12 – ಲೈಂಗಿಕ ಅನೈತಿಕತೆ

ಇವು ಸರ್ವಶಕ್ತನಾದ ದೇವರ ಪವಿತ್ರ ಮಾತುಗಳು.
ಮಾನವರ ಮಾತುಗಳಲ್ಲಿ ನಮಗೆ ಆಸಕ್ತಿ ಇಲ್ಲ.
ದೇವರನ್ನು ಪ್ರೀತಿಸುವ ಯಾರಿಗಾದರೂ... ದೇವರು ಇದರ ಬಗ್ಗೆ ಹೀಗೆ ಹೇಳುತ್ತಾನೆ: ಲೈಂಗಿಕ ಅನೈತಿಕತೆ.

ಟಾಪ್ 3 ಅತ್ಯಂತ ಮಹತ್ವದ ಪದ್ಯಗಳು

ಆದರೆ ನಾನು ನಿಮಗೆ ಹೇಳುವುದೇನಂದರೆ, ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿಯೊಬ್ಬ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾಗಿದ್ದಾನೆ.

ಕ್ರಿಸ್ತ ಯೇಸುವಿನಲ್ಲಿರುವವರು ತಮ್ಮ ಶರೀರಭಾವವನ್ನು ಅದರ ವಿಷಯಾಭಿಲಾಷೆ, ಸ್ವೇಚ್ಛಾಭಿಲಾಷೆಗಳ ಸಹಿತವಾಗಿ ಶಿಲುಬೆಗೆ ಹಾಕಿದವರಾಗಿದ್ದಾರೆ.

ಮತ್ತು ವ್ಯಭಿಚಾರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುವವನು ವ್ಯಭಿಚಾರ ಮಾಡಿದಂತೆ;ಮತ್ತು ಗಂಡ ಬಿಟ್ಟವಳನ್ನು ಮದುವೆಯಾಗುವವನು ವ್ಯಭಿಚಾರ ಮಾಡಿದಂತೆ” ಎಂದು ನಿಮಗೆ ಹೇಳುತ್ತೇನೆ ಅಂದನು.

ಕ್ಯಾನೊನಿಕಲ್ ಕ್ರಮದಲ್ಲಿ ಪ್ರತಿ ವಚನ - 177 ಭಾಗಗಳು

ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗಿರುವರು.

ಇದಲ್ಲದೆ ಯೆಹೋವನು, “ಸೊದೋಮ್ ಗೊಮೋರಗಳ ದೊಡ್ಡ ಮೊರೆ ನನಗೆ ಮುಟ್ಟಿತು; ಆ ಊರಿನವರ ಮೇಲೆ ಹೊರಿಸಿರುವ ಪಾಪವು ಎಷ್ಟೋ ಘೋರವಾದದ್ದು, ನಾನು ಇಳಿದು ಹೋಗಿ, ನನಗೆ ಮುಟ್ಟಿದ ಮೊರೆಯಂತೆಯೇ ಅವರು ಮಾಡಿರುವರೋ ಇಲ್ಲವೋ ಎಂದು ನೋಡಿ ತಿಳಿದುಕೊಳ್ಳುತ್ತೇನೆ” ಎಂದನು. ಆ ಮನುಷ್ಯರು ಅಲ್ಲಿಂದ ಸೊದೋಮಿನ ಕಡೆಗೆ ಹೋದರು; ಆದರೆ ಅಬ್ರಹಾಮನು ಯೆಹೋವನಿಗೆ ಎದುರಾಗಿ ಇನ್ನೂ ನಿಂತುಕೊಂಡಿದ್ದನು. ಆಗ ಅಬ್ರಹಾಮನು ಹತ್ತಿರಕ್ಕೆ ಬಂದು, “ನೀನು ದುಷ್ಟರ ಸಂಗಡ ನೀತಿವಂತರನ್ನೂ ನಾಶಮಾಡುವಿಯಾ? ಒಂದು ವೇಳೆ ಆ ಪಟ್ಟಣದೊಳಗೆ ಐವತ್ತು ಮಂದಿ ನೀತಿವಂತರಿದ್ದಾರು; ಅದರಲ್ಲಿ ಐವತ್ತು ಮಂದಿ ನೀತಿವಂತರಿದ್ದರೂ ಆ ಸ್ಥಳವನ್ನು ಉಳಿಸದೆ ನಾಶಮಾಡುವಿಯಾ? ಆ ರೀತಿಯಾಗಿ ದುಷ್ಟರಿಗೂ ಶಿಷ್ಟರಿಗೂ ಭೇದ ಮಾಡದೆ ದುಷ್ಟರ ಸಂಗಡ ನೀತಿವಂತರನ್ನೂ ಸಂಹರಿಸುವುದು ನಿನ್ನಿಂದ ಎಂದಿಗೂ ಆಗಬಾರದು; ಸರ್ವಲೋಕಕ್ಕೆ ನ್ಯಾಯತೀರಿಸುವವನು ನ್ಯಾಯವನ್ನೇ ನಡಿಸುವನಲ್ಲವೇ” ಎಂದು ಹೇಳಲು. ಯೆಹೋವನು, “ಸೊದೋಮನಲ್ಲಿ ಐವತ್ತು ಮಂದಿ ನೀತಿವಂತರು ನನಗೆ ಸಿಕ್ಕಿದರೆ ಅವರ ನಿಮಿತ್ತ ಪಟ್ಟಣವನ್ನೆಲ್ಲಾ ಉಳಿಸುವೆನು” ಎಂದನು. ಅದಕ್ಕೆ ಅಬ್ರಹಾಮನು, “ಇಗೋ, ಮಣ್ಣೂ ಬೂದಿಯೂ ಆಗಿರುವ ನಾನು ಸ್ವಾಮಿಯ ಸಂಗಡ ವಾದಿಸುವುದಕ್ಕೆ ಧೈರ್ಯಗೊಂಡಿದ್ದೇನೆ; ಒಂದು ವೇಳೆ ಐವತ್ತು ಮಂದಿ ನೀತಿವಂತರಲ್ಲಿ ಐದು ಮಂದಿ ಕಡಿಮೆ ಇದ್ದರೆ ಪಟ್ಟಣವನ್ನೆಲ್ಲಾ ನಾಶ ಮಾಡುವಿಯಾ?” ಎಂದು ಕೇಳಲು ಯೆಹೋವನು, “ಅಲ್ಲಿ ನಲ್ವತ್ತೈದು ಮಂದಿ ನೀತಿವಂತರು ಸಿಕ್ಕಿದರೆ ಅದನ್ನು ನಾಶ ಮಾಡುವುದಿಲ್ಲ” ಅಂದನು. ಅಬ್ರಹಾಮನು ಆತನ ಸಂಗಡ ಇನ್ನೂ ಮಾತನಾಡಿ, “ಒಂದು ವೇಳೆ ಅಲ್ಲಿ ನಲ್ವತ್ತು ಮಂದಿ ಸಿಕ್ಕಾರು” ಎನ್ನಲು ಆತನು, “ನಲ್ವತ್ತು ಮಂದಿ ಸಿಕ್ಕಿದರೆ ಆ ಪಟ್ಟಣವನ್ನು ನಾಶ ಮಾಡುವುದಿಲ್ಲ” ಎಂದನು. ಅಬ್ರಹಾಮನು, “ಕರ್ತನೇ, ಕೋಪಮಾಡಬಾರದು; ಇನ್ನೂ ಮಾತನಾಡುತ್ತೇನೆ; ಒಂದು ವೇಳೆ ಮೂವತ್ತು ಮಂದಿ ಅಲ್ಲಿ ಸಿಕ್ಕಾರು” ಎನ್ನಲು ಆತನು, “ಅಲ್ಲಿ ಮೂವತ್ತು ಮಂದಿ ಸಿಕ್ಕಿದರೆ ಅದನ್ನು ನಾಶ ಮಾಡುವುದಿಲ್ಲ” ಅಂದನು. ಅವನು, “ಇಗೋ, ಸ್ವಾಮಿಯ ಸಂಗಡ ಮಾತನಾಡುವುದಕ್ಕೆ ಧೈರ್ಯಗೊಂಡಿದ್ದೇನೆ; ಒಂದು ವೇಳೆ ಇಪ್ಪತ್ತು ಮಂದಿ ಅಲ್ಲಿ ಸಿಕ್ಕಾರು” ಎನ್ನಲು ಆತನು, “ಇಪ್ಪತ್ತು ಮಂದಿಯಿದ್ದರೆ ಅವರ ನಿಮಿತ್ತ ಆ ಪಟ್ಟಣವನ್ನು ಉಳಿಸುವೆನು, ನಾಶ ಮಾಡುವುದಿಲ್ಲ” ಅಂದನು. ಅಬ್ರಹಾಮನು, “ಕರ್ತನೇ, ಸಿಟ್ಟಾಗಬಾರದು; ಇನ್ನು ಒಂದೇ ಸಾರಿ ಮಾತನಾಡುತ್ತೇನೆ; ಒಂದು ವೇಳೆ ಹತ್ತು ಮಂದಿ ಸಿಕ್ಕಾರು” ಎನ್ನಲು ಆತನು, “ಹತ್ತು ಮಂದಿಯ ನಿಮಿತ್ತವೂ ಅದನ್ನು ಉಳಿಸುವೆನು, ನಾಶ ಮಾಡುವುದಿಲ್ಲ.” ಎಂದನು.

ಆ ದೂತರಿಬ್ಬರು ಸಾಯಂಕಾಲದಲ್ಲಿ ಸೊದೋಮಿಗೆ ಬಂದಾಗ ಲೋಟನು ಸೊದೋಮಿನ ಊರು ಬಾಗಿಲಲ್ಲಿ ಕುಳಿತುಕೊಂಡಿದ್ದನು. ಅವನು ಅವರನ್ನು ಕಂಡಾಗ ಎದ್ದು, ಎದುರುಗೊಂಡು ತಲೆ ಬಾಗಿ ನಮಸ್ಕರಿಸಿ, “ಸ್ವಾಮಿಗಳೇ, ನಿಮ್ಮ ದಾಸನ ಮನೆಗೆ ಬಂದು ಇಳಿದುಕೊಂಡು ಕಾಲುಗಳನ್ನು ತೊಳೆದುಕೊಳ್ಳಿರಿ; ಬೆಳಿಗ್ಗೆ ನಿಮ್ಮ ಮಾರ್ಗ ಹಿಡಿದುಕೊಂಡು ಹೋಗಬಹುದು” ಅಂದನು. ಅವರು, “ಹಾಗಲ್ಲ, ಬೀದಿಯಲ್ಲೇ ರಾತ್ರಿ ಕಳೆಯುತ್ತೇವೆ” ಎನ್ನಲು ಅವನು ಅವರನ್ನು ಬಹಳ ಬಲವಂತ ಮಾಡಿದ್ದರಿಂದ ಅವರು ಅವನ ಬಳಿಯಲ್ಲಿ ಇಳಿದುಕೊಳ್ಳುವುದಕ್ಕೆ ಒಪ್ಪಿದರು. ಅವರು ಮನೆಗೆ ಬಂದಾಗ ಅವನು ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿ ಔತಣವನ್ನು ಮಾಡಿಸಲು ಅವರು ಊಟಮಾಡಿದರು. ಅವರು ಮಲಗುವುದಕ್ಕಿಂತ ಮುಂಚೆ ಹುಡುಗರು ಮುದುಕರು ಸಹಿತವಾಗಿ ಸೊದೋಮಿನ ಪಟ್ಟಣದವರೆಲ್ಲರೂ ಒಗ್ಗಟ್ಟಾಗಿ ಮನೆಯನ್ನು ಮುತ್ತಿಗೆ ಹಾಕಿ, ಲೋಟನಿಗೆ, “ಈ ರಾತ್ರಿ ನಿನ್ನ ಬಳಿಗೆ ಬಂದ ಮನುಷ್ಯರು ಎಲ್ಲಿ? ಅವರನ್ನು ಹೊರಕ್ಕೆ ಕರೆದುಕೊಂಡು ಬಾ; ಅವರೊಡನೆ ನಮಗೆ ಸಂಗಮವಾಗಬೇಕೆಂದು” ಕೂಗಿ ಹೇಳಿದರು. ಲೋಟನು ಅವರ ಬಳಿಗೆ ಹೊರಕ್ಕೆ ಬಂದು ತನ್ನ ಹಿಂದೆ ಕದಹಾಕಿ, “ಅಣ್ಣಂದಿರೇ, ಈ ದುಷ್ಟತನವನ್ನು ಮಾಡಬೇಡಿರಿ. ಕೇಳಿರಿ, ನನಗೆ ಪುರುಷನನ್ನು ಅರಿಯದ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ; ಅವರನ್ನಾದರೂ ನಿಮಗೆ ತಂದು ಒಪ್ಪಿಸುತ್ತೇನೆ; ಅವರನ್ನು ಮನಸ್ಸು ಬಂದಂತೆ ಮಾಡಬಹುದು; ಆದರೆ ಆ ಮನುಷ್ಯರು ನನ್ನ ಆಶ್ರಯಕ್ಕೆ ಬಂದವರು; ಅವರಿಗೆ ಏನೂ ಮಾಡಕೂಡದು” ಎಂದು ಹೇಳಿದನು. ಅವರು ದಾರಿ ಬಿಡು ಎಂದು ಹೇಳಿ, “ಇವನು ಯಾರೋ ಒಬ್ಬ ಪರದೇಶಿಯಾಗಿ ಬಂದು ಈಗ ನ್ಯಾಯಾಧಿಪತಿಯಾಗಬೇಕೆಂದಿದ್ದಾನೆ; ಆ ಮನುಷ್ಯರಿಗೆ ಕೇಡು ಮಾಡುವುದಕ್ಕಿಂತ ಹೆಚ್ಚಾಗಿ ನಿನಗೇ ಕೇಡು ಮಾಡುತ್ತೇವೆ” ಎಂದು ಹೇಳಿ ಲೋಟನ ಮೇಲೆ ಬಿದ್ದು ಬಹಳವಾಗಿ ತುಳಿದು ಬಾಗಿಲನ್ನು ಮುರಿಯಲು ಸಮೀಪಕ್ಕೆ ಬಂದರು. ಆದರೆ ಒಳಗಿದ್ದ ಆ ಮನುಷ್ಯರು ಕೈಚಾಚಿ ಲೋಟನನ್ನು ತಮ್ಮ ಕಡೆಗೆ ಎಳೆದುಕೊಂಡು ಮನೆಯೊಳಗೆ ಸೇರಿಸಿ ಕದ ಮುಚ್ಚಿದರು. ಇದಲ್ಲದೆ ಅವರು ಮನೆಯ ಹೊರಗಿದ್ದ ಮನುಷ್ಯರಿಗೆ ಚಿಕ್ಕವರಿಗೂ ದೊಡ್ಡವರಿಗೂ ಕೂಡ ಕಣ್ಣು ಮೊಬ್ಬಾಗುವಂತೆ ಮಾಡಿದ್ದರಿಂದ ಅವರು ಬಾಗಿಲು ಯಾವುದೆಂದು ತಿಳಿಯದೆ ಬೇಸರಗೊಂಡರು.

ಆಗ ಆ ದೂತರು ಲೋಟನಿಗೆ, “ಇಲ್ಲಿ ನಿನಗೆ ಇನ್ನಾರಿದ್ದಾರೆ? ಅಳಿಯಂದಿರನ್ನೂ ಗಂಡು ಮತ್ತು ಹೆಣ್ಣು ಮಕ್ಕಳನ್ನೂ ಪಟ್ಟಣದಲ್ಲಿ ನಿನಗಿರುವ ಎಲ್ಲರನ್ನೂ ಊರ ಹೊರಕ್ಕೆ ಕರೆದುಕೊಂಡು ಬಾ. ನಾವು ಈ ಸ್ಥಳವನ್ನು ನಾಶಮಾಡುವುದಕ್ಕೆ ಬಂದವರು. ಇಲ್ಲಿಯವರ ವಿಷಯವಾಗಿ ಬಲು ದೊಡ್ಡ ಮೊರೆಯು ಯೆಹೋವನಿಗೆ ಮುಟ್ಟಿದ್ದರಿಂದ ಇವರನ್ನು ನಾಶಮಾಡುವುದಕ್ಕಾಗಿ ಆತನು ನಮ್ಮನ್ನು ಕಳುಹಿಸಿದ್ದಾನೆ” ಎಂದು ಹೇಳಿದರು. ಆಗ ಲೋಟನು ಹೊರಕ್ಕೆ ಹೋಗಿ ತನ್ನ ಹೆಣ್ಣುಮಕ್ಕಳನ್ನು ಗೊತ್ತುಮಾಡಿಕೊಂಡಿದ್ದ ಅಳಿಯಂದಿರಿಗೆ ಈ ಸಂಗತಿಯನ್ನು ತಿಳಿಸಿ, “ನೀವೆದ್ದು, ಈ ಸ್ಥಳವನ್ನು ಬಿಟ್ಟು ಹೋಗಿರಿ ಯೆಹೋವನು ಈ ಊರನ್ನು ನಾಶಮಾಡುತ್ತಾನೆ” ಎಂದು ಹೇಳಿದನು. ಆದರೆ ಅವರು ಲೋಟನು ಅಪಹಾಸ್ಯ ಮಾಡುತ್ತಿದ್ದಾನೆ ಎಂದುಕೊಂಡರು. ಹೊತ್ತು ಮೂಡುವುದಕ್ಕೆ ಮುಂಚೆ ಆ ದೂತರು ಲೋಟನಿಗೆ, “ನೀನೆದ್ದು ಇಲ್ಲಿರುವ ನಿನ್ನ ಹೆಂಡತಿಯನ್ನೂ ನಿನ್ನ ಇಬ್ಬರು ಹೆಣ್ಣುಮಕ್ಕಳನ್ನೂ ಬೇಗ ಕರೆದುಕೊಂಡು ಹೋಗು; ಊರಿಗೆ ಉಂಟಾಗುವ ದಂಡನೆಯಿಂದ ನಿನಗೂ ನಾಶವುಂಟಾದೀತು” ಎಂದು ಹೇಳಿ ತ್ವರೆಪಡಿಸಿದರು. ಅವನು ತಡಮಾಡಲು ಯೆಹೋವನು ಅವನನ್ನು ಕನಿಕರಿಸಿದ್ದರಿಂದ ಆ ಮನುಷ್ಯರು ಅವನನ್ನೂ ಅವನ ಹೆಂಡತಿ ಮಕ್ಕಳನ್ನೂ ಕೈಹಿಡಿದು ಹೊರಗೆ ತಂದು ಪಟ್ಟಣದ ಆಚೆಗೆ ಬಿಟ್ಟರು. ಅವರನ್ನು ಹೊರಗೆ ತಂದ ಮೇಲೆ ಅವರಲ್ಲಿ ಒಬ್ಬನು, “ಓಡಿಹೋಗು, ಪ್ರಾಣವನ್ನು ಉಳಿಸಿಕೋ; ಹಿಂದಕ್ಕೆ ತಿರುಗಿ ನೋಡಬೇಡ; ಈ ಪ್ರದೇಶದೊಳಗೆ ಎಲ್ಲಿಯೂ ನಿಲ್ಲದೆ ಬೆಟ್ಟದ ಸೀಮೆಗೆ ಓಡಿಹೋಗು; ನಿನಗೂ ನಾಶವುಂಟಾದೀತು” ಎಂದನು.

ಆಗ ಯೆಹೋವನು ಸೊದೋಮ್ ಗೊಮೋರಗಳ ಮೇಲೆ ಆಕಾಶದಿಂದ ಅಗ್ನಿಗಂಧಕಗಳನ್ನು ಸುರಿಸಿ

ಲೋಟನ ಹೆಂಡತಿ ಅವನ ಹಿಂದೆ ಬರುತ್ತಿರುವಾಗ ಹಿಂತಿರುಗಿ ನೋಡಿದ್ದರಿಂದ ಉಪ್ಪಿನ ಕಂಬವಾದಳು.

ಆದರೆ ಆ ರಾತ್ರಿ ದೇವರು ಅಬೀಮೆಲೆಕನ ಕನಸಿನಲ್ಲಿ ಬಂದು, “ನೀನು ಆ ಸ್ತ್ರೀಯನ್ನು ಸೇರಿಸಿಕೊಂಡಿರುವುದರಿಂದ ಮರಣಕ್ಕೆ ಯೋಗ್ಯನಾಗಿದ್ದಿ; ಆಕೆ ಮತ್ತೊಬ್ಬ ಪುರುಷನ ಹೆಂಡತಿ” ಎಂದನು.

ದೇಶಾಧಿಪತಿಯಾಗಿರುವ ಹಿವ್ವಿಯನಾದ ಹಮೋರನ ಮಗ ಶೆಕೆಮನು ಆಕೆಯನ್ನು ನೋಡಿ ತೆಗೆದುಕೊಂಡು ಹೋಗಿ ಮಾನಭಂಗಪಡಿಸಿದನು.

ಯಾಕೋಬನ ಗಂಡುಮಕ್ಕಳು ತಂಗಿಯ ಸಂಗತಿಯನ್ನು ಕೇಳಿ ಅಡವಿಯಿಂದ ಬಂದಾಗ ವ್ಯಸನಪಟ್ಟು ಬಹಳ ಕೋಪಗೊಂಡರು. ಶೆಕೆಮನು ಯಾಕೋಬನ ಮಗಳ ಮಾನಭಂಗ ಮಾಡಿ ಇಸ್ರಾಯೇಲರೊಳಗೆ ಬಹಳ ಅವಮಾನಕರವಾದ ಕೆಲಸವನ್ನು ಮಾಡಿದನು.

ಊರಿನವರ ಮೇಲೆ ಬಿದ್ದು ಹಮೋರ ಮತ್ತು ಅವನ ಮಗನಾದ ಶೆಕೆಮ್ ಸಹಿತವಾಗಿ ಪುರುಷರೆಲ್ಲರನ್ನೂ ದಾಕ್ಷಿಣ್ಯವಿಲ್ಲದೆ ಕತ್ತಿಯಿಂದ ಕೊಂದು ಶೆಕೆಮನ ಮನೆಯಿಂದ ದೀನಳನ್ನು ಕರೆದುಕೊಂಡು ಹೊರಟುಹೋದರು. ಅವರು ಹತವಾದ ನಂತರ ಯಾಕೋಬನ ಮಕ್ಕಳು ಬಂದು, ಇವರು ನಮ್ಮ ತಂಗಿಯನ್ನು ಮಾನಭಂಗಪಡಿಸಿದ್ದಾರೆ ಎಂದು ಹೇಳಿ ಊರನ್ನು ಸೂರೆಮಾಡಿಬಿಟ್ಟರು.

ಅದಕ್ಕೆ ಅವರು, “ನಮ್ಮ ತಂಗಿಯನ್ನು ವೇಶ್ಯೆಯಂತೆ ಉಪಯೋಗಿಸಿಕೊಂಡಿದ್ದು ಸರಿಯೇ” ಎಂದು ಕೇಳಿದರು.

ಯೆಹೂದನು ಆಕೆಯನ್ನು ಕಂಡಾಗ ಮುಖದ ಮೇಲೆ ಮುಸುಕು ಇದ್ದದರಿಂದ ಸೊಸೆ ಎಂದು ತಿಳಿಯದೆ ವೇಶ್ಯಾಸ್ತ್ರೀಯೆಂದು ಭಾವಿಸಿದನು. ಮಾರ್ಗದಿಂದ ಓರೆಯಾಗಿ ಆಕೆಯ ಬಳಿಗೆ ಹೋಗಿ, “ನಾನು ನಿನ್ನ ಬಳಿಗೆ ಬರಲೇ ಎಂದು ಕೇಳಿದನು” ಆಕೆ, “ನೀನು ನನ್ನಲ್ಲಿ ಬರಬೇಕಾದರೆ, ನನಗೆ ಏನು ಕೊಡುತ್ತೀ?” ಎಂದು ಕೇಳಿದಳು. ಅವನು, “ಹಿಂಡಿನಿಂದ ಒಂದು ಹೋತಮರಿಯನ್ನು ಕಳುಹಿಸುತ್ತೇನೆ” ಅಂದಾಗ ಆಕೆ, “ನೀನು ಆದನ್ನು ಕೊಡುವ ತನಕ ನನ್ನಲ್ಲಿ ಏನಾದರೂ ಒತ್ತೆಯಿಡಬೇಕು” ಎಂದು ಹೇಳಿದ್ದಕ್ಕೆ, ಅವನು, “ಏನು ಒತ್ತೇ ಇಡಲಿ” ಎಂದು ಕೇಳಿದನು. ಆಗ ಆಕೆಯು “ನಿನ್ನ ಮುದ್ರೆ, ನಿನ್ನ ದಾರ, ನಿನ್ನ ಕೈಕೋಲು ಈ ಮೂರನ್ನು ಒತ್ತೆಯಾಗಿ ಇಡು” ಅಂದಳು. ಅವನು ಅವುಗಳನ್ನು ಕೊಟ್ಟು ಆಕೆಯನ್ನು ಸಂಗಮಿಸಲು ಆಕೆಯು ಅವನಿಗೆ ಗರ್ಭಿಣಿಯಾದಳು. ತರುವಾಯ ಆಕೆ ತಾನು ಹಾಕಿಕೊಂಡಿದ್ದ ಮುಸುಕನ್ನು ತೆಗೆದಿಟ್ಟು ತಿರುಗಿ ವಿಧವೆಯ ವಸ್ತ್ರಗಳನ್ನು ಉಟ್ಟುಕೊಂಡಳು. ಯೆಹೂದನು ತಾನು ಇಟ್ಟಿದ್ದ ಒತ್ತೆಯನ್ನು ಆ ಹೆಂಗಸಿನ ಕೈಯಿಂದ ಬಿಡಿಸಿಕೊಳ್ಳುವುದಕ್ಕೊಸ್ಕರ ತನ್ನ ಸ್ನೇಹಿತನಾದ ಅದುಲ್ಲಾಮ್ಯನ ಕೈಯಲ್ಲಿ ಹೋತಮರಿಯನ್ನು ಕಳುಹಿಸಿದಾಗ ಆಕೆಯು ಅವನಿಗೆ ಸಿಗಲಿಲ್ಲ. ಅವನು ಅವಳ ಊರಿನವರನ್ನು, “ಏನಯಿಮಿನ ದಾರಿಯ ಬಳಿಯಲ್ಲಿ ಕುಳಿತಿದ್ದ ವೇಶ್ಯಾಸ್ತ್ರೀ ಎಲ್ಲಿರುವಳು” ಎಂದು ಕೇಳಿದ್ದಕ್ಕೆ ಅವರು, “ಇಲ್ಲಿ ಯಾವ ವೇಶ್ಯಾಸ್ತ್ರೀಯೂ ಇಲ್ಲ” ಎಂದರು. ಅವನು ಯೆಹೂದನ ಬಳಿಗೆ ಹಿಂದಿರುಗಿ ಬಂದು, “ನಾನು ಅವಳನ್ನು ಕಾಣಲಿಲ್ಲ ಮತ್ತು ಅಲ್ಲಿ ವಿಚಾರಿಸಿದಾಗ ಆ ಊರಿನವರು ಅಲ್ಲಿ ಯಾವ ವೇಶ್ಯಾಸ್ತ್ರೀಯೂ ಇಲ್ಲವೆಂದರು” ಎಂದು ತಿಳಿಸಿದನು. ಅದಕ್ಕೆ ಯೆಹೂದನು, “ನಾವು ಅಪಹಾಸ್ಯಕ್ಕೆ ಒಳಗಾಗದ ಹಾಗೆ ಆ ವಸ್ತುಗಳನ್ನು ಅವಳೇ ಇಟ್ಟುಕೊಳ್ಳಲಿ. ನಾನಂತೂ ಹೋತಮರಿಯನ್ನು ಕಳುಹಿಸಿಕೊಟ್ಟೆನು. ಅವಳು ನಿನಗೆ ಸಿಕ್ಕಲಿಲ್ಲ” ಎಂದನು. ಸುಮಾರು ಮೂರು ತಿಂಗಳಾದ ಮೇಲೆ ಯೆಹೂದನಿಗೆ, “ನಿನ್ನ ಸೊಸೆಯಾದ ತಾಮಾರಳು ವ್ಯಭಿಚಾರದಿಂದ ಬಸುರಾಗಿದ್ದಾಳೆ” ಎಂಬ ವರ್ತಮಾನವನ್ನು ತಿಳಿಸಿದರು. ಆಗ ಯೆಹೂದನು, “ಆಕೆಯನ್ನು ಹೊರಗೆ ಕರತನ್ನಿರಿ, ಆಕೆಯನ್ನು ಸುಡಬೇಕು” ಎಂದು ಹೇಳಿದನು. ಆಕೆಯನ್ನು ಹೊರಕ್ಕೆ ತಂದಾಗ, ಆಕೆಯು ತನ್ನ ಮಾವನಿಗೆ, “ಈ ಸಾಮಾನುಗಳನ್ನು ಕಳುಹಿಸಿ, ಇವು ಯಾವ ಮನುಷ್ಯನದೋ, ಅವನಿಂದಲೇ ನಾನು ಗರ್ಭಿಣಿಯಾಗಿದ್ದೇನೆ. ಮುದ್ರೆ, ದಾರ, ಕೋಲು ಇವುಗಳ ಗುರುತನ್ನು ತಿಳಿಯಬಹುದು” ಎಂದು ಕೇಳಿಕೊಂಡಳು. ಯೆಹೂದನು ಅವುಗಳ ಗುರುತನ್ನು ತಿಳಿದು, “ನಾನು, ನನ್ನ ಮಗನಾದ ಶೇಲಹನನ್ನು ಆಕೆಗೆ ಮದುವೆ ಮಾಡಿಸಲಿಲ್ಲ. ಆದುದರಿಂದ ಆಕೆಯು ನನಗಿಂತಲೂ ನೀತಿವಂತಳು” ಎಂದು ಹೇಳಿದನು. ಅವನು ಪುನಃ ಆಕೆಯ ಸಹವಾಸ ಮಾಡಲಿಲ್ಲ.

ಹೀಗಿರುವಲ್ಲಿ ಯೋಸೇಫನ ದಣಿಯ ಹೆಂಡತಿಯು ಅವನನ್ನು ಮೋಹಿಸಿ “ನನ್ನ ಸಂಗಡ ಸಂಗಮಿಸಲು ಬಾ” ಎಂದಳು. ಆದರೆ ಅವನು ಒಪ್ಪದೆ, “ನನ್ನ ದಣಿಯು ತನ್ನ ಆಸ್ತಿಯನ್ನೆಲ್ಲಾ ನನ್ನ ವಶಕ್ಕೆ ಒಪ್ಪಿಸಿರುವುದಲ್ಲದೆ ನಾನು ಇಲ್ಲಿ ಇರುವುದರಿಂದ ಮನೆಯೊಳಗೆ ನಡೆಯುವ ಯಾವ ಕೆಲಸವನ್ನೂ ಚಿಂತಿಸದೇ ಇದ್ದಾನೆ. ಈ ಮನೆಯಲ್ಲಿ ನನಗಿಂತ ಯಾರೂ ದೊಡ್ಡವರಲ್ಲ. ನೀನು ಅವನ ಧರ್ಮಪತ್ನಿಯಾದುದರಿಂದ ನಿನ್ನನ್ನು ಮಾತ್ರ ನನಗೆ ಅಧೀನ ಮಾಡಲಿಲ್ಲ. ಹೀಗಿರುವಲ್ಲಿ ನಾನು ಇಂಥಾ ಮಹಾ ದುಷ್ಟ ಕಾರ್ಯವನ್ನು ಮಾಡಿ ದೇವರಿಗೆ ವಿರೋಧವಾಗಿ ಹೇಗೆ ಪಾಪ ಮಾಡಲಿ?” ಎಂದು ತನ್ನ ದಣಿಯ ಹೆಂಡತಿಗೆ ಉತ್ತರ ಹೇಳಿದನು. ಅವಳು ಯೋಸೇಫನ ಸಂಗಡ ಪ್ರತಿದಿನವೂ ಈ ಮಾತನ್ನು ಆಡಿದ್ದಾಗ್ಯೂ ಅವನು ಅದಕ್ಕೆ ಕಿವಿಗೊಡದೆ ಆಕೆಯನ್ನು ಮೋಹಿಸುವುದಕ್ಕಾಗಲಿ, ಆಕೆಯ ಬಳಿಯಲ್ಲಿರುವುದಕ್ಕಾಗಲೀ ಒಪ್ಪಿಕೊಳ್ಳಲೇ ಇಲ್ಲ. ಹೀಗಿರಲು ಒಂದು ದಿನ ಅವನು ತನ್ನ ಕೆಲಸದ ಮೇಲೆ ಮನೆಗೆ ಬಂದಾಗ ಮನೆಯೊಳಗೆ ಯಾವ ಸೇವಕರೂ ಇರಲಿಲ್ಲ. ಆಕೆ ಅವನ ಬಟ್ಟೆಯನ್ನು ಹಿಡಿದುಕೊಂಡು, “ನನ್ನೊಂದಿಗೆ ಸಂಗಮಿಸಲು ಬಾ” ಎಂದು ಕರೆಯಲು, ಅವನು ತನ್ನ ಬಟ್ಟೆಯನ್ನು ಆಕೆಯ ಕೈಯಲ್ಲೇ ಬಿಟ್ಟು ತಪ್ಪಿಸಿಕೊಂಡು ಹೊರಗೆ ಓಡಿಹೋದನು.

ಅವನು ತನ್ನ ಬಟ್ಟೆಯನ್ನು ಅವಳ ಕೈಯಲ್ಲಿ ಬಿಟ್ಟು ತಪ್ಪಿಸಿಕೊಂಡು ಹೋದದ್ದನ್ನು ಆಕೆಯು ನೋಡಿ, ಮನೆಯ ಸೇವಕರನ್ನು ಕರೆದು ಅವರಿಗೆ, “ನೋಡಿರಿ, ನನ್ನ ಯಜಮಾನನು ಒಬ್ಬ ಇಬ್ರಿಯನನ್ನು ನಮ್ಮೊಳಗೆ ಸೇರಿಸಿ ನಮ್ಮನ್ನು ಅವಮಾನಕ್ಕೆ ಗುರಿಮಾಡಿದ್ದಾನೆ. ಅವನು ನನ್ನನ್ನು ಮಾನಭಂಗಪಡಿಸುವುದಕ್ಕೆ ನನ್ನ ಹತ್ತಿರ ಬಂದನು. ನಾನು ಗಟ್ಟಿಯಾಗಿ ಕೂಗಿಕೊಂಡೆನು. ನಾನು ಕೂಗುವುದನ್ನು ಕೇಳಿ ಅವನು ತನ್ನ ಬಟ್ಟೆಯನ್ನು ನನ್ನ ಬಳಿಯಲ್ಲೇ ಬಿಟ್ಟು ತಪ್ಪಿಸಿಕೊಂಡು ಓಡಿಹೋದನು” ಎಂದಳು. ತನ್ನ ಯಜಮಾನನು ಮನೆಗೆ ಬರುವ ತನಕ ಆಕೆಯು ಆ ಬಟ್ಟೆಯನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡಿದ್ದಳು. ಯಜಮಾನನು ಬಂದಾಗ ಆಕೆಯು ಅದೇ ಮಾತನ್ನು ಹೇಳಿ ಅವನಿಗೆ, “ನೀನು ನಮ್ಮಲ್ಲಿ ಸೇರಿಸಿಕೊಂಡ ಆ ಇಬ್ರಿಯ ಸೇವಕನು ನನ್ನನ್ನು ಮಾನಭಂಗಪಡಿಸುವುದಕ್ಕೆ ನನ್ನ ಬಳಿಗೆ ಬಂದನು. ನಾನು ಜೋರಾಗಿ ಕೂಗಿಕೊಂಡಾಗ ಅವನು ತನ್ನ ಬಟ್ಟೆಯನ್ನು ಬಿಟ್ಟು ತಪ್ಪಿಸಿಕೊಂಡು ಓಡಿಹೋದನು” ಎಂದು ಹೇಳಿದಳು. ನಿನ್ನ ಸೇವಕನು ಹೀಗೆ ನನಗೆ ಮಾಡಿದನೆಂಬುದಾಗಿ ತನ್ನ ಹೆಂಡತಿ ಹೇಳಿದ ಮಾತುಗಳನ್ನು ಯೋಸೇಫನ ದಣಿಯು ಕೇಳಿದಾಗ ಬಹಳ ಸಿಟ್ಟುಗೊಂಡನು. ಆಗ ಯೋಸೇಫನ ದಣಿಯು ಅವನನ್ನು ಹಿಡಿದು ಅರಸನ ಕೈದಿಗಳನ್ನಿಡುವ ಸೆರೆಮನೆಯಲ್ಲಿ ಹಾಕಿಸಿದನು. ಅಲ್ಲಿ ಯೋಸೇಫನು ಸೆರೆಯಲ್ಲಿ ಇರಬೇಕಾಯಿತು.

“ವ್ಯಭಿಚಾರಮಾಡಬಾರದು.

“ಮತ್ತೊಬ್ಬನ ಮನೆಯನ್ನು ನೋಡಿ ಆಶೆಪಡಬಾರದು. ಮತ್ತೊಬ್ಬನ ಹೆಂಡತಿ, ಗಂಡಾಳು, ಹೆಣ್ಣಾಳು, ಎತ್ತು, ಕತ್ತೆ ಮುಂತಾದ ಯಾವುದನ್ನೂ ಬಯಸಬಾರದು.”

ಪಶುಸಂಗ ಮಾಡಿದವನಿಗೆ ಮರಣಶಿಕ್ಷೆಯಾಗಬೇಕು.

“‘ನಿಮ್ಮಲ್ಲಿ ಯಾರೂ ರಕ್ತಸಂಬಂಧವುಳ್ಳ ಸ್ತ್ರೀಯ ಸಹವಾಸವನ್ನು ಮಾಡಬಾರದು, ನಾನು ಯೆಹೋವನು. ತಾಯಿಯನ್ನು ಎಷ್ಟು ಮಾತ್ರವೂ ಸಂಗಮಿಸಬಾರದು, ಆಕೆ ಹೆತ್ತವಳಲ್ಲವೇ; ಸಂಗಮಿಸಿದರೆ ತಂದೆಗೆ ಮಾನಭಂಗವಾಗುವುದು. ಮಲತಾಯಿಯ ಜೊತೆ ಸಂಗಮಿಸಬಾರದು; ಆಕೆ ತಂದೆಗೆ ಹೆಂಡತಿಯಾದವಳಲ್ಲವೇ. ತಂದೆಯ ಮಗಳನ್ನಾಗಲಿ ಅಥವಾ ತಾಯಿಯ ಮಗಳನ್ನಾಗಲಿ ಸಂಗಮಿಸಬಾರದು; ಅವರು ಒಡ ಹುಟ್ಟಿದವರು ಇಲ್ಲವೇ ಪರಸ್ತ್ರೀಯಲ್ಲಿ ಹುಟ್ಟಿದವರಾದರೂ ನಿಮಗೆ ಅಕ್ಕತಂಗಿಯರಲ್ಲವೇ. ಮಗನ ಮಗಳೊಂದಿಗೆ ಅಥವಾ ಮಗಳ ಮಗಳೊಂದಿಗೆ ಸಂಗಮಿಸಬಾರದು; ಅವರು ನಿಮಗೆ ಮಕ್ಕಳಂತಲ್ಲವೇ. ತಂದೆಯ ಮತ್ತೊಬ್ಬ ಹೆಂಡತಿಯಲ್ಲಿ ಹುಟ್ಟಿದವಳ ಜೊತೆ ಸಂಗಮಿಸಬಾರದು; ಆಕೆ ಸಹೋದರಿ. ತಂದೆಯ ಒಡಹುಟ್ಟಿದವಳ ಸಂಗ ಮಾಡಬಾರದು; ಆಕೆ ನಿಮಗೆ ತಂದೆಯ ರಕ್ತಸಂಬಂಧಿ. ತಾಯಿಯ ಒಡಹುಟ್ಟಿದವಳ ಜೊತೆ ಸಂಗಮಿಸಬಾರದು; ಆಕೆ ನಿಮ್ಮ ತಾಯಿಯ ರಕ್ತಸಂಬಂಧಿ. ತಂದೆಯ ಅಣ್ಣತಮ್ಮಂದಿರ ಹೆಂಡತಿಯರ ಜೊತೆ ಸಂಗಮಿಸಬಾರದು. ಅವರು ನಿಮ್ಮ ದೊಡ್ಡಮ್ಮ ಇಲ್ಲವೇ ಚಿಕ್ಕಮ್ಮ ಅಲ್ಲವೇ. ಸೊಸೆಯ ಸಹವಾಸ ಮಾಡಬಾರದು; ಆಕೆ ಮಗನ ಹೆಂಡತಿಯಾದವಳಲ್ಲವೇ. ಅತ್ತಿಗೆ ಮತ್ತು ನಾದಿನಿಯರನ್ನು ಸಂಗಮಿಸಬಾರದು; ಅವರು ಅಣ್ಣ ಅಥವಾ ತಮ್ಮಂದಿರ ಹೆಂಡತಿಯರಲ್ಲವೇ. ಒಬ್ಬ ಸ್ತ್ರೀಯನ್ನು ಮದುವೆಮಾಡಿಕೊಂಡರೆ ಆಕೆಯ ಮಗಳನ್ನಾಗಲಿ ಇಲ್ಲವೇ ಮೊಮ್ಮಗಳನ್ನಾಗಲಿ ಸಂಗಮಿಸಬಾರದು; ಅವರು ರಕ್ತಸಂಬಂಧಿಗಳಾದುದರಿಂದ ಅದು ದುಷ್ಟ ಕಾರ್ಯವೇ. ಹೆಂಡತಿಯು ಜೀವದಿಂದಿರುವಾಗಲೇ ಆಕೆಯ ಒಡಹುಟ್ಟಿದವಳನ್ನು ಮದುವೆಮಾಡಿಕೊಂಡು ಹೆಂಡತಿಗೆ ಮನಸ್ತಾಪವನ್ನು ಉಂಟುಮಾಡಬಾರದು.

“‘ಮುಟ್ಟಿನಿಂದ ಅಶುದ್ಧಳಾದ ಸ್ತ್ರೀಯನ್ನು ಸಂಗಮಿಸಬಾರದು. ಪರಸ್ತ್ರೀ ಸಂಗಮದಿಂದ ಅಶುದ್ಧರಾಗಬಾರದು. “‘ನಿಮ್ಮ ಮಕ್ಕಳಲ್ಲಿ ಯಾರನ್ನಾದರೂ ಮೋಲೆಕನಿಗೆ ಸಮರ್ಪಿಸಿ ನಿಮ್ಮ ದೇವರ ಹೆಸರನ್ನು ಅಪಕೀರ್ತಿಗೆ ಗುರಿಮಾಡಬಾರದು; ನಾನು ಯೆಹೋವನು. “‘ಸ್ತ್ರೀಯನ್ನು ಸಂಗಮಿಸುವಂತೆ ಪುರುಷನನ್ನು ಸಂಗಮಿಸಬಾರದು; ಅದು ಅಸಹ್ಯವಾದ ಕೆಲಸ. ಪಶುಸಂಗಮವನ್ನು ಮಾಡಿ ಅಶುದ್ಧರಾಗಬಾರದು. ಯಾವ ಸ್ತ್ರೀಯೂ ಸಂಗಮಕ್ಕಾಗಿ ಪಶುವಿನ ಮುಂದೆ ನಿಲ್ಲಬಾರದು; ಅದು ಸ್ವಭಾವಕ್ಕೆ ವಿರುದ್ಧವಾದದ್ದು.

“‘ಮಗಳನ್ನು ವೇಶ್ಯೆಯನ್ನಾಗಿ ಮಾಡಬಾರದು. ಹಾಗೆ ಮಾಡಿದರೆ ವೇಶ್ಯಾವಾಟಿಕೆ ಪ್ರಬಲವಾಗಿ ದೇಶದಲ್ಲೆಲ್ಲಾ ತುಂಬಿಹೋಗುವುದು.

“‘ಯಾವನಾದರೂ ಪರನ ಪತ್ನಿಯೊಡನೆ ವ್ಯಭಿಚಾರವನ್ನು ಮಾಡಿದರೆ ಅವರಿಬ್ಬರಿಗೂ ಮರಣಶಿಕ್ಷೆಯಾಗಬೇಕು. ಯಾವನಾದರೂ ಮಲತಾಯಿಯನ್ನು ಸಂಗಮಿಸಿದರೆ ಅವನು ತಂದೆಗೆ ಮಾನಭಂಗಮಾಡಿದ ಹಾಗಾಯಿತು; ಅವರಿಬ್ಬರಿಗೂ ಮರಣಶಿಕ್ಷೆಯಾಗಬೇಕು; ಆ ಶಿಕ್ಷೆಗೆ ಅವರೇ ಕಾರಣರು. ಯಾವನಾದರೂ ಸೊಸೆಯನ್ನು ಸಂಗಮಿಸಿದರೆ ಅವರಿಬ್ಬರಿಗೂ ಮರಣಶಿಕ್ಷೆಯಾಗಬೇಕು; ಅವರು ಧರ್ಮವಿರುದ್ಧವಾದ ಕಾರ್ಯವನ್ನು ಮಾಡಿರುವುದರಿಂದ ಆ ಶಿಕ್ಷೆಗೆ ಅವರೇ ಕಾರಣರು. ಯಾವನಾದರೂ ಸ್ತ್ರೀಯನ್ನು ಸಂಗಮಿಸುವಂತೆ ಪುರುಷನನ್ನು ಸಂಗಮಿಸಿದರೆ ಅವರಿಬ್ಬರೂ ಅಸಹ್ಯವಾದ ಕೆಲಸವನ್ನು ಮಾಡಿದ್ದರಿಂದ ಅವರಿಗೆ ಮರಣಶಿಕ್ಷೆಯಾಗಬೇಕು; ಆ ಶಿಕ್ಷೆಗೆ ಅವರೇ ಕಾರಣರು. ಯಾವನಾದರೂ ಒಬ್ಬ ಸ್ತ್ರೀಯನ್ನು ಹಾಗೂ ಅವಳ ತಾಯಿಯನ್ನು ಸಂಗಮಿಸಿದರೆ ಅದು ಅತಿದುಷ್ಟಕಾರ್ಯವಾದುದರಿಂದ ಆ ಮೂರು ಜನರನ್ನು ಬೆಂಕಿಯಿಂದ ಸುಡಿಸಿಬಿಡಬೇಕು; ಅಂತಹ ದುರಾಚಾರವು ನಿಮ್ಮಲ್ಲಿ ಎಷ್ಟು ಮಾತ್ರವೂ ನಡೆಯಬಾರದು. ಯಾವನಾದರೂ ಪಶುಸಂಗ ಮಾಡಿದರೆ ಅವನಿಗೆ ಮರಣ ಶಿಕ್ಷೆಯಾಗಬೇಕು; ಆ ಪಶುವನ್ನು ಕೊಲ್ಲಿಸಬೇಕು. ಯಾವ ಸ್ತ್ರೀಯಾದರೂ ಪಶುವಿನಿಂದ ಸಂಗಮಮಾಡಿಸಿಕೊಂಡರೆ ಆ ಸ್ತ್ರೀಯನ್ನು ಮತ್ತು ಪಶುವನ್ನು ಕೊಲ್ಲಿಸಬೇಕು; ಅವಳಿಗೂ ಹಾಗೂ ಅದಕ್ಕೂ ಮರಣವೇ ನಿಯಮ; ಆ ಮರಣ ಶಿಕ್ಷೆಗೆ ತಾವೇ ಕಾರಣರು.

ಯಾವನಾದರೂ ತನ್ನ ಒಡಹುಟ್ಟಿದವಳನ್ನು ಅಂದರೆ ತಂದೆಯ ಮಗಳನ್ನಾಗಲಿ ಅಥವಾ ತಾಯಿಯ ಮಗಳನ್ನಾಗಲಿ ಕರೆದುಕೊಂಡು ಅವಳ ಮಾನವನ್ನು ಇವನೂ ಹಾಗು ಇವನ ಮಾನವನ್ನು ಅವಳೂ ನೋಡಿದರೆ ಅದು ನಾಚಿಕೆಗೇಡಾದ ಕೆಲಸವಾಗಿರುವುದರಿಂದ ಅವರ ಕುಲದವರ ಎದುರಾಗಿಯೇ ಅವರಿಗೆ ಮರಣಶಿಕ್ಷೆಯನ್ನು ಮಾಡಿಸಬೇಕು. ಆ ಮನುಷ್ಯನು ಒಡಹುಟ್ಟಿದವಳನ್ನು ಸಂಗಮಿಸಿದ್ದರಿಂದ ತನ್ನ ಪಾಪದ ಫಲವನ್ನು ಅನುಭವಿಸಬೇಕು. ಯಾವನಾದರೂ ಮುಟ್ಟಾದ ಸ್ತ್ರೀಯನ್ನು ಸಂಗಮಿಸಿದರೆ ಅವನು ಅವಳ ರಕ್ತಸ್ರಾವದ ಸ್ಥಾನವನ್ನು ಬಯಲುಪಡಿಸಿದವನು, ಅವಳು ಬಯಲುಪಡಿಸಿಕೊಂಡವಳು; ಆದುದರಿಂದ ಅವರಿಬ್ಬರನ್ನು ಕುಲದಿಂದ ಹೊರಗೆ ಹಾಕಬೇಕು. ತಂದೆಯ ಅಥವಾ ತಾಯಿಯ ಒಡಹುಟ್ಟಿದವಳ ಸಂಗಮ ಮಾಡಬಾರದು; ಹಾಗೆ ಮಾಡಿದವನು ರಕ್ತಸಂಬಂಧಿಯನ್ನು ಸಂಗಮಿಸಿದವನಾದುದರಿಂದ ಅವರಿಬ್ಬರೂ ತಮ್ಮ ಪಾಪದ ಫಲವನ್ನು ಅನುಭವಿಸಬೇಕು. ಯಾವನಾದರೂ ದೊಡ್ಡಮ್ಮ ಅಥವಾ ಚಿಕ್ಕಮ್ಮನನ್ನಾಗಲಿ ಸಂಗಮಿಸಿದರೆ ಅವನು ದೊಡ್ಡಪ್ಪ ಮತ್ತು ಚಿಕ್ಕಪ್ಪನವರ ಮಾನವನ್ನು ಭಂಗಪಡಿಸಿದವನಾದುದರಿಂದ ಆ ಸ್ತ್ರೀಪುರುಷರು ಆ ಪಾಪದ ಫಲವನ್ನು ಅನುಭವಿಸಬೇಕು; ಅವರು ಸಂತಾನವಿಲ್ಲದೆ ಸಾಯುವರು. ಯಾವನಾದರೂ ಅತ್ತಿಗೆ ಇಲ್ಲವೇ ನಾದಿನಿಯರನ್ನು ಸಂಗಮಿಸಿದರೆ ಅದು ಅಶುದ್ಧವಾದ ಕೆಲಸ; ಅವನು ಅಣ್ಣತಮ್ಮಂದಿರ ಮಾನವನ್ನೇ ಭಂಗಪಡಿಸಿದವನು; ಅವರಿಗೆ ಸಂತಾನವಿರುವುದಿಲ್ಲ.

ಯಾಜಕರು ತಮ್ಮ ದೇವರಿಗೆ ಮೀಸಲಾದವರು ಆಗಿರುವುದರಿಂದ ವೇಶ್ಯ ಸ್ತ್ರೀಯನ್ನಾಗಲಿ, ಮಾನವನ್ನು ಭಂಗಪಡಿಸಿಕೊಂಡ ಸ್ತ್ರೀಯನ್ನಾಗಲಿ ಅಥವಾ ಗಂಡನಿಂದ ಬಿಡಲ್ಪಟ್ಟವಳನ್ನಾಗಲಿ ಹೆಂಡತಿಯನ್ನಾಗಿ ತೆಗೆದುಕೊಳ್ಳಬಾರದು. ಅವರು ನಿಮ್ಮ ದೇವರ ಆಹಾರವನ್ನು ಸಮರ್ಪಿಸುವವರಾದ ಕಾರಣ ಅವರನ್ನು ದೇವರ ಸೇವಕರೆಂದು ಭಾವಿಸಬೇಕು. ನಿಮ್ಮನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡಿರುವ ಯೆಹೋವನೆಂಬ ನಾನು ಪರಿಶುದ್ಧನಾಗಿರುವುದರಿಂದ ಅವರನ್ನು ಪರಿಶುದ್ಧರೆಂದು ನೀವು ಭಾವಿಸಬೇಕು. ಯಾಜಕನ ಮಗಳು ವೇಶ್ಯೆ ಎಂಬ ನಿಂದೆಗೆ ಒಳಗಾದರೆ ತನ್ನ ತಂದೆಯನ್ನು ನಿಂದೆಗೆ ಒಳಪಡಿಸಿದವಳಾದಳು, ಅವಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು.

ಅವನು ವಿಧವೆಯನ್ನಾಗಲಿ, ಗಂಡನಿಂದ ಬಿಡಲ್ಪಟ್ಟವಳನ್ನಾಗಲಿ, ಮಾನವನ್ನು ಭಂಗಪಡಿಸಿಕೊಂಡ ಸ್ತ್ರೀಯನ್ನಾಗಲಿ ಅಥವಾ ವೇಶ್ಯ ಸ್ತ್ರೀಯನ್ನಾಗಲಿ ಹೆಂಡತಿಯನ್ನಾಗಿ ಮಾಡಿಕೊಳ್ಳಬಾರದು. ಸ್ವದೇಶದವರಲ್ಲಿಯ ಕನ್ನಿಕೆಯನ್ನೇ ಮದುವೆ ಮಾಡಿಕೊಳ್ಳಬೇಕು.

“ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು: ‘ಯಾರ ಹೆಂಡತಿ ತಪ್ಪು ದಾರಿ ಹಿಡಿದು ಗಂಡನಿಗೆ ಅಪನಂಬಿಗಸ್ತಳಾಗಿ, ಯಾರ ಕೈಗೆ ಸಿಕ್ಕದೆಯೂ ಸಾಕ್ಷಿ ಇಲ್ಲದೆಯೂ ರಹಸ್ಯವಾಗಿಯೇ ಪರಪುರುಷನೊಡನೆ ಸಂಗಮಿಸಿ ಗಂಡನಿಗೆ ದ್ರೋಹಿಯಾಗಿ ಅಶುದ್ಧಳಾದ ಸಂದರ್ಭದಲ್ಲಿ,

ಒಬ್ಬ ಹೆಂಡತಿ ತನ್ನ ಗಂಡನನ್ನು ಬಿಟ್ಟು ಜಾರತ್ವಮಾಡಿ ಅಶುದ್ಧಳಾದರೆ ಇಂತಹ ವ್ಯಭಿಚಾರದ ಸಂಶಯವನ್ನು ಪರಿಹರಿಸುವ ನಿಯಮ ಇದೇ.

ಇಸ್ರಾಯೇಲರಲ್ಲಿ ಒಬ್ಬನು ಮೋಶೆ ಮತ್ತು ಇಸ್ರಾಯೇಲರ ಸರ್ವಸಮೂಹದವರ ಎದುರಿನಲ್ಲಿಯೇ ತನ್ನ ಸಹೋದರರೊಳಗೆ ಒಬ್ಬ ಮಿದ್ಯಾನ್ ಸ್ತ್ರೀಯನ್ನು ತನ್ನ ಮನೆಯೊಳಗೆ ಕರೆದುಕೊಂಡು ಬಂದನು.

“ವ್ಯಭಿಚಾರ ಮಾಡಬಾರದು.

“ಮತ್ತೊಬ್ಬನ ಹೆಂಡತಿಯನ್ನು ಅಪೇಕ್ಷಿಸಬಾರದು; ಮತ್ತೊಬ್ಬನ ಹೊಲ, ಮನೆ, ಗಂಡಾಳು, ಹೆಣ್ಣಾಳು, ಎತ್ತು ಮತ್ತು ಕತ್ತೆ ಮುಂತಾದವುಗಳನ್ನು ಆಶಿಸಬಾರದು.”

ಸ್ತ್ರೀಯು ಪುರುಷವೇಷವನ್ನಾಗಲಿ ಅಥವಾ ಪುರುಷನು ಸ್ತ್ರೀವೇಷವನ್ನಾಗಲಿ ಹಾಕಿಕೊಳ್ಳಬಾರದು; ಹಾಗೆ ಮಾಡುವವರು ನಿಮ್ಮ ದೇವರಾದ ಯೆಹೋವನಿಗೆ ಅಸಹ್ಯರು.

ಆದರೆ ಆ ಹೆಣ್ಣು ವಿವಾಹಕ್ಕೆ ಮುಂಚೆ ದೈಹಿಕವಾಗಿ ಪುರುಷಸಂಪರ್ಕ ಮಾಡಿದ್ದು ನಿಜ ಎಂದು ತಿಳಿದುಬಂದರೆ, ಅವಳು ತಂದೆಯ ಅಧೀನದಲ್ಲಿರುವಾಗಲ್ಲೇ ಪರಪುರುಷನೊಡನೆ ಸಂಪರ್ಕಮಾಡಿ ಇಸ್ರಾಯೇಲರೊಳಗೆ ದುರಾಚಾರವನ್ನು ನಡಿಸಿದ್ದರಿಂದ, ಅವರು ಅವಳನ್ನು ತಂದೆಯ ಮನೆಯ ಬಾಗಿಲಿಗೆ ಕರೆಯಿಸಬೇಕು; ಊರಿನವರೆಲ್ಲರು ಅವಳನ್ನು ಕಲ್ಲೆಸೆದು ಕೊಲ್ಲಬೇಕು. ಹೀಗೆ ಆ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ನಿವಾರಿಸಿಕೊಳ್ಳಬೇಕು.

ಯಾವನಾದರೂ ಇನ್ನೊಬ್ಬನ ಹೆಂಡತಿಯೊಡನೆ ವ್ಯಭಿಚಾರಮಾಡಿದ್ದು ತಿಳಿದುಬಂದರೆ ಆ ಸ್ತ್ರೀ ಮತ್ತು ಪುರುಷರಿಬ್ಬರಿಗೂ ಮರಣಶಿಕ್ಷೆಯಾಗಬೇಕು. ಹೀಗೆ ನೀವು ಆ ದುಷ್ಟತ್ವವನ್ನು ಇಸ್ರಾಯೇಲರ ಮಧ್ಯದಿಂದ ತೆಗೆದುಹಾಕಬೇಕು.

ಒಬ್ಬನಿಗೆ ನಿಶ್ಚಿತಳಾದ ಹೆಣ್ಣನ್ನು ಯಾವನಾದರೂ ಊರೊಳಗೆ ಮರುಳುಗೊಳಿಸಿ ಸಂಗಮಿಸಿದರೆ, ನೀವು ಅವರಿಬ್ಬರನ್ನೂ ಊರುಬಾಗಲಿನ ಹೊರಕ್ಕೆ ತರಿಸಿ ಅವರನ್ನು ಕಲ್ಲೆಸೆದು ಕೊಲ್ಲಬೇಕು. ಒಬ್ಬನಿಗೆ ನಿಶ್ಚಿತಳಾದ ಸ್ತ್ರೀಯನ್ನು ಕೆಡಿಸಿದ್ದರಿಂದ ಆ ಪುರುಷನಿಗೂ, ಊರಲ್ಲಿದ್ದು ರಕ್ಷಣೆಗಾಗಿ ಕೂಗಿಕೊಳ್ಳದೆ ಹೋದುದರಿಂದ ಆ ಸ್ತ್ರೀಗೂ ಮರಣಶಿಕ್ಷೆಯಾಗಬೇಕು. ಹೀಗೆ ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.

ಆದರೆ ಆ ಪುರುಷನು ನಿಶ್ಚಿತಳಾದ ಆ ಸ್ತ್ರೀಯನ್ನು ಅಡವಿಯಲ್ಲಿ ಬಲಾತ್ಕಾರದಿಂದ ಸಂಗಮಿಸಿದ್ದರೆ ಪುರುಷನಿಗೆ ಮಾತ್ರ ಮರಣಶಿಕ್ಷೆಯಾಗಬೇಕು. ಆ ಸ್ತ್ರೀಗೆ ಯಾವ ಶಿಕ್ಷೆಯೂ ಆಗಬಾರದು; ಅವಳಲ್ಲಿ ಮರಣ ಶಿಕ್ಷೆಗೆ ಪಾತ್ರವಾದ ಅಪರಾಧವೇನೂ ಇಲ್ಲ. ಒಬ್ಬ ಮನುಷ್ಯನು ಮತ್ತೊಬ್ಬನ ಮೇಲೆ ಬಿದ್ದು ಕೊಲ್ಲುವುದು ಹೇಗೋ ಈ ಸಂಗತಿಯೂ ಹಾಗೆಯೇ ಎಂದು ತಿಳಿಯಬೇಕು. ಆ ಸ್ತ್ರೀಯು ಅಡವಿಯಲ್ಲೇ ಅವನ ಕೈಗೆ ಸಿಕ್ಕಿದ್ದರಿಂದ ಅವಳು ಕೂಗಿಕೊಂಡರೂ ತಪ್ಪಿಸುವವರು ಇರಲಿಲ್ಲ.

ಯಾರಿಗೂ ನಿಶ್ಚಯವಾಗದೆ ಇರುವ ಸ್ತ್ರೀಯನ್ನು ಒಬ್ಬನು ಹಿಡಿದು ಸಂಗಮಿಸಿದ್ದು ತಿಳಿದು ಬಂದರೆ, ಅವನು ಅವಳನ್ನು ಮಾನಭಂಗಪಡಿಸಿದ್ದರಿಂದ, ಅವಳ ತಂದೆಗೆ ಐವತ್ತು ಶೆಕೆಲ್ ಬೆಳ್ಳಿಯನ್ನು ಕೊಟ್ಟು ಅವಳನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳಬೇಕು. ಅವನು ಬದುಕುವ ತನಕ ಅವಳನ್ನು ಪರಿತ್ಯಾಗಮಾಡುವುದಕ್ಕೆ ಅವನಿಗೆ ಅಧಿಕಾರವಿರುವುದಿಲ್ಲ.

ತಂದೆಗೆ ಹೆಂಡತಿಯಾದವಳನ್ನು ಸಂಗಮಿಸಲೇ ಬಾರದು; ಅದು ತಂದೆಗೆ ಅಪಮಾನಪಡಿಸಿದ ಹಾಗಾಗುವುದು.

ಅನೈತಿಕ ಸಂಬಂಧದಿಂದ ಹುಟ್ಟಿದ ಸಂತತಿಯವರು, ಹತ್ತನೆಯ ತಲೆಯವರಾದರೂ ಅವರು ಯೆಹೋವನ ಸಭೆಗೆ ಸೇರಬಾರದು.

ಇಸ್ರಾಯೇಲರಲ್ಲಿ ಯಾವ ಸ್ತ್ರೀಯೂ ದೇವದಾಸಿಯಾಗಬಾರದು; ಯಾವ ಪುರುಷನೂ ಅಂತಹ ವೇಶ್ಯೆತನಕ್ಕೆ ಇಳಿಯಬಾರದು. ಇಸ್ರಾಯೇಲರ ಪುರುಷ ಅಥವಾ ಸ್ತ್ರೀಯೂ ವ್ಯಭಿಚಾರದಿಂದ ಸಂಪಾದಿಸಿದ ಹಣವನ್ನು ಹರಕೆಯಾಗಿ ನಿಮ್ಮ ದೇವರಾದ ಯೆಹೋವನ ಆಲಯದೊಳಗೆ ತರಲೇಬಾರದು. ಈ ಎರಡೂ ಯೆಹೋವನಿಗೆ ಅಸಹ್ಯವಾದ ವಿಷಯ.

“ಅವರು, ಮಲತಾಯಿಯನ್ನು ಸಂಗಮಿಸಿ ತಂದೆಗೆ ಅವಮಾನಪಡಿಸಿದವನು ಶಾಪಗ್ರಸ್ತನು” ಎಂದು ಹೇಳಲು ಜನರೆಲ್ಲರೂ, “ಆಮೆನ್” ಅನ್ನಬೇಕು.

“ಅವರು, ಪಶುಸಂಗಮ ಮಾಡಿದವನು ಶಾಪಗ್ರಸ್ತನು” ಎಂದು ಹೇಳಲು ಜನರೆಲ್ಲರೂ, “ಆಮೆನ್” ಅನ್ನಬೇಕು.

“ಅವರು, ತಂದೆಯ ಮಗಳನ್ನಾಗಲಿ ಅಥವಾ ತಾಯಿಯ ಮಗಳನ್ನಾಗಲಿ ಸಂಗಮಿಸಿದವನು ಶಾಪಗ್ರಸ್ತನು” ಎಂದು ಹೇಳಲು ಜನರೆಲ್ಲರೂ, “ಆಮೆನ್” ಅನ್ನಬೇಕು.

“ಅವರು, ಅತ್ತೆಯನ್ನು ಸಂಗಮಿಸಿದವನು ಶಾಪಗ್ರಸ್ತನು” ಎಂದು ಹೇಳಲು ಜನರೆಲ್ಲರೂ, “ಆಮೆನ್” ಅನ್ನಬೇಕು.

ತರುವಾಯ ಸಂಸೋನನು ಗಾಜಕ್ಕೆ ಹೋಗಿ ಅಲ್ಲಿ ಒಬ್ಬ ವೇಶ್ಯೆಯನ್ನು ಕಂಡು ಅವಳ ಬಳಿಗೆ ಹೋದನು.

ಆ ಕಾಲದಲ್ಲಿ ಇಸ್ರಾಯೇಲ್ಯರೊಳಗೆ ಅರಸನಿರಲಿಲ್ಲ. ಎಫ್ರಾಯೀಮ್ ಪರ್ವತಪ್ರದೇಶದ ಒಂದು ದೂರ ಸ್ಥಳದಲ್ಲಿ ಒಬ್ಬ ಲೇವಿಯನು ಪ್ರವಾಸಿಯಾಗಿದ್ದನು. ಯೆಹೂದದ ಬೇತ್ಲೆಹೇಮಿನವಳಾದ ಒಬ್ಬ ಸ್ತ್ರೀಯು ಅವನಿಗೆ ಉಪಪತ್ನಿಯಾಗಿದ್ದಳು. ಆಕೆಯು ಇವನನ್ನು ಬಿಟ್ಟು ಜಾರತ್ವಮಾಡಿ, ಯೆಹೂದದ ಬೇತ್ಲೆಹೇಮಿನಲ್ಲಿದ್ದ ತನ್ನ ತವರುಮನೆಗೆ ಹೋಗಿ ಅಲ್ಲಿ ನಾಲ್ಕು ತಿಂಗಳು ಇದ್ದಳು.

ಅವರು ಭೋಜನದಿಂದ ತೃಪ್ತಿಪಡುವಷ್ಟರಲ್ಲಿ ಆ ಊರಲ್ಲಿದ್ದ ದುಷ್ಟ ಜನರು ಬಂದು ಆ ಮನೆಯನ್ನು ಸುತ್ತಿಕೊಂಡು, ಬಾಗಿಲನ್ನು ಬಡಿದು, ಮನೆಯ ಯಜಮಾನನಾದ ಮುದುಕನಿಗೆ, “ನಿನ್ನ ಮನೆಗೆ ಬಂದಿರುವಂಥ ಮನುಷ್ಯನನ್ನು ಹೊರಗೆ ಕರೆದುಕೊಂಡು ಬಾ; ಅವನೊಡನೆ ನಾವು ಸಂಗಮಿಸಬೇಕು” ಎಂದು ಕೂಗಿದರು. ಆಗ ಆ ಮುದುಕನು ಹೊರಗೆ ಹೋಗಿ ಅವರಿಗೆ, “ಸಹೋದರರೇ, ಇಂಥ ದುಷ್ಟತನವನ್ನು ನಡೆಸಬೇಡಿರಿ; ಅವನು ಆಶ್ರಯಕ್ಕಾಗಿ ನನ್ನ ಮನೆಗೆ ಬಂದಿದ್ದಾನೆ; ನೀವು ಇಂಥ ಹುಚ್ಚುತನವನ್ನು ಮಾಡಬೇಡಿರಿ. ಇನ್ನೂ ಮದುವೆಯಾಗದೆ ಇರುವ ನನ್ನ ಮಗಳನ್ನೂ, ಅವನ ಉಪಪತ್ನಿಯನ್ನೂ ಹೊರಗೆ ತರುತ್ತೇನೆ; ಅವರನ್ನು ಭಂಗಪಡಿಸಿರಿ; ನಿಮ್ಮ ಮನಸ್ಸಿಗೆ ಬಂದ ಹಾಗೆ ಅವರಿಗೆ ಮಾಡಿರಿ. ಈ ಮನುಷ್ಯನಿಗೆ ಮಾತ್ರ ಅಂಥ ದುಷ್ಕೃತ್ಯವನ್ನು ಮಾಡಬೇಡಿರಿ” ಅಂದನು. ಆದರೆ ಅವರು ಆ ಮುದುಕನಿಗೆ ಕಿವಿಗೊಡದೆ ಹೋದುದರಿಂದ ಆ ಮನುಷ್ಯನು ತನ್ನ ಉಪಪತ್ನಿಯನ್ನು ಹೊರಗೆ ಅವರ ಬಳಿಗೆ ಕಳುಹಿಸಿಬಿಟ್ಟನು. ಅವರು ಆಕೆಯನ್ನು ಕೆಡಿಸಿ, ರಾತ್ರಿಯೆಲ್ಲಾ ಬಹುಕ್ರೂರತನದಿಂದ ವರ್ತಿಸಿ, ಬೆಳಗಾಗುವಾಗ ಆಕೆಯನ್ನು ಬಿಟ್ಟುಹೋದರು. ಆ ಸ್ತ್ರೀಯು ಸೂರ್ಯೋದಯಕ್ಕೆ ಮುಂಚೆಯೇ ಬಂದು ತನ್ನ ಯಜಮಾನನು ಇಳಿದುಕೊಂಡಿದ್ದ ಮನೆಯ ಬಾಗಿಲಲ್ಲಿ ಬಂದು ಬಿದ್ದವಳು ಬೆಳಗಾದರೂ ಏಳಲೇ ಇಲ್ಲ. ಆಕೆಯ ಪತಿಯು ಬೆಳಿಗ್ಗೆ ಎದ್ದು ಹೊರಡುವುದಕ್ಕೆ ಸಿದ್ಧನಾಗಿ ಬಾಗಿಲನ್ನು ತೆರೆಯಲು, ತನ್ನ ಉಪಪತ್ನಿಯು ಬಾಗಿಲ ಮುಂದೆ ಬಿದ್ದಿರುವುದನ್ನೂ, ಆಕೆಯ ಕೈಗಳು ಹೊಸ್ತಿಲಿನ ಮೇಲಿರುವುದನ್ನೂ ಕಂಡನು. ಅವನು, “ಏಳು, ಹೋಗೋಣ” ಎಂದು ಆಕೆಯನ್ನು ಕರೆಯಲು ಪ್ರತ್ಯುತ್ತರವೇ ಇಲ್ಲ. ಆಗ ಅವನು ಆಕೆಯ ಶವವನ್ನು ಕತ್ತೆಯ ಮೇಲೆ ಹಾಕಿಕೊಂಡು ತನ್ನ ಮನೆಗೆ ಹೋದನು. ಅವನು ತನ್ನ ಮನೆಗೆ ಸೇರಿದ ಮೇಲೆ ಒಂದು ಕತ್ತಿಯನ್ನು ತೆಗೆದುಕೊಂಡು, ತನ್ನ ಉಪಪತ್ನಿಯ ಶವವನ್ನು ಎಲುಬುಗಳ ಸಹಿತವಾಗಿ ಹನ್ನೆರಡು ತುಂಡುಮಾಡಿ, ಅವುಗಳನ್ನು ಇಸ್ರಾಯೇಲರ ಎಲ್ಲಾ ಪ್ರಾಂತ್ಯಗಳಿಗೆ ಕಳುಹಿಸಿದನು. ಅವುಗಳನ್ನು ಕಂಡವರೆಲ್ಲರೂ, “ಇಸ್ರಾಯೇಲರು ಐಗುಪ್ತವನ್ನು ಬಿಟ್ಟು ಬಂದ ದಿನದಿಂದ ಈ ದಿನದವರೆಗೆ ಇಂಥ ಕೃತ್ಯವು ನಡೆಯಲೇ ಇಲ್ಲ, ನಾವು ಅದನ್ನು ನೋಡಿಯೂ ಇಲ್ಲ. ಈ ಸಂಗತಿಯನ್ನು ಮನಸ್ಸಿಗೆ ತಂದು ವಿಚಾರಿಸತಕ್ಕದ್ದು” ಅಂದುಕೊಂಡರು.

ಇಸ್ರಾಯೇಲ್ಯರ ಕುಲಗಳಲ್ಲಿ ನೂರಕ್ಕೆ ಹತ್ತು, ಸಾವಿರಕ್ಕೆ ನೂರು, ಹತ್ತು ಸಾವಿರಕ್ಕೆ ಸಾವಿರ ಈ ಪ್ರಕಾರ ಜನರನ್ನು ಆರಿಸಿಕೊಂಡು ಅವರನ್ನು ಆಹಾರ ತರುವುದಕ್ಕಾಗಿ ಕಳುಹಿಸೋಣ. ಅವರು ಬಂದ ಮೇಲೆ ಬೆನ್ಯಾಮೀನ್ಯರಾದ ಗಿಬೆಯದವರು ಇಸ್ರಾಯೇಲರಲ್ಲಿ ನಡೆಸಿದ ದುಷ್ಟ ಕಾರ್ಯಕ್ಕಾಗಿ ಅವರಿಗೆ ದಂಡನೆಮಾಡೋಣ” ಅಂದುಕೊಂಡರು. ಹೀಗೆ ಅವರೆಲ್ಲರೂ ಏಕಮನಸ್ಸಿನಿಂದ ಆ ಪಟ್ಟಣಕ್ಕೆ ವಿರೋಧವಾಗಿ ಕೂಡಿಕೊಂಡರು.

ಬಹುವೃದ್ಧನಾದ ಏಲಿಯು ತನ್ನ ಮಕ್ಕಳು ಎಲ್ಲಾ ಇಸ್ರಾಯೇಲರಲ್ಲಿ ನಡೆಸುತ್ತಿರುವುದನ್ನೂ, ಅವರು ದೇವದರ್ಶನ ಗುಡಾರದ ಬಾಗಿಲಿನಲ್ಲಿ ಸೇವೆ ಮಾಡುತ್ತಿದ್ದ ಸ್ತ್ರೀಯರೊಡನೆ ಸಂಗಮಿಸುತ್ತಿರುವುದನ್ನೂ ಕೇಳಿ

ಅವನು ಒಂದು ದಿನ ಸಂಜೆ ಹೊತ್ತಿನಲ್ಲಿ ಅರಮನೆಯ ಮಾಳಿಗೆಯ ಮೇಲೆ ತಿರುಗಾಡುತ್ತಿದ್ದನು. ಅವನು ಅಲ್ಲಿಂದ ಬಹು ಸುಂದರಿಯಾದ ಒಬ್ಬ ಸ್ತ್ರೀ ಸ್ನಾನಮಾಡುವುದನ್ನು ಕಂಡನು. ಕೂಡಲೆ ದಾವೀದನು ಒಬ್ಬನನ್ನು ಕರೆದು, “ಆ ಸ್ತ್ರೀ ಯಾರು?” ಎಂದು ವಿಚಾರಿಸಲು ಅವನು, “ಆಕೆಯು ಎಲೀಯಾಮನ ಮಗಳೂ, ಹಿತ್ತಿಯನಾದ ಊರೀಯನ ಹೆಂಡತಿಯೂ ಆಗಿರುವ ಬತ್ಷೆಬೆ ಅಲ್ಲವೇ?” ಎಂದು ಉತ್ತರ ಕೊಟ್ಟನು. ಆಗ ದಾವೀದನು ಆಗ ತಾನೇ ಋತುಸ್ನಾನಮಾಡಿಕೊಂಡಿದ್ದ ಆಕೆಯನ್ನು ಕರೆದು ತರುವಂತೆ ದೂತರನ್ನು ಕಳುಹಿಸಿದನು. ಆಕೆಯು ಬರಲು ಅವನು ಆಕೆಯನ್ನು ಸಂಗಮಿಸಿದನು. ಅನಂತರ ಆಕೆಯು ತನ್ನ ಮನೆಗೆ ಹೋದಳು. ಆಕೆಯು ತಾನು ಗರ್ಭಧರಿಸಿದ್ದು ಗೊತ್ತಾದಾಗ ದಾವೀದನಿಗೆ ವರ್ತಮಾನ ಕಳುಹಿಸಿದಳು.

ಹೀಗಿರಲು ನೀನು ಯೆಹೋವನಾದ ನನ್ನ ಆಜ್ಞೆಯನ್ನು ತಿರಸ್ಕರಿಸಿ, ನನ್ನ ದೃಷ್ಟಿಯಲ್ಲಿ ಅನೀತಿಯನ್ನು ಕೆಟ್ಟದ್ದಾಗಿರುವುದನ್ನು ಮಾಡಿದ್ದೇನು? ನೀನು ಹಿತ್ತಿಯನಾದ ಊರೀಯನನ್ನು ಕತ್ತಿಯಿಂದ ಕೊಲ್ಲಿಸಿ, ಅವನ ಹೆಂಡತಿಯನ್ನು ನಿನ್ನ ಹೆಂಡತಿಯನ್ನಾಗಿ ತೆಗೆದುಕೊಂಡಿರುವೆ. ನೀನು ನನ್ನ ಆಜ್ಞೆಯನ್ನು ತಿರಸ್ಕರಿಸಿದ್ದರಿಂದಲೂ, ಹಿತ್ತಿಯನಾದ ಊರೀಯನನ್ನು ಅಮ್ಮೋನಿಯರ ಕತ್ತಿಯಿಂದ ಕೊಲ್ಲಿಸಿ, ಅವನ ಹೆಂಡತಿಯನ್ನು ನಿನ್ನ ಹೆಂಡತಿಯನ್ನಾಗಿ ತೆಗೆದುಕೊಂಡದ್ದರಿಂದಲೂ, ನೀತಿಯ ಕತ್ತಿಯು ನಿನ್ನ ಮನೆಯನ್ನು ಬಿಟ್ಟು ಹೋಗುವುದಿಲ್ಲ. ಯೆಹೋವನಾದ ನನ್ನ ಮಾತನ್ನು ಕೇಳು. ನಾನು ನಿನ್ನ ಮನೆಯವರಿಂದಲೇ ನಿನಗೆ ಕೇಡು ಉಂಟಾಗುವಂತೆ ಮಾಡುವೆನು. ನಿನ್ನ ಹೆಂಡತಿಯರನ್ನು ತೆಗೆದು ನಿನ್ನೆದುರಿನಲ್ಲಿಯೇ ಇನ್ನೊಬ್ಬನಿಗೆ ಕೊಡುವೆನು. ಅವನು ಹಗಲಿನಲ್ಲಿಯೇ ಅವರ ಕೂಡ ಮಲಗುವನು. ನೀನು ಅದನ್ನು ಗುಪ್ತವಾಗಿ ಮಾಡಿರುವೆ. ನಾನು ಹೇಳುವ ಮಾತಾದರೋ ಎಲ್ಲಾ ಇಸ್ರಾಯೇಲ್ಯರ ಮುಂದೆ ಹಗಲಿನಲ್ಲೇ ನೆರವೇರುವುದು’” ಎಂದನು.

ಕೂಡಲೆ ಅವನು ಆಕೆಯನ್ನು ಹಿಡಿದು “ನನ್ನ ತಂಗಿಯೇ ಬಂದು ನನ್ನ ಸಂಗಡ ಮಲಗಿಕೋ” ಎಂದನು. ಆಕೆಯು; “ಅಣ್ಣನೇ, ಬೇಡ, ನನ್ನನ್ನು ಅಪಮಾನಪಡಿಸಬೇಡ, ಇಸ್ರಾಯೇಲರಲ್ಲಿ ಇಂಥ ನೀಚಕಾರ್ಯವು ನಡೆಯಬಾರದು. ಇಂಥ ಅವಮಾನಕರವಾದ ಕೆಲಸವನ್ನು ಮಾಡಬೇಡ. ಈ ಅಪಮಾನವನ್ನು ನಾನು ಮರೆಮಾಡುವುದಾದರೂ ಹೇಗೆ? ನಿನಗಂತೂ ಇಸ್ರಾಯೇಲರಲ್ಲಿ ನೀಚನೆಂಬ ಹೆಸರು ತಪ್ಪದು. ಆದುದರಿಂದ ದಯವಿಟ್ಟು ಅರಸನ ಸಂಗಡ ಮಾತನಾಡು. ಅವನು ನನ್ನನ್ನು ನಿನಗೆ ಕೊಡದಿರಲಾರನು” ಎಂದಳು. ಆದರೆ ಅವನು ಆಕೆಗಿಂತಲೂ ಬಲಶಾಲಿಯಾಗಿದ್ದರಿಂದ ಆಕೆಯ ಮಾತನ್ನು ಕೇಳದೆ ಬಲಾತ್ಕಾರದಿಂದ ಆಕೆಯನ್ನು ಕೆಡಿಸಿದನು.

ಅರಸನಾದ ಸೊಲೊಮೋನನು ಫರೋಹನ ಮಗಳನ್ನಲ್ಲದೆ ಮೋವಾಬ್ಯರು, ಅಮ್ಮೋನಿಯರು, ಎದೋಮ್ಯರು, ಚೀದೋನ್ಯರು ಮತ್ತು ಹಿತ್ತಿಯರು ಎಂಬ ಜನಾಂಗಗಳ ಸ್ತ್ರೀಯರನ್ನು ಮೋಹಿಸಿದನು. ಯೆಹೋವನು ಈ ಜನಾಂಗಗಳ ವಿಷಯದಲ್ಲಿ ಇಸ್ರಾಯೇಲರಿಗೆ, “ನಿಮಗೂ ಅವರಿಗೂ ಕೊಡುವುದು ತೆಗೆದುಕೊಳ್ಳುವುದು ನಡೆಯಬಾರದು, ಅದು ನಡೆಯುವುದಾದರೆ ಅವರು ನಿಮ್ಮ ಮನಸ್ಸನ್ನು ತಮ್ಮ ದೇವತೆಗಳ ಕಡೆಗೆ ತಿರುಗಿಸಾರು” ಎಂದು ಆಜ್ಞಾಪಿಸಿದ್ದರೂ ಸೊಲೊಮೋನನು ಅವರ ಸ್ತ್ರೀಯರಲ್ಲಿ ಅನುರಕ್ತನಾಗಿದ್ದನು. ಅವನಿಗೆ ರಾಜವಂಶದವರಾದ ಏಳುನೂರು ಮಂದಿ ಪತ್ನಿಯರಲ್ಲದೆ ಮುನ್ನೂರು ಜನರು ಉಪಪತ್ನಿಯರಿದ್ದರು. ಈ ಸ್ತ್ರೀಯರು ಅವನ ಮನಸ್ಸನ್ನು ಕೆಡಿಸಿಬಿಟ್ಟರು. ಅವನು ವೃದ್ಧನಾದಾಗ ಇವರು ಅವನ ಹೃದಯವನ್ನು ಅನ್ಯದೇವತೆಗಳ ಕಡೆಗೆ ತಿರುಗಿಸಿದರು. ಈ ಕಾರಣದಿಂದ ಅವನು ತನ್ನ ದೇವರಾದ ಯೆಹೋವನಲ್ಲಿಟ್ಟಿದ್ದ ಪ್ರಾಮಾಣಿಕವಾದ ಭಕ್ತಿಯನ್ನು ಕಳೆದುಕೊಂಡನು. ತನ್ನ ತಂದೆಯಾದ ದಾವೀದನಂತೆ ನಡೆಯಲಿಲ್ಲ. ಅವನು ಚೀದೋನ್ಯರ ಅಷ್ಟೋರೆತ್ ದೇವತೆಯನ್ನೂ, ಅಮ್ಮೋನಿಯರ ಮಿಲ್ಕೋಮ್ ಎಂಬ ಅಸಹ್ಯ ವಿಗ್ರಹವನ್ನು ಆರಾಧಿಸತೊಡಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು. ಅವನ ತಂದೆಯಾದ ದಾವೀದನು ಪೂರ್ಣಮನಸ್ಸಿನಿಂದ ಯೆಹೋವನನ್ನು ಸೇವಿಸಿದಂತೆ ಅವನು ಸೇವಿಸಲಿಲ್ಲ.

ಇದಲ್ಲದೆ ಅವರ ದೇಶದಲ್ಲಿ ವೇಶ್ಯಾವೃತ್ತಿಯನ್ನು ಅನುಸರಿಸುತ್ತಿರುವ ದೇವದಾಸ, ದೇವದಾಸಿಯರು ಇದ್ದರು. ಯೆಹೋವನು ಅವರ ಎದುರಿನಿಂದ ಹೊರಡಿಸಿಬಿಟ್ಟ ಅನ್ಯಜನಾಂಗಗಳಲ್ಲಿದ್ದ ದುರಾಚಾರಗಳನ್ನೆಲ್ಲಾ ಅವರೂ ಆಚರಿಸುವವರಾದರು.

ಅವನು ವಿಟರನ್ನು ದೇಶದಿಂದ ಹೊರಡಿಸಿ, ತನ್ನ ಹಿರಿಯರು ಮಾಡಿಸಿಟ್ಟ ವಿಗ್ರಹಗಳನ್ನೆಲ್ಲಾ ತೆಗೆದುಹಾಕಿದನು.

ಅವನು ತನ್ನ ತಂದೆಯಾದ ಅಸನ ಕಾಲದಲ್ಲಿ ತಪ್ಪಿಸಕೊಂಡ ದೇವದಾಸದಾಸಿಯರನ್ನು ದೇಶದಿಂದ ತೆಗೆದುಹಾಕಿದನು.

ಯೆಹೋವನ ಆಲಯದ ಪ್ರಾಕಾರದೊಳಗಿದ್ದ ದೇವದಾಸ, ವೇಶ್ಯವೃತ್ತಿಯವರ ಮನೆಗಳನ್ನು ಕೆಡವಿಹಾಕಿಸಿದನು. ಆ ಮನೆಗಳಲ್ಲಿ ಸ್ತ್ರೀಯರು ಅಶೇರ್ ದೇವತೆಗಳಿಗಾಗಿ ಗುಡಾರದ ಬಟ್ಟೆಗಳನ್ನು ನೇಯುತ್ತಿದ್ದರು.

“ಕನ್ಯೆಯನ್ನು ಕೆಟ್ಟದೃಷ್ಟಿಯಿಂದ ನೋಡುವುದಿಲ್ಲ ಎಂದು ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ,

ವಿವೇಕವು ನಿನ್ನನ್ನು ಜಾರಳಿಂದ ಅಂದರೆ ಸವಿಮಾತನಾಡುವ ಪರಸ್ತ್ರೀಯಿಂದ ತಪ್ಪಿಸುವುದು. ಅವಳು ತನ್ನ ಯೌವನಕಾಲದ ಕಾಂತನನ್ನು ತ್ಯಜಿಸಿ, ತನ್ನ ದೇವರ ಮುಂದೆ ಮಾಡಿಕೊಂಡ ಒಡಂಬಡಿಕೆಯನ್ನು ಮರೆತುಬಿಟ್ಟಿದ್ದಾಳೆ.

ವೇಶ್ಯಸ್ತ್ರೀಯ ತುಟಿಗಳಲ್ಲಾದರೋ ಜೇನುಗರೆಯುವುದು, ಅವಳ ಮಾತು ಎಣ್ಣೆಗಿಂತಲೂ ನಯವಾಗಿದೆ. ಅವಳು ಕಡೆಯಲ್ಲಿ ವಿಷದಂತೆ ಕಹಿಯೂ, ಇಬ್ಬಾಯಿಕತ್ತಿಯಂತೆ ತೀಕ್ಷ್ಣವೂ ಆಗುವಳು.

ಮಗನೇ, ಏಕೆ ಪರಸ್ತ್ರೀಯಲ್ಲಿ ಭ್ರಮೆಗೊಳ್ಳುವಿ, ಅನ್ಯಳ ಎದೆಯನ್ನು ತಬ್ಬಿಕೊಳ್ಳುವುದೇಕೆ?

ಅದು ಕೆಟ್ಟ ಸ್ತ್ರೀಯಿಂದಲೂ, ವೇಶ್ಯೆಯ ಸಿಹಿನುಡಿಯಿಂದಲೂ ನಿನ್ನನ್ನು ರಕ್ಷಿಸತಕ್ಕದ್ದಾಗಿದೆ. ನಿನ್ನ ಹೃದಯವು ಅವಳ ಸೌಂದರ್ಯವನ್ನು ಮೋಹಿಸದಿರಲಿ, ಅವಳು ತನ್ನ ಕಣ್ಣುರೆಪ್ಪೆಗಳಿಂದ ನಿನ್ನನ್ನು ವಶಮಾಡಿಕೊಂಡಾಳು, ನೋಡಿಕೋ. ವೇಶ್ಯೆಯಿಂದ ಯಾವನಿಗಾದರೂ ಒಂದು ರೊಟ್ಟಿ ಮಾತ್ರ ಗತಿಯಾಗುವುದು, ಪರಸ್ತ್ರೀಯೋ ಅಮೂಲ್ಯವಾದ ಜೀವವನ್ನು ಬೇಟೆಯಾಡುವಳು. ಮಡಿಲಲ್ಲಿ ಬೆಂಕಿಯನ್ನು ಇಟ್ಟುಕೊಂಡರೆ ಬಟ್ಟೆ ಸುಡುವುದಿಲ್ಲವೋ? ಧಗಧಗಿಸುವ ಕೆಂಡದ ಮೇಲೆ ನಡೆದರೆ ಕಾಲು ಬೇಯುವುದಿಲ್ಲವೋ? ನೆರೆಯವನ ಹೆಂಡತಿಯ ಹತ್ತಿರ ಹೋಗುವವನಿಗೆ ಹೀಗೆಯೇ ಆಗುವುದು, ಯಾರು ಅವಳನ್ನು ಮುಟ್ಟುವನೋ ಅವನು ದಂಡನೆಯನ್ನು ಹೊಂದದೇ ಇರನು.

ವ್ಯಭಿಚಾರಿಯೋ ಕೇವಲ ಬುದ್ಧಿಹೀನನು, ಇಂಥಾ ಕಾರ್ಯವನ್ನು ಮಾಡುವವನು ತನ್ನನ್ನೇ ನಾಶಪಡಿಸಿಕೊಳ್ಳುವನು.

ಅವು ಜಾರಳಿಂದ ಮತ್ತು ಸವಿಮಾತನಾಡುವ ಪರಸ್ತ್ರೀಯಿಂದ ನಿನ್ನನ್ನು ರಕ್ಷಿಸುವವು. ನಾನು ನನ್ನ ಮನೆಯ ಕಿಟಕಿಯ ಜಾಲರಿಯಿಂದ ಇಣಿಕಿ ನೋಡಲು ಅಲ್ಪಬುದ್ಧಿಯುಳ್ಳ ಅನೇಕ ಯುವಕರು ಕಾಣಿಸಿದರು. ಅವರಲ್ಲಿ ಜ್ಞಾನಹೀನನಾದ ಒಬ್ಬ ಯೌವನಸ್ಥನನ್ನು ಕಂಡೆನು. ಅವನು ಸಂಜೆಯ ಮೊಬ್ಬಿನಲ್ಲಿ, ಮಧ್ಯರಾತ್ರಿಯ ಅಂಧಕಾರದಲ್ಲಿ, ಅವಳ ಮನೆಯ ಹತ್ತಿರ ಬೀದಿಯಲ್ಲಿ ಹಾದುಹೋಗುತ್ತಾ, ಅವಳ ಮನೆಯ ಕಡೆಗೆ ತಿರುಗಿದ್ದನ್ನು ಕಂಡೆನು. ಇಗೋ ವೇಶ್ಯಾರೂಪವನ್ನು ಧರಿಸಿಕೊಂಡಿದ್ದ ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರುಗೊಂಡಳು.

ಅವಳು ಅವನನ್ನು ತನ್ನ ಸವಿಮಾತುಗಳಿಂದ ಮನವೊಲಿಸಿ, ಬಹಳವಾಗಿ ಪ್ರೇರೇಪಿಸಿ ಸಮ್ಮತಿಪಡಿಸುತ್ತಾಳೆ. ಹೋರಿಯು ವಧ್ಯಸ್ಥಾನಕ್ಕೆ ಹೋಗುವ ಹಾಗೂ, ಬೇಡಿಬಿದ್ದಿರುವ ಮೂರ್ಖನು ದಂಡನೆಗೆ ನಡೆಯುವಂತೆಯೂ, ಪಕ್ಷಿಯು ಬಲೆಯ ಕಡೆಗೆ ಓಡುವಂತೆಯೂ, ಅವನು ತನ್ನ ಪ್ರಾಣಾಪಾಯವನ್ನು ತಿಳಿಯದೆ, ಬಾಣವು ತನ್ನ ಕಾಳಿಜವನ್ನು ತಿವಿಯುವ ಮೇರೆಗೂ, ಅವನು ತಟ್ಟನೆ ಅವಳ ಹಿಂದೆ ಹೋಗುತ್ತಾನೆ. ಈಗ, ಮಕ್ಕಳೇ, ನನ್ನ ಕಡೆಗೆ ಕಿವಿಗೊಡಿರಿ, ನನ್ನ ಮಾತುಗಳನ್ನು ಆಲಿಸಿರಿ. ನಿನ್ನ ಹೃದಯವು ಅವಳ ನಡತೆಯ ಕಡೆಗೆ ತಿರುಗದಿರಲಿ, ತಪ್ಪಿಹೋಗಿಯೂ ಅವಳ ಮಾರ್ಗದಲ್ಲಿ ನಡೆಯಬೇಡ. ಅವಳಿಂದ ಗಾಯಪಟ್ಟು ಬಿದ್ದವರು ಬಹು ಜನರು, ಹತರಾದವರೋ ಲೆಕ್ಕವೇ ಇಲ್ಲ. ಅವಳ ಮನೆಯು ಪಾತಾಳದ ದಾರಿ, ಅದು ಮೃತ್ಯುವಿನ ಅಂತಃಪುರಕ್ಕೆ ಇಳಿದುಹೋಗುತ್ತದೆ.

ಧರ್ಮವು ಯಥಾರ್ಥವಂತರನ್ನು ಉದ್ಧರಿಸುವುದು, ವಂಚಕರು ತಮ್ಮ ಆಶಾಪಾಶಕ್ಕೆ ಸಿಕ್ಕಿಬೀಳುವರು.

ಜಾರಸ್ತ್ರೀಯ ಬಾಯಿ ಆಳವಾದ ಹಳ್ಳ, ಯೆಹೋವನಿಗೆ ಸಿಟ್ಟನ್ನೆಬ್ಬಿಸಿದವನು ಅದರಲ್ಲಿ ಬೀಳುವನು.

ಸೂಳೆಯು ಆಳವಾದ ಹಳ್ಳ, ಜಾರಸ್ತ್ರೀಯು ಇಕ್ಕಟ್ಟಾದ ಗುಂಡಿ. ಹೌದು, ಕಳ್ಳನಂತೆ ಹೊಂಚುಹಾಕುತ್ತಾಳೆ, ಜನರಲ್ಲಿ ದ್ರೋಹಿಗಳನ್ನು ಹೆಚ್ಚಿಸುತ್ತಾಳೆ.

ಜ್ಞಾನವನ್ನು ಪ್ರೀತಿಸುವವನು ತಂದೆಯನ್ನು ಹರ್ಷಗೊಳಿಸುವನು, ವೇಶ್ಯೆಯ ಸಂಗಡಿಗನು ಆಸ್ತಿಯನ್ನು ಹಾಳುಮಾಡಿಕೊಳ್ಳುವನು.

ಜಾರಳ ನಡತೆಯು ಹೀಗೆಯೇ ಸರಿ, ಅವಳು ತಿಂದು ಬಾಯಿ ಒರೆಸಿಕೊಂಡು, “ನಾನು ತಪ್ಪುಮಾಡಲಿಲ್ಲವಲ್ಲವೆ” ಅಂದುಕೊಳ್ಳುವಳು.

ಆಗ ಮರಣಕ್ಕಿಂತ ಹೆಚ್ಚು ವಿಷವೊಂದು ಕಂಡುಬಂತು. ಯಾವುದೆಂದರೆ ಕೆಟ್ಟ ಹೆಂಗಸೇ. ಅವಳ ಹೃದಯವು ಉರುಲುಗಳೂ, ಬಲೆಗಳೂ, ಅವಳ ತೋಳುಗಳು ಸಂಕೋಲೆಗಳು. ದೇವರು ಒಲಿದವನು ಅವಳಿಂದ ತಪ್ಪಿಸಿಕೊಳ್ಳುವನು. ಆದರೆ ಪಾಪಿಯು ಅವಳ ಕೈಗೆ ಸಿಕ್ಕಿಬೀಳುವನು.

ಅಯ್ಯೋ, ನಂಬಿಕೆಯುಳ್ಳ ನಗರಿಯು ಸೂಳೆಯಾದಳಲ್ಲಾ! ನ್ಯಾಯದಿಂದ ತುಂಬಿ ಧರ್ಮಕ್ಕೆ ನೆಲೆಯಾಗಿದ್ದ ನಗರ ಈಗ ಕೊಲೆಪಾತಕರಿಗೆ ನೆಲೆಯಾಗಿದೆ.

ಮಾಟಗಾತಿಯ ಮಕ್ಕಳೇ, ವ್ಯಭಿಚಾರ ಮತ್ತು ವ್ಯಭಿಚಾರಿಯ ಸಂತಾನದವರೇ, ನೀವು ಇಲ್ಲಿಗೆ ಬನ್ನಿರಿ!

ಯೆಹೋವನು ಹೀಗೆನ್ನುತ್ತಾನೆ, “ಗಂಡನು ತ್ಯಜಿಸಿದವಳು ಅವನಿಂದ ಹೊರಟು ಮತ್ತೊಬ್ಬನ ಹೆಂಡತಿಯಾದ ಮೇಲೆ, ಅವಳನ್ನು ಮೊದಲ ಗಂಡನು ತಿರುಗಿ ಸೇರಿಸಿಕೊಂಡಾನೇ? ಸೇರಿಸಿಕೊಂಡರೆ ಆ ದೇಶವು ಕೇವಲ ಅಪವಿತ್ರವಾಗಿ ಹೋಗುವುದಲ್ಲವೇ? ಹೀಗಿರಲು ಬಹುಮಂದಿಯೊಡನೆ ವ್ಯಭಿಚಾರ ಮಾಡಿದ ನೀನು ನನ್ನ ಬಳಿಗೆ ಹಿಂದಿರುಗಿ ಬರುತ್ತಿಯಾ? ಕಣ್ಣೆತ್ತಿ ಬೋಳು ಗುಡ್ಡಗಳನ್ನು ನೋಡು, ಯಾವುದರಲ್ಲಿ ನಿನ್ನನ್ನು ನೀನು ಕೆಡಿಸಿಕೊಳ್ಳಲಿಲ್ಲ? ಅರಬಿಯನು ಅಡವಿಯಲ್ಲಿ ಹೊಂಚುಹಾಕುವ ಹಾಗೆ ನೀನು ದಾರಿಯ ಮಗ್ಗುಲಲ್ಲಿ ಅವರಿಗಾಗಿ ಹೊಂಚು ಹಾಕುತ್ತಾ ಕುಳಿತಿದ್ದಿ; ನಿನ್ನ ವ್ಯಭಿಚಾರದಿಂದಲೂ, ನಿನ್ನ ಕೆಟ್ಟತನದಿಂದಲೂ ದೇಶವನ್ನು ಅಪವಿತ್ರಮಾಡಿದ್ದಿ. ಆದಕಾರಣ ಹದಮಳೆಗೆ ಅಡ್ಡಿಯಾಯಿತು, ಹಿಂಗಾರೂ ಆಗಲಿಲ್ಲ; ಆದರೂ ನೀನು ವ್ಯಭಿಚಾರಿಯಾಗಿ ನಾಚಿಕೆಗೆಟ್ಟಿದ್ದಿ.

ಅರಸನಾದ ಯೋಷೀಯನ ಕಾಲದಲ್ಲಿ ಯೆಹೋವನು ನನಗೆ ಹೀಗೆ ಹೇಳಿದನು, “ಭ್ರಷ್ಟಳಾದ ಇಸ್ರಾಯೇಲ್ ಮಾಡಿದ್ದನ್ನು ನೋಡಿದೆಯಾ? ಅವಳು ಎತ್ತರವಾದ ಎಲ್ಲಾ ಗುಡ್ಡಗಳನ್ನು ಹತ್ತಿ, ಸೊಂಪಾಗಿ ಬೆಳೆದಿರುವ ಎಲ್ಲಾ ಮರಗಳ ಕೆಳಗೆ ಹೋಗಿ ವ್ಯಭಿಚಾರಿಯಾಗಿ ನಡೆದಳಷ್ಟೆ. ಅವಳು ಇವುಗಳನ್ನೆಲ್ಲಾ ನಡೆಸಿದ ಮೇಲೆ ನನ್ನ ಬಳಿಗೆ ಪುನಃ ಬಂದಾಳು ಅಂದುಕೊಂಡೆನು. ಆದರೆ ಬರಲಿಲ್ಲ. ಆಗ ಯೆಹೂದವೆಂಬ ದ್ರೋಹಿಯಾದ ಅವಳ ತಂಗಿಯು ಇದನ್ನು ನೋಡಿದಳು. ಭ್ರಷ್ಟಳಾದ ಇಸ್ರಾಯೇಲ್ ನನಗೆ ವಿಮುಖಳಾಗಿ ವ್ಯಭಿಚಾರ ಮಾಡಿದ ಕಾರಣದಿಂದಲೇ ನಾನು ಅವಳನ್ನು ನಿರಾಕರಿಸಿ, ತ್ಯಾಗಪತ್ರ ಕೊಟ್ಟದ್ದನ್ನು ಯೆಹೂದವೆಂಬ ದ್ರೋಹಿಯಾದ ಅವಳ ತಂಗಿಯು ನೋಡಿಯೂ, ಅಂಜದೆಯೂ ತಾನೂ ಹೋಗಿ ವ್ಯಭಿಚಾರವನ್ನು ನಡೆಸಿದಳು.

ಆದರೆ ಇಸ್ರಾಯೇಲ್ ವಂಶದವರೇ, ಒಬ್ಬ ಹೆಂಗಸು ಪತಿದ್ರೋಹ ಮಾಡಿದಂತೆ ನೀವು ನನಗೆ ದ್ರೋಹವನ್ನು ಮಾಡಿದ್ದೀರಿ” ಎಂದು ಯೆಹೋವನು ನುಡಿಯುತ್ತಾನೆ.

ಯೆಹೋವನು, “ನಾನು ನಿನ್ನನ್ನು ಹೇಗೆ ಕ್ಷಮಿಸಲಿ? ನಿನ್ನ ಜನರು ನನ್ನನ್ನು ಬಿಟ್ಟು ದೇವರಲ್ಲದವುಗಳ ಮೇಲೆ ಆಣೆಯಿಟ್ಟಿದ್ದಾರೆ. ನಾನು ಅವರಿಗೆ ಹೊಟ್ಟೆ ತುಂಬಾ ಆಹಾರಕೊಟ್ಟ ಮೇಲೂ ಅವರು ವ್ಯಭಿಚಾರ ಮಾಡಿದರು, ವ್ಯಭಿಚಾರಿಣಿಯರ ಮನೆಗಳಲ್ಲಿ ಗುಂಪುಕೂಡಿದರು. ಕೊಬ್ಬಿ ಅತ್ತಿತ್ತ ಓಡಾಡುವ ಕುದುರೆಗಳಂತೆ ಅವರಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಹೆಂಡತಿಯನ್ನು ನೋಡಿ ಮೋಹಿಸುತ್ತಿದ್ದನು.

ನೀವು ಕಳ್ಳತನ, ಕೊಲೆ ಮತ್ತು ವ್ಯಭಿಚಾರಗಳನ್ನು ಮಾಡಿ ಸುಳ್ಳುಸಾಕ್ಷಿ ಹೇಳಿ, ಬಾಳನಿಗೆ ಹೋಮವನ್ನರ್ಪಿಸಿ, ಕಂಡುಕೇಳದ ಅನ್ಯದೇವತೆಗಳನ್ನು ಹಿಂಬಾಲಿಸಿದ ಮೇಲೆ,

ನಾನು ನಿನ್ನ ವ್ಯಭಿಚಾರಗಳನ್ನು, ನಿನ್ನ ಹೇಕಾರಗಳನ್ನು, ನಿನ್ನ ವ್ಯಭಿಚಾರದ ನಡತೆಯನ್ನು ಗುಡ್ಡಗಳಲ್ಲಿಯೂ, ಬಯಲಿನಲ್ಲಿಯೂ ನೀನು ನಡೆಸಿದ ಅಸಹ್ಯಕಾರ್ಯಗಳನ್ನು ನೋಡಿದ್ದೇನೆ. ಯೆರೂಸಲೇಮೇ, ನಿನ್ನ ಗತಿಯನ್ನು ಏನೆಂದು ಹೇಳಲಿ! ನೀನು ಶುದ್ಧಳಾಗಲು ಇನ್ನೆಷ್ಟು ಕಾಲ ಬೇಕು?

ಯೆರೂಸಲೇಮಿನ ಪ್ರವಾದಿಗಳಲ್ಲಿಯೂ ನಾನು ಅಸಹ್ಯವನ್ನು ನೋಡಿದ್ದೇನೆ. ಅವರು ವ್ಯಭಿಚಾರಮಾಡಿ, ಮೋಸದಲ್ಲಿ ನಡೆದು, ದುಷ್ಟರಲ್ಲಿ ಯಾರೂ ತನ್ನ ದುಷ್ಟತನವನ್ನು ಬಿಡದಂತೆ ಅವರ ಕೈಗಳನ್ನು ಬಲಪಡಿಸುತ್ತಿದ್ದಾರೆ. ಅವರೆಲ್ಲರು ಸೊದೋಮಿನಂತೆ, ಆ ಪಟ್ಟಣದ ನಿವಾಸಿಗಳು ಗೊಮೋರದ ಹಾಗೆ ನನಗೆ ಕಾಣುತ್ತಾರೆ.

ಇವರು ಇಸ್ರಾಯೇಲಿನಲ್ಲಿ ದುರಾಚಾರವನ್ನು ನಡೆಸಿ, ನೆರೆಯವರ ಹೆಂಡತಿಯರೊಂದಿಗೆ ವ್ಯಭಿಚಾರಮಾಡಿ, ನಾನು ಆಜ್ಞಾಪಿಸದ ಮಾತುಗಳನ್ನು ನನ್ನ ಹೆಸರಿನ ಮೇಲೆ ಸುಳ್ಳಾಗಿ ಸಾರಿದಿರಲ್ಲಾ; ನಾನೇ ಬಲ್ಲೆ, ನಾನೇ ಸಾಕ್ಷಿ ಎಂದು ಯೆಹೋವನು ಅನ್ನುತ್ತಾನೆ” ಎಂಬುದೇ.

ಚೀಯೋನಿನ ಸತಿಯರ ಮತ್ತು ಯೆಹೂದದ ಊರುಗಳ ಕನ್ಯೆಯರ ಅತ್ಯಾಚಾರವಾಗುತ್ತಿದೆ.

“ಆದರೆ ನೀನು ನಿನ್ನ ಸೌಂದರ್ಯದಲ್ಲಿಯೇ ನಂಬಿಕೆಯಿಟ್ಟು, ನಾನು ಪ್ರಸಿದ್ಧಳಾಗಿದ್ದೇನಲ್ಲಾ ಎಂದು ಉಬ್ಬಿಕೊಂಡು ವ್ಯಭಿಚಾರಮಾಡಿದಿ; ಹಾದುಹೋಗುವ ಪ್ರತಿಯೊಬ್ಬನ ಸಂಗಡ ಮಿತಿಮೀರಿ ವ್ಯಭಿಚಾರಮಾಡಿದೆ, ಪ್ರತಿಯೊಬ್ಬನ ಸಂಗಡ ವ್ಯಭಿಚಾರಕ್ಕೆ ಒಳಗಾದೆ. ನೀನು ಪೂಜಾ ಸ್ಥಾನಗಳನ್ನು ಕಟ್ಟಿಕೊಂಡು ನಿನ್ನ ಚಿತ್ರವಿಚಿತ್ರ ವಸ್ತ್ರಗಳಿಂದ ಅವುಗಳನ್ನು ಅಲಂಕರಿಸಿ ಅಲ್ಲಿ ವ್ಯಭಿಚಾರ ನಡಿಸಿದೆ. ಇದು ನಡೆಯತಕ್ಕದ್ದಲ್ಲ. ಆಗಬಾರದಾಗಿತ್ತು. ಮತ್ತು ನಾನು ನನ್ನ ಬೆಳ್ಳಿ ಬಂಗಾರದಿಂದ ನಿನಗೆ ಮಾಡಿಸಿಕೊಟ್ಟಿದ್ದ ನಿನ್ನ ಚಂದವಾದ ಆಭರಣಗಳನ್ನು ನೀನು ತೆಗೆದು ಅವುಗಳಿಂದ ಪುರುಷ ಮೂರ್ತಿಗಳನ್ನು ರೂಪಿಸಿಕೊಂಡು ಅವುಗಳೊಡನೆ ವ್ಯಭಿಚಾರ ಮಾಡಿದೆ.

“ಇದಲ್ಲದೆ ನೀನು ನನಗೆ ಹೆತ್ತ ಗಂಡು ಮತ್ತು ಹೆಣ್ಣು ಮಕ್ಕಳನ್ನು ಹಿಡಿದು ಮೂರ್ತಿಗಳಿಗೆ ಆಹಾರವಾಗಲೆಂದು ಯಜ್ಞಮಾಡಿದೆ. ನಿನ್ನ ವ್ಯಭಿಚಾರವು ಅಲ್ಪಕಾರ್ಯವೆಂದು ಭಾವಿಸಿದಿಯೋ? ಅದನ್ನೂ ಮೀರಿಸಬೇಕೆಂದು ನೀನು ನನ್ನ ಮಕ್ಕಳನ್ನು ಹತಿಸಿ, ಆಹುತಿಕೊಟ್ಟು ಮೂರ್ತಿಗಳಿಗೆ ಅರ್ಪಿಸಿದಿಯೋ? ಈ ನಿನ್ನ ಅಸಹ್ಯಕಾರ್ಯಗಳನ್ನೂ, ವ್ಯಭಿಚಾರವನ್ನು ನೀನು ಪದೇ ಪದೇ ನಡೆಸುತ್ತಿದ್ದಾಗ ನೀನು ಬಟ್ಟೆಯಿಲ್ಲದೆ ಬೆತ್ತಲೆಯಾಗಿ ನಿನ್ನ ರಕ್ತದಲ್ಲಿ ಹೊರಳಾಡುತ್ತಿದ್ದ ನಿನ್ನ ಎಳೆತನವನ್ನು ನೀನು ಜ್ಞಾಪಕಕ್ಕೆ ತಂದುಕೊಳ್ಳಲಿಲ್ಲ.

ಒಂದೊಂದು ಬೀದಿಯ ಕೊನೆಯಲ್ಲಿಯೂ ನೀನು ಜಗಲಿಯನ್ನು ಕಟ್ಟಿಕೊಂಡು, ನಿನ್ನ ಸೌಂದರ್ಯವನ್ನು ನೀಚ ಕೆಲಸಕ್ಕೆ ಒಪ್ಪಿಸಿ, ಹಾದುಹೋಗುವವರೆಲ್ಲರನ್ನು ಸೇರಿಸಿ ವ್ಯಭಿಚಾರವನ್ನು ಹೆಚ್ಚಾಗಿ ನಡೆಸಿರುವೆ. ನಿನ್ನ ನೆರೆಯವರೂ ಅತಿಕಾಮಿಗಳೂ ಆದ ಐಗುಪ್ತ್ಯರೊಂದಿಗೆ ಸಹ ನೀನು ಬೆರೆತು ಹೆಚ್ಚಾಗಿ ವ್ಯಭಿಚಾರಮಾಡಿ ನನ್ನನ್ನು ರೇಗಿಸಿರುವೆ. ಆದಕಾರಣ ನಾನು ನಿನ್ನ ಮೇಲೆ ಕೈಯೆತ್ತಿ ನಿನ್ನ ಆಹಾರವನ್ನು ಕಡಿಮೆಮಾಡಿದೆನು; ನಿನ್ನನ್ನು ದ್ವೇಷಿಸಿ ನಿನ್ನ ಕೆಟ್ಟ ನಡತೆಗೆ ಅಸಹ್ಯಪಡುವವರಾದ ಫಿಲಿಷ್ಟಿಯದ ಕುಮಾರ್ತೆಯರ ಕೈಗೆ ನಿನ್ನನ್ನು ಸಿಕ್ಕಿಸಿದೆನು. ಮತ್ತು ಇಷ್ಟೂ ಸಾಲದೆಂದು ಅಶ್ಶೂರ್ಯರೊಂದಿಗೂ ವ್ಯಭಿಚಾರಮಾಡಿದಿ; ಹೌದು, ಅವರೊಡನೆ ವ್ಯಭಿಚಾರಮಾಡಿದರೂ ನಿನಗೆ ತೃಪ್ತಿಯಾಗಲಿಲ್ಲ. ಇದಲ್ಲದೆ ನೀನು ತುಂಬಾ ವ್ಯಾಪಾರವುಳ್ಳ ಕಸ್ದೀಯ ದೇಶಕ್ಕೆ ಸೇರಿ, ಅಲ್ಲಿಯೂ ಬಹಳ ವ್ಯಭಿಚಾರಮಾಡಿದೆ, ಆದರೂ ನಿನಗೆ ತೃಪ್ತಿಯಾಗಲಿಲ್ಲ.”

ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಿನ್ನ ಮನಸ್ಸು ಮೋಹಕ್ಕೆ ಎಷ್ಟೋ ಸೋತಿದೆ! ಇಷ್ಟೆಲ್ಲಾ ದುಷ್ಕೃತ್ಯಗಳನ್ನು ನಡೆಸಿ ಕಟ್ಟಿಲ್ಲದ ಜಾರಸ್ತ್ರೀಯಾಗಿರುವೆ. ಒಂದೊಂದು ಬೀದಿಯ ಕೊನೆಯಲ್ಲಿಯೂ ನೀನು ಗದ್ದುಗೆಯನ್ನು ಕಟ್ಟಿ, ಎಲ್ಲಾ ಚೌಕಗಳಲ್ಲಿ ಜಗಲಿಯನ್ನು ಸ್ಥಾಪಿಸಿಕೊಂಡಿರುವೆ; ದೊರೆತದ್ದನ್ನು ಕಡಿಮೆಯೆಂದು ತಿರಸ್ಕರಿಸುವ ವ್ಯಭಿಚಾರಿಯಂತೆ ನೀನು ನಡೆಯುವವಳಲ್ಲ. “ನೀನು ವ್ಯಭಿಚಾರಮಾಡುವ ಪತಿವ್ರತೆ! ಗಂಡನಿಗೆ ಬದಲಾಗಿ ಅನ್ಯರನ್ನು ಸೇರುವ ಜಾರಿಣಿ! ಎಲ್ಲಾ ಕಡೆ ವ್ಯಭಿಚಾರಿ ಸ್ತ್ರೀಗೆ ಹಣಕೊಡುವುದುಂಟು; ನೀನಾದರೋ ನಿನ್ನ ಪ್ರಿಯರಿಗೆಲ್ಲ ನೀನೇ ಹಣವನ್ನು ಕೊಡುತ್ತಿರುವೆ; ಅವರು ಎಲ್ಲಾ ಕಡೆಯಿಂದಲೂ ಬಂದು ನಿನ್ನಲ್ಲಿ ವ್ಯಭಿಚಾರಮಾಡುವಂತೆ ಅವರಿಗೆ ಬಹುಮಾನ ಕೊಡುತ್ತಿರುವೆ. ನಿನ್ನ ವ್ಯಭಿಚಾರಕ್ಕೂ, ಇತರ ವೇಶ್ಯೆಯರ ವ್ಯಭಿಚಾರಕ್ಕೂ ವ್ಯತ್ಯಾಸವುಂಟು; ನಿನ್ನಲ್ಲಿ ವ್ಯಭಿಚಾರ ಮಾಡಲಿಕ್ಕೆ ಯಾರೂ ನಿನ್ನ ಹಿಂದೆ ಬಾರರು; ನೀನೇ ಕೊಡುತ್ತೀಯೇ ಹೊರತು ನಿನಗೇನೂ ಸಿಕ್ಕದು; ನಿನ್ನ ದುರಾಚಾರವು ವಿಪರೀತವೇ!”

ಹೀಗಿರಲು ವ್ಯಭಿಚಾರಿಯೇ, ಯೆಹೋವನ ಈ ವಾಕ್ಯವನ್ನು ಕೇಳು, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆಹಾ, ಮಿತಿಮೀರಿದ ನಿನ್ನ ಕಾಮಾತುರ, ನಿನ್ನಲ್ಲಿ ವ್ಯಭಿಚಾರಮಾಡಿದ ನಿನ್ನ ಪ್ರಿಯರ ಮೂಲಕ ನಿನಗಾದ ಮಾನಭಂಗ, ನಿನ್ನ ಎಲ್ಲಾ ಅಸಹ್ಯ ವಿಗ್ರಹಗಳು, ನೀನು ಅವುಗಳಿಗೆ ಅರ್ಪಿಸಿದ ನಿನ್ನ ಮಕ್ಕಳ ರಕ್ತ, ಇವುಗಳನ್ನು ನಾನು ನೋಡಿ, ನೀನು ಸಂಭೋಗಿಸಿದ ನಿನ್ನ ಎಲ್ಲಾ ಮಿಂಡರನ್ನೂ, ನೀನು ಮೋಹಿಸಿದ ಸಮಸ್ತರನ್ನೂ ನೀನು ಹಗೆಮಾಡಿದ ಎಲ್ಲರೊಂದಿಗೆ ಸುತ್ತುಮುತ್ತಲು ನಿನ್ನ ವಿರುದ್ಧವಾಗಿ ಕೂಡಿಸಿ, ಅವರ ಕಣ್ಣೆದುರಿಗೆ ನಿನ್ನನ್ನು ಬೆತ್ತಲೆಗೈದು ನಿನ್ನ ಮಾನವನ್ನು ಬಟ್ಟಬಯಲು ಮಾಡುವೆನು. ವ್ಯಭಿಚಾರ ಮಾಡುವಂಥ, ರಕ್ತಸುರಿಸುವಂಥ ಹೆಂಗಸರಿಗೆ ತಕ್ಕ ದಂಡನೆಗಳನ್ನು ನಾನು ನಿನಗೆ ವಿಧಿಸಿ ಕೋಪೋದ್ರೇಕದಿಂದಲೂ, ರೋಷಾವೇಶದಿಂದಲೂ ನಿನ್ನ ರಕ್ತವನ್ನು ಸುರಿಸುವೆನು.

ನಿನ್ನ ಮನೆಗಳನ್ನು ಬೆಂಕಿಯಿಂದ ಸುಡುವರು; ಬಹುಮಂದಿ ಹೆಂಗಸರ ಕಣ್ಣೆದುರಿನಲ್ಲಿ ನಿನ್ನನ್ನು ದಂಡಿಸುವರು; ನೀನು ನಿನ್ನ ಸೂಳೆತನವನ್ನು ನಿಲ್ಲಿಸಿಬಿಡುವಂತೆ ನಾನು ಮಾಡುವೆನು; ನೀನು ನಿನ್ನ ಮಿಂಡರಿಗೆ ಇನ್ನು ಹಣಕೊಡದಿರುವಿ. ಹೀಗೆ ನಾನು ನಿನ್ನ ಮೇಲಣ ಸಿಟ್ಟನ್ನು ತೀರಿಸಲು, ನನ್ನ ರೋಷವು ನಿನ್ನ ಕಡೆಯಿಂದ ತೊಲಗಿ ಬಿಡುವುದು; ನಾನು ಶಾಂತನಾಗಿ ಇನ್ನು ಮೇಲೆ ಕೋಪಗೊಳ್ಳೆನು. “ನೀನು ನಿನ್ನ ಯೌವನ ಕಾಲವನ್ನು ಜ್ಞಾಪಕಮಾಡಿಕೊಳ್ಳದೆ, ಈ ದುಷ್ಕೃತ್ಯಗಳನ್ನೆಲ್ಲಾ ನಡೆಸಿ ನನ್ನನ್ನು ರೇಗಿಸಿದ್ದರಿಂದ ಇಗೋ, ನಾನು ನಿನ್ನ ದುರ್ಮಾರ್ಗದ ಫಲವನ್ನು ನಿನ್ನ ತಲೆಗೆ ಕಟ್ಟುವೆನು; ನೀನು ಲೆಕ್ಕವಿಲ್ಲದ ದುರಾಚಾರಗಳನ್ನು ನಡೆಸಿದ್ದಲ್ಲದೆ ಈ ಅಸಹ್ಯ ಕಾರ್ಯವನ್ನೂ ಮಾಡಿರುವೆ” ಇದು ಕರ್ತನಾದ ಯೆಹೋವನ ನುಡಿ.

ನಿನ್ನಲ್ಲಿ ಚಾಡಿಕೋರರು ರಕ್ತ ಹರಿಸಿದ್ದಾರೆ; ನಿನ್ನವರು ಗುಡ್ಡಗಳ ಮೇಲೆ ಯಜ್ಞಶೇಷವನ್ನು ತಿಂದಿದ್ದಾರೆ; ನಿನ್ನ ಮಧ್ಯದಲ್ಲಿ ದುರಾಚಾರಗಳನ್ನು ನಡೆಸಿದ್ದಾರೆ. ನಿನ್ನವರು ತಂದೆಗೆ ಮಾನಭಂಗ ಮಾಡಿದ್ದಾರೆ; ನಿನ್ನಲ್ಲಿ ಮುಟ್ಟಿನಿಂದ ಅಶುದ್ಧಳಾದವಳನ್ನು ಕೂಡಿದ್ದಾರೆ. ನಿನ್ನಲ್ಲಿ ಒಬ್ಬನು ನೆರೆಯವನ ಹೆಂಡತಿಯಲ್ಲಿ ದುರಾಚಾರ ನಡಿಸಿದ್ದಾನೆ; ಇನ್ನೊಬ್ಬನು ಅತ್ಯಾಚಾರ ಮಾಡಿ ಸೊಸೆಯನ್ನು ಕೆಡಿಸಿದ್ದಾನೆ; ಮತ್ತೊಬ್ಬನು ತನ್ನ ತಂದೆಯ ಮಗಳೇ ಆದ ತಂಗಿಯ ಮಾನಭಂಗಪಡಿಸಿದ್ದಾನೆ.

ಯೆಹೋವನು ಮತ್ತೊಂದು ವಾಕ್ಯವನ್ನು ನನಗೆ ದಯಪಾಲಿಸಿದನು, “ನರಪುತ್ರನೇ, ಒಬ್ಬ ತಾಯಿಯ ಮಕ್ಕಳಾದ ಇಬ್ಬರು ಹೆಂಗಸರಿದ್ದರು. ಅವರು ಐಗುಪ್ತದಲ್ಲಿ ವ್ಯಭಿಚಾರ ಮಾಡುತ್ತಿದ್ದರು. ಬಾಲ್ಯದಲ್ಲೇ ವ್ಯಭಿಚಾರ ಮಾಡಿದ್ದರಿಂದ ಅವರ ಸ್ತನಗಳು ಹಿಸುಕಲ್ಪಟ್ಟವು. ಎಳೆಯ ತೊಟ್ಟುಗಳು ನಸುಕಲ್ಪಟ್ಟವು. ಅವರ ಹೆಸರುಗಳೇನೆಂದರೆ: ಹಿರಿಯವಳ ಹೆಸರು ಒಹೊಲ ಮತ್ತು ಕಿರಿಯವಳ ಹೆಸರು ಒಹೊಲೀಬ. ಅವರು ನನ್ನವರಾಗಿ ಗಂಡು ಮತ್ತು ಹೆಣ್ಣು ಮಕ್ಕಳನ್ನು ಹೆತ್ತರು. ಒಹೊಲ ಸಮಾರ್ಯವನ್ನೂ, ಒಹೊಲೀಬ ಯೆರೂಸಲೇಮನ್ನೂ ಸೂಚಿಸತಕ್ಕ ಹೆಸರುಗಳಾಗಿವೆ. “ಒಹೊಲಳು ನನ್ನ ವಶವಾಗಿರುವಾಗಲೇ, ವ್ಯಭಿಚಾರ ಮಾಡಿದಳು. ಅವಳು ತನ್ನ ಪ್ರಿಯರನ್ನು, ತನ್ನ ನೆರೆಯವರಾದ ಅಶ್ಶೂರ್ಯರನ್ನು, ಅವರೆಲ್ಲರೂ ನೇರಳೆ ಬಣ್ಣದಿಂದ ಹೊದಿಸಲ್ಪಟ್ಟ ಯೋಧರೂ, ಅಧಿಕಾರಸ್ಥರೂ, ಅಪೇಕ್ಷಿಸತಕ್ಕ ಎಲ್ಲಾ ಯುವಕರೂ, ಕುದರೆಗಳ ಮೇಲೆ ಸವಾರಿಮಾಡುವ ರಾಹುತರೂ ಆಗಿರುವವರನ್ನು ಮೋಹಿಸಿದಳು. ಅವರಿಗೆ ತನ್ನನ್ನು ವ್ಯಭಿಚಾರಿಣಿಯಾಗಿ ಒಪ್ಪಿಸಿದಳು; ಅವರೆಲ್ಲರೂ ಅಶ್ಶೂರ್ಯರಲ್ಲಿ ಉತ್ತಮೋತ್ತಮರು; ಅವಳು ಯಾರನ್ನು ಮೋಹಿಸಿದಳೋ ಅವರ ವಿಗ್ರಹಗಳಿಂದ ತನ್ನನ್ನು ಅಪವಿತ್ರಪಡಿಸಿಕೊಂಡಳು. ಅವಳು ಐಗುಪ್ತದಲ್ಲಿ ವಾಸಿಸುವ ದಿನದವರೆಗೂ ತನ್ನ ವ್ಯಭಿಚಾರವನ್ನು ಬಿಡಲಿಲ್ಲ; ಅವಳ ಬಾಲ್ಯದಲ್ಲಿಯೇ ಅಲ್ಲಿನವರು ಅವಳೊಂದಿಗೆ ಮಲಗಿ, ಅವಳ ಎಳೆಯ ತೊಟ್ಟುಗಳನ್ನು ಒತ್ತಿ, ಅವಳ ಸಂಗಡ ವ್ಯಭಿಚಾರಿಕೆಯನ್ನು ಹೆಚ್ಚೆಚ್ಚಾಗಿ ನಡೆಸಿದರು. “ಆದಕಾರಣ ನಾನು ಅವಳನ್ನು ಅವಳ ಪ್ರಿಯರ ಕೈಗೆ ಅಂದರೆ ಅವಳು ಮೋಹಿಸಿದ ಅಶ್ಶೂರ್ಯರ ಕೈಗೆ ಒಪ್ಪಿಸಿದೆನು. ಇವರು ಅವಳ ಬೆತ್ತಲೆತನವನ್ನು ಬಯಲು ಪಡಿಸಿದರು ಮತ್ತು ಅವಳ ಗಂಡು, ಹೆಣ್ಣು ಮಕ್ಕಳನ್ನು ಎತ್ತಿಕೊಂಡು ಹೋಗಿ ಅವರನ್ನು ಖಡ್ಗದಿಂದ ಸಂಹರಿಸಿದರು. ನ್ಯಾಯತೀರ್ಪು ಮಾಡುವಾಗ ಹೆಂಗಸರಲ್ಲಿ ಅವಳಿಗೆ ಕೆಟ್ಟ ಹೆಸರು ಬಂದಿತು.” “ಅವಳ ತಂಗಿಯಾದ ಒಹೊಲೀಬಳು ಇದನ್ನು ನೋಡಿದಾಗ ಅವಳಿಗಿಂತ ಅಧಿಕವಾಗಿ ಮೋಹಗೊಂಡು, ಅಕ್ಕನ ವ್ಯಭಿಚಾರಕ್ಕಿಂತ ಹೆಚ್ಚಾದ ವ್ಯಭಿಚಾರವನ್ನು ನಡೆಸಿ, ಅವಳನ್ನು ಮೀರುವಷ್ಟು ಕೆಟ್ಟವಳಾದಳು. ಇವಳು ತನ್ನ ನೆರೆಯವರಾದ ಅಶ್ಶೂರ್ಯರನ್ನೂ, ನಾಯಕರನ್ನೂ, ಅಧಿಕಾರಿಗಳನ್ನು ವಿಚಿತ್ರವಾಗಿ ಉಡುಪು ಧರಿಸಿ ಕುದರೆಗಳ ಮೇಲೆ ಸವಾರಿಮಾಡುವ ರಾಹುತರನ್ನು, ಸುಂದರವಾದ ಯುವಕರನ್ನು ಮೋಹಿಸಿದಳು. ಇವಳೂ ಅಪವಿತ್ರಳಾಗಿ ಹೋದದ್ದನ್ನು ನೋಡಿದೆನು. ಅವರಿಬ್ಬರು ಒಂದೇ ಮಾರ್ಗವನ್ನು ಹಿಡಿದವರು. “ಇವಳು ತನ್ನ ವ್ಯಭಿಚಾರವನ್ನು ಇನ್ನೂ ಹೆಚ್ಚಿಸಿದಳು; ಗೋಡೆಯ ಮೇಲೆ ಚಿತ್ರಿಸಲ್ಪಟ್ಟ ಕಸ್ದೀಯರ ಪುರುಷರನ್ನು ನೋಡಿದಳು. ಅವರು ಸೊಂಟಕ್ಕೆ ನಡುಕಟ್ಟನ್ನು ಕಟ್ಟಿ, ತಲೆಗೆ ರುಮಾಲನ್ನು ಧರಿಸಿ, ನೋಟಕ್ಕೆ ಸರದಾರರಂತಿದ್ದ ತಮ್ಮ ಸ್ವದೇಶವಾದ ಕಸ್ದೀಯಕ್ಕೆ ಸೇರಿದ ಬಾಬೆಲಿನ ಪುತ್ರರ ಹಾಗಿರುವ ಆಕಾರಗಳು ಗೋಡೆಯಲ್ಲಿ ಕಿರುಮಂಜಿಯಿಂದ ಚಿತ್ರಿಸಿರುವುದನ್ನು ನೋಡಿದ ಕೂಡಲೆ, ಇವಳು ಮೋಹಗೊಂಡು, ಕಸ್ದೀಯ ದೇಶಕ್ಕೆ ದೂತರನ್ನು ಕಳುಹಿಸಿದಳು. ಆಗ ಬಾಬೆಲಿನವರು ಇವಳ ಪ್ರೀತಿಯ ಮಂಚವನ್ನೇರಿ ತಮ್ಮ ವ್ಯಭಿಚಾರಿಕೆಯಿಂದ ಇವಳನ್ನು ಕೆಡಿಸಿದರು; ಇವಳು ಅವರಿಂದ ಅಪವಿತ್ರವಾಗಲು, ಅವಳಿಗೆ ಈ ಬಗ್ಗೆ ಜಿಗುಪ್ಸೆಯಾಯಿತು. ಹೀಗೆ ಇವಳು ವ್ಯಭಿಚಾರವನ್ನು ಮಾಡಿ, ತನ್ನ ಬೆತ್ತಲೆತನವನ್ನು ಬಯಲುಪಡಿಸಿಕೊಂಡಾಗ, ತನ್ನ ಪ್ರೀತಿಯು ಮೊದಲು ಇವಳ ಅಕ್ಕನಿಂದ ಅಗಲಿದ ಹಾಗೆ ಇವಳಿಂದಲೂ ಅಗಲಿತು. ಆದರೂ ಇವಳು ತಾನು ಐಗುಪ್ತ ದೇಶದಲ್ಲಿ ವ್ಯಭಿಚಾರಿಯಾಗಿದ್ದ ತನ್ನ ಎಳೆಯ ಪ್ರಾಯವನ್ನು ಜ್ಞಾಪಕಮಾಡಿಕೊಂಡು, ತನ್ನ ವ್ಯಭಿಚಾರವನ್ನು ಇನ್ನೂ ಹೆಚ್ಚಿಸಿದಳು. ಕತ್ತೆಗಳಂತೆ ಬೆದೆಯುಳ್ಳವರೂ, ಕುದುರೆಗಳಂತೆ ದಾಟುವವರೂ ಆದ ಕಸ್ದೀಯ ವೀರರನ್ನು ಮೋಹಿಸಿದಳು. ಹೀಗೆ ಐಗುಪ್ತ್ಯರಿಂದ ನಿನ್ನ ಯೌವನದ ಸ್ತನಗಳ ತೊಟ್ಟುಗಳನ್ನು ಬತ್ತಿಸಿಕೊಂಡ, ನಿನ್ನ ಯೌವನದ ದುಷ್ಕರ್ಮವನ್ನು ನೆನಪಿಗೆ ತಂದುಕೋ.”

ಹೀಗೆ ನಾನು ನಿನ್ನ ದುಷ್ಕರ್ಮವನ್ನು, ನೀನು ಐಗುಪ್ತದಲ್ಲಿ ಇದ್ದಂದಿನಿಂದ ನಡೆದು ಬಂದ ನಿನ್ನ ವ್ಯಭಿಚಾರವನ್ನೂ ನಿನ್ನಿಂದ ತೊಲಗಿಸುವೆನು; ಆ ಮೇಲೆ ನೀನು ಅವರ ಕಡೆಗೆ ಇನ್ನು ಕಣ್ಣೆತ್ತದೆ, ಐಗುಪ್ತವನ್ನು ಜ್ಞಾಪಕಕ್ಕೆ ತಾರದೆ ಇರುವಿ.” ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ನೀನು ಯಾರನ್ನು ಹಗೆಮಾಡುತ್ತೀಯೋ, ನಿನ್ನ ಆಶೆಯು ಯಾರಿಂದ ಹಿಂದಿರುಗಿತೋ ಅವರ ಕೈಗೆ ನಿನ್ನನ್ನು ನಾನು ಒಪ್ಪಿಸಲು, ಅವರು ನಿನ್ನಲ್ಲಿ ಹಗೆ ತೀರಿಸಿಕೊಂಡು, ನೀನು ದುಡಿದದ್ದನ್ನೆಲ್ಲಾ ಅಪಹರಿಸಿ, ನಿನ್ನನ್ನು ಬರಿದುಮಾಡಿ ಬಿಡುವರು; ಹೀಗೆ ನಾಚಿಕೆಗೀಡಾದ ನಿನ್ನ ವ್ಯಭಿಚಾರವು, ಹೌದು, ನಿನ್ನ ದುಷ್ಕರ್ಮವು ಮತ್ತು ವ್ಯಭಿಚಾರವೂ ಬಯಲಿಗೆ ಬರುವುದು. “ಈ ವಿಪತ್ತುಗಳು ನಿನಗೆ ಸಂಭವಿಸುವುದಕ್ಕೆ, ನೀನು ಜನಾಂಗಗಳನ್ನು ಮೋಹಿಸಿ, ಅವರ ವಿಗ್ರಹಗಳಿಂದ ನಿನ್ನನ್ನು ಅಪವಿತ್ರ ಮಾಡಿಕೊಂಡದ್ದೇ ಕಾರಣ.

ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನೀನು ನನ್ನನ್ನು ಬೆನ್ನಿನ ಹಿಂದೆ ಮರೆಮಾಡಿ, ಮರೆತುಬಿಟ್ಟಿದ್ದರಿಂದ ನಿನ್ನ ದುಷ್ಕರ್ಮದ ಮತ್ತು ವ್ಯಭಿಚಾರದ ಫಲವನ್ನು ನೀನೇ ಅನುಭವಿಸಬೇಕು.” ಯೆಹೋವನು ನನಗೆ ಹೀಗೆ ಹೇಳಿದನು, “ನರಪುತ್ರನೇ, ಒಹೊಲಳಿಗೂ, ಒಹೊಲೀಬಳಿಗೂ ನ್ಯಾಯತೀರುಸುವೆಯೋ? ಅವರ ದುರಾಚಾರಗಳನ್ನು ಅವರಿಗೆ ತಿಳಿಸು. ಅವರು ವ್ಯಭಿಚಾರ ಮಾಡಿದ್ದಾರೆ, ಅವರ ಕೈ ರಕ್ತಮಯವಾಗಿದೆ, ತಮ್ಮ ವಿಗ್ರಹಗಳಿಂದ ವ್ಯಭಿಚಾರಮಾಡಿದ್ದಾರೆ, ತಮ್ಮ ಗಂಡು ಮಕ್ಕಳನ್ನು ಆ ವಿಗ್ರಹಗಳಿಗೆ ಬದಲಾಗಿ ಆಹುತಿಕೊಟ್ಟಿದ್ದಾರೆ. ಇದನ್ನು ಮಾಡಿದ ದಿನದಲ್ಲೇ ನನ್ನ ಪವಿತ್ರಾಲಯವನ್ನು ಅಪವಿತ್ರ ಪಡಿಸಿ, ನಾನು ನೇಮಿಸಿದ ಸಬ್ಬತ್ ದಿನವನ್ನು ಅಪವಿತ್ರ ಮಾಡಿದ್ದಾರೆ. ತಮ್ಮ ಮಕ್ಕಳನ್ನು ಕೊಂದು, ತಮ್ಮ ವಿಗ್ರಹಗಳಿಗೆ ಅರ್ಪಿಸಿದ ದಿನದಲ್ಲೇ ನನ್ನ ಪವಿತ್ರಾಲಯವನ್ನು ಸೇರಿ ಅಪವಿತ್ರ ಮಾಡಿದರು; ಇಗೋ, ನನ್ನ ಮಂದಿರದ ಒಳಗೆ ಇದನ್ನು ನಡೆಸಿದ್ದಾರೆ.

“ದೂತನನ್ನು ಕಳುಹಿಸಿ, ಪುರುಷರನ್ನು ದೂರದಿಂದ ಕರೆಯಿಸಿಕೊಂಡರು; ಇಗೋ, ಅವರು ಬಂದರು; ಎಲೈ ಹೆಂಗಸೇ, ಅವರಿಗಾಗಿ ನೀನು ಸ್ನಾನಮಾಡಿ ಕಣ್ಣಿಗೆ ಕಾಡಿಗೆ ಹಚ್ಚಿ, ನಿನ್ನನ್ನು ಆಭರಣಗಳಿಂದ ಶೃಂಗರಿಸಿಕೊಂಡೆ. ವೈಭವದ ಮಂಚದ ಮೇಲೆ ಕುಳಿತುಕೊಂಡೆ. ಅವರ ಮುಂದೆ ಔತಣಕ್ಕೆ ಸಿದ್ಧವಾಗಿದ್ದ ಮೇಜಿನ ಮೇಲೆ ನನ್ನ ಧೂಪತೈಲಗಳನ್ನು ಇಟ್ಟಿರುವೆ. “ಅಲ್ಲಿ ವಿನೋದ ಪ್ರಿಯರ ದೊಡ್ಡ ಗುಂಪಿನ ಶಬ್ದವು ಇತ್ತು. ಮರುಭೂಮಿಯಿಂದ ಕುಡುಕರನ್ನೂ ಕರೆಯಿಸಿಕೊಂಡು ಅವರು ನಾಡಿನ ಜನರೊಂದಿಗೆ ಸೇರಿ, ನಿನ್ನ ಕೈಗೆ ಕಡಗವನ್ನು ತೊಡಿಸಿ, ತಲೆಗೆ ಸುಂದರ ಕಿರೀಟವನ್ನಿಟ್ಟರು. ಆಗ ನಾನು, ‘ಆಹಾ, ಕಳೆಗುಂದಿದವಳಿಗೆ ಇನ್ನೂ ವ್ಯಭಿಚಾರವೇ! ಇವರು ಅವಳೊಂದಿಗೆ, ಅವಳು ಇವರೊಂದಿಗೆ ವ್ಯಭಿಚಾರ ಮಾಡುತ್ತಾರಲ್ಲಾ’ ಅಂದುಕೊಂಡೆನು. ವ್ಯಭಿಚಾರಿಯನ್ನು ಸೇರುವ ಹಾಗೆ ಈ ಜನರು ಅವಳನ್ನು ಸೇರಿದರು; ಹೌದು, ಕೆಟ್ಟ ಹೆಂಗಸರಾದ ಒಹೊಲಳನ್ನೂ ಮತ್ತು ಒಹೊಲೀಬಳನ್ನೂ ಸೇರಿದರು. ನೀತಿಯುಳ್ಳ ಮನುಷ್ಯರು ಅವರಿಗೆ ನ್ಯಾಯತೀರಿಸಿ, ವ್ಯಭಿಚಾರಿಣಿಯರಿಗೂ, ರಕ್ತಸುರಿಸುವ ಹೆಂಗಸರಿಗೂ ತಕ್ಕ ದಂಡನೆಯನ್ನು ವಿಧಿಸುವರು; ಅವರು ವ್ಯಭಿಚಾರಿಣಿಯರು, ಅವರ ಕೈ ರಕ್ತಮಯವಾಗಿದೆ.”

“ಹೀಗೆ ನಾನು ದೇಶದೊಳಗಿಂದ ದುಷ್ಕರ್ಮವನ್ನು ತೊಲಗಿಸುವೆನು; ಇದರಿಂದ ಸಮಸ್ತ ಸ್ತ್ರೀಯರಿಗೂ ನಿಮ್ಮ ದುಷ್ಕರ್ಮವನ್ನು ಅನುಸರಿಸಬಾರದೆಂದು ಬುದ್ಧಿ ಬರುವುದು. ನಿಮ್ಮ ದುಷ್ಕರ್ಮದ ಫಲವನ್ನು ನಿಮಗೇ ತಿನ್ನಿಸುವರು; ನಿಮ್ಮ ವಿಗ್ರಹಗಳಿಂದಾದ ನಿಮ್ಮ ಪಾಪವನ್ನು ನೀವು ಅನುಭವಿಸುವಿರಿ. ನಾನೇ ಕರ್ತನಾದ ಯೆಹೋವನು” ಎಂದು ತಿಳಿದುಕೊಳ್ಳುವಿರಿ.

ಯೆಹೋವನು ಹೋಶೇಯನ ಸಂಗಡ ಮೊದಲು ಮಾತನಾಡಿದಾಗ ಆತನು ಅವನಿಗೆ, “ನೀನು ಹೋಗಿ ಒಬ್ಬ ವ್ಯಭಿಚಾರಿಣಿಯನ್ನು ಮದುವೆಮಾಡಿಕೊಂಡು ವ್ಯಭಿಚಾರದಿಂದಾಗುವ ಮಕ್ಕಳನ್ನು ಸೇರಿಸಿಕೋ. ಏಕೆಂದರೆ, ದೇಶವು ನನ್ನನ್ನು ಬಿಟ್ಟು ಅಧಿಕ ವ್ಯಭಿಚಾರವನ್ನು ನಡೆಸುತ್ತದೆ ಎಂಬುದಕ್ಕೆ ಇದು ದೃಷ್ಟಾಂತವಾಗಿರಲಿ” ಎಂದು ಹೇಳಿದನು.

“ನಿಮ್ಮ ತಾಯಿಯ ಸಂಗಡ ವಾದಮಾಡಿ; ಅವಳು ನನ್ನ ಹೆಂಡತಿಯಲ್ಲ, ನಾನು ಅವಳ ಗಂಡನಲ್ಲ. ಅವಳು ವ್ಯಭಿಚಾರವನ್ನು ತನ್ನ ಮುಖಸೌಂದರ್ಯದಿಂದ, ವ್ಯಭಿಚಾರದ ಬೆಡಗನ್ನು ತನ್ನ ಸ್ತನಮಧ್ಯದಿಂದ ತೊಲಗಿಸಲಿ. ಇಲ್ಲದಿದ್ದರೆ ನಾನು ಅವಳ ಬಟ್ಟೆಯನ್ನು ಕಿತ್ತು, ಅವಳನ್ನು ಹುಟ್ಟಿದಾಗ ಇದ್ದಂತೆ ಬೆತ್ತಲೆಯಾಗಿ ನಿಲ್ಲಿಸುವೆನು ಅವಳನ್ನು ಬೆಂಗಾಡಾಗಿಸಿ, ಮರುಭೂಮಿಯ ಸ್ಥಿತಿಗೆ ತಂದು, ನೀರಡಿಕೆಯಿಂದ ಸಾಯಿಸುವೆನು. ಅವಳ ಮಕ್ಕಳನ್ನೂ ಕರುಣಿಸುವುದಿಲ್ಲ, ಅವರು ವ್ಯಭಿಚಾರದಿಂದ ಹುಟ್ಟಿದ ಮಕ್ಕಳಲ್ಲವೇ. ಅವರ ತಾಯಿ ವ್ಯಭಿಚಾರ ಮಾಡಿದ್ದಾಳೆ, ಹೆತ್ತವಳು ನಾಚಿಕೆಗೇಡಿಯಾಗಿ ನಡೆದಿದ್ದಾಳೆ. ‘ತನಗೆ ಬೇಕಾದ ಅನ್ನ ಪಾನಗಳನ್ನೂ, ಉಣ್ಣೆ ನಾರುಗಳನ್ನೂ, ತೈಲವನ್ನೂ ಪಾನಕಗಳನ್ನೂ ತನಗೆ ಕೊಡುವ ಹಾಗೂ ತನ್ನೊಂದಿಗೆ ವ್ಯಭಿಚಾರದಲ್ಲಿ ತೊಡಗಿಸಿಕೊಂಡವರ ಹಿಂದೆ ಹೋಗುವೆನು ಅಂದುಕೊಂಡಿದ್ದಾಳೆ.’”

ಸುಳ್ಳುಸಾಕ್ಷಿ, ನರಹತ್ಯ, ಕಳ್ಳತನ, ವ್ಯಭಿಚಾರ, ಇವುಗಳೇ ನಡೆಯುತ್ತವೆ; ದೊಂಬಿಗಳು ನಡೆಯುತ್ತಿವೆ, ದೇಶವೆಲ್ಲಾ ರಕ್ತಮಯವಾಗಿದೆ.

ನನ್ನ ಜನರು ತಮ್ಮ ಮರದ ತುಂಡನ್ನು ಹಿಡಿದು ಕಣಿಕೇಳುತ್ತಾರೆ, ಅವರು ಮರದ ತುಂಡಿನಿಂದ ಪರಿಹಾರ ನಿರೀಕ್ಷಿಸುತ್ತಾರೆ. ವ್ಯಭಿಚಾರ ಗುಣವು ಅವರನ್ನು ಭ್ರಾಂತಿಗೊಳಿಸಿದೆ; ತಮ್ಮ ದೇವರಿಗೆ ಪತಿಭಕ್ತಿಯನ್ನು ಸಲ್ಲಿಸದೆ ದ್ರೋಹಿಗಳಾಗಿದ್ದಾರೆ. ಪರ್ವತಾಗ್ರಗಳಲ್ಲಿ ಯಜ್ಞ ಮಾಡುತ್ತಾರೆ, ಗುಡ್ಡಗಳ ಮೇಲೆ ಧೂಪ ಹಾಕುತ್ತಾರೆ. ಅಲ್ಲೋನ್, ಲಿಬ್ನೆ, ಏಲಾ ಮರಗಳ ನೆರಳು ದಟ್ಟವಾಗಿರುವುದರಿಂದ ಅವುಗಳ ಕೆಳಗೆ ಇವುಗಳನ್ನು ನಡೆಸುತ್ತಾರೆ. ಹೀಗಿರಲು ನನ್ನ ಜನರೇ, ನಿಮ್ಮ ಕುಮಾರಿಯರು ವ್ಯಭಿಚಾರಿಗಳಾಗಿ ನಡೆಯುವುದೂ, ನಿಮ್ಮ ವಧುಗಳು ವ್ಯಭಿಚಾರ ಮಾಡುವುದೂ ಏನಾಶ್ಚರ್ಯ? ವ್ಯಭಿಚಾರಿಣಿಯರಾಗಿ ನಡೆಯುವ ನಿಮ್ಮ ಕುಮಾರಿಯರನ್ನೂ ವ್ಯಭಿಚಾರ ಮಾಡುವ ನಿಮ್ಮ ವಧುಗಳನ್ನೂ ನಾನು ದಂಡಿಸುವುದಿಲ್ಲ; ನೀವೇ ವ್ಯಭಿಚಾರಿಗಳನ್ನು ಕರೆದುಕೊಂಡು ಓರೆಯಾಗಿ ಹೋಗುತ್ತೀರಿ; ದೇವದಾಸಿಯರೊಂದಿಗೆ ಯಜ್ಞಮಾಡುತ್ತೀರಿ; ಆಹಾ, ವಿವೇಕವಿಲ್ಲದ ಜನರು ಕೆಡವಲ್ಪಡುವರು.

ಎಫ್ರಾಯೀಮನ್ನು ಬಲ್ಲೆ, ಇಸ್ರಾಯೇಲ್ ನನಗೆ ಮರೆಯಾಗಿಲ್ಲ; ಎಫ್ರಾಯೀಮೇ, ನೀನೀಗ ವ್ಯಭಿಚಾರ ಮಾಡಿದ್ದಿ, ಇಸ್ರಾಯೇಲ್ ಹೊಲೆಯಾಗಿದೆ. ಅವರು ತಮ್ಮ ದೇವರ ಕಡೆಗೆ ತಿರುಗಿಕೊಳ್ಳಲು ಅವುಗಳ ದುಷ್ಕೃತ್ಯಗಳು ಅವರನ್ನು ಬಿಡುವುದಿಲ್ಲ; ವ್ಯಭಿಚಾರದ ಸ್ವಭಾವವು ಅವುಗಳಲ್ಲಿ ನೆಲೆಗೊಂಡಿದೆ, ಯೆಹೋವನನ್ನು ತಿಳಿದುಕೊಂಡಿಲ್ಲ.

ಇಸ್ರಾಯೇಲೇ, ಇತರ ಜನಾಂಗಗಳಂತೆ ಮಿತಿಮೀರಿ ಉಲ್ಲಾಸಿಸಬೇಡ. ನೀನು ನಿನ್ನ ದೇವರನ್ನು ಬಿಟ್ಟು ವ್ಯಭಿಚಾರ ನಡೆಸಿದ್ದಿ; ಎಲ್ಲಾ ಕಣಗಳಲ್ಲಿನ ಫಲವನ್ನು ಅದರ ಪ್ರತಿಫಲವನ್ನಾಗಿ ಆಶಿಸಿದ್ದಿ.

ಹೌದು ನನ್ನ ಜನರಿಗಾಗಿ ಚೀಟುಹಾಕಿ, ವೇಶ್ಯ ವೃತ್ತಿಗೆ ತಮ್ಮ ಗಂಡು ಮಕ್ಕಳನ್ನು ಮಾರಾಟ ಮಾಡಿ, ಬಾಲಕಿಯರನ್ನು ಕುಡಿಯುವ ದ್ರಾಕ್ಷಾರಸಕ್ಕೆ ಬದಲು ಮಾಡಿದ್ದಾರೆ.

ಅತಿಸುಂದರಿಯೂ, ಮಂತ್ರತಂತ್ರ ನಿಪುಣಳೂ ಜನಾಂಗಗಳನ್ನು ತನ್ನ ವೇಶ್ಯಾವಾಟಿಕೆಯಿಂದ ಕುಲಗಳನ್ನು ತನ್ನ ಮಂತ್ರತಂತ್ರಗಳಿಂದ ಗುಲಾಮತನಕ್ಕೆ ತಂದವಳೂ ಆದ ವೇಶ್ಯೆಯು ಲೆಕ್ಕವಿಲ್ಲದ ವೇಶ್ಯಾವಾಟಿಕೆಯ ನಿಮಿತ್ತ ಇದೆಲ್ಲಾ ಆಗುವುದು.

“ಇದಕ್ಕೆ ಕಾರಣವೇನೆಂದು ಕೇಳುತ್ತೀರೋ? ನಿನಗೂ, ನಿನ್ನ ಯೌವನ ಪ್ರಾಯದ ಹೆಂಡತಿಗೂ ಆದ ಒಡಂಬಡಿಕೆಗೆ ಯೆಹೋವನೇ ಸಾಕ್ಷಿಯಾಗಿದ್ದಾನಲ್ಲಾ, ನಿನ್ನ ಸಹಚರಿಣಿಯೂ, ನಿನ್ನ ಒಡಂಬಡಿಕೆಯ ಪತ್ನಿಯಾದ ಆಕೆಗೆ ದ್ರೋಹಮಾಡಿದ್ದೀ. ದೇವರು ನಿನ್ನ ಮತ್ತು ನಿನ್ನ ಪತ್ನಿಯ ತನುಮನಗಳನ್ನು ಒಂದು ಮಾಡಿ ಒಡಂಬಡಿಸಲಿಲ್ಲವೇ? ದೇವರ ಉದ್ದೇಶವೇನು? ದೇವರ ಮಕ್ಕಳಾಗಿ ಬಾಳುವ ಸಂತಾನ ದಯಪಾಲಿಸುವ ಉದ್ದೇಶ ಆತನದಾಗಿತ್ತು. ಆದುದರಿಂದ ಮದುವೆಯಾದ ಪತ್ನಿಗೆ ದ್ರೋಹಮಾಡದೆ ಪ್ರತಿಯೊಬ್ಬನೂ ಎಚ್ಚರಿಕೆಯಿಂದಿರಲಿ.” ಇಸ್ರಾಯೇಲಿನ ದೇವರಾದ ಯೆಹೋವನು ಇಂತೆನ್ನುತ್ತಾನೆ, “ನಾನು ಪತ್ನಿತ್ಯಾಗವನ್ನೂ, ಹೆಂಡತಿಗೆ ಅನ್ಯಾಯ ಮಾಡುವವನನ್ನೂ ಹಗೆಮಾಡುತ್ತೇನೆ” ಇದು ಸೇನಾಧೀಶ್ವರನಾದ ಯೆಹೋವನ ನುಡಿ. “ಆದಕಾರಣ ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ, ದ್ರೋಹಮಾಡಬೇಡಿರಿ.”

“ನಾನು ನ್ಯಾಯತೀರಿಸುವುದಕ್ಕೆ ನಿಮ್ಮ ಬಳಿಗೆ ಬರುವೆನು; ಮಾಟಗಾರನು, ವ್ಯಭಿಚಾರಿಯೂ, ಸುಳ್ಳುಸಾಕ್ಷಿ ಹೇಳುವವನು, ಕೂಲಿ ಹಿಡಿದು ಕೂಲಿಯವನನ್ನು ಮೋಸಪಡಿಸುವವನು, ವಿಧವೆಯರನ್ನು ಮತ್ತು ಅನಾಥರನ್ನೂ ಬಾಧಿಸುವವನು, ವಿದೇಶಿಯ ನ್ಯಾಯತಪ್ಪಿಸುವವನು ಅಂತು ನನಗೆ ಹೆದರದಿರುವ ಇವರೆಲ್ಲರಿಗೆ ವಿರುದ್ಧವಾಗಿ ನಾನು ಶೀಘ್ರವಾಗಿ ನ್ಯಾಯತೀರಿಸಿ ಸಾಕ್ಷಿಯಾಗಿರುವೆನು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

“‘ವ್ಯಭಿಚಾರ ಮಾಡಬಾರದೆಂದು’ ಹೇಳಿಯದೆ ಎಂಬುದಾಗಿ ನೀವು ಕೇಳಿದ್ದೀರಿ. ಆದರೆ ನಾನು ನಿಮಗೆ ಹೇಳುವುದೇನಂದರೆ, ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿಯೊಬ್ಬ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾಗಿದ್ದಾನೆ.

ಆದರೆ ನಾನು ನಿಮಗೆ ಹೇಳುವುದೇನಂದರೆ, ವ್ಯಭಿಚಾರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ಅವಳು ವ್ಯಭಿಚಾರ ಮಾಡುವುದಕ್ಕೆ ಕಾರಣನಾಗುತ್ತಾನೆ ಮತ್ತು ಗಂಡಬಿಟ್ಟವಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರಮಾಡುವವನಾಗಿದ್ದಾನೆ.

ಏಕೆಂದರೆ ಹೃದಯದಿಂದ ಕೆಟ್ಟ ಆಲೋಚನೆಗಳು, ಕೊಲೆ, ವ್ಯಭಿಚಾರ, ಜಾರತ್ವ, ಕಳ್ಳತನ, ಸುಳ್ಳುಸಾಕ್ಷಿ ಮತ್ತು ದೂಷಣೆಗಳು ಹೊರಟು ಬರುತ್ತವೆ.

ಮತ್ತು ವ್ಯಭಿಚಾರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುವವನು ವ್ಯಭಿಚಾರ ಮಾಡಿದಂತೆ;ಮತ್ತು ಗಂಡ ಬಿಟ್ಟವಳನ್ನು ಮದುವೆಯಾಗುವವನು ವ್ಯಭಿಚಾರ ಮಾಡಿದಂತೆ” ಎಂದು ನಿಮಗೆ ಹೇಳುತ್ತೇನೆ ಅಂದನು.

ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಆತ್ಮವು ಸಿದ್ಧವಾಗಿದೆ ಆದರೆ ದೇಹವು ಬಲಹೀನವಾಗಿದೆ” ಎಂದು ಹೇಳಿದನು.

ಒಳಗಿನಿಂದ ಅಂದರೆ ಮನುಷ್ಯರ ಹೃದಯದೊಳಗಿನಿಂದ ಬರುವ ದುರಾಲೋಚನೆಗಳು, ಹಾದರ, ಕಳ್ಳತನ, ಕೊಲೆ, ವ್ಯಭಿಚಾರ, ದುರಾಶೆ, ಕೆಡುಕುತನ, ಮೋಸ, ಕಾಮಾಭಿಲಾಷೆ, ಹೊಟ್ಟೆಕಿಚ್ಚು, ಅಪನಿಂದೆ, ಗರ್ವ, ಬುದ್ಧಿಗೇಡಿತನ ಇವೇ ಮೊದಲಾದವುಗಳು ಹೊರಡುತ್ತವೆ. ಈ ಎಲ್ಲಾ ಕೆಡುಕುಗಳು ಮಾನವನ ಅಂತರಂಗದಿಂದಲೇ ಉದ್ಭವಿಸಿ ಅವನನ್ನು ಅಶುದ್ಧ ಮಾಡುತ್ತವೆ.”

ಅದಕ್ಕೆ ಆತನು, “ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ತನ್ನ ಹೆಂಡತಿಗೆ ವಿರೋಧವಾಗಿ ವ್ಯಭಿಚಾರ ಮಾಡಿದವನಾಗಿದ್ದಾನೆ; ಮತ್ತು ಹೆಂಡತಿಯು ತನ್ನ ಗಂಡನನ್ನು ಬಿಟ್ಟು ಮತ್ತೊಬ್ಬನನ್ನು ಮದುವೆಮಾಡಿಕೊಂಡರೆ ಅವಳು ವ್ಯಭಿಚಾರ ಮಾಡಿದವಳಾಗಿದ್ದಾಳೆ” ಎಂದು ಹೇಳಿದನು.

ನರಹತ್ಯಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು. ಮೋಸಮಾಡಬಾರದು, ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು ಎಂಬ ದೇವರಾಜ್ಞೆಗಳು ನಿನಗೆ ಗೊತ್ತಿವೆಯಷ್ಟೆ” ಎಂದು ಹೇಳಿದನು.

“ತನ್ನ ಹೆಂಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಮಾಡಿಕೊಳ್ಳುವ ಪ್ರತಿಯೊಬ್ಬನು ವ್ಯಭಿಚಾರ ಮಾಡುವವನಾಗಿದ್ದಾನೆ. ಮತ್ತು ಗಂಡಬಿಟ್ಟವಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗಿದ್ದಾನೆ.

‘ವ್ಯಭಿಚಾರ ಮಾಡಬಾರದು, ನರಹತ್ಯ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು’ ಎಂಬ ದೇವರಾಜ್ಞೆಗಳು ನಿನಗೆ ಗೊತ್ತಿವೆಯಷ್ಟೆ” ಎಂದು ಹೇಳಿದನು.

ಶಾಸ್ತ್ರಿಗಳೂ ಮತ್ತು ಫರಿಸಾಯರೂ ವ್ಯಭಿಚಾರದಲ್ಲಿ ಸಿಕ್ಕಿಬಿದ್ದ ಒಬ್ಬ ಹೆಂಗಸನ್ನು ಹಿಡಿದು ಆತನ ಬಳಿಗೆ ತಂದು ಆಕೆಯನ್ನು ಅವರ ಗುಂಪಿನ ಮಧ್ಯದಲ್ಲಿ ನಿಲ್ಲಿಸಿ; ಯೇಸುವಿಗೆ, “ಬೋಧಕನೇ, ಈ ಸ್ತ್ರೀ ವ್ಯಭಿಚಾರ ಮಾಡುತ್ತಿರುವಾಗಲೇ ಸಿಕ್ಕಿಬಿದ್ದಳು. ಇಂಥವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯು ಧರ್ಮಶಾಸ್ತ್ರದಲ್ಲಿ ನಮಗೆ ಆಜ್ಞಾಪಿಸಿದ್ದಾನೆ. ಈಕೆಯ ವಿಷಯದಲ್ಲಿ ನೀನು ಏನು ಹೇಳುತ್ತೀ?” ಎಂದು ಆತನನ್ನು ಕೇಳಿದರು. ಅವರು ಆತನನ್ನು ಪರೀಕ್ಷಿಸುವವರಾಗಿ ಆತನ ಮೇಲೆ ತಪ್ಪುಹೊರಿಸಬೇಕೆಂದೇ ಹೀಗೆ ಕೇಳಿದರು. ಆದರೆ ಯೇಸು ಬಗ್ಗಿಕೊಂಡು ಬೆರಳಿನಿಂದ ನೆಲದ ಮೇಲೆ ಬರೆಯುತ್ತಾ ಇದ್ದನು. ಅವರು ಆತನನ್ನು ಬಿಡದೆ ಪ್ರಶ್ನಿಸುತ್ತಿರುವಾಗ, ಆತನು ನೆಟ್ಟಗೆ ಕುಳಿತುಕೊಂಡು, ಅವರಿಗೆ, “ನಿಮ್ಮಲ್ಲಿ ಪಾಪವಿಲ್ಲದವನು ಯಾರಿದ್ದಾನೋ ಅವನೇ ಮೊದಲು ಆಕೆಯ ಮೇಲೆ ಕಲ್ಲು ಎಸೆಯಲಿ” ಎಂದು ಹೇಳಿದನು ತಿರುಗಿ ಆತನು ಬಗ್ಗಿಕೊಂಡು ಬೆರಳಿನಿಂದ ನೆಲದ ಮೇಲೆ ಬರೆಯುತ್ತಾ ಇದ್ದನು. ಅದನ್ನು ಅವರು ಕೇಳಿ ಹಿರಿಯರು ಮೊದಲುಗೊಂಡು ಎಲ್ಲರೂ ಒಬ್ಬೊಬ್ಬರಾಗಿ ಹೊರಟು ಹೋದರು; ಆಗ ಯೇಸು ಒಬ್ಬನೇ ಉಳಿದನು. ಆ ಸ್ತ್ರೀಯು ಅಲ್ಲಿಯೇ ನಿಂತಿದ್ದಳು. ಯೇಸು ನೆಟ್ಟಗೆ ಕುಳಿತುಕೊಂಡು ಆಕೆಗೆ, “ಸ್ತ್ರೀಯೇ, ಅವರು ಎಲ್ಲಿಗೆ ಹೋದರು? ನಿನ್ನನ್ನು ಖಂಡಿಸುವುದಕ್ಕೆ ಯಾರೂ ಉಳಿಯಲಿಲ್ಲವೋ?” ಎಂದನು. ಅದಕ್ಕೆ ಆಕೆಯು “ಕರ್ತನೇ, ಯಾರೂ ಶಿಕ್ಷೆ ವಿಧಿಸಲಿಲ್ಲ” ಎಂದಳು. ಯೇಸು ಆಕೆಗೆ “ನಾನೂ ಸಹ ನಿನ್ನನ್ನು ಶಿಕ್ಷೆ ವಿಧಿಸುವುದಿಲ್ಲ, ಹೋಗು, ಇನ್ನು ಮುಂದೆ ಪಾಪಮಾಡಬೇಡ” ಎಂದು ಹೇಳಿದನು.

ಆದರೆ ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ, ಹಾದರವನ್ನೂ, ಕುತ್ತಿಗೆ ಹಿಸುಕಿ ಕೊಂದದ್ದನ್ನೂ, ರಕ್ತವನ್ನೂ ವಿರ್ಜಿಸಬೇಕೆಂದು ನಾವು ಅವರಿಗೆ ಪತ್ರವನ್ನು ಬರೆಯೋಣ ಎಂದು ತೀರ್ಮಾನಿಸಿದರು.

ಇದಕ್ಕಿಂತ ಹೆಚ್ಚಿನ ಹೊರೆಯನ್ನು ನಿಮ್ಮ ಮೇಲೆ ಹೊರಿಸಬಾರದೆಂದು ಪವಿತ್ರಾತ್ಮನಿಗೂ ನಮಗೂ ಹಿತವಾಗಿ ತೋರಿತು; ನೀವು ಎಚ್ಚರವಾಗಿದ್ದು ಇವುಗಳ ಗೊಡವೆಗೆ ಹೋಗದಿದ್ದರೆ ನಿಮಗೆ ಒಳ್ಳೆಯದಾಗುವುದು. ಶುಭವಾಗಲಿ.”

ಅನ್ಯಜನರಲ್ಲಿ ಯೇಸುವನ್ನು ನಂಬಿರುವವರ ಕುರಿತಾದರೋ, ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ, ರಕ್ತವನ್ನೂ, ಕತ್ತು ಹಿಸುಕಿ ಕೊಂದದ್ದನ್ನೂ ಅನೈತಿಕತೆಯನ್ನೂ ಬಿಟ್ಟು ದೂರವಾಗಿರಬೇಕೆಂಬುದಾಗಿ ನಾವು ತೀರ್ಮಾನಿಸಿದ ನಿಯಮಗಳನ್ನು ಬರೆದು ಕಳುಹಿಸಿದೆವಲ್ಲಾ” ಎಂದು ಹೇಳಿದರು.

ಆದಕಾರಣ ಅವರು ಮನಸ್ಸಿನ ದುರಾಶೆಗಳಂತೆ ನಡೆದು ತಮ್ಮ ತಮ್ಮ ದೇಹಗಳನ್ನು ತಮ್ಮೊಳಗೆ ಮಾನಹೀನಮಾಡಿಕೊಳ್ಳಲಿ ಎಂದು ದೇವರು ಅವರನ್ನು ಹೊಲಸಾದ ಕೆಟ್ಟ ನಡತೆಗಳಿಗೆ ಒಪ್ಪಿಸಿಬಿಟ್ಟನು. ಅವರು ಸತ್ಯ ದೇವರನ್ನು ಬಿಟ್ಟು ಅಸತ್ಯವಾದದ್ದನ್ನು ಹಿಡಿದುಕೊಂಡು ಸೃಷ್ಟಿ ಕರ್ತನನ್ನು ಆರಾಧಿಸದೆ ಸೃಷ್ಟಿಯನ್ನೇ ಪೂಜಿಸಿ ಆರಾಧಿಸುವವರಾದರು. ಆದರೆ, ಆತನೇ ನಿರಂತರ ಸ್ತುತಿ ಹೊಂದತಕ್ಕವನು, ಆಮೆನ್. ಅವರು ಇಂಥದ್ದನ್ನು ಮಾಡಿದ್ದರಿಂದ ದೇವರು ಅವರನ್ನು ಕೇವಲ ಲಜ್ಜಾಸ್ಪದವಾದ ಕಾಮಾಭಿಲಾಷೆಗಳಿಗೆ ಒಪ್ಪಿಸಿಬಿಟ್ಟನು. ಅವರ ಹೆಂಗಸರು ಸ್ವಾಭಾವಿಕವಾದ ಭೋಗವನ್ನು ತೊರೆದು ಸ್ವಭಾವಕ್ಕೆ ವಿರುದ್ಧವಾದ ಕಾಮಕೃತ್ಯಗಳನ್ನು ಮಾಡಿದರು. ಅದರಂತೆ ಪುರುಷರು ಸಹ ಸ್ವಾಭಾವಿಕವಾದ ಸ್ತ್ರೀಸಂಗವನ್ನು ತೊರೆದು ತಮ್ಮತಮ್ಮಲಿಯೇ ಕಾಮೋದ್ರೇಕಗೊಂಡರು; ಸಲಿಂಗಕಾಮಿಗಳಾದರು; ಲಜ್ಜಾಹೀನರಾಗಿ ವರ್ತಿಸಿದರು; ತಮ್ಮ ದುರ್ನಡತೆಗೆ ತಕ್ಕ ಶಿಕ್ಷೆಯನ್ನು ತಮ್ಮ ಮೇಲೆ ಬರಮಾಡಿಕೊಂಡರು.

ಇದಲ್ಲದೆ ಅವರು ತಮಗಿದ್ದ ದೇವರ ಜ್ಞಾನವನ್ನು ತಿರಸ್ಕರಿಸಿದ್ದರಿಂದ, ಮಾಡಬಾರದ ಕೃತ್ಯಗಳನ್ನು ನಡಿಸುವವರಾಗುವಂತೆ ದೇವರು ಅವರನ್ನು ಅಶ್ಲೀಲ ನಡವಳಿಕೆಗೆ ಬಿಟ್ಟುಬಿಟ್ಟನು. ಹೇಗೆಂದರೆ ಅವರು ಸಕಲವಿಧವಾದ ಅನ್ಯಾಯ, ದುರ್ಮಾರ್ಗತನ, ಲೋಭ ದುಷ್ಟತ್ವಗಳಿಂದಲೂ ಹೊಟ್ಟೆಕಿಚ್ಚು, ಕೊಲೆ, ಜಗಳ, ಮೋಸ, ಹಗೆತನಗಳಿಂದ ತುಂಬಿದವರಾದರು.

ಇಂಥವುಗಳನ್ನು ನಡಿಸುವವರು ಮರಣಕ್ಕೆ ಪಾತ್ರರಾಗಿದ್ದಾರೆಂಬ ದೇವವಿಧಿಯು ಅವರಿಗೆ ತಿಳಿದಿದ್ದರೂ ಅವರು ತಾವೇ ಅವುಗಳನ್ನು ಮಾಡುವುದಲ್ಲದೆ ಮಾಡುವವರನ್ನೂ ಹೊಗಳುತ್ತಾ ಪ್ರೇರೇಪಿಸುತ್ತಾರೆ.

ಹೀಗಿರುವುದರಿಂದ ಸಾವಿಗೆ ಒಳಗಾಗುವ ಈ ನಿಮ್ಮ ದೇಹದ ಮೇಲೆ ಪಾಪವನ್ನು ಆಳಗೊಡಿಸಿ ನೀವು ದೇಹದ ದುರಾಶೆಗಳಿಗೆ ಒಳಪಡಬೇಡಿರಿ. ಇದು ಮಾತ್ರವಲ್ಲದೆ ನೀವು ನಿಮ್ಮ ದೇಹದ ಅಂಗಗಳನ್ನು ಪಾಪಕ್ಕೆ ಒಪ್ಪಿಸುವವರಾಗಿದ್ದು, ಅವುಗಳನ್ನು ದುಷ್ಟತ್ವವನ್ನು ನಡಿಸುವ ಸಾಧನಗಳಾಗಿ ಮಾಡಬೇಡಿರಿ; ನೀವು ಸತ್ತವರೊಳಗಿಂದ ಜೀವಿತರಾಗಿರಲಾಗಿ ನಿಮ್ಮನ್ನು ದೇವರಿಗೆ ಒಪ್ಪಿಸಿಕೊಟ್ಟು, ನಿಮ್ಮ ದೇಹದ ಅಂಗಗಳನ್ನು ನೀತಿಯ ಆಯುಧಗಳನ್ನಾಗಿ ಆತನಿಗೆ ಸಮರ್ಪಿಸಿರಿ.

ನಿಮ್ಮ ಶರೀರ ಭಾವದ ಬಲಹೀನತೆಯ ದೆಸೆಯಿಂದ ನಾನು ಲೋಕದ ರೀತಿಯಾಗಿ ಮಾತನಾಡುತ್ತೇನೆ. ದುಷ್ಟತನವನ್ನು ಮಾಡುವುದಕ್ಕಾಗಿ ನಿಮ್ಮ ಅಂಗಗಳನ್ನು ಬಂಡುತನಕ್ಕೂ, ದುಷ್ಟತನಕ್ಕೂ ದಾಸರನ್ನಾಗಿ ಒಪ್ಪಿಸಿ ಕೊಟ್ಟಿದ್ದಂತೆಯೇ ಈಗ ಪರಿಶುದ್ಧರಾಗುವುದಕ್ಕಾಗಿ ನಿಮ್ಮ ಅಂಗಗಳನ್ನು ನೀತಿಗೆ ದಾಸರನ್ನಾಗಿ ಒಪ್ಪಿಸಿಕೊಡಿರಿ.

ಹೀಗಿರಲಾಗಿ ಗಂಡನು ಜೀವದಿಂದಿರುವಾಗ ಆಕೆ ಬೇರೊಬ್ಬನನ್ನು ಸೇರಿದರೆ ವ್ಯಭಿಚಾರಿಣಿ ಎನಿಸಿಕೊಳ್ಳುವಳು. ಆದರೆ ಗಂಡನು ಸತ್ತ ಮೇಲೆ ಆಕೆ ಆ ನಿಯಮದಿಂದ ಬಿಡುಗಡೆಯಾದ್ದರಿಂದ, ಆಕೆ ಮತ್ತೊಬ್ಬ ಗಂಡನನ್ನು ಮದುವೆ ಮಾಡಿಕೊಂಡರೂ ವ್ಯಭಿಚಾರಿಣಿ ಎಂದೆನಿಸಿಕೊಳ್ಳುವುದಿಲ್ಲ. ಹಾಗೆಯೇ ನನ್ನ ಸಹೋದರರೇ, ನೀವು ಸಹ ಕ್ರಿಸ್ತನ ದೇಹದ ಮೂಲಕವಾಗಿ ಧರ್ಮಶಾಸ್ತ್ರದ ಪಾಲಿಗೆ ಸತ್ತಿದ್ದೀರಿ. ದೇವರಿಗೆ ಫಲಕೊಡುವುದಕ್ಕಾಗಿ ಮತ್ತೊಬ್ಬನನ್ನು ಅಂದರೆ ಸತ್ತು ಜೀವಿತನಾಗಿ ಎದ್ದಾತನನ್ನು ಸೇರಿಕೊಂಡಿದ್ದೀರಿ. ನಾವು ಶರೀರಾಧೀನ ಸ್ವಭಾವವನ್ನು ಅನುಸರಿಸುತ್ತಿದ್ದಾಗ ಧರ್ಮಶಾಸ್ತ್ರದಿಂದಲೇ ಪ್ರೇರಿತವಾದ ಪಾಪಾದಾಶೆಗಳು ನಮ್ಮ ಅಂಗಗಳಲ್ಲಿ ಸಕ್ರಿಯವಾಗಿ ಮರಣಕ್ಕೆ ಫಲವನ್ನು ಹುಟ್ಟಿಸುತ್ತಿದ್ದವು.

ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರುದ್ಧವಾಗಿ ಕಾದಾಡಿ ನನ್ನನ್ನು ಸೆರೆಹಿಡಿದು ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ನನ್ನನ್ನು ಒಪ್ಪಿಸುವಂಥದ್ದಾಗಿದೆ.

ಆದ್ದರಿಂದ ಈಗ ಕ್ರಿಸ್ತ ಯೇಸುವಿನಲ್ಲಿರುವವರಿಗೆ ಯಾವ ಅಪರಾಧ ನಿರ್ಣಯವೂ ಇಲ್ಲ, ಯಾಕೆಂದರೆ ಕ್ರಿಸ್ತ ಯೇಸುವಿನ ಮೂಲಕ ಜೀವವನ್ನುಂಟುಮಾಡುವ ಪವಿತ್ರಾತ್ಮನ ನಿಯಮವು ನನ್ನನ್ನು ಪಾಪಮರಣಗಳಿಗೆ ಕಾರಣವಾದ ನಿಯಮದಿಂದ ವಿಮುಕ್ತಿಗೊಳಿಸಿತು. ಧರ್ಮಶಾಸ್ತ್ರವು ನಮ್ಮ ಶರೀರಾಧೀನಸ್ವಭಾವದ ನಿಮಿತ್ತ ದುರ್ಬಲವಾಗಿ ಯಾವ ಕೆಲಸವನ್ನು ಮಾಡಲಾರದೆ ಇತ್ತೋ, ಅದನ್ನು ದೇವರೇ ಮಾಡಿದನು. ಹೇಗೆಂದರೆ ಆತನು ಪಾಪನಿವಾರಣೆಗಾಗಿ ತನ್ನ ಮಗನನ್ನು ಪಾಪಾಧೀನವಾದ ಶರೀರ ರೂಪದಲ್ಲಿ ಕಳುಹಿಸಿಕೊಟ್ಟು ಶರೀರದಲ್ಲಿಯೇ ಪಾಪಕ್ಕೆ ಮರಣದಂಡನೆಯನ್ನು ವಿಧಿಸಿದನು. ಹೀಗಿರಲು ಶರೀರಭಾವಕ್ಕೆ ಅನುಸಾರವಾಗಿ ನಡೆಯದೆ ಪವಿತ್ರಾತ್ಮನಿಗನುಸಾರವಾಗಿ ನಡೆಯುವವರಾದ ನಮ್ಮಲ್ಲಿ ಧರ್ಮಶಾಸ್ತ್ರದ ನಿಯಮವು ನೆರವೇರುವುದಕ್ಕಾಗಿ ಹಾಗೆ ಮಾಡಿದನು. ಶರೀರಭಾವವನ್ನು ಅನುಸರಿಸುವವರು ಅದಕ್ಕೆ ಸಂಬಂಧಪಟ್ಟವುಗಳ ಮೇಲೆ ಮನಸ್ಸಿಡುತ್ತಾರೆ, ಪವಿತ್ರಾತ್ಮನನ್ನುಸರಿಸುವವರು ಪವಿತ್ರಾತ್ಮನಿಗೆ ಸಂಬಂಧಪಟ್ಟವುಗಳ ಮೇಲೆ ಮನಸ್ಸಿಡುತ್ತಾರೆ. ಶರೀರಭಾವದ ವಿಷಯಗಳ ಮೇಲೆ ಮನಸ್ಸಿಡುವುದು ಮರಣ; ಪವಿತ್ರಾತ್ಮನ ವಿಷಯಗಳ ಮೇಲೆ ಮನಸ್ಸಿಡುವುದು ನಿತ್ಯಜೀವವೂ ಮತ್ತು ಮನಶಾಂತಿಯೂ ಆಗಿದೆ. ಯಾಕೆಂದರೆ ಶರೀರಭಾವಗಳ ಮೇಲೆ ಮನಸ್ಸಿಡುವುದು ದೇವರಿಗೆ ವಿರುದ್ಧವಾಗಿದೆ; ಅಂಥ ಮನಸ್ಸು ಧರ್ಮನಿಯಮಕ್ಕೆ ಒಳಪಡುವುದೂ ಇಲ್ಲ, ಒಳಪಡುವುದಕ್ಕಾಗುವುದೂ ಇಲ್ಲ. ಶರೀರಭಾವಾಧೀನವಾಗಿರುವವರು ದೇವರನ್ನು ಮೆಚ್ಚಿಸಲಾರರು.

ಹೀಗಿರಲಾಗಿ ಸಹೋದರರೇ, ನಾವು ಹಂಗಿನಲ್ಲಿದ್ದೇವೆ; ಆದರೆ ಪವಿತ್ರಾತ್ಮನ್ನನುಸರಿಸಿ ನಡೆಯುವ ಹಂಗಿನಲ್ಲಿದ್ದೇವೆಯೇ ಹೊರತು ಶರೀರಭಾವವನ್ನು ಅನುಸರಿಸಿ ಬದುಕಬೇಕೆಂಬ ಹಂಗಿನಲಿಲ್ಲ. ನೀವು ಶರೀರಭಾವವನ್ನು ಅನುಸರಿಸಿ ಬದುಕಿದರೆ ಸಾಯುವುದು ನಿಶ್ಚಯ; ನೀವು ಪವಿತ್ರಾತ್ಮನಿಂದ ದೇಹದ ದುರಭ್ಯಾಸಗಳನ್ನು ನಾಶ ಮಾಡುವುದಾದರೆ ಜೀವಿಸುವಿರಿ.

ಆದ್ದರಿಂದ ಸಹೋದರರೇ, ದೇವರ ಕನಿಕರವನ್ನು ನೆನಪಿಸುತ್ತಾ, ನೀವು ನಿಮ್ಮ ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ, ಮೆಚ್ಚಿಕೆಯಾಗಿಯೂ ಇರುವ ಸಜೀವ ಯಜ್ಞವಾಗಿ ಸಮರ್ಪಿಸಿರೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ; ಇದೇ ವಿವೇಕ ಪೂರ್ವಕವಾದ ಆರಾಧನೆಯು.

ಹೇಗೆಂದರೆ “ವ್ಯಭಿಚಾರ ಮಾಡಬಾರದು, ನರಹತ್ಯ ಮಾಡಬಾರದು, ಕದಿಯಬಾರದು, ಪರರ ಸೊತ್ತನ್ನು ಆಶಿಸಬಾರದು.” ಈ ಮೊದಲಾದ ಎಲ್ಲಾ ಕಟ್ಟಳೆಗಳು “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ಒಂದೇ ಮಾತಿನಲ್ಲಿ ಅಡಕವಾಗಿದೆ.

ದುಂದೌತಣ ಕುಡಿಕತನಗಳಲ್ಲಾಗಲಿ, ಕಾಮವಿಲಾಸ, ನಿರ್ಲಜ್ಜಾಕೃತ್ಯಗಳಲ್ಲಿಯಾಗಲಿ ಜಗಳ ಹೊಟ್ಟೆಕಿಚ್ಚುಗಳಲ್ಲಿಯಾಗಲಿ ಕಾಲ ಕಳೆಯದೆ ಹಗಲಿನಲ್ಲಿರ ತಕ್ಕ ಹಾಗೆ ಮಾನಸ್ಥರಾಗಿ ನಡೆದುಕೊಳ್ಳೋಣ. ದೇಹದ ಆಸೆಗಳನ್ನು ಪೂರೈಸುವುದಕ್ಕಾಗಿ ಚಿಂತಿಸದೇ ಕರ್ತನಾದ ಯೇಸು ಕ್ರಿಸ್ತನನ್ನು ಧರಿಸಿಕೊಳ್ಳಿರಿ.

ನಿಮ್ಮಲ್ಲಿ ಜಾರತ್ವವುಂಟೆಂಬ ಸುದ್ದಿಯನ್ನು ನಾನು ಕೇಳಿದ್ದೇನೆ. ಒಬ್ಬನು ತನ್ನ ತಂದೆಯ ಹೆಂಡತಿಯನ್ನು ಇಟ್ಟುಕೊಂಡಿದ್ದಾನಂತೆ. ಅಂಥ ಜಾರತ್ವವು ಅನ್ಯಜನರಲ್ಲಿಯೂ ಸಹ ಇಲ್ಲ.

ಜಾರರ ಸಹವಾಸ ಮಾಡಬಾರದೆಂದು ನನ್ನ ಪತ್ರಿಕೆಯಲ್ಲಿ ಬರೆದಿದ್ದೇನೆ. ಅದು ಈ ಲೋಕದಲ್ಲಿರುವ ಜಾರರು, ಆಸೆಬುರುಕರು, ಸುಲುಕೊಳ್ಳುವವರು, ವಿಗ್ರಹಾರಾಧಕರು, ಮೊದಲಾದವರ ಸಹವಾಸವನ್ನು ಬಿಟ್ಟುಬಿಡಬೇಕೆಂಬ ಅರ್ಥದಲ್ಲಿ ಅಲ್ಲ; ಹಾಗೆ ಬಿಡಬೇಕಾದರೆ ನೀವು ಈ ಲೋಕವನ್ನೇ ಬಿಟ್ಟುಹೋಗಬೇಕಾದೀತು. ಆದರೆ ಕ್ರೈಸ್ತ ಸಹೋದರನೆನಿಸಿಕೊಂಡವನು ಜಾರನು, ಲೋಭಿಯು, ವಿಗ್ರಹಾರಾಧಕನು, ಜಗಳಗಂಟನೂ, ಕುಡುಕನು, ಸುಲುಕೊಳ್ಳುವವನೂ ಆಗಿದ್ದ ಪಕ್ಷದಲ್ಲಿ ಅವನ ಸಹವಾಸ ಮಾಡಬಾರದು. ಅಂಥವನ ಸಂಗಡ ಊಟ ಸಹ ಮಾಡಬಾರದು ಎಂದು ಬರೆದಿದ್ದೇನೆ. ಸಭೆಯ ಹೊರಗಿರುವವರನ್ನು ತೀರ್ಪುಮಾಡುವುದಕ್ಕೆ ನನಗೇನಧಿಕಾರವಿದೆ? ಒಳಗಿನವರನ್ನು ತೀರ್ಪುಮಾಡುವವರು ನೀವೇ ಅಲ್ಲವೇ. ಹೊರಗಿರುವವರನ್ನು ತೀರ್ಪುಮಾಡುವವನು ದೇವರು. “ನಿಮ್ಮ ಮಧ್ಯದಲ್ಲಿರುವ ಆ ದುಷ್ಟ ವ್ಯಕ್ತಿಯನ್ನು ತೆಗೆದುಹಾಕಿರಿ.”

ಅನೀತಿವಂತರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲವೆಂಬುದು ನಿಮಗೆ ತಿಳಿಯದೋ? ಸುಳ್ಳನ್ನು ನಂಬಬೇಡಿರಿ. ಜಾರರು, ವಿಗ್ರಹಾರಾಧಕರು, ವ್ಯಭಿಚಾರಿಗಳು, ಪುರುಷಗಾಮಿಗಳು, ಕಳ್ಳರು, ಲೋಭಿಗಳು, ಕುಡುಕರು, ಜಗಳಮಾಡುವವರು, ಸುಲುಕೊಳ್ಳುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ. ನಿಮ್ಮಲ್ಲಿ ಕೆಲವರು ಅಂಥವರಾಗಿದ್ದೀರಿ. ಆದರೆ ನೀವು ಕರ್ತನಾದ ಯೇಸು ಕ್ರಿಸ್ತನ ಹೆಸರಿನಿಂದಲೂ ಮತ್ತು ನಮ್ಮ ದೇವರ ಆತ್ಮದಿಂದಲೂ ತೊಳೆಯಲ್ಪಟ್ಟು, ಶುದ್ಧೀಕರಿಸಲ್ಪಟ್ಟಿದ್ದೀರಿ, ದೇವರಿಂದ ನೀತಿವಂತರೆಂಬ ನಿರ್ಣಯವನ್ನು ಹೊಂದಿದ್ದೀರಿ.

“ಭೋಜನ ಪದಾರ್ಥಗಳು ಹೊಟ್ಟೆಗಾಗಿಯೂ ಮತ್ತು ಹೊಟ್ಟೆಯು ಭೋಜನಪದಾರ್ಥಗಳಿಗಾಗಿಯೂ” ಇವೆ. ದೇವರು ಇವೆರಡನ್ನೂ ನಾಶಮಾಡುವನು. ಆದರೆ ದೇಹವು ಜಾರತ್ವಕೋಸ್ಕರ ಇರುವಂಥದಲ್ಲ. ಕರ್ತನಿಗೋಸ್ಕರ ಇರುವುದಾಗಿದೆ. ಕರ್ತನು ದೇಹಕೋಸ್ಕರ ಒದಗಿಸಿಕೊಡುತ್ತಾನೆ.

ನಿಮ್ಮ ದೇಹಗಳು ಕ್ರಿಸ್ತನ ಅಂಗಗಳಾಗಿವೆ ಎಂಬುದು ನಿಮಗೆ ತಿಳಿಯದೋ? ಹೀಗಿರಲಾಗಿ ಕ್ರಿಸ್ತನ ಅಂಗಗಳಾಗಿರುವಂಥವುಗಳನ್ನು ತೆಗೆದು ವೇಶ್ಯೆಯ ಅಂಗಗಳೊಡನೆ ಸೇರಿಸುವುದು ಸರಿಯೋ? ಎಂದಿಗೂ ಹಾಗೆ ಮಾಡಬಾರದು ವೇಶ್ಯೆಯೊಂದಿಗೆ ಸೇರಿಕೊಂಡವನು ಅವಳೊಂದಿಗೆ ಒಂದೇ ದೇಹವಾಗಿದ್ದಾನೆಂಬುದು ನಿಮಗೆ ತಿಳಿಯದೋ? “ಇಬ್ಬರು ಒಂದೇ ಶರೀರವಾಗಿರುವರೆಂದು” ದೇವರವಾಕ್ಯ ಹೇಳುತ್ತದಲ್ಲಾ. ಆದರೆ ಕರ್ತನೊಂದಿಗೆ ಸೇರಿಕೊಂಡವನು ಆತನೊಂದಿಗೆ ಒಂದೇ ಆತ್ಮವಾಗಿದ್ದಾನೆ. ಜಾರತ್ವವನ್ನು ಬಿಟ್ಟು ದೂರ ಓಡಿಹೋಗಿರಿ. “ಮನುಷ್ಯರು ಮಾಡುವ ಇತರ ಪಾಪಕೃತ್ಯಗಳು ದೇಹದ ಹೊರಗಿವೆ”, ಆದರೆ ಜಾರತ್ವ ಮಾಡುವವನು ತನ್ನ ಸ್ವಂತ ದೇಹಕ್ಕೆ ವಿರೋಧವಾಗಿ ಪಾಪ ಮಾಡುತ್ತಾನೆ.

ನೀವು ಬರೆದು ಕಳುಹಿಸಿದ ವಿಷಯಗಳ ಬಗ್ಗೆ ನನ್ನ ಅಭಿಪ್ರಾಯವೇನೆಂದರೆ, ಸ್ತ್ರೀಯರ ಶರೀರ ಸಂಪರ್ಕವಿಲ್ಲದೆ ಇರುವುದು ಪುರುಷನಿಗೆ ಒಳ್ಳೆಯದು; ಆದರೆ ಜಾರತ್ವದ ಶೋಧನೆಗೆ ಅವಕಾಶ ಕೊಡದಿರಲು ಪ್ರತಿಯೊಬ್ಬನಿಗೂ ಸ್ವಂತ ಹೆಂಡತಿಯು ಇರಲಿ ಮತ್ತು ಪ್ರತಿಯೊಬ್ಬಳಿಗೆ ಸ್ವಂತ ಗಂಡನು ಇರಲಿ. ಗಂಡನು ಹೆಂಡತಿಗೆ, ಹಾಗೆಯೇ ಹೆಂಡತಿಯು ಗಂಡನಿಗೆ ಒಗೆತನವನ್ನು ಸಲ್ಲಿಸಲಿ ಹೆಂಡತಿಗೆ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ ಅದು ಗಂಡನಿಗುಂಟು. ಹಾಗೆಯೇ ಪುರುಷನಿಗೆ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ ಅದು ಹೆಂಡತಿಗುಂಟು. ಪ್ರಾರ್ಥನೆಗೆ ಸಮಯ ಕೊಡುವುದಕ್ಕಾಗಿ ನೀವು ಪರಸ್ಪರ ಸಮ್ಮತಿಯಿಂದ ಸ್ವಲ್ಪ ಕಾಲ ಅಗಲಿ ಇರಬಹುದೇ ಹೊರತು ಅನ್ಯತಾ ಹಾಗೆ ಮಾಡಬಾರದು. ಸೈತಾನನು ನಿಮಗೆ ಸ್ವಯಂ ನಿಯಂತ್ರಣವಿಲ್ಲದಿರುವುದನ್ನು ನೋಡಿ ನಿಮಗೆ ದುಷ್ಪ್ರೇರಣೆಗೆ ಎಡೆ ಮಾಡದಂತೆ ತಿರುಗಿ ಕೂಡಿಕೊಳ್ಳಿರಿ.

ಅವರು ಸಂಯಮಯಿಲ್ಲದವರಾದರೆ ಮದುವೆಮಾಡಿಕೊಳ್ಳಲಿ. ಯಾಕೆಂದರೆ ಕಾಮತಾಪಪಡುವುದಕ್ಕಿಂತ ಮದುವೆಮಾಡಿಕೊಳ್ಳುವುದು ಉತ್ತಮ.

ಒಬ್ಬನು ತನ್ನ ಮಗಳಿಗೆ ಮದುವೆಯಿಲ್ಲದಿರುವುದು ಮರ್ಯಾದೆಯಲ್ಲವೆಂದು ಭಾವಿಸಿದರೆ ಮತ್ತು ಆಕೆಯ ಪ್ರಾಯ ಕಳೆದುಹೋಗುತ್ತದಲ್ಲಾ ಮದುವೆಮಾಡುವುದು ಅವಶ್ಯವೆಂದು ಅವನಿಗೆ ತೋರಿದರೆ ತನ್ನಿಷ್ಟದಂತೆ ಮದುವೆ ಮಾಡಿಕೊಡಲಿ. ಅದು ಪಾಪವಲ್ಲ.

ಅವರಲ್ಲಿ ಕೆಲವರು ಜಾರತ್ವ ಮಾಡಿ ಒಂದೇ ದಿನದಲ್ಲಿ ಇಪ್ಪತ್ತು ಮೂರು ಸಾವಿರ ಜನರು ಸಾವನ್ನಪ್ಪಿದರು. ಅವರ ಹಾಗೆ ನಾವು ಜಾರತ್ವ ಮಾಡದೆ ಇರೋಣ.

ಆದಕಾರಣ ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ. ಮನುಷ್ಯರಿಗೆ ಸಾಧಾರಣವಾಗಿ ಬರುವ ಶೋಧನೆಯೇ ಹೊರತು ಬೇರೆ ಯಾವುದೂ ನಿಮಗೆ ಸಂಭವಿಸಲಿಲ್ಲವಲ್ಲ. ದೇವರು ನಂಬಿಗಸ್ತನು. ನಿಮ್ಮ ಶಕ್ತಿಗೆ ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವುದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.

ಯಾಕೆಂದರೆ ಪ್ರತಿಯೊಬ್ಬನು ತನ್ನ ದೇಹದ ಮೂಲಕ ನಡೆಸಿದ ಒಳ್ಳೆಯ ಅಥವಾ ಕೆಟ್ಟ ಕಾರ್ಯಕ್ಕೆ ತಕ್ಕ ಪ್ರತಿಫಲವನ್ನು ಹೊಂದುವುದಕ್ಕೋಸ್ಕರ ಕ್ರಿಸ್ತನ ನ್ಯಾಯಾಸನದ ಮುಂದೆ ಯಥಾಸ್ಥಿತಿಯಲ್ಲಿ ಕಾಣಿಸಿಕೊಳ್ಳಬೇಕಾಗಿದೆ.

ಪ್ರಿಯರೇ, ಈ ವಾಗ್ದಾನಗಳು ನಮಗಿರುವುದರಿಂದ, ನಾವು ದೇಹಾತ್ಮಗಳ ಕಲ್ಮಷವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತೆಯ ಸಂಪೂರ್ಣತೆಗೆ ಪ್ರಯತ್ನಿಸೋಣ.

ನಾನು ತಿರುಗಿ ಬಂದಾಗ ನನ್ನ ದೇವರು ನಿಮ್ಮ ವಿಷಯದಲ್ಲಿ ನನ್ನನ್ನು ತಗ್ಗಿಸಿಕೊಳ್ಳಲು ಗುರಿಮಾಡುವನೆಂತಲೂ, ಮೊದಲಿನಂತೆ ಪಾಪಮಾಡಿ, ಬಂಡುತನ ಹಾದರತನ, ಕೆಟ್ಟತನಗಳನ್ನು ನಡಿಸಿ ಪಶ್ಚಾತ್ತಾಪಡದಿರುವ ಅನೇಕರ ವಿಷಯವಾಗಿ ನಾನು ದುಃಖಪಡಬೇಕಾದೀತೆಂತಲೂ ನನಗೆ ಭಯವುಂಟು.

ನಾನು ಹೇಳುವುದೇನಂದರೆ ಪವಿತ್ರಾತ್ಮನನ್ನು ಅನುಸರಿಸಿ ನಡೆದುಕೊಳ್ಳಿರಿ, ಆಗ ನೀವು ಶರೀರಭಾವದ ಅಭಿಲಾಷೆಗಳನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವುದಿಲ್ಲ. ಏಕೆಂದರೆ ಶರೀರಾಭಿಲಾಷೆಯೂ ಆತ್ಮನಿಗೆ ವಿರುದ್ಧವಾಗಿದೆ, ಆತ್ಮನ ಅಭಿಲಾಷೆಯು ಶರೀರಭಾವಕ್ಕೆ ವಿರುದ್ಧವಾಗಿದೆ. ನೀವು ಮಾಡಲಿಚ್ಚಿಸುವುದನ್ನು ಮಾಡದಂತೆ ಇವು ಒಂದಕ್ಕೊಂದು ಹೋರಾಡುತ್ತವೆ. ಆದರೆ ನೀವು ಆತ್ಮನಿಂದ ನಡಿಸಿಕೊಳ್ಳುವವರಾದರೆ ಧರ್ಮಶಾಸ್ತ್ರಕ್ಕೆ ಅಧೀನರಲ್ಲ. ಶರೀರಭಾವದ ಸ್ವಭಾವಗಳು ಪ್ರತ್ಯಕ್ಷವಾಗಿಯೇ ಇವೆ, ಅದು ಯಾವುವೆಂದರೆ, ಜಾರತ್ವ, ಬಂಡುತನ, ನಾಚಿಕೆಗೇಡಿತನ, ವಿಗ್ರಹಾರಾಧನೆ, ಮಾಟ, ಹಗೆತನ, ಜಗಳ, ಹೊಟ್ಟೆಕಿಚ್ಚು, ಸಿಟ್ಟು, ಪಕ್ಷಪಾತ, ಭಿನ್ನಮತ, ಮತ್ಸರ, ಕುಡುಕುತನ, ಗಲಭೆ, ಢಂಭಾಚಾರ ಇಂಥವುಗಳೇ. ಇಂಥ ಕಾರ್ಯಗಳನ್ನು ನಡಿಸುವವರು ದೇವರ ರಾಜ್ಯಕ್ಕೆ ಬಾಧ್ಯಸ್ಥರಾಗುವುದಿಲ್ಲವೆಂದು ನಾನು ಈ ಮೊದಲು ಹೇಳಿದಂತೆಯೇ ಈಗಲೂ ನಿಮ್ಮನ್ನು ಎಚ್ಚರಿಸುತ್ತೇನೆ.

ಕ್ರಿಸ್ತ ಯೇಸುವಿನಲ್ಲಿರುವವರು ತಮ್ಮ ಶರೀರಭಾವವನ್ನು ಅದರ ವಿಷಯಾಭಿಲಾಷೆ, ಸ್ವೇಚ್ಛಾಭಿಲಾಷೆಗಳ ಸಹಿತವಾಗಿ ಶಿಲುಬೆಗೆ ಹಾಕಿದವರಾಗಿದ್ದಾರೆ.

ಮೋಸಹೋಗಬೇಡಿರಿ. ದೇವರನ್ನು ಅಪಹಾಸ್ಯ ಮಾಡಲಾಗುವುದಿಲ್ಲ. ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು. ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶವನ್ನು ಕೊಯ್ಯುವನು. ಆತ್ಮನ ಕುರಿತಾಗಿ ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು.

ನಾವೆಲ್ಲರೂ ಪೂರ್ವದಲ್ಲಿ ಅವರ ಹಾಗೆಯೇ ಇದ್ದೆವು, ಶರೀರಭಾವದ ಆಸೆಗಳಿಗೆ ಅಧೀನರಾಗಿ, ಶಾರೀರಿಕ ಹಾಗೂ ಮಾನಸಿಕ ಇಚ್ಛೆಗಳನ್ನು ಈಡೇರಿಸುತ್ತಾ ಬಂದೆವು. ಸ್ವಭಾವತಃ ನಾವು ಸಹ ಇತರರಂತೆಯೇ ದೇವರ ಕೋಪಕ್ಕೆ ಗುರಿಯಾಗಿದ್ದೆವು.

ಅವರು ಲಜ್ಜೆಗೆಟ್ಟವರಾಗಿ ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧ ಕೃತ್ಯಗಳನ್ನು ಅತ್ಯಾಶೆಯಿಂದ ನಡೆಸುವವರಾಗಿದ್ದಾರೆ.

ಜಾರತ್ವ ಮತ್ತು ಯಾವ ವಿಧವಾದ ಅಶುದ್ಧತ್ವ ಅಥವಾ ದ್ರವ್ಯಾಶೆ ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು, ಇವುಗಳಿಗೆ ದೂರವಾಗಿರುವುದೇ ದೇವಜನರಿಗೆ ಯೋಗ್ಯವಾದದ್ದು. ಹೊಲಸು ಮಾತು, ಹುಚ್ಚು ಮಾತು, ಕುಚೋದ್ಯ ಇವು ಬೇಡ. ಇವು ಅಯುಕ್ತವಾಗಿವೆ. ಆದರೆ ಇವುಗಳಿಗೆ ಪ್ರತಿಯಾಗಿ ದೇವರಿಗೆ ಕೃತಜ್ಞತಾಸ್ತುತಿಮಾಡಿರಿ. ಜಾರನಿಗಾಗಲಿ, ದುರಾಚಾರಿಗಾಗಲಿ, ವಿಗ್ರಹಾರಾಧಕನಾಗಿರುವ ಲೋಭಿಗಾಗಲಿ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯತೆ ಇಲ್ಲವೆಂದು ನಿಮಗೆ ನಿಶ್ಚಯವಾಗಿ ತಿಳಿದಿರಲಿ.

ಆದುದರಿಂದ ನಿಮ್ಮಲ್ಲಿರುವ ಲೌಕಿಕ ಆಸೆಗಳು ಅಂದರೆ, ಜಾರತ್ವ, ಅಶುದ್ಧತ್ವ, ಕಾಮಾಭಿಲಾಷೆ, ಕೆಟ್ಟ ಅಭಿಲಾಷೆ ಮತ್ತು ವಿಗ್ರಹಾರಾಧನೆಗೆ ಸಮವಾಗಿರುವ ದುರಾಶೆ ಇಂಥವುಗಳನ್ನು ಸಾಯಿಸಿರಿ.

ದೇವರ ಚಿತ್ತವೇನಂದರೆ ನೀವು ಶುದ್ಧರಾಗಬೇಕೆಂಬುದೇ. ಆದ್ದರಿಂದ ಹಾದರಕ್ಕೆ ದೂರವಾಗಿರಬೇಕು. ದೇವರನ್ನರಿಯದ ಅನ್ಯಜನರಂತೆ ಕಾಮಾಭಿಲಾಷೆಗಳಿಗೆ ಒಳಗಾಗದೆ, ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರವಾದ ಮನಸ್ಸಿನಿಂದಲೂ ಘನತೆಯಿಂದಲೂ ಪತ್ನಿಯನ್ನು ಸಂಪಾದಿಸಿಕೊಳ್ಳಲು ತಿಳಿಯಬೇಕು.

ದೇವರು ನಮ್ಮನ್ನು ಅಶುದ್ಧತೆಗೆ ಕರೆಯದೆ ಶುದ್ಧರಾಗಿರುವುದಕ್ಕೆ ಕರೆದನು. ಹೀಗಿರಲು ಈ ಮಾತನ್ನು ತಿರಸ್ಕರಿಸುವವನು ಮನುಷ್ಯರನ್ನು ಮಾತ್ರವಲ್ಲದೆ, ನಿಮಗೆ ಪವಿತ್ರಾತ್ಮವರವನ್ನು ದಯಪಾಲಿಸುವ ದೇವರನ್ನೂ ತಿರಸ್ಕರಿಸುವವನಾಗಿದ್ದಾನೆ.

ಧರ್ಮಶಾಸ್ತ್ರವು ನೀತಿವಂತರಿಗೋಸ್ಕರ ಅಲ್ಲ, ಆದರೆ ಅಕ್ರಮಗಾರರು, ಅವಿಧೇಯರು, ಭಕ್ತಿಹೀನರು, ಪಾಪಿಷ್ಠರು, ಅಪವಿತ್ರರು, ಪ್ರಾಪಂಚಿಕರು, ತಂದೆತಾಯಿಗಳನ್ನು ಕೊಲ್ಲುವವರು, ನರಹತ್ಯಮಾಡುವವರು, ಜಾರರು, ಸಲಿಂಗಕಾಮಿಗಳು, ನರಚೋರರು, ಸುಳ್ಳುಗಾರರು, ಅಸತ್ಯವಾದಿಗಳು, ಸ್ವಸ್ಥಬೋಧನೆಗೆ ವಿರುದ್ಧವಾಗಿರುವಂಥವುಗಳನ್ನು ಮಾಡುವವರು, ಈ ಮೊದಲಾದ ಅನೀತಿವಂತರಿಗಾಗಿ ನೇಮಕವಾಗಿದೆ ಎಂದು ನಮಗೆ ತಿಳಿದಿದೆ.

ನೀನು ಯೌವನದ ಮೋಹಗಳಿಗೆ ದೂರವಾಗಿರು. ಶುದ್ಧಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳುವವರ ಸಂಗಡ ನೀತಿ, ನಂಬಿಕೆ, ಪ್ರೀತಿ ಮತ್ತು ಸಮಾಧಾನಗಳನ್ನು ಸಂಪಾದಿಸುವುದಕ್ಕೆ ಪ್ರಯಾಸಪಡು.

ಮನುಷ್ಯರು ಸ್ವಾರ್ಥಚಿಂತಕರೂ, ಹಣದಾಸೆಯವರೂ, ಬಡಾಯಿಕೊಚ್ಚುವವರೂ, ಅಹಂಕಾರಿಗಳೂ, ದೂಷಕರೂ, ತಂದೆತಾಯಿಗಳಿಗೆ ಅವಿಧೇಯರೂ, ಉಪಕಾರ ನೆನಸದವರೂ, ದೇವಭಯವಿಲ್ಲದವರೂ, ಮಮತೆಯಿಲ್ಲದವರೂ, ಸಮಾಧಾನಹೊಂದದವರೂ, ಚಾಡಿಹೇಳುವವರೂ, ದಮೆಯಿಲ್ಲದವರೂ, ಕ್ರೂರರೂ, ಒಳ್ಳೆಯದನ್ನು ದ್ವೇಷಿಸುವವರೂ, ದ್ರೋಹಿಗಳೂ, ದುಡುಕುವವರೂ, ದುರಹಂಕಾರವುಳ್ಳವರೂ, ದೇವರನ್ನು ಪ್ರೀತಿಸುವುದಕ್ಕಿಂತ ಅಧಿಕವಾಗಿ ಭೋಗವನ್ನೇ ಪ್ರೀತಿಸುವವರೂ, ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು. ಇಂಥವರ ಸಹವಾಸವನ್ನೂ ಮಾಡದಿರು. ಅವರಲ್ಲಿ ಕೆಲವರು ಮನೆಗಳಲ್ಲಿ ನುಸುಳಿ, ಪಾಪಗಳಿಂದ ತುಂಬಿದವರೂ, ನಾನಾ ವಿಧವಾದ ಆಸೆಗಳಿಂದ ಪ್ರೇರಿತರೂ ಆಗಿರುವ ಅವಿವೇಕಿಗಳಾದ ಸ್ತ್ರೀಯರನ್ನು ವಶಮಾಡಿಕೊಳ್ಳುವವರು ಆಗಿರುತ್ತಾರೆ.

ಅದು ಭಕ್ತಿಹೀನತೆಯನ್ನೂ, ಲೋಕದ ಆಸೆಗಳನ್ನೂ ತ್ಯಜಿಸಿ ಭಾಗ್ಯಕರವಾದ ನಿರೀಕ್ಷೆಯನ್ನು,

ಯಾವ ಜಾರನಾಗಲಿ, ಏಸಾವನಂಥ ಪ್ರಾಪಂಚಿಕನಾಗಲಿ ನಿಮ್ಮಲ್ಲಿ ಇರದಂತೆ ಜಾಗ್ರತೆ ವಹಿಸಿಕೊಳ್ಳಿರಿ. ಆ ಏಸಾವನು ಒಂದೇ ಒಂದು ಊಟಕ್ಕೋಸ್ಕರ ತನ್ನ ಚೊಚ್ಚಲುತನದ ಹಕ್ಕನ್ನು ಮಾರಿಬಿಟ್ಟನು.

ಎಲ್ಲರೂ ವಿವಾಹವನ್ನು ಮಾನ್ಯವಾದದ್ದೆಂದು ಎಣಿಸಬೇಕು ಮತ್ತು ದಾಂಪತ್ಯ ಜೀವನವು ಶುದ್ಧವಾಗಿರಬೇಕು. ಏಕೆಂದರೆ ಜಾರರಿಗೂ ಮತ್ತು ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳಿದುಕೊಳ್ಳಿರಿ.

ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು. ಅವನು ಪರಿಶೋಧಿತನಾದ ಮೇಲೆ ಕರ್ತನು ತನ್ನನ್ನು ಪ್ರೀತಿಸುವವರಿಗೆ ವಾಗ್ದಾನಮಾಡಿದಂತೆ ಜೀವದ ಕಿರೀಟವನ್ನು ಹೊಂದುವನು. ಯಾರಾದರೂ ಶೋಧನೆಗೆ ಪ್ರೇರೇಪಿಸಲ್ಪಡುವಾಗ “ಈ ಪ್ರೇರಣೆಯು ತನಗೆ ದೇವರಿಂದ ಉಂಟಾಯಿತೆಂದು” ಹೇಳಬಾರದು. ಏಕೆಂದರೆ ದೇವರು ಕೆಟ್ಟದ್ದಕ್ಕೆ ಪ್ರೇರಣೆ ನೀಡುವವನಲ್ಲ. ಮತ್ತು ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸಿ ಶೋಧಿಸುವುದೂ ಇಲ್ಲ. ಆದರೆ ಪ್ರತಿಯೊಬ್ಬನು ತನ್ನ ಸ್ವಂತ ದುರಾಶೆಗಳಿಂದ ಸೆಳೆಯಲ್ಪಟ್ಟು ಮರುಳುಗೊಂಡವನಾಗಿ ಶೋಧಿಸಲ್ಪಡುತ್ತಾನೆ. ಆ ಮೇಲೆ ದುರಾಶೆಯು ಗರ್ಭಧರಿಸಿ ಪಾಪವನ್ನು ಹೆರುತ್ತದೆ. ಪಾಪವು ಪೂರ್ಣವಾಗಿ ಬೆಳೆದು ಮರಣವನ್ನು ತರುತ್ತದೆ.

ನೀವು ಬೇಡಿದರೂ ಬೇಡಿದ್ದನ್ನು ನಿಮ್ಮ ಭೋಗಾಭಿಲಾಷೆಗಳಿಗಾಗಿ ದುರುಪಯೋಗಪಡಿಸಿಕೊಳ್ಳಬೇಕೆಂಬ ದುರುದ್ದೇಶದಿಂದ ಬೇಡಿಕೊಳ್ಳುವುದರಿಂದ ನಿಮಗೆ ದೊರೆಯುತ್ತಿಲ್ಲ. ವ್ಯಭಿಚಾರಿಗಳೇ, ಇಹಲೋಕದ ಗೆಳೆತನವು ದೇವರಿಗೆ ಹಗೆತನವೆಂದು ನಿಮಗೆ ತಿಳಿಯದೋ? ಆದ್ದರಿಂದ ಲೋಕಕ್ಕೆ ಸ್ನೇಹಿತನಾಗಿರಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ.

ವಿಧೇಯತ್ವವುಳ್ಳ ಮಕ್ಕಳಂತೆ ನಡೆಯಿರಿ, ನೀವು ಮೊದಲು ಅಜ್ಞಾನಿಗಳಾಗಿದ್ದಾಗ ನಿಮಗಿದ್ದ ದುರಾಶೆಗಳನ್ನು ಅನುಸರಿಸಿ ನಡೆದಂತೆ ಇನ್ನು ನಡೆಯುವವರಾಗಿರದೆ,

ಪ್ರಿಯರೇ, ಪ್ರವಾಸಿಗಳು ಮತ್ತು ಪರದೇಶಸ್ಥರು ಆಗಿರುವ ನೀವು ನಿಮ್ಮ ಆತ್ಮದ ವಿರುದ್ಧವಾಗಿ ಯುದ್ಧ ಮಾಡುವ ಶಾರೀರಿಕ ದುರಾಶೆಗಳಿಗೆ ದೂರವಾಗಿರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

ಕ್ರಿಸ್ತನು ನಮಗೋಸ್ಕರ ತನ್ನ ಶರೀರದಲ್ಲಿ ಬಾಧೆಪಟ್ಟದ್ದರಿಂದ ನೀವು ಸಹ ಅದೇ ಮನೋಭಾವವುಳ್ಳವರಾಗಿದ್ದು ಬಾಧೆಪಡಲು ಸಿದ್ಧರಾಗಿರಿ. ಏಕೆಂದರೆ ಶರೀರದಲ್ಲಿ ಬಾಧೆಪಟ್ಟವನು ಪಾಪ ಮಾಡುವುದನ್ನು ನಿಲ್ಲಿಸಿದವನಾಗಿದ್ದಾನೆ. ಆದ್ದರಿಂದ ಉಳಿದಿರುವ ತನ್ನ ಜೀವಮಾನ ಕಾಲದಲ್ಲಿ ಇನ್ನೂ ಮನುಷ್ಯರ ಅಭಿಲಾಷೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ ಬದುಕುವುದಕ್ಕೆ ಪ್ರಯತ್ನಮಾಡುವನು. ನೀವು ಬಂಡುತನ, ದುರಾಶೆ, ಕುಡುಕತನ, ದುಂದೌತಣ, ಮದ್ಯಪಾನ ಗೋಷ್ಠಿ, ಅಸಹ್ಯವಾದ ವಿಗ್ರಹಾರಾಧನೆ, ಈ ಮೊದಲಾದವುಗಳನ್ನು ನಡಿಸುವುದರಲ್ಲಿಯೂ ಅನ್ಯಜನರಿಗೆ ಇಷ್ಟವಾದ ದುಷ್ಕೃತ್ಯಗಳನ್ನು ಮಾಡುವುದರಲ್ಲಿಯೂ ಕಾಲಕಳೆದದ್ದು ಸಾಕು.

ಹೇಗೆಂದರೆ ದೇವದೂತರು ಪಾಪಮಾಡಿದಾಗ ದೇವರು ಅವರನ್ನು ಸುಮ್ಮನೆ ಬಿಡದೆ ನರಕಕ್ಕೆ ದೊಬ್ಬಿ ನ್ಯಾಯತೀರ್ಪನ್ನು ಹೊಂದುವುದಕ್ಕಾಗಿ ಸಂಕೋಲೆಗಳಿಂದ ಬಂಧಿಸಿ ಕತ್ತಲೆಯ ಕೂಪಕ್ಕೆ ಒಪ್ಪಿಸಿದನು. ಆತನು ಭಕ್ತಿಹೀನರಾದ ಪುರಾತನ ಲೋಕವನ್ನು ಸುಮ್ಮನೆ ಬಿಡದೆ ಅವರ ಮೇಲೆ ಜಲಪ್ರಳಯವನ್ನು ಬರಮಾಡಿದನು. ಆದರೆ ಸುನೀತಿಯನ್ನು ಸಾರುತ್ತಿದ್ದ ನೋಹನನ್ನೂ ಮತ್ತು ಅವನೊಂದಿಗಿದ್ದ ಇತರ ಏಳು ಜನರನ್ನು ಮಾತ್ರ ಉಳಿಸಿದನು. ಆತನು ಸೊದೋಮ್ ಗೊಮೋರ ಪಟ್ಟಣಗಳನ್ನು ಸುಟ್ಟು ಬೂದಿಮಾಡಿ ಇನ್ನು ಮೇಲೆ ಭಕ್ತಿಹೀನರಾಗಿ ಬದುಕುವವರಿಗೆ ಬರುವ ದುರ್ಗತಿಯನ್ನು ಸೂಚಿಸುವುದಕ್ಕಾಗಿ ದೃಷ್ಟಾಂತವಾಗಿ ಅವುಗಳಿಗೆ ದಂಡನೆಯನ್ನು ವಿಧಿಸಿದನು. ಆದರೆ ದೇವರು ಆ ದುಷ್ಟರ ಅನೈತಿಕ ನಡತೆಗೆ ನೊಂದುಕೊಂಡಿದ್ದ ನೀತಿವಂತನಾದ ಲೋಟನನ್ನು ಕಾಪಾಡಿದನು. ಏಕೆಂದರೆ ಆ ನೀತಿವಂತನು ಅವರ ಮಧ್ಯದಲ್ಲಿ ಇದ್ದುಕೊಂಡು ಅವರ ಅನ್ಯಾಯ ಕೃತ್ಯಗಳನ್ನು ನೋಡುತ್ತಾ ಕೇಳುತ್ತಾ ಅವುಗಳ ನಿಮಿತ್ತ ದಿನೇ ದಿನೇ ತನ್ನ ನೀತಿಯುಳ್ಳ ಆತ್ಮದಲ್ಲಿ ಬಹಳವಾಗಿ ನೊಂದುಕೊಂಡನು. ಕರ್ತನು ಭಕ್ತರನ್ನು ಕಷ್ಟಗಳಿಂದ ರಕ್ಷಿಸುವುದಕ್ಕೂ ಅನೀತಿವಂತರನ್ನು ಶಿಕ್ಷಿಸುವುದಕ್ಕಾಗಿ ನ್ಯಾಯತೀರ್ಪಿನ ದಿನದ ತನಕ ಇಡುವುದಕ್ಕೂ ಬಲ್ಲವನಾಗಿದ್ದಾನೆ. ಮುಖ್ಯವಾಗಿ ಶಾರೀರಿಕ ಬಂಡುತನದ ದುರಾಶೆಗಳಲ್ಲಿ ನಡೆದು ಪ್ರಭುತ್ವವನ್ನು ತಿರಸ್ಕಾರ ಮಾಡುವವರನ್ನು ಹೀಗೆ ಶಿಕ್ಷಿಸುವನು. ಇವರು ಯಾರಿಗೂ ಹೆದರದೇ ಸ್ವೇಚ್ಛಾಪರರಾಗಿದ್ದಾರೆ. ಮಹಿಮಾಪದವಿಯವರನ್ನು ನಿರ್ಭಯವಾಗಿ ದೂಷಿಸುವರು.

ಇವರು ವ್ಯಭಿಚಾರಿಣಿಯನ್ನು ಕಂಡು ಆನಂದಿಸುವವರೂ, ಪಾಪವನ್ನು ಕಂಡು ತೃಪ್ತಿಹೊಂದದ ಕಣ್ಣುಳ್ಳವರೂ, ಚಂಚಲತೆ ಮನಸ್ಸುವುಳ್ಳವರನ್ನು ಮರುಳುಗೊಳಿಸುವವರೂ, ಹಣದಾಸೆಯಲ್ಲಿ ಪರಿಣಿತಿ ಪಡೆದ ಹೃದಯವುಳ್ಳವರೂ, ಶಾಪಗ್ರಸ್ತ ಮಕ್ಕಳೂ ಆಗಿದ್ದಾರೆ.

ಕೇಡುಕಿನ ಮಾರ್ಗದಲ್ಲಿ ನಡೆಯುವವರ ಸಹವಾಸದಿಂದ ಹೊಸದಾಗಿ ತಪ್ಪಿಸಿಕೊಂಡವರ ಸಂಗಡ ಇವರು ಹುರುಳಿಲ್ಲದ ಪೊಳ್ಳು ಮಾತುಗಳನ್ನಾಡಿ ಕೆಟ್ಟ ಕಾಮಾಭಿಲಾಷೆ ಹುಟ್ಟಿಸಿ ಅತಿಯಾದ ಬಂಡುತನದಿಂದ ಅವರನ್ನು ಮರುಳುಗೊಳಿಸುತ್ತಾರೆ.

ಕಡೆ ದಿನಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯ ಮಾಡುತ್ತಾ,

ಲೋಕದಲ್ಲಿರುವ ಶರೀರದಾಶೆ, ಕಣ್ಣಿನಾಶೆ, ಬದುಕುಬಾಳಿನ ಗರ್ವ, ಇವು ತಂದೆಗೆ ಸಂಬಂಧಪಟ್ಟವುಗಳಲ್ಲ. ಲೋಕಕ್ಕೆ ಸಂಬಂಧಪಟ್ಟವುಗಳಾಗಿವೆ. ಲೋಕವೂ ಅದರ ಆಸೆಯೂ ಗತಿಸಿಹೋಗುತ್ತವೆ. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಸದಾಕಾಲಕ್ಕೂ ಇರುವನು.

ಏಕೆಂದರೆ ಭಕ್ತಿಹೀನರೂ, ನಮ್ಮ ದೇವರ ಕೃಪೆಯನ್ನು ನೆವಮಾಡಿಕೊಂಡು ಕಾಮಾಭಿಲಾಷೆಯ ಕೃತ್ಯಗಳನ್ನು ನಡಿಸುವವರೂ, ನಮ್ಮ ಒಬ್ಬನೇ ಒಡೆಯನೂ ಕರ್ತನೂ ಆಗಿರುವ ಯೇಸು ಕ್ರಿಸ್ತನನ್ನು ಅಲ್ಲಗಳೆಯುವ ಕೆಲವು ಜನರು ರಹಸ್ಯವಾಗಿ ಸಭೆಯ ಒಳಗೆ ಹೊಕ್ಕಿದ್ದಾರೆ. ಇವರು ದಂಡನೆಗಾಗಿ ಪೂರ್ವದಲ್ಲಿಯೇ ನೇಮಕವಾಗಿದ್ದಾರೆ ಎಂದು ಬರೆದದೆ.

ತಮ್ಮ ಅಧಿಕಾರದ ಸ್ಥಾನವನ್ನು ಕಾಪಾಡಿಕೊಳ್ಳದೆ, ತಮ್ಮ ಸ್ವಂತ ವಾಸಸ್ಥಾನವನ್ನು ಬಿಟ್ಟ ದೇವದೂತರಿಗೆ ದೇವರು ನಿತ್ಯವಾದ ಬೇಡಿಗಳನ್ನು ಹಾಕಿ, ಮಹಾದಿನದಲ್ಲಿ ಆಗುವ ತೀರ್ಪಿಗಾಗಿ ಅವರನ್ನು ಕತ್ತಲೆಯೊಳಗೆ ಕಾದಿರಿಸಿದ್ದಾನೆ. ಸೊದೋಮ್ ಗೊಮೋರ ಪಟ್ಟಣಗಳವರೂ, ಅವುಗಳ ಸುತ್ತಮುತ್ತಲಿನ ಪಟ್ಟಣಗಳವರೂ ಆ ದೂತರಂತೆ ನಡೆದುಕೊಂಡು ತಮ್ಮನ್ನು ಜಾರತ್ವಕ್ಕೆ ಒಪ್ಪಿಸಿಬಿಟ್ಟು, ಅಸ್ವಾಭಾವಿಕವಾದ ಕಾರ್ಯಗಳನ್ನು ಅನುಸರಿಸಿದ್ದರಿಂದ ಅವರು ನಿತ್ಯವಾದ ಅಗ್ನಿಯಲ್ಲಿ ದಂಡನೆಯನ್ನು ಅನುಭವಿಸುತ್ತಾ, ದುರ್ಮಾರ್ಗಿಗಳಿಗೆ ಆಗುವ ದುರ್ಗತಿಗೆ ಉದಾಹರಣೆಯಾಗಿ ಇಡಲ್ಪಟ್ಟಿದ್ದಾರೆ. ಹೀಗಿದ್ದರೂ ಈ ಜನರು ಅದೇ ರೀತಿಯಾಗಿ ಸ್ವಪ್ನಾವಸ್ಥೆಯಲ್ಲಿರುವವರಂತೆ ತಮ್ಮ ಶರೀರವನ್ನು ಮಲಿನಮಾಡಿಕೊಳ್ಳುತ್ತಾರೆ. ಪ್ರಭುತ್ವವನ್ನು ಅಸಡ್ಡೆಮಾಡುತ್ತಾರೆ. ಮಹಾ ಪದವಿಯವರನ್ನು ದೂಷಿಸುತ್ತಾರೆ.

ಕೆಲವು ವಿಷಯಗಳಲ್ಲಿ ನಿನ್ನ ವಿರುದ್ಧ ನನಗೆ ಅಪಾದನೆಗಳಿವೆ.ವಿಗ್ರಹಕ್ಕೆ ನೈವೇದ್ಯಮಾಡಿದ ಪದಾರ್ಥಗಳನ್ನು ತಿನ್ನುವುದರಲ್ಲಿಯೂಜಾರತ್ವದಲ್ಲಿಯೂ ಇಸ್ರಾಯೇಲ್ಯರು ಮುಗ್ಗರಿಸಿ ಬೀಳಬೇಕೆಂದುಬಿಳಾಮನು ಬಾಲಾಕನಿಗೆ ಕಲಿಸಿದ ದುರ್ಬೋಧನೆಯನ್ನು ಅವಲಂಬಿಸಿರುವವರು ನಿನ್ನಲ್ಲಿ ಇದ್ದಾರೆ.

ನಿನ್ನ ವಿರುದ್ಧ ನನಗೆ ಅಪಾದನೆ ಒಂದಿದೆ.ಯೆಜೆಬೇಲೆಂಬ ಆ ಹೆಂಗಸು ತನ್ನನ್ನು ಪ್ರವಾದಿನಿಯೆಂದು ಹೇಳಿಕೊಂಡು,ಜಾರತ್ವಮಾಡಬಹುದೆಂದೂವಿಗ್ರಹಗಳಿಗೆ ನೈವೇದ್ಯ ಮಾಡಿದ ಪದಾರ್ಥಗಳನ್ನು ತಿನ್ನಬಹುದೆಂದೂ ನನ್ನ ದಾಸರಿಗೆ ಬೋಧಿಸುತ್ತಾ ಅವರನ್ನು ತಪ್ಪಾದ ಮಾರ್ಗದಲ್ಲಿ ನಡೆಸುತ್ತಿದ್ದರೂ ನೀನು ಅವಳನ್ನು ತಡೆಯದೆ ಅನುಮತಿಯನ್ನು ಕೊಟ್ಟಿರುವಿ. ಜಾರತ್ವವನ್ನು ಬಿಟ್ಟು ಪಶ್ಚಾತ್ತಾಪದಿಂದ ದೇವರ ಕಡೆಗೆ ತಿರುಗಿಕೊಳ್ಳುವುದಕ್ಕೆ ನಾನು ಅವಳಿಗೆ ಸಮಯವನ್ನು ಕೊಟ್ಟೆನು,ಆದರೆ ದೇವರ ಕಡೆಗೆ ತಿರುಗಿಕೊಳ್ಳುವುದಕ್ಕೆ ಅವಳಿಗೆ ಮನಸ್ಸು ಬರಲಿಲ್ಲ. ಇಗೋ, ಅವಳು ಹಾಸಿಗೆಯಲ್ಲಿ ಬಿದ್ದುಕೊಂಡಿರುವಂತೆ ಮಾಡುವೆನು ಮತ್ತು ಅವಳೊಂದಿಗೆ ವ್ಯಭಿಚಾರಮಾಡುವವರು ಪಶ್ಚಾತ್ತಾಪದಿಂದ ದೇವರ ಕಡೆಗೆ ತಿರುಗಿಕೊಂಡು ಬಿಡದೆ ಹೋದರೆ ಅವರನ್ನು ಮಹಾ ಸಂಕಟದಲ್ಲಿ ಬೀಳುವಂತೆ ಮಾಡುವೆನು.

ಇದಲ್ಲದೆ ತಾವು ನಡೆಸುತ್ತಿದ್ದ ಕೊಲೆ, ಮಾಟ, ಜಾರತ್ವ, ಕಳ್ಳತನ ಇವುಗಳೊಳಗೆ ಒಂದನ್ನೂ ಬಿಡದೆ ಮಾನಸಾಂತರಪಡಲಿಲ್ಲ.

ಅವನ ಹಿಂದೆ ಎರಡನೆಯ ದೇವದೂತನು ಬಂದು, “ಬಿದ್ದಳು! ಬಿದ್ದಳು! ಬಾಬೆಲೆಂಬ ಮಹಾನಗರಿಯು ಬಿದ್ದಳು, ಆಕೆಯು ಸಕಲ ಜನಾಂಗಗಳಿಗೆ ತನ್ನ ಅತಿ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿಸಿದಳು” ಎಂದು ಹೇಳಿದನು.

ಏಳು ಬಟ್ಟಲುಗಳನ್ನು ಹಿಡಿದಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು, “ಬಾ, ಬಹಳ ನೀರುಗಳ ಮೇಲೆ ಕುಳಿತ್ತಿರುವ ಮಹಾ ಜಾರಸ್ತ್ರೀಗೆ ಆಗುವ ನ್ಯಾಯತೀರ್ಪನ್ನು ನಿನಗೆ ತೋರಿಸುತ್ತೇನೆ. ಅವಳೊಂದಿಗೆ ಭೂರಾಜರು ಜಾರತ್ವ ಮಾಡಿದರು ಮತ್ತು ಭೂನಿವಾಸಿಗಳು ಆಕೆಯ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು” ಎಂದು ನನಗೆ ಹೇಳಿದನು.

ಎಲ್ಲಾ ದೇಶಗಳವರೂ ಅವಳ ಜಾರತ್ವವೆಂಬ ಕ್ರೌರ್ಯದ ದ್ರಾಕ್ಷಾರಸವನ್ನು ಕುಡಿದರು. ಅವಳೊಂದಿಗೆ ಭೂಲೋಕದ ರಾಜರು ವ್ಯಭಿಚಾರ ಮಾಡಿದರು. ಅವಳ ಭೋಗವಿಲಾಸದಿಂದ ಭೂಲೋಕದ ವರ್ತಕರು ಐಶ್ವರ್ಯವಂತರಾದರು” ಎಂದು ಹೇಳಿದನು.

“ಅವಳೊಂದಿಗೆ ಜಾರತ್ವಮಾಡಿ ಭೋಗಿಗಳಾದ ಭೂರಾಜರು ಅವಳ ದಹನದಿಂದೇರುವ ಹೊಗೆಯನ್ನು ನೋಡಿ ಭಯಪಟ್ಟು ಅವಳಿಗಾಗಿ ದೂರದಲ್ಲಿ ನಿಂತು ಅಳುತ್ತಾ ಗೋಳಾಡುತ್ತಾ, ‘ಅಯ್ಯೋ ಅಯ್ಯೋ ಮಹಾ ನಗರವಾದ ಬಾಬೆಲ್ ಪಟ್ಟಣವೇ, ಬಲಿಷ್ಠವಾದ ಬಾಬೆಲ್ ನಗರಿಯೇ ನಿನಗೆ ವಿಧಿಸಲ್ಪಟ್ಟ ದಂಡನೆಯು ಒಂದೇ ತಾಸಿನಲ್ಲಿ ಬಂದಿತಲ್ಲಾ’ ಎಂದು ಶೋಕಿಸುವರು.

ಆತನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ, ತನ್ನ ಜಾರತ್ವದಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾ ಜಾರಸ್ತ್ರೀಗೆ ಆತನು ನ್ಯಾಯತೀರಿಸಿ ಅವಳು ಆತನ ಸೇವಕರನ್ನು ಕೊಂದದ್ದಕ್ಕಾಗಿ ಅವಳಿಗೆ ಪ್ರತಿದಂಡನೆಯನ್ನು ಮಾಡಿದ್ದಾನೆ.” ಎಂದು ಹೇಳಿ,

ಆದರೆ ಹೇಡಿಗಳು, ನಂಬಿಕೆಯಿಲ್ಲದವರು, ಅಸಹ್ಯವಾದದ್ದರಲ್ಲಿ ಪಾಳುಗಾರರಾಗಿರುವವರು, ಕೊಲೆಗಾರರು, ಜಾರರು, ಮಾಟಗಾರರು, ವಿಗ್ರಹಾರಾಧಕರು, ಎಲ್ಲಾ ಸುಳ್ಳುಗಾರರು ಇವರಿಗೆ ಸಿಕ್ಕುವ ಪಾಲು ಬೆಂಕಿ ಗಂಧಕಗಳುರಿಯುವ ಕೆರೆಯೇ, ಅದು ಎರಡನೆಯ ಮರಣವು” ಎಂದು ನನಗೆ ಹೇಳಿದನು.

Kannada - ಕನ್ನಡ - KN

KNIRV'19 - Kannada Indian Revised Version - 2019

This Bible text is from Kannada Indian Revised Version IRV 2019
https://open.bible/bibles/kannada-bridge-text-bible/
provided by: Bridge Connectivity Solutions Pvt Ltd, available by Creative Commons CC-BY-SA-4.0,
and this new compilation is shared as www.creativecommons.org/licenses/by-sa/4.0.
Languages are made available to you by www.ipedge.net