24 – ಕುಟುಂಬ

ಇವು ಸರ್ವಶಕ್ತನಾದ ದೇವರ ಪವಿತ್ರ ಮಾತುಗಳು.
ಮಾನವರ ಮಾತುಗಳಲ್ಲಿ ನಮಗೆ ಆಸಕ್ತಿ ಇಲ್ಲ.
ದೇವರನ್ನು ಪ್ರೀತಿಸುವ ಯಾರಿಗಾದರೂ... ದೇವರು ಇದರ ಬಗ್ಗೆ ಹೀಗೆ ಹೇಳುತ್ತಾನೆ: ಕುಟುಂಬ.

ಟಾಪ್ 3 ಅತ್ಯಂತ ಮಹತ್ವದ ಪದ್ಯಗಳು

ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ, ಮನೆಯಲ್ಲಿ ಕುಳಿತಿರುವಾಗಲೂ, ದಾರಿಯಲ್ಲಿ ನಡೆಯುವಾಗಲೂ, ಮಲಗುವಾಗಲೂ ಮತ್ತು ಏಳುವಾಗಲೂ ಇವುಗಳ ವಿಷಯದಲ್ಲಿ ಮಾತನಾಡಬೇಕು.

“ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು, ಅವರಿಬ್ಬರೂ ಒಂದೇ ಶರೀರವಾಗಿರುವರು.” ಎಂದು ಬರೆದದೆಯಲ್ಲಾ. ನಾನು ಕ್ರಿಸ್ತನಿಗೂ ಸಭೆಗೂ ಇರುವ ಸಂಬಂಧವನ್ನು ಕುರಿತು ಮಾತನಾಡುತ್ತಿದ್ದೇನೆ, ಇದುವರೆಗೆ ಗುಪ್ತವಾಗಿದ್ದ ಈ ಮರ್ಮವು ಬಹು ಗಂಭೀರವಾದದ್ದು. ಆದರೆ ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು. ಪ್ರತಿ ಹೆಂಡತಿಯೂ ತನ್ನ ಗಂಡನಿಗೆ ಗೌರವದಿಂದ ನಡೆದುಕೊಳ್ಳಬೇಕು.

ಮಕ್ಕಳೇ, ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ವಿಧೇಯರಾಗಿರಿ. ಇದು ನ್ಯಾಯವಾದದ್ದು. ವಾಗ್ದಾನಸಹಿತವಾದ ಮೊದಲನೆಯ ಆಜ್ಞೆಯನ್ನು ಕೇಳಿರಿ, “ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು, ಗೌರವಿಸಿದರೆ ನಿನಗೆ ಶುಭವಾಗುವುದು, ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ.” ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ, ಕರ್ತನಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ಅವರನ್ನು ಶಿಸ್ತಿನಲ್ಲಿಯೂ ಉಪದೇಶದಲ್ಲಿಯೂ ಸಾಕಿ ಸಲಹಿರಿ.

ಕ್ಯಾನೊನಿಕಲ್ ಕ್ರಮದಲ್ಲಿ ಪ್ರತಿ ವಚನ - 302 ಭಾಗಗಳು

ಹೀಗೆ ದೇವರು; “ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು. ದೇವರ ಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು. ಅವರನ್ನು ಗಂಡುಹೆಣ್ಣಾಗಿ ಸೃಷ್ಟಿ ಮಾಡಿದನು.” ಇದಲ್ಲದೆ ದೇವರು ಅವರನ್ನು ಆಶೀರ್ವದಿಸಿ, “ನೀವು ಬಹು ಸಂತಾನವುಳ್ಳವರಾಗಿ ಹೆಚ್ಚಿರಿ. ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನ ಮಾಡಿರಿ” ಎಂದು ಅವರಿಗೆ ಹೇಳಿದನು.

ಅನಂತರ ಯೆಹೋವನಾದ ದೇವರು, “ಮನುಷ್ಯನು ಒಂಟಿಯಾಗಿರುವುದು ಒಳ್ಳೆಯದಲ್ಲ. ಅವನಿಗೆ ಸರಿಯಾದ ಸಹಕಾರಿಯನ್ನು ಉಂಟುಮಾಡುವೆನು” ಅಂದನು. ಯೆಹೋವನು ಎಲ್ಲಾ ಭೂಜಂತುಗಳನ್ನೂ ಆಕಾಶದ ಪಕ್ಷಿಗಳನ್ನೂ, ನೆಲದ ಮಣ್ಣಿನಿಂದ ಸೃಷ್ಟಿಸಿ ಇವುಗಳಿಗೆ ಮನುಷ್ಯನು ಏನೇನು ಹೆಸರಿಡುವನೋ ನೋಡೋಣ ಎಂದು ಅವನ ಬಳಿಗೆ ಬರಮಾಡಿದನು. ಮನುಷ್ಯನು ಒಂದೊಂದು ಪ್ರಾಣಿಗೆ ಯಾವ ಯಾವ ಹೆಸರಿಟ್ಟನೋ ಅದೇ ಅವುಗಳ ಹೆಸರಾಯಿತು. ಹೀಗೆ ಆದಾಮನು ಎಲ್ಲಾ ಪಶುಗಳಿಗೂ, ಆಕಾಶದ ಪಕ್ಷಿಗಳಿಗೂ, ಕಾಡುಮೃಗಗಳಿಗೂ ಹೆಸರಿಟ್ಟನು. ಆದರೆ ಆ ಮನುಷ್ಯನಿಗೆ ಸರಿಯಾದ ಸಹಕಾರಿ ಸಿಗಲಿಲ್ಲ.

ಹೀಗಿರುವಲ್ಲಿ ಯೆಹೋವನಾದ ದೇವರು ಆ ಮನುಷ್ಯನಿಗೆ ಗಾಢನಿದ್ರೆಯನ್ನು ಬರಮಾಡಿ ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಸ್ಥಳವನ್ನು ಮಾಂಸದಿಂದ ತುಂಬಿದನು. ಯೆಹೋವನು ಮನುಷ್ಯನಿಂದ ತೆಗೆದ ಎಲುಬನ್ನು, ಸ್ತ್ರೀಯನ್ನಾಗಿ ಮಾಡಿ ಆಕೆಯನ್ನು ಅವನ ಬಳಿಗೆ ಕರೆದುಕೊಂಡು ಬಂದನು. ಅವನು ಆಕೆಯನ್ನು ನೋಡಿ, “ಈಗ ಸರಿ, ಈಕೆಯು ನನ್ನ ಎಲುಬುಗಳಿಂದ ಬಂದ ಎಲುಬು, ನನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ. ಈಕೆಯು ಮನುಷ್ಯನಿಂದ ಉತ್ಪತ್ತಿಯಾದ ಕಾರಣ ನಾರೀ ಎನ್ನಿಸಿಕೊಳ್ಳುವಳು” ಅಂದನು.

ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗಿರುವರು. ಆ ಮನುಷ್ಯನು ಮತ್ತು ಅವನ ಹೆಂಡತಿ ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ.

ಅದಕ್ಕೆ ಆ ಮನುಷ್ಯನು, “ನನ್ನ ಜೊತೆಯಲ್ಲಿರುವುದಕ್ಕೆ ನೀನು ಕೊಟ್ಟ ಈ ಸ್ತ್ರೀಯು, ಆ ಮರದ ಹಣ್ಣನ್ನು ನನಗೆ ಕೊಟ್ಟಳು, ನಾನು ತಿಂದೆನು” ಎಂದು ಹೇಳಿದನು. ಯೆಹೋವನಾದ ದೇವರು ಆ ಸ್ತ್ರೀಗೆ, “ಇದೇನು ನೀನು ಮಾಡಿದ್ದು?” ಎಂದು ಕೇಳಲು, ಆ ಸ್ತ್ರೀಯು, “ಸರ್ಪವು ನನ್ನನ್ನು ವಂಚಿಸಿತು, ನಾನು ತಿಂದೆನು” ಎಂದು ಉತ್ತರ ಕೊಟ್ಟಳು.

ನಿನಗೂ, ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವುದು. ನೀನು ಅವನ ಹಿಮ್ಮಡಿಯನ್ನು ಕಚ್ಚುವಿ” ಎಂದು ಹೇಳಿದನು. ಆ ನಂತರ ಆ ಸ್ತ್ರೀಗೆ, “ನಾನು ನಿನ್ನ ಗರ್ಭವೇದನೆಯನ್ನು ಅಧಿಕವಾಗಿ ಹೆಚ್ಚಿಸುವೆನು ನೀನು ನೋವಿನಿಂದ ಮಕ್ಕಳನ್ನು ಹಡೆಯುವಿ. ಗಂಡನ ಮೇಲೆ ನಿನಗೆ ಬಯಕೆ ಇರುವುದು, ಆದರೆ ಅವನು ನಿನ್ನ ಮೇಲೆ ಆಳ್ವಿಕೆ ಮಾಡುವನು” ಎಂದು ಹೇಳಿದನು. ಅನಂತರ ಆ ಪುರುಷನಿಗೆ, “ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಫಲವನ್ನು ನಿನ್ನ ಹೆಂಡತಿಯ ಮಾತು ಕೇಳಿ ತಿಂದ ಕಾರಣ, ನಿನ್ನ ನಿಮಿತ್ತ ಭೂಮಿಯು ಶಾಪಗ್ರಸ್ಥವಾಯಿತು. ನಿನ್ನ ಜೀವಮಾನವೆಲ್ಲಾ ಕಷ್ಟಪಟ್ಟು ಬೆವರು ಸುರಿಸಿ ದುಡಿದು ಭೂಮಿಯ ಹುಟ್ಟುವಳಿಯನ್ನು ತಿನ್ನಬೇಕು.

ಆ ಮನುಷ್ಯನು ತನ್ನ ಹೆಂಡತಿಗೆ ಹವ್ವ ಎಂದು ಹೆಸರಿಟ್ಟನು. ಆದುದರಿಂದ ಬದುಕಿರುವವರೆಲ್ಲರಿಗೂ ಆಕೆಯೇ ಮೂಲತಾಯಿಯಾಗಿದ್ದಾಳೆ.

ಆದಾಮನು ತನ್ನ ಹೆಂಡತಿಯಾದ ಹವ್ವಳನ್ನು ಸಂಗಮಿಸಲು ಆಕೆ ಗರ್ಭಿಣಿಯಾಗಿ ಕಾಯಿನನನ್ನು ಹೆತ್ತು, “ನಾನು ಯೆಹೋವನ ಅನುಗ್ರಹದಿಂದ ಗಂಡು ಮಗುವನ್ನು ಪಡೆದಿದ್ದೇನೆ” ಎಂದು ಹೇಳಿದಳು. ತರುವಾಯ ಅವನ ತಮ್ಮನಾದ ಹೇಬೆಲನನ್ನು ಹೆತ್ತಳು. ಹೇಬೆಲನು ಕುರಿಕಾಯುವವನಾದನು. ಕಾಯಿನನು ವ್ಯವಸಾಯಗಾರನಾದನು. ಕಾಲಾಂತರದಲ್ಲಿ ಕಾಯಿನನು ಹೊಲದ ಬೆಳೆಯಲ್ಲಿ ಕೆಲವನ್ನು ತಂದು ಯೆಹೋವನಿಗೆ ಕಾಣಿಕೆಯಾಗಿ ಸಮರ್ಪಿಸಿದನು. ಹೇಬೆಲನು ಹಾಗೆಯೇ ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನು ಕಾಣಿಕೆಯಾಗಿ ತಂದು ಅವುಗಳ ಕೊಬ್ಬನ್ನು ಹೋಮ ಮಾಡಿದನು, ಯೆಹೋವನು ಹೇಬೆಲನನ್ನೂ ಅವನ ಕಾಣಿಕೆಯನ್ನು ಮೆಚ್ಚಿಕೊಂಡನು. ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ಮೆಚ್ಚಲಿಲ್ಲ. ಆದ್ದರಿಂದ ಕಾಯಿನನು ಬಹು ಕೋಪಗೊಂಡನು, ಅವನ ಮುಖವು ಸಿಟ್ಟಿನಿಂದ ಕಳೆಗುಂದಿತು. ಆಗ ಯೆಹೋವನು ಕಾಯಿನನಿಗೆ, “ನೀನು ಕೋಪಗೊಂಡಿದ್ದೇಕೆ? ನಿನ್ನ ಮುಖವು ಕಳೆಗುಂದಲು ಕಾರಣವೇನು? ನೀನು ತಲೆ ತಗ್ಗಿಸಲು ಕಾರಣವೇನು? ನೀನು ಒಳ್ಳೆಯ ಕೆಲಸ ಮಾಡಿದ್ದರೆ ನಿನ್ನ ತಲೆಯು ಎತ್ತಲ್ಪಡುವುದಲ್ಲವೇ? ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಿಲಲ್ಲಿ ಹೊಂಚಿಕೊಂಡಿರುವುದು, ಅದು ನಿನ್ನನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವುದು. ಆದರೆ ನೀನು ಅದನ್ನು ಹಿಡಿತದಲ್ಲಿ ಇರಿಸಿಕೊಳ್ಳಬೇಕು” ಎಂದು ಹೇಳಿದನು. ತರುವಾಯ ಕಾಯಿನನು ತನ್ನ ತಮ್ಮನಾದ ಹೇಬೆಲನ ಸಂಗಡ ಮಾತನಾಡಿದನು. ಅವರು ಹೊಲದಲ್ಲಿದ್ದಾಗ ಕಾಯಿನನು ತನ್ನ ತಮ್ಮನ ಮೇಲೆ ಬಿದ್ದು ಅವನನ್ನು ಕೊಂದನು. ಯೆಹೋವನು ಕಾಯಿನನಿಗೆ, “ನಿನ್ನ ತಮ್ಮನಾದ ಹೇಬೆಲನು ಎಲ್ಲಿ?” ಎಂದು ಕೇಳಲು ಅವನು, “ನಾನರಿಯೆ, ನನ್ನ ತಮ್ಮನಿಗೆ ನಾನೇನು ಕಾವಲುಗಾರನೋ?” ಎಂದು ಉತ್ತರ ಕೊಟ್ಟನು. ಅದಕ್ಕೆ ಯೆಹೋವನು, “ನೀನು ಏನು ಮಾಡಿದೆ? ಭೂಮಿಯ ಕಡೆಯಿಂದ ಕೂಗಿ ನನಗೆ ಮೊರೆಯಿಡುತ್ತಿದೆ. ನಿನ್ನ ತಮ್ಮನ ರಕ್ತವು ಭೂಮಿಯ ಕಡೆಯಿಂದ ಕೂಗಿ ನನಗೆ ಮೊರೆಯಿಡುತ್ತಿದೆ. ಈಗ ನೀನು ನಿನ್ನ ಕೈಯಿಂದ ಸುರಿಸಿದ, ನಿನ್ನ ತಮ್ಮನ ರಕ್ತದಿಂದ ನೆನೆದ ಈ ಭೂಮಿಯಿಂದ ನಿನಗೆ ಶಾಪ ಬಂತು.

ಆದಾಮನ ವಂಶದವರ ದಾಖಲೆ: ದೇವರು ಸೃಷ್ಟಿಕಾಲದಲ್ಲಿ ಮನುಷ್ಯನನ್ನು ತನ್ನ ಹೋಲಿಕೆಗನುಸಾರವಾಗಿ ಸೃಷ್ಟಿ ಮಾಡಿದನು. ಅವರನ್ನು ಗಂಡು ಮತ್ತು ಹೆಣ್ಣಾಗಿ ಉಂಟು ಮಾಡಿದನು. ಇದಲ್ಲದೆ, ಅವರನ್ನು ಸೃಷ್ಟಿಸಿದ ದಿನದಲ್ಲಿ, ಅವರನ್ನು ಆಶೀರ್ವದಿಸಿ ಅವರಿಗೆ “ಮನುಷ್ಯ” ಎಂದು ಹೆಸರಿಟ್ಟನು.

ಆದಾಮನು ನೂರಮೂವತ್ತು ವರ್ಷದವನಾದಾಗ, ರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾದ ಮಗನನ್ನು ಪಡೆದು ಅವನಿಗೆ ಸೇತನೆಂದು ಹೆಸರಿಟ್ಟನು. ಸೇತನು ಹುಟ್ಟಿದ ಮೇಲೆ, ಆದಾಮನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರು ವರ್ಷ ಬದುಕಿದನು. ಆದಾಮನು ಒಟ್ಟು ಒಂಭೈನೂರ ಮೂವತ್ತು ವರ್ಷ ಬದುಕಿ ನಂತರ ಸತ್ತನು.

ಭೂಮಿಯ ಮೇಲೆ ಮನುಷ್ಯರ ಸಂಖ್ಯೆ ಹೆಚ್ಚಾಯಿತು. ಇವರಿಗೆ ಹುಟ್ಟಿದ ಹೆಣ್ಣುಮಕ್ಕಳು

ಆಗ ಯೆಹೋವನು ನೋಹನಿಗೆ, “ನೀನೂ ನಿನ್ನ ಮನೆಯವರೆಲ್ಲರೂ ನಾವೆಯಲ್ಲಿ ಸೇರಿರಿ; ಈಗಿರುವ ಮನುಷ್ಯ ಸಂತತಿಯಲ್ಲಿ ನೀನೊಬ್ಬನೇ ನನ್ನ ಮುಂದೆ ನೀತಿಯಿಂದ ನಡೆಯುವುದನ್ನು ನೋಡಿದ್ದೇನೆ.

ದೇವರು ನೋಹನನ್ನೂ, ಅವನ ಮಕ್ಕಳನ್ನೂ ಆಶೀರ್ವದಿಸಿ ಅವರಿಗೆ, “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿರಿ.

ಯೆಹೋವನು ಅಬ್ರಾಮನಿಗೆ, “ನೀನು, ನಿನ್ನ ಸ್ವದೇಶವನ್ನೂ, ಬಂಧುಬಳಗವನ್ನೂ, ತಂದೆಯ ಮನೆಯನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟು ಹೋಗು. ನಾನು ನಿನ್ನನ್ನು ಮಹಾ ಜನಾಂಗವಾಗುವಂತೆ ಮಾಡಿ, ಆಶೀರ್ವದಿಸಿ, ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು. ನೀನು ಆಶೀರ್ವಾದದ ನಿಧಿಯಾಗುವಿ. ನಿನ್ನನ್ನು ಆಶೀರ್ವದಿಸುವವರನ್ನು ನಾನು ಆಶೀರ್ವದಿಸುವೆನು; ನಿನ್ನನ್ನು ಶಪಿಸುವವರನ್ನು ನಾನು ಶಪಿಸುವೆನು. ನಿನ್ನ ಮೂಲಕ ಭೂಲೋಕದ ಎಲ್ಲಾ ಜನಾಂಗಗಳಿಗೆ ಆಶೀರ್ವಾದವುಂಟಾಗುವುದು” ಎಂದು ಹೇಳಿದನು.

“ನಾನು ನಿನ್ನೊಂದಿಗೆ ಒಂದು ಒಡಂಬಡಿಕೆ ಮಾಡಿಕೊಳ್ಳುತ್ತೇನೆ; ಅದೇನೆಂದರೆ ನೀನು ಅನೇಕ ಜನಾಂಗಗಳಿಗೆ ಮೂಲಪುರುಷನಾಗುವಿ, ಇನ್ನು ಮುಂದೆ ನಿನಗೆ ಅಬ್ರಾಮ ಎಂದು ಹೆಸರಿರುವುದಿಲ್ಲ. ನಿನ್ನನ್ನು ಅನೇಕ ಜನಾಂಗಗಳಿಗೆ ಮೂಲಪಿತೃವಾಗಿ ನೇಮಿಸಿರುವುದರಿಂದ ನಿನಗೆ ಇನ್ನು ಮೇಲೆ ಅಬ್ರಹಾಮ ಎಂದು ಹೆಸರಿರುವುದು. ನಿನಗೆ ಅತ್ಯಧಿಕವಾದ ಸಂತಾನವನ್ನು ಕೊಡುವೆನು ನಿನ್ನಿಂದ ಜನಾಂಗಗಳು ಉತ್ಪತ್ತಿಯಾಗಿ ಅರಸರು ಹುಟ್ಟುವರು. ನಾನು ನಿನಗೂ ನಿನ್ನ ಸಂತತಿಗೂ ದೇವರಾಗಿರುವೆನೆಂದೂ ನಿನಗೋಸ್ಕರವೂ ನಿನ್ನ ಸಂತತಿಯ ಎಲ್ಲಾ ತಲತಲಾಂತರಗಳಿಗೋಸ್ಕರವೂ ಮಾಡಿಕೊಂಡ ನನ್ನ ಒಡಂಬಡಿಕೆಯನ್ನು ಸ್ಥಿರಪಡಿಸುವೆನು.

ಇದಲ್ಲದೆ ದೇವರು ಅಬ್ರಹಾಮನಿಗೆ, “ನೀನು ಇನ್ನು ಮುಂದೆ ನಿನ್ನ ಹೆಂಡತಿಯನ್ನು ಸಾರಯಳೆಂದು ಕರೆಯದೆ ‘ಸಾರಾ’ (ರಾಣಿ) ಎಂದು ಕರೆಯಬೇಕು. ನಾನು ಆಕೆಯನ್ನು ಆಶೀರ್ವದಿಸಿ, ಆಕೆಯಿಂದ ನಿನಗೆ ಒಬ್ಬ ಮಗನನ್ನು ಕೊಡುವೆನು. ನಾನು ಆಕೆಯನ್ನು ಆಶೀರ್ವದಿಸಿದ್ದರಿಂದ ಆಕೆಯಿಂದ ಅನೇಕ ಜನಾಂಗಗಳೂ ಅರಸರೂ ಉತ್ಪತ್ತಿಯಾಗುವರು” ಎಂದು ಹೇಳಿದನು. ಅಬ್ರಹಾಮನು ಅಡ್ಡ ಬಿದ್ದು ನಕ್ಕು, “ನೂರು ವರ್ಷದವನಿಗೆ ಮಗ ಹುಟ್ಟುವುದುಂಟೇ? ತೊಂಭತ್ತು ವರ್ಷದವಳಾದ ಸಾರಳು ಹೆರಲು ಸಾಧ್ಯವೇ?” ಎಂದು ಮನಸ್ಸಿನಲ್ಲಿ ಅಂದುಕೊಂಡನು.

ಅವನು ತನ್ನ ಮಕ್ಕಳಿಗೂ ಮನೆಯವರಿಗೂ ನ್ಯಾಯ ನೀತಿಗಳನ್ನು ತಿಳಿಸಿ ಯೆಹೋವನ ಮಾರ್ಗವನ್ನು ಅನುಸರಿಸಬೇಕೆಂದು ಬೋಧಿಸುವಂತೆ ಅವನನ್ನು ನಾನು ಆರಿಸಿಕೊಂಡೆನಲ್ಲಾ; ಅವನು ಹೀಗೆ ಮಾಡುವುದರಿಂದ ಯೆಹೋವನಾದ ನನ್ನ ವಾಗ್ದಾನವು ನೆರವೇರುವುದು” ಅಂದುಕೊಂಡನು.

ಯೆಹೋವನು ತಾನು ವಾಗ್ದಾನ ಮಾಡಿದಂತೆಯೇ ಸಾರಳ ಮೇಲೆ ದಯವಿಟ್ಟು ಆಕೆಗೆ ಕೊಟ್ಟ ಮಾತನ್ನು ನೆರವೇರಿಸಿದನು. ಅದರಂತೆ ಸಾರಳು ಬಸುರಾಗಿ, ದೇವರು ಮೊದಲು ಸೂಚಿಸಿದ ಕಾಲದಲ್ಲಿ ಅಬ್ರಹಾಮನಿಂದ ಅವನ ಮುಪ್ಪಿನಲ್ಲೇ ಅವನಿಗೆ ಒಬ್ಬ ಮಗನನ್ನು ಹೆತ್ತಳು. ಅಬ್ರಹಾಮನು ಸಾರಳಲ್ಲಿ ತನ್ನಿಂದ ಹುಟ್ಟಿದ ಮಗನಿಗೆ “ಇಸಾಕ” ಎಂದು ಹೆಸರಿಟ್ಟನು.

ಈ ರೀತಿಯಾಗಿ ಇಸಾಕನು ರೆಬೆಕ್ಕಳನ್ನು ವರಿಸಿದನು, ಆಕೆ ಅವನ ಹೆಂಡತಿಯಾದಳು. ಅವನು ಆಕೆಯನ್ನು ಪ್ರೀತಿಸಿ ತನ್ನ ತಾಯಿ ಸಾರಳು ಸತ್ತ ದುಃಖವನ್ನು ಶಮನ ಮಾಡಿಕೊಂಡನು.

ನಿನ್ನ ಸಂತತಿಯು ಭೂಮಿಯ ಧೂಳಿನಷ್ಟು ಅಸಂಖ್ಯವಾಗುವುದು. ನೀನು ಪೂರ್ವ, ಪಶ್ಚಿಮ, ದಕ್ಷಿಣ ಉತ್ತರ ದಿಕ್ಕುಗಳಿಗೆ ಹರಡಿಕೊಳ್ಳುವಿ. ನಿನ್ನಿಂದಲೂ, ನಿನ್ನ ಸಂತತಿಯಿಂದಲೂ, ಭೂಮಿಯ ಎಲ್ಲಾ ಕುಲದವರು ಆಶೀರ್ವಾದ ಹೊಂದುವರು.

ಯಾಕೋಬನು ರಾಹೇಲಳನ್ನು ಪ್ರೀತಿಸಿ, “ನಿನ್ನ ಕಿರಿಯ ಮಗಳಾದ ರಾಹೇಲಳಿಗೋಸ್ಕರ ಏಳು ವರ್ಷ ಸೇವೆ ಮಾಡುವೆನು” ಎಂದು ಹೇಳಲು, ಲಾಬಾನನು, “ಆಕೆಯನ್ನು ಬೇರೊಬ್ಬನಿಗೆ ಕೊಡುವುದಕ್ಕಿಂತ ನಿನಗೆ ಕೊಡುವುದೇ ಒಳ್ಳೆಯದು. ಆದುದರಿಂದ ನೀನು ನನ್ನ ಸಂಗಡ ವಾಸವಾಗಿರು” ಎಂದನು. ಈ ಪ್ರಕಾರ ಯಾಕೋಬನು ರಾಹೇಲಳಿಗೋಸ್ಕರ ಏಳು ವರ್ಷ ಸೇವೆ ಮಾಡಿದನು. ಅವನು ಆಕೆಯನ್ನು ಬಹಳವಾಗಿ ಪ್ರೀತಿಸಿದ್ದರಿಂದ ಅದು ಅವನಿಗೆ ಸ್ವಲ್ಪ ಕಾಲದಂತೆ ಕಾಣಿಸಿತು.

ರಾಹೇಲಳು ತಾನು ಯಾಕೋಬನಿಗೆ ಮಕ್ಕಳನ್ನು ಹೆರದೆ ಇರುವುದನ್ನು ನೋಡಿ ತನ್ನ ಅಕ್ಕನ ಮೇಲೆ ಹೊಟ್ಟೆಕಿಚ್ಚುಪಟ್ಟು, ಯಾಕೋಬನಿಗೆ, “ಮಕ್ಕಳನ್ನು ನನಗೆ ಕೊಡು, ಇಲ್ಲದಿದ್ದರೆ ಸಾಯುವೆನು” ಎಂದು ಹೇಳಿದಳು. ಯಾಕೋಬನು ರಾಹೇಲಳ ಮೇಲೆ ಕೋಪಗೊಂಡು, “ದೇವರು ನಿನಗೆ ಮಕ್ಕಳನ್ನು ಕೊಡದೆ ಹೋದ ಮೇಲೆ ಕೊಡಲಿಕ್ಕೆ ನನ್ನಿಂದಾದೀತೋ” ಎಂದನು.

ಮತ್ತು ಯೆಹೋವನು ಯಾಕೋಬನಿಗೆ, “ನೀನು ನಿನ್ನ ತಂದೆಯ ದೇಶಕ್ಕೂ ನಿನ್ನ ಬಂಧುಗಳ ಬಳಿಗೂ ಹಿಂತಿರುಗಿ ಹೋಗು, ನಾನು ನಿನ್ನೊಂದಿಗೆ ಇರುವೆನು” ಎಂದು ಹೇಳಿದನು.

ಆಗ ಯಾಕೋಬನು ತನ್ನ ಮನೆಯವರಿಗೂ ತನ್ನ ಸಂಗಡ ಇದ್ದವರೆಲ್ಲರಿಗೂ “ನಿಮ್ಮ ಮಧ್ಯಲ್ಲಿರುವ ಅನ್ಯ ದೇವರುಗಳನ್ನು ತೆಗೆದುಹಾಕಿ ನಿಮ್ಮನ್ನು ಶುದ್ಧಪಡಿಸಿಕೊಂಡು, ವಸ್ತ್ರಗಳನ್ನು ಬದಲಾಯಿಸಿರಿ,

ಯೋಸೇಫನು ಇದನ್ನು ಕೇಳಿ ತನ್ನ ಎದುರಿನಲ್ಲಿ ನಿಂತಿದ್ದವರ ಮುಂದೆ ದುಃಖವನ್ನು ತಾಳಲಾರದೆ, “ಎಲ್ಲರನ್ನು ನನ್ನ ಬಳಿಯಿಂದ ಹೊರಗೆ ಕಳುಹಿಸಿರಿ” ಎಂದು ಕೂಗಿದನು. ಯೋಸೇಫನು ತನ್ನ ಅಣ್ಣತಮ್ಮಂದಿರಿಗೆ ತನ್ನ ಗುರುತು ಸಿಕ್ಕುವಂತೆ ಮಾಡುವ ವೇಳೆಯಲ್ಲಿ ಬೇರೆ ಯಾರೂ ಹತ್ತಿರ ಇರಲಿಲ್ಲ. ಅವನು ಗಟ್ಟಿಯಾಗಿ ಅತ್ತದ್ದರಿಂದ ಐಗುಪ್ತರಿಗೂ, ಫರೋಹನ ಮನೆಯವರಿಗೂ ಆ ಶಬ್ದವು ಕೇಳಿಸಿತು. ಅವನು, “ತನ್ನ ಅಣ್ಣತಮ್ಮಂದಿರಿಗೆ ನಾನು ಯೋಸೇಫನು, ನನ್ನ ತಂದೆ ಇನ್ನೂ ಇದ್ದಾನೋ?” ಎಂದು ಹೇಳಲು ಅವರು ಅವನ ಮುಂದೆ ತತ್ತರಗೊಂಡು ಉತ್ತರಕೊಡಲಾರದೆ ಹೋದರು.

ಯೋಸೇಫನು ತನ್ನ ರಥವನ್ನು ಸಿದ್ಧಪಡಿಸಿಕೊಂಡು ತನ್ನ ತಂದೆಯಾದ ಇಸ್ರಾಯೇಲನನ್ನು ಎದುರುಗೊಳ್ಳುವುದಕ್ಕೋಸ್ಕರ ಗೋಷೆನಿಗೆ ಹೋಗಿ ಅವನನ್ನು ಸಂಧಿಸಿ, ತಂದೆಯನ್ನು ಬಹಳ ಹೊತ್ತಿನ ವರೆಗೆ ಅಪ್ಪಿಕೊಂಡು ಅತ್ತನು.

ಫರೋಹನ ಅಪ್ಪಣೆಯ ಮೇರೆಗೆ ಯೋಸೇಫನು ತನ್ನ ತಂದೆಗೂ ಅಣ್ಣತಮ್ಮಂದಿರಿಗೂ ಐಗುಪ್ತ ದೇಶದಲ್ಲಿ ವಾಸಮಾಡಲು ಉತ್ತಮವಾಗಿದ್ದ ರಮ್ಸೇಸ್ ಪ್ರದೇಶದಲ್ಲಿ ಸ್ವತ್ತು ಕೊಟ್ಟನು. ಯೋಸೇಫನು ತನ್ನ ತಂದೆಗೂ, ಅಣ್ಣತಮ್ಮಂದಿರಿಗೂ, ತಂದೆಯ ಮನೆಯವರೆಲ್ಲರಿಗೂ ಅವರವರ ಕುಟುಂಬಗಳಿಗೆ ಸೇರಿದವರ ಲೆಕ್ಕದ ಪ್ರಕಾರ ಆಹಾರವನ್ನು ಕೊಟ್ಟು ಅವರನ್ನು ಸಂರಕ್ಷಿಸಿದನು.

ಅವುಗಳಿಗೆ ಅಡ್ಡ ಬೀಳಬಾರದು, ಪೂಜೆ ಮಾಡಬಾರದು. ನಿನ್ನ ದೇವರಾದ ಯೆಹೋವನೆಂಬ ನಾನು ನನಗೆ ಸಲ್ಲತಕ್ಕ ಗೌರವವನ್ನು ಮತ್ತೊಬ್ಬನಿಗೆ ಬಿಟ್ಟುಕೊಡುವುದಿಲ್ಲ. ಆದುದರಿಂದ ನನ್ನನ್ನು ದ್ವೇಷಿಸುವವರ ವಿಷಯದಲ್ಲಿ ತಂದೆಗಳ ದೋಷಫಲವನ್ನು ಮಕ್ಕಳ ಮೇಲೆ, ಮೂರು ನಾಲ್ಕು ತಲೆಗಳವರೆಗೆ ಬರಮಾಡುವೆನು.

“ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು, ಸನ್ಮಾನಿಸಿದರೆ ನಿನ್ನ ದೇವರಾದ ಯೆಹೋವನು ನಿನಗೆ ಅನುಗ್ರಹಿಸುವ ದೇಶದಲ್ಲಿ ನೀನು ಬಹುಕಾಲ ಬದುಕುವಿ.

ಯಾರಾದರೂ ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಹೊಡೆದರೆ ಖಂಡಿತವಾಗಿ ಅವನು ಸಾಯಲೇಬೇಕು.

ವಿಧವೆಯರನ್ನಾಗಲಿ, ದಿಕ್ಕಿಲ್ಲದ ಮಕ್ಕಳನ್ನಾಗಲಿ, ತೊಂದರೆಪಡಿಸಬಾರದು.

ಸಾವಿರಾರು ತಲೆಮಾರುಗಳವರೆಗೂ ದಯೆತೋರಿಸುವವನು; ದೋಷಾಪರಾಧ ಪಾಪಗಳನ್ನು ಕ್ಷಮಿಸುವವನು; ಆದರೂ ಅಪರಾಧಿಗಳನ್ನು ಶಿಕ್ಷಿಸದೆ ಬಿಡುವುದಿಲ್ಲ; ತಂದೆಗಳ ದೋಷಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಮಾರುಗಳವರೆಗೆ ಬರಮಾಡುವವನು ಆಗಿದ್ದಾನೆ” ಎಂಬುದೇ.

ಅದಲ್ಲದೆ ನೀವು ನಿಮ್ಮ ಪುತ್ರರಿಗಾಗಿ ಅವರಲ್ಲಿ ಪುತ್ರಿಯರನ್ನು ತೆಗೆದುಕೊಳ್ಳುವುದಕ್ಕೆ ಅದು ಮಾರ್ಗವಾಗುವುದು; ತರುವಾಯ ಆ ಸೊಸೆಯರು ತವರುಮನೆಯ ದೇವತೆಗಳನ್ನು ಪೂಜಿಸುವವರಾಗಿ ನಿಮ್ಮ ಮಕ್ಕಳನ್ನೂ ಅನ್ಯದೇವರುಗಳ ಪೂಜೆ ಎಂಬ ವ್ಯಭಿಚಾರಕ್ಕೆ ಎಳೆದಾರು, ಎಚ್ಚರ.

“‘ಪ್ರತಿಯೊಬ್ಬನು ತನ್ನ ತಾಯಿತಂದೆಗಳ ವಿಷಯದಲ್ಲಿ ಭಯಭಕ್ತಿಯಿಂದ ನಡೆದುಕೊಳ್ಳಬೇಕು. ನಾನು ನೇಮಿಸಿರುವ ಸಬ್ಬತ್ ದಿನಗಳನ್ನು ಆಚರಿಸಬೇಕು. ನಾನು ನಿಮ್ಮ ದೇವರಾದ ಯೆಹೋವನು.

“‘ಸಹೋದರನ ವಿಷಯವಾಗಿ ಮನಸ್ಸಿನಲ್ಲಿ ದ್ವೇಷವನ್ನು ಇಟ್ಟುಕೊಳ್ಳಬಾರದು. ನೆರೆಯವನ ದೋಷಕ್ಕೆ ನೀವು ಒಳಗಾಗದಂತೆ ಅವನ ತಪ್ಪನ್ನು ಅವನಿಗೆ ತಿಳಿಸಲೇಬೇಕು.

“‘ತಂದೆಯನ್ನಾಗಲಿ ಅಥವಾ ತಾಯಿಯನ್ನಾಗಲಿ ದೂಷಿಸುವವನಿಗೆ ಮರಣಶಿಕ್ಷೆಯಾಗಬೇಕು. ತಂದೆತಾಯಿಗಳನ್ನು ದೂಷಿಸುವುದರಿಂದ ಅವನಿಗೆ ಸಂಭವಿಸಿದ ಮರಣಶಿಕ್ಷೆಗೆ ಅವನೇ ಕಾರಣನು.

ಯಾಜಕರು ತಮ್ಮ ದೇವರಿಗೆ ಮೀಸಲಾದವರು ಆಗಿರುವುದರಿಂದ ವೇಶ್ಯ ಸ್ತ್ರೀಯನ್ನಾಗಲಿ, ಮಾನವನ್ನು ಭಂಗಪಡಿಸಿಕೊಂಡ ಸ್ತ್ರೀಯನ್ನಾಗಲಿ ಅಥವಾ ಗಂಡನಿಂದ ಬಿಡಲ್ಪಟ್ಟವಳನ್ನಾಗಲಿ ಹೆಂಡತಿಯನ್ನಾಗಿ ತೆಗೆದುಕೊಳ್ಳಬಾರದು.

ಅವನು ಕನ್ನಿಕೆಯನ್ನು ಮದುವೆ ಮಾಡಿಕೊಳ್ಳಬೇಕು. ಅವನು ವಿಧವೆಯನ್ನಾಗಲಿ, ಗಂಡನಿಂದ ಬಿಡಲ್ಪಟ್ಟವಳನ್ನಾಗಲಿ, ಮಾನವನ್ನು ಭಂಗಪಡಿಸಿಕೊಂಡ ಸ್ತ್ರೀಯನ್ನಾಗಲಿ ಅಥವಾ ವೇಶ್ಯ ಸ್ತ್ರೀಯನ್ನಾಗಲಿ ಹೆಂಡತಿಯನ್ನಾಗಿ ಮಾಡಿಕೊಳ್ಳಬಾರದು. ಸ್ವದೇಶದವರಲ್ಲಿಯ ಕನ್ನಿಕೆಯನ್ನೇ ಮದುವೆ ಮಾಡಿಕೊಳ್ಳಬೇಕು.

ಒಬ್ಬ ಹೆಂಡತಿ ತನ್ನ ಗಂಡನನ್ನು ಬಿಟ್ಟು ಜಾರತ್ವಮಾಡಿ ಅಶುದ್ಧಳಾದರೆ ಇಂತಹ ವ್ಯಭಿಚಾರದ ಸಂಶಯವನ್ನು ಪರಿಹರಿಸುವ ನಿಯಮ ಇದೇ. ಗಂಡನು ಹೆಂಡತಿಯ ವಿಷಯದಲ್ಲಿ ಸಂಶಯ ಪಟ್ಟರೆ ಅವನು ಅವಳನ್ನು ಯೆಹೋವನ ಸಮ್ಮುಖದಲ್ಲಿ ತಂದು ನಿಲ್ಲಿಸಬೇಕು. ಯಾಜಕನು ಅವಳ ವಿಷಯದಲ್ಲಿ ಈ ವಿಧಿನಿಯಮವನ್ನು ನೆರವೇರಿಸಬೇಕು. ಆಗ ಗಂಡನು ನಿರಪರಾಧಿಯಾಗುವನು. ಆ ಹೆಂಡತಿಯು ತನ್ನ ಅಕ್ರಮವನ್ನು ಹೊತ್ತುಕೊಳ್ಳುವಳು.’”

“ಚಲ್ಪಹಾದನ ಹೆಣ್ಣು ಮಕ್ಕಳು ಹೇಳುವುದು ನ್ಯಾಯವಾಗಿದೆ. ಅವರ ತಂದೆಯ ಕುಲದವರೊಂದಿಗೆ ಅವರಿಗೂ ನೀನು ಸ್ವತ್ತನ್ನು ಕೊಡಬೇಕು. ತಂದೆಯ ಸ್ವತ್ತು ಅವರಿಗೆ ಬರಲಿ. “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು, ‘ಯಾವನಾದರೂ ಮಗನಿಲ್ಲದೆ ಸತ್ತರೆ ಅವನ ಸ್ವತ್ತು ಅವನ ಮಗಳಿಗೆ ಆಗಬೇಕು. ಮಗಳೂ ಇಲ್ಲದ ಪಕ್ಷಕ್ಕೆ ಅವನ ಸ್ವತ್ತನ್ನು ಅವನ ಅಣ್ಣತಮ್ಮಂದಿರಿಗೆ ಕೊಡಬೇಕು. ಅಣ್ಣತಮ್ಮಂದಿರಿಲ್ಲದ ಪಕ್ಷಕ್ಕೆ ಅವನ ಸ್ವತ್ತನ್ನು ತಂದೆಯ ಅಣ್ಣತಮ್ಮಂದಿರಿಗೆ ಕೊಡಬೇಕು. ಇವರೂ ಇಲ್ಲದಿದ್ದರೆ ಕುಲದವರಲ್ಲಿ ಸಮೀಪಬಂಧುವಿಗೆ ಕೊಡಬೇಕು. ಇವನೇ ಆ ಸ್ವತ್ತನ್ನು ಅನುಭವಿಸಲಿ. ಯೆಹೋವನು ಮೋಶೆಗೆ ಅಪ್ಪಣೆಮಾಡಿದ ಈ ತೀರ್ಮಾನವು ಇಸ್ರಾಯೇಲರಿಗೆ ನ್ಯಾಯನಿಯಮಗಳಾಗಿರಬೇಕು.’”

ಆದಕಾರಣ ಯೆಹೋವನು ಚಲ್ಪಹಾದನ ಹೆಣ್ಣುಮಕ್ಕಳ ವಿಷಯವಾಗಿ ಅಜ್ಞಾಪಿಸಿದ್ದೇನೆಂದರೆ, ‘ತಮ್ಮ ಕುಲದ ಕುಟುಂಬಗಳಲ್ಲಿ ಮಾತ್ರವೇ ತಮಗೆ ಇಷ್ಟಬಂದವರನ್ನು ಮದುವೆಮಾಡಿಕೊಳ್ಳಬೇಕು’ ಎಂಬುದೇ. ಇಸ್ರಾಯೇಲರ ಯಾವ ಸ್ವಾಸ್ತ್ಯವೂ ಒಂದು ಕುಲದಿಂದ ಬೇರೊಂದು ಕುಲಕ್ಕೆ ಹೋಗಬಾರದು. ಇಸ್ರಾಯೇಲರೆಲ್ಲರೂ ತಮ್ಮತಮ್ಮ ಕುಲಗಳ ಸ್ವತ್ತನ್ನು ಹೊಂದಿಕೊಂಡೇ ಇರಬೇಕು. ಇದಕ್ಕಾಗಿ ಇಸ್ರಾಯೇಲರ ವಂಶದಲ್ಲಿ ಸ್ವತ್ತನ್ನು ಹೊಂದಿದ ಹೆಣ್ಣುಮಕ್ಕಳು ಸ್ವಕುಲದಲ್ಲಿಯೇ ಮದುವೆ ಮಾಡಿಕೊಳ್ಳಬೇಕು. ಹೀಗೆ ಯಾವ ಸ್ವಾಸ್ತ್ಯವೂ ಒಂದು ಕುಲದಿಂದ ಬೇರೊಂದು ಕುಲಕ್ಕೆ ಹೋಗದೆ ಇಸ್ರಾಯೇಲರ ಪ್ರತಿಯೊಂದು ಕುಲವು ತನ್ನ ಸ್ವತ್ತನ್ನು ಹೊಂದಿಕೊಂಡೇ ಇರುವುದು” ಎಂದು ಆಜ್ಞಾಪಿಸಿದನು.

ಹೀಗಿರುವುದರಿಂದ ನೀವು ಬಹು ಜಾಗರೂಕತೆಯಿಂದ ನಿಮ್ಮ ನಿಮ್ಮ ಮನಸ್ಸುಗಳನ್ನು ಕಾಪಾಡಿಕೊಳ್ಳುವವರಾಗಿ, ನೀವು ನೋಡಿದ ಸಂಗತಿಗಳನ್ನು ಎಷ್ಟು ಮಾತ್ರವೂ ಮರೆಯದೆ ಜೀವದಿಂದಿರುವ ವರೆಗೂ ಅವುಗಳನ್ನು ನೆನಪಿನಲ್ಲಿಟ್ಟುಕೊಂಡು ನಿಮ್ಮ ಮಕ್ಕಳಿಗೂ ಮತ್ತು ಮೊಮ್ಮಕ್ಕಳಿಗೂ ತಿಳಿಸುತ್ತಾ ಹೋಗಬೇಕು. ಆ ಸಂಗತಿಗಳು ಯಾವುವೆಂದರೆ, ನೀವು ಹೋರೇಬಿನಲ್ಲಿ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ನಿಂತಿದ್ದಾಗ ಆತನು ನನಗೆ, “ಜನರೆಲ್ಲರನ್ನು ನನ್ನ ಹತ್ತಿರಕ್ಕೆ ಕೂಡಿಸು; ಅವರು ತಾವು ಭೂಮಿಯ ಮೇಲಿರುವ ದಿನಗಳಲ್ಲೆಲ್ಲಾ ನನಗೆ ಭಯಭಕ್ತಿಯಿಂದಿರುವುದಕ್ಕೆ ಕಲಿತುಕೊಂಡು ತಮ್ಮ ಮಕ್ಕಳಿಗೂ ಕಲಿಸಿಕೊಡುವಂತೆ ಅವರಿಗೆ ಆಜ್ಞೆಗಳನ್ನು ತಿಳಿಸುತ್ತೇನೆ” ಎಂದು ಹೇಳಿದನು.

“ನಿನ್ನ ದೇವರಾದ ಯೆಹೋವನು ಆಜ್ಞಾಪಿಸಿದಂತೆ ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು; ಸನ್ಮಾನಿಸಿದರೆ ನಿನ್ನ ದೇವರಾದ ಯೆಹೋವನು ನಿನಗೆ ಅನುಗ್ರಹಿಸುವ ದೇಶದಲ್ಲಿ ನೀನು ಬಹುಕಾಲ ಕ್ಷೇಮವಾಗಿ ಇರುವಿ, ಮತ್ತು ನಿನಗೆ ಒಳ್ಳೆಯದಾಗುವುದು.

ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ, ಮನೆಯಲ್ಲಿ ಕುಳಿತಿರುವಾಗಲೂ, ದಾರಿಯಲ್ಲಿ ನಡೆಯುವಾಗಲೂ, ಮಲಗುವಾಗಲೂ ಮತ್ತು ಏಳುವಾಗಲೂ ಇವುಗಳ ವಿಷಯದಲ್ಲಿ ಮಾತನಾಡಬೇಕು.

ಅವರೊಡನೆ ಬೀಗತನಮಾಡಬಾರದು; ಅವರ ಗಂಡು ಮಕ್ಕಳಿಗೆ ನಿಮ್ಮ ಹೆಣ್ಣುಮಕ್ಕಳನ್ನು ಕೊಡಲೂಬಾರದು ಮತ್ತು ಅವರ ಹೆಣ್ಣುಮಕ್ಕಳನ್ನು ನಿಮ್ಮ ಗಂಡುಮಕ್ಕಳಿಗೆ ತರಲೂಬಾರದು. ಹಾಗೆ ಮಾಡಿದರೆ ಅವರು ನಿಮ್ಮ ಗಂಡು ಮಕ್ಕಳನ್ನು ಯೆಹೋವನ ಸೇವೆ ಮಾಡದಂತೆ ತಪ್ಪಿಸಿ, ಅನ್ಯ ದೇವರುಗಳನ್ನು ಪೂಜಿಸುವ ಹಾಗೆ ಮಾಡುವರು. ಆಗ ಯೆಹೋವನು ನಿಮ್ಮ ಮೇಲೆ ಕೋಪಗೊಂಡು ಬೇಗನೆ ನಿಮ್ಮನ್ನು ನಾಶಮಾಡುವನು.

ಆತನು ಅನಾಥರ ಮತ್ತು ವಿಧವೆಯರ ನ್ಯಾಯವನ್ನು ಸ್ಥಾಪಿಸುತ್ತಾನೆ. ಪರದೇಶಿಗಳಾದವರಲ್ಲಿ ಪ್ರೀತಿಯಿಟ್ಟು ಅವರಿಗೆ ಅನ್ನವಸ್ತ್ರಗಳನ್ನು ಕೊಡುತ್ತಾನೆ.

ನೀವು ಮನೆಯಲ್ಲಿರುವಾಗಲೂ, ಪ್ರಯಾಣದಲ್ಲಿರುವಾಗಲೂ, ಮಲಗುವಾಗಲೂ ಮತ್ತು ಏಳುವಾಗಲೂ ಇವುಗಳ ವಿಷಯದಲ್ಲಿ ಮಾತನಾಡುತ್ತಾ ನಿಮ್ಮ ಮಕ್ಕಳಿಗೆ ಇವುಗಳನ್ನು ಅಭ್ಯಾಸಮಾಡಿಸಬೇಕು.

ನಾನು ಬೋಧಿಸುವ ಈ ಎಲ್ಲಾ ಆಜ್ಞೆಗಳಿಗೆ ನೀವು ಚೆನ್ನಾಗಿ ಕಿವಿಗೊಟ್ಟು, ಅವುಗಳನ್ನು ಅನುಸರಿಸಿ, ನಿಮ್ಮ ದೇವರಾದ ಯೆಹೋವನಿಗೆ ಒಳ್ಳೆಯದೂ ಹಾಗು ಯುಕ್ತವೂ ಆಗಿರುವುದನ್ನು ಮಾಡಿದರೆ ನಿಮಗೂ ಮತ್ತು ನಿಮ್ಮ ಸಂತತಿಯವರಿಗೂ ಸದಾಕಾಲ ಶುಭವುಂಟಾಗುವುದು.

ಅದರಲ್ಲಿ ನೀವೂ, ನಿಮ್ಮ ಗಂಡು ಹೆಣ್ಣು ಮಕ್ಕಳೂ, ದಾಸ ಮತ್ತು ದಾಸಿಯರೂ, ನಿಮ್ಮ ಊರಲ್ಲಿರುವ ಲೇವಿಯರೂ, ಪರದೇಶದವರೂ, ಅನಾಥರು ಮತ್ತು ವಿಧವೆಯರೂ ಸಂಭ್ರಮಿಸಬೇಕು.

ಅವನು ಅನೇಕ ಸ್ತ್ರೀಯರನ್ನು ಮದುವೆ ಮಾಡಿಕೊಳ್ಳಬಾರದು; ಮಾಡಿಕೊಂಡರೆ ಅವನ ಮನಸ್ಸು ಯೆಹೋವನ ಕಡೆಯಿಂದ ತಿರುಗುವುದಕ್ಕೆ ಅವಕಾಶವಾಗುವುದು. ಅವನು ಹೆಚ್ಚು ಬೆಳ್ಳಿಬಂಗಾರವನ್ನು ಕೂಡಿಸಿಟ್ಟುಕೊಳ್ಳಬಾರದು.

ಯಾವನಾದರೂ ತಾನು ಮದುವೆಗೆ ನಿಶ್ಚಯ ಮಾಡಿಕೊಂಡ ಹೆಣ್ಣನ್ನು ಇನ್ನೂ ಸೇರಿಸಿಕೊಳ್ಳದಿದ್ದರೆ ಅವನು ಮನೆಗೆ ಹೋಗಲಿ; ಅವನು ಯುದ್ಧದಲ್ಲಿ ಸತ್ತರೆ ಮತ್ತೊಬ್ಬನು ಅವಳನ್ನು ಮದುವೆ ಮಾಡಿಕೊಳ್ಳಬಹುದು” ಎಂದು ಹೇಳಬೇಕು.

ಯಾವನಾದರು ಇಬ್ಬರು ಹೆಂಡತಿಯರನ್ನು ಮಾಡಿಕೊಂಡು ಅವರಲ್ಲಿ ಒಬ್ಬಳನ್ನು ಪ್ರೀತಿಸಿ, ಮತ್ತೊಬ್ಬಳನ್ನು ತಿರಸ್ಕರಿಸುವ ಸಂದರ್ಭ ಬಂದಾಗ ಅವರಿಬ್ಬರೂ ಅವನಿಂದ ಮಕ್ಕಳನ್ನು ಪಡೆದಿದ್ದರೆ, ಚೊಚ್ಚಲು ಮಗನು ತಿರಸ್ಕರಿಸಲ್ಪಟ್ಟವಳಲ್ಲಿಯೇ ಹುಟ್ಟಿದ್ದರೆ, ತಂದೆಯಾದವನು ತನ್ನ ಆಸ್ತಿಯನ್ನು ಮಕ್ಕಳಿಗೆ ಸ್ವತ್ತಾಗಿ ಕೊಡುವಾಗ ಆ ತಿರಸ್ಕರಿಸಲ್ಪಟ್ಟವಳ ಮಗನನ್ನು ತಳ್ಳಿಬಿಟ್ಟು ತಾನು ಪ್ರೀತಿಸುವ ಹೆಂಡತಿಯ ಮಗನನ್ನೇ ಚೊಚ್ಚಲನೆಂದು ಭಾವಿಸಬಾರದು. ತಿರಸ್ಕರಿಸಲ್ಪಟ್ಟವಳ ಮಗನೇ ಚೊಚ್ಚಲನೆಂದು ಒಪ್ಪಿ, ಅವನಿಗೆ ಎರಡು ಭಾಗಗಳನ್ನು ಕೊಡಬೇಕು. ಅವನೇ ತಂದೆಯ ವೀರ್ಯಕ್ಕೆ ಪ್ರಥಮಫಲವೂ ಮತ್ತು ಚೊಚ್ಚಲುತನದ ಹಕ್ಕಿಗೆ ಬಾಧ್ಯನೂ ಆಗಿದ್ದಾನಲ್ಲಾ.

ಒಬ್ಬ ಮಗನು ತಂದೆತಾಯಿಗಳ ಆಜ್ಞೆಗೆ ಒಳಗಾಗದೆ ಶಿಕ್ಷಿಸಲ್ಪಟ್ಟರೂ, ಮೊಂಡನೂ ಮತ್ತು ಅವಿಧೇಯನೂ ಆಗಿ, ಅವರ ಮಾತನ್ನು ಕೇಳದೆಹೋದರೆ ತಂದೆತಾಯಿಗಳು ಅವನನ್ನು ಹಿಡಿದು, ಊರು ಬಾಗಿಲಿಗೆ ಹಿರಿಯರ ಮುಂದೆ ತಂದು ಅವರಿಗೆ, “ಈ ನಮ್ಮ ಮಗನು ನಮ್ಮ ಮಾತನ್ನು ಕೇಳುವುದೇ ಇಲ್ಲ, ಆಜ್ಞೆಗೆ ಒಳಗಾಗುವುದಿಲ್ಲ; ಇವನು ಮೊಂಡ, ಕುಡುಕ ಮತ್ತು ಹೊಟ್ಟೆಬಾಕ” ಎಂದು ಸಾಕ್ಷಿಹೇಳಬೇಕು. ಆಗ ಊರಿನವರೆಲ್ಲರೂ ಅವನನ್ನು ಕಲ್ಲೆಸೆದು ಕೊಲ್ಲಬೇಕು. ಹೀಗೆ ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯದೊಳಗಿಂದ ತೆಗೆದುಹಾಕಿಬಿಡಬೇಕು. ಇಸ್ರಾಯೇಲರೆಲ್ಲರೂ ಇದನ್ನು ಕೇಳಿ ಭಯಪಡುವರು.

ಯಾವನಾದರೂ ತಾನು ಮದುವೆಮಾಡಿಕೊಂಡ ಸ್ತ್ರೀಯನ್ನು ದ್ವೇಷಿಸಿ, ಅವಳ ವಿಷಯದಲ್ಲಿ ಇಲ್ಲಸಲ್ಲದ ಕೆಟ್ಟ ಮಾತುಗಳನ್ನು ಆಡಿ, “ನಾನು ಇವಳನ್ನು ಮದುವೆಮಾಡಿಕೊಂಡೆನು; ಆದರೆ ಇವಳೊಡನೆ ಸಂಗಮಿಸಿದಾಗ ಇವಳು ಕನ್ನಿಕೆಯಲ್ಲವೆಂದು ತಿಳಿದುಬಂತು” ಎಂದು ಹೇಳಿ ಅವಳ ಹೆಸರನ್ನು ಕೆಡಿಸಿದರೆ, ಅವಳ ತಾಯಿ ತಂದೆಗಳು ತಮ್ಮ ಮಗಳು ವಿವಾಹಕ್ಕೆ ಮುಂಚೆ ಪುರುಷಸಂಪರ್ಕವಿಲ್ಲದವಳು ಎಂಬುವುದಕ್ಕೆ ನಿದರ್ಶನವನ್ನು ಊರ ಬಾಗಿಲಿಗೆ ಹಿರಿಯರ ಮುಂದೆ ತಂದು ತೋರಿಸಬೇಕು. ಆ ಸ್ತ್ರೀಯ ತಂದೆ ಅವರಿಗೆ, “ನಾನು ನನ್ನ ಮಗಳನ್ನು ಈ ಪುರುಷನಿಗೆ ಮದುವೆಮಾಡಿಕೊಟ್ಟ ಮೇಲೆ ಇವನು ಅವಳನ್ನು ದ್ವೇಷಿಸಿ, ಪರಪುರುಷನ ಸಂಪರ್ಕ ಮಾಡಿದವಳೆಂದು ನಿರಾಧಾರವಾದ ಮಾತುಗಳನ್ನಾಡಿ ಅವಳ ಹೆಸರನ್ನು ಅವಮಾನಪಡಿಸುತ್ತಾನೆ. ಇಗೋ ನನ್ನ ಮಗಳು ವಿವಾಹಕ್ಕೆ ಮುಂಚೆ ಪುರುಷಸಂಪರ್ಕ ಮಾಡಿದವಳಲ್ಲ ಎಂಬುವುದಕ್ಕೆ ಇದೇ ಪ್ರಮಾಣ” ಎಂದು ಹೇಳಿ ಅವಳ ಹೊದಿಕೆಯನ್ನು ಆ ಊರಿನ ಹಿರಿಯರ ಮುಂದೆ ಇಡಬೇಕು. ಆ ಊರಿನ ಹಿರಿಯರು ಅವನನ್ನು ಹಿಡಿಸಿ ಅವನನ್ನು ಹೊಡಿಸಬೇಕು. ಇಸ್ರಾಯೇಲಳಾದ ಹೆಣ್ಣಿನ ವಿಷಯದಲ್ಲಿ ಆ ಪುರುಷನು ನಿರಾಧಾರವಾದ ತಪ್ಪು ಹೊರಿಸಿದ್ದರಿಂದ, ಅವನಿಗೆ ನೂರು ಶೆಕೆಲ್ ಬೆಳ್ಳಿ ದಂಡವನ್ನು ವಿಧಿಸಿ, ಆ ಹಣವನ್ನು ಅವಳ ತಂದೆಗೆ ಕೊಡಿಸಬೇಕು. ಮತ್ತು ಅವನು ಆ ಸ್ತ್ರೀಯನ್ನು ಹೆಂಡತಿಯನ್ನಾಗಿಯೇ ಇಟ್ಟುಕೊಳ್ಳಬೇಕು; ಅವನ ಜೀವಮಾನಕಾಲವೆಲ್ಲಾ ಅವಳನ್ನು ಪರಿತ್ಯಾಗಮಾಡುವುದಕ್ಕೆ ಅವನಿಗೆ ಅಧಿಕಾರವಿರುವುದಿಲ್ಲ. ಆದರೆ ಆ ಹೆಣ್ಣು ವಿವಾಹಕ್ಕೆ ಮುಂಚೆ ದೈಹಿಕವಾಗಿ ಪುರುಷಸಂಪರ್ಕ ಮಾಡಿದ್ದು ನಿಜ ಎಂದು ತಿಳಿದುಬಂದರೆ, ಅವಳು ತಂದೆಯ ಅಧೀನದಲ್ಲಿರುವಾಗಲ್ಲೇ ಪರಪುರುಷನೊಡನೆ ಸಂಪರ್ಕಮಾಡಿ ಇಸ್ರಾಯೇಲರೊಳಗೆ ದುರಾಚಾರವನ್ನು ನಡಿಸಿದ್ದರಿಂದ, ಅವರು ಅವಳನ್ನು ತಂದೆಯ ಮನೆಯ ಬಾಗಿಲಿಗೆ ಕರೆಯಿಸಬೇಕು; ಊರಿನವರೆಲ್ಲರು ಅವಳನ್ನು ಕಲ್ಲೆಸೆದು ಕೊಲ್ಲಬೇಕು. ಹೀಗೆ ಆ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ನಿವಾರಿಸಿಕೊಳ್ಳಬೇಕು. ಯಾವನಾದರೂ ಇನ್ನೊಬ್ಬನ ಹೆಂಡತಿಯೊಡನೆ ವ್ಯಭಿಚಾರಮಾಡಿದ್ದು ತಿಳಿದುಬಂದರೆ ಆ ಸ್ತ್ರೀ ಮತ್ತು ಪುರುಷರಿಬ್ಬರಿಗೂ ಮರಣಶಿಕ್ಷೆಯಾಗಬೇಕು. ಹೀಗೆ ನೀವು ಆ ದುಷ್ಟತ್ವವನ್ನು ಇಸ್ರಾಯೇಲರ ಮಧ್ಯದಿಂದ ತೆಗೆದುಹಾಕಬೇಕು.

ಅನೈತಿಕ ಸಂಬಂಧದಿಂದ ಹುಟ್ಟಿದ ಸಂತತಿಯವರು, ಹತ್ತನೆಯ ತಲೆಯವರಾದರೂ ಅವರು ಯೆಹೋವನ ಸಭೆಗೆ ಸೇರಬಾರದು.

ಯಾವನಾದರೂ ತಾನು ಮದುವೆಮಾಡಿಕೊಂಡ ಸ್ತ್ರೀಯಲ್ಲಿ ಏನೋ ಅವಲಕ್ಷಣವನ್ನು ಕಂಡು ಅವಳಲ್ಲಿ ಸಂತೋಷಪಡದೆ ಇದ್ದರೆ ಅವನು ತ್ಯಾಗಪತ್ರವನ್ನು ಬರೆದುಕೊಟ್ಟು ಅವಳನ್ನು ಮನೆಯಿಂದ ಕಳುಹಿಸಬೇಕು. ಅವಳು ಮನೆಯಿಂದ ಹೋಗಿ ಮತ್ತೊಬ್ಬನನ್ನು ಮದುವೆಯಾಗಬಹುದು. ಆಕೆ ಎರಡನೆಯ ಗಂಡನಿಂದಲೂ ತಿರಸ್ಕರಿಸಲ್ಪಟ್ಟು, ತ್ಯಾಗಪತ್ರವನ್ನು ಹೊಂದಿ ಕಳುಹಿಸಲ್ಪಟ್ಟರೆ ಅಥವಾ ಎರಡನೆಯ ಗಂಡನು ಸತ್ತರೆ, ಆಗ ಅವಳನ್ನು ಕಳುಹಿಸಿಬಿಟ್ಟ ಮೊದಲನೆಯ ಗಂಡನು ಅವಳನ್ನು ಪುನಃ ತನ್ನ ಹೆಂಡತಿಯಾಗಿ ಸ್ವೀಕರಿಸಬಾರದು; ಅವಳು ಅಶುದ್ಧಳಾದಳು; ಅವಳನ್ನು ಪುನಃ ಸ್ವೀಕರಿಸುವುದು ಯೆಹೋವನಿಗೆ ಅಸಹ್ಯ ಕಾರ್ಯ. ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವುದಕ್ಕೆ ಕೊಡುವ ದೇಶಕ್ಕೆ ದೋಷವುಂಟಾಗುವಂತೆ ಅವಕಾಶಕೊಡಬಾರದು.

ಹೊಸದಾಗಿ ಮದುವೆಮಾಡಿಕೊಂಡವನು ಸೈನ್ಯದವರೊಡನೆ ಯುದ್ಧಕ್ಕೆ ಹೋಗಬಾರದು; ಭಾರವಾದ ಯಾವ ಕೆಲಸವನ್ನೂ ಅವನಿಗೆ ನೇಮಿಸಬಾರದು. ಅವನು ಒಂದು ವರ್ಷದ ವರೆಗೂ ಬಿಡುವಾಗಿ ಮನೆಯಲ್ಲಿ ಇದ್ದುಕೊಂಡು ಪರಿಗ್ರಹಿಸಿದ ಹೆಂಡತಿಯೊಡನೆ ಸುಖವಾಗಿರಲಿ.

“ಲೇವಿಯರು, ತಂದೆತಾಯಿಗಳನ್ನು ಅವಮಾನಪಡಿಸಿದವನು ಶಾಪಗ್ರಸ್ತನು” ಎಂದು ಹೇಳಲು ಜನರೆಲ್ಲರೂ, “ಆಮೆನ್” ಅನ್ನಬೇಕು.

“ಅವರು, ಪರದೇಶಿ, ಅನಾಥ, ಇವರ ವ್ಯಾಜ್ಯದಲ್ಲಿ ನ್ಯಾಯ ಬಿಟ್ಟು ತೀರ್ಪುಹೇಳಿದವನು ಶಾಪಗ್ರಸ್ತನು” ಎಂದು ಹೇಳಲು ಜನರೆಲ್ಲರೂ, “ಆಮೆನ್” ಅನ್ನಬೇಕು.

“ರಹಸ್ಯವಾದವುಗಳು ನಮ್ಮ ದೇವರಾದ ಯೆಹೋವನವು; ಆದರೆ ಆತನಿಂದ ಪ್ರಕಟವಾದವುಗಳು ಸದಾ ನಮ್ಮ ಮತ್ತು ನಮ್ಮ ಸಂತತಿಯವರ ಪಾಲಾಗಿರುವುದರಿಂದ ನಾವು ಈ ಧರ್ಮಶಾಸ್ತ್ರನಿಯಮಗಳನ್ನು ಅನುಸರಿಸಿ ನಡೆಯಬೇಕಾದ ಹಂಗಿನಲ್ಲಿದ್ದೇವೆ.”

ಜನರೆಲ್ಲರೂ ಈ ಧರ್ಮಶಾಸ್ತ್ರವನ್ನು ಕೇಳಿ ತಿಳಿದುಕೊಳ್ಳುವಂತೆ ಸ್ತ್ರೀಯರನ್ನೂ, ಪುರುಷರನ್ನೂ, ಮಕ್ಕಳನ್ನೂ ಮತ್ತು ನಿಮ್ಮ ಊರುಗಳಲ್ಲಿರುವ ಅನ್ಯರನ್ನೂ ಕೂಡಿಸಬೇಕು. ಆಗ ಅವರು ತಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ಈ ಧರ್ಮಶಾಸ್ತ್ರದ ನಿಯಮಗಳನ್ನು ಅನುಸರಿಸಿ ನಡೆಯುವರು. ಮತ್ತು ಯೆಹೋವನ ಮಹತ್ಕಾರ್ಯಗಳನ್ನು ನೋಡದಿರುವ ನಿಮ್ಮ ಸಂತತಿಯವರೂ ಕೇಳಿ ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಯೊರ್ದನ್ ನದಿಯನ್ನು ದಾಟಿ ಹೋಗುವ ದೇಶದಲ್ಲಿ ವಾಸವಾಗಿರುವವರೆಗೂ ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿರುವುದಕ್ಕೆ ಕಲಿತುಕೊಳ್ಳುವರು” ಎಂದು ಹೇಳಿದನು.

ಆದುದರಿಂದ ಈಗ ನೀವು ನನಗೆ ನಂಬತಕ್ಕ ಒಂದು ಗುರುತನ್ನು ಕೊಡಬೇಕು. ನಾನು ನಿಮಗೆ ದಯೆತೋರಿಸಿದಂತೆ ನೀವೂ ಸಹ ನನ್ನ ತಂದೆಯ ಮನೆಯವರಿಗೆ ದಯೆತೋರಿಸಬೇಕೆಂದು ಯೆಹೋವನ ಮೇಲೆ ವಾಗ್ದಾನ ನೀಡಬೇಕು. ನನ್ನ ತಂದೆ ತಾಯಿಯನ್ನೂ ಸಹೋದರ ಸಹೋದರಿಯರನ್ನೂ ಅವರಿಗಿರುವುದೆಲ್ಲವನ್ನು ನಾಶಮಾಡದೆ ಉಳಿಸುವುದಾಗಿ ಯೆಹೋವನ ಹೆಸರಿನಲ್ಲಿ ವಾಗ್ದಾನ ಮಾಡಬೇಕು ಎಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ” ಎಂದಳು.

ನಾಳೆ ಬೆಳಿಗ್ಗೆ ನೀವು ಕುಲ ಕುಲವಾಗಿ ನನ್ನ ಬಳಿಗೆ ಬನ್ನಿರಿ. ಯೆಹೋವನು ಯಾವ ಕುಲವನ್ನು ಸೂಚಿಸುತ್ತಾನೋ ಆ ಕುಲವು ಗೋತ್ರ ಗೋತ್ರವಾಗಿ, ಯಾವ ಗೋತ್ರವನ್ನು ಸೂಚಿಸುತ್ತಾನೋ ಆ ಗೋತ್ರವು ಕುಟುಂಬ ಕುಟುಂಬವಾಗಿ ನನ್ನ ಬಳಿಗೆ ಬರಬೇಕು. ಯಾವ ಕುಟುಂಬನ್ನು ಸೂಚಿಸುತ್ತಾನೋ ಆ ಕುಟುಂಬದವರು ಒಬ್ಬೊಬ್ಬರಾಗಿ ನನ್ನ ಬಳಿಗೆ ಬರಬೇಕು.

ನೀವು ದೇವರಿಗೆ ವಿಮುಖರಾಗಿ ನಿಮ್ಮ ಮಧ್ಯದಲ್ಲಿ ಉಳಿದಿರುವ ಈ ಜನಾಂಗಗಳೊಡನೆ ಸೇರಿಕೊಂಡು ಅವರೊಂದಿಗೆ ಗಂಡು ಹೆಣ್ಣು ಕೊಟ್ಟು ತಂದು ಸಂಬಂಧವನ್ನಿಟ್ಟುಕೊಂಡರೆ, ನಿಮ್ಮ ದೇವರಾದ ಯೆಹೋವನು ಅವರನ್ನು ನಿಮ್ಮ ಎದುರಿನಿಂದ ಹೊರಡಿಸುವುದೇ ಇಲ್ಲವೆಂದು ತಿಳಿದುಕೊಳ್ಳಿರಿ. ಅವರೇ ನಿಮಗೆ ಉರುಲೂ ಬೋನೂ ಆಗಿರುವರು. ಅವರು ಪಕ್ಕೆಗೆ ಹೊಡೆಯುವ ಕೊರಡೆಯಂತೆಯೂ ಕಣ್ಣಿಗೆ ಚುಚ್ಚುವ ಮುಳ್ಳಿನಂತೆಯೂ ಇರುವರು. ಕಡೆಯಲ್ಲಿ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಟ್ಟ ಈ ಉತ್ತಮ ದೇಶದಲ್ಲಿ ನೀವು ಇಲ್ಲದಂತಾಗುವಿರಿ.

ಯೆಹೋವನನ್ನು ಆರಾಧಿಸುವುದು ನಿಮಗೆ ಸರಿಕಾಣದಿದ್ದರೆ ಯಾರನ್ನು ಸೇವಿಸಬೇಕೆಂದಿದ್ದೀರೆಂಬುದನ್ನು? ಈ ಹೊತ್ತೇ ಆರಿಸಿಕೊಳ್ಳಿರಿ: ನಿಮ್ಮ ಪೂರ್ವಿಕರು ಯೂಫ್ರೆಟಿಸ್ ನದಿಯ ಆಚೆಯಲ್ಲಿ ಸೇವಿಸುತ್ತಿದ್ದ ದೇವತೆಗಳೋ ಈ ದೇಶದ ಮೂಲ ನಿವಾಸಿಗಳಾದ ಅಮೋರಿಯರ ದೇವತೆಗಳೋ ಹೇಳಿರಿ. ನಾನೂ, ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು” ಎಂದನು.

ಅನಂತರ ಇಸ್ರಾಯೇಲರು ತಮ್ಮ ತಮ್ಮ ಕುಲಗೋತ್ರಗಳಿಗೆ ಸ್ವತ್ತಾಗಿ ಸಿಕ್ಕಿದ ಪ್ರದೇಶಗಳಿಗೆ ಹಿಂದಿರುಗಿ ಹೋದರು.

ಆಕೆಯು, “ನಿನ್ನನ್ನು ಬಿಟ್ಟು ಹಿಂದಿರುಗಿ ಹೋಗಬೇಕೆಂದು ನನ್ನನ್ನು ಒತ್ತಾಯಪಡಿಸಬೇಡ. ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು; ನೀನು ವಾಸಿಸುವಲ್ಲೇ ನಾನೂ ವಾಸಿಸುವೆನು; ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು.

ಇದಲ್ಲದೆ ಹೊಲದ ಖಾತೆಯು ಸತ್ತುಹೋದ ಮಹ್ಲೋನನ ಹೆಸರಿನಲ್ಲೇ ಉಳಿದು, ಅವನ ಬಂಧುಗಳಲ್ಲಿಯೂ ಊರಲ್ಲಿಯೂ ಅವನ ಸಂತಾನವು ಉಳಿಯುವಂತೆ ಅವನ ಹೆಂಡತಿಯಾಗಿದ್ದ ಮೋವಾಬ್ಯಳಾದ ರೂತಳನ್ನು ನನ್ನ ಹೆಂಡತಿಯನ್ನಾಗಿ ತೆಗೆದುಕೊಂಡಿದ್ದೇನೆ ಇದಕ್ಕೆ ನೀವೇ ಸಾಕ್ಷಿಗಳು” ಎಂದು ಹೇಳಿದನು.

ಆಗ ಆಕೆಯ ಗಂಡನಾದ ಎಲ್ಕಾನನು ಆಕೆಗೆ “ಹನ್ನಾ, ಏಕೆ ಅಳುತ್ತೀ? ಊಟ ಮಾಡದಿರುವುದಕ್ಕೆ ಕಾರಣವೇನು? ನೀನು ವ್ಯಸನಪಡುವುದೇಕೆ? ನಾನು ನಿನಗೆ ಹತ್ತು ಮಂದಿ ಗಂಡು ಮಕ್ಕಳಿಗಿಂತ ಹೆಚ್ಚಾಗಿದ್ದೇನಲ್ಲಾ” ಅಂದನು.

“ಸೇನಾಧೀಶ್ವರನಾದ ಯೆಹೋವನೇ, ನಿನ್ನ ದಾಸಿಯ ದುಃಖವನ್ನು ಪರಾಂಬರಿಸು; ನಿನ್ನ ದಾಸಿಯನ್ನು ಮರೆಯದೆ ನನ್ನನ್ನು ನೆನಪಿಸಿಕೊಂಡು ನನಗೊಬ್ಬ ಮಗನನ್ನು ಕೊಡಬೇಕು; ಅವನು ಜೀವದಿಂದಿರುವ ತನಕ ನಿನ್ನವನಾಗಿಯೇ ಇರುವ ಹಾಗೆ ಅವನನ್ನು ನಿನಗೆ ಪ್ರತಿಷ್ಠಿಸುವೆನು; ಅವನ ತಲೆಯ ಮೇಲೆ ಕ್ಷೌರ ಕತ್ತಿಯನ್ನು ಮುಟ್ಟಗೊಡುವುದಿಲ್ಲ” ಎಂದು ಪ್ರಾರ್ಥಿಸಿ ಹರಕೆಮಾಡಿದಳು.

ಆತನು ನನ್ನ ಪ್ರಾರ್ಥನೆಯ ಫಲವಾಗಿ ಅನುಗ್ರಹಿಸಿದ ಮಗನು ಇವನೇ; ನಾನು ಇವನನ್ನು ಯೆಹೋವನಿಗೇ ಒಪ್ಪಿಸಿಬಿಟ್ಟಿದ್ದೇನೆ. ಇವನು ಜೀವದಿಂದಿರುವ ತನಕ ಆತನಿಗೇ ಪ್ರತಿಷ್ಠಿತನಾಗಿರುವನು” ಎಂದು ಹೇಳಿದಳು. ಆ ಮೇಲೆ ಅವರು ಶಿಲೋವಿನಲ್ಲಿ ಯೆಹೋವನನ್ನು ಆರಾಧಿಸಿದರು.

ಏಲಿಯ ಮಕ್ಕಳು ಬಹುದುಷ್ಟರಾಗಿದ್ದರು; ಅವರು ಯೆಹೋವನನ್ನು ಲಕ್ಷಿಸುತ್ತಿರಲಿಲ್ಲ.

ಆದರೆ ಬಾಲಕನಾದ ಸಮುವೇಲನು ಏಫೋದೆಂಬ ನಾರು ಮಡಿಯಂಗಿಯನ್ನು ತೊಟ್ಟುಕೊಂಡು ಯೆಹೋವನ ಸೇವೆ ಮಾಡುತ್ತಿದ್ದನು.

ಬಾಲಕನಾದ ಸಮುವೇಲನಾದರೋ ಬೆಳೆಯುತ್ತಾ ಬಂದ ಹಾಗೆಲ್ಲಾ ಯೆಹೋವನ ಮತ್ತು ಮನುಷ್ಯರ ದಯೆಗೆ ಪಾತ್ರನಾದನು.

ನಾನು ಅವನಿಗೆ ತಂದೆಯಾಗಿರುವೆನು. ಅವನು ನನಗೆ ಮಗನಾಗಿರುವನು. ಅವನು ತಪ್ಪು ಮಾಡಿದರೆ ತಂದೆ ಮಗನಿಗೆ ಬೆತ್ತದಿಂದ ಶಿಕ್ಷೆಯನ್ನು ಕೊಡುವೆನು ಮತ್ತು ನರಪುತ್ರರಂತೆ ಅವನನ್ನು ದಂಡಿಸುವೆನು.

ಅರಸನಾದ ಸೊಲೊಮೋನನು ಫರೋಹನ ಮಗಳನ್ನಲ್ಲದೆ ಮೋವಾಬ್ಯರು, ಅಮ್ಮೋನಿಯರು, ಎದೋಮ್ಯರು, ಚೀದೋನ್ಯರು ಮತ್ತು ಹಿತ್ತಿಯರು ಎಂಬ ಜನಾಂಗಗಳ ಸ್ತ್ರೀಯರನ್ನು ಮೋಹಿಸಿದನು. ಯೆಹೋವನು ಈ ಜನಾಂಗಗಳ ವಿಷಯದಲ್ಲಿ ಇಸ್ರಾಯೇಲರಿಗೆ, “ನಿಮಗೂ ಅವರಿಗೂ ಕೊಡುವುದು ತೆಗೆದುಕೊಳ್ಳುವುದು ನಡೆಯಬಾರದು, ಅದು ನಡೆಯುವುದಾದರೆ ಅವರು ನಿಮ್ಮ ಮನಸ್ಸನ್ನು ತಮ್ಮ ದೇವತೆಗಳ ಕಡೆಗೆ ತಿರುಗಿಸಾರು” ಎಂದು ಆಜ್ಞಾಪಿಸಿದ್ದರೂ ಸೊಲೊಮೋನನು ಅವರ ಸ್ತ್ರೀಯರಲ್ಲಿ ಅನುರಕ್ತನಾಗಿದ್ದನು. ಅವನಿಗೆ ರಾಜವಂಶದವರಾದ ಏಳುನೂರು ಮಂದಿ ಪತ್ನಿಯರಲ್ಲದೆ ಮುನ್ನೂರು ಜನರು ಉಪಪತ್ನಿಯರಿದ್ದರು. ಈ ಸ್ತ್ರೀಯರು ಅವನ ಮನಸ್ಸನ್ನು ಕೆಡಿಸಿಬಿಟ್ಟರು. ಅವನು ವೃದ್ಧನಾದಾಗ ಇವರು ಅವನ ಹೃದಯವನ್ನು ಅನ್ಯದೇವತೆಗಳ ಕಡೆಗೆ ತಿರುಗಿಸಿದರು. ಈ ಕಾರಣದಿಂದ ಅವನು ತನ್ನ ದೇವರಾದ ಯೆಹೋವನಲ್ಲಿಟ್ಟಿದ್ದ ಪ್ರಾಮಾಣಿಕವಾದ ಭಕ್ತಿಯನ್ನು ಕಳೆದುಕೊಂಡನು. ತನ್ನ ತಂದೆಯಾದ ದಾವೀದನಂತೆ ನಡೆಯಲಿಲ್ಲ.

ಹೀಗಿರಲಾಗಿ ನೀವು ನಿಮ್ಮ ಹೆಣ್ಣುಮಕ್ಕಳನ್ನು ಅವರ ಗಂಡುಮಕ್ಕಳಿಗೆ ಕೊಡಲೂ ಬಾರದು, ನಿಮ್ಮ ಗಂಡುಮಕ್ಕಳಿಗೋಸ್ಕರ ಅವರ ಹೆಣ್ಣು ಮಕ್ಕಳನ್ನು ತೆಗೆದುಕೊಳ್ಳಲೂ ಬಾರದು, ಅವರಿಗೋಸ್ಕರ ಸುಖಕ್ಷೇಮಗಳನ್ನು ಎಂದಿಗೂ ಬಯಸಬಾರದು. ಈ ಪ್ರಕಾರ ನಡೆದರೆ ನೀವು ಬಲಗೊಂಡು ಆ ದೇಶದ ಸಮೃದ್ಧಿಯನ್ನು ಅನುಭವಿಸಿ, ಅದನ್ನು ನಿಮ್ಮ ಸಂತಾನದವರಿಗೆ ಶಾಶ್ವತಸ್ವಾಸ್ಥ್ಯವನ್ನಾಗಿ ಬಿಡುವಿರಿ’ ಎಂದು ಹೇಳಿದಿಯಲ್ಲಾ.

ಯಾಜಕನಾದ ಎಜ್ರನು ಎದ್ದು ನಿಂತು ಅವರಿಗೆ, “ನೀವು ಅನ್ಯಜನರ ಹೆಣ್ಣುಗಳನ್ನು ಮದುವೆಮಾಡಿಕೊಂಡು ಇಸ್ರಾಯೇಲರ ಅಪರಾಧಗಳನ್ನು ಹೆಚ್ಚಿಸಿದ್ದೀರಿ. ಈಗ ನಿಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಸ್ತೋತ್ರಮಾಡಿ, ನಿಮ್ಮ ಪಾಪಗಳನ್ನು ಅರಿಕೆಮಾಡಿ, ಆತನ ಚಿತ್ತಕ್ಕನುಸಾರವಾಗಿ ದೇಶನಿವಾಸಿಗಳನ್ನೂ ಮತ್ತು ಅನ್ಯಜನರಿಂದ ತಂದ ಹೆಂಡತಿಯರನ್ನೂ ಬಿಟ್ಟು ಬೇರೆಯಾಗಿರಿ” ಎಂದನು. ಆಗ ಕೂಡಿಬಂದವರೆಲ್ಲರೂ ಗಟ್ಟಿಯಾಗಿ, “ನೀನು ಹೇಳಿದಂತೆಯೇ ಮಾಡುವುದು ನಮ್ಮ ಕರ್ತವ್ಯ.

ಹೀಗಿರುವಲ್ಲಿ ಅವನ ಹೆಂಡತಿ ಅವನಿಗೆ, “ನಿನ್ನ ಯಥಾರ್ಥತ್ವವನ್ನು ಇನ್ನೂ ಬಿಡಲಿಲ್ಲವೋ? ಇದೆಲ್ಲವನ್ನು ಕೊಟ್ಟ ದೇವರನ್ನು ದೂಷಿಸಿ ಸಾಯಿ” ಎಂದು ಹೇಳಿದಳು. ಆಗ ಯೋಬನು ಆಕೆಗೆ, “ಮೂರ್ಖಳು ಮಾತನಾಡಿದಂತೆ ನೀನು ಮಾತನಾಡುತ್ತಿ. ದೇವರ ಹಸ್ತದಿಂದ ನಾವು ಒಳ್ಳೆಯದನ್ನು ಹೊಂದುವಾಗ ಕೆಟ್ಟದ್ದನ್ನು ಹೊಂದಬಾರದೋ?” ಎಂದು ಹೇಳಿದನು. ಈ ಸಂದರ್ಭದಲ್ಲಿಯೂ ಪಾಪದ ಮಾತು ಅವನ ತುಟಿಗಳಿಂದ ಹೊರಡಲಿಲ್ಲ.

ನಿನಗೆ ವಿರುದ್ಧವಾಗಿ ನಿಂತು ಮುಯ್ಯಿತೀರಿಸುವ ವೈರಿಗಳ ಬಾಯನ್ನು ಕಟ್ಟುವುದಕ್ಕೋಸ್ಕರ, ನೀನು ಬಾಲಕರ ಮತ್ತು ಮೊಲೆಕೂಸುಗಳ ಬಾಯಿಂದ ಬಲವಾದ ಸಾಕ್ಷಿ ಉಂಟಾಗುವಂತೆ ಮಾಡಿದ್ದೀ.

ನೀನು ದಿಕ್ಕಿಲ್ಲದವರ ಮತ್ತು ಕುಗ್ಗಿದವರ ನ್ಯಾಯವನ್ನು ವಿಚಾರಿಸುತ್ತಿ. ಹೀಗಿರುವಲ್ಲಿ ಇನ್ನು ಮುಂದೆ ಮಣ್ಣಿನಿಂದಾದ ಮನುಷ್ಯರಿಂದ ಅವರಿಗೆ ಹೆದರಿಕೆ ಉಂಟಾಗುವುದಿಲ್ಲ.

ತಾಯಿಯ ಗರ್ಭದೊಳಗಿಂದ ನನ್ನನ್ನು ಬರಮಾಡಿದವನು ನೀನೇ ಅಲ್ಲವೇ. ತಾಯಿಯ ಎದೆಯಲ್ಲಿ ನನ್ನನ್ನು ನಿಶ್ಚಿಂತೆಯಿಂದ ಇರಿಸಿದವನು ನೀನೇ ಅಲ್ಲವೇ. ಹುಟ್ಟಿದಂದಿನಿಂದ ನೀನೇ ನನಗೆ ಆಧಾರ; ತಾಯಿ ಹೆತ್ತಂದಿನಿಂದ ನನ್ನ ದೇವರು ನೀನೇ.

ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.

ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವುದನ್ನಾಗಲಿ, ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವುದನ್ನಾಗಲಿ ನೋಡಲಿಲ್ಲ. ಅವನು ಯಾವಾಗಲೂ ಧರ್ಮಿಷ್ಠನಾಗಿ ಹಣ ಸಹಾಯವನ್ನು ಮಾಡುತ್ತಾನೆ; ಅವನ ಸಂತತಿಯವರು ಆಶೀರ್ವಾದ ಹೊಂದುವರು.

ಹುಟ್ಟಿದಂದಿನಿಂದ ನಾನು ಪಾಪಿಯೇ; ಮಾತೃಗರ್ಭವನ್ನು ಹೊಂದಿದ ದಿನದಿಂದ ದ್ರೋಹಿಯೇ. ಯಥಾರ್ಥಚಿತ್ತವೇ ನಿನಗೆ ಸಂತೋಷ; ಸುಜ್ಞಾನದ ರಹಸ್ಯಗಳನ್ನು ನನಗೆ ತಿಳಿಯಪಡಿಸು.

ಪರಿಶುದ್ಧ ವಾಸಸ್ಥಾನದಲ್ಲಿರುವ ದೇವರು ದಿಕ್ಕಿಲ್ಲದವರಿಗೆ ತಂದೆಯೂ, ವಿಧವೆಯರಿಗೆ ಸಹಾಯಕನೂ ಆಗಿದ್ದಾನೆ. ಒಬ್ಬೊಂಟಿಗರನ್ನು ಸಂಸಾರಿಕರಾಗುವಂತೆ ಮಾಡುತ್ತಾನೆ; ಸೆರೆಯಲ್ಲಿರುವವರನ್ನು ಬಿಡಿಸಿ ಸುಖಾವಸ್ಥೆಗೆ ತರುತ್ತಾನೆ. ದ್ರೋಹಿಗಳಾದರೋ ಮರುಭೂಮಿಯಲ್ಲಿ ಉಳಿಯಬೇಕಾಗುವುದು.

ನಾನು ಬಾಯ್ದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು. ಪೂರ್ವಕಾಲದ ಗೂಢಾರ್ಥಗಳನ್ನು ಬಹಿರಂಗಪಡಿಸುವೆನು. ನಾವು ನಮ್ಮ ಹಿರಿಯರ ಬಾಯಿಂದ ತಿಳಿದ ಸಂಗತಿಗಳನ್ನು, ಅವರ ಸಂತಾನದವರಿಗೆ ಮರೆಮಾಡದೆ, ಯೆಹೋವನ ಘನತೆಯನ್ನು, ಆತನ ಪರಾಕ್ರಮವನ್ನು, ಅದ್ಭುತಕೃತ್ಯಗಳನ್ನು ಮುಂದಣ ಸಂತತಿಯವರಿಗೆ ವಿವರಿಸುವೆವು. ಆತನು ಯಾಕೋಬವಂಶದಲ್ಲಿ ತನ್ನ ಕಟ್ಟಳೆಯನ್ನಿಟ್ಟು, ಇಸ್ರಾಯೇಲರಿಗೆ ಧರ್ಮಶಾಸ್ತ್ರವನ್ನು ಕೊಟ್ಟು, ನಮ್ಮ ಹಿರಿಯರಿಗೆ ಆಜ್ಞಾಪಿಸಿದ್ದೇನೆಂದರೆ, “ಇವುಗಳನ್ನು ನಿಮ್ಮ ಮಕ್ಕಳಿಗೆ ಹೇಳಿಕೊಡಿರಿ; ಇದರಿಂದ ಅವು ಅವರ ಮುಂದಿನ ಪೀಳಿಗೆಗೆ ಗೊತ್ತಾಗಿ, ಅವರ ಮಕ್ಕಳು ಅವುಗಳನ್ನು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ತಿಳಿಸುತ್ತಾ ಹೋಗುವರು. ಆಗ ಅವರು ಮೊಂಡರೂ, ಅವಿಧೇಯರೂ, ಚಪಲಚಿತ್ತರೂ, ದೇವದ್ರೋಹಿಗಳೂ ಆದ ತಮ್ಮ ಪೂರ್ವಿಕರಂತೆ ಆಗದೆ, ನನ್ನ ಮಹತ್ಕಾರ್ಯಗಳನ್ನು ಮರೆಯದೆ, ನನ್ನಲ್ಲಿಯೇ ಭರವಸೆಯಿಟ್ಟು, ನನ್ನ ಆಜ್ಞೆಗಳನ್ನು ಕೈಗೊಳ್ಳುವರು” ಎಂಬುದೇ.

ಕುಗ್ಗಿದವರ ಮತ್ತು ಅನಾಥರ ನ್ಯಾಯವನ್ನು ಸ್ಥಾಪಿಸಿರಿ, ದುಃಖಿತರ ಮತ್ತು ದರಿದ್ರರ ನೀತಿಯನ್ನು ಉಳಿಸಿರಿ.

ತಂದೆಯು ಮಕ್ಕಳನ್ನು ಕನಿಕರಿಸುವಂತೆ, ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ.

ಆದರೆ ಯೆಹೋವನಲ್ಲಿ ಭಯಭಕ್ತಿಯುಳ್ಳವರ ಮೇಲೆ, ಆತನ ದಯೆಯು ಯುಗಯುಗಾಂತರಗಳವರೆಗೂ ಇರುತ್ತದೆ.

ಆತನ ಸೇವಕನಾದ ಅಬ್ರಹಾಮನ ಸಂತತಿಯವರೇ, ಆತನು ಆರಿಸಿಕೊಂಡ ಯಾಕೋಬನ ವಂಶದವರೇ, ನೀವು ನೆನಪುಮಾಡಿಕೊಳ್ಳಿರಿ. ಯೆಹೋವನೆಂಬಾತನೇ ನಮ್ಮ ದೇವರು; ಆತನ ನ್ಯಾಯವಿಧಿಗಳು ಭೂಲೋಕದಲ್ಲೆಲ್ಲಾ ಇವೆ. ಆತನು ತನ್ನ ವಾಗ್ದಾನವನ್ನು ಸಾವಿರ ತಲೆಗಳವರೆಗೂ, ತನ್ನ ಒಡಂಬಡಿಕೆಯನ್ನು ನಿತ್ಯವೂ ನೆನಪಿನಲ್ಲಿಟ್ಟುಕೊಳ್ಳುತ್ತಾನೆ.

ಬಂಜೆಯು ಮಕ್ಕಳೊಂದಿಗೆ, ಸಂತೋಷದಿಂದ ಮನೆಯಲ್ಲಿ ವಾಸಿಸುವ ಹಾಗೆ ಮಾಡುತ್ತಾನೆ. ಯೆಹೋವನಿಗೆ ಸ್ತೋತ್ರ!

ಯೆಹೋವನು ನಿಮ್ಮನ್ನೂ, ನಿಮ್ಮ ಮಕ್ಕಳನ್ನೂ ಅಭಿವೃದ್ಧಿಪಡಿಸಲಿ;

ಪುತ್ರಸಂತಾನವು ಯೆಹೋವನಿಂದ ಬಂದ ಸ್ವತ್ತು; ಗರ್ಭಫಲವು ಆತನ ಬಹುಮಾನವೇ. ಯೌವನದಲ್ಲಿ ಹುಟ್ಟಿದ ಮಕ್ಕಳು, ಯುದ್ಧವೀರನ ಕೈಯಲ್ಲಿರುವ ಅಂಬುಗಳಂತಿದ್ದಾರೆ; ಇವುಗಳಿಂದ ತನ್ನ ಬತ್ತಳಿಕೆಯನ್ನು ತುಂಬಿದವನು ಧನ್ಯನು. ಊರ ಬಾಗಿಲಲ್ಲಿ ವೈರಿಗಳ ಸಂಗಡ ವ್ಯಾಜ್ಯವಾಡುವಾಗ ಅಂಥವರು ಅವಮಾನ ಹೊಂದುವುದಿಲ್ಲ.

ಅಂತಃಪುರದಲ್ಲಿರುವ ನಿನ್ನ ಹೆಂಡತಿಯು, ಫಲಭರಿತವಾದ ದ್ರಾಕ್ಷಾಲತೆಯಂತೆ ಇರುವಳು; ನಿನ್ನ ಸಂಗಡ ಊಟದ ಮಣೆಯ ಸುತ್ತಲೂ ಕುಳಿತುಕೊಳ್ಳುವ ನಿನ್ನ ಮಕ್ಕಳು, ಎಣ್ಣೇಮರದ ಸಸಿಗಳ ಹಾಗೆ ಇರುವರು.

ಮಕ್ಕಳ ಮಕ್ಕಳನ್ನು ಕಾಣುವವನಾಗು. ಇಸ್ರಾಯೇಲರಿಗೆ ಶುಭವಾಗಲಿ.

ಯಾತ್ರಾಗೀತೆ; ದಾವೀದನದು. ಆಹಾ, ಸಹೋದರರು ಒಂದಾಗಿರುವುದು, ಎಷ್ಟೋ ಒಳ್ಳೆಯದು, ಎಷ್ಟೋ ರಮ್ಯವಾದದ್ದು!

ನನ್ನ ಅಂತರಿಂದ್ರಿಯಗಳನ್ನು ಉಂಟುಮಾಡಿದವನೂ, ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನಲ್ಲವೋ? ನೀನು ನನ್ನನ್ನು ಅದ್ಭುತವಾಗಿಯೂ, ವಿಚಿತ್ರವಾಗಿಯೂ ರಚಿಸಿದ್ದರಿಂದ, ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು, ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ. ನಾನು ಗುಪ್ತಸ್ಥಳದಲ್ಲಿ ಏರ್ಪಡುತ್ತಾ, ಭೂಗರ್ಭದಲ್ಲಿ ರಚಿಸಲ್ಪಡುತ್ತಾ ಇದ್ದಾಗ, ನನ್ನ ಅಸ್ಥಿಪಂಜರವು ನಿನಗೆ ಮರೆಯಾಗಿದ್ದಿಲ್ಲ. ನಾನು ಇನ್ನೂ ಕೇವಲ ಪಿಂಡವಾಗಿರುವಾಗ, ನಿನ್ನ ಕಣ್ಣುಗಳು ನನ್ನನ್ನು ನೋಡಿದವು, ನನ್ನ ಆಯುಷ್ಕಾಲದ ಪ್ರಥಮದಿನವು ಪ್ರಾರಂಭವಾಗುವ ಮೊದಲೇ, ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು.

ಪ್ರಾಯಸ್ಥರಾದ ಸ್ತ್ರೀಪುರುಷರು, ಮುದುಕರು, ಹುಡುಗರು ಯೆಹೋವನನ್ನು ಕೊಂಡಾಡಲಿ. ಆತನ ನಾಮವೊಂದೇ ಮಹತ್ವವುಳ್ಳದ್ದು, ಆತನ ಪ್ರಭಾವವು ಭೂಮ್ಯಾಕಾಶಗಳಲ್ಲಿ ಪ್ರಸರಿಸಿದೆ.

ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ.

ಮಗನೇ, ಯೆಹೋವನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ. ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ. ತಂದೆಯು ತನ್ನ ಮುದ್ದುಮಗನನ್ನು ಗದರಿಸುವಂತೆ ಯೆಹೋವನು ತಾನು ಪ್ರೀತಿಸುವವನನ್ನೇ ಗದರಿಸುತ್ತಾನೆ.

ಮಕ್ಕಳೇ, ತಂದೆಯ ಉಪದೇಶವನ್ನು ಕೇಳಿರಿ, ವಿವೇಕವನ್ನು ಗ್ರಹಿಸುವಂತೆ ಕಿವಿಗೊಡಿರಿ. ನಾನು ನಿಮಗೆ ಸುಬೋಧೆಯನ್ನು ಮಾಡುವೆನು, ನನ್ನ ಉಪದೇಶವನ್ನು ಬಿಡಬೇಡಿರಿ. ನಾನೂ ನನ್ನ ತಂದೆಗೆ ಅಧೀನನಾದ ಮಗನೂ, ತಾಯಿಯ ದೃಷ್ಟಿಗೆ ಕೋಮಲನಾದ ಏಕಪುತ್ರನೂ ಆಗಿದ್ದೆನು. ಆಗ ತಂದೆಯು ನನಗೆ ಬೋಧಕನಾಗಿ ಹೀಗೆಂದನು, “ನಿನ್ನ ಮನಸ್ಸು ನನ್ನ ಮಾತುಗಳನ್ನು ಹಿಡಿದುಕೊಳ್ಳಲಿ, ನನ್ನ ಆಜ್ಞೆಯನ್ನು ಕೈಕೊಂಡು ಸುಖವಾಗಿ ಬಾಳು.

ಕಂದಾ, ಗಮನಿಸಿ ನನ್ನ ಮಾತುಗಳನ್ನು ಕೇಳು, ಕೇಳಿದರೆ, ನಿನ್ನ ಜೀವಮಾನದ ವರ್ಷಗಳು ಹೆಚ್ಚುವವು. ನಾನು ಜ್ಞಾನಮಾರ್ಗವನ್ನು ಉಪದೇಶಿಸಿ, ಧರ್ಮಮಾರ್ಗದಲ್ಲಿ ನಿನ್ನನ್ನು ನಡೆಸುವೆನು.

ಕಂದಾ, ನನ್ನ ಮಾತುಗಳನ್ನು ಆಲಿಸು, ನನ್ನ ನುಡಿಗಳಿಗೆ ಕಿವಿಗೊಡು. ನಿನ್ನ ದೃಷ್ಟಿಯು ಅವುಗಳ ಮೇಲೆ ತಪ್ಪದಿರಲಿ, ಅವುಗಳನ್ನು ನಿನ್ನ ಹೃದಯದೊಳಗೆ ಇಟ್ಟುಕೋ. ಅವುಗಳನ್ನು ಹೊಂದುವವರಿಗೆ ಅವು ಜೀವವು, ದೇಹಕ್ಕೆಲ್ಲಾ ಅವೇ ಆರೋಗ್ಯವು. ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ, ಅದರೊಳಗಿಂದ ಜೀವಬುಗ್ಗೆಗಳು ಹೊರಡುವವು.

ನಿನ್ನ ಬುಗ್ಗೆಯು ದೇವರ ಆಶೀರ್ವಾದವನ್ನು ಹೊಂದಲಿ, ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು. ಆಕೆ ಮನೋಹರವಾದ ಜಿಂಕೆಯಂತೆಯೂ, ಅಂದವಾದ ದುಪ್ಪಿಯ ಹಾಗೂ ಇರುವಳಲ್ಲಾ, ಆಕೆಯ ಸ್ತನಗಳು ನಿನ್ನನ್ನು ಸರ್ವದಾ ತೃಪ್ತಿಪಡಿಸಲಿ, ಆಕೆಯ ಪ್ರೀತಿಯಲ್ಲೇ ನಿರಂತರವಾಗಿ ಲೀನವಾಗಿರು.

ಕಂದಾ, ತಂದೆಯ ಆಜ್ಞೆಯನ್ನು ಕೈಕೊಳ್ಳು, ತಾಯಿಯ ಉಪದೇಶವನ್ನು ಬಿಡಬೇಡ.

ಜ್ಞಾನಿಯಾದ ಮಗನಿಂದ ತಂದೆಗೆ ಆನಂದ, ಅಜ್ಞಾನಿಯಾದ ಮಗನಿಂದ ತಾಯಿಗೆ ದುಃಖ.

ತನ್ನ ಕುಟುಂಬವನ್ನು ಬಾಧಿಸುವವನಿಗೆ ಗಾಳಿಯೇ ಗಂಟು, ಮೂರ್ಖನು ಜ್ಞಾನವಂತನ ಅಧೀನದಲ್ಲಿ ಬಿದ್ದಿರುವನು;

ಗುಣವತಿಯಾದ ಸ್ತ್ರೀಯು ಪತಿಯ ತಲೆಗೆ ಕಿರೀಟ, ಮಾನ ಕಳೆಯುವವಳು ಪತಿಯ ಎಲುಬಿಗೆ ಕ್ಷಯ.

ಜ್ಞಾನಿಯಾದ ಮಗನು ತಂದೆಯ ನೀತಿ ಶಿಕ್ಷಣವನ್ನು ಕೇಳುವನು, ಧರ್ಮನಿಂದಕನೋ ಗದರಿಕೆಯನ್ನು ಕೇಳನು.

ಒಳ್ಳೆಯವನ ಆಸ್ತಿ ಸಂತತಿಯವರಿಗೆ ಬಾಧ್ಯ, ಪಾಪಿಯ ಸೊತ್ತು ಸಜ್ಜನರಿಗೆ ಗಂಟು.

ಬೆತ್ತ ಹಿಡಿಯದ ತಂದೆ ಮಗನಿಗೆ ಶತ್ರು, ಸುಶಿಕ್ಷಣವನ್ನು ನೀಡುವ ತಂದೆ ಮಗನಿಗೆ ಮಿತ್ರ.

ಜ್ಞಾನವಂತೆಯು ತನ್ನ ಮನೆಯನ್ನು ಕಟ್ಟಿಕೊಳ್ಳುವಳು, ಜ್ಞಾನಹೀನಳು ಅದನ್ನು ಸ್ವಂತ ಕೈಯಿಂದ ನಾಶಮಾಡುವಳು.

ಮೂರ್ಖನು ತಂದೆಯ ಶಿಕ್ಷೆಯನ್ನು ತಿರಸ್ಕರಿಸುವನು, ಗದರಿಕೆಯನ್ನು ಗಮನಿಸುವವನು ಜಾಣನು.

ಜ್ಞಾನವಂತನಾದ ಮಗನು ತಂದೆಯನ್ನು ಉಲ್ಲಾಸಗೊಳಿಸುವನು, ಜ್ಞಾನಹೀನನು ತಾಯಿಯನ್ನು ತಿರಸ್ಕರಿಸುವನು.

ಜಾಣನಾದ ಆಳು ಮಾನಕಳೆದ ಮನೆಮಗನ ಮೇಲೆ ಅಧಿಕಾರಮಾಡುವನು, ಮನೆಮಕ್ಕಳೊಂದಿಗೆ ಬಾಧ್ಯತೆಯನ್ನು ಹೊಂದುವನು.

ಮಕ್ಕಳ ಸಂತತಿಯವರು ವೃದ್ಧರಿಗೆ ಕಿರೀಟ, ತಂದೆತಾಯಿಗಳು ಮಕ್ಕಳಿಗೆ ಭೂಷಣ.

ಮಿತ್ರನ ಪ್ರೀತಿಯು ನಿರಂತರ, ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.

ಜ್ಞಾನಹೀನನಾದ ಮಗನು ತಂದೆಗೆ ಕಿರಿಕಿರಿ, ತಾಯಿಗೆ ಕರಕರೆ.

ಪತ್ನಿಲಾಭವು ರತ್ನಲಾಭ, ಅದು ಯೆಹೋವನ ಅನುಗ್ರಹವೇ.

ಜ್ಞಾನಹೀನನಾದ ಮಗನು ತಂದೆಗೆ ಹಾನಿ, ಜಗಳವಾಡುವ ಹೆಂಡತಿಯು ತಟತಟನೆ ತೊಟ್ಟಿಕ್ಕುವ ಹನಿ. ಮನೆಮಾರು, ಆಸ್ತಿಪಾಸ್ತಿಯು ಪೂರ್ವಿಕರಿಂದ ದೊರಕುವವು, ವಿವೇಕಿನಿಯಾದ ಹೆಂಡತಿಯು ಯೆಹೋವನ ಅನುಗ್ರಹವೇ.

ಬುದ್ಧಿ ಬರುವುದೆಂಬ ನಿರೀಕ್ಷೆಯಿಂದ ಮಗನನ್ನು ಶಿಕ್ಷಿಸು, ಹಾಳುಮಾಡಲು ಮನಸ್ಸು ಮಾಡಬೇಡ,

ತಂದೆಯನ್ನು ಹೊಡೆದು, ತಾಯಿಯನ್ನು ಓಡಿಸುವ ಮಗನು, ನಾಚಿಕೆಯನ್ನು ಮತ್ತು ಅವಮಾನವನ್ನು ಉಂಟುಮಾಡುವನು.

ಸದ್ಧರ್ಮಿಯು ನಿರ್ದೋಷವಾಗಿ ನಡೆಯುವನು, ಅವನು ಗತಿಸಿದ ಮೇಲೆಯೂ ಅವನ ಮಕ್ಕಳು ಭಾಗ್ಯವಂತರು.

ಒಬ್ಬ ಹುಡುಗನಾದರೂ ಶುದ್ಧವೂ, ಸತ್ಯವೂ ಆದ ನಡತೆಯಿಂದಲೇ, ತನ್ನ ಗುಣವನ್ನು ತೋರ್ಪಡಿಸಿಕೊಳ್ಳುವನು.

ತಂದೆಯನ್ನಾಗಲಿ ಅಥವಾ ತಾಯಿಯನ್ನಾಗಲಿ ಶಪಿಸುವವನ ದೀಪವು, ಮಧ್ಯರಾತ್ರಿಯ ಅಂಧಕಾರದಲ್ಲಿ ಆರಿಹೋಗುವುದು.

ಮೊದಲು ಬೇಗನೆ ಬಾಚಿಕೊಂಡ ಸ್ವತ್ತು, ಕೊನೆಯಲ್ಲಿ ಕಳೆದು ಹೋಗುವುದು.

ಮನೆಯಲ್ಲಿ ಜಗಳಗಂಟಿಯ ಜೊತೆಯಲ್ಲಿರುವುದಕ್ಕಿಂತಲೂ, ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವುದೇ ಲೇಸು.

ಕಾಡುವ ಜಗಳಗಂಟಿಯ ಸಹವಾಸಕ್ಕಿಂತಲೂ, ಕಾಡಿನ ವಾಸವೇ ಲೇಸು.

ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಮಕ್ಕಳನ್ನು ಶಿಕ್ಷಿಸು, ಮುಪ್ಪಿನಲ್ಲಿಯೂ ಓರೆಯಾಗರು.

ಮೂರ್ಖತನವು ಮಕ್ಕಳ ಮನಸ್ಸಿಗೆ ಸಹಜ, ಆದರೆ ಶಿಕ್ಷಕನ ಬೆತ್ತವು ಅದನ್ನು ತೊಲಗಿಸುವುದು.

ಹುಡುಗನ ಶಿಕ್ಷೆಗೆ ಹಿಂತೆಗೆಯಬೇಡ, ಅವನು ಬೆತ್ತದ ಏಟಿಗೆ ಸಾಯನು. ಬೆತ್ತದಿಂದ ಹೊಡೆ, ಅವನ ಆತ್ಮವನ್ನು ಪಾತಾಳಕ್ಕೆ ಬೀಳದಂತೆ ಕಾಪಾಡು. ಕಂದಾ, ನಿನ್ನ ಮನಸ್ಸಿಗೆ ಜ್ಞಾನವುಂಟಾದರೆ ನನ್ನ ಮನಸ್ಸಿಗೂ ಉಲ್ಲಾಸವಾಗುವುದು. ಹೌದು, ನಿನ್ನ ತುಟಿಗಳು ನೀತಿಯ ನುಡಿಗಳನ್ನಾಡಿದರೆ ನನ್ನ ಅಂತರಾತ್ಮವು ಹಿಗ್ಗುವುದು.

ಹೆತ್ತ ತಂದೆಯ ಮಾತಿಗೆ ಕಿವಿಗೊಡು, ಮುಪ್ಪಿನಲ್ಲಿಯೂ ತಾಯಿಯನ್ನು ಅಸಡ್ಡೆಮಾಡಬೇಡ. ಸತ್ಯವನ್ನು ಎಂದರೆ ಜ್ಞಾನ, ಸುಶಿಕ್ಷೆ, ವಿವೇಕಗಳನ್ನು ಕೊಂಡುಕೋ, ಮಾರಿ ಬಿಡಬೇಡ. ಧರ್ಮಿಯ ತಂದೆಯು ಅತಿ ಸಂತೋಷಪಡುವನು, ಜ್ಞಾನಿಯನ್ನು ಹೆತ್ತವನು ಅವನಲ್ಲಿ ಆನಂದಿಸುವನು. ನಿನ್ನ ತಂದೆತಾಯಿಗಳು ಉಲ್ಲಾಸಗೊಳ್ಳಲಿ, ನಿನ್ನನ್ನು ಹೆತ್ತವಳು ಆನಂದಪಡಲಿ. ಕಂದಾ, ನಿನ್ನ ಹೃದಯವನ್ನು ನನಗೆ ಕೊಡು, ನಿನ್ನ ಕಣ್ಣುಗಳು ನನ್ನ ಮಾರ್ಗಗಳಲ್ಲಿ ಆನಂದಿಸಲಿ.

ಮನೆಯಲ್ಲಿ ಜಗಳಗಂಟಿಯ ಜೊತೆಯಲ್ಲಿರುವುದಕ್ಕಿಂತಲೂ, ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವುದೇ ಲೇಸು.

ದೊಡ್ಡ ಮಳೆಯ ದಿನದಲ್ಲಿ ತಟತಟನೆ ತೊಟ್ಟಿಕ್ಕುವ ಹನಿ, ತಂಟೆಮಾಡುವ ಹೆಂಡತಿ, ಎರಡೂ ಒಂದೇ.

ಧರ್ಮೋಪದೇಶವನ್ನು ಕೈಕೊಳ್ಳುವವನು ವಿವೇಕಿಯಾದ ಮಗನು, ಹೊಟ್ಟೆಬಾಕರ ಗೆಳೆಯನು ತಂದೆಯ ಮಾನವನ್ನು ಕಳೆಯುವನು.

ದೋಷವಲ್ಲವೆಂದು ತಾಯಿತಂದೆಗಳ ಧನವನ್ನು ಕದಿಯುವವನು, ಕೆಡುಕನಿಗೆ ಜೊತೆಗಾರನು.

ಬೆತ್ತ ಮತ್ತು ಬೆದರಿಕೆಗಳಿಂದ ಜ್ಞಾನವುಂಟಾಗುವುದು, ಶಿಕ್ಷಿಸದೆ ಬಿಟ್ಟ ಹುಡುಗನು ತಾಯಿಯ ಮಾನವನ್ನು ಕಳೆಯುವನು.

ಮಗನನ್ನು ಶಿಕ್ಷಿಸು, ಅವನು ನಿನ್ನನ್ನು ಸಂತೋಷಪಡಿಸುವನು, ಅವನೇ ನಿನ್ನ ಆತ್ಮಕ್ಕೆ ಮೃಷ್ಟಾನ್ನವಾಗುವನು.

ತಾಯಿಗೆ ಶುಭವನ್ನು ಕೋರದೆ, ತಂದೆಯನ್ನು ಶಪಿಸುವ ಒಂದು ತರದವರು ಉಂಟು. ತಮ್ಮ ಕೊಳೆಯನ್ನು ತೊಳಕೊಳ್ಳದೆ ತಾವೇ ಶುದ್ಧರೆಂದು, ಎಣಿಸಿಕೊಳ್ಳುವ ಬೇರೊಂದು ತರದವರು ಉಂಟು. ಕಣ್ಣುರೆಪ್ಪೆಗಳನ್ನೆತ್ತಿಕೊಂಡು, ಎಷ್ಟೋ ಮೇಲೆ ಎಷ್ಟೋ ಮೇಲೆ ಮೇಲೆಯೇ ನೋಡುತ್ತಿರುವ ಇನ್ನೊಂದು ತರದವರು ಉಂಟು.

ತಂದೆಯನ್ನು ಹಾಸ್ಯಮಾಡಿ ತಾಯಿಯ ಅಪ್ಪಣೆಯನ್ನು, ಧಿಕ್ಕರಿಸುವವನ ಕಣ್ಣನ್ನು, ಹಳ್ಳಕೊಳ್ಳದ ಕಾಗೆಗಳು ಕುಕ್ಕುವವು, ರಣಹದ್ದುಗಳು ತಿಂದುಬಿಡುವವು.

ಮೂರು ವಿಷಯಗಳು ನನ್ನ ಬುದ್ಧಿಯನ್ನು ಮೀರಿವೆ, ಹೌದು, ನಾಲ್ಕನ್ನು ಗ್ರಹಿಸಲಾರೆನು; ಯಾವುವೆಂದರೆ, ಆಕಾಶದಲ್ಲಿ ಹದ್ದಿನ ಹಾದಿ, ಬಂಡೆಯ ಮೇಲೆ ಸರ್ಪದ ಸರಣಿ, ಸಾಗರದ ನಡುವೆ ಹಡಗಿನ ಮಾರ್ಗ, ಸ್ತ್ರೀಯಲ್ಲಿ ಪುರುಷನ ಪದ್ಧತಿ, ಇವೇ.

ಏನು, ಕಂದಾ? ನನ್ನ ಗರ್ಭಪುತ್ರನೇ, ಏನು, ನನ್ನ ಹರಕೆಯ ಮಗುವೇ, ನಾನು ಏನು ಹೇಳಲಿ? ನಿನ್ನ ತ್ರಾಣವನ್ನು ಸ್ತ್ರೀಯರಿಗೆ ಒಪ್ಪಿಸಬೇಡ, ರಾಜರಿಗೆ ವಿನಾಶಕರವಾದ ದಾರಿಗೆ ತಿರುಗಬೇಡ.

ಗುಣವತಿಯಾದ ಸತಿಯು ಎಲ್ಲಿ ಸಿಕ್ಕುವಳು? ಆಕೆಯು ಹವಳಕ್ಕಿಂತಲೂ ಬಹೂ ಅಮೂಲ್ಯಳು. ಪತಿಯ ಹೃದಯವು ಆಕೆಯಲ್ಲಿ ಭರವಸವಿಡುವುದು, ಅವನು ಕೊಳ್ಳೆ ಕೊಳ್ಳೆಯಾಗಿ ಸಂಪಾದಿಸುವನು. ಆಕೆಯು ಜೀವಮಾನದಲ್ಲೆಲ್ಲಾ ಅವನಿಗೆ ಅಹಿತವನ್ನು ಮಾಡದೆ, ಹಿತವನ್ನೇ ಮಾಡುತ್ತಿರುವಳು. ಉಣ್ಣೆಯನ್ನೂ, ಸೆಣಬನ್ನೂ ಹುಡುಕಿ ತಂದು, ಕೈಕೆಲಸವನ್ನು ಆಸಕ್ತಿಯಿಂದ ಮಾಡುವಳು. ವ್ಯಾಪಾರದ ಹಡಗುಗಳಂತೆ, ದೂರದಿಂದ ಬೇಕಾದ ಆಹಾರವನ್ನು ತರುವಳು. ಇನ್ನೂ ಕತ್ತಲಿರುವಾಗಲೇ ಎದ್ದು, ಮನೆಯವರಿಗೆ ಆಹಾರವನ್ನು, ನೀಡುವಳು ದಾಸಿಯರಿಗೆ ದಿನದ ಕೆಲಸಗಳನ್ನು ಹಂಚುವಳು. ಹೊಲವನ್ನು ನೋಡಿ ಯೋಚಿಸಿ ಕೊಂಡುಕೊಳ್ಳುವಳು, ತನ್ನ ಕೈಗೆಲಸದ ಲಾಭದಿಂದ ದ್ರಾಕ್ಷಿತೋಟವನ್ನು ಮಾಡಿಸುವಳು. ನಡುವಿನ ಬಲವೆಂಬ ಪಟ್ಟಿಯನ್ನು ಕಟ್ಟಿಕೊಂಡು, ತೋಳುಗಳನ್ನು ಶಕ್ತಿಗೊಳಿಸುವಳು. ವಿವೇಚಿಸಿ ಬಹುಲಾಭವಾಯಿತೆಂದು ತಿಳುಕೊಳ್ಳುವಳು, ಆಕೆಯ ದೀಪವು ರಾತ್ರಿಯಲ್ಲೆಲ್ಲಾ ಆರದು. ರಾಟೆಯ ಮೇಲೆ ಕೈ ಹಾಕಿ, ಕದರನ್ನು ಹಿಡಿಯುವಳು. ಬಡವರಿಗಾಗಿ ಕೈ ಬಿಚ್ಚಿ, ದಿಕ್ಕಿಲ್ಲದವರಿಗೆ ಕೈ ನೀಡುವಳು. ಮನೆಯವರೆಲ್ಲರಿಗೂ ಸಕಲಾತಿಯನ್ನು ಹೊದಿಸಿರುವುದರಿಂದ, ಅವರ ವಿಷಯವಾಗಿ ಆಕೆಗೆ ಹಿಮದ ಭಯವಿಲ್ಲ. ತನಗಾಗಿ ರತ್ನಗಂಬಳಿಗಳನ್ನು ಮಾಡುವಳು, ಆಕೆಯ ಉಡುಪು ನಾರುಮಡಿ, ರಕ್ತಾಂಬರ. ಆಕೆಯ ಪತಿಯು ನ್ಯಾಯಸ್ಥಾನದಲ್ಲಿ, ದೇಶದ ಹಿರಿಯರ ಮಧ್ಯದಲ್ಲಿ ಕುಳಿತಿರುವಾಗ ಪ್ರಸಿದ್ಧನಾಗಿ ಕಾಣುವನು. ಹಚ್ಚಡಗಳನ್ನು ನೆಯ್ದು ಮಾರಾಟಮಾಡುವಳು, ನಡುಕಟ್ಟುಗಳನ್ನು ವರ್ತಕನಿಗೆ ಒದಗಿಸುವಳು. ಬಲವನ್ನು, ತೇಜಸ್ಸನ್ನು ಹೊದ್ದುಕೊಂಡಿರುವಳು, ಭವಿಷ್ಯತ್ತಿನ ಭಯವಿಲ್ಲದೆ ನಗುತ್ತಿರುವಳು. ಬಾಯಿದೆರೆದು ಜ್ಞಾನವನ್ನು ತೋರ್ಪಡಿಸುವಳು. ಆಕೆಯ ನಾಲಿಗೆಯು ಬುದ್ಧಿಯನ್ನು ಪ್ರೀತಿಪೂರ್ವಕವಾಗಿ ಹೇಳುವುದು. ಸೋಮಾರಿತನದ ಅನ್ನವನ್ನು ತಿನ್ನದೆ, ಗೃಹಕೃತ್ಯಗಳನ್ನೆಲ್ಲಾ ನೋಡಿಕೊಳ್ಳುವಳು. ಮಕ್ಕಳು ಎದ್ದುನಿಂತು ಆಕೆಯನ್ನು “ಧನ್ಯಳು” ಎಂದು ಹೇಳುವರು. ಪತಿಯು ಸಹ, “ಬಹುಮಂದಿ ಸ್ತ್ರೀಯರು ಗುಣವತಿಯರಾಗಿ ನಡೆದಿದ್ದಾರೆ, ಅವರೆಲ್ಲರಿಗಿಂತಲೂ ನೀನೇ ಶ್ರೇಷ್ಠಳು” ಎಂದು ಆಕೆಯನ್ನು ಕೊಂಡಾಡುವನು. ಸೌಂದರ್ಯವು ನೆಚ್ಚತಕ್ಕದ್ದಲ್ಲ, ಲಾವಣ್ಯವು ನೆಲೆಯಲ್ಲ, ಯೆಹೋವನಲ್ಲಿ ಭಯಭಕ್ತಿಯುಳ್ಳವಳೇ ಸ್ತೋತ್ರಪಾತ್ರಳು. ಆಕೆಯ ಕೈಕೆಲಸಕ್ಕೆ ಪ್ರತಿಫಲವನ್ನು ಸಲ್ಲಿಸಿರಿ, ಆಕೆಯ ಕಾರ್ಯಗಳೇ ಪುರದ್ವಾರಗಳಲ್ಲಿ ಆಕೆಯನ್ನು ಪ್ರಶಂಸಿಸಲಿ.

ಒಬ್ಬನಿಗಿಂತ ಇಬ್ಬರು ಕೆಲಸ ಮಾಡುವುದು ಒಳ್ಳೆಯದು. ಅವರ ಪ್ರಯಾಸಕ್ಕೆ ಒಳ್ಳೆಯ ಲಾಭವನ್ನು ಸಂಪಾದಿಸಬಹುದು. ಒಬ್ಬನು ಬಿದ್ದರೆ, ಇನ್ನೊಬ್ಬನು ತನ್ನ ಸ್ನೇಹಿತನನ್ನು ಮೇಲಕ್ಕೆ ಎಬ್ಬಿಸುವನು. ಒಬ್ಬನು ಒಬ್ಬಂಟ್ಟಿಗನಾಗಿ ಬಿದ್ದರೆ, ಅವನನ್ನು ಮೇಲಕ್ಕೆ ಎಬ್ಬಿಸುವವನು ಯಾರೂ ಇಲ್ಲ, ಅವನ ಗತಿ ದುರ್ಗತಿಯೇ. ಮತ್ತು ಇಬ್ಬರು ಜೊತೆಯಲ್ಲಿ ಮಲಗಿಕೊಂಡರೆ ಅವರಿಗೆ ಬೆಚ್ಚಗಾಗುತ್ತದೆ, ಆದರೆ ಒಬ್ಬನು ಹೇಗೆ ಬೆಚ್ಚಗಿರುತ್ತಾನೆ? ಒಬ್ಬನನ್ನು ಮತ್ತೊಬ್ಬನು ಜಯಿಸಬಹುದು, ಆದರೆ ಗೆದ್ದವನನ್ನು ಇಬ್ಬರು ಎದುರಿಸಿ ನಿಲ್ಲಿಸಬಹುದು. ಮೂರು ಹುರಿಯ ಹಗ್ಗ ಬೇಗನೆ ಕಿತ್ತುಹೋಗುವುದಿಲ್ಲ.

ಲೋಕದೊಳಗೆ ದೇವರು ನಿನಗೆ ನೇಮಿಸಿರುವ ವ್ಯರ್ಥ ಜೀವಮಾನದ ವ್ಯರ್ಥ ದಿನಗಳೆಲ್ಲಾ ನಿನ್ನ ಪ್ರಿಯಪತ್ನಿಯೊಡನೆ ಸುಖದಿಂದ ಬದುಕು. ನಿನ್ನ ಬಾಳಿನಲ್ಲಿಯೂ, ನೀನು ಲೋಕದೊಳಗೆ ಪಡುವ ಪ್ರಯಾಸದಲ್ಲಿಯೂ ಇದೇ ನಿನ್ನ ಪಾಲಾಗಿದೆ.

ಗಾಳಿಯ ಮಾರ್ಗವನ್ನೂ, ಗರ್ಭಿಣಿಯ ಗರ್ಭದಲ್ಲಿ ಎಲುಬುಗಳು ಬೆಳೆಯುವ ರೀತಿಯನ್ನೂ, ನೀನು ಹೇಗೆ ತಿಳಿಯುವುದಿಲ್ಲವೋ ಹಾಗೆಯೇ, ಸರ್ವಶಕ್ತನಾದ ದೇವರ ಕಾರ್ಯವನ್ನು ಅರಿಯುವುದಿಲ್ಲ.

ಕಷ್ಟದ ದಿನಗಳು ಬರುವುದಕ್ಕೆ ಮೊದಲು, “ಇವುಗಳಲ್ಲಿ ನನಗೆ ಸಂತೋಷವಿಲ್ಲ” ಎಂದು, ನೀನು ಹೇಳುವ ವರ್ಷಗಳು ಸಮೀಪಿಸುವುದರೊಳಗಾಗಿ, ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು.

ಚೀಯೋನಿನ ಮಹಿಳೆಯರೇ, ಹೊರಟು ಬನ್ನಿ ರಾಜನಾದ ಸೊಲೊಮೋನನನ್ನು ನೋಡ ಬನ್ನಿ. ಅವನು ವಿವಾಹ ದಿನದ ಉತ್ಸವದಂದು ಆತನ ತಾಯಿ ಆತನಿಗೆ ತೊಡಿಸಿದ ಕಿರೀಟವನ್ನು ಆತ ಧರಿಸಿರುವುದನ್ನು ನೋಡಬನ್ನಿ!

ಆದಕಾರಣ ಕರ್ತನು ತಾನೇ ನಿಮಗೆ ಒಂದು ಗುರುತನ್ನು ಕೊಡುವನು. ಇಗೋ ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಒಬ್ಬ ಮಗನನ್ನು ಹಡೆದು ಅವನಿಗೆ ಇಮ್ಮಾನುವೇಲ್ ಎಂದು ಹೆಸರಿಡುವರು.

ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವುದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರೂ, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬುದು ಆತನ ಹೆಸರು.

ಹೆರಿಗೆ ಹತ್ತಿರವಾದ ಗರ್ಭಿಣಿಯು ಯಾತನೆಪಡುತ್ತಾ, ಬೇನೆಯಿಂದ ಕೂಗಿ ಅಳುವಂತೆ ಯೆಹೋವನೇ, ನಾವು ನಿನ್ನ ಮುಂದೆ ಸಹಾಯಕ್ಕಾಗಿ ಕೂಗಿ ದುಃಖಿಸಿದ್ದೇವೆ. ನಾವು ಗರ್ಭಧರಿಸಿ, ವೇದನೆಪಟ್ಟು ಗಾಳಿಯನ್ನು ಹಡೆದಂತಾಯಿತು, ದೇಶಕ್ಕೆ ನಮ್ಮಿಂದ ಯಾವ ಉದ್ಧಾರವೂ ಆಗಲಿಲ್ಲ, ನಮ್ಮೊಳಗೆ ಯಾವ ಭೂನಿವಾಸಿಗಳೂ ಹುಟ್ಟಲಿಲ್ಲ.

ಜೀವಂತನು, ಜೀವಂತನೇ ನಿನ್ನನ್ನು ಸ್ತುತಿಸುವನು, ಹೌದು, ಜೀವಂತನಾದ ನಾನೇ ಈ ಹೊತ್ತು ನಿನ್ನನ್ನು ಹೊಗಳುವೆನು. ತಂದೆಯು ಮಕ್ಕಳಿಗೆ ನಿನ್ನ ಸತ್ಯಸಂಧತೆಯನ್ನು ಬೋಧಿಸುವನು.

ದ್ವೀಪನಿವಾಸಿಗಳೇ, ನನ್ನ ಕಡೆಗೆ ಕಿವಿಗೊಡಿರಿ, ದೂರದ ಜನಾಂಗಗಳೇ, ಆಲಿಸಿರಿ! ನಾನು ಗರ್ಭದಲ್ಲಿದ್ದಾಗಲೇ ಯೆಹೋವನು ನನ್ನನ್ನು ಕರೆದನು, ತಾಯಿಯ ಉದರದಲ್ಲಿದ್ದಂದಿನಿಂದಲೂ ನನ್ನ ಹೆಸರನ್ನು ಹೇಳುತ್ತಿದ್ದಾನೆ.

ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ? ಒಂದು ವೇಳೆ ಮರೆತರು ಮರೆತಾಳು, ಆದರೆ ನಾನು ನಿನ್ನನ್ನು ಮರೆಯುವುದಿಲ್ಲ.

“ನಿನ್ನ ಸೃಷ್ಟಿಕರ್ತನೇ ನಿನ್ನ ಪತಿ, ಆತನ ಹೆಸರು ಸೇನಾಧೀಶ್ವರನಾದ ಯೆಹೋವ; ಇಸ್ರಾಯೇಲಿನ ಸದಮಲಸ್ವಾಮಿಯು ನಿನ್ನ ನ್ಯಾಯಸ್ಥಾಪಕನಾಗಿದ್ದಾನೆ; ಸರ್ವಲೋಕದ ದೇವರೆಂಬ ನಾಮಧೇಯವನ್ನು ಹೊಂದಿರುವನು. ನೀನು ತ್ಯಜಿಸಿದ ಮನನೊಂದ ಹೆಂಡತಿ, ಹೌದು, ತ್ಯಜಿಸಲ್ಪಟ್ಟವಳಾದ ನನ್ನ ಯೌವನಕಾಲದ ಪತ್ನಿ ಎಂದು ಯೆಹೋವನು ನಿನ್ನನ್ನು ಕನಿಕರಿಸಿ ಕರೆದಿದ್ದಾನೆ” ಎಂಬುದು ನಿನ್ನ ದೇವರ ನುಡಿ.

ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು, ಅವರಿಗೆ ಅಧಿಕ ಸುಕ್ಷೇಮವಾಗುವುದು.

ನಾನು ಯೆಹೋವನಲ್ಲಿ ಪರಮಾನಂದಪಡುವೆನು, ನನ್ನ ಆತ್ಮವು ನನ್ನ ದೇವರಲ್ಲಿ ಹಿಗ್ಗುವುದು. ವರನು ಬಾಸಿಂಗವನ್ನು ಧರಿಸಿಕೊಳ್ಳುವಂತೆಯೂ, ವಧುವು ತನ್ನನ್ನು ಆಭರಣಗಳಿಂದ ಅಲಂಕರಿಸಿಕೊಳ್ಳುವ ಹಾಗೂ, ಆತನು ನನಗೆ ರಕ್ಷಣೆಯೆಂಬ ವಸ್ತ್ರವನ್ನು ಹೊದಿಸಿ, ಧರ್ಮವೆಂಬ ನಿಲುವಂಗಿಯನ್ನು ತೊಡಿಸಿದ್ದಾನೆ.

ಯುವಕನು ಯುವತಿಯನ್ನು ವರಿಸುವಂತೆ, ನಿನ್ನ ಮಕ್ಕಳು ನಿನ್ನನ್ನು ವರಿಸುವರು; ವರನು ವಧುವಿನಲ್ಲಿ ಆನಂದಿಸುವ ಹಾಗೆ ನಿನ್ನ ದೇವರು ನಿನ್ನಲ್ಲಿ ಆನಂದಿಸುವನು.

ತಾಯಿ ಮಗನನ್ನು ಸಂತೈಸುವ ಪ್ರಕಾರ ನಾನು ನಿಮ್ಮನ್ನು ಸಂತೈಸುವೆನು; ಯೆರೂಸಲೇಮಿನಲ್ಲೇ ನಿಮಗೆ ದುಃಖಶಮನವಾಗುವುದು.

“ನಾನು ನಿನ್ನನ್ನು ಗರ್ಭದಲ್ಲಿ ರೂಪಿಸುವುದಕ್ಕೆ ಮುಂಚೆ ತಿಳಿದಿದ್ದೆನು; ನೀನು ಉದರದಿಂದ ಬರುವುದಕ್ಕೆ ಮೊದಲೇ ನಿನ್ನನ್ನು ಪ್ರತಿಷ್ಠಿಸಿದ್ದೆನು. ಜನಾಂಗಗಳಿಗೆ ಪ್ರವಾದಿಯನ್ನಾಗಿ ನಿನ್ನನ್ನು ನೇಮಿಸಿದ್ದೇನೆ” ಎಂಬ ವಾಕ್ಯವನ್ನು ದಯಪಾಲಿಸಿದನು.

ಯೆಹೋವನು ಹೀಗೆನ್ನುತ್ತಾನೆ, “ಗಂಡನು ತ್ಯಜಿಸಿದವಳು ಅವನಿಂದ ಹೊರಟು ಮತ್ತೊಬ್ಬನ ಹೆಂಡತಿಯಾದ ಮೇಲೆ, ಅವಳನ್ನು ಮೊದಲ ಗಂಡನು ತಿರುಗಿ ಸೇರಿಸಿಕೊಂಡಾನೇ? ಸೇರಿಸಿಕೊಂಡರೆ ಆ ದೇಶವು ಕೇವಲ ಅಪವಿತ್ರವಾಗಿ ಹೋಗುವುದಲ್ಲವೇ? ಹೀಗಿರಲು ಬಹುಮಂದಿಯೊಡನೆ ವ್ಯಭಿಚಾರ ಮಾಡಿದ ನೀನು ನನ್ನ ಬಳಿಗೆ ಹಿಂದಿರುಗಿ ಬರುತ್ತಿಯಾ?

ಭ್ರಷ್ಟಳಾದ ಇಸ್ರಾಯೇಲ್ ನನಗೆ ವಿಮುಖಳಾಗಿ ವ್ಯಭಿಚಾರ ಮಾಡಿದ ಕಾರಣದಿಂದಲೇ ನಾನು ಅವಳನ್ನು ನಿರಾಕರಿಸಿ, ತ್ಯಾಗಪತ್ರ ಕೊಟ್ಟದ್ದನ್ನು ಯೆಹೂದವೆಂಬ ದ್ರೋಹಿಯಾದ ಅವಳ ತಂಗಿಯು ನೋಡಿಯೂ, ಅಂಜದೆಯೂ ತಾನೂ ಹೋಗಿ ವ್ಯಭಿಚಾರವನ್ನು ನಡೆಸಿದಳು.

ಭ್ರಷ್ಟರಾದ ಮಕ್ಕಳೇ, ತಿರುಗಿಕೊಳ್ಳಿರಿ, ನಾನು ನಿಮಗೆ ಪತಿ. ಒಂದು ಪಟ್ಟಣಕ್ಕೆ ಒಬ್ಬನಂತೆಯೂ, ಗೋತ್ರಕ್ಕೆ ಇಬ್ಬರಂತೆಯೂ ಆರಿಸಿ ಚೀಯೋನಿಗೆ ಕರೆತರುವೆನು.

ಪರದೇಶಿಯನ್ನಾಗಲಿ, ಅನಾಥನನ್ನಾಗಲಿ ಅಥವಾ ವಿಧವೆಯನ್ನಾಗಲಿ ಹಿಂಸಿಸದೆ, ಈ ಸ್ಥಳದಲ್ಲಿ ನಿರ್ದೋಷಿಗಳ ರಕ್ತವನ್ನು ಸುರಿಸದೆ, ನಿಮಗೆ ಹಾನಿಕರವಾದ ಅನ್ಯದೇವತೆಗಳಲ್ಲಿ ಭಕ್ತಿ ಇಡದೆ ಇದ್ದರೆ, ನಾನು ನಿಮ್ಮನ್ನು ಈ ಸ್ಥಳದಲ್ಲಿ, ನಾನೇ ನಿಮ್ಮ ಪೂರ್ವಿಕರಿಗೆ ಶಾಶ್ವತವಾಗಿ ದಯಪಾಲಿಸಿದ ಈ ದೇಶದಲ್ಲಿ ನೆಲೆಗೊಳಿಸುವೆನು.

ಸಂಸಾರಿಗಳಾಗಿ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆಯಿರಿ. ನಿಮ್ಮ ಗಂಡುಮಕ್ಕಳಿಗೆ ಹೆಣ್ಣುಮಕ್ಕಳನ್ನು ತೆಗೆದುಕೊಳ್ಳಿರಿ, ನಿಮ್ಮ ಹೆಣ್ಣುಮಕ್ಕಳಿಗೆ ಗಂಡುಮಕ್ಕಳನ್ನು ಕೊಡಿರಿ; ಅವರೂ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆಯಲಿ; ನೀವು ಇರುವಲ್ಲಿಯೇ ವೃದ್ಧಿಯಾಗಿರಿ, ಕೊರತೆ ಅನುಭವಿಸದಿರಿ.

“ನೀನು ನಿನ್ನ ಯೌವನ ಕಾಲವನ್ನು ಜ್ಞಾಪಕಮಾಡಿಕೊಳ್ಳದೆ, ಈ ದುಷ್ಕೃತ್ಯಗಳನ್ನೆಲ್ಲಾ ನಡೆಸಿ ನನ್ನನ್ನು ರೇಗಿಸಿದ್ದರಿಂದ ಇಗೋ, ನಾನು ನಿನ್ನ ದುರ್ಮಾರ್ಗದ ಫಲವನ್ನು ನಿನ್ನ ತಲೆಗೆ ಕಟ್ಟುವೆನು; ನೀನು ಲೆಕ್ಕವಿಲ್ಲದ ದುರಾಚಾರಗಳನ್ನು ನಡೆಸಿದ್ದಲ್ಲದೆ ಈ ಅಸಹ್ಯ ಕಾರ್ಯವನ್ನೂ ಮಾಡಿರುವೆ” ಇದು ಕರ್ತನಾದ ಯೆಹೋವನ ನುಡಿ. “ಆಹಾ, ಗಾದೆಗಳಲ್ಲಿ ಜಾಣರು ‘ತಾಯಿಯಂತೆ ಮಗಳು’ ಎಂಬ ಗಾದೆಯನ್ನು ನಿನ್ನ ವಿಷಯವಾಗಿ ನುಡಿಯುವರು.

ಪಾಪ ಮಾಡುವವನೇ ಸಾಯುವನು; ಮಗನು ತಂದೆಯ ದೋಷಫಲವನ್ನು ಅನುಭವಿಸನು; ಶಿಷ್ಟನ ಶಿಷ್ಟತನದ ಫಲವು ಶಿಷ್ಟನದೇ, ದುಷ್ಟನ ದುಷ್ಟತನದ ಫಲವು ದುಷ್ಟನದೇ.

ಆ ಮೇಲೆ ನಾನು ಅರಣ್ಯದಲ್ಲಿ ಅವರ ಸಂತಾನದವರಿಗೆ, “ನೀವು ನಿಮ್ಮ ತಂದೆಗಳ ಆಜ್ಞೆಗಳನ್ನು ಅನುಸರಿಸದೆ, ಅವರ ವಿಧಿಗಳನ್ನು ಕೈಕೊಳ್ಳದೆ, ಅವರ ವಿಗ್ರಹಗಳಿಂದ ನಿಮ್ಮನ್ನು ಹೊಲಸು ಮಾಡಿಕೊಳ್ಳದೆ ಇರಬೇಕು.

ನಿನ್ನವರು ತಾಯಿ ತಂದೆಗಳನ್ನು ತುಚ್ಛೀಕರಿಸಿದ್ದಾರೆ, ನಿನ್ನವರು ವಿದೇಶಿಗಳನ್ನು ಬಾಧಿಸಿದ್ದಾರೆ, ನಿನ್ನವರು ಅನಾಥರನ್ನೂ, ವಿಧವೆಯರನ್ನೂ ಹಿಂಸಿಸಿದ್ದಾರೆ.

ಯಾಜಕರು ವಿಧವೆಯನ್ನಾಗಲಿ, ಗಂಡನಿಂದ ಬಿಡಲ್ಪಟ್ಟವಳನ್ನಾಗಲಿ ಮದುವೆಯಾಗಬಾರದು; ಆದರೆ ಇಸ್ರಾಯೇಲ್ ವಂಶದ ಕನ್ಯೆಯನ್ನಾಗಲಿ, ಯಾಜಕನ ವಿಧವೆಯನ್ನಾಗಲಿ ಮದುವೆ ಮಾಡಿಕೊಳ್ಳಬಹುದು.

ನಾನು ನಿನ್ನನ್ನು ಶಾಶ್ವತವಾಗಿ ವರಿಸುವೆನು; ಹೌದು, ನೀತಿ, ನ್ಯಾಯ, ಪ್ರೀತಿ ಮತ್ತು ದಯೆಗಳಿಂದ ನಿನ್ನನ್ನು ವರಿಸುವೆನು. ನಾನು ನಿನ್ನನ್ನು ನಂಬಿಕೆಯಿಂದ ವರಿಸಲು ನೀನು ಯೆಹೋವನಾದ ನನ್ನನ್ನು ತಿಳಿದುಕೊಳ್ಳುವೆ.”

ಇದನ್ನು ನಿಮ್ಮ ಮಕ್ಕಳಿಗೆ ತಿಳಿಸಿರಿ, ಅವರು ತಮ್ಮ ಮಕ್ಕಳಿಗೆ ತಿಳಿಸಲಿ ಮತ್ತು ಅವರು ಮುಂದಿನ ತಲೆಮಾರಿನವರಿಗೆ ತಿಳಿಸಲಿ.

ಯೌವನದ ಪತಿಗಾಗಿ ದುಃಖದಿಂದ ಗೋಣಿತಟ್ಟನ್ನು ಧರಿಸಿಕೊಂಡು ಗೋಳಾಡುವ ಕನ್ಯೆಯಂತೆ ಗೋಳಾಡಿರಿ.

ತರುವಾಯ ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು. ನಿಮ್ಮ ಪುತ್ರಪುತ್ರಿಯರು ಪ್ರವಾದಿಸುವರು. ನಿಮ್ಮ ಹಿರಿಯರಿಗೆ ಕನಸುಗಳು ಬೀಳುವವು. ನಿಮ್ಮ ಯೌವನಸ್ಥರಿಗೆ ದಿವ್ಯದರ್ಶನಗಳಾಗುವವು.

ಗೊತ್ತುಮಾಡಿಕೊಳ್ಳದೆ ಯಾರಾದರಿಬ್ಬರು ಜೊತೆಯಾಗಿ ನಡೆಯುವುದುಂಟೆ?

ಮಗನು ತಂದೆಯನ್ನು ತುಚ್ಛೀಕರಿಸುತ್ತಾನೆ. ಮಗಳು ತಾಯಿಗೆ ಎದುರೇಳುತ್ತಾಳೆ. ಸೊಸೆಯು ಅತ್ತೆಯನ್ನು ವಿರೋಧಿಸುತ್ತಾಳೆ. ಹೀಗೆ ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು.

“ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, ‘ನಿಷ್ಠೆಯಿಂದ ನ್ಯಾಯತೀರಿಸಿರಿ, ಒಬ್ಬರಿಗೊಬ್ಬರು ಪ್ರೀತಿ, ಕರುಣೆಗಳನ್ನು ತೋರಿಸಿರಿ; ವಿಧವೆ, ಅನಾಥ, ವಿದೇಶಿ, ದರಿದ್ರರಿಗೂ ಅನ್ಯಾಯಮಾಡಬೇಡಿರಿ; ನಿಮ್ಮಲ್ಲಿ ಯಾವನೂ ತನ್ನ ಸಹೋದರನಿಗೆ ಕೇಡನ್ನು ಬಗೆಯದಿರಲಿ.’

“ಇದಕ್ಕೆ ಕಾರಣವೇನೆಂದು ಕೇಳುತ್ತೀರೋ? ನಿನಗೂ, ನಿನ್ನ ಯೌವನ ಪ್ರಾಯದ ಹೆಂಡತಿಗೂ ಆದ ಒಡಂಬಡಿಕೆಗೆ ಯೆಹೋವನೇ ಸಾಕ್ಷಿಯಾಗಿದ್ದಾನಲ್ಲಾ, ನಿನ್ನ ಸಹಚರಿಣಿಯೂ, ನಿನ್ನ ಒಡಂಬಡಿಕೆಯ ಪತ್ನಿಯಾದ ಆಕೆಗೆ ದ್ರೋಹಮಾಡಿದ್ದೀ. ದೇವರು ನಿನ್ನ ಮತ್ತು ನಿನ್ನ ಪತ್ನಿಯ ತನುಮನಗಳನ್ನು ಒಂದು ಮಾಡಿ ಒಡಂಬಡಿಸಲಿಲ್ಲವೇ? ದೇವರ ಉದ್ದೇಶವೇನು? ದೇವರ ಮಕ್ಕಳಾಗಿ ಬಾಳುವ ಸಂತಾನ ದಯಪಾಲಿಸುವ ಉದ್ದೇಶ ಆತನದಾಗಿತ್ತು. ಆದುದರಿಂದ ಮದುವೆಯಾದ ಪತ್ನಿಗೆ ದ್ರೋಹಮಾಡದೆ ಪ್ರತಿಯೊಬ್ಬನೂ ಎಚ್ಚರಿಕೆಯಿಂದಿರಲಿ.” ಇಸ್ರಾಯೇಲಿನ ದೇವರಾದ ಯೆಹೋವನು ಇಂತೆನ್ನುತ್ತಾನೆ, “ನಾನು ಪತ್ನಿತ್ಯಾಗವನ್ನೂ, ಹೆಂಡತಿಗೆ ಅನ್ಯಾಯ ಮಾಡುವವನನ್ನೂ ಹಗೆಮಾಡುತ್ತೇನೆ” ಇದು ಸೇನಾಧೀಶ್ವರನಾದ ಯೆಹೋವನ ನುಡಿ. “ಆದಕಾರಣ ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ, ದ್ರೋಹಮಾಡಬೇಡಿರಿ.”

ಅವನು ತಂದೆಗಳ ಮನಸ್ಸನ್ನು ಮಕ್ಕಳ ಕಡೆಗೂ, ಮಕ್ಕಳ ಮನಸ್ಸನ್ನು ತಂದೆಗಳ ಕಡೆಗೂ ತಿರುಗಿಸುವನು.”

ಅಬ್ರಹಾಮನ ಮಗನಾದ ದಾವೀದನ ಕುಮಾರನಾದ ಯೇಸು ಕ್ರಿಸ್ತನ ವಂಶಾವಳಿ. ಅಬ್ರಹಾಮನ ಮಗನು ಇಸಾಕನು. ಇಸಾಕನ ಮಗನು ಯಾಕೋಬನು. ಯಾಕೋಬನ ಮಗನು ಯೆಹೂದನು, ಅವನ ಅಣ್ಣತಮ್ಮಂದಿರು ಯೆಹೂದನ ಮಕ್ಕಳು. ಯೆಹೂದನಿಗೆ ತಾಮಾರಳಲ್ಲಿ ಪೆರೆಚನು, ಜೆರಹನು ಹುಟ್ಟಿದರು. ಪೆರೆಚನ ಮಗನು ಹೆಚ್ರೋನನು. ಹೆಚ್ರೋನನ ಮಗನು ಅರಾಮನು. ಅರಾಮನ ಮಗನು ಅಮ್ಮಿನಾದಾಬನು. ಅಮ್ಮಿನಾದಾಬನ ಮಗನು ನಹಶೋನನು. ನಹಶೋನನ ಮಗನು ಸಲ್ಮೋನನು. ಸಲ್ಮೋನನ ಮಗನಾದ ಬೋವಜನು ರಾಹಾಬಳಲ್ಲಿ ಹುಟ್ಟಿದವನು. ಬೋವಜನ ಮಗನು ಓಬೇದನು ರೂತಳಲ್ಲಿ ಹುಟ್ಟಿದವನು. ಓಬೇದನ ಮಗನು ಇಷಯನು. ಇಷಯನ ಮಗನು ಅರಸನಾದ ದಾವೀದನು. ದಾವೀದನ ಮಗನಾದ ಸೊಲೊಮೋನನು ಊರೀಯನ ಹೆಂಡತಿಯಲ್ಲಿ ಹುಟ್ಟಿದವನು. ಸೊಲೊಮೋನನ ಮಗನು ರೆಹಬ್ಬಾಮನು. ರೆಹಬ್ಬಾಮನ ಮಗನು ಅಬೀಯನು. ಅಬೀಯನ ಮಗನು ಆಸನು. ಆಸನ ಮಗನು ಯೆಹೋಷಾಫಾಟನು. ಯೆಹೋಷಾಫಾಟನ ಮಗನು ಯೆಹೋರಾಮನು. ಯೆಹೋರಾಮನ ಮಗನು ಉಜ್ಜೀಯನು. ಉಜ್ಜೀಯನ ಮಗನು ಯೋತಾಮನು. ಯೋತಾಮನ ಮಗನು ಆಹಾಜನನು. ಆಹಾಜನ ಮಗನು ಹಿಜ್ಕೀಯನು. ಹಿಜ್ಕೀಯನ ಮಗನು ಮನಸ್ಸೆಯನು. ಮನಸ್ಸೆಯ ಮಗನು ಆಮೋನನು. ಆಮೋನ ಮಗನು ಯೋಷೀಯನು. ಬಾಬಿಲೋನಿಗೆ ಸೆರೆಹೋದ ಸಮಯದಲ್ಲಿ ಯೋಷೀಯನಿಗೆ ಯೆಕೊನ್ಯನು, ಅವನ ಅಣ್ಣತಮ್ಮಂದಿರು ಹುಟ್ಟಿದರು. ಬಾಬಿಲೋನಿಗೆ ಸೆರೆಹೋದ ಮೇಲೆ ಯೆಕೊನ್ಯನು ಶೆಯಲ್ತಿಯೇಲನನ್ನು ಪಡೆದನು. ಶೆಯಲ್ತಿಯೇಲನ ಮಗನು ಜೆರುಬ್ಬಾಬೆಲನು ಜೆರುಬ್ಬಾಬೆಲನ ಮಗನು ಅಬಿಹೂದನು. ಅಬಿಹೂದನ ಮಗನು ಎಲ್ಯಕೀಮನು. ಎಲ್ಯಕೀಮನ ಮಗನು ಅಜೋರನು. ಅಜೋರನ ಮಗನು ಸದೋಕನು. ಸದೋಕನ ಮಗನು ಅಖೀಮನು. ಅಖೀಮನ ಮಗನು ಎಲಿಹೂದನು. ಎಲಿಹೂದನ ಮಗನು ಎಲಿಯಾಜರನು. ಎಲಿಯಾಜರನ ಮಗನು ಮತ್ತಾನನು. ಮತ್ತಾನನ ಮಗನು ಯಾಕೋಬನು. ಯಾಕೋಬನ ಮಗನು ಯೋಸೇಫನು. ಯೋಸೇಫನು ಮರಿಯಳ ಗಂಡನು. ಈ ಮರಿಯಳಿಂದಲೇ ಕ್ರಿಸ್ತನೆಂಬ ಯೇಸು ಹುಟ್ಟಿದನು.

ಅಬ್ರಹಾಮನಿಂದ ದಾವೀದನ ವರೆಗೂ ಒಟ್ಟು ಹದಿನಾಲ್ಕು ತಲೆಮಾರುಗಳು, ದಾವೀದನಿಂದ ಬಾಬಿಲೋನಿನ ದಾಸತ್ವಕ್ಕೆ ಹೋಗುವವರೆಗೂ ಹದಿನಾಲ್ಕು ತಲೆಮಾರುಗಳು, ಬಾಬಿಲೋನಿನ ದಾಸತ್ವದ ದಿನದಿಂದ ಕ್ರಿಸ್ತನವರೆಗೆ ಹದಿನಾಲ್ಕು ತಲೆಮಾರುಗಳು.

ಯೇಸು ಕ್ರಿಸ್ತನ ಜನನವು ಹೇಗಾಯಿತಂದರೆ, ಆತನ ತಾಯಿಯಾದ ಮರಿಯಳಿಗೂ ಯೋಸೇಫನಿಗೂ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಮದುವೆಯಾಗಿ ಕೂಡಿಬಾಳುವುದಕ್ಕಿಂತ ಮೊದಲೇ ಮರಿಯಳು ಪವಿತ್ರಾತ್ಮನ ಶಕ್ತಿಯಿಂದ ಗರ್ಭಧರಿಸಿದ್ದು ತಿಳಿದುಬಂತು. ಆದರೆ ಆಕೆಯ ಗಂಡನಾದ ಯೋಸೇಫನು ನೀತಿವಂತನಾಗಿದ್ದ ಕಾರಣ ಮರಿಯಳನ್ನು ಬಯಲಿಗೆ ತಂದು ಅವಮಾನಕ್ಕೆ ಗುರಿಮಾಡದೆ ನಿಶ್ಚಿತಾರ್ಥವನ್ನು ರಹಸ್ಯವಾಗಿ ಮುರಿದುಬಿಡಬೇಕೆಂದು ಆಲೋಚಿಸಿದ್ದನು. ಅವನು ಇದನ್ನು ಕುರಿತು ಆಲೋಚಿಸುತ್ತಿರುವಾಗ, ದೇವದೂತನು ಅವನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ದಾವೀದನ ಮಗನಾದ ಯೋಸೇಫನೇ, ನೀನು ಮರಿಯಳನ್ನು ಹೆಂಡತಿಯಾಗಿ ಸೇರಿಸಿಕೊಳ್ಳುವುದಕ್ಕೆ ಅಂಜಬೇಡ. ಆಕೆ ಗರ್ಭವತಿಯಾದದ್ದು ಪವಿತ್ರಾತ್ಮನಿಂದಲೇ. ಆಕೆಯು ಒಬ್ಬ ಮಗನನ್ನು ಹೆರುವಳು; ನೀನು ಆತನಿಗೆ ‘ಯೇಸು’ ಎಂದು ಹೆಸರಿಡಬೇಕು; ಏಕೆಂದರೆ ಆತನೇ ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ರಕ್ಷಿಸುವನು,” ಅಂದನು. ಕರ್ತನು ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರುವಂತೆ ಇದೆಲ್ಲಾ ನಡೆಯಿತು; ಆ ಮಾತು ಏನೆಂದರೆ, “ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹೆರುವಳು; ಆತನಿಗೆ ಇಮ್ಮಾನುವೇಲ್ ಎಂದು ಹೆಸರಿಡುವರು. ‘ದೇವರು ನಮ್ಮ ಕೂಡ ಇದ್ದಾನೆಂದು’ ಈ ಹೆಸರಿನ ಅರ್ಥ.” ಆಗ ಯೋಸೇಫನು ಎಚ್ಚೆತ್ತು ದೇವದೂತನು ಅಪ್ಪಣೆಕೊಟ್ಟ ಪ್ರಕಾರ ಮರಿಯಳನ್ನು ಹೆಂಡತಿಯನ್ನಾಗಿ ಸ್ವೀಕರಿಸಿಕೊಂಡನು. ಆದರೆ ಆಕೆಯು ಗಂಡು ಮಗುವಿಗೆ ಜನ್ಮನೀಡುವವರೆಗೂ ಆಕೆಯೊಡನೆ ಶರೀರ ಸಂಬಂಧವಿಲ್ಲದೆ ಇದ್ದನು. ಮತ್ತು ಯೋಸೇಫನು ಆ ಮಗುವಿಗೆ ‘ಯೇಸು’ ಎಂದು ಹೆಸರಿಟ್ಟನು.

ಅವರು ಆ ಮನೆಯೊಳಕ್ಕೆ ಹೋಗಿ ಆ ಕೂಸನ್ನು ಅದರ ತಾಯಿಯಾದ ಮರಿಯಳ ಬಳಿಯಲ್ಲಿ ಕಂಡು ಅದಕ್ಕೆ ಸಾಷ್ಟಾಂಗನಮಸ್ಕಾರ ಮಾಡಿ ತಮ್ಮ ನಿಕ್ಷೇಪದ ಗಂಟುಗಳನ್ನು ಬಿಚ್ಚಿ ಅದಕ್ಕೆ ಚಿನ್ನ, ಪರಿಮಳದ್ರವ್ಯ ಮತ್ತು ರಕ್ತಬೋಳಗಳನ್ನು ಮಗುವಿಗೆ ಕಾಣಿಕೆಯಾಗಿ ಅರ್ಪಿಸಿದರು.

ಆದರೆ ನಾನು ನಿಮಗೆ ಹೇಳುವುದೇನಂದರೆ, ತನ್ನ ಸಹೋದರನ ಮೇಲೆ ಸಿಟ್ಟುಗೊಳ್ಳುವ ಪ್ರತಿಯೊಬ್ಬ ಮನುಷ್ಯನು ನ್ಯಾಯತೀರ್ಪಿಗೆ ಗುರಿಯಾಗುವನು; ತನ್ನ ಸಹೋದರನನ್ನು ನೋಡಿ, ‘ಎಲೈ ಮೂರ್ಖನೇ’ ಎಂದು ಅನ್ನುವವನು ನ್ಯಾಯ ಸಭೆಯ ವಿಚಾರಣೆಗೆ ಒಳಗಾಗುವನು; ‘ಎಲೈ ನೀಚನೇ’ ಎಂದು ಅನ್ನುವವನು,ಅಗ್ನಿ ನರಕಕ್ಕೆ ಗುರಿಯಾಗುವನು. ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತಿರಕ್ಕೆ ತಂದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವಿದೆ ಎಂಬುದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟು ಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು; ಆ ಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು.

ಇದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ಆಕೆಗೆ ವಿಚ್ಛೇದನ ಪತ್ರವನ್ನು ಕೊಡತಕ್ಕದ್ದೆಂದು ಹೇಳಿಯದೆಯಷ್ಟೆ. ಆದರೆ ನಾನು ನಿಮಗೆ ಹೇಳುವುದೇನಂದರೆ, ವ್ಯಭಿಚಾರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ಅವಳು ವ್ಯಭಿಚಾರ ಮಾಡುವುದಕ್ಕೆ ಕಾರಣನಾಗುತ್ತಾನೆ ಮತ್ತು ಗಂಡಬಿಟ್ಟವಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರಮಾಡುವವನಾಗಿದ್ದಾನೆ.

“ನಿಮ್ಮಲ್ಲಿ ಯಾವನು ರೊಟ್ಟಿ ಕೇಳುವ ಮಗನಿಗೆ ಕಲ್ಲನ್ನು ಕೊಡುವನೋ? ಮೀನು ಕೇಳಿದರೆ ಹಾವನ್ನು ಕೊಡುವನೋ? ಹಾಗಾದರೆ ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಉಡುಗೊರೆಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಒಳ್ಳೆಯ ವರಗಳನ್ನು ಕೊಡುವನಲ್ಲವೇ?

“ಭೂಲೋಕದ ಮೇಲೆ ಸಮಾಧಾನ ತರುವುದಕ್ಕೆ ಬಂದೆನೆಂದು ನೆನಸಬೇಡಿರಿ; ಸಮಾಧಾನವನ್ನು ಹುಟ್ಟಿಸುವುದಕ್ಕೆ ನಾನು ಬಂದಿಲ್ಲ, ಖಡ್ಗವನ್ನು ಹಾಕುವುದಕ್ಕೆ ಬಂದೆನು. ಹೇಗೆಂದರೆ ಮಗನಿಗೂ ತಂದೆಗೂ, ಮಗಳಿಗೂ ತಾಯಿಗೂ, ಸೊಸೆಗೂ ಅತ್ತೆಗೂ ಭೇದಹುಟ್ಟಿಸುವುದಕ್ಕೆ ಬಂದೆನು. ಹೀಗೆ ಒಬ್ಬ ಮನುಷ್ಯನಿಗೆ ಅವನ ಮನೆಯವರೇ ಶತ್ರುಗಳಾಗಿರುವರು. ತಂದೆಯ ಮೇಲಾಗಲಿ ತಾಯಿಯ ಮೇಲಾಗಲಿ ನನ್ನ ಮೇಲೆ ಇಡುವುದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ; ಮಗನ ಮೇಲಾಗಲಿ ಮಗಳ ಮೇಲಾಗಲಿ ನನ್ನ ಮೇಲೆ ಇಡುವುದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ.

ಆತನು ಅವರ ಆಲೋಚನೆಗಳನ್ನು ತಿಳಿದುಕೊಂಡು ಅವರಿಗೆ ಹೇಳಿದ್ದೇನೆಂದರೆ, “ಯಾವ ರಾಜ್ಯವಾದರೂ ತನ್ನಲ್ಲಿ ಭೇದ ಹುಟ್ಟಿದರೆ ವಿಭಜನೆಯಾಗಿ ಹಾಳಾಗುವುದು. ತನ್ನಲ್ಲಿ ಭೇದ ಉಂಟಾಗಿ ವಿಭಜನೆಯಾದ ಯಾವ ಪಟ್ಟಣವಾದರೂ ಮನೆಯಾದರೂ ನೆಲೆಯಾಗಿ ನಿಲ್ಲದು.

ಯೇಸು ಜನರ ಗುಂಪುಗಳ ಸಂಗಡ ಇನ್ನೂ ಮಾತನಾಡುತ್ತಿರುವಾಗ ಆತನ ತಾಯಿಯೂ ತಮ್ಮಂದಿರೂ ಆತನನ್ನು ಮಾತನಾಡಿಸಬೇಕೆಂದು ಹೊರಗೆ ಬಂದು ನಿಂತಿದ್ದರು. ಆಗ ಒಬ್ಬನು, “ಇಗೋ ನಿನ್ನ ತಾಯಿಯೂ ತಮ್ಮಂದಿರೂ ನಿನ್ನನ್ನು ಮಾತನಾಡಿಸಬೇಕೆಂದು ಹೊರಗೆ ನಿಂತಿದ್ದಾರೆ” ಅಂದನು. ಅದಕ್ಕಾತನು ಆ ಮಾತು ಹೇಳಿದವನಿಗೆ, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎಂದು ಹೇಳಿ ಶಿಷ್ಯರ ಕಡೆಗೆ ಕೈ ಚಾಚಿ, “ಇಗೋ ನನ್ನ ತಾಯಿ, ನನ್ನ ಸಹೋದರರು. ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತವನ್ನು ಮಾಡುವವನೇ ನನ್ನ ಸಹೋದರನೂ ಸಹೋದರಿಯೂ ತಾಯಿಯೂ ಆಗಿದ್ದಾರೆ” ಅಂದನು.

ಇವನು ಆ ಬಡಗಿಯ ಮಗನಲ್ಲವೇ? ಇವನ ತಾಯಿ ಮರಿಯಳೆಂಬುವವಳಲ್ಲವೇ? ಯಾಕೋಬ, ಯೋಸೇಫ, ಸೀಮೋನ, ಯೂದ ಇವರು ಇವನ ತಮ್ಮಂದಿರಲ್ಲವೇ? ಇವನ ತಂಗಿಯರೆಲ್ಲರೂ ನಮ್ಮಲ್ಲಿ ಇದ್ದಾರಲ್ಲವೇ? ಹಾಗಾದರೆ ಇವೆಲ್ಲವೂ ಇವನಿಗೆ ಎಲ್ಲಿಂದ ಬಂದಿದ್ದಾವು?” ಎಂದು ಅಂದುಕೊಂಡು ಆತನ ವಿಷಯದಲ್ಲಿ ತಿರಸ್ಕಾರವುಳ್ಳವರಾದರು. ಆದರೆ ಯೇಸುವು ಅವರಿಗೆ “ಪ್ರವಾದಿಯು ಬೇರೆ ಎಲ್ಲಿದ್ದರೂ ಅವನಿಗೆ ಗೌರವ ಉಂಟು. ಆದರೆ ಸ್ವದೇಶದಲ್ಲಿಯೂ ಸ್ವಂತ ಮನೆಯಲ್ಲಿಯೂ ಗೌರವ ಇರುವುದಿಲ್ಲ” ಅಂದನು.

ಹೇಗೆಂದರೆ‘ತಂದೆತಾಯಿಗಳನ್ನು ಸನ್ಮಾನಿಸಬೇಕೆಂತಲೂತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನು ಸಾಯಲೇಬೇಕೆಂತಲೂ’ ದೇವರು ಹೇಳಿದ್ದಾನೆ. ನೀವೋ, ‘ಯಾವನಾದರೂ ತನ್ನ ತಂದೆಯನಾಗಲಿ, ತಾಯಿಯನ್ನಾಗಲಿ, ನೋಡಿ ನಾನು ನಿಮ್ಮ ಸಂರಕ್ಷಣೆಗಾಗಿ ಕೊಡತಕ್ಕದ್ದನ್ನು ದೇವರಿಗೆ ಮುಡಿಪುಮಾಡಿದ್ದೇನೆ’ ಎಂದು ಹೇಳಿದರೆ, ಅವನು ‘ತನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕಾಗಿಲ್ಲ’ ಅನ್ನುತ್ತೀರಿ. ಹೀಗೆ ನಿಮ್ಮ ಸಂಪ್ರದಾಯದ ಸಲುವಾಗಿ ದೇವರ ವಾಕ್ಯವನ್ನು ನಿರರ್ಥಕ ಮಾಡಿದ್ದೀರಿ.

ಆತನು ಚಿಕ್ಕ ಮಗುವನ್ನು ಹತ್ತಿರಕ್ಕೆ ಕರೆದು ಅವರ ನಡುವೆ ನಿಲ್ಲಿಸಿ, ಅವರಿಗೆ, “ನಿಮ್ಮ ಮನಸ್ಸು ಪರಿವರ್ತನೆಕೊಂಡು ಚಿಕ್ಕ ಮಕ್ಕಳಂತೆ ಆಗದೇ ಹೋದರೆ ನೀವು ಪರಲೋಕ ರಾಜ್ಯದಲ್ಲಿ ಪ್ರವೇಶಿಸುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಹೀಗಿರುವುದರಿಂದ ಯಾವನು ಈ ಚಿಕ್ಕ ಮಗುವಿನಂತೆ ತನ್ನನ್ನು ತಾನೇ ತಗ್ಗಿಸಿಕೊಳ್ಳುತ್ತಾನೋ ಅವನೇ ಪರಲೋಕ ರಾಜ್ಯದಲ್ಲಿ ದೊಡ್ಡವನು. ಇದಲ್ಲದೆ ಯಾವನಾದರೂ ನನ್ನ ಹೆಸರಿನಲ್ಲಿ ಇಂಥ ಒಂದು ಚಿಕ್ಕ ಮಗುವನ್ನು ಸ್ವೀಕರಿಸುವನೋ ನನ್ನನ್ನೇ ಸ್ವೀಕರಿಸುವವನಾಗಿದ್ದಾನೆ. ಆದರೆನನ್ನಲ್ಲಿ ನಂಬಿಕೆಯಿಡುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಅಡ್ಡಿಯನ್ನುಂಟುಮಾಡಿದರೆ ಅಂಥವನ ಕೊರಳಿಗೆ ದೊಡ್ಡ ಬೀಸುವ ಕಲ್ಲನ್ನು ಕಟ್ಟಿ ಅವನನ್ನು ಆಳವಾದ ಸಮುದ್ರದಲ್ಲಿ ಮುಳುಗಿಸಿಬಿಡುವುದು ಅವನಿಗೆ ಉತ್ತಮ.

ಈ ಚಿಕ್ಕವರಲ್ಲಿ ಒಬ್ಬನನ್ನಾದರೂ ತಾತ್ಸಾರಮಾಡದಂತೆ ನೋಡಿಕೊಳ್ಳಿರಿ. ಏಕೆಂದರೆಪರಲೋಕದಲ್ಲಿ ಇವರ ದೂತರು ನನ್ನ ಸ್ವರ್ಗೀಯ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಿರುತ್ತಾರೆ ಎಂದು ನಿಮಗೆ ಹೇಳುತ್ತೇನೆ.

“ನಿನ್ನ ಸಹೋದರನು ನಿನ್ನ ವಿರುದ್ಧತಪ್ಪು ಮಾಡಿದರೆ, ನೀನು ಹೋಗಿ ಅವನು ಒಬ್ಬನೇ ಇರುವಾಗ ಅವನ ತಪ್ಪನ್ನು ಅವನಿಗೆ ಅರಿವಾಗುವಂತೆ ತಿಳಿಸು. ಅವನು ನಿನ್ನ ಮಾತನ್ನು ಕೇಳಿದರೆ ನಿನ್ನ ಸಹೋದರನನ್ನು ನೀನು ಸಂಪಾದಿಸಿಕೊಂಡಿರುವಿ.

ಆಗ ಪೇತ್ರನು ಆತನ ಬಳಿಗೆ ಬಂದು, “ಕರ್ತನೇ ನನ್ನ ಸಹೋದರನು ನನ್ನ ವಿರುದ್ಧ ಪಾಪ ಮಾಡಿದರೆ ನಾನು ಎಷ್ಟು ಸಾರಿ ಅವನನ್ನು ಕ್ಷಮಿಸಬೇಕು? ಏಳು ಸಾರಿಯೋ?” ಎಂದು ಕೇಳಿದನು. ಯೇಸು ಅವನಿಗೆ, “ಏಳು ಸಾರಿ ಎಂದಲ್ಲ ಏಳೆಪ್ಪತ್ತು ಸಾರಿ ಎಂದು ನಿನಗೆ ಹೇಳುತ್ತೇನೆ.

ಫರಿಸಾಯರು ಯೇಸುವನ್ನು ಪರೀಕ್ಷಿಸಲು ಆತನ ಹತ್ತಿರಕ್ಕೆ ಬಂದು, “ಒಬ್ಬನು ಯಾವುದಾದರೂ ಒಂದು ಕಾರಣದಿಂದ ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಶಾಸ್ತ್ರ ಸಮ್ಮತವೋ?” ಎಂದು ಕೇಳಲು, ಆತನು ಪ್ರತ್ಯುತ್ತರವಾಗಿ, “ಮನುಷ್ಯರನ್ನು ಉಂಟುಮಾಡಿದವನು ಆದಿಯಿಂದಲೇ ಅವರನ್ನು ಗಂಡು ಮತ್ತು ಹೆಣ್ಣಾಗಿ ಉಂಟುಮಾಡಿದನು, ‘ಈ ಕಾರಣದಿಂದಲೇ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗಿರುವರು ಎಂದು ನೀವು ಓದಲಿಲ್ಲವೋ?’ ಹೀಗಿರುವುದರಿಂದ ಅವರು ಇನ್ನು ಇಬ್ಬರಲ್ಲ ಒಂದೇ ಶರೀರವಾಗಿದ್ದಾರೆ. ಆದುದರಿಂದ ದೇವರು ಕೂಡಿಸಿದ್ದನ್ನು ಮನುಷ್ಯನು ಅಗಲಿಸಬಾರದು” ಅಂದನು. ಅದಕ್ಕೆ ಅವರು ಆತನನ್ನು, “ಹಾಗಾದರೆ ವಿಚ್ಛೇದನ ಪತ್ರವನ್ನು ಕೊಟ್ಟು ಆಕೆಯನ್ನು ಬಿಟ್ಟುಬಿಡಬಹುದೆಂದು ಮೋಶೆಯು ಏಕೆ ಆಜ್ಞೆ ಕೊಟ್ಟನು?” ಎಂದು ಕೇಳಿದರು. ಅದಕ್ಕೆ ಯೇಸು ಅವರಿಗೆ, “ಮೋಶೆಯು ನಿಮ್ಮ ಮೊಂಡತನದ ದೆಸೆಯಿಂದ ನಿಮ್ಮ ಹೆಂಡತಿಯರನ್ನು ಬಿಟ್ಟುಬಿಡುವುದಕ್ಕೆ ಅಪ್ಪಣೆ ಕೊಟ್ಟನು. ಆದರೆ ಆದಿಯಿಂದ ಹೀಗೆ ಇರಲಿಲ್ಲ ಅಂದನು. ಮತ್ತು ವ್ಯಭಿಚಾರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುವವನು ವ್ಯಭಿಚಾರ ಮಾಡಿದಂತೆ;ಮತ್ತು ಗಂಡ ಬಿಟ್ಟವಳನ್ನು ಮದುವೆಯಾಗುವವನು ವ್ಯಭಿಚಾರ ಮಾಡಿದಂತೆ” ಎಂದು ನಿಮಗೆ ಹೇಳುತ್ತೇನೆ ಅಂದನು. ಅದಕ್ಕೆ ಶಿಷ್ಯರು ಯೇಸುವಿಗೆ, “ಹೆಂಡತಿಯೊಂದಿಗೆ ಗಂಡನ ಸಂಬಂಧ ಹೀಗಿದ್ದರೆ ಮದುವೆಯಾಗುವುದು ಒಳ್ಳೆಯದಲ್ಲ” ಅಂದರು.

ಕೆಲವರು ತಮ್ಮ ಚಿಕ್ಕ ಮಕ್ಕಳನ್ನು ಯೇಸುವಿನ ಬಳಿಗೆ ಕರೆತಂದು, ಅವರ ಮೇಲೆ ಆತನು ಕೈಗಳನ್ನಿಟ್ಟು ಪ್ರಾರ್ಥಿಸುವಂತೆ ಕೇಳಿದರು. ಆದರೆ ಶಿಷ್ಯರು ಅವರನ್ನು ಗದರಿಸಿದರು. ಆದರೆ ಯೇಸು, “ಮಕ್ಕಳನ್ನು ಬಿಡಿರಿ. ನನ್ನ ಹತ್ತಿರ ಬರುವುದಕ್ಕೆ ಅವರಿಗೆ ಅಡ್ಡಿಮಾಡಬೇಡಿರಿ. ಏಕೆಂದರೆ ಪರಲೋಕ ರಾಜ್ಯವು ಇಂಥವರದೇ” ಎಂದು ಹೇಳಿದನು.

ಮತ್ತು ನನ್ನ ಹೆಸರಿನ ನಿಮಿತ್ತ ಮನೆಗಳನ್ನಾಗಲಿ, ಸಹೋದರರನ್ನಾಗಲಿ, ಸಹೋದರಿಯರನ್ನಾಗಲಿ, ತಂದೆಯನ್ನಾಗಲಿ, ತಾಯಿಯನ್ನಾಗಲಿ, ಮಕ್ಕಳನ್ನಾಗಲಿ, ಭೂಮಿಯನ್ನಾಗಲಿ, ತೊರೆದುಬಿಟ್ಟಿರುವ ಪ್ರತಿಯೊಬ್ಬನೂ ಎಲ್ಲವನ್ನೂ ನೂರರಷ್ಟು ಹೊಂದುವನು. ಅಲ್ಲದೆ ನಿತ್ಯಜೀವಕ್ಕೆ ಬಾಧ್ಯನಾಗುವನು.

ಆತನಿಗೆ, “ಇವರು ಹೇಳುವುದನ್ನು ಕೇಳುತ್ತಿರುವೆಯಾ” ಎಂದು ಹೇಳಲು ಯೇಸು, “ಹೌದು, ಕೇಳುತ್ತಿದ್ದೇನೆ, ಆದರೆ ‘ಸಣ್ಣ ಮಕ್ಕಳ ಬಾಯಿಂದಲೂ ಮೊಲೆಕೂಸುಗಳ ಬಾಯಿಂದಲೂ ನೀನು ಸ್ತೋತ್ರವನ್ನು ಸಿದ್ಧಿಗೆ ತಂದಿರುವಿ’ ಎಂಬುದನ್ನು ನೀವು ಎಂದಾದರೂ ಓದಲಿಲ್ಲವೋ?” ಎಂದು ಕೇಳಿದನು.

“ಪರಲೋಕ ರಾಜ್ಯವು ತನ್ನ ಮಗನ ಮದುವೆಯ ಔತಣವನ್ನು ಏರ್ಪಡಿಸಿದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ. ಅವನು ಮದುವೆಗೆ ಆಹ್ವಾನಿತರಾಗಿದ್ದವರನ್ನು ಕರೆಯುವುದಕ್ಕೆ ತನ್ನ ಆಳುಗಳನ್ನು ಕಳುಹಿಸಿದನು, ಆದರೆ ಬರುವುದಕ್ಕೆ ಅವರಿಗೆ ಮನಸ್ಸಿರಲಿಲ್ಲ. ಅರಸನು ತಿರುಗಿ ಬೇರೆ ಆಳುಗಳನ್ನು ಕರೆದು, ‘ನೀವು ಊಟಕ್ಕೆ ಆಹ್ವಾನಿತರ ಬಳಿಗೆ ಹೋಗಿ ಇಗೋ, ಔತಣ ಸಿದ್ಧವಾಗಿದೆ; ನನ್ನ ಎತ್ತುಗಳನ್ನೂ, ಕೊಬ್ಬಿದ ಹೋರಿಗಳನ್ನೂ ವಧಿಸಿದ್ದೇನೆ; ಎಲ್ಲಾ ಸಿದ್ಧವಾಗಿದೆ; ಮದುವೆಯ ಔತಣಕ್ಕೆ ಬನ್ನಿರಿ’ ಎಂಬುದಾಗಿ ಅವರಿಗೆ ಹೇಳಿರೆಂದು ಅಪ್ಪಣೆ ಕೊಟ್ಟು ಕಳುಹಿಸಿದನು.

ಆದುದರಿಂದ ನೀವು ಈಗ ಮುಖ್ಯರಸ್ತೆಗೆ ಹೋಗಿ ಕಂಡ ಕಂಡವರನ್ನೆಲ್ಲಾ ಮದುವೆಯ ಔತಣಕ್ಕೆ ಕರೆಯಿರಿ’ ಎಂದು ಹೇಳಿದನು. ಆ ಆಳುಗಳು ಮುಖ್ಯರಸ್ತೆಗಳಿಗೆ ಹೋಗಿ ಕೆಟ್ಟವರು ಒಳ್ಳೆಯವರೆನ್ನದೇ ಕಂಡವರನ್ನೆಲ್ಲಾ ಒಟ್ಟುಗೂಡಿಸಿ ಕರೆದುಕೊಂಡು ಬಂದರು. ಹೀಗೆ ಮದುವೆಯ ಮಂಟಪವು ಅತಿಥಿಗಳಿಂದ ತುಂಬಿಹೋಯಿತು. ಆಮೇಲೆ ಅರಸನು ಅತಿಥಿಗಳನ್ನು ನೋಡುವುದಕ್ಕಾಗಿ ಒಳಗೆ ಬಂದನು, ಮದುವೆಯ ಔತಣಕ್ಕೆ ತಕ್ಕ ವಸ್ತ್ರವನ್ನು ಹಾಕಿಕೊಳ್ಳದ ಒಬ್ಬನನ್ನು ಕಂಡು ಅರಸನು, ಅವನಿಗೆ ‘ಸ್ನೇಹಿತನೇ, ಮದುವೆಯ ಬಟ್ಟೆ ಇಲ್ಲದೆ ನೀನಿಲ್ಲಿ ಹೇಗೆ ಒಳಕ್ಕೆ ಬಂದೆ?’ ಎಂದು ಕೇಳಲು ಅವನು ಮೌನವಾಗಿದ್ದನು.

ಅದೇ ದಿನದಲ್ಲಿ ಪುನರುತ್ಥಾನವಿಲ್ಲ ಎಂದು ವಾದಿಸುವ ಕೆಲವು ಸದ್ದುಕಾಯರು ಆತನ ಬಳಿಗೆ ಬಂದರು. ಇವರು ಆತನಿಗೆ, “ಬೋಧಕನೇ, ‘ಒಬ್ಬನು ಮಕ್ಕಳಿಲ್ಲದೆ ಸತ್ತರೆ ಅವನ ಹೆಂಡತಿಯನ್ನು ಅವನ ತಮ್ಮನು ಮದುವೆಮಾಡಿಕೊಂಡು ತನ್ನ ಅಣ್ಣನಿಗೆ ಮಕ್ಕಳನ್ನು ಪಡೆಯಬೇಕೆಂದು ಮೋಶೆಯು ಹೇಳಿದ್ದಾನೆ.’ ಆದರೆ ನಮ್ಮಲ್ಲಿ ಏಳು ಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆ ಆಗಿ ತೀರಿಹೋದನು. ಅವನಿಗೆ ಮಕ್ಕಳಿಲ್ಲದ ಕಾರಣ ಹೆಂಡತಿಯನ್ನು ತನ್ನ ತಮ್ಮನಿಗೆ ಬಿಟ್ಟನು; ಅದರಂತೆ ಎರಡನೆಯವನೂ ಮೂರನೆಯವನೂ ಹಾಗೆಯೇ ಏಳನೆಯವನ ವರೆಗೂ ಮಾಡಿದರು. ಅವರೆಲ್ಲರು ಸತ್ತ ಮೇಲೆ ಆ ಹೆಂಗಸೂ ಸತ್ತಳು. ಹಾಗಾದರೆ ಪುನರುತ್ಥಾನದಲ್ಲಿ ಆಕೆ ಆ ಏಳು ಮಂದಿಯಲ್ಲಿ ಯಾರಿಗೆ ಹೆಂಡತಿಯಾಗಿರುವಳು? ಆಕೆಯನ್ನು ಅವರೆಲ್ಲರೂ ಮದುವೆಮಾಡಿಕೊಂಡಿದ್ದರಲ್ಲಾ” ಎಂದು ಪ್ರಶ್ನಿಸಿದರು. ಅದಕ್ಕೆ ಯೇಸು ಉತ್ತರವಾಗಿ ಅವರಿಗೆ, “ನೀವು ದೇವರ ವಾಕ್ಯವನ್ನಾದರೂ ದೇವರ ಶಕ್ತಿಯನ್ನಾದರೂ ಸರಿಯಾಗಿ ತಿಳಿದುಕೊಳ್ಳದೆ ತಪ್ಪು ಅಭಿಪ್ರಾಯದಲ್ಲಿದ್ದೀರಿ; ಪುನರುತ್ಥಾನವಾದ ಮೇಲೆ ಮದುವೆಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ; ಪರಲೋಕದಲ್ಲಿರುವ ದೇವದೂತರಂತೆ ಅವರು ಇರುತ್ತಾರೆ. ಸತ್ತವರ ಪುನರುತ್ಥಾನದ ವಿಷಯವಾಗಿ ಹೇಳಬೇಕಾದರೆ, ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು’ ಎಂದು ದೇವರು ನಿಮಗೆ ನುಡಿದಿದ್ದನ್ನು ನೀವು ಓದಲಿಲ್ಲವೇ. ಆತನು ಸತ್ತವರಿಗೆ ದೇವರಲ್ಲ, ಆದರೆ ಜೀವಿಸುವವರಿಗೆ ದೇವರಾಗಿದ್ದಾನೆ” ಎಂದು ಹೇಳಿದನು.

ಇದಲ್ಲದೆ ಭೂಲೋಕದಲ್ಲಿ ಯಾರನ್ನೂ ನಿಮ್ಮ ತಂದೆ ಎಂದು ಕರೆಯಬೇಡಿರಿ; ಏಕೆಂದರೆ ಪರಲೋಕದಲ್ಲಿರುವಾತನೊಬ್ಬನೇ ನಿಮ್ಮ ತಂದೆ

ಹೇಗೆಂದರೆ ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ತಿನ್ನುತ್ತಾ, ಕುಡಿಯುತ್ತಾ, ಮದುವೆಮಾಡಿಕೊಳ್ಳುತ್ತಾ, ಮದುವೆಮಾಡಿಕೊಡುತ್ತಾ ಇದ್ದರು.

“ಪರಲೋಕ ರಾಜ್ಯವು ತಮ್ಮ ದೀಪಾರತಿಗಳನ್ನು ತೆಗೆದುಕೊಂಡು ಮದಲಿಂಗನನ್ನು ಸಂಧಿಸುವುದಕ್ಕೆ ಹೊರಟಂತಹ ಹತ್ತು ಮಂದಿ ಕನ್ನಿಕೆಯರಿಗೆ ಹೋಲಿಕೆಯಾಗಿದೆ.

ಜೆಬೆದಾಯನ ಮಗನಾದ ಯಾಕೋಬನಿಗೂ ಯಾಕೋಬನ ತಮ್ಮನಾದ ಯೋಹಾನನಿಗೂ ಬೊವನೆರ್ಗೆಸ್ ಅಂದರೆ ಸಿಡಿಲ ಮರಿಗಳು ಎಂದು ಹೆಸರಿಟ್ಟನು.

ಹಾಗೆಯೇ ಒಂದು ಮನೆಯು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ಆ ಮನೆಯು ಉಳಿಯದು.

ಜನರು ಯೇಸುವಿನ ಸುತ್ತಲು ಕುಳಿತುಕೊಂಡಿದ್ದಾಗ ಆತನ ತಾಯಿಯೂ, ತಮ್ಮಂದಿರೂ ಬಂದು ಹೊರಗೆ ನಿಂತುಕೊಂಡು ಆತನನ್ನು ಕರೆಕಳುಹಿಸಿದರು. ಆ ಜನರು ಆತನಿಗೆ, “ನಿನ್ನ ತಾಯಿಯೂ, ನಿನ್ನ ತಮ್ಮಂದಿರೂ ನಿನ್ನನ್ನು ಹುಡುಕಿಕೊಂಡು ಬಂದು ಹೊರಗೆ ನಿಂತಿದ್ದಾರೆ ನೋಡು” ಎಂದು ಹೇಳಿದರು. ಅದಕ್ಕೆ ಆತನು ಅವರಿಗೆ, “ನನಗೆ ತಾಯಿಯೂ, ತಮ್ಮಂದಿರೂ ಯಾರು?” ಎಂದು ಹೇಳಿ ತನ್ನ ಸುತ್ತಲು ಕುಳಿತಿದ್ದವರನ್ನು ನೋಡಿ, “ಇಗೋ, ನನ್ನ ತಾಯಿ, ನನ್ನ ತಮ್ಮಂದಿರು. ದೇವರ ಚಿತ್ತದಂತೆ ನಡೆಯುವವನೇ ನನಗೆ ತಮ್ಮನೂ, ತಂಗಿಯೂ, ತಾಯಿಯೂ ಆಗಿದ್ದಾರೆ” ಅಂದನು.

ಈತನು ಆ ಬಡಗಿಯಲ್ಲವೇ? ಈತನು ಮರಿಯಳ ಮಗನಲ್ಲವೇ? ಈತನು ಯಾಕೋಬ, ಯೋಸೆ, ಯೂದ, ಸೀಮೋನ ಇವರ ಅಣ್ಣನಲ್ಲವೇ? ಈತನ ತಂಗಿಯರು ಇಲ್ಲಿ ನಮ್ಮಲ್ಲಿಯೇ ಇದ್ದಾರಲ್ಲವೇ?” ಎಂದು ಹೇಳುತ್ತಾ ಯೇಸುವನ್ನು ತಾತ್ಸಾರ ಮಾಡಿದರು. ಯೇಸು ಅವರಿಗೆ, “ಪ್ರವಾದಿಯು ಬೇರೆ ಎಲ್ಲಿದ್ದರೂ ಅವನಿಗೆ ಗೌರವ ಉಂಟು; ಆದರೆ ಸ್ವಂತ ದೇಶದಲ್ಲಿಯೂ, ಸ್ವಂತ ಜನರಲ್ಲಿಯೂ, ಸ್ವಂತ ಮನೆಯಲ್ಲಿಯೂ ಗೌರವವಿಲ್ಲ” ಎಂದು ಹೇಳಿದನು.

‘ನಿನ್ನತಂದೆತಾಯಿಗಳನ್ನು ಗೌರವಿಸಬೇಕು’ ಮತ್ತು‘ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನಿಗೆ ಮರಣದಂಡನೆ ಆಗಬೇಕೆಂತಲೂ’ ಮೋಶೆಯು ಹೇಳಿದ್ದಾನೆ. ನೀವಾದರೋ ‘ಒಬ್ಬನು ತನ್ನ ತಂದೆಯನ್ನಾಗಲಿ, ತಾಯಿಯನ್ನಾಗಲಿ ನೋಡಿ, ನಾನು ನಿನ್ನ ಸಂರಕ್ಷಣೆಗಾಗಿ ಕೊಡತಕ್ಕದ್ದನ್ನು ಕೊರ್ಬಾನ್ (ಅಂದರೆ ದೇವರಿಗೆ ಮುಡಿಪು) ಮಾಡಿದ್ದೇನೆ’ ಎಂದು ಹೇಳುವುದಾದರೆ ಅವನು ತನ್ನ ತಂದೆಗಾಗಲಿ, ತಾಯಿಗಾಗಲಿ ಇನ್ನೇನೂ ಸಹಾಯ ಮಾಡಬೇಕಾಗಿಲ್ಲ ಎಂದು ಹೇಳುತ್ತೀರಿ. ಹೀಗೆ ನೀವು ಕಲಿಸುತ್ತಾ ಬಂದಿರುವ ಸಂಪ್ರದಾಯದಿಂದ ದೇವರ ವಾಕ್ಯವನ್ನು ನಿರರ್ಥಕಮಾಡುತ್ತಿದ್ದೀರಿ, ಮತ್ತು ಇಂಥ ಕಾರ್ಯಗಳನ್ನು ಇನ್ನೂ ಎಷ್ಟೋ ಮಾಡುತ್ತೀರಿ” ಎಂದು ಹೇಳಿದನು.

ಒಂದು ಚಿಕ್ಕ ಮಗುವನ್ನು ತೆಗೆದುಕೊಂಡು ಅವರ ಮಧ್ಯದಲ್ಲಿ ನಿಲ್ಲಿಸಿ, ಅದನ್ನು ಅಪ್ಪಿಕೊಂಡು ಅವರಿಗೆ, “ಯಾರಾದರೂ ನನ್ನ ಹೆಸರಿನಲ್ಲಿ ಇಂಥ ಚಿಕ್ಕ ಮಕ್ಕಳಲ್ಲಿ ಒಂದನ್ನು ಸೇರಿಸಿಕೊಂಡರೆ ನನ್ನನ್ನು ಸೇರಿಸಿಕೊಂಡ ಹಾಗಾಯಿತು; ಮತ್ತು ಯಾರಾದರೂ ನನ್ನನ್ನು ಸೇರಿಸಿಕೊಂಡರೆ ನನ್ನನ್ನು ಮಾತ್ರವಲ್ಲ, ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸೇರಿಸಿಕೊಂಡ ಹಾಗಾಯಿತು” ಎಂದು ಹೇಳಿದನು.

ನನ್ನಲ್ಲಿ ನಂಬಿಕೆ ಇಟ್ಟಿರುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾರಾದರೂ ಪಾಪ ಮಾಡುವುದಕ್ಕೆ ಕಾರಣನಾದರೆ, ಅಂಥವನ ಕೊರಳಿಗೆ ಬೀಸುವ ಕಲ್ಲನ್ನು ಕಟ್ಟಿ ಅವನನ್ನು ಸಮುದ್ರದಲ್ಲಿ ಬಿಸಾಡಿಬಿಡುವುದು ಅವನಿಗೆ ಉತ್ತಮ.

ಆಗ ಫರಿಸಾಯರು ಆತನ ಹತ್ತಿರಕ್ಕೆ ಬಂದು ಆತನನ್ನು ಪರೀಕ್ಷಿಸಬೇಕೆಂಬ ಯೋಚನೆಯಿಂದ, “ಒಬ್ಬನು ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮವೋ ಹೇಗೆ” ಎಂದು ಕೇಳಿದರು. ಅದಕ್ಕೆ ಆತನು “ಮೋಶೆಯು ನಿಮಗೆ ಏನು ಆಜ್ಞೆ ಕೊಟ್ಟನು?” ಎಂದನು. ಅದಕ್ಕೆ ಅವರು, “ವಿಚ್ಛೇದನ ಪತ್ರವನ್ನು ಬರೆದುಕೊಟ್ಟು ಆಕೆಯನ್ನು ಬಿಟ್ಟುಬಿಡಬಹುದೆಂದು ಮೋಶೆಯು ಅನುಮತಿ ಕೊಟ್ಟನು” ಅಂದರು. ಆದರೆ ಯೇಸು ಅವರಿಗೆ, “ಅವನು ನಿಮ್ಮ ಮೊಂಡತನವನ್ನು ನೋಡಿ ನಿಮಗೆ ಇಂಥಾ ಆಜ್ಞೆಯನ್ನು ಬರೆದಿಟ್ಟನು. ದೇವರಾದರೋ ಸೃಷ್ಟಿಯ ಮೊದಲಿನಿಂದಲೇಮನುಷ್ಯರನ್ನು ಗಂಡುಹೆಣ್ಣಾಗಿ ಉಂಟುಮಾಡಿದನು. ಈ ಕಾರಣದಿಂದ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗಿರುವರು. ಹೀಗಿರುವಲ್ಲಿ ಅವರು ಇನ್ನು ಇಬ್ಬರಲ್ಲ ಒಂದೇ ಶರೀರವಾಗಿದ್ದಾರೆ. ಆದ್ದರಿಂದ ದೇವರು ಕೂಡಿಸಿದ್ದನ್ನು ಮನುಷ್ಯನು ಅಗಲಿಸಬಾರದು” ಎಂದು ಹೇಳಿದನು. ಅವರು ಮನೆಯಲ್ಲಿದ್ದಾಗ ಆತನ ಶಿಷ್ಯರು ಈ ವಿಷಯವಾಗಿ ಆತನನ್ನು ಪುನಃ ಕೇಳಿದರು. ಅದಕ್ಕೆ ಆತನು, “ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ತನ್ನ ಹೆಂಡತಿಗೆ ವಿರೋಧವಾಗಿ ವ್ಯಭಿಚಾರ ಮಾಡಿದವನಾಗಿದ್ದಾನೆ; ಮತ್ತು ಹೆಂಡತಿಯು ತನ್ನ ಗಂಡನನ್ನು ಬಿಟ್ಟು ಮತ್ತೊಬ್ಬನನ್ನು ಮದುವೆಮಾಡಿಕೊಂಡರೆ ಅವಳು ವ್ಯಭಿಚಾರ ಮಾಡಿದವಳಾಗಿದ್ದಾಳೆ” ಎಂದು ಹೇಳಿದನು.

ಬಳಿಕ ಕೆಲವರು ತಮ್ಮ ಚಿಕ್ಕ ಮಕ್ಕಳನ್ನು ಯೇಸುವಿನಿಂದ ಮುಟ್ಟಿಸಬೇಕೆಂದು ಆತನ ಬಳಿಗೆ ಕರತರಲು ಶಿಷ್ಯರು ಅವರನ್ನು ಗದರಿಸಿದರು. ಆದರೆ ಯೇಸು ಅದನ್ನು ಕಂಡು ಕೋಪಗೊಂಡು ಅವರಿಗೆ, “ಚಿಕ್ಕ ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡಬೇಡಿರಿ; ಏಕೆಂದರೆ ದೇವರ ರಾಜ್ಯವು ಇಂಥವರದೇ. ನಿಮಗೆ ಸತ್ಯವಾಗಿ ಹೇಳುತ್ತೇನೆ ಯಾರು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವುದಿಲ್ಲವೋ ಅವನು ಅದರಲ್ಲಿ ಸೇರುವುದೇ ಇಲ್ಲ” ಎಂದು ಹೇಳಿದನು. ಆಗ ಆತನು ಆ ಮಕ್ಕಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಯಿಟ್ಟು ಆಶೀರ್ವದಿಸಿದನು.

ನರಹತ್ಯಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು. ಮೋಸಮಾಡಬಾರದು, ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು ಎಂಬ ದೇವರಾಜ್ಞೆಗಳು ನಿನಗೆ ಗೊತ್ತಿವೆಯಷ್ಟೆ” ಎಂದು ಹೇಳಿದನು.

ಅದಕ್ಕೆ ಯೇಸು, “ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾರು ನನ್ನ ನಿಮಿತ್ತವೂ, ಸುವಾರ್ತೆಯ ನಿಮಿತ್ತವೂ ಮನೆಯನ್ನಾಗಲಿ, ಸಹೋದರರನ್ನಾಗಲಿ, ಸಹೋದರಿಯರನ್ನಾಗಲಿ, ತಾಯಿಯನ್ನಾಗಲಿ, ತಂದೆಯನ್ನಾಗಲಿ, ಮಕ್ಕಳನ್ನಾಗಲಿ, ಹೊಲಗದ್ದೆಗಳನ್ನಾಗಲಿ ಬಿಟ್ಟು ಬಿಟ್ಟಿರುವನೋ, ಅವನಿಗೆ ಈ ಕಾಲದಲ್ಲಿಯೇ ಮನೆ, ಸಹೋದರರು, ಸಹೋದರಿಯರು, ತಾಯಿ, ಮಕ್ಕಳು, ಹೊಲಗದ್ದೆಗಳು ಇವೆಲ್ಲವೂ ಹಿಂಸೆಗಳ ಸಹಿತವಾಗಿ ನೂರರಷ್ಟು ಸಿಕ್ಕೇ ಸಿಗುತ್ತವೆ ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವುದು.

ಆತನನ್ನು ಪ್ರಶ್ನೆಮಾಡಿದ್ದೇನಂದರೆ, “ಬೋಧಕನೇ, ‘ಅಣ್ಣನಾದವನು ಮಕ್ಕಳಿಲ್ಲದೆ ಹೆಂಡತಿಯನ್ನು ಬಿಟ್ಟು ಸತ್ತರೆ ಆಕೆಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ತನ್ನ ಅಣ್ಣನಿಗೆ ಸಂತಾನವನ್ನು ಪಡೆಯಬೇಕೆಂದು’ ಮೋಶೆಯು ನಮಗಾಗಿ ಬರೆದಿಟ್ಟಿದ್ದಾನಲ್ಲವೇ. “ಒಮ್ಮೆ ಏಳು ಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆ ಮಾಡಿಕೊಂಡು ಸಂತಾನವಿಲ್ಲದೆ ಸತ್ತನು. ಎರಡನೆಯವನೂ ಆಕೆಯನ್ನು ಮದುವೆ ಮಾಡಿಕೊಂಡು ಸಂತಾನವಿಲ್ಲದೆ ಸತ್ತನು. ಅದರಂತೆ ಮೂರನೆಯವನು. ಇದೇ ಪ್ರಕಾರ ಏಳು ಮಂದಿಯೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದೆ ಸತ್ತರು. ಕೊನೆಯಲ್ಲಿ ಆ ಸ್ತ್ರೀಯೂ ಸತ್ತಳು. ಪುನರುತ್ಥಾನದಲ್ಲಿ ಅವರು ಎದ್ದುಬರುವಾಗ ಅವರಲ್ಲಿ ಆಕೆಯು ಯಾರ ಹೆಂಡತಿಯಾಗಿರುವಳು? ಆ ಏಳು ಮಂದಿಗೂ ಆಕೆಯು ಹೆಂಡತಿಯಾಗಿದ್ದಳಲ್ಲಾ” ಎಂದರು. ಅದಕ್ಕೆ ಯೇಸು, “ನೀವು ಶಾಸ್ತ್ರವಚನಗಳನ್ನಾದರೂ, ದೇವರ ಶಕ್ತಿಯನ್ನಾದರೂ ತಿಳಿಯದೆ ಇರುವುದರಿಂದಲೇ ತಪ್ಪುವವರಾಗಿದ್ದೀರಿ? ಸತ್ತವರು ಬದುಕಿ ಎದ್ದಮೇಲೆ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಆದರೆ ಅವರು ಪರಲೋಕದಲ್ಲಿರುವ ದೇವದೂತರಂತೆ ಇರುತ್ತಾರೆ. ಆದರೆ ಸತ್ತವರು ಬದುಕಿ ಬರುತ್ತಾರೆಂಬುದನ್ನು ಕುರಿತು ಹೇಳಬೇಕಾದರೆ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಆಗಿದ್ದೇನೆ ಎಂದು ಪೊದೆಯಲ್ಲಿ ದೇವರು ಮೋಶೆಯ ಸಂಗಡ ಮಾತನಾಡಿದನೆಂದು ನೀವು ಮೋಶೆಯ ಗ್ರಂಥದಲ್ಲಿ ಓದಲಿಲ್ಲವೋ?’

ಇದಲ್ಲದೆ ಸಹೋದರನು ಸಹೋದರನನ್ನೂ, ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು. ಮಕ್ಕಳು ಹೆತ್ತವರಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು,

ಆದರೆ ಆ ದೂತನು ಅವನಿಗೆ, “ಜಕರೀಯನೇ, ಭಯಪಡಬೇಡ; ದೇವರು ನಿನ್ನ ವಿಜ್ಞಾಪನೆ ಕೇಳಿದ್ದಾನೆ; ನಿನ್ನ ಹೆಂಡತಿಯಾದ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು. ನೀನು ಅವನಿಗೆ ಯೋಹಾನನೆಂದು ಹೆಸರಿಡಬೇಕು. ನಿನಗೆ ಸಂತೋಷವೂ ಉಲ್ಲಾಸವೂ ಉಂಟಾಗುವುದು; ಮತ್ತು ಅವನು ಹುಟ್ಟಿದ್ದಕ್ಕೆ ಬಹುಜನರು ಸಂತೋಷಪಡುವರು. ಅವನು ಕರ್ತನ ದೃಷ್ಟಿಯಲ್ಲಿ ಮಹಾಪುರುಷನಾಗಿರುವನು; ದ್ರಾಕ್ಷಾರಸವನ್ನಾಗಲಿ, ಯಾವ ಮದ್ಯವನ್ನಾಗಲಿ ಕುಡಿಯಬಾರದು; ಅವನು ಹುಟ್ಟಿದಂದಿನಿಂದಲೇ ಪವಿತ್ರಾತ್ಮಭರಿತನಾಗಿರುವನು. ಇಸ್ರಾಯೇಲರಲ್ಲಿ ಅನೇಕರನ್ನು ಅವರ ದೇವರಾಗಿರುವ ಕರ್ತನ ಕಡೆಗೆ ತಿರುಗಿಸುವನು. ಅವನು ಎಲೀಯನ ಗುಣಶಕ್ತಿಗಳಿಂದ ಕೂಡಿದವನಾಗಿ ಕರ್ತನ ಮುಂದೂತನಾಗಿ ಹೋಗುವನು. ತಂದೆಗಳ ಹೃದಯವನ್ನು ಮಕ್ಕಳ ಕಡೆಗೂ, ಅವಿಧೇಯರನ್ನು ನೀತಿವಂತರ ಜ್ಞಾನದ ಕಡೆಗೂ ತಿರುಗಿಸಿ, ಕರ್ತನಿಗಾಗಿ ಜನರನ್ನು ಸಿದ್ಧಪಡಿಸುವನು” ಎಂದು ಹೇಳಿದನು.

ಎಲಿಸಬೇತಳು ಗರ್ಭಿಣಿಯಾದ ಆರನೆಯ ತಿಂಗಳಲ್ಲಿ, ದೇವರು ಗಬ್ರಿಯೇಲನೆಂಬ ತನ್ನ ದೂತನನ್ನು ಗಲಿಲಾಯ ಸೀಮೆಯ, ನಜರೇತೆಂಬ ಊರಿಗೆ, ಒಬ್ಬ ಕನ್ನಿಕೆಯ ಬಳಿಗೆ ಕಳುಹಿಸಿದನು; ಆ ಕನ್ನಿಕೆಯ ಹೆಸರು ಮರಿಯಳು; ಆಕೆಗೆ ದಾವೀದನ ಮನೆತನದ ಯೋಸೇಫನೆಂಬ ಪುರುಷನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆ ದೂತನು ಆಕೆಯ ಬಳಿಗೆ ಬಂದು “ದೇವರ ದಯೆ ಹೊಂದಿದವಳೇ, ನಿನಗೆ ಶುಭವಾಗಲಿ ಕರ್ತನು ನಿನ್ನ ಸಂಗಡ ಇದ್ದಾನೆ” ಅಂದನು. ಆಕೆಯು ಆ ಮಾತಿಗೆ ತಬ್ಬಿಬ್ಬಾಗಿ, ಇದೆಂಥ ಆಶೀರ್ವಾದ ಎಂದು ಯೋಚನೆಮಾಡುತ್ತಿದ್ದಳು. ಆ ದೂತನು ಆಕೆಗೆ, “ಮರಿಯಳೇ, ಹೆದರಬೇಡ; ನಿನಗೆ ದೇವರ ಕೃಪೆ ದೊರಕಿದೆ. ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸುವೆಂದು ಹೆಸರಿಡಬೇಕು. ಆತನು ಮಹಾಪುರುಷನಾಗುವನು, ಪರಾತ್ಪರನಾದ ದೇವರ ಕುಮಾರನೆಂದು ಕರೆಯಲ್ಪಡುವನು; ಇದಲ್ಲದೆ ದೇವರಾಗಿರುವ ಕರ್ತನು ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು. ಆತನು ಯಾಕೋಬನ ವಂಶವನ್ನು ಸದಾಕಾಲ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇರದು” ಎಂದು ಹೇಳಿದನು. ಆಗ ಮರಿಯಳು ಆ ದೂತನಿಗೆ, “ಇದು ಹೇಗಾದೀತು? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ” ಎಂದು ಕೇಳಿದಳು. ಅದಕ್ಕೆ ದೂತನು, “ಪವಿತ್ರಾತ್ಮನು ನಿನ್ನ ಮೇಲೆ ಬರುವನು; ಪರಾತ್ಪರನಾದ ದೇವರ ಶಕ್ತಿಯು ನಿನ್ನನ್ನು ಅವರಿಸುವುದು; ಆದುದರಿಂದ ನಿನಗೆ ಹುಟ್ಟುವ ಆ ಪವಿತ್ರ ಶಿಶು ದೇವರ ಮಗನೆನಿಸಿಕೊಳ್ಳುವನು.

ಎಲಿಸಬೇತಳು ಮರಿಯಳ ವಂದನೆಯನ್ನು ಕೇಳುತ್ತಲೇ ಆಕೆಯ ಗರ್ಭದಲ್ಲಿದ್ದ ಕೂಸು ಕುಣಿದಾಡಿತು ಮತ್ತು ಎಲಿಸಬೇತಳು ಪವಿತ್ರಾತ್ಮಭರಿತಳಾದಳು. ಆಗ ಆಕೆಯು ಮಹಾಧ್ವನಿಯಿಂದ ಕೂಗಿ, “ನೀನು ಸ್ತ್ರೀಯರೊಳಗೆ ಧನ್ಯಳು, ಮತ್ತು ನಿನ್ನಲ್ಲಿ ಹುಟ್ಟುವ ಕೂಸು ಆಶೀರ್ವಾದ ಹೊಂದಿದ್ದು. ನನ್ನ ಕರ್ತನ ತಾಯಿಯು ನನ್ನ ಬಳಿಗೆ ಬರುವಷ್ಟು ಸೌಭಾಗ್ಯ ನನಗೆ ಎಲ್ಲಿಂದಾಯಿತು? ಇಗೋ, ನಿನ್ನ ವಂದನೆಯು ನನ್ನ ಕಿವಿಗೆ ಬೀಳುತ್ತಲೇ ಕೂಸು ನನ್ನ ಗರ್ಭದಲ್ಲಿ ಉಲ್ಲಾಸದಿಂದ ಕುಣಿದಾಡಿತು.

ಯೋಸೇಫನು ಸಹ ತಾನು ದಾವೀದನ ಮನೆತನದವನೂ, ಗೋತ್ರದವನೂ ಆಗಿದ್ದದರಿಂದ ಹೆಸರು ನೊಂದಾಯಿಸಿಕೊಳ್ಳುವುದಕ್ಕಾಗಿ ತನಗೆ ನಿಶ್ಚಿತಾರ್ಥವಾಗಿದ್ದ ಹಾಗೂ ಗರ್ಭವತಿಯಾಗಿದ್ದ ಮರಿಯಳ ಸಂಗಡ ಗಲಿಲಾಯ ಸೀಮೆಯ ನಜರೇತ್ ಎಂಬ ಊರಿನಿಂದ ಹೊರಟು ಯೂದಾಯದಲ್ಲಿರುವ ಬೇತ್ಲೆಹೇಮೆಂಬ ದಾವೀದನೂರಿಗೆ ಹೋದರು. ಅವರು ಅಲ್ಲಿದ್ದಾಗ ಆಕೆಗೆ ಪ್ರಸವಕ್ಕೆ ದಿನತುಂಬಿತು. ಆಕೆಯು ತನ್ನ ಚೊಚ್ಚಲು ಮಗನನ್ನು ಹೆತ್ತು ಬಟ್ಟೆಯಲ್ಲಿ ಸುತ್ತಿ ಛತ್ರದಲ್ಲಿ ಅವರಿಗೆ ಸ್ಥಳವಿಲ್ಲದ ಕಾರಣ ಅವನನ್ನು ಗೋದಲಿಯಲ್ಲಿ ಮಲಗಿಸಿದಳು.

ಆ ಕೂಸಿಗೆ ಸುನ್ನತಿಮಾಡಬೇಕಾಗಿದ್ದ ಎಂಟನೆಯ ದಿನದಲ್ಲಿ, ಅವರು ಅದಕ್ಕೆ ಯೇಸು ಎಂದು ಹೆಸರಿಟ್ಟರು. ಆ ಕೂಸನ್ನು ಗರ್ಭಧರಿಸುವುದಕ್ಕಿಂತ ಮೊದಲೇ ದೇವದೂತನು ಅದೇ ಹೆಸರನ್ನು ಸೂಚಿಸಿದ್ದನು. ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಅವರ ಶುದ್ಧೀಕರಣದ ದಿನಗಳು ಮುಗಿದ ಮೇಲೆ, “ಚೊಚ್ಚಲು ಗಂಡೆಲ್ಲಾ ಕರ್ತನಿಗೆ ಮೀಸಲೆನಿಸಿಕೊಳ್ಳುವುದು” ಎಂದು ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ, ಅವರು ಆ ಕೂಸನ್ನು ಕರ್ತನಿಗೆ ಸಮರ್ಪಿಸುವುದಕ್ಕಾಗಿ ಯೆರೂಸಲೇಮಿಗೆ ತೆಗೆದುಕೊಂಡು ಹೋದರು.

ತಂದೆತಾಯಿಗಳು ಆತನನ್ನು ಕಂಡು ಬೆರಗಾದರು; ಮತ್ತು ಆತನ ತಾಯಿಯು, “ಕಂದಾ, ನೀನು ನಮಗೆ ಯಾಕೆ ಹೀಗೆ ಮಾಡಿದಿ? ನಿನ್ನ ತಂದೆಯೂ ನಾನೂ ಎಷ್ಟೋ ತಳಮಳಗೊಂಡು ನಿನ್ನನ್ನು ಹುಡುಕಿ ಬಂದೆವಲ್ಲಾ” ಎಂದು ಹೇಳಲು, ಆತನು ಅವರಿಗೆ, “ನೀವು ನನ್ನನ್ನು ಹುಡುಕಿದ್ದೇಕೆ? ನಾನು ನನ್ನ ತಂದೆಯ ಮನೆಯಲ್ಲಿ ಇರಬೇಕಾದವನು ಎಂದು ನಿಮಗೆ ತಿಳಿಯಲಿಲ್ಲವೇ?” ಎಂದು ಕೇಳಿದನು. ಆದರೆ ಆತನು ಹೇಳಿದ ಮಾತಿನ ಅರ್ಥವನ್ನು ಅವರು ಗ್ರಹಿಸಲಿಲ್ಲ. ಬಳಿಕ ಆತನು ಅವರ ಜೊತೆಯಲ್ಲಿ ನಜರೇತಿಗೆ ಬಂದು ಅವರಿಗೆ ವಿಧೇಯನಾಗಿದ್ದನು. ಆತನ ತಾಯಿಯು ಈ ಸಂಗತಿಗಳನ್ನೆಲ್ಲಾ ತನ್ನ ಮನಸ್ಸಿನಲ್ಲಿ ಇಟ್ಟುಕೊಂಡಳು.

ಯೇಸು ಉಪದೇಶಮಾಡುವುದಕ್ಕೆ ಪ್ರಾರಂಭಿಸಿದಾಗ ಸುಮಾರು ಮೂವತ್ತು ವರ್ಷದವನಾಗಿದ್ದನು. ಆತನು ಜನರ ಎಣಿಕೆಯಲ್ಲಿ ಯೋಸೇಫನ ಮಗನು. ಯೋಸೇಫನು ಹೇಲಿಯನ ಮಗನು; ಹೇಲಿಯನು ಮತ್ಥಾತನ ಮಗನು; ಮತ್ಥಾತನನು ಲೇವಿಯ ಮಗನು; ಲೇವಿಯನು ಮೆಲ್ಖಿಯನ ಮಗನು; ಮೆಲ್ಖಿಯನು ಯನ್ನಾಯನ ಮಗನು; ಯನ್ನಾಯನು ಯೋಸೇಫನ ಮಗನು; ಯೋಸೇಫನು ಮತ್ತಥೀಯನ ಮಗನು; ಮತ್ತಥೀಯನು ಆಮೋಸನ ಮಗನು; ಆಮೋಸನು ನಹೂಮನ ಮಗನು; ನಹೂಮನು ಎಸ್ಲಿಯ ಮಗನು; ಎಸ್ಲಿಯನು ನಗ್ಗಾಯನ ಮಗನು; ನಗ್ಗಾಯನು ಮಹಾಥನ ಮಗನು; ಮಹಾಥನು ಮತ್ತಥೀಯನ ಮಗನು; ಮತ್ತಥೀಯನು ಶಿಮೀಯನ ಮಗನು; ಶಿಮೀಯನು ಯೋಸೇಖನ ಮಗನು; ಯೋಸೇಖನು ಯೂದನ ಮಗನು; ಯೂದನು ಯೋಹಾನನ ಮಗನು; ಯೋಹಾನನು ರೇಸನ ಮಗನು; ರೇಸನು ಜೆರುಬ್ಬಾಬೆಲನ ಮಗನು, ಜೆರುಬ್ಬಾಬೆಲನು ಸಲಥಿಯೇಲನ ಮಗನು; ಸಲಥಿಯೇಲನು ನೇರಿಯನ ಮಗನು; ನೇರಿಯನು ಮೆಲ್ಖಿಯನ ಮಗನು; ಮೆಲ್ಖಿಯನು ಅದ್ದಿಯನ ಮಗನು; ಅದ್ದಿಯನು ಕೋಸಾಮನ ಮಗನು; ಕೋಸಾಮನು ಎಲ್ಮದಾಮನ ಮಗನು; ಎಲ್ಮದಾಮನು ಏರನ ಮಗನು; ಏರನು ಯೆಹೋಷುವನ ಮಗನು; ಯೆಹೋಷುವನು ಎಲಿಯೇಜರನ ಮಗನು; ಎಲಿಯೇಜರನು ಯೋರೈಮನ ಮಗನು; ಯೋರೈಮನು ಮತ್ಥಾತನ ಮಗನು; ಮತ್ಥಾತನು ಲೇವಿಯನ ಮಗನು; ಲೇವಿಯನು ಸಿಮಿಯೋನನ ಮಗನು; ಸಿಮಿಯೋನನು ಯೂದನ ಮಗನು; ಯೂದನು ಯೋಸೇಫನ ಮಗನು; ಯೋಸೇಫನು ಯೋನಾಮನ ಮಗನು; ಯೋನಾಮನು ಎಲಿಯಕೀಮನ ಮಗನು; ಎಲಿಯಕೀಮನು ಮೆಲೆಯಾನ ಮಗನು; ಮೆಲೆಯಾನು ಮೆನ್ನನ ಮಗನು; ಮೆನ್ನನು ಮತ್ತಾಥನ ಮಗನು; ಮತ್ತಾಥನು ನಾಥಾನನ ಮಗನು; ನಾಥಾನನು ದಾವೀದನ ಮಗನು; ದಾವೀದನು ಇಷಯನ ಮಗನು; ಇಷಯನು ಓಬೇದನ ಮಗನು; ಓಬೇದನು ಬೋವಜನ ಮಗನು; ಬೋವಜನು ಸಲ್ಮೋನನ ಮಗನು; ಸಲ್ಮೋನನು ನಹಶೋನನ ಮಗನು; ನಹಶೋನನು ಅಮ್ಮಿನಾದಾಬನ ಮಗನು; ಅಮ್ಮಿನಾದಾಬನು ಅದ್ಮಿನನ ಮಗನು; ಅದ್ಮಿನನು ಆರ್ನೈಯನ ಮಗನು; ಆರ್ನೈಯನು ಎಸ್ರೋನನ ಮಗನು; ಎಸ್ರೋನನು ಪೆರೆಚನ ಮಗನು; ಪೆರೆಚನು ಯೂದನ ಮಗನು; ಯೂದನು ಯಾಕೋಬನ ಮಗನು; ಯಾಕೋಬನು ಇಸಾಕನ ಮಗನು; ಇಸಾಕನು ಅಬ್ರಹಾಮನ ಮಗನು; ಅಬ್ರಹಾಮನು ತೇರನ ಮಗನು; ತೇರನು ನಾಹೋರನ ಮಗನು; ನಾಹೋರನು ಸೆರೂಗನ ಮಗನು; ಸೆರೂಗನು ರೆಗೂವನ ಮಗನು; ರೆಗೂವನು ಪೆಲೆಗನ ಮಗನು; ಪೆಲೆಗನು ಹೇಬೆರನ ಮಗನು; ಹೇಬೆರನು ಸಾಲನ ಮಗನು; ಸಾಲನು ಕಯಿನಾನನ ಮಗನು; ಕಯಿನಾನನು ಅರ್ಫಕ್ಷಾದನ ಮಗನು; ಅರ್ಫಕ್ಷಾದನು ಶೇಮನ ಮಗನು; ಶೇಮನು ನೋಹನ ಮಗನು; ನೋಹನು ಲಾಮೆಕನ ಮಗನು; ಲಾಮೆಕನು ಮೆತೂಷಲನ ಮಗನು; ಮೆತೂಷಲನು ಹನೋಕನ ಮಗನು; ಹನೋಕನು ಯೆರೆದನ ಮಗನು; ಯೆರೆದನು ಮಹಲಲೇಲನ ಮಗನು; ಮಹಲಲೇಲನು ಕಯಿನಾನನ ಮಗನು; ಕಯಿನಾನನು ಎನೋಷನ ಮಗನು; ಎನೋಷನು ಸೇಥನ ಮಗನು; ಸೇಥನು ಆದಾಮನ ಮಗನು ಆದಾಮನು ದೇವರ ಮಗನು.

ಯೇಸುವಿನ ತಾಯಿಯೂ ತಮ್ಮಂದಿರೂ ಆತನಿದ್ದಲ್ಲಿಗೆ ಬಂದು ಜನರ ಗುಂಪಿನ ನಿಮಿತ್ತ ಆತನ ಬಳಿಗೆ ಹೋಗಲಾರದೆ ಇದ್ದರು. ಜನರು ಆತನಿಗೆ, “ನಿನ್ನ ತಾಯಿಯು, ನಿನ್ನ ಸಹೋದರರು ನಿನ್ನನ್ನು ಕಾಣಬೇಕೆಂದು ಹೊರಗೆ ನಿಂತಿದ್ದಾರೆ” ಎಂದು ಹೇಳಿದಾಗ, ಆತನು ಅವರಿಗೆ, “ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವವರೇ ನನಗೆ ತಾಯಿಯು ಸಹೋದರರು ಆಗಿದ್ದಾರೆ” ಎಂದು ಉತ್ತರಕೊಟ್ಟನು.

ನಿಮ್ಮಲ್ಲಿ ತಂದೆಯಾದವನು ಮೀನನ್ನು ಕೇಳುವ ಮಗನಿಗೆ ಮೀನು ಕೊಡದೆ ಹಾವನ್ನು ಕೊಡುವನೇ? ಅಥವಾ ಮೊಟ್ಟೆಯನ್ನು ಕೇಳಿದರೆ ಚೇಳನ್ನು ಕೊಡುವನೇ? ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವನ್ನೇ ಕೊಡುವನಲ್ಲವೇ?” ಅಂದನು.

ಮಗನಿಗೆ ವಿರೋಧವಾಗಿ ತಂದೆಯು, ತಂದೆಗೆ ವಿರೋಧವಾಗಿ ಮಗನು, ಮಗಳಿಗೆ ವಿರೋಧವಾಗಿ ತಾಯಿಯು, ತಾಯಿಗೆ ವಿರೋಧವಾಗಿ ಮಗಳು, ಸೊಸೆಗೆ ವಿರೋಧವಾಗಿ ಅತ್ತೆಯು. ಅತ್ತೆಗೆ ವಿರೋಧವಾಗಿ ಸೊಸೆಯು ಪರಸ್ಪರ ಭಿನ್ನಭೇದವುಳ್ಳವರಾಗಿ ವಿಂಗಡಿಸಿ ಹೋಗುವರು” ಅಂದನು.

“ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆತಾಯಿ, ಹೆಂಡತಿ, ಮಕ್ಕಳು, ಅಣ್ಣತಮ್ಮಂದಿರು, ಅಕ್ಕತಂಗಿಯರು ಇವರನ್ನೂ ತನ್ನ ಪ್ರಾಣವನ್ನು ಸಹ ಹಗೆಮಾಡದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು. ಯಾವನಾದರೂ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರದ ಹೊರತು ಅವನು ನನ್ನ ಶಿಷ್ಯನಾಗಿರಲಾರನು.

ಇನ್ನೂ ಆತನು ಹೇಳಿದ್ದೇನಂದರೆ, “ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು. ಅವರಲ್ಲಿ ಕಿರಿಯವನು ತಂದೆಗೆ, ‘ಅಪ್ಪಾ, ಆಸ್ತಿಯಲ್ಲಿ ನನಗೆ ಬರತಕ್ಕ ಪಾಲನ್ನು ಕೊಡು’ ಎಂದು ಕೇಳಿಕೊಳ್ಳಲು ತಂದೆಯು ಆಸ್ತಿಯನ್ನು ಅವರಿಗೆ ಹಂಚಿಕೊಟ್ಟನು. ಸ್ವಲ್ಪ ದಿನದ ಮೇಲೆ ಆ ಕಿರಿಯ ಮಗನು ತನ್ನ ಪಾಲನ್ನೆಲ್ಲಾ ಕೂಡಿಸಿಕೊಂಡು ದೂರದೇಶಕ್ಕೆ ಹೊರಟುಹೋಗಿ ಅಲ್ಲಿ ಪಟಿಂಗನಾಗಿ ಬದುಕಿ ತನ್ನ ಆಸ್ತಿಯನ್ನು ಹಾಳುಮಾಡಿಕೊಂಡನು. ಹೀಗೆ ಅವನು ಎಲ್ಲಾ ಹಾಳುಮಾಡಿಕೊಂಡ ಮೇಲೆ ಆ ದೇಶದಲ್ಲೆಲ್ಲಾ ಘೋರವಾದ ಬರ ಬಂದು ಏನೂ ಗತಿಯಿಲ್ಲದವನಾದನು. ಆಗ ಅವನು ಹೋಗಿ ಆ ದೇಶದ ನಿವಾಸಿಗಳೊಳಗೆ ಒಬ್ಬನಲ್ಲಿ ಸೇರಿಕೊಂಡನು. ಆ ಮನುಷ್ಯನು ಹಂದಿಗಳನ್ನು ಮೇಯಿಸುವುದಕ್ಕೆ ಅವನನ್ನು ತನ್ನ ಹೊಲಗಳಿಗೆ ಕಳುಹಿಸಿದನು. ಹೀಗಿರಲಾಗಿ ಅವನು ಹಂದಿ ತಿನ್ನುತ್ತಿದ್ದ ಕಾಯಿಗಳನ್ನಾದರೂ ತಿಂದು ಹಸಿವನ್ನು ತೀರಿಸಿಕೊಳ್ಳಬೇಕೆಂದು ಆಸೆಪಟ್ಟನು, ಆದರೂ ಯಾರೂ ಅವನಿಗೆ ಕೊಡಲಿಲ್ಲ. ಆಗ ಅವನಿಗೆ ಬುದ್ಧಿಬಂದು ಅವನು, ‘ನನ್ನ ತಂದೆಯ ಬಳಿಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ಬೇಕಾದಷ್ಟು ಆಹಾರವಿದೆ, ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತಿದ್ದೇನೆ. ನಾನು ಎದ್ದು ನನ್ನ ತಂದೆಯ ಬಳಿಗೆ ಹೋಗಿ ಅವನಿಗೆ, ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ನಾನು ಪಾಪ ಮಾಡಿದ್ದೇನೆ. ಇನ್ನು ನಾನು ನಿನ್ನ ಮಗನೆನಿಸಿಕೊಳ್ಳುವುದಕ್ಕೆ ಯೋಗ್ಯನಲ್ಲ, ನನ್ನನ್ನು ನಿನ್ನ ಕೂಲಿಯಾಳುಗಳಲ್ಲಿ ಒಬ್ಬನಂತೆ ಮಾಡು’ ಎಂದು ಹೇಳುವೆನು ಅಂದುಕೊಂಡು, ಎದ್ದು ತನ್ನ ತಂದೆಯ ಕಡೆಗೆ ಬಂದನು. “ಅವನು ಇನ್ನೂ ದೂರದಲ್ಲಿರುವಾಗ ಅವನ ತಂದೆಯು ಅವನನ್ನು ಕಂಡು, ಕನಿಕರಪಟ್ಟು, ಓಡಿಬಂದು ಅವನ ಕೊರಳನ್ನು ಅಪ್ಪಿಕೊಂಡು, ಅವನಿಗೆ ಬಹಳವಾಗಿ ಮುದ್ದಿಟ್ಟನು. ಆದರೂ ಮಗನು ಅವನಿಗೆ, ‘ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ಪಾಪ ಮಾಡಿದ್ದೇನೆ. ಇನ್ನು ನಾನು ನಿನ್ನ ಮಗನೆನಿಸಿಕೊಳ್ಳುವುದಕ್ಕೆ ಯೋಗ್ಯನಲ್ಲ’ ಎಂದು ಹೇಳಲು, ತಂದೆಯು ತನ್ನ ಆಳುಗಳಿಗೆ, ‘ಶ್ರೇಷ್ಠವಾದ ನಿಲುವಂಗಿಯನ್ನು ತಟ್ಟನೆ ತಂದು ಇವನಿಗೆ ಉಡಿಸಿ, ಇವನ ಕೈಗೆ ಉಂಗುರವನ್ನು ತೊಡಿಸಿರಿ, ಕಾಲಿಗೆ ಜೋಡು ಮೆಡಿಸಿರಿ, ಕೊಬ್ಬಿಸಿದ ಆ ಕರುವನ್ನು ತಂದು ಕೊಯ್ಯಿರಿ, ಹಬ್ಬಮಾಡೋಣ, ಉಲ್ಲಾಸಪಡೋಣ. ಈ ನನ್ನ ಮಗನು ಸತ್ತವನಾಗಿದ್ದನು, ತಿರುಗಿ ಬದುಕಿ ಬಂದಿದ್ದಾನೆ. ಪೋಲಿಹೋಗಿದ್ದನು, ಸಿಕ್ಕಿದನು’ ಎಂದು ಹೇಳಿ ಉಲ್ಲಾಸಪಡುವುದಕ್ಕೆ ತೊಡಗಿದರು.

“ತನ್ನ ಹೆಂಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಮಾಡಿಕೊಳ್ಳುವ ಪ್ರತಿಯೊಬ್ಬನು ವ್ಯಭಿಚಾರ ಮಾಡುವವನಾಗಿದ್ದಾನೆ. ಮತ್ತು ಗಂಡಬಿಟ್ಟವಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗಿದ್ದಾನೆ.

ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. ನಿನ್ನ ಸಹೋದರನು ತಪ್ಪುಮಾಡಿದರೆ ಅವನನ್ನು ಗದರಿಸು. ಅವನು ಪಶ್ಚಾತ್ತಾಪಪಟ್ಟರೆ ಅವನ ತಪ್ಪನ್ನು ಕ್ಷಮಿಸಿಬಿಡು. ಅವನು ದಿನಕ್ಕೆ ಏಳು ಸಾರಿ ನಿನಗೆ ತಪ್ಪುಮಾಡಿ ಏಳು ಸಾರಿಯೂ ನಿನ್ನ ಕಡೆಗೆ ತಿರುಗಿಕೊಂಡು, ‘ನಾನು ಪಶ್ಚಾತ್ತಾಪಪಡುತ್ತೇನೆ ನನ್ನನ್ನು ಕ್ಷಮಿಸು’ ಎಂದು ಕೇಳಿಕೊಂಡರೆ ಅವನನ್ನು ಕ್ಷಮಿಸು” ಎಂದು ಹೇಳಿದನು.

ಕೆಲವರು ತಮ್ಮ ಕೂಸುಗಳನ್ನು ಯೇಸುವಿನಿಂದ ಮುಟ್ಟಿಸಬೇಕೆಂದು ಆತನ ಬಳಿಗೆ ತರಲು, ಶಿಷ್ಯರು ಕಂಡು ಅವರನ್ನು ಗದರಿಸಿದರು. ಆದರೆ ಯೇಸು ಆ ಕೂಸುಗಳನ್ನು ತನ್ನ ಬಳಿಗೆ ಕರೆತರಿಸಿ, “ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ, ಅವುಗಳಿಗೆ ಅಡ್ಡಿಮಾಡಬೇಡಿರಿ, ದೇವರ ರಾಜ್ಯವು ಇಂಥವರದೇ. ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾರು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವುದಿಲ್ಲವೋ ಅವನು ಅದರಲ್ಲಿ ಸೇರುವುದೇ ಇಲ್ಲ” ಅಂದನು.

ಆತನು ಅವರಿಗೆ, “ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ದೇವರ ರಾಜ್ಯಕ್ಕಾಗಿ ಮನೆಯನ್ನಾಗಲಿ, ಹೆಂಡತಿಯನ್ನಾಗಲಿ, ಅಣ್ಣತಮ್ಮಂದಿರನ್ನಾಗಲಿ, ತಂದೆತಾಯಿಗಳನ್ನಾಗಲಿ, ಮಕ್ಕಳನ್ನಾಗಲಿ ತ್ಯಜಿಸುತ್ತಾನೋ, ಅವನಿಗೆ ಈ ಲೋಕದಲ್ಲಿ ಅನೇಕ ಪಾಲು ಹೆಚ್ಚಾಗಿ ಸಿಕ್ಕೇ ಸಿಕ್ಕುತ್ತವೇ. ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವುದು” ಎಂದು ಹೇಳಿದನು.

ತರುವಾಯ ಪುನರುತ್ಥಾನವಿಲ್ಲವೆಂದು ಹೇಳುವವರಾದ ಸದ್ದುಕಾಯರಲ್ಲಿ ಕೆಲವರು ಬಂದು ಆತನಿಗೆ ಪ್ರಶ್ನೆಮಾಡಿದ್ದೇನಂದರೆ, “ಬೋಧಕನೇ, ಅಣ್ಣನಾದವನು ಹೆಂಡತಿಯುಳ್ಳವನಾಗಿದ್ದು ಮಕ್ಕಳಿಲ್ಲದೆ ಸತ್ತರೆ ಅವನ ತಮ್ಮನು ಆಕೆಯನ್ನು ಮದುವೆಮಾಡಿಕೊಂಡು ತನ್ನ ಅಣ್ಣನಿಗೆ ಸಂತಾನವನ್ನು ಪಡೆಯಬೇಕೆಂದು ಮೋಶೆಯು ನಮಗೆ ಬರೆದಿಟ್ಟನಷ್ಟೆ. ಒಳ್ಳೆಯದು, ಏಳು ಮಂದಿ ಅಣ್ಣತಮ್ಮಂದಿರಿದ್ದರು. ಮೊದಲನೆಯವನು ಮದುವೆಯಾಗಿ ಮಕ್ಕಳಿಲ್ಲದೆ ಸತ್ತನು. ಎರಡನೆಯವನೂ ಅವನ ತರುವಾಯ ಮೂರನೆಯವನೂ ಆಕೆಯನ್ನು ಮದುವೆಮಾಡಿಕೊಂಡರು. ಇದೇ ರೀತಿಯಾಗಿ ಏಳು ಮಂದಿಯೂ ಮದುವೆಯಾಗಿ ಮಕ್ಕಳಿಲ್ಲದೆ ಸತ್ತರು. ಕಡೆಯಲ್ಲಿ ಆ ಹೆಂಗಸೂ ಸತ್ತಳು. ಹಾಗಾದರೆ ಪುನರುತ್ಥಾನದಲ್ಲಿ ಆ ಸ್ತ್ರೀಯು ಅವರೊಳಗೆ ಯಾರ ಹೆಂಡತಿಯಾಗಿರುವಳು? ಆಕೆಯನ್ನು ಏಳು ಮಂದಿಯೂ ಮದುವೆ ಮಾಡಿಕೊಂಡಿದ್ದರಲ್ಲಾ” ಅಂದರು. ಯೇಸು ಅವರಿಗೆ, “ಈ ಲೋಕದ ಜನರು ಮದುವೆಮಾಡಿಕೊಳ್ಳುತ್ತಾರೆ ಹಾಗೂ ಮದುವೆಮಾಡಿಕೊಡುತ್ತಾರೆ. ಆದರೆ ಮುಂಬರುವ ಲೋಕವನ್ನೂ, ಸತ್ತವರೊಳಗಿಂದ ಪುನರುತ್ಥಾನವನ್ನೂ ಪಡೆಯುವುದಕ್ಕೆ ಯೋಗ್ಯರೆನಿಸಿಕೊಂಡಿರುವವರು ಮದುವೆಮಾಡಿಕೊಳ್ಳುವುದೂ ಇಲ್ಲ, ಮಾಡಿಕೊಡುವುದೂ ಇಲ್ಲ.

ಆದರೂ ಯಾರಾರು ಆತನನ್ನು ಸ್ವೀಕರಿಸಿದರೋ, ಅಂದರೆ ಆತನ ಹೆಸರಿನಲ್ಲಿ ನಂಬಿಕೆಯಿಟ್ಟರೋ ಅವರಿಗೆ ದೇವರ ಮಕ್ಕಳಾಗುವ ಅಧಿಕಾರವನ್ನು ಆತನು ಕೊಟ್ಟನು. ಇವರು ರಕ್ತಸಂಬಂಧದಿಂದಾಗಲಿ, ಶರೀರದ ಇಚ್ಛೆಯಿಂದಾಗಲಿ, ಪುರುಷ ಸಂಕಲ್ಪದಿಂದಾಗಲಿ ಹುಟ್ಟಿದವರಲ್ಲ; ದೇವರಿಂದಲೇ ಹುಟ್ಟಿದವರು.

ಮೂರನೆಯ ದಿನದಲ್ಲಿ ಗಲಿಲಾಯದ ಕಾನಾ ಎಂಬ ಊರಿನಲ್ಲಿ ಒಂದು ಮದುವೆ ನಡೆಯಿತು. ಯೇಸುವಿನ ತಾಯಿ ಅಲ್ಲಿ ಇದ್ದಳು.

ಮದಲಗಿತ್ತಿಯುಳ್ಳವನೇ ಮದಲಿಂಗನು. ಆದರೂ ಮದಲಿಂಗನ ಗೆಳೆಯನು ಅವನ ಹತ್ತಿರ ನಿಂತುಕೊಂಡು ಅವನ ಮಾತುಗಳನ್ನು ಕೇಳಿ ಮದಲಿಂಗನ ಧ್ವನಿಗೆ ಬಹು ಸಂತೋಷಪಡುತ್ತಾನಲ್ಲವೇ. ಆದಕಾರಣ ಈ ನನ್ನ ಸಂತೋಷವು ಪರಿಪೂರ್ಣವಾಯಿತು. ಆತನು ವೃದ್ಧಿಯಾಗಬೇಕು ನಾನು ಕಡಿಮೆಯಾಗಬೇಕು, ಅಂದನು.

ಯೇಸು ಆಕೆಗೆ “ಹೋಗಿ ನಿನ್ನ ಗಂಡನನ್ನು ಇಲ್ಲಿಗೆ ಕರೆದುಕೊಂಡು ಬಾ” ಎಂದು ಹೇಳಿದನು. ಅದಕ್ಕೆ ಆ ಸ್ತ್ರೀಯು “ನನಗೆ ಗಂಡನಿಲ್ಲ” ಎಂದಳು. ಯೇಸು ಆಕೆಗೆ, “ನನಗೆ ಗಂಡನಿಲ್ಲವೆಂದು ನೀನು ಹೇಳಿದ್ದು ಸರಿಯೇ. ನಿನಗೆ ಐದು ಮಂದಿ ಗಂಡಂದಿರಿದ್ದರು. ಈಗ ನಿನಗಿರುವವನು ನಿನ್ನ ಗಂಡನಲ್ಲ; ನೀನು ಹೇಳಿದ್ದು ನಿಜವಾದ ಸಂಗತಿ” ಎಂದನು.

ಆಗ “ನಿನ್ನ ಮಗನು ಬದುಕುತ್ತಾನೆ” ಎಂದು ಯೇಸು ತನಗೆ ಹೇಳಿದ ತಾಸಿನಲ್ಲಿಯೇ ಅದು ಸಂಭವಿಸಿತೆಂದು ಆ ತಂದೆಯು ತಿಳಿದುಕೊಂಡದ್ದರಿಂದ ಅವನೂ ಅವನ ಮನೆಯವರೆಲ್ಲರೂ ಯೇಸುವನ್ನು ನಂಬಿದರು.

“ಈತನು ಯೋಸೇಫನ ಮಗನಾದ ಯೇಸು ಅಲ್ಲವೇ? ಈತನ ತಂದೆ ತಾಯಿಗಳನ್ನು ನಾವು ಬಲ್ಲೆವಲ್ಲವೇ? ಹಾಗಾದರೆ, ‘ನಾನು ಪರಲೋಕದಿಂದ ಇಳಿದು ಬಂದೆನು’ ಎಂದು ಈತನು ಹೇಳುವುದಾದರೂ ಹೇಗೆ?” ಎಂದರು.

ಯೇಸು ಹಾದು ಹೋಗುತ್ತಿದ್ದಾಗ, ಹುಟ್ಟು ಕುರುಡನಾಗಿದ್ದ ಒಬ್ಬ ಮನುಷ್ಯನನ್ನು ಕಂಡನು. ಆತನ ಶಿಷ್ಯರು, “ಗುರುವೇ, ಇವನು ಕುರುಡನಾಗಿ ಹುಟ್ಟಿರುವುದಕ್ಕೆ ಯಾರು ಪಾಪಮಾಡಿದರು? ಇವನೋ ಅಥವಾ ಇವನ ತಂದೆತಾಯಿಗಳೋ?” ಎಂದು ಆತನನ್ನು ಕೇಳಿದರು. ಯೇಸು, “ಇವನಾಗಲಿ ಇವನ ತಂದೆತಾಯಿಗಳಾಗಲಿ ಪಾಪ ಮಾಡಲಿಲ್ಲ. ಆದರೆ ದೇವರ ಕ್ರಿಯೆಗಳು ಇವನಲ್ಲಿ ತೋರಿಬರುವುದಕ್ಕಾಗಿ ಹೀಗಾಯಿತು.

“ನಾನು ನಿಮ್ಮನ್ನು ಅನಾಥರನ್ನಾಗಿ ಬಿಡುವುದಿಲ್ಲ, ನಿಮ್ಮ ಬಳಿಗೆ ಬರುತ್ತೇನೆ.

ಒಬ್ಬ ಸ್ತ್ರೀ ಹೆರುವಾಗ ತನ್ನ ಬೇನೆಯ ಕಾಲವು ಬಂದಿತೆಂದು ತಿಳಿದು ಆಕೆಗೆ ದುಃಖವಾಗುತ್ತದೆ, ಆದರೆ ಆಕೆಯು ಕೂಸನ್ನು ಹೆತ್ತ ಮೇಲೆ, ಲೋಕದಲ್ಲಿ ಒಂದು ಮಗು ಹುಟ್ಟಿತೆಂದು ಆನಂದದಿಂದ ಆ ವೇದನೆಯನ್ನು ಪುನಃ ನೆನಸಿಕೊಳ್ಳುವುದಿಲ್ಲ.

ಯೇಸುವಿನ ಶಿಲುಬೆಯ ಬಳಿಯಲ್ಲಿ ಆತನ ತಾಯಿಯೂ, ಆತನ ತಾಯಿಯ ತಂಗಿಯೂ, ಕ್ಲೋಪನ ಹೆಂಡತಿಯಾದ ಮರಿಯಳೂ, ಮಗ್ದಲದ ಮರಿಯಳೂ ನಿಂತಿದ್ದರು. ಯೇಸು ತನ್ನ ತಾಯಿಯನ್ನೂ ಹತ್ತಿರದಲ್ಲಿ ನಿಂತಿದ್ದ ತನ್ನ ಪ್ರೀತಿಯ ಶಿಷ್ಯನನ್ನೂ ನೋಡಿ ತನ್ನ ತಾಯಿಗೆ, “ಸ್ತ್ರೀಯೇ, ಇಗೋ, ನಿನ್ನ ಮಗನು” ಎಂದು ಹೇಳಿದನು. ತರುವಾಯ ಆ ಶಿಷ್ಯನಿಗೆ, “ಇಗೋ, ನಿನ್ನ ತಾಯಿ” ಎಂದು ಹೇಳಿದನು. ಆ ಗಳಿಗೆಯಿಂದ ಆ ಶಿಷ್ಯನು ಆಕೆಯನ್ನು ತನ್ನ ಸ್ವಂತ ಮನೆಯಲ್ಲೇ ಇರಿಸಿಕೊಂಡನು.

ಅಲ್ಲಿ ಕೆಲವು ಮಂದಿ ಸ್ತ್ರೀಯರೂ, ಯೇಸುವಿನ ತಾಯಿಯಾದ ಮರಿಯಳೂ, ಆತನ ತಮ್ಮಂದಿರೂ ಅವರ ಸಂಗಡ ಇದ್ದರು, ಇವರೆಲ್ಲರೂ ಏಕಮನಸ್ಸಿನಿಂದ ಪ್ರಾರ್ಥನೆಯಲ್ಲಿ ನಿರತರಾಗಿದ್ದರು.

“ಕಡೆ ದಿನಗಳಲ್ಲಿ ನಾನು ಎಲ್ಲಾ ಜನರ ಮೇಲೆ ನನ್ನ ಆತ್ಮವನ್ನು ಸುರಿಸುವೆನು, ಆಗ ನಿಮ್ಮಲ್ಲಿರುವ ಗಂಡಸರೂ ಹೆಂಗಸರೂ ಪ್ರವಾದಿಸುವರು; ನಿಮ್ಮ ಯೌವನಸ್ಥರಿಗೆ ದಿವ್ಯದರ್ಶನಗಳಾಗುವವು; ನಿಮ್ಮ ಹಿರಿಯರಿಗೆ ಕನಸುಗಳು ಬೀಳುವವು;

ಆ ವಾಗ್ದಾನವು ನಿಮಗೂ, ನಿಮ್ಮ ಮಕ್ಕಳಿಗೂ, ಅಂತೂ ನಮ್ಮ ದೇವರಾಗಿರುವ ಕರ್ತನು ತನ್ನ ಕಡೆಗೆ ಕರೆಯುವ ದೂರದಲ್ಲಿರುವ ಎಲ್ಲರಿಗೂ ಇರುವುದಾಗಿದೆ” ಎಂದು ಹೇಳಿದನು.

ಅವನು ದೈವಭಕ್ತನೂ, ತನ್ನ ಮನೆಯವರೆಲ್ಲರ ಸಹಿತವಾಗಿ ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳುವವನು ಆಗಿದ್ದು, ಜನರಿಗೆ ಬಹಳವಾಗಿ ದಾನಧರ್ಮಮಾಡುತ್ತಾ, ದೇವರಿಗೆ ನಿತ್ಯವೂ ಪ್ರಾರ್ಥನೆಮಾಡುತ್ತಾ ಇದ್ದನು.

ಅವನು ನಿನಗೆ ಸಂದೇಶವನ್ನು ಹೇಳುವನು, ಆ ಸಂದೇಶದಿಂದ ನಿನಗೂ ನಿನ್ನ ಮನೆಯವರೆಲ್ಲರಿಗೂ ರಕ್ಷಣೆಯಾಗುವದು” ಎಂದು ಹೇಳಿದನೆಂಬುದಾಗಿ ತಿಳಿಸಿದನು.

ಆಕೆಯೂ, ಆಕೆಯ ಮನೆಯವರೂ ದೀಕ್ಷಾಸ್ನಾನ ಮಾಡಿಸಿಕೊಂಡ ಮೇಲೆ, ಆಕೆ; “ಕರ್ತನನ್ನು ನಂಬಿದವಳೆಂದು ನೀವು ನನ್ನ ಬಗ್ಗೆ ನಿಶ್ಚಯಿಸಿಕೊಂಡಿದ್ದರೆ ನನ್ನ ಮನೆಯಲ್ಲಿ ಬಂದು ಉಳಿದುಕೊಳ್ಳಬೇಕೆಂದು” ಬೇಡಿಕೊಂಡು ನಮ್ಮನ್ನು ಬಲವಂತ ಮಾಡಿದಳು.

ಅವರು; “ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆ ಹೊಂದುವಿ, ನಿನ್ನ ಮನೆಯವರೂ ರಕ್ಷಣೆಹೊಂದುವರು” ಎಂದು ಹೇಳಿ, ಅವನಿಗೂ, ಅವನ ಮನೆಯಲ್ಲಿದ್ದವರೆಲ್ಲರಿಗೂ ದೇವರ ವಾಕ್ಯವನ್ನು ತಿಳಿಸಿದರು. ಆ ಮೇಲೆ ಅವನು ರಾತ್ರಿಯ ಅದೇ ಗಳಿಗೆಯಲ್ಲಿ ಅವರನ್ನು ಕರೆದುಕೊಂಡು ಹೋಗಿ ಅವರ ಗಾಯಗಳನ್ನು ತೊಳೆದು ಕೂಡಲೆ ತಾನೂ ತನ್ನವರೆಲ್ಲರ ಸಹಿತವಾಗಿ ದೀಕ್ಷಾಸ್ನಾನ ಮಾಡಿಸಿಕೊಂಡನು. ತರುವಾಯ ಅವರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಊಟಮಾಡಿಸಿದನು. ಅವನು ತನ್ನ ಮನೆಯವರೆಲ್ಲರ ಸಂಗಡ ದೇವರನ್ನು ನಂಬಿ ಸಂತೋಷಪಟ್ಟರು.

ಇದಕ್ಕೆ ದೃಷ್ಟಾಂತ, ಗಂಡನು ಜೀವದಿಂದಿರುವ ತನಕ ಹೆಂಡತಿಯು ನ್ಯಾಯದ ಪ್ರಕಾರ ಅವನಿಗೆ ಬದ್ಧಳಾಗಿರುವಳು. ಗಂಡನು ಸತ್ತರೆ ಮದುವೆಯ ನಿಯಮದಿಂದ ಅವಳು ಬಿಡುಗಡೆಯಾಗುತ್ತಾಳೆ. ಹೀಗಿರಲಾಗಿ ಗಂಡನು ಜೀವದಿಂದಿರುವಾಗ ಆಕೆ ಬೇರೊಬ್ಬನನ್ನು ಸೇರಿದರೆ ವ್ಯಭಿಚಾರಿಣಿ ಎನಿಸಿಕೊಳ್ಳುವಳು. ಆದರೆ ಗಂಡನು ಸತ್ತ ಮೇಲೆ ಆಕೆ ಆ ನಿಯಮದಿಂದ ಬಿಡುಗಡೆಯಾದ್ದರಿಂದ, ಆಕೆ ಮತ್ತೊಬ್ಬ ಗಂಡನನ್ನು ಮದುವೆ ಮಾಡಿಕೊಂಡರೂ ವ್ಯಭಿಚಾರಿಣಿ ಎಂದೆನಿಸಿಕೊಳ್ಳುವುದಿಲ್ಲ.

ಯಾರು ದೇವರ ಆತ್ಮಾನುಸಾರವಾಗಿ ನಡೆದುಕೊಳ್ಳುತ್ತಾರೋ, ಅವರು ದೇವರ ಮಕ್ಕಳಾಗಿದ್ದಾರೆ. ನೀವು ತಿರುಗಿ ಭಯದಲ್ಲಿ ಬೀಳುವ ಹಾಗೆ ದಾಸತ್ವದ ಆತ್ಮನನ್ನು ಹೊಂದಿದವರಲ್ಲ. ಅದರ ಬದಲಾಗಿ, ನಿಮ್ಮವು ದೇವರನ್ನು, “ಅಪ್ಪಾ, ತಂದೆಯೇ,” ಎಂದು ಕರೆಯುವ ಮಕ್ಕಳ ಆತ್ಮವನ್ನು ಹೊಂದಿದ್ದೀರಿ. ನಾವು ದೇವರ ಮಕ್ಕಳಾಗಿದ್ದೇವೆಂಬುದಕ್ಕೆ ಪವಿತ್ರಾತ್ಮನೇ ನಮ್ಮ ಆತ್ಮದೊಂದಿಗೆ ಸಾಕ್ಷಿ ಹೇಳುತ್ತಾನೆ. ಮಕ್ಕಳಾಗಿದ್ದರೆ ಬಾಧ್ಯಸ್ಥರೂ ಆಗಿದ್ದೇವೆ; ದೇವರಿಗೆ ಬಾಧ್ಯಸ್ಥರೂ ಹಾಗೂ ಕ್ರಿಸ್ತನೊಂದಿಗೆ ಸಹಾ ಬಾಧ್ಯರು ಆಗಿದ್ದೇವೆ. ಹೇಗೆಂದರೆ ಕ್ರಿಸ್ತನ ಕಷ್ಟಗಳಲ್ಲಿ ನಾವು ಪಾಲುಗಾರರಾಗುವುದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.

ದೇವರ ಮಕ್ಕಳ ಮಹಿಮೆಯು ಯಾವಾಗ ಪ್ರತ್ಯಕ್ಷವಾದೀತೆಂದು ಸೃಷ್ಟಿಯು ಬಹು ಕಾತುರದಿಂದ ಎದುರು ನೋಡುತ್ತಿದೆ. ಸೃಷ್ಟಿ ನಿರರ್ಥಕತೆಗೆ ಒಳಗಾಯಿತು; ಹೀಗೆ ಒಳಗಾದದ್ದು ಸ್ವೇಚ್ಛೆಯಿಂದಲ್ಲ, ಅದನ್ನು ಒಳಪಡಿಸಿದವನ ಸಂಕಲ್ಪದಿಂದಲೇ, ಆದರೂ ಅದಕ್ಕೊಂದು ನಿರೀಕ್ಷೆಯುಂಟು; ಏನೆಂದರೆ ಆ ಸೃಷ್ಟಿಯೂ ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುತ್ತವೆಂಬುದೇ. ಸೃಷ್ಟಿಯೆಲ್ಲಾ ಇಂದಿನವರೆಗೂ ನರಳುತ್ತಾ, ಪ್ರಸವ ವೇದನೆಪಡುತ್ತಾ ಇದೆಯೆಂದು ನಾವು ಬಲ್ಲೆವು. ಇದು ಮಾತ್ರವಲ್ಲದೆ

ಯಾಕೆಂದರೆ ನಮಗೆ ಒಂದೇ ದೇಹದಲ್ಲಿ ಬಹಳ ಅಂಗಗಳಿರಲಾಗಿ ಆ ಎಲ್ಲಾ ಅಂಗಗಳಿಗೆ ಹೇಗೆ ಒಂದೇ ಕೆಲಸ ಇರುವುದಿಲ್ಲವೋ ಹಾಗೆಯೇ ನಾವೆಲ್ಲರೂ ಒಟ್ಟಾಗಿ ಕ್ರಿಸ್ತನಲ್ಲಿ ಒಂದೇ ದೇಹವಾಗಿದ್ದು ಒಬ್ಬೊಬ್ಬರಾಗಿ ವಿವಿಧ ಅಂಗಗಳಾಗಿದ್ದೇವೆ.

ನೀವು ಬರೆದು ಕಳುಹಿಸಿದ ವಿಷಯಗಳ ಬಗ್ಗೆ ನನ್ನ ಅಭಿಪ್ರಾಯವೇನೆಂದರೆ, ಸ್ತ್ರೀಯರ ಶರೀರ ಸಂಪರ್ಕವಿಲ್ಲದೆ ಇರುವುದು ಪುರುಷನಿಗೆ ಒಳ್ಳೆಯದು; ಆದರೆ ಜಾರತ್ವದ ಶೋಧನೆಗೆ ಅವಕಾಶ ಕೊಡದಿರಲು ಪ್ರತಿಯೊಬ್ಬನಿಗೂ ಸ್ವಂತ ಹೆಂಡತಿಯು ಇರಲಿ ಮತ್ತು ಪ್ರತಿಯೊಬ್ಬಳಿಗೆ ಸ್ವಂತ ಗಂಡನು ಇರಲಿ. ಗಂಡನು ಹೆಂಡತಿಗೆ, ಹಾಗೆಯೇ ಹೆಂಡತಿಯು ಗಂಡನಿಗೆ ಒಗೆತನವನ್ನು ಸಲ್ಲಿಸಲಿ ಹೆಂಡತಿಗೆ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ ಅದು ಗಂಡನಿಗುಂಟು. ಹಾಗೆಯೇ ಪುರುಷನಿಗೆ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ ಅದು ಹೆಂಡತಿಗುಂಟು. ಪ್ರಾರ್ಥನೆಗೆ ಸಮಯ ಕೊಡುವುದಕ್ಕಾಗಿ ನೀವು ಪರಸ್ಪರ ಸಮ್ಮತಿಯಿಂದ ಸ್ವಲ್ಪ ಕಾಲ ಅಗಲಿ ಇರಬಹುದೇ ಹೊರತು ಅನ್ಯತಾ ಹಾಗೆ ಮಾಡಬಾರದು. ಸೈತಾನನು ನಿಮಗೆ ಸ್ವಯಂ ನಿಯಂತ್ರಣವಿಲ್ಲದಿರುವುದನ್ನು ನೋಡಿ ನಿಮಗೆ ದುಷ್ಪ್ರೇರಣೆಗೆ ಎಡೆ ಮಾಡದಂತೆ ತಿರುಗಿ ಕೂಡಿಕೊಳ್ಳಿರಿ. ನಾನು ಹೀಗೆ ಮಾಡಬಹುದೆಂದು ಹೇಳುತ್ತಿರುವುದು ಆಜ್ಞೆಯಲ್ಲ, ನನ್ನ ಅಭಿಪ್ರಾಯವಷ್ಟೇ. ನಾನಿರುವಂತೆಯೇ ಎಲ್ಲಾ ಮನುಷ್ಯರು ಇರಬೇಕೆಂಬುದು ನನ್ನ ಇಷ್ಟ ಆದರೆ ಒಬ್ಬನು ಒಂದು ವಿಧವಾಗಿ ಮತ್ತೊಬ್ಬನು ಇನ್ನೊಂದು ವಿಧವಾಗಿ ದೇವರಿಂದ ವರವನ್ನು ಹೊಂದಿಕೊಂಡಿದ್ದಾರೆ.

ಅವಿವಾಹಿತರನ್ನೂ ಮತ್ತು ವಿಧವೆಯರನ್ನೂ ಕುರಿತು ನಾನು ಹೇಳುವುದೇನಂದರೆ, ನಾನಿರುವಂತೆಯೆ ಇರುವುದು ಅವರಿಗೆ ಒಳ್ಳೆಯದು. ಅವರು ಸಂಯಮಯಿಲ್ಲದವರಾದರೆ ಮದುವೆಮಾಡಿಕೊಳ್ಳಲಿ. ಯಾಕೆಂದರೆ ಕಾಮತಾಪಪಡುವುದಕ್ಕಿಂತ ಮದುವೆಮಾಡಿಕೊಳ್ಳುವುದು ಉತ್ತಮ. ವಿವಾಹಿತರಿಗೆ ನನ್ನ ಅಪ್ಪಣೆ ಅಲ್ಲ ಕರ್ತನ ಆಜ್ಞೆಯು ಏನೆಂದರೆ, ಹೆಂಡತಿಯು ಗಂಡನನ್ನು ಬಿಟ್ಟು ಅಗಲಬಾರದು. ಒಂದು ವೇಳೆ ಅಗಲಿದರೂ ಮದುವೆಯಾಗದೆ ಇರಬೇಕು, ಇಲ್ಲವೆ ಗಂಡನ ಸಂಗಡ ಸಂಧಾನವಾಗಿರಬೇಕು ಮತ್ತು ಗಂಡನು ಹೆಂಡತಿಗೆ ವಿಚ್ಛೇದನ ನೀಡಬಾರದು.

ಮಿಕ್ಕಾದವರ ವಿಷಯದಲ್ಲಿ ಕರ್ತನ ಮಾತಲ್ಲ ಆದರೆ ನಾನು ಹೇಳುವುದೇನಂದರೆ, ಒಬ್ಬ ಸಹೋದರನಿಗೆ ಕ್ರಿಸ್ತ ನಂಬಿಕೆಯಿಲ್ಲದ ಹೆಂಡತಿಯಿರಲಾಗಿ ಆಕೆ ಅವನೊಂದಿಗೆ ಸಂಸಾರ ಮಾಡುವುದಕ್ಕೆ ಸಮ್ಮತಿಸಿದರೆ ಅವನು ಆಕೆಯನ್ನು ಬಿಡಬಾರದು. ಹಾಗೆಯೇ ಒಬ್ಬ ಸ್ತ್ರೀಗೆ ಕ್ರಿಸ್ತ ನಂಬಿಕೆಯಿಲ್ಲದ ಗಂಡನಿರಲಾಗಿ ಅವನು ಆಕೆಯೊಂದಿಗೆ ಸಂಸಾರ ಮಾಡುವುದಕ್ಕೆ ಸಮ್ಮತಿಸಿದರೆ ಆಕೆಯು ಅವನನ್ನು ಬಿಡಬಾರದು. ಯಾಕೆಂದರೆ ಕ್ರಿಸ್ತ ನಂಬಿಕೆಯಿಲ್ಲದ ಗಂಡನು ತನ್ನ ಹೆಂಡತಿಯ ನಿಮಿತ್ತ ಪವಿತ್ರನಾದನು ಮತ್ತು ಕ್ರಿಸ್ತ ನಂಬಿಕೆಯಿಲ್ಲದ ಹೆಂಡತಿಯು ತನ್ನ ಗಂಡನ ನಿಮಿತ್ತ ಪವಿತ್ರಳಾದಳು. ಹಾಗಲ್ಲದಿದ್ದರೆ ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು. ಈಗಲಾದರೋ ಅವರು ಪವಿತ್ರರೇ ಆಗಿದ್ದಾರೆ. ಆದರೆ ಕ್ರಿಸ್ತ ನಂಬಿಕೆಯಿಲ್ಲದ ಸಂಗಾತಿಯು ಅಗಲಬೇಕೆಂದಿದ್ದರೆ ಅಗಲಿಹೋಗಲಿ ಇಂಥಾ ಸಂದರ್ಭಗಳಲ್ಲಿ ಕ್ರೈಸ್ತ ಸಹೋದರನಾಗಲಿ ಅಥವಾ ಸಹೋದರಿಯಾಗಲಿ ಬದ್ಧರಲ್ಲ. ಸಮಾಧಾನದಲ್ಲಿರಬೇಕೆಂದು ದೇವರು ನಮ್ಮನ್ನು ಕರೆದಿದ್ದಾನೆ. ಸ್ತ್ರೀಯೇ, ನೀನು ನಿನ್ನ ಗಂಡನನ್ನು ರಕ್ಷಿಸುವಿಯೆಂದು ನಿನಗೆ ಹೇಗೆ ಗೊತ್ತು? ಪುರುಷನೇ, ನೀನು ನಿನ್ನ ಹೆಂಡತಿಯನ್ನು ರಕ್ಷಿಸುವಿಯೆಂದು ನಿನಗೆ ಹೇಗೆ ಗೊತ್ತು?

ಅವಿವಾಹಿತರಾದ ಕನ್ಯೆಯರನ್ನು ಕುರಿತಂತೆ ಕರ್ತನಿಂದ ಬಂದ ಆಜ್ಞೆ ನನಗೆ ಯಾವುದೂ ಇಲ್ಲ. ಆದರೆ ನಾನು ನಂಬಿಗಸ್ತನಾಗಿರುವುದಕ್ಕೆ ಕರ್ತನಿಂದ ಕರುಣೆಯನ್ನು ಹೊಂದಿದವನಾಗಿ ನನ್ನ ಅಭಿಪ್ರಾಯವನ್ನು ಹೇಳುತ್ತೇನೆ. ಈಗಿನ ಕಷ್ಟ ಕಾಲದ ನಿಮಿತ್ತ ಇದ್ದ ಹಾಗೆಯೇ ಇರುವುದು ಒಳ್ಳೆಯದೆಂದು ನಾನು ಭಾವಿಸುತ್ತೇನೆ. ನೀನು ವಿವಾಹಿತನಾಗಿರುವುದಾದರೆ ಬಿಡುಗಡೆಯಾಗುವುದಕ್ಕೆ ಪ್ರಯತ್ನಿಸಬೇಡ. ನೀನು ಅವಿವಾಹಿತನಾಗಿರುವುದಾದರೆ ಹೆಂಡತಿಯನ್ನು ಪಡೆದುಕೊಳ್ಳುವುದಕ್ಕೆ ಪ್ರಯತ್ನಿಸಬೇಡ. ಒಂದು ವೇಳೆ ನೀನು ಮದುವೆ ಮಾಡಿಕೊಂಡರೂ ಅದು ಪಾಪವಲ್ಲ. ಕನ್ನಿಕೆಯು ಮದುವೆ ಮಾಡಿಕೊಂಡರೂ ಪಾಪವಲ್ಲ. ಆದರೆ ಮದುವೆಮಾಡಿಕೊಂಡವರಿಗೆ ಅನೇಕ ಕಷ್ಟಗಳು ಸಂಭವಿಸುವವು. ಇದು ನಿಮಗೆ ಉಂಟಾಗಬಾರದೆಂಬುದೇ ನನ್ನ ಅಪೇಕ್ಷೆಯಾಗಿದೆ. ಸಹೋದರರೇ, ನಾನು ಹೇಳುವುದೇನಂದರೆ, ಸಮಯವು ಅತಿಕಡಿಮೆಯಿರುವುದ್ದರಿಂದ ಇನ್ನು ಮೇಲೆ ಹೆಂಡತಿಯುಳ್ಳವರು ಹೆಂಡತಿಯಿಲ್ಲದವರಂತೆಯೂ,

ಆದರೆ ನೀವು ಚಿಂತೆಯಿಲ್ಲದವರಾಗಿರಬೇಕೆಂಬುದೇ ನನ್ನ ಇಷ್ಟ. ಮದುವೆಯಾಗದವನು ತಾನು ಕರ್ತನನ್ನು ಹೇಗೆ ಮೆಚ್ಚಿಸಬೇಕೆಂದು ಕರ್ತನ ಕಾರ್ಯಗಳನ್ನು ಕುರಿತು ಚಿಂತಿಸುತ್ತಾನೆ. ಮದುವೆಯಾದವನು ತನ್ನ ಹೆಂಡತಿಯನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ವಿಷಯಗಳನ್ನು ಕುರಿತು ಚಿಂತಿಸುತ್ತಾನೆ ಅವನು ಆಸಕ್ತಿಗಳಲ್ಲಿ ಭಿನ್ನತೆಯುಳ್ಳವನಾಗಿದ್ದಾನೆ. ಅದರಂತೆ ಮುತೈದೆಗೂ, ಕನ್ನಿಕೆಗೂ ವ್ಯತ್ಯಾಸವುಂಟು. ಮದುವೆಯಾಗದವಳು ತಾನು ದೇಹಾತ್ಮಗಳಲ್ಲಿ ಹೇಗೆ ಪವಿತ್ರಳಾಗಿರಬೇಕೆಂದು ಕರ್ತನ ವಿಷಯಗಳನ್ನು ಕುರಿತು ಚಿಂತಿಸುತ್ತಾಳೆ. ಆದರೆ ಮದುವೆಯಾದವಳು ತನ್ನ ಗಂಡನನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ವಿಷಯಗಳನ್ನು ಕುರಿತು ಚಿಂತಿಸುತ್ತಾಳೆ. ನಾನು ನಿಮಗೆ ನಿರ್ಬಂಧ ಏರಬೇಕೆಂದು ಇದನ್ನು ಹೇಳುತ್ತಿಲ್ಲ. ನೀವು ಚಂಚಲ ಚಿತ್ತರಾಗದೆ ಕರ್ತನಿಗೆ ಮಾನ್ಯತೆಯುಳ್ಳವರಾಗಿ, ನಿಷ್ಠೆಯುಳ್ಳವರಾಗಿ ನಡೆದುಕೊಳ್ಳಬೇಕೆಂದು ನಿಮ್ಮ ಪ್ರಯೋಜನಕ್ಕೋಸ್ಕರವೇ ಹೇಳುತ್ತಿದ್ದೇನೆ.

ಒಬ್ಬನು ತನ್ನ ಮಗಳಿಗೆ ಮದುವೆಯಿಲ್ಲದಿರುವುದು ಮರ್ಯಾದೆಯಲ್ಲವೆಂದು ಭಾವಿಸಿದರೆ ಮತ್ತು ಆಕೆಯ ಪ್ರಾಯ ಕಳೆದುಹೋಗುತ್ತದಲ್ಲಾ ಮದುವೆಮಾಡುವುದು ಅವಶ್ಯವೆಂದು ಅವನಿಗೆ ತೋರಿದರೆ ತನ್ನಿಷ್ಟದಂತೆ ಮದುವೆ ಮಾಡಿಕೊಡಲಿ. ಅದು ಪಾಪವಲ್ಲ. ಆದರೆ ಒಬ್ಬನು ದೃಢಚಿತ್ತನಾಗಿದ್ದು ಬಲವಂತವೇನೂ ಇಲ್ಲದೆ ತನ್ನಿಷ್ಟವನ್ನು ನಡಿಸುವುದಕ್ಕೆ ಹಕ್ಕುಳ್ಳವನಾಗಿ ತನ್ನ ಮಗಳನ್ನು ಮದುವೆ ಮಾಡಿಕೊಡುವುದಿಲ್ಲವೆಂದು ತನ್ನೊಳಗೆ ನಿರ್ಣಯಿಸಿ ಕೊಂಡರೆ ಅವನು ಹಾಗೆಯೇ ಮಾಡುವುದು ಒಳ್ಳೆಯದು. ಹಾಗಾದರೆ ತನ್ನ ಮಗಳನ್ನು ಮದುವೆಮಾಡಿಕೊಡುವವನು ಒಳ್ಳೆಯದನ್ನು ಮಾಡುತ್ತಾನೆ, ಮದುವೆಮಾಡಿಕೊಡದೆ ಇರುವವನು ಇನ್ನೂ ಒಳ್ಳೆಯದನ್ನು ಮಾಡುತ್ತಿದ್ದಾನೆ. ಮುತೈದೆಯು ತನ್ನ ಗಂಡನು ಜೀವದಿಂದಿರುವ ತನಕ ಅವನಿಗೆ ಬದ್ಧಳಾಗಿದ್ದಾಳೆ. ಗಂಡನು ಮರಣಹೊಂದಿದ್ದರೆ ಆಕೆಯು ಬೇಕಾದವನನ್ನು ಮದುವೆಮಾಡಿಕೊಳ್ಳುವುದಕ್ಕೆ ಸ್ವತಂತ್ರಳಾಗಿದ್ದಾಳೆ. ಆದರೆ ಕರ್ತನಲ್ಲಿ ವಿಶ್ವಾಸಿಯಾದವನನ್ನು ಮಾತ್ರ ಆಗಬೇಕು. ಆದರೂ ಮದುವೆಮಾಡಿಕೊಳ್ಳದೆ ಹಾಗೆ ಇರುವುದು ಆಕೆಗೆ ಸಂತೋಷಕರವಾದದ್ದೆಂದು ನನ್ನ ಅಭಿಪ್ರಾಯ. ನನಗೂ ದೇವರ ಆತ್ಮವುಂಟೆಂದು ಭಾವಿಸುತ್ತೇನೆ.

ಆದರೂ ನೀವು ಒಂದು ಸಂಗತಿಯನ್ನು ತಿಳಿದಿರಬೇಕೆಂಬುದು ನನ್ನ ಇಷ್ಟ. ಅದೇನೆಂದರೆ ಪ್ರತಿ ಪುರುಷನಿಗೂ ಕ್ರಿಸ್ತನು ತಲೆಯಾಗಿದ್ದಾನೆ. ಸ್ತ್ರೀಗೆ ಪುರುಷನು ತಲೆಯಾಗಿದ್ದಾನೆ. ಕ್ರಿಸ್ತನಿಗೆ ದೇವರು ತಲೆಯಾಗಿದ್ದಾನೆ. ತಲೆಯನ್ನು ಮುಚ್ಚಿಕೊಂಡು ಪ್ರಾರ್ಥನೆಯನ್ನಾಗಲಿ, ಪ್ರವಾದನೆಯನ್ನಾಗಲಿ ಮಾಡುವ ಪುರುಷನು ತನ್ನ ತಲೆಯನ್ನು ಅವಮಾನಪಡಿಸುತ್ತಾನೆ. ತಲೆಯ ಮೇಲೆ ಮುಸುಕು ಹಾಕಿಕೊಳ್ಳದೆ ಪ್ರಾರ್ಥನೆಯನ್ನಾಗಲಿ ಪ್ರವಾದನೆಯನ್ನಾಗಲಿ ಮಾಡುವ ಸ್ತ್ರೀಯು ತನ್ನ ತಲೆಯನ್ನು ಅವಮಾನಪಡಿಸುತ್ತಾಳೆ. ಸ್ತ್ರೀಯು ಮುಸುಕಿಲ್ಲದೆ ಇರುವುದೂ ತಲೆಬೋಳಿಸಿಕೊಂಡಿರುವುದೂ ಒಂದೇ. ಸ್ತ್ರೀಯು ಮುಸುಕು ಹಾಕಿಕೊಳ್ಳದಿದ್ದರೆ ಆಕೆಯು ಕೂದಲನ್ನು ತೆಗೆಯಿಸಿಬಿಡಬೇಕಷ್ಟೆ. ಆದರೆ ಕೂದಲನ್ನು ಕತ್ತರಿಸಿಕೊಳ್ಳುವುದಾಗಲಿ ತಲೆಬೋಳಿಸಿಕೊಳ್ಳುವುದಾಗಲಿ ಸ್ತ್ರೀಗೆ ಅವಮಾನಕರವಾಗಿದ್ದರೆ ಆಕೆಯು ಮುಸುಕನ್ನು ಹಾಕಿಕೊಳ್ಳಲಿ. ಪುರುಷನು ದೇವರ ಪ್ರತಿರೂಪವೂ ಮತ್ತು ಪ್ರಭಾವವೂ ಆಗಿರುವುದರಿಂದ ತಲೆಯನ್ನು ಮುಚ್ಚಿಕೊಳ್ಳಬಾರದು. ಸ್ತ್ರೀಯಾದರೋ ಪುರುಷನ ಪ್ರಭಾವವಾಗಿದ್ದಾಳೆ. ಪುರುಷನು ಸ್ತ್ರೀಯಿಂದ ಉತ್ಪತ್ತಿಯಾಗಲಿಲ್ಲ. ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಳು. ಇದಲ್ಲದೆ ಪುರುಷನು ಸ್ತ್ರೀಗೋಸ್ಕರವಾಗಿ ಸೃಷ್ಟಿಸಲ್ಪಡಲಿಲ್ಲ, ಆದರೆ ಸ್ತ್ರೀಯು ಪುರುಷನಿಗೋಸ್ಕರವಾಗಿ ಸೃಷ್ಟಿಸಲ್ಪಟ್ಟಳು. ಹೀಗಿರುವುದರಿಂದ ದೂತರ ನಿಮಿತ್ತವಾಗಿ ಸ್ತ್ರೀಯು ಪುರುಷನ ಅಧಿಕಾರವನ್ನು ಸೂಚಿಸುವ ಮುಸುಕನ್ನು ತಲೆಯ ಮೇಲೆ ಹಾಕಿಕೊಂಡಿರಬೇಕು. ಆದರೂ ಕರ್ತನ ವಿಷಯದಲ್ಲಿ ಪುರುಷರಿಲ್ಲದೆ ಸ್ತ್ರೀಯರೂ, ಸ್ತ್ರೀಯರಿಲ್ಲದೆ ಪುರುಷರೂ ಇಲ್ಲ. ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಳು. ಹಾಗೆಯೇ ಪುರುಷನು ಸ್ತ್ರೀ ಮೂಲಕವಾಗಿ ಹುಟ್ಟುತ್ತಾನೆ. ಆದರೆ ದೇವರೇ ಸಮಸ್ತವನ್ನು ಸೃಷ್ಟಿಸಿದಾತನು. ನಿಮ್ಮೊಳಗೆ ನೀವೇ ಯೋಚಿಸಿ ತೀರ್ಮಾನಿಸಿಕೊಳ್ಳಿರಿ. ಸ್ತ್ರೀಯು ಮುಸುಕು ಹಾಕಿಕೊಳ್ಳದೆ ದೇವರಿಗೆ ಪ್ರಾರ್ಥನೆ ಮಾಡುವುದು ಯುಕ್ತವೋ ಪುರುಷನು ಉದ್ದ ಕೂದಲು ಬೆಳೆಸಿಕೊಂಡರೆ ಅದು ಅವನಿಗೆ ಅವಮಾನಕರವಾಗಿದೆಯೆಂದೂ, ಸ್ತ್ರೀಯು ಉದ್ದ ಕೂದಲು ಬೆಳೆಸಿಕೊಂಡರೆ ಅದು ಅವಳಿಗೆ ಮುಸುಕಿಗೆ ಬದಲಾಗಿ ನೀಡಲಾಗಿದ್ದು ಅದು ಅವಳಿಗೆ ಗೌರವವಾಗಿದೆಯೆಂದೂ ಸ್ವಾಭಾವಿಕವಾಗಿ ನಿಮಗೆ ತಿಳಿಯುತ್ತದಲ್ಲವೋ? ಯಾವನಾದರೂ ಇದರ ಕುರಿತು ವಾಗ್ವಾದ ಮಾಡುವುದಾದರೆ ಇಂಥ ಪದ್ಧತಿ ನಮ್ಮಲ್ಲಿ ಇಲ್ಲ ಮತ್ತು ದೇವರ ಸಭೆಗಳಲ್ಲಿಯೂ ಇಲ್ಲ ಎಂದು ತಿಳಿದುಕೊಳ್ಳಿರಿ.

ಪ್ರೀತಿಯು ಬಹು ತಾಳ್ಮೆಯುಳ್ಳದ್ದು, ದಯೆಯುಳ್ಳದ್ದು. ಪ್ರೀತಿಯು ಹೊಟ್ಟೆಕಿಚ್ಚುಪಡುವುದಿಲ್ಲ, ಹೊಗಳಿಕೊಳ್ಳುವುದಿಲ್ಲ. ಅದು ಗರ್ವಪಡುವುದಿಲ್ಲ, ಅಸಭ್ಯವಾಗಿ ನಡೆಯುವುದಿಲ್ಲ. ಸ್ವಪ್ರಯೋಜನವನ್ನು ಚಿಂತಿಸುವುದಿಲ್ಲ. ಬೇಗ ಸಿಟ್ಟುಗೊಳ್ಳುವುದಿಲ್ಲ. ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಅನ್ಯಾಯದಲ್ಲಿ ಸಂತೋಷಪಡುವುದಿಲ್ಲ ಆದರೆ ಸತ್ಯದಲ್ಲಿ ಸಂತೋಷಪಡುತ್ತದೆ. ಎಲ್ಲವನ್ನು ತಾಳಿಕೊಳ್ಳುತ್ತದೆ. ಎಲ್ಲವನ್ನು ನಂಬುತ್ತದೆ. ಎಲ್ಲವನ್ನು ನಿರೀಕ್ಷಿಸುತ್ತದೆ. ಎಲ್ಲವನ್ನು ಸಹಿಸಿಕೊಳ್ಳುತ್ತದೆ.

ನಾನು ಬಾಲಕನಾಗಿದ್ದಾಗ ಬಾಲಕನ ರೀತಿಯಲ್ಲಿ ಮಾತನಾಡಿದೆನು. ಬಾಲಕನ ಹಾಗೆ ಯೋಚಿಸಿದೆನು. ಬಾಲಕನಂತೆ ವಿವೇಚಿಸಿದೆನು. ಪ್ರಾಯಸ್ಥನಾದ ಮೇಲೆ ಬಾಲ್ಯದವುಗಳನ್ನು ಬಿಟ್ಟುಬಿಟ್ಟೆನು.

ದೇವಜನರ ಎಲ್ಲಾ ಸಭೆಗಳಲ್ಲಿರುವ ಪ್ರಕಾರ ಸ್ತ್ರೀಯರು ಸಭೆಯ ಕೂಟಗಳಲ್ಲಿ ಮೌನವಾಗಿರಬೇಕು; ಮಾತನಾಡಲು ಅವರಿಗೆ ಅವಕಾಶವಿಲ್ಲ; ಅವರು ಅಧೀನರಾಗಿರಬೇಕು; ಧರ್ಮಶಾಸ್ತ್ರದಲ್ಲಿಯೂ ಹೀಗೆ ಹೇಳಿದೆಯಲ್ಲಾ. ಅವರು ಏನಾದರೂ ತಿಳಿದು ಕೊಳ್ಳುವುದಕ್ಕೆ ಅಪೇಕ್ಷಿಸಿದರೆ ಮನೆಯಲ್ಲಿ ತಮ್ಮ ಗಂಡಂದಿರನ್ನು ಕೇಳಿಕೊಳ್ಳಲಿ. ಸ್ತ್ರೀಯರು ಸಭೆಯಲ್ಲಿ ಮಾತನಾಡುವುದು ಅಪಮಾನಕರವಾದದ್ದು. ದೇವರ ವಾಕ್ಯವು ನಿಮ್ಮಿಂದಲೇ ಹೊರಟಿತೋ? ನಿಮಗೆ ಮಾತ್ರವೇ ಬಂದಿತೋ? ಯಾವನಾದರೂ ತನ್ನನ್ನು ಪ್ರವಾದಿಯೆಂದಾಗಲಿ ಆತ್ಮೀಕನೆಂದಾಗಲಿ ಭಾವಿಸಿಕೊಂಡರೆ ನಾನು ನಿಮಗೆ ಬರೆದಿರುವುದೆಲ್ಲಾ ಕರ್ತನ ಆಜ್ಞೆ ಎಂದು ಚೆನ್ನಾಗಿ ತಿಳಿದುಕೊಳ್ಳಲಿ. ಯಾವನಾದರೂ ತನಗೆ ಇದು ಗೊತ್ತಿಲ್ಲವೆಂದರೆ ಅವನು ಗುರುತಿಲ್ಲದವನಂತೆ ಇರಲಿ.

ನೀವು ಕ್ರಿಸ್ತ ನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಿಯಾಗಬೇಡಿರಿ. ಧರ್ಮಕ್ಕೂ, ಅಧರ್ಮಕ್ಕೂ ಸಹವಾಸವೇನು? ಬೆಳಕಿಗೂ, ಕತ್ತಲೆಗೂ ಅನ್ಯೋನ್ಯತೆಯೇನು? ಕ್ರಿಸ್ತನಿಗೂ ಸೈತಾನನಿಗೂ ಒಪ್ಪಂದವೇನು? ವಿಶ್ವಾಸಿಗೂ ಅವಿಶ್ವಾಸಿಗೂ ಪಾಲುಗಾರಿಕೆಯೇನು? ದೇವ ಮಂದಿರಕ್ಕೂ, ವಿಗ್ರಹಗಳಿಗೂ ಒಪ್ಪಿಗೆಯೇನು? ನಾವು ದೇವರೇ ಹೇಳಿರುವಂತೆ ಜೀವಸ್ವರೂಪನಾದ ದೇವರ ಮಂದಿರವಾಗಿದ್ದೇವಲ್ಲಾ, “ನಾನು ಅವರಲ್ಲಿ ವಾಸಮಾಡುವೆನು, ಅವರ ನಡುವೆಯೇ ನಾ ತಿರುಗಾಡುವೆನು ಅವರಿಗೆ ನಾನೇ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು” ಎಂದು ಹೇಳಿದ್ದಾನೆ. ಆದ್ದರಿಂದ, “ಅನ್ಯಜನರನ್ನು ಬಿಟ್ಟು ಹೊರಬನ್ನಿರಿ ಅವರಿಂದ ಬೇರ್ಪಟ್ಟು ಬಾಳಿರಿ ಮಲಿನವಾದುದನ್ನು ಮುಟ್ಟದಿರಿ” ಎಂದು ಕರ್ತನು ಹೇಳುತ್ತಾನೆ. ಇದಲ್ಲದೆ, “ನಾನು ನಿಮ್ಮನ್ನು ಸ್ವೀಕರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ, ಕುಮಾರಿಯರು ಆಗಿರುವಿರೆಂದು” ಸರ್ವಶಕ್ತನಾದ ಕರ್ತನು ಹೇಳುತ್ತಾನೆ.

ಯಾಕೆಂದರೆ ದೇವರಲ್ಲಿರುವಂಥ ಚಿಂತೆಯಿಂದಲೇ ನಾನು ನಿಮ್ಮ ವಿಷಯದಲ್ಲಿ ಚಿಂತಿಸುತ್ತೇನೆ. ನಿಮ್ಮನ್ನು ಕ್ರಿಸ್ತನೆಂಬ ಒಬ್ಬನೇ ಪುರುಷನಿಗೆ ಶುದ್ಧ ಕನ್ಯೆಯಾಗಿ ಒಪ್ಪಿಸಬೇಕೆಂದು ನಿಮ್ಮನ್ನು ಆತನಿಗೆ ನಿಶ್ಚಯಮಾಡಿಸಿದ್ದೇನಲ್ಲ.

ಆದರೆ ನಾನು ಹೇಳುವುದೇನಂದರೆ, ವಾರಸುದಾರನು, ತಾನು ಆಸ್ತಿಗೆಲ್ಲಾ ಒಡೆಯನಾಗಿದ್ದರೂ ಬಾಲಕನಾಗಿರುವ ತನಕ ದಾಸನಂತೆಯೇ ಇರುವನು. ತಂದೆಯು ಗೊತ್ತುಮಾಡಿದ ಸಮಯದವರೆಗೂ ಪಾಲಕರ ಮತ್ತು ಕಾರ್ಯನಿರ್ವಾಹಕರ ಅಧೀನದಲ್ಲಿರುವನು.

ನೀವು ಪುತ್ರರಾಗಿರುವುದರಿಂದ ದೇವರು, “ಅಪ್ಪಾ ತಂದೆಯೇ” ಎಂದು ಕೂಗುವ ತನ್ನ ಮಗನ ಆತ್ಮನನ್ನು ನಮ್ಮ ಹೃದಯಗಳಲ್ಲಿ ಕಳುಹಿಸಿಕೊಟ್ಟನು. ಹೀಗಿರುವಲ್ಲಿ ಇನ್ನು ನೀನು ಸೇವಕನಲ್ಲ, ಮಗನಾಗಿದ್ದೀ. ಮಗನೆಂದ ಮೇಲೆ ದೇವರ ಮೂಲಕ ವಾರಸುದಾರನು ಆಗಿದ್ದೀ.

ಆದ್ದರಿಂದ ನಾವು ಇನ್ನು ಮೇಲೆ ಕೂಸುಗಳಾಗಿರದೇ, ದುರ್ಜನರ ವಂಚನೆಗಳಿಗೂ, ಕುಯುಕ್ತಿಗೂ ಒಳಬಿದ್ದು, ನಾನಾ ಉಪದೇಶಗಳಿಂದ ಕಂಗೆಟ್ಟು ಗಾಳಿಯಿಂದ ಅತ್ತಿತ್ತ ಓಲಾಡುವವರ ಹಾಗಿರದೇ,

ಸತಿಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ. ಕ್ರಿಸ್ತನು ತಾನೇ ಸಭೆಯೆಂಬ ದೇಹಕ್ಕೆ ರಕ್ಷಕನಾಗಿದ್ದಾನೆ. ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಸ್ತ್ರೀಯರು ತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನರಾಗಿರಬೇಕು. ಪತಿಯರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಆತನು ಅದನ್ನು ಪಾವನಗೊಳಿಸುವುದಕ್ಕಾಗಿ ತನ್ನನ್ನು ತಾನೇ ಒಪ್ಪಿಸಿಕೊಟ್ಟನು. ಅದನ್ನು ಕಳಂಕ ಸುಕ್ಕು ಮುಂತಾದದ್ದೊಂದೂ ಇಲ್ಲದಂತೆ ಪರಿಶುದ್ಧವೂ, ನಿರ್ದೋಷವೂ, ಮಹಿಮೆಯುಳ್ಳದ್ದೂ ಆಗಿರುವ ಸಭೆಯನ್ನಾಗಿ ತನ್ನೆದುರಿನಲ್ಲಿ ನಿಲ್ಲಿಸಿಕೊಳ್ಳಬೇಕೆಂದು ವಾಕ್ಯೋಪದೇಶ ಸಹಿತವಾದ ಜಲಸ್ನಾನವನ್ನು ಮಾಡಿಸಿ ಶುದ್ಧಿಮಾಡಿದನು. ಹಾಗೆಯೇ ಗಂಡದಿರು ಸಹ ತಮ್ಮ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ. ಯಾರೂ ಎಂದೂ ಸ್ವಂತ ಶರೀರವನ್ನು ಹಗೆಮಾಡಿದ್ದಿಲ್ಲವಲ್ಲ, ಎಲ್ಲರೂ ತಮ್ಮ ಶರೀರಗಳನ್ನು ಪೋಷಿಸಿ ಪಾಲನೆ ಮಾಡುತ್ತಾರಷ್ಟೇ. ಸಭೆಯೆಂಬ ದೇಹಕ್ಕೆ ನಾವು ಅಂಗಗಳಾಗಿದ್ದೇವೆ ಸಭೆಯೆಂಬ ಈ ದೇಹವನ್ನು ಕ್ರಿಸ್ತನು ಹಾಗೆಯೇ ಪೋಷಿಸಿ ಪಾಲನೆ ಮಾಡುತ್ತಾ ಬಂದಿದ್ದಾನೆ. “ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು, ಅವರಿಬ್ಬರೂ ಒಂದೇ ಶರೀರವಾಗಿರುವರು.” ಎಂದು ಬರೆದದೆಯಲ್ಲಾ. ನಾನು ಕ್ರಿಸ್ತನಿಗೂ ಸಭೆಗೂ ಇರುವ ಸಂಬಂಧವನ್ನು ಕುರಿತು ಮಾತನಾಡುತ್ತಿದ್ದೇನೆ, ಇದುವರೆಗೆ ಗುಪ್ತವಾಗಿದ್ದ ಈ ಮರ್ಮವು ಬಹು ಗಂಭೀರವಾದದ್ದು. ಆದರೆ ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು. ಪ್ರತಿ ಹೆಂಡತಿಯೂ ತನ್ನ ಗಂಡನಿಗೆ ಗೌರವದಿಂದ ನಡೆದುಕೊಳ್ಳಬೇಕು.

ಮಕ್ಕಳೇ, ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ವಿಧೇಯರಾಗಿರಿ. ಇದು ನ್ಯಾಯವಾದದ್ದು. ವಾಗ್ದಾನಸಹಿತವಾದ ಮೊದಲನೆಯ ಆಜ್ಞೆಯನ್ನು ಕೇಳಿರಿ, “ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು, ಗೌರವಿಸಿದರೆ ನಿನಗೆ ಶುಭವಾಗುವುದು, ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ.” ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ, ಕರ್ತನಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ಅವರನ್ನು ಶಿಸ್ತಿನಲ್ಲಿಯೂ ಉಪದೇಶದಲ್ಲಿಯೂ ಸಾಕಿ ಸಲಹಿರಿ.

ಸತಿಯರೇ, ಕರ್ತನಿಗೆ ಯೋಗ್ಯವಾದ ರೀತಿಯಲ್ಲಿ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಗಂಡಂದಿರೇ, ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ, ಅವರೊಂದಿಗೆ ಕಠಿಣವಾಗಿ ವರ್ತಿಸಬೇಡಿರಿ. ಮಕ್ಕಳೇ, ಎಲ್ಲಾ ವಿಷಯಗಳಲ್ಲಿ ನಿಮ್ಮ ತಂದೆತಾಯಿಗಳಿಗೆ ವಿಧೇಯರಾಗಿರಿ, ಯಾಕೆಂದರೆ ಇದು ಕರ್ತನ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ. ತಂದೆಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಅವರನ್ನು ಮನಗುಂದಿಸಿಬೇಡಿರಿ.

ಆದರೆ ತಾಯಿಯೂ ತನ್ನ ಮಕ್ಕಳನ್ನು ಪ್ರೀತಿಯಿಂದ ಪೋಷಿಸುವ ಹಾಗೆ ನಾವು ನಿಮ್ಮ ಮಧ್ಯದಲ್ಲಿ ವಾತ್ಸಲ್ಯದಿಂದ ನಡೆದುಕೊಂಡಿದ್ದೇವೆ.

ತಂದೆಯು ತನ್ನ ಮಕ್ಕಳಿಗೆ ಹೇಗೋ ಹಾಗೆಯೇ ನಾವು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಬುದ್ಧಿ ಹೇಳುತ್ತಾ,

ಹಾಗೆಯೇ ಸ್ತ್ರೀಯರು ಮಾನಸ್ಥೆಯರಾಗಿಯೂ, ಸಭ್ಯತೆಯುಳ್ಳವರಾಗಿಯೂ ಇದ್ದು, ಗೌರವಕ್ಕೆ ತಕ್ಕ ಉಡುಪನ್ನೂ ಧರಿಸಿಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆಯನ್ನು ಹೆಣೆಯುವುದು, ಚಿನ್ನ, ಮುತ್ತು, ಬೆಲೆಯುಳ್ಳ ವಸ್ತ್ರ ಮುಂತಾದವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ ದೇವಭಕ್ತೆಯರೆನಿಸಿಕೊಳ್ಳುವ ಸ್ತ್ರೀಯರಿಗೆ ಯುಕ್ತವಾಗಿರುವ ಪ್ರಕಾರ ಸತ್ಕ್ರಿಯೆಗಳಿಂದಲೇ ಅಲಂಕರಿಸಿಕೊಳ್ಳಬೇಕು. ಸ್ತ್ರೀಯರು ಮೌನವಾಗಿದ್ದು ಪೂರ್ಣ ಅಧೀನತೆಯಿಂದ ಉಪದೇಶವನ್ನು ಕಲಿಯಬೇಕು. ಉಪದೇಶಮಾಡುವುದಕ್ಕಾಗಲಿ ಪುರುಷರ ಮೇಲೆ ಅಧಿಕಾರ ನಡಿಸುವುದಕ್ಕಾಗಲಿ ಸ್ತ್ರೀಯರಿಗೆ ನಾನು ಅಪ್ಪಣೆ ಕೊಡುವುದಿಲ್ಲ. ಅವರು ಮೌನವಾಗಿರಬೇಕು. ಮೊದಲು ಸೃಷ್ಟಿಸಲ್ಪಟವನು ಆದಾಮನಲ್ಲವೇ, ಆಮೇಲೆ ಹವ್ವಳು. ಇದಲ್ಲದೆ ಆದಾಮನು ವಂಚಿಸಲ್ಪಡಲಿಲ್ಲ, ಸ್ತ್ರೀಯು ವಂಚಿಸಲ್ಪಟ್ಟು ಅಪರಾಧಿಯಾದಳು. ಆದರೂ ಸ್ತ್ರೀಯರು ಸ್ವಸ್ಥಬುದ್ಧಿಯಿಂದ ನಂಬಿಕೆಯಲ್ಲಿಯೂ, ಪ್ರೀತಿಯಲ್ಲಿಯೂ, ಪರಿಶುದ್ಧತೆಯಲ್ಲಿಯೂ ನೆಲೆಗೊಂಡಿದ್ದರೆ ಮಕ್ಕಳನ್ನು ಹೆರುವುದರಲ್ಲಿ ರಕ್ಷಣೆಹೊಂದುವರು.

ಸಭಾಧ್ಯಕ್ಷನು ದೋಷಾರೋಪಣೆಯಿಲ್ಲದವನೂ, ಏಕಪತ್ನಿಯುಳ್ಳವನೂ, ಶಾಂತನೂ, ಜಿತೇಂದ್ರಿಯನೂ, ಮಾನಸ್ಥನೂ, ಅತಿಥಿಸತ್ಕಾರಮಾಡುವವನೂ, ಬೋಧಿಸಲು ಶಕ್ತನಾಗಿರಬೇಕು. ಅವನು ಕುಡಕನು, ಜಗಳವಾಡುವವನೂ ಆಗಿರದೆ, ಸಾತ್ವಿಕನೂ, ಹೊಡೆದಾಡದವನೂ ದ್ರವ್ಯಾಶೆಯಿಲ್ಲದವನೂ ಆಗಿರಬೇಕು. ಪೂರ್ಣಗೌರವದಿಂದ ತನ್ನ ಮಕ್ಕಳನ್ನು ಅಧೀನದಲ್ಲಿಟ್ಟುಕೊಂಡು, ಸ್ವಂತ ಮನೆಯವರನ್ನು ಚೆನ್ನಾಗಿ ನಡೆಸುವವನಾಗಿರಬೇಕು. ಸ್ವಂತ ಮನೆಯವರನ್ನು ನಡೆಸುವುದಕ್ಕೆ ತಿಳಿಯದವನು ದೇವರ ಸಭೆಯನ್ನು ಹೇಗೆ ಪರಾಂಬರಿಸುವನು?

ಹಾಗೆಯೇ ಸಭಾಸೇವಕಿಯರಾದ ಸ್ತ್ರೀಯರೂ ಗೌರವವುಳ್ಳವರಾಗಿರಬೇಕು, ಚಾಡಿಹೇಳುವವರಾಗಿರದೆ, ಸ್ವಸ್ಥಬುದ್ಧಿಯುಳ್ಳವರೂ, ಎಲ್ಲಾ ವಿಷಯಗಳಲ್ಲಿ ನಂಬಿಗಸ್ತರಾಗಿಯೂ ಇರಬೇಕು. ಸಭಾಸೇವಕರು ಏಕಪತ್ನಿಯುಳ್ಳವರೂ, ತಮ್ಮ ಮಕ್ಕಳನ್ನೂ ಮನೆಯವರನ್ನೂ ಚೆನ್ನಾಗಿ ನಡಿಸುವವರೂ ಆಗಿರಬೇಕು.

ವೃದ್ಧರನ್ನು ಗದರಿಸದೆ ತಂದೆಯೆಂದು ಭಾವಿಸಿ ಬುದ್ಧಿಹೇಳು. ಯೌವನಸ್ಥರನ್ನು ಅಣ್ಣತಮ್ಮಂದಿರೆಂದೂ, ವೃದ್ಧಸ್ತ್ರೀಯರನ್ನು ತಾಯಿಯಂತೆಯೂ, ಯೌವನಸ್ತ್ರೀಯರನ್ನು ಪೂರ್ಣ ಶುದ್ಧಭಾವದಿಂದ ಅಕ್ಕತಂಗಿಯರೆಂದೂ ಎಣಿಸಿ ಅವರವರಿಗೆ ತಕ್ಕ ಹಾಗೆ ಬುದ್ಧಿಹೇಳು. ದಿಕ್ಕಿಲ್ಲದ ವಿಧವೆಯರನ್ನು ಸಂರಕ್ಷಿಸು. ಆದರೆ ಒಬ್ಬ ವಿಧವೆಗೆ ಮಕ್ಕಳಾಗಲಿ ಮೊಮ್ಮಕ್ಕಳಾಗಲಿ ಇದ್ದರೆ ಅವರೇ ಮೊದಲು ತಮ್ಮ ಮನೆಯವರಿಗೆ ಭಕ್ತಿತೋರಿಸುವುದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪಕಾರ ಮಾಡುವುದಕ್ಕೂ ಕಲಿತುಕೊಳ್ಳಲಿ. ಇದು ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ.

ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆ ಹೋದರೆ ಅವನು ಕ್ರಿಸ್ತ ನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕೀಳಾದವನೂ ಆಗಿದ್ದಾನೆ.

ವಯಸ್ಸಿನಲ್ಲಿ ಅರುವತ್ತು ವರ್ಷ ಮೇಲ್ಪಟ್ಟ, ವಿಧವೆಯನ್ನು ವಿಧವೆಯರ ಪಟ್ಟಿಯಲ್ಲಿ ಸೇರಿಸಬಹುದು. ಅಂಥವಳಾದರೂ ಒಬ್ಬ ಗಂಡನಿಗೆ ಮಾತ್ರ ಹೆಂಡತಿಯಾಗಿದ್ದವಳಾಗಿ, ಸತ್ಕ್ರಿಯೆಗಳನ್ನು ಮಾಡುವವಳೆಂದು ಹೆಸರುಗೊಂಡವಳೂ ಆಗಿದ್ದಲ್ಲಿ, ಅವರು ಮಕ್ಕಳನ್ನು ಸಾಕಿಕೊಂಡು, ಅತಿಥಿಸತ್ಕಾರವನ್ನು ಮಾಡುತ್ತಾ, ದೇವಜನರಿಗೆ ಉಪಚಾರಮಾಡಿದವಳಾಗಲಿ, ಸಂಕಟದಲ್ಲಿ ಬಿದ್ದವರಿಗೆ ಸಹಾಯಮಾಡುತ್ತಾ ಎಲ್ಲಾ ಸತ್ಕಾರ್ಯಗಳಲ್ಲಿ ಆಸಕ್ತಿಯುಳ್ಳವಳಾಗಿರಲಿ. ಯೌವನ ಪ್ರಾಯದ ವಿಧವೆಯರನ್ನು ಪಟ್ಟಿಯಲ್ಲಿ ಸೇರಿಸಬೇಡ, ಅವರು ದೈಹಿಕ ಆಸೆಗಳಿಂದ ಸೋಲಿಸಲ್ಪಟ್ಟು, ಕ್ರಿಸ್ತನಿಗೆ ವಿಮುಖರಾಗಿ ಮದುವೆಮಾಡಿಕೊಳ್ಳಬೇಕೆಂದು ಇಷ್ಟಪಟ್ಟಾರು. ಅಂಥವರು ತಾವು ಮೊದಲು ಮಾಡಿದ ಪ್ರತಿಜ್ಞೆಯನ್ನು ಉಲ್ಲಂಘಿಸಿ ತೀರ್ಪಿಗೆ ಗುರಿಯಾಗಿರುವರು. ಇದಲ್ಲದೆ ಅವರು ಮನೆಮನೆಗೆ ತಿರುಗಾಡುತ್ತಾ ಮೈಗಳ್ಳತನವನ್ನು ಕಲಿಯುತ್ತಾರೆ. ಮೈಗಳ್ಳರಾಗುವುದಲ್ಲದೆ, ಹರಟೆಮಾತನಾಡುವವರೂ, ಇತರರ ವಿಷಯಗಳಲ್ಲಿ ತಲೆ ಹಾಕುವವರೂ ಆಗಿ ಆಡಬಾರದ ಮಾತುಗಳನ್ನಾಡುತ್ತಾರೆ. ಆದ್ದರಿಂದ ಯೌವನ ಪ್ರಾಯದ ವಿಧವೆಯರು ಮದುವೆಮಾಡಿಕೊಂಡು ಮಕ್ಕಳನ್ನು ಹೆತ್ತು ಮನೆಯನ್ನು ನಿರ್ವಹಿಸುವವರಾಗಿರುವುದು ನನಗೆ ಒಳ್ಳೆಯದಾಗಿ ತೋಚುತ್ತದೆ. ಹಾಗೆ ಮಾಡುವುದರಿಂದ ವಿರೋಧಿಗಳ ನಿಂದೆಗೆ ಆಸ್ಪದಕೊಡದೆ ಇರುವರು. ಇಷ್ಟರೊಳಗೆ ಕೆಲವರು ಅಡ್ಡದಾರಿ ಹಿಡಿದು ಸೈತಾನನನ್ನು ಹಿಂಬಾಲಿಸಿದ್ದಾರೆ. ನಂಬುವವಳಾದ ಸ್ತ್ರೀಯ ಬಂಧುಭಾಂಧವರಲ್ಲಿ ವಿಧವೆಯರಿದ್ದರೆ ಆಕೆಯೇ ಅವರನ್ನು ಸಂರಕ್ಷಿಸಲಿ. ಸಭೆಯು ದಿಕ್ಕಿಲ್ಲದ ವಿಧವೆಯರಿಗೆ ಸಹಾಯ ಮಾಡಬೇಕಾಗಿರುವುದರಿಂದ ಆಕೆಯು ಆ ಭಾರವನ್ನು ಸಭೆಯ ಮೇಲೆ ಹಾಕಬಾರದು.

ನೀನಾದರೋ ಕಲಿತು ದೃಢವಾಗಿ ನಂಬಿದ ಬೋಧನೆಗಳಲ್ಲಿ ನೆಲೆಯಾಗಿರು. ಕಲಿಸಿಕೊಟ್ಟವರು ಯಾರೆಂಬುದನ್ನು ಆಲೋಚಿಸು. ಚಿಕ್ಕಂದಿನಿಂದಲೂ ನಿನಗೆ ಪರಿಶುದ್ಧ ಗ್ರಂಥಗಳ ಪರಿಚಯವಾಗಿದೆಯಲ್ಲಾ. ಆ ಗ್ರಂಥಗಳು ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಹೊಂದುವ ಜ್ಞಾನವನ್ನು ನಿನಗೆ ಕೊಡುವುದಕ್ಕೆ ಶಕ್ತವಾಗಿವೆ.

ಸಭೆಯ ಹಿರಿಯನು ದೋಷರಹಿತನೂ, ಏಕಪತ್ನಿಯುಳ್ಳವನೂ ಆಗಿರಬೇಕು; ಆತನ ಮಕ್ಕಳು ಕರ್ತನನ್ನು ನಂಬಿದವರಾಗಿರಬೇಕು; ಅವರ ಮಕ್ಕಳು ದುರ್ಮಾರ್ಗಿಗಳೂ ಮತ್ತು ಅವಿಧೇಯತೆಯ ಆರೋಪವಿಲ್ಲದವರು ಆಗಿರಬೇಕು.

ಇದಲ್ಲದೆ, ವೃದ್ಧ ಸ್ತ್ರೀಯರು ಪ್ರಾಯದ ಸ್ತ್ರೀಯರಿಗೆ ಮಾದರಿಯಾಗಿ, ತಮ್ಮ ಮೂಲಕ ದೇವರ ವಾಕ್ಯಕ್ಕೆ ದೂಷಣೆಯಾಗದಂತೆ ನಡೆದುಕೊಳ್ಳುವಂತೆ ತಿಳಿಸು. ಪ್ರಾಯದಸ್ತ್ರಿಯರು ಗಂಡಂದಿರನ್ನೂ, ಮಕ್ಕಳನ್ನೂ ಪ್ರೀತಿಸುವವರೂ, ವಿವೇಕವುಳ್ಳವರೂ, ಕ್ಷಮಾಶಿಲರೂ, ಪತಿವ್ರತೆಯರೂ ಸ್ವಂತಮನೆಗಾಗಿ ಕೆಲಸಮಾಡುವವರೂ, ಸುಶೀಲೆಯರೂ ಆಗಿ ತಮ್ಮ ಗಂಡಂದಿರಿಗೆ ವಿಧೇಯರಾಗಿರಬೇಕೆಂದು ಬುದ್ಧಿಹೇಳಬೇಕೆಂದು ನೀನು ವೃದ್ಧ ಸ್ತ್ರೀಯರಿಗೆ ಬೋಧಿಸು.

ಹೀಗೆ ಆತನು ಮಗನಾಗಿದ್ದರೂ ತಾನು ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು.

ನಂಬಿಕೆಯಿಂದಲೇ ನೋಹನು ಇನ್ನೂ ಕಾಣದಿದ್ದವುಗಳ ವಿಷಯವಾಗಿ ದೇವರಿಂದ ದೈವೋಕ್ತಿಯನ್ನು ಹೊಂದಿ, ಭಯಭಕ್ತಿಯುಳ್ಳವನಾಗಿ ತನ್ನ ಮನೆಯವರ ಸಂರಕ್ಷಣೆಗೋಸ್ಕರ ನಾವೆಯನ್ನು ಕಟ್ಟಿ ಸಿದ್ಧಮಾಡಿದನು. ನಂಬಿಕೆಯಿಂದಲೇ ಅವನು ಲೋಕದವರು ದಂಡನೆಗೆ ಪಾತ್ರರೆಂದು ನಿರ್ಣಯಿಸಿಕೊಂಡನು. ಆದುದ್ದರಿಂದ ನಂಬಿಕೆಯ ಫಲವಾದ ನೀತಿಗೆ ಬಾಧ್ಯನಾದನು.

ಮಕ್ಕಳಿಗೆ ಹೇಳುವಂತೆ ನಿಮಗೆ ಹೇಳಿದ ಎಚ್ಚರಿಕೆಯ ಮಾತುಗಳನ್ನು ಮರೆತುಬಿಟ್ಟಿದ್ದೀರೋ? ಅದೇನೆಂದರೆ, “ನನ್ನ ಮಗನೇ, ಕರ್ತನ ಶಿಕ್ಷೆಯನ್ನು ಕಡೆಗಣಿಸಬೇಡ. ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.” ಏಕೆಂದರೆ ಕರ್ತನು ಯಾರನ್ನು ಪ್ರೀತಿಸುತ್ತಾನೋ ಅವರನ್ನು ಶಿಕ್ಷಿಸುತ್ತಾನೆ. ತಾನು ಮಗನಂತೆ ಸ್ವೀಕರಿಸುವ ಪ್ರತಿಯೊಬ್ಬನನ್ನು ದಂಡಿಸುತ್ತಾನೆ ಎಂಬುದಾಗಿದೆ. ನಿಮ್ಮ ಶಿಸ್ತಿಗಾಗಿಯೇ, ನಿಮಗೆ ಶಿಕ್ಷೆಯಾಗುತ್ತದೆಂದು ಅದನ್ನು ಸಹಿಸಿಕೊಳ್ಳಿರಿ. ದೇವರು ನಿಮ್ಮನ್ನು ಮಕ್ಕಳೆಂದು ನಡೆಸುತ್ತಾನೆ. ಯಾಕೆಂದರೆ ತಂದೆಯಿಂದ ಶಿಕ್ಷೆ ಹೊಂದದ ಮಗನೆಲ್ಲಿದ್ದಾನೆ? ಎಲ್ಲರೂ ಪಾಲುಗಾರರಬೇಕಾದ ಶಿಕ್ಷೆಯು ನಿಮಗುಂಟಾಗದಿದ್ದರೆ ನೀವು ಹಾದರದಿಂದ ಹುಟ್ಟಿದವರೇ ಹೊರತು ಆತನ ಮಕ್ಕಳಲ್ಲ. ಇದು ಮಾತ್ರವಲ್ಲದೆ ನಮ್ಮನ್ನು ಶಿಕ್ಷಿಸಿದ ಲೌಕಿಕ ತಂದೆಗಳನ್ನು ನಾವು ಸನ್ಮಾನಿಸಿತ್ತೇವಲ್ಲ. ನಮ್ಮ ಆತ್ಮಗಳಿಗೆ ತಂದೆಯಾಗಿರುವಾತನಿಗೆ ನಾವು ಇನ್ನೂ ಹೆಚ್ಚಾಗಿ ಅಧೀನರಾಗಿ ಜೀವಿಸಬೇಕಲ್ಲವೇ?

ಎಲ್ಲರೂ ವಿವಾಹವನ್ನು ಮಾನ್ಯವಾದದ್ದೆಂದು ಎಣಿಸಬೇಕು ಮತ್ತು ದಾಂಪತ್ಯ ಜೀವನವು ಶುದ್ಧವಾಗಿರಬೇಕು. ಏಕೆಂದರೆ ಜಾರರಿಗೂ ಮತ್ತು ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳಿದುಕೊಳ್ಳಿರಿ.

ಸಂಕಟದಲ್ಲಿ ಬಿದ್ದಿರುವ ದಿಕ್ಕಿಲ್ಲದವರನ್ನೂ, ವಿಧವೆಯರನ್ನೂ ಪರಾಂಬರಿಸಿ ತನಗೆ ಇಹಲೋಕದ ದೋಷವು ಹತ್ತದಂತೆ ತನ್ನನ್ನು ತಾನು ಕಾಪಾಡಿಕೊಳ್ಳುವುದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ, ನಿರ್ಮಲವೂ ಆಗಿರುವ ಭಕ್ತಿ.

ನಿಮ್ಮಲ್ಲಿ ಒಬ್ಬ ಸಹೋದರನಿಗೆ ಇಲ್ಲವೆ ಒಬ್ಬ ಸಹೋದರಿಗೆ ಉಡಲು ಬಟ್ಟೆಯೂ ಮತ್ತು ದಿನನಿತ್ಯದ ಆಹಾರವೂ ಅಗತ್ಯವಾಗಿರುವಾಗ, ನಿಮ್ಮಲ್ಲಿ ಒಬ್ಬನು ಅವರಿಗೆ ದೈಹಿಕ ಅವಶ್ಯಕತೆಗಳನ್ನು ಪೂರೈಸದೆ “ಸಮಾಧಾನದಿಂದ ಹೋಗಿರಿ, ಬೆಚ್ಚಗೆ ಬೆಂಕಿಕಾಯಿಸಿಕೊಳ್ಳಿ, ಹೊಟ್ಟೆ ತುಂಬಾ ಊಟಮಾಡಿ” ಎಂದು ಹೇಳಿದರೆ ಪ್ರಯೋಜನವೇನು? ಹಾಗೆಯೇ ಕ್ರಿಯೆಗಳಿಲ್ಲದ ನಂಬಿಕೆಯು ನಿರ್ಜೀವವಾದದು.

ಅದೇ ರೀತಿಯಾಗಿ ಪತ್ನಿಯರೇ, ನಿಮ್ಮ ಪತಿಯರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ, ಗೌರವದಿಂದಲೂ ನಡೆದುಕೊಳ್ಳುವುದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಪತ್ನಿಯರಾದ ನಿಮ್ಮ ಒಳ್ಳೆಯ ನಡತೆಗಳಿಂದಲೇ ಸನ್ಮಾರ್ಗಕ್ಕೆ ಬಂದಾರು. ಜಡೆ ಹೆಣೆದುಕೊಳ್ಳುವುದೂ, ಚಿನ್ನದ ಒಡವೆಗಳನ್ನು ಹಾಕಿಕೊಳ್ಳುವುದೂ, ಬೆಲೆಬಾಳುವ ವಸ್ತ್ರಗಳನ್ನು ಧರಿಸಿಕೊಳ್ಳುವುದೂ ಈ ಮೊದಲಾದ ಹೊರಗಣ ಶೃಂಗಾರವೇ ನಿಮ್ಮ ಅಲಂಕಾರವಾಗಿರಬಾರದು. ಆದರೆ ದೇವರ ದೃಷ್ಟಿಯಲ್ಲಿ ಅಮೂಲ್ಯವಾದದ್ದೂ ಮತ್ತು ಶಾಶ್ವತವಾದದ್ದೂ ಆಗಿರುವ ಸಾತ್ವಿಕತೆ ಮತ್ತು ಶಾಂತಮನಸ್ಸು ಎಂಬ ಆಂತರ್ಯದ ಭೂಷಣವೇ ನಿಮ್ಮ ಅಲಂಕಾರವಾಗಿರಲಿ. ಪೂರ್ವ ಕಾಲದಲ್ಲಿ ದೇವರ ಮೇಲೆ ನಿರೀಕ್ಷೆಯನ್ನಿಟ್ಟಿದ್ದ ಭಕ್ತೆಯರಾದ ಸ್ತ್ರೀಯರೂ ಸಹ ಹೀಗೆಯೇ ತಮ್ಮನ್ನು ಅಲಂಕರಿಸಿಕೊಂಡಿದ್ದರು. ಅವರು ತಮ್ಮ ತಮ್ಮ ಗಂಡಂದಿರಿಗೆ ಅಧೀನರಾಗಿದ್ದರು. ಸಾರಳು ಹಾಗೆಯೇ ಅಬ್ರಹಾಮನಿಗೆ ವಿಧೇಯಳಾಗಿದ್ದು ಅವನನ್ನು ಯಜಮಾನ ಎಂದು ಕರೆದಳು. ನೀವು ಒಳ್ಳೆಯದನ್ನು ಮಾಡುತ್ತಾ ಯಾವ ಭೀತಿಗೂ ಭಯಪಡುವುದಿಲ್ಲವಾದರೆ ನೀವು ಆಕೆಯ ಕುವರಿಯರೇ ಆಗುವಿರಿ. ಅದೇ ರೀತಿಯಾಗಿ ಪತಿಯರೇ, ಸ್ತ್ರೀಯು ನಿಮ್ಮಗಿಂತ ಬಲಹೀನಳೆಂಬುದನ್ನು ತಿಳಿದುಕೊಂಡು, ನಿಮ್ಮ ಪತ್ನಿಯರ ಸಂಗಡ ವಿವೇಕದಿಂದ ನಡೆದುಕೊಳ್ಳಿರಿ, ಅವರು ನಿತ್ಯಜೀವ ವರಕ್ಕೆ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಗೌರವವನ್ನು ಸಲ್ಲಿಸಿರಿ. ಹೀಗೆ ಮಾಡಿದರೆ ನಿಮ್ಮ ಪ್ರಾರ್ಥನೆಗಳಿಗೆ ಅಡಚಣೆ ಉಂಟಾಗುವುದಿಲ್ಲ. ಕಡೆಗೆ ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ, ಪರಸ್ಪರ ಅನುಕಂಪವುಳ್ಳವರಾಗಿರಿ, ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ, ಕರುಣೆಯೂ, ದೀನಭಾವವೂ ಉಳ್ಳವರಾಗಿರಿ.

ಯೌವನಸ್ಥರೇ, ಅದೇ ರೀತಿಯಾಗಿ ಹಿರಿಯರಿಗೆ ಅಧೀನರಾಗಿರಿ. ನೀವೆಲ್ಲರೂ ದೀನಮನಸ್ಸೆಂಬ ವಸ್ತ್ರವನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಸೇವೆ ಮಾಡಿರಿ. ಏಕೆಂದರೆ “ದೇವರು ಅಹಂಕಾರಿಗಳನ್ನು ವಿರೋಧಿಸುತ್ತಾನೆ. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.”

ನಾವಂತೂ ಕ್ರೈಸ್ತಸಹೋದರರನ್ನು ಪ್ರೀತಿಸುವವರಾಗಿರುವುದರಿಂದ ಮರಣದಿಂದ ಪಾರಾಗಿ ನಿತ್ಯಜೀವದಲ್ಲಿ ಸೇರಿದ್ದೇವೆಂಬುದು ನಮಗೆ ಗೊತ್ತಾಗಿದೆ. ತನ್ನ ಸಹೋದರನನ್ನು ಪ್ರೀತಿಸದೆ ಇರುವವನು ಮರಣದಲ್ಲೇ ಇದ್ದಾನೆ. ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರನಾಗಿದ್ದಾನೆ. ಮತ್ತು ಯಾವ ಕೊಲೆಗಾರನಲ್ಲಿಯೂ ನಿತ್ಯಜೀವವು ಇರುವುದಿಲ್ಲವೆಂಬುದು ನಿಮಗೆ ಗೊತ್ತಾಗಿದೆ. ಕ್ರಿಸ್ತನು ನಮಗೋಸ್ಕರ ತನ್ನ ಪ್ರಾಣವನ್ನು ಅರ್ಪಿಸಿದ್ದರಿಂದ ದೇವರ ಪ್ರೀತಿ ಇಂಥದ್ದೆಂದು ನಮಗೆ ತಿಳಿದು ಬಂದಿದೆ. ನಾವು ಸಹ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ. ಆದರೆ ಈ ಲೋಕದ ಸಂಪತ್ತುಳ್ಳ ಯಾರಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿ ಕನಿಕರಪಡದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರಲು ಸಾಧ್ಯವೇ?

ತಂದೆಯಿಂದ ನಾವು ಹೊಂದಿದ ಆಜ್ಞಾನುಸಾರ, ನಿಮ್ಮ ಮಕ್ಕಳಲ್ಲಿ ಕೆಲವರು, ಸತ್ಯವಂತರಾಗಿ ನಡೆಯುವುದನ್ನು ಕಂಡು ನಾನು ಬಹಳ ಸಂತೋಷಪಟ್ಟೆನು.

ನನ್ನ ಮಕ್ಕಳು ಸತ್ಯವನ್ನನುಸರಿಸಿ ಜೀವಿಸುವವರಾಗಿದ್ದಾರೆಂಬುದನ್ನು ಕೇಳಿಸಿಕೊಳ್ಳುವುದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.

ಪರಲೋಕದಲ್ಲಿ ಒಂದು ಮಹಾ ಚಿಹ್ನೆಯು ಕಾಣಿಸಿತು. ಸ್ತ್ರೀಯೊಬ್ಬಳು ಸೂರ್ಯಭೂಶಿತಳಾಗಿದ್ದಳು. ಆಕೆಯ ಪಾದದಡಿಯಲ್ಲಿ ಚಂದ್ರನಿದ್ದನು. ಆಕೆಯ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳಿಂದ ಮಾಡಿದ್ದ ಒಂದು ಕಿರೀಟವಿತ್ತು. ಆಕೆಯು ಗರ್ಭಿಣಿಯಾಗಿದ್ದು ಹೆರುವುದಕ್ಕೆ ಪ್ರಸವವೇದನೆಯಿಂದ ನರಳುತ್ತಾ ಅಳುತ್ತಿದ್ದಳು. ಪರಲೋಕದಲ್ಲಿ ಮತ್ತೊಂದು ಚಿಹ್ನೆಯು ಕಾಣಿಸಿತು. ಅಲ್ಲಿ ಕೆಂಪು ಘಟಸರ್ಪವೊಂದು ಇತ್ತು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳು ಇದ್ದವು. ಅದರ ತಲೆಗಳ ಮೇಲೆ ಏಳು ಕಿರೀಟಗಳು ಇದ್ದವು. ಅದು ತನ್ನ ಬಾಲದಿಂದ ಆಕಾಶದ ನಕ್ಷತ್ರಗಳಲ್ಲಿ ಮೂರರಲ್ಲೊಂದು ಭಾಗವನ್ನು ಎಳೆದು ಭೂಮಿಗೆ ಎಸೆಯಿತು. ಹೆರುತ್ತಿದ್ದ ಆ ಸ್ತ್ರೀಯು ಹೆತ್ತ ಕೂಡಲೇ ಆಕೆಯ ಮಗುವನ್ನು ನುಂಗಿಬಿಡಬೇಕೆಂದು ಆ ಘಟಸರ್ಪವು ಆಕೆಯ ಮುಂದೆ ನಿಂತುಕೊಂಡಿತ್ತು. ಆಕೆ ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಆಳಬೇಕಾದ ಒಂದು ಗಂಡು ಮಗುವನ್ನು ಹೆತ್ತಳು. ಆಕೆಯ ಕೂಸು ಪಕ್ಕನೆ ದೇವರ ಬಳಿಗೂ ಆತನ ಸಿಂಹಾಸನದ ಬಳಿಗೂ ಎತ್ತಲ್ಪಟ್ಟಿತು. ಮತ್ತು ಆ ಸ್ತ್ರೀಯು ಅರಣ್ಯಕ್ಕೆ ಓಡಿಹೋದಳು. ಅಲ್ಲಿ ಆಕೆಗೆ ಸಾವಿರದ ಇನ್ನೂರ ಅರವತ್ತು ದಿನಗಳ ವರೆಗೆ ಪೋಷಣೆಮಾಡುವುದಕ್ಕಾಗಿ ದೇವರು ಸಿದ್ಧಮಾಡಿದ್ದ ಸ್ಥಳವನ್ನು ಅವಳು ಕಂಡಳು.

ಯಜ್ಞದ ಕುರಿಮರಿಯಾದಾತನ ವಿವಾಹಕಾಲವು ಬಂದಿತೆಂದು ಸಂತೋಷಪಡೋಣ, ಹರ್ಷಗೊಳ್ಳೋಣ, ಆತನನ್ನು ಘನಪಡಿಸೋಣ, ಏಕೆಂದರೆ ಆತನನ್ನು ವಿವಾಹವಾಗುವ ಕನ್ಯೆಯು ತನ್ನನ್ನು ತಾನೇ ಸಿದ್ಧಮಾಡಿಕೊಂಡಿದ್ದಾಳೆ” ಎಂದು ಹೇಳಿತು. ಪ್ರಕಾಶಮಾನವೂ, ನಿರ್ಮಲವೂ ಆದ ನಯವಾದ ನಾರುಮಡಿಯನ್ನು ಧರಿಸಿಕೊಳ್ಳುವುದಕ್ಕೆ ಆಕೆಗೆ ಕೃಪೆ ಲಭಿಸಿತು. (ಆ ನಾರುಮಡಿ ಅಂದರೆ ದೇವಜನರ ನೀತಿಕೃತ್ಯಗಳೇ). ಇದಲ್ಲದೆ ಅವನು ನನ್ನ ಸಂಗಡ ಮಾತನಾಡುತ್ತಾ, “ಯಜ್ಞದ ಕುರಿಮರಿಯಾದಾತನ ವಿವಾಹದ ಔತಣಕ್ಕೆ ಆಹ್ವಾನಿಸಲ್ಪಟ್ಟವರು ಧನ್ಯರು ಎಂಬುದಾಗಿ ಬರೆ” ಎಂದು ನನಗೆ ಹೇಳಿ, “ಈ ಮಾತುಗಳು ದೇವರ ಸತ್ಯವಚನಗಳಾಗಿವೆ” ಅಂದನು.

ಇದಲ್ಲದೆ ಪರಲೋಕದಿಂದ ಪರಿಶುದ್ಧ ಪಟ್ಟಣವಾದ ಹೊಸ ಯೆರೂಸಲೇಮ್ ದೇವರ ಬಳಿಯಿಂದ ಇಳಿದು ಬರುವುದನ್ನು ಕಂಡೆನು. ಅದು ತನ್ನ ಪತಿಗೋಸ್ಕರ ಸಿದ್ಧಳಾಗಿರುವ ಮದಲಗಿತ್ತಿಯಂತೆ ಶೃಂಗರಿಸಲ್ಪಟ್ಟಿತ್ತು.

ಕಡೇ ಏಳು ಉಪದ್ರವಗಳಿಂದ ತುಂಬಿದ ಏಳು ಬಟ್ಟಲುಗಳನ್ನು ಹಿಡಿದಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತನಾಡುತ್ತಾ, “ಬಾ ಕುರಿಮರಿಯಾದಾತನಿಗೆ ಹೆಂಡತಿಯಾಗಲಿರುವ ವಧುವನ್ನು ನಿನಗೆ ತೋರಿಸುವೆನು” ಎಂದು ಹೇಳಿ,

ಆತ್ಮನು ಮತ್ತು ಮದಲಗಿತ್ತಿಯು, “ಬಾ” ಎನ್ನುತ್ತಾರೆ. ಕೇಳುವವನು, “ಬಾ” ಎನ್ನಲಿ. ಬಾಯಾರಿದವನು ಬರಲಿ, ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ಉಚಿತವಾಗಿ ತೆಗೆದುಕೊಳ್ಳಲಿ.

Kannada - ಕನ್ನಡ - KN

KNIRV'19 - Kannada Indian Revised Version - 2019

This Bible text is from Kannada Indian Revised Version IRV 2019
https://open.bible/bibles/kannada-bridge-text-bible/
provided by: Bridge Connectivity Solutions Pvt Ltd, available by Creative Commons CC-BY-SA-4.0,
and this new compilation is shared as www.creativecommons.org/licenses/by-sa/4.0.
Languages are made available to you by www.ipedge.net