23 – ಪ್ರೀತಿ

ಇವು ಸರ್ವಶಕ್ತನಾದ ದೇವರ ಪವಿತ್ರ ಮಾತುಗಳು.
ಮಾನವರ ಮಾತುಗಳಲ್ಲಿ ನಮಗೆ ಆಸಕ್ತಿ ಇಲ್ಲ.
ದೇವರನ್ನು ಪ್ರೀತಿಸುವ ಯಾರಿಗಾದರೂ... ದೇವರು ಇದರ ಬಗ್ಗೆ ಹೀಗೆ ಹೇಳುತ್ತಾನೆ: ಪ್ರೀತಿ.

ಟಾಪ್ 3 ಅತ್ಯಂತ ಮಹತ್ವದ ಪದ್ಯಗಳು

“ಕೇಳುವವರಾದ ನಿಮಗೆ ನಾನು ಹೇಳುವುದೇನಂದರೆ, ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಗೆಮಾಡುವವರಿಗೆ ಉಪಕಾರಮಾಡಿರಿ; ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ; ನಿಮ್ಮನ್ನು ನಿಂದಿಸುವವರಿಗಾಗಿ ಪ್ರಾರ್ಥಿಸಿರಿ. ನಿನ್ನ ಒಂದು ಕೆನ್ನೆಯ ಮೇಲೆ ಹೊಡೆದವನಿಗೆ ಮತ್ತೊಂದು ಕೆನ್ನೆಯನ್ನೂ ತೋರಿಸು; ನಿನ್ನ ಮೇಲಂಗಿಯನ್ನು ಕಿತ್ತುಕೊಳ್ಳುವವನಿಗೆ ಒಳಂಗಿಯನ್ನೂ ತೆಗೆದುಕೊಳ್ಳಲು ಅಡ್ಡಿಮಾಡಬೇಡ.

ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಏಕೆಂದರೆ ಪ್ರೀತಿಯು ದೇವರಿಂದ ಬಂದದ್ದಾಗಿದೆ ಮತ್ತು ಪ್ರೀತಿ ಮಾಡುವ ಪ್ರತಿಯೊಬ್ಬನು ದೇವರಿಂದ ಹುಟ್ಟಿದವನೂ ದೇವರನ್ನು ಬಲ್ಲವನೂ ಆಗಿದ್ದಾನೆ. ಪ್ರೀತಿ ಇಲ್ಲದವನು ದೇವರನ್ನು ಬಲ್ಲವನಲ್ಲ. ಏಕೆಂದರೆ ದೇವರು ಪ್ರೀತಿಸ್ವರೂಪನಾಗಿದ್ದಾನೆ. ನಾವು ಆತನ ಮೂಲಕ ಜೀವಿಸುವುದಕ್ಕಾಗಿ ದೇವರು ತನ್ನ ಒಬ್ಬನೇ ಮಗನನ್ನು ಲೋಕಕ್ಕೆ ಕಳುಹಿಸಿಕೊಟ್ಟದ್ದರಲ್ಲಿಯೇ ದೇವರ ಪ್ರೀತಿಯು ನಮ್ಮಲ್ಲಿ ಪ್ರತ್ಯಕ್ಷವಾಗಿದೆ. ನಾವು ದೇವರನ್ನು ಪ್ರೀತಿಸಿಲ್ಲ, ಆದರೂ ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪಗಳಿಗೆ ಪ್ರಾಯಶ್ಚಿತ್ತ ಬಲಿಯಾಗಿ ತನ್ನ ಮಗನನ್ನು ಕಳುಹಿಸಿಕೊಟ್ಟಿದ್ದರಲ್ಲಿಯೇ ಆತನ ನಿಜವಾದ ಪ್ರೀತಿಯು ತೋರಿಬರುತ್ತದೆ. ಪ್ರಿಯರೇ, ದೇವರು ನಮ್ಮನ್ನು ಹೀಗೆ ಪ್ರೀತಿಸಿದ ಮೇಲೆ ನಾವೂ ಸಹ ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ.

ಒಬ್ಬನು ಮನಗುಂದಿ ಸರ್ವಶಕ್ತನಾದ ದೇವರ ಮೇಲಣ ಭಯಭಕ್ತಿಯನ್ನು ಬಿಡುವವನಾಗಿದ್ದರೂ; ಅವನ ಮಿತ್ರನು ಅವನಿಗೆ ದಯೆ ತೋರಿಸಬೇಕು.

ಕ್ಯಾನೊನಿಕಲ್ ಕ್ರಮದಲ್ಲಿ ಪ್ರತಿ ವಚನ - 326 ಭಾಗಗಳು

ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗಿರುವರು.

ಈ ಪ್ರಕಾರ ಯಾಕೋಬನು ರಾಹೇಲಳಿಗೋಸ್ಕರ ಏಳು ವರ್ಷ ಸೇವೆ ಮಾಡಿದನು. ಅವನು ಆಕೆಯನ್ನು ಬಹಳವಾಗಿ ಪ್ರೀತಿಸಿದ್ದರಿಂದ ಅದು ಅವನಿಗೆ ಸ್ವಲ್ಪ ಕಾಲದಂತೆ ಕಾಣಿಸಿತು.

“ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು, ಸನ್ಮಾನಿಸಿದರೆ ನಿನ್ನ ದೇವರಾದ ಯೆಹೋವನು ನಿನಗೆ ಅನುಗ್ರಹಿಸುವ ದೇಶದಲ್ಲಿ ನೀನು ಬಹುಕಾಲ ಬದುಕುವಿ.

“ಮತ್ತೊಬ್ಬನ ಮನೆಯನ್ನು ನೋಡಿ ಆಶೆಪಡಬಾರದು. ಮತ್ತೊಬ್ಬನ ಹೆಂಡತಿ, ಗಂಡಾಳು, ಹೆಣ್ಣಾಳು, ಎತ್ತು, ಕತ್ತೆ ಮುಂತಾದ ಯಾವುದನ್ನೂ ಬಯಸಬಾರದು.”

ನಿನ್ನ ವೈರಿಯ ಎತ್ತಾಗಲಿ, ಕತ್ತೆಯಾಗಲಿ ತಪ್ಪಿಸಿಕೊಂಡು ಹೋಗಿರಲಾಗಿ ಅದು ನಿನಗೆ ಸಿಕ್ಕಿದರೆ ಅದನ್ನು ಅವನ ಬಳಿಗೆ ಹೋಗಿ ಒಪ್ಪಿಸಬೇಕು. ನಿನ್ನನ್ನು ಹಗೆಮಾಡುವವನ ಕತ್ತೆಯ ಹೊರೆಯ ಕೆಳಗೆ ಬಿದ್ದಿರುವುದನ್ನು ಕಂಡರೆ, ಅದನ್ನು ಎಬ್ಬಿಸುವುದಕ್ಕೆ ಮನಸ್ಸಿಲ್ಲದಿದ್ದರೂ ಅವನಿಗೆ ಸಹಾಯ ಮಾಡಿ ಎಬ್ಬಿಸಲೇಬೇಕು.

ಯೆಹೋವನು ಮೋಶೆಗೆ ಎದುರಾಗಿ ಹೋಗುತ್ತಾ ಪ್ರಕಟಿಸಿ ಹೇಳಿದ್ದೇನೆಂದರೆ; “ಯೆಹೋವನೆಂಬ ದೇವರು ಕರುಣಾಳುವು, ಕೃಪಾಳುವು, ದೀರ್ಘಶಾಂತವುಳ್ಳವನು, ಪ್ರೀತಿಯುಳ್ಳವನು ಹಾಗು ನಂಬಿಗಸ್ತನಾದ ದೇವರು ಆಗಿದ್ದೇನೆ;

“‘ಸಹೋದರನ ವಿಷಯವಾಗಿ ಮನಸ್ಸಿನಲ್ಲಿ ದ್ವೇಷವನ್ನು ಇಟ್ಟುಕೊಳ್ಳಬಾರದು. ನೆರೆಯವನ ದೋಷಕ್ಕೆ ನೀವು ಒಳಗಾಗದಂತೆ ಅವನ ತಪ್ಪನ್ನು ಅವನಿಗೆ ತಿಳಿಸಲೇಬೇಕು. “‘ನಿಮ್ಮ ಸ್ವಜನರಲ್ಲಿ ಯಾರಿಗೂ ಕೇಡಿಗೆ ಕೇಡನ್ನು ಮಾಡದೆ, ಮನಸ್ಸಿನಲ್ಲಿ ಮತ್ಸರವನ್ನು ಇಟ್ಟುಕೊಳ್ಳದೆ, ನಿಮ್ಮ ನೆರೆಯವರನ್ನು ನಿಮ್ಮಂತೆಯೇ ಪ್ರೀತಿಸಬೇಕು. ನಾನು ಯೆಹೋವನು.

ಅವರು ನಿಮಗೆ ಸ್ವದೇಶದವರಂತೆಯೇ ಇರಬೇಕು; ಅವರನ್ನು ನಿಮ್ಮಂತೆಯೇ ಪ್ರೀತಿಸಬೇಕು. ಐಗುಪ್ತ ದೇಶದಲ್ಲಿದ್ದಾಗ ನೀವೂ ಅನ್ಯರಾಗಿದ್ದಿರಲ್ಲವೇ. ನಾನು ನಿಮ್ಮ ದೇವರಾದ ಯೆಹೋವನು.

“‘ನಿಮ್ಮಲ್ಲಿ ಒಬ್ಬ ಸಹೋದರನು ಬಡತನದಿಂದ ಗತಿಹೀನನಾದರೆ, ಅವನು ಬದುಕಿಕೊಳ್ಳುವಂತೆ ನೀವು ಅವನನ್ನು ನಿಮ್ಮ ನಡುವೆ ಇಳಿದುಕೊಂಡ ವಿದೇಶೀಯನೆಂದು ಅಥವಾ ಪ್ರವಾಸಿಯೆಂದು ಭಾವಿಸಿ ಸಹಾಯಮಾಡಬೇಕು. ನೀವು ಅವನಿಂದ ಬಡ್ಡಿಯನ್ನಾಗಲಿ ಅಥವಾ ಲಾಭವನ್ನಾಗಲಿ ತೆಗೆದುಕೊಳ್ಳಬಾರದು; ಅವನು ನಿಮ್ಮ ಬಳಿಯಲ್ಲಿ ಬದುಕುವಂತೆ ನೀವು ದೇವರಲ್ಲಿ ಭಯಭಕ್ತಿಯುಳ್ಳವರಾಗಿ ನಡೆದುಕೊಳ್ಳಬೇಕು. ನೀವು ಅವನಿಗೆ ಹಣವನ್ನು ಸಾಲವಾಗಿ ಕೊಟ್ಟರೆ ಬಡ್ಡಿಯನ್ನು ಕೇಳಬಾರದು, ದವಸಕೊಟ್ಟರೆ ಲಾಭವನ್ನು ಕೇಳಬಾರದು.

ಮೋಶೆಯು ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹು ಸಾತ್ವಿಕನು.

ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ ಮತ್ತು ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.

ಆದುದರಿಂದ ನಿಮ್ಮ ದೇವರಾದ ಯೆಹೋವನೊಬ್ಬನೇ ದೇವರೆಂದು ತಿಳಿದುಕೊಳ್ಳಬೇಕು. ಆತನು ನಂಬಿಗಸ್ತನಾದ ದೇವರು; ತನ್ನನ್ನು ಪ್ರೀತಿಸಿ ತನ್ನ ಆಜ್ಞೆಗಳನ್ನು ಅನುಸರಿಸುವವರಿಗೆ ತಾನು ಮಾಡಿದ ವಾಗ್ದಾನವನ್ನೂ ಮತ್ತು ಕೃಪೆಯನ್ನೂ ಅವರ ಸಂತತಿಯವರಲ್ಲಿ ಸಾವಿರ ತಲೆಗಳವರೆಗೂ ನೆರವೇರಿಸುವವನಾಗಿಯೂ ಮತ್ತು ತನ್ನನ್ನು ತಿರಸ್ಕರಿಸಿದವರಿಗೆ ಪ್ರತಿಯಾಗಿ ನಾಶವನ್ನು ಉಂಟುಮಾಡುವವನಾಗಿಯೂ ಇದ್ದಾನೆಂದು ತಿಳಿದುಕೊಳ್ಳಿರಿ. ಹಗೆ ಮಾಡುವವರ ವಿಷಯದಲ್ಲಿ ತಡಮಾಡದೆ ಆಗಲೇ ಮುಯ್ಯಿತೀರಿಸುವನು.

ಆತನು ಅನಾಥರ ಮತ್ತು ವಿಧವೆಯರ ನ್ಯಾಯವನ್ನು ಸ್ಥಾಪಿಸುತ್ತಾನೆ. ಪರದೇಶಿಗಳಾದವರಲ್ಲಿ ಪ್ರೀತಿಯಿಟ್ಟು ಅವರಿಗೆ ಅನ್ನವಸ್ತ್ರಗಳನ್ನು ಕೊಡುತ್ತಾನೆ. ಐಗುಪ್ತದೇಶದಲ್ಲಿ ನೀವೇ ಪರದೇಶಿಗಳಾಗಿದ್ದದ್ದನ್ನು ಜ್ಞಾಪಿಸಿಕೊಂಡು ಪರದೇಶದವರಲ್ಲಿ ಪ್ರೀತಿಯಿಡಿರಿ.

ಆದುದರಿಂದ ನೀವು ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ, ಆತನ ನಿಯಮಗಳನ್ನು ಕೈಕೊಂಡು, ಆತನ ಆಜ್ಞಾವಿಧಿನಿಯಮಗಳನ್ನು ಯಾವಾಗಲೂ ಅನುಸರಿಸಬೇಕು.

ನಾನು ಈಗ ನಿಮಗೆ ಬೋಧಿಸುವ ಯೆಹೋವನ ಆಜ್ಞೆಗಳಿಗೆ ನೀವು ಲಕ್ಷ್ಯಕೊಟ್ಟು, ನಿಮ್ಮ ದೇವರಾದ ಯೆಹೋವನನ್ನು ಸಂಪೂರ್ಣ ಹೃದಯದಿಂದಲೂ, ಸಂಪೂರ್ಣ ಮನಸ್ಸಿನಿಂದಲೂ ಪ್ರೀತಿಸಿ ಆತನನ್ನು ಸೇವಿಸಿದರೆ,

ಏಕೆಂದರೆ ನಿಮ್ಮ ದೇವರಾದ ಯೆಹೋವನು, “ಇವರು ಸಂಪೂರ್ಣ ಹೃದಯದಿಂದಲೂ ಮತ್ತು ಸಂಪೂರ್ಣ ಮನಸ್ಸಿನಿಂದಲೂ ತನ್ನನ್ನೇ ಪ್ರೀತಿಸುವವರು ಹೌದೋ ಅಲ್ಲವೋ” ಎಂಬುದನ್ನು ತಿಳಿದುಕೊಳ್ಳುವುದಕ್ಕೆ ನಿಮ್ಮನ್ನು ಪರೀಕ್ಷಿಸುತ್ತಾನೆ.

ನೀವು ಕೊಡುವಾಗ ಬೇಸರಗೊಳ್ಳದೆ ಉದಾರವಾದ ಮನಸ್ಸಿನಿಂದಲೇ ಕೊಡಬೇಕು. ಇದರಿಂದ ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ ಮತ್ತು ಪ್ರಯತ್ನಗಳಲ್ಲಿಯೂ ನಿಮ್ಮನ್ನು ಅಭಿವೃದ್ಧಿಪಡಿಸುವನು. ದೇಶದಲ್ಲಿ ಯಾವಾಗಲೂ ಬಡವರು ಇರುವರಷ್ಟೆ; ಆದುದರಿಂದ, “ನೀವು ಸ್ವದೇಶದವರಾದ ನಿಮ್ಮ ಸಹೋದರರಿಗೂ, ಬಡವರಿಗೂ ಮತ್ತು ಗತಿಯಿಲ್ಲದವರಿಗೂ ಕೈನೀಡಿ ಸಹಾಯಮಾಡಬೇಕು” ಎಂದು ನಾನು ನಿಮಗೆ ಆಜ್ಞಾಪಿಸಿದ್ದೇನೆ.

ಪ್ರತಿಯೊಬ್ಬನು ತನಗೆ ಯೆಹೋವನು ಅನುಗ್ರಹಿಸಿದ ಆದಾಯದ ಮೇರೆಗೆ ತನ್ನ ಶಕ್ತ್ಯಾನುಸಾರ ಕೊಡಬೇಕು.

ನಿಮ್ಮ ದೇವರಾದ ಯೆಹೋವನು ನಿಮ್ಮ ಮತ್ತು ನಿಮ್ಮ ಸಂತತಿಯವರ ಹೃದಯಕ್ಕೆ ಸುನ್ನತಿಮಾಡುವನು. ಆಗ ನೀವು ಆತನನ್ನು ಸಂಪೂರ್ಣವಾದ ಹೃದಯದಿಂದಲೂ ಮತ್ತು ಸಂಪೂರ್ಣವಾದ ಮನಸ್ಸಿನಿಂದಲೂ ಪ್ರೀತಿಸಿ ಬದುಕಿಕೊಳ್ಳುವಿರಿ.

ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ, ಆತನ ಮಾತಿಗೆ ವಿಧೇಯರಾಗಿರಿ, ಆತನನ್ನು ಹೊಂದಿಕೊಂಡೇ ಇರಿ. ಯೆಹೋವನು ನಿಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್ ಮತ್ತು ಯಾಕೋಬರಿಗೆ ಪ್ರಮಾಣ ಮಾಡಿಕೊಟ್ಟ ದೇಶದಲ್ಲಿ ನೀವು ಬದುಕಿಕೊಳ್ಳುವುದಕ್ಕೂ ಬಹುಕಾಲ ಇರುವುದಕ್ಕೂ ಆತನೇ ಆಧಾರ” ಎಂದು ಹೇಳಿದನು.

ಆದರೆ ಯೆಹೋವನ ಸೇವಕನಾದ ಮೋಶೆಯು ನಿಮಗೆ ಕೊಟ್ಟ ಧರ್ಮೋಪದೇಶದ ವಿಧಿಗಳನ್ನು ಜಾಗರೂಕತೆಯಿಂದ ಪಾಲಿಸಿರಿ; ಹಾಗೆಯೇ ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನ ಮಾರ್ಗದಲ್ಲೇ ನಡೆದು, ಆತನ ಆಜ್ಞೆಗಳನ್ನು ಕೈಕೊಂಡು ಆತನೊಂದಿಗೆ ಸೇರಿಕೊಂಡು ಪೂರ್ಣಮನಸ್ಸಿನಿಂದಲೂ, ಪೂರ್ಣಹೃದಯದಿಂದಲೂ ಆತನನ್ನು ಸೇವಿಸಿರಿ,” ಎಂದು ಹೇಳಿ

“ಇನ್ನು ಮುಂದೆ ಗರ್ವದಿಂದ ಮಾತನಾಡಬೇಡಿರಿ; ಸೊಕ್ಕಿನ ಮಾತು ನಿಮ್ಮ ಬಾಯಿಂದ ಹೊರಡದಿರಲಿ. ದೇವರಾದ ಯೆಹೋವನು ಸರ್ವಜ್ಞನು; ಆತನು ಮನುಷ್ಯರ ಕ್ರಿಯೆಗಳನ್ನು ತೂಗಿನೋಡುವನು.

ದಾವೀದನು ಸೌಲನೊಡನೆ ಮಾತನಾಡಿ ಮುಗಿಸಿದ ಮೇಲೆ ಯೋನಾತಾನನ ಪ್ರಾಣವು ದಾವೀದನ ಪ್ರಾಣದೊಡನೆ ಒಂದಾಯಿತು. ಅವನು ದಾವೀದನನ್ನು ತನ್ನ ಪ್ರಾಣದಂತೆಯೇ ಪ್ರೀತಿಸತೊಡಗಿದನು. ಆ ದಿನದಿಂದ ಸೌಲನು ದಾವೀದನನ್ನು ಅವನ ತಂದೆಯ ಮನೆಗೆ ಹೋಗಗೊಡದೇ, ತನ್ನ ಬಳಿಯಲ್ಲೇ ಇಟ್ಟುಕೊಂಡನು. ಯೋನಾತಾನನು ದಾವೀದನನ್ನು ತನ್ನ ಪ್ರಾಣದಂತೆಯೇ ಪ್ರೀತಿಸಿದ್ದರಿಂದ ಅವನೊಡನೆ ಸ್ನೇಹದ ಒಪ್ಪಂದ ಮಾಡಿಕೊಂಡನು. ಇದಲ್ಲದೆ ಅವನು ತನ್ನ ಮೈಮೇಲಿದ್ದ ನಿಲುವಂಗಿಯನ್ನು ತನ್ನ ಯುದ್ಧವಸ್ತ್ರಗಳನ್ನು, ಕತ್ತಿ, ಬಿಲ್ಲು, ನಡುಕಟ್ಟುಗಳನ್ನೂ ದಾವೀದನಿಗೆ ಕೊಟ್ಟನು.

ಹುಡುಗನು ಹೋಗುತ್ತಲೇ ದಾವೀದನು ಕಲ್ಲುಕುಪ್ಪೆಯ ಬಳಿಯಿಂದ ಎದ್ದುಬಂದು ಮೂರು ಸಾರಿ ಸಾಷ್ಟಾಂಗವಾಗಿ ಯೋನಾತಾನನನ್ನು ವಂದಿಸಿದನು. ಅವರು ಒಬ್ಬರಿಗೊಬ್ಬರು ಮುದ್ದಿಟ್ಟುಕೊಂಡು ಅತ್ತರು. ದಾವೀದನು ಬಹಳವಾಗಿ ಅತ್ತನು. ಅನಂತರ ಯೋನಾತಾನನು ದಾವೀದನಿಗೆ, “ಸಮಾಧಾನದಿಂದ ಹೋಗು. ನಾವು ಯೆಹೋವನ ಹೆಸರಿನಲ್ಲಿ ಆಣೆಯಿಟ್ಟು ಒಡಂಬಡಿಕೆಯನ್ನು ಮಾಡಿಕೊಂಡಿದ್ದೇವಲ್ಲಾ. ಆತನೇ ನನಗೂ ನಿನಗೂ, ನನ್ನ ಸಂತಾನಕ್ಕೂ ನಿನ್ನ ಸಂತಾನಕ್ಕೂ ಸದಾ ಸಾಕ್ಷಿಯಾಗಿರಲಿ” ಎಂದು ಹೇಳಿದನು. ತರುವಾಯ ದಾವೀದನು ಹೊರಟುಹೋದನು. ಯೋನಾತಾನನು ಊರೊಳಕ್ಕೆ ಹೋದನು.

ಒಬ್ಬನು ಮನಗುಂದಿ ಸರ್ವಶಕ್ತನಾದ ದೇವರ ಮೇಲಣ ಭಯಭಕ್ತಿಯನ್ನು ಬಿಡುವವನಾಗಿದ್ದರೂ; ಅವನ ಮಿತ್ರನು ಅವನಿಗೆ ದಯೆ ತೋರಿಸಬೇಕು.

ಯೆಹೋವನೇ, ನೀನು ಆದಿಯಿಂದಲೂ ನನ್ನನ್ನು ಕರುಣಿಸುವವನಾಗಿ, ನನಗೆ ಮಾಡಿದ ಮಹೋಪಕಾರಗಳನ್ನು ನೆನಸಿಕೋ. ಯೆಹೋವನೇ, ನನ್ನ ಯೌವನದ ತಪ್ಪುಗಳನ್ನೂ ಮತ್ತು ದ್ರೋಹಗಳನ್ನೂ ಮನಸ್ಸಿನಲ್ಲಿಡದೆ, ನಿನ್ನ ಕೃಪೆಗೆ ತಕ್ಕಂತೆ ದಯಾಪೂರ್ವಕವಾಗಿ ನನ್ನನ್ನು ನೆನಪುಮಾಡಿಕೋ.

ಆತನು ದೀನರನ್ನು ತನ್ನ ವಿಧಿಗನುಗುಣವಾಗಿ ನಡೆಸುವನು; ಅವರಿಗೆ ತನ್ನ ಮಾರ್ಗವನ್ನು ತೋರಿಸುವನು.

ಯೆಹೋವನ ನಿಬಂಧನೆ ಮತ್ತು ಆಜ್ಞೆಗಳನ್ನು ಕೈಕೊಂಡು ನಡೆಯುವವರಿಗೆ, ಆತನ ಎಲ್ಲಾ ಮಾರ್ಗಗಳು ಕೃಪೆಯೂ, ಸತ್ಯತೆಯುಳ್ಳವು.

ಭಕ್ತರೇ, ನೀವೆಲ್ಲರೂ ಯೆಹೋವನನ್ನು ಪ್ರೀತಿಸಿರಿ. ಆತನು ನಂಬಿಗಸ್ತರನ್ನು ಕಾಪಾಡುತ್ತಾನೆ; ಅಹಂಕಾರಿಗಳಿಗೆ ಚೆನ್ನಾಗಿ ಮುಯ್ಯಿತೀರಿಸುತ್ತಾನೆ.

ಯೆಹೋವನೇ, ನಿನ್ನ ಪ್ರೀತಿಯು ಆಕಾಶದಷ್ಟು ಉನ್ನತವಾಗಿದೆ; ನಿನ್ನ ನಂಬಿಗಸ್ತಿಕೆಯು ಮೇಘಮಾರ್ಗವನ್ನು ಮುಟ್ಟುತ್ತದೆ. ನಿನ್ನ ನೀತಿಯು ದಿವ್ಯಪರ್ವತಗಳಂತೆಯೂ, ನಿನ್ನ ನ್ಯಾಯವು ಮಹಾಸಾಗರದಂತೆಯೂ ಇವೆ; ಯೆಹೋವನೇ, ನೀನು ಮನುಷ್ಯರನ್ನೂ, ಮೃಗಗಳನ್ನೂ ಸಂರಕ್ಷಿಸುತ್ತೀ. ದೇವರೇ, ನಿನ್ನ ಪ್ರೀತಿ ಎಷ್ಟೋ ಅಮೂಲ್ಯವಾದದ್ದು; ಮಾನವರು ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುತ್ತಾರೆ.

ಯೆಹೋವನೇ, ನೀನಂತೂ ನಿನ್ನ ಕರುಣೆಯನ್ನು ನನ್ನಿಂದ ಅಗಲಿಸಬೇಡ; ನಿನ್ನ ಕೃಪಾಸತ್ಯತೆಗಳು ನನ್ನನ್ನು ಯಾವಾಗಲೂ ಕಾಪಾಡಲಿ.

ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ. ದಿಕ್ಕಿಲ್ಲದವನನ್ನು ಪರಾಂಬರಿಸುವವನು ಧನ್ಯನು; ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು. ಯೆಹೋವನು ಅವನ ಪ್ರಾಣವನ್ನು ಕಾಪಾಡಿ ಉಳಿಸುವನು; ಅವನು ದೇಶದಲ್ಲಿ ಧನ್ಯನೆನಿಸಿಕೊಳ್ಳುವನು; ಯೆಹೋವನು ಅವನನ್ನು ಶತ್ರುಗಳ ಅಧೀನಕ್ಕೆ ಕೊಡುವುದಿಲ್ಲ! ಅವನು ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗ, ಯೆಹೋವನು ಅವನನ್ನು ಉದ್ಧರಿಸುವನು; ಅವನ ರೋಗವನ್ನೆಲ್ಲಾ ಪರಿಹರಿಸಿ, ಆರೋಗ್ಯವನ್ನು ಅನುಗ್ರಹಿಸಿದ್ದಿಯಲ್ಲಾ ಸ್ವಾಮೀ.

ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನು ಬತ್ಷೆಬಳ ಬಳಿಗೆ ಹೋದ ಮೇಲೆ ಪ್ರವಾದಿಯಾದ ನಾತಾನನು ಎಚ್ಚರಿಸಿದಾಗ ರಚಿಸಿದ ಕೀರ್ತನೆ. ಪ್ರೀತಿಸ್ವರೂಪನಾದ ದೇವರೇ, ನನ್ನನ್ನು ಕರುಣಿಸು; ಕರುಣಾನಿಧಿಯೇ, ನನ್ನ ದ್ರೋಹವನ್ನೆಲ್ಲಾ ಅಳಿಸಿಬಿಡು.

ಯೆಹೋವನೇ, ನನ್ನ ಮೊರೆಯನ್ನು ಲಾಲಿಸು; ನಿನ್ನ ಕೃಪೆಯು ಶುಭಕರವಾಗಿದೆಯಲ್ಲಾ. ಕರುಣಾನಿಧಿಯೇ, ನನ್ನನ್ನು ಕಟಾಕ್ಷಿಸು.

ಕರ್ತನೇ, ನೀನು ಒಳ್ಳೆಯವನೂ, ಕ್ಷಮಿಸುವವನೂ, ನಿನಗೆ ಮೊರೆಯಿಡುವವರೆಲ್ಲರಲ್ಲಿ ಕೃಪಾಪೂರ್ಣನೂ ಆಗಿದ್ದಿಯಲ್ಲಾ.

ಕರ್ತನೇ, ನೀನು ಕನಿಕರವೂ, ದಯೆಯೂ ಉಳ್ಳ ದೇವರು; ದೀರ್ಘಶಾಂತನು, ಬಹಳ ಪ್ರೀತಿಯೂ, ನಂಬಿಕೆಯೂ ಉಳ್ಳವನು.

ಗುಪ್ತದಲ್ಲಿ ನೆರೆಯವನ ಮೇಲೆ ಚಾಡಿ ಹೇಳುವವನನ್ನು ಸಂಹರಿಸುವೆನು; ಸೊಕ್ಕಿನ ಕಣ್ಣೂ, ಉಬ್ಬಿದ ಮನಸ್ಸೂ ಉಳ್ಳವನನ್ನು ಸಹಿಸುವುದಿಲ್ಲ.

ಯೆಹೋವನು ಕನಿಕರವೂ, ದಯೆಯೂ, ದೀರ್ಘಶಾಂತಿಯೂ, ಪೂರ್ಣಪ್ರೀತಿಯೂ ಉಳ್ಳವನು. ಆತನು ಯಾವಾಗಲೂ ತಪ್ಪು ಹುಡುಕುವವನಲ್ಲ; ನಿತ್ಯವೂ ಕೋಪಿಸುವವನಲ್ಲ. ಆತನು ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು ಶಿಕ್ಷಿಸಲಿಲ್ಲ; ನಮ್ಮ ಅಪರಾಧಗಳಿಗೆ ತಕ್ಕಂತೆ ದಂಡಿಸಲಿಲ್ಲ. ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ, ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ಕೃಪೆಯು ಅಷ್ಟು ಅಪಾರವಾಗಿದೆ. ಪೂರ್ವಕ್ಕೂ, ಪಶ್ಚಿಮಕ್ಕೂ ಎಷ್ಟು ದೂರವೋ, ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ.

ಆದರೆ ಯೆಹೋವನಲ್ಲಿ ಭಯಭಕ್ತಿಯುಳ್ಳವರ ಮೇಲೆ, ಆತನ ದಯೆಯು ಯುಗಯುಗಾಂತರಗಳವರೆಗೂ ಇರುತ್ತದೆ.

ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾಗಿರುವುದು.

ಅವರು ಯೆಹೋವನ ಕೃಪೆಗೋಸ್ಕರವೂ, ಆತನು ಮಾನವರಿಗಾಗಿ ನಡೆಸಿದ ಅದ್ಭುತಗಳಿಗೋಸ್ಕರವೂ, ಆತನನ್ನು ಕೊಂಡಾಡಲಿ. ಆತನು ಬಾಯಾರಿದವರ ಆಶೆಯನ್ನು ಪೂರೈಸಿ, ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಗೊಳಿಸುತ್ತಾನೆ.

ಆತನ ಕೃಪೆಯು ನಮ್ಮ ಮೇಲೆ ಅಪಾರವಾಗಿದೆ; ಯೆಹೋವನ ಸತ್ಯತೆಯು ಸದಾ ಇರುವುದು. ಯೆಹೋವನಿಗೆ ಸ್ತೋತ್ರ!

ಯಾತ್ರಾಗೀತೆ; ದಾವೀದನದು. ಆಹಾ, ಸಹೋದರರು ಒಂದಾಗಿರುವುದು, ಎಷ್ಟೋ ಒಳ್ಳೆಯದು, ಎಷ್ಟೋ ರಮ್ಯವಾದದ್ದು!

ಪರಲೋಕದಲ್ಲಿರುವ ದೇವರಿಗೆ ಕೃತಜ್ಞತಾಸ್ತುತಿ ಮಾಡಿರಿ, ಆತನ ಪ್ರೀತಿಯು ಶಾಶ್ವತವಾದದ್ದು.

ಯೆಹೋವನು ದಯೆಯು, ಕನಿಕರವು ಉಳ್ಳವನು, ದೀರ್ಘಶಾಂತನು, ಪ್ರೀತಿಪೂರ್ಣನು ಆಗಿದ್ದಾನೆ. ಯೆಹೋವನು ಸರ್ವೋಪಕಾರಿಯು, ತಾನು ನಿರ್ಮಿಸಿದವುಗಳನ್ನೆಲ್ಲಾ ಕರುಣಿಸುವಾತನೂ ಆಗಿದ್ದಾನೆ.

ಯೆಹೋವನು ದೀನರಿಗೆ ಆಧಾರವಾಗಿದ್ದಾನೆ, ದುಷ್ಟರನ್ನು ನೆಲಕ್ಕೆ ಹಾಕಿ ತುಳಿದುಬಿಡುತ್ತಾನೆ.

ಪ್ರೀತಿ, ಸತ್ಯತೆಗಳು ನಿನ್ನನ್ನು ಬಿಡದಿರಲಿ, ಅವುಗಳನ್ನು ನಿನ್ನ ಕೊರಳಿಗೆ ಕಟ್ಟು, ನಿನ್ನ ಹೃದಯದ ಹಲಗೆಯ ಮೇಲೆ ಅವುಗಳನ್ನು ಬರೆ.

ಸ್ವಂತ ಕೊಳದ ನೀರನ್ನು, ಸ್ವಂತ ಬಾವಿಯಲ್ಲಿ ಉಕ್ಕುವ ಜಲವನ್ನು ಮಾತ್ರ ಕುಡಿ. ನಿನ್ನ ಒರತೆಗಳು ಬಯಲಿನಲ್ಲಿಯೂ, ನಿನ್ನ ಕಾಲುವೆಗಳು ಬೀದಿಗಳಲ್ಲಿಯೂ ಹರಡಿ ಹರಿಯುವುದು ಹಿತವೇ? ಅವು ನಿನಗೊಬ್ಬನಿಗೇ ಹರಿಯಲಿ, ಪರರು ನಿನ್ನೊಂದಿಗೆ ಸೇರಿ ಕುಡಿಯಬಾರದು. ನಿನ್ನ ಬುಗ್ಗೆಯು ದೇವರ ಆಶೀರ್ವಾದವನ್ನು ಹೊಂದಲಿ, ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು. ಆಕೆ ಮನೋಹರವಾದ ಜಿಂಕೆಯಂತೆಯೂ, ಅಂದವಾದ ದುಪ್ಪಿಯ ಹಾಗೂ ಇರುವಳಲ್ಲಾ, ಆಕೆಯ ಸ್ತನಗಳು ನಿನ್ನನ್ನು ಸರ್ವದಾ ತೃಪ್ತಿಪಡಿಸಲಿ, ಆಕೆಯ ಪ್ರೀತಿಯಲ್ಲೇ ನಿರಂತರವಾಗಿ ಲೀನವಾಗಿರು. ಮಗನೇ, ಏಕೆ ಪರಸ್ತ್ರೀಯಲ್ಲಿ ಭ್ರಮೆಗೊಳ್ಳುವಿ, ಅನ್ಯಳ ಎದೆಯನ್ನು ತಬ್ಬಿಕೊಳ್ಳುವುದೇಕೆ?

ಯೆಹೋವನು ಹಗೆಮಾಡುವ ವಿಷಯಗಳು ಆರು ಇವೆ, ಹೌದು, ಏಳು ಸಂಗತಿಗಳು ಆತನಿಗೆ ಅಸಹ್ಯವಾಗಿ ತೋರುತ್ತವೆ. ಅವು ಯಾವುವೆಂದರೆ, ಹೆಮ್ಮೆಯ ಕಣ್ಣು, ಸುಳ್ಳಿನ ನಾಲಿಗೆ, ನಿರ್ದೋಷಿಗಳ ರಕ್ತವನ್ನು ಸುರಿಸುವ ಕೈ, ದುರಾಲೋಚನೆಗಳನ್ನು ಕಲ್ಪಿಸುವ ಹೃದಯ, ಕೇಡುಮಾಡಲು ತ್ವರೆಪಡುವ ಕಾಲು, ಅಸತ್ಯವಾಡುವ ಸುಳ್ಳುಸಾಕ್ಷಿ ಮತ್ತು ಒಡಹುಟ್ಟಿದವರಲ್ಲಿ ಜಗಳಗಳನ್ನು ಬಿತ್ತುವವನು ಇವುಗಳೇ.

ಯೆಹೋವನ ಭಯವು ಪಾಪದ್ವೇಷವನ್ನು ಹುಟ್ಟಿಸುತ್ತದೆ; ಗರ್ವ, ಅಹಂಭಾವ, ದುರ್ಮಾರ್ಗತನ, ಕುಟಿಲ ಭಾಷಣ ಇವುಗಳನ್ನು ಹಗೆಮಾಡುತ್ತೇನೆ.

ನನ್ನನ್ನು ಪ್ರೀತಿಸುವವರನ್ನು ನಾನು ಪ್ರೀತಿಸುತ್ತೇನೆ, ಆತುರದಿಂದ ಹುಡುಕುವವರು ನನ್ನನ್ನು ಕಂಡುಕೊಳ್ಳುವರು.

ದ್ವೇಷವು ಜಗಳಗಳನ್ನೆಬ್ಬಿಸುತ್ತದೆ, ಪ್ರೀತಿಯು ಪಾಪಗಳನ್ನೆಲ್ಲಾ ಮುಚ್ಚುತ್ತದೆ.

ಎಲ್ಲಿ ಹೆಮ್ಮೆಯೋ ಅಲ್ಲಿ ನಾಚಿಕೆ, ದೀನತೆಯಲ್ಲಿ ಸುಜ್ಞಾನ.

ದಯಾಪರನಿಗೆ ಉಪಕಾರವಾಗುವುದು, ಕ್ರೂರನು ತನ್ನ ಶರೀರವನ್ನು ಹಿಂಸಿಸುವನು.

ಒಬ್ಬನು ತನ್ನ ಧನವನ್ನು ಚೆಲ್ಲಿದರೂ ಅವನಿಗೆ ವೃದ್ಧಿ, ಮತ್ತೊಬ್ಬನು ನ್ಯಾಯವಾದದ್ದನ್ನು ಬಿಗಿಹಿಡಿದರೂ ಅವನಿಗೆ ಬಡತನ. ಉದಾರಿಯು ಪುಷ್ಟನಾಗುವನು, ನೀರು ಹಾಯಿಸುವವನಿಗೆ ನೀರು ಸಿಕ್ಕುವುದು.

ಬೆತ್ತ ಹಿಡಿಯದ ತಂದೆ ಮಗನಿಗೆ ಶತ್ರು, ಸುಶಿಕ್ಷಣವನ್ನು ನೀಡುವ ತಂದೆ ಮಗನಿಗೆ ಮಿತ್ರ.

ನೆರೆಯವನನ್ನು ತಿರಸ್ಕರಿಸುವವನು ದೋಷಿ, ದರಿದ್ರನನ್ನು ಕನಿಕರಿಸುವವನು ಧನ್ಯನು.

ಬಡವರನ್ನು ಹಿಂಸಿಸುವವನು ಸೃಷ್ಟಿಕರ್ತನನ್ನು ಹೀನೈಸುವನು, ಗತಿಯಿಲ್ಲದವರನ್ನು ಕರುಣಿಸುವವನು ಆತನನ್ನು ಘನಪಡಿಸುವನು.

ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವುದು, ಬಿರುನುಡಿಯು ಸಿಟ್ಟನ್ನೇರಿಸುವುದು.

ಯೆಹೋವನು ಗರ್ವಿಷ್ಠನ ಮನೆಯನ್ನು ಕೆಡವಿಬಿಡುವನು; ವಿಧವೆಯ ಮೇರೆಯನ್ನು ನೆಲೆಗೊಳಿಸುವನು.

ಅಹಂಕಾರಿಗಳೆಲ್ಲಾ ಯೆಹೋವನಿಗೆ ಅಸಹ್ಯ, ಅವರಿಗೆ ದಂಡನೆ ಖಂಡಿತ. ಕೃಪಾಸತ್ಯತೆಗಳಿಂದ ಪಾಪನಿವಾರಣೆ, ಯೆಹೋವನ ಭಯಭಕ್ತಿಯಿಂದ ಹಾನಿನಿವಾರಣೆ.

ಗರ್ವದಿಂದ ಭಂಗ, ಉಬ್ಬಿನಿಂದ ದೊಬ್ಬು. ಸೊಕ್ಕಿನವರ ಸಂಗಡ ಸೂರೆಯನ್ನು ಹಂಚಿಕೊಳ್ಳುವುದಕ್ಕಿಂತಲೂ, ದೀನರ ಸಂಗಡ ದೈನ್ಯದಿಂದಿರುವುದು ವಾಸಿ.

ಸವಿನುಡಿಯು ಜೇನುಕೊಡ, ಅದು ಆತ್ಮಕ್ಕೆ ಸಿಹಿ, ಎಲುಬಿಗೆ ಕ್ಷೇಮ.

ದೋಷವನ್ನು ಮುಚ್ಚಿಡುವವನು ಪ್ರೇಮವನ್ನು ಸೆಳೆಯುವನು, ಎತ್ತಿ ಆಡುತ್ತಿರುವವನು ಸ್ನೇಹವನ್ನು ಕಳೆದುಕೊಳ್ಳುವನು.

ಮಿತ್ರನ ಪ್ರೀತಿಯು ನಿರಂತರ, ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.

ಜೀವ ಮತ್ತು ಮರಣಗಳು ನಾಲಿಗೆಯ ವಶ, ವಚನಪ್ರಿಯರು ಅದರ ಫಲವನ್ನು ಅನುಭವಿಸುವರು,

ಬಹಳ ಗೆಳೆಯರನ್ನು ಸೇರಿಸಿಕೊಂಡವನಿಗೆ ನಾಶನ, ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ ಮಿತ್ರನುಂಟು.

ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು, ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರ ಮಾಡುವನು.

ಮನುಷ್ಯನು ತನ್ನ ಹೃದಯದಲ್ಲಿ ಬಯಸುವಂಥದ್ದು ನಿಷ್ಠೆಯಾಗಿದೆ, ಬಡವನಾಗಿರುವುದು ಉತ್ತಮ.

ಯಜ್ಞಕ್ಕಿಂತಲೂ ನೀತಿನ್ಯಾಯಗಳು ಯೆಹೋವನಿಗೆ ಇಷ್ಟ. ಗರ್ವದ ದೃಷ್ಟಿ, ಕೊಬ್ಬಿದ ಹೃದಯ, ದುಷ್ಟರ ಭಾಗ್ಯ, ಇವು ಧರ್ಮವಿರುದ್ಧ.

ಬಡವನ ಕೂಗಿಗೆ ಕಿವಿಮುಚ್ಚಿಕೊಳ್ಳುವವನು, ತಾನೇ ಮೊರೆಯಿಡುವಾಗ ಯಾರೂ ಉತ್ತರಕೊಡರು.

ನೀತಿ ಮತ್ತು ಕೃಪೆಗಳನ್ನು ಹುಡುಕುವವನು ಜೀವ ಮತ್ತು ಕೀರ್ತಿಗಳನ್ನು ಪಡೆಯುವನು.

ತನ್ನ ಬಾಯನ್ನೂ, ನಾಲಿಗೆಯನ್ನೂ ಕಾಯುವವನು ತೊಂದರೆಗಳಿಂದ ರಕ್ಷಿಸಿಕೊಳ್ಳುವನು. “ಧರ್ಮನಿಂದಕ” ಎನ್ನಿಸಿಕೊಳ್ಳುವವನು ಸೊಕ್ಕೇರಿದ ಅಹಂಕಾರಿಯಾಗಿ, ಗರ್ವ ಮತ್ತು ಮದದಿಂದ ಪ್ರವರ್ತಿಸುವನು.

ದಯಾದೃಷ್ಟಿಯವನು ಆಶೀರ್ವಾದವನ್ನು ಪಡೆಯುವನು, ತನ್ನ ಆಹಾರವನ್ನು ಬಡವರಿಗೆ ಕೊಡುತ್ತಾನಲ್ಲವೆ.

ಧರ್ಮನಿಂದಕನನ್ನು ಓಡಿಸಿಬಿಟ್ಟರೆ ಜಗಳವು ತೊಲಗುವುದು, ಹೌದು, ವ್ಯಾಜ್ಯವು ತೀರಿ ಅವಮಾನವು ಇಲ್ಲವಾಗುವುದು. ಹೃದಯಶುದ್ಧಿಯನ್ನು ಅಪೇಕ್ಷಿಸುವ ಮತ್ತು ಸವಿಮಾತನಾಡುವ ಮನುಷ್ಯನಿಗೆ ರಾಜನ ಸ್ನೇಹವು ದೊರೆಯುವುದು.

ನಿನ್ನ ವೈರಿ ಹಸಿದಿದ್ದರೆ ಅನ್ನವಿಡು, ಬಾಯಾರಿದ್ದರೆ ನೀರುಕೊಡು, ಹೀಗೆ ಅವನ ತಲೆಯ ಮೇಲೆ ಕೆಂಡ ಸುರಿದಂತಾಗುವುದು. ಯೆಹೋವನೇ ನಿನಗೆ ಪ್ರತಿಫಲಕೊಡುವನು.

ಬಡವರಿಗೆ ದಾನಮಾಡುವವನು ಕೊರತೆಪಡನು, ಅವರನ್ನು ಕಂಡು ಕಾಣದಂತೆ ಇರುವವನು ಬಹುಶಾಪಕ್ಕೆ ಒಳಗಾಗುವನು.

ಕೋಪಿಷ್ಠನು ಜಗಳವನ್ನೆಬ್ಬಿಸುವನು, ಕ್ರೋಧಶೀಲನು ದೋಷಭರಿತನು.

ಗರ್ವವು ಮನುಷ್ಯನನ್ನು ದೀನಸ್ಥಿತಿಗೆ ತರುವುದು, ದೀನಮನಸ್ಸುಳ್ಳವನು ಮಾನವನ್ನು ಪಡೆಯುವನು.

ಮೂರು ವಿಷಯಗಳು ನನ್ನ ಬುದ್ಧಿಯನ್ನು ಮೀರಿವೆ, ಹೌದು, ನಾಲ್ಕನ್ನು ಗ್ರಹಿಸಲಾರೆನು; ಯಾವುವೆಂದರೆ, ಆಕಾಶದಲ್ಲಿ ಹದ್ದಿನ ಹಾದಿ, ಬಂಡೆಯ ಮೇಲೆ ಸರ್ಪದ ಸರಣಿ, ಸಾಗರದ ನಡುವೆ ಹಡಗಿನ ಮಾರ್ಗ, ಸ್ತ್ರೀಯಲ್ಲಿ ಪುರುಷನ ಪದ್ಧತಿ, ಇವೇ.

ಬಾಯಿಲ್ಲದವರಿಗೂ, ಹಾಳಾಗಿ ಹೋಗುತ್ತಿರುವವರೆಲ್ಲರಿಗೂ, ನ್ಯಾಯವಾಗುವಂತೆ ಬಾಯಿ ತೆರೆ. ಬಾಯನ್ನು ತೆರೆದು ನ್ಯಾಯವನ್ನು ತೀರಿಸು, ದೀನದರಿದ್ರರ ವ್ಯಾಜ್ಯ ಮಾಡು.

ನಿನ್ನ ಮನಸ್ಸು ಕೋಪಕ್ಕೆ ಆತುರಪಡದಿರಲಿ, ಕೋಪಕ್ಕೆ ಮೂಢರ ಎದೆಯೇ ಲೇಸು.

ಸೊಲೊಮೋನನು ರಚಿಸಿದ ಪರಮಗೀತೆ. ನಿನ್ನ ಬಾಯ ಮುದ್ದುಗಳಿಂದ ನನಗೆ ಮುದ್ದಿಡು ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತಲೂ ಉತ್ತಮ. ನಿನ್ನ ತೈಲವು ಸುಗಂಧ; ನಿನ್ನ ಹೆಸರು ಸುರಿದ ತೈಲದ ಸುಗಂಧದಂತೆ ವ್ಯಾಪಿಸಿರುವುದರಿಂದ, ತರುಣಿಯರು ನಿನ್ನನ್ನು ಪ್ರೀತಿಸುವರು. ನನ್ನನ್ನು ನಿನ್ನಡೆಗೆ ಸೆಳೆದುಕೋ; ನಿನ್ನ ಹಿಂದೆ ಓಡಿ ಬರುವೆನು; ರಾಜನು ನನ್ನನ್ನು ಅಂತಃಪುರಕ್ಕೆ ಬರಮಾಡಿದ್ದಾನೆ; ನಿನ್ನಲ್ಲಿ ಹರ್ಷಿಸಿ ಉಲ್ಲಾಸಿಸುವೆವು, ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತಲೂ ಉತ್ತಮವಾದುದು; ಸ್ತ್ರೀಯರು ನಿನ್ನನ್ನು ಯಥಾರ್ಥವಾಗಿ ಪ್ರೀತಿಸುವರು.

ಪ್ರಿಯಳೇ, ನಿನ್ನನ್ನು ಫರೋಹನ ರಥವನ್ನೆಳೆವ ಹೆಣ್ಣು ಕುದುರೆಗೆ ಹೋಲಿಸಿದ್ದೇನೆ. ನಿನ್ನ ಕೆನ್ನೆಗಳು ಆಭರಣಗಳಿಂದಲೂ, ನಿನ್ನ ಕಂಠವು ಹಾರಗಳಿಂದಲೂ ಎಷ್ಟೋ ಅಂದವಾಗಿವೆ! ನಾನು ನಿನಗಾಗಿ ಬಂಗಾರದ ಅಂಚಿನಿಂದ ಕೂಡಿರುವ, ಬೆಳ್ಳಿಯ ಕುಚ್ಚಗಳನ್ನು ಮಾಡಿಸುವೆನು. ರಾಜನು ಔತಣದಲ್ಲಿದ್ದಾಗ ಇತ್ತ ನನ್ನ ಸುಗಂಧತೈಲವು ಪರಿಮಳವನ್ನು ಬೀರುತ್ತಿತ್ತು. ಎನ್ನಿನಿಯನು ನನ್ನ ಸ್ತನಗಳ ಮಧ್ಯದಲ್ಲಿನ ರಕ್ತಬೋಳದ ಚೀಲ; ನನ್ನ ಪಾಲಿಗೆ ನನ್ನ ನಲ್ಲನು ಏನ್ಗೆದಿಯ ದ್ರಾಕ್ಷಿ ತೋಟಗಳ ಗೋರಂಟೆಯ ಹೂಗೊಂಚಲು. ಆಹಾ, ನನ್ನ ಪ್ರಿಯಳೇ, ನೀನು ಎಷ್ಟು ಚೆಲುವೆ, ಆಹಾ, ನೀನು ಎಷ್ಟು ಸುಂದರಿ! ನಿನ್ನ ನೇತ್ರಗಳು ಪಾರಿವಾಳಗಳಂತಿವೆ. ಆಹಾ, ಎನ್ನಿನಿಯನೇ, ನೀನೆಷ್ಟು ಸುಂದರ, ನೀನೆಷ್ಟು ಮನೋಹರ! ಹಚ್ಚ ಹಸಿರು ಚಿಗುರುಗಳು ನಮ್ಮ ಮಂಚ,

ನಾನು ಶಾರೋನಿನ ನೆಲಸಂಪಿಗೆ, ತಗ್ಗಿನ ತಾವರೆ. ಸ್ತ್ರೀಯರಲ್ಲಿ ಶ್ರೇಷ್ಠಳು ನೀನು, ನನ್ನ ಪ್ರಿಯಳು ಮುಳ್ಳುಗಳ ಮಧ್ಯದಲ್ಲಿರುವ ತಾವರೆಯಂತಿರುವಳು. ನನ್ನ ಪ್ರಿಯನು ಪುರುಷೋತ್ತಮನು ವನವೃಕ್ಷಗಳ ಮಧ್ಯೆ ಸೇಬಿನ ವೃಕ್ಷದಂತಿಹನು. ಅದರ ಫಲವು ನನ್ನ ನಾಲಿಗೆಗೆ ಸುಮಧುರ ನಾನು ಆತನ ನೆರಳಿನಲ್ಲಿ ಕುಳಿತು ಪರಮಾನಂದಗೊಂಡೆನು. ಬರಮಾಡಿಕೊಂಡನು ನನ್ನನ್ನು ಔತಣಶಾಲೆಗೆ, ನನ್ನ ಮೇಲೆತ್ತಿದನು ಪ್ರೀತಿ ಎಂಬ ಪತಾಕೆ. ಅಸ್ವಸ್ಥಳಾಗಿರುವೆನು ಅನುರಾಗದಿಂದ, ದೀಪದ್ರಾಕ್ಷೆಯಿಂದ ನನ್ನನ್ನು ಉಪಚರಿಸಿರಿ, ಸೇಬು ಹಣ್ಣುಗಳಿಂದ ನನ್ನನ್ನು ಚೈತನ್ಯಗೊಳಿಸಿರಿ. ಆತನ ಎಡಗೈ ನನಗೆ ತಲೆದಿಂಬಾಗಿದ್ದರೆ, ಆತನ ಬಲಗೈ ನನ್ನನ್ನು ಆಲಂಗಿಸಿದರೆ ನನಗೆ ಪರಮಾನಂದ! ಯೆರೂಸಲೇಮಿನ ಮಹಿಳೆಯರೇ, ಆತನು ತಾನಾಗಿ ಎಚ್ಚರಗೊಳ್ಳುವವರೆಗೆ ಯಾರೂ ನನ್ನ ಪ್ರಿಯನನ್ನು ಎಚ್ಚರಿಸದಿರಿ, ಆತನ ವಿಶ್ರಾಂತಿಗೆ ಯಾರೂ ಭಂಗ ಮಾಡದಿರಿ ಎಂದು ವನದ ಜಿಂಕೆ ಹರಿಣಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ. ಅಗೋ ನನ್ನ ಕಾಂತನ ಸಪ್ಪಳ! ಅವನು ಬೆಟ್ಟಗಳ ಮೇಲೆ ಹಾರುತ್ತಾ, ಗುಡ್ಡಗಳಲ್ಲಿ ಜಿಗಿಯುತ್ತಾ ಬರುತ್ತಿದ್ದಾನೆ; ನನ್ನ ಪ್ರಿಯನು ಜಿಂಕೆಯಂತೆಯೂ ಪ್ರಾಯದ ಹರಿಣದಂತೆಯೂ ಇದ್ದಾನೆ. ಆಹಾ, ಇಗೋ ನಮ್ಮ ಗೋಡೆಯ ಆಚೆ ನಿಂತು, ಕಿಟಕಿಗಳ ಮೂಲಕ ನೋಡುತ್ತಾನೆ, ಜಾಲಾಂದ್ರಗಳ ಮೂಲಕ ಇಣಿಕುಹಾಕುತ್ತಾನೆ!

ನನ್ನ ನಲ್ಲನು ನನಗೆ ಹೀಗೆಂದನು, “ನನ್ನ ಪ್ರಿಯತಮೇ, ಎನ್ನ ಸುಂದರಿಯೇ, ಎದ್ದು ನನ್ನೊಂದಿಗೆ ಬಾ! ಇಗೋ, ಚಳಿಗಾಲ ಕಳೆಯಿತು, ಮಳೆಗಾಲ ಮುಗಿಯಿತು; ಭೂಮಿಯಲ್ಲೆಲ್ಲಾ ಹೂವುಗಳು ಕಾಣುತ್ತವೆ, ಕುಡಿ ಸವರುವ ಕಾಲ ಬಂತು, ಬೆಳವಕ್ಕಿಯ ಕೂಗು ದೇಶದಲ್ಲಿ ಕೇಳಿಸುತ್ತದೆ; ಅಂಜೂರದ ಕಾಯಿಗಳು ಹಣ್ಣಾಗಿವೆ, ದ್ರಾಕ್ಷಿಯ ಬಳ್ಳಿಗಳು ಹೂಬಿಟ್ಟಿವೆ, ಅದರ ಪರಿಮಳವನ್ನು ಬೀರುತ್ತಿದೆ. ನನ್ನ ಪ್ರಿಯಳೇ, ಎನ್ನ ಸುಂದರಿಯೇ, ಎದ್ದು ನನ್ನೊಂದಿಗೆ ಬಾ! ಬಂಡೆಯ ಬಿರುಕುಗಳಲ್ಲಿಯೂ, ಸಂದುಗಳ ಮರೆಯಲ್ಲಿಯೂ ಇರುವ ನನ್ನ ಪಾರಿವಾಳವೇ! ನಿನ್ನ ರೂಪವನ್ನು ನನಗೆ ತೋರಿಸು, ನಿನ್ನ ಧ್ವನಿಯನ್ನು ಕೇಳಿಸು; ಯಾಕೆಂದರೆ ನಿನ್ನ ಸ್ವರ ಎಷ್ಟೋ ಇಂಪು, ನಿನ್ನ ರೂಪವು ಎಷ್ಟೋ ಅಂದ.” ತೋಟಗಳನ್ನು ಹಾಳುಮಾಡುವ ನರಿಗಳನ್ನು, ನರಿಮರಿಗಳನ್ನು ಹಿಡಿಯಿರಿ; ಹೂಬಿಟ್ಟಿರುವ ನಮ್ಮ ದ್ರಾಕ್ಷಿ ತೋಟಗಳು ಹಾಳು. ಎನ್ನಿನಿಯನು ನನ್ನವನೇ, ನಾನು ಅವನವಳೇ, ನೆಲದಾವರೆಗಳ ಮಧ್ಯದಲ್ಲಿ ಮಂದೆಯನ್ನು ಮೇಯಿಸುವವನಾಗಿದ್ದಾನೆ. ಕತ್ತಲು ಕಳೆಯುವ ಮೊದಲು, ಹೊತ್ತು ಮೂಡುವ ಮೊದಲು ಹೊರಟು ಬಾ ನನ್ನ ಪ್ರಿಯನೇ, ಬೇತೆರ್ ಪರ್ವತದಲ್ಲಿ ಜಿಂಕೆಯಂತೆಯೂ ಪ್ರಾಯದ ಹರಿಣದಂತೆಯೂ ಇರು.

ಯೆರೂಸಲೇಮಿನ ಮಹಿಳೆಯರೇ, ಆತನು ತಾನಾಗಿ ಎಚ್ಚರಗೊಳ್ಳುವವರೆಗೆ ಯಾರೂ ನನ್ನ ಪ್ರಿಯನನ್ನು ಎಚ್ಚರಿಸದಿರಿ, ಆತನ ವಿಶ್ರಾಂತಿಗೆ ಯಾರೂ ಭಂಗ ಮಾಡದಿರಿ ಎಂದು ವನದ ಜಿಂಕೆ ಹರಿಣಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ. ವರ್ತಕರು ಮಾರುವ ಸಕಲ ಸುಗಂಧತೈಲಗಳಿಂದ, ರಸಗಂಧ, ಸಾಂಬ್ರಾಣಿಧೂಪ ಮುಂತಾದ ದ್ರವ್ಯಗಳಿಂದ ಧೂಮಸ್ತಂಭಗಳೋಪಾದಿಯಲ್ಲಿ ಹೊರಹೊಮ್ಮುತ್ತಿರುವ, ಅರಣ್ಯಮಾರ್ಗವಾಗಿ ಬರುತ್ತಿರುವ ಈ ಮೆರವಣಿಗೆ ಯಾರದು?

ಆಹಾ, ನನ್ನ ಪ್ರಿಯಳೇ, ನೀನು ಎಷ್ಟು ಚೆಲುವೆ! ಆಹಾ, ನೀನು ಎಷ್ಟು ಸುಂದರಿ! ಮುಸುಕಿನೊಳಗಿನ ನಿನ್ನ ನೇತ್ರಗಳು ಪಾರಿವಾಳಗಳು, ನಿನ್ನ ಕೂದಲು ಗಿಲ್ಯಾದ್ ಬೆಟ್ಟದಿಂದ ಇಳಿದು ಹೋಗುವ ಆಡಿನ ಮಂದೆ. ಉಣ್ಣೆ ಕತ್ತರಿಸಿ ಸ್ನಾನಮಾಡಿಸಿದ ಕುರಿಮಂದೆಯ ಬಿಳುಪಿನಂತಿವೆ ನಿನ್ನ ಹಲ್ಲುಗಳು, ಯಾವುದೂ ಒಂಟಿಯಾಗಿರದೆ ಎಲ್ಲವೂ ಒಟ್ಟಾಗಿ ಜೋಡಿಯಾಗಿವೆ. ನಿನ್ನ ತುಟಿಗಳು ಕೆಂಪು ದಾರದಂತಿವೆ. ನಿನ್ನ ಬಾಯಿ ರಮ್ಯ. ಮುಸುಕಿನೊಳಗಿನ ನಿನ್ನ ಕೆನ್ನೆಯು ಹೋಳು ಮಾಡಿದ ದಾಳಿಂಬೆಯ ತಿರುಳಿನಂತಿದೆ. ನಿನ್ನ ಕೊರಳು ದಾವೀದನು ಕಟ್ಟಿಸಿದ ನುಣುಪಾದ ಗೋಪುರದಂತಿದೆ, ನಿನ್ನ ಕತ್ತಿನ ಹಾರ ಸಾವಿರ ಶೂರರ ಗುರಾಣಿಗಳನ್ನು ನೇತುಹಾಕಿರುವ ದಾವೀದನ ಬುರುಜಿನ ಹಾಗಿದೆ. ನಿನ್ನ ಎರಡು ಸ್ತನಗಳು ನೆಲದಾವರೆಗಳ ಮಧ್ಯದಲ್ಲಿ ಮೇಯುತ್ತಿರುವ ಅವಳಿ ಜಿಂಕೆಮರಿಗಳಂತಿವೆ. ಕತ್ತಲು ಕಳೆಯುವ ತನಕ, ಹೊತ್ತು ಮೂಡುವವರೆಗೆ ರಕ್ತಬೋಳದ ಬೆಟ್ಟಕ್ಕೂ, ಧೂಪದ ಗುಡ್ಡಕ್ಕೂ ತೆರಳಿ ಸಂಚರಿಸುವೆ ನಾನು. ನನ್ನ ಪ್ರಿಯಳೇ, ನೀನು ಸರ್ವಾಂಗಸುಂದರಿ, ನಿನ್ನಲ್ಲಿ ಯಾವ ಕೊರತೆಯೂ ಇಲ್ಲ.

ಪ್ರಿಯಳೇ, ವಧುವೇ, ನನ್ನ ಹೃದಯವನ್ನು ಅಪಹರಿಸಿರುವೆ ನಿನ್ನ ಒಂದು ಕುಡಿನೋಟದಿಂದ; ನನ್ನ ಹೃದಯವನ್ನು ವಶಮಾಡಿಕೊಂಡಿರುವೆ ನಿನ್ನ ಕಂಠಹಾರದ ಒಂದು ರತ್ನದಿಂದ. ಪ್ರಿಯಳೇ, ವಧುವೇ, ನಿನ್ನ ಪ್ರೀತಿ ಅದೆಷ್ಟೋ ರಮ್ಯ! ನಿನ್ನ ಪ್ರೇಮ ದ್ರಾಕ್ಷಾರಸಕ್ಕಿಂತ ಎಷ್ಟೋ ಉತ್ತಮ! ನಿನ್ನ ತೈಲದ ಪರಿಮಳ ಸಕಲಸುಗಂಧ ದ್ರವ್ಯಗಳಿಗಿಂತ ಎಷ್ಟೋ ಮನೋಹರ! ವಧುವೇ, ನಿನ್ನ ತುಟಿಗಳು ಜೇನುಗರೆಯುತ್ತವೆ; ಜೇನೂ ಮತ್ತು ಹಾಲೂ ನಿನ್ನ ನಾಲಿಗೆಯ ಅಡಿಯಲ್ಲಿವೆ, ನಿನ್ನ ಉಡುಪುಗಳು ಲೆಬನೋನಿನ ಸುಗಂಧ ಸೂಸುತ್ತಿದೆ. ನನ್ನ ಪ್ರಿಯಳು, ನನ್ನ ಮದಲಗಿತ್ತಿಯು, ಸುಭದ್ರವಾದ ಉದ್ಯಾನ, ಬೇಲಿಯೊಳಗೆ ಮುಚ್ಚಿ ಮುದ್ರಿಸಿದ ಚಿಲುಮೆ. ನಿನ್ನ ಉದ್ಯಾನದಲ್ಲಿವೆ ದಾಳಿಂಬೆಯಂತಹ ಉತ್ತಮ ವೃಕ್ಷಗಳು, ಜಟಮಾಂಸಿ ಮತ್ತು ಗೋರಂಟೆಗಳು, ಜಟಮಾಂಸಿ, ಕುಂಕುಮ, ಬಜೆ, ಲವಂಗಚಕ್ಕೆ, ಸಮಸ್ತ ವಿಧವಾದ ಸಾಂಬ್ರಾಣಿ ಗಿಡಗಳು, ರಕ್ತಬೋಳ, ಅಗುರು, ಸಕಲ ಮುಖ್ಯ ಸುಗಂಧದ್ರವ್ಯ ಇವುಗಳೇ ಚಿಗುರುತ್ತವೆ. ಉದ್ಯಾನಗಳಿಗೆ ಹಾದು ಹೋಗುವ ಬುಗ್ಗೆ, ಉಕ್ಕುತ್ತಿರುವ ಬಾವಿ, ಲೆಬನೋನಿನಿಂದ ಹರಿಯುವ ಕಾಲುವೆ ನಿನ್ನಲ್ಲಿವೆ. ಉತ್ತರದ ಗಾಳಿಯೇ ಏಳು, ದಕ್ಷಿಣದ ಗಾಳಿಯೇ ಬೀಸು! ನನ್ನ ತೋಟದ ಸುಗಂಧಗಳು ಹರಡುವ ಹಾಗೆ ಅದರ ಮೇಲೆ ಸುಳಿದಾಡು. ಎನ್ನಿನಿಯನು ತನ್ನ ತೋಟದೊಳಗೆ ಸೇರಿ ತನ್ನ ಉತ್ತಮ ಫಲಗಳನ್ನು ತಾನೇ ಭುಜಿಸಲಿ.

ಪ್ರಿಯಳೇ, ವಧುವೇ, ಇಗೋ ನಾ ಬಂದಿರುವೆ ನನ್ನ ತೋಟದೊಳಗೆ, ನನ್ನ ರಕ್ತಬೋಳ ಸುಗಂಧದ್ರವ್ಯಗಳನ್ನು ಕೂಡಿಸಿರುವೆ, ನನ್ನ ಜೇನುಗೂಡನ್ನೂ ಜೇನುತುಪ್ಪವನ್ನೂ ತಿಂದಿರುವೆ, ನನ್ನ ದ್ರಾಕ್ಷಾರಸವನ್ನೂ ಹಾಲನ್ನೂ ಕುಡಿದಿರುವೆ. ಮಿತ್ರರೇ, ತಿನ್ನಿರಿ. ಪ್ರಿಯರೇ ಕುಡಿಯಿರಿ, ಬೇಕಾದಷ್ಟು ಪಾನಮಾಡಿರಿ. ನಾನು ನಿದ್ರೆಗೊಂಡಿದ್ದರೂ ನನ್ನ ಹೃದಯವು ಎಚ್ಚರಗೊಂಡಿತ್ತು. ಇಗೋ, ಎನ್ನಿನಿಯನು ಕದ ತಟ್ಟಿ, “ಪ್ರಿಯಳೇ, ಕಾಂತಳೇ, ಪಾರಿವಾಳವೇ, ನಿರ್ಮಲೆಯೇ, ಬಾಗಿಲು ತೆಗೆ! ನನ್ನ ತಲೆಯ ಮೇಲೆಲ್ಲಾ ಇಬ್ಬನಿಯು ಬಿದ್ದಿದೆ, ನನ್ನ ಕೂದಲು ರಾತ್ರಿ ಬೀಳುವ ಹನಿಗಳಿಂದ ತುಂಬಿದೆ” ಅಂದನು. “ನನ್ನ ಒಳಂಗಿಯನ್ನು ತೆಗೆದೆನಲ್ಲಾ, ಅದನ್ನು ಹೇಗೆ ಹಾಕಿಕೊಂಡೇನು? ಪಾದಗಳನ್ನು ತೊಳೆದುಕೊಂಡೆನಲ್ಲಾ, ಅವುಗಳನ್ನು ಹೇಗೆ ಕೊಳೆಮಾಡಿಕೊಳ್ಳಲಿ?” ಎಂದು ನಾನು ಅಂದುಕೊಂಡಾಗ, ನನ್ನ ಕಾಂತನು ಬಾಗಿಲ ರಂಧ್ರದಲ್ಲಿ ಕೈ ನೀಡಿದನು, ಅವನಿಗಾಗಿ ನನ್ನ ಮನ ಮಿಡಿಯಿತು.

ಯೆರೂಸಲೇಮಿನ ಮಹಿಳೆಯರೇ, ನೀವು ನನ್ನ ಕಾಂತನನ್ನು ಕಂಡರೆ ನಾನು ಅನುರಾಗದಿಂದ ಅಸ್ವಸ್ಥಳಾಗಿದ್ದೇನೆ ಎಂಬುವುದನ್ನು ಅವನಿಗೆ ತಿಳಿಸಬೇಕೆಂದು ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ. ಸ್ತ್ರೀರತ್ನವೇ, ಇತರರ ಕಾಂತರಿಗಿಂತ ನಿನ್ನ ಕಾಂತನ ವಿಶೇಷತೆಯೇನು? ನಮ್ಮಿಂದ ನೀನು ಹೀಗೆ ಪ್ರಮಾಣಮಾಡಿಸುವುದಕ್ಕೆ ಇತರರ ಕಾಂತರಿಗಿಂತ ನಿನ್ನ ಕಾಂತನ ಅತಿಶಯವೇನು?

ನನ್ನ ನಲ್ಲನು ತೇಜೋಮಯವಾದ ಕೆಂಪು ಬಣ್ಣವುಳ್ಳವನು; ಅವನು ಹತ್ತು ಸಾವಿರ ಜನರಲ್ಲಿ ಧ್ವಜಪ್ರಾಯನು. ಅವನ ತಲೆಯು ಚೊಕ್ಕ ಬಂಗಾರದಂತಿದೆ, ಗುಂಗುರು ಗುಂಗುರಾಗಿರುವ ಅವನ ಕೂದಲು ಕಾಗೆಯಂತೆ ಕಪ್ಪಾಗಿದೆ. ಅವನ ಕಣ್ಣುಗಳೋ ತುಂಬಿತುಳುಕುವ ತೊರೆಗಳ ಹತ್ತಿರ ತಂಗುವ, ಕ್ಷೀರದಲ್ಲಿ ಸ್ನಾನಮಾಡುವ ಪಾರಿವಾಳಗಳಂತಿವೆ. ಅವನ ಕೆನ್ನೆಗಳು ಕರ್ಣಕುಂಡಲ ಗಿಡಗಳ ಪಾತಿಗಳಂತೆಯೂ ಸುಗಂಧಸಸ್ಯಗಳು ಬೆಳೆಯುವ ದಿಬ್ಬಗಳಂತೆಯೂ ಇವೆ; ಅಚ್ಚರಕ್ತಬೋಳವನ್ನು ಸುರಿಸುವ ಅವನ ತುಟಿಗಳು ಕೆಂದಾವರೆಗಳೇ. ಅವನ ಕೈಗಳು ಪೀತರತ್ನ ಖಚಿತವಾದ ಬಂಗಾರದ ಸಲಾಕಿಗಳೋಪಾದಿಯಲ್ಲಿವೆ, ಅವನ ಮೈ ಇಂದ್ರನೀಲಮಯವಾದ ದಂತಫಲಕದ ಹಾಗಿದೆ. ಅವನ ಕಾಲುಗಳು ಅಪರಂಜಿಯ ಸುಣ್ಣಪಾದಗಳ ಮೇಲಿಟ್ಟ ಚಂದ್ರಕಾಂತ ಸ್ತಂಭಗಳು; ದೇವದಾರುಗಳಷ್ಟು ರಮಣೀಯವಾದ ಅವನ ಗಾಂಭೀರ್ಯವು ಲೆಬನೋನಿಗೆ ಸಮಾನ. ಅವನ ನುಡಿ ಮಧುರ, ಅವನು ಸರ್ವಾಂಗ ಸುಂದರ. ಯೆರೂಸಲೇಮಿನ ಸ್ತ್ರೀಯರುಗಳಿರಾ, ಇವನೇ ಎನ್ನಿನಿಯನು; ಇವನೇ ನನ್ನ ಪ್ರಿಯನು.

ಎನ್ನಿನಿಯನು ನನ್ನವನೇ, ನಾನು ಅವನವಳೇ, ಅವನು ನೆಲದಾವರೆಗಳ ಮಧ್ಯದಲ್ಲಿ ಮಂದೆಯನ್ನು ಮೇಯಿಸುವವನಾಗಿದ್ದಾನೆ.

ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ತಿರುಗಿಸು, ಅವು ನನ್ನನ್ನು ಹೆದರಿಸುತ್ತವೆ. ನಿನ್ನ ಕೂದಲು ಗಿಲ್ಯಾದ್ ಬೆಟ್ಟದ ಪಾರ್ಶ್ವದಲ್ಲಿ ಮಲಗಿರುವ ಆಡುಮಂದೆಯಂತಿದೆ.

ರಾಜಪುತ್ರಿಯೇ, ಪಾದರಕ್ಷೆಗಳಲ್ಲಿನ ನಿನ್ನ ಪಾದಗಳು ಎಷ್ಟೋ ಅಂದ! ದುಂಡಾದ ನಿನ್ನ ತೊಡೆಗಳು ಕುಶಲ ಶಿಲ್ಪಿಯು ಮಾಡಿದ ಆಭರಣಗಳಂತಿವೆ. ನಿನ್ನ ಹೊಕ್ಕಳು ಮಿಶ್ರಪಾನ ತುಂಬಿದ ಗುಂಡು ಬಟ್ಟಲು, ನಿನ್ನ ಹೊಟ್ಟೆ ನೆಲದಾವರೆಗಳಿಂದ ಅಲಂಕೃತವಾದ ಗೋದಿಯ ರಾಶಿ. ನಿನ್ನ ಸ್ತನಗಳೆರಡೂ ಜಿಂಕೆಯ ಅವಳಿಮರಿಗಳಂತಿವೆ. ನಿನ್ನ ಕೊರಳು ದಂತದ ಗೋಪುರ, ನಿನ್ನ ನೇತ್ರಗಳು ಹೆಷ್ಬೋನಿನಲ್ಲಿನ ಬತ್ ರಬ್ಬೀಮ್ ಬಾಗಿಲ ಬಳಿಯ ಕೊಳಗಳಂತಿವೆ. ನಿನ್ನ ಮೂಗು ದಮಸ್ಕದ ಕಡೆಗಿರುವ ಲೆಬನೋನಿನ ಬುರುಜಿನಂತಿದೆ. ಕರ್ಮೆಲ್ ಬೆಟ್ಟದಂತೆ ಗಂಭೀರವಾಗಿದೆ ನಿನ್ನ ಶಿರಸ್ಸು, ನಿನ್ನ ತಲೆಗೂದಲಿಗಿದೆ ಥಳಥಳಿಸುವ ನುಣುಪುಹೊಳಪಿನ ಬಣ್ಣ, ಅದರಲ್ಲಿದೆ ಅರಸನನ್ನೇ ಸೆರೆಹಿಡಿಯುವಂಥ ಆಕರ್ಷಣೆ. ಪ್ರೇಯಸಿಯೇ, ಸಕಲ ಸೌಂದರ್ಯ ಸೊಬಗಿನಿಂದ ನೀನೆಷ್ಟು ಸುಂದರ, ನೀನೆಷ್ಟು ಮನೋಹರ! ನೀಳವಾದ ನಿನ್ನ ಆಕಾರವು ಖರ್ಜೂರದ ಮರ, ನಿನ್ನ ಸ್ತನಗಳೇ ಅದರ ಗೊಂಚಲುಗಳು. ನಾನು ಆ ಮರವನ್ನು ಹತ್ತಿ, ರೆಂಬೆಗಳನ್ನು ಹಿಡಿಯುವೆನು ಅಂದುಕೊಂಡೆನು. ನಿನ್ನ ಸ್ತನಗಳು ನನಗೆ ದ್ರಾಕ್ಷಿಯ ಗೊಂಚಲುಗಳಂತಿರಲಿ, ಸೇಬುಹಣ್ಣಿನ ಪರಿಮಳದಂತೆ ನಿನ್ನ ಉಸಿರು. ನಿನ್ನ ಚುಂಬನ ಉತ್ತಮ ದ್ರಾಕ್ಷಾರಸದ ಹಾಗಿರಲಿ, ನಿದ್ರಿಸುವವರ ತುಟಿಗಳಲ್ಲಿ ನಯವಾಗಿ ಹರಿಯುವ ಈ ರಸವು ನನ್ನ ನಲ್ಲೆಯಾದ ನಿನ್ನಲ್ಲಿಯೂ ಮೆಲ್ಲನೆ ಇಳಿದು ಬರುವುದು.

ನಾನು ನನ್ನ ನಲ್ಲನ ನಲ್ಲೆ, ಅವನ ಆಶೆಯು ನನ್ನ ಮೇಲೆ. ಎನ್ನಿನಿಯನೇ, ವನಕ್ಕೆ ಹೋಗೋಣ ಬಾ, ಹಳ್ಳಿಗಳ ಮಧ್ಯದಲ್ಲಿ ವಾಸಮಾಡುವ! ತೋಟಗಳಿಗೆ ಹೊತ್ತಾರೆ ಹೊರಟು ದ್ರಾಕ್ಷಿಯು ಚಿಗುರಿದೆಯೋ, ಅದರ ಹೂವು ಅರಳಿದೆಯೋ, ದಾಳಿಂಬೆ ಹೂ ಬಿಟ್ಟಿದೆಯೋ ನೋಡೋಣ ಬಾ, ಅಲ್ಲಿ ನನ್ನ ಪ್ರೀತಿಯನ್ನು ನಿನಗೆ ಸಲ್ಲಿಸುವೆನು. ಕಾಮಜನಕ ವೃಕ್ಷಗಳು ಪರಿಮಳ ಬೀರುತ್ತಿವೆ, ನನ್ನ ಕಾಂತನೇ, ನಾನು ನಿನಗಾಗಿ ಇಟ್ಟುಕೊಂಡ ಒಳ್ಳೊಳ್ಳೆಯ, ಬಗೆಬಗೆಯ ಹಳೆಯ ಮತ್ತು ಹೊಸ ಹಣ್ಣುಗಳು ನಮ್ಮ ಬಾಗಿಲುಗಳ ಬಳಿ ಸಿದ್ಧವಾಗಿವೆ.

ಆಗ ನಿನ್ನ ಎಡಗೈ ನನಗೆ ತಲೆದಿಂಬಾಗಿ ಬಲಗೈ ನನ್ನನ್ನು ತಬ್ಬುತ್ತಿತ್ತು.

ಯೆರೂಸಲೇಮಿನ ಮಹಿಳೆಯರೇ, ಆತನು ತಾನಾಗಿ ಎಚ್ಚರಗೊಳ್ಳುವವರೆಗೆ ಯಾರೂ ನನ್ನ ಪ್ರಿಯನನ್ನು ಎಚ್ಚರಿಸದಿರಿ, ಆತನ ವಿಶ್ರಾಂತಿಗೆ ಯಾರೂ ಭಂಗ ಮಾಡದಿರಿ ಎಂದು ವನದ ಜಿಂಕೆ ಹರಿಣಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ. ನಲ್ಲನನ್ನು ಒರಗಿಕೊಂಡು ಅಡವಿಯಿಂದ ಬರುವ ಇವಳು ಯಾರು? ಎಬ್ಬಿಸಿದೆನಲ್ಲಾ ನಿನ್ನನ್ನು ಆ ಸೇಬಿನ ಮರದಡಿಯಲ್ಲಿ ಇಗೋ, ಅಲ್ಲಿ ನಿನ್ನ ತಾಯಿ ನಿನ್ನನ್ನು ಗರ್ಭಧರಿಸಿದ್ದು, ಅಲ್ಲೇ ನಿನ್ನನ್ನು ಪ್ರಸವವೇದನೆಯಿಂದ ಹೆತ್ತಳು.

ನಿನ್ನ ಕೈಯಲ್ಲಿನ ಮುದ್ರೆಯ ಹಾಗೆ ನಿನ್ನ ಹೃದಯದ ಮೇಲೆ ನನ್ನನ್ನು ಧರಿಸಿಕೋ. ಪ್ರೀತಿ ಮೃತ್ಯುವಿನಷ್ಟು ಶಕ್ತಿಶಾಲಿ, ಪ್ರೀತಿದ್ರೋಹದಿಂದ ಹುಟ್ಟುವ ಮತ್ಸರವು ಪಾತಾಳದಷ್ಟು ಕ್ರೂರ, ಅದರ ಜ್ವಾಲೆಯು ಬೆಂಕಿಯ ಉರಿ, ಧಗಧಗಿಸುವ ಕೋಪಾಗ್ನಿ. ನಂದಿಸಲಾರವು ಪ್ರೀತಿಯನ್ನು ಜಲರಾಶಿಗಳು, ಮುಣುಗಿಸಲಾರವು ಅದನ್ನು ಪ್ರವಾಹಗಳು. ಪ್ರೀತಿಯನ್ನು ಗಳಿಸಲು ಮನೆಮಾರುಗಳನ್ನು ಮಾರಿದರೂ ಸಿಗುವುದು ಅವನಿಗೆ ತಿರಸ್ಕಾರ.

ಮನುಷ್ಯನ ಗರ್ವದೃಷ್ಟಿಯು ತಗ್ಗಿಹೋಗುವುದು, ಮನುಷ್ಯರ ಅಹಂಕಾರವು ತಗ್ಗುವುದು. ಯೆಹೋವನೊಬ್ಬನೇ ಆ ದಿನದಲ್ಲಿ ಉನ್ನತೋನ್ನತನಾಗಿರುವನು. ಸೇನಾಧೀಶ್ವರನಾದ ಯೆಹೋವನ ನ್ಯಾಯನಿರ್ಣಯದ ದಿನವು ಗರ್ವದಿಂದ ಹೆಚ್ಚಿಕೊಂಡಿರುವ ಪ್ರತಿಯೊಬ್ಬನ ಮೇಲೆ ಬರುವುದು. ಆಗ ಅವನು ತಗ್ಗಿಸಲ್ಪಡುವನು.

ಘನವಂತನಾದರೋ ಘನಕಾರ್ಯಗಳನ್ನು ಕಲ್ಪಿಸುವನು. ಘನವಾದವುಗಳಲ್ಲಿಯೇ ನಿರತನಾಗಿರುವನು.

ನಾನು ಹೊಡೆಯುವವರಿಗೆ ಬೆನ್ನುಕೊಟ್ಟು, ಕೂದಲು ಕೀಳುವವರಿಗೆ ಗಡ್ಡವನ್ನು ಒಡ್ಡಿದೆನು. ಉಗುಳಿಸಿಕೊಳ್ಳುವ ಅವಮಾನಕ್ಕೆ ನನ್ನ ಮುಖವನ್ನು ಮರೆಮಾಡಿಕೊಳ್ಳಲಿಲ್ಲ.

ಅವನು ಧಿಕ್ಕರಿಸಲ್ಪಟ್ಟವನು, ಮನುಷ್ಯರು ಸೇರಿಸಿಕೊಳ್ಳದವನು, ಸಂಕಟಪಡುವವನು, ವ್ಯಾಧಿಪೀಡಿತನು, ಜನರು ಮುಖವನ್ನು ಓರೆಮಾಡಿಕೊಳ್ಳುವ ಧಿಕ್ಕಾರಕ್ಕೆ ಒಳಗಾದವನೂ ಆಗಿದ್ದನು. ನಿಜವಾಗಿಯೂ ನಮ್ಮ ವ್ಯಾಧಿಗಳನ್ನು ಸಂಕಷ್ಟವನ್ನು ಅನುಭವಿಸಿದನು; ಅವನು ಹೊತ್ತ ಹೊರೆಯು ನಮ್ಮ ಸಂಕಟವೇ ಹೌದು, ನಾವಾದರೋ ಅವನು ದೇವರಿಂದ ಬಾಧಿತನು, ಪೆಟ್ಟು ತಿಂದವನು, ಕುಗ್ಗಿಸಲ್ಪಟ್ಟವನು ಎಂದು ಭಾವಿಸಿಕೊಂಡೆವು. ನಮ್ಮ ದ್ರೋಹಗಳ ದೆಸೆಯಿಂದ ಅವನಿಗೆ ಗಾಯವಾಯಿತು, ನಮ್ಮ ಅಪರಾಧಗಳ ನಿಮಿತ್ತ ಅವನು ಜಜ್ಜಲ್ಪಟ್ಟನು; ನಮಗೆ ಸುಕ್ಷೇಮವನ್ನು ಉಂಟುಮಾಡುವ ದಂಡನೆಯನ್ನು ಅವನು ಅನುಭವಿಸಿದನು; ಅವನ ಬಾಸುಂಡೆಗಳಿಂದ ನಮಗೆ ಗುಣವಾಯಿತು. ನಾವೆಲ್ಲರೂ ಕುರಿಗಳಂತೆ ದಾರಿತಪ್ಪಿ ಹೋಗಿದ್ದೆವು, ಪ್ರತಿಯೊಬ್ಬನೂ ತನ್ನ ತನ್ನ ದಾರಿಯನ್ನು ಹಿಡಿಯುತ್ತಿದ್ದನು; ನಮ್ಮೆಲ್ಲರ ದೋಷಫಲವನ್ನೂ ಯೆಹೋವನು ಅವನ ಮೇಲೆ ಹಾಕಿದನು. ಅವನು ಬಾಧೆಗೆ ಒಳಗಾಗಿ ತನ್ನನ್ನು ತಗ್ಗಿಸಿಕೊಂಡನು, ಬಾಯಿ ತೆರೆಯಲಿಲ್ಲ; ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆಯೂ, ಉಣ್ಣೆ ಕತ್ತರಿಸುವವರ ಮುಂದೆ ಮೌನವಾಗಿರುವ ಕುರಿಯ ಹಾಗೂ ಇದ್ದನು, ಬಾಯಿ ತೆರೆಯಲೇ ಇಲ್ಲ.

ಹಸಿದವರಿಗೆ ಅನ್ನವನ್ನು ಹಂಚುವುದು, ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬೆತ್ತಲೆಯವರನ್ನು ಕಂಡಾಗೆಲ್ಲಾ ಅವರಿಗೆ ಹೊದಿಸುವುದು, ನಿನ್ನಂತೆ ಮನುಷ್ಯನಾಗಿರುವ ಯಾರಿಗೇ ಆಗಲಿ ಮುಖತಪ್ಪಿಸಿಕೊಳ್ಳದಿರುವುದು, ಇವುಗಳೇ ನನಗೆ ಇಷ್ಟವಾದ ಉಪವಾಸ ವ್ರತವಲ್ಲವೇ.

ನಿಮಗೆ ಪ್ರಿಯವಾದದ್ದನ್ನು ಹಸಿದವರಿಗೆ ಒದಗಿಸಿ, ಕುಗ್ಗಿದವರ ಆಶೆಯನ್ನು ನೆರವೇರಿಸಿದರೆ, ಆಗ ನಿಮಗೆ ಕತ್ತಲಲ್ಲಿ ಬೆಳಕು ಉದಯಿಸುವುದು, ನಿಮ್ಮ ಅಂಧಕಾರವು ಪರಿಹಾರವಾಗಿ ಮಧ್ಯಾಹ್ನವಾಗುವುದು.

ಯೆಹೋವನು ನಮಗೆ ಅನುಗ್ರಹಿಸಿದ್ದನ್ನೆಲ್ಲಾ ಸ್ಮರಿಸಿ ಆತನ ಕೃಪಾಕಾರ್ಯಗಳನ್ನು ಮತ್ತು ಸ್ತುತ್ಯಕೃತ್ಯಗಳನ್ನು, ಆತನು ಕನಿಕರದಿಂದಲೂ, ಕೃಪಾತಿಶಯದಿಂದಲೂ ಇಸ್ರಾಯೇಲ್ ವಂಶದವರಿಗೆ ದಯಪಾಲಿಸಿರುವ ಮಹೋಪಕಾರವನ್ನೂ ಪ್ರಸಿದ್ಧಿಪಡಿಸುವೆನು.

‘ನಾನು ನಿನ್ನನ್ನು ಪ್ರೀತಿಸಿರುವುದು ಶಾಶ್ವತ ಪ್ರೇಮದಿಂದಲೇ; ಆದಕಾರಣ ನಿನ್ನನ್ನು ಮಮತೆಯಿಂದ ಸೆಳೆದುಕೊಂಡಿದ್ದೇನೆ,

ನಾನು ಉಳಿದಿರುವುದು ಒಡಂಬಡಿಕೆಗೆ ಬದ್ಧವಾಗಿರುವ ಆತನ ನಂಬಿಗಸ್ತಿಕೆಯಿಂದಲೇ; ಯೆಹೋವನ ಕೃಪಾವರಗಳ ಕಾರ್ಯಗಳು ನಿಂತುಹೋಗವು. ದಿನದಿನವು ಹೊಸಹೊಸದಾಗಿ ಒದಗುತ್ತವೆ; ನಿನ್ನ ನಂಬಿಗಸ್ತಿಕೆಯು ದೊಡ್ಡದು!

ನನ್ನ ದೇವರಾದ ಯೆಹೋವನಿಗೆ ಹೀಗೆ ಪಾಪವನ್ನು ಅರಿಕೆ ಮಾಡಿ ಬಿನ್ನವಿಸಿದೆನು, “ಓ ಕರ್ತನೇ, ಮಹೋನ್ನತನೂ, ಭಯಂಕರನೂ ಆದ ದೇವರೇ, ನಿನ್ನನ್ನು ಪ್ರೀತಿಸಿ ನಿನ್ನ ಆಜ್ಞೆಗಳನ್ನು ಅನುಸರಿಸುವವರಿಗೆ ಮಾಡಿದ ಕೃಪಾ ವಾಗ್ದಾನಗಳನ್ನು ನೆರವೇರಿಸುವವನೇ,

ನಾನು ನಿನ್ನನ್ನು ಶಾಶ್ವತವಾಗಿ ವರಿಸುವೆನು; ಹೌದು, ನೀತಿ, ನ್ಯಾಯ, ಪ್ರೀತಿ ಮತ್ತು ದಯೆಗಳಿಂದ ನಿನ್ನನ್ನು ವರಿಸುವೆನು. ನಾನು ನಿನ್ನನ್ನು ನಂಬಿಕೆಯಿಂದ ವರಿಸಲು ನೀನು ಯೆಹೋವನಾದ ನನ್ನನ್ನು ತಿಳಿದುಕೊಳ್ಳುವೆ.”

ಮನುಷ್ಯನೇ, ಒಳ್ಳೆಯದು ಇಂಥದ್ದೇ ಎಂದು ಯೆಹೋವನು ನಿನಗೆ ತೋರಿಸಿದ್ದಾನಲ್ಲವೇ. ನ್ಯಾಯವನ್ನು ಆಚರಿಸುವುದು, ಕರುಣೆಯಲ್ಲಿ ಆಸಕ್ತನಾಗಿರುವುದು, ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವುದು ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?

ಯೆಹೋವನ ನಿಯಮವನ್ನು ಕೈಕೊಂಡು ನಡೆಯುವ ಲೋಕದ ದೀನರೇ, ನೀವೆಲ್ಲರೂ ಯೆಹೋವನ ನೀತಿಯನ್ನು ಅನುಸರಿಸಿರಿ, ಧರ್ಮವನ್ನು ಅಭ್ಯಾಸಿಸಿರಿ, ನಮ್ರತೆಯನ್ನು ಹೊಂದಿಕೊಳ್ಳಿರಿ; ಬಹುಶಃ ಯೆಹೋವನ ಸಿಟ್ಟಿನ ದಿನದಲ್ಲಿ ನೀವು ಮರೆಯಾಗುವಿರಿ.

ನಿನ್ನ ದೇವರಾದ ಯೆಹೋವನು ನಿನ್ನ ಮಧ್ಯದಲ್ಲಿ ಶೂರನಾಗಿದ್ದಾನೆ, ನಿನ್ನನ್ನು ರಕ್ಷಿಸುವನು; ನಿನ್ನಲ್ಲಿ ಉಲ್ಲಾಸಿಸೇ ಉಲ್ಲಾಸಿಸುವನು; ತನ್ನ ಪ್ರೀತಿಯಲ್ಲಿ ನಿನ್ನ ಜೀವನವನ್ನು ನೂತನಗೊಳಿಸುವನು; ನಿನ್ನಲ್ಲಿ ಆನಂದಿಸಿ ಹರ್ಷಧ್ವನಿಗೈಯುವನು.

“ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, ‘ನಿಷ್ಠೆಯಿಂದ ನ್ಯಾಯತೀರಿಸಿರಿ, ಒಬ್ಬರಿಗೊಬ್ಬರು ಪ್ರೀತಿ, ಕರುಣೆಗಳನ್ನು ತೋರಿಸಿರಿ; ವಿಧವೆ, ಅನಾಥ, ವಿದೇಶಿ, ದರಿದ್ರರಿಗೂ ಅನ್ಯಾಯಮಾಡಬೇಡಿರಿ; ನಿಮ್ಮಲ್ಲಿ ಯಾವನೂ ತನ್ನ ಸಹೋದರನಿಗೆ ಕೇಡನ್ನು ಬಗೆಯದಿರಲಿ.’

“ಆತ್ಮದಲ್ಲಿ ಬಡವರಾಗಿರುವವರು ಧನ್ಯರು; ಪರಲೋಕ ರಾಜ್ಯವು ಅವರದು. ದುಃಖಪಡುವವರು ಧನ್ಯರು; ಅವರು ದೇವರಿಂದ ಸಮಾಧಾನ ಹೊಂದುವರು. ವಿನಯವುಳ್ಳವರು ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು. ನೀತಿಗೆ ಹಸಿದು ಬಾಯಾರಿದವರು ಧನ್ಯರು; ಅವರು ತೃಪ್ತರಾಗುವರು. ಕರುಣೆಯುಳ್ಳವರು ಧನ್ಯರು; ಅವರು ಕರುಣೆ ಹೊಂದುವರು. ಶುದ್ಧ ಹೃದಯದವರು ಧನ್ಯರು; ಅವರು ದೇವರನ್ನು ನೋಡುವರು. ಶಾಂತಿಗಾಗಿ ಶ್ರಮಿಸುವವರು ಧನ್ಯರು; ಅವರು ದೇವರ ಮಕ್ಕಳು ಎಂದೆನಿಸಿಕೊಳ್ಳುವರು. ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಡುವವರು ಧನ್ಯರು; ಪರಲೋಕ ರಾಜ್ಯವು ಅವರದು. “ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು. ಸಂತೋಷಪಡಿರಿ, ಉಲ್ಲಾಸಪಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವುದು; ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನೂ ಅವರು ಹೀಗೆಯೇ ಹಿಂಸೆಪಡಿಸಿದರಲ್ಲಾ.

ಆದರೆ ನಾನು ನಿಮಗೆ ಹೇಳುವುದೇನಂದರೆ, ತನ್ನ ಸಹೋದರನ ಮೇಲೆ ಸಿಟ್ಟುಗೊಳ್ಳುವ ಪ್ರತಿಯೊಬ್ಬ ಮನುಷ್ಯನು ನ್ಯಾಯತೀರ್ಪಿಗೆ ಗುರಿಯಾಗುವನು; ತನ್ನ ಸಹೋದರನನ್ನು ನೋಡಿ, ‘ಎಲೈ ಮೂರ್ಖನೇ’ ಎಂದು ಅನ್ನುವವನು ನ್ಯಾಯ ಸಭೆಯ ವಿಚಾರಣೆಗೆ ಒಳಗಾಗುವನು; ‘ಎಲೈ ನೀಚನೇ’ ಎಂದು ಅನ್ನುವವನು,ಅಗ್ನಿ ನರಕಕ್ಕೆ ಗುರಿಯಾಗುವನು. ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತಿರಕ್ಕೆ ತಂದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವಿದೆ ಎಂಬುದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟು ಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು; ಆ ಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು.

“‘ಕಣ್ಣಿಗೆ ಪ್ರತಿಯಾಗಿ ಕಣ್ಣನ್ನು ಹಲ್ಲಿಗೆ ಪ್ರತಿಯಾಗಿ ಹಲ್ಲನ್ನು ತೆಗೆಯಿಸು’ ಎಂದು ಹೇಳಿರುವುದು ಕೇಳಿದ್ದೀರಷ್ಟೆ. ಆದರೆ ನಾನು ನಿಮಗೆ ಹೇಳುವುದೇನಂದರೆ, ಕೆಡುಕನನ್ನು ವಿರೋಧಿಸಬೇಡ. ಒಬ್ಬನು ನಿನ್ನ ಬಲಗೆನ್ನೆಯ ಮೇಲೆ ಹೊಡೆದರೆ ಅವನಿಗೆ ನಿನ್ನ ಮತ್ತೊಂದು ಕೆನ್ನೆಯನ್ನು ಸಹ ತಿರುಗಿಸು. ನಿನ್ನ ಸಂಗಡ ವ್ಯಾಜ್ಯವಾಡಿ ನಿನ್ನ ಒಳಂಗಿಯನ್ನು ತೆಗೆದುಕೊಳ್ಳಬೇಕೆಂದಿರುವವನಿಗೆ ಮೇಲಂಗಿಯನ್ನೂ ಬಿಟ್ಟುಕೊಡು. ಒಬ್ಬನು ಒಂದು ಮೈಲು ದೂರ ಬಾ ಎಂದು ನಿನ್ನನ್ನು ಒತ್ತಾಯಿಸಿದರೆ ಅವನ ಸಂಗಡ ಎರಡು ಮೈಲು ದೂರ ಹೋಗು. ನಿನ್ನನ್ನು ಕೇಳುವವನಿಗೆ ಕೊಡು; ನಿನ್ನಲ್ಲಿ ಬೇಡಲು ಬಂದವನಿಗೆ ಮುಖ ತಿರುಗಿಸಿಕೊಳ್ಳಬೇಡ.

“‘ನಿನ್ನ ನೆರೆಯವನನ್ನು ಪ್ರೀತಿಸಿ ನಿನ್ನ ವೈರಿಯನ್ನು ದ್ವೇಷಿಸಬೇಕೆಂದು’ ಹೇಳಿಯದೆ ಎಂಬುದಾಗಿ ಕೇಳಿದ್ದೀರಷ್ಟೆ. ಆದರೆ ನಾನು ನಿಮಗೆ ಹೇಳುವುದೇನಂದರೆ, ನಿಮ್ಮ ವೈರಿಗಳನ್ನು ಪ್ರೀತಿಸಿರಿ;ನಿಮ್ಮನ್ನು ಹಿಂಸೆಪಡಿಸುವವರಿಗೊಸ್ಕರ ದೇವರನ್ನು ಪ್ರಾರ್ಥಿಸಿರಿ. ಹೀಗೆ ಮಾಡಿದರೆ, ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾಗುವಿರಿ. ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಉದಯಿಸುವಂತೆ ಮಾಡುತ್ತಾನೆ. ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆ ಸುರಿಸುತ್ತಾನೆ. ನಿಮಗೆ ಪ್ರೀತಿ ತೋರಿಸುವವರನ್ನೇ ನೀವು ಪ್ರೀತಿಸಿದರೆ ಫಲವೇನು? ಸುಂಕದವರು ಹಾಗೆ ಮಾಡುವುದಿಲ್ಲವೇ. ನಿಮ್ಮ ಸಹೋದರರಿಗೆ ಮಾತ್ರ ನೀವು ಮರ್ಯಾದೆ ಕೊಟ್ಟರೆ ಏನು ಹೆಚ್ಚು ಮಾಡಿದ ಹಾಗಾಯಿತು? ಅನ್ಯಜನರು ಸಹ ಹಾಗೆ ಮಾಡುತ್ತಾರಲ್ಲವೇ. ಆದುದರಿಂದ ಪರಲೋಕದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣನಾಗಿರುವ ಹಾಗೆಯೇ ನೀವೂ ಪರಿಪೂರ್ಣರಾಗಿರಿ.

“ಜನರು ನೋಡಲಿ ಎಂದು ನಿಮ್ಮ ‘ಧರ್ಮಕಾರ್ಯಗಳನ್ನು’ ಅವರ ಮುಂದೆ ಮಾಡಬಾರದು; ಹಾಗೆ ಮಾಡಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯ ಹತ್ತಿರ ನಿಮಗೆಫಲದೊರೆಯುವುದಿಲ್ಲ. “ಆದುದರಿಂದ ನೀನು ದಾನಕೊಡುವಾಗ ಅದನ್ನು ಪ್ರಚಾರಪಡಿಸಬೇಡ; ಜನರಿಂದ ಹೊಗಳಿಸಿಕೊಳ್ಳಬೇಕೆಂದು ಕಪಟಿಗಳು ಸಭಾಮಂದಿರಗಳಲ್ಲಿಯೂ ಬೀದಿಗಳಲ್ಲಿಯೂ ಹಾಗೆ ಮಾಡುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಆದರೆ ನೀನು ದಾನ ಕೊಡುವಾಗ ನಿನ್ನ ಬಲಗೈ ದಾನಕೊಟ್ಟದ್ದು ಎಡಗೈಗೂ ತಿಳಿಯದಿರಲಿ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು.

ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷಮಿಸುವನು. ಆದರೆ ನೀವು ಜನರ ತಪ್ಪುಗಳನ್ನು ಕ್ಷಮಿಸದೇ ಹೋದರೆ ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ.

“ಯಾರೊಬ್ಬನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನುದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು; ಇಲ್ಲವೆ ಒಬ್ಬನಿಗೆ ಶ್ರದ್ಧೆಯಿಂದ ಸೇವೆಮಾಡಿ ಮತ್ತೊಬ್ಬನನ್ನು ತಾತ್ಸಾರ ಮಾಡಬಹುದು. ನೀವು ದೇವರನ್ನೂ ಐಶ್ವರ್ಯವನ್ನೂ ಒಟ್ಟಾಗಿ ಸೇವಿಸಲಾರಿರಿ.

“ತೀರ್ಪುಮಾಡಬೇಡಿರಿ; ಹಾಗೆ ನಿಮಗೂ ತೀರ್ಪಾಗುವುದಿಲ್ಲ. ನೀವು ಮಾಡುವ ತೀರ್ಪಿಗೆ ಸರಿಯಾಗಿ ನಿಮಗೂ ತೀರ್ಪಾಗುವುದು; ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು. “ನೀನು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ಧೂಳನ್ನು ಏಕೆ ಯೋಚಿಸುವೇ? ನೀನು ನಿನ್ನ ಸಹೋದರನಿಗೆ, ‘ನಿನ್ನ ಕಣ್ಣಿನೊಳಗಿನಿಂದ ಧೂಳನ್ನು ತೆಗೆಯುತ್ತೇನೆ ಬಾ’ ಎಂದು ಏಕೆ ಹೇಳುವೇ? ನಿನ್ನ ಕಣ್ಣಿನಲ್ಲೇ ತೊಲೆ ಇದೆಯಲ್ಲಾ. ಕಪಟಿಯೇ! ಮೊದಲು ನಿನ್ನ ಕಣ್ಣಿನೊಳಗಿನಿಂದ ತೊಲೆಯನ್ನು ತೆಗೆದುಹಾಕಿದರೆ; ನಿನ್ನ ಸಹೋದರನ ಕಣ್ಣಿನೊಳಗಿನಿಂದ ಧೂಳನ್ನು ತೆಗೆಯವುದಕ್ಕೆ ನಿನಗೆ ಸ್ಪಷ್ಟವಾಗಿ ಕಾಣಿಸುವುದು.

ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ. ಧರ್ಮಶಾಸ್ತ್ರದ ಮತ್ತು ಪ್ರವಾದಿಗಳ ತಾತ್ಪರ್ಯ ಇದೇ ಆಗಿದೆ.

“ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ ನಾನು ನಿಮಗೆ ವಿಶ್ರಾಂತಿ ಕೊಡುವೆನು. ನಾನು ಸಾತ್ವಿಕನೂ ದೀನಹೃದಯನೂ ಆಗಿರುವುದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತುಕೊಳ್ಳಿರಿ, ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವುದು. ಏಕೆಂದರೆ ನನ್ನ ನೊಗವು ಮೃದುವಾದದ್ದು, ನನ್ನ ಹೊರೆಯು ಹಗುರವಾದದ್ದು ಆಗಿದೆ” ಅಂದನು.

ಅವರಿಗೆ, “ನಿಮ್ಮ ಮನಸ್ಸು ಪರಿವರ್ತನೆಕೊಂಡು ಚಿಕ್ಕ ಮಕ್ಕಳಂತೆ ಆಗದೇ ಹೋದರೆ ನೀವು ಪರಲೋಕ ರಾಜ್ಯದಲ್ಲಿ ಪ್ರವೇಶಿಸುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಹೀಗಿರುವುದರಿಂದ ಯಾವನು ಈ ಚಿಕ್ಕ ಮಗುವಿನಂತೆ ತನ್ನನ್ನು ತಾನೇ ತಗ್ಗಿಸಿಕೊಳ್ಳುತ್ತಾನೋ ಅವನೇ ಪರಲೋಕ ರಾಜ್ಯದಲ್ಲಿ ದೊಡ್ಡವನು.

“ನಿಮ್ಮಲ್ಲಿಒಬ್ಬ ಮನುಷ್ಯನಿಗೆ ನೂರು ಕುರಿಗಳು ಇರಲಾಗಿ ಅವುಗಳಲ್ಲಿ ಒಂದು ಕುರಿಯು ತಪ್ಪಿಸಿಕೊಂಡು ಹೋಯಿತೆಂದು ಇಟ್ಟುಕೊಳ್ಳಿ. ಆಗ ನಿಮಗೇನು ಅನ್ನಿಸುತ್ತದೆ? ಅವನು ಉಳಿದ ತೊಂಬತ್ತೊಂಬತ್ತು ಕುರಿಗಳನ್ನು ಬೆಟ್ಟದಲ್ಲಿ ಬಿಟ್ಟು ತಪ್ಪಿಸಿಕೊಂಡು ಹೋದ ಆ ಒಂದು ಕುರಿಯನ್ನು ಹುಡುಕಿಕೊಂಡು ಹೋಗುವುದಿಲ್ಲವೇ? ಅದು ಅವನಿಗೆ ಸಿಕ್ಕಿದರೆ, ತಪ್ಪಿಸಿಕೊಳ್ಳದೆ ಇರುವ ತೊಂಬತ್ತೊಂಬತ್ತು ಕುರಿಗಳಿಗಿಂತ ಆ ಒಂದು ಕುರಿಗೋಸ್ಕರ ತುಂಬಾ ಸಂತೋಷಪಡುವನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಹಾಗೆಯೇ ಈ ಚಿಕ್ಕವರಲ್ಲಿ ಒಬ್ಬನಾದರೂ ನಾಶವಾಗಿಹೋಗುವುದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ.

“ನಿನ್ನ ಸಹೋದರನು ನಿನ್ನ ವಿರುದ್ಧತಪ್ಪು ಮಾಡಿದರೆ, ನೀನು ಹೋಗಿ ಅವನು ಒಬ್ಬನೇ ಇರುವಾಗ ಅವನ ತಪ್ಪನ್ನು ಅವನಿಗೆ ಅರಿವಾಗುವಂತೆ ತಿಳಿಸು. ಅವನು ನಿನ್ನ ಮಾತನ್ನು ಕೇಳಿದರೆ ನಿನ್ನ ಸಹೋದರನನ್ನು ನೀನು ಸಂಪಾದಿಸಿಕೊಂಡಿರುವಿ.

ಆಗ ಪೇತ್ರನು ಆತನ ಬಳಿಗೆ ಬಂದು, “ಕರ್ತನೇ ನನ್ನ ಸಹೋದರನು ನನ್ನ ವಿರುದ್ಧ ಪಾಪ ಮಾಡಿದರೆ ನಾನು ಎಷ್ಟು ಸಾರಿ ಅವನನ್ನು ಕ್ಷಮಿಸಬೇಕು? ಏಳು ಸಾರಿಯೋ?” ಎಂದು ಕೇಳಿದನು. ಯೇಸು ಅವನಿಗೆ, “ಏಳು ಸಾರಿ ಎಂದಲ್ಲ ಏಳೆಪ್ಪತ್ತು ಸಾರಿ ಎಂದು ನಿನಗೆ ಹೇಳುತ್ತೇನೆ.

ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು ಮತ್ತು ನಿನ್ನಂತೆಯೇ ನಿನ್ನ ನೆರೆಯವನನ್ನು ಪ್ರೀತಿಸಬೇಕು” ಇವುಗಳೇ ಅಂದನು.

ಯೇಸು ಅವನಿಗೆ, “ನೀನು ಪೂರ್ಣನಾಗುವುದಕ್ಕೆ ಬಯಸುವುದಾದರೆ, ಹೋಗಿ ನಿನಗಿರುವುದನ್ನೆಲ್ಲಾ ಮಾರಿ, ಬಡವರಿಗೆ ಕೊಡು, ಆಗ ನಿನಗೆ ಪರಲೋಕದಲ್ಲಿ ಸಂಪತ್ತಿರುವುದು. ಅನಂತರ ನೀನು ಬಂದು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.

ಹೀಗೆಕಡೆಯವರು ಮೊದಲಿನವರಾಗುವರು ಮೊದಲಿನವರು ಕಡೆಯವರಾಗುವರು” ಎಂದು ಹೇಳಿದನು.

ಆದರೆ ನಿಮ್ಮಲ್ಲಿ ಹಾಗಿರಬಾರದು. ನಿಮ್ಮಲ್ಲಿ ದೊಡ್ಡವನಾಗಿರಲು ಬಯಸುವವನು ನಿಮ್ಮ ಸೇವಕನಾಗಿರಲಿ. ನಿಮ್ಮಲ್ಲಿ ಪ್ರಮುಖನಾಗಿರಲು ಬಯಸುವವನು ನಿಮ್ಮ ದಾಸನಾಗಿರಲಿ. ಹಾಗೆಯೇ ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವುದಕ್ಕಾಗಿ ಬರಲಿಲ್ಲ, ಸೇವೆ ಮಾಡುವುದಕ್ಕೂ, ಅನೇಕರ ವಿಮೋಚನೆಗಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದನು” ಎಂದು ಹೇಳಿದನು.

ಯೇಸು ಅವನಿಗೆ, “‘ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು’ ಎಂಬ ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯದು. ಇದಕ್ಕೆ ಸಮಾನವಾದ ಎರಡನೆಯ ಆಜ್ಞೆ ಯಾವುದೆಂದರೆ,‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬುದೇ.

ಆದರೆನಿಮ್ಮಲ್ಲಿ ಹೆಚ್ಚಿನವನು ನಿಮ್ಮ ಸೇವಕನಾಗಿರಬೇಕು. ತನ್ನನ್ನು ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.

ಆಗ ಅರಸನು ತನ್ನ ಬಲಗಡೆಯಲ್ಲಿರುವವರಿಗೆ, ‘ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವತ್ತಾಗಿ ಪಡೆದುಕೊಳ್ಳಿರಿ. ನಾನು ಹಸಿದಿದ್ದೆನು, ನನಗೆ ಊಟ ಕೊಟ್ಟಿರಿ; ನಾನು ಬಾಯಾರಿದ್ದೆನು, ನನಗೆ ಕುಡಿಯುವುದಕ್ಕೆ ಕೊಟ್ಟಿರಿ; ಪರದೇಶಿಯಾಗಿದ್ದೆನು, ನನಗೆ ಆಶ್ರಯ ಕೊಟ್ಟಿರಿ; ಬಟ್ಟೆಯಿಲ್ಲದವನಾಗಿದ್ದೆನು, ನನಗೆ ಉಡುವುದಕ್ಕೆ ಕೊಟ್ಟಿರಿ; ಅಸ್ವಸ್ಥನಾಗಿದ್ದಾಗ, ನನ್ನನ್ನು ಆರೈಕೆ ಮಾಡಿದಿರಿ; ಸೆರೆಮನೆಯಲ್ಲಿದ್ದೆನು, ನನ್ನನ್ನು ನೋಡುವುದಕ್ಕೆ ಬಂದಿರಿ’ ಎಂದು ಹೇಳುವನು. ಅದಕ್ಕೆ ಉತ್ತರವಾಗಿ ನೀತಿವಂತರು, ‘ಕರ್ತನೇ, ಯಾವಾಗ ನೀನು ಹಸಿದಿದ್ದನ್ನು ಕಂಡು ನಿನಗೆ ಊಟ ಕೊಟ್ಟೆವು? ಇಲ್ಲವೆ ನೀನು ಬಾಯಾರಿದ್ದನ್ನು ಕಂಡು ಕುಡಿಯುವುದಕ್ಕೆ ಕೊಟ್ಟೆವು? ಯಾವಾಗ ನೀನು ಪರದೇಶಿಯಾಗಿರುವುದನ್ನು ಕಂಡು ಆಶ್ರಯ ನೀಡಿದೆವು? ಇಲ್ಲವೆ ನಿನಗೆ ಬಟ್ಟೆಯಿಲ್ಲದ್ದನ್ನು ಕಂಡು ಉಡುವುದಕ್ಕೆ ಕೊಟ್ಟೆವು? ಯಾವಾಗ ನೀನು ಅಸ್ವಸ್ಥನಾಗಿದ್ದಾಗ ಅಥವಾ ಸೆರೆಮನೆಯಲ್ಲಿ ಇದ್ದುದನ್ನು ಕಂಡು ನಿನ್ನನ್ನು ನೋಡುವುದಕ್ಕೆ ಬಂದೆವು’ ಎಂದು ಕೇಳುವರು. ಅದಕ್ಕೆ ಉತ್ತರವಾಗಿ ಅರಸನು,‘ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ’ ಅನ್ನುವನು.

ಆ ಮೇಲೆ ಆತನು ಎಡಗಡೆಯಲ್ಲಿರುವವರಿಗೆ, ‘ಶಾಪಗ್ರಸ್ತರೇ, ನನ್ನನ್ನು ಬಿಟ್ಟು ಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ ಹೋಗಿರಿ. ನಾನು ಹಸಿದಿದ್ದೆನು, ನೀವು ನನಗೆ ಊಟ ಕೊಡಲಿಲ್ಲ; ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವುದಕ್ಕೆ ಕೊಡಲಿಲ್ಲ. ಪರದೇಶಿಯಾಗಿದ್ದೆನು, ನೀವು ನನಗೆ ಆಶ್ರಯ ಕೊಡಲಿಲ್ಲ; ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡುವುದಕ್ಕೆ ಕೊಡಲಿಲ್ಲ; ಅಸ್ವಸ್ಥನಾಗಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಆರೈಕೆಮಾಡುವುದಕ್ಕೆ ಬರಲಿಲ್ಲವೆಂದು’ ಹೇಳುವನು. ಅದಕ್ಕೆ ಉತ್ತರವಾಗಿ ಅವರೂ ಸಹ, ‘ಕರ್ತನೇ, ಯಾವಾಗ ನೀನು ಹಸಿದಿದ್ದನ್ನೂ, ನೀನು ಬಾಯಾರಿದ್ದನ್ನೂ, ನೀನು ಪರದೇಶಿಯಾಗಿದ್ದನ್ನೂ, ಬಟ್ಟೆಯಿಲ್ಲದವನಾಗಿದ್ದನ್ನೂ, ಅಸ್ವಸ್ಥನಾಗಿದ್ದುದನ್ನೂ, ಸೆರೆಮನೆಯಲ್ಲಿದ್ದುದನ್ನೂ ಕಂಡು ನಿನಗೆ ಉಪಚಾರಮಾಡದೆ ಹೋದೆವು?’ ಅನ್ನುವರು. ಆಗ ಆತನು ಉತ್ತರವಾಗಿ ಅವರಿಗೆ, ‘ನೀವು ಈ ಕೇವಲ ಅಲ್ಪರಾದವರಲ್ಲಿ ಒಬ್ಬನಿಗೆ ಏನನ್ನು ಮಾಡದೆ ಹೋದಿರೋ ಅದನ್ನು ನನಗೂ ಮಾಡದೆ ಹೋದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ’ ಅನ್ನುವನು.

ಬಹು ಬೆಲೆಯುಳ್ಳ ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಆತನ ಬಳಿಗೆ ಬಂದು ಆ ತೈಲವನ್ನು ಆತನ ತಲೆಯ ಮೇಲೆ ಸುರಿದಳು.

ಆತನು ಸ್ವಲ್ಪ ಮುಂದೆ ಹೋಗಿ ಬೋರಲು ಬಿದ್ದು, “ನನ್ನ ತಂದೆಯೇ, ಸಾಧ್ಯವಾದರೆ ಈಪಾನಪಾತ್ರೆಯು ನನ್ನನ್ನು ಬಿಟ್ಟುಹೋಗಲಿ; ಆದರೂ ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ” ಎಂದು ದೇವರನ್ನು ಪ್ರಾರ್ಥಿಸಿದನು.

ಆಗ ಯೇಸು ಕುಳಿತುಕೊಂಡು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಕರೆದು ಅವರಿಗೆ, “ಯಾರಾದರೂ ಮೊದಲಿನವನಾಗಬೇಕೆಂದಿದ್ದರೆ ಅವನು ಎಲ್ಲರಲ್ಲಿ ಕಡೆಯವನೂ ಎಲ್ಲರ ಸೇವಕನೂ ಆಗಿರಬೇಕು” ಎಂದು ಹೇಳಿ,

ಆದರೆ ನಿಮ್ಮಲ್ಲಿ ಹಾಗಿರಬಾರದು; ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಬೇಕು. ನಿಮ್ಮಲ್ಲಿ ಮೊದಲನೆಯವನಾಗಬೇಕೆಂದಿರುವವನು ಎಲ್ಲರ ಆಳಾಗಬೇಕು. ಮನುಷ್ಯಕುಮಾರನು ಸಹ ಸೇವೆಮಾಡಿಸಿಕೊಳ್ಳುವುದಕ್ಕೆ ಬರಲಿಲ್ಲ, ಸೇವೆಮಾಡುವುದಕ್ಕೂಅನೇಕರನ್ನು ಬಿಡಿಸಿಕೊಳ್ಳುವುದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವುದಕ್ಕಾಗಿ ಬಂದನು” ಎಂದು ಹೇಳಿದನು.

ಇದಲ್ಲದೆ ನೀವು ನಿಂತುಕೊಂಡು ಪ್ರಾರ್ಥಿಸುವಾಗ ಯಾರ ಮೇಲೆ ಏನಾದರೂ ವಿರೋಧವಿದ್ದರೆ ಅದನ್ನು ಕ್ಷಮಿಸಿರಿ; ಆಗ ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವನು” ಅಂದನು. ಆದರೆ ನೀವು ಕ್ಷಮಿಸದಿದ್ದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ.

ನಿನ್ನ ದೇವರಾದ ಕರ್ತನನ್ನು ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ, ಪೂರ್ಣ ಬುದ್ಧಿಯಿಂದಲೂ, ಪೂರ್ಣ ಶಕ್ತಿಯಿಂದಲೂ ಪ್ರೀತಿಸಬೇಕು’ ಎಂಬುದೇ ಮುಖ್ಯವಾದ ಆಜ್ಞೆ. ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬುದೇ ಎರಡನೆಯ ಆಜ್ಞೆ. ಇವುಗಳಿಗಿಂತ ಹೆಚ್ಚಿನ ಆಜ್ಞೆ ಮತ್ತೊಂದಿಲ್ಲ” ಎಂದು ಉತ್ತರ ಕೊಟ್ಟನು. ಆಗ ಆ ಶಾಸ್ತ್ರಿಯು, “ಬೋಧಕನೇ, ನೀನು ಚೆನ್ನಾಗಿ ಹೇಳಿದೆ. ಸತ್ಯವನ್ನೇ ಹೇಳಿದಿ ದೇವರು ಒಬ್ಬನೇ, ಆತನ ಹೊರತು ಬೇರೊಬ್ಬ ದೇವರಿಲ್ಲ ಎಂದು ಹೇಳಿದನು. ಆತನನ್ನು ಪೂರ್ಣಹೃದಯದಿಂದಲೂ, ಪೂರ್ಣ ಬುದ್ಧಿಯಿಂದಲೂ, ಪೂರ್ಣ ಶಕ್ತಿಯಿಂದಲೂ ಪ್ರೀತಿಸತಕ್ಕದ್ದು. ಇದಲ್ಲದೆ ತನ್ನನ್ನು ಪ್ರೀತಿಸಿಕೊಳ್ಳುವಂತೆ ತನ್ನ ನೆರೆಯವನನ್ನು ಪ್ರೀತಿಸುವುದು ಇವೆರಡೂ ಎಲ್ಲಾ ಸರ್ವಾಂಗಹೋಮಗಳಿಗಿಂತಲೂ ಎಲ್ಲಾ ಯಜ್ಞಗಳಿಗಿಂತಲೂ ಮೇಲಾದುವು” ಅಂದನು.

ಆತನು ಬೇಥಾನ್ಯದಲ್ಲಿದ್ದ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ ಒಬ್ಬ ಸ್ತ್ರೀಯು ಬಹು ಬೆಲೆಯುಳ್ಳ ಸ್ವಚ್ಛ ಜಟಮಾಂಸಿ ತೈಲದ ಭರಣಿಯನ್ನು ತೆಗೆದುಕೊಂಡು ಬಂದು ಅದನ್ನು ಒಡೆದು ತೈಲವನ್ನು ಯೇಸುವಿನ ತಲೆಯ ಮೇಲೆ ಸುರಿದಳು.

ಆತನು, “ಎರಡು ಅಂಗಿಗಳುಳ್ಳವನು ಇಲ್ಲದವನಿಗೆ ಒಂದು ಕೊಡಲಿ; ಆಹಾರವುಳ್ಳವನು ಇಲ್ಲದವನಿಗೆ ಕೊಡಲಿ” ಎಂದು ಅವರಿಗೆ ಹೇಳಿದನು.

“ಕೇಳುವವರಾದ ನಿಮಗೆ ನಾನು ಹೇಳುವುದೇನಂದರೆ, ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಗೆಮಾಡುವವರಿಗೆ ಉಪಕಾರಮಾಡಿರಿ; ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ; ನಿಮ್ಮನ್ನು ನಿಂದಿಸುವವರಿಗಾಗಿ ಪ್ರಾರ್ಥಿಸಿರಿ. ನಿನ್ನ ಒಂದು ಕೆನ್ನೆಯ ಮೇಲೆ ಹೊಡೆದವನಿಗೆ ಮತ್ತೊಂದು ಕೆನ್ನೆಯನ್ನೂ ತೋರಿಸು; ನಿನ್ನ ಮೇಲಂಗಿಯನ್ನು ಕಿತ್ತುಕೊಳ್ಳುವವನಿಗೆ ಒಳಂಗಿಯನ್ನೂ ತೆಗೆದುಕೊಳ್ಳಲು ಅಡ್ಡಿಮಾಡಬೇಡ. ನಿನ್ನನ್ನು ಬೇಡುವವರೆಲ್ಲರಿಗೂ ಕೊಡು; ನಿನ್ನ ಸೊತ್ತನ್ನು ಕಸಿದುಕೊಳ್ಳುವವನನ್ನು ಹಿಂದಕ್ಕೆ ಕೊಡೆಂದು ಕೇಳಬೇಡ. ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅಂಥದನ್ನೇ ನೀವು ಅವರಿಗೆ ಮಾಡಿರಿ.

“ನಿಮಗೆ ಪ್ರೀತಿ ತೋರಿಸುವವರನ್ನೇ ನೀವು ಪ್ರೀತಿಸಿದರೆ ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರು ಸಹ ತಮಗೆ ಪ್ರೀತಿ ತೋರಿಸುವವರನ್ನು ಪ್ರೀತಿಸುತ್ತಾರಲ್ಲಾ. ನಿಮಗೆ ಉಪಕಾರ ಮಾಡುವವರಿಗೇ ನೀವು ಉಪಕಾರ ಮಾಡಿದರೆ ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರು ಸಹ ಹಾಗೆ ಮಾಡುತ್ತಾರಲ್ಲಾ. ಸಾಲತೀರಿಸುವುರೆಂದು ನಿರೀಕ್ಷಿಸಿ ನೀವು ಅಂಥವರಿಗೆ ಸಾಲಕೊಟ್ಟರೆ, ನಿಮಗೆ ಏನು ಹೊಗಳಿಕೆ ಬಂದೀತು? ಪಾಪಿಷ್ಠರೂ ಸಹ ತಾವು ಕೊಟ್ಟಷ್ಟು ತಮಗೆ ತಿರುಗಿ ಸಿಕ್ಕೀತೆಂದು ಸಾಲ ಕೊಡುತ್ತಾರಲ್ಲಾ.

ನೀವಾದರೋ ನಿಮ್ಮ ವೈರಿಗಳನ್ನು ಪ್ರೀತಿಸಿ ಅವರಿಗೆ ಉಪಕಾರಮಾಡಿರಿ. ಏನನ್ನೂ ನಿರೀಕ್ಷಿಸದೆ ಸಾಲಕೊಡಿರಿ. ಹೀಗೇ ಮಾಡಿದರೆ, ನಿಮಗೆ ಬಹಳ ಫಲಸಿಕ್ಕುವುದು ಮತ್ತು ನೀವು ಪರಾತ್ಪರನಾದ ದೇವರ ಮಕ್ಕಳಾಗುವಿರಿ. ದೇವರು ಉಪಕಾರನೆನಸದವರಿಗೂ ಕೆಟ್ಟವರಿಗೂ ಉಪಕಾರಿಯಾಗಿದ್ದಾನೆ. ನಿಮ್ಮ ತಂದೆಯು ಕರುಣೆಯುಳ್ಳವನಾಗಿರುವ ಪ್ರಕಾರವೇ ನೀವೂ ಕರುಣೆಯುಳ್ಳವರಾಗಿರಿ. “ಇದಲ್ಲದೆ ತೀರ್ಪುಮಾಡಬೇಡಿರಿ, ಆಗ ನಿಮಗೂ ತೀರ್ಪಾಗುವುದಿಲ್ಲ; ಅಪರಾಧಿಯೆಂದು ನಿರ್ಣಯಿಸಬೇಡಿರಿ, ಆಗ ನಿಮ್ಮನ್ನೂ ಅಪರಾಧಿಗಳೆಂದು ನಿರ್ಣಯಿಸುವುದಿಲ್ಲ; ಕ್ಷಮಿಸಿರಿ, ಆಗ ನಿಮಗೂ ಕ್ಷಮಿಸಲ್ಪಡುವುದು. ಕೊಡಿರಿ, ಆಗ ನಿಮಗೂ ಕೊಡಲ್ಪಡುವುದು; ಅದುಮಿ, ಅಲ್ಲಾಡಿಸಿ, ತುಂಬಿತುಳುಕುವಂತೆ, ಅಳೆದು ನಿಮ್ಮ ಸೆರಿಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆದುಕೊಡುವರು” ಅಂದನು.

ಆಗ ಆ ಊರಿನಲ್ಲಿದ್ದ ದುರಾಚಾರಿಯಾದ ಒಬ್ಬ ಹೆಂಗಸು ಫರಿಸಾಯನ ಮನೆಯಲ್ಲಿ ಆತನು ಊಟಕ್ಕೆ ಬಂದಿದ್ದಾನೆಂದು ತಿಳಿದು ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಬಂದು, ಯೇಸುವಿನ ಹಿಂದೆ ಪಾದಗಳ ಬಳಿಯಲ್ಲಿ ನಿಂತುಕೊಂಡು ಅಳುತ್ತಾ ತನ್ನ ಕಣ್ಣೀರಿನಿಂದ ಆತನ ಪಾದಗಳನ್ನು ನೆನಸುತ್ತಾ ತನ್ನ ತಲೆ ಕೂದಲಿನಿಂದ ಒರಸಿ, ಪಾದಗಳಿಗೆ ಮುದ್ದಿಟ್ಟು ಆ ತೈಲವನ್ನು ಹಚ್ಚಿದಳು.

ಆಗ ಯೇಸು, “ಒಬ್ಬ ಸಾಹುಕಾರನಿಗೆ ಇಬ್ಬರು ಸಾಲಗಾರರಿದ್ದರು. ಒಬ್ಬನು ಐನೂರುಬೆಳ್ಳಿ ನಾಣ್ಯಗಳನ್ನು ಕೊಡಬೇಕಾಗಿತ್ತು. ಮತ್ತೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನು ಕೊಡಬೇಕಾಗಿತ್ತು. ತೀರಿಸುವುದಕ್ಕೆ ಅವರಿಗೆ ಗತಿಯಿಲ್ಲದ್ದರಿಂದ ಆ ಇಬ್ಬರಿಗೂ ಸಾಲವನ್ನು ಮನ್ನಾಮಾಡಿ ಬಿಟ್ಟನು. ಹಾಗಾದರೆ ಅವರಿಬ್ಬರಲ್ಲಿ ಯಾವನು ಆ ಸಾಹುಕಾರನನ್ನು ಹೆಚ್ಚಾಗಿ ಪ್ರೀತಿಸುವನು?” ಎಂದು ಕೇಳಿದ್ದಕ್ಕೆ, ಸೀಮೋನನು, “ಯಾವನಿಗೆ ಹೆಚ್ಚಾಗಿ ಬಿಟ್ಟನೋ ಅವನೇ ಎಂದು ಭಾವಿಸುತ್ತೇನೆ” ಅಂದನು. ಯೇಸು ಅವನಿಗೆ, “ನೀನು ಸರಿಯಾಗಿ ತೀರ್ಪುಮಾಡಿದಿ” ಎಂದು ಹೇಳಿ, ಆ ಹೆಂಗಸಿನ ಕಡೆಗೆ ತಿರುಗಿಕೊಂಡು ಸೀಮೋನನಿಗೆ ಹೇಳಿದ್ದೇನಂದರೆ, “ಈ ಹೆಂಗಸನ್ನು ನೋಡಿದ್ದಿಯಾ? ನಾನು ನಿನ್ನ ಮನೆಗೆ ಬಂದಾಗ ನೀನು ನನ್ನ ಕಾಲಿಗೆ ನೀರು ಕೊಡಲಿಲ್ಲ; ಇವಳಾದರೋ ನನ್ನ ಕಾಲುಗಳನ್ನು ಕಣ್ಣೀರಿನಿಂದ ನೆನಸಿ ತನ್ನ ತಲೆಯಕೂದಲಿನಿಂದ ಒರಸಿದಳು. ನೀನು ನನಗೆ ಮುದ್ದಿಡಲಿಲ್ಲ; ಇವಳಾದರೋ ನಾನು ಒಳಗೆ ಬಂದಾಗಿನಿಂದ ನನ್ನ ಕಾಲಿಗೆ ಮುದ್ದಿಡುವುದನ್ನು ಬಿಟ್ಟಿಲ್ಲ. ನೀನು ನನ್ನ ತಲೆಗೆ ಎಣ್ಣೆ ಹಚ್ಚಲಿಲ್ಲ; ಇವಳಾದರೋ ಸುಗಂಧ ತೈಲವನ್ನು ಕಾಲಿಗೆ ಹಚ್ಚಿದಳು. ಹೀಗಿರಲು ನಾನು ಹೇಳುವ ಮಾತೇನಂದರೆ, ಇವಳ ಪಾಪಗಳು ಬಹಳವಾಗಿದ್ದರೂ ಅವೆಲ್ಲಾವು ಕ್ಷಮಿಸಲ್ಪಟ್ಟಿವೆ. ಇದಕ್ಕೆ ಪ್ರಮಾಣವೇನಂದರೆ ಇವಳು ತೋರಿಸಿದ ಪ್ರೀತಿ ಬಹಳ. ಆದರೆ ಯಾವನಿಗೆ ಸ್ವಲ್ಪ ಮಾತ್ರ ಕ್ಷಮಿಸಲ್ಪಟ್ಟಿದೆಯೋ ಅವನು ತೋರಿಸುವ ಪ್ರೀತಿಯು ಸ್ವಲ್ಪವೇ” ಅಂದನು.

ಅದಕ್ಕೆ ಅವನು, “‘ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು.’ ಮತ್ತು ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂದು ಬರೆದದೆ” ಅಂದನು.

ಯೇಸು ಅವನಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆ, “ಒಬ್ಬಾನೊಬ್ಬ ಮನುಷ್ಯನು ಯೆರೂಸಲೇಮಿನ ಬೆಟ್ಟದ ಪ್ರದೇಶದಿಂದ ಇಳಿದು ಯೆರಿಕೋ ಎಂಬ ಊರಿಗೆ ಹೋಗುತ್ತಿರುವಾಗ ಕಳ್ಳರ ಕೈಗೆ ಸಿಕ್ಕಿಬಿದ್ದನು. ಅವರು ಅವನನ್ನು ಸುಲಿಗೆ ಮಾಡಿಕೊಂಡು, ಹೊಡೆದು, ಅವನನ್ನು ಅರೆಜೀವಮಾಡಿ ಬಿಟ್ಟುಹೋದರು. ಆಗ ಒಬ್ಬ ಯಾಜಕನು ಆ ದಾರಿಯಲ್ಲಿ ಇಳಿದುಬರುತ್ತಾ ಅವನನ್ನು ಕಂಡು ಓರೆಯಾಗಿ ಹೋದನು. ಅದೇ ರೀತಿಯಲ್ಲಿ ಒಬ್ಬ ಲೇವಿಯು ಆ ಸ್ಥಳಕ್ಕೆ ಬಂದು ಅವನನ್ನು ಕಂಡು ಓರೆಯಾಗಿ ಹೋದನು. ಆದರೆ ಒಬ್ಬ ಸಮಾರ್ಯದವನು ಪ್ರಯಾಣಮಾಡುತ್ತಾ ಅವನು ಬಿದಿದ್ದ ಸ್ಥಳಕ್ಕೆ ಬಂದಾಗ ಅವನನ್ನು ಕಂಡು ಕನಿಕರಿಸಿ, ಅವನ ಹತ್ತಿರಕ್ಕೆ ಹೋಗಿ ಅವನ ಗಾಯಗಳಿಗೆ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದು ಗಾಯವನು ಕಟ್ಟಿ ತನ್ನ ಸ್ವಂತ ವಾಹನ ಪಶುವಿನ ಮೇಲೆ ಹತ್ತಿಸಿಕೊಂಡು ಛತ್ರಕ್ಕೆ ಕರೆದುಕೊಂಡು ಹೋಗಿ ಅವನನ್ನು ಆರೈಕೆಮಾಡಿದನು. ಮರುದಿನ ಅವನು ಎರಡು ದಿನಾರಿಗಳನ್ನು ತೆಗೆದು ಛತ್ರದವನಿಗೆ ಕೊಟ್ಟು, ‘ಇವನನ್ನು ಆರೈಕೆಮಾಡು, ಇದಕ್ಕಿಂತ ಹೆಚ್ಚಾಗಿ ಏನಾದರೂ ವೆಚ್ಚಮಾಡಿದರೆ ನಾನು ಹಿಂತಿರುಗಿ ಬಂದಾಗ ನಿನಗೆ ಕೊಡುವೆನು’ ಅಂದನು. ಈ ಮೂವರಲ್ಲಿ ಯಾವನು ಕಳ್ಳರ ಕೈಗೆ ಸಿಕ್ಕಿದವನಿಗೆ ನೆರೆಯವನಾದನೆಂದು ನಿನಗೆ ತೋರುತ್ತದೆ ಹೇಳು?” ಎಂದು ಕೇಳಿದ್ದಕ್ಕೆ, ಆ ಧರ್ಮೋಪದೇಶಕನು, “ಅವನಿಗೆ ದಯೆ ತೋರಿಸಿದವನೇ” ಅಂದನು. ಆಗ ಯೇಸು ಅವನಿಗೆ, “ಹೋಗು, ನೀನೂ ಅದರಂತೆ ಮಾಡು” ಎಂದು ಹೇಳಿದನು.

ಅದೇನೆಂದರೆ, “ಯಾವನಾದರೂ ನಿನ್ನನ್ನು ಮದುವೆ ಊಟಕ್ಕೆ ಕರೆದರೆ ಪಂಕ್ತಿಯೊಳಗೆ ಮುಖ್ಯ ಸ್ಥಾನದಲ್ಲಿ ಕುಳಿತುಕೊಳ್ಳಬೇಡ, ಒಂದು ವೇಳೆ ನಿನಗಿಂತ ಗೌರವವುಳ್ಳವನನ್ನು ಅವನು ಕರೆದಿರಬಹುದು ಮತ್ತು ನಿನ್ನನ್ನೂ ಅವನನ್ನೂ ಕರೆದವನು ಬಂದು, ‘ಇವನಿಗೆ ಸ್ಥಳ ಬಿಡು’ ಎಂದು ನಿನಗೆ ಹೇಳುವಾಗ ನೀನು ನಾಚಿಕೊಂಡು ಕಡೆಯ ಸ್ಥಾನದಲ್ಲಿ ಕುಳಿತುಕೊಳ್ಳುವುದಕ್ಕೆ ಹೋಗುವಿ. ಆದರೆ ಯಾವನಾದರೂ ನಿನ್ನನ್ನು ಕರೆದಾಗ ನೀನು ಹೋಗಿ ಕಡೆಯ ಸ್ಥಾನದಲ್ಲಿ ಕುಳಿತುಕೋ. ಹೀಗೆ ಮಾಡಿದರೆ ನಿನ್ನನ್ನು ಕರೆದವನು ಬಂದು ನಿನ್ನನ್ನು ನೋಡಿ, ‘ಸ್ನೇಹಿತನೇ, ಇನ್ನೂ ಮೇಲಕ್ಕೆ ಬಾ’ ಅನ್ನುವನು. ಆಗ ನಿನ್ನ ಸಂಗಡ ಕುಳಿತಿರುವವರೆಲ್ಲರ ಮುಂದೆ ನಿನಗೆ ಗೌರವ ದೊರಕುವುದು. ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು” ಅಂದನು.

ಆತನು ತನ್ನನ್ನು ಊಟಕ್ಕೆ ಕರೆದವನಿಗೆ ಸಹ ಒಂದು ಮಾತು ಹೇಳಿದನು; ಅದೇನೆಂದರೆ, “ನೀನು ಮಧ್ಯಾಹ್ನದ ಊಟಕ್ಕೆ ಅಥವಾ ಸಾಯಂಕಾಲದ ಊಟಕ್ಕೆ ನಿನ್ನ ಸ್ನೇಹಿತರನ್ನಾಗಲಿ, ನಿನ್ನ ಅಣ್ಣತಮ್ಮಂದಿರನ್ನಾಗಲಿ, ನಿನ್ನ ಬಂಧುಬಾಂಧವರನ್ನಾಗಲಿ, ಐಶ್ವರ್ಯವಂತರಾದ ನೆರೆಯವರನ್ನಾಗಲಿ ಕರೆಯಬೇಡ. ಒಂದು ವೇಳೆ ಅವರು ಸಹ ಪ್ರತಿಯಾಗಿ ನಿನ್ನನ್ನು ಕರೆದಾರು, ಮತ್ತು ನಿನಗೆ ಮುಯ್ಯಿಗೆಮುಯ್ಯಾಗುವುದು. ಆದರೆ ನೀನು ಔತಣ ಮಾಡಿಸುವಾಗ ಬಡವರು, ಅಂಗಹೀನವಾದವರು, ಕುಂಟರು, ಕುರುಡರು ಇಂಥವರನ್ನು ಕರೆ, ಆಗ ನೀನು ಧನ್ಯನಾಗುವಿ. ಏಕೆಂದರೆ, ಅವರು ನಿನಗೆ ಪ್ರತಿಯಾಗಿ ಏನು ಮಾಡಲೂ ಇಲ್ಲದವರು. ನೀತಿವಂತರು ಪುನರುತ್ಥಾನ ಹೊಂದುವಾಗ ನಿನಗೆ ಪ್ರತಿಫಲ ದೊರಕುವುದು.”

ಎದ್ದು ತನ್ನ ತಂದೆಯ ಕಡೆಗೆ ಬಂದನು. “ಅವನು ಇನ್ನೂ ದೂರದಲ್ಲಿರುವಾಗ ಅವನ ತಂದೆಯು ಅವನನ್ನು ಕಂಡು, ಕನಿಕರಪಟ್ಟು, ಓಡಿಬಂದು ಅವನ ಕೊರಳನ್ನು ಅಪ್ಪಿಕೊಂಡು, ಅವನಿಗೆ ಬಹಳವಾಗಿ ಮುದ್ದಿಟ್ಟನು. ಆದರೂ ಮಗನು ಅವನಿಗೆ, ‘ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ಪಾಪ ಮಾಡಿದ್ದೇನೆ. ಇನ್ನು ನಾನು ನಿನ್ನ ಮಗನೆನಿಸಿಕೊಳ್ಳುವುದಕ್ಕೆ ಯೋಗ್ಯನಲ್ಲ’ ಎಂದು ಹೇಳಲು, ತಂದೆಯು ತನ್ನ ಆಳುಗಳಿಗೆ, ‘ಶ್ರೇಷ್ಠವಾದ ನಿಲುವಂಗಿಯನ್ನು ತಟ್ಟನೆ ತಂದು ಇವನಿಗೆ ಉಡಿಸಿ, ಇವನ ಕೈಗೆ ಉಂಗುರವನ್ನು ತೊಡಿಸಿರಿ, ಕಾಲಿಗೆ ಜೋಡು ಮೆಡಿಸಿರಿ, ಕೊಬ್ಬಿಸಿದ ಆ ಕರುವನ್ನು ತಂದು ಕೊಯ್ಯಿರಿ, ಹಬ್ಬಮಾಡೋಣ, ಉಲ್ಲಾಸಪಡೋಣ. ಈ ನನ್ನ ಮಗನು ಸತ್ತವನಾಗಿದ್ದನು, ತಿರುಗಿ ಬದುಕಿ ಬಂದಿದ್ದಾನೆ. ಪೋಲಿಹೋಗಿದ್ದನು, ಸಿಕ್ಕಿದನು’ ಎಂದು ಹೇಳಿ ಉಲ್ಲಾಸಪಡುವುದಕ್ಕೆ ತೊಡಗಿದರು.

ಯಾವ ಆಳಾದರೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು, ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು, ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರಮಾಡುವನು. ನೀವು ದೇವರನ್ನೂ ಧನವನ್ನೂ ಒಟ್ಟಿಗೆ ಸೇವಿಸಲಾರಿರಿ” ಅಂದನು.

ಅವನು ದಿನಕ್ಕೆ ಏಳು ಸಾರಿ ನಿನಗೆ ತಪ್ಪುಮಾಡಿ ಏಳು ಸಾರಿಯೂ ನಿನ್ನ ಕಡೆಗೆ ತಿರುಗಿಕೊಂಡು, ‘ನಾನು ಪಶ್ಚಾತ್ತಾಪಪಡುತ್ತೇನೆ ನನ್ನನ್ನು ಕ್ಷಮಿಸು’ ಎಂದು ಕೇಳಿಕೊಂಡರೆ ಅವನನ್ನು ಕ್ಷಮಿಸು” ಎಂದು ಹೇಳಿದನು.

ಇವನು ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ತನ್ನ ಮನೆಗೆ ಹೋದನು. ಆ ಫರಿಸಾಯನು ಅಂಥವನಾಗಿ ಹೋಗಲಿಲ್ಲ ಎಂದು ನಿಮಗೆ ಹೇಳುತ್ತೇನೆ. ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು” ಅಂದನು.

ಆದರೆ ಜಕ್ಕಾಯನು ನಿಂತುಕೊಂಡು “ಕರ್ತನಿಗೆ, ಕರ್ತನೇ, ನೋಡು, ನನ್ನ ಆಸ್ತಿಯಲ್ಲಿ ಅರ್ಧವನ್ನು ಬಡವರಿಗೆ ಕೊಡುತ್ತೇನೆ ಮತ್ತು ನಾನು ಅನ್ಯಾಯವಾಗಿ ಯಾರಿಂದ ಏನಾದರೂ ಕಿತ್ತುಕೊಂಡಿದ್ದೇಯಾದರೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ” ಎಂದು ಹೇಳಿದನು.

“ನಿಮಗೆ ಸತ್ಯವಾಗಿ ಹೇಳುತ್ತೇನೆ, ಈ ಬಡ ವಿಧವೆ ಎಲ್ಲರಿಗಿಂತಲೂ ಹೆಚ್ಚು ಹಾಕಿದ್ದಾಳೆ. ಹೇಗೆಂದರೆ ಅವರೆಲ್ಲರು ತಮಗೆ ಸಾಕಾಗಿ ಮಿಕ್ಕದ್ದರಲ್ಲಿ ಕಾಣಿಕೆ ಕೊಟ್ಟರು. ಈಕೆಯೋ ತನ್ನ ಬಡತನದಲ್ಲಿಯೂ ತನ್ನ ಜೀವನಕ್ಕಿದ್ದುದ್ದೆಲ್ಲವನ್ನೂ ಕೊಟ್ಟುಬಿಟ್ಟಳು” ಅಂದನು.

ನೀವು ಹಾಗಿರಬಾರದು, ನಿಮ್ಮಲ್ಲಿ ದೊಡ್ಡವನು ಚಿಕ್ಕವನಂತಾಗಬೇಕು, ಮುಖ್ಯಸ್ಥನು ಸೇವಕನಂತಾಗಬೇಕು. ಯಾರು ದೊಡ್ಡವನು? ಊಟಕ್ಕೆ ಕುಳಿತವನೋ ಸೇವೆಮಾಡುವವನೋ? ಊಟಕ್ಕೆ ಕುಳಿತವನಲ್ಲವೇ. ಆದರೆ ನಾನು ನಿಮ್ಮಲ್ಲಿ ಸೇವೆ ಮಾಡುವವನಂತಿದ್ದೇನೆ.

ಆದರೆ ಅವನು, “ಕರ್ತನೇ, ನಿನ್ನ ಸಂಗಡ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ನಾನು ಸಿದ್ಧನಾಗಿದ್ದೇನೆ” ಅನ್ನಲು,

ಆಗ ಯೇಸು, “ತಂದೆಯೇ, ಅವರನ್ನು ಕ್ಷಮಿಸು ತಾವು ಏನು ಮಾಡುತ್ತೇವೆಂಬುದನ್ನು ಅವರು ಅರಿಯರು” ಅಂದನು. ಆ ಮೇಲೆ ಚೀಟು ಹಾಕಿ ಯೇಸುವಿನ ಬಟ್ಟೆಗಳನ್ನು ಪಾಲು ಮಾಡಿದರು.

“ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು. ದೇವರು ತನ್ನ ಮಗನ ಮುಖಾಂತರ ಲೋಕಕ್ಕೆ ರಕ್ಷಣೆಯಾಗಬೇಕೆಂದು ಆತನನ್ನು ಕಳುಹಿಸಿಕೊಟ್ಟನೇ ಹೊರತು ಅಪರಾಧಿಯೆಂದು ಖಂಡಿಸಲಿಕ್ಕೆ ಕಳುಹಿಸಲಿಲ್ಲ.

ಆತನು ವೃದ್ಧಿಯಾಗಬೇಕು ನಾನು ಕಡಿಮೆಯಾಗಬೇಕು, ಅಂದನು.

ತಂದೆಯು ನನ್ನನ್ನು ಪ್ರೀತಿಸುತ್ತಾನೆ ಏಕೆಂದರೆ, ನಾನು ನನ್ನ ಪ್ರಾಣವನ್ನು ಮರಳಿ ಪಡೆದುಕೊಳ್ಳುವಂತೆ ಅದನ್ನು ಕೊಡುತ್ತಿದ್ದೇನೆ.

ಯೇಸು ಕಣ್ಣೀರಿಟ್ಟನು. ಅದಕ್ಕೆ ಯೆಹೂದ್ಯರು, “ಆಹಾ! ಈತನು ಅವನ ಮೇಲೆ ಎಷ್ಟೋ ಮಮತೆ ಇಟ್ಟಿದ್ದಾನೆ” ಎಂದರು.

ಆಗ ಮರಿಯಳು ಬಹು ಬೆಲೆಯುಳ್ಳ ಸ್ವಚ್ಛ ಜಟಮಾಂಸಿ ತೈಲವನ್ನು ಒಂದು ಸೇರಷ್ಟು ತಂದು ಯೇಸುವಿನ ಪಾದಕ್ಕೆ ಹಚ್ಚಿ ತನ್ನ ತಲೆ ಕೂದಲಿನಿಂದ ಆತನ ಪಾದಗಳನ್ನು ಒರಸಿದಳು. ಆ ತೈಲದ ಪರಿಮಳವು ಮನೆಯಲ್ಲೆಲ್ಲಾ ತುಂಬಿಕೊಂಡಿತ್ತು.

ಪಸ್ಕಹಬ್ಬದ ಹಿಂದಿನ ದಿನ ಯೇಸು, ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗಬೇಕಾದ ತನ್ನ ಗಳಿಗೆ ಬಂದಿತೆಂದು ತಿಳಿದುಕೊಂಡು, ಈ ಲೋಕದಲ್ಲಿರುವ ತನ್ನವರನ್ನು ಪ್ರೀತಿಸಿ, ಅವರನ್ನು ಕೊನೆಯವರೆಗೂ ಪ್ರೀತಿಸುತ್ತಾ ಬಂದನು.

ಅನಂತರ ಬೋಗುಣಿಯಲ್ಲಿ ನೀರು ಹಾಕಿಕೊಂಡು ಶಿಷ್ಯರ ಪಾದಗಳನ್ನು ತೊಳೆಯುತ್ತಾ, ತಾನು ಸೊಂಟಕ್ಕೆ ಕಟ್ಟಿಕೊಂಡ ಅಂಗವಸ್ತ್ರದಿಂದ ಪಾದಗಳನ್ನು ಒರಸುವುದಕ್ಕೂ ಪ್ರಾರಂಭಿಸಿದನು.

ಹಾಗಾದರೆ ಕರ್ತನೂ, ಗುರುವೂ ಆಗಿರುವ ನಾನೇ ನಿಮ್ಮ ಪಾದಗಳನ್ನು ತೊಳೆದಿರುವಾಗ, ನೀವು ಸಹ ಒಬ್ಬರ ಪಾದಗಳನ್ನೊಬ್ಬರು ತೊಳೆಯಬೇಕು. ನಾನು ನಿಮಗೆ ಮಾಡಿದಂತೆಯೇ ನೀವು ಸಹ ಮಾಡಬೇಕೆಂದು ನಾನು ನಿಮಗೆ ಮಾದರಿಯನ್ನು ತೋರಿಸಿದ್ದೇನೆ. ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ; ತನ್ನ ದಣಿಗಿಂತ ಆಳು ದೊಡ್ಡವನಲ್ಲ. ಹಾಗೆಯೇ ಕಳುಹಿಸಲ್ಪಟ್ಟವನು ಕಳುಹಿಸಿದವನಿಗಿಂತ ದೊಡ್ಡವನಲ್ಲ. ನೀವು ಇವುಗಳನ್ನು ತಿಳಿದುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು.

ಶಿಷ್ಯರೊಳಗೆ ಯೇಸುವಿಗೆ ಪ್ರಿಯನಾಗಿದ್ದ ಒಬ್ಬ ಶಿಷ್ಯನು ಆತನ ಎದೆಗೆ ಒರಗಿಕೊಂಡಿದ್ದನು.

ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ: ಏನೆಂದರೆ, ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವೂ ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು, ಎಂಬುದೇ. ನಿಮ್ಮೊಳಗೆ ಪರಸ್ಪರ ಪ್ರೀತಿಯಿರುವುದಾದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳಿದುಕೊಳ್ಳುವರು” ಎಂದನು.

“ನೀವು ನನ್ನನ್ನು ಪ್ರೀತಿಸುವವರಾದರೆ ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವಿರಿ.

ನನ್ನ ಆಜ್ಞೆಗಳನ್ನು ಹೊಂದಿ ಅವುಗಳನ್ನು ಕೈಕೊಂಡು ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ತಂದೆಗೆ ಪ್ರಿಯನಾಗಿರುವನು. ನಾನೂ ಅವನನ್ನು ಪ್ರೀತಿಸಿ ಅವನಿಗೆ ನನ್ನನ್ನು ಪ್ರಕಟಪಡಿಸಿ ತೋರಿಸುವೆನು” ಎಂದು ಹೇಳಿದನು.

ಯೇಸು ಅವನಿಗೆ, “ಯಾವನಾದರೂ ನನ್ನನ್ನು ಪ್ರೀತಿಸುವುದಾದರೆ ನನ್ನ ಮಾತಿನಂತೆ ನಡೆಯುವನು. ಅವನನ್ನು ನನ್ನ ತಂದೆಯು ಪ್ರೀತಿಸುವನು ಮತ್ತು ನಾವಿಬ್ಬರೂ ಅವನ ಬಳಿಗೆ ಬಂದು, ಅವನೊಂದಿಗೆ ನೆಲೆಸುವೆವು. ನನ್ನನ್ನು ಪ್ರೀತಿಸದವನು, ನನ್ನ ಮಾತುಗಳನ್ನು ಕೈಕೊಂಡು ನಡೆಯುವುದಿಲ್ಲ. ನೀವು ಕೇಳಿದ ಮಾತು ನನ್ನದಲ್ಲ. ನನ್ನನ್ನು ಕಳುಹಿಸಿದ ತಂದೆಯದೇ ಆಗಿದೆ.

“ತಂದೆ ನನ್ನನ್ನು ಪ್ರೀತಿಸಿದ ಹಾಗೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ. ನೀವು ನನ್ನ ಪ್ರೀತಿಯಲ್ಲಿ ನೆಲೆಗೊಂಡಿರಿ. ನಾನು ನನ್ನ ತಂದೆಯ ಆಜ್ಞೆಗಳನ್ನು ಕೈಗೊಂಡು ಆತನ ಪ್ರೀತಿಯಲ್ಲಿ ನೆಲೆಗೊಂಡಿರುವ ಪ್ರಕಾರ, ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ, ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ. ನನ್ನಲ್ಲಿರುವ ಆನಂದವು ನಿಮ್ಮಲ್ಲಿಯೂ ಇರಬೇಕೆಂದೂ, ಆ ನಿಮ್ಮ ಆನಂದವು ಪರಿಪೂರ್ಣವಾಗಬೇಕೆಂದೂ ನಾನು ಇವುಗಳನ್ನು ನಿಮಗೆ ಹೇಳಿದ್ದೇನೆ. ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇನನ್ನ ಆಜ್ಞೆಯಾಗಿದೆ. ತನ್ನ ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವುದೂ ಇಲ್ಲ. ನಾನು ನಿಮಗೆ ಕೊಟ್ಟ ಆಜ್ಞೆಗಳ ಪ್ರಕಾರ ನೀವು ನಡೆದರೆ, ನೀವು ನನ್ನ ಸ್ನೇಹಿತರು. ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳೆಂದು ಕರೆಯುವುದಿಲ್ಲ, ಏಕೆಂದರೆ, ಯಜಮಾನನು ಮಾಡುವಂಥದ್ದು ಆಳಿಗೆ ತಿಳಿಯುವುದಿಲ್ಲ. ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ, ಏಕೆಂದರೆ ತಂದೆಯ ಕಡೆಯಿಂದ ನಾನು ಕೇಳಿದ್ದನ್ನೆಲ್ಲಾ ನಾನು ನಿಮಗೆ ತಿಳಿಸಿದ್ದೇನೆ.

ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂತಲೇ ಇವುಗಳನ್ನು ನಾನು ನಿಮಗೆ ಆಜ್ಞಾಪಿಸುತ್ತಿದ್ದೇನೆ.

ನೀವು ನನ್ನನ್ನು ಪ್ರೀತಿಸಿನಾನು ತಂದೆಯ ಬಳಿಯಿಂದ ಹೊರಟುಬಂದವನೆಂದು ನಂಬಿದ್ದರಿಂದತಂದೆಯು ತಾನೇ ನಿಮ್ಮನ್ನು ಪ್ರೀತಿಸುತ್ತಾನೆ.

ನಾನು ಇವರಲ್ಲಿಯೂ ನೀನು ನನ್ನಲ್ಲಿಯೂ ಇರುವಂತೆ ಇವರೂ ಐಕ್ಯತೆಯಲ್ಲಿ ಪರಿಪೂರ್ಣರಾಗಿರಲಿ. ಹೀಗೆ ನೀನು ನನ್ನನ್ನು ಕಳುಹಿಸಿದ್ದೀ, ಎಂದೂ ಮತ್ತು ನೀನು ನನ್ನನ್ನು ಪ್ರೀತಿಸಿದಂತೆ, ಇವರನ್ನೂ ನೀನು ಪ್ರೀತಿಸುತ್ತೀ ಎಂದು ಲೋಕವು ತಿಳಿದುಕೊಳ್ಳುವುದು.

ನಾನು ಅವರಿಗೆ ನಿನ್ನ ಹೆಸರನ್ನು ತಿಳಿಸಿದ್ದೇನೆ. ಇನ್ನೂ ತಿಳಿಸುವೆನು. ಏಕೆಂದರೆ,ನೀನು ನನ್ನನ್ನು ಪ್ರೀತಿಸಿದಂಥ ಪ್ರೀತಿಯು ಇವರಲ್ಲಿ ಇರಬೇಕೆಂತಲೂ ಮತ್ತು ನಾನೂ ಅವರಲ್ಲಿ ಇರಬೇಕೆಂದೂ ಪ್ರಾರ್ಥಿಸುತ್ತೇನೆ” ಎಂದನು.

ಅವರ ಊಟವಾದ ಮೇಲೆ ಯೇಸು ಸೀಮೋನ್ ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ,ನೀನು ಇವರಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತಿಯೋ?” ಎಂದು ಕೇಳಲು ಅವನು “ಹೌದು, ಕರ್ತನೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂದು ನೀನೇ ಬಲ್ಲೆ” ಎಂದನು. ಆತನು ಅವನಿಗೆ, “ನನ್ನ ಕುರಿಮರಿಗಳನ್ನು ಮೇಯಿಸು” ಎಂದು ಹೇಳಿದನು. ಆತನು ತಿರುಗಿ ಎರಡನೆಯ ಸಾರಿ ಅವನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ?” ಎಂದು ಕೇಳಲು, ಅವನು ಹೌದು ಕರ್ತನೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂದು ನೀನೇ ಬಲ್ಲೆ ಎಂದನು. ಆತನು ಅವನಿಗೆ “ನನ್ನ ಕುರಿಗಳನ್ನು ಪಾಲಿಸು” ಎಂದು ಹೇಳಿದನು. ಯೇಸು ಮೂರನೆಯ ಸಾರಿ, “ಯೋಹಾನನ ಮಗನಾದ ಸೀಮೋನನೇ ನೀನು ನನ್ನ ಮೇಲೆ ಮಮತೆ ಇಟ್ಟಿದ್ದಿಯೋ?” ಎಂದು ಕೇಳಿದನು, ಮೂರನೆಯ ಸಾರಿ ಆತನು, “ನನ್ನ ಮೇಲೆ ಮಮತೆ ಇಟ್ಟಿದ್ದೀಯೋ?” ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು, “ಕರ್ತನೇ, ನಿನಗೆ ಎಲ್ಲವೂ ತಿಳಿದಿದೆ. ನಾನು ನಿನ್ನ ಮೇಲೆ ಮಮತೆ ಇಟ್ಟೀದ್ದೇನೆಂದು ನಿನಗೆ ತಿಳಿದಿದೆ” ಎಂದನು. ಆಗ ಅವನಿಗೆ ಯೇಸು “ನನ್ನ ಕುರಿಗಳನ್ನು ಮೇಯಿಸು” ಎಂದನು.

ನಂಬಿದವರೆಲ್ಲರು ಒಗ್ಗಟ್ಟಾಗಿದ್ದು, ತಮ್ಮಲ್ಲಿರುವುದೆಲ್ಲವನ್ನೂ ಸಂತೋಷವಾಗಿ ಹಂಚಿಕೊಂಡು ಅನುಭೋಗಿಸುತ್ತಿದ್ದರು. ತಮ್ಮತಮ್ಮ ಚರಸ್ಥಿರಸೊತ್ತುಗಳನ್ನು ಮಾರಿ ಬಂದ ಹಣವನ್ನು ಎಲ್ಲರಿಗೂ ಅವರವರಿಗೆ ಅಗತ್ಯವಿದ್ದ ಹಾಗೆ ಹಂಚಿಕೊಳ್ಳುತ್ತಾ ಇದ್ದರು. ಅವರು ಪ್ರತಿದಿನ ಏಕಮನಸ್ಸಿನಿಂದ ದೇವಾಲಯದಲ್ಲಿ ಸೇರಿಬರುತ್ತಾ, ಮನೆಮನೆಗಳಲ್ಲಿ ರೊಟ್ಟಿಮುರಿದು ಉಲ್ಲಾಸದಿಂದಲೂ, ಸರಳ ಸಹೃದಯದಿಂದಲೂ ಸಹಭೋಜನ ಮಾಡುತ್ತಾ ಇದ್ದರು.

ಅವರಲ್ಲಿ ಕೊರತೆಪಡುತ್ತಿದ್ದವನೂ ಒಬ್ಬನೂ ಇರಲಿಲ್ಲ, ಏಕೆಂದರೆ ಹೊಲಮನೆಗಳಿದ್ದವರು ಅವುಗಳನ್ನು ಮಾರಿ ಬಂದ ಹಣವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಡುತ್ತಿದ್ದರು; ಅದನ್ನು ಪ್ರತಿಯೊಬ್ಬನಿಗೆ ಅವನವನ ಅವಶ್ಯಕತೆಗೆ ತಕ್ಕಂತೆ ಹಂಚಿ ಕೊಡುತ್ತಿದ್ದರು.

ಅವರು ಸ್ತೆಫನನ ಮೇಲೆ ಕಲ್ಲೆಸೆಯುತ್ತಾ ಇರಲು, ಅವನು ಕರ್ತನ ಹೆಸರನ್ನು ಹೇಳಿ, “ಕರ್ತನಾದ, ಯೇಸುವೇ, ನನ್ನಾತ್ಮವನ್ನು ಸೇರಿಸಿಕೋ” ಎಂದು ಪ್ರಾರ್ಥಿಸಿ, ಮೊಣಕಾಲೂರಿ, “ಕರ್ತನೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡವೆಂದು” ಮಹಾಶಬ್ದದಿಂದ ಕೂಗಿದನು. ಇದನ್ನು ಹೇಳಿ ನಿದ್ರೆಹೋದನು.

ಅವನು ಓದುತ್ತಿದ್ದ ಶಾಸ್ತ್ರವಚನವು ಯಾವುದೆಂದರೆ, “ವಧಿಸುವಸ್ಥಾನಕ್ಕೆ ಒಯ್ಯಲ್ಪಡುವ ಕುರಿಮರಿಯಂತೆ ಆತನು ಒಯ್ಯಲ್ಪಟ್ಟನು; ಮತ್ತು ಕುರಿಮರಿಯು ಉಣ್ಣೆ ಕತ್ತರಿಸುವವನ ಮುಂದೆ ಮೌನವಾಗಿರುವಂತೆ ಆತನು ಬಾಯಿ ತೆರೆಯದೆ ಮೌನವಾಗಿದ್ದನು. ಆತನಿಗಾದ ಅವಮಾನದ ನ್ಯಾಯವಿಚಾರಣೆಯಲ್ಲಿ ಆತನಿಗೆ ನ್ಯಾಯ ಸಿಗಲಿಲ್ಲ. ಆತನ ಪೀಳಿಗೆಯ ಕುರಿತಾಗಿ ಯಾರು ವಿವರಿಸಬಲ್ಲರು? ಆತನ ಜೀವವನ್ನು ಭೂಮಿಯಿಂದ ತೆಗೆದುಬಿಟ್ಟರಲ್ಲಾ” ಎಂಬುದೇ.

ಎಲ್ಲಾ ವಿಷಯಗಳಲ್ಲಿ ನಾನು ನಿಮಗೆ ಮಾದರಿ ತೋರಿಸಿದ್ದೇನೆ. ನೀವು ಹಾಗೆಯೇ ದುಡಿದು ಬಲವಿಲ್ಲದವರಿಗೆ ಉಪಕಾರಮಾಡಬೇಕು; ಮತ್ತು; ‘ತೆಗೆದುಕೊಳ್ಳುವುದಕ್ಕಿಂತ ಕೊಡುವುದೇ ಹೆಚ್ಚಿನ ಭಾಗ್ಯವೆಂಬುದಾಗಿ’ ಕರ್ತನಾದ ಯೇಸು ತಾನೇ ಹೇಳಿದ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡಿರಬೇಕು” ಅಂದನು.

ಈ ನಿರೀಕ್ಷೆಯು ನಮ್ಮನ್ನು ಆಶಾಭಂಗಪಡಿಸುವುದಿಲ್ಲ, ಏಕೆಂದರೆ, ನಮಗೆ ಕೊಟ್ಟಿರುವ ಪವಿತ್ರಾತ್ಮನ ಮೂಲಕವಾಗಿ ದೇವರ ಪ್ರೀತಿಯು ನಮ್ಮ ಹೃದಯಗಳಲ್ಲಿ ಸುರಿಸಿದ್ದಾನೆ. ನಾವು ಬಲಹೀನರಾಗಿದ್ದಾಗಲೇ ಕ್ರಿಸ್ತನು ನಿಯಮಿತ ಕಾಲದಲ್ಲಿ ಭಕ್ತಿಹೀನರಿಗೋಸ್ಕರ ಪ್ರಾಣಕೊಟ್ಟನು. ನೀತಿವಂತರಿಗೋಸ್ಕರ ಯಾರಾದರೂ ಪ್ರಾಣಕೊಡುವುದು ಅಪರೂಪ. ನಿಜವಾಗಿಯೂ ಒಳ್ಳೆಯವನಿಗಾಗಿ ಪ್ರಾಣಕೊಡುವುದಕ್ಕೆ ಯಾವನಾದರೂ ಧೈರ್ಯಮಾಡಿದರೂ ಮಾಡಬಹುದು. ಆದರೆ ನಾವು ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ದೃಢಪಡಿಸಿದ್ದಾನೆ. ಈಗ ನಾವು ಆತನ ರಕ್ತದಿಂದ ನೀತಿವಂತರಾಗಿರಲಾಗಿ ಆತನ ಮೂಲಕವಾಗಿ ದೇವರ ಕೋಪದಿಂದ ಖಂಡಿತವಾಗಿಯೂ ರಕ್ಷಣೆಯಾಗುವುದು ಅಷ್ಟೇ ನಿಶ್ಚಯವಲ್ಲವೇ? ನಾವು ದೇವರಿಗೆ ಶತ್ರುಗಳಾಗಿದ್ದಾಗಲೇ ನಮಗೆ ಆತನ ಮಗನ ಮರಣದ ಮೂಲಕ ಆತನೊಂದಿಗೆ ಸಂಧಾನವಾಯಿತು ಆತನ ಕೂಡ ಸಂಧಾನವಾದ ನಮಗೆ ಮಗನ ಜೀವದಿಂದ ರಕ್ಷಣೆಯಾಗುವುದು ಅಷ್ಟೇ ನಿಶ್ಚಯವಲ್ಲವೇ?

ಈ ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಅಗಲಿಸುವವರು ಯಾರು? ಕಷ್ಟವೋ? ಸಂಕಟವೋ? ಹಿಂಸೆಯೋ? ಹಸಿವೋ? ವಸ್ತ್ರವಿಲ್ಲದಿರುವುದೋ? ಗಂಡಾಂತರವೋ? ಖಡ್ಗವೋ? “ದೇವರೇ ನಾವು ನಿನ್ನ ನಿಮಿತ್ತ ದಿನವೆಲ್ಲಾ ಕೊಲೆಗೆ ಗುರಿಯಾಗುತ್ತಿದ್ದೇವೆ. ವಧ್ಯಸ್ಥಾನಕ್ಕೆ ಒಯ್ದ ಕುರಿಗಳಂತೆ ಎಣಿಸಿದರು.” ಎಂಬುದಾಗಿ ಬರೆದಿರುವಂತೆ ಆಗುತ್ತದಲ್ಲಾ. ಆದರೆ ನಮ್ಮನ್ನು ಪ್ರೀತಿಸಿದಾತನ ಮೂಲಕವಾಗಿ ನಾವು ಎಲ್ಲಾ ವಿಷಯಗಳಲ್ಲಿಯೂ ಪೂರ್ಣ ಜಯಶಾಲಿಗಳಾಗಿದ್ದೇವೆ.

ಹೇಗೆಂದರೆ ಮರಣವಾಗಲಿ, ಜೀವವಾಗಲಿ, ದೇವದೂತರಾಗಲಿ, ದುರಾತ್ಮಗಳಾಗಲಿ, ಈಗಿನ ಸಂಗತಿಗಳಾಗಲಿ, ಮುಂದಣ ಸಂಗತಿಗಳಾಗಲಿ, ಮಹತ್ವಗಳಾಗಲಿ, ಮೇಲಣ ಲೋಕವಾಗಲಿ, ಕೆಳಗಣ ಲೋಕವಾಗಲಿ, ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲು ಸಾಧ್ಯವಿಲ್ಲವೆಂದು ನಾವು ಬಲ್ಲವರಾಗಿದ್ದೇವೆ.

ದೇವರು ನನಗೆ ಕೃಪೆಮಾಡಿದ ಸೇವೆಯನ್ನು ಮಾಡುತ್ತಾ ನಿಮ್ಮಲ್ಲಿ ಒಬ್ಬೊಬ್ಬನಿಗೂ ಹೇಳುವುದೇನಂದರೆ ಯಾರೂ ತನ್ನ ಯೋಗ್ಯತೆಗೆ ಮೀರಿ ತನ್ನನ್ನು ಭಾವಿಸಿಕೊಳ್ಳದೆ ದೇವರು ಒಬ್ಬೊಬ್ಬನಿಗೆ ಎಂಥೆಂಥ ನಂಬಿಕೆಯ ಬಲವನ್ನು ಕೊಟ್ಟಿರುವನೋ, ಅದಕ್ಕೆ ತಕ್ಕ ಹಾಗೆ ನ್ಯಾಯವಾದ ಅಭಿಪ್ರಾಯದಿಂದ ತನ್ನನ್ನು ತಾನು ಭಾವಿಸಿಕೊಳ್ಳಬೇಕು.

ನಿಮ್ಮ ಪ್ರೀತಿಯು ನಿಷ್ಕಪಟವಾಗಿರಲಿ. ಕೆಟ್ಟತನವನ್ನು ತಿರಸ್ಕರಿಸಿರಿ, ಒಳ್ಳೆಯದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ. ಕ್ರೈಸ್ತ ಸಹೋದರರು ಅಣ್ಣ ತಮ್ಮಂದಿರೆಂದು ತಿಳಿದು ಒಬ್ಬರನ್ನೊಬ್ಬರು ಪ್ರೀತಿಸಿರಿ. ಗೌರವಮರ್ಯಾದೆಗಳನ್ನು ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ. ಜಾಗ್ರತೆ ಬೇಕಾದಲ್ಲಿ ಆಲಸ್ಯವಾಗಿರದೆ ಆಸಕ್ತಚಿತ್ತರಾಗಿದ್ದು ಕರ್ತನ ಸೇವೆ ಮಾಡುವವರಾಗಿರಿ. ಕ್ರೈಸ್ತರು ನಿರೀಕ್ಷಿಸುವ ಮಹಾಪದವಿಯನ್ನು ನೆನಸಿ ಉಲ್ಲಾಸವಾಗಿರಿ, ಕಷ್ಟಗಳಲ್ಲಿ ಸೈರಣೆಯುಳ್ಳವರಾಗಿರಿ. ಬೇಸರಗೊಳ್ಳದೆ ಪ್ರಾರ್ಥನೆ ಮಾಡಿರಿ. ದೇವಜನರಿಗೆ ಕೊರತೆ ಬಂದಾಗ ಸಹಾಯ ಮಾಡಿರಿ. ಅತಿಥಿಸತ್ಕಾರವನ್ನು ಆಚರಿಸಿರಿ.

ನಿಮ್ಮನ್ನು ಹಿಂಸಿಸುವವರಿಗೆ ಆಶೀರ್ವಾದ ಮಾಡಿರಿ; ಶಪಿಸದೆ ಆಶೀರ್ವದಿಸಿರಿ. ಸಂತೋಷಪಡುವವರ ಸಂಗಡ ಸಂತೋಷಪಡಿರಿ, ಅಳುವವರ ಸಂಗಡ ಅಳಿರಿ. ನಿಮ್ಮ ನಿಮ್ಮೊಳಗೆ ಏಕಮನಸ್ಸುಳ್ಳವರಾಗಿರಿ ದೊಡ್ಡಸ್ತಿಕೆಯ ಮೇಲೆ ಮನಸ್ಸಿಡದೆ ದೀನರನ್ನು ಸ್ವೀಕರಿಸಿರಿ. ನಿಮ್ಮನ್ನು ನೀವೇ ಬುದ್ಧಿವಂತರೆಂದು ಎಣಿಸಿಕೊಳ್ಳಬೇಡಿರಿ. ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿ ಯಾವುದು ಗೌರವವಾದದ್ದೋ ಯುಕ್ತವಾದದ್ದೋ ಅದನ್ನೇ ಯೋಚಿಸಿ ಒಳ್ಳೆಯದನ್ನು ಮಾಡಿರಿ. ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ.

ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವುದನ್ನು ದೇವರಿಗೆ ಬಿಡಿರಿ. ಯಾಕೆಂದರೆ “‘ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು’ ಎಂದು ಕರ್ತನು ಹೇಳುತ್ತಾನೆಂಬುದಾಗಿ” ಬರೆದಿದೆ. ಹಾಗಾದರೆ “ನಿನ್ನ ವೈರಿ ಹಸಿದಿದ್ದರೆ ಅವನಿಗೆ ಊಟಕ್ಕೆ ಬಡಿಸು; ಬಾಯಾರಿದ್ದರೆ ಕುಡಿಯುವುದಕ್ಕೆ ಕೊಡು. ಹೀಗೆ ಮಾಡುವುದರಿಂದ ಅವನ ತಲೆಯ ಮೇಲೆ ಕೆಂಡಗಳನ್ನು ಕೂಡಿಸಿಟ್ಟಂತಾಗುವುದು”. ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೆತನದಿಂದ ಕೆಟ್ಟತನವನ್ನು ಸೋಲಿಸಿರಿ.

ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ಸಾಲವೂ ನಿಮ್ಮ ಮೇಲೆ ಇರಬಾರದು. ತನ್ನ ನೆರೆಹೊರೆಯವರನ್ನು ಪ್ರೀತಿಸುವವನು ಧರ್ಮಶಾಸ್ತ್ರವನ್ನೆಲ್ಲಾ ನೆರವೇರಿಸಿದ್ದಾನೆ. ಹೇಗೆಂದರೆ “ವ್ಯಭಿಚಾರ ಮಾಡಬಾರದು, ನರಹತ್ಯ ಮಾಡಬಾರದು, ಕದಿಯಬಾರದು, ಪರರ ಸೊತ್ತನ್ನು ಆಶಿಸಬಾರದು.” ಈ ಮೊದಲಾದ ಎಲ್ಲಾ ಕಟ್ಟಳೆಗಳು “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ಒಂದೇ ಮಾತಿನಲ್ಲಿ ಅಡಕವಾಗಿದೆ. ಪ್ರೀತಿಯು ಮತ್ತೊಬ್ಬರಿಗೆ ಯಾವ ಕೇಡನ್ನೂ ಮಾಡುವುದಿಲ್ಲ. ಆದಕಾರಣ ಪ್ರೀತಿಯಿಂದಲೇ ಧರ್ಮಶಾಸ್ತ್ರವು ನೆರವೇರುತ್ತದೆ.

ನಂಬಿಕೆಯಲ್ಲಿ ದೃಢವಿಲ್ಲದವರನ್ನು ಸೇರಿಸಿಕೊಳ್ಳಿರಿ, ಆದರೆ ಸಂದೇಹಾಸ್ಪದವಾದ ವಿಷಯಗಳ ಬಗ್ಗೆ ವಾಗ್ವಾದ ಮಾಡಬೇಡಿರಿ.

ತಿನ್ನದವನೇ, ನಿನ್ನ ಸಹೋದರನ ವಿಷಯವಾಗಿ ನೀನು ತೀರ್ಪುಮಾಡುವುದೇನು? ತಿನ್ನುವವನೇ, ನಿನ್ನ ಸಹೋದರನನ್ನು ನೀನು ಹೀನೈಸುವುದೇನು? ನಾವೆಲ್ಲರೂ ದೇವರ ನ್ಯಾಯಾಸನದ ಮುಂದೆ ನಿಲ್ಲಬೇಕು. ಪವಿತ್ರ ಶಾಸ್ತ್ರದಲ್ಲಿ: “ನಾನು ಜೀವಿಸುವುದರಿಂದ ಪ್ರತಿಯೊಬ್ಬನೂ ನನ್ನ ಮುಂದೆ ಮೊಣಕಾಲೂರುವನು. ಪ್ರತಿಯೊಂದು ನಾಲಿಗೆಯೂ ನನ್ನನ್ನು ದೇವರೆಂದು ಆರಿಕೆಮಾಡುವರು ಎಂದು ಕರ್ತನು ಹೇಳುತ್ತಾನೆ” ಎಂದು ಬರೆದಿದೆ. ಹೀಗಿರಲಾಗಿ ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು.

ಆದಕಾರಣ, ಇನ್ನು ಮೇಲೆ ಒಬ್ಬರ ವಿಷಯದಲ್ಲೊಬ್ಬರು ತೀರ್ಪುಮಾಡದೆ ಇರೋಣ. ಅದಕ್ಕೆ ಬದಲಾಗಿ ಸಹೋದರನ ಎದುರಿಗೆ ಅಡ್ಡಿಯನ್ನಾಗಲಿ, ಅಡೆತಡೆಯನ್ನಾಗಲಿ ಹಾಕಬಾರದೆಂದು ತೀರ್ಮಾನಿಸಿಕೊಳ್ಳಿರಿ. ಯಾವ ಪದಾರ್ಥವೂ ಸ್ವತಃ ಅಶುದ್ಧವಾದದ್ದಲ್ಲವೆಂದು ಕರ್ತನಾದ ಯೇಸುವಿನಲ್ಲಿದ್ದುಕೊಂಡು ದೃಢವಾಗಿ ನಂಬಿದ್ದೇನೆ; ಆದರೆ ಯಾವುದಾದರೂ ಒಂದು ಪದಾರ್ಥವನ್ನು ಅಶುದ್ಧವೆಂದು ಒಬ್ಬನು ಭಾವಿಸಿದರೆ ಅವನಿಗೆ ಅದು ಅಶುದ್ಧವಾಗಿರಲಿ. ನೀನು ತೆಗೆದುಕೊಳ್ಳುವ ಆಹಾರದಿಂದ ನಿನ್ನ ಸಹೋದರನ ಮನಸ್ಸಿಗೆ ನೋವುಂಟಾದರೆ ನೀನು ಪ್ರೀತಿಗೆ ತಕ್ಕಂತೆ ನಡೆಯುವವನಲ್ಲ. ಯಾವನಿಗೋಸ್ಕರ ಕ್ರಿಸ್ತನು ಪ್ರಾಣಕೊಟ್ಟನೋ ಅವನನ್ನು ನಿನಗೆ ಇಷ್ಟವಾದ ಆಹಾರದ ನಿಮಿತ್ತ ಕೆಡಿಸಬಾರದು.

ಆದ್ದರಿಂದ ನಾವು ಸಮಾಧಾನಕ್ಕೂ, ಪರಸ್ಪರ ಭಕ್ತಿವೃದ್ಧಿಗೂ ಅನುಕೂಲವಾಗಿರುವಂಥವುಗಳನ್ನು ಸಾಧಿಸಿಕೊಳ್ಳೋಣ.

ದೃಢವಾದ ನಂಬಿಕೆಯುಳ್ಳವರಾದ ನಾವು ಬಲಹೀನರಾದವರ ಭಾರಗಳನ್ನು ಹೊರುವುದಲ್ಲದೆ ಅದರಲ್ಲಿ ನಮ್ಮನ್ನು ನಾವೇ ಹೊಗಳಿಕೊಳ್ಳಬಾರದು. ನಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಹಿತವನ್ನೂ, ಭಕ್ತಿವೃದ್ಧಿಯನ್ನೂ ಅಪೇಕ್ಷಿಸುವವನಾಗಿ ಅವನನ್ನು ಮೆಚ್ಚಿಸಬೇಕು. ಯಾಕೆಂದರೆ ಕ್ರಿಸ್ತನು ಸಹ ತನ್ನ ಹಿತಕ್ಕಾಗಿ ಚಿಂತಿಸಲಿಲ್ಲ. “ದೇವರೇ ನಿನ್ನನ್ನು ದೂಷಿಸಿದವರ ದೂಷಣೆಗಳು ನನ್ನ ಮೇಲೂ ಬಂದವು” ಎಂದು ಬರೆದಿದೆಯಲ್ಲಾ. ಈ ಮೊದಲು ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವುದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ, ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗಿರುವಂತೆ ಆ ಶಾಸ್ತ್ರಗಳು ಬರೆಯಲ್ಪಟ್ಟವು. ಆ ಸ್ಥಿರಚಿತ್ತವನ್ನೂ, ಆದರಣೆಯನ್ನೂ ಕೊಡುವ ದೇವರು ನೀವು ಕ್ರಿಸ್ತ ಯೇಸುವನ್ನು ಅನುಸರಿಸಿ ಒಂದೇ ಮನಸ್ಸುಳ್ಳವರಾಗಿರುವಂತೆ ನಿಮ್ಮನ್ನು ಆಶೀರ್ವದಿಸಲಿ. ಹೀಗೆ ನೀವು ಏಕಮನಸ್ಸಿನಿಂದ ಒಕ್ಕೊರಳಿನಿಂದ ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾದ ದೇವರನ್ನು ಕೊಂಡಾಡುವಿರಿ. ಆದ್ದರಿಂದ ಕ್ರಿಸ್ತನು ನಿಮ್ಮನ್ನು ಸೇರಿಸಿಕೊಂಡಂತೆ ನೀವು ಸಹ ಒಬ್ಬರನ್ನೊಬ್ಬರು ಸೇರಿಸಿಕೊಂಡು ದೇವರನ್ನು ಮಹಿಮೆಪಡಿಸಿರಿ.

ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತನ ಸಭೆಗಳಲ್ಲಿರುವವರೆಲ್ಲರೂ ನಿಮ್ಮನ್ನು ವಂದಿಸುತ್ತಿದ್ದಾರೆ.

ಪ್ರಿಯರೇ, ನೀವು ಹೊಂದಿದ ಉಪದೇಶಕ್ಕೆ ವಿರುದ್ಧವಾಗಿ ಭೇದಗಳನ್ನೂ, ವಿಘ್ನಗಳನ್ನೂ ನಿಮ್ಮಲ್ಲಿ ಉಂಟುಮಾಡುವವರನ್ನು ಗುರುತಿಸಿ ಅವರನ್ನು ಬಿಟ್ಟು ದೂರ ಹೋಗಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಅಂಥವರು ನಮ್ಮ ಕರ್ತನಾದ ಕ್ರಿಸ್ತನ ಸೇವೆಯನ್ನು ಮಾಡದೆ ತಮ್ಮ ಹೊಟ್ಟೆಯ ಸೇವೆಯನ್ನೇ ಮಾಡುವವರಾಗಿ ನಯದ ನುಡಿಗಳಿಂದಲೂ ಮತ್ತು ಹೊಗಳಿಕೆಯ ಮಾತುಗಳಿಂದಲೂ ನಿಷ್ಕಪಟಿಗಳ ಹೃದಯಗಳನ್ನು ಮೋಸಗೊಳಿಸುತ್ತಾರೆ.

ಆದರೆ ದೇವರ ವಾಕ್ಯಗಳಲ್ಲಿ ಬರೆದಿರುವ ಪ್ರಕಾರ, “ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಮಾಡಿರುವಂಥದೆಲ್ಲವನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಅದರ ಭಾವನೆಯು ಮನುಷ್ಯನ ಹೃದಯದಲ್ಲಿ ಹುಟ್ಟಲಿಲ್ಲ.”

ನಿಮ್ಮಲ್ಲಿ ವಿವಾದಗಳಿರುವುದಾದರೆ ನೀವು ಸೋತವರೆಂಬುದಕ್ಕೆ ಇದೇ ಗುರುತಾಗಿದೆ, ಅದಕ್ಕಿಂತ ಅನ್ಯಾಯವನ್ನು ಸಹಿಸುವುದೇ ಮೇಲು; ಮೋಸವನ್ನು ಅದರಿಂದಾದ ನಷ್ಟವನ್ನು ಯಾಕೆ ತಾಳಬಾರದು?

ನೀವು ಬರೆದು ಕಳುಹಿಸಿದ ವಿಷಯಗಳ ಬಗ್ಗೆ ನನ್ನ ಅಭಿಪ್ರಾಯವೇನೆಂದರೆ, ಸ್ತ್ರೀಯರ ಶರೀರ ಸಂಪರ್ಕವಿಲ್ಲದೆ ಇರುವುದು ಪುರುಷನಿಗೆ ಒಳ್ಳೆಯದು; ಆದರೆ ಜಾರತ್ವದ ಶೋಧನೆಗೆ ಅವಕಾಶ ಕೊಡದಿರಲು ಪ್ರತಿಯೊಬ್ಬನಿಗೂ ಸ್ವಂತ ಹೆಂಡತಿಯು ಇರಲಿ ಮತ್ತು ಪ್ರತಿಯೊಬ್ಬಳಿಗೆ ಸ್ವಂತ ಗಂಡನು ಇರಲಿ. ಗಂಡನು ಹೆಂಡತಿಗೆ, ಹಾಗೆಯೇ ಹೆಂಡತಿಯು ಗಂಡನಿಗೆ ಒಗೆತನವನ್ನು ಸಲ್ಲಿಸಲಿ ಹೆಂಡತಿಗೆ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ ಅದು ಗಂಡನಿಗುಂಟು. ಹಾಗೆಯೇ ಪುರುಷನಿಗೆ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ ಅದು ಹೆಂಡತಿಗುಂಟು. ಪ್ರಾರ್ಥನೆಗೆ ಸಮಯ ಕೊಡುವುದಕ್ಕಾಗಿ ನೀವು ಪರಸ್ಪರ ಸಮ್ಮತಿಯಿಂದ ಸ್ವಲ್ಪ ಕಾಲ ಅಗಲಿ ಇರಬಹುದೇ ಹೊರತು ಅನ್ಯತಾ ಹಾಗೆ ಮಾಡಬಾರದು. ಸೈತಾನನು ನಿಮಗೆ ಸ್ವಯಂ ನಿಯಂತ್ರಣವಿಲ್ಲದಿರುವುದನ್ನು ನೋಡಿ ನಿಮಗೆ ದುಷ್ಪ್ರೇರಣೆಗೆ ಎಡೆ ಮಾಡದಂತೆ ತಿರುಗಿ ಕೂಡಿಕೊಳ್ಳಿರಿ.

ನಾನು ಎಲ್ಲಾ ವಿಷಯಗಳಲ್ಲಿ ಸ್ವತಂತ್ರನಾಗಿದ್ದರೂ ಹೆಚ್ಚು ಜನರನ್ನು ಸಂಪಾದಿಸಿಕೊಳ್ಳಬೇಕೆಂದು ನಾನು ಎಲ್ಲರಿಗೂ ದಾಸನಾದೆನು.

ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೇ ಪರಹಿತವನ್ನು ಚಿಂತಿಸಲಿ.

ಯೆಹೂದ್ಯರಿಗಾಗಲಿ ಗ್ರೀಕರಿಗಾಗಲಿ ದೇವರ ಸಭೆಗಾಗಲಿ ವಿಘ್ನವಾಗಬೇಡಿರಿ. ನಾನಂತೂ ಸ್ವಪ್ರಯೋಜನಕ್ಕಾಗಿ ಚಿಂತಿಸದೇ ಮನುಷ್ಯರೆಲ್ಲರು ರಕ್ಷಣೆ ಹೊಂದಬೇಕೆಂದು ಅವರ ಪ್ರಯೋಜನಕ್ಕಾಗಿ ಚಿಂತಿಸಿ, ಎಲ್ಲರನ್ನು ಎಲ್ಲಾ ವಿಷಯಗಳಲ್ಲಿ ಮೆಚ್ಚಿಸುವವನಾಗಿದ್ದೇನೆ.

ಒಂದು ಅಂಗಕ್ಕೆ ನೋವಾದರೆ ಎಲ್ಲಾ ಅಂಗಗಳಿಗೂ ನೋವಾಗುತ್ತದೆ. ಒಂದು ಅಂಗ ಗೌರವಿಸಲ್ಪಟ್ಟರೆ ಎಲ್ಲಾ ಅಂಗಗಳಿಗೂ ಸಂತೋಷವಾಗುತ್ತದೆ.

ನಾನು ಮನುಷ್ಯರ ಭಾಷೆಗಳನ್ನೂ, ದೇವದೂತರ ಭಾಷೆಗಳನ್ನೂ ಮಾತನಾಡುವವನಾದರೂ ಪ್ರೀತಿಯಿಲ್ಲದವನಾಗಿದ್ದರೆ ನಾದಕೊಡುವ ಕಂಚಿನ ಜಾಗಟೆ, ಗಣಗಣಿಸುವ ಘಂಟೆ ಆಗಿದ್ದೇನೆ. ನನಗೆ ಪ್ರವಾದನ ವರವಿದ್ದರೂ, ಎಲ್ಲಾ ರಹಸ್ಯಗಳೂ, ಸಕಲ ವಿಧವಾದ ವಿದ್ಯೆಗಳನ್ನು ತಿಳಿದ್ದರೂ, ಬೆಟ್ಟಗಳನ್ನೂ ತೆಗೆದಿಡುವುಷ್ಟು ನಂಬಿಕೆಯಿದ್ದರೂ, ಪ್ರೀತಿಯಿಲ್ಲದವನಾಗಿದ್ದರೆ ನಾನು ಏನೂ ಅಲ್ಲದವನಾಗಿದ್ದೇನೆ. ನನಗಿರುವುದೆಲ್ಲವನ್ನು ಬಡವರಿಗೆ ಅನ್ನದಾನಮಾಡಿದರೂ, ನನ್ನ ದೇಹವನ್ನು ಸುಡುವುದಕ್ಕೆ ಒಪ್ಪಿಸಿದರೂ, ಪ್ರೀತಿಯು ನನಗಿಲ್ಲದಿದ್ದರೆ ನನಗೇನು ಪ್ರಯೋಜನವಿಲ್ಲ. ನಾನು ಬರಿದಾಗಿರುವನು. ಪ್ರೀತಿಯು ಬಹು ತಾಳ್ಮೆಯುಳ್ಳದ್ದು, ದಯೆಯುಳ್ಳದ್ದು. ಪ್ರೀತಿಯು ಹೊಟ್ಟೆಕಿಚ್ಚುಪಡುವುದಿಲ್ಲ, ಹೊಗಳಿಕೊಳ್ಳುವುದಿಲ್ಲ. ಅದು ಗರ್ವಪಡುವುದಿಲ್ಲ, ಅಸಭ್ಯವಾಗಿ ನಡೆಯುವುದಿಲ್ಲ. ಸ್ವಪ್ರಯೋಜನವನ್ನು ಚಿಂತಿಸುವುದಿಲ್ಲ. ಬೇಗ ಸಿಟ್ಟುಗೊಳ್ಳುವುದಿಲ್ಲ. ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಅನ್ಯಾಯದಲ್ಲಿ ಸಂತೋಷಪಡುವುದಿಲ್ಲ ಆದರೆ ಸತ್ಯದಲ್ಲಿ ಸಂತೋಷಪಡುತ್ತದೆ. ಎಲ್ಲವನ್ನು ತಾಳಿಕೊಳ್ಳುತ್ತದೆ. ಎಲ್ಲವನ್ನು ನಂಬುತ್ತದೆ. ಎಲ್ಲವನ್ನು ನಿರೀಕ್ಷಿಸುತ್ತದೆ. ಎಲ್ಲವನ್ನು ಸಹಿಸಿಕೊಳ್ಳುತ್ತದೆ. ಪ್ರೀತಿಯು ಎಂದಿಗೂ ನಿಂತುಹೋಗುವುದಿಲ್ಲ. ಪ್ರವಾದನೆಗಳಾದರೂ ಇಲ್ಲದಂತಾಗುವವು. ಅನ್ಯಭಾಷೆಗಳೋ ನಿಂತುಹೋಗುವವು. ತಿಳಿವಳಿಕೆಯೋ ಇಲ್ಲದಂತಾಗುವುದು.

ಹೀಗಿರುವುದರಿಂದ, ನಂಬಿಕೆ, ನಿರೀಕ್ಷೆ, ಪ್ರೀತಿ ಈ ಮೂರೇ ನಿಲ್ಲುತ್ತದೆ. ಇವುಗಳಲ್ಲಿ ದೊಡ್ಡದು ಪ್ರೀತಿಯೇ.

ಪ್ರತಿನಿತ್ಯ ಪ್ರೀತಿಯಿಂದ ಜೀವಿಸಲು ಆಶಿಸಿರಿ ಮತ್ತು ಪವಿತ್ರಾತ್ಮನಿಂದುಂಟಾಗುವ ವರಗಳನ್ನು, ಅದರೊಳಗೂ ವಿಶೇಷವಾಗಿ ಪ್ರವಾದನಾ ವರವನ್ನೇ ಆಸಕ್ತಿಯಿಂದ ಅಪೇಕ್ಷಿಸಿರಿ.

ನೀವು ಮಾಡುವುದನ್ನೆಲ್ಲಾ ಪ್ರೀತಿಯಿಂದ ಮಾಡಿರಿ.

ಯಾಕೆಂದರೆ ಕ್ರಿಸ್ತನ ಪ್ರೀತಿಯು ನಮ್ಮನ್ನು ಒತ್ತಾಯಪಡಿಸುತ್ತದೆ; ಎಲ್ಲರಿಗೋಸ್ಕರ ಒಬ್ಬನು ಸತ್ತಮೇಲೆ ಎಲ್ಲರೂ ಸತ್ತಂತಾಯಿತೆಂದು ನಿಶ್ಚಯಿಸಿಕೊಂಡಿದ್ದೇವೆ. ಕ್ರಿಸ್ತನು ಎಲ್ಲರಿಗೋಸ್ಕರ ಸತ್ತದ್ದರಿಂದಾಗಿ ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೇ ತಮಗೋಸ್ಕರ ಸತ್ತು ಎದ್ದು ಬಂದಾತನಿಗಾಗಿ ಜೀವಿಸಬೇಕು.

ಬದಲಾಗಿ, ಎಲ್ಲಾ ವಿಷಯಗಳಲ್ಲಿ ದೇವರ ಸೇವಕರೆಂದು ನಮ್ಮ ಸೇವೆಯನ್ನು ಸಮ್ಮತ ಮಾಡಿಕೊಂಡು, ನಾವು ಸಂಕಟದಲ್ಲಿಯೂ, ಕೊರತೆಗಳಲ್ಲಿಯೂ, ಇಕ್ಕಟ್ಟುಗಳಲ್ಲಿಯೂ, ಪೆಟ್ಟುಗಳಲ್ಲಿಯೂ, ದೊಂಬಿ, ಕಲಹ, ಸೆರೆಮನೆ, ಶಿಕ್ಷೆ ಇವುಗಳನ್ನು ಅನುಭವಿಸಿದ್ದೇವೆ. ಮೈಮುರಿದು ಕೆಲಸ ಮಾಡಿದ್ದೇವೆ. ನಿದ್ದೆಗೆಟ್ಟು ಬಳಲಿದ್ದೇವೆ; ಹಸಿವಿನಲ್ಲಿ ಸೊರಗಿದ್ದೇವೆ; ಈ ಎಲ್ಲಾ ವಿಷಯಗಳಲ್ಲಿ ಬಹು ಸಮಾಧಾನವನ್ನು ತೋರಿಸಿದ್ದೇವೆ. ಶುದ್ಧಮನಸ್ಸು, ಜ್ಞಾನ, ದೀರ್ಘಶಾಂತಿ, ದಯೆ, ಪವಿತ್ರಾತ್ಮ, ನಿಷ್ಕಪಟವಾದ ಪ್ರೀತಿ, ಸತ್ಯವಾಕ್ಯ, ದೇವರ ಮಹತ್ವ ಇವುಗಳಿಂದ ಕೂಡಿದವರಾಗಿ, ಎಡಬಲಗೈಗಳಲ್ಲಿ ನೀತಿಯೆಂಬ ಆಯುಧಗಳನ್ನು ಧರಿಸಿಕೊಂಡಿದ್ದೇವೆ. ನಾವು ಮಾನ ಮತ್ತು ಅವಮಾನ, ಕೀರ್ತಿ ಮತ್ತು ಅಪಕೀರ್ತಿಗಳಲ್ಲಿಯೂ ಸೇವೆಮಾಡಿದ್ದೇವೆ. ಸತ್ಯವಂತರಾದರೂ ಮೋಸಗಾರರೆನಿಸಿಕೊಂಡಿದ್ದೇವೆ. ನಾವು ಪ್ರಸಿದ್ಧರಾಗಿದ್ದರೂ ಅಪರಿಚಿತರೆನ್ನಿಸಿಕೊಂಡು ಸೇವೆ ಮಾಡಿದ್ದೇವೆ. ಸಾಯುವವರಾಗಿ ತೋರಿದರೂ, ಬದುಕಿದ್ದೇವೆ! ನೋಡಿ, ಶಿಕ್ಷೆಗೆ ಗುರಿಯಾದರೂ ಕೊಲ್ಲಲ್ಪಡದವರಾಗಿದ್ದೇವೆ, ದುಃಖಪಡುವವರಾಗಿದ್ದರೂ ಸೇವೆಯಲ್ಲಿ ಯಾವಾಗಲೂ ಸಂತೋಷಪಡುತ್ತೇವೆ, ಬಡವರಾಗಿದ್ದರೂ ಅನೇಕರನ್ನು ಐಶ್ವರ್ಯವಂತರಾಗಿ ಮಾಡಿದ್ದೇವೆ; ಏನೂ ಇಲ್ಲದವರಾಗಿದ್ದರೂ ಎಲ್ಲಾ ಹೊಂದಿದವರಾಗಿದ್ದೇವೆ.

ಆ ಸಭೆಗಳವರಿಗೆ ಬಹಳ ಸಂಕಷ್ಟಗಳು ಬಂದರೂ ತಮ್ಮ ವಿಪರೀತವಾದ ಬಡತನದಲ್ಲಿದ್ದರೂ ಬಹು ಆನಂದದಿಂದ ತುಂಬಿದವರಾಗಿ ಅತ್ಯಂತ ಔದಾರ್ಯವುಳ್ಳವರಾದರು. ಅವರು ತಮ್ಮ ಶಕ್ತಿಯನುಸಾರವಾಗಿ ಮಾತ್ರ ಕೊಡದೆ ಶಕ್ತಿಯನ್ನು ಮೀರಿ ತಮ್ಮಿಷ್ಟಕ್ಕೆ ತಾವೇ ಉದಾರವಾಗಿ ದಾನಮಾಡಿದರು. ಇದಕ್ಕೆ ನಾನೇ ಸಾಕ್ಷಿ. ದೇವಜನರಿಗೆ ಸಹಾಯ ಮಾಡುವ ಕೆಲಸದಲ್ಲಿ ತಾವು ಪಾಲುಗಾರರಾಗಲು ಅಪ್ಪಣೆಯಾಗುವಂತೆ ನಮ್ಮನ್ನು ಬಹಳವಾಗಿ ಬೇಡಿಕೊಂಡರು. ನಾವು ಇದನ್ನು ನಿರೀಕ್ಷಿಸದ ರೀತಿಯಲ್ಲಿ ಅವರು ಕೊಡದೆ, ಮೊದಲು ತಮ್ಮನ್ನೇ ಕರ್ತನಿಗೆ ಒಪ್ಪಿಸಿಕೊಟ್ಟರು; ಅನಂತರ ದೇವರ ಚಿತ್ತಾನುಸಾರವಾಗಿ ನಮಗೂ ತಮ್ಮನ್ನು ಒಪ್ಪಿಸಿದರು.

ನೀವು ದೇವರ ಮೇಲಣ ನಂಬಿಕೆಯಲ್ಲಿ, ವಾಕ್ಚಾತುರ್ಯದಲ್ಲಿ, ಜ್ಞಾನದಲ್ಲಿ, ಸಕಲ ವಿಧವಾದ ಆಸಕ್ತಿಯಲ್ಲಿ ಮತ್ತು ನಮ್ಮ ಪ್ರೇರಣೆಯಿಂದ ನಿಮ್ಮಲ್ಲಿ ಹುಟ್ಟಿದ ಪ್ರೀತಿಯಲ್ಲಿ ಹೇಗೆ ಸಮೃದ್ಧರಾಗಿದ್ದೀರೋ ಹಾಗೆಯೇ ಈ ಧರ್ಮಕಾರ್ಯದಲ್ಲಿಯೂ ಸಮೃದ್ಧರಾಗಿ ಮುಂದುವರೆಯಿರಿ. ಇದನ್ನು ಆಜ್ಞಾರೂಪವಾಗಿ ಹೇಳುತ್ತಿಲ್ಲ ಆದರೆ ಇತರರ ಆಸಕ್ತಿಗೆ ಹೋಲಿಸಿ ನಿಮ್ಮ ಪ್ರೀತಿಯು ಎಷ್ಟು ಯಥಾರ್ಥವಾದದ್ದೆಂಬುದನ್ನು ಸಾಬೀತು ಮಾಡಬೇಕೆಂದು ಹೇಳುತ್ತೇನೆ. ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮಗೆ ಗೊತ್ತಾಗಿದೆಯಲ್ಲಾ; ಆತನು ಐಶ್ವರ್ಯವಂತನಾಗಿದ್ದರೂ ತನ್ನ ಬಡತನದ ಮುಖಾಂತರ ನೀವು ಐಶ್ವರ್ಯವಂತರಾಗಬೇಕೆಂದು ನಿಮಗೋಸ್ಕರ ಆತನು ಬಡವನಾದನು.

ಒಬ್ಬನು ಕೊಡುವಂತ ಮನಸ್ಸುಳ್ಳವನಾಗಿರುವಲ್ಲಿ ಅವನು ತನ್ನ ಯೋಗ್ಯತೆಗೆ ಅನುಸಾರವಾಗಿ ಕೊಟ್ಟರೆ ಅದು ಸಮರ್ಪಕವಾಗಿರುವುದು; ಅವನಿಗೆ ದೇವರಿಂದ ಮೆಚ್ಚಿಕೆ ದೊರೆಯುವುದು.

ಆದಕಾರಣ ಇವರನ್ನು ಪ್ರೀತಿಯಿಂದ ನೋಡಿಕೊಳ್ಳಿ. ನಾವು ನಿಮ್ಮನ್ನು ಹೊಗಳಿದ್ದಕ್ಕೆ ತಕ್ಕಂತೆ ನಡೆದುಕೊಂಡು ಸಭೆಗಳಿಗೆ ನಿಮ್ಮ ಯೋಗ್ಯತೆಯನ್ನು ಮನದಟ್ಟು ಮಾಡಿಕೊಡಿರಿ.

ಪ್ರತಿಯೊಬ್ಬನೂ ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲವಂತದಿಂದಾಗಲಿ ಯಾರೂ ಕೊಡಬಾರದು; ಯಾಕೆಂದರೆ ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿಸುವನು.

ಪೌಲನು ನಮ್ಮೆದುರಿನಲ್ಲಿರುವಾಗ ದೀನನಾಗಿ ನಡೆದುಕೊಳ್ಳುವನೂ ದೂರದಲ್ಲಿರುವಾಗ ನಮ್ಮನ್ನು ಕುರಿತು ದಿಟ್ಟತನ ತೋರಿಸುವವನೂ ಆಗಿದ್ದಾನೆ ಎಂದು ಹೇಳಲ್ಪಡುವ ಆ ಪೌಲನೆಂಬ ನಾನು ಕ್ರಿಸ್ತನ ಶಾಂತ ಮನಸ್ಸನ್ನೂ ಸಾತ್ವಿಕತ್ವವನ್ನೂ ನೆನಪಿಗೆ ತಂದುಕೊಂಡು ನಿಮಗೆ ಖಂಡಿತವಾಗಿ ಹೇಳುವುದೇನಂದರೆ,

ಆದ್ದರಿಂದ ಕ್ರಿಸ್ತನ ನಿಮಿತ್ತ ನನಗೆ ಬಲಹೀನತೆಯಲ್ಲಿಯೂ, ತಿರಸ್ಕಾರದಲ್ಲಿಯೂ, ಕೊರತೆಯಲ್ಲಿಯೂ, ಹಿಂಸೆಯಲ್ಲಿಯೂ ಮತ್ತು ಇಕ್ಕಟ್ಟೂ ಸಂಭವಿಸಿದಾಗಲೂ ಸಂತುಷ್ಟನಾಗಿದ್ದೇನೆ. ಯಾಕೆಂದರೆ ನಾನು ಯಾವಾಗ ದುರ್ಬಲನಾಗಿರುವೆನೋ, ಆವಾಗಲೇ ಬಲವುಳ್ಳವನೂ ಆಗಿರುತ್ತೇನೆ.

ಕಡೆಯದಾಗಿ ಸಹೋದರರೇ, ಸಂತೋಷಪಡಿರಿ! ಕ್ರಮಪಡಿಸಿಕೊಳ್ಳಿರಿ. ಧೈರ್ಯವುಳ್ಳವರಾಗಿರಿ, ಏಕ ಮನಸ್ಸುಳ್ಳವರಾಗಿರಿ, ಸಮಾಧಾನದಿಂದ ಇರಿ; ಆಗ ಪ್ರೀತಿಸ್ವರೂಪನೂ, ಶಾಂತಿದಾಯಕನೂ ಆದ ದೇವರು ನಿಮ್ಮ ಸಂಗಡ ಇರುವನು. ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ.

ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯೂ, ದೇವರ ಪ್ರೀತಿಯೂ, ಪವಿತ್ರಾತ್ಮನ ಅನ್ಯೋನ್ಯತೆಯೂ ನಿಮ್ಮೆಲ್ಲರ ಸಂಗಡವಿರಲಿ.

ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವುದರಿಂದ ಯೆಹೂದ್ಯನು ಅಥವಾ ಗ್ರೀಕನು ಎಂದಾಗಲೀ, ಆಳು ಅಥವಾ ಒಡೆಯ ಎಂದಾಗಲೀ, ಗಂಡು ಹಾಗೂ ಹೆಣ್ಣು ಎಂದಾಗಲೀ ಭೇದವಿಲ್ಲ.

ಕ್ರಿಸ್ತ ಯೇಸುವಿನಲ್ಲಿರುವವರಿಗೆ ಸುನ್ನತಿಯಾದರೂ ಆಗದಿದ್ದರೂ ಪ್ರಯೋಜನವಿಲ್ಲ, ಆದರೆ ಅವರಲ್ಲಿ ಪ್ರೀತಿಯಿಂದ ಹೊರಹೊಮ್ಮುವ ನಂಬಿಕೆಯೇ ಪ್ರಯೋಜನವಾಗಿದೆ.

ಸಹೋದರರೇ, ನೀವು ಸ್ವತಂತ್ರರಾಗಿರಬೇಕೆಂದು ದೇವರು ನಿಮ್ಮನ್ನು ಕರೆದನು. ಆದರೆ ನಿಮಗಿರುವ ಸ್ವಾತಂತ್ರ್ಯವನ್ನು ಶರೀರಾಧೀನ ಸ್ವಭಾವಕ್ಕೆ ಆಸ್ಪದವಾಗಿ ಬಳಸದೆ, ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆ ಮಾಡಿರಿ. “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು” ಎಂಬ ಒಂದೇ ಮಾತಿನಲ್ಲಿ ಧರ್ಮಶಾಸ್ತ್ರವೆಲ್ಲಾ ಅಡಗಿದೆ. ಆದರೆ ನೀವು ಒಬ್ಬರನ್ನೊಬ್ಬರು ಕಚ್ಚಾಡಿ, ಹರಕೊಂಡು, ತಿನ್ನುವವರಾದರೆ ಒಬ್ಬರಿಂದೊಬ್ಬರು ನಾಶವಾದೀರಿ, ಎಚ್ಚರಿಕೆ.

ಶರೀರಭಾವದ ಸ್ವಭಾವಗಳು ಪ್ರತ್ಯಕ್ಷವಾಗಿಯೇ ಇವೆ, ಅದು ಯಾವುವೆಂದರೆ, ಜಾರತ್ವ, ಬಂಡುತನ, ನಾಚಿಕೆಗೇಡಿತನ, ವಿಗ್ರಹಾರಾಧನೆ, ಮಾಟ, ಹಗೆತನ, ಜಗಳ, ಹೊಟ್ಟೆಕಿಚ್ಚು, ಸಿಟ್ಟು, ಪಕ್ಷಪಾತ, ಭಿನ್ನಮತ, ಮತ್ಸರ, ಕುಡುಕುತನ, ಗಲಭೆ, ಢಂಭಾಚಾರ ಇಂಥವುಗಳೇ. ಇಂಥ ಕಾರ್ಯಗಳನ್ನು ನಡಿಸುವವರು ದೇವರ ರಾಜ್ಯಕ್ಕೆ ಬಾಧ್ಯಸ್ಥರಾಗುವುದಿಲ್ಲವೆಂದು ನಾನು ಈ ಮೊದಲು ಹೇಳಿದಂತೆಯೇ ಈಗಲೂ ನಿಮ್ಮನ್ನು ಎಚ್ಚರಿಸುತ್ತೇನೆ.

ಆದರೆ ದೇವರಾತ್ಮನಿಂದ ಉಂಟಾಗುವ ಫಲವೇನಂದರೆ, ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಪರೋಪಕಾರ, ನಂಬಿಕೆ, ಸಾಧುತ್ವ, ಶಮೆದಮೆ ಇಂಥವುಗಳೇ. ಇವುಗಳಿಗೆ ವಿರುದ್ಧವಾಗಿ ಯಾವ ಧರ್ಮಶಾಸ್ತ್ರವೂ ಇಲ್ಲ.

ಸಹೋದರರೇ, ನಿಮ್ಮಲ್ಲಿ ಯಾರಾದರೂ ಯಾವುದಾದರೂ ಪಾಪದಲ್ಲಿ ಸಿಕ್ಕಿಹಾಕಿಕೊಂಡಿದ್ದರೆ ಅಂಥವರನ್ನು ಆತ್ಮಭರಿತರಾದ ನೀವು ಶಾಂತಭಾವದಿಂದ ತಿದ್ದಿ ಸರಿಮಾಡಿರಿ. ನೀವಾದರೂ ಶೋಧನೆಗೆ ಒಳಗಾಗದಂತೆ ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಒಬ್ಬರು ಮತ್ತೊಬ್ಬರ ಭಾರವನ್ನು ಹೊತ್ತುಕೊಳ್ಳಲಿ, ಹೀಗೆ ಕ್ರಿಸ್ತನ ನೀತಿನಿಯಮಗಳನ್ನು ನೆರವೇರಿಸಿರಿ.

ಯಾವನಾದರೂ ಅಲ್ಪನಾಗಿದ್ದು ತಾನು ದೊಡ್ಡವನೆಂದು ಭಾವಿಸಿಕೊಂಡರೆ ತನ್ನನ್ನು ತಾನೇ ಮೋಸಗೊಳಿಸಿಕೊಳ್ಳುವನಾಗಿದ್ದಾನೆ. ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರೀಕ್ಷಿಸಿಕೊಳ್ಳಲಿ. ಆಗ ಅವನು ತನ್ನ ನಿಮಿತ್ತದಿಂದ ಹೆಚ್ಚಳಪಡಬಹುದೇ ಹೊರತು ಮತ್ತೊಬ್ಬನೊಂದಿಗೆ ಹೋಲಿಸಿಕೊಂಡು ಹೆಚ್ಚಳಪಡಬೇಕಾಗಿರುವುದಿಲ್ಲ.

ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳದೇ ಇರೋಣ. ಏಕೆಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು. ಆದ್ದರಿಂದ ಅವಕಾಶ ಸಿಕ್ಕಿದಾಗಲೆಲ್ಲಾ ಎಲ್ಲರಿಗೂ ಒಳ್ಳೆಯದನ್ನು ಮಾಡೋಣ, ವಿಶೇಷವಾಗಿ ಒಂದೇ ಮನೆಯವರಂತಿರುವ ಕ್ರೈಸ್ತ ವಿಶ್ವಾಸಿಗಳಿಗೆ ಮಾಡೋಣ.

ನಾವು ಆತನ ಸನ್ನಿಧಿಯಲ್ಲಿ ಪರಿಶುದ್ಧರೂ ದೋಷವಿಲ್ಲದವರೂ ಆಗಿರಬೇಕೆಂದು, ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ದೇವರು ಕ್ರಿಸ್ತನಲ್ಲಿ ನಮ್ಮನ್ನು ಆರಿಸಿಕೊಂಡನು.

ಹೀಗಿರಲಾಗಿ ಕರ್ತನಾದ ಯೇಸುವಿನಲ್ಲಿ ನೀವು ಇಟ್ಟಿರುವ ನಂಬಿಕೆಯನ್ನು ಮತ್ತು ದೇವಜನರೆಲ್ಲರಿಗೆ ನೀವು ತೋರಿಸುವ ಪ್ರೀತಿಯ ವಿಷಯವನ್ನು ಕೇಳಿ, ನಾನು ನಿಮಗೋಸ್ಕರ ನನ್ನ ಪ್ರಾರ್ಥನೆಗಳಲ್ಲಿ ವಿಜ್ಞಾಪನೆ ಮಾಡುವಾಗ ದೇವರಿಗೆ ಎಡೆಬಿಡದೆ ಸ್ತೋತ್ರ ಮಾಡುತ್ತೇನೆ.

ಆದರೆ ಕರುಣಾನಿಧಿಯಾಗಿರುವ ದೇವರು ನಮ್ಮನ್ನು ಪ್ರೀತಿಸಿದ ಮಹಾ ಪ್ರೀತಿಯ ನಿಮಿತ್ತ, ಅಪರಾಧಗಳ ದೆಸೆಯಿಂದ ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ.

ನಾವಾದರೋ ದೇವರ ಕಲಾಕೃತಿಯಾಗಿದ್ದೇವೆ, ದೇವರು ಮೊದಲೇ ನಮಗಾಗಿ ಸಂಕಲ್ಪಿಸಿದ್ದ ಸತ್ಕಾರ್ಯಗಳನ್ನು ಮಾಡುವವರಾಗಿ ಬದುಕಬೇಕೆಂದು ಯೇಸು ಕ್ರಿಸ್ತನಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ.

ಕ್ರಿಸ್ತನು ನಿಮ್ಮ ನಂಬಿಕೆಯ ಮೂಲಕ ನಿಮ್ಮ ಹೃದಯಗಳಲ್ಲಿ ವಾಸಮಾಡುವಂತೆಯೂ, ಆತನು ತನ್ನ ಮಹಿಮಾತಿಶಯದ ಪ್ರಕಾರ ಅನುಗ್ರಹಿಸಲಿ. ನೀವು ದೇವರ ಪ್ರೀತಿಯಲ್ಲಿ ನೆಲೆಯಾಗಿ ನಿಂತು, ದೇವಜನರೆಲ್ಲರೊಂದಿಗೆ ಅದರ ಅಗಲ, ಉದ್ದ, ಎತ್ತರ, ಆಳ ಎಷ್ಟೆಂಬುದನ್ನು ಗ್ರಹಿಸುವುದಕ್ಕೆ ಶಕ್ತರಾಗುವಂತೆಯೂ, ಬುದ್ಧಿಗಿಂತಲೂ ಮಿಗಿಲಾಗಿರುವ ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಂಡು, ದೇವರ ಸಂಪೂರ್ಣತೆಯ ಮಟ್ಟಿಗೂ ಪರಿಪೂರ್ಣರಾಗುವ ಹಾಗೆ ದೇವರು ನಿಮಗೆ ದಯಪಾಲಿಸಲಿ ಎಂದು ಆತನನ್ನು ಬೇಡಿಕೊಳ್ಳುತ್ತೇನೆ.

ನೀವು ದೇವರಿಂದ ಕರೆಯಲ್ಪಟ್ಟವರಾದ ಕಾರಣ ಆ ಕರೆಗೆ ಯೋಗ್ಯರಾಗಿ ಜೀವಿಸಬೇಕೆಂದು, ಕರ್ತನ ಸೇವೆಯಲ್ಲಿ ಸೆರೆಯವನಾದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನೀವು ಪೂರ್ಣ ವಿನಯ, ಸಾತ್ವಿಕತ್ವಗಳಿಂದಲೂ ದೀರ್ಘಶಾಂತಿಯಿಂದಲೂ ಕೂಡಿದವರಾಗಿ, ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಸಕ್ತರಾಗಿರಿ.

ಕಳವು ಮಾಡುವವನು ಇನ್ನು ಮುಂದೆ ಕಳವು ಮಾಡದೇ ಸ್ವಂತ ಕೈಯಿಂದ ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ. ಆಗ ಕೊರತೆಯಲ್ಲಿರುವವರಿಗೆ ಕೊಡುವುದಕ್ಕೆ ಅವನಿಂದಾಗುವದು. ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತು ಹೊರಡಬಾರದು. ಭಕ್ತಿಯನ್ನು ವೃದ್ಧಿ ಮಾಡುವಂತಹ ಸಮಯೋಚಿತವಾದ ಮಾತನ್ನು ಆಡಿದರೆ ಕೇಳುವವರಿಗೆ ಹಿತವಾಗಿ ತೋರುವುದು. ದೇವರ ಪವಿತ್ರಾತ್ಮನನ್ನು ದುಃಖಪಡಿಸಬೇಡಿರಿ. ಆತನಲ್ಲಿಯೇ ವಿಮೋಚನೆಯ ದಿನಕ್ಕಾಗಿ ಮುದ್ರೆ ಹೊಂದಿದ್ದೀರಲ್ಲಾ. ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನಗಳನ್ನೂ ನಿಮ್ಮಿಂದ ದೂರ ಮಾಡಿರಿ. ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ, ಕರುಣೆಯುಳ್ಳವರಾಗಿಯೂ ಇರಿ. ದೇವರು ನಿಮ್ಮನ್ನು ಕ್ರಿಸ್ತನಲ್ಲಿ ಕ್ಷಮಿಸಿದಂತೆ ನೀವು ಒಬ್ಬರನ್ನೊಬ್ಬರು ಕ್ಷಮಿಸಿರಿ.

ಆದುದರಿಂದ ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ. ಕ್ರಿಸ್ತನು ನಮ್ಮನ್ನು ಪ್ರೀತಿಸಿ ನಮ್ಮೆಲ್ಲರಿಗೋಸ್ಕರ ತನ್ನನ್ನೇ ದೇವರಿಗೆ ಸುವಾಸನೆಯಾದ ಕಾಣಿಕೆಯಾಗಿಯೂ, ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.

ಕ್ರಿಸ್ತನಿಗೆ ಭಯಪಡುವವರಾಗಿದ್ದು, ಒಬ್ಬರಿಗೊಬ್ಬರು ವಿನಯವುಳ್ಳವರಾಗಿ ನಡೆದುಕೊಳ್ಳಿರಿ.

ಪತಿಯರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ.

ಹಾಗೆಯೇ ಗಂಡದಿರು ಸಹ ತಮ್ಮ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ. ಯಾರೂ ಎಂದೂ ಸ್ವಂತ ಶರೀರವನ್ನು ಹಗೆಮಾಡಿದ್ದಿಲ್ಲವಲ್ಲ, ಎಲ್ಲರೂ ತಮ್ಮ ಶರೀರಗಳನ್ನು ಪೋಷಿಸಿ ಪಾಲನೆ ಮಾಡುತ್ತಾರಷ್ಟೇ. ಸಭೆಯೆಂಬ ದೇಹಕ್ಕೆ ನಾವು ಅಂಗಗಳಾಗಿದ್ದೇವೆ ಸಭೆಯೆಂಬ ಈ ದೇಹವನ್ನು ಕ್ರಿಸ್ತನು ಹಾಗೆಯೇ ಪೋಷಿಸಿ ಪಾಲನೆ ಮಾಡುತ್ತಾ ಬಂದಿದ್ದಾನೆ.

“ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು, ಅವರಿಬ್ಬರೂ ಒಂದೇ ಶರೀರವಾಗಿರುವರು.” ಎಂದು ಬರೆದದೆಯಲ್ಲಾ. ನಾನು ಕ್ರಿಸ್ತನಿಗೂ ಸಭೆಗೂ ಇರುವ ಸಂಬಂಧವನ್ನು ಕುರಿತು ಮಾತನಾಡುತ್ತಿದ್ದೇನೆ, ಇದುವರೆಗೆ ಗುಪ್ತವಾಗಿದ್ದ ಈ ಮರ್ಮವು ಬಹು ಗಂಭೀರವಾದದ್ದು. ಆದರೆ ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು. ಪ್ರತಿ ಹೆಂಡತಿಯೂ ತನ್ನ ಗಂಡನಿಗೆ ಗೌರವದಿಂದ ನಡೆದುಕೊಳ್ಳಬೇಕು.

ಮಕ್ಕಳೇ, ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ವಿಧೇಯರಾಗಿರಿ. ಇದು ನ್ಯಾಯವಾದದ್ದು. ವಾಗ್ದಾನಸಹಿತವಾದ ಮೊದಲನೆಯ ಆಜ್ಞೆಯನ್ನು ಕೇಳಿರಿ, “ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು, ಗೌರವಿಸಿದರೆ ನಿನಗೆ ಶುಭವಾಗುವುದು, ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ.” ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ, ಕರ್ತನಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ಅವರನ್ನು ಶಿಸ್ತಿನಲ್ಲಿಯೂ ಉಪದೇಶದಲ್ಲಿಯೂ ಸಾಕಿ ಸಲಹಿರಿ. ದಾಸರೇ, ಈ ಲೋಕದಲ್ಲಿ ನಿಮಗೆ ಯಜಮಾನರಾಗಿರುವವರಿಗೆ ಕ್ರಿಸ್ತನಿಗೆ ವಿಧೇಯರಾಗುವ ಹಾಗೆಯೇ ಮನೋಭೀತಿಯಿಂದ ನಡುಗುವವರಾಗಿಯೂ ಸರಳಹೃದಯರಾಗಿಯೂ ವಿಧೇಯರಾಗಿರಿ.

ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ಶಾಂತಿಯೂ, ನಂಬಿಕೆಯಿಂದ ಕೂಡಿದ ಪ್ರೀತಿಯೂ ಸಹೋದರರೆಲ್ಲರಿಗೆ ಉಂಟಾಗಲಿ. ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ನಿರಂತರವಾಗಿ ಪ್ರೀತಿಸುವವರೆಲ್ಲರ ಮೇಲೆ ದೇವರ ಕೃಪೆಯು ಇರಲಿ.

ಕ್ರಿಸ್ತ ಯೇಸುವಿಗಿರುವಂಥ ಕನಿಕರದಿಂದ ನಿಮ್ಮೆಲ್ಲರಿಗೋಸ್ಕರ ಎಷ್ಟೋ ಹಂಬಲಿಸುತ್ತೇನೆ. ಇದಕ್ಕೆ ದೇವರೇ ಸಾಕ್ಷಿ. ಮತ್ತು ನಿಮ್ಮ ಪ್ರೀತಿಯು ಇನ್ನೂ ಅಧಿಕವಾಗಿ ಹೆಚ್ಚುತ್ತಾ ಪೂರ್ಣ ಜ್ಞಾನ ವಿವೇಕಗಳಿಂದ ಕೂಡಿರಬೇಕೆಂದು ನಾನು ನಿಮಗೋಸ್ಕರ ಪ್ರಾರ್ಥಿಸುತ್ತೇನೆ. ಹೀಗೆ ಉತ್ತಮ ಕಾರ್ಯಗಳು ಯಾವವೆಂಬುದನ್ನು ನೀವು ವಿವೇಚಿಸುವವರಾಗಬೇಕೆಂತಲೂ ಹಾಗೂ ಕ್ರಿಸ್ತನು ಬರುವ ದಿನದಲ್ಲಿ ನೀವು ಸರಳರಾಗಿಯೂ, ನಿರ್ಮಲರಾಗಿಯೂ,

ಕ್ರಿಸ್ತನಿಂದ ಪ್ರೋತ್ಸಾಹ, ಪ್ರೀತಿಯ ಸಾಂತ್ವನ, ಪವಿತ್ರಾತ್ಮನ ಅನ್ಯೋನ್ಯತೆ, ಕಾರುಣ್ಯದಯಾರಸಗಳು ಉಂಟಾಗುವುದಾದರೆ, ನೀವೆಲ್ಲರು ಒಂದೇ ಮನಸ್ಸುವುಳ್ಳವರಾಗಿ, ಒಂದೇ ಪ್ರೀತಿಯುಳ್ಳವರಾಗಿ, ಅನ್ಯೋನ್ಯಭಾವವುಳ್ಳವರಾಗಿ ಹಾಗೂ ಒಂದೇ ಗುರಿಯಿಟ್ಟುಕೊಂಡವರಾಗಿ ನನ್ನ ಸಂತೋಷವನ್ನು ಪರಿಪೂರ್ಣಮಾಡಿರಿ. ಸ್ವಾರ್ಥದಿಂದಾಗಲಿ, ಒಣ ಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ, ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ. ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ.

ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ. ಆತನು ದೇವಸ್ವರೂಪನಾಗಿದ್ದರೂ, ದೇವರಿಗೆ ಸರಿಸಮಾನನಾಗಿರುವನೆಂಬ ಅಮೂಲ್ಯ ಪದವಿಯನ್ನು ಬಿಡಲೊಲ್ಲೆನು ಎಂದೆಣಿಸದೆ, ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸಮನಾದನು. ಮನುಷ್ಯನಾಕಾರದಲ್ಲಿ ಕಾಣಿಸಿಕೊಂಡನು. ಆತನು ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.

ಹೀಗಿರಲಾಗಿ, ನನ್ನ ಸಹೋದರರೇ ಅತಿ ಪ್ರಿಯರೇ, ಹಾಗೂ ಆಪ್ತರೇ, ನನಗೆ ಸಂತೋಷವೂ ಕಿರೀಟವೂ ಆಗಿರುವವರೇ, ನಾನು ಹೇಳಿದಂತೆ ಕರ್ತನಲ್ಲಿ ದೃಢವಾಗಿ ನಿಲ್ಲಿರಿ, ಪ್ರಿಯರೇ.

ನಿಮಗೋಸ್ಕರ ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮ ನಿಮಿತ್ತವಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾಗಿರುವ ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ. ನೀವು ಕ್ರಿಸ್ತ ಯೇಸುವಿನಲ್ಲಿ ಇಟ್ಟಿರುವ ನಂಬಿಕೆ ಹಾಗು ದೇವಜನರೆಲ್ಲರಲ್ಲಿ ನೀವು ಇಟ್ಟಿರುವ ಪ್ರೀತಿಯ ಬಗ್ಗೆ ನಾವು ಕೇಳಿದ್ದೇವೆ.

ನಾನು ಈಗ ನಿಮಗೋಸ್ಕರ ಅನುಭವಿಸುತ್ತಿರುವ ಬಾಧೆಗಳಲ್ಲಿ ನನಗೆ ಸಂತೋಷವಿದೆ. ಕ್ರಿಸ್ತನ ಯಾತನೆಗಳಲ್ಲಿ ಕೊರತೆಯಾಗಿರುವುದನ್ನು ಆತನ ಸಭೆಯೆಂಬ ದೇಹಕೋಸ್ಕರ ನಾನು ನನ್ನ ದೇಹದಲ್ಲಿ ಅನುಭವಿಸಿ ತೀರಿಸುತ್ತೇನೆ.

ಅವರ ಹೃದಯಗಳು ಉತ್ತೇಜನಗೊಂಡು, ಪ್ರೀತಿಯಿಂದ ಒಂದಾಗಿದ್ದು, ದೇವರ ಮರ್ಮವನ್ನು ಅಂದರೆ ಕ್ರಿಸ್ತನನ್ನು ತಿಳಿದುಕೊಳ್ಳುವ ಮೂಲಕ ಬರುವ ನಿಶ್ಚಯವಾದ ಭಾಗ್ಯವನ್ನು ಪಡೆಯಬೇಕೆಂಬುದೇ ನನ್ನ ಅಪೇಕ್ಷೆ. ಅದಕ್ಕಾಗಿಯೇ ನಾನು ಎಷ್ಟು ಪ್ರಯಾಸಪಡುತ್ತಿದ್ದೇನೆಂಬುದು ನಿಮಗೆ ತಿಳಿದಿರಬೇಕೆಂದು ಬಯಸುತ್ತೇನೆ.

ಆದರೆ ಈಗಲಾದರೋ ಕ್ರೋಧ, ಕೋಪ, ಮತ್ಸರ, ದೂಷಣೆ ಮತ್ತು ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ಬಿಟ್ಟುಬಿಡಿರಿ. ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ, ಯಾಕೆಂದರೆ ನೀವು ಹಿಂದಿನಸ್ವಭಾವವನ್ನು ಅದರ ಕೃತ್ಯಗಳೊಂದಿಗೆ ತೆಗೆದುಹಾಕಿ ನೂತನಸ್ವಭಾವವನ್ನು ಧರಿಸಿಕೊಂಡಿದ್ದೀರಲ್ಲವೇ. ಈ ನೂತನ ಸ್ವಭಾವವು ಸೃಷ್ಟಿಸಿದಾತನ ಹೋಲಿಕೆಯ ಜ್ಞಾನದ ಮೇರೆಗೆ ಅದು ನೂತನವಾಗುತ್ತಾ ಬರುತ್ತದೆ. ಈ ಜ್ಞಾನದಲ್ಲಿ ಗ್ರೀಕನು ಮತ್ತು ಯೆಹೂದ್ಯನು ಎಂಬ ಭೇದವಿಲ್ಲ, ಸುನ್ನತಿಮಾಡಿಸಿಕೊಂಡವರು ಮತ್ತು ಸುನ್ನತಿ ಮಾಡಿಸಿಕೊಳ್ಳದವರು ಎಂಬ ಭೇದವಿಲ್ಲ, ನಾಗರಿಕ, ಅನಾಗರಿಕನು ಎಂಬ ಭೇದವಿಲ್ಲ, ದಾಸನು, ಸ್ವತಂತ್ರನು ಎಂಬ ಭೇದವಿಲ್ಲ, ಆದರ ಬದಲಾಗಿ ಕ್ರಿಸ್ತನೇ ಸಮಸ್ತವೂ ಹಾಗೂ ಸಮಸ್ತರಲ್ಲಿಯೂ ಇರುವಾತನಾಗಿದ್ದಾನೆ.

ಹೀಗಿರಲಾಗಿ ದೇವರಿಂದ ಆರಿಸಿಕೊಂಡವರಾಗಿ, ಪರಿಶುದ್ಧರೂ ಹಾಗೂ ಪ್ರಿಯರೂ ಆಗಿರುವುದರಿಂದ ಕನಿಕರ, ದಯೆ, ದೀನತೆ, ಸಾತ್ವಿಕತ್ವ ಮತ್ತು ಸಹನೆ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. ಒಬ್ಬರನ್ನೊಬ್ಬರು ಸೈರಿಸಿಕೊಂಡು ಯಾರಿಗಾದರೂ ಮತ್ತೊಬ್ಬನ ಮೇಲೆ ತಪ್ಪುಹೊರಿಸುವುದಕ್ಕೆ ಕಾರಣವಿದ್ದರೂ, ತಪ್ಪುಹೊರಿಸದೆ ಕ್ಷಮಿಸಿರಿ, ಕರ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ. ಇವೆಲ್ಲಕ್ಕಿಂತ ಮಿಗಿಲಾಗಿ ಸಂಪೂರ್ಣತೆಯ ಬಂಧವಾಗಿರುವ ಪ್ರೀತಿಯನ್ನು ಧರಿಸಿಕೊಳ್ಳಿರಿ. ಕ್ರಿಸ್ತನ ಸಮಾಧಾನವು ನಿಮ್ಮ ಹೃದಯಗಳಲ್ಲಿ ಆಳಲಿ. ಇದೇ ಸಮಾಧಾನದಲ್ಲಿ ಏಕ ದೇಹವಾಗಿರುವಂತೆ ನೀವು ಕರೆಯಲ್ಪಟ್ಟಿರುವಿರಿ ಇದಲ್ಲದೆ ಕೃತಜ್ಞತೆಯುಳ್ಳವರಾಗಿರಿ. ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ. ಸಕಲಜ್ಞಾನದಿಂದ ಒಬ್ಬರಿಗೊಬ್ಬರು ಉಪದೇಶಮಾಡಿಕೊಂಡು ಬುದ್ಧಿಹೇಳಿಕೊಳ್ಳಿರಿ. ಕೀರ್ತನೆಗಳಿಂದಲೂ, ಸ್ತುತಿಪದಗಳಿಂದಲೂ ಮತ್ತು ಆತ್ಮೀಕವಾದ ಗೀತೆಗಳಿಂದಲೂ ಹಾಗೂ ನಿಮ್ಮ ಹೃದಯಗಳಲ್ಲಿ ದೇವರಿಗೆ ಕೃತಜ್ಞತೆಯಿಂದಲೂ ಹಾಡಿರಿ. ನೀವು ನುಡಿಯಿಂದಾಗಲಿ ನಡೆಯಿಂದಾಗಲಿ ಏನೇ ಮಾಡಿದರೂ ಅದೆಲ್ಲವನ್ನೂ ಕರ್ತನಾದ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ ಮತ್ತು ತಂದೆಯಾದ ದೇವರಿಗೆ ಆತನ ಮೂಲಕ ಕೃತಜ್ಞತಾಸ್ತುತ್ತಿಯನ್ನು ಸಲ್ಲಿಸಿರಿ.

ಸತಿಯರೇ, ಕರ್ತನಿಗೆ ಯೋಗ್ಯವಾದ ರೀತಿಯಲ್ಲಿ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಗಂಡಂದಿರೇ, ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ, ಅವರೊಂದಿಗೆ ಕಠಿಣವಾಗಿ ವರ್ತಿಸಬೇಡಿರಿ. ಮಕ್ಕಳೇ, ಎಲ್ಲಾ ವಿಷಯಗಳಲ್ಲಿ ನಿಮ್ಮ ತಂದೆತಾಯಿಗಳಿಗೆ ವಿಧೇಯರಾಗಿರಿ, ಯಾಕೆಂದರೆ ಇದು ಕರ್ತನ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ. ತಂದೆಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಅವರನ್ನು ಮನಗುಂದಿಸಿಬೇಡಿರಿ.

ದಾಸರೇ, ಈ ಲೋಕದಲ್ಲಿರುವ ನಿಮ್ಮ ಯಜಮಾನರಿಗೆ ಎಲ್ಲಾ ವಿಷಯಗಳಲ್ಲಿ ವಿಧೇಯರಾಗಿರಿ, ಮನುಷ್ಯರನ್ನು ಮೆಚ್ಚಿಸುವವರು ಮಾಡುವ ಹಾಗೆ ನಿಮ್ಮ ಯಜಮಾನರು ನೋಡುತ್ತಿರುವಾಗ ಮಾತ್ರ ಕೆಲಸಮಾಡದೆ, ಕರ್ತನಿಗೆ ಭಯಪಡುವ ಪ್ರಾಮಾಣಿಕವಾದ ಹೃದಯದಿಂದ ಕೆಲಸ ಮಾಡಿರಿ. ನೀವು ಯಾವ ಕೆಲಸವನ್ನು ಮಾಡಿದರೋ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೇ ಕರ್ತನಿಗೋಸ್ಕರವೇ ಎಂದು ಮನಃಪೂರ್ವಕವಾಗಿ ಮಾಡಿರಿ.

ಸಮಯವನ್ನು ಸದುಪಯೋಗಿಸಿಕೊಂಡು ಹೊರಗಿನವರೊಂದಿಗೆ ಜ್ಞಾನವುಳ್ಳವರಾಗಿ ನಡೆದುಕೊಳ್ಳಿರಿ. ನಿಮ್ಮ ಸಂಭಾಷಣೆಯು ಯಾವಾಗಲೂ ಕೃಪೆಯುಳ್ಳದ್ದಾಗಿಯೂ, ಉಪ್ಪಿನಂತೆ ರುಚಿಕರವಾಗಿಯೂ ಇರಲಿ. ಹೀಗೆ ನೀವು ಪ್ರತಿಯೊಬ್ಬರಿಗೂ ಯಾವಾವ ರೀತಿಯಲ್ಲಿ ಉತ್ತರಹೇಳಬೇಕು ಎಂಬುದನ್ನು ತಿಳಿದುಕೊಳ್ಳುವಿರಿ.

ನಿಮ್ಮಲ್ಲಿ ನಮ್ಮ ಪ್ರೀತಿಯು ಹೆಚ್ಚಾದ ಹಾಗೆಯೇ ನಿಮ್ಮ ಪ್ರೀತಿಯು ಒಬ್ಬರಿಂದೊಬ್ಬರಿಗೆ ಹರಡಿ ಎಲ್ಲಾ ಮನುಷ್ಯರ ಮೇಲೆಯೂ ಅಭಿವೃದ್ಧಿ ಹೊಂದಿ ಅತ್ಯಧಿಕವಾಗುವಂತೆ ಕರ್ತನು ಆಶೀರ್ವದಿಸಲಿ. ನಮ್ಮ ಕರ್ತನಾದ ಯೇಸು ತನ್ನ ಪರಿಶುದ್ಧ ಪರಿವಾರ ಸಮೇತ ಪುನರಾಗಮಿಸುವಾಗ ತಂದೆಯಾದ ದೇವರ ಸಮಕ್ಷಮದಲ್ಲಿ ನೀವು ಪರಿಶುದ್ಧರೂ, ನಿರ್ದೋಷಿಗಳೂ ಆಗಿರುವಂತೆ ನಿಮ್ಮ ಹೃದಯಗಳನ್ನು ದೃಢಪಡಿಸಲಿ.

ಸಹೋದರ ಸ್ನೇಹದ ವಿಷಯದಲ್ಲಿ ನಿಮಗೆ ಬರೆಯುವ ಅವಶ್ಯಕತೆಯಿಲ್ಲ, ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಉಪದೇಶವನ್ನು ನೀವೇ ದೇವರಿಂದ ಹೊಂದಿದವರಾಗಿದ್ದೀರಿ. ಮಕೆದೋನ್ಯದಲ್ಲಿ ವಾಸಿಸುವ ಎಲ್ಲ ಸಹೋದರರನ್ನೂ ಪ್ರೀತಿಸುತ್ತಿರುವುದೇನೋ ನಿಜವೇ. ಆದರೂ ಸಹೋದರರೇ, ನೀವು ಪ್ರೀತಿಯಲ್ಲಿ ಇನ್ನೂ ಹೆಚ್ಚುತ್ತಾ ಬರಬೇಕೆಂದು ನಿಮ್ಮನ್ನು ಉತ್ತೇಜಿಸುತ್ತೇವೆ.

ಆದ್ದರಿಂದ ನೀವು ಈಗ ಮಾಡುತ್ತಿರುವ ಪ್ರಕಾರವೇ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ ಇರಿ. ಸಹೋದರರೇ, ಕರ್ತನ ಕಾರ್ಯಗಳಲ್ಲಿ ನಿಮ್ಮ ಮೇಲೆ ಮುಖ್ಯಸ್ಥರಾಗಿದ್ದು, ಪ್ರಯಾಸಪಡುತ್ತಾ ನಿಮಗೆ ಬುದ್ಧಿ ಹೇಳುತ್ತರೋ, ಅವರನ್ನು ಲಕ್ಷಿಸಿ ಅವರ ಕೆಲಸದ ನಿಮಿತ್ತ ಅವರನ್ನು ಪ್ರೀತಿಯಿಂದ ಬಹಳವಾಗಿ ಗೌರವಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇವೆ. ನಿಮ್ಮ ನಿಮ್ಮೊಳಗೆ ಸಮಾಧಾನವಾಗಿರಿ. ಸಹೋದರರೇ, ಮೈಗಳ್ಳರಿಗೆ ಬುದ್ಧಿಹೇಳಿರಿ, ಮನಗುಂದಿದವರನ್ನು ಧೈರ್ಯಪಡಿಸಿರಿ, ಬಲಹೀನರಿಗೆ ಆಧಾರವಾಗಿರಿ, ಎಲ್ಲರೊಂದಿಗೆ ದೀರ್ಘಶಾಂತಿಯಿಂದಿರಿ ಎಂದು ನಿಮ್ಮನ್ನು ಪ್ರಬೋಧಿಸುತ್ತೇವೆ. ಯಾರೂ ಅಪಕಾರಕ್ಕೆ ಅಪಕಾರಮಾಡದಂತೆ ನೋಡಿಕೊಳ್ಳಿರಿ, ಯಾವಾಗಲೂ ನೀವು ಒಬ್ಬರಿಗೊಬ್ಬರು ಹಿತವನ್ನು ಮಾಡಿಕೊಂಡಿರುವುದಲ್ಲದೆ ಎಲ್ಲರಿಗೂ ಒಳ್ಳೆಯದನ್ನು ಮಾಡುವವರಾಗಿರಿ.

ಸಹೋದರರೇ, ನಾವು ಯಾವಾಗಲೂ ನಿಮ್ಮನ್ನು ಕುರಿತು ದೇವರಿಗೆ ಕೃತಜ್ಞತಾಸ್ತುತಿ ಮಾಡುವುದಕ್ಕೆ ಬದ್ಧರಾಗಿದ್ದೇವೆ, ಹಾಗೆ ಮಾಡುವುದು ಯೋಗ್ಯವಾಗಿದೆ. ಏಕೆಂದರೆ ನೀವು ನಂಬಿಕೆಯಲ್ಲಿ ಬಹಳ ಅಭಿವೃದ್ಧಿ ಹೊಂದುತ್ತಾ, ಪರಸ್ಪರವಾದ ಪ್ರೀತಿ ನಿಮ್ಮೆಲ್ಲರಲ್ಲಿಯೂ ಹೆಚ್ಚಾಗುತ್ತಿದೆ. ಹೀಗಿರುವುದರಿಂದ ನಿಮಗೆ ಬಂದಿರುವ ಎಲ್ಲಾ ಹಿಂಸೆಗಳಲ್ಲಿಯೂ ನೀವು ಅನುಭವಿಸುತ್ತಿರುವ ಎಲ್ಲಾ ಸಂಕಟಗಳಲ್ಲಿಯೂ ತೋರಿಬಂದ ನಿಮ್ಮ ತಾಳ್ಮೆ ನಂಬಿಕೆಗಳ ನಿಮಿತ್ತ ದೇವ ಜನರ ಸಭೆಗಳಲ್ಲಿ ನಾವೇ ಹೆಮ್ಮೆಯಿಂದ ಮಾತನಾಡುತ್ತೇವೆ. ದೇವರ ನೀತಿಯುಳ್ಳ ತೀರ್ಪಿಗೆ ಪ್ರಮಾಣ ಯಾವುದೆಂದರೆ, ನೀವು ಪ್ರಯಾಸಪಡುತ್ತಿರುವ ದೇವರ ರಾಜ್ಯಕ್ಕೆ ನಿಮ್ಮನ್ನು ಯೋಗ್ಯರನ್ನಾಗಿಸುವುದು.

ನೀವು ದೇವರ ಪ್ರೀತಿಯಲ್ಲಿಯೂ ಕ್ರಿಸ್ತನ ತಾಳ್ಮೆಯಲ್ಲಿಯೂ ಸೇರುವಂತೆ ಕರ್ತನೇ ನಿಮ್ಮನ್ನು ನಡೆಸಲಿ.

ಶುದ್ಧಹೃದಯ, ಒಳ್ಳೆಯ ಮನಸ್ಸಾಕ್ಷಿ, ಪ್ರಾಮಾಣಿಕವಾದ ನಂಬಿಕೆ ಎಂಬಿವುಗಳಿಂದ ಹುಟ್ಟಿದ ಪ್ರೀತಿಯೇ ದೇವಾಜ್ಞೆಯ ಗುರಿಯಾಗಿದೆ.

ಆದರೆ ನಮ್ಮ ಕರ್ತನ ಕೃಪೆಯು ಅತ್ಯಧಿಕವಾಗಿದ್ದು ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯನ್ನೂ ಪ್ರೀತಿಯನ್ನೂ ನನ್ನಲ್ಲಿ ಉಕ್ಕಿಸಿತ್ತು.

ನಿನ್ನ ಯೌವನವನ್ನು ಅಸಡ್ಡೆಮಾಡುವುದಕ್ಕೆ ಯಾರಿಗೂ ಆಸ್ಪದಮಾಡಿಕೊಡದೆ, ನಂಬುವವರಿಗೆ ನಡೆ, ನುಡಿ, ಪ್ರೀತಿ, ನಂಬಿಕೆ, ಶುದ್ಧತ್ವ ಇವುಗಳ ವಿಷಯದಲ್ಲಿ ನೀನೇ ಮಾದರಿಯಾಗಿರು.

ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆ ಹೋದರೆ ಅವನು ಕ್ರಿಸ್ತ ನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕೀಳಾದವನೂ ಆಗಿದ್ದಾನೆ.

ಎಲೈ, ದೇವರ ಮನುಷ್ಯನೇ, ನೀನಾದರೋ ಇವುಗಳಿಗೆ ದೂರವಾಗಿರು. ನೀತಿ, ಭಕ್ತಿ, ನಂಬಿಕೆ, ಪ್ರೀತಿ, ಸ್ಥಿರಚಿತ್ತ ಹಾಗೂ ಸಾತ್ವಿಕತ್ವ ಇವುಗಳನ್ನು ಸಂಪಾದಿಸುವುದಕ್ಕೆ ಪ್ರಯಾಸಪಡು.

ನಾನು ಹಗಲಿರುಳು ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ತಪ್ಪದೆ ಜ್ಞಾಪಿಸಿಕೊಳ್ಳುತ್ತೇನೆ. ಇದಲ್ಲದೆ ನಾನು ಪೂರ್ವಿಕರ ಭಕ್ತಿಮಾರ್ಗವನ್ನೇ ಅನುಸರಿಸಿ. ಶುದ್ಧ ಮನಸ್ಸಾಕ್ಷಿಯಿಂದ ಸೇವಿಸುವ ದೇವರಿಗೆ ನಿನ್ನ ವಿಷಯವಾಗಿ ಸ್ತೋತ್ರಸಲ್ಲಿಸುತ್ತೇನೆ. ನಾನು ನಿನ್ನ ಕಣ್ಣೀರನ್ನು ನೆನಪಿಗೆ ತಂದು ನಿನ್ನನ್ನು ನೋಡಿ ಸಂತೋಷಭರಿತನಾಗಬೇಕೆಂದು ಬಯಸುತ್ತೇನೆ.

ದೇವರು ನಮಗೆ ಕೊಟ್ಟಿರುವ ಆತ್ಮವು ಬಲ, ಪ್ರೀತಿ, ಸಂಯಮಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ. ಆದ್ದರಿಂದ ನೀನು ನಮ್ಮ ಕರ್ತನನ್ನು ಕುರಿತು ಹೇಳುವ ಸಾಕ್ಷಿಯ ವಿಷಯದಲ್ಲಾಗಲಿ ಆತನ ಸೆರೆಯವನಾದ ನನ್ನ ವಿಷಯದಲ್ಲಾಗಲಿ ನಾಚಿಕೆ ಪಡದೆ, ದೇವರ ಬಲವನ್ನು ಆಶ್ರಯಿಸಿ ನನ್ನೊಂದಿಗೆ ಸುವಾರ್ತೆಗೋಸ್ಕರ ಕಷ್ಟವನ್ನನುಭವಿಸು.

ಕರ್ತನ ಸೇವಕನು ಜಗಳವಾಡದೆ, ಎಲ್ಲರ ವಿಷಯದಲ್ಲಿ ಸಾಧುವೂ, ಬೋಧಿಸುವುದರಲ್ಲಿ ಪ್ರವೀಣನ್ನೂ, ತಾಳ್ಮೆಯುಳ್ಳವನ್ನೂ ಎದುರಿಸುವವರನ್ನು ಸೌಮ್ಯತೆಯಿಂದ ತಿದ್ದುವವನೂ ಆಗಿರಬೇಕು. ಬಹುಶಃ ದೇವರು ಆ ಎದುರಿಸುವವರ ಮನಸ್ಸನ್ನು ತನ್ನ ಕಡೆಗೆ ತಿರುಗಿಸಿ ಸತ್ಯದ ಜ್ಞಾನವನ್ನು ಅವರಿಗೆ ಕೊಟ್ಟಾನು.

ಮನುಷ್ಯರು ಸ್ವಾರ್ಥಚಿಂತಕರೂ, ಹಣದಾಸೆಯವರೂ, ಬಡಾಯಿಕೊಚ್ಚುವವರೂ, ಅಹಂಕಾರಿಗಳೂ, ದೂಷಕರೂ, ತಂದೆತಾಯಿಗಳಿಗೆ ಅವಿಧೇಯರೂ, ಉಪಕಾರ ನೆನಸದವರೂ, ದೇವಭಯವಿಲ್ಲದವರೂ, ಮಮತೆಯಿಲ್ಲದವರೂ, ಸಮಾಧಾನಹೊಂದದವರೂ, ಚಾಡಿಹೇಳುವವರೂ, ದಮೆಯಿಲ್ಲದವರೂ, ಕ್ರೂರರೂ, ಒಳ್ಳೆಯದನ್ನು ದ್ವೇಷಿಸುವವರೂ, ದ್ರೋಹಿಗಳೂ, ದುಡುಕುವವರೂ, ದುರಹಂಕಾರವುಳ್ಳವರೂ, ದೇವರನ್ನು ಪ್ರೀತಿಸುವುದಕ್ಕಿಂತ ಅಧಿಕವಾಗಿ ಭೋಗವನ್ನೇ ಪ್ರೀತಿಸುವವರೂ, ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು. ಇಂಥವರ ಸಹವಾಸವನ್ನೂ ಮಾಡದಿರು.

ನೀನಾದರೋ ನನ್ನನ್ನು ಅನುಸರಿಸುವವನಾಗಿದ್ದು, ನನ್ನ ಬೋಧನೆ, ನಡತೆ, ಉದ್ದೇಶ, ನಂಬಿಕೆ, ದೀರ್ಘಶಾಂತಿ, ಪ್ರೀತಿ, ಸೈರಣೆ ಇವುಗಳನ್ನೂ,

ನೀನಾದರೋ ಸ್ವಸ್ಥ ಬೋಧನೆಗೆ ಅನುಗುಣವಾಗಿ ಉಪದೇಶಮಾಡು. ವೃದ್ಧರು ಮದ್ಯಾಸಕ್ತಿಯಿಲ್ಲದವರೂ, ಗೌರವವುಳ್ಳವರೂ, ಜಿತೇಂದ್ರಿಯರೂ, ನಂಬಿಕೆ, ಪ್ರೀತಿ, ತಾಳ್ಮೆಯುಳ್ಳವರು ಆಗಿರಬೇಕೆಂದು ಬೋಧಿಸು. ಹಾಗೆಯೇ, ವೃದ್ಧ ಸ್ತ್ರೀಯರು ಚಾಡಿಹೇಳುವವರೂ ಮದ್ಯಕ್ಕೆ ಅಧೀನರಾಗಿರದೆ ದೇವಭಕ್ತೆಯರಿಗೆ ಯೋಗ್ಯವಾದ ನಡತೆಯುಳ್ಳವರೂ ಆಗಿರಬೇಕು. ಇದಲ್ಲದೆ, ವೃದ್ಧ ಸ್ತ್ರೀಯರು ಪ್ರಾಯದ ಸ್ತ್ರೀಯರಿಗೆ ಮಾದರಿಯಾಗಿ, ತಮ್ಮ ಮೂಲಕ ದೇವರ ವಾಕ್ಯಕ್ಕೆ ದೂಷಣೆಯಾಗದಂತೆ ನಡೆದುಕೊಳ್ಳುವಂತೆ ತಿಳಿಸು. ಪ್ರಾಯದಸ್ತ್ರಿಯರು ಗಂಡಂದಿರನ್ನೂ, ಮಕ್ಕಳನ್ನೂ ಪ್ರೀತಿಸುವವರೂ, ವಿವೇಕವುಳ್ಳವರೂ, ಕ್ಷಮಾಶಿಲರೂ, ಪತಿವ್ರತೆಯರೂ ಸ್ವಂತಮನೆಗಾಗಿ ಕೆಲಸಮಾಡುವವರೂ, ಸುಶೀಲೆಯರೂ ಆಗಿ ತಮ್ಮ ಗಂಡಂದಿರಿಗೆ ವಿಧೇಯರಾಗಿರಬೇಕೆಂದು ಬುದ್ಧಿಹೇಳಬೇಕೆಂದು ನೀನು ವೃದ್ಧ ಸ್ತ್ರೀಯರಿಗೆ ಬೋಧಿಸು. ಹಾಗೆಯೇ ಯೌವನಸ್ಥರನ್ನು ಎಲ್ಲಾ ಸಂಗತಿಗಳಲ್ಲಿಯೂ ಸ್ವಸ್ಥ ಚಿತ್ತರಾಗಿರಬೇಕೆಂದು ಎಚ್ಚರಿಸು. ಸತ್ಕಾರ್ಯ ಮಾಡುವುದರಲ್ಲಿ ನೀನೇ ಮಾದರಿಯಾಗಿರು. ನೀನು ಮಾಡುವ ಉಪದೇಶದಲ್ಲಿ ಸತ್ಯವೂ ಗೌರವವೂ ಆಕ್ಷೇಪಣೆಗೆ ಅವಕಾಶವಿಲ್ಲದಂಥ ಸುಬುದ್ಧಿಯೂ ಇರಬೇಕು; ಆಗ ನಮಗೆ ಎದುರಾಳಿಗಳಾಗಿರುವವರು ನಮ್ಮ ವಿಷಯದಲ್ಲಿ ಕೆಟ್ಟದ್ದೇನೂ ಹೇಳುವುದಕ್ಕೆ ಆಸ್ಪದವಿಲ್ಲದೆ ನಾಚಿಕೊಳ್ಳುವರು.

ಅಧಿಪತಿಗಳಿಗೂ, ಅಧಿಕಾರಿಗಳಿಗೂ ಅಧೀನರಾಗಿ ವಿಧೇಯರಾಗಿರಬೇಕಂತಲೂ, ಸಕಲಸತ್ಕಾರ್ಯಗಳನ್ನು ಮಾಡುವುದಕ್ಕೆ ಸಿದ್ಧರಾಗಿರಬೇಕೆಂತಲೂ, ಯಾರನ್ನೂ ದೂಷಿಸದೆ, ಕುತರ್ಕ ಮಾಡದೆ ಎಲ್ಲಾ ಜನರಿಗೂ ಪೂರ್ಣಸದ್ಗುಣವನ್ನು ತೋರಿಸುತ್ತಾ ಸಾತ್ವಿಕರಾಗಿರಬೇಕೆಂತಲೂ, ಅವರಿಗೆ ನೆನಪಿಸು. ಏಕೆಂದರೆ ನಾವು ಸಹ, ಮೊದಲು ಅವಿವೇಕಿಗಳೂ, ಅವಿಧೇಯರೂ, ಮೋಸಹೋದವರೂ, ನಾನಾ ವಿಧವಾದ ದುರಾಶೆಗಳಿಗೆ ಮತ್ತು ಭೋಗಗಳಿಗೆ ಅಧೀನರೂ, ಕೆಟ್ಟತನ, ಹೊಟ್ಟೆಕಿಚ್ಚುಗಳಲ್ಲಿ ಕಾಲಕಳೆಯುವವರೂ, ಅಸಹ್ಯರೂ, ಒಬ್ಬರನ್ನೊಬ್ಬರು ಹಗೆಮಾಡುವವರೂ ಆಗಿದ್ದೆವು. ಆದರೆ ನಮ್ಮ ರಕ್ಷಕನಾದ ದೇವರ ದಯೆಯೂ, ಪ್ರೀತಿಯೂ, ಮನುಷ್ಯರಿಗೆ ಪ್ರತ್ಯಕ್ಷವಾದಾಗ, ನಾವು ಮಾಡಿದ ಪುಣ್ಯಕಾರ್ಯಗಳ ನಿಮಿತ್ತದಿಂದಲ್ಲ ಪುನರ್ಜನ್ಮವನ್ನು ಸೂಚಿಸುವ ದೀಕ್ಷಾಸ್ನಾನದ ಮೂಲಕವಾಗಿಯೂ, ಪವಿತ್ರಾತ್ಮನ ನವೀಕರಣದ ಮೂಲಕವಾಗಿಯೂ ಆತನು ತನ್ನ ಕರುಣೆಯಿಂದಲೇ ನಮ್ಮನ್ನು ರಕ್ಷಿಸಿದನು.

ಕರ್ತನಾದ ಯೇಸುವಿನ ಮೇಲೆ ನೀನು ಇಟ್ಟಿರುವ ನಂಬಿಕೆ, ಪ್ರೀತಿ ಹಾಗೂ ದೇವಜನರ ಮೇಲಿರುವ ನಿನ್ನ ಪ್ರೀತಿಯನ್ನು ಕುರಿತು ಕೇಳಿದ್ದರಿಂದ, ನನ್ನ ಪ್ರಾರ್ಥನೆಗಳಲ್ಲಿ ಯಾವಾಗಲೂ ನಿನ್ನನ್ನು ನೆನಪು ಮಾಡಿಕೊಂಡು ನಾನು ದೇವರಿಗೆ ಸ್ತೋತ್ರವನ್ನು ಸಲ್ಲಿಸುತ್ತೇನೆ, ನಿನಗಾಗಿ ವಿಜ್ಞಾಪನೆ ಮಾಡುತ್ತೇನೆ.

ಸಹೋದರನೇ, ನಿನ್ನ ಮೂಲಕ ದೇವಜನರ ಹೃದಯಗಳಿಗೆ ಪ್ರೋತ್ಸಾಹವೂ, ಪ್ರೇರಣೆಯೂ ಉಂಟಾದುದರಿಂದ ಅವರ ಬಗ್ಗೆ ಇರುವ ಪ್ರೀತಿಯಿಂದ ನನಗೆ ಬಹಳ ಆನಂದವೂ, ಸಮಾಧಾನವೂ ಉಂಟಾಯಿತು. ವೃದ್ಧನೂ, ಈಗ ಕ್ರಿಸ್ತಯೇಸುವಿನ ನಿಮಿತ್ತ ಸೆರೆಯಾಳಾಗಿರುವ ಈ ಪೌಲನೆಂಬ ನಾನು ಪ್ರೀತಿಯ ನಿಮಿತ್ತ ನಿನ್ನನ್ನು ಬೇಡಿಕೊಳ್ಳುತ್ತಿದ್ದೇನೆ. ನೀನು ಯುಕ್ತವಾದದ್ದನ್ನು ಮಾಡಬೇಕೆಂದು ಆಜ್ಞಾಪಿಸುವುದಕ್ಕೆ ನನಗೆ ಕ್ರಿಸ್ತನಲ್ಲಿ ಪೂರ್ಣ ಅಧಿಕಾರವಿದ್ದರೂ ಹಾಗೆ ಆಜ್ಞಾಪಿಸದೇ

ನೀವು ದೇವಜನರಿಗೆ ಉಪಚಾರ ಮಾಡಿದ್ದೀರಿ, ಇನ್ನೂ ಮಾಡುತ್ತಾ ಇದ್ದಿರಿ. ಈ ಕೆಲಸವನ್ನು ಮತ್ತು ಇದರಲ್ಲಿ ನೀವು ಆತನ ನಾಮದ ಕಡೆಗೆ ತೋರಿಸಿದ ಪ್ರೀತಿಯನ್ನು ಆತನು ಮರೆಯುವುದಿಲ್ಲ, ಯಾಕೆಂದರೆ ದೇವರು ಅನೀತಿಯುಳ್ಳವನಲ್ಲ.

ನಾನು ಅವರ ದುಷ್ಕೃತ್ಯಗಳನ್ನು ಕರುಣೆಯಿಂದ ಕ್ಷಮಿಸುವೆನು ಮತ್ತು ಅವರ ಪಾಪಗಳನ್ನು ಎಂದಿಗೂ ನೆನಪಿಗೆ ತಂದುಕೊಳ್ಳುವುದಿಲ್ಲ’” ಎಂದು ಕರ್ತನು ನುಡಿಯುತ್ತಾನೆ.

ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಹುರಿದುಂಬಿಸೋಣ. ಸಭೆಯಾಗಿ ಸೇರುವ ರೂಢಿಯನ್ನು ಕೆಲವರು ಬಿಟ್ಟಂತೆ ನಾವು ಬಿಟ್ಟು ಬಿಡದೆ, ಆ ದಿನವು ಸಮೀಪಿಸುತ್ತಾ ಬರುತ್ತದೆಂದು ನೀವು ತಿಳಿದುಕೊಂಡಿರುವುದರಿಂದ ಒಬ್ಬರನ್ನೊಬ್ಬರು ಮತ್ತಷ್ಟು ಹೆಚ್ಚಾಗಿಯೇ ಪ್ರೋತ್ಸಾಹಿಸುತ್ತಿರೋಣ.

ಏಕೆಂದರೆ ಕರ್ತನು ಯಾರನ್ನು ಪ್ರೀತಿಸುತ್ತಾನೋ ಅವರನ್ನು ಶಿಕ್ಷಿಸುತ್ತಾನೆ. ತಾನು ಮಗನಂತೆ ಸ್ವೀಕರಿಸುವ ಪ್ರತಿಯೊಬ್ಬನನ್ನು ದಂಡಿಸುತ್ತಾನೆ ಎಂಬುದಾಗಿದೆ. ನಿಮ್ಮ ಶಿಸ್ತಿಗಾಗಿಯೇ, ನಿಮಗೆ ಶಿಕ್ಷೆಯಾಗುತ್ತದೆಂದು ಅದನ್ನು ಸಹಿಸಿಕೊಳ್ಳಿರಿ. ದೇವರು ನಿಮ್ಮನ್ನು ಮಕ್ಕಳೆಂದು ನಡೆಸುತ್ತಾನೆ. ಯಾಕೆಂದರೆ ತಂದೆಯಿಂದ ಶಿಕ್ಷೆ ಹೊಂದದ ಮಗನೆಲ್ಲಿದ್ದಾನೆ? ಎಲ್ಲರೂ ಪಾಲುಗಾರರಬೇಕಾದ ಶಿಕ್ಷೆಯು ನಿಮಗುಂಟಾಗದಿದ್ದರೆ ನೀವು ಹಾದರದಿಂದ ಹುಟ್ಟಿದವರೇ ಹೊರತು ಆತನ ಮಕ್ಕಳಲ್ಲ. ಇದು ಮಾತ್ರವಲ್ಲದೆ ನಮ್ಮನ್ನು ಶಿಕ್ಷಿಸಿದ ಲೌಕಿಕ ತಂದೆಗಳನ್ನು ನಾವು ಸನ್ಮಾನಿಸಿತ್ತೇವಲ್ಲ. ನಮ್ಮ ಆತ್ಮಗಳಿಗೆ ತಂದೆಯಾಗಿರುವಾತನಿಗೆ ನಾವು ಇನ್ನೂ ಹೆಚ್ಚಾಗಿ ಅಧೀನರಾಗಿ ಜೀವಿಸಬೇಕಲ್ಲವೇ?

ಸಹೋದರ ಪ್ರೀತಿಯನ್ನು ಸತತವಾಗಿ ತೋರಿಸಿರಿ. ಅತಿಥಿ ಸತ್ಕಾರಮಾಡುವುದನ್ನು ಅಲಕ್ಷ್ಯಮಾಡಬೇಡಿರಿ. ಏಕೆಂದರೆ ಅದನ್ನು ಮಾಡುವುದರಲ್ಲಿ ಕೆಲವರು ತಿಳಿಯದೆ ದೇವದೂತರನ್ನೂ ಸತ್ಕರಿಸಿದ್ದಾರೆ. ಸೆರೆಯವರ ಸಂಗಡ ನೀವೂ ಜೊತೆಸೆರೆಯವರೆಂದು ತಿಳಿದು, ಅವರಿಗುಂಟಾದ ಶಾರೀರಿಕ ಕಷ್ಟಾನುಭವವು ನಿಮಗೂ ಸಂಭವಿಸಿತೆಂದು ಭಾವಿಸಿಕೊಂಡು, ಅವರನ್ನು ಜ್ಞಾಪಕಮಾಡಿಕೊಳ್ಳಿರಿ.

ಇದಲ್ಲದೆ ಪರೋಪಕಾರ ಮಾಡುವುದನ್ನು, ಬೇರೆಯವರಿಗೆ ಸಹಾಯ ಮಾಡುವುದನ್ನು ಮರೆಯಬೇಡಿರಿ. ಇವೇ ದೇವರಿಗೆ ಮೆಚ್ಚಿಕೆಯಾದ ಯಜ್ಞಗಳು.

ದೀನಸ್ಥಿತಿಯಲ್ಲಿರುವ ಸಹೋದರನು ತಾನು ಉನ್ನತ ಸ್ಥಿತಿಗೆ ಬಂದೆನೆಂದು ಉಲ್ಲಾಸಪಡಲಿ.

ನನ್ನ ಪ್ರಿಯ ಸಹೋದರರೇ, ನೀವು ಇದನ್ನು ಚೆನ್ನಾಗಿ ತಿಳಿದುಕೊಳ್ಳಿರಿ, ಪ್ರತಿಯೊಬ್ಬನೂ ಕಿವಿಗೊಡುವುದರಲ್ಲಿ ಚುರುಕಾಗಿಯೂ, ಮಾತನಾಡುವುದರಲ್ಲಿ ನಿಧಾನವಾಗಿಯೂ ಮತ್ತು ಕೋಪಿಸುವುದರಲ್ಲಿ ನಿಧಾನವಾಗಿಯೂ ಇರಲಿ. ಏಕೆಂದರೆ ಮನುಷ್ಯನು ಕೋಪಗೊಂಡಾಗ ದೇವರು ಬಯಸುವ ನೀತಿ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದಕಾರಣ ಎಲ್ಲಾ ನೀಚತನವನ್ನೂ, ಎಲ್ಲಾ ದುಷ್ಟತನವನ್ನೂ ತೆಗೆದುಹಾಕಿ ಮನಸ್ಸಿನೊಳಗೆ ಬೇರೂರಿರುವ ದೇವರ ವಾಕ್ಯವನ್ನು ನಮ್ರತೆಯಿಂದ ಸ್ವೀಕರಿಸಿರಿ. ಅದು ನಿಮ್ಮ ಆತ್ಮಗಳನ್ನು ರಕ್ಷಿಸುವುದಕ್ಕೆ ಸಾಮರ್ಥ್ಯವುಳ್ಳದ್ದಾಗಿರುತ್ತದೆ.

ತನ್ನನ್ನು ಸದ್ಭಕ್ತನೆಂದೆಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳದೆ ತನ್ನ ಹೃದಯವನ್ನು ಮೋಸಗೊಳಿಸುವವನಾದರೆ ಅವನ ಭಕ್ತಿಯು ವ್ಯರ್ಥವಾಗಿದೆ.

ಹೇಗೆಂದರೆ ಒಬ್ಬ ಮನುಷ್ಯನು ಚಿನ್ನದ ಉಂಗುರಗಳನ್ನು ಮತ್ತು ಉತ್ತಮವಾದ ವಸ್ತ್ರಗಳನ್ನೂ ಹಾಕಿಕೊಂಡು ನಿಮ್ಮ ಸಭೆಯೊಳಗೆ ಬಂದಾಗ ಮತ್ತು ಒಬ್ಬ ಬಡ ಮನುಷ್ಯನು ಕೊಳಕು ಬಟ್ಟೆಗಳನ್ನು ಧರಿಸಿಕೊಂಡು ಬಂದಾಗ, ನೀವು ಉತ್ತಮವಾದ ವಸ್ತ್ರಗಳನ್ನು ಧರಿಸಿಕೊಂಡು ಬಂದಿರುವವನನ್ನು ಗೌರವದಿಂದ ನೋಡಿ ಅವನಿಗೆ “ನೀವು ಇಲ್ಲಿ ಈ ಗೌರವ ಆಸನದಲ್ಲಿ ಕುಳಿತುಕೊಳ್ಳಿರಿ” ಎಂತಲೂ, ಆ ಬಡ ಮನುಷ್ಯನಿಗೆ “ನೀನು ಅಲ್ಲಿ ನಿಂತುಕೋ” ಇಲ್ಲವೇ “ಇಲ್ಲಿ ನನ್ನ ಕಾಲ್ಮಣೆಯ ಬಳಿ ಕುಳಿತುಕೋ” ಎಂತಲೂ ಹೇಳಿದರೆ, ನೀವು ನಿಮ್ಮ ನಿಮ್ಮಲ್ಲಿ ಭೇದಭಾವ ಮಾಡುವವರಾಗಿದ್ದು, ತಾರತಮ್ಯ ಆಲೋಚನೆಗಳಂತೆ ನಡೆಯುವ ನಿರ್ಧಾರ ಮಾಡುವವರಾಗಿರುತ್ತೀರಿ ಅಲ್ಲವೇ? ನನ್ನ ಪ್ರಿಯ ಸಹೋದರರೇ, ಕೇಳಿರಿ ದೇವರು ಈ ಲೋಕದಲ್ಲಿನ ಬಡವರನ್ನು ನಂಬಿಕೆಯಲ್ಲಿ ಐಶ್ವರ್ಯವಂತರನ್ನಾಗಿಯೂ, ತನ್ನನ್ನು ಪ್ರೀತಿಸುವವರಿಗೆ ತಾನು ವಾಗ್ದಾನ ಮಾಡಿದ ರಾಜ್ಯಕ್ಕೆ ಬಾಧ್ಯರಾಗಿಯೂ ಇರಬೇಕೆಂದು ಆರಿಸಿಕೊಳ್ಳಲಿಲ್ಲವೇ? ನೀವಾದರೋ ಬಡವರನ್ನು ಅವಮಾನಪಡಿಸಿದ್ದೀರಿ. ನಿಮ್ಮನ್ನು ಬಾಧಿಸಿ ನ್ಯಾಯಸ್ಥಾನದ ಮುಂದೆ ಎಳೆದುಕೊಂಡು ಹೋಗುವವರು ಐಶ್ವರ್ಯವಂತರಲ್ಲವೋ?

ಆದರೂ ಧರ್ಮಶಾಸ್ತ್ರಕ್ಕೆ ಸರಿಯಾಗಿ “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ರಾಜಾಜ್ಞೆಯನ್ನು ನೆರವೇರಿಸುವವರಾದರೆ, ನೀವು ಒಳ್ಳೆಯದನ್ನೇ ಮಾಡುವವರಾಗಿರುವಿರಿ. ಒಂದು ವೇಳೆ ಅದನ್ನು ಬಿಟ್ಟು ನೀವು ಪಕ್ಷಪಾತಿಗಳಾಗಿದ್ದರೆ ಪಾಪಮಾಡುವವರಾಗಿದ್ದು ಅಪರಾಧಿಗಳೆಂದು ಧರ್ಮಶಾಸ್ತ್ರದ ಪ್ರಕಾರ ತೀರ್ಮಾನಿಸಲ್ಪಡುತ್ತೀರಿ.

ಏಕೆಂದರೆ ಕರುಣೆ ತೋರಿಸದೆ ಇರುವವನಿಗೆ ನ್ಯಾಯತೀರ್ಪಿನಲ್ಲಿ ಕರುಣೆಯು ತೋರಿಸಲ್ಪಡುವುದಿಲ್ಲ. ಕರುಣೆಯು ನ್ಯಾಯತೀರ್ಪಿನ ಮೇಲೆ ಜಯ ಹೊಂದುತ್ತದೆ.

ನಿಮ್ಮಲ್ಲಿ ಒಬ್ಬ ಸಹೋದರನಿಗೆ ಇಲ್ಲವೆ ಒಬ್ಬ ಸಹೋದರಿಗೆ ಉಡಲು ಬಟ್ಟೆಯೂ ಮತ್ತು ದಿನನಿತ್ಯದ ಆಹಾರವೂ ಅಗತ್ಯವಾಗಿರುವಾಗ, ನಿಮ್ಮಲ್ಲಿ ಒಬ್ಬನು ಅವರಿಗೆ ದೈಹಿಕ ಅವಶ್ಯಕತೆಗಳನ್ನು ಪೂರೈಸದೆ “ಸಮಾಧಾನದಿಂದ ಹೋಗಿರಿ, ಬೆಚ್ಚಗೆ ಬೆಂಕಿಕಾಯಿಸಿಕೊಳ್ಳಿ, ಹೊಟ್ಟೆ ತುಂಬಾ ಊಟಮಾಡಿ” ಎಂದು ಹೇಳಿದರೆ ಪ್ರಯೋಜನವೇನು? ಹಾಗೆಯೇ ಕ್ರಿಯೆಗಳಿಲ್ಲದ ನಂಬಿಕೆಯು ನಿರ್ಜೀವವಾದದು.

ಹಾಗೆಯೇ ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಮಾಡುವ ಬಗ್ಗೆ ಕೊಚ್ಚಿಕೊಳ್ಳುತ್ತದೆ. ಬೆಂಕಿಯ ಸಣ್ಣ ಕಿಡಿ ದೊಡ್ಡ ಕಾಡನ್ನೂ ಸುಡುತ್ತದೆ. ನಾಲಿಗೆಯೂ ಸಹ ಬೆಂಕಿಯೇ. ನಾಲಿಗೆಯೂ ಅಧರ್ಮ ಲೋಕರೂಪವಾಗಿ ನಮ್ಮ ಅಂಗಗಳ ನಡುವೆ ಇಡಲ್ಪಟ್ಟಿದೆ. ಅದು ದೇಹವನ್ನೆಲ್ಲಾ ಕೆಡಿಸುತ್ತದೆ. ತಾನೇ ನರಕವೆಂಬ ಬೆಂಕಿ ಹೊತ್ತಿಸಿಕೊಳ್ಳುತ್ತಾ ಇಡೀ ಬಾಳಿಗೆ ಬೆಂಕಿ ಹಚ್ಚುತ್ತದೆ.

ನಿಮ್ಮಲ್ಲಿ ಜ್ಞಾನಿಯೂ, ಬುದ್ಧಿವಂತನೂ ಯಾರು? ಅಂಥವನು ಒಳ್ಳೆಯ ನಡತೆಯಿಂದ, ಜ್ಞಾನದ ಲಕ್ಷಣವಾದ ವಿನಯಶೀಲತೆಯ ಕ್ರಿಯೆಗಳಿಂದ ಅದನ್ನು ತೋರಿಸಲಿ. ಆದರೆ ತೀಕ್ಷ್ಣವಾದ ಮತ್ಸರವೂ, ಸ್ವಾರ್ಥಾಭಿಲಾಶೆಯೂ ನಿಮ್ಮ ಹೃದಯದೊಳಗೆ ಇರುವುದಾದರೆ ನೀವು ಸತ್ಯಕ್ಕೆ ವಿರೋಧವಾಗಿ ಸುಳ್ಳಾಡಿ ಹೊಗಳಿಕೊಳ್ಳಬೇಡಿರಿ.

ಮತ್ಸರವೂ, ಹಗೆತನವೂ ಇರುವ ಕಡೆ ಗೊಂದಲಗಳೂ, ಸಕಲ ವಿಧದ ನೀಚ ಕೃತ್ಯಗಳೂ ಇರುವವು. ಆದರೆ ಮೇಲಿಂದ ಬರುವ ಜ್ಞಾನವು ಮೊದಲು ಪರಿಶುದ್ಧವಾದದ್ದು ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸಂತೋಷವಾಗಿ ಒಪ್ಪಿಕೊಳ್ಳುವಂಥದ್ದು, ಕರುಣೆ ಮತ್ತು ಒಳ್ಳೆ ಫಲಗಳಿಂದ ತುಂಬಿರುವಂಥದ್ದು, ಪಕ್ಷಪಾತವಿಲ್ಲದ್ದು, ಪ್ರಾಮಾಣಿಕವಾದ್ದದು ಆಗಿದೆ. ಸಮಾಧಾನವನ್ನು ಉಂಟುಮಾಡುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ನೀತಿಯೆಂಬ ಫಲವನ್ನು ಕೊಯ್ಯುವರು.

ನಿಮ್ಮಲ್ಲಿ ಜಗಳಗಳೂ, ಕಾದಾಟಗಳೂ ಎಲ್ಲಿಂದ ಬರುತ್ತವೆ? ನಿಮ್ಮ ಇಂದ್ರಿಯಗಳಲ್ಲಿ ಹೋರಾಡುವ ದುರಾಶೆಗಳಿಂದ ಬರುತ್ತವಲ್ಲವೇ? ನೀವು ಬಯಸಿದ್ದು ಹೊಂದದೆ ಇದ್ದೀರಿ. ನೀವು ಕೊಲೆ ಮಾಡಿದರೂ, ಹೊಟ್ಟೆಕಿಚ್ಚುಪಟ್ಟರೂ ಬಯಸಿದ್ದನ್ನು ಸಂಪಾದಿಸಲಾರದೆ ಇದ್ದೀರಿ; ನೀವು ಕಾದಾಡುತ್ತೀರಿ, ಜಗಳವಾಡುತ್ತೀರಿ. ಅದರೂ ನೀವು ದೇವರನ್ನು ಬೇಡಿಕೊಳ್ಳದ ಕಾರಣ ನಿಮಗೇನೂ ಪಡೆದುಕೊಳ್ಳಲಾಗುತ್ತಿಲ್ಲ. ನೀವು ಬೇಡಿದರೂ ಬೇಡಿದ್ದನ್ನು ನಿಮ್ಮ ಭೋಗಾಭಿಲಾಷೆಗಳಿಗಾಗಿ ದುರುಪಯೋಗಪಡಿಸಿಕೊಳ್ಳಬೇಕೆಂಬ ದುರುದ್ದೇಶದಿಂದ ಬೇಡಿಕೊಳ್ಳುವುದರಿಂದ ನಿಮಗೆ ದೊರೆಯುತ್ತಿಲ್ಲ.

ಆತನು ನಮಗೆ ಹೆಚ್ಚಾದ ಕೃಪೆಯನ್ನು ಕೊಡುತ್ತಾನೆ. ಆದುದರಿಂದ, “ದೇವರು ಅಹಂಕಾರಿಗಳಿಗೆ ಎದುರಾಳಿಯಾಗಿದ್ದಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ” ಎಂದು ಧರ್ಮಶಾಸ್ತ್ರವು ಹೇಳುತ್ತದೆ. ಹೀಗಿರಲಾಗಿ ದೇವರಿಗೆ ಅಧೀನರಾಗಿದ್ದು ಸೈತಾನನನ್ನು ಎದುರಿಸಿರಿ, ಆಗ ಅವನು ನಿಮ್ಮನ್ನು ಬಿಟ್ಟು ಓಡಿ ಹೋಗುವನು. ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು. ಪಾಪಿಗಳೇ, ನಿಮ್ಮ ಕೈಗಳನ್ನು ಶುಚಿಮಾಡಿಕೊಳ್ಳಿರಿ; ಎರಡು ಮನಸ್ಸುಳ್ಳವರೇ, ನಿಮ್ಮ ಹೃದಯಗಳನ್ನು ನಿರ್ಮಲಮಾಡಿಕೊಳ್ಳಿರಿ. ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ; ನಿಮ್ಮ ನಗುವನ್ನು ಬಿಟ್ಟು ಗೋಳಾಡಿರಿ. ಸಂತೋಷವನ್ನು ಬಿಟ್ಟು ಶೋಕಿಸಿರಿ. ಕರ್ತನ ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆಗ ಆತನು ನಿಮ್ಮನ್ನು ಮೇಲಕ್ಕೆತ್ತುವನು. ಸಹೋದರರೇ, ಒಬ್ಬರನ್ನೊಬ್ಬರು ನಿಂದಿಸಬೇಡಿರಿ. ಯಾವನಾದರೂ ತನ್ನ ಸಹೋದರನನ್ನು ನಿಂದಿಸಿದರೆ ಅಥವಾ ತನ್ನ ಸಹೋದರನ ವಿಷಯವಾಗಿ ತೀರ್ಪು ಮಾಡಿದರೆ ಅವನು ಧರ್ಮಶಾಸ್ತ್ರವನ್ನು ನಿಂದಿಸಿ ಧರ್ಮಶಾಸ್ತ್ರದ ವಿಷಯದಲ್ಲಿ ತೀರ್ಪು ಮಾಡಿದ ಹಾಗಾಗುವುದು. ಆದರೆ ನೀನು ಧರ್ಮಶಾಸ್ತ್ರದ ವಿಷಯದಲ್ಲಿ ತೀರ್ಪುಮಾಡಿದರೆ ನೀನು ನ್ಯಾಯಾಧಿಪತಿಯೆನಿಸಿಕೊಳ್ಳುವಿಯೇ ಹೊರತು ಅದನ್ನು ಅನುಸರಿಸುವವನಲ್ಲ.

ಹೀಗಿರುವುದರಿಂದ ಒಳ್ಳೆಯದನ್ನು ಮಾಡಬೇಕೆಂದು ಗೊತ್ತಿದರೂ ಅದನ್ನು ಮಾಡದೆ ಇರುವವನು ಪಾಪ ಮಾಡುವವನಾಗಿದ್ದಾನೆ.

ನೀವೂ ತಾಳ್ಮೆಯಿಂದಿರಿ, ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ; ಏಕೆಂದರೆ ಕರ್ತನ ಬರೋಣವು ಹತ್ತಿರವಾಯಿತು. ಸಹೋದರರೇ, ನೀವು ಒಬ್ಬರ ಮೇಲೊಬ್ಬರು ಆಪವಾದನೆ ಮಾಡಬೇಡಿರಿ; ಇದರಿಂದ ನ್ಯಾಯವಿಚಾರಣೆಗೆ ಗುರಿಯಾದಿರಿ. ಅಗೋ, ನ್ಯಾಯಾಧಿಪತಿಯು ಬಾಗಿಲಿನ ಮುಂದೆಯೇ ನಿಂತಿದ್ದಾನೆ. ಸಹೋದರರೇ, ಬಾಧೆಯನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ವಿಷಯದಲ್ಲಿ ಕರ್ತನ ಹೆಸರಿನಲ್ಲಿ ಮಾತನಾಡಿದ ಪ್ರವಾದಿಗಳನ್ನೇ ಮಾದರಿ ಮಾಡಿಕೊಳ್ಳಿರಿ.

ಹೀಗಿರಲು ನೀವು ಸ್ವಸ್ಥವಾಗಬೇಕಾದರೆ ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಅರಿಕೆ ಮಾಡಿ,, ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸಿರಿ. ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಹು ಸಾಮರ್ಥ್ಯವುಳ್ಳದಾಗಿರುತ್ತದೆ.

ನೀವು ಸತ್ಯೋಪದೇಶಕ್ಕೆ ವಿಧೇಯರಾಗಿದ್ದು ನಿಮ್ಮ ಆತ್ಮಗಳನ್ನು ಶುದ್ಧಿಮಾಡಿಕೊಂಡದ್ದರಿಂದ ನಿಷ್ಕಪಟವಾದ ಸಹೋದರ ಪ್ರೀತಿಯುಳ್ಳವರಾಗಿರತಕ್ಕದ್ದು. ಹೀಗಿರಲಾಗಿ ಒಬ್ಬರನೊಬ್ಬರು ಶುದ್ಧಹೃದಯದಿಂದಲೂ, ಯಥಾರ್ಥವಾಗಿಯೂ ಪ್ರೀತಿಸಿರಿ.

ಆದಕಾರಣ ಎಲ್ಲಾ ಕೆಟ್ಟತನವನ್ನೂ, ಎಲ್ಲಾ ವಂಚನೆಯನ್ನೂ, ಕಪಟವನ್ನೂ, ಹೊಟ್ಟೆಕಿಚ್ಚನ್ನೂ, ಎಲ್ಲಾ ತರದ ದೂಷಣೆಯನ್ನು ವಿಸರ್ಜಿಸಿರಿ. ಹೊಸದಾಗಿ ಹುಟ್ಟಿದ ಶಿಶುಗಳಂತೆ ನೀವು ದೇವರ ವಾಕ್ಯವೆಂಬ ಶುದ್ಧವಾದ ಆತ್ಮೀಕ ಹಾಲನ್ನು ಬಯಸಿರಿ. ಆದರಿಂದ ರಕ್ಷಣೆಯಲ್ಲಿ ಬೆಳೆಯುವಿರಿ.

ಎಲ್ಲರನ್ನೂ ಸನ್ಮಾನಿಸಿರಿ. ಸಹೋದರರನ್ನು ಪ್ರೀತಿಸಿರಿ. ದೇವರಿಗೆ ಭಯಪಡಿರಿ. ಅರಸನನ್ನು ಗೌರವಿಸಿರಿ. ಸೇವಕರೇ, ನಿಮ್ಮ ಯಜಮಾನರಿಗೆ ಪೂರ್ಣ ಗೌರವದಿಂದ ಅಧೀನರಾಗಿರಿ. ಒಳ್ಳೆಯವರೂ ಸಾತ್ವಿಕರೂ ಆಗಿರುವವರಿಗೆ ಮಾತ್ರವಲ್ಲದೆ ವಕ್ರಬುದ್ಧಿಯುಳ್ಳವರಿಗೂ ವಿಧೇಯರಾಗಿರಿ.

ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿದ್ದೀರಿ. ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ಆತನ ಹೆಜ್ಜೆಯ ಜಾಡಿಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು. ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ. ಬಯ್ಯುವವರನ್ನು ಆತನು ಪ್ರತಿಯಾಗಿ ಬಯ್ಯಲಿಲ್ಲ, ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ, ನ್ಯಾಯವಾಗಿ ತೀರ್ಪು ಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು.

ಕಡೆಗೆ ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ, ಪರಸ್ಪರ ಅನುಕಂಪವುಳ್ಳವರಾಗಿರಿ, ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ, ಕರುಣೆಯೂ, ದೀನಭಾವವೂ ಉಳ್ಳವರಾಗಿರಿ. ಅಪಕಾರಕ್ಕೆ ಅಪಕಾರವನ್ನು, ನಿಂದೆಗೆ ನಿಂದೆಯನ್ನು ಮಾಡದೇ ಆಶೀರ್ವದಿಸಿರಿ. ಇದಕ್ಕಾಗಿ ದೇವರು ನಿಮ್ಮನ್ನು ಕರೆದಿದ್ದಾನಲ್ಲಾ. ಹೀಗೆ ಮಾಡುವುದಾದರೆ ನೀವು ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಿರಿ.

ಮೊಟ್ಟಮೊದಲು ನಿಮ್ಮ ನಿಮ್ಮೊಳಗೆ ಪ್ರಾಮಾಣಿಕವಾದ ಪ್ರೀತಿಯಿರಲಿ. ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ. ಗುಣಗುಟ್ಟದೆ ಒಬ್ಬರಿಗೊಬ್ಬರು ಅತಿಥಿ ಸತ್ಕಾರ ಮಾಡಿರಿ. ನೀವೆಲ್ಲರು ದೇವರ ವಿವಿಧ ವರಗಳ ವಿಷಯದಲ್ಲಿ ಒಳ್ಳೆಯ ನಿರ್ವಾಹಕರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿದ ಕೃಪಾವರವನ್ನು ಎಲ್ಲರ ಸೇವೆಗಾಗಿ ಉಪಯೋಗಿಸಕೊಳ್ಳಲಿ.

ಯೌವನಸ್ಥರೇ, ಅದೇ ರೀತಿಯಾಗಿ ಹಿರಿಯರಿಗೆ ಅಧೀನರಾಗಿರಿ. ನೀವೆಲ್ಲರೂ ದೀನಮನಸ್ಸೆಂಬ ವಸ್ತ್ರವನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಸೇವೆ ಮಾಡಿರಿ. ಏಕೆಂದರೆ “ದೇವರು ಅಹಂಕಾರಿಗಳನ್ನು ವಿರೋಧಿಸುತ್ತಾನೆ. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.” ಹೀಗಿರುವುದರಿಂದ ದೇವರ ಬಲವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ. ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ಎತ್ತುವನು. ನಿಮ್ಮ ಚಿಂತಾಭಾರವನ್ನೆಲ್ಲಾ ಆತನ ಮೇಲೆ ಹಾಕಿರಿ ಆತನು ನಿಮಗೋಸ್ಕರ ಚಿಂತಿಸುತ್ತಾನೆ.

ಪ್ರೀತಿಯಿಂದ ಮುದ್ದಿಟ್ಟು ಒಬ್ಬರನೊಬ್ಬರು ವಂದಿಸಿರಿ. ಕ್ರಿಸ್ತನಲ್ಲಿರುವ ನಿಮ್ಮೆಲ್ಲರಿಗೂ ಸಮಾಧಾನವುಂಟಾಗಲಿ.

ಈ ಕಾರಣದಿಂದಲೇ ನೀವು ಪೂರ್ಣಾಸಕ್ತಿಯುಳ್ಳವರಾಗಿ ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ, ಸದ್ಗುಣಕ್ಕೆ ಜ್ಞಾನವನ್ನೂ, ಜ್ಞಾನಕ್ಕೆ ದಮೆಯನ್ನೂ, ದಮೆಗೆ ತಾಳ್ಮೆಯನ್ನೂ, ತಾಳ್ಮೆಗೆ ಭಕ್ತಿಯನ್ನೂ, ಭಕ್ತಿಗೆ ಸಹೋದರ ಸ್ನೇಹವನ್ನೂ, ಸಹೋದರ ಸ್ನೇಹಕ್ಕೆ ಪ್ರೀತಿಯನ್ನೂ ಕೂಡಿಸಿರಿ.

ಯಾರಾದರೂ ಆತನ ವಾಕ್ಯವನ್ನು ಅನುಸರಿಸಿ ನಡೆದರೆ ಅವನಲ್ಲಿ ನಿಜವಾಗಿ ದೇವರ ಮೇಲಣ ಪ್ರೀತಿಯು ಪರಿಪೂರ್ಣವಾಗಿದೆ. ಇಂತಹ ಕಾರ್ಯದಿಂದ ನಾವು ಆತನಲ್ಲಿ ಇದ್ದೇವೆಂಬುದನ್ನು ತಿಳಿದುಕೊಳ್ಳುತ್ತೇವೆ.

ಬೆಳಕಿನಲ್ಲಿದ್ದೇನೆಂದು ಹೇಳಿಕೊಂಡು ತನ್ನ ಸಹೋದರನನ್ನು ದ್ವೇಷಿಸುವವನು ಈವರೆಗೂ ಕತ್ತಲೆಯಲ್ಲಿದ್ದಾನೆ. ತನ್ನ ಸಹೋದರನನ್ನು ಪ್ರೀತಿಸುವವನು ಬೆಳಕಿನಲ್ಲಿ ನೆಲೆಗೊಂಡಿದ್ದಾನೆ ಮತ್ತು ಪಾಪದಲ್ಲಿ ಎಡವಿಬೀಳುವಂಥದ್ದು ಯಾವುದೂ ಅವನಲ್ಲಿ ಇಲ್ಲ. ಆದರೆ ತನ್ನ ಸಹೋದರನನ್ನು ದ್ವೇಷಿಸುವವನು ಕತ್ತಲೆಯಲ್ಲಿದ್ದಾನೆ ಮತ್ತು ಕತ್ತಲೆಯಲ್ಲಿ ನಡೆಯುತ್ತಿದ್ದಾನೆ. ಕತ್ತಲೆಯು ಅವನ ಕಣ್ಣುಗಳನ್ನು ಕುರುಡುಮಾಡಿರುವುದರಿಂದ ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂದು ಅವನಿಗೆ ತಿಳಿಯದು.

ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಿನ ಪ್ರೀತಿಯು ಅವನಲ್ಲಿಲ್ಲ.

ಇಗೋ, ನಾವು ದೇವರ ಮಕ್ಕಳೆಂದು ಕರೆಯಲ್ಪಡುವುದರಲ್ಲಿ ತಂದೆಯು ಎಂಥಾ ಪ್ರೀತಿಯನ್ನು ನಮ್ಮ ಮೇಲೆ ಇಟ್ಟಿದ್ದಾನಲ್ಲಾ! ನಾವು ಆತನ ಮಕ್ಕಳಾಗಿದ್ದೇವೆ. ಲೋಕವು ಆತನನ್ನು ಅರ್ಥಮಾಡಿಕೊಳ್ಳದೆ ಇರುವುದರಿಂದ ನಮ್ಮನ್ನೂ ಅರ್ಥಮಾಡಿಕೊಳ್ಳುವುದಿಲ್ಲ.

ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನೀವು ಮೊದಲಿನಿಂದಲೂ ಕೇಳಿದ ಸಂದೇಶವಾಗಿದೆ.

ನಾವಂತೂ ಕ್ರೈಸ್ತಸಹೋದರರನ್ನು ಪ್ರೀತಿಸುವವರಾಗಿರುವುದರಿಂದ ಮರಣದಿಂದ ಪಾರಾಗಿ ನಿತ್ಯಜೀವದಲ್ಲಿ ಸೇರಿದ್ದೇವೆಂಬುದು ನಮಗೆ ಗೊತ್ತಾಗಿದೆ. ತನ್ನ ಸಹೋದರನನ್ನು ಪ್ರೀತಿಸದೆ ಇರುವವನು ಮರಣದಲ್ಲೇ ಇದ್ದಾನೆ. ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರನಾಗಿದ್ದಾನೆ. ಮತ್ತು ಯಾವ ಕೊಲೆಗಾರನಲ್ಲಿಯೂ ನಿತ್ಯಜೀವವು ಇರುವುದಿಲ್ಲವೆಂಬುದು ನಿಮಗೆ ಗೊತ್ತಾಗಿದೆ. ಕ್ರಿಸ್ತನು ನಮಗೋಸ್ಕರ ತನ್ನ ಪ್ರಾಣವನ್ನು ಅರ್ಪಿಸಿದ್ದರಿಂದ ದೇವರ ಪ್ರೀತಿ ಇಂಥದ್ದೆಂದು ನಮಗೆ ತಿಳಿದು ಬಂದಿದೆ. ನಾವು ಸಹ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ. ಆದರೆ ಈ ಲೋಕದ ಸಂಪತ್ತುಳ್ಳ ಯಾರಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿ ಕನಿಕರಪಡದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರಲು ಸಾಧ್ಯವೇ? ನನ್ನ ಪ್ರಿಯ ಮಕ್ಕಳೇ, ನೀವು ಬರೀ ಮಾತಿನಿಂದಾಗಲಿ, ಬಾಯುಪಚಾರದಿಂದಾಗಲಿ, ಪ್ರೀತಿಸುವವರಾಗಿರದೆ ಕ್ರಿಯೆಗಳಿಂದಲೂ ಮತ್ತು ನಿಜ ಪ್ರೀತಿಯಿಂದ ಪ್ರೀತಿಸುವವರಾಗಿರಬೇಕು.

ದೇವರ ಆಜ್ಞೆ ಯಾವುದೆಂದರೆ ನಾವು ಆತನ ಮಗನಾದ ಯೇಸು ಕ್ರಿಸ್ತನನ್ನು ನಂಬಿ ಆತನು ನಮಗೆ ಕೊಟ್ಟಿರುವ ಆಜ್ಞೆಗಳ ಪ್ರಕಾರ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ.

ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಏಕೆಂದರೆ ಪ್ರೀತಿಯು ದೇವರಿಂದ ಬಂದದ್ದಾಗಿದೆ ಮತ್ತು ಪ್ರೀತಿ ಮಾಡುವ ಪ್ರತಿಯೊಬ್ಬನು ದೇವರಿಂದ ಹುಟ್ಟಿದವನೂ ದೇವರನ್ನು ಬಲ್ಲವನೂ ಆಗಿದ್ದಾನೆ. ಪ್ರೀತಿ ಇಲ್ಲದವನು ದೇವರನ್ನು ಬಲ್ಲವನಲ್ಲ. ಏಕೆಂದರೆ ದೇವರು ಪ್ರೀತಿಸ್ವರೂಪನಾಗಿದ್ದಾನೆ. ನಾವು ಆತನ ಮೂಲಕ ಜೀವಿಸುವುದಕ್ಕಾಗಿ ದೇವರು ತನ್ನ ಒಬ್ಬನೇ ಮಗನನ್ನು ಲೋಕಕ್ಕೆ ಕಳುಹಿಸಿಕೊಟ್ಟದ್ದರಲ್ಲಿಯೇ ದೇವರ ಪ್ರೀತಿಯು ನಮ್ಮಲ್ಲಿ ಪ್ರತ್ಯಕ್ಷವಾಗಿದೆ. ನಾವು ದೇವರನ್ನು ಪ್ರೀತಿಸಿಲ್ಲ, ಆದರೂ ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪಗಳಿಗೆ ಪ್ರಾಯಶ್ಚಿತ್ತ ಬಲಿಯಾಗಿ ತನ್ನ ಮಗನನ್ನು ಕಳುಹಿಸಿಕೊಟ್ಟಿದ್ದರಲ್ಲಿಯೇ ಆತನ ನಿಜವಾದ ಪ್ರೀತಿಯು ತೋರಿಬರುತ್ತದೆ. ಪ್ರಿಯರೇ, ದೇವರು ನಮ್ಮನ್ನು ಹೀಗೆ ಪ್ರೀತಿಸಿದ ಮೇಲೆ ನಾವೂ ಸಹ ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ. ದೇವರನ್ನು ಯಾರೂ ಎಂದೂ ನೋಡಿಲ್ಲ. ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ ದೇವರು ನಮ್ಮಲ್ಲಿ ನೆಲೆಗೊಂಡಿದ್ದಾನೆ, ಮತ್ತು ಆತನ ಪ್ರೀತಿಯು ನಮ್ಮಲ್ಲಿ ಪರಿಪೂರ್ಣಗೊಂಡಿರುತ್ತದೆ.

ಹೀಗೆ ದೇವರು ನಮ್ಮಲ್ಲಿಟ್ಟಿರುವ ಪ್ರೀತಿಯನ್ನು ನಾವು ತಿಳಿದುಕೊಂಡಿದ್ದೇವೆ. ಅದನ್ನು ನಂಬಿದ್ದೇವೆ. ದೇವರು ಪ್ರೀತಿಸ್ವರೂಪಿ, ಪ್ರೀತಿಯಲ್ಲಿ ನೆಲೆಗೊಂಡಿರುವವನು ದೇವರಲ್ಲಿ ನೆಲೆಗೊಂಡಿದ್ದಾನೆ. ದೇವರು ಅವನಲ್ಲಿ ನೆಲೆಗೊಂಡಿದ್ದಾನೆ. ನ್ಯಾಯತೀರ್ಪಿನ ದಿನದಲ್ಲಿ ನಾವು ಧೈರ್ಯದಿಂದಿರುವುದಕ್ಕಾಗಿ ಆತನ ಪ್ರೀತಿಯು ನಮ್ಮೊಳಗೆ ಪೂರ್ಣಗೊಂಡಿದೆ. ಈ ಲೋಕದಲ್ಲಿ ನಮ್ಮ ಬಾಳು ಕ್ರಿಸ್ತಯೇಸುವಿನ ಬಾಳಿನಂತೆ ಇರುವುದರಿಂದಲೇ ಆ ಭರವಸೆ ನಮಗೆ ಇರುತ್ತದೆ. ಪ್ರೀತಿ ಇರುವಲ್ಲಿ ಹೆದರಿಕೆಯಿಲ್ಲ. ಹೆದರಿಕೆಯಿರುವಲ್ಲಿ ಯಾತನೆಗಳಿರುವವು. ಆದರೆ ಪೂರ್ಣಪ್ರೀತಿಯು ಹೆದರಿಕೆಯನ್ನು ಹೊಡೆದೊಡಿಸಿಬಿಡುತ್ತದೆ. ಹೆದರುವವನು ಪ್ರೀತಿಯಲ್ಲಿ ಪೂರ್ಣಗೊಂಡವನಲ್ಲ. ದೇವರು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದಲೇ ನಾವು ಆತನನ್ನು ಪ್ರೀತಿಸುತ್ತೇವೆ. ಒಬ್ಬನು, “ತಾನು ದೇವರನ್ನು ಪ್ರೀತಿಸುತ್ತೇನೆ” ಎಂದು ಹೇಳಿ ತನ್ನ ಸಹೋದರನನ್ನು ದ್ವೇಷಿಸಿದರೆ ಅವನು ಸುಳ್ಳುಗಾರನಾಗಿದ್ದಾನೆ. ಏಕೆಂದರೆ ತನ್ನೊಂದಿಗೆ ಇರುವ ಸಹೋದರನನ್ನು ಪ್ರೀತಿಸದವನು, ತಾನು ಕಾಣದಿರುವ ದೇವರನ್ನು ಹೇಗೆ ಪ್ರೀತಿಸಬಲ್ಲನು? ದೇವರನ್ನು ಪ್ರೀತಿಸುವವನು, ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬ ಆಜ್ಞೆಯನ್ನು ನಾವು ಆತನಿಂದ ಹೊಂದಿದ್ದೇವೆ.

ಯೇಸುವೇ ಕ್ರಿಸ್ತನೆಂದು ನಂಬುವ ಪ್ರತಿಯೊಬ್ಬನೂ ದೇವರಿಂದ ಹುಟ್ಟಿದವನಾಗಿದ್ದಾನೆ. ಯಾವನು ತನ್ನನ್ನು ಹುಟ್ಟಿಸಿದ ತಂದೆಯನ್ನು ಪ್ರೀತಿಸುತ್ತಾನೋ, ಅವನು ತಂದೆಯಿಂದ ಹುಟ್ಟಿದವರೆಲ್ಲರನ್ನೂ ಪ್ರೀತಿಸುತ್ತಾನೆ. ನಾವು ದೇವರನ್ನು ಪ್ರೀತಿಸಿ ಆತನ ಆಜ್ಞೆಗಳನ್ನು ಅನುಸರಿಸುವುದರಿಂದಲೇ ದೇವರ ಮಕ್ಕಳನ್ನು ಪ್ರೀತಿಸುತ್ತೇವೆಂಬುದನ್ನು ತಿಳಿದುಕೊಳ್ಳುತ್ತೇವೆ. ದೇವರ ಮೇಲಿನ ಪ್ರೀತಿ ಏನೆಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ. ಆತನ ಆಜ್ಞೆಗಳು ಕಷ್ಟಕರವಾದವುಗಳಲ್ಲ.

ತಂದೆಯಾದ ದೇವರಿಂದಲೂ, ದೇವರ ಮಗನಾಗಿರುವ ಯೇಸು ಕ್ರಿಸ್ತನಿಂದಲೂ, ಕೃಪೆಯೂ, ಕರುಣೆಯೂ, ಶಾಂತಿಯೂ, ಸತ್ಯವೂ, ಪ್ರೀತಿಯೂ ಸದಾಕಾಲ ನಮ್ಮೊಂದಿಗಿರಲಿ.

ಅಮ್ಮನವರೇ, ನಾನು ಹೊಸ ಆಜ್ಞೆಯನ್ನು ನಿಮಗೆ ಬರೆಯದೆ, ಮೊದಲಿನಿಂದಲೂ ನಮಗೆ ಇದ್ದ ಆಜ್ಞೆಯನ್ನು ನಿಮಗೆ ಬರೆಯುವವನಾಗಿ; ನಾವು ಒಬ್ಬರನ್ನೊಬ್ಬರು ಪ್ರೀತಿಸುವವರಾಗಿರೋಣ ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ದೇವರ ಆಜ್ಞೆಗಳನ್ನು ಅನುಸರಿಸಿ, ವಿಧೇಯರಾಗಿ ನಡೆಯುವುದೇ ಪ್ರೀತಿಯಾಗಿದೆ. ಪ್ರೀತಿಯಲ್ಲಿ ನಡೆಯಬೇಕೆಂಬುದೇ, ನೀವು ಮೊದಲಿನಿಂದಲೂ ಕೇಳಿದ ಆಜ್ಞೆಯಾಗಿದೆ.

ನಿತ್ಯ ಜೀವಕ್ಕಾಗಿ ನಮ್ಮ ಕರ್ತನಾದ ಯೇಸುಕ್ರಿಸ್ತನ ಕರುಣೆಯನ್ನು ಎದುರುನೋಡುತ್ತಾ, ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ. ಸಂಶಯಪಡುವವರಿಗೆ ಕರುಣೆಯನ್ನು ತೋರಿಸಿರಿ, ಬೆಂಕಿಯ ಬಾಯಲ್ಲಿ ಇರುವವರನ್ನು ಎಳೆದು ಸಂರಕ್ಷಿಸಿರಿ, ಕೆಲವರನ್ನು ಭಯಪಡುತ್ತಾ ಕರುಣಿಸಿರಿ. ಶಾರೀರಿಕ ನಡತೆಯಿಂದ ಹೊಲಸಾದ ಅವರ ಉಡುಪನ್ನೂ ಸಹ ಹಗೆಮಾಡಿರಿ.

ಮತ್ತು ನಂಬಿಗಸ್ತ ಸಾಕ್ಷಿಯೂ, ಸತ್ತವರೊಳಗಿಂದ ಮೊದಲು ಎದ್ದುಬಂದಾತನೂ ಮತ್ತು ಭೂರಾಜರ ಅಧಿಪತಿಯೂ ಆಗಿರುವ ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. ನಮ್ಮನ್ನು ಪ್ರೀತಿಸುವಾತನೂ ತನ್ನ ಪವಿತ್ರವಾದ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದಾತನೂ,

ಆದರೂ ನಿನ್ನ ಮೇಲೆ ಹೊರಿಸಬೇಕಾದ ಆಪಾದನೆ ಒಂದಿದೆ.ಮೊದಲು ನಿನಗೆ ನನ್ನ ಮೇಲಿದ್ದ ಪ್ರೀತಿ ಈಗಿಲ್ಲ.

ನಿನ್ನ ಕೃತ್ಯಗಳನ್ನೂ, ನಿನ್ನ ಪ್ರೀತಿಯನ್ನೂ, ನಂಬಿಕೆಯನ್ನೂ, ಸೇವೆಯನ್ನೂ ಮತ್ತು ತಾಳ್ಮೆಯನ್ನೂ ಬಲ್ಲೆನು. ಇದಲ್ಲದೆ ನಿನ್ನ ಇತ್ತೀಚಿನ ಕೃತ್ಯಗಳು ನಿನ್ನ ಮೊದಲಿನ ಕೃತ್ಯಗಳಿಗಿಂತ ಮೇಲಾದದ್ದು ಎಂದು ಬಲ್ಲೆನು.

ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ. ಆದ್ದರಿಂದ ನೀನು ಜಾಗರೂಕನಾಗಿರು. ಮಾನಸಾಂತರ ಹೊಂದಿ ದೇವರ ಕಡೆಗೆ ತಿರಿಗಿಕೋ.

ಇನ್ನೆಂದಿಗೂ ಅವರಿಗೆ ಹಸಿವೆಯಾಗಲಿ, ಬಾಯಾರಿಕೆಯಾಗಲಿ ಆಗುವುದಿಲ್ಲ, ಅವರಿಗೆ ಸೂರ್ಯನ ಬಿಸಿಲಾದರೂ, ಯಾವ ಝಳವಾದರೂ ತಟ್ಟುವುದಿಲ್ಲ. ಏಕೆಂದರೆ ಸಿಂಹಾಸನದ ಮಧ್ಯದಲ್ಲಿರುವ ಯಜ್ಞದ ಕುರಿಮರಿಯಾದಾತನು ಅವರಿಗೆ ಕುರುಬನಂತಿದ್ದು ಜೀವಜಲದ ಒರತೆಗಳ ಬಳಿಗೆ ಅವರನ್ನು ನಡಿಸುತ್ತಾನೆ. ದೇವರು ಅವರ ಕಣ್ಣಿನಿಂದ ಕಣ್ಣೀರನ್ನೆಲ್ಲಾ ಒರೆಸಿಬಿಡುವನು.” ಎಂದು ಹೇಳಿದರು.

ಇದಲ್ಲದೆ ಪರಲೋಕದಿಂದ ಪರಿಶುದ್ಧ ಪಟ್ಟಣವಾದ ಹೊಸ ಯೆರೂಸಲೇಮ್ ದೇವರ ಬಳಿಯಿಂದ ಇಳಿದು ಬರುವುದನ್ನು ಕಂಡೆನು. ಅದು ತನ್ನ ಪತಿಗೋಸ್ಕರ ಸಿದ್ಧಳಾಗಿರುವ ಮದಲಗಿತ್ತಿಯಂತೆ ಶೃಂಗರಿಸಲ್ಪಟ್ಟಿತ್ತು.

ಅವರ ಕಣ್ಣೀರನ್ನೆಲ್ಲಾ ಆತನೇ ಒರಸಿಬಿಡುವನು. ಇನ್ನು ಮರಣವಿರುವುದಿಲ್ಲ. ಇನ್ನು ದುಃಖವಾಗಲಿ, ಗೋಳಾಟವಾಗಲಿ, ಕಷ್ಟವಾಗಲಿ ಇರುವುದಿಲ್ಲ. ಮೊದಲಿದ್ದದ್ದೆಲ್ಲಾ ಇಲ್ಲದಂತಾಯಿತು” ಎಂದು ಹೇಳಿತು. ಆಗ ಸಿಂಹಾಸನದ ಮೇಲೆ ಕುಳಿತಿದ್ದಾತನು, “ಇಗೋ, ನಾನು ಎಲ್ಲವನ್ನು ನೂತನಗೊಳಿಸುತ್ತೇನೆ” ಎಂದನು. ಮತ್ತು ಒಬ್ಬನು ನನಗೆ, “ನೀನು ಇದನ್ನು ಬರೆ. ಏಕೆಂದರೆ ಈ ಮಾತುಗಳು ನಂಬತಕ್ಕವೂ, ಸತ್ಯವಾದವೂ ಆಗಿವೆ” ಎಂದು ಹೇಳಿದನು. ಆಗ ಸಿಂಹಾಸನದ ಮೇಲೆ ಕುಳಿತಿದ್ದಾತನು, “ಎಲ್ಲಾ ನೆರವೇರಿತು, ನಾನೇ ಆದಿಯು, ಅಂತ್ಯವೂ, ಪ್ರಾರಂಭವೂ, ಸಮಾಪ್ತಿಯೂ ಆಗಿದ್ದೇನೆ. ದಾಹವುಳ್ಳವನಿಗೆ ಜೀವಜಲದ ಬುಗ್ಗೆಯಿಂದ ಕ್ರಯವಿಲ್ಲದೆ ಕುಡಿಯುವುದಕ್ಕೆ ಕೊಡುವೆನು. ಜಯ ಹೊಂದುವವನು ಇವುಗಳಿಗೆ ಬಾಧ್ಯನಾಗುವನು. ನಾನು ಅವನಿಗೆ ದೇವರಾಗಿರುವೆನು. ಅವನು ನನಗೆ ಮಗನಾಗಿರುವನು.

Kannada - ಕನ್ನಡ - KN

KNIRV'19 - Kannada Indian Revised Version - 2019

This Bible text is from Kannada Indian Revised Version IRV 2019
https://open.bible/bibles/kannada-bridge-text-bible/
provided by: Bridge Connectivity Solutions Pvt Ltd, available by Creative Commons CC-BY-SA-4.0,
and this new compilation is shared as www.creativecommons.org/licenses/by-sa/4.0.
Languages are made available to you by www.ipedge.net