಾಗೆ ತಮ್ಮ ದುರಾಶೆಗಳಿಗೆ ಅನುಕೂಲವಾದ ಉಪದೇಶಗಳನ್ನು ನೀಡುವ ಅನೇಕ ಉಪದೇಶಕರನ್ನು ಇಟ್ಟುಕೊಳ್ಳುವರು. ಅವರು ಸತ್ಯ ಬೋಧನೆಗೆ ಕಿವಿಗೊಡದೆ ಕಟ್ಟುಕಥೆಗಳನ್ನು ಕೇಳುವುದಕ್ಕೆ ಇಚ್ಛಿಸುವರು. ಆದರೆ ನೀನು ಎಲ್ಲಾ ವಿಷಯಗಳಲ್ಲಿಯೂ ಸ್ವಸ್ಥಚಿತ್ತನಾಗಿರು, ಹಿಂಸೆಯನ್ನು ತಾಳಿಕೋ, ಸುವಾರ್ತಿಕನ ಕೆಲಸವನ್ನು ಮಾಡು, ನಿನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ಮಾಡು.

ಆದರೆ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ ನನ್ನ ಮೂಲಕ ಸುವಾರ್ತೆಯು ಸಂಪೂರ್ಣವಾಗಿ ಸಾರಲ್ಪಡುವಂತೆಯೂ, ಅನ್ಯ ಜನರೆಲ್ಲರೂ ಅದನ್ನು ಕೇಳುವಂತೆಯೂ ಮಾಡಿದನು. ಇದಲ್ಲದೆ ಆತನು ನನ್ನನ್ನು ಸಿಂಹದ ಬಾಯೊಳಗಿಂದ ತಪ್ಪಿಸಿದನು.

ಏಕೆಂದರೆ ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನುಂಟುಮಾಡುವ ದೇವರ ಕೃಪೆಯು ಪ್ರತ್ಯಕ್ಷವಾಯಿತು;

ಕ್ರಿಸ್ತನಲ್ಲಿ ನಮಗೆ ದೊರಕಿರುವ ಎಲ್ಲಾ ಸುವರಗಳನ್ನು ಕುರಿತು ನೀನು ತಿಳಿವಳಿಕೆಯನ್ನು ಹೊಂದುತ್ತಿರುವೆ. ಕ್ರಿಸ್ತ ನಂಬಿಕೆಯಲ್ಲಿರುವ ನಿನ್ನ ಅನ್ಯೋನ್ಯತೆಯೂ ಕ್ರಿಸ್ತನಿಗೆ ಅತಿಯಾದ ಮಹಿಮೆಯನ್ನು ಉಂಟುಮಾಡಬೇಕೆಂದು ಪ್ರಾರ್ಥಿಸುತ್ತೇನೆ. ಸಹೋದರನೇ, ನಿನ್ನ ಮೂಲಕ ದೇವಜನರ ಹೃದಯಗಳಿಗೆ ಪ್ರೋತ್ಸಾಹವೂ, ಪ್ರೇರಣೆಯೂ ಉಂಟಾದುದರಿಂದ ಅವರ ಬಗ್ಗೆ ಇರುವ ಪ್ರೀತಿಯಿಂದ ನನಗೆ ಬಹಳ ಆನಂದವೂ, ಸಮಾಧಾನವೂ ಉಂಟಾಯಿತು. ವೃದ್ಧನೂ, ಈಗ ಕ್ರಿಸ್ತಯೇಸುವಿನ ನಿಮಿತ್ತ ಸೆರೆಯಾಳಾಗಿರುವ ಈ ಪೌಲನೆಂಬ ನಾನು ಪ್ರೀತಿಯ ನಿಮಿತ್ತ ನಿನ್ನನ್ನು ಬೇಡಿಕೊಳ್ಳುತ್ತಿದ್ದೇನೆ.

ಹೀಗಿರಲಾಗಿ, ದೇವರ ವಿಶ್ರಾಂತಿಯಲ್ಲಿ ಸೇರಬಹುದೆಂಬ ವಾಗ್ದಾನ ಇನ್ನೂ ಇರುವುದರಿಂದ ನಿಮ್ಮಲ್ಲಿ ಯಾವನಾದರೂ ಅದರಿಂದ ತಪ್ಪಿಹೋಗದಂತೆ ನಾವು ಭಯಭಕ್ತಿಯಿಂದ ಇರೋಣ. ಇಸ್ರಾಯೇಲ್ಯರಿಗೆ ದೇವರ ವಿಶ್ರಾಂತಿಯ ಶುಭವರ್ತಮಾನವು ಸಾರೋಣವಾದಂತೆಯೇ ನಮಗೂ ಸಾರೋಣವಾಯಿತು. ಆದರೆ ಆ ಕಾಲದಲ್ಲಿ ಕೇಳಿದವರ ನಂಬಿಕೆಯೊಂದಿಗೆ ಇವರು ಪಾಲುಗಾರರಾಗದ ಕಾರಣ ಆ ಸಂದೇಶದಿಂದ ಅವರಿಗೆ ಪ್ರಯೋಜನವಾಗಲಿಲ್ಲ. ಈಗ ನಂಬುವವರಾದ ನಾವುಗಳೇ ಆ ವಿಶ್ರಾಂತಿಯಲ್ಲಿ ಸೇರುವವರು. ಏಕೆಂದರೆ ಲೋಕಾದಿಯಿಂದ ತನ್ನ ಸೃಷ್ಟಿಯ ಕಾರ್ಯಗಳು ಮುಗಿದುಹೋದಾಗ್ಯೂ “ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ ಎಂದು ನಾನು ಕೋಪದಿಂದ ಪ್ರಮಾಣ ಮಾಡಿದೆನು” ಎಂದು ಹೇಳಿದೆಯಲ್ಲಾ.

ಏಕೆಂದರೆ ದೇವರ ವಾಕ್ಯವು ಸಜೀವವಾದದ್ದು, ಸಕ್ರಿಯವಾದದ್ದು ಮತ್ತು ಯಾವ ಇಬ್ಬಾಯಿ ಕತ್ತಿಗಿಂತಲೂ ಹರಿತವಾದದ್ದು ಆಗಿದ್ದು, ಪ್ರಾಣ ಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದಾಗಿದ್ದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದ್ದೂ ಆಗಿದೆ. ಆತನ ದೃಷ್ಟಿಗೆ ಮರೆಯಾಗಿರುವ ಒಂದು ಸೃಷ್ಟಿಯೂ ಇಲ್ಲ. ಆತನ ಕಣ್ಣಿಗೆ ಮರೆಯಾದದ್ದು ಒಂದೂ ಇಲ್ಲ ಎಲ್ಲವೂ ನಗ್ನವಾಗಿಯೂ ಬಟ್ಟಬಯಲಾಗಿಯೂ ಇದೆ. ಅಂಥವನಿಗೆ ನಾವು ಲೆಕ್ಕಕೊಡಬೇಕಾಗಿದೆ.

ಆದ್ದರಿಂದ ನಿಮ್ಮ ಧೈರ್ಯವನ್ನು ಬಿಟ್ಟುಬಿಡಬೇಡಿರಿ. ಅದಕ್ಕೆ ಮಹಾ ಪ್ರತಿಫಲ ಉಂಟು.

ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ. ಏಕೆಂದರೆ ದೇವರ ಬಳಿಗೆ ಬರುವವನು ದೇವರು ಇದ್ದಾನೆ ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬಬೇಕು.

ನಿಮ್ಮಲ್ಲಿ ಯಾರಿಗಾದರು ಜ್ಞಾನದ ಕೊರತೆಯಿರುವುದಾದರೆ ಅವರು ದೇವರನ್ನು ಬೇಡಿಕೊಳ್ಳಲಿ, ಅದು ಅವರಿಗೆ ದೊರಕುವುದು. ಯಾಕೆಂದರೆ ದೇವರು ಹಂಗಿಸದೆ ಎಲ್ಲರಿಗೂ ಉದಾರವಾಗಿ ಕೊಡುವಾತನಾಗಿದ್ದಾನೆ.

ತನ್ನನ್ನು ಸದ್ಭಕ್ತನೆಂದೆಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳದೆ ತನ್ನ ಹೃದಯವನ್ನು ಮೋಸಗೊಳಿಸುವವನಾದರೆ ಅವನ ಭಕ್ತಿಯು ವ್ಯರ್ಥವಾಗಿದೆ.

ನನ್ನ ಸಹೋದರರೇ, ನಿಮ್ಮಲ್ಲಿ ಯಾರಾದರು ಸತ್ಯ ಮಾರ್ಗವನ್ನು ಬಿಟ್ಟು ತಪ್ಪಿ ನಡೆಯುತ್ತಿದ್ದರೆ ಮತ್ತೊಬ್ಬನು ಅವನನ್ನು ಸನ್ಮಾರ್ಗಕ್ಕೆ ತಂದರೆ; ಒಬ್ಬ ಪಾಪಿಯನ್ನು ತಪ್ಪಾದ ಮಾರ್ಗದಿಂದ ತಪ್ಪಿಸಿ, ಪರಿವರ್ತಿಸಿ ಅವನ ಆತ್ಮವನ್ನು ಮರಣದಿಂದ ತಪ್ಪಿಸಿ ಬಹು ಪಾಪಗಳನ್ನು ಮುಚ್ಚಿದವನಾದನೆಂದು ತಿಳಿದುಕೊಳ್ಳಲ್ಲಿ.

ಆದರೆ ಈ ಸಂಗತಿಗಳನ್ನು ಮುಂತಿಳಿಸುವುದರಲ್ಲಿ ತಮಗೋಸ್ಕರವಲ್ಲ ನಿಮಗೋಸ್ಕರವೇ ಸೇವೆ ಮಾಡುವವರಾಗಿದ್ದಾರೆಂಬುದು ಅವರಿಗೆ ಪ್ರಕಟವಾಯಿತು. ಅವರು ಮುಂದಾಗಿ ಹೇಳಿದ ಸಂಗತಿಗಳೇ ಈಗ ಸಂಭವಿಸಲ್ಪಡುತ್ತಿವೆ ಎಂಬ ವರ್ತಮಾನವು ಪರಲೋಕದಿಂದ ಕಳುಹಿಸಲ್ಪಟ್ಟ ಪವಿತ್ರಾತ್ಮನ ಬಲದಿಂದ ನಿಮಗೆ ಸುವಾರ್ತೆಯನ್ನು ಸಾರಿದವರ ಮೂಲಕ ನಿಮಗೆ ಪ್ರಸಿದ್ಧಿಮಾಡಲ್ಪಟ್ಟಿದೆ. ದೇವದೂತರೂ ಈ ಸಂಗತಿಗಳನ್ನು ಲಕ್ಷ್ಯವಿಟ್ಟು ನೋಡಬೇಕೆಂದು ಬಯಸುತ್ತಿದ್ದಾರೆ.

ಏಕೆಂದರೆ ನೀವು ಹೊಸದಾಗಿ ಹುಟ್ಟಿರುವಂಥದ್ದು ನಾಶವಾಗುವ ವಾಕ್ಯದಿಂದದ್ದಲ್ಲ. ಆದರೆ ನಾಶವಾಗದಂಥ ವಾಕ್ಯದಿಂದಲೇ. ಅದು ಸದಾ ಜೀವವುಳ್ಳ ದೇವರವಾಕ್ಯದ ಮೂಲಕ ಉಂಟಾಯಿತು. ಏಕೆಂದರೆ ಪವಿತ್ರಗ್ರಂಥದಲ್ಲಿ ಬರೆದಿರುವಂತೆ: “ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ. ಅದರ ಮಹಿಮೆಯೆಲ್ಲಾ ಹುಲ್ಲಿನ ಹೂವಿನಂತಿದೆ. ಹುಲ್ಲು ಒಣಗಿ ಹೋಗುವುದು. ಅದರ ಹೂವು ಉದುರಿ ಹೋಗುವುದು. ಆದರೆ ಕರ್ತನ ಮಾತೋ ಸದಾಕಾಲವೂ ಇರುವುದು.” ಆ ಮಾತು ಯಾವುದೆಂದರೆ ನಿಮಗೆ ಸಾರಲ್ಪಟ್ಟ ಸುವಾರ್ತಾವಾಕ್ಯವೇ.

ಹೊಸದಾಗಿ ಹುಟ್ಟಿದ ಶಿಶುಗಳಂತೆ ನೀವು ದೇವರ ವಾಕ್ಯವೆಂಬ ಶುದ್ಧವಾದ ಆತ್ಮೀಕ ಹಾಲನ್ನು ಬಯಸಿರಿ. ಆದರಿಂದ ರಕ್ಷಣೆಯಲ್ಲಿ ಬೆಳೆಯುವಿರಿ. ಏಕೆಂದರೆ ಕರ್ತನು ದಯಾಪರನೆಂದು ನೀವು ಅನುಭವಿಸಿ ತಿಳಿದಿದ್ದೀರಿ.

ಆದ್ದರಿಂದ ನಂಬುವವರಾದ ನಿಮಗೇ ಈ ಕಲ್ಲು ಅತ್ಯಮೂಲ್ಯವಾದುದು. ಆದರೆ ನಂಬದೆಯಿರುವವರಿಗೆ, “ಮನೆಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು” ಮತ್ತು ಪವಿತ್ರಗ್ರಂಥದಲ್ಲಿ ಇನ್ನೊಂದೆಡೆ ಬರೆದಿರುವುದೇನಂದರೆ, “ಅದು ಜನರು ಎಡವುವ ಕಲ್ಲು ಮುಗ್ಗರಿಸುವ ಬಂಡೆ.” ಅವರು ದೇವರ ವಾಕ್ಯಕ್ಕೆ ಅವಿಧೇಯರಾದ್ದರಿಂದ ಎಡವಿ ಬೀಳುತ್ತಾರೆ. ಅದಕ್ಕಾಗಿಯೇ ಅವರನ್ನು ನೇಮಿಸಲಾಗಿದೆ.

ನಿಮ್ಮನ್ನು ಕತ್ತಲೆಯೊಳಗಿನಿಂದ ತನ್ನ ಆಶ್ಚರ್ಯಕರವಾದ ಬೆಳಕಿಗೆ ಕರೆದಾತನ ಅದ್ಭುತಕಾರ್ಯಗಳನ್ನು ಪ್ರಚಾರಮಾಡುವವರಾಗುವಂತೆ ನೀವು ದೇವರಿಂದ ಆರಿಸಿಕೊಳ್ಳಲ್ಪಟ್ಟ ಜನಾಂಗವೂ, ರಾಜವಂಶಸ್ಥರಾದ ಯಾಜಕರೂ, ಪರಿಶುದ್ಧ ಜನಾಂಗವೂ, ದೇವರ ಸ್ವಕೀಯ ಜನರೂ ಆಗಿದ್ದೀರಿ.

ಆದರೆ ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೆನೆಂದು ಕೇಳುವವರೆಲ್ಲರಿಗೂ ಉತ್ತರ ಹೇಳುವುದಕ್ಕೆ ಯಾವಾಗಲೂ ಸಿದ್ಧರಾಗಿರಿ. ಆದರೆ ಅದನ್ನು ಸಾತ್ವಿಕತ್ವದಿಂದಲೂ ಮತ್ತು ಗೌರವದಿಂದಲೂ ಹೇಳಿರಿ. ಒಳ್ಳೆಯ ಮನಸ್ಸಾಕ್ಷಿಯುಳ್ಳವರಾಗಿರಿ ಆಗ ಕ್ರಿಸ್ತನಲ್ಲಿರುವ ನಿಮ್ಮ ಒಳ್ಳೆಯ ನಡತೆಯನ್ನು ಕುರಿತು ಕೆಟ್ಟಮಾತುಗಳನ್ನಾಡುವವರು ನಿಮ್ಮನ್ನು ನಿಂದಿಸುವುದಕ್ಕೆ ನಾಚಿಕೆಪಡುವರು.

ನಮ್ಮ ಕರ್ತನಾದ ಯೇಸುಕ್ರಿಸ್ತನ ಶಕ್ತಿಯನ್ನೂ, ಪ್ರತ್ಯಕ್ಷತೆಯನ್ನೂ ನಿಮಗೆ ತಿಳಿಯಪಡಿಸಿದ್ದರಲ್ಲಿ ಚಮತ್ಕಾರದಿಂದ ಕಲ್ಪಿಸಿದ ಕಟ್ಟುಕಥೆಗಳನ್ನು ನಾವು ಅನುಸರಿಸಲಿಲ್ಲ. ಆತನ ಮಹತ್ತನ್ನು ಕಣ್ಣಾರೆ ಕಂಡವರಾಗಿಯೇ ಅದನ್ನು ತಿಳಿಯಪಡಿಸಿದೆವು.

ಕರ್ತನು ತನ್ನ ವಾಗ್ದಾನಗಳನ್ನು ನೆರವೇರಿಸುವುದಕ್ಕೆ ತಡಮಾಡುತ್ತಾನೆಂಬುದಾಗಿ ಕೆಲವರು ತಿಳಿದುಕೊಂಡಿರುವ ಪ್ರಕಾರ ಆತನು ತಡಮಾಡುವವನಲ್ಲ. ಯಾರೊಬ್ಬನೂ ನಾಶವಾಗುವುದರಲ್ಲಿ ಆತನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪ ಪಡಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ.

ನಾವು ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸಿ ಸಕಲ ಅನೀತಿಯಿಂದ ನಮ್ಮನ್ನು ಶುದ್ಧಿಮಾಡುವನು.

ದೇವರಿಂದ ಹುಟ್ಟಿದವನು ಪಾಪಮಾಡುವುದಿಲ್ಲ. ಏಕೆಂದರೆ ದೇವರ ಸ್ವಭಾವವು ಅವನಲ್ಲಿ ನೆಲೆಗೊಂಡಿದೆ. ಅವನು ದೇವರಿಂದ ಹುಟ್ಟಿದ ಕಾರಣ ಪಾಪಮಾಡಲಾರನು. ಆದ್ದರಿಂದ ದೇವರ ಮಕ್ಕಳು ಯಾರೆಂಬುದು ಹಾಗೂ ಸೈತಾನನ ಮಕ್ಕಳು ಯಾರೆಂಬುದು ಇದರಿಂದ ತಿಳಿದುಬರುತ್ತದೆ. ನೀತಿಯನ್ನು ಅನುಸರಿಸದವರೂ ತನ್ನ ಸಹೋದರನನ್ನು ಪ್ರೀತಿಸದವರೂ ದೇವರಿಗೆ ಸಂಬಂಧಪಟ್ಟವರಲ್ಲ.

ನಾವಂತೂ ದೇವರಿಗೆ ಸಂಬಂಧಪಟ್ಟವರಾಗಿದ್ದೇವೆ. ದೇವರನ್ನು ಬಲ್ಲವರು ನಮ್ಮ ಮಾತನ್ನು ಕೇಳುತ್ತಾರೆ. ದೇವರಿಗೆ ಸಂಬಂಧಪಡದವರು ನಮ್ಮ ಮಾತನ್ನು ಕೇಳುವುದಿಲ್ಲ. ಇದರಿಂದಲೇ ಸತ್ಯವನ್ನು ಬೋಧಿಸುವ ಆತ್ಮ ಯಾವುದು ಮತ್ತು ಸುಳ್ಳನ್ನು ಬೋಧಿಸುವ ಆತ್ಮ ಯಾವುದು ಎಂದು ನಾವು ತಿಳಿದುಕೊಳ್ಳುತ್ತೇವೆ.

ನಾವು ಮನುಷ್ಯರ ಸಾಕ್ಷಿಯನ್ನು ಒಪ್ಪಿಕೊಳ್ಳುತ್ತೇವಲ್ಲಾ, ಹಾಗೆ ದೇವರ ಸಾಕ್ಷಿಯು ಅದಕ್ಕಿಂತಲೂ ಶ್ರೇಷ್ಠವಾಗಿದೆ. ಏಕೆಂದರೆ ದೇವರು ಕೊಟ್ಟ ಸಾಕ್ಷಿಯು ತನ್ನ ಮಗನ ಕುರಿತದ್ದಾಗಿದೆ. ದೇವರ ಮಗನಲ್ಲಿ ನಂಬಿಕೆ ಇಟ್ಟವನು ಆ ಸಾಕ್ಷಿಯನ್ನು ತನ್ನಲ್ಲೇ ಹೊಂದಿದ್ದಾನೆ. ದೇವರನ್ನು ನಂಬದವನು ಆತನನ್ನು ಸುಳ್ಳುಗಾರನನ್ನಾಗಿ ಮಾಡಿದ್ದಾನೆ. ಹೇಗೆಂದರೆ ದೇವರು ತನ್ನ ಮಗನ ಪರವಾಗಿ ಕೊಟ್ಟ ಸಾಕ್ಷಿಯಲ್ಲಿ ಅವನು ನಂಬಿಕೆಯಿಡಲಿಲ್ಲ. ಆ ಸಾಕ್ಷಿ ಯಾವುದೆಂದರೆ, ದೇವರು ನಮಗೆ ನಿತ್ಯಜೀವವನ್ನು ಅನುಗ್ರಹಿಸಿದ್ದಾನೆ. ಆ ಜೀವವು ಆತನ ಮಗನಲ್ಲಿದೆ ಎಂಬುದೇ.

ಯೋಹಾನನು ದೇವರ ವಾಕ್ಯದ ಕುರಿತಾಗಿಯೂ ಯೇಸು ಕ್ರಿಸ್ತನು ಹೇಳಿದ ಸಾಕ್ಷಿಯ ವಿಷಯವಾಗಿಯೂ ತಾನು ಕಂಡದ್ದನ್ನೆಲ್ಲಾ ತಿಳಿಸುವವನಾಗಿ ಸಾಕ್ಷಿಕೊಟ್ಟನು.

ಇಗೋ ಬಾಗಿಲಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ.ಯಾವನಾದರೂ ನನ್ನ ಧ್ವನಿಯನ್ನು ಕೇಳಿ ಬಾಗಿಲನ್ನು ತೆರೆದರೆನಾನು ಒಳಗೆ ಬಂದು ಅವನ ಸಂಗಡ ಊಟ ಮಾಡುವೆನು. ಅವನು ನನ್ನ ಸಂಗಡ ಊಟ ಮಾಡುವನು.

ಅವರು, “ರಕ್ಷಣೆಯೆಂಬುದು ಸಿಂಹಾಸನಾರೂಢನಾದ ನಮ್ಮ ದೇವರ ಮತ್ತು ಯಜ್ಞದ ಕುರಿಮರಿಯಾದಾತನಿಗೆ ಸೇರಿದ್ದು” ಎಂದು ಮಹಾಧ್ವನಿಯಿಂದ ಕೂಗಿದರು.

ಇದಲ್ಲದೆ ನನ್ನ ಇಬ್ಬರು ಸಾಕ್ಷಿಗಳು ಗೋಣಿತಟ್ಟುಗಳನ್ನು ಹೊದ್ದುಕೊಂಡು ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಅವರಿಗೆ ಅಧಿಕಾರ ಕೊಡುವೆನು.” ಭೂಲೋಕದ ಒಡೆಯನ ಮುಂದೆ ನಿಂತಿರುವ ಎರಡು ಎಣ್ಣೆಯ ಮರಗಳೂ ಮತ್ತು ಎರಡು ದೀಪಸ್ತಂಭಗಳೂ ಇವರೇ. ಇವರಿಗೆ ಯಾವನಾದರೂ ಕೇಡನ್ನುಂಟುಮಾಡಬೇಕೆಂದಿದ್ದರೆ ಇವರ ಬಾಯೊಳಗಿಂದ ಬೆಂಕಿಯು ಹೊರಟು ಇವರ ಶತ್ರುಗಳನ್ನು ದಹಿಸಿಬಿಡುವುದು. ಇವರಿಗೆ ಕೇಡನ್ನು ಉಂಟುಮಾಡಬಯಸುವವರಿಗೆ ಆ ರೀತಿಯಾಗಿ ಹತರಾಗಬೇಕು. ಅವರು ಪ್ರವಾದಿಸುವ ದಿನಗಳಲ್ಲಿ ಮಳೆಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಅವರಿಗೆ ಇರುವುದು. ಇದಲ್ಲದೆ ಅವರಿಗೆ ಇಷ್ಟಬಂದಾಗೆಲ್ಲಾ ನೀರು ರಕ್ತವಾಗುವಂತೆ ಮಾಡುವುದಕ್ಕೂ ಸಕಲ ವಿಧವಾದ ಉಪದ್ರವಗಳಿಂದ ಭೂಮಿಯನ್ನು ಹಿಂಸಿಸುವುದಕ್ಕೂ ಅಧಿಕಾರವುಂಟು.

ಅವರು ತಮ್ಮ ಸಾಕ್ಷಿಗಳನ್ನು ಹೇಳಿ ಮುಗಿಸಿದ ನಂತರ, ಅಧೋಲೋಕದಿಂದ ಬರುವ ಮೃಗವು ಇವರ ಮೇಲೆ ಯುದ್ಧಮಾಡಿ ಇವರನ್ನು ಜಯಿಸಿ ಕೊಲ್ಲುವುದು. ಈ ಸಾಕ್ಷಿಗಳ ಶವಗಳು ಮಹಾ ಪಟ್ಟಣದ ಬೀದಿಯಲ್ಲಿ ಬಿದ್ದಿರುವವು. ಆ ಪಟ್ಟಣಕ್ಕೆ ಸಾಂಕೇತಿಕವಾಗಿ ಸೊದೋಮ್ ಎಂದು, ಐಗುಪ್ತ ಎಂದೂ ಹೆಸರುಗಳುಂಟು. ಇವರ ಒಡೆಯನು ಸಹ ಅಲ್ಲಿಯೇ ಶಿಲುಬೆಗೆ ಹಾಕಲ್ಪಟ್ಟಿದ್ದನು. ಸಕಲ ಜನ, ಕುಲ, ಭಾಷೆ, ಜನಾಂಗಗಳಿಗೆ ಸೇರಿದವರು ಈ ಸಾಕ್ಷಿಗಳ ಶವಗಳನ್ನು ಮೂರುವರೆ ದಿನಗಳವರೆಗೂ ನೋಡುವರು ಮತ್ತು ಅವರ ಶವಗಳನ್ನು ಸಮಾಧಿಯಲ್ಲಿ ಇಡಗೊಡಿಸುವುದಿಲ್ಲ. ಈ ಇಬ್ಬರು ಪ್ರವಾದಿಗಳು ಭೂನಿವಾಸಿಗಳನ್ನು ಹಿಂಸಿಸಿದ್ದರಿಂದ ಇವರು ಸತ್ತದ್ದಕ್ಕೆ ಭೂನಿವಾಸಿಗಳು ಸಂತೋಷಿಸಿ ಸಂಭ್ರಮಗೊಂಡು ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕಳುಹಿಸುವರು. ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವಶ್ವಾಸವು ಬಂದು ಆ ಶವಗಳಲ್ಲಿ ಪ್ರವೇಶಿಸಲು, ಅವರು ಕಾಲೂರಿ ನಿಲ್ಲುವರು. ಅವರನ್ನು ನೋಡಿದವರೆಲ್ಲರೂ ಭಯದಿಂದ ನಡುಗಿದರು.

ಅವರು ಮರಣದವರೆಗೆ ತಮ್ಮ ಪ್ರಾಣವನ್ನು ಪ್ರೀತಿಸದೆ, ಯಜ್ಞದ ಕುರಿಮರಿಯಾದಾತನ ರಕ್ತದಿಂದಲೂ ತಮ್ಮ ಸಾಕ್ಷಿಯ ವಾಕ್ಯದಿಂದಲೂ ಅವನನ್ನು ಜಯಿಸಿದರು.

ಆಗ ಘಟಸರ್ಪನು ಸ್ತ್ರೀಯ ಮೇಲೆ ಬಹು ಕೋಪಗೊಂಡು, ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಅಂದರೆ, ದೇವರ ಆಜ್ಞೆಗಳನ್ನು ಕೈಗೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೊಂದಿದವರ ಮೇಲೆ ಯುದ್ಧಮಾಡುವುದಕ್ಕೆ ಹೊರಟು, ಸಮುದ್ರ ತೀರದ ಮರಳಿನ ಮೇಲೆ ನಿಂತನು.

ಇವರ ಬಾಯಲ್ಲಿ ಸುಳ್ಳು ಇರಲೇ ಇಲ್ಲ. ಇವರು ನಿರ್ದೋಷಿಗಳಾಗಿದ್ದಾರೆ.

ಇದಾದ ಮೇಲೆ ಪರಲೋಕದಲ್ಲಿ ದೊಡ್ಡ ಗುಂಪಿನ ಮಹಾ ಶಬ್ದವೋ ಎಂಬಂತೆ ಒಂದು ಧ್ವನಿಯನ್ನು ಕೇಳಿದೆನು. ಅವರು, “ಹಲ್ಲೆಲೂಯಾ. ರಕ್ಷಣೆಯೂ, ಮಹಿಮೆಯೂ, ಶಕ್ತಿಯೂ ನಮ್ಮ ದೇವರಿಗೆ ಸೇರಿದ್ದಾಗಿವೆ.

ಇದಲ್ಲದೆ ಅವನು ನನ್ನ ಸಂಗಡ ಮಾತನಾಡುತ್ತಾ, “ಯಜ್ಞದ ಕುರಿಮರಿಯಾದಾತನ ವಿವಾಹದ ಔತಣಕ್ಕೆ ಆಹ್ವಾನಿಸಲ್ಪಟ್ಟವರು ಧನ್ಯರು ಎಂಬುದಾಗಿ ಬರೆ” ಎಂದು ನನಗೆ ಹೇಳಿ, “ಈ ಮಾತುಗಳು ದೇವರ ಸತ್ಯವಚನಗಳಾಗಿವೆ” ಅಂದನು. ಆಗ ನಾನು ಅವನಿಗೆ ಆರಾಧನೆ ಮಾಡಬೇಕೆಂದು ಅವನ ಪಾದಗಳ ಮೇಲೆ ಬೀಳಲು ಅವನು, “ಹೀಗೆ ಮಾಡಬೇಡ ನೋಡು, ನಾನು ನಿನಗೂ, ಯೇಸುವಿನ ಬಗ್ಗೆ ಸಾಕ್ಷಿಯನ್ನು ಹೇಳಿರುವ ನಿನ್ನ ಸಹೋದರರಿಗೂ ಸೇವೆಯನ್ನು ಮಾಡುವ ದಾಸನಾಗಿದ್ದೇನೆ, ದೇವರಿಗೆ ಆರಾಧನೆ ಮಾಡು, ಯೇಸುವಿನ ಸಾಕ್ಷಿಯು ಪ್ರವಾದನೆಯ ಆತ್ಮವೇ” ಎಂದು ಹೇಳಿದನು.

ತರುವಾಯ ಸಿಂಹಾಸನಗಳನ್ನು ಕಂಡೆನು. ಅವುಗಳ ಮೇಲೆ ಕುಳಿತಿದ್ದವರಿಗೆ ನ್ಯಾಯ ತೀರಿಸುವ ಅಧಿಕಾರವು ಕೊಡಲ್ಪಟ್ಟಿತು. ಇದಲ್ಲದೆ ಯೇಸುವಿನ ಸಾಕ್ಷಿಯ ನಿಮಿತ್ತವಾಗಿಯೂ, ದೇವರ ವಾಕ್ಯದ ನಿಮಿತ್ತವಾಗಿಯೂ ಶಿರಚ್ಛೇದನಗೊಂಡವರ ಆತ್ಮಗಳನ್ನೂ ಮೃಗಕ್ಕೂ ಅದರ ವಿಗ್ರಹಕ್ಕೂ ಆರಾಧನೆ ಮಾಡದೇ ತಮ್ಮ ಹಣೆಯ ಮೇಲೆ ಮತ್ತು ಕೈಗಳ ಮೇಲೆ ಅದರ ಗುರುತು ಹಾಕಿಸಿಕೊಳ್ಳದವರನ್ನೂ ಕಂಡೆನು. ಅವರು ಪುನಃ ಜೀವಿತರಾಗಿ ಎದ್ದು ಸಾವಿರ ವರ್ಷ ಕ್ರಿಸ್ತನೊಂದಿಗೆ ಆಳಿದರು.

“ನೋಡು! ನಾನು ಬೇಗನೇ ಬರುತ್ತೇನೆ.ನಾನು ಪ್ರತಿಯೊಬ್ಬನಿಗೂ ಅವನವನ ನಡತೆಗೆ ತಕ್ಕಂತೆ ಕೊಡತಕ್ಕಪ್ರತಿಫಲವು ನನ್ನಲ್ಲಿದೆ.

Kannada - ಕನ್ನಡ - KN

KNIRV'19 - Kannada Indian Revised Version - 2019

This Bible text is from Kannada Indian Revised Version IRV 2019
https://open.bible/bibles/kannada-bridge-text-bible/
provided by: Bridge Connectivity Solutions Pvt Ltd, available by Creative Commons CC-BY-SA-4.0,
and this new compilation is shared as www.creativecommons.org/licenses/by-sa/4.0.
Languages are made available to you by www.ipedge.net