32 – ಹುತಾತ್ಮತೆ

ಇವು ಸರ್ವಶಕ್ತನಾದ ದೇವರ ಪವಿತ್ರ ಮಾತುಗಳು.
ಮಾನವರ ಮಾತುಗಳಲ್ಲಿ ನಮಗೆ ಆಸಕ್ತಿ ಇಲ್ಲ.
ದೇವರನ್ನು ಪ್ರೀತಿಸುವ ಯಾರಿಗಾದರೂ... ದೇವರು ಇದರ ಬಗ್ಗೆ ಹೀಗೆ ಹೇಳುತ್ತಾನೆ: ಹುತಾತ್ಮತೆ.

ಟಾಪ್ 3 ಅತ್ಯಂತ ಮಹತ್ವದ ಪದ್ಯಗಳು

ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಗೋದಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಒಂಟಿಯಾಗಿ ಉಳಿಯುವುದು. ಆದರೆ ಅದು ಸತ್ತರೆ ಬಹಳ ಫಲ ಕೊಡುವುದು ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುವನು. ಈ ಲೋಕದಲ್ಲಿ ತನ್ನ ಪ್ರಾಣವನ್ನು ಕಳೆದುಕೊಳ್ಳಲು ಹಿಂಜರಿಯದವನು ನಿತ್ಯಜೀವಕ್ಕಾಗಿ ಅದನ್ನು ಕಾಪಾಡಿಕೊಳ್ಳುವನು. ಯಾರಾದರೂ ನನ್ನ ಸೇವೆಯನ್ನು ಮಾಡುವವನಾದರೆ ನನ್ನನ್ನು ಹಿಂಬಾಲಿಸಲಿ, ಮತ್ತು ಎಲ್ಲಿ ನಾನು ಇರುತ್ತೇನೋ ಅಲ್ಲಿ ನನ್ನ ಸೇವಕನೂ ಸಹ ಇರುವನು. ಯಾರಾದರೂ ನನ್ನ ಸೇವೆಯನ್ನು ಮಾಡುವವನಾದರೆ ನನ್ನ ತಂದೆಯು ಅವನನ್ನು ಸನ್ಮಾನಿಸುವನು.

ಅವರು ನಿಮ್ಮನ್ನು ಸಭಾಮಂದಿರದಿಂದ ಹೊರಗೆ ಹಾಕುವರು; ಅದಲ್ಲದೆ ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಬಲಿಕೊಟ್ಟೆನೆಂದು ಭಾವಿಸುವ ಕಾಲವು ಬರಲಿದೆ. ಅವರು ತಂದೆಯನ್ನಾದರೂ ನನ್ನನ್ನಾದರೂ ತಿಳಿಯದವರಾಗಿರುವುದರಿಂದ ಇವೆಲ್ಲವುಗಳನ್ನು ನಿಮಗೆ ಮಾಡುವರು. ಆದರೆ ಅವರ ಕಾಲ ಬಂದಾಗ ಆತನು ನಮಗೆ ಇಂಥಿಂಥದ್ದನ್ನು ಹೇಳಿದನಲ್ಲಾ ಎಂದು ನಿಮ್ಮ ನೆನಪಿಗೆ ಬರುವಂತೆ, ನಿಮ್ಮ ಸಂಗಡ ಈ ಮಾತುಗಳನ್ನು ಆಡಿದ್ದೇನೆ. ನಾನು ನಿಮ್ಮ ಸಂಗಡ ಇದ್ದುದರಿಂದ ಮೊದಲು ಇವುಗಳನ್ನು ನಿಮಗೆ ಹೇಳಲಿಲ್ಲ.

ಆತನು ಐದನೆಯ ಮುದ್ರೆಯನ್ನು ಒಡೆದಾಗ, ದೇವರ ವಾಕ್ಯದ ನಿಮಿತ್ತವಾಗಿಯೂ, ತಮಗಿದ್ದ ದೃಢವಾದ ಸಾಕ್ಷಿಯ ನಿಮಿತ್ತವಾಗಿಯೂ, ಹತರಾದವರ ಆತ್ಮಗಳು ಯಜ್ಞವೇದಿಯ ಕೆಳಗಿರುವುದನ್ನು ಕಂಡೆನು. ಅವರು, “ಸರ್ವಶಕ್ತನಾದ ಕರ್ತನೇ, ಪರಿಶುದ್ಧನೂ, ಸತ್ಯವಂತನೂ, ಆಗಿರುವಾತನೇ, ನಮ್ಮ ರಕ್ತವನ್ನು ಸುರಿಸಿದ ಭೂಲೋಕ ನಿವಾಸಿಗಳಿಗೆ ನೀನು ಇನ್ನೆಷ್ಟು ಸಮಯ ನ್ಯಾಯತೀರಿಸದೆಯೂ, ಪ್ರತಿದಂಡನೆ ಮಾಡದೆಯೂ ಇರುವಿ?” ಎಂದು ಮಹಾಶಬ್ದದಿಂದ ಕೂಗಿದರು. ಆಗ ಅವರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ಬಿಳೀ ನಿಲುವಂಗಿಯು ಕೊಡಲ್ಪಟ್ಟಿತು ಇನ್ನೂ ಸ್ವಲ್ಪ ಸಮಯ ವಿಶ್ರಮಿಸಿಕೊಂಡಿರಬೇಕು. ನಿಮ್ಮ ಹಾಗೆ ವಧಿಸಲ್ಪಡಬೇಕಾಗಿರುವ ನಿಮ್ಮ ಸಹೋದರರ ಮತ್ತು ನಿಮ್ಮ ಜೊತೆ ಸೇವಕರ ಸಂಖ್ಯೆ ಪೂರ್ಣವಾಗುವ ತನಕ ಕಾದಿರಬೇಕೆಂದು ಅವರಿಗೆ ಅಪ್ಪಣೆಯಾಯಿತು.

ಕ್ಯಾನೊನಿಕಲ್ ಕ್ರಮದಲ್ಲಿ ಪ್ರತಿ ವಚನ - 321 ಭಾಗಗಳು

ಕಾಲಾಂತರದಲ್ಲಿ ಕಾಯಿನನು ಹೊಲದ ಬೆಳೆಯಲ್ಲಿ ಕೆಲವನ್ನು ತಂದು ಯೆಹೋವನಿಗೆ ಕಾಣಿಕೆಯಾಗಿ ಸಮರ್ಪಿಸಿದನು. ಹೇಬೆಲನು ಹಾಗೆಯೇ ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನು ಕಾಣಿಕೆಯಾಗಿ ತಂದು ಅವುಗಳ ಕೊಬ್ಬನ್ನು ಹೋಮ ಮಾಡಿದನು, ಯೆಹೋವನು ಹೇಬೆಲನನ್ನೂ ಅವನ ಕಾಣಿಕೆಯನ್ನು ಮೆಚ್ಚಿಕೊಂಡನು. ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ಮೆಚ್ಚಲಿಲ್ಲ. ಆದ್ದರಿಂದ ಕಾಯಿನನು ಬಹು ಕೋಪಗೊಂಡನು, ಅವನ ಮುಖವು ಸಿಟ್ಟಿನಿಂದ ಕಳೆಗುಂದಿತು. ಆಗ ಯೆಹೋವನು ಕಾಯಿನನಿಗೆ, “ನೀನು ಕೋಪಗೊಂಡಿದ್ದೇಕೆ? ನಿನ್ನ ಮುಖವು ಕಳೆಗುಂದಲು ಕಾರಣವೇನು? ನೀನು ತಲೆ ತಗ್ಗಿಸಲು ಕಾರಣವೇನು? ನೀನು ಒಳ್ಳೆಯ ಕೆಲಸ ಮಾಡಿದ್ದರೆ ನಿನ್ನ ತಲೆಯು ಎತ್ತಲ್ಪಡುವುದಲ್ಲವೇ? ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಿಲಲ್ಲಿ ಹೊಂಚಿಕೊಂಡಿರುವುದು, ಅದು ನಿನ್ನನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವುದು. ಆದರೆ ನೀನು ಅದನ್ನು ಹಿಡಿತದಲ್ಲಿ ಇರಿಸಿಕೊಳ್ಳಬೇಕು” ಎಂದು ಹೇಳಿದನು. ತರುವಾಯ ಕಾಯಿನನು ತನ್ನ ತಮ್ಮನಾದ ಹೇಬೆಲನ ಸಂಗಡ ಮಾತನಾಡಿದನು. ಅವರು ಹೊಲದಲ್ಲಿದ್ದಾಗ ಕಾಯಿನನು ತನ್ನ ತಮ್ಮನ ಮೇಲೆ ಬಿದ್ದು ಅವನನ್ನು ಕೊಂದನು. ಯೆಹೋವನು ಕಾಯಿನನಿಗೆ, “ನಿನ್ನ ತಮ್ಮನಾದ ಹೇಬೆಲನು ಎಲ್ಲಿ?” ಎಂದು ಕೇಳಲು ಅವನು, “ನಾನರಿಯೆ, ನನ್ನ ತಮ್ಮನಿಗೆ ನಾನೇನು ಕಾವಲುಗಾರನೋ?” ಎಂದು ಉತ್ತರ ಕೊಟ್ಟನು. ಅದಕ್ಕೆ ಯೆಹೋವನು, “ನೀನು ಏನು ಮಾಡಿದೆ? ಭೂಮಿಯ ಕಡೆಯಿಂದ ಕೂಗಿ ನನಗೆ ಮೊರೆಯಿಡುತ್ತಿದೆ. ನಿನ್ನ ತಮ್ಮನ ರಕ್ತವು ಭೂಮಿಯ ಕಡೆಯಿಂದ ಕೂಗಿ ನನಗೆ ಮೊರೆಯಿಡುತ್ತಿದೆ.

ಈ ಸಂಗತಿಗಳು ಆದ ಮೇಲೆ ದೇವರು ಅಬ್ರಹಾಮನನ್ನು ಪರೀಕ್ಷಿಸಿದನು. ಹೇಗೆಂದರೆ ಆತನು ಅವನನ್ನು, “ಅಬ್ರಹಾಮನೇ” ಎಂದು ಕರೆಯಲು ಅವನು, “ಇಗೋ, ಇದ್ದೇನೆ” ಎಂದನು. ಆಗ ಆತನು, “ನಿನಗೆ ಪ್ರಿಯನಾಗಿರುವ ಒಬ್ಬನೇ ಮಗನಾದ ಇಸಾಕನನ್ನು ಕರೆದುಕೊಂಡು ಮೊರೀಯ ದೇಶಕ್ಕೆ ಹೋಗಿ ಅಲ್ಲಿ ಅವನನ್ನು ನಾನು ಹೇಳುವ ಒಂದು ಬೆಟ್ಟದ ಮೇಲೆ ಸರ್ವಾಂಗಹೋಮವಾಗಿ ಅರ್ಪಿಸಬೇಕು” ಎಂದನು. ಅದರಂತೆ ಮುಂಜಾನೆಯೇ ಎದ್ದು ಅಬ್ರಹಾಮನು ಕತ್ತೆಗೆ ತಡಿ ಹಾಕಿಸಿ, ಯಜ್ಞಕ್ಕೆ ಬೇಕಾದ ಕಟ್ಟಿಗೆಯನ್ನು ಒಡೆಸಿ ಅದನ್ನು ತೆಗೆದುಕೊಂಡು ತನ್ನ ಸೇವಕರಲ್ಲಿ ಇಬ್ಬರನ್ನೂ, ತನ್ನ ಮಗನಾದ ಇಸಾಕನನ್ನೂ ಕರೆದುಕೊಂಡು ದೇವರು ಹೇಳಿದ ಸ್ಥಳಕ್ಕೆ ಹೊರಟನು. ಮೂರನೆಯ ದಿನದಲ್ಲಿ ಅಬ್ರಹಾಮನು ಕಣ್ಣೆತ್ತಿ ನೋಡುವಾಗ ಆ ಸ್ಥಳವು ದೂರದಲ್ಲಿ ಕಾಣಿಸಲು ಅವನು ತನ್ನ ಸೇವಕರಿಗೆ, “ನೀವು ಇಲ್ಲೇ ಕತ್ತೆಯ ಬಳಿಯಲ್ಲಿರಿ; ನಾನೂ ನನ್ನ ಮಗನೂ ಅಲ್ಲಿಗೆ ಹೋಗಿ ದೇವಾರಾಧನೆ ಮಾಡಿಕೊಂಡು ನಿಮ್ಮ ಬಳಿಗೆ ಬರುತ್ತೇವೆ” ಎಂದು ಅಬ್ರಹಾಮನು ಹೇಳಿದನು. ಆನಂತರ ಅಬ್ರಹಾಮನು ಯಜ್ಞಕ್ಕೆ ಬೇಕಾದ ಕಟ್ಟಿಗೆಯನ್ನು ತನ್ನ ಮಗನಾದ ಇಸಾಕನ ಮೇಲೆ ಹೊರಿಸಿ, ತನ್ನ ಕೈಯಲ್ಲೇ ಬೆಂಕಿಯನ್ನೂ ಕತ್ತಿಯನ್ನೂ ತೆಗೆದುಕೊಂಡ ನಂತರ ಅವರಿಬ್ಬರೂ ಹೊರಟರು. ಹೋಗುವಾಗ ಇಸಾಕನು ತನ್ನ ತಂದೆಯಾದ ಅಬ್ರಹಾಮನಿಗೆ, “ಅಪ್ಪಾ” ಎಂದು ಕರೆಯಲು ಅಬ್ರಹಾಮನು, “ಏನು ಮಗನೇ” ಎಂದನು. ಇಸಾಕನು, “ಇಗೋ, ಬೆಂಕಿಯೂ ಕಟ್ಟಿಗೆಯೂ ಉಂಟು; ಆದರೆ ಹೋಮಕ್ಕೆ ಬೇಕಾದ ಕುರಿ ಎಲ್ಲಿ” ಎಂದು ಕೇಳಿದ್ದಕ್ಕೆ, ಅಬ್ರಹಾಮನು, “ಮಗನೇ, ಹೋಮಕ್ಕೆ ಬೇಕಾದ ಕುರಿಮರಿಯನ್ನು ದೇವರೇ ಒದಗಿಸುವನು” ಎಂದನು. ದೇವರು ಹೇಳಿದ ಸ್ಥಳಕ್ಕೆ ಅವರು ಸೇರಿದಾಗ ಅಬ್ರಹಾಮನು ಯಜ್ಞವೇದಿಯನ್ನು ಕಟ್ಟಿ, ಕಟ್ಟಿಗೆಯನ್ನು ಜೋಡಿಸಿ ತನ್ನ ಮಗನಾದ ಇಸಾಕನ ಕೈಕಾಲುಗಳನ್ನು ಕಟ್ಟಿ ಅವನನ್ನು ಯಜ್ಞವೇದಿಯ ಮೇಲೆ ಇದ್ದ ಕಟ್ಟಿಗೆಯ ಮೇಲೆ ಮಲಗಿಸಿದನು. ಅಬ್ರಹಾಮನು ತನ್ನ ಮಗನನ್ನು ಕೊಲ್ಲುವುದಕ್ಕೆ, ಕೈಚಾಚಿ ಕತ್ತಿಯನ್ನು ತೆಗೆದುಕೊಂಡನು. ಆಗ ಯೆಹೋವನ ದೂತನು ಆಕಾಶದೊಳಗಿನಿಂದ, “ಅಬ್ರಹಾಮನೇ, ಅಬ್ರಹಾಮನೇ” ಎಂದು ಅವನನ್ನು ಕರೆದನು. ಅದಕ್ಕೆ ಅಬ್ರಹಾಮನು, “ಇಗೋ, ಇದ್ದೇನೆ” ಎಂದನು. ಆ ದೂತನು ಅವನಿಗೆ, “ಹುಡುಗನ ಮೇಲೆ ಕೈ ಹಾಕಬೇಡ, ಅವನಿಗೆ ಏನೂ ಮಾಡಬೇಡ. ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಸಮರ್ಪಿಸುವುದಕ್ಕೆ ಹಿಂಜರಿಯಲಿಲ್ಲ. ಈಗ ನೀನು ದೇವರಲ್ಲಿ ಭಯಭಕ್ತಿಯುಳ್ಳವನು ಎಂದು ನನಗೆ ಗೊತ್ತಾಯಿತು” ಎಂದು ಹೇಳಿದನು. ಅಬ್ರಹಾಮನು ಕಣ್ಣೆತ್ತಿ ನೋಡಲಾಗಿ ತನ್ನ ಹಿಂದೆ, ಒಂದು ಟಗರು ಪೊದೆಯಲ್ಲಿ ಕೊಂಬುಗಳಿಂದ ಸಿಕ್ಕಿ ಹಾಕಿಕೊಂಡಿರುವುದನ್ನು ಕಂಡನು. ಅವನು ಹೋಗಿ ಅದನ್ನು ಹಿಡಿದು ತಂದು ತನ್ನ ಮಗನಿಗೆ ಬದಲಾಗಿ ಹೋಮಮಾಡಿದನು.

ಆ ಮರಿಯು ಊನವಿಲ್ಲದ ಒಂದು ವರ್ಷದ ಗಂಡುಮರಿಯಾಗಿರಬೇಕು. ನೀವು ಕುರಿಗಳಿಂದಾಗಲಿ ಅಥವಾ ಆಡುಗಳಿಂದಾಗಲಿ ಅದನ್ನು ತೆಗೆದುಕೊಳ್ಳಬಹುದು.

“ಕೊಲೆ ಮಾಡಬಾರದು.

ನಾನು ನಿನಗೆ ಆಜ್ಞಾಪಿಸಿದಂತೆ ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುವನು” ಎಂದು ಹೇಳಿದನು.

ಸಿಪಾಯಿಗಳಿಗೆ, “ನೀವು ಯೆಹೋವನ ಈ ಯಾಜಕರನ್ನು ಕೊಲ್ಲಿರಿ. ದಾವೀದನು ಓಡಿಹೋದದ್ದು ಗೊತ್ತಿದ್ದರೂ ನನಗೆ ತಿಳಿಸದೇ ಅವನಿಗೆ ಸಹಾಯ ಮಾಡಿದ್ದಾರೆ” ಎಂದು ಹೇಳಿ ಅವರನ್ನು ಕೊಲ್ಲಲು ಆಜ್ಞಾಪಿಸಿದನು. ಆದರೆ ಅರಸನ ಸಿಪಾಯಿಗಳು ಯಾಜಕರ ಮೇಲೆ ಕೈಹಾಕುವುದಕ್ಕೆ ಮನಸ್ಸು ಮಾಡಲಿಲ್ಲ. ಆದ್ದರಿಂದ ಸೌಲನು ಎದೋಮ್ಯನಾದ ದೋಯೇಗನಿಗೆ, “ನೀನು ಹೋಗಿ ಅವರನ್ನು ಕೊಲ್ಲು” ಎಂದು ಆಜ್ಞಾಪಿಸಲು, ಅವನು ನಾರು ಬಟ್ಟೆಯ ಎಪೋದನ್ನು ಧರಿಸಿಕೊಂಡಿದ್ದ ಎಂಭತ್ತೈದು ಯಾಜಕರನ್ನು ಆ ದಿನ ಕೊಂದುಹಾಕಿದನು. ಅನಂತರ ಅವನು ಯಾಜಕರ ಪಟ್ಟಣವಾದ ನೋಬಕ್ಕೆ ಹೋಗಿ ಅಲ್ಲಿನ ಸ್ತ್ರೀಪುರುಷರನ್ನೂ, ಶಿಶುಬಾಲಕರನ್ನೂ ದನ, ಕುರಿ, ಕತ್ತೆಗಳನ್ನು, ಕತ್ತಿಯಿಂದ ಸಂಹರಿಸಿದನು.

ಈಜೆಬೆಲಳು ಯೆಹೋವನ ಪ್ರವಾದಿಗಳನ್ನು ಸಂಹರಿಸುತ್ತಿರುವಾಗ ಯೆಹೋವನಲ್ಲಿ ಬಹು ಭಯಭಕ್ತಿಯುಳ್ಳವನಾದ ಈ ಓಬದ್ಯನು ನೂರು ಜನರು ಪ್ರವಾದಿಗಳನ್ನು ತೆಗೆದುಕೊಂಡು ಅವರನ್ನು ಐವತ್ತೈವತ್ತು ಜನರನ್ನಾಗಿ ಗವಿಗಳಲ್ಲಿ ಅಡಗಿಸಿಟ್ಟು, ಅವರಿಗೆ ಅನ್ನಪಾನಗಳನ್ನು ಕೊಟ್ಟು ಸಾಕುತ್ತಿದ್ದನು.

ಅವನು ಅದಕ್ಕೆ, “ಸೇನಾಧೀಶ್ವರನಾದ ದೇವರೇ, ಯೆಹೋವನೇ ಇಸ್ರಾಯೇಲರು ನಿನ್ನ ನಿಬಂಧನೆಯನ್ನು ಮೀರಿದ್ದಾರೆ. ಯಜ್ಞವೇದಿಗಳನ್ನು ಕೆಡವಿಹಾಕಿದ್ದಾರೆ, ಪ್ರವಾದಿಗಳನ್ನು ಕತ್ತಿಯಿಂದ ಸಂಹರಿಸಿದ್ದಾರೆ. ನಾನೊಬ್ಬನೇ ಉಳಿದು ನಿನ್ನ ಗೌರವವನ್ನು ಕಾಪಾಡುವುದರಲ್ಲಿ ಆಸಕ್ತನಾಗಿದ್ದೇನೆ. ಆದರೆ ಅವರು ನನ್ನ ಪ್ರಾಣವನ್ನೂ ತೆಗೆಯಬೇಕೆಂದಿದ್ದಾರೆ” ಎಂದು ಉತ್ತರಕೊಟ್ಟನು.

ಯೆಹೋವನನ್ನೂ ಮತ್ತು ಆತನ ಬಲವನ್ನೂ ಆಶ್ರಯಿಸಿರಿ; ನಿತ್ಯವೂ ಆತನ ದರ್ಶನವನ್ನು ಅಪೇಕ್ಷಿಸಿರಿ.

ಆಗ ಯಾಜಕನಾದ ಯೆಹೋಯಾದನ ಮಗ ಜೆಕರ್ಯನು ದೇವರ ಆತ್ಮನಿಂದ ತುಂಬಿದವನಾಗಿ ಆವೇಶ ಉಳ್ಳವನಾದನು. ಆಗ ಅವನು ಜನರ ಎದುರಿನಲ್ಲಿ ಉನ್ನತ ಸ್ಥಾನದಲ್ಲಿ ನಿಂತುಕೊಂಡು ಅವರಿಗೆ, “ದೇವರ ಮಾತನ್ನು ಕೇಳಿರಿ; ನೀವು ಯೆಹೋವನ ಆಜ್ಞೆಗಳನ್ನು ಮೀರಿ, ನಿಮ್ಮನ್ನೆ ಏಕೆ ನಾಶಮಾಡಿಕೊಳ್ಳುತ್ತಿದ್ದೀರಿ? ನೀವು ಯೆಹೋವನನ್ನು ಕಡೆಗಣಿಸಿರುವುದರಿಂದ; ಆತನೂ ನಿಮ್ಮನ್ನು ಕಡೆಗಣಿಸಿದ್ದಾನೆ” ಎಂದನು. ಆಗ ಅವರು ಅವನಿಗೆ ವಿರೋಧವಾಗಿ ಒಳಸಂಚುಮಾಡಿ ಯೆಹೋವನ ಆಲಯದ ಪ್ರಾಕಾರದಲ್ಲಿ ಅವನನ್ನು ಕಲ್ಲೆಸೆದು ಕೊಂದರು. ಇದು ಅರಸನಾದ ಯೆಹೋವಾಷನ ಅಪ್ಪಣೆಯಿಂದಲೇ ಆಯಿತು.

ಆಗ ಅವರು ನಿನಗೆ ಅವಿಧೇಯರಾಗಿ ತಿರುಗಿ ಬಿದ್ದು ನಿನ್ನ ಧರ್ಮೋಪದೇಶವನ್ನು ಉಲ್ಲಂಘಿಸಿ ತಮ್ಮನ್ನು ಎಚ್ಚರಿಸುವುದಕ್ಕೂ ನಿನ್ನ ಕಡೆಗೆ ತಿರುಗಿಸುವುದಕ್ಕೂ ಪ್ರಯತ್ನಿಸುತ್ತಿದ್ದ ನಿನ್ನ ಪ್ರವಾದಿಗಳನ್ನು ಕೊಂದು ಹಾಕಿ ನಿನ್ನನ್ನು ಅಸಡ್ಡೆಮಾಡಿದರು.

ಆಗ ಯೋಬನು ಎದ್ದು ಮೇಲಂಗಿಯನ್ನು ಹರಿದುಕೊಂಡು, ತಲೆ ಬೋಳಿಸಿಕೊಂಡು ನೆಲದ ಮೇಲೆ ಅಡ್ಡಬಿದ್ದು ದೇವರನ್ನು ಆರಾಧಿಸಿ, “ಏನೂ ಇಲ್ಲದವನಾಗಿ ತಾಯಿಯ ಗರ್ಭದಿಂದ ಬಂದೆನು; ಏನೂ ಇಲ್ಲದವನಾಗಿಯೇ ಗತಿಸಿಹೋಗುವೆನು; ನನಗಿರುವುದನ್ನೆಲ್ಲ ಯೆಹೋವನೇ ಕೊಟ್ಟನು, ಅವುಗಳನ್ನು ಯೆಹೋವನೇ ತೆಗೆದುಕೊಂಡನು; ಯೆಹೋವನ ನಾಮಕ್ಕೆ ಸ್ತೋತ್ರವಾಗಲಿ” ಎಂದು ಹೇಳಿದನು.

ಆಹಾ, ಆತನು ನನ್ನನ್ನು ಕೊಲ್ಲುವನು, ಅದಕ್ಕಾಗಿ ಕಾದಿರುತ್ತೇನೆ, ಆದರೂ ನನ್ನ ನಡತೆಯ ಒಳ್ಳೆಯತನವನ್ನು ಆತನ ಮುಂದೆ ಸ್ಥಾಪಿಸುವೆನು.

ನಾನಂತು ನನ್ನ ನ್ಯಾಯಸ್ಥಾಪಕನು ಜೀವಸ್ವರೂಪನೆಂದು ಬಲ್ಲೆನು, ಕೊನೆಯಲ್ಲಿ ಆತನು ಭೂಮಿಗೆ ಇಳಿದು ಬರುವನು. ನನ್ನ ಚರ್ಮವು ಹೀಗೆ ಬಿರಿದು ಹಾಳಾದ ಬಳಿಕ, ದೇಹಧಾರಿಯಾಗಿ ದೇವರನ್ನು ನೋಡುವೆನು. ಕಣ್ಣಾರೆ ಕಾಣುವೆನು, ನಾನೇ ನಾನಾಗಿ ನೋಡುವೆನು, ಮತ್ತೊಬ್ಬನಾಗಿ ಅಲ್ಲ. ನನ್ನ ಹೃದಯವು ಹಂಬಲಿಕೆಯಿಂದ ನನ್ನಲ್ಲಿ ಕುಂದಿದೆ.

ಆತನಾದರೋ ನನ್ನ ದಾರಿಯನ್ನು ಬಲ್ಲನು, ಆತನೇ ನನ್ನನ್ನು ಶೋಧಿಸಿ ನೋಡಿದರೆ ಚೊಕ್ಕ ಬಂಗಾರವಾಗಿ ಕಾಣಿಸುವೆನು. ಆತನ ಹೆಜ್ಜೆಯ ಜಾಡಿನಲ್ಲೇ ಕಾಲಿಟ್ಟಿದ್ದೇನೆ, ಓರೆಯಾಗದೆ ಆತನ ದಾರಿಯನ್ನೇ ಹಿಡಿದಿದ್ದೇನೆ.

ಅನ್ಯಜನಾಂಗಗಳು ದಂಗೆಗೆ ಏಳುವುದೂ, ಜನಾಂಗಗಳು ವ್ಯರ್ಥಕಾರ್ಯಗಳನ್ನು ಯೋಚಿಸುವುದೂ ಏಕೆ? ಅರಸರು ಒಟ್ಟಾಗಿ ಸೇರಿ ಆಲೋಚಿಸುತ್ತಿದ್ದಾರೆ. ದೇಶಾಧಿಪತಿಗಳು ಯೆಹೋವನಿಗೂ ಮತ್ತು ಆತನಿಂದ ಅಭಿಷೇಕಿಸಲ್ಪಟ್ಟವನಿಗೂ ವಿರುದ್ಧವಾಗಿ ಸನ್ನದ್ಧರಾಗಿ ನಿಂತಿದ್ದಾರೆ, “ನಮಗೆ ಅವರು ಹಾಕಿದ ಬಂಧನಗಳನ್ನು ಕಿತ್ತುಹಾಕಿ, ಬೇಡಿಗಳನ್ನು ಮುರಿದು ಬಿಸಾಡೋಣ” ಎಂದು ಮಾತನಾಡಿಕೊಳ್ಳುತ್ತಾರಲ್ಲಾ. ಪರಲೋಕದಲ್ಲಿ ಆಸೀನನಾಗಿರುವಾತನು ಅದಕ್ಕೆ ನಗುವನು; ಕರ್ತನು ಅವರನ್ನು ಪರಿಹಾಸ್ಯಮಾಡುವನು.

ನಿನ್ನನ್ನು ಮೊರೆಹೊಕ್ಕವರೆಲ್ಲರು ನಿನ್ನಲ್ಲಿ ಸಂತೋಷಪಡುವರು; ನೀನು ಕಾಪಾಡುವವನೆಂದು ಅವರು ಯಾವಾಗಲೂ ಆನಂದ ಧ್ವನಿಮಾಡುವರು. ನಿನ್ನ ನಾಮವನ್ನು ಪ್ರೀತಿಸುವವರು ನಿನ್ನಲ್ಲಿ ಉಲ್ಲಾಸಗೊಳ್ಳುವರು.

ನಾನು ಯೆಹೋವನನ್ನು ಯಾವಾಗಲೂ ನನ್ನೆದುರಿನಲ್ಲಿಯೇ ಇಟ್ಟುಕೊಂಡಿದ್ದೇನೆ; ಆತನು ನನ್ನ ಬಲಗಡೆಯಲ್ಲಿ ಇರುವುದರಿಂದ ನಾನು ಎಂದಿಗೂ ಕದಲುವುದಿಲ್ಲ. ಆದಕಾರಣ ನನ್ನ ಹೃದಯವು ಹರ್ಷಿಸುತ್ತದೆ; ನನ್ನ ಮನವು ಉಲ್ಲಾಸಗೊಳ್ಳುತ್ತದೆ; ನನ್ನ ಶರೀರವೂ ಸುರಕ್ಷಿತವಾಗಿರುವುದು. ಏಕೆಂದರೆ ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ಬಿಡುವುದಿಲ್ಲ; ನಿನ್ನ ಭಕ್ತನಿಗೆ ಅಧೋಲೋಕವನ್ನು ನೋಡಗೊಡಿಸುವುದಿಲ್ಲ. ನೀನು ನನಗೆ ಜೀವಮಾರ್ಗವನ್ನು ತಿಳಿಯಪಡಿಸುವಿ; ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷವಿದೆ; ನಿನ್ನ ಬಲಗೈಯಲ್ಲಿ ಶಾಶ್ವತ ಭಾಗ್ಯವಿದೆ.

ನಾನಾದರೋ ನಿರಪರಾಧಿಯು; ನಿನ್ನ ಸಾನ್ನಿಧ್ಯವನ್ನು ಸೇರುವೆನು. ನಾನು ಎಚ್ಚತ್ತಾಗ ನಿನ್ನ ನೀತಿಸ್ವರೂಪ ದರ್ಶನದಿಂದ ತೃಪ್ತನಾಗಿರುವೆನು.

ನನ್ನ ಪ್ರಾಣವನ್ನು ಉಜ್ಜೀವಿಸಮಾಡಿ ತನ್ನ ಹೆಸರಿಗೆ ತಕ್ಕಂತೆ ನೀತಿಯ ಮಾರ್ಗದಲ್ಲಿ ನನ್ನನ್ನು ನಡೆಸುತ್ತಾನೆ. ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ, ನೀನು ಹತ್ತಿರವಿರುವುದರಿಂದ ಕೇಡಿಗೆ ಹೆದರೆನು; ನಿನ್ನ ದೊಣ್ಣೆಯೂ ಮತ್ತು ನಿನ್ನ ಕೋಲೂ ನನಗೆ ಧೈರ್ಯ ಕೊಡುತ್ತವೆ.

ದಾವೀದನ ಕೀರ್ತನೆ. ಯೆಹೋವನು ನನಗೆ ಬೆಳಕೂ, ರಕ್ಷಕನೂ ಆಗಿದ್ದಾನೆ; ನಾನು ಯಾರಿಗೆ ಭಯಪಟ್ಟೆನು? ಯೆಹೋವನು ನನ್ನ ಪ್ರಾಣದ ಆಧಾರವು; ನಾನು ಯಾರಿಗೆ ಹೆದರೇನು? ನನ್ನನ್ನು ಬಾಧಿಸುತ್ತಿರುವ ದುರ್ವೈರಿಗಳು ನನ್ನನ್ನು ನುಂಗಿಬಿಡಬೇಕೆಂದು ಬಂದು, ತಾವೇ ನೆಲಕ್ಕೆ ಬಿದ್ದುಹೋದರು. ನನಗೆ ವಿರುದ್ಧವಾಗಿ ದಂಡು ಬಂದಿಳಿದರೂ ನನಗೇನೂ ಭಯವಿಲ್ಲ; ಚತುರಂಗಬಲವು ಯುದ್ಧಸನ್ನದ್ಧವಾಗಿ ನಿಂತರೂ, ಭರವಸವುಳ್ಳವನಾಗಿಯೇ ಇರುವೆನು. ನನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ, ಆತನ ಪ್ರಸನ್ನತೆಯನ್ನು ನೋಡುವುದಕ್ಕೂ, ಆತನ ಮಂದಿರದಲ್ಲಿ ಧ್ಯಾನ ಮಾಡುವುದಕ್ಕೂ ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು ಯೆಹೋವನಿಂದ ಕೇಳಿಕೊಂಡು ಅದನ್ನೇ ಎದುರು ನೋಡುತ್ತಿರುವೆನು. ಅಪಾಯಕಾಲದಲ್ಲಿ ಆತನು ನನ್ನನ್ನು ಗುಪ್ತಸ್ಥಳದಲ್ಲಿ ಅಡಗಿಸುವನು; ತನ್ನ ಗುಡಾರವೆಂಬ ಆಶ್ರಯಸ್ಥಾನದಲ್ಲಿ ನನ್ನನ್ನು ಭದ್ರಪಡಿಸುವನು; ಪರ್ವತಶಿಖರದ ಮೇಲೆ ನನ್ನನ್ನು ಸುರಕ್ಷಿತವಾಗಿ ನಿಲ್ಲಿಸುವನು.

ನೀತಿವಂತರೇ, ಯೆಹೋವನಲ್ಲಿ ಸಂತೋಷಿಸುತ್ತಾ ಉಲ್ಲಾಸವಾಗಿರಿ; ಯಥಾರ್ಥಚಿತ್ತರೇ, ಆತನ ವಿಷಯದಲ್ಲಿ ಉತ್ಸಾಹ ಧ್ವನಿಮಾಡಿರಿ.

ದುಷ್ಟನು ನೀತಿವಂತನಿಗೆ ವಿರುದ್ಧವಾಗಿ ಆಲೋಚಿಸುತ್ತಾನೆ; ಅವನನ್ನು ನೋಡಿ ಹಲ್ಲುಕಡಿಯುತ್ತಾನೆ. ಆದರೆ ಕರ್ತನು ಅವನಿಗೆ ಶಿಕ್ಷಾಕಾಲ ಬರುತ್ತದೆಂದು ನಗುತ್ತಾನೆ. ದುಷ್ಟರು ದೀನದರಿದ್ರರನ್ನು ಕಡಿದುಬಿಡಬೇಕೆಂದು ಕತ್ತಿಯನ್ನು ಹಿರಿದಿದ್ದಾರೆ; ಯಥಾರ್ಥರನ್ನು ಕೊಂದು ಹಾಕಬೇಕೆಂದು ಬಿಲ್ಲನ್ನು ಎತ್ತಿದ್ದಾರೆ. ಆದರೆ ಅವರ ಕತ್ತಿ ಅವರ ಎದೆಯನ್ನೇ ಇರಿದುಬಿಡುವುದು; ಅವರ ಬಿಲ್ಲುಗಳು ಸಿಡಿದು ಮುರಿದುಹೋಗುವವು;

ದೇವರೇ, ನಾವು ನಿನ್ನ ನಿಮಿತ್ತ ದಿನವೆಲ್ಲಾ ಕೊಲೆಗೆ ಗುರಿಯಾಗಿದ್ದೇವೆ; ಜನರು ನಮ್ಮನ್ನು ಕೊಯ್ಗುರಿಗಳಂತೆ ಎಣಿಸಿದ್ದಾರೆ.

1 ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ಆರಿಸಿಕೊಂಡದ್ದು; ಕೋರಹೀಯರ ಗೀತೆ; ತಾರಕಸ್ಥಾಯಿಯಲ್ಲಿ ಹಾಡತಕ್ಕದ್ದು. ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು. ಆದುದರಿಂದ ಭೂಮಿಯು ಮಾರ್ಪಟ್ಟರೂ, ಬೆಟ್ಟಗಳು ಸಮುದ್ರದಲ್ಲಿ ಮುಳುಗಿಹೋದರೂ, ನಮಗೇನೂ ಭಯವಿಲ್ಲ.

ಆಗ ನೀವು ನಿಮ್ಮ ಮುಂದಣ ಸಂತತಿಯವರಿಗೆ, ದೇವರು ಇಂಥವನು; ಆತನು ಯುಗಯುಗಾಂತರಗಳಲ್ಲಿಯೂ ನಮ್ಮ ದೇವರು, ನಿರಂತರವೂ ನಮ್ಮನ್ನು ನಡೆಸುವವನಾಗಿದ್ದಾನೆ ಎಂದು ತಿಳಿಸುವಿರಿ.

ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.

ಯೆಹೋವನೇ, ನೀನಾದರೋ ಅವರನ್ನು ನೋಡಿ ನಗುವಿ; ಎಲ್ಲಾ ಅನ್ಯಜನಾಂಗಗಳನ್ನು ಪರಿಹಾಸ್ಯಮಾಡುವಿ. ನನ್ನ ಬಲವೇ, ನಿನ್ನನ್ನು ನಿರೀಕ್ಷಿಸುತ್ತಿದ್ದೇನೆ. ನನ್ನ ಆಶ್ರಯದುರ್ಗವು ದೇವರೇ. ನನ್ನ ದೇವರು ತನ್ನ ಮಹಾ ಪ್ರೀತಿಯಿಂದ ನನಗೆ ಸಹಾಯಮಾಡುವನು; ನನ್ನ ವಿರೋಧಿಗಳಿಗುಂಟಾದ ಶಿಕ್ಷೆಯನ್ನು ನಾನು ನೋಡುವಂತೆ ಮಾಡುವನು.

ನಾನು ಹಾಸಿಗೆಯ ಮೇಲಿದ್ದುಕೊಂಡು ನಿನ್ನನ್ನು ಸ್ಮರಿಸುವಾಗ, ರಾತ್ರಿಯ ಜಾವಗಳಲ್ಲಿ ನಿನ್ನನ್ನು ಧ್ಯಾನಿಸುತ್ತಿರುವೆನು. ನೀನು ನನಗೆ ಸಹಾಯಕನಾಗಿರುವೆಯಲ್ಲಾ; ನಿನ್ನ ರೆಕ್ಕೆಗಳ ಮರೆಯಲ್ಲಿ ಸುರಕ್ಷಿತನಾಗಿದ್ದುಕೊಂಡು, ಆನಂದಘೋಷ ಮಾಡುತ್ತಿರುವೆನು. ನನ್ನ ಆತ್ಮವು ನಿನ್ನನ್ನು ಅಂಟಿಕೊಂಡು ಹಿಂಬಾಲಿಸುವುದು; ನಿನ್ನ ಬಲಗೈ ನನಗೆ ಆಧಾರವಾಗಿರುವುದು. ನನ್ನ ಜೀವಕ್ಕೆ ಕೇಡು ಬಗೆಯುವವರೋ, ಅಧೋಲೋಕಕ್ಕೆ ಇಳಿದುಹೋಗುವರು.

ನೀತಿವಂತರಾದರೋ ದೇವರ ಸನ್ನಿಧಿಯಲ್ಲಿ ಹರ್ಷಿಸಲಿ; ಉಲ್ಲಾಸಿಸಲಿ, ಆನಂದಧ್ವನಿಮಾಡಲಿ. ದೇವರಿಗೆ ಗಾಯನಮಾಡಿರಿ; ಆತನ ನಾಮವನ್ನು ಭಜಿಸಿರಿ; ಅರಣ್ಯದಲ್ಲಿ ಸವಾರಿಮಾಡುತ್ತಾ ಬರುವಾತನಿಗೆ ರಾಜಮಾರ್ಗವನ್ನು ಸಿದ್ಧಮಾಡಿರಿ. ಆತನ ನಾಮಧೇಯ ಯಾಹು; ಆತನ ಸನ್ನಿಧಿಯಲ್ಲಿ ಉಲ್ಲಾಸಿಸಿರಿ.

ಆದರೂ ಸದಾ ನಿನ್ನ ಸನ್ನಿಧಿಯಲ್ಲಿಯೇ ಇದ್ದೇನೆ. ನೀನು ನನ್ನ ಬಲಗೈಯನ್ನು ಹಿಡಿದು, ನಿನ್ನ ಚಿತ್ತವನ್ನು ತಿಳಿಯಪಡಿಸಿ, ನನ್ನನ್ನು ನಡೆಸಿ ತರುವಾಯ ಮಹಿಮೆಗೆ ಸೇರಿಸಿಕೊಳ್ಳುವಿ. ಪರಲೋಕದಲ್ಲಿ ನನಗೆ ನೀನಲ್ಲದೆ ಮತ್ತಾರು ಅವಶ್ಯ? ಇಹಲೋಕದಲ್ಲಿ ನಿನ್ನನ್ನಲ್ಲದೆ ಇನ್ನಾರನ್ನೂ ಬಯಸುವುದಿಲ್ಲ. ತನುಮನಗಳು ಕ್ಷಯಿಸಿದರೂ ನನ್ನ ಆತ್ಮಕ್ಕೆ ಬಲವು ನನ್ನ ಶಾಶ್ವತವಾದ ಪಾಲೂ ದೇವರೇ.

ಉತ್ಸಾಹಧ್ವನಿಯನ್ನು ತಿಳಿದಿರುವ ಜನರು ಧನ್ಯರು; ಯೆಹೋವನೇ, ಅವರು ನಿನ್ನ ಮುಖಪ್ರಕಾಶದಲ್ಲಿ ಸಂಚರಿಸುತ್ತಾರೆ. ಯಾವಾಗಲೂ ನಿನ್ನ ನಾಮದಲ್ಲಿ ಆನಂದಿಸುತ್ತಾರೆ; ನಿನ್ನ ನೀತಿಯಿಂದ ಏಳಿಗೆ ಹೊಂದುತ್ತಾರೆ.

ಅತ್ಯುನ್ನತನಾದ ದೇವರ ಮೊರೆಹೊಕ್ಕವನು, ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತನಾಗಿರುವನು.

ದೇವರೇ, ಮೇಲಣ ಲೋಕಗಳಲ್ಲಿ ನಿನ್ನ ಪ್ರಭಾವವು ಮೆರೆಯಲಿ; ಭೂಮಂಡಲದ ಮೇಲೆಲ್ಲಾ ನಿನ್ನ ಮಹತ್ವವು ಹಬ್ಬಲಿ.

ಯೆಹೋವನು ಸರಳ ಮನಸ್ಸುಳ್ಳವರನ್ನು ಕಾಪಾಡುವನು; ಕುಗ್ಗಿದವನಾದ ನನ್ನನ್ನು ರಕ್ಷಿಸಿದನು. ನನ್ನ ಮನವೇ, ನಿನ್ನ ವಿಶ್ರಾಂತಿಯ ನೆಲೆಗೆ ತಿರುಗು. ಯೆಹೋವನು ನಿನಗೆ ಮಹೋಪಕಾರಗಳನ್ನು ಮಾಡಿದ್ದಾನಲ್ಲಾ. ಯೆಹೋವನೇ, ನಾನು ಜೀವಲೋಕದಲ್ಲಿದ್ದು ನಿನಗೆ ನೀತಿಯುಳ್ಳವನಾಗಿ ನಡೆದುಕೊಳ್ಳಬೇಕೆಂದು, ನೀನು ನನ್ನ ಪ್ರಾಣವನ್ನು ಮರಣದಿಂದ ತಪ್ಪಿಸಿ, ಕಣ್ಣೀರನ್ನು ನಿಲ್ಲಿಸಿ, ನನ್ನ ಪಾದಗಳನ್ನು ಎಡವದಂತೆ ಕಾದಿದ್ದೀ.

ಯೆಹೋವನು ತನ್ನ ಭಕ್ತರ ಮರಣವನ್ನು ಅಲ್ಪವೆಂದು ಎಣಿಸುವುದಿಲ್ಲ.

ಭಕ್ತರು ತಮಗುಂಟಾದ ಮಹಿಮೆಯಲ್ಲಿ ಹಿಗ್ಗಲಿ; ಹಾಸಿಗೆಯ ಮೇಲಿರುವಾಗಲೂ ಉತ್ಸಾಹಧ್ವನಿ ಮಾಡಲಿ.

ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು.

ಸುಗಂಧತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ, ಮತ್ತು ಜನನ ದಿನಕ್ಕಿಂತ ಮರಣ ದಿನವೇ ಮೇಲು.

ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರೆಸಿಬಿಡುವನು; ತನ್ನ ಪ್ರಜೆಯ ಅವಮಾನವನ್ನು ಭೂಮಂಡಲದಿಂದಲೇ ತೊಲಗಿಸುವನು; ಯೆಹೋವನೇ ಇದನ್ನು ನುಡಿದಿದ್ದಾನೆ.

ಮೃತರಾದ ನಿನ್ನ ಜನರು ಬದುಕುವರು, ನಮ್ಮ ಹೆಣಗಳು ಜೀವದಿಂದ ಏಳುವವು, ಧೂಳಿನ ನಿವಾಸಿಗಳೇ, ಎಚ್ಚರಗೊಂಡು ಹರ್ಷಧ್ವನಿಗೈಯಿರಿ! ಯೆಹೋವನೇ, ನೀನು ಸುರಿಸುವ ಇಬ್ಬನಿಯು ಮುಂಜಾನೆಯ ಇಬ್ಬನಿಯಂತಿರುವುದು. ಭೂಮಿಯು ಸತ್ತವರನ್ನು ಹೊರಗೆ ಹಾಕುವುದು.

ಯೆಹೋವನು ವಿಮೋಚಿಸಿದವರು ಹಿಂದಿರುಗಿ, ಶಾಶ್ವತ ಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು ಉತ್ಸಾಹಧ್ವನಿಯೊಡನೆ ಚೀಯೋನಿಗೆ ಸೇರುವರು. ಅವರು ಹರ್ಷಾನಂದಗಳನ್ನು ಅನುಭವಿಸುವರು, ದುಃಖವೂ, ನಿಟ್ಟುಸಿರೂ ಓಡಿಹೋಗುವವು.

ಆಕಾಶವೇ, ಹರ್ಷಧ್ವನಿಗೈ! ಭೂಮಿಯೇ, ಉಲ್ಲಾಸಗೊಳ್ಳು! ಪರ್ವತಗಳೇ, ಹರ್ಷಧ್ವನಿಗೈಯಿರಿ! ಏಕೆಂದರೆ ಯೆಹೋವನು ತನ್ನ ಪ್ರಜೆಯನ್ನು ಸಂತೈಸಿ, ದಿಕ್ಕಿಲ್ಲದ ತನ್ನ ಜನರನ್ನು ಕರುಣಿಸುವನು.”

ನಾನು ಹೊಡೆಯುವವರಿಗೆ ಬೆನ್ನುಕೊಟ್ಟು, ಕೂದಲು ಕೀಳುವವರಿಗೆ ಗಡ್ಡವನ್ನು ಒಡ್ಡಿದೆನು. ಉಗುಳಿಸಿಕೊಳ್ಳುವ ಅವಮಾನಕ್ಕೆ ನನ್ನ ಮುಖವನ್ನು ಮರೆಮಾಡಿಕೊಳ್ಳಲಿಲ್ಲ. ಕರ್ತನಾದ ಯೆಹೋವನು ನನಗೆ ಸಹಾಯಮಾಡುವನು. ಆದಕಾರಣ ನಾನು ನಾಚಿಕೆಯಿಂದ ಕೊರಗಲಿಲ್ಲ; ನನ್ನ ಮುಖವನ್ನು ಕಗ್ಗಲ್ಲಿನಂತೆ ಗಟ್ಟಿಮಾಡಿಕೊಂಡಿದ್ದೇನೆ. ಆಶಾಭಂಗಪಡಲಾರನೆಂದು ನನಗೆ ಗೊತ್ತು.

ಯೆಹೋವನು ವಿಮೋಚಿಸಿದವರು ಹಿಂದಿರುಗಿ ಶಾಶ್ವತ ಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು ಉತ್ಸಾಹಧ್ವನಿಯೊಡನೆ ಚೀಯೋನಿಗೆ ಸೇರುವರು. ಹರ್ಷಾನಂದಗಳನ್ನು ಅನುಭವಿಸುವರು, ಮೊರೆಯೂ ಕರಕರೆಯೂ ತೊಲಗಿಹೋಗುವವು.

ಅವನು ಧಿಕ್ಕರಿಸಲ್ಪಟ್ಟವನು, ಮನುಷ್ಯರು ಸೇರಿಸಿಕೊಳ್ಳದವನು, ಸಂಕಟಪಡುವವನು, ವ್ಯಾಧಿಪೀಡಿತನು, ಜನರು ಮುಖವನ್ನು ಓರೆಮಾಡಿಕೊಳ್ಳುವ ಧಿಕ್ಕಾರಕ್ಕೆ ಒಳಗಾದವನೂ ಆಗಿದ್ದನು. ನಿಜವಾಗಿಯೂ ನಮ್ಮ ವ್ಯಾಧಿಗಳನ್ನು ಸಂಕಷ್ಟವನ್ನು ಅನುಭವಿಸಿದನು; ಅವನು ಹೊತ್ತ ಹೊರೆಯು ನಮ್ಮ ಸಂಕಟವೇ ಹೌದು, ನಾವಾದರೋ ಅವನು ದೇವರಿಂದ ಬಾಧಿತನು, ಪೆಟ್ಟು ತಿಂದವನು, ಕುಗ್ಗಿಸಲ್ಪಟ್ಟವನು ಎಂದು ಭಾವಿಸಿಕೊಂಡೆವು. ನಮ್ಮ ದ್ರೋಹಗಳ ದೆಸೆಯಿಂದ ಅವನಿಗೆ ಗಾಯವಾಯಿತು, ನಮ್ಮ ಅಪರಾಧಗಳ ನಿಮಿತ್ತ ಅವನು ಜಜ್ಜಲ್ಪಟ್ಟನು; ನಮಗೆ ಸುಕ್ಷೇಮವನ್ನು ಉಂಟುಮಾಡುವ ದಂಡನೆಯನ್ನು ಅವನು ಅನುಭವಿಸಿದನು; ಅವನ ಬಾಸುಂಡೆಗಳಿಂದ ನಮಗೆ ಗುಣವಾಯಿತು. ನಾವೆಲ್ಲರೂ ಕುರಿಗಳಂತೆ ದಾರಿತಪ್ಪಿ ಹೋಗಿದ್ದೆವು, ಪ್ರತಿಯೊಬ್ಬನೂ ತನ್ನ ತನ್ನ ದಾರಿಯನ್ನು ಹಿಡಿಯುತ್ತಿದ್ದನು; ನಮ್ಮೆಲ್ಲರ ದೋಷಫಲವನ್ನೂ ಯೆಹೋವನು ಅವನ ಮೇಲೆ ಹಾಕಿದನು. ಅವನು ಬಾಧೆಗೆ ಒಳಗಾಗಿ ತನ್ನನ್ನು ತಗ್ಗಿಸಿಕೊಂಡನು, ಬಾಯಿ ತೆರೆಯಲಿಲ್ಲ; ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆಯೂ, ಉಣ್ಣೆ ಕತ್ತರಿಸುವವರ ಮುಂದೆ ಮೌನವಾಗಿರುವ ಕುರಿಯ ಹಾಗೂ ಇದ್ದನು, ಬಾಯಿ ತೆರೆಯಲೇ ಇಲ್ಲ. ಹಿಂಸೆಯ ನ್ಯಾಯದಿಂದ ಕೊಲ್ಲಲ್ಪಟ್ಟನು, ಆಹಾ, ಇವನು ಜೀವಲೋಕದಿಂದ ತೆಗೆದುಹಾಕಲ್ಪಟ್ಟಿದ್ದಾನೆ. ನಮ್ಮ ಜನಗಳ ದ್ರೋಹಗಳ ದೆಸೆಯಿಂದ ಈ ಪೆಟ್ಟು ಅವನ ಮೇಲೆ ಬಿತ್ತಲ್ಲಾ ಎಂದು ಅವನ ಕಾಲದವರಲ್ಲಿ ಯಾರು ಮನಮುಟ್ಟಿ ಮರುಗಿದರು? ಅವನು ಯಾವ ಅನ್ಯಾಯವನ್ನು ಮಾಡದಿದ್ದರೂ, ಅವನ ಬಾಯಲ್ಲಿ ಯಾವ ವಂಚನೆಯು ಇಲ್ಲದಿದ್ದರೂ, ಅವನು ಸತ್ತಾಗ ದುಷ್ಟರ ಮಧ್ಯೆ ಪುಷ್ಟರ ನಡುವೆ ಅವನನ್ನು ಹೂಣಿಟ್ಟರು. ಅವನನ್ನು ಜಜ್ಜುವುದು ಯೆಹೋವನ ಸಂಕಲ್ಪವಾಗಿತ್ತು. ಆತನು ಅವನನ್ನು ವ್ಯಾಧಿಯಿಂದ ಬಾಧಿಸಿ ಹೀಗೆಂದುಕೊಂಡನು, ಇವನು ತನ್ನ ಆತ್ಮವನ್ನು ಪ್ರಾಯಶ್ಚಿತ್ತಯಜ್ಞಕ್ಕಾಗಿ ಒಪ್ಪಿಸಿದ ಮೇಲೆ ತನ್ನ ಸಂತಾನವನ್ನು ನೋಡುವನು, ಚಿರಂಜೀವಿಯಾಗುವನು, ನನ್ನ ಸಂಕಲ್ಪವು ಇವನ ಕೈಯಿಂದ ನೆರವೇರುವುದು; ತನ್ನ ಆತ್ಮವು ಅನುಭವಿಸಿದ ಶ್ರಮೆಯ ಫಲವನ್ನು ಕಂಡು ತೃಪ್ತನಾಗುವನು; ಧರ್ಮಾತ್ಮನಾದ ನನ್ನ ಸೇವಕನು ತನ್ನ ಜ್ಞಾನದ ಮೂಲಕ ಬಹು ಜನರನ್ನು ಧರ್ಮಮಾರ್ಗಕ್ಕೆ ತರುವನು; ಅವರ ಅಪರಾಧಗಳನ್ನು ಹೊತ್ತುಕೊಂಡು ಹೋಗುವನು. ಇವನು ಇಂಥವನಾಗಿರುವುದರಿಂದ ನಾನು ಇವನಿಗೆ ದೊಡ್ಡವರ ಸಂಗಡ ಪಾಲು ಕೊಡುವೆನು, ಇವನು ಬಲಿಷ್ಠರೊಡನೆ ಸೂರೆಯನ್ನು ಹಂಚಿಕೊಳ್ಳುವನು; ತನ್ನ ಪ್ರಾಣವನ್ನು ಧಾರೆಯೆರೆದು, ಮರಣಹೊಂದಿ, ದ್ರೋಹಿಗಳೊಂದಿಗೆ ತನ್ನನ್ನೂ ಎಣಿಸಿಕೊಂಡು, ಬಹು ಜನ ದ್ರೋಹಿಗಳ ಪಾಪವನ್ನು ಹೊರುತ್ತಾ ಅವರಿಗಾಗಿ ವಿಜ್ಞಾಪನೆ ಮಾಡಿದನು.

ನೀವು ಆನಂದಭರಿತರಾಗಿ ಹೊರಡುವಿರಿ, ಸಮಾಧಾನದಿಂದ ಮೆರವಣಿಗೆಯಾಗಿ ಬರುವಿರಿ; ಬೆಟ್ಟ ಗುಡ್ಡಗಳು ನಿಮ್ಮ ಮುಂದೆ ಜಯಘೋಷ ಮಾಡುವವು.

ಸಜ್ಜನರು ನಾಶವಾಗುತ್ತಾರೆ, ಯಾರೂ ಮನಸ್ಸಿಗೆ ತಾರರು; ಸದ್ಭಕ್ತರು ಗತಿಸುತ್ತಾರೆ, ಆಹಾ, ಶಿಷ್ಟರು ಕೇಡಿನಿಂದ ಪಾರಾಗಿದ್ದಾರೆ ಎಂದು ಯಾರೂ ಯೋಚಿಸರು. ಇವರು ಸಮಾಧಾನದಲ್ಲಿ ಸೇರಿದ್ದಾರಲ್ಲಾ; ನೀತಿಯುಳ್ಳವನಾಗಿ ನಡೆಯುವ ಪ್ರತಿಯೊಬ್ಬನು ತನ್ನ ತನ್ನ ದೀರ್ಘನಿದ್ರಾಸ್ಥಾನದಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದಾನೆ.

ದುಃಖಿತರೆಲ್ಲರನ್ನು ಸಂತೈಸುವುದಕ್ಕೂ, ಚೀಯೋನಿನಲ್ಲಿ ಶೋಕಿಸುವವರಿಗೆ ಬೂದಿಗೆ ಬದಲಾಗಿ ಶಿರೋಭೂಷಣ, ದುಃಖವಿದ್ದಲ್ಲಿ ಆನಂದತೈಲ, ಕುಂದಿದ ಮನಕ್ಕೆ ಪ್ರತಿಯಾಗಿ ಉತ್ಸಾಹ ಸ್ತೋತ್ರದ ವಸ್ತ್ರ ಇವುಗಳನ್ನು ಒದಗಿಸಿಕೊಡುವುದಕ್ಕೂ ಆತನು ನನ್ನನ್ನು ಕಳುಹಿಸಿದ್ದಾನೆ. ಯೆಹೋವನು ತನ್ನ ಪ್ರಭಾವಕ್ಕೋಸ್ಕರ ಹಾಕಿದ ನೀತಿವೃಕ್ಷಗಳು ಎಂಬ ಬಿರುದು ಇವರಿಗಾಗುವುದು.

ನಾನು ಯೆಹೋವನಲ್ಲಿ ಪರಮಾನಂದಪಡುವೆನು, ನನ್ನ ಆತ್ಮವು ನನ್ನ ದೇವರಲ್ಲಿ ಹಿಗ್ಗುವುದು. ವರನು ಬಾಸಿಂಗವನ್ನು ಧರಿಸಿಕೊಳ್ಳುವಂತೆಯೂ, ವಧುವು ತನ್ನನ್ನು ಆಭರಣಗಳಿಂದ ಅಲಂಕರಿಸಿಕೊಳ್ಳುವ ಹಾಗೂ, ಆತನು ನನಗೆ ರಕ್ಷಣೆಯೆಂಬ ವಸ್ತ್ರವನ್ನು ಹೊದಿಸಿ, ಧರ್ಮವೆಂಬ ನಿಲುವಂಗಿಯನ್ನು ತೊಡಿಸಿದ್ದಾನೆ.

ಅವರು ಶ್ರಮೆಪಡುತ್ತಿರುವಾಗೆಲ್ಲಾ ಆತನೂ ಶ್ರಮೆಪಟ್ಟನು; ಆತನ ಸಮ್ಮುಖದ ದೂತನು ಅವರನ್ನು ರಕ್ಷಿಸಿದನು; ತನ್ನಲ್ಲಿನ ಮಮತೆಯಿಂದಲೂ ತಾಳ್ಮೆಯಿಂದಲೂ ಅವರನ್ನು ವಿಮೋಚಿಸಿ, ಪುರಾತನ ಕಾಲದಲ್ಲೆಲ್ಲಾ ಎತ್ತಿಕೊಂಡು ಹೊರುತ್ತಾ ಬಂದನು.

ನೀನು ಬಾಬೆಲ್ ಸಂಸ್ಥಾನದ ಕಾರ್ಯಭಾರವನ್ನು ವಹಿಸಿಕೊಟ್ಟ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬ ಕೆಲವು ಮಂದಿ ಯೆಹೂದ್ಯರು ಇದ್ದಾರೆ. ರಾಜನೇ, ಇವರು ನಿನ್ನನ್ನು ಲಕ್ಷಿಸುವುದಿಲ್ಲ, ನಿನ್ನ ದೇವರುಗಳನ್ನು ಸೇವಿಸುವುದಿಲ್ಲ, ನೀನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸುವುದಿಲ್ಲ” ಎಂದು ಅರಿಕೆಮಾಡಿದರು. ನೆಬೂಕದ್ನೆಚ್ಚರನು ಉಗ್ರರೋಷವುಳ್ಳವನಾಗಿ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರನ್ನು ಹಿಡಿದು ತರಬೇಕೆಂದು ಆಜ್ಞಾಪಿಸಿದನು. ಹಾಗೆ ಅವರನ್ನು ಹಿಡಿದು ತರಲು ನೆಬೂಕದ್ನೆಚ್ಚರನು ಅವರಿಗೆ, “ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರೇ, ನೀವು ನನ್ನ ದೇವರನ್ನು ಸೇವಿಸದೆ, ನಾನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸದೆ ಇರುವುದು ಬೇಕೆಂದೇ ಮಾಡಿದ್ದೋ? “ಈಗಲಾದರೂ ನೀವು ಸಿದ್ಧವಾಗಿದ್ದು ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ಅಡ್ಡಬಿದ್ದು, ನಾನು ನಿಲ್ಲಿಸಿದ ಪ್ರತಿಮೆಯನ್ನು ಪೂಜಿಸಿದರೆ ಸರಿ; ಇಲ್ಲವಾದರೆ ತಕ್ಷಣವೇ ಧಗಧಗನೆ ಉರಿಯುವ ಬೆಂಕಿಯೊಳಗೆ ಹಾಕಲ್ಪಡುವಿರಿ; ನಿಮ್ಮನ್ನು ನನ್ನ ಕೈಯೊಳಗಿಂದ ಬಿಡಿಸಬಲ್ಲ ದೇವರು ಯಾರು?” ಎಂದು ಹೇಳಿದನು.

ಇದನ್ನು ಕೇಳಿ ಶದ್ರಕ್ ಮೇಶಕ್, ಅಬೇದ್ನೆಗೋ ಎಂಬುವವರು ರಾಜನಿಗೆ, “ನೆಬೂಕದ್ನೆಚ್ಚರನೇ, ಈ ವಿಷಯದಲ್ಲಿ ನಾವು ನಿನಗೆ ಏನೂ ಹೇಳಬೇಕಾಗಿಲ್ಲ. ‘ಅರಸನೇ, ನಾವು ಆರಾಧಿಸುವ ದೇವರಿಗೆ ಚಿತ್ತವಿದ್ದರೆ ಆತನು ಧಗಧಗನೆ ಉರಿಯುವ ಬೆಂಕಿಯೊಳಗಿಂದ ನಮ್ಮನ್ನು ಬಿಡಿಸಬಲ್ಲನು; ಹೇಗೂ ನಿನ್ನ ಕೈಯಿಂದ ನಮ್ಮನ್ನು ಬಿಡಿಸುವನು. ಚಿತ್ತವಿಲ್ಲದಿದ್ದರೂ ರಾಜನೇ, ಇದು ನಿನಗೆ ತಿಳಿದಿರಲಿ, ನಾವು ನಿನ್ನ ದೇವರುಗಳನ್ನು ಆರಾಧಿಸುವುದಿಲ್ಲ, ನೀನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸುವುದಿಲ್ಲ’” ಎಂದು ಉತ್ತರಕೊಟ್ಟರು.

ಆಗ ನೆಬೂಕದ್ನೆಚ್ಚರನು ಕೋಪೋದ್ರೇಕದಿಂದ ಮುಖಭಾವವನ್ನು ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರ ಕಡೆಗೆ ತಿರುಗಿಸಿಕೊಂಡು ಬೆಂಕಿಯನ್ನು ನಿತ್ಯಕ್ಕಿಂತ ಏಳರಷ್ಟು ಹೆಚ್ಚಾಗಿ ಉರಿಸಬೇಕು ಎಂದು ಆಜ್ಞಾಪಿಸಿದನು. ಇದಲ್ಲದೆ ತನ್ನ ಸೈನ್ಯದ ಕೆಲವು ಮಂದಿ ಶೂರರಿಗೆ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರನ್ನು ಕಟ್ಟಿ ಧಗಧಗನೆ ಉರಿಯುವ ಬೆಂಕಿಯೊಳಗೆ ಎತ್ತಿಹಾಕಬೇಕೆಂದು ಅಪ್ಪಣೆಕೊಟ್ಟನು. ಅದರಂತೆ ಶಲ್ಯ, ಇಜಾರು, ಮುಂಡಾಸ ಮೊದಲಾದ ಉಡುಪನ್ನು ಧರಿಸಿಕೊಂಡಿದ್ದ ಹಾಗೆಯೇ ಅವರನ್ನು ಕಟ್ಟಿ ಧಗಧಗನೆ ಉರಿಯುವ ಬೆಂಕಿಯೊಳಗೆ ಹಾಕಿಬಿಟ್ಟರು. ಹೀಗಾಗಿ ರಾಜಾಜ್ಞೆಯು ಖಂಡಿತವಾಗಿದ್ದುದರಿಂದಲೂ ಬೆಂಕಿಯ ಕಾವು ಅತಿ ತೀಕ್ಷ್ಣವಾಗಿದ್ದುದರಿಂದಲೂ ಅಗ್ನಿಜ್ವಾಲೆಯು ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರನ್ನು ಎತ್ತಿ ಹಾಕಿದವರನ್ನೇ ದಹಿಸಿಬಿಟ್ಟಿತು. ಶದ್ರಕ್, ಮೇಶಕ್, ಅಬೇದ್ನೆಗೋ ಈ ಮೂವರು ಕಟ್ಟಲ್ಪಟ್ಟವರಾಗಿ ಧಗಧಗನೆ ಉರಿಯುವ ಬೆಂಕಿಯ ಮಧ್ಯದಲ್ಲಿ ಬಿದ್ದುಬಿಟ್ಟರು.

ಆಗ ರಾಜನಾದ ನೆಬೂಕದ್ನೆಚ್ಚರನು ಬೆಚ್ಚಿಬಿದ್ದು, ತಟ್ಟನೆ ಎದ್ದು ತನ್ನ ಮಂತ್ರಿಗಳಿಗೆ, “ಕಟ್ಟಿದ ಮೂವರನ್ನು ನಾವು ಬೆಂಕಿಯೊಳಗೆ ಹಾಕಿಸಲಿಲ್ಲವೋ?” ಎಂದು ಕೇಳಲು ಅವರು ರಾಜನಿಗೆ, “ಅರಸನೇ, ಹೌದು, ಹಾಕಿರುವುದು ಸತ್ಯ” ಎಂದು ಉತ್ತರಕೊಟ್ಟರು. ಅದಕ್ಕೆ ಅವನು, “ಇಗೋ, ಕಟ್ಟಿಲ್ಲದ ನಾಲ್ವರನ್ನು ನೋಡುತ್ತೇನೆ, ಬೆಂಕಿಯಲ್ಲಿ ತಿರುಗಾಡುತ್ತಿದ್ದಾರೆ, ಅವರಿಗೆ ಯಾವ ಹಾನಿಯೂ ಇಲ್ಲ; ನಾಲ್ಕನೆಯವನ ರೂಪವು ದೇವಕುಮಾರನ ರೂಪದಂತಿದೆ” ಎಂದು ಹೇಳಿದನು. ಆಗ ನೆಬೂಕದ್ನೆಚ್ಚರನು ಧಗಧಗನೆ ಉರಿಯುವ ಬೆಂಕಿಯ ಬಾಯಿಯ ಬಳಿಗೆ ಹೋಗಿ, “ಪರಾತ್ಪರದೇವರ ಸೇವಕರಾದ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರೇ ಬನ್ನಿ, ಹೊರಗೆ ಬನ್ನಿ ಎಂದು ಕೂಗಲು, ಶದ್ರಕ್ ಮೇಶಕ್ ಅಬೇದ್ನೆಗೋ ಎಂಬುವವರು ಬೆಂಕಿಯೊಳಗಿಂದ ಹೊರಟು ಬಂದರು. ಅಲ್ಲಿ ಕೂಡಿದ್ದ ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿಗಳು ಅವರನ್ನು ನೋಡಿ ಅವರ ಮೇಲೆ ಬೆಂಕಿಯ ಅಧಿಕಾರವು ನಡೆದಿಲ್ಲ, ಅವರ ತಲೆಕೂದಲೂ ಸುಟ್ಟಿಲ್ಲ, ಅವರ ಶಲ್ಯಗಳಿಗೆ ವಿಕಾರವಿಲ್ಲ, ಬೆಂಕಿಯ ವಾಸನೆಯೇ ಮುಟ್ಟಿಲ್ಲ” ಎಂದು ತಿಳಿದುಕೊಂಡರು. ಆಗ ನೆಬೂಕದ್ನೆಚ್ಚರನು, “ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರ ದೇವರಿಗೆ ಸ್ತೋತ್ರವಾಗಲಿ! ಆತನು ತನ್ನ ದೂತನನ್ನು ಕಳುಹಿಸಿ ತನ್ನಲ್ಲಿ ಭರವಸವಿಟ್ಟು ರಾಜಾಜ್ಞೆಯನ್ನು ಜಯಿಸಿ ತನ್ನನ್ನೇ ಹೊರತು ಇನ್ನಾವ ದೇವರನ್ನೂ ಸೇವಿಸಿ ಪೂಜಿಸಬಾರದೆಂದು ಸ್ವದೇಹಗಳನ್ನು ಮರಣಕ್ಕೆ ಒಪ್ಪಿಸಿದ ತನ್ನ ಸೇವಕರನ್ನು ಉದ್ಧರಿಸಿದ್ದಾನಲ್ಲವೇ.

ಶಾಸನಕ್ಕೆ ರುಜುವಾದದ್ದು ದಾನಿಯೇಲನಿಗೆ ತಿಳಿದಾಗ ಅವನು ತನ್ನ ಮನೆಗೆ ಹೋಗಿ ಯೆರೂಸಲೇಮಿನ ಕಡೆಗೆ ಕದವಿಲ್ಲದೆ ಕಿಟಕಿಗಳುಳ್ಳ ತನ್ನ ಮಹಡಿಯ ಕೋಣೆಯಲ್ಲಿ ವಾಡಿಕೆಯ ಪ್ರಕಾರ ದಿನಕ್ಕೆ ಮೂರಾವರ್ತಿ ಮೊಣಕಾಲೂರಿ ತನ್ನ ದೇವರಿಗೆ ಪ್ರಾರ್ಥನೆಮಾಡಿ ಸ್ತೋತ್ರ ಸಲ್ಲಿಸುತ್ತಿದ್ದನು ಆಗ ಆ ಜನರು ಗುಂಪಾಗಿ ಕೂಡಿ ದಾನಿಯೇಲನು ತನ್ನ ದೇವರ ಸಮ್ಮುಖದಲ್ಲಿ ಪ್ರಾರ್ಥಿಸಿ ವಿಜ್ಞಾಪಿಸುತ್ತಿರುವುದನ್ನು ಕಂಡರು. ಅವರು ರಾಜನ ಬಳಿಗೆ ಬಂದು ರಾಜಾಜ್ಞೆಯ ಪ್ರಸ್ತಾಪವನ್ನೆತ್ತಿ, “ರಾಜನೇ, ಯಾರಾದರೂ ಮೂವತ್ತು ದಿನಗಳ ತನಕ ನಿನ್ನ ಹೊರತು ಬೇರೆ ಯಾವ ದೇವರಿಗಾಗಲಿ, ಮನುಷ್ಯನಿಗಾಗಲಿ ಪ್ರಾರ್ಥನೆವಿಜ್ಞಾಪನೆ ಮಾಡಿದರೆ ಅವನು ಸಿಂಹಗಳ ಗವಿಯಲ್ಲಿ ಹಾಕಲ್ಪಡಬೇಕು ಎಂಬ ನಿಬಂಧನೆಗೆ ರುಜು ಹಾಕಿದ್ದೀಯಲ್ಲಾ” ಎಂದು ಕೇಳಲು, ರಾಜನು, “ಹೌದು, ಮೇದ್ಯರ ಮತ್ತು ಪಾರಸಿಯರ ರದ್ದಾಗದ ಧರ್ಮವಿಧಿಗಳಂತೆ ಇದು ಸ್ಥಿರವಾದ ನಿಬಂಧನೆ” ಎಂದು ಉತ್ತರಕೊಟ್ಟನು. ಆಗ ಅವರು ರಾಜನ ಸನ್ನಿಧಿಯಲ್ಲಿ, “ರಾಜನೇ, ಯೆಹೂದದಿಂದ ಸೆರೆಯಾಗಿ ತಂದವರಲ್ಲಿ ಒಬ್ಬನಾದ ಆ ದಾನಿಯೇಲನು ನಿನ್ನನ್ನಾಗಲಿ, ನಿನ್ನ ಹಸ್ತಾಕ್ಷರದ ನಿಬಂಧನೆಯನ್ನಾಗಲಿ, ಲಕ್ಷ್ಯಕ್ಕೆ ತಾರದೆ ದಿನಕ್ಕೆ ಮೂರಾವರ್ತಿ ಅವನ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದಾನೆ” ಎಂದು ಅರಿಕೆ ಮಾಡಿದರು. ಆದರೆ ರಾಜನು ಈ ಮಾತುಗಳನ್ನು ಕೇಳಿ ಬಹಳ ವ್ಯಸನಗೊಂಡು ದಾನಿಯೇಲನನ್ನು ಇದರಿಂದ ತಪ್ಪಿಸಬೇಕೆಂದು ಮನಸ್ಸುಮಾಡಿ ಇವನನ್ನು ಹೇಗೆ ರಕ್ಷಿಸಲಿ ಎಂದು ಸೂರ್ಯಾಸ್ತಮಾನದ ತನಕ ಆಲೋಚಿಸುತ್ತಿದ್ದನು. ಇದನ್ನು ತಿಳಿದು ಆ ಜನರು ರಾಜನ ಬಳಿಗೆ ಕೂಡಿಬಂದು, “ಪ್ರಭುವೇ, ರಾಜನು ವಿಧಿಸಿದ ಯಾವ ನಿಬಂಧನೆಯಾಗಲಿ, ನಿಯಮವಾಗಲಿ ರದ್ದಾಗಬಾರದು ಎಂಬ ಧರ್ಮಸೂತ್ರವು ಮೇದ್ಯಯರಲ್ಲಿಯೂ, ಪಾರಸಿಯರಲ್ಲಿಯೂ ಉಂಟೆಂಬುದು ನಿನಗೆ ಗೊತ್ತಿರಲಿ” ಎಂದು ಹೇಳಿದರು. ಇದರಿಂದ ಅನಿವಾರ್ಯವಾಗಿ ರಾಜನು ಅಪ್ಪಣೆ ಕೊಡಲೇ ಬೇಕಾಯಿತು.

ದಾನಿಯೇಲನನ್ನು ತಂದು ಸಿಂಹಗಳ ಗವಿಯಲ್ಲಿ ರಾಜನ ಅಪ್ಪಣೆಯಂತೆ ಹಾಕಿಬಿಟ್ಟರು. ಆಗ ರಾಜನು ದಾನಿಯೇಲನಿಗೆ, “ನೀನು ನಿತ್ಯವೂ ಆರಾಧಿಸುವ ದೇವರು ನಿನ್ನನ್ನುದ್ಧರಿಸಲಿ” ಎಂದು ಹರಸಿದನು. ಕೂಡಲೆ ಬಂಡೆಯನ್ನು ತಂದು ಗವಿಯ ಬಾಯನ್ನು ಮುಚ್ಚಿದರು. ದಾನಿಯೇಲನ ಈ ಶಿಕ್ಷೆಯನ್ನು ಯಾರು ಬದಲಾಯಿಸದಂತೆ ರಾಜನ ಮುದ್ರೆಯಿಂದಲೂ, ತನ್ನ ಮುಖಂಡರ ಮುದ್ರೆಯಿಂದಲೂ ಅದಕ್ಕೆ ಮುದ್ರೆಯನ್ನು ಹಾಕಿ ಭದ್ರ ಮಾಡಲಾಯಿತು. ರಾಜನು ಅರಮನೆಯಲ್ಲಿ ವಿನೋದವಾದ್ಯಗಳನ್ನು ತನ್ನ ಮುಂದೆ ತರಿಸದೆ, ಉಪವಾಸವಾಗಿ ರಾತ್ರಿಯನ್ನು ಕಳೆದನು; ಅವನಿಗೆ ನಿದ್ರೆ ಬರಲಿಲ್ಲ. ಮರುದಿನ ಬೆಳಿಗ್ಗೆ ರಾಜನು ಉದಯದಲ್ಲೇ ಎದ್ದು ಸಿಂಹಗಳ ಗವಿಯ ಬಳಿಗೆ ತ್ವರೆಯಾಗಿ ಹೋದನು. ದಾನಿಯೇಲನಿದ್ದ ಗವಿಯ ಸಮೀಪಕ್ಕೆ ಬಂದು, ಅವನು ದುಃಖ ಧ್ವನಿಯಿಂದ ದಾನಿಯೇಲನನ್ನು ಕೂಗಿ, “ದಾನಿಯೇಲನೇ, ಜೀವ ಸ್ವರೂಪನಾದ ದೇವರ ಸೇವಕನೇ, ನೀನು ನಿತ್ಯವೂ ಭಜಿಸುವ ನಿನ್ನ ದೇವರು ನಿನ್ನನ್ನು ಸಿಂಹಗಳಿಂದ ಉದ್ಧರಿಸಲು ಶಕ್ತನಾದನೋ?” ಎಂದು ಕೇಳಿದನು. ಅದಕ್ಕೆ ದಾನಿಯೇಲನು ರಾಜನಿಗೆ, “ಅರಸನೇ, ಚಿರಂಜೀವಿಯಾಗಿರು! ನನ್ನ ದೇವರು ತನ್ನ ದೂತನನ್ನು ಕಳುಹಿಸಿ ಸಿಂಹಗಳ ಬಾಯಿಗಳನ್ನು ಬಂಧಿಸಿದನು. ಅವುಗಳಿಂದ ನನಗೆ ಯಾವ ಹಾನಿಯೂ ಆಗಲಿಲ್ಲ. ಏಕೆಂದರೆ ಆತನ ದೃಷ್ಟಿಗೆ ನಾನು ನಿರ್ಮಲನಾಗಿ ಕಂಡುಬಂದೆನು. ರಾಜನಾದ ನಿನಗೂ ಯಾವ ದ್ರೋಹವನ್ನೂ ಮಾಡಲಿಲ್ಲ” ಎಂದು ಹೇಳಿದನು. ಅದನ್ನು ಕೇಳಿ ರಾಜನು ಬಹಳ ಸಂತೋಷಪಟ್ಟು, ದಾನಿಯೇಲನನ್ನು ಗವಿಯೊಳಗಿಂದ ಮೇಲಕ್ಕೆ ಎತ್ತಬೇಕೆಂದು ಅಪ್ಪಣೆಮಾಡಲು ಅವನನ್ನು ಅಲ್ಲಿಂದ ಮೇಲಕ್ಕೆತ್ತಿದರು. ಅವನು ತನ್ನ ದೇವರಲ್ಲಿ ಭರವಸವಿಟ್ಟ ಕಾರಣ ಅವನಿಗೆ ಯಾವ ಹಾನಿಯೂ ಆಗಿರಲಿಲ್ಲ.

ಪರಾತ್ಪರನಾದ ದೇವರಿಗೆ ವಿರುದ್ಧವಾಗಿ ಕೊಚ್ಚಿಕೊಂಡು ಪರಾತ್ಪರನಾದ ದೇವರ ಭಕ್ತರನ್ನು ಬಾಧಿಸಿ ಕಟ್ಟಳೆಯ ಕಾಲಗಳನ್ನೂ, ಧರ್ಮವಿಧಿಗಳನ್ನೂ ಮಾರ್ಪಡಿಸಲು ಮನಸ್ಸು ಮಾಡುವನು; ಆ ಭಕ್ತರು ಒಂದುಕಾಲ, ಎರಡುಕಾಲ, ಅರ್ಧಕಾಲ ಅವನ ಕೈವಶವಾಗಿರುವರು.

“ನಿನ್ನ ಜನರ ಪಕ್ಷವನ್ನು ಹಿಡಿದಿರುವ ಮಹಾಪಾಲಕನಾದ ದೇವದೂತ ಮೀಕಾಯೇಲನು ಆ ಕಾಲದಲ್ಲಿ ಏಳುವನು. ಮೊಟ್ಟಮೊದಲು ಜನಾಂಗವು ಉಂಟಾದ ದಿನದಿಂದ ಇಂದಿನವರೆಗೂ ಸಂಭವಿಸದಂಥ ಸಂಕಟವು ಸಂಭವಿಸುವುದು. ಆಗ ನಿನ್ನ ಜನರೊಳಗೆ ಯಾರ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಸಿಕ್ಕುವವೋ ಅವರೆಲ್ಲರೂ ರಕ್ಷಿಸಲ್ಪಡುವರು. ಸತ್ತು ಧೂಳಿನ ನೆಲದೊಳಗೆ ದೀರ್ಘ ನಿದ್ರೆಮಾಡುವವರಲ್ಲಿ ಅನೇಕರು ಎಚ್ಚೆತ್ತು ಕೆಲವರು ನಿತ್ಯಜೀವವನ್ನು, ಕೆಲವರು ನಿಂದನೆ ಮತ್ತು ನಿತ್ಯತಿರಸ್ಕಾರಗಳನ್ನು ಅನುಭವಿಸುವರು. ಜ್ಞಾನಿಗಳು ತೇಜೋಮಯವಾದ ಆಕಾಶಮಂಡಲದಂತೆ ಪ್ರಕಾಶಿಸುವರು. ಬಹಳ ಜನರನ್ನು ಸದ್ಧರ್ಮಿಗಳನ್ನಾಗಿ ಮಾಡುವವರು ಯುಗಯುಗಾಂತರಗಳಲ್ಲಿಯೂ ನಕ್ಷತ್ರಗಳ ಹಾಗೆ ಹೊಳೆಯುವರು.

ಯೆಹೋವನು ಒಳ್ಳೆಯವನು; ಇಕ್ಕಟ್ಟಿನ ದಿನದಲ್ಲಿ ಆಶ್ರಯದುರ್ಗವಾಗಿದ್ದಾನೆ; ತನ್ನ ಮೊರೆಹೊಕ್ಕವರನ್ನು ಬಲ್ಲನು.

ನಾನು ಯೆಹೋವನಲ್ಲಿ ಉಲ್ಲಾಸಿಸುವೆನು, ನನ್ನ ರಕ್ಷಕನಾದ ದೇವರಲ್ಲಿ ಆನಂದಿಸುವೆನು.

ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಡುವವರು ಧನ್ಯರು; ಪರಲೋಕ ರಾಜ್ಯವು ಅವರದು. “ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು. ಸಂತೋಷಪಡಿರಿ, ಉಲ್ಲಾಸಪಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವುದು; ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನೂ ಅವರು ಹೀಗೆಯೇ ಹಿಂಸೆಪಡಿಸಿದರಲ್ಲಾ.

ಆದರೆ ನಾನು ನಿಮಗೆ ಹೇಳುವುದೇನಂದರೆ, ನಿಮ್ಮ ವೈರಿಗಳನ್ನು ಪ್ರೀತಿಸಿರಿ;ನಿಮ್ಮನ್ನು ಹಿಂಸೆಪಡಿಸುವವರಿಗೊಸ್ಕರ ದೇವರನ್ನು ಪ್ರಾರ್ಥಿಸಿರಿ.

“ಭೂಲೋಕದಲ್ಲಿ ಸಂಪತ್ತು ಮಾಡಿ ಇಟ್ಟುಕೊಳ್ಳಬೇಡಿರಿ; ಇಲ್ಲಿ ಅದು ನುಸಿ ಹಿಡಿದು, ಕಿಲುಬು ಹತ್ತಿ ಕೆಟ್ಟುಹೋಗುವುದು; ಇಲ್ಲಿ ಕಳ್ಳರು ಕನ್ನಾಕೊರೆದು ಕದಿಯುವರು. ಆದರೆ ಪರಲೋಕದಲ್ಲಿ ಸಂಪತ್ತು ಮಾಡಿ ಇಟ್ಟುಕೊಳ್ಳಿರಿ; ಅಲ್ಲಿ ಅದು ನುಸಿ ಹಿಡಿದು, ಕಿಲುಬು ಹತ್ತಿ ಕೆಟ್ಟುಹೋಗುವುದಿಲ್ಲ; ಅಲ್ಲಿ ಕಳ್ಳರು ಕನ್ನಾಕೊರೆಯುವುದೂ ಇಲ್ಲ. ಕದಿಯುವುದೂ ಇಲ್ಲ,

ಇದಲ್ಲದೆ ಜನರ ವಿಷಯದಲ್ಲಿ ಎಚ್ಚರವಾಗಿರಿ; ಅವರು ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಎಳೆದುಕೊಂಡು ಹೋಗುವರು; ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಚಾವಟಿಗಳಿಂದ ಹೊಡೆಯುವರು. ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಪತಿಗಳ ಮುಂದೆಯೂ ಅರಸುಗಳ ಮುಂದೆಯೂ ಕರೆದುಕೊಂಡು ಹೋಗುವರು. ಹೀಗೆ ಅವರಿಗೂ ಅನ್ಯಜನಗಳಿಗೂ ಸಾಕ್ಷಿಯಾಗುವಿರಿ. ಆದರೆ ಅವರು ನಿಮ್ಮನ್ನು ಒಪ್ಪಿಸಿಕೊಡುವಾಗ ಏನು ಮಾತನಾಡಬೇಕು ಎಂದು ಚಿಂತೆಮಾಡಬೇಡಿರಿ; ಆಡತಕ್ಕ ಮಾತು ಆ ಸಮಯದಲ್ಲಿ ನಿಮಗೆ ಗೋಚರವಾಗುವುದು. ಮಾತನಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮನೇ ನಿಮ್ಮ ಮುಖಾಂತರವಾಗಿ ಮಾತನಾಡುವನು.

ಇದಲ್ಲದೆ ಸಹೋದರನು ಸಹೋದರನನ್ನು, ತಂದೆಯು ಮಗನನ್ನು, ಮರಣಕ್ಕೆ ಒಪ್ಪಿಸುವರು; ಮಕ್ಕಳು ತಂದೆತಾಯಿಗಳ ಮೇಲೆ ತಿರುಗಿಬಿದ್ದು ಅವರನ್ನು ಕೊಲ್ಲಿಸುವರು. ಮತ್ತು ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ದ್ವೇಷಿಸುವರು. ಆದರೆ ಕಡೆಯವರೆಗೂ ತಾಳಿಕೊಳ್ಳುವವನು ರಕ್ಷಣೆಹೊಂದುವನು. ಒಂದು ಊರಲ್ಲಿ ನಿಮ್ಮನ್ನು ಹಿಂಸೆಪಡಿಸಿದರೆ ಮತ್ತೊಂದು ಊರಿಗೆ ಓಡಿಹೋಗಿರಿ; ಮನುಷ್ಯಕುಮಾರನು ಬರುವಷ್ಟರಲ್ಲಿ ನೀವು ಇಸ್ರಾಯೇಲ್ ಜನರ ಊರುಗಳನ್ನು ಸಂಚರಿಸಿ ಮುಗಿಸಿರುವುದಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

ಇದಲ್ಲದೆ ದೇಹವನ್ನು ಕೊಂದು ಆತ್ಮವನ್ನು ಕೊಲ್ಲಲಾರದವರಿಗೆ ಹೆದರಬೇಡಿರಿ, ಆತ್ಮ ಮತ್ತು ದೇಹ ಎರಡನ್ನೂ ನರಕದಲ್ಲಿ ಹಾಕಿ ನಾಶಮಾಡಬಲ್ಲಾತನಿಗೇ ಹೆದರಿರಿ.

ಮತ್ತು ಯಾವನಾದರೂ ತನ್ನ ಶಿಲುಬೆಯನ್ನು ತೆಗೆದುಕೊಂಡು ನನ್ನನ್ನು ಹಿಂಬಾಲಿಸದಿದ್ದರೆ ನನ್ನ ಶಿಷ್ಯನಾಗಲು ಯೋಗ್ಯನಲ್ಲ. ತನ್ನ ಪ್ರಾಣವನ್ನು ಕಂಡುಕೊಂಡವನು ಅದನ್ನು ಕಳೆದುಕೊಳ್ಳುವನು; ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಂಡವನು ಅದನ್ನು ಕಂಡುಕೊಳ್ಳುವನು.

“ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ ನಾನು ನಿಮಗೆ ವಿಶ್ರಾಂತಿ ಕೊಡುವೆನು. ನಾನು ಸಾತ್ವಿಕನೂ ದೀನಹೃದಯನೂ ಆಗಿರುವುದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತುಕೊಳ್ಳಿರಿ, ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವುದು. ಏಕೆಂದರೆ ನನ್ನ ನೊಗವು ಮೃದುವಾದದ್ದು, ನನ್ನ ಹೊರೆಯು ಹಗುರವಾದದ್ದು ಆಗಿದೆ” ಅಂದನು.

ಆದರೆ ಫರಿಸಾಯರು ಹೊರಕ್ಕೆ ಹೋಗಿ ಇವನನ್ನು ಯಾವ ರೀತಿಯಲ್ಲಿ ಕೊಲ್ಲೋಣ ಎಂದು ಆತನ ವಿರುದ್ಧ ಸಂಚು ಮಾಡತೊಡಗಿದರು.

ಬಂಡೆಯ ನೆಲದಲ್ಲಿ ಬಿತ್ತಲ್ಪಟ್ಟವನು ಯಾರೆಂದರೆ, ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಸ್ವೀಕರಿಸಿದರೂ, ತನಗೆ ಬೇರಿಲ್ಲದ ಕಾರಣ ಇವನು ಸ್ವಲ್ಪ ಕಾಲ ಮಾತ್ರವೇ ಇದ್ದು ಆ ವಾಕ್ಯದ ನಿಮಿತ್ತವಾಗಿ ಸಂಕಟವಾಗಲಿ ಹಿಂಸೆಯಾಗಲಿ ಬಂದರೆ ಕೂಡಲೆ ಎಡವಿ ಬೀಳುತ್ತಾನೆ.

“ಪರಲೋಕ ರಾಜ್ಯವು ಹೊಲದಲ್ಲಿ ಮುಚ್ಚಿಟ್ಟ ನಿಧಿಗೆ ಹೋಲಿಕೆಯಾಗಿದೆ. ಒಬ್ಬನು ಅದನ್ನು ಕಂಡುಕೊಂಡು ಮುಚ್ಚಿಟ್ಟು. ತನಗಾದ ಸಂತೋಷದಿಂದ ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಂಡನು. ಮತ್ತು ಪರಲೋಕ ರಾಜ್ಯವು ಉತ್ತಮವಾದ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ. ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡುಕೊಂಡು ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಬಂದು ಅದನ್ನು ಕೊಂಡುಕೊಂಡನು.

ತನ್ನ ಸೇವಕರಿಗೆ, “ಇವನು ಸ್ನಾನಿಕ ಯೋಹಾನನೇ; ಸತ್ತವರೊಳಗಿಂದ ಎದ್ದು ಬಂದಿದ್ದಾನೆ. ಆದಕಾರಣ ಮಹತ್ಕಾರ್ಯಗಳನ್ನು ನಡಿಸುವ ಶಕ್ತಿಗಳು ಅವನಲ್ಲಿ ಇದೆ” ಎಂದು ಹೇಳಿದನು. ಹೆರೋದನು ತನ್ನ ಅಣ್ಣನಾದ ಫಿಲಿಪ್ಪನ ಹೆಂಡತಿಯಾದ ಹೆರೋದ್ಯಳ ನಿಮಿತ್ತ ಯೋಹಾನನನ್ನು ಹಿಡಿದು ಕಟ್ಟಿಸಿ ಸೆರೆಮನೆಯಲ್ಲಿ ಹಾಕಿಸಿದ್ದನು. ಯೋಹಾನನು ಹೆರೋದನಿಗೆ “ನೀನು ಇವಳನ್ನು ಹೆಂಡತಿಯಾಗಿ ಇಟ್ಟುಕೊಂಡಿರುವುದು ನ್ಯಾಯವಲ್ಲವೆಂದು” ಹೇಳುತ್ತಿದ್ದನು. ಹೆರೋದನು ಅವನನ್ನು ಕೊಲ್ಲಿಸಬೇಕೆಂದಿದ್ದರೂ ಜನರಿಗೆ ಭಯಪಟ್ಟನು, ಏಕೆಂದರೆ ಅವರು ಅವನನ್ನು ಪ್ರವಾದಿಯೆಂದು ಎಣಿಸಿದ್ದರು. ಆದರೆ ಹೆರೋದನ ಹುಟ್ಟಿದ ದಿನದ ಹಬ್ಬವು ನಡೆಯುವಾಗ ಹೆರೋದ್ಯಳ ಮಗಳು ಬಂದಿದ್ದ ಅತಿಥಿಗಳ ಮುಂದೆ ನೃತ್ಯಮಾಡಿ ಹೆರೋದನನ್ನು ಮೆಚ್ಚಿಸಿದಳು. ಅವನು ಅವಳಿಗೆ, ನೀನು ಏನು ಕೇಳಿಕೊಂಡರೂ ಕೊಡುತ್ತೇನೆಂದು ಆಣೆಯಿಟ್ಟು ವಾಗ್ದಾನ ಮಾಡಿದನು. ಅವಳು ತನ್ನ ತಾಯಿಯ ಪ್ರೇರೇಪಣೆಗೆ ಒಳಗಾಗಿ, “ಸ್ನಾನಿಕ ಯೋಹಾನನ ತಲೆಯನ್ನು ಹರಿವಾಣದಲ್ಲಿ ನನಗೆ ತರಿಸಿಕೊಡು” ಅಂದಳು. ಆಕೆಯ ಕೋರಿಕೆಯಿಂದ ಅರಸನು ದುಃಖಪಟ್ಟರೂ ತಾನು ಮಾಡಿದ ಆಣೆಯ ನಿಮಿತ್ತವಾಗಿಯೂ, ತನ್ನ ಸಂಗಡ ಊಟಕ್ಕೆ ಕುಳಿತಿದ್ದವರ ನಿಮಿತ್ತವಾಗಿಯೂ ಅದನ್ನು ತಂದುಕೊಡುವುದಕ್ಕೆ ಅಪ್ಪಣೆ ಕೊಟ್ಟನು. ಅವನು ಆಳುಗಳನ್ನು ಕಳುಹಿಸಿ ಸೆರೆಮನೆಯಲ್ಲಿ ಯೋಹಾನನ ಶಿರಚ್ಛೇದನಮಾಡಿ, ಅವರು ಅವನ ತಲೆಯನ್ನು ಹರಿವಾಣದಲ್ಲಿ ತಂದು ಆ ಹುಡುಗಿಗೆ ಕೊಟ್ಟರು. ಅವಳು ಅದನ್ನು ತನ್ನ ತಾಯಿಯ ಬಳಿಗೆ ತೆಗೆದುಕೊಂಡು ಹೋದಳು. ಯೋಹಾನನ ಶಿಷ್ಯರು ಬಂದು ಅವನ ದೇಹವನ್ನು ಹೊತ್ತುಕೊಂಡು ಹೋಗಿ ಹೂಣಿಟ್ಟರು. ಅನಂತರ ಯೇಸುವಿನ ಬಳಿಗೆ ಬಂದು ತಿಳಿಸಿದರು.

ಅಂದಿನಿಂದ ಯೇಸು ಕ್ರಿಸ್ತನು ತಾನು ಯೆರೂಸಲೇಮಿಗೆ ಹೋಗಿ ಹಿರಿಯರಿಂದಲೂ ಮುಖ್ಯಯಾಜಕರಿಂದಲೂ ಶಾಸ್ತ್ರಿಗಳಿಂದಲೂ ಬಹು ಕಷ್ಟಗಳನ್ನನುಭವಿಸಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಎಬ್ಬಿಸಲ್ಪಡುವುದು ಅಗತ್ಯವೆಂದು ತನ್ನ ಶಿಷ್ಯರಿಗೆ ಹೇಳುವುದಕ್ಕೆ ಪ್ರಾರಂಭಿಸಿದನು.

ಅನಂತರ ಯೇಸು ತನ್ನ ಶಿಷ್ಯರಿಗೆ ಹೇಳಿದ್ದೇನೆಂದರೆ “ಯಾವನಾದರೂ ನನ್ನನ್ನು ಹಿಂಬಾಲಿಸುವುದಕ್ಕೆ ಬಯಸಿದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಂಡವನು ಅದನ್ನು ಕಂಡುಕೊಳ್ಳುವನು.

ಆಗ ಪೇತ್ರನು ಆತನನ್ನು, ಇಗೋ, ನಾವು ಎಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು; ಇದರಿಂದ ನಮಗೆ ಏನು ದೊರಕುವುದು? ಎಂದು ಕೇಳಿದನು.

“ನೋಡಿರಿನಾವು ಯೆರೂಸಲೇಮಿಗೆ ಹೋಗುತ್ತಿದ್ದೇವೆ ಮತ್ತು ಮನುಷ್ಯಕುಮಾರನನ್ನು ಮುಖ್ಯಯಾಜಕರ ಮತ್ತು ಶಾಸ್ತ್ರಿಗಳ ಕೈಗೊಪ್ಪಿಸಿಕೊಡುವರು. ಅವರು ಆತನಿಗೆ ಮರಣದಂಡನೆಯನ್ನು ವಿಧಿಸುವರು. ಆತನನ್ನು ಅಪಹಾಸ್ಯ ಮಾಡುವುದಕ್ಕಾಗಿಯೂ ಚಾಟಿಗಳಿಂದ ಹೊಡೆಯುವುದಕ್ಕಾಗಿಯೂ ಶಿಲುಬೆಗೆ ಹಾಕುವುದಕ್ಕಾಗಿಯೂ ಅನ್ಯಜನರ ಕೈಗೆ ಒಪ್ಪಿಸುವರು. ಆದರೆ ಆತನುಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡುವನು” ಎಂದು ಹೇಳಿದನು.

“ಮತ್ತೊಂದು ಸಾಮ್ಯವನ್ನು ಕೇಳಿರಿ, ಒಬ್ಬ ಮನೆಯ ಯಜಮಾನನಿದ್ದನು. ಅವನುಒಂದು ದ್ರಾಕ್ಷಾತೋಟವನ್ನು ನೆಟ್ಟು ಅದರ ಸುತ್ತಲೂ ಬೇಲಿಹಾಕಿಸಿ, ಅದರಲ್ಲಿ ದ್ರಾಕ್ಷಿಯ ಗಾಣವನ್ನು ಹಾಕಿಸಿ, ಕಾವಲು ಗೋಪುರವನ್ನು ಕಟ್ಟಿಸಿ, ದ್ರಾಕ್ಷಿಯ ತೋಟಗಾರರಿಗೆ ಅದನ್ನುಗುತ್ತಿಗೆಗೆ ಕೊಟ್ಟು, ಅವನು ಬೇರೊಂದು ದೇಶಕ್ಕೆ ಹೋದನು. ಫಲಕಾಲ ಹತ್ತಿರವಾದಾಗ ತನಗೆ ಬರಬೇಕಾದ ಹಣ್ಣುಗಳನ್ನು ತೆಗೆದುಕೊಂಡು ಬರುವುದಕ್ಕಾಗಿ ಆ ತೋಟಗಾರರ ಬಳಿಗೆ ತನ್ನ ಆಳುಗಳನ್ನು ಕಳುಹಿಸಲು, ತೋಟಗಾರರು ಅವನ ಆಳುಗಳನ್ನು ಹಿಡಿದು ಒಬ್ಬನನ್ನು ಹೊಡೆದರು, ಮತ್ತೊಬ್ಬನನ್ನು ಕಡಿದು ಹಾಕಿದರು, ಇನ್ನೊಬ್ಬನನ್ನು ಕಲ್ಲೆಸೆದು ಕೊಂದರು. ಆ ಯಜಮಾನನು ಪುನಃ ಮೊದಲಿನವರಿಗಿಂತ ಹೆಚ್ಚು ಮಂದಿ ಆಳುಗಳನ್ನು ಕಳುಹಿಸಿದನು, ಅವರು ಅವರಿಗೂ ಹಾಗೆಯೇ ಮಾಡಿದರು. ಕಡೆಯಲ್ಲಿ ‘ನನ್ನ ಮಗನಿಗಾದರೂ ಮರ್ಯಾದೆ ತೋರಿಸಾರು’ ಅಂದುಕೊಂಡು ತನ್ನ ಮಗನನ್ನು ಅವರ ಬಳಿಗೆ ಕಳುಹಿಸಿದನು. ಆದರೆ ಆ ತೋಟಗಾರರು ಅವನ ಮಗನನ್ನು ಕಂಡು, ‘ಇವನೇ ಉತ್ತರಾಧಿಕಾರಿ, ಬನ್ನಿ ಇವನನ್ನು ಕೊಂದು ಹಾಕೋಣ, ಇವನ ಸ್ವತ್ತನ್ನು ನಾವೇ ತೆಗೆದುಕೊಳ್ಳೋಣ’ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡು ಅವನನ್ನು ಹಿಡಿದು ದ್ರಾಕ್ಷಾತೋಟದಿಂದ ಹೊರಕ್ಕೆ ದೊಬ್ಬಿ ಕೊಂದು ಹಾಕಿದರು.

ಆದುದರಿಂದ ನೋಡಿರಿ, ನಾನು ನಿಮ್ಮ ಬಳಿಗೆ ಪ್ರವಾದಿಗಳನ್ನೂ ಜ್ಞಾನಿಗಳನ್ನೂ ಶಾಸ್ತ್ರಿಗಳನ್ನೂ ಕಳುಹಿಸುತ್ತೇನೆ; ಅವರಲ್ಲಿ ಕೆಲವರನ್ನು ನೀವು ಕೊಲ್ಲುವಿರಿ, ಶಿಲುಬೆಗೆ ಹಾಕುವಿರಿ; ಕೆಲವರನ್ನು ನಿಮ್ಮ ಸಭಾಮಂದಿರಗಳಲ್ಲಿ ಚಾಟಿಗಳಿಂದ ಹೊಡೆದು ಊರಿಂದ ಊರಿಗೆ ಅಟ್ಟಿಕೊಂಡು ಹೋಗುವಿರಿ. ಹೀಗೆ ನೀತಿವಂತನಾದ ಹೇಬೆಲನ ರಕ್ತವು ಮೊದಲುಗೊಂಡು ನೀವು ದೇವಾಲಯಕ್ಕೂ ಯಜ್ಞವೇದಿಗೂ ನಡುವೆ ಕೊಂದು ಹಾಕಿದ ಬರಕೀಯನ ಮಗನಾದ ಜಕರೀಯನ ರಕ್ತದವರೆಗೂ ಭೂಮಿಯ ಮೇಲೆ ಸುರಿಸಲ್ಪಟ್ಟ ಎಲ್ಲಾ ನೀತಿವಂತರ ರಕ್ತಸುರಿಸಿದ ಅಪರಾಧವು ನಿಮ್ಮ ತಲೆಯ ಮೇಲೆ ಬರುವುದು.

“ಆಗ ನಿಮ್ಮನ್ನು ಕಷ್ಟಸಂಕಟಗಳಿಗೆ ಗುರಿಮಾಡಿ ಕೊಲ್ಲುವರು; ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲಾ ಜನಾಂಗಗಳವರು ದ್ವೇಷಿಸುವರು. ಆಗ ಅನೇಕರು ಎಡವಿ ಹಿಂಜರಿದು ಒಬ್ಬರನ್ನೊಬ್ಬರು ಹಿಡಿದುಕೊಡುವರು; ಒಬ್ಬರ ಮೇಲೊಬ್ಬರು ದ್ವೇಷ ಮಾಡುವರು.

ಆದರೆ ಕಡೆಯವರೆಗೂ ತಾಳುವವನು ರಕ್ಷಣೆ ಹೊಂದುವನು.

ಏಕೆಂದರೆ ಲೋಕದ ಅರಂಭದಿಂದ ಇಂದಿನವರೆಗೂ ಆಗದಿರುವಂಥದ್ದು, ಇನ್ನು ಮೇಲೆಯೂ ಆಗದಿರುವಂತಹ ಮಹಾ ಸಂಕಟವು ಅಂದು ಉಂಟಾಗುವುದು. ಕರ್ತನು ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಒಬ್ಬ ನರಪ್ರಾಣಿಯಾದರೂ ಉಳಿಯನು; ಆದರೆ ತಾನು ಆರಿಸಿಕೊಂಡವರಿಗೋಸ್ಕರ ಆ ದಿನಗಳನ್ನು ಕಡಿಮೆಮಾಡುವನು.

ಯೇಸುವನ್ನು ಗುಟ್ಟಾಗಿ ಹಿಡಿದು ಕೊಲ್ಲಬೇಕೆಂಬುದಾಗಿ ಒಳಸಂಚು ಮಾಡಿದರು.

ಪೇತ್ರನು ಆತನಿಗೆ, “ನಾನು ನಿನ್ನ ಸಂಗಡ ಸಾಯಬೇಕಾಗಿಬಂದರೂ ನಿನ್ನನ್ನು ನಿರಾಕರಿಸುವುದಿಲ್ಲ” ಎಂದು ಹೇಳಿದನು. ಅದರಂತೆ ಶಿಷ್ಯರೆಲ್ಲರೂ ಹೇಳಿದರು.

ಆಗ ಮುಖ್ಯಯಾಜಕರೂ ಹಿರೀಸಭೆಯವರೆಲ್ಲರೂ ಯೇಸುವನ್ನು ಕೊಲ್ಲಿಸಬೇಕೆಂದು ಆತನ ಮೇಲೆ ಸುಳ್ಳುಸಾಕ್ಷಿಯನ್ನು ಹುಡುಕಿದರು; ಆದರೆ ಬಹು ಮಂದಿ ಸುಳ್ಳುಸಾಕ್ಷಿಗಳು ಮುಂದೆ ಬಂದರೂ ಏನೂ ಸಿಕ್ಕಲಿಲ್ಲ.

ಆಗ ಅವರು ಆತನ ಮುಖದ ಮೇಲೆ ಉಗುಳಿ ಆತನನ್ನು ಗುದ್ದಿದರು; ಕೆಲವರು ಆತನ ಕೆನ್ನೆಗೆ ಹೊಡೆದು,

ಬೆಳಗಾಗಲು ಎಲ್ಲಾ ಮುಖ್ಯಯಾಜಕರೂ, ಜನರ ಹಿರಿಯರೂ ಯೇಸುವನ್ನು ಕೊಲ್ಲಿಸಬೇಕೆಂದು ಸಂಚುಮಾಡಿಕೊಂಡು, ಆತನನ್ನು ಕಟ್ಟಿಸಿ ಕರೆದುಕೊಂಡು ಹೋಗಿ ದೇಶಾಧಿಪತಿಯಾದ ಪಿಲಾತನಿಗೆ ಒಪ್ಪಿಸಿದರು.

ಆಗ ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡಿಸಿ ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿದನು.

ಮತ್ತು ಆತನ ಮೇಲೆ ಉಗುಳಿ ಆ ಬೆತ್ತವನ್ನು ತೆಗೆದುಕೊಂಡು ಆತನ ತಲೆಯ ಮೇಲೆ ಹೊಡೆದರು. ಹೀಗೆ ಆತನನ್ನು ಪರಿಹಾಸ್ಯಮಾಡಿದ ಮೇಲೆ ಆ ನಿಲುವಂಗಿಯನ್ನು ತೆಗೆದು ಆತನ ಬಟ್ಟೆಗಳನ್ನು ಹೊದಿಸಿ ಆತನನ್ನು ಶಿಲುಬೆಗೆ ಹಾಕುವುದಕ್ಕೆ ತೆಗೆದುಕೊಂಡು ಹೋದರು.

ಬಳಿಕ ಅವರು ಆತನನ್ನು ಶಿಲುಬೆಗೆ ಹಾಕಿ ಆತನ ಬಟ್ಟೆಗಳಿಗಾಗಿ ಚೀಟು ಹಾಕಿ ಪಾಲುಮಾಡಿಕೊಂಡರು;

“ಅದೇ ಪ್ರಕಾರ ಬೇರೆ ಕೆಲವರು ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾರೆ; ಆದರೆ ಅವರಿಗೆ ಬೇರಿಲ್ಲದ ಕಾರಣ ಇವರು ಸ್ವಲ್ಪ ಕಾಲ ಮಾತ್ರವೇ ಇದ್ದು, ಬಳಿಕ ಆ ವಾಕ್ಯದ ನಿಮಿತ್ತವಾಗಿ ಸಂಕಟವಾಗಲಿ ಹಿಂಸೆಯಾಗಲಿ ಬಂದರೆ ಬೇಗ ಎಡವಿಬೀಳುತ್ತಾರೆ; ಇವರೇ ಬಂಡೆಯ ನೆಲದಲ್ಲಿ ಬಿತ್ತಲ್ಪಟ್ಟ ಬೀಜವಾಗಿರುವರು.

ಅಷ್ಟರಲ್ಲಿ ಅರಸನಾದ ಹೆರೋದನು ಯೇಸುವಿನ ಹೆಸರು ಪ್ರಸಿದ್ಧಿಗೆ ಬಂದಿರುವ ವಿಷಯ ಕೇಳಿದನು ಮತ್ತು ಜನರು ಆತನ ವಿಷಯದಲ್ಲಿ, “ಸ್ನಾನಿಕನಾದ ಯೋಹಾನನೇ ತಿರುಗಿ ಬದುಕಿ ಬಂದಿದ್ದಾನೆ; ಆದುದರಿಂದ ಮಹತ್ಕಾರ್ಯಗಳನ್ನು ನಡಿಸುವ ಶಕ್ತಿ ಈತನಲ್ಲಿ ಇದೆ” ಎಂದು ಹೇಳುತ್ತಿದ್ದರು. ಕೆಲವರು, “ಇವನು ಎಲೀಯನೆಂತಲೂ” ಮತ್ತೆ ಕೆಲವರು, “ಇವನು ಪ್ರಾಚೀನ ಕಾಲದ ಪ್ರವಾದಿಗಳಂತಿರುವ ಒಬ್ಬ ಪ್ರವಾದಿಯೆಂತಲೂ” ಹೇಳಿದರು. ಆದರೆ ಹೆರೋದನು ಆತನ ಸುದ್ದಿಯನ್ನು ಕೇಳಿ, “ನಾನು ಶಿರಚ್ಛೇದನ ಮಾಡಿಸಿದ ಯೋಹಾನನೇ ತಿರುಗಿ ಬದುಕಿ ಬಂದಿದ್ದಾನೆ” ಎಂದು ಹೇಳಿದನು. ಹೆರೋದನು ತಾನೇ ಕಳುಹಿಸಿ ಯೋಹಾನನನ್ನು ಹಿಡಿದು ಬಂಧಿಸಿ ಸೆರೆಮನೆಯಲ್ಲಿ ಹಾಕಿಸಿದ್ದನು. ಹೆರೋದ್ಯಳ ನಿಮಿತ್ತ ಹಾಗೆ ಮಾಡಿದ್ದನು; ಏಕೆಂದರೆ ಅವನು ತನ್ನ ಅಣ್ಣನಾದ ಫಿಲಿಪ್ಪನ ಹೆಂಡತಿ ಹೆರೋದ್ಯಳನ್ನು ಮದುವೆಯಾಗಿದ್ದನು. ಇದರ ನಿಮಿತ್ತ ಯೋಹಾನನು ಹೆರೋದನಿಗೆ, “ನಿನ್ನ ಅಣ್ಣನ ಹೆಂಡತಿಯು ಆತನು ಬದುಕಿರುವಾಗಲೇ ನಿನ್ನವಳ್ಳಾಗಿರುವುದು ಅಧರ್ಮವಲ್ಲವೇ” ಎಂದು ಹೇಳುತ್ತಿದ್ದನು. ಇದರಿಂದ ಹೆರೋದ್ಯಳು ಸಹ ಯೋಹಾನನ ಮೇಲೆ ದ್ವೇಷವಿಟ್ಟುಕೊಂಡು ಅವನನ್ನು ಕೊಲ್ಲಿಸಬೇಕೆಂದಿದ್ದರೂ ಸಾಧ್ಯವಾಗಲಿಲ್ಲ. ಏಕೆಂದರೆ ಹೆರೋದನು ಯೋಹಾನನನ್ನು ನೀತಿವಂತನೆಂದೂ ಪರಿಶುದ್ಧನೆಂದೂ ತಿಳಿದು ಭಯಪಟ್ಟು ಅವನಿಗೆ ಯಾವ ಅಪಾಯವೂ ಬಾರದಂತೆ ಕಾಪಾಡಿದ್ದನು. ಇದಲ್ಲದೆ ಯೋಹಾನನು ಹೇಳುತ್ತಿದ್ದ ಸಂದೇಶವನ್ನು ಅವನು ಕೇಳಿದಾಗ ಮನಸ್ಸಿನಲ್ಲಿ ಅಸಮಾಧಾನ ಉಂಟಾದರೂ ಅವನ ಮಾತನ್ನು ಸಂತೋಷದಿಂದ ಕೇಳುತ್ತಿದ್ದನು. ಆದರೆ ಹೆರೋದ್ಯಳಿಗೆ ಅನುಕೂಲವಾದ ದಿನ ಬಂದಿತು; ಹೇಗೆಂದರೆ ಹೆರೋದನು ತನ್ನ ಜನ್ಮದಿನದಂದು ಪ್ರಭುಗಳಿಗೂ, ಸಹಸ್ರಾಧಿಪತಿಗಳಿಗೂ, ಗಲಿಲಾಯ ಸೀಮೆಯ ಮುಖ್ಯಸ್ಥರಿಗೂ ಔತಣವನ್ನು ಏರ್ಪಡಿಸಿದಾಗ, ಹೆರೋದ್ಯಳ ಮಗಳು ಒಳಕ್ಕೆ ಬಂದು ನಾಟ್ಯವಾಡಿ ಹೆರೋದನನ್ನೂ ಅವನ ಸಂಗಡ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದ ಅತಿಥಿಗಳನ್ನೂ ಮೆಚ್ಚಿಸಿದಳು. ಅರಸನು ಆ ಹುಡುಗಿಗೆ, “ನಿನಗೆ ಬೇಕಾದದ್ದನ್ನು ಕೇಳಿಕೋ, ಕೊಡುತ್ತೇನೆ. ನೀನು ಏನು ಕೇಳಿಕೊಂಡರೂ ಸರಿ, ನನ್ನ ರಾಜ್ಯದಲ್ಲಿ ಅರ್ಧವನ್ನು ಕೇಳಿದರೂ, ನಿನಗೆ ಕೊಡುತ್ತೇನೆ” ಎಂದು ಪ್ರಮಾಣಮಾಡಿದನು. ಆಗ ಅವಳು ಹೊರಕ್ಕೆ ಹೋಗಿ, “ನಾನು ಏನು ಕೇಳಿಕೊಳ್ಳಲಿ?” ಎಂದು ತನ್ನ ತಾಯಿಯನ್ನು ಕೇಳಲಾಗಿ ಅವಳು, “ಸ್ನಾನಿಕನಾದ ಯೋಹಾನನ ತಲೆಯನ್ನು ಕೇಳಿಕೋ” ಅಂದಳು. ಕೂಡಲೆ ಅವಳು ಅರಸನ ಬಳಿಗೆ ಅವಸರದಿಂದ ಬಂದು, “ಈ ಕ್ಷಣದಲ್ಲೇ ಸ್ನಾನಿಕನಾದ ಯೋಹಾನನ ತಲೆಯನ್ನು ಪರಾತಿನಲ್ಲಿ ನನಗೆ ತರಿಸಿಕೊಡಬೇಕು, ಇದೇ ನನ್ನ ಬೇಡಿಕೆ” ಎಂದು ಕೇಳಿಕೊಂಡಳು. ಅದಕ್ಕೆ ಅರಸನಿಗೆ ಬಹು ದುಃಖವಾಯಿತು. ಅದರೂ ಅತಿಥಿಗಳೆಲ್ಲರ ಮುಂದೆ ತಾನು ಮಾಡಿದ ಪ್ರಮಾಣದ ನಿಮಿತ್ತ ಅವಳ ಕೋರಿಕೆಯನ್ನು ನಿರಾಕರಿಸಲಾಗಲಿಲ್ಲ. ಕೂಡಲೆ ತನ್ನ ಮೈಗಾವಲಿನ ಸಿಪಾಯಿಗಳಲ್ಲಿ ಒಬ್ಬನಿಗೆ, ನೀನು ಹೋಗಿ ಯೋಹಾನನ ತಲೆಯನ್ನು ತಂದುಕೊಡು ಎಂದು ಅಪ್ಪಣೆಕೊಟ್ಟು ಕಳುಹಿಸಿದನು; ಅವನು ಹೋಗಿ ಸೆರೆಮನೆಯಲ್ಲಿ ಅವನ ತಲೆಯನ್ನು ಕಡಿದು ಒಂದು ಪರಾತಿನಲ್ಲಿ ತಂದು ಆ ಹುಡುಗಿಗೆ ಕೊಟ್ಟನು. ಆ ಹುಡುಗಿ ಅದನ್ನು ತನ್ನ ತಾಯಿಗೆ ಕೊಟ್ಟಳು. ಯೋಹಾನನ ಶಿಷ್ಯರು ಈ ಸಂಗತಿಗಳನ್ನು ಕೇಳಿ ಅವರು ಬಂದು ಅವನ ಶವವನ್ನು ತೆಗೆದುಕೊಂಡು ಹೋಗಿ ಸಮಾಧಿಯಲ್ಲಿ ಇಟ್ಟರು.

ಇದಲ್ಲದೆ ಆತನು, ಮನುಷ್ಯಕುಮಾರನು ಬಹು ಕಷ್ಟಗಳನ್ನು ಅನುಭವಿಸಿ ಹಿರಿಯರಿಂದಲೂ, ಮುಖ್ಯಯಾಜಕರಿಂದಲೂ, ಶಾಸ್ತ್ರಿಗಳಿಂದಲೂ ತಿರಸ್ಕರಿಸಲ್ಪಟ್ಟವನಾಗಿ ಕೊಲ್ಲಲ್ಪಟ್ಟು ಮೂರು ದಿನಗಳ ನಂತರ ಜೀವಿತನಾಗಿ ಎದ್ದು ಬರಬೇಕಾಗಿದೆ ಎಂದು ಉಪದೇಶಮಾಡುವುದಕ್ಕೆ ಪ್ರಾರಂಭಿಸಿದನು.

ಆ ಮೇಲೆ ಆತನು ತನ್ನ ಶಿಷ್ಯರ ಜೊತೆಗೆ ಜನರ ಗುಂಪನ್ನೂ ಹತ್ತಿರ ಕರೆದು ಅವರಿಗೆ ಹೇಳಿದ್ದೇನಂದರೆ, “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು; ಆದರೆ ನನ್ನ ನಿಮಿತ್ತವಾಗಿಯೂ, ಸುವಾರ್ತೆಯ ನಿಮಿತ್ತವಾಗಿಯೂ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಉಳಿಸಿಕೊಳ್ಳುವನು.

ಏಕೆಂದರೆ ಆತನು ತನ್ನ ಶಿಷ್ಯರಿಗೆ ಉಪದೇಶಮಾಡುತ್ತಾ, “ಮನುಷ್ಯಕುಮಾರನು ಜನರ ಕೈಗಳಿಗೆ ಒಪ್ಪಿಸಲ್ಪಡುತ್ತಾನೆ; ಅವರು ಆತನನ್ನು ಕೊಲ್ಲುವರು; ಕೊಲ್ಲಲ್ಪಟ್ಟ ತರುವಾಯ ಮೂರು ದಿನದ ಮೇಲೆ ಆತನು ಜೀವಿತನಾಗಿ ಎದ್ದು ಬರುವನೆಂದು” ಹೇಳಿದನು.

ಅವರಿಗೆ, “ನೋಡಿರಿ, ನಾವು ಯೆರೂಸಲೇಮಿಗೆ ಹೋಗುತ್ತಾ ಇದ್ದೇವೆ ಮತ್ತು ಮನುಷ್ಯಕುಮಾರನನ್ನು ಮುಖ್ಯಯಾಜಕರ ಮತ್ತು ಶಾಸ್ತ್ರಿಗಳ ಕೈಗೆ ಒಪ್ಪಿಸಿಕೊಡುವರು. ಅವರು ಅವನಿಗೆ ಮರಣದಂಡನೆಯನ್ನು ವಿಧಿಸಿ ಆತನನ್ನು ಅನ್ಯಜನಗಳ ಕೈಗೆ ಒಪ್ಪಿಸುವರು. ಇವರು ಆತನನ್ನು ಅಪಹಾಸ್ಯ ಮಾಡುವರು, ಆತನ ಮೇಲೆ ಉಗುಳುವರು, ಆತನನ್ನು ಚಾವಟಿಗಳಿಂದ ಹೊಡೆಯುವರು, ಅನಂತರ ಕೊಂದು ಹಾಕುವರು. ಆದರೆಆತನು ಮೂರು ದಿನಗಳ ನಂತರ ಜೀವಿತನಾಗಿ ಎದ್ದು ಬರುವನು” ಎಂದು ಹೇಳಿದನು.

ಆಗ ಯೇಸು ಅವರೊಂದಿಗೆ ಸಾಮ್ಯಗಳಿಂದ ಮಾತನಾಡುವುದಕ್ಕೆ ಪ್ರಾರಂಭಿಸಿದನು, “ಒಬ್ಬ ಮನುಷ್ಯನುಒಂದು ದ್ರಾಕ್ಷಿಯ ತೋಟವನ್ನು ಮಾಡಿ ಸುತ್ತಲೂ ಬೇಲಿ ಹಾಕಿಸಿ ದ್ರಾಕ್ಷಿಯ ಆಲೆಗಾಗಿ ಒಂದು ಗುಂಡಿಯನ್ನು ತೆಗೆಸಿ ಕಾವಲು ಗೋಪುರವನ್ನು ಕಟ್ಟಿಸಿದನು. ಬಳಿಕ ಆ ತೋಟವನ್ನು ದ್ರಾಕ್ಷಿಯ ತೋಟಗಾರರಿಗೆ ಗುತ್ತಿಗೆಗೆ ಕೊಟ್ಟು, ಹೊರದೇಶಕ್ಕೆ ಹೊರಟು ಹೋದನು. ಫಲಕಾಲವು ಬಂದಾಗ ತನಗೆ ಬರತಕ್ಕ ಪಾಲನ್ನು ತೆಗೆದುಕೊಳ್ಳುವುದಕ್ಕಾಗಿ ಒಬ್ಬ ಸೇವಕನನ್ನು ಗುತ್ತಿಗೆದಾರರ ಬಳಿಗೆ ಕಳುಹಿಸಿದನು. ಆದರೆ ಅವರು ಅವನನ್ನು ಹಿಡಿದುಕೊಂಡು ಹೊಡೆದು ಏನೂ ಕೊಡದೆ ಬರಿಗೈಯಲ್ಲಿ ಕಳುಹಿಸಿಬಿಟ್ಟರು. ಆ ತೋಟದ ಯಜಮಾನನು ಪುನಃ ಮತ್ತೊಬ್ಬ ಸೇವಕನನ್ನು ಅವರ ಬಳಿಗೆ ಕಳುಹಿಸಲು ಅವರು ಅವನ ತಲೆಯ ಮೇಲೆ ಹೊಡೆದು ಗಾಯಗೊಳಿಸಿ ಅಪಮಾನಮಾಡಿ ಕಳುಹಿಸಿಬಿಟ್ಟರು. ಆದರೂ ಇನ್ನೊಬ್ಬ ಸೇವಕನನ್ನು ಕಳುಹಿಸಿದನು. ಇವನನ್ನು ಅವರು ಕೊಂದು ಹಾಕಿದರು. ಇನ್ನೂ ಅನೇಕರಿಗೆ ಅವರು ಹಾಗೆಯೇ ಮಾಡಿ, ಅವರಲ್ಲಿ ಕೆಲವರನ್ನು ಹೊಡೆದರು ಮತ್ತು ಕೆಲವರನ್ನು ಕೊಂದು ಹಾಕಿದರು. ಅವನಿಗೆ ಕಳುಹಿಸಲು ಇನ್ನು ಒಬ್ಬನಿದ್ದನು. ಯಾರೆಂದರೆ ತನಗೆ ಪ್ರಿಯನಾಗಿದ್ದ ಒಬ್ಬನೇ ಮಗನು. ತನ್ನ ಮಗನಿಗೆ ಅವರು ಮರ್ಯಾದೆ ಕೊಡಬಹುದೆಂದು ಯಜಮಾನನು ಕೊನೆಗೆ ಅವನನ್ನು ಅವರ ಬಳಿಗೆ ಕಳುಹಿಸಿದನು. ಆದರೆ ಆ ಗುತ್ತಿಗೆದಾರರು, ‘ತೋಟಕ್ಕೆ ಇವನೇ ಉತ್ತರಾಧಿಕಾರಿ; ಬನ್ನಿ ಇವನನ್ನು ನಾವು ಕೊಂದು ಹಾಕೋಣ. ಆಗ ಆಸ್ತಿ ನಮ್ಮದಾಗುವುದು’ ಎಂದು ತಮ್ಮತಮ್ಮಲ್ಲಿ ಮಾತನಾಡಿಕೊಂಡು, ಅವರು ಅವನನ್ನು ಹಿಡಿದು ಕೊಂದು ಹಾಕಿ ದ್ರಾಕ್ಷಿಯ ತೋಟದಿಂದ ಹೊರಗೆ ಬಿಸಾಡಿದರು.

“ಆದರೆ ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಜನರು ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಎಳೆದುಕೊಂಡು ಹೋಗುವರು. ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು, ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಕಾರಿಗಳ ಮತ್ತು ಅರಸುಗಳ ಮುಂದೆ ಅವರಿಗೆ ಸಾಕ್ಷಿಗಳಾಗಿ ನಿಲ್ಲಿಸುವರು, ಆದರೆ ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು. “ನಿಮ್ಮನ್ನು ಹಿಡಿದುಕೊಂಡು ಹೋಗಿ ಒಪ್ಪಿಸುವಾಗ ಏನು ಹೇಳಬೇಕು ಎಂದು ಮುಂಚಿತವಾಗಿಯೇ ಚಿಂತಿಸಬೇಡಿರಿ, ನೀವು ಏನು ಹೇಳಬೇಕೋ ಅದು ನಿಮಗೆ ಆ ಗಳಿಗೆಯಲ್ಲಿ ಕೊಡಲ್ಪಡುವುದು, ಏಕೆಂದರೆ ಮಾತನಾಡುವವರು ನೀವಲ್ಲ, ಆದರೆ ಪವಿತ್ರಾತ್ಮನೇ ನಿಮ್ಮ ಮೂಲಕವಾಗಿ ಮಾತನಾಡುವನು, ಇದಲ್ಲದೆ ಸಹೋದರನು ಸಹೋದರನನ್ನೂ, ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು. ಮಕ್ಕಳು ಹೆತ್ತವರಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು, ಮತ್ತು ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ದ್ವೇಷಿಸುವರು, ಆದರೆ ಕೊನೆಯವರೆಗೂ ತಾಳುವವನೇ ರಕ್ಷಣೆ ಹೊಂದುವನು.”

ಪಸ್ಕಹಬ್ಬ ಎಂದರೆ ಹುಳಿಯಿಲ್ಲದ ರೊಟ್ಟಿಯ ಹಬ್ಬ ಬರುವುದಕ್ಕೆ ಇನ್ನೂ ಎರಡು ದಿನಗಳಿದ್ದಾಗ ಮುಖ್ಯಯಾಜಕರೂ ಶಾಸ್ತ್ರಿಗಳೂ ಯೇಸುವನ್ನು ಉಪಾಯದಿಂದ ಹಿಡಿದು ಕೊಲ್ಲುವುದಕ್ಕೆ ಮಾರ್ಗವನ್ನು ಹುಡುಕುತ್ತಿದ್ದರು.

ಆದರೆ ಅವನು, “ನಾನು ನಿನ್ನ ಸಂಗಡ ಸಾಯಬೇಕಾಗಿ ಬಂದರೂ ನಿನ್ನನ್ನು ನಿರಾಕರಿಸುವುದೇ ಇಲ್ಲವೆಂದು” ಬಹು ಖಂಡಿತವಾಗಿ ಹೇಳಿದನು. ಅದರಂತೆಯೇ ಶಿಷ್ಯರೆಲ್ಲರೂ ಹೇಳಿದರು.

ಆಗ ಮುಖ್ಯಯಾಜಕರು ಮತ್ತು ಹಿರೀಸಭೆಯ ಸದಸ್ಯರೆಲ್ಲರೂ ಯೇಸುವನ್ನು ಮರಣದಂಡನೆಗೆ ಗುರಿಪಡಿಸುವ ಸಲುವಾಗಿ ಆತನ ವಿರುದ್ಧವಾಗಿ ಸಾಕ್ಷಿ ಹುಡುಕುತ್ತಾ ಇದ್ದರು. ಆದರೆ ಅವರಿಗೆ ಸರಿಯಾದ ಒಂದು ಸಾಕ್ಷ್ಯವೂ ದೊರಕಲಿಲ್ಲ.

ಇವನು ಮಾಡಿದ ದೇವದೂಷಣೆಯನ್ನು ನೀವು ಕೇಳಿದಿರಲ್ಲಾ, ನಿಮಗೆ ಹೇಗೆ ತೋರುತ್ತದೆ?” ಎಂದು ಕೇಳಲು ಅವರೆಲ್ಲರೂ, ಇವನಿಗೆ ಮರಣದಂಡನೆ ಆಗಬೇಕು ಎಂದು ತೀರ್ಪು ಮಾಡಿದರು. ಅನಂತರ ಕೆಲವರು ಆತನ ಮೇಲೆ ಉಗುಳಿ, ಆತನ ಮುಖಕ್ಕೆ ಮುಸುಕನ್ನು ಹಾಕಿ, ಗುದ್ದಿ, ಈಗ “ಪ್ರವಾದಿಸು” ಎಂದರು. ಕಾವಲುಗಾರರು ಆತನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಆತನಿಗೆ ಹೊಡೆದರು.

ಅವರು, “ಅವನನ್ನು ಶಿಲುಬೆಗೆ ಹಾಕಿಸು” ಎಂದು ಮತ್ತಷ್ಟು ಕೂಗಿಕೊಂಡರು. ಪಿಲಾತನು, “ಏಕೆ? ಇವನು ಏನು ಅಪರಾಧ ಮಾಡಿದ್ದಾನೆ?” ಅಂದನು. ಆದರೆ ಅವರು, “ಅವನನ್ನು ಶಿಲುಬೆಗೆ ಹಾಕಿಸು” ಎಂದು ಇನ್ನೂ ಹೆಚ್ಚಾಗಿ ಆರ್ಭಟಿಸಿ ಕೂಗಿಕೊಂಡರು. ಅದಕ್ಕೆ ಪಿಲಾತನು ಜನಸಮೂಹವನ್ನು ಮೆಚ್ಚಿಸಬೇಕೆಂದು ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡಿಸಿ, ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿದನು.

ಹೀಗೆ ಆತನನ್ನು ಪರಿಹಾಸ್ಯ ಮಾಡಿದ ಮೇಲೆ ಆ ನಸುಗೆಂಪು ಮೇಲಂಗಿಯನ್ನು ತೆಗೆದು ಆತನ ಬಟ್ಟೆಗಳನ್ನು ಆತನಿಗೆ ತೊಡಿಸಿ ಆತನನ್ನು ಶಿಲುಬೆಗೆ ಹಾಕುವುದಕ್ಕೆ ತೆಗೆದುಕೊಂಡು ಹೋದರು.

ಅವರು ಆತನನ್ನು ಶಿಲುಬೆಗೆ ಹಾಕಿ ಆತನ ಬಟ್ಟೆಗಳಲ್ಲಿ ಯಾವುದು ಯಾರಿಗೆ ಸಿಗಬೇಕೆಂದು ಚೀಟು ಹಾಕಿ ಪಾಲುಮಾಡಿಕೊಂಡರು. ಆತನನ್ನು ಶಿಲುಬೆಗೆ ಹಾಕುವಾಗ ಬೆಳಿಗ್ಗೆ ಒಂಭತ್ತು ಗಂಟೆಯಾಗಿತ್ತು.

ಆದರೆ ಯೇಸು ಮಹಾಧ್ವನಿಯಿಂದ ಕೂಗಿ ಪ್ರಾಣ ಬಿಟ್ಟನು.

ನನ್ನ ಆತ್ಮವು ನನ್ನ ರಕ್ಷಕನಾದ ದೇವರಲ್ಲಿ ಉಲ್ಲಾಸಗೊಂಡಿದೆ.

“ಮನುಷ್ಯಕುಮಾರನ ನಿಮಿತ್ತವಾಗಿ ಜನರು ನಿಮ್ಮನ್ನು ಹಗೆಮಾಡಿ ನಿಮಗೆ ಬಹಿಷ್ಕಾರ ಹಾಕಿ ನಿಂದಿಸಿ ನಿಮ್ಮ ಹೆಸರನ್ನು ಕೆಟ್ಟದೆಂದು ತೆಗೆದುಹಾಕಿದರೆ ನೀವು ಧನ್ಯರು. ಆ ದಿನದಲ್ಲಿ ಸಂತೋಷಿಸಿ, ಕುಣಿದಾಡುವಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವುದು ಎಂದು ತಿಳಿದುಕೊಳ್ಳಿರಿ. ಈ ಜನರ ಪೂರ್ವಿಕರು ಪ್ರವಾದಿಗಳಿಗೂ ಹಾಗೆಯೇ ಮಾಡಿದರು.

“ಕೇಳುವವರಾದ ನಿಮಗೆ ನಾನು ಹೇಳುವುದೇನಂದರೆ, ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಗೆಮಾಡುವವರಿಗೆ ಉಪಕಾರಮಾಡಿರಿ; ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ; ನಿಮ್ಮನ್ನು ನಿಂದಿಸುವವರಿಗಾಗಿ ಪ್ರಾರ್ಥಿಸಿರಿ.

ನೀವಾದರೋ ನಿಮ್ಮ ವೈರಿಗಳನ್ನು ಪ್ರೀತಿಸಿ ಅವರಿಗೆ ಉಪಕಾರಮಾಡಿರಿ. ಏನನ್ನೂ ನಿರೀಕ್ಷಿಸದೆ ಸಾಲಕೊಡಿರಿ. ಹೀಗೇ ಮಾಡಿದರೆ, ನಿಮಗೆ ಬಹಳ ಫಲಸಿಕ್ಕುವುದು ಮತ್ತು ನೀವು ಪರಾತ್ಪರನಾದ ದೇವರ ಮಕ್ಕಳಾಗುವಿರಿ. ದೇವರು ಉಪಕಾರನೆನಸದವರಿಗೂ ಕೆಟ್ಟವರಿಗೂ ಉಪಕಾರಿಯಾಗಿದ್ದಾನೆ.

ಹೀಗಿರಲಾಗಿ ಉಪರಾಜನಾದ ಹೆರೋದನು ನಡೆದ ಸಂಗತಿಗಳನ್ನೆಲ್ಲಾ ಕೇಳಿ ಬಹಳವಾಗಿ ಕಳವಳಗೊಂಡನು, ಏಕೆಂದರೆ ಸತ್ತಿದ್ದ ಯೋಹಾನನು ತಿರುಗಿ ಬದುಕಿಬಂದಿದ್ದಾನೆಂದು ಕೆಲವರೂ, ಎಲೀಯನು ಕಾಣಿಸಿಕೊಂಡನೆಂದು ಕೆಲವರೂ, ಪೂರ್ವದ ಪ್ರವಾದಿಗಳಲ್ಲಿ ಯಾರೋ ಒಬ್ಬನು ಜೀವದಿಂದ ಎದ್ದಿದ್ದಾನೆಂದು ಮತ್ತೆ ಕೆಲವರೂ ಹೇಳಿಕೊಳ್ಳುತ್ತಿದ್ದರು. ಆದರೆ ಹೆರೋದನು, “ಯೋಹಾನನನ್ನು ನಾನೇ ಶಿರಚ್ಛೇದನಮಾಡಿಸಿದೆನಷ್ಟೆ. ಹಾಗಿದ್ದಲಿ ಇವನಾರು? ಇವನ ವಿಷಯವಾಗಿ ಆಶ್ಚರ್ಯಕರವಾದ ಸಂಗತಿಗಳನ್ನು ಕೇಳುತ್ತೇನಲ್ಲಾ” ಎಂದು ಹೇಳಿ ಅವನನ್ನು ನೋಡಬೇಕೆಂದು ಪ್ರಯತ್ನಿಸಿದನು.

ಯೇಸು ಅವರಿಗೆ, “ಮನುಷ್ಯಕುಮಾರನು ಬಹು ಕಷ್ಟಗಳನ್ನನುಭವಿಸಿ, ಹಿರಿಯರಿಂದಲೂ ಮುಖ್ಯಯಾಜಕರಿಂದಲೂ ಶಾಸ್ತ್ರಿಗಳಿಂದಲೂ ನಿರಾಕರಿಸಲ್ಪಟ್ಟು ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡಬೇಕಾಗಿದೆ” ಎಂದು ಹೇಳಿದನು.

ಇದಲ್ಲದೆ ಆತನು ಎಲ್ಲರಿಗೂ ಹೇಳಿದ್ದೇನಂದರೆ, “ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ತಾನು ನಿರಾಕರಿಸಿ ಪ್ರತಿದಿನವು ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು, ಆದರೆ ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಉಳಿಸಿಕೊಳ್ಳುವನು.

ನಿಮ್ಮ ಗತಿಯನ್ನು ಏನು ಹೇಳಲಿ? ನೀವು ಪ್ರವಾದಿಗಳ ಗೋರಿಗಳನ್ನು ಕಟ್ಟುತ್ತೀರಿ. ಅವರನ್ನು ಕೊಂದವರು ನಿಮ್ಮ ಪೂರ್ವಿಕರೇ. ಹೀಗಿರುವುದರಿಂದ ನಿಮ್ಮ ಪೂರ್ವಿಕರು ಮಾಡಿದ್ದಕ್ಕೆ ನೀವೇ ಸಾಕ್ಷಿಗಳಾಗಿರುವವರಲ್ಲದೆ ಅವರ ಕೃತ್ಯಗಳಿಗೆ ಒಪ್ಪಿಕೊಂಡ ಹಾಗಾಯಿತು. ಹೇಗೆಂದರೆ ಅವರು ಪ್ರವಾದಿಗಳನ್ನು ಕೊಂದರು, ನೀವು ಗೋರಿಗಳನ್ನು ಕಟ್ಟುತ್ತೀರಿ. ಆದುದರಿಂದ ದೇವರ ಜ್ಞಾನವು ಹೇಳಿದ್ದೇನಂದರೆ, ‘ನಾನು ಅವರ ಬಳಿಗೆ ಪ್ರವಾದಿಗಳನ್ನೂ ಅಪೊಸ್ತಲರನ್ನೂ ಕಳುಹಿಸುವೆನು, ಅವರಲ್ಲಿ ಕೆಲವರನ್ನು ಕೊಲ್ಲುವರು, ಕೆಲವರನ್ನು ಹಿಂಸೆಪಡಿಸುವರು.’ ಹೀಗೆ ಲೋಕಾದಿಯಿಂದ ಸುರಿಸಲಾದ ಎಲ್ಲಾ ಪ್ರವಾದಿಗಳ ರಕ್ತಕ್ಕೂ ಅಂದರೆ, ಹೇಬೆಲನ ರಕ್ತ ಮೊದಲುಗೊಂಡು, ಯಜ್ಞವೇದಿಗೂ ದೇವಾಲಯಕ್ಕೂ ನಡುವೆ ಕೊಲ್ಲಲ್ಪಟ್ಟ ಜಕರೀಯನ ರಕ್ತದವರೆಗೂ ಈ ಸಂತತಿಯವರು ಲೆಕ್ಕಕೊಡಬೇಕಾಗುವುದು ಎಂಬುದೇ. ಹೌದು, ಈ ಸಂತತಿಯವರೇ ಉತ್ತರಕೊಡಬೇಕೆಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ.

“ನನ್ನ ಸ್ನೇಹಿತರಾದ ನಿಮಗೆ ಹೇಳುತ್ತೇನೆ, ದೇಹವನ್ನು ಕೊಲ್ಲುವವರಿಗೆ ಭಯಪಡಬೇಡಿ. ಕೊಂದು ಹಾಕಿದ ಮೇಲೆ ಹೆಚ್ಚೇನು ಮಾಡಲು ಅವರಿಂದಾಗದು. ಆದರೆ ನೀವು ಯಾರಿಗೆ ಭಯಪಡಬೇಕೆಂದು ತೋರಿಸುತ್ತೇನೆ, ಕೇಳಿ. ಸತ್ತ ಮೇಲೆ ನರಕದೊಳಗೆ ಹಾಕುವ ಅಧಿಕಾರವುಳ್ಳಾತನಿಗೆ ಹೆದರಬೇಕು. ಹೌದು ಆತನಿಗೇ ಭಯಪಡಬೇಕೆಂದು ನಿಮಗೆ ಒತ್ತಿಹೇಳುತ್ತೇನೆ.

ಚಿಕ್ಕ ಹಿಂಡೇ, ಹೆದರಬೇಡ; ಆ ರಾಜ್ಯವನ್ನು ನಿಮಗೆ ದಯಪಾಲಿಸುವುದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ. ನಿಮಗಿರುವುದನ್ನು ಮಾರಿಬಿಟ್ಟು ದಾನಧರ್ಮ ಮಾಡಿರಿ. ನಶಿಸದ ಹಣಚೀಲಗಳನ್ನು ಗಳಿಸಿಕೊಳ್ಳಿರಿ. ಪರಲೋಕದಲ್ಲಿ ಲಯವಾಗದ ಸಂಪತ್ತನ್ನು ಇಟ್ಟುಕೊಳ್ಳಿರಿ. ಅದನ್ನು ಕದಿಯುವುದಕ್ಕೆ ಕಳ್ಳನು ಸಮೀಪಕ್ಕೆ ಬರಲಾರನು. ಅವು ನುಸಿ ಹಿಡಿದು ನಾಶವಾಗುವುದಿಲ್ಲ.

“ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆತಾಯಿ, ಹೆಂಡತಿ, ಮಕ್ಕಳು, ಅಣ್ಣತಮ್ಮಂದಿರು, ಅಕ್ಕತಂಗಿಯರು ಇವರನ್ನೂ ತನ್ನ ಪ್ರಾಣವನ್ನು ಸಹ ಹಗೆಮಾಡದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು. ಯಾವನಾದರೂ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರದ ಹೊರತು ಅವನು ನನ್ನ ಶಿಷ್ಯನಾಗಿರಲಾರನು.

ಹಾಗೆಯೇ ನಿಮ್ಮಲ್ಲಿ ಯಾವನೇ ಆಗಲಿ ತನಗಿರುವುದನ್ನೆಲ್ಲಾ ಬಿಟ್ಟುಬಿಡದೆ ಹೋದರೆ ಅವನು ನನ್ನ ಶಿಷ್ಯನಾಗಿರಲಾರನು.

ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು, ಪ್ರಾಣವನ್ನು ಕಳೆದುಕೊಂಡವನು ಅದನ್ನು ರಕ್ಷಿಸಿಕೊಳ್ಳುವನು.

ಹೇಗೆಂದರೆ, ಅವನನ್ನು ಅನ್ಯಜನರ ಕೈಗೆ ಒಪ್ಪಿಸುವರು, ಅವರು ಅವನನ್ನು ಅಪಹಾಸ್ಯ ಮಾಡುವರು, ಬೈಯುವರು, ಉಗುಳುವರು, ಕೊರಡೆಗಳಿಂದ ಹೊಡೆಯುವರು, ಕೊಲ್ಲುವರು ಮತ್ತು ಮೂರನೆಯ ದಿನದಲ್ಲಿ ಅವನು ಜೀವಿತನಾಗಿ ಎದ್ದು ಬರುವನು” ಎಂದು ಹೇಳಿದನು.

ಆಗ ಆತನು ಜನರಿಗೆ ಒಂದು ಸಾಮ್ಯವನ್ನು ಹೇಳುವುದಕ್ಕೆ ತೊಡಗಿದನು. ಅದೇನೆಂದರೆ, “ಒಬ್ಬ ಮನುಷ್ಯನು ಒಂದು ದ್ರಾಕ್ಷಿಯ ತೋಟವನ್ನು ಮಾಡಿ, ಆದನ್ನು ಒಕ್ಕಲಿಗರಿಗೆ ಗುತ್ತಿಗೆಗೆ ಕೊಟ್ಟು, ಬೇರೊಂದು ದೇಶಕ್ಕೆ ಹೋಗಿ ಅಲ್ಲಿ ಬಹುಕಾಲ ಇದ್ದನು. ಫಲಕಾಲ ಬಂದಾಗ ದ್ರಾಕ್ಷಿಯ ತೋಟದ ಪಾಲನ್ನು ತೆಗೆದುಕೊಳ್ಳುವುದಕ್ಕಾಗಿ ಒಬ್ಬ ಆಳನ್ನು ಒಕ್ಕಲಿಗರ ಬಳಿಗೆ ಕಳುಹಿಸಿದನು. ಆದರೆ ಆ ಒಕ್ಕಲಿಗರು ಅವನನ್ನು ಹೊಡೆದು ಬರಿಗೈಯಲ್ಲಿ ಕಳುಹಿಸಿಬಿಟ್ಟರು. ಆ ಧಣಿಯು ಬೇರೊಬ್ಬ ಆಳನ್ನು ಕಳುಹಿಸಲಾಗಿ ಅವರು ಅವನನ್ನೂ ಹೊಡೆದು ಅವಮಾನಪಡಿಸಿ ಬರಿಗೈಯಲ್ಲಿ ಕಳುಹಿಸಿಬಿಟ್ಟರು. ಆ ಮೇಲೆ ಮೂರನೆಯವನನ್ನು ಕಳುಹಿಸಲು ಅವರು ಅವನನ್ನೂ ಗಾಯಗೊಳಿಸಿ ಹೊರಕ್ಕೆ ಅಟ್ಟಿದರು. ಆಗ ಆ ದ್ರಾಕ್ಷಿಯ ತೋಟದ ಧಣಿಯು, ‘ನಾನೇನು ಮಾಡಲಿ? ನನ್ನ ಮುದ್ದುಮಗನನ್ನು ಕಳುಹಿಸುತ್ತೇನೆ, ಒಂದು ವೇಳೆ ಅವನಿಗಾದರೂ ಮರ್ಯಾದೆ ತೋರಿಸಾರು’ ಅಂದುಕೊಂಡನು. ಆದರೆ ಆ ಒಕ್ಕಲಿಗರು ದ್ರಾಕ್ಷಿಯ ತೋಟದ ಯಜಮಾನನ ಮಗನನ್ನು ಕಂಡು, ‘ಇವನೇ ಬಾಧ್ಯಸ್ಥನು; ಇವನನ್ನು ಕೊಂದು ಹಾಕೋಣ, ಇವನ ಪಿತ್ರಾರ್ಜಿತವೆಲ್ಲಾ ನಮ್ಮದಾಗುವುದು’ ಎಂದು ಒಬ್ಬರ ಸಂಗಡಲೊಬ್ಬರು ಮಾತನಾಡಿಕೊಂಡು, ಅವನನ್ನು ದ್ರಾಕ್ಷಿಯ ತೋಟದಿಂದ ಹೊರಕ್ಕೆ ದೊಬ್ಬಿ, ಕೊಂದು ಹಾಕಿದರು. ಹಾಗಾದರೆ ದ್ರಾಕ್ಷಿಯ ತೋಟದ ಧಣಿಯು ಅವರಿಗೆ ಏನು ಮಾಡಿಯಾನು?

ಆದರೆ ಮುಂಬರುವ ಲೋಕವನ್ನೂ, ಸತ್ತವರೊಳಗಿಂದ ಪುನರುತ್ಥಾನವನ್ನೂ ಪಡೆಯುವುದಕ್ಕೆ ಯೋಗ್ಯರೆನಿಸಿಕೊಂಡಿರುವವರು ಮದುವೆಮಾಡಿಕೊಳ್ಳುವುದೂ ಇಲ್ಲ, ಮಾಡಿಕೊಡುವುದೂ ಇಲ್ಲ. ಅವರು ಇನ್ನು ಮರಣಕ್ಕೆ ಗುರಿಯಾಗುವುದೇ ಇಲ್ಲ. ಏಕೆಂದರೆ ಅವರು ದೇವದೂತರಿಗೆ ಸರಿಸಮಾನರೂ, ಪುನರುತ್ಥಾನವನ್ನು ಹೊಂದಿದವರಾಗಿವುದ್ದರಿಂದ ಅವರು ದೇವರ ಮಕ್ಕಳೂ ಆಗಿರುತ್ತಾರೆ.

ಆದರೆ ಇವೆಲ್ಲಾ ನಡೆಯುವುದಕ್ಕಿಂತ ಮುಂಚೆ ಅವರು ನಿಮ್ಮನ್ನು ಹಿಡಿದು ಸಭಾಮಂದಿರಗಳ ಮತ್ತು ಸೆರೆಮನೆಯ ಅಧಿಕಾರಿಗಳ ವಶಕ್ಕೆ ಕೊಟ್ಟು, ನನ್ನ ಹೆಸರಿನ ನಿಮಿತ್ತವಾಗಿ ಅರಸುಗಳ ಮುಂದೆಯೂ ಅಧಿಪತಿಗಳ ಮುಂದೆಯೂ ಕರೆದುಕೊಂಡುಹೋಗಿ ಹಿಂಸೆಪಡಿಸುವರು. ಇದು ಸಾಕ್ಷಿಹೇಳುವುದಕ್ಕೆ ನಿಮಗೆ ಅನುಕೂಲವಾಗುವುದು. ಆದುದರಿಂದ ಏನು ಉತ್ತರ ಕೊಡಬೇಕೆಂಬ ವಿಷಯದಲ್ಲಿ ನೀವು ಮುಂದಾಗಿ ಯೋಚಿಸುವುದಿಲ್ಲವೆಂದು ನಿಮ್ಮ ಮನಸ್ಸಿನಲ್ಲಿ ನಿಶ್ಚಯಮಾಡಿಕೊಳ್ಳಿರಿ. ಏಕೆಂದರೆ ನಿಮ್ಮ ವಿರೋಧಿಗಳೆಲ್ಲರೂ ಎದುರು ನಿಲ್ಲುವುದಕ್ಕೂ ಎದುರು ಮಾತನಾಡುವುದಕ್ಕೂ ಆಗದಂಥ ಬಾಯನ್ನೂ, ಬುದ್ಧಿಯನ್ನೂ ನಾನೇ ನಿಮಗೆ ಕೊಡುತ್ತೇನೆ. ಆದರೆ ತಂದೆತಾಯಿಗಳೂ, ಅಣ್ಣತಮ್ಮಂದಿರೂ, ಬಂಧುಬಾಂಧವರೂ. ಸ್ನೇಹಿತರೂ ನಿಮ್ಮನ್ನು ಅವರಿಗೆ ಒಪ್ಪಿಸಿಕೊಡುವರು ಮತ್ತು ನಿಮ್ಮಲ್ಲಿ ಕೆಲವರನ್ನು ಕೊಲ್ಲಿಸುವರು. ಇದಲ್ಲದೆ ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ಹಗೆಮಾಡುವರು.

ನೀವು ಸೈರಣೆಯಿಂದ ನಿಮ್ಮ ಪ್ರಾಣಗಳನ್ನು ಪಡೆದುಕೊಳ್ಳುವಿರಿ.

ಮುಖ್ಯಯಾಜಕರೂ ಶಾಸ್ತ್ರಿಗಳೂ ಯೇಸುವನ್ನು ಕೊಲ್ಲಬೇಕೆಂದಿದ್ದರು. ಆದರೆ ಜನರಿಗೆ ಹೆದರಿ ತಕ್ಕ ಮಾರ್ಗವನ್ನು ಹುಡುಕುತ್ತಿದ್ದರು.

ನೀವು ನನ್ನ ಕಷ್ಟಗಳಲ್ಲಿ ನನ್ನ ಸಂಗಡ ಎಡೆಬಿಡದೆ ಇದ್ದವರು.

ಆದರೆ ಅವನು, “ಕರ್ತನೇ, ನಿನ್ನ ಸಂಗಡ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ನಾನು ಸಿದ್ಧನಾಗಿದ್ದೇನೆ” ಅನ್ನಲು,

ಆ ಮೇಲೆ ಯೇಸುವನ್ನು ಹಿಡಿದವರು ಆತನನ್ನು ಪರಿಹಾಸ್ಯಮಾಡುತ್ತಾ, ಆತನಿಗೆ ಮುಸುಕುಹಾಕಿ ಹೊಡೆದು, “ನಿನ್ನನ್ನು ಹೊಡೆದವನಾರು? ಪ್ರವಾದನೆ ಹೇಳು” ಎಂದು ಆತನನ್ನು ಕೇಳಿದರು.

ಆದರೆ ಅವರು, “ಅವನನ್ನು ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು” ಎಂದು ಕೂಗುತ್ತಿದ್ದರು. ಅವನು ಮೂರನೆಯ ಸಾರಿ, “ಯಾಕೆ? ಕೆಟ್ಟದ್ದೇನು ಮಾಡಿದನು? ನಾನು ಇವನಲ್ಲಿ ಮರಣದಂಡನೆಗೆ ತಕ್ಕ ಅಪರಾಧವೇನೂ ಕಾಣಲಿಲ್ಲ ಆದುದರಿಂದ ಇವನನ್ನು ಹೊಡಿಸಿ ಬಿಟ್ಟುಬಿಡುತ್ತೇನೆ” ಎಂದು ಅವರಿಗೆ ಹೇಳಿದನು. ಆದರೆ ಅವರು ಜೋರಾಗಿ ಕೂಗುತ್ತಾ, ಅವನನ್ನು ಶಿಲುಬೆಗೆ ಹಾಕಿಸಬೇಕೆಂದು ಕೇಳಿಕೊಂಡು ಬಲವಂತ ಮಾಡಿದರು. ಅವರ ಕೂಗಾಟವು ಗೆದ್ದಿತು.

ಅವರು ಕಪಾಲವೆಂಬ ಸ್ಥಳಕ್ಕೆ ಬಂದಾಗ ಅಲ್ಲಿ ಯೇಸುವನ್ನೂ ದುಷ್ಕರ್ಮಿಗಳನ್ನೂ ಶಿಲುಬೆಗೆ ಹಾಕಿದರು. ಒಬ್ಬನನ್ನು ಯೇಸುವಿನ ಬಲಗಡೆಯಲ್ಲಿಯೂ ಮತ್ತೊಬ್ಬನನ್ನು ಎಡಗಡೆಯಲ್ಲಿಯೂ ಹಾಕಿದರು. ಆಗ ಯೇಸು, “ತಂದೆಯೇ, ಅವರನ್ನು ಕ್ಷಮಿಸು ತಾವು ಏನು ಮಾಡುತ್ತೇವೆಂಬುದನ್ನು ಅವರು ಅರಿಯರು” ಅಂದನು. ಆ ಮೇಲೆ ಚೀಟು ಹಾಕಿ ಯೇಸುವಿನ ಬಟ್ಟೆಗಳನ್ನು ಪಾಲು ಮಾಡಿದರು.

ಅದಕ್ಕೆ ಯೇಸು, “ಈ ಹೊತ್ತೇ ನೀನು ನನ್ನ ಸಂಗಡ ಪರದೈಸಿನಲ್ಲಿರುವಿ ಎಂದು ನಿನಗೆ ಸತ್ಯವಾಗಿ ಹೇಳುತ್ತೇನೆ” ಎಂದು ಉತ್ತರಕೊಟ್ಟನು.

ಆ ಮೇಲೆ ಯೇಸು, “ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ” ಎಂದು ಮಹಾಧ್ವನಿಯಿಂದ ಕೂಗಿದನು. ಇದನ್ನು ಹೇಳಿದ ಮೇಲೆ ಪ್ರಾಣಬಿಟ್ಟನು.

ಆತನನ್ನು ಮುಖ್ಯಯಾಜಕರೂ ನಮ್ಮ ಅಧಿಕಾರಿಗಳೂ ಮರಣದಂಡನೆಗೆ ಒಪ್ಪಿಸಿಕೊಟ್ಟು ಶಿಲುಬೆಗೆ ಹಾಕಿಸಿದರು.

ನಿಮಗೆ ನಿಜನಿಜವಾಗಿ ಹೇಳುತ್ತೇನೆ ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿದಾತನನ್ನು ನಂಬುವವನು ನಿತ್ಯ ಜೀವವನ್ನು ಹೊಂದಿದ್ದಾನೆ, ಅವನು ಖಂಡನೆಗೆ ಗುರಿಯಾಗುವುದಿಲ್ಲ, ಮರಣದಿಂದ ಪಾರಾಗಿ ಜೀವದಲ್ಲಿ ಸೇರಿದ್ದಾನೆ. ನಿಮಗೆ ನಿಜನಿಜವಾಗಿ ಹೇಳುತ್ತೇನೆ ಸತ್ತವರು ದೇವಕುಮಾರನ ಸ್ವರವನ್ನು ಕೇಳುವ ಕಾಲ ಬರುತ್ತದೆ, ಅದು ಈಗಾಗಲೇ ಬಂದಿದೆ, ಕೇಳಿದವರು ಬದುಕುವರು.

ಅದಕ್ಕೆ ಆಶ್ಚರ್ಯಪಡಬೇಡಿರಿ. ಒಂದು ಕಾಲ ಬರುತ್ತದೆ, ಆಗಸಮಾಧಿಗಳಲ್ಲಿರುವವರೆಲ್ಲಾ ಆತನ ಸ್ವರವನ್ನು ಕೇಳಿ, ಎದ್ದು ಹೊರಗೆ ಬರುವರು. ಒಳ್ಳೆಯದನ್ನು ಮಾಡಿದವರಿಗೆ ನಿತ್ಯಜೀವಕ್ಕಾಗಿ ಪುನರುತ್ಥಾನವಾಗುವುದು. ಕೆಟ್ಟದ್ದನ್ನು ಮಾಡಿದವರು ಖಂಡನೆಗಾಗಿ ಪುನರುತ್ಥಾನವನ್ನೂ ಹೊಂದುವರು.

ಪರಲೋಕದಿಂದ ಇಳಿದು ಬರುವಂಥ ಆ ರೊಟ್ಟಿ, ಎಂಥದೆಂದರೆ ಅದನ್ನು ತಿಂದವನು ಎಂದಿಗೂ ಸಾಯುವುದಿಲ್ಲ. ನಾನೇ ಪರಲೋಕದಿಂದ ಇಳಿದು ಬಂದ ಜೀವವುಳ್ಳ ರೊಟ್ಟಿ. ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಸದಾ ಕಾಲವು ಬದುಕುವನು; ಮತ್ತು ನಾನು ಕೊಡುವ ರೊಟ್ಟಿ ನನ್ನ ದೇಹವೇ, ಅದನ್ನು ಲೋಕದ ಜೀವಕ್ಕಾಗಿ ಕೊಡುವೆನು” ಎಂದು ಹೇಳಿದನು.

ಮೋಶೆಯು ನಿಮಗೆ ಧರ್ಮಶಾಸ್ತ್ರವನ್ನು ಕೊಡಲಿಲ್ಲವೇ? ಆದರೂ ನಿಮ್ಮಲ್ಲಿ ಒಬ್ಬನಾದರೂ ಆ ಧರ್ಮಶಾಸ್ತ್ರದಂತೆ ನಡೆಯಲಿಲ್ಲ. ನೀವು ನನ್ನನ್ನು ಕೊಲ್ಲುವುದಕ್ಕೆ ಹುಡುಕುವುದೇಕೆ?” ಎಂದು ಕೇಳಿದನು.

ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಯಾವನಾದರೂ ನನ್ನ ವಾಕ್ಯಕ್ಕೆ ವಿಧೇಯನಾದರೆ ಅವನು ನಿತ್ಯಮರಣವನ್ನು ಅನುಭವಿಸುವುದಿಲ್ಲ” ಅಂದನು.

“ನಾನೇ ಒಳ್ಳೆಯ ಕುರುಬನು. ಒಳ್ಳೆಯ ಕುರುಬನು ತನ್ನ ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ.

ತಂದೆಯು ನನ್ನನ್ನು ತಿಳಿದಿರುವಂತೆಯೇ, ನಾನು ತಂದೆಯನ್ನು ತಿಳಿದಿದ್ದೇನೆ; ಮತ್ತು ನಾನು ಕುರಿಗಳಿಗೋಸ್ಕರ ನನ್ನ ಪ್ರಾಣವನ್ನೇ ಕೊಡುತ್ತೇನೆ. ಇದಲ್ಲದೆಈ ಮಂದೆಗೆ ಸೇರದಿರುವ ಇನ್ನೂ ಬೇರೆ ಕುರಿಗಳು ನನಗಿವೆ, ಅವುಗಳನ್ನೂ ಸಹ ನಾನು ಕರೆ ತರಬೇಕು. ಅವು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒಂದೇಕುರಿಹಿಂಡು ಆಗುವುದು ಮತ್ತು ಒಬ್ಬನೇ ಕುರುಬನು ಇರುವನು. ತಂದೆಯು ನನ್ನನ್ನು ಪ್ರೀತಿಸುತ್ತಾನೆ ಏಕೆಂದರೆ, ನಾನು ನನ್ನ ಪ್ರಾಣವನ್ನು ಮರಳಿ ಪಡೆದುಕೊಳ್ಳುವಂತೆ ಅದನ್ನು ಕೊಡುತ್ತಿದ್ದೇನೆ. ನನ್ನ ಪ್ರಾಣವನ್ನು ಯಾರೂ ನನ್ನಿಂದ ತೆಗೆದುಕೊಳ್ಳುವುದಿಲ್ಲ. ಆದರೆ ನನ್ನಷ್ಟಕ್ಕೆ ನಾನೇ ಅದನ್ನು ಕೊಡುತ್ತೇನೆ. ಅದನ್ನು ಕೊಡುವುದಕ್ಕೆ ನನಗೆ ಅಧಿಕಾರ ಉಂಟು. ಅದನ್ನು ಪುನಃ ಪಡೆದುಕೊಳ್ಳುವುದಕ್ಕೂ ನನಗೆ ಅಧಿಕಾರವಿದೆ. ಈ ಆಜ್ಞೆಯನ್ನು ನಾನು ನನ್ನ ತಂದೆಯಿಂದ ಹೊಂದಿದ್ದೇನೆ” ಎಂದನು.

ಯೇಸು ಆಕೆಗೆ, “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವನು ಸತ್ತರೂ ಬದುಕುವನು, ಮತ್ತು ಜೀವಿಸುವ ಪ್ರತಿಯೊಬ್ಬನು ನನ್ನಲ್ಲಿ ನಂಬಿಕೆಯಿಟ್ಟರೆ, ಅವನು ಎಂದಿಗೂ ಸಾಯುವುದಿಲ್ಲ. ಇದನ್ನು ನೀನು ನಂಬುತ್ತೀಯೋ?” ಎಂದು ಕೇಳಿದಕ್ಕೆ,

ಅವರು ಆ ದಿನದಿಂದ ಆತನನ್ನು ಕೊಲ್ಲುವುದಕ್ಕೆ ಆಲೋಚಿಸುತ್ತಿದ್ದರು.

ಆದರೆ ಮುಖ್ಯಯಾಜಕರು ಲಾಜರನನ್ನೂ ಸಹ ಕೊಲ್ಲಬೇಕೆಂದು ಆಲೋಚಿಸಿದರು.

ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಗೋದಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಒಂಟಿಯಾಗಿ ಉಳಿಯುವುದು. ಆದರೆ ಅದು ಸತ್ತರೆ ಬಹಳ ಫಲ ಕೊಡುವುದು ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುವನು. ಈ ಲೋಕದಲ್ಲಿ ತನ್ನ ಪ್ರಾಣವನ್ನು ಕಳೆದುಕೊಳ್ಳಲು ಹಿಂಜರಿಯದವನು ನಿತ್ಯಜೀವಕ್ಕಾಗಿ ಅದನ್ನು ಕಾಪಾಡಿಕೊಳ್ಳುವನು. ಯಾರಾದರೂ ನನ್ನ ಸೇವೆಯನ್ನು ಮಾಡುವವನಾದರೆ ನನ್ನನ್ನು ಹಿಂಬಾಲಿಸಲಿ, ಮತ್ತು ಎಲ್ಲಿ ನಾನು ಇರುತ್ತೇನೋ ಅಲ್ಲಿ ನನ್ನ ಸೇವಕನೂ ಸಹ ಇರುವನು. ಯಾರಾದರೂ ನನ್ನ ಸೇವೆಯನ್ನು ಮಾಡುವವನಾದರೆ ನನ್ನ ತಂದೆಯು ಅವನನ್ನು ಸನ್ಮಾನಿಸುವನು.

ಪೇತ್ರನು ಆತನಿಗೆ, “ಕರ್ತನೇ, ನಾನು ಈಗ ನಿನ್ನನ್ನು ಏಕೆ ಹಿಂಬಾಲಿಸಲಾರೆನು? ನಿನಗಾಗಿ ನನ್ನ ಪ್ರಾಣವನ್ನೇ ಕೊಡುವೆನು” ಎಂದು ಹೇಳಿದನು.

ತನ್ನ ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವುದೂ ಇಲ್ಲ.

“ಲೋಕವು ನಿಮ್ಮನ್ನು ದ್ವೇಷ ಮಾಡುವುದಾದರೆ ಅದು ಮೊದಲು ನನ್ನನ್ನು ದ್ವೇಷ ಮಾಡಿತ್ತೆಂದು ನೀವು ತಿಳಿದುಕೊಳ್ಳಿರಿ. ನೀವುಲೋಕದವರಾಗಿದ್ದರೆ ಲೋಕವು ನಿಮ್ಮನ್ನು ತನ್ನವರೆಂದು ಪ್ರೀತಿಸುತ್ತಿತ್ತು. ನೀವಾದರೋ ಲೋಕದ ಕಡೆಯವರಲ್ಲ, ನಾನು ನಿಮ್ಮನ್ನು ಆರಿಸಿಕೊಂಡಿದ್ದರಿಂದಲೇ ಲೋಕವು ನಿಮ್ಮನ್ನು ದ್ವೇಷ ಮಾಡುತ್ತದೆ. ದಣಿಗಿಂತ ಆಳು ದೊಡ್ಡವನಲ್ಲವೆಂಬುದಾಗಿ ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಕ ಮಾಡಿಕೊಳ್ಳಿರಿ. ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು. ಅವರು ನನ್ನ ಮಾತನ್ನು ಕೈಗೊಂಡಿದ್ದರೆ ನಿಮ್ಮ ಮಾತನ್ನು ಸಹ ಕೈಗೊಳ್ಳುತ್ತಿದ್ದರು. ಆದರೆ ಅವರು ನನ್ನನ್ನು ಕಳುಹಿಸಿಕೊಟ್ಟಾತನನ್ನು ತಿಳಿಯದವರಾದ್ದರಿಂದ ಇದನ್ನೆಲ್ಲಾ ನನ್ನ ಹೆಸರಿನ ನಿಮಿತ್ತ ನಿಮಗೆ ಮಾಡುವರು.

ಅವರು ನಿಮ್ಮನ್ನು ಸಭಾಮಂದಿರದಿಂದ ಹೊರಗೆ ಹಾಕುವರು; ಅದಲ್ಲದೆ ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಬಲಿಕೊಟ್ಟೆನೆಂದು ಭಾವಿಸುವ ಕಾಲವು ಬರಲಿದೆ. ಅವರು ತಂದೆಯನ್ನಾದರೂ ನನ್ನನ್ನಾದರೂ ತಿಳಿಯದವರಾಗಿರುವುದರಿಂದ ಇವೆಲ್ಲವುಗಳನ್ನು ನಿಮಗೆ ಮಾಡುವರು. ಆದರೆ ಅವರ ಕಾಲ ಬಂದಾಗ ಆತನು ನಮಗೆ ಇಂಥಿಂಥದ್ದನ್ನು ಹೇಳಿದನಲ್ಲಾ ಎಂದು ನಿಮ್ಮ ನೆನಪಿಗೆ ಬರುವಂತೆ, ನಿಮ್ಮ ಸಂಗಡ ಈ ಮಾತುಗಳನ್ನು ಆಡಿದ್ದೇನೆ. ನಾನು ನಿಮ್ಮ ಸಂಗಡ ಇದ್ದುದರಿಂದ ಮೊದಲು ಇವುಗಳನ್ನು ನಿಮಗೆ ಹೇಳಲಿಲ್ಲ.

ಹಾಗೆಯೇ, ನಿಮಗೂ ಈಗ ದುಃಖವಿದ್ದರೂ ನಾನು ನಿಮ್ಮನ್ನು ತಿರುಗಿ ನೋಡುವೆನು, ಆಗ ನಿಮ್ಮ ಹೃದಯಕ್ಕೆ ಆನಂದವಾಗುವುದು, ಮತ್ತು ನಿಮ್ಮ ಆನಂದವನ್ನು ಯಾರು ನಿಮ್ಮಿಂದ ತೆಗೆದು ಹಾಕಲು ಸಾಧ್ಯವಿಲ್ಲ.

ನೀವು ನನ್ನಲ್ಲಿದ್ದು ಸಮಾಧಾನವನ್ನು ಹೊಂದಿದವರಾಗಿರಬೇಕೆಂದು ಇದನ್ನೆಲ್ಲಾ ನಿಮ್ಮೊಂದಿಗೆ ಹೇಳಿದ್ದೇನೆ.ಲೋಕದಲ್ಲಿ ನಿಮಗೆ ಸಂಕಟಗಳುಂಟು. ಆದರೆ ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ” ಎಂದು ಹೇಳಿದನು.

ನಾನು ನಿನ್ನ ವಾಕ್ಯವನ್ನು ಇವರಿಗೆ ಕೊಟ್ಟಿದ್ದೇನೆ, ನಾನು ಈ ಲೋಕದವನಲ್ಲದವನಾಗಿರುವ ಪ್ರಕಾರ ಇವರೂ ಈ ಲೋಕದವರಲ್ಲ. ಆದಕಾರಣ ಲೋಕವು ಇವರನ್ನು ದ್ವೇಷಿಸುತ್ತದೆ.

ಆನಂತರ ಪಿಲಾತನು ಯೇಸುವನ್ನು ಕರೆದುಕೊಂಡು ಹೋಗಿ ಆತನನ್ನು ಕೊರಡೆಯಿಂದ ಹೊಡೆಸಿದನು. ಸಿಪಾಯಿಗಳು ಮುಳ್ಳಿನ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟ್ಟು, ಕೆನ್ನೇರಳೆ ಬಣ್ಣದ ನಿಲುವಂಗಿಯನ್ನು ಆತನಿಗೆ ತೊಡಿಸಿ, ಆತನ ಬಳಿಗೆ ಬಂದು “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ” ಎಂದು ಹೇಳಿ ತಮ್ಮ ಕೈಗಳಿಂದ ಆತನ ಕೆನ್ನೆಗೆ ಹೊಡೆದರು.

ಮುಖ್ಯಯಾಜಕರೂ ಮತ್ತು ಕಾವಲುಗಾರರು ಆತನನ್ನು ಕಾಣುತ್ತಲೇ, “ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು” ಎಂದು ಕೂಗಿದರು. ಪಿಲಾತನು ಅವರಿಗೆ, “ಬೇಕಾದರೆ ನೀವೇ ಅವನನ್ನು ತೆಗೆದುಕೊಂಡು ಹೋಗಿ ಶಿಲುಬೆಗೆ ಹಾಕಿರಿ, ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲ” ಎಂದನು.

ಅದಕ್ಕೆ ಯೇಸು, “ಮೇಲಿನಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಆದಕಾರಣ ನನ್ನನ್ನು ನಿನಗೆ ಒಪ್ಪಿಸಿದವನಿಗೆ ಹೆಚ್ಚಿನ ಪಾಪವಿದೆ” ಎಂದು ಉತ್ತರ ಕೊಟ್ಟನು.

ಅದಕ್ಕೆ ಅವರು, “ಅವನನ್ನು ಕೊಲ್ಲಿಸು, ಕೊಲ್ಲಿಸು, ಶಿಲುಬೆಗೆ ಹಾಕಿಸು” ಎಂದು ಕೂಗಿದರು. ಅದಕ್ಕೆ ಪಿಲಾತನು, “ನಿಮ್ಮ ಅರಸನನ್ನು ಶಿಲುಬೆಗೆ ಹಾಕಿಸಲೋ?” ಎಂದು ಹೇಳಿದಕ್ಕೆ, ಮುಖ್ಯಯಾಜಕರು, “ಕೈಸರನೇ, ಹೊರತು ನಮಗೆ ಬೇರೆ ಅರಸನಿಲ್ಲ” ಎಂದು ಉತ್ತರ ಕೊಟ್ಟರು. ಆಗ ಅವನು ಯೇಸುವನ್ನು ಶಿಲುಬೆಗೆ ಹಾಕಿಸುವುದಕ್ಕೆ ಅವರ ವಶಕ್ಕೆ ಒಪ್ಪಿಸಿ ಕೊಟ್ಟನು. ಅವರು ಯೇಸುವನ್ನು ತೆಗೆದುಕೊಂಡು ಹೋದರು. ಆತನು ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು “ಕಪಾಲಸ್ಥಳ” ಎಂಬ ಸ್ಥಳಕ್ಕೆ ಹೋದನು. ಇದನ್ನು ಇಬ್ರಿಯ ಭಾಷೆಯಲ್ಲಿ “ಗೊಲ್ಗೊಥಾ” ಎಂದು ಕರೆಯುತ್ತಾರೆ. ಅಲ್ಲಿ ಆತನನ್ನೂ ಆತನ ಜೊತೆಯಲ್ಲಿ ಇನ್ನಿಬ್ಬರನ್ನೂ ಶಿಲುಬೆಗೆ ಹಾಕಿದರು. ಅವರಲ್ಲಿ ಆ ಕಡೆ ಒಬ್ಬನನ್ನು, ಈ ಕಡೆ ಒಬ್ಬನನ್ನು, ನಡುವೆ ಯೇಸುವನ್ನು ಇಟ್ಟರು.

ಯೇಸು ಆ ಹುಳಿರಸವನ್ನು ತೆಗೆದುಕೊಂಡ ಮೇಲೆ, “ತೀರಿತು” ಎಂದು ಹೇಳಿ ತಲೆ ಬಾಗಿಸಿ ತನ್ನ ಆತ್ಮವನ್ನು ಒಪ್ಪಿಸಿಕೊಟ್ಟನು.

“ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ನೀನು ಯುವಕನಾಗಿದ್ದಾಗ ನೀನೇ ನಿನ್ನ ಉಡುಪನ್ನು ಧರಿಸಿಕೊಂಡು ಇಷ್ಟಬಂದ ಕಡೆಗೆ ತಿರುಗಾಡುತ್ತಿದ್ದೀ. ಆದರೆ ನೀನು ಮುದುಕನಾದಾಗ ನಿನ್ನ ಕೈಗಳನ್ನು ಚಾಚುವಿ, ಆಗ ಮತ್ತೊಬ್ಬನು ನಿನ್ನ ನಡುವನ್ನು ಕಟ್ಟಿ ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ಹೊತ್ತುಕೊಂಡು ಹೋಗುವನು” ಎಂದು ಹೇಳಿದನು. ಅವನು ಎಂಥಾ ಮರಣದಿಂದ ದೇವರನ್ನು ಮಹಿಮೆಪಡಿಸುವನು ಎಂಬುದನ್ನು ಯೇಸು ಈ ಮಾತಿನಿಂದ ಸೂಚಿಸಿದನು. ಆತನು ಇದನ್ನು ಹೇಳಿ ಪೇತ್ರನಿಗೆ “ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.

ಯೇಸು ಅವನಿಗೆ “ನಾನು ಬರುವ ತನಕ ಇವನು ಉಳಿದಿರಬೇಕೆಂಬುದು ನನಗೆ ಮನಸ್ಸಾಗಿದ್ದರೆ ಅದರಿಂದ ನಿನಗೇನು? ನೀನು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. ಆದುದರಿಂದ ಆ ಶಿಷ್ಯನು ಸಾಯುವುದಿಲ್ಲವೆಂಬ ಮಾತು ಸಹೋದರರಲ್ಲಿ ಹಬ್ಬಿತು. ಆದರೆ ಅವನು ಸಾಯುವುದಿಲ್ಲವೆಂದು ಯೇಸು ಅವನಿಗೆ ಹೇಳಲಿಲ್ಲ. “ನಾನು ಬರುವ ತನಕ ಅವನು ಉಳಿದಿರಬೇಕೆಂದು ನನಗೆ ಮನಸ್ಸಿದ್ದರೆ ಅದು ನಿನಗೇನು?” ಎಂದು ಮಾತ್ರ ಹೇಳಿದನು.

ಆದರೂ ಆ ಯೇಸು ದೇವರ ಸ್ಥಿರಸಂಕಲ್ಪಕ್ಕೂ, ಭವಿಷ್ಯದ ಜ್ಞಾನಕ್ಕೂ ಅನುಸಾರವಾಗಿ ಒಪ್ಪಿಸಲ್ಪಟ್ಟಿರಲು ನೀವು ಅನ್ಯಜನರ ಕೈಯಿಂದ ಆತನನ್ನು ಶಿಲುಬೆಗೆ ಹಾಕಿ ಮೊಳೆ ಜಡಿದು ಕೊಂದಿರಿ. ಆತನನ್ನು ದೇವರು ಮರಣದ ವೇದನೆಗಳಿಂದ ಬಿಡಿಸಿ ಎಬ್ಬಿಸಿದನು; ಏಕೆಂದರೆ ಮರಣವು ಆತನನ್ನು ಹಿಡಿದುಕೊಂಡಿರುವುದು ಅಸಾಧ್ಯವಾಗಿತ್ತು.

ಅಸೂಯೆ ತುಂಬಿದವರಾಗಿ ಅಪೊಸ್ತಲರನ್ನು ಹಿಡಿದು ಸೆರೆಯಲ್ಲಿಟ್ಟರು.

ಸಭಿಕರು ಈ ಮಾತನ್ನು ಕೇಳಿ ರೌದ್ರಗೊಂಡು ಅವರನ್ನು ಕೊಲ್ಲಿಸಬೇಕೆಂದು ಆಲೋಚಿಸಿದರು.

ಅವರು ಅವನ ಮಾತಿಗೆ ಒಪ್ಪಿ ಅಪೊಸ್ತಲರನ್ನು ಕರೆಯಿಸಿ, ಹೊಡಿಸಿ ಯೇಸುವಿನ ಹೆಸರನ್ನು ಹೇಳಿ ಮಾತನಾಡಲೇಬಾರದೆಂದು ಅಪ್ಪಣೆಕೊಟ್ಟು ಅವರನ್ನು ಬಿಟ್ಟುಬಿಟ್ಟರು. ಅಪೊಸ್ತಲರು ತಾವು ಯೇಸುವಿನ ಹೆಸರಿನ ನಿಮಿತ್ತವಾಗಿ ಅವಮಾನಪಡುವುದಕ್ಕೆ ಯೋಗ್ಯರೆನಿಸಿಕೊಂಡೆವೆಂದು ಸಂತೋಷಪಟ್ಟರು.

“ಹಠಮಾರಿಗಳೇ, ಮನಶುದ್ಧಿಯೂ, ಕರ್ಣಶುದ್ಧಿಯೂ ಇಲ್ಲದವರೇ, ನಿಮ್ಮ ಪೂರ್ವಿಕರು ಹೇಗೋ ಹಾಗೆಯೇ ನೀವೂ ಯಾವಾಗಲೂ ಪವಿತ್ರಾತ್ಮನಿಗೆ ಎದುರಾಗಿ ನಡೆಯುವವರಾಗಿದ್ದೀರಿ. ಪ್ರವಾದಿಗಳಲ್ಲಿ ನಿಮ್ಮ ಪೂರ್ವಿಕರು ಹಿಂಸೆಪಡಿಸದವರು ಯಾರಿದ್ದಾರೆ? ಅವರು ಆ ನೀತಿಸ್ವರೂಪನಾದ ಕರ್ತನ ಆಗಮನದ ವಿಷಯದಲ್ಲಿ ಮುಂತಿಳಿಸಿದವರನ್ನು ಕೊಂದರು, ನೀವು ಈಗ ಆತನನ್ನು ಹಿಡಿದುಕೊಟ್ಟು ಕೊಲ್ಲಿಸಿದ್ದೀರಿ. ದೇವದೂತರ ಮೂಲಕ ನೇಮಕವಾದ ಧರ್ಮಶಾಸ್ತ್ರವನ್ನು ನೀವು ಹೊಂದಿದವರಾದರೂ ಅದನ್ನು ಅನುಸರಿಸುವುದಿಲ್ಲ” ಎಂದು ಹೇಳಿದನು. ಈ ಮಾತುಗಳನ್ನು ಕೇಳಿ ಅವರು ರೌದ್ರಮನಸ್ಸುಳ್ಳವರಾಗಿ ಅವನ ಮೇಲೆ ಹಲ್ಲು ಕಡಿದರು. ಆದರೆ ಅವನು ಪವಿತ್ರಾತ್ಮಭರಿತನಾಗಿ ಆಕಾಶದ ಕಡೆಗೆ ದೃಷ್ಟಿಸಿ ನೋಡಿ, ದೇವರ ಮಹಿಮೆಯನ್ನೂ, ದೇವರ ಬಲಗಡೆಯಲ್ಲಿ ನಿಂತಿದ್ದ ಯೇಸುವನ್ನೂ ಕಂಡು; “ಅಗೋ, ಆಕಾಶವು ತೆರೆದಿರುವುದನ್ನೂ, ಮನುಷ್ಯಕುಮಾರನು ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ನಾನು ನೋಡುತ್ತಿದ್ದೇನೆ” ಎಂದು ಹೇಳಿದನು.

ಆದರೆ ಅವರು ಮಹಾಶಬ್ದದಿಂದ ಕೂಗಿ, ಕಿವಿಗಳನ್ನು ಮುಚ್ಚಿಕೊಂಡು, ಒಟ್ಟಾಗಿ ಅವನ ಮೇಲೆ ಬಿದ್ದು, ಅವನನ್ನು ಊರ ಹೊರಕ್ಕೆ ನೂಕಿಕೊಂಡು ಹೋಗಿ ಕೊಲ್ಲುವುದಕ್ಕೆ ಕಲ್ಲೆಸೆದರು. ಸಾಕ್ಷಿಯವರು ತಮ್ಮ ಬಟ್ಟೆಗಳನ್ನು ತೆಗೆದು ಸೌಲನೆಂಬ ಒಬ್ಬ ಯೌವನಸ್ಥನ ಕಾಲುಗಳ ಬಳಿಯಲ್ಲಿ ಇಟ್ಟರು. ಅವರು ಸ್ತೆಫನನ ಮೇಲೆ ಕಲ್ಲೆಸೆಯುತ್ತಾ ಇರಲು, ಅವನು ಕರ್ತನ ಹೆಸರನ್ನು ಹೇಳಿ, “ಕರ್ತನಾದ, ಯೇಸುವೇ, ನನ್ನಾತ್ಮವನ್ನು ಸೇರಿಸಿಕೋ” ಎಂದು ಪ್ರಾರ್ಥಿಸಿ, ಮೊಣಕಾಲೂರಿ, “ಕರ್ತನೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡವೆಂದು” ಮಹಾಶಬ್ದದಿಂದ ಕೂಗಿದನು. ಇದನ್ನು ಹೇಳಿ ನಿದ್ರೆಹೋದನು.

ಸೌಲನಿಗೆ ಅವನ ಕೊಲೆಗೆ ಸಮ್ಮತಿಸಿದನು. ಆ ದಿನದಲ್ಲಿ ಯೆರೂಸಲೇಮಿನಲ್ಲಿದ್ದ ಸಭೆಗೆ ದೊಡ್ಡ ಹಿಂಸೆ ಉಂಟಾಯಿತು. ಅಪೊಸ್ತಲರು ಹೊರತಾಗಿ ಎಲ್ಲರೂ ಯೂದಾಯ, ಸಮಾರ್ಯ ಸೀಮೆಗಳಿಗೆ ಚದರಿಹೋದರು. ಭಕ್ತರಾದ ಜನರು ಸ್ತೆಫನನ ದೇಹವನ್ನು ಹೂಣಿಟ್ಟು ಅವನಿಗೋಸ್ಕರ ಬಹಳವಾಗಿ ಗೋಳಾಡಿದರು. ಆದರೆ ಸೌಲನು ಮನೆಮನೆಗಳಿಗೆ ನುಗ್ಗಿ ಗಂಡಸರನ್ನೂ ಹೆಂಗಸರನ್ನೂ ಎಳೆದುಕೊಂಡು ಬಂದು ಸೆರೆಮನೆಗೆ ಹಾಕಿಸಿ ಸಭೆಯನ್ನು ನಾಶಮಾಡುತ್ತಿದ್ದನು.

ಅವನು ಓದುತ್ತಿದ್ದ ಶಾಸ್ತ್ರವಚನವು ಯಾವುದೆಂದರೆ, “ವಧಿಸುವಸ್ಥಾನಕ್ಕೆ ಒಯ್ಯಲ್ಪಡುವ ಕುರಿಮರಿಯಂತೆ ಆತನು ಒಯ್ಯಲ್ಪಟ್ಟನು; ಮತ್ತು ಕುರಿಮರಿಯು ಉಣ್ಣೆ ಕತ್ತರಿಸುವವನ ಮುಂದೆ ಮೌನವಾಗಿರುವಂತೆ ಆತನು ಬಾಯಿ ತೆರೆಯದೆ ಮೌನವಾಗಿದ್ದನು. ಆತನಿಗಾದ ಅವಮಾನದ ನ್ಯಾಯವಿಚಾರಣೆಯಲ್ಲಿ ಆತನಿಗೆ ನ್ಯಾಯ ಸಿಗಲಿಲ್ಲ. ಆತನ ಪೀಳಿಗೆಯ ಕುರಿತಾಗಿ ಯಾರು ವಿವರಿಸಬಲ್ಲರು? ಆತನ ಜೀವವನ್ನು ಭೂಮಿಯಿಂದ ತೆಗೆದುಬಿಟ್ಟರಲ್ಲಾ” ಎಂಬುದೇ.

ಸೌಲನು ಇನ್ನೂ ಕರ್ತನ ಶಿಷ್ಯರ ಮೇಲೆ ಕೋಪವುಳ್ಳನಾಗಿದ್ದು ಬೆದರಿಕೆಯ ಮಾತುಗಳನ್ನಾಡುತ್ತಾ ಅವರನ್ನು ಸಂಹರಿಸಬೇಕೆಂದು ಆಲೋಚಿಸುತ್ತಾ ಮಹಾಯಾಜಕನ ಬಳಿಗೆ ಹೋಗಿ; ಈ ಮಾರ್ಗವನ್ನು ಹಿಡಿದವರು ಯಾರಾದರೂ ಸಿಕ್ಕಿದರೆ ಅವರು ಗಂಡಸರಾದರೂ ಸರಿಯೇ, ಹೆಂಗಸರಾದರೂ ಸರಿಯೇ ನಾನು ಅವರಿಗೆ ಬೇಡಿಹಾಕಿಸಿ ಯೆರೂಸಲೇಮಿಗೆ ತರುವಂತೆ, ದಮಸ್ಕದಲ್ಲಿರುವ ಸಭಾಮಂದಿರದವರಿಗೆ ನೀನು, ಪತ್ರವನ್ನು ಕೊಡಬೇಕು ಎಂದು ಅವನನ್ನು ಬೇಡಿಕೊಂಡನು. ಅವನು ಪ್ರಯಾಣ ಮಾಡುತ್ತಾ ದಮಸ್ಕದ ಹತ್ತಿರಕ್ಕೆ ಬರಲು, ಫಕ್ಕನೆ ಆಕಾಶದಿಂದ ಒಂದು ಬೆಳಕು ಅವನ ಸುತ್ತಲು ಮಿಂಚಿತು. ಅವನು ನೆಲಕ್ಕೆ ಬಿದ್ದನು. ಆಗ, “ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸೆಪಡಿಸುತ್ತೀ?” ಎಂದು ಹೇಳುವ ವಾಣಿಯನ್ನು ಕೇಳಿದನು. ಅದಕ್ಕೆ ಸೌಲನು;, “ಕರ್ತನೇ, ನೀನಾರು?” ಎಂದು ಕೇಳಿದ್ದಕ್ಕೆ, ಕರ್ತನು, “ನೀನು ಹಿಂಸೆಪಡಿಸುವ ಯೇಸುವೇ ನಾನು;

ಅನೇಕ ದಿನಗಳು ಕಳೆದ ಮೇಲೆ, ಯೆಹೂದ್ಯರು ಅವನನ್ನು ಕೊಲ್ಲಬೇಕೆಂದು ಆಲೋಚನೆ ಮಾಡಿಕೊಂಡರು. ಆದರೆ ಅವರ ಗೂಢಾಲೋಚನೆಯು ಸೌಲನಿಗೆ ತಿಳಿದುಬಂದಿತು. ಅವನನ್ನು ಕೊಲ್ಲುವುದಕ್ಕಾಗಿ ಅವರು ಹಗಲಿರುಳೂ ಪಟ್ಟಣದ ಬಾಗಿಲುಗಳನ್ನು ಕಾಯುತ್ತಿದ್ದರು.

ಮತ್ತು ಗ್ರೀಕ್ ಭಾಷೆಯನ್ನಾಡುವ ಯೆಹೂದ್ಯರ ಸಂಗಡ ಮಾತನಾಡಿ ತರ್ಕಮಾಡುತ್ತಿದ್ದನು. ಆದರೆ ಅವರು ಅವನನ್ನು ಕೊಲ್ಲುವುದಕ್ಕೆ ಪ್ರಯತ್ನ ಮಾಡುತ್ತಿದ್ದರು.

ಆ ಸಮಯದಲ್ಲೇ ಅರಸನಾದ ಹೆರೋದನು ಸಭೆಯವರಲ್ಲಿ ಕೆಲವರನ್ನು ಹಿಂಸೆಪಡಿಸುವುದಕ್ಕೆ ಕೈಹಾಕಿದನು. ಯೋಹಾನನ ಅಣ್ಣನಾದ ಯಾಕೋಬನನ್ನು ಕತ್ತಿಯಿಂದ ಕೊಲ್ಲಿಸಿದನು. ಇದು ಯೆಹೂದ್ಯರಿಗೆ ಮೆಚ್ಚಿಕೆಯಾಗಿದೆ ಎಂದು ತಿಳಿದು, ಅಷ್ಟಕ್ಕೆ ನಿಲ್ಲದೆ ಪೇತ್ರನನ್ನೂ ಬಂಧಿಸಿದನು. ಆ ಕಾಲದಲ್ಲಿ ಪಸ್ಕಹಬ್ಬ ಅಂದರೆ ಹುಳಿಯಿಲ್ಲದ ರೊಟ್ಟಿಯ ಹಬ್ಬ ನಡೆಯುತ್ತಿತ್ತು. ಅವನನ್ನು ಪಸ್ಕ ಹಬ್ಬವಾದ ಮೇಲೆ ಜನರ ಮುಂದೆ ತರಿಸಬೇಕೆಂಬ ಯೋಚನೆಯಿಂದ ಸೆರೆಯಲ್ಲಿ ಹಾಕಿಸಿ ಅವನನ್ನು ಕಾಯಲಿಕ್ಕೆ ನಾಲ್ಕು ನಾಲ್ಕು ಸಿಪಾಯಿಗಳಿದ್ದ ನಾಲ್ಕು ಗುಂಪುಗಳ ವಶಕ್ಕೆ ಕೊಟ್ಟನು.

ಅನ್ಯಜನರೂ, ಯೆಹೂದ್ಯರೂ ಕೂಡಿ ತಮ್ಮ ಅಧಿಪತಿಗಳ ಸಮ್ಮತಿಯಿಂದ ಅಪೊಸ್ತಲರನ್ನು ಪೀಡಿಸುವುದಕ್ಕೂ, ಕಲ್ಲೆಸೆದು ಕೊಲ್ಲುವುದಕ್ಕೂ ಪ್ರಯತ್ನಿಸಿದಾಗ, ಅಪೊಸ್ತಲರು ಅದನ್ನು ತಿಳಿದು ಅಲ್ಲಿಂದ ಓಡಿಹೋಗಿ ಲುಕವೋನ್ಯದಲ್ಲಿದ್ದ ಲುಸ್ತ್ರ ಮತ್ತು ದೆರ್ಬೆ ಎಂಬ ಊರುಗಳಿಗೂ,

ಅಲ್ಲಿ ಶಿಷ್ಯರ ಮನಸ್ಸುಗಳನ್ನು ದೃಢಪಡಿಸಿ ಕ್ರಿಸ್ತ ನಂಬಿಕೆಯಲ್ಲಿ ಸ್ಥಿರವಾಗಿ ನಿಲ್ಲಿರಿ ಎಂದು ಪ್ರೋತ್ಸಾಹಿಸಿದರು. ನಾವು ಬಹು ಸಂಕಟಗಳನ್ನು ತಾಳಿ ದೇವರ ರಾಜ್ಯದೊಳಗೆ ಸೇರಬೇಕಾಗಿದೆ ಎಂದು ಬೋಧಿಸಿದರು.

ನಮ್ಮ ಪ್ರಿಯ ಬಾರ್ನಬ ಪೌಲರ ಜೊತೆಯಲ್ಲಿ ನಿಮ್ಮ ಬಳಿಗೆ ಕಳುಹಿಸಿ ಕೊಡುವುದು ಯುಕ್ತವೆಂದು ನಾವೆಲ್ಲರೂ ಒಮ್ಮನಸ್ಸಿನಿಂದ ತೀರ್ಮಾನಿಸಿದೆವು.

ಆಗ ಜನರು ಗುಂಪಾಗಿ ಕೂಡಿ, ಅವರಿಗೆ ವಿರೋಧವಾಗಿ ಒಟ್ಟಾಗಿ ಎದ್ದರು. ಮತ್ತು ಅಧಿಕಾರಿಗಳು; ಇವರ ವಸ್ತ್ರಗಳನ್ನು ಹರಿದು, ತೆಗೆದು, ಛಡಿಗಳಿಂದ ಹೊಡೆಸಬೇಕೆಂದು ಅಪ್ಪಣೆಕೊಟ್ಟರು. ಅವರಿಗೆ ಬಹಳ ಹೊಡೆತಗಳನ್ನು ಹೊಡಿಸಿದ ಮೇಲೆ ಸೆರೆಮನೆಯೊಳಗೆ ಹಾಕಿಸಿ, ಇವರನ್ನು ಭದ್ರವಾಗಿ ಕಾಯಬೇಕೆಂದು ಸೆರೆಯ ಯಜಮಾನನಿಗೆ ಆಜ್ಞಾಪಿಸಿದರು. ಅವನು ಇಂಥಾ ಅಪ್ಪಣೆಯನ್ನು ಹೊಂದಿ ಅವರನ್ನು ಸೆರೆಮನೆಯ ಒಳಕೋಣೆಯಲ್ಲಿ ಹಾಕಿ ಅವರ ಕಾಲುಗಳಿಗೆ ಕೋಳವನ್ನು ಹಾಕಿ ಬಿಗಿಸಿದನು.

ದೇವರು ಒಬ್ಬ ಮನುಷ್ಯನಿಂದ ಎಲ್ಲಾ ಜನಾಂಗಗಳನ್ನು ಸೃಷ್ಟಿಸಿ, ಅವರವರು ಇರತಕ್ಕ ಕಾಲಗಳನ್ನೂ ಹಾಗು ಅವರವರ ನಿವಾಸಗಳ ಮೇರೆಗಳನ್ನೂ ನಿಷ್ಕರ್ಷಿಸಿ ಭೂಮಂಡಲದಲ್ಲೆಲ್ಲಾ ಅವರನ್ನು ಇರಿಸಿ, ಒಂದು ವೇಳೆ ಅವರು ತಡವಾಗಿಯಾದರೂ ತನ್ನನ್ನು ಕಂಡುಕೊಂಡಾರೇನೋ ಎಂದು ತನ್ನನ್ನು ಹುಡುಕುವವರನ್ನಾಗಿ ಮಾಡಿದನು. ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ. ಏಕೆಂದರೆ ಆತನಲ್ಲಿಯೇ ನಾವು ಜೀವಿಸುತ್ತೇವೆ, ಚಲಿಸುತ್ತೇವೆ ಮತ್ತು ಇರುತ್ತೇವೆ. ನಿಮ್ಮ ಕವಿಗಳಲ್ಲಿ ಕೆಲವರು, ‘ನಾವು ಆತನ ಸಂತಾನದವರೇ’ ಎಂದು ಹೇಳಿದ್ದಾರೆ.

ಇಗೋ, ನಾನು ಈಗ ಪವಿತ್ರಾತ್ಮನ ನಿರ್ಬಂಧವುಳ್ಳವನಾಗಿ ಯೆರೂಸಲೇಮಿಗೆ ಹೋಗುತ್ತಿದ್ದೇನೆ. ಅಲ್ಲಿ ನನಗೆ ಏನು ಸಂಭವಿಸುವುದೋ ನಾನರಿಯೆನು. ನಿನಗೆ ಬೇಡಿಗಳೂ, ಹಿಂಸೆಗಳೂ ಕಾದುಕೊಂಡಿವೆ ಎಂದು ಪವಿತ್ರಾತ್ಮನು ಎಲ್ಲಾ ಪಟ್ಟಣಗಳಲ್ಲಿಯೂ ನನಗೆ ಎಚ್ಚರಿಕೆ ನೀಡಿದ್ದಾನೆ ಎಂಬುದನ್ನು ಬಲ್ಲೆನು. ಆದರೆ ಪ್ರಾಣವನ್ನು ಉಳಿಸಿಕೊಳ್ಳುವುದೇ ಶ್ರೇಷ್ಠವೆಂದು ನಾನು ಎಣಿಸುವುದಿಲ್ಲ; ದೇವರ ಕೃಪೆಯ ವಿಷಯವಾದ ಸುವಾರ್ತೆಯನ್ನು ಆಸಕ್ತಿಯಿಂದ ಸಾಕ್ಷ್ಯಪೂರಕವಾಗಿ ಸಾರುವ ನಿಯೋಗವನ್ನು ಕರ್ತನಾದ ಯೇಸುವಿನಿಂದ ನಾನು ಹೊಂದಿದ್ದೇನೆ ಈ ನಿಯೋಗವನ್ನು ಪೂರ್ಣಗೊಳಿಸುವುದೊಂದೇ ನನ್ನ ಅಪೇಕ್ಷೆಯಾಗಿದೆ.

ಅದಕ್ಕೆ ಪೌಲನು; “ನೀವು ದುಃಖಿಸುತ್ತಾ ಏಕೆ ನನ್ನ ಎದೆಯೊಡೆಯುವಂತೆ ಮಾಡುತ್ತೀರಿ? ನಾನು ಕರ್ತನಾದ ಯೇಸುವಿನ ಹೆಸರಿನ ನಿಮಿತ್ತವಾಗಿ ಯೆರೂಸಲೇಮಿನಲ್ಲಿ ಬೇಡೀಹಾಕಿಸಿಕೊಳ್ಳುವುದಕ್ಕೆ ಮಾತ್ರವಲ್ಲ ಸಾಯುವುದಕ್ಕೂ ಸಿದ್ಧವಾಗಿದ್ದೇನೆ” ಅಂದನು. ಅವನು ಒಪ್ಪದೆ ಇದ್ದುದರಿಂದ; “ಕರ್ತನ ಚಿತ್ತದಂತೆ ಆಗಲಿ” ಎಂದು ಹೇಳಿ ನಾವು ಸುಮ್ಮನಾದೆವು.

ಅವರು ಅವನನ್ನು ಕೊಲ್ಲುವುದಕ್ಕೆ ಯತ್ನಿಸುತ್ತಿದ್ದಾಗ ಯೆರೂಸಲೇಮಿನಲ್ಲೆಲ್ಲಾ ಗಲಿಬಿಲಿಯಾಯಿತೆಂದು ಪಟಾಲಮಿನ ಸಹಸ್ರಾಧಿಪತಿಗೆ ವರದಿ ಬಂದಿತು.

ಈ ಮಾರ್ಗದವರನ್ನು ಹಿಂಸಿಸುವವನಾಗಿ ಗಂಡಸರಿಗೂ, ಹೆಂಗಸರಿಗೂ ಬೇಡಿಹಾಕಿಸುತ್ತಾ, ಅವರನ್ನು ಸೆರೆಮನೆಗಳಿಗೆ ಹಾಕಿಸುತ್ತಾ ಇದ್ದೆನು, ಕೊಲೆ ಮಾಡಲಿಕ್ಕೂ ಹಿಂಜರಿಯದೆ ಹಿಂಸಿಸುತ್ತಿದ್ದೆನು. ಈ ವಿಷಯದಲ್ಲಿ ಮಹಾಯಾಜಕನೂ, ಹಿರೀಸಭೆಯರೆಲ್ಲರೂ ಸಾಕ್ಷಿಗಳಾಗಿದ್ದಾರೆ; ಅವರಿಂದಲೇ ನಾನು ದಮಸ್ಕದಲ್ಲಿದ್ದ ಸಹೋದರರಿಗೆ ಪತ್ರಗಳನ್ನು ತೆಗೆದುಕೊಂಡು, ಅಲ್ಲಿಗೆ ಹೋದವರನ್ನೂ ಬೇಡಿಗಳಿಂದ ಬಂಧಿಸಿ ದಂಡನೆಗಾಗಿ ಯೆರೂಸಲೇಮಿಗೆ ತರಬೇಕೆಂದು ಹೊರಟವನು.

“ಅದಕ್ಕೆ ನಾನು; ‘ಕರ್ತನೇ, ಎಲ್ಲಾ ಸಭಾಮಂದಿರಗಳಲ್ಲಿ, ನಿನ್ನ ಮೇಲೆ ನಂಬಿಕೆಯಿಟ್ಟವರನ್ನು, ನಾನು ಸೆರೆಮನೆಯಲ್ಲಿ ಹಾಕಿಸುತ್ತಾ, ಹೊಡಿಸುತ್ತಾ ಇದ್ದೆನೆಂಬುದನ್ನು, ಮತ್ತು ನಿನ್ನ ಸಾಕ್ಷಿಯಾದ ಸ್ತೆಫನನ ರಕ್ತವು ಚೆಲ್ಲಿಸಲ್ಪಟ್ಟಾಗ, ನಾನೂ ಹತ್ತಿರ ನಿಂತು ಅದನ್ನು ಸಮ್ಮತಿಸಿ, ಅವನನ್ನು ಕೊಂದವರ ವಸ್ತ್ರಗಳನ್ನು ಕಾಯುತ್ತಿದ್ದೆನಲ್ಲಾ’ ಎಂಬುದು ಅವರೇ ಬಲ್ಲವರಾಗಿದ್ದಾರೆ.

ಬೆಳಗಾದ ಮೇಲೆ ಯೆಹೂದ್ಯರು ಒಳಸಂಚು ಮಾಡಿ; ನಾವು ಪೌಲನನ್ನು ಕೊಲ್ಲುವ ತನಕ ಅನ್ನಪಾನವೇನೂ ಮುಟ್ಟುವುದಿಲ್ಲವೆಂದು ಶಪಥಮಾಡಿಕೊಂಡರು. ಹೀಗೆ ಮಾಡಿದವರು ನಲವತ್ತು ಮಂದಿಗಿಂತ ಹೆಚ್ಚಾಗಿದ್ದರು. ಇವರು ಮುಖ್ಯಯಾಜಕರ ಮತ್ತು ಹಿರಿಯರ ಬಳಿಗೆ ಹೋಗಿ; “ನಾವು ಪೌಲನನ್ನು ಕೊಲ್ಲುವ ತನಕ ಬಾಯಲ್ಲಿ ಏನೂ ಹಾಕುವುದಿಲ್ಲವೆಂದು ಕಠಿಣ ಶಪಥವನ್ನು ಮಾಡಿಕೊಂಡಿದ್ದೇವೆ. ಆದುದರಿಂದ ನೀವು ಸಭೆಯವರ ಸಹಿತ ಸಹಸ್ರಾಧಿಪತಿಯ ಬಳಿಗೆ ಹೋಗಿ, ಪೌಲನ ಸಂಗತಿಯನ್ನು ಇನ್ನೂ ಸೂಕ್ಷ್ಮವಾಗಿ ಪರಿಶೀಲಿಸಬೇಕೆಂದು ನೆವಹೇಳಿ ಅವನನ್ನು ಕೋಟೆಯೊಳಗೆ ನಿಮ್ಮ ಬಳಿಗೆ ಕರೆದುಕೊಂಡು ಬರುವ ಹಾಗೆ ಕೇಳಿಕೊಳ್ಳಬೇಕು. ನಾವಾದರೋ, ಅವನು ಹತ್ತಿರ ಬರುವುದಕ್ಕಿಂತ ಮೊದಲೇ ಅವನನ್ನು ಕೊಲ್ಲುವುದಕ್ಕೆ ಸಿದ್ಧವಾಗಿದ್ದೇವೆ” ಅಂದರು.

ಒಂದು ಕಾಲದಲ್ಲಿ ನಜರೇತಿನ ಯೇಸುವಿನ ಹೆಸರಿಗೆ ವಿರುದ್ಧವಾಗಿ ಅನೇಕ ಕಾರ್ಯಗಳನ್ನು ನಡೆಸಬೇಕೆಂದು ನಾನೂ ಯೋಚಿಸಿಕೊಂಡಿದ್ದೆನು. ಯೆರೂಸಲೇಮಿನಲ್ಲಿ ಹಾಗೆಯೇ ಮಾಡಿದ್ದೆನು. ಮುಖ್ಯಯಾಜಕರಿಂದ, ಅಧಿಕಾರವನ್ನು ಪಡೆದು ದೇವಜನರಲ್ಲಿ ಅನೇಕರನ್ನು ಸೆರೆಮನೆಗಳಲ್ಲಿ ಇರಿಸಿ, ಅವರಿಗೆ ಮರಣದ ತೀರ್ಪಾದಾಗ, ನಾನು ಅದಕ್ಕೆ ಸಮ್ಮತಿಯನ್ನು ಸೂಚಿಸಿದೆನು. ಎಲ್ಲಾ ಸಭಾಮಂದಿರಗಳಲ್ಲಿಯೂ, ನಾನು ಅನೇಕ ಸಾರಿ ಅವರನ್ನು ದಂಡಿಸಿ ಅವರಿಂದ ದೇವದೂಷಣೆಯ ಮಾತುಗಳನ್ನಾಡಿಸುವುದಕ್ಕೆ ಪ್ರಯತ್ನಿಸಿದೆನು. ಇದಲ್ಲದೆ ಅವರ ಮೇಲೆ ಬಹು ಕೋಪಾವೇಶವುಳ್ಳವನಾಗಿ ಬೇರೆ ಪಟ್ಟಣಗಳವರೆಗೂ ಹೋಗಿ, ಅವರನ್ನು ಹಿಂಸೆಪಡಿಸಿದೆನು.

ಈ ಕಾರಣದಿಂದ ಯೆಹೂದ್ಯರು ದೇವಾಲಯದಲ್ಲಿ ನನ್ನನ್ನು ಹಿಡಿದು ಕೊಲ್ಲುವುದಕ್ಕೆ ಪ್ರಯತ್ನಿಸಿದರು.

ಯಾರು ಪ್ರಶಂಸೆ, ಗೌರವ, ಮತ್ತು ಭ್ರಷ್ಟರಹಿತ ಜೀವನ ಹೊಂದಬೇಕೆಂದು ಒಳ್ಳೆಯದನ್ನು ಬೇಸರಗೊಳ್ಳದೆ ಮಾಡುತ್ತಾರೋ, ಅವರಿಗೆ ನಿತ್ಯಜೀವವನ್ನು ಕೊಡುವನು.

ಇದು ಮಾತ್ರವಲ್ಲದೆ ನಮಗೆ ಉಂಟಾಗುವ ಕಷ್ಟಸಂಕಟಗಳಲ್ಲಿಯೂ ಉಲ್ಲಾಸವಾಗಿದ್ದೇವೆ.

ನಾವು ಬಲಹೀನರಾಗಿದ್ದಾಗಲೇ ಕ್ರಿಸ್ತನು ನಿಯಮಿತ ಕಾಲದಲ್ಲಿ ಭಕ್ತಿಹೀನರಿಗೋಸ್ಕರ ಪ್ರಾಣಕೊಟ್ಟನು. ನೀತಿವಂತರಿಗೋಸ್ಕರ ಯಾರಾದರೂ ಪ್ರಾಣಕೊಡುವುದು ಅಪರೂಪ. ನಿಜವಾಗಿಯೂ ಒಳ್ಳೆಯವನಿಗಾಗಿ ಪ್ರಾಣಕೊಡುವುದಕ್ಕೆ ಯಾವನಾದರೂ ಧೈರ್ಯಮಾಡಿದರೂ ಮಾಡಬಹುದು. ಆದರೆ ನಾವು ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ದೃಢಪಡಿಸಿದ್ದಾನೆ. ಈಗ ನಾವು ಆತನ ರಕ್ತದಿಂದ ನೀತಿವಂತರಾಗಿರಲಾಗಿ ಆತನ ಮೂಲಕವಾಗಿ ದೇವರ ಕೋಪದಿಂದ ಖಂಡಿತವಾಗಿಯೂ ರಕ್ಷಣೆಯಾಗುವುದು ಅಷ್ಟೇ ನಿಶ್ಚಯವಲ್ಲವೇ? ನಾವು ದೇವರಿಗೆ ಶತ್ರುಗಳಾಗಿದ್ದಾಗಲೇ ನಮಗೆ ಆತನ ಮಗನ ಮರಣದ ಮೂಲಕ ಆತನೊಂದಿಗೆ ಸಂಧಾನವಾಯಿತು ಆತನ ಕೂಡ ಸಂಧಾನವಾದ ನಮಗೆ ಮಗನ ಜೀವದಿಂದ ರಕ್ಷಣೆಯಾಗುವುದು ಅಷ್ಟೇ ನಿಶ್ಚಯವಲ್ಲವೇ?

ಕ್ರಿಸ್ತ ಯೇಸುವಿನೊಂದಿಗೆ ಸೇರುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡವರಾದ ನಾವೆಲ್ಲರೂ ಆತನ ಮರಣದಲ್ಲಿ ಪಾಲುಗಾರರಾಗುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡೆವೆಂದು ನಿಮಗೆ ತಿಳಿಯದೋ? ಹೀಗಿರಲಾಗಿ ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಆತನ ಮರಣದಲ್ಲಿ ಪಾಲುಗಾರರಾಗಿ ಆತನೊಂದಿಗೆ ಹೂಣಲ್ಪಟ್ಟೆವು. ಆದ್ದರಿಂದ ಕ್ರಿಸ್ತನು ಸತ್ತು ತಂದೆಯ ಮಹಿಮೆಯಿಂದ ಜೀವಿತನಾಗಿ ಎಬ್ಬಿಸಲ್ಪಟ್ಟಂತೆಯೇ ನಾವು ಕೂಡ ಜೀವದಿಂದೆದ್ದು ನೂತನ ಜೀವದಲ್ಲಿ ನಡೆದುಕೊಳ್ಳಬೇಕು. ಹೇಗೆಂದರೆ ನಾವು ಆತನ ಮರಣಕ್ಕೆ ಸದೃಶ್ಯವಾದ ಮರಣವನ್ನು ಹೊಂದಿ ಆತನಲ್ಲಿ ಐಕ್ಯವಾಗಿದ್ದರೆ ಆತನ ಪುನರುತ್ಥಾನಕ್ಕೆ ಸದೃಶವಾದ ಪುನರುತ್ಥಾನವನ್ನೂ ಹೊಂದಿ ಆತನಲ್ಲಿ ಐಕ್ಯವಾಗುವೆವು. ನಮಗೆ ತಿಳಿದಿರುವಂತೆ, ನಮ್ಮ ಪಾಪಾಧೀನಸ್ವಭಾವವು ನಾಶವಾಗಿ, ನಾವು ಇನ್ನೂ ಪಾಪದ ವಶದಲ್ಲಿರದಂತೆ ನಮ್ಮ ಪೂರ್ವಸ್ವಭಾವವು ಕ್ರಿಸ್ತನ ಕೂಡ ಶಿಲುಬೆಗೆ ಹಾಕಲ್ಪಟ್ಟಿದೆ. ಸತ್ತವನು ಪಾಪದ ವಶದಿಂದ ಬಿಡುಗಡೆ ಹೊಂದಿದ್ದಾನೆ.

ಇದಲ್ಲದೆ ನಾವು ಕ್ರಿಸ್ತನೊಡನೆ ಸತ್ತ ಪಕ್ಷದಲ್ಲಿ ಆತನೊಡನೆ ಜೀವಿಸುವೆವೆಂದು ನಂಬುತ್ತೇವೆ. ನಮಗೆ ತಿಳಿದಿರುವಂತೆ, ಕ್ರಿಸ್ತನು ಸತ್ತ ಮೇಲೆ ಜೀವಿತನಾಗಿ ಎದ್ದು ಬಂದದ್ದರಿಂದ ಆತನು ಇನ್ನು ಮುಂದೆ ಸಾಯತಕ್ಕವನಲ್ಲ, ಮರಣವು ಆತನ ಮೇಲೆ ಆಳ್ವಿಕೆ ನಡಿಸುವುದಿಲ್ಲ. ಆತನು ಸತ್ತದ್ದು ಒಂದೇ ಸಾರಿ ಅದು ಪಾಪದ ಪಾಲಿಗೆ; ಆತನು ಜೀವಿಸುವುದು ದೇವರಿಗಾಗಿಯೇ, ಅದೇ ಪ್ರಕಾರ ನೀವು ಸಹ ನಿಮ್ಮನ್ನು ಕ್ರಿಸ್ತ ಯೇಸುವಿನ ಐಕ್ಯದಿಂದ ಪಾಪದ ಪಾಲಿಗೆ ಸತ್ತವರೂ, ದೇವರಿಗಾಗಿ ಜೀವಿಸುವವರೂ ಎಂದು ಎಣಿಸಿಕೊಳ್ಳಿರಿ.

ನೀವು ಶರೀರಭಾವವನ್ನು ಅನುಸರಿಸಿ ಬದುಕಿದರೆ ಸಾಯುವುದು ನಿಶ್ಚಯ; ನೀವು ಪವಿತ್ರಾತ್ಮನಿಂದ ದೇಹದ ದುರಭ್ಯಾಸಗಳನ್ನು ನಾಶ ಮಾಡುವುದಾದರೆ ಜೀವಿಸುವಿರಿ. ಯಾರು ದೇವರ ಆತ್ಮಾನುಸಾರವಾಗಿ ನಡೆದುಕೊಳ್ಳುತ್ತಾರೋ, ಅವರು ದೇವರ ಮಕ್ಕಳಾಗಿದ್ದಾರೆ.

ಮಕ್ಕಳಾಗಿದ್ದರೆ ಬಾಧ್ಯಸ್ಥರೂ ಆಗಿದ್ದೇವೆ; ದೇವರಿಗೆ ಬಾಧ್ಯಸ್ಥರೂ ಹಾಗೂ ಕ್ರಿಸ್ತನೊಂದಿಗೆ ಸಹಾ ಬಾಧ್ಯರು ಆಗಿದ್ದೇವೆ. ಹೇಗೆಂದರೆ ಕ್ರಿಸ್ತನ ಕಷ್ಟಗಳಲ್ಲಿ ನಾವು ಪಾಲುಗಾರರಾಗುವುದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು. ನಮಗೋಸ್ಕರ ಮುಂದಿನ ಕಾಲದಲ್ಲಿ ಪ್ರತ್ಯಕ್ಷವಾಗುವ ಮಹಿಮಾಪದವಿಯನ್ನು ಆಲೋಚಿಸಿದರೆ ಈಗಿನ ಕಾಲದ ಕಷ್ಟಗಳು ಅಲ್ಪವೇ ಸರಿ ಎಂದು ಎಣಿಸುತ್ತೇನೆ.

ಸೃಷ್ಟಿಯೆಲ್ಲಾ ಇಂದಿನವರೆಗೂ ನರಳುತ್ತಾ, ಪ್ರಸವ ವೇದನೆಪಡುತ್ತಾ ಇದೆಯೆಂದು ನಾವು ಬಲ್ಲೆವು. ಇದು ಮಾತ್ರವಲ್ಲದೆ ಪ್ರಥಮ ಫಲವಾಗಿರುವ ಹಾಗೂ ಪವಿತ್ರಾತ್ಮವರವನ್ನು ಹೊಂದಿದ ನಾವೂ ಸಹ ದೇವರ ಮಕ್ಕಳ ಪದವಿಯನ್ನು ಅಂದರೆ ದೇಹಕ್ಕೆ ಬರಬೇಕಾದ ವಿಮೋಚನೆಯನ್ನು ಎದುರುನೋಡುತ್ತಾ ನಮ್ಮೊಳಗೆ ನರಳುತ್ತಿದ್ದೇ.

ಇದಲ್ಲದೆ ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಒಳ್ಳೆಯದಕ್ಕಾಗಿಯೇ ಆಗುವುದೆಂದು ನಮಗೆ ತಿಳಿದಿದೆ. ದೇವರು ಯಾರನ್ನು ತಮ್ಮವರೆಂದು ಮೊದಲೇ ಆರಿಸಿಕೊಂಡನೋ ಅವರನ್ನು ತನ್ನ ಮಗನ ಅನುರೂಪಿಗಳಾಗುವಂತೆ ಆಗಲೇ ನೇಮಿಸಿದನು. ಮತ್ತು ಯಾರನ್ನು ಮೊದಲು ನೇಮಿಸಿದನೋ ಅವರನ್ನು ಕರೆದನು. ಯಾರನ್ನು ಕರೆದನೋ ಅವರನ್ನು ನೀತಿವಂತರೆಂದು ನಿರ್ಣಯಿಸಿದನು. ಯಾರನ್ನು ನೀತಿವಂತರೆಂದು ನಿರ್ಣಯಿಸಿದನೋ ಅವರನ್ನು ಮಹಿಮಾಪದವಿಗೆ ಸೇರಿಸಿದನು.

ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಜೊತೆಯಲ್ಲಿ ಇದ್ದರೆ ನಮ್ಮನ್ನು ಎದುರಿಸುವವರು ಯಾರು? ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೋಸ್ಕರ ಒಪ್ಪಿಸಿಕೊಟ್ಟನಲ್ಲಾ, ಮಗನನ್ನು ಕೊಟ್ಟ ಮೇಲೆ ಸಮಸ್ತವನ್ನೂ ನಮಗೆ ದಯಪಾಲಿಸದೆ ಇರುವನೋ?

ಈ ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಅಗಲಿಸುವವರು ಯಾರು? ಕಷ್ಟವೋ? ಸಂಕಟವೋ? ಹಿಂಸೆಯೋ? ಹಸಿವೋ? ವಸ್ತ್ರವಿಲ್ಲದಿರುವುದೋ? ಗಂಡಾಂತರವೋ? ಖಡ್ಗವೋ? “ದೇವರೇ ನಾವು ನಿನ್ನ ನಿಮಿತ್ತ ದಿನವೆಲ್ಲಾ ಕೊಲೆಗೆ ಗುರಿಯಾಗುತ್ತಿದ್ದೇವೆ. ವಧ್ಯಸ್ಥಾನಕ್ಕೆ ಒಯ್ದ ಕುರಿಗಳಂತೆ ಎಣಿಸಿದರು.” ಎಂಬುದಾಗಿ ಬರೆದಿರುವಂತೆ ಆಗುತ್ತದಲ್ಲಾ. ಆದರೆ ನಮ್ಮನ್ನು ಪ್ರೀತಿಸಿದಾತನ ಮೂಲಕವಾಗಿ ನಾವು ಎಲ್ಲಾ ವಿಷಯಗಳಲ್ಲಿಯೂ ಪೂರ್ಣ ಜಯಶಾಲಿಗಳಾಗಿದ್ದೇವೆ. ಹೇಗೆಂದರೆ ಮರಣವಾಗಲಿ, ಜೀವವಾಗಲಿ, ದೇವದೂತರಾಗಲಿ, ದುರಾತ್ಮಗಳಾಗಲಿ, ಈಗಿನ ಸಂಗತಿಗಳಾಗಲಿ, ಮುಂದಣ ಸಂಗತಿಗಳಾಗಲಿ, ಮಹತ್ವಗಳಾಗಲಿ, ಮೇಲಣ ಲೋಕವಾಗಲಿ, ಕೆಳಗಣ ಲೋಕವಾಗಲಿ, ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲು ಸಾಧ್ಯವಿಲ್ಲವೆಂದು ನಾವು ಬಲ್ಲವರಾಗಿದ್ದೇವೆ.

ಅವನು ದೇವರ ಮುಂದೆ, “ಕರ್ತನೇ ಅವರು ನಿನ್ನ ಪ್ರವಾದಿಗಳನ್ನು ಸಂಹರಿಸಿದ್ದಾರೆ, ನಿನ್ನ ಯಜ್ಞವೇದಿಗಳನ್ನು ಒಡೆದು ಹಾಕಿದ್ದಾರೆ. ನಾನೊಬ್ಬನೇ ಉಳಿದಿದ್ದೇನೆ. ಅವರು ನನ್ನ ಪ್ರಾಣವನ್ನು ತೆಗೆಯಬೇಕೆಂದಿದ್ದಾರೆ” ಎಂದು ಇಸ್ರಾಯೇಲ್ಯರ ಮೇಲೆ ದೂರು ಹೇಳಿದ್ದಕ್ಕೆ. ದೇವರ ಉತ್ತರವೇನೆಂದರೆ, “ಬಾಳನ ವಿಗ್ರಹಕ್ಕೆ ಅಡ್ಡಬೀಳದೆ ಇರುವ ಏಳುಸಾವಿರ ಪುರುಷರನ್ನು ನನಗಾಗಿ ಉಳಿಸಿಕೊಂಡಿದ್ದೇನೆ” ಎಂಬುದೇ. ಅದರಂತೆ ಈಗಿನ ಕಾಲದಲ್ಲಿಯೂ ದೇವರ ಕೃಪೆಯಿಂದ ಆರಿಸಿಕೊಂಡವರಾದ ಒಂದು ಭಾಗವು ಉಳಿದಿದ್ದಾರೆ.

ಆದ್ದರಿಂದ ಸಹೋದರರೇ, ದೇವರ ಕನಿಕರವನ್ನು ನೆನಪಿಸುತ್ತಾ, ನೀವು ನಿಮ್ಮ ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ, ಮೆಚ್ಚಿಕೆಯಾಗಿಯೂ ಇರುವ ಸಜೀವ ಯಜ್ಞವಾಗಿ ಸಮರ್ಪಿಸಿರೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ; ಇದೇ ವಿವೇಕ ಪೂರ್ವಕವಾದ ಆರಾಧನೆಯು. ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನ ಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತವನ್ನು ತಿಳಿದವರಾಗಿ ಉತ್ತಮವಾದದ್ದೂ, ಮೆಚ್ಚಿಕೆಯಾದದ್ದೂ, ದೋಷವಿಲ್ಲದ್ದೂ ಯಾವ ಯಾವುದೆಂದು ವಿವೇಚಿಸುವಿರಿ.

ಕ್ರೈಸ್ತರು ನಿರೀಕ್ಷಿಸುವ ಮಹಾಪದವಿಯನ್ನು ನೆನಸಿ ಉಲ್ಲಾಸವಾಗಿರಿ, ಕಷ್ಟಗಳಲ್ಲಿ ಸೈರಣೆಯುಳ್ಳವರಾಗಿರಿ. ಬೇಸರಗೊಳ್ಳದೆ ಪ್ರಾರ್ಥನೆ ಮಾಡಿರಿ. ದೇವಜನರಿಗೆ ಕೊರತೆ ಬಂದಾಗ ಸಹಾಯ ಮಾಡಿರಿ. ಅತಿಥಿಸತ್ಕಾರವನ್ನು ಆಚರಿಸಿರಿ. ನಿಮ್ಮನ್ನು ಹಿಂಸಿಸುವವರಿಗೆ ಆಶೀರ್ವಾದ ಮಾಡಿರಿ; ಶಪಿಸದೆ ಆಶೀರ್ವದಿಸಿರಿ.

ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ. ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವುದನ್ನು ದೇವರಿಗೆ ಬಿಡಿರಿ. ಯಾಕೆಂದರೆ “‘ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು’ ಎಂದು ಕರ್ತನು ಹೇಳುತ್ತಾನೆಂಬುದಾಗಿ” ಬರೆದಿದೆ. ಹಾಗಾದರೆ “ನಿನ್ನ ವೈರಿ ಹಸಿದಿದ್ದರೆ ಅವನಿಗೆ ಊಟಕ್ಕೆ ಬಡಿಸು; ಬಾಯಾರಿದ್ದರೆ ಕುಡಿಯುವುದಕ್ಕೆ ಕೊಡು. ಹೀಗೆ ಮಾಡುವುದರಿಂದ ಅವನ ತಲೆಯ ಮೇಲೆ ಕೆಂಡಗಳನ್ನು ಕೂಡಿಸಿಟ್ಟಂತಾಗುವುದು”.

ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ. ಯಾಕೆಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವು ದೊರೆತಿರುವುದಿಲ್ಲ. ಇರುವ ಅಧಿಕಾರಿಗಳಾದರೋ ದೇವರಿಂದ ನೇಮಿಸಲ್ಪಟ್ಟವರು. ಆದುದರಿಂದ ಅಧಿಕಾರಕ್ಕೆ ಎದುರುಬೀಳುವವನು ದೇವರ ನೇಮವನ್ನು ಎದುರಿಸುತ್ತಾನೆ. ಎದುರಿಸುವವರು ಶಿಕ್ಷೆಗೊಳಗಾಗುವರು. ಕೆಟ್ಟಕೆಲಸ ಮಾಡುವವನಿಗೆ ಅಧಿಪತಿಯಿಂದ ಭಯವಿರುವುದೇ ಹೊರತು ಒಳ್ಳೆಕೆಲಸ ಮಾಡುವವನಿಗೆ ಭಯವೇನೂ ಇರುವುದಿಲ್ಲ. ನೀನು ಅಧಿಕಾರಿಗೆ ಭಯಪಡದೇ ಇರಬೇಕೆಂದು ಅಪೇಕ್ಷಿಸುತ್ತೀಯೋ ಒಳ್ಳೆಯದನ್ನು ಮಾಡು. ಆಗ ಆ ಅಧಿಕಾರಿಯೇ ನಿನ್ನನ್ನು ಹೊಗಳುವನು. ಅವನು ನಿನ್ನ ಹಿತಕ್ಕೋಸ್ಕರ ದೇವರ ಸೇವಕನಾಗಿದ್ದಾನಲ್ಲಾ. ಆದರೆ ನೀನು ಕೆಟ್ಟದ್ದನ್ನು ಮಾಡಿದರೆ ಭಯಪಡಬೇಕು. ಅವನು ಸುಮ್ಮನೆ ಕೈಯಲ್ಲಿ ಅಧಿಕಾರದ ದಂಡವನ್ನು ಹಿಡಿದಿಲ್ಲ. ಅವನು ದೇವರ ಸೇವಕನಾಗಿದ್ದು ಕೆಟ್ಟದ್ದನ್ನು ಮಾಡುವವನಿಗೆ ದೇವರ ದಂಡನೆಯನ್ನು ವಿಧಿಸುತ್ತಾನೆ.

ನಾವು ಬದುಕಿದರೆ ಕರ್ತನಿಗಾಗಿ ಬದುಕುತ್ತೇವೆ; ಸತ್ತರೆ ಕರ್ತನಿಗಾಗಿ ಸಾಯುತ್ತೇವೆ; ಬದುಕಿದರೂ ಸತ್ತರೂ ನಾವು ಕರ್ತನವರೇ. ಯಾಕೆಂದರೆ ಸತ್ತವರಿಗೂ, ಜೀವಿಸುವವರಿಗೂ ಒಡೆಯನಾಗಬೇಕಂತಲೇ ಕ್ರಿಸ್ತನು ಸತ್ತು ಜೀವಿತನಾದನು.

ಇದುವರೆಗೆ ಗುಪ್ತವಾಗಿದ್ದ ಸತ್ಯಾರ್ಥವನ್ನು ತಿಳಿಸುವಲ್ಲಿ ದೇವರ ಜ್ಞಾನವನ್ನೇ ಹೇಳುತ್ತೇವೆ. ಅದು ಯಾವುದೆಂದರೆ ದೇವರು ನಮ್ಮ ಮಹಿಮೆಗಾಗಿ ಲೋಕೋತ್ಪತ್ತಿಗಿಂತ ಮೊದಲೇ ನೇಮಿಸಿ ಮರೆಮಾಡಿದ್ದ ದೇವರ ಜ್ಞಾನದ ಮರ್ಮವೇ ಆಗಿದೆ. ಇದನ್ನು ಇಹಲೋಕಾಧಿಕಾರಿಗಳಲ್ಲಿ ಯಾರೂ ಅರಿತಿರಲಿಲ್ಲ; ಅರಿತಿದ್ದರೆ ಅವರು ಮಹಿಮೆಯುಳ್ಳ ಕರ್ತನನ್ನು ಶಿಲುಬೆಗೆ ಹಾಕಿಸುತ್ತಿರಲಿಲ್ಲ; ಆದರೆ ದೇವರ ವಾಕ್ಯಗಳಲ್ಲಿ ಬರೆದಿರುವ ಪ್ರಕಾರ, “ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಮಾಡಿರುವಂಥದೆಲ್ಲವನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಅದರ ಭಾವನೆಯು ಮನುಷ್ಯನ ಹೃದಯದಲ್ಲಿ ಹುಟ್ಟಲಿಲ್ಲ.”

ನೀವು ದೇವರ ಆಲಯವಾಗಿದ್ದೀರೆಂದೂ ದೇವರ ಆತ್ಮನು ನಿಮ್ಮಲ್ಲಿ ವಾಸಮಾಡುತ್ತಾನೆಂದೂ ನಿಮಗೆ ಗೊತ್ತಿಲ್ಲವೋ?

ಹಾಗಾಗದೆ ದೇವರು ಅಪೊಸ್ತಲರಾದ ನಮ್ಮನ್ನು ಮರಣದ ತೀರ್ಪು ಹೊಂದಿದವರಂತೆ ಕಡೆಯವರಾಗಿ ತೋರಿಸಿದ್ದಾನೆಂದು ನನಗೆ ತೋಚುತ್ತದೆ. ನಾವು ಲೋಕದಲ್ಲಿ ದೇವದೂತರಿಗೂ, ಮನುಷ್ಯರಿಗೂ ಅಂತೂ ಜಗತ್ತಿಗೆಲ್ಲಾ ಹಾಸ್ಯಾಸ್ಪದವಾದ ನೋಟವಾದೆವು.

ಈ ಗಳಿಗೆಯವರೆಗೂ ನಾವು ಹಸಿದವರೂ, ಬಾಯಾರಿಕೆಯುಳ್ಳವರೂ, ವಸ್ತ್ರವಿಲ್ಲದವರೂ, ಪೆಟ್ಟು ತಿನ್ನುವವರೂ ಮನೆಯಿಲ್ಲದವರೂ, ಸ್ವಂತ ಕೈಗಳಿಂದ ಕೆಲಸಮಾಡಿ ದುಡಿಯುವವರೂ ಆಗಿದ್ದೇವೆ. ಶಪಿಸುವವರನ್ನು ಆಶೀರ್ವದಿಸುತ್ತೇವೆ. ಜನರು ಹಿಂಸಿಸುವಾಗ ಸಹಿಸಿಕೊಳ್ಳುತ್ತೇವೆ. ಅಪವಾದ ಹೊರಿಸುವವರನ್ನು ಕನಿಕರದಿಂದ ಮಾತನಾಡಿಸುತ್ತೇವೆ. ನಾವು ಈಗಿನವರೆಗೂ ಲೋಕದ ಕಸವೋ ಎಲ್ಲಾದಕ್ಕಿಂತಲೂ ಹೀನವೋ ಎಂಬಂತೆ ಆಗಿದ್ದೇವೆ.

ನೀವು ನಿಮ್ಮ ಸ್ವಂತ ಸೊತ್ತಲ್ಲವೆಂದು ಮತ್ತು ದೇವರಿಂದ ದಾನವಾಗಿ ಲಭಿಸಿದ ಪವಿತ್ರಾತ್ಮನು ನಿಮ್ಮೊಳಗೆ ನೆಲೆಗೊಂಡಿರುವುದರಿಂದ ನಿಮ್ಮ ದೇಹವು ದೇವರ ಪವಿತ್ರಾಲಯವಾಗಿದೆಂಬುದು ನಿಮಗೆ ತಿಳಿಯದೋ? ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು ಆದಕಾರಣ ನಿಮ್ಮ ದೇಹದ ಮೂಲಕ ದೇವರನ್ನು ಮಹಿಮೆಪಡಿಸಿರಿ.

ನೀವು ಈ ರೊಟ್ಟಿಯನ್ನು ತಿಂದು ಈ ಪಾನಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣವನ್ನು ಆತನು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ.

ನನಗಿರುವುದೆಲ್ಲವನ್ನು ಬಡವರಿಗೆ ಅನ್ನದಾನಮಾಡಿದರೂ, ನನ್ನ ದೇಹವನ್ನು ಸುಡುವುದಕ್ಕೆ ಒಪ್ಪಿಸಿದರೂ, ಪ್ರೀತಿಯು ನನಗಿಲ್ಲದಿದ್ದರೆ ನನಗೇನು ಪ್ರಯೋಜನವಿಲ್ಲ. ನಾನು ಬರಿದಾಗಿರುವನು. ಪ್ರೀತಿಯು ಬಹು ತಾಳ್ಮೆಯುಳ್ಳದ್ದು, ದಯೆಯುಳ್ಳದ್ದು. ಪ್ರೀತಿಯು ಹೊಟ್ಟೆಕಿಚ್ಚುಪಡುವುದಿಲ್ಲ, ಹೊಗಳಿಕೊಳ್ಳುವುದಿಲ್ಲ. ಅದು ಗರ್ವಪಡುವುದಿಲ್ಲ, ಅಸಭ್ಯವಾಗಿ ನಡೆಯುವುದಿಲ್ಲ. ಸ್ವಪ್ರಯೋಜನವನ್ನು ಚಿಂತಿಸುವುದಿಲ್ಲ. ಬೇಗ ಸಿಟ್ಟುಗೊಳ್ಳುವುದಿಲ್ಲ. ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಅನ್ಯಾಯದಲ್ಲಿ ಸಂತೋಷಪಡುವುದಿಲ್ಲ ಆದರೆ ಸತ್ಯದಲ್ಲಿ ಸಂತೋಷಪಡುತ್ತದೆ. ಎಲ್ಲವನ್ನು ತಾಳಿಕೊಳ್ಳುತ್ತದೆ. ಎಲ್ಲವನ್ನು ನಂಬುತ್ತದೆ. ಎಲ್ಲವನ್ನು ನಿರೀಕ್ಷಿಸುತ್ತದೆ. ಎಲ್ಲವನ್ನು ಸಹಿಸಿಕೊಳ್ಳುತ್ತದೆ.

ಆದರೆ ಕ್ರಿಸ್ತನು ಸತ್ತವರೊಳಗಿಂದ ಎದ್ದು ಬಂದನು. ಸತ್ತುಹೋದವರಲ್ಲಿ ಪ್ರಥಮಫಲವಾದನು.

ನಿರ್ಮೂಲವಾಗುವ ಕಡೆ ಶತ್ರುವು ಮರಣವಾಗಿದೆ.

ಪ್ರಿಯರೇ, ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿ ನಿಮ್ಮನ್ನು ಕುರಿತಾಗಿ ನನಗಿರುವ ಹೆಮ್ಮೆಯ ನಿಮಿತ್ತ ನಾನು ದಿನಾಲು ಸಾಯುತ್ತಲಿದ್ದೇನೆ ಎಂದು ಹೇಳುತ್ತೇನೆ.

ಮೂರ್ಖನೇ; ನೀನು ಬಿತ್ತುವ ಬೀಜವು ಸಾಯದಿದ್ದರೆ, ಅದು ಜೀವ ತಾಳುವುದುಂಟೆ? ಇಲ್ಲ.

ಸತ್ತವರಿಗಾಗುವ ಪುನರುತ್ಥಾನವು ಅದೇ ಪ್ರಕಾರವಾಗಿರುವುದು. ಬಿತ್ತುವಂಥದ್ದು ಅಳಿದುಹೊಗುವಂಥದ್ದು. ಪುನರುತ್ಥಾನವಾಗುವಂಥದ್ದು ಅಮರವಾದದ್ದು. ಹೀನಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಮಹಿಮೆಯಲ್ಲಿ ಪುನರುತ್ಥಾನಹೊಂದುವುದು; ನಿರ್ಬಲಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಬಲಹೊಂದಿ ಪುನರುತ್ಥಾನಹೊಂದುವುದು; ಬಿತ್ತಿದ್ದು ಪ್ರಾಕೃತ ದೇಹವಾಗಿ ಬಿತ್ತಲ್ಪಡುತ್ತದೆ, ಪುನರುತ್ಥಾನಹೊಂದುವಂಥದ್ದು ಆತ್ಮೀಕ ದೇಹ. ಪ್ರಾಕೃತದೇಹ ಇರುವುದಾದರೆ ಆತ್ಮೀಕ ದೇಹವೂ ಇರುವುದು ಸತ್ಯ.

ನಶಿಸುವಂಥ ಈ ದೇಹವು ನಿರ್ಲಯತ್ವವನ್ನು ಧರಿಸಿಕೊಳ್ಳುವುದೂ, ಮರಣಕ್ಕೆ ಅಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವುದೂ ಅಗತ್ಯವಾಗಿದೆ. ನಶಿಸಿಹೋಗುವ ಈ ದೇಹವು ನಿರ್ಲಯತ್ವವನ್ನು ಧರಿಸಿಕೊಂಡಾಗ ಮರಣಾಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಂಡಾಗ ಬರೆದಿರುವ ಮಾತು ನೆರವೇರುವುದು. “ಹೇ! ಮರಣವೇ ನಿನ್ನ ಜಯವೆಲ್ಲಿ? ಹೇ! ಮರಣವೇ ನಿನ್ನ ವಿಷದ ಕೊಂಡಿ ಎಲ್ಲಿ?”

ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯೂ ದೇವರೂ ಆಗಿರುವಾತನಿಗೆ ಸ್ತೋತ್ರವಾಗಲಿ. ಆತನು ಕನಿಕರವುಳ್ಳ ತಂದೆಯೂ ಸಕಲ ವಿಧವಾಗಿ ಸಂತೈಸುವ ದೇವರೂ ಆಗಿದ್ದು, ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಸಂತೈಸುವವನಾಗಿದ್ದಾನೆ. ಹೀಗೆ ದೇವರಿಂದ ನಮಗಾಗುವ ಆದರಣೆಯ ಮೂಲಕ ನಾವು ನಾನಾ ವಿಧವಾದ ಸಂಕಟಗಳಲ್ಲಿ ಬಿದ್ದಿರುವವರನ್ನು ಸಂತೈಸುವುದಕ್ಕೆ ಶಕ್ತರಾಗುತ್ತೇವೆ. ಏಕೆಂದರೆ ಕ್ರಿಸ್ತನ ನಿಮಿತ್ತ ನಮಗೆ ಬಾಧೆಗಳು ಹೇಗೆ ಹೇರಳವಾಗಿ ಉಂಟಾಗುತ್ತವೆಯೋ ಹಾಗೆಯೇ ಕ್ರಿಸ್ತನ ಮೂಲಕವಾಗಿ ಹೆಚ್ಚಾದ ಆದರಣೆಯೂ ನಮಗೆ ದೊರೆಯುತ್ತದೆ. ನಾವು ಕಷ್ಟಗಳನ್ನನುಭವಿಸುವುದರಿಂದ ನಿಮಗೆ ಆದರಣೆಯೂ, ರಕ್ಷಣೆಯೂ ಉಂಟಾಗುತ್ತದೆ. ನಾವು ಸಮಾಧಾನದಿಂದಿರುವುದಾದರೆ ಅದರಿಂದ ನಿಮಗೆ ಆದರಣೆ ಆಗುತ್ತದೆ. ನಾವು ಅನುಭವಿಸುವಂಥ ಬಾಧೆಗಳನ್ನು ನೀವೂ ತಾಳ್ಮೆಯಿಂದ ಸಹಿಸಿಕೊಳ್ಳುವಂತೆ ಅದು ನಿಮ್ಮನ್ನು ಧೈರ್ಯಗೊಳಿಸುತ್ತದೆ. ನೀವು ಬಾಧೆಗಳಲ್ಲಿ ನಮ್ಮೊಂದಿಗೆ ಪಾಲುಗಾರರಾಗಿರುವ ಪ್ರಕಾರವೇ ಆದರಣೆಯೂ ಪಾಲುಗಾರರಾಗಿದ್ದೀರೆಂದು ತಿಳಿದಿರುವುದರಿಂದ ನಿಮ್ಮ ವಿಷಯದಲ್ಲಿ ನಮಗಿರುವ ನಿರೀಕ್ಷೆಯು ದೃಢವಾಗಿದೆ.

ಸಹೋದರರೇ, ಆಸ್ಯ ಸೀಮೆಯಲ್ಲಿ ನಾವು ಅನುಭವಿಸಿದ ಕಷ್ಟ-ಸಂಕಟಗಳು ನಿಮಗೆ ತಿಳಿದಿರಲಿ ಎಂದು ನಾನು ಬಯಸುತ್ತೇನೆ. ಅಲ್ಲಿ ನಮ್ಮ ಶಕ್ತಿಗೆ ಮೀರಿದಂಥ ತೊಂದರೆಗಳನ್ನು ಅನುಭವಿಸಿ ನಾವು ಕುಗ್ಗಿಹೋಗಿ ಬದುಕುವ ನಿರೀಕ್ಷೆಯೇ ಇಲ್ಲವಾದವು. ಸಾಯುವುದು ನಿಶ್ಚಯವೆಂದೆನಿಸಿದಾಗ ನಾವು ನಮ್ಮ ಮೇಲೆ ಭರವಸವನ್ನಿಟ್ಟುಕೊಳ್ಳದೆ ಸತ್ತವರನ್ನು ಎಬ್ಬಿಸುವ ದೇವರ ಮೇಲೆಯೇ ಭರವಸವಿಡುವವರಾಗಬೇಕೆಂದು ಇದೆಲ್ಲಾ ಸಂಭವಿಸಿತು. ಆತನು ನಮ್ಮನ್ನು ಅಂಥ ಭಯಂಕರ ಮರಣದಿಂದ ತಪ್ಪಿಸಿದನು. ಮುಂದೆಯೂ ತಪ್ಪಿಸುವನು. ನೀವು ನಮಗೋಸ್ಕರ ಪ್ರಾರ್ಥನೆ ಮಾಡುವುದರ ನಿಮಿತ್ತವಾಗಿ ಇನ್ನು ಮುಂದೆಯೂ ತಪ್ಪಿಸುವನೆಂದು ಆತನಲ್ಲಿ ನಿರೀಕ್ಷೆಯಿಟ್ಟವರಾಗಿದ್ದೇವೆ. ಹೀಗೆ ಅನೇಕರ ವಿಜ್ಞಾಪನೆಗಳಿಂದ ನಮಗೆ ದೊರಕುವ ಉಪಕಾರಕ್ಕಾಗಿ ನಮ್ಮ ನಿಮಿತ್ತ ಅನೇಕರಿಂದ ದೇವರಿಗೆ ಕೃತಜ್ಞತಾಸ್ತುತಿ ಉಂಟಾಗುವುದು.

ಮಣ್ಣಿನ ಮಡಿಕೆಯಂತಿರುವ ನಮ್ಮಲ್ಲಿ ಈ ನಿಕ್ಷೇಪವನ್ನು ಇಡಲ್ಪಟ್ಟಿರುವುದರಿಂದ ಇಂತಹ ಮಹಾಶಕ್ತಿಯು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲವೆಂಬುದು ಸ್ಪಷ್ಟವಾಗಿದೆ. ಎಲ್ಲಾದರಲ್ಲಿಯೂ ನಮಗೆ ಇಕ್ಕಟ್ಟು ಇದ್ದರೂ ನಾವು ಸಂಕಟಪಡುವವರಲ್ಲ. ನಾವು ಗೊಂದಲಕ್ಕೀಡಾಗಿದ್ದರೂ ಹತಾಶರಾಗುವವರಲ್ಲ. ಹಿಂಸೆಪಡುವವರಾಗಿದ್ದರೂ ಕೈಬಿಡಲ್ಪಟ್ಟವರಲ್ಲ. ಕೆಡವಲ್ಪಟ್ಟವರಾಗಿದ್ದರೂ ನಶಿಸಿಹೊಗುವವರಲ್ಲ. ಯೇಸುವಿನ ಜೀವವು ನಮ್ಮ ದೇಹದಲ್ಲಿ ಉಂಟೆಂದು ಪ್ರಕಟಪಡಿಸುವುದಕ್ಕಾಗಿ ಯೇಸುವಿನ ಮರಣಾವಸ್ಥೆಯನ್ನು ನಾವು ಯಾವಾಗಲೂ ದೇಹದಲ್ಲಿ ಅನುಭವಿಸುವವರಾಗಿದ್ದೇವೆ. ಯೇಸುವಿನ ಜೀವವು ನಮ್ಮ ಮರ್ತ್ಯ ಶರೀರದಲ್ಲಿ ಉಂಟೆಂದು ತೋರಿಬರುವುದಕ್ಕಾಗಿ ಬದುಕಿರುವ ನಾವು ಯೇಸುವಿನ ನಿಮಿತ್ತ ಯಾವಾಗಲೂ ಮರಣಕ್ಕೆ ಒಪ್ಪಿಸಲ್ಪಡುತ್ತಾ ಇದ್ದೇವೆ. ಹೀಗೆ ನಮ್ಮಲ್ಲಿ ಮರಣವು ನಿಮ್ಮಲ್ಲಿ ಜೀವವು ವ್ಯಾಪಿಸುತ್ತಿದೆ.

ಆದ್ದರಿಂದ ನಾವು ಧೈರ್ಯಗೆಡುವುದಿಲ್ಲ. ನಮ್ಮ ದೇಹವು ನಾಶವಾಗುತ್ತಾ ಇದ್ದರೂ ನಮ್ಮ ಅಂತರಂಗವು ದಿನೇ ದಿನೇ ಹೊಸದಾಗುತ್ತಾ ಬರುತ್ತದೆ. ಹೇಗೆಂದರೆ ಕ್ಷಣಮಾತ್ರವಿರುವ ನಮ್ಮ ಈ ಸ್ವಲ್ಪ ಸಂಕಟವು ಅತ್ಯಂತಾಧಿಕವಾಗಿ ಪ್ರತಿಫಲವನ್ನು ಉಂಟುಮಾಡಿ ನಮಗೆ ನಿರಂತರವಾಗಿರುವ ಅತಿಶ್ರೇಷ್ಟ ತೇಜಸ್ಸನ್ನು ದೊರಕಿಸುತ್ತದೆ. ನಾವು ಕಾಣುವಂಥದ್ದನ್ನು ಲಕ್ಷಿಸದೇ ಕಾಣದಿರುವಂಥದ್ದನ್ನು ಲಕ್ಷಿಸುವವರಾಗಿದ್ದೇವೆ. ಕಾಣುವಂಥದ್ದು ಸ್ವಲ್ಪ ಕಾಲ ಮಾತ್ರ ಇರುವುದು ಕಾಣದಿರುವಂಥದ್ದು ಸದಾಕಾಲವೂ ಇರುವುದು.

ಭೂಮಿಯ ಮೇಲಿರುವ ನಮ್ಮ ಈ ದೇಹವೆಂಬ ಗುಡಾರವು ಅಳಿದುಹೊದರೂ, ದೇವರಿಂದ ನಿರ್ಮಿತವಾಗಿರುವ ಒಂದು ಕಟ್ಟಡವು ಪರಲೋಕದಲ್ಲಿ ನಮಗುಂಟೆಂದು ಬಲ್ಲೆವು; ಅದು ಮನುಷ್ಯನ ಕೈಗಳಿಂದ ಕಟ್ಟಿರುವ ಮನೆಯಲ್ಲ ಬದಲಾಗಿ ಶಾಶ್ವತವಾದ ಮನೆಯಾಗಿದೆ. ನಾವು ಈ ದೇಹದಲ್ಲಿರುವವರೆಗೆ ನರಳುತ್ತಾ; ಪರಲೋಕದಿಂದ ದೊರಕುವ ನಮ್ಮ ನಿವಾಸವನ್ನು ದೇಹದ ಮೇಲೆ ನಾವು ಎಂದು ಧರಿಸಿಕೊಳ್ಳುತ್ತೇವೋ ಎಂದು ಹಾತೊರೆಯುತ್ತೇವೆ. ಅದನ್ನು ಧರಿಸಿಕೊಂಡಾಗ ನಾವು ಬೆತ್ತಲೆಯಾಗಿ ಇರಲಾರೆವು. ಏಕೆಂದರೆ, ಈ ದೇಹವೆಂಬ ಗುಡಾರದಲ್ಲಿರುವವರಾದ ನಾವು ಭಾರಹೊತ್ತುಕೊಂಡವರಾಗಿ ನರಳುತ್ತೇವೆ; ಈ ದೇಹವು ಕಳಚಿಹೋಗಬೇಕೆಂಬುದು ನಮ್ಮ ಬಯಕೆ ಅಲ್ಲ; ಬದಲಾಗಿ ಅದರ ಮೇಲೆ ಧರಿಸಿಕೊಳ್ಳಬೇಕೆಂಬುದೇ. ಆದ್ದರಿಂದ ನಶ್ವರವಾದದ್ದು ಅಳಿದುಹೋಗಿ ಅಮರವಾದದ್ದು ಉಳಿಯುವಂತೆ ಅಪೇಕ್ಷಿಸುತ್ತೇವೆ. ಆ ಸ್ಥಿತಿಗಾಗಿ ನಮ್ಮನ್ನು ಸಿದ್ಧಗೊಳಿಸಿರುವಾತನು ದೇವರೇ; ಅದಕ್ಕಾಗಿ ಆತನು ಪವಿತ್ರಾತ್ಮನನ್ನು ನಮಗೆ ಸಂಚಕಾರವಾಗಿ ನೀಡಿದ್ದಾನೆ.

ಹೀಗಿರುವುದರಿಂದ ನಾವು ಯಾವಾಗಲೂ ನಂಬಿಕೆಯುಳ್ಳವರಾಗಿರಬೇಕು; ದೇಹದಲ್ಲಿ ವಾಸಿಸುವವರೆಗೂ ಕರ್ತನಿಂದ ದೂರದಲ್ಲಿರುವ ಪ್ರವಾಸಿಗಳಾಗಿದ್ದೇವೆ ನಾವು ನೋಡುತ್ತಾ ನಡೆಯದೇ, ನಂಬುವವರಾಗಿಯೇ ನಡೆಯುತ್ತೇವೆ. ಇದನ್ನು ಕುರಿತು ಆಲೋಚಿಸಿ ನಾವು ಧೈರ್ಯವುಳ್ಳವರಾಗಿದ್ದು ದೇಹವನ್ನು ಬಿಟ್ಟು ಕರ್ತನ ಬಳಿಯಲ್ಲಿ ಇರುವುದೇ ಉತ್ತಮವೆಂದು ಎಣಿಸುವವರಾಗಿದ್ದೇವೆ. ಆದ್ದರಿಂದ ನಾವು ದೇಹವೆಂಬ ಮನೆಯಲ್ಲಿದ್ದರೂ ಸರಿಯೇ ಅಥವಾ ಅದನ್ನು ಬಿಟ್ಟಿದ್ದರೂ ಸರಿಯೇ, ಕರ್ತನನ್ನು ಮೆಚ್ಚಿಸುವವರಾಗಿರಬೇಕೆಂಬುದೇ ನಮ್ಮ ಗುರಿಯಾಗಿದೆ.

ಯಾಕೆಂದರೆ ಕ್ರಿಸ್ತನ ಪ್ರೀತಿಯು ನಮ್ಮನ್ನು ಒತ್ತಾಯಪಡಿಸುತ್ತದೆ; ಎಲ್ಲರಿಗೋಸ್ಕರ ಒಬ್ಬನು ಸತ್ತಮೇಲೆ ಎಲ್ಲರೂ ಸತ್ತಂತಾಯಿತೆಂದು ನಿಶ್ಚಯಿಸಿಕೊಂಡಿದ್ದೇವೆ. ಕ್ರಿಸ್ತನು ಎಲ್ಲರಿಗೋಸ್ಕರ ಸತ್ತದ್ದರಿಂದಾಗಿ ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೇ ತಮಗೋಸ್ಕರ ಸತ್ತು ಎದ್ದು ಬಂದಾತನಿಗಾಗಿ ಜೀವಿಸಬೇಕು.

ಹೀಗಿರಲಾಗಿ ಇಂದಿನಿಂದ ನಾವು ಯಾರನ್ನೂ ಮಾನವ ದೃಷ್ಟಿಯಿಂದ ಪರಿಗಣಿಸುವುದಿಲ್ಲ. ಒಮ್ಮೆ ಕ್ರಿಸ್ತನನ್ನು ನಾವು ಹೀಗೇ ಪರಿಗಣಿಸಿದ್ದುಂಟು. ಆದರೆ ಇನ್ನು ಮುಂದೆ ಆ ರೀತಿಯಾಗಿ ಪರಿಗಣಿಸುವುದಿಲ್ಲ. ಆದ್ದರಿಂದ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿಯಾಗಿದ್ದಾನೆ. ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು.

ನಮ್ಮ ಸೇವೆಯು ಯಾರ ಮುಂದೆಯೂ ಅವಹೇಳನಕ್ಕೆ ಗುರಿಯಾಗದಂತೆ, ನಾವು ಯಾರಿಗೂ ಅಡ್ಡಿಯನ್ನು ಒಡ್ಡಲಿಲ್ಲ. ಬದಲಾಗಿ, ಎಲ್ಲಾ ವಿಷಯಗಳಲ್ಲಿ ದೇವರ ಸೇವಕರೆಂದು ನಮ್ಮ ಸೇವೆಯನ್ನು ಸಮ್ಮತ ಮಾಡಿಕೊಂಡು, ನಾವು ಸಂಕಟದಲ್ಲಿಯೂ, ಕೊರತೆಗಳಲ್ಲಿಯೂ, ಇಕ್ಕಟ್ಟುಗಳಲ್ಲಿಯೂ, ಪೆಟ್ಟುಗಳಲ್ಲಿಯೂ, ದೊಂಬಿ, ಕಲಹ, ಸೆರೆಮನೆ, ಶಿಕ್ಷೆ ಇವುಗಳನ್ನು ಅನುಭವಿಸಿದ್ದೇವೆ. ಮೈಮುರಿದು ಕೆಲಸ ಮಾಡಿದ್ದೇವೆ. ನಿದ್ದೆಗೆಟ್ಟು ಬಳಲಿದ್ದೇವೆ; ಹಸಿವಿನಲ್ಲಿ ಸೊರಗಿದ್ದೇವೆ; ಈ ಎಲ್ಲಾ ವಿಷಯಗಳಲ್ಲಿ ಬಹು ಸಮಾಧಾನವನ್ನು ತೋರಿಸಿದ್ದೇವೆ. ಶುದ್ಧಮನಸ್ಸು, ಜ್ಞಾನ, ದೀರ್ಘಶಾಂತಿ, ದಯೆ, ಪವಿತ್ರಾತ್ಮ, ನಿಷ್ಕಪಟವಾದ ಪ್ರೀತಿ, ಸತ್ಯವಾಕ್ಯ, ದೇವರ ಮಹತ್ವ ಇವುಗಳಿಂದ ಕೂಡಿದವರಾಗಿ, ಎಡಬಲಗೈಗಳಲ್ಲಿ ನೀತಿಯೆಂಬ ಆಯುಧಗಳನ್ನು ಧರಿಸಿಕೊಂಡಿದ್ದೇವೆ. ನಾವು ಮಾನ ಮತ್ತು ಅವಮಾನ, ಕೀರ್ತಿ ಮತ್ತು ಅಪಕೀರ್ತಿಗಳಲ್ಲಿಯೂ ಸೇವೆಮಾಡಿದ್ದೇವೆ. ಸತ್ಯವಂತರಾದರೂ ಮೋಸಗಾರರೆನಿಸಿಕೊಂಡಿದ್ದೇವೆ. ನಾವು ಪ್ರಸಿದ್ಧರಾಗಿದ್ದರೂ ಅಪರಿಚಿತರೆನ್ನಿಸಿಕೊಂಡು ಸೇವೆ ಮಾಡಿದ್ದೇವೆ. ಸಾಯುವವರಾಗಿ ತೋರಿದರೂ, ಬದುಕಿದ್ದೇವೆ! ನೋಡಿ, ಶಿಕ್ಷೆಗೆ ಗುರಿಯಾದರೂ ಕೊಲ್ಲಲ್ಪಡದವರಾಗಿದ್ದೇವೆ, ದುಃಖಪಡುವವರಾಗಿದ್ದರೂ ಸೇವೆಯಲ್ಲಿ ಯಾವಾಗಲೂ ಸಂತೋಷಪಡುತ್ತೇವೆ, ಬಡವರಾಗಿದ್ದರೂ ಅನೇಕರನ್ನು ಐಶ್ವರ್ಯವಂತರಾಗಿ ಮಾಡಿದ್ದೇವೆ; ಏನೂ ಇಲ್ಲದವರಾಗಿದ್ದರೂ ಎಲ್ಲಾ ಹೊಂದಿದವರಾಗಿದ್ದೇವೆ.

ನಿಮ್ಮ ಮೇಲೆ ತಪ್ಪುಹೊರಿಸಬೇಕೆಂದು ನಾನು ಇದನ್ನು ಹೇಳುತ್ತಿಲ್ಲ; ನಿಮ್ಮ ಜೊತೆ ಸಾಯುವುದಕ್ಕೂ, ಬದುಕುವುದಕ್ಕೂ ಎನ್ನುವಷ್ಟರ ಮಟ್ಟಿಗೆ ನೀವು ನಮ್ಮ ಹೃದಯದಲ್ಲಿದ್ದೀರೆಂದು ನಾನು ಮೊದಲೇ ಹೇಳಿದ್ದೆನಲ್ಲಾ. ನಿಮ್ಮಲ್ಲಿ ನನಗೆ ಬಹಳ ಭರವಸೆ ಉಂಟು, ಗಾಢವಾದ ಅಭಿಮಾನವುಂಟು. ನಾನು ಎಲ್ಲಾ ಸಂಕಟಗಳಲ್ಲಿಯೂ ಎದೆಗುಂದದೆ ಆನಂದಭರಿತನಾಗಿದ್ದೇನೆ.

ಆ ಸಭೆಗಳವರಿಗೆ ಬಹಳ ಸಂಕಷ್ಟಗಳು ಬಂದರೂ ತಮ್ಮ ವಿಪರೀತವಾದ ಬಡತನದಲ್ಲಿದ್ದರೂ ಬಹು ಆನಂದದಿಂದ ತುಂಬಿದವರಾಗಿ ಅತ್ಯಂತ ಔದಾರ್ಯವುಳ್ಳವರಾದರು.

ಅವರು ಕ್ರಿಸ್ತನ ಸೇವಕರೋ? ಅವರಿಗಿಂತ ನಾನು ಹೆಚ್ಚಾಗಿ ಸೇವೆಮಾಡುವವನಾಗಿದ್ದೇನೆ. ನಾನು ಬುದ್ಧಿ ಕೆಟ್ಟವನಂತೆಯೇ ಮಾತನಾಡುತ್ತಿದ್ದೇನೆ ಕ್ರಿಸ್ತನ ಸೇವೆಯಲ್ಲಿ ಅವರಿಗಿಂತ ಹೆಚ್ಚಾಗಿ ಪ್ರಯಾಸಪಟ್ಟೆನು, ಹೆಚ್ಚಾಗಿ ಸೆರೆಮನೆಯ ವಾಸವನ್ನು ಅನುಭವಿಸಿದ್ದೇನೆ, ಮಿತಿಮೀರಿ ಏಟುಪೆಟ್ಟುಗಳನ್ನು ತಿಂದಿದ್ದೇನೆ. ಅನೇಕ ಸಾರಿ ಮರಣದ ಬಾಯೊಳಗೆ ಸಿಕ್ಕಿಕೊಂಡಿದ್ದೇನೆ. ಐದು ಸಾರಿ ಯೆಹೂದ್ಯರಿಂದ ನನಗೆ ಒಂದು ಕಡಿಮೆ ನಲವತ್ತು ಏಟುಗಳು ಬಿದ್ದವು. ಮೂರು ಸಾರಿ ಬಾರುಕೋಲಿನಿಂದ ನನ್ನನ್ನು ಹೊಡೆದರು. ಒಂದು ಸಾರಿ ಜನರು ನನ್ನನ್ನು ಕೊಲ್ಲುವುದಕ್ಕೆ ಕಲ್ಲೆಸೆದರು. ಮೂರು ಸಾರಿ ನಾನಿದ್ದ ಹಡಗು ಒಡೆದು ಹೋಯಿತು. ಒಂದು ರಾತ್ರಿ ಒಂದು ಹಗಲು ಸಮುದ್ರದ ನೀರಿನಲ್ಲಿ ಕಳೆದೆನು. ಕ್ರಿಸ್ತನ ಸೇವೆಯಲ್ಲಿ ಎಷ್ಟೋ ಪ್ರಯಾಣಗಳನ್ನು ಮಾಡಿದೆನು. ನದಿಗಳ ಅಪಾಯಗಳೂ, ಕಳ್ಳರ ಅಪಾಯಗಳೂ, ಸ್ವಂತ ಜನರಿಂದ ಅಪಾಯಗಳೂ, ಅನ್ಯಜನರಿಂದ ಅಪಾಯಗಳೂ, ಪಟ್ಟಣದಲ್ಲಿ ಅಪಾಯ, ನಿರ್ಜನ ಸ್ಥಳದಲ್ಲಿ ಅಪಾಯ, ಸಮುದ್ರದಲ್ಲಿ ಅಪಾಯ, ಸುಳ್ಳು ಸಹೋದರರೊಳಗಿನಿಂದಾದ ಅಪಾಯಗಳೂ ನನಗೆ ಸಂಭವಿಸಿದವು. ಶ್ರಮೆಪಟ್ಟು ದುಡಿದಿದ್ದೇನೆ, ಎಷ್ಟೋ ಸಾರಿ ನಿದ್ದೆಗೆಟ್ಟಿದ್ದೇನೆ; ಹಸಿವು ನೀರಡಿಕೆಗಳಿಂದ ಬಳಲಿದ್ದೇನೆ; ಅನೇಕ ಸಾರಿ ಊಟ, ಬಟ್ಟೆಯಿಲ್ಲದೆ ಅಲೆದಿದ್ದೇನೆ; ಚಳಿಗಾಳಿಯಲ್ಲಿ ನಡುಗಿದ್ದೇನೆ. ಇಂಥ ಇನ್ನಿತರ ಬೇರೆ ಸಂಗತಿಗಳಲ್ಲದೆ, ಎಲ್ಲಾ ಸಭೆಗಳ ಕುರಿತಾದ ಚಿಂತೆಯು ದಿನದಿನ ನನ್ನನ್ನು ಕಾಡಿಸುತ್ತಿತ್ತು.

ಈ ಕಾರಣದಿಂದಲೂ ಮತ್ತು ನನಗೆ ತಿಳಿಸಲ್ಪಟ್ಟ ರಹಸ್ಯಗಳು ಬಹು ವಿಶೇಷವಾಗಿರುವುದರಿಂದಲೂ ನಾನು ಹೊಗಳಿಕೊಳ್ಳದೇ ಸುಮ್ಮನಿರುತ್ತೇನೆ. ನಾನು ನನ್ನನ್ನು ಅತಿಶಯವಾಗಿ ಹೆಚ್ಚಿಸಿಕೊಳ್ಳಬಾರದೆಂದು ಒಂದು ಶೂಲವು ನನ್ನನ್ನು ತಿವಿಯುವುದಕ್ಕಾಗಿ ನನ್ನ ದೇಹದೊಳಗೆ ಇರಿಸಲಾಗಿದೆ. ನಾನು ಅಹಂಕಾರಪಡದ ಹಾಗೆ ಇದು ನನ್ನನ್ನು ತಿವಿತಿವಿದು ಸೈತಾನನ ದೂತನಂತೆ ಕಾಡಿಸುತ್ತಿತ್ತು. ಈ ನೋವು ನನ್ನನ್ನು ಬಿಟ್ಟುಹೋಗುವಂತೆ ಮೂರು ಸಾರಿ ಕರ್ತನನ್ನು ಬೇಡಿಕೊಂಡೆನು ಆದರೆ ಅದಕ್ಕಾತನು, “ನನ್ನ ಕೃಪೆಯೇ ನಿನಗೆ ಸಾಕು,ಬಲಹೀನತೆಯಲ್ಲಿಯೇ ನನ್ನ ಬಲವು ಪೂರ್ಣಸಾಧಕವಾಗುತ್ತದೆ” ಎಂದು ನನಗೆ ಹೇಳಿದನು. ಹೀಗಿರಲಾಗಿ, ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿರಬೇಕೆಂದು ನನಗುಂಟಾಗುವ ಬಲಹೀನತೆಯಲ್ಲಿಯೂ ಬಹು ಸಂತೋಷವಾಗಿ ಹೆಚ್ಚಳಪಡುವೆನು. ಆದ್ದರಿಂದ ಕ್ರಿಸ್ತನ ನಿಮಿತ್ತ ನನಗೆ ಬಲಹೀನತೆಯಲ್ಲಿಯೂ, ತಿರಸ್ಕಾರದಲ್ಲಿಯೂ, ಕೊರತೆಯಲ್ಲಿಯೂ, ಹಿಂಸೆಯಲ್ಲಿಯೂ ಮತ್ತು ಇಕ್ಕಟ್ಟೂ ಸಂಭವಿಸಿದಾಗಲೂ ಸಂತುಷ್ಟನಾಗಿದ್ದೇನೆ. ಯಾಕೆಂದರೆ ನಾನು ಯಾವಾಗ ದುರ್ಬಲನಾಗಿರುವೆನೋ, ಆವಾಗಲೇ ಬಲವುಳ್ಳವನೂ ಆಗಿರುತ್ತೇನೆ.

ಹಿಂದೆ ನಾನು ಯೆಹೂದ್ಯ ಮತದಲ್ಲಿದ್ದಾಗ ನನ್ನ ನಡತೆ ಎಂಥದ್ದೆಂದು ನೀವು ಕೇಳಿದ್ದೀರಿ. ನಾನು ದೇವರ ಸಭೆಯನ್ನು ಬಹಳವಾಗಿ ಹಿಂಸೆಪಡಿಸಿ ಹಾಳುಮಾಡುತ್ತಿದ್ದೆನು.

ನಾನು ಸಹ ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ, ಇನ್ನು ಜೀವಿಸುವವನು ನಾನಲ್ಲ, ಕ್ರಿಸ್ತನು ನನ್ನಲ್ಲಿ ಜೀವಿಸುತ್ತಾನೆ. ಈಗ ಶರೀರದಲ್ಲಿರುವ ನಾನು ಜೀವಿಸುವುದು ಹೇಗೆಂದರೆ ದೇವಕುಮಾರನ ಮೇಲಣ ನಂಬಿಕೆಯಿಂದಲೇ. ಆತನು ನನ್ನನ್ನು ಪ್ರೀತಿಸಿ ನನಗಾಗಿ ತನ್ನನ್ನು ಒಪ್ಪಿಸಿಕೊಟ್ಟನು.

ಆದರೆ ಪೂರ್ವದಲ್ಲಿ ಶಾರೀರಿಕವಾಗಿ ಹುಟ್ಟಿದವನು, ದೇವರಾತ್ಮಬಲದಿಂದ ಹುಟ್ಟಿದವನನ್ನು ಹಿಂಸೆಪಡಿಸಿದಂತೆಯೇ ಈಗಲೂ ಆಗುತ್ತಿದೆ.

ಕ್ರಿಸ್ತ ಯೇಸುವಿನಲ್ಲಿರುವವರು ತಮ್ಮ ಶರೀರಭಾವವನ್ನು ಅದರ ವಿಷಯಾಭಿಲಾಷೆ, ಸ್ವೇಚ್ಛಾಭಿಲಾಷೆಗಳ ಸಹಿತವಾಗಿ ಶಿಲುಬೆಗೆ ಹಾಕಿದವರಾಗಿದ್ದಾರೆ.

ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶವನ್ನು ಕೊಯ್ಯುವನು. ಆತ್ಮನ ಕುರಿತಾಗಿ ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು.

ನನಗಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಿಲುಬೆಯ ವಿಷಯದಲ್ಲಿಯೇ ಹೊರತು ಬೇರೆ ಯಾವ ವಿಷಯದಲ್ಲಿಯೂ ಹೆಚ್ಚಳಪಡುವುದು ಬೇಕಾಗಿಲ್ಲ. ಆತನ ಮೂಲಕ ನಾನು ಲೋಕಕ್ಕೂ, ಲೋಕವು ನನಗಾಗಿಯೂ ಶಿಲುಬೆಗೆ ಹಾಕಿಕೊಂಡು ಸತ್ತಿತು.

ಹೀಗಿರುವುದರಿಂದ ಪೌಲನೆಂಬ ನಾನು ಅನ್ಯಜನರಾಗಿರುವ ನಿಮ್ಮ ನಿಮಿತ್ತ ಕ್ರಿಸ್ತ ಯೇಸುವಿನ ಸೆರೆಯಾಳಾಗಿದ್ದಾನೆ.

ಆದ್ದರಿಂದ ನಿಮ್ಮ ನಿಮಿತ್ತ ನನಗೆ ಉಂಟಾದ ಕಷ್ಟಗಳನ್ನು ನೋಡಿ ನೀವು ಧೈರ್ಯಗೆಡಬಾರದೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಈ ಕಷ್ಟಗಳು ನಿಮಗೆ ಘನತೆಯನ್ನು ಉಂಟುಮಾಡುತ್ತವೆ. ಹೀಗಿರಲಾಗಿ ಯಾವ ತಂದೆಯಿಂದ ಭೂಪರಲೋಕಗಳಲ್ಲಿರುವ ಪ್ರತಿ ಜನವೂ ಹೆಸರುಗೊಂಡಿರುವುದೋ ಆ ತಂದೆಯ ಮುಂದೆ ನಾನು ಮೊಣಕಾಲೂರಿಕೊಂಡು,

ನೀವು ದೇವರಿಂದ ಕರೆಯಲ್ಪಟ್ಟವರಾದ ಕಾರಣ ಆ ಕರೆಗೆ ಯೋಗ್ಯರಾಗಿ ಜೀವಿಸಬೇಕೆಂದು, ಕರ್ತನ ಸೇವೆಯಲ್ಲಿ ಸೆರೆಯವನಾದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನೀವು ಪೂರ್ಣ ವಿನಯ, ಸಾತ್ವಿಕತ್ವಗಳಿಂದಲೂ ದೀರ್ಘಶಾಂತಿಯಿಂದಲೂ ಕೂಡಿದವರಾಗಿ, ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ.

ಕ್ರಿಸ್ತನು ನಮ್ಮನ್ನು ಪ್ರೀತಿಸಿ ನಮ್ಮೆಲ್ಲರಿಗೋಸ್ಕರ ತನ್ನನ್ನೇ ದೇವರಿಗೆ ಸುವಾಸನೆಯಾದ ಕಾಣಿಕೆಯಾಗಿಯೂ, ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.

ಸಹೋದರರೇ, ನನಗೆ ಸಂಭವಿಸಿರುವಂಥವುಗಳೆಲ್ಲವೂ ಸುವಾರ್ತೆಯ ಪ್ರಸಾರಣೆಗೆ ಸಹಾಯವಾಯಿತೆಂದು ನೀವು ತಿಳಿಯಬೇಕೆಂಬುದಾಗಿ ಅಪೇಕ್ಷಿಸುತ್ತೇನೆ. ಹೇಗೆಂದರೆ ನನ್ನ ಸೆರೆವಾಸವು ಕ್ರಿಸ್ತನ ನಿಮಿತ್ತವೇ ಎಂದು ಅರಮನೆಯ ಕಾವಲುಗಾರರೆಲ್ಲರಿಗೂ ಹಾಗೂ ಉಳಿದವರೆಲ್ಲರಿಗೂ ತಿಳಿಯಲ್ಪಟ್ಟಿತು. ಇದಲ್ಲದೆ ಸಹೋದರರಲ್ಲಿ ಬಹಳ ಜನರು ನನ್ನ ಬಂಧನದಿಂದಲೇ ಕರ್ತನಲ್ಲಿ ಭರವಸವುಳ್ಳವರಾಗಿ ದೇವರ ವಾಕ್ಯವನ್ನು ನಿರ್ಭಯದಿಂದ ಹೇಳುವುದಕ್ಕೆ ಇನ್ನೂ ಹೆಚ್ಚು ಧೈರ್ಯಹೊಂದಿದ್ದಾರೆ.

ಹೇಗೆಂದರೆ ನಾನು ಯಾವ ವಿಷಯದಲ್ಲಾದರೂ ನಾಚಿಕೆಪಡದೆ ಎಂದಿನಂತೆ ಈಗಲೂ ಸಹ ತುಂಬಾ ಧೈರ್ಯದಿಂದಿರುವುದರಿಂದ ಬದುಕಿದರೂ ಸರಿಯೇ ಅಥವಾ ಸತ್ತರೂ ಸರಿಯೇ ನನ್ನ ಶರೀರದ ಮೂಲಕ ಕ್ರಿಸ್ತನಿಗೆ ಮಹಿಮೆಯುಂಟಾಗಬೇಕೆಂದು ನನ್ನ ಬಹು ಅಭಿಲಾಷೆಯಾಗಿದೆ, ಹಾಗೆಯೇ ಆಗುವುದೆಂಬ ಭರವಸೆವುಂಟು.

ನನಗಂತೂ ಬದುಕುವುದೆಂದರೆ ಕ್ರಿಸ್ತನೇ, ಸಾಯುವುದು ಲಾಭವೇ. ಶರೀರದಲ್ಲಿಯೇ ಬದುಕಬೇಕಾದ್ದಲ್ಲಿ ನನ್ನ ಕೆಲಸಮಾಡಿ ಫಲಹೊಂದಲು ನನಗೆ ಸಾಧ್ಯವಾಗುವುದು. ಹೀಗಿರಲಾಗಿ ನಾನು ಯಾವುದನ್ನಾರಿಸಿಕೊಳ್ಳಬೇಕೆನ್ನುವುದು ನನಗೆ ತಿಳಿಯದು. ಈ ಎರಡರ ನಡುವೆ ಸಿಕ್ಕಿಕೊಂಡಿದ್ದೇನೆ, ಇಲ್ಲಿಂದ ಹೊರಟು ಕ್ರಿಸ್ತನ ಜೊತೆಯಲ್ಲಿರಬೇಕೆಂಬುದೇ ನನ್ನ ಅಭಿಲಾಷೆ, ಅದು ಅತ್ಯುತ್ತಮವಾಗಿದೆ.

ನೀವು ಹೀಗಿರುವುದು ವಿರೋಧಿಗಳ ನಾಶನಕ್ಕೂ, ನಿಮ್ಮ ರಕ್ಷಣೆಗೂ ಒಂದು ಗುರುತಾಗಿದೆ. ಅದು ದೇವರಿಂದಾದ ಮುನ್ಸೂಚನೆಯಾಗಿದೆ. ಕ್ರಿಸ್ತನ ಮೇಲೆ ನಂಬಿಕೆಯಿಡುವುದು ಮಾತ್ರವಲ್ಲ ಆತನಿಗೋಸ್ಕರ ಬಾಧೆಯನ್ನನುಭವಿಸುವುದು ನಿಮಗೆ ವರವಾಗಿ ದೊರಕಿದೆ.

ಆತನು ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.

ನಿಮ್ಮ ನಂಬಿಕೆಯೆಂಬ ಯಜ್ಞವನ್ನು ದೇವರಿಗರ್ಪಿಸುವ ಸೇವೆಯಲ್ಲಿ ನಾನೇ ಪಾನದ್ರವ್ಯವಾಗಿ ಅರ್ಪಿತವಾಗಬೇಕಾದರೂ ನನಗೆ ಸಂತೋಷವೇ, ನಿಮ್ಮೆಲ್ಲರೊಂದಿಗೂ ಸಂತೋಷ ಪಡುತ್ತೇನೆ.

ಹೀಗಿರಲಾಗಿ ನೀವೇ ನನಗೆ ಮಾಡಬೇಕೆಂದಿರುವ ಉಪಚಾರದಲ್ಲಿ ಕೊರತೆಯಾದದ್ದನ್ನು ತುಂಬುವುದಕ್ಕಾಗಿ ಅವನು ಜೀವದ ಆಸೆಯನ್ನು ತೊರೆದು ಕ್ರಿಸ್ತನ ಸೇವೆಯ ನಿಮಿತ್ತ ಸಾಯುವ ಸ್ಥಿತಿಯಲ್ಲಿದುದ್ದರಿಂದ ನೀವು ಅವನನ್ನು ಪೂರ್ಣ ಸಂತೋಷದಿಂದ ಕರ್ತನ ಹೆಸರಿನಲ್ಲಿ ಸೇರಿಸಿಕೊಳ್ಳಿರಿ. ಅಂಥವರನ್ನು ಮಾನ್ಯರೆಂದೆಣಿಸಿರಿ.

ನಿಜವಾದ ಸುನ್ನತಿಯವರು ಯಾರೆಂದರೆ, ದೇವರಾತ್ಮನಿಂದ ಪ್ರೇರಿತರಾಗಿ ಆರಾಧಿಸುವವರೂ, ಕ್ರಿಸ್ತ ಯೇಸುವಿನಲ್ಲಿ ಹರ್ಷಗೊಳ್ಳುವವರೂ, ಶರೀರಸಂಬಂಧವಾದವುಗಳಲ್ಲಿ ಭರವಸವಿಲ್ಲದವರೂ ಆಗಿರುವ ನಾವುಗಳೇ.

ಆದರೆ, ನನಗೆ ಲಾಭವಾಗಿದ್ದಂಥವುಗಳನ್ನು ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ. ಇಷ್ಟೇ ಅಲ್ಲದೆ, ನನ್ನ ಕರ್ತನಾದ ಕ್ರಿಸ್ತಯೇಸುವನ್ನರಿಯುವುದೇ ಅತಿ ಶ್ರೇಷ್ಠವಾದದ್ದೆಂದು ತಿಳಿದು ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ನಾನು ಎಲ್ಲವನ್ನೂ ಕಳೆದುಕೊಂಡು ಅವುಗಳನ್ನು ಕಸವೆಂದೆಣಿಸುತ್ತೇನೆ. ಇದರಲ್ಲಿ ನನ್ನ ಉದ್ದೇಶವೇನೆಂದರೆ, ನಾನು ಕ್ರಿಸ್ತನನ್ನು ಸಂಪಾದಿಸಿಕೊಂಡು, ಧರ್ಮಶಾಸ್ತ್ರದ ಫಲವಾಗಿರುವ ಸ್ವನೀತಿಯನ್ನಲ್ಲ, ಕ್ರಿಸ್ತನನ್ನು ನಂಬುವುದರಿಂದ ದೊರಕುವಂಥ ಅಂದರೆ ಕ್ರಿಸ್ತನ ಮೇಲಣ ನಂಬಿಕೆಯ ಆಧಾರದಿಂದ ದೇವರು ಕೊಡುವಂಥ ನೀತಿಯನ್ನೇ ಹೊಂದಿ ಕ್ರಿಸ್ತನಲ್ಲಿರುವವನಾಗಿರಬೇಕೆಂಬುದೇ. ಆತನನ್ನೂ ಆತನ ಪುನರುತ್ಥಾನದಲ್ಲಿರುವ ಶಕ್ತಿಯನ್ನೂ, ಆತನ ಬಾಧೆಗಳಲ್ಲಿ ಪಾಲುಗಾರನಾಗಿರುವ ಪದವಿಯನ್ನೂ ತಿಳಿದುಕೊಂಡು ಆತನ ಮರಣದ ವಿಷಯದಲ್ಲಿ ಆತನಂತೆ ರೂಪಾಂತರಗೊಳ್ಳಬೇಕೆಂಬುದೇ ನನ್ನ ಬಯಕೆಯಾಗಿದೆ. ಹೀಗಾದರೆ ಸತ್ತವರಲ್ಲಿ ಕೆಲವರಿಗೆ ಆಗುವ ಪುನರುತ್ಥಾನದ ಅನುಭವ ನನಗೂ ಆದೀತು.

ನಾವಾದರೋ ಪರಲೋಕದ ಪ್ರಜೆಗಳು, ಕರ್ತನಾದ ಯೇಸು ಕ್ರಿಸ್ತನು ಅಲ್ಲಿಂದಲೇ ರಕ್ಷಕನಾಗಿ ಬರುವುದನ್ನು ಎದುರುನೋಡುತ್ತಾ ಇದ್ದೇವೆ. ಆತನು ಎಲ್ಲವನ್ನೂ ತನಗೆ ಅಧೀನಮಾಡಿಕೊಳ್ಳಲಾಗುವ ಪರಾಕ್ರಮವನ್ನು ಹೊಂದಿದವನಾಗಿ ದೀನಾವಸ್ಥೆಯುಳ್ಳ ನಮ್ಮ ದೇಹವನ್ನು ಪ್ರಭಾವವುಳ್ಳ ತನ್ನ ದೇಹದಂತೆ ರೂಪಾಂತರಪಡಿಸುವನು.

ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ, ಸಂತೋಷಪಡಿರಿ ಎಂದು ಪುನಃ ಹೇಳುತ್ತೇನೆ.

ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯಗಳಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ಕರ್ತನಿಗೆ ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವರ ಶಾಂತಿಯು ನಿಮ್ಮ ಹೃದಯಗಳನ್ನೂ, ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಪಾಡುವುದು.

ನಾನು ಈಗ ನಿಮಗೋಸ್ಕರ ಅನುಭವಿಸುತ್ತಿರುವ ಬಾಧೆಗಳಲ್ಲಿ ನನಗೆ ಸಂತೋಷವಿದೆ. ಕ್ರಿಸ್ತನ ಯಾತನೆಗಳಲ್ಲಿ ಕೊರತೆಯಾಗಿರುವುದನ್ನು ಆತನ ಸಭೆಯೆಂಬ ದೇಹಕೋಸ್ಕರ ನಾನು ನನ್ನ ದೇಹದಲ್ಲಿ ಅನುಭವಿಸಿ ತೀರಿಸುತ್ತೇನೆ.

ನೀವು ಕ್ರಿಸ್ತನೊಂದಿಗೆ ಎಬ್ಬಿಸಲ್ಪಟ್ಟಿರುವುದಾದರೆ ಮೇಲಿನವುಗಳನ್ನೇ ಹುಡುಕಿರಿ, ಅಲ್ಲಿ ಕ್ರಿಸ್ತನು ದೇವರ ಬಲಗಡೆಯಲ್ಲಿ ಕುಳಿತುಕೊಂಡಿದ್ದಾನೆ. ಭೂಲೋಕದಲ್ಲಿರುವಂಥವುಗಳ ಬಗ್ಗೆ ಅಲ್ಲ, ಪರಲೋಕದಲ್ಲಿರುವಂಥವುಗಳ ಬಗ್ಗೆ ಯೋಚಿಸಿರಿ. ಯಾಕೆಂದರೆ ನೀವು ಸತ್ತು ಮತ್ತು ನಿಮ್ಮ ಜೀವವು ಕ್ರಿಸ್ತನೊಂದಿಗೆ ದೇವರಲ್ಲಿ ಮರೆಯಾಗಿದೆ. ನಿಮಗೆ ಜೀವವಾಗಿರುವ ಕ್ರಿಸ್ತನು ಪ್ರತ್ಯಕ್ಷನಾಗುವಾಗ ನೀವು ಸಹ ಆತನೊಂದಿಗೆ ಮಹಿಮೆಯಲ್ಲಿ ಪ್ರತ್ಯಕ್ಷರಾಗುವಿರಿ. ಆದುದರಿಂದ ನಿಮ್ಮಲ್ಲಿರುವ ಲೌಕಿಕ ಆಸೆಗಳು ಅಂದರೆ, ಜಾರತ್ವ, ಅಶುದ್ಧತ್ವ, ಕಾಮಾಭಿಲಾಷೆ, ಕೆಟ್ಟ ಅಭಿಲಾಷೆ ಮತ್ತು ವಿಗ್ರಹಾರಾಧನೆಗೆ ಸಮವಾಗಿರುವ ದುರಾಶೆ ಇಂಥವುಗಳನ್ನು ಸಾಯಿಸಿರಿ.

ಕರ್ತನಿಂದ ಬಾಧ್ಯತೆಯೆಂಬ ಪ್ರತಿಫಲವನ್ನು ಹೊಂದುವಿರೆಂದು ತಿಳಿದುಕೊಂಡು ಕರ್ತನಾದ ಕ್ರಿಸ್ತನನ್ನು ಸೇವಿಸುವವರಾಗಿರಿ.

ಇದಲ್ಲದೆ ನೀವು ಬಹಳ ಹಿಂಸೆಯನ್ನು ಅನುಭವಿಸಬೇಕಾಗಿ ಬಂದಿದ್ದರೂ ಪವಿತ್ರಾತ್ಮನಿಂದುಂಟಾದ ಆನಂದದೊಡನೆ ದೇವರ ವಾಕ್ಯವನ್ನು ಅಂಗೀಕರಿಸಿ, ನಮ್ಮನ್ನು ಮತ್ತು ಕರ್ತನಾದ ಯೇಸುವನ್ನು ಅನುಸರಿಸುವವರಾದಿರಿ.

ಆ ಯೆಹೂದ್ಯರು ಕರ್ತನಾದ ಯೇಸುವನ್ನು ಮತ್ತು ಪ್ರವಾದಿಗಳನ್ನೂ ಕೊಂದರು ಹಾಗು ನಮ್ಮನ್ನೂ ಅಟ್ಟಿಬಿಟ್ಟರು. ಅವರು ದೇವರನ್ನು ಮೆಚ್ಚಿಸುವವರಲ್ಲ ಮತ್ತು ಎಲ್ಲಾ ಮನುಷ್ಯರಿಗೂ ವಿರೋಧಿಗಳಾಗಿದ್ದಾರೆ.

ಸಂಕಟಗಳನ್ನು ಅನುಭವಿಸುವುದಕ್ಕಾಗಿಯೇ ನಾವು ನೇಮಿಸಲ್ಪಟ್ಟವರೆಂದು ನೀವೇ ಬಲ್ಲಿರಷ್ಟೆ. ನಾವು ನಿಮ್ಮ ಬಳಿಯಲ್ಲಿದ್ದಾಗ ಸಂಕಟವನ್ನು ಅನುಭವಿಸಲೇಬೇಕೆಂದು ಈ ಮೊದಲೇ ಹೇಳಿದ್ದೆವಲ್ಲಾ. ಅದರಂತೆಯೇ ಆಯಿತು, ಅದು ನಿಮ್ಮ ಅನುಭವಕ್ಕೂ ಬಂದಿತು.

ಸಹೋದರರೇ, ನಿದ್ರೆಹೋಗುವವರ ಗತಿ ಏನೆಂದು ನೀವು ತಿಳಿಯದೆ ಇದ್ದು, ನಿರೀಕ್ಷೆಯಿಲ್ಲದವರಾಗಿರುವ ಇತರರಂತೆ ದುಃಖಿಸಬಾರದು ಎಂಬುದೇ ನಮ್ಮ ಬಯಕೆ. ಯೇಸು ಸತ್ತು ಜೀವಿತನಾಗಿ ಎದ್ದನೆಂದು ನಾವು ನಂಬುತ್ತೇವೆ ಹಾಗೆಯೇ ಯೇಸುವಿನಲ್ಲಿದ್ದು ನಿದ್ರೆಹೋದವರನ್ನು ಸಹ ದೇವರು ಆತನೊಡನೆ ಎಬ್ಬಿಸಿ ಕರೆದುಕೊಂಡು ಬರುವನೆಂದು ನಂಬಬೇಕಲ್ಲವೇ. ನಾವು ಕರ್ತನ ಮಾತಿನ ಆಧಾರದ ಮೇಲೆ ನಿಮಗೆ ಹೇಳುವುದೇನಂದರೆ, ಕರ್ತನು ಪುನರಾಗಮಿಸುವವರೆಗೆ ಜೀವದಿಂದುಳಿದಿರುವ ನಾವು ಮರಣ ಹೊಂದಿದವರಿಗಿಂತ ಮುಂದಾಗುವುದಿಲ್ಲ.

ನಾವು ಎಚ್ಚರವಾಗಿದ್ದರೂ ಸರಿಯೇ ಅಥವಾ ನಿದ್ರೆಯಲ್ಲಿದ್ದರೂ ಸರಿಯೇ, ತನ್ನ ಜೊತೆಯಲ್ಲಿಯೇ ಜೀವಿಸಬೇಕೆಂದು ಯೇಸು ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟನು.

ಯಾವಾಗಲೂ ಸಂತೋಷಿಸಿರಿ, ಎಡೆಬಿಡದೆ ಪ್ರಾರ್ಥನೆಮಾಡಿರಿ, ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿ ತೋರಿಬಂದ ದೇವರ ಚಿತ್ತವಾಗಿದೆ.

ಹೀಗಿರುವುದರಿಂದ ನಿಮಗೆ ಬಂದಿರುವ ಎಲ್ಲಾ ಹಿಂಸೆಗಳಲ್ಲಿಯೂ ನೀವು ಅನುಭವಿಸುತ್ತಿರುವ ಎಲ್ಲಾ ಸಂಕಟಗಳಲ್ಲಿಯೂ ತೋರಿಬಂದ ನಿಮ್ಮ ತಾಳ್ಮೆ ನಂಬಿಕೆಗಳ ನಿಮಿತ್ತ ದೇವ ಜನರ ಸಭೆಗಳಲ್ಲಿ ನಾವೇ ಹೆಮ್ಮೆಯಿಂದ ಮಾತನಾಡುತ್ತೇವೆ. ದೇವರ ನೀತಿಯುಳ್ಳ ತೀರ್ಪಿಗೆ ಪ್ರಮಾಣ ಯಾವುದೆಂದರೆ, ನೀವು ಪ್ರಯಾಸಪಡುತ್ತಿರುವ ದೇವರ ರಾಜ್ಯಕ್ಕೆ ನಿಮ್ಮನ್ನು ಯೋಗ್ಯರನ್ನಾಗಿಸುವುದು. ನಿಮ್ಮನ್ನು ಸಂಕಟಪಡಿಸುವವರಿಗೆ ಪ್ರತಿಯಾಗಿ ಸಂಕಟವನ್ನೂ, ಸಂಕಟಪಡುವವರಾದ ನಿಮಗೆ ನಮ್ಮೊಡನೆ ಉಪಶಮನವನ್ನೂ ಕೊಡುವುದು ದೇವರ ಎಣಿಕೆಯಲ್ಲಿ ನ್ಯಾಯವಾಗಿದೆಯಷ್ಟೆ. ಯೇಸು ಕರ್ತನು ತನ್ನ ಶಕ್ತಿಯುತ ದೇವದೂತರೊಂದಿಗೆ ಅಗ್ನಿ ಜ್ವಾಲೆಗಳ ಮೂಲಕ ಪರಲೋಕದಿಂದ ಪ್ರತ್ಯಕ್ಷನಾಗುವ ಕಾಲದಲ್ಲಿ ಅದನ್ನು ಕೊಡುವನು. ಆಗ ನಮ್ಮ ಕರ್ತನಾದ ಯೇಸುವು ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ವಿಧೇಯರಾಗದವರಿಗೂ ಪ್ರತಿಕಾರ ಮಾಡುವನು. ಅವರು ಕರ್ತನ ಸಮ್ಮುಖಕ್ಕೂ ಆತನ ಪರಾಕ್ರಮದ ವೈಭವಕ್ಕೂ ದೂರವಾಗಿ ನಿತ್ಯನಾಶನವೆಂಬ ದಂಡನೆಯನ್ನು ಅನುಭವಿಸುವರು. ಆ ದಿನದಲ್ಲಿ ಆತನು ಬರುವಾಗ ತನ್ನ ಪರಿಶುದ್ಧ ಜನರಿಂದ ಮಹಿಮೆ ಹೊಂದಿದವನಾಗಿಯೂ ಮತ್ತು ನಾವು ನಿಮಗೆ ಹೇಳಿದ ಸಾಕ್ಷಿಯನ್ನು ನಂಬಿದವರೆಲ್ಲರ ಮೂಲಕ ತನ್ನ ವಿಷಯದಲ್ಲಿ ಆಶ್ಚರ್ಯ ಹುಟ್ಟಿಸುವನು.

ದೇವರು ನಮಗೆ ಕೊಟ್ಟಿರುವ ಆತ್ಮವು ಬಲ, ಪ್ರೀತಿ, ಸಂಯಮಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ. ಆದ್ದರಿಂದ ನೀನು ನಮ್ಮ ಕರ್ತನನ್ನು ಕುರಿತು ಹೇಳುವ ಸಾಕ್ಷಿಯ ವಿಷಯದಲ್ಲಾಗಲಿ ಆತನ ಸೆರೆಯವನಾದ ನನ್ನ ವಿಷಯದಲ್ಲಾಗಲಿ ನಾಚಿಕೆ ಪಡದೆ, ದೇವರ ಬಲವನ್ನು ಆಶ್ರಯಿಸಿ ನನ್ನೊಂದಿಗೆ ಸುವಾರ್ತೆಗೋಸ್ಕರ ಕಷ್ಟವನ್ನನುಭವಿಸು. ಆತನು ನಮ್ಮಲ್ಲಿರುವ ಸುಕೃತ್ಯಗಳನ್ನು ನೋಡಿದ್ದರಿಂದಲ್ಲ, ತನ್ನ ಸಂಕಲ್ಪವನ್ನು ಅನುಸರಿಸಿ ಕೃಪೆಯಿಂದಲೇ ನಮ್ಮನ್ನು ರಕ್ಷಿಸಿ ಪರಿಶುದ್ಧರಾಗುವುದಕ್ಕೆ ಕರೆದನು. ಆತನು ಅನಾದಿಕಾಲದಲ್ಲಿ ಆ ಕೃಪೆಯನ್ನು ಕ್ರಿಸ್ತ ಯೇಸುವಿನಲ್ಲಿ ನಮಗೆ ಅನುಗ್ರಹಿಸಿ, ಈಗ ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನ ಪ್ರತ್ಯಕ್ಷತೆಯ ಮೂಲಕ ಅದನ್ನು ಪ್ರಕಟಪಡಿಸಿದ್ದಾನೆ. ಈತನು ಮರಣವನ್ನು ನಿರ್ಮೂಲಗೊಳಿಸಿ ಸುವಾರ್ತೆಯ ಮೂಲಕ ಜೀವವನ್ನೂ ಅಮರತ್ವವನ್ನೂ ಬೆಳಕಿಗೆ ತಂದಿದ್ದಾನೆ.

ಅದರ ನಿಮಿತ್ತದಿಂದಲೇ ಈ ಕಷ್ಟಗಳನ್ನು ಅನುಭವಿಸುತ್ತಾ ಇದ್ದೇನೆ. ಆದರೂ ನಾನು ನಾಚಿಕೆಪಡುವುದಿಲ್ಲ. ನಾನು ನಂಬಿರುವಾತನನ್ನು ಬಲ್ಲೆನು. ಆತನು ನನಗೆ ಒಪ್ಪಿಸಿಕೊಟ್ಟಿರುವುದನ್ನು ಆತನು ಆ ದಿನದವರೆಗೆ ಕಾಪಾಡುವುದಕ್ಕೆ ಶಕ್ತನಾಗಿದ್ದಾನೆಂದು ದೃಢವಾಗಿ ನಂಬಿದ್ದೇನೆ.

ಕ್ರಿಸ್ತ ಯೇಸುವಿನ ಒಳ್ಳೆಯ ಸೈನಿಕನಂತೆ ನನ್ನೊಂದಿಗೆ ಕಷ್ಟವನ್ನನುಭವಿಸು. ಯುದ್ಧಕ್ಕೆ ಹೋಗುವ ಸೈನಿಕನು ಲೋಕವ್ಯವಹಾರದಲ್ಲಿ ಸಿಕ್ಕಿಕೊಳ್ಳದೆ, ತನ್ನನ್ನು ಸೈನ್ಯದಲ್ಲಿ ಸೇರಿಸಿಕೊಂಡವನನ್ನು ಮೆಚ್ಚಿಸುವುದಕ್ಕಾಗಿ ಪ್ರಯಾಸ ಪಡುತ್ತಿರುವನಲ್ಲವೇ.

ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೂ ದಾವೀದನ ವಂಶದವನೂ ಆಗಿರುವ ಯೇಸು ಕ್ರಿಸ್ತನನ್ನು ಜ್ಞಾಪಕಮಾಡಿಕೋ, ಇದೇ ನಾನು ಸಾರುವ ಸುವಾರ್ತೆ. ಇದರಲ್ಲಿ ನಾನು ಕಷ್ಟವನ್ನನುಭವಿಸಿ ದುಷ್ಕರ್ಮಿಯಂತೆ ಸಂಕೋಲೆಯಿಂದ ಬಂಧಿಸಲ್ಪಟ್ಟವನಾಗಿದ್ದೇನೆ. ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ. ಆದಕಾರಣ ದೇವರು ಆರಿಸಿಕೊಂಡವರು ಸಹ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು ನಿತ್ಯ ಮಹಿಮೆಯ ಸಹಿತವಾಗಿ ಹೊಂದಬೇಕೆಂದು ನಾನು ಅವರಿಗೋಸ್ಕರ ಎಲ್ಲವನ್ನು ತಾಳಿಕೊಳ್ಳುತ್ತೇನೆ. ಈ ಮಾತು ನಂಬತಕ್ಕದ್ದಾಗಿದೆ, ಅದೇನೆಂದರೆ “ನಾವು ಆತನೊಡನೆ ಸತ್ತಿದ್ದರೆ ಆತನೊಡನೆ ಜೀವಿಸುವೆವು, ಸಹಿಸಿಕೊಳ್ಳುವವರಾಗಿದ್ದರೆ ಆತನೊಡನೆ ಆಳುವೆವು. ನಾವು ಯೇಸುವಿನವರಲ್ಲವೆಂದು ಹೇಳಿದರೆ ಆತನು ನಮ್ಮನ್ನು ತನ್ನವರಲ್ಲವೆಂದು ಹೇಳುವನು.

ನೀನಾದರೋ ನನ್ನನ್ನು ಅನುಸರಿಸುವವನಾಗಿದ್ದು, ನನ್ನ ಬೋಧನೆ, ನಡತೆ, ಉದ್ದೇಶ, ನಂಬಿಕೆ, ದೀರ್ಘಶಾಂತಿ, ಪ್ರೀತಿ, ಸೈರಣೆ ಇವುಗಳನ್ನೂ, ಅಂತಿಯೋಕ್ಯ, ಇಕೋನ್ಯ, ಲುಸ್ತ್ರ ಎಂಬ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಹಿಂಸೆಗಳನ್ನೂ, ಕಷ್ಟಾನುಭವಗಳನ್ನೂ ತಿಳಿದವನಾಗಿದ್ದೀ. ನಾನು ಎಂಥೆಂಥ ಹಿಂಸೆಗಳನ್ನು ಸಹಿಸಿಕೊಂಡೆನು, ಅವೆಲ್ಲವುಗಳೊಳಗಿನಿಂದ ಕರ್ತನು ನನ್ನನ್ನು ಬಿಡಿಸಿದನು. ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವುದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.

ಆದರೆ ನೀನು ಎಲ್ಲಾ ವಿಷಯಗಳಲ್ಲಿಯೂ ಸ್ವಸ್ಥಚಿತ್ತನಾಗಿರು, ಹಿಂಸೆಯನ್ನು ತಾಳಿಕೋ, ಸುವಾರ್ತಿಕನ ಕೆಲಸವನ್ನು ಮಾಡು, ನಿನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ಮಾಡು. ಯಾಕೆಂದರೆ ನಾನಂತೂ ಈಗಲೇ ಪಾನದ್ರವ್ಯವಾಗಿ ಅರ್ಪಿತನಾಗುತ್ತಾ ಇದ್ದೇನೆ. ನನ್ನ ನಿರ್ಗಮನದ ಸಮಯವು ಸಮೀಪವಾಗುತ್ತಾ ಬಂದಿದೆ. ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಓಡಿಮುಗಿಸಿದ್ದೇನೆ, ಕ್ರಿಸ್ತ ನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ. ನೀತಿವಂತರಿಗೆ ದೊರಕುವ ಜಯಮಾಲೆಯು ಮುಂದೆ ನನಗಾಗಿ ಸಿದ್ಧವಾಗಿದೆ, ಅದನ್ನು ನೀತಿವಂತನಾದ ನ್ಯಾಯಾಧಿಪತಿಯಾಗಿರುವ ಕರ್ತನು ಆ ದಿನದಲ್ಲಿ ನನಗೆ ಕೊಡುವನು, ನನಗೆ ಮಾತ್ರವಲ್ಲದೆ ತನ್ನ ಪ್ರತ್ಯಕ್ಷತೆಯನ್ನು ಪ್ರೀತಿಸುವವರೆಲ್ಲರಿಗೂ ಕೊಡುವನು.

ಕ್ರಿಸ್ತ ಯೇಸುವಿನ ಸೆರೆಯಾಳಾಗಿರುವ ಪೌಲನೂ, ಸಹೋದರನಾದ ತಿಮೊಥೆಯನೂ, ನಮಗೆ ಪ್ರಿಯನೂ ಜೊತೆ ಸೇವಕನೂ ಆಗಿರುವ ಫಿಲೆಮೋನನೆಂಬ ನಿನಗೂ,

ನೀನು ಯುಕ್ತವಾದದ್ದನ್ನು ಮಾಡಬೇಕೆಂದು ಆಜ್ಞಾಪಿಸುವುದಕ್ಕೆ ನನಗೆ ಕ್ರಿಸ್ತನಲ್ಲಿ ಪೂರ್ಣ ಅಧಿಕಾರವಿದ್ದರೂ ಹಾಗೆ ಆಜ್ಞಾಪಿಸದೇ

ಆದರೂ ದೇವದೂತರಿಗಿಂತ ಸ್ವಲ್ಪ ಕಡಿಮೆಯಾಗಿ ಮಾಡಲ್ಪಟ್ಟವನಾದ ಯೇಸು ಬಾಧೆಯನ್ನುಭವಿಸಿ ಮೃತಪಟ್ಟದ್ದರಿಂದಲೇ ಮಹಿಮೆಯನ್ನೂ ಗೌರವವನ್ನೂ ಕಿರೀಟವಾಗಿ ಹೊಂದಿರುವುದನ್ನು ನಾವು ನೋಡುತ್ತೇವೆ. ಅದಕ್ಕಾಗಿಯೇ ದೇವರ ಕೃಪೆಯಿಂದ ಯೇಸು ಎಲ್ಲರಿಗೋಸ್ಕರ ಮರಣವನ್ನು ಅನುಭವಿಸಿದ್ದಾನೆ. ಸಮಸ್ತವು ಯಾವನಿಗೋಸ್ಕರವೂ ಯಾವನಿಂದಲೂ ಉಂಟಾಯಿತೋ, ಆತನು ಬಹುಮಂದಿ ಪುತ್ರರನ್ನು ಮಹಿಮೆಗೆ ಸೇರಿಸುವುದಕ್ಕಾಗಿ, ಅವರ ರಕ್ಷಣಾನಾಯಕನನ್ನು ಬಾಧೆಗಳ ಮೂಲಕ ಸಿದ್ಧಿಗೆ ತರುವುದು ಆತನಿಗೆ ಯುಕ್ತವಾಗಿತ್ತು.

ಇದಲ್ಲದೆ ಮಕ್ಕಳು ರಕ್ತ ಮಾಂಸಧಾರಿಗಳು ಆಗಿರುವುದರಿಂದ ಯೇಸು ಸಹ ಅವರಂತೆಯೇ ಆದನು. ತನ್ನ ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ನಾಶಮಾಡುವುದಕ್ಕೂ, ಮರಣ ಭಯದಿಂದ ತಮ್ಮ ಜೀವಮಾನದಲ್ಲೆಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸುವುದಕ್ಕೂ ಅವರಂತೆ ರಕ್ತಮಾಂಸಧಾರಿಯಾದನು.

ಆದಕಾರಣ ದೇವರ ಜನರಿಗೆ ಸಬ್ಬತೆಂಬ ವಿಶ್ರಾಂತಿಯು ಇನ್ನೂ ಉಂಟು. ಹೇಗೆಂದರೆ ದೇವರು ತನ್ನ ಕೆಲಸಗಳನ್ನು ಮುಗಿಸಿ ಹೇಗೆ ವಿಶ್ರಮಿಸಿಕೊಂಡನೋ ಹಾಗೆಯೇ ಆತನ ವಿಶ್ರಾಂತಿಯಲ್ಲಿ ಸೇರಿರುವವನು ಸಹ ತನ್ನ ಕೆಲಸಗಳನ್ನು ಮುಗಿಸಿ ವಿಶ್ರಮಿಸಿಕೊಂಡಿದ್ದಾನೆ. ಆದ್ದರಿಂದ ನಾವು ಈ ವಿಶ್ರಾಂತಿಯಲ್ಲಿ ಸೇರುವುದಕ್ಕೆ ಪ್ರಯತ್ನಿಸೋಣ. ನಮ್ಮಲ್ಲಿ ಒಬ್ಬರಾದರೂ ಅವರಂತೆ ಅವಿಧೇಯರಾಗಿ ಬಿದ್ದುಹೋಗದೆ ಇರೋಣ.

ಕ್ರಿಸ್ತನು ತಾನೇ ಭೂಲೋಕದಲ್ಲಿ ಮನುಷ್ಯನಾಗಿ ಜೀವಿಸಿದ್ದ ಕಾಲದಲ್ಲಿ, ಮರಣದಿಂದ ತಪ್ಪಿಸಿ ಕಾಪಾಡಲು ಶಕ್ತನಾಗಿರುವಾತನಿಗೆ ಗಟ್ಟಿಯಾಗಿ ಮೊರೆಯಿಡುತ್ತಾ, ಕಣ್ಣೀರನ್ನು ಸುರಿಸುತ್ತಾ, ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿದನು. ದೇವರ ಮೇಲಣ ಭಯಭಕ್ತಿಯ ನಿಮಿತ್ತ ಆತನ ಪ್ರಾರ್ಥನೆಯನ್ನು ದೇವರು ಕೇಳಿದನು. ಹೀಗೆ ಆತನು ಮಗನಾಗಿದ್ದರೂ ತಾನು ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು. ಇದಲ್ಲದೆ ಆತನು ಪರಿಪೂರ್ಣನಾಗಿ, ತನಗೆ ವಿಧೇಯರಾಗಿರುವ ಎಲ್ಲರಿಗೂ ನಿತ್ಯ ರಕ್ಷಣೆಗೆ ಕಾರಣನಾದನು.

ಹೀಗಿರಲಾಗಿ ನೀವು ಜ್ಞಾನಪ್ರಕಾಶವನ್ನು ಹೊಂದಿದ ಮೇಲೆ ಕಷ್ಟಾನುಭವವೆಂಬ ಬಹು ಹೋರಾಟವನ್ನು ಸಹಿಸಿಕೊಂಡ ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಿರಿ. ಕೆಲವು ಸಾರಿ ನೀವು ನಿಂದೆಗಳನ್ನೂ, ಸಂಕಟಗಳನ್ನೂ, ಅನುಭವಿಸಿ ಹಾಸ್ಯಕ್ಕೆ ಗುರಿಯಾದಿರಿ. ಕೆಲವು ಸಾರಿ ಅಂಥವುಗಳನ್ನು ಅನುಭವಿಸಿದವರಲ್ಲಿ ಪಾಲುಗಾರರಾಗಿದ್ದು ಕಷ್ಟಾನುಭವಿಗಳಾದಿರಿ. ನೀವು ಸೆರೆಯವರಿಗೆ ಅನುತಾಪ ತೋರಿಸಿ, ನಿಮಗೋಸ್ಕರವಾಗಿ ಉತ್ತಮವಾಗಿಯೂ, ಸ್ಥಿರವಾಗಿಯೂ ಇರುವ ಆಸ್ತಿಯುಂಟೆಂದು ಚೆನ್ನಾಗಿ ಅರಿತುಕೊಂಡು, ನಿಮ್ಮ ಸೊತ್ತನ್ನು ಸುಲುಕೊಳ್ಳುವವರಿಗೆ ಸಂತೋಷದಿಂದ ಬಿಟ್ಟು ಕೊಟ್ಟಿದ್ದೀರಿ. ಆದ್ದರಿಂದ ನಿಮ್ಮ ಧೈರ್ಯವನ್ನು ಬಿಟ್ಟುಬಿಡಬೇಡಿರಿ. ಅದಕ್ಕೆ ಮಹಾ ಪ್ರತಿಫಲ ಉಂಟು.

ಇವರೆಲ್ಲರು ವಾಗ್ದಾನಗಳ ಫಲವನ್ನು ಹೊಂದಲಿಲ್ಲ. ಆದರೂ ಅವುಗಳನ್ನು ದೂರದಿಂದ ನೋಡಿ ಮತ್ತು ಉಲ್ಲಾಸದೊಡನೆ ಸ್ವೀಕರಿಸಿ ನಂಬಿಕೆಯುಳ್ಳವರಾಗಿ ಮೃತರಾದರು. ತಾವು ಭೂಮಿಯ ಮೇಲೆ ಪರದೇಶದವರೂ ಪ್ರವಾಸಿಗಳು ಆಗಿದ್ದೆವೆಂದು ಒಪ್ಪಿಕೊಂಡರು. ಇಂಥ ಮಾತುಗಳನ್ನಾಡುವವರು ತಾವು ಸ್ವದೇಶವನ್ನು ಹುಡುಕುವವರಾಗಿದ್ದರೆಂಬುದನ್ನು ವ್ಯಕ್ತಪಡಿಸುತ್ತದೆ. ತಾವು ಬಿಟ್ಟು ಬಂದ ದೇಶದ ಮೇಲೆ ಮನಸ್ಸಿಟ್ಟವರಾಗಿದ್ದರೆ ಅಲ್ಲಿಗೆ ಹಿಂದಿರುಗಿ ಹೋಗುವ ಅವಕಾಶಗಳು ಅವರಿಗಿದ್ದವು. ಆದರೆ ಅವರು ಪರಲೋಕವೆಂಬ ಉತ್ತಮ ದೇಶವನ್ನು ಹಾರೈಸುವವರು. ಆದ್ದರಿಂದ ದೇವರು ಅವರ ದೇವರೇ ಎನ್ನಿಸಿಕೊಳ್ಳುವುದಕ್ಕೆ ನಾಚಿಕೆಗೊಳ್ಳದೇ, ಅವರಿಗೋಸ್ಕರ ಪಟ್ಟಣವನ್ನು ಸಿದ್ಧಮಾಡಿದ್ದಾನೆ.

ಸ್ವಲ್ಪ ಕಾಲದಲ್ಲಿ ಗತಿಸಿ ಹೋಗುವ ಪಾಪಭೋಗಗಳನ್ನು ಅನುಭವಿಸುವುದಕ್ಕಿಂತ, ದೇವಜನರೊಂದಿಗೆ ಕಷ್ಟವನ್ನು ಅನುಭವಿಸುವುದೇ ಮೇಲೆಂದು ತೀರ್ಮಾನಿಸಿಕೊಂಡನು. ಐಗುಪ್ತದೇಶದ ಸರ್ವಐಶ್ವರ್ಯಕ್ಕಿಂತಲೂ, ಕ್ರಿಸ್ತನ ನಿಮಿತ್ತವಾಗಿ ಉಂಟಾಗುವ ನಿಂದೆಯೇ ಶ್ರೇಷ್ಠ ಭಾಗ್ಯವೆಂದೆಣಿಸಿಕೊಂಡನು. ಏಕೆಂದರೆ ಮುಂಬರುವ ಪ್ರತಿಫಲದ ಮೇಲೆ ಕಣ್ಣಿಟ್ಟಿದ್ದನು. ನಂಬಿಕೆಯಿಂದಲೇ ಅವನು ಅರಸನ ರೌದ್ರಕ್ಕೆ ಭಯಪಡದೇ ಐಗುಪ್ತದೇಶವನ್ನು ಬಿಟ್ಟುಹೋದನು. ಏಕೆಂದರೆ ಅವನು ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನಂತೆ ದೃಢಚಿತ್ತನಾಗಿದ್ದನು.

ಇನ್ನೂ ಏನು ಹೇಳಬೇಕು? ಗಿದ್ಯೋನ್, ಬಾರಾಕ ಸಂಸೋನ, ಯೆಪ್ತಾಹ, ದಾವೀದ, ಸಮುವೇಲ ಮತ್ತು ಪ್ರವಾದಿಗಳ ವಿಷಯವಾಗಿ ಹೇಳಬೇಕಾದರೆ ನನಗೆ ಸಮಯ ಸಾಲದು. ನಂಬಿಕೆಯ ಮೂಲಕ ಅವರು ರಾಜ್ಯಗಳನ್ನೂ ಸ್ವಾಧೀನ ಮಾಡಿಕೊಂಡರು, ನೀತಿಯನ್ನು ಸ್ಥಾಪಿಸಿದರು, ವಾಗ್ದಾನಗಳನ್ನು ಪಡೆದುಕೊಂಡರು, ಸಿಂಹಗಳ ಬಾಯಿ ಕಟ್ಟಿದರು., ಬೆಂಕಿಯ ಶಕ್ತಿಯನ್ನು ನಂದಿಸಿದರು, ಕತ್ತಿಯ ಬಾಯಿಂದ ತಪ್ಪಿಸಿಕೊಂಡರು, ದುರ್ಬಲರಾಗಿದ್ದು ಬಲಿಷ್ಠರಾದರು, ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು, ಪರದೇಶದವರ ಸೈನ್ಯಗಳನ್ನು ಓಡಿಸಿಬಿಟ್ಟರು. ಸ್ತ್ರೀಯರು ಸತ್ತುಹೋಗಿದ್ದ ತಮ್ಮವರನ್ನು ಜೀವದಿಂದ ತಿರುಗಿ ಪಡೆದುಕೊಂಡರು. ಕೆಲವರು ತಾವು ಯಾತನೆ ಹೊಂದುತ್ತಿರುವಾಗ ಶ್ರೇಷ್ಠ ಪುನರುತ್ಥಾನವನ್ನು ಹೊಂದುವುದಕ್ಕೋಸ್ಕರ, ಬಿಡುಗಡೆಯನ್ನು ತಿರಸ್ಕರಿಸಿದರು. ಬೇರೆ ಕೆಲವರು ಅಪಹಾಸ್ಯ, ಕೊರಡೆಯ ಪೆಟ್ಟು, ಬೇಡಿ, ಸೆರೆಮನೆವಾಸಗಳನ್ನು ಅನುಭವಿಸಿದರು. ಕೆಲವರನ್ನು ಜನರು ಕಲ್ಲೆಸೆದು ಕೊಂದರು, ಕೆಲವರನ್ನು ಗರಗಸದಿಂದ ಎರಡು ಭಾಗವಾಗಿ ಕೊಯ್ದು ಕೊಂದರು, ಕೆಲವರನ್ನು ಕತ್ತಿಯಿಂದ ಕೊಂದರು. ಕೆಲವರು ಕೊರತೆ, ಹಿಂಸೆ, ಬಾಧೆ ಇವುಗಳನ್ನು ಅನುಭವಿಸುವವರಾಗಿದ್ದು ಕುರಿ ಮೇಕೆಗಳ ಚರ್ಮಗಳನ್ನು ಉಟ್ಟುಕೊಂಡವರಾಗಿ ಅಲೆದಾಡಿದರು. ಇಂಥವರಿಗೆ ಈ ಲೋಕವು ಯೋಗ್ಯಸ್ಥಳವಾಗಿರಲಿಲ್ಲ. ಅವರು ತಮ್ಮ ದೇಶದ ಮರುಭೂಮಿ, ಬೆಟ್ಟ, ಗವಿ, ಕುಣಿಗಳಲ್ಲಿ ಅಲೆಯುವವರಾಗಿದ್ದರು.

ಆದಕಾರಣ ಇಷ್ಟು ಸಾಕ್ಷಿಗಳ ದೊಡ್ಡ ಗುಂಪು ಮೇಘದಂತೆ ನಮ್ಮ ಸುತ್ತಲು ಇರುವುದರಿಂದ ನಮಗೆ ಅಭ್ಯಂತರಪಡಿಸುವ ಎಲ್ಲಾ ಭಾರವನ್ನೂ, ಸುಲಭವಾಗಿ ಮುತ್ತಿಕೊಳ್ಳುವ ಪಾಪವನ್ನು ಸಹ ನಾವು ತೆಗೆದಿಟ್ಟು, ನಂಬಿಕೆಯನ್ನು ಹುಟ್ಟಿಸುವಾತನೂ ಅದನ್ನು ಪರಿಪೂರ್ಣಗೊಳಿಸುವಾತನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸಹನೆಯಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅಪಮಾನವನ್ನು ಅಲಕ್ಷ್ಯಮಾಡಿ, ಶಿಲುಬೆಯ ಮರಣವನ್ನು ಸಹಿಸಿಕೊಂಡು, ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನನಾಗಿದ್ದಾನೆ.

ನೀವು ಮನಗುಂದಿದವರಾಗಿ ಬೇಸರಗೊಳ್ಳದಂತೆ ಯೇಸುವನ್ನು ಕುರಿತು ಯೋಚಿಸಿರಿ. ಆತನು ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡನು. ನೀವು ಪಾಪಕ್ಕೆ ವಿರೋಧವಾಗಿ ಹೋರಾಡುವುದರಲ್ಲಿ ರಕ್ತವನ್ನು ಸುರಿಸುವಷ್ಟು ಹೋರಾಡಲಿಲ್ಲವಲ್ಲ.

ಅದರಂತೆ ಯೇಸು ಕೂಡ ಸ್ವಂತ ರಕ್ತದಿಂದ ತನ್ನ ಜನರನ್ನು ಶುದ್ಧೀಕರಿಸುವುದಕ್ಕೋಸ್ಕರ ಪಟ್ಟಣದ ಹೊರಗೆ ಸತ್ತನು. ಆದ್ದರಿಂದ ನಾವು ಆತನ ನಿಮಿತ್ತ ಉಂಟಾಗುವ ನಿಂದೆಯನ್ನು ತಾಳಿಕೊಳ್ಳುವವರಾಗಿ, ಪಾಳೆಯದ ಆಚೆ ಆತನ ಬಳಿಗೆ ಹೊರಟುಹೋಗೊಣ. ಏಕೆಂದರೆ ಇಹದಲ್ಲಿ ಶಾಶ್ವತವಾದ ಪಟ್ಟಣವು ನಮಗಿಲ್ಲ. ಭವಿಷ್ಯತ್ತಿನಲ್ಲಿ ಬರುವ ಪಟ್ಟಣವನ್ನು ಎದುರುನೋಡುತ್ತಾ ಇದ್ದೇವೆ.

ನನ್ನ ಸಹೋದರರೇ, ನೀವು ನಾನಾವಿಧವಾದ ಕಷ್ಟಗಳನ್ನು ಅನುಭವಿಸುವಾಗ ಅದನ್ನು ಕೇವಲ ಆನಂದಕರವಾದದ್ದೆಂದು ತಿಳಿಯಿರಿ. ಏಕೆಂದರೆ ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ನಿಮಗೆ ತಾಳ್ಮೆಯನ್ನುಂಟು ಮಾಡುತ್ತದೆಂದು ನೀವು ತಿಳಿಯಿರಿ. ಆ ತಾಳ್ಮೆಯು ಸಂಪೂರ್ಣವಾಗಿ ನಿಮ್ಮಲ್ಲಿ ಫಲಿಸಲಿ, ಆಗ ನೀವು ಸರ್ವಸುಗುಣಸಂಪನ್ನರೂ, ಪರಿಪೂರ್ಣರೂ, ಯಾವುದಕ್ಕೂ ಕಡಿಮೆಯಿಲ್ಲದವರೂ ಆಗುವಿರಿ.

ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು. ಅವನು ಪರಿಶೋಧಿತನಾದ ಮೇಲೆ ಕರ್ತನು ತನ್ನನ್ನು ಪ್ರೀತಿಸುವವರಿಗೆ ವಾಗ್ದಾನಮಾಡಿದಂತೆ ಜೀವದ ಕಿರೀಟವನ್ನು ಹೊಂದುವನು.

ಸಹೋದರರೇ, ಬಾಧೆಯನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ವಿಷಯದಲ್ಲಿ ಕರ್ತನ ಹೆಸರಿನಲ್ಲಿ ಮಾತನಾಡಿದ ಪ್ರವಾದಿಗಳನ್ನೇ ಮಾದರಿ ಮಾಡಿಕೊಳ್ಳಿರಿ. ಇಗೋ, ತಾಳಿಕೊಳ್ಳುವವರನ್ನು ಧನ್ಯರೆಂದು ನಾವು ಪರಿಗಣಿಸುತ್ತೇವಲ್ಲವೇ. ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು ಬಹಳ ಕರುಣಾಸಾಗರನೂ ಮತ್ತು ದಯಾಳುವೂ ಆಗಿದ್ದಾನೆಂದು ತಿಳಿದಿರುವಿರಿ.

ನಮ್ಮನ್ನು ಲಯ, ಕಳಂಕ, ನಾಶಗಳಿಲ್ಲದ ಬಾಧ್ಯತೆಯನ್ನು ಎದುರು ನೋಡುವವರನ್ನಾಗಿ ಮಾಡಿದನು. ಆ ಬಾಧ್ಯತೆಯು ನಿಮಗೋಸ್ಕರ ಪರಲೋಕದಲ್ಲಿ ಇಡಲ್ಪಟ್ಟಿದೆ. ಅಂತ್ಯ ಕಾಲದಲ್ಲಿ ಪ್ರಕಟವಾಗುವುದಕ್ಕೆ ಸಿದ್ಧವಾಗಿರುವ ರಕ್ಷಣೆಯು ನಂಬುವವರಾದ ನಿಮಗೆ ದೊರೆಯಬೇಕೆಂದು ದೇವರು ನಿಮ್ಮನ್ನು ತನ್ನ ಶಕ್ತಿಯಿಂದ ಕಾಪಾಡುತ್ತಾನೆ.

ನೀವು ಜೀವವುಳ್ಳ ಕಲ್ಲಾಗಿರುವಾತನ ಬಳಿಗೆ ಬಂದಿದ್ದೀರಿ. ಆ ಕಲ್ಲನ್ನು ಜನರು ನಿರಾಕರಿಸಿದರು ಆದರೆ ಅದು ದೇವರಿಂದ ಆರಿಸಿಕೊಳ್ಳಲ್ಪಟ್ಟದು ಮತ್ತು ಆತನಿಗೆ ಅಮೂಲ್ಯವಾದದ್ದು ಆಗಿದೆ. ನೀವು ಸಹ ಜೀವವುಳ್ಳ ಕಲ್ಲುಗಳಾಗಿದ್ದು ಆತ್ಮೀಕವಾದ ಮಂದಿರವಾಗುವುದಕ್ಕೆ ಕಟ್ಟಲ್ಪಡುತ್ತಾ ಇದ್ದೀರಿ. ಯೇಸು ಕ್ರಿಸ್ತನ ಮೂಲಕ ದೇವರಿಗೆ ಸಮರ್ಪಕವಾದ ಆತ್ಮೀಕ ಯಜ್ಞಗಳನ್ನು ಸಮರ್ಪಿಸುವುದಕ್ಕೆ ಪವಿತ್ರ ಯಾಜಕ ವರ್ಗದವರಾಗಿದ್ದೀರಿ.

ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿದ್ದೀರಿ. ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ಆತನ ಹೆಜ್ಜೆಯ ಜಾಡಿಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು. ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ. ಬಯ್ಯುವವರನ್ನು ಆತನು ಪ್ರತಿಯಾಗಿ ಬಯ್ಯಲಿಲ್ಲ, ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ, ನ್ಯಾಯವಾಗಿ ತೀರ್ಪು ಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು.

ಒಂದು ವೇಳೆ ನೀವು ನೀತಿಯ ನಿಮಿತ್ತವೇ ಬಾಧೆಪಟ್ಟರೆ ನೀವು ಧನ್ಯರೇ. ಅವರ ಬೆದರಿಕೆಗೆ ಹೆದರಬೇಡಿರಿ, ಕಳವಳಪಡಬೇಡಿರಿ.

ಕ್ರಿಸ್ತನು ಸಹ ನೀತಿವಂತನಾಗಿದ್ದು ಅನೀತಿವಂತರಿಗೋಸ್ಕರ ಪ್ರಾಣ ಕೊಟ್ಟು ನಮ್ಮನ್ನು ದೇವರ ಬಳಿಗೆ ಸೇರಿಸುವುದಕ್ಕಾಗಿ ಒಂದೇ ಸಾರಿ ಪಾಪನಿವಾರಣೆಗೋಸ್ಕರ ಬಾಧೆಪಟ್ಟು ಸತ್ತನು. ಆತನು ಶರೀರಸಂಬಂಧವಾಗಿ ಕೊಲ್ಲಲ್ಪಟ್ಟು, ಆತ್ಮ ಸಂಬಂಧವಾಗಿ ತಿರುಗಿ ಬದುಕುವವನಾದನು.

ಪ್ರಿಯರೇ, ನಿಮ್ಮನ್ನು ಪರಿಶೋಧಿಸುವುದಕ್ಕಾಗಿ ಅಗ್ನಿ ಪರೀಕ್ಷೆ ಬರುವಾಗ ನೀವು ಆಶ್ಚರ್ಯಪಡಬೇಡಿರಿ. ವಿಪರೀತವಾದ ಸಂಗತಿ ಸಂಭವಿಸಿತೆಂದು ಯೋಚಿಸಬೇಡಿರಿ. ಆದರೆ ನೀವು ಎಷ್ಟರ ಮಟ್ಟಿಗೆ ಕ್ರಿಸ್ತನ ಬಾಧೆಗಳಲ್ಲಿ ಪಾಲುಗಾರರಾಗಿದ್ದೀರೋ ಅಷ್ಟರ ಮಟ್ಟಿಗೆ ಸಂತೋಷಪಡಿರಿ. ಆದ್ದರಿಂದ ಆತನ ಮಹಿಮೆಯ ಪ್ರತ್ಯಕ್ಷತೆಯಲ್ಲಿಯೂ ನೀವು ಸಂತೋಷಪಟ್ಟು ಉಲ್ಲಾಸಗೊಳ್ಳುವಿರಿ ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಧನ್ಯರು. ಮಹಿಮೆಯ ಆತ್ಮನಾಗಿರುವ ದೇವರಾತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನಲ್ಲಾ.

ಆದರೆ ಕ್ರೈಸ್ತನಾಗಿ ಬಾಧೆಪಟ್ಟರೆ ಅವನು ನಾಚಿಕೆ ಪಡದೆ ಆ ಹೆಸರಿನಿಂದಲೇ ದೇವರನ್ನು ಘನಪಡಿಸಲಿ.

ಹೀಗಿರಲಾಗಿ ದೇವರ ಚಿತ್ತಾನುಸಾರ ಬಾಧೆಪಡುವವರು ಒಳ್ಳೆದನ್ನು ಮಾಡುವವರಾಗಿದ್ದು ತಮ್ಮ ಆತ್ಮಗಳನ್ನು ನಂಬಿಗಸ್ತನಾದ ಸೃಷ್ಟಿ ಕರ್ತನಿಗೆ ಒಪ್ಪಿಸಲಿ.

ಪ್ರಧಾನ ಕುರುಬನು ಪ್ರತ್ಯಕ್ಷನಾಗುವಾಗ ನೀವು ಎಂದಿಗೂ ಬಾಡದ ಮಹಿಮೆಯ ಕಿರೀಟವನ್ನು ಹೊಂದುವಿರಿ.

ಹೀಗಿರುವುದರಿಂದ ದೇವರ ಬಲವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ. ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ಎತ್ತುವನು. ನಿಮ್ಮ ಚಿಂತಾಭಾರವನ್ನೆಲ್ಲಾ ಆತನ ಮೇಲೆ ಹಾಕಿರಿ ಆತನು ನಿಮಗೋಸ್ಕರ ಚಿಂತಿಸುತ್ತಾನೆ. ಸ್ವಸ್ಥಚಿತ್ತರಾಗಿರಿ ಎಚ್ಚರವಾಗಿರಿ. ನಿಮ್ಮ ವಿರೋಧಿಯಾಗಿರುವ ಸೈತಾನನು ಘರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗಾಡುತ್ತಿದ್ದಾನೆ. ನೀವು ನಂಬಿಕೆಯಲ್ಲಿ ದೃಢವಾಗಿದ್ದು ಅವನನ್ನು ಎದುರಿಸಿರಿ. ಲೋಕದಲ್ಲಿರುವ ನಿಮ್ಮ ಸಹೋದರರೂ ಅಂಥ ಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂಬುದು ನಿಮಗೆ ತಿಳಿದಿದೆ. ಕ್ರಿಸ್ತನಲ್ಲಿ ನಿಮ್ಮನ್ನು ತನ್ನ ನಿತ್ಯ ಮಹಿಮೆಗೆ ಕರೆದ ಕೃಪಾಪೂರ್ಣನಾದ ದೇವರು ತಾನೇ, ನೀವು ಸ್ವಲ್ಪ ಕಾಲ ಬಾಧೆಪಟ್ಟ ಮೇಲೆ ನಿಮ್ಮನ್ನು ಯಥಾಸ್ಥಿತಿಗೆ ತಂದು ಸ್ಥಿರಪಡಿಸಿ ಬಲಪಡಿಸುವನು.

ಕೆಡುಕುನಾಗಿದ್ದು ತನ್ನ ತಮ್ಮನನ್ನು ಕೊಂದುಹಾಕಿದ ಕಾಯಿನನಂತೆ ನಾವು ಇರಬಾರದು. ಅವನು ಯಾಕೆ ತಮ್ಮನನ್ನು ಕೊಂದು ಹಾಕಿದನು? ತನ್ನ ಕೃತ್ಯಗಳು ಕೆಟ್ಟದ್ದು ಮತ್ತು ತನ್ನ ತಮ್ಮನ ಕೃತ್ಯಗಳು ನೀತಿಯುಳ್ಳವುಗಳೂ ಆಗಿದ್ದುದರಿಂದಲೇ.

ನನ್ನ ಸಹೋದರರೇ, ಲೋಕವು ನಿಮ್ಮನ್ನು ದ್ವೇಷಿಸಿದರೆ ಆಶ್ಚರ್ಯಪಡಬೇಡಿರಿ. ನಾವಂತೂ ಕ್ರೈಸ್ತಸಹೋದರರನ್ನು ಪ್ರೀತಿಸುವವರಾಗಿರುವುದರಿಂದ ಮರಣದಿಂದ ಪಾರಾಗಿ ನಿತ್ಯಜೀವದಲ್ಲಿ ಸೇರಿದ್ದೇವೆಂಬುದು ನಮಗೆ ಗೊತ್ತಾಗಿದೆ. ತನ್ನ ಸಹೋದರನನ್ನು ಪ್ರೀತಿಸದೆ ಇರುವವನು ಮರಣದಲ್ಲೇ ಇದ್ದಾನೆ. ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರನಾಗಿದ್ದಾನೆ. ಮತ್ತು ಯಾವ ಕೊಲೆಗಾರನಲ್ಲಿಯೂ ನಿತ್ಯಜೀವವು ಇರುವುದಿಲ್ಲವೆಂಬುದು ನಿಮಗೆ ಗೊತ್ತಾಗಿದೆ. ಕ್ರಿಸ್ತನು ನಮಗೋಸ್ಕರ ತನ್ನ ಪ್ರಾಣವನ್ನು ಅರ್ಪಿಸಿದ್ದರಿಂದ ದೇವರ ಪ್ರೀತಿ ಇಂಥದ್ದೆಂದು ನಮಗೆ ತಿಳಿದು ಬಂದಿದೆ. ನಾವು ಸಹ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ.

ಪ್ರಿಯಮಕ್ಕಳೇ, ನೀವಂತೂ ದೇವರಿಗೆ ಸೇರಿದವರಾಗಿದ್ದೀರಿ. ಮತ್ತು ಲೋಕದಲ್ಲಿರುವವನಿಗಿಂತ ನಿಮ್ಮಲ್ಲಿರುವಾತನು ಉನ್ನತನಾಗಿರುವುದರಿಂದ ನೀವು ಆ ಸುಳ್ಳು ಪ್ರವಾದಿಗಳ ಆತ್ಮವನ್ನು ಜಯಿಸಿದ್ದೀರಿ.

ಏಕೆಂದರೆ ದೇವರಿಂದ ಹುಟ್ಟಿದವನು ಲೋಕವನ್ನು ಜಯಿಸುತ್ತಾನೆ. ಲೋಕವನ್ನು ಜಯಿಸುವಂಥದ್ದು ನಮ್ಮ ನಂಬಿಕೆಯೇ. ಯೇಸುಕ್ರಿಸ್ತನು ದೇವರ ಮಗನೆಂದು ಒಪ್ಪಿಕೊಂಡು ನಂಬಿದವರಲ್ಲದೆ ಮತ್ತಾರು ಲೋಕವನ್ನು ಜಯಿಸಿದವರಾಗಿದ್ದಾರೆ?

ನೋಡಿರಿ, ಆತನು ಮೇಘಗಳೊಂದಿಗೆ ಬರುತ್ತಾನೆ, ಎಲ್ಲರ ಕಣ್ಣುಗಳು ಆತನನ್ನು ನೋಡುವವು, ಆತನನ್ನು ಇರಿದವರು ಸಹ ಅದನ್ನು ಕಾಣುವರು, ಭೂಮಿಯಲ್ಲಿರುವ ಎಲ್ಲಾ ಕುಲದವರು ಆತನ ನಿಮಿತ್ತ ದುಃಖಿಸುವರು. ಹೌದು, ಹಾಗೆಯೇ ಆಗುವುದು. ಆಮೆನ್. “ನಾನೇ ಆದಿಯೂ ಅಂತ್ಯವೂ, ಇರುವಾತನೂ, ಇದ್ದಾತನೂ, ಬರುವಾತನೂ, ಸರ್ವಶಕ್ತನೂ” ಎಂದು ದೇವರಾದ ಕರ್ತನು ಹೇಳುತ್ತಾನೆ.

ಸದಾ ಜೀವಿಸುವವನೂ ಆಗಿದ್ದೇನೆ.ಸತ್ತವನಾಗಿದ್ದೆನು, ಆದರೆ ಇಗೋ ಯುಗಯುಗಾಂತರಕ್ಕೂ ಜೀವಿಸುವವನಾಗಿದ್ದೇನೆ.ಮೃತ್ಯುವಿನ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿ ಇವೆ.

ದೇವರಾತ್ಮನು ಸಭೆಗಳಿಗೆ ಹೇಳುವುದನ್ನುಕಿವಿಯುಳ್ಳವನು ಕೇಳಲಿ.ಯಾವನು ಜಯಹೊಂದುತ್ತಾನೋ ಅವನಿಗೆದೇವರ ಪರದೈಸಿನಲ್ಲಿರುವಜೀವದಾಯಕ ವೃಕ್ಷದ ಹಣ್ಣನ್ನು ತಿನ್ನುವುದಕ್ಕೆ ಅನುಮತಿ ಕೊಡುವೆನು.

“ಸ್ಮುರ್ನದಲ್ಲಿರುವ ಸಭೆಯ ದೂತನಿಗೆ ಬರೆ, ಆದಿಯು, ಅಂತ್ಯವೂ ಆಗಿರುವಾತನು,ಸತ್ತವನಾಗಿದ್ದು ಜೀವಿತನಾಗಿ ಎದ್ದು ಬಂದಾತನೂಹೇಳುವುದೇನಂದರೆ, ನಾನು ನಿನ್ನ ಸಂಕಟವನ್ನೂನಿನ್ನ ಬಡತನವನ್ನೂ ಬಲ್ಲೆನು, ಆದರೂ ನೀನು ಐಶ್ವರ್ಯವಂತನೇ. ಇದಲ್ಲದೆತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುವವರು ನಿನ್ನ ವಿಷಯವಾಗಿ ದೂಷಿಸುವುದನ್ನು ಬಲ್ಲೆನು. ಅವರು ಯೆಹೂದ್ಯರಲ್ಲ, ಸೈತಾನನಸಭಾಮಂದಿರದವರಾಗಿದ್ದಾರೆ. ನಿನಗೆ ಸಂಭವಿಸಬಹುದಾದ ಬಾಧೆಗಳಿಗೆ ಹೆದರಬೇಡ. ಇಗೋ,ನಿಮ್ಮನ್ನು ಪರೀಕ್ಷಿಸಲು ಸೈತಾನನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ಹಾಕುವುದಕ್ಕಿದ್ದಾನೆ ಮತ್ತುಹತ್ತು ದಿನಗಳ ತನಕ ನಿಮಗೆ ಸಂಕಟವಿರುವುದು.ನೀನು ಸಾಯುವ ತನಕನಂಬಿಗಸ್ತನಾಗಿರು, ನಾನು ನಿನಗೆಜೀವದ ಕಿರೀಟವನ್ನು ಕೊಡುವೆನು.

ದೇವರಾತ್ಮನು ಸಭೆಗಳಿಗೆ ಹೇಳುವುದನ್ನುಕಿವಿಯುಳ್ಳವನು ಕೇಳಲಿ.ಜಯಹೊಂದುವವನಿಗೆಎರಡನೆಯ ಮರಣದಿಂದ ಕೇಡಾಗುವುದೇ ಇಲ್ಲ.

ನೀನು ವಾಸಮಾಡುವ ಸ್ಥಳವನ್ನು ಬಲ್ಲೆನು.ಅದು ಸೈತಾನ ಸಿಂಹಾಸನವಿರುವ ಸ್ಥಳವಾಗಿದೆ. ನೀನು ನನ್ನ ಹೆಸರನ್ನು ದೃಢವಾಗಿ ಹಿಡಿದುಕೊಂಡಿರುವಿ. ಸೈತಾನನ ನಿವಾಸವಾದ ನಿನ್ನ ಪಟ್ಟಣದಲ್ಲಿ ನನಗೆ ನಂಬಿಗಸ್ತ ಸಾಕ್ಷಿಯಾದ ಅಂತಿಪನು ಕೊಲ್ಲಲ್ಪಟ್ಟಾಗಲೂ ನನ್ನಲ್ಲಿಟ್ಟಿರುವ ನಂಬಿಕೆಯನ್ನು ನೀನು ನಿರಾಕರಿಸಲಿಲ್ಲ.

ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.ಯಾವನು ಜಯಹೊಂದುತ್ತಾನೋ ಅವನಿಗೆಬಚ್ಚಿಟ್ಟಿರುವಮನ್ನವೆಂಬ ಆಹಾರವನ್ನು ಕೊಡುವೆನು. ಇದಲ್ಲದೆ ಅವನಿಗೆ ಬಿಳೀಕಲ್ಲನ್ನೂ ಆ ಕಲ್ಲಿನ ಮೇಲೆ ಕೆತ್ತಿದಹೊಸ ಹೆಸರನ್ನೂ ಕೊಡುವೆನು.ಆ ಹೆಸರನ್ನು ಹೊಂದಿದವನಿಗೇ ಹೊರತು ಅದು ಮತ್ತಾರಿಗೂ ತಿಳಿಯದು.

ಯಾವನು ಜಯಶಾಲಿಯಾಗಿ ನನಗೆ ಮೆಚ್ಚಿಕೆಯಾದ ಕೃತ್ಯಗಳನ್ನುಕಡೆಯವರೆಗೂ ನಡಿಸುತ್ತಾನೋ,ಅವನಿಗೆ ನಾನು ನನ್ನ ತಂದೆಯಿಂದ ಹೊಂದಿದ ಅಧಿಕಾರದಂತೆ ಜನಾಂಗಗಳ ಮೇಲೆ ಅಧಿಕಾರವನ್ನು ಕೊಡುವೆನು.‘ಅವನುಕಬ್ಬಿಣದ ಕೋಲಿನಿಂದ ಅವರನ್ನು ಆಳುವನು,ಮಣ್ಣಿನ ಮಡಿಕೆಗಳು ಒಡೆಯುವಂತೆ ಅವರ ಬಲ ಮುರಿದು ಹೋಗುವುದು.’ ಇದಲ್ಲದೆಉದಯ ನಕ್ಷತ್ರವನ್ನು ಅವನಿಗೆ ಕೊಡುವೆನು. ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.

ಜಯಹೊಂದುವವನು ಶುಭ್ರವಸ್ತ್ರಗಳನ್ನು ಧರಿಸುವನು.ಜೀವಬಾಧ್ಯರ ಪುಸ್ತಕದಿಂದ ಅವನ ಹೆಸರನ್ನು ನಾನು ಅಳಿಸದೆ,ಅವನು ನನ್ನವನೆಂದು ನನ್ನ ತಂದೆಯ ಎದುರಿನಲ್ಲಿಯೂ ಆತನ ದೂತರ ಮುಂದೆಯೂ ಒಪ್ಪಿಕೊಳ್ಳುವೆನು. ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.

ಯಾವನು ಜಯಹೊಂದುತ್ತಾನೋ ಅವನನ್ನು ನನ್ನ ದೇವರ ಆಲಯದಲ್ಲಿಸ್ತಂಭವಾಗಿ ನಿಲ್ಲಿಸುವೆನು.ಅವನು ಎಂದಿಗೂ ಅಲ್ಲಿಂದ ಕದಲುವುದೇ ಇಲ್ಲ. ಇದಲ್ಲದೆನನ್ನ ದೇವರ ಹೆಸರನ್ನು, ನನ್ನದೇವರ ಬಳಿಯಿಂದ ಪರಲೋಕದೊಳಗಿಂದ ಇಳಿದುಬರುವ ಹೊಸ ಯೆರೂಸಲೇಮ್ ಪಟ್ಟಣವೆಂಬ ನನ್ನ ದೇವರ ಪಟ್ಟಣದ ಹೆಸರನ್ನೂ,ನನ್ನ ಹೊಸ ಹೆಸರನ್ನೂ ಅವನ ಮೇಲೆ ಬರೆಯುವೆನು. ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.

ನಾನು ಜಯಹೊಂದಿ ನನ್ನ ತಂದೆಯೊಡನೆ ಸಿಂಹಾಸನದಲ್ಲಿ ಕುಳಿತುಕೊಂಡ ಹಾಗೆಯೇಜಯಶಾಲಿಯಾದವನಿಗೆನನ್ನೊಡನೆ ಸಿಂಹಾಸನದಲ್ಲಿ ಕುಳಿತುಕೊಳ್ಳುವ ಹಕ್ಕನ್ನು ನಾನು ಕೊಡುತ್ತೇನೆ. ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.”

ಆತನು ಐದನೆಯ ಮುದ್ರೆಯನ್ನು ಒಡೆದಾಗ, ದೇವರ ವಾಕ್ಯದ ನಿಮಿತ್ತವಾಗಿಯೂ, ತಮಗಿದ್ದ ದೃಢವಾದ ಸಾಕ್ಷಿಯ ನಿಮಿತ್ತವಾಗಿಯೂ, ಹತರಾದವರ ಆತ್ಮಗಳು ಯಜ್ಞವೇದಿಯ ಕೆಳಗಿರುವುದನ್ನು ಕಂಡೆನು. ಅವರು, “ಸರ್ವಶಕ್ತನಾದ ಕರ್ತನೇ, ಪರಿಶುದ್ಧನೂ, ಸತ್ಯವಂತನೂ, ಆಗಿರುವಾತನೇ, ನಮ್ಮ ರಕ್ತವನ್ನು ಸುರಿಸಿದ ಭೂಲೋಕ ನಿವಾಸಿಗಳಿಗೆ ನೀನು ಇನ್ನೆಷ್ಟು ಸಮಯ ನ್ಯಾಯತೀರಿಸದೆಯೂ, ಪ್ರತಿದಂಡನೆ ಮಾಡದೆಯೂ ಇರುವಿ?” ಎಂದು ಮಹಾಶಬ್ದದಿಂದ ಕೂಗಿದರು. ಆಗ ಅವರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ಬಿಳೀ ನಿಲುವಂಗಿಯು ಕೊಡಲ್ಪಟ್ಟಿತು ಇನ್ನೂ ಸ್ವಲ್ಪ ಸಮಯ ವಿಶ್ರಮಿಸಿಕೊಂಡಿರಬೇಕು. ನಿಮ್ಮ ಹಾಗೆ ವಧಿಸಲ್ಪಡಬೇಕಾಗಿರುವ ನಿಮ್ಮ ಸಹೋದರರ ಮತ್ತು ನಿಮ್ಮ ಜೊತೆ ಸೇವಕರ ಸಂಖ್ಯೆ ಪೂರ್ಣವಾಗುವ ತನಕ ಕಾದಿರಬೇಕೆಂದು ಅವರಿಗೆ ಅಪ್ಪಣೆಯಾಯಿತು.

ಇದಾದ ನಂತರ ಇಗೋ, ಯಾರಿಂದಲೂ ಎಣಿಸಲಾಗದಂಥ ಮಹಾ ಜನಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಮರಿಯಾದಾತನ ಮುಂದೆಯೂ ನಿಂತಿರುವುದನ್ನು ಕಂಡೆನು. ಅವರು ಸಕಲ ಜನಾಂಗ, ಕುಲ, ಜಾತಿಗಳವರೂ ಸಕಲ ಭಾಷೆಗಳನ್ನಾಡುವವರೂ ಆಗಿದ್ದರು. ಅವರು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡು ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದುಕೊಂಡಿದ್ದರು.

ಆಗ ಇದನ್ನು ನೋಡಿ ಹಿರಿಯರಲ್ಲಿ ಒಬ್ಬನು, “ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡಿರುವವರಾದ ಇವರು ಯಾರು? ಎಲ್ಲಿಂದ ಬಂದರು” ಎಂದು ನನ್ನನ್ನು ಕೇಳಲು, “ಅಯ್ಯಾ ನೀನೇ ಬಲ್ಲೆ” ಎಂದೆನು. ಅವನು ನನಗೆ, “ಇವರು ಆ ಮಹಾಸಂಕಟದಿಂದ ಹೊರಬಂದವರು, ಯಜ್ಞದ ಕುರಿಮರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿಕೊಂಡಿದ್ದಾರೆ. ಈ ಕಾರಣದಿಂದ ಅವರು ದೇವರ ಸಿಂಹಾಸನದ ಮುಂದೆ ಇದ್ದುಕೊಂಡು ಆತನ ಆಲಯದಲ್ಲಿ ಹಗಲಿರುಳೂ ಆತನಿಗೆ ಆರಾಧನೆ ಮಾಡುತ್ತಾ ಇದ್ದಾರೆ. ಸಿಂಹಾಸನದ ಮೇಲೆ ಕುಳಿತಿರುವಾತನೇ ಅವರಿಗೆ ಬಿಡಾರವಾಗಿರುವನು. ಇನ್ನೆಂದಿಗೂ ಅವರಿಗೆ ಹಸಿವೆಯಾಗಲಿ, ಬಾಯಾರಿಕೆಯಾಗಲಿ ಆಗುವುದಿಲ್ಲ, ಅವರಿಗೆ ಸೂರ್ಯನ ಬಿಸಿಲಾದರೂ, ಯಾವ ಝಳವಾದರೂ ತಟ್ಟುವುದಿಲ್ಲ. ಏಕೆಂದರೆ ಸಿಂಹಾಸನದ ಮಧ್ಯದಲ್ಲಿರುವ ಯಜ್ಞದ ಕುರಿಮರಿಯಾದಾತನು ಅವರಿಗೆ ಕುರುಬನಂತಿದ್ದು ಜೀವಜಲದ ಒರತೆಗಳ ಬಳಿಗೆ ಅವರನ್ನು ನಡಿಸುತ್ತಾನೆ. ದೇವರು ಅವರ ಕಣ್ಣಿನಿಂದ ಕಣ್ಣೀರನ್ನೆಲ್ಲಾ ಒರೆಸಿಬಿಡುವನು.” ಎಂದು ಹೇಳಿದರು.

ಜನಾಂಗಗಳು ಕೋಪಿಸಿಕೊಂಡವು. ನಿನ್ನ ಕೋಪವೂ ಪ್ರಕಟವಾಯಿತು. ಸತ್ತವರು ತೀರ್ಪುಹೊಂದುವ ಸಮಯವು ಬಂದಿದೆ. ನೀನು ನಿನ್ನ ದಾಸರಾದ ಪ್ರವಾದಿಗಳಿಗೂ, ದೇವಜನರಿಗೂ, ನಿನ್ನ ನಾಮಕ್ಕೆ ಭಯಪಡುವ ಹಿರಿಯರೂ ಕಿರಿಯರೂ ಆಗಿರುವ ನಿನ್ನ ಭಕ್ತರಿಗೆ ಪ್ರತಿಫಲವನ್ನು ಕೊಡುವುದಕ್ಕೂ ಲೋಕನಾಶಕರನ್ನು ವಿನಾಶಗೊಳಿಸುವ ಕಾಲವು ಬಂದಿದೆ” ಎಂದು ಆತನನ್ನು ಆರಾಧಿಸಿದರು.

ಅವರು ಮರಣದವರೆಗೆ ತಮ್ಮ ಪ್ರಾಣವನ್ನು ಪ್ರೀತಿಸದೆ, ಯಜ್ಞದ ಕುರಿಮರಿಯಾದಾತನ ರಕ್ತದಿಂದಲೂ ತಮ್ಮ ಸಾಕ್ಷಿಯ ವಾಕ್ಯದಿಂದಲೂ ಅವನನ್ನು ಜಯಿಸಿದರು.

ಆಗ ಘಟಸರ್ಪನು ಸ್ತ್ರೀಯ ಮೇಲೆ ಬಹು ಕೋಪಗೊಂಡು, ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ ಅಂದರೆ, ದೇವರ ಆಜ್ಞೆಗಳನ್ನು ಕೈಗೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೊಂದಿದವರ ಮೇಲೆ ಯುದ್ಧಮಾಡುವುದಕ್ಕೆ ಹೊರಟು, ಸಮುದ್ರ ತೀರದ ಮರಳಿನ ಮೇಲೆ ನಿಂತನು.

ಇದಲ್ಲದೆ ದೇವಜನರ ಮೇಲೆ ಯುದ್ಧ ಮಾಡಿ ಅವರನ್ನು ಜಯಿಸುವುದಕ್ಕೆ ಅದಕ್ಕೆ ಅಧಿಕಾರ ಕೊಡಲ್ಪಟ್ಟಿತು ಮತ್ತು ಸಕಲ ಕುಲ, ಜನ, ಭಾಷೆ, ಜನಾಂಗಗಳ ಮೇಲೆ ಅದಕ್ಕೆ ಅಧಿಕಾರವು ಕೊಡಲ್ಪಟ್ಟಿತು.

ಇದಲ್ಲದೆ ಆ ಮೃಗದ ವಿಗ್ರಹಕ್ಕೆ ಜೀವಕೊಡುವ ಸಾಮರ್ಥ್ಯವು ಇದಕ್ಕೆ ದೊರೆಯಿತು. ಆ ಮೃಗದ ವಿಗ್ರಹವು ಮಾತನಾಡುವುದಲ್ಲದೆ, ತನ್ನನ್ನು ಆರಾಧಿಸದವರೆಲ್ಲರಿಗೂ ಮರಣದಂಡನೆಯಾಗುವಂತೆ ಮಾಡುವ ಶಕ್ತಿಯು ಆದಕ್ಕಿತ್ತು. ಈ ಎರಡನೆಯ ಮೃಗವು, ದೊಡ್ಡವರು, ಚಿಕ್ಕವರು, ಐಶ್ವರ್ಯವಂತರು, ಬಡವರು, ಸ್ವತಂತ್ರರು, ದಾಸರು ಎಲ್ಲರೂ ತಮ್ಮತಮ್ಮ ಬಲಗೈಯ ಮೇಲಾಗಲಿ, ಹಣೆಯ ಮೇಲಾಗಲಿ ಗುರುತನ್ನು ಹೊಂದಬೇಕೆಂದು ಒತ್ತಾಯ ಮಾಡಿತ್ತು. ಆ ಗುರುತು ಯಾರಿಗಿಲ್ಲವೋ ಅವರು ಕ್ರಯ ವಿಕ್ರಯಗಳನ್ನು ನಡೆಸಲು ಸಾಧ್ಯವಿರಲಿಲ್ಲ. ಆ ಗುರುತು ಯಾವುದೆಂದರೆ ಮೊದಲನೆಯ ಮೃಗದ ಹೆಸರು ಅಥವಾ ಅದರ ಹೆಸರನ್ನು ಸೂಚಿಸುವ ಸಂಖ್ಯೆ. ಇದನ್ನು ಗ್ರಹಿಸಲು ಜ್ಞಾನವು ಅಗತ್ಯವಾಗಿದೆ. ಬುದ್ಧಿವಂತನು ಆ ಮೃಗದ ಸಂಖ್ಯೆಯನ್ನು ಎಣಿಸಲಿ, ಅದು ಒಬ್ಬ ಮನುಷ್ಯನನ್ನು ಸೂಚಿಸುವ ಸಂಖ್ಯೆಯಾಗಿದೆ. ಅದರ ಸಂಖ್ಯೆಯು 666.

ಇದರಲ್ಲಿ ದೇವರ ಆಜ್ಞೆಗಳನ್ನೂ, ಯೇಸುವಿನ ಬಗ್ಗೆ ನಂಬಿಕೆಯನ್ನೂ ಕೈಕೊಂಡು ನಡೆಯುತ್ತಿರುವ ದೇವಜನರ ತಾಳ್ಮೆಯು ಇಲ್ಲಿ ತೋರಿಬರಬೇಕಾಗಿದೆ. ಪರಲೋಕದಿಂದ ಒಂದು ಧ್ವನಿಯು ನನಗೆ ಕೇಳಿಸಿತು. ಅದು, “ಇಂದಿನಿಂದ ಕರ್ತನ ಭಕ್ತರಾಗಿ ಸಾಯುವವರು ಧನ್ಯರು ಎಂಬುದಾಗಿ ಬರೆ” ಎಂದು ನನಗೆ ಹೇಳಿತು. ಅದಕ್ಕೆ ಆತ್ಮನು, “ಹೌದು, ಅವರು ಧನ್ಯರೇ. ಅವರು ತಮ್ಮ ಶ್ರಮೆಗಳಿಂದ ಮುಕ್ತರಾಗಿ ವಿಶ್ರಮಿಸಿಕೊಳ್ಳುತ್ತಾರೆ ಮತ್ತು ಅವರ ಸುಕೃತ್ಯಗಳು ಅವರನ್ನು ಹಿಂಬಾಲಿಸುತ್ತವೆ” ಎಂದು ಹೇಳುತ್ತಾನೆ.

ಆ ಸ್ತ್ರೀಯು ನೀತಿವಂತರ ರಕ್ತವನ್ನೂ ಯೇಸುವಿಗೋಸ್ಕರ ಸಾಕ್ಷಿನೀಡಿ ಹತರಾದವರ ರಕ್ತವನ್ನು ಕುಡಿದು ಮತ್ತಳಾಗಿರುವುದನ್ನು ಕಂಡೆನು. ನಾನು ಅವಳನ್ನು ನೋಡಿ ಅತ್ಯಾಶ್ಚರ್ಯಪಟ್ಟೆನು.

ದೀಪದ ಬೆಳಕು ನಿನ್ನಲ್ಲಿ ಇನ್ನೆಂದಿಗೂ ಪ್ರಕಾಶಿಸದು. ವಧೂವರರ ಸ್ವರವು ನಿನ್ನಲ್ಲಿ ಇನ್ನೆಂದಿಗೂ ಕೇಳಿಬರದು. ನಿನ್ನ ವರ್ತಕರು ಭೂಮಿಯ ಮೇಲೆ ಪ್ರಭುಗಳಾಗಿದ್ದರಲ್ಲವೇ. ನಿನ್ನ ಮಾಟದ ಶಕ್ತಿಯಿಂದ ಎಲ್ಲಾ ದೇಶದವರು ವಂಚಿಸಲ್ಪಟ್ಟರು. “ಪ್ರವಾದಿಗಳ, ದೇವಜನರ ರಕ್ತವು ಮತ್ತು ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವೂ ಅವಳಲ್ಲಿಯೇ ಸಿಕ್ಕಿತಲ್ಲಾ” ಎಂದು ಹೇಳಿದನು.

ಆತನು ರಕ್ತದಲ್ಲಿ ಅದ್ದಿದ ವಸ್ತ್ರವನ್ನು ಧರಿಸಿಕೊಂಡಿದ್ದನು. ಆತನಿಗೆ ದೇವರ ವಾಕ್ಯವೆಂದು ಹೆಸರು. ಪರಲೋಕದಲ್ಲಿರುವ ಸೈನ್ಯವು ಶುಭ್ರವಾಗಿಯೂ ನಿರ್ಮಲವಾಗಿಯೂ ಇರುವ ನಯವಾದ ನಾರುಮಡಿಯನ್ನು ಧರಿಸಿಕೊಂಡು ಬಿಳೀ ಕುದುರೆಗಳ ಮೇಲೆ ಹತ್ತಿದವರಾಗಿ ಆತನನ್ನು ಹಿಂಬಾಲಿಸಿದರು.

ತರುವಾಯ ಸಿಂಹಾಸನಗಳನ್ನು ಕಂಡೆನು. ಅವುಗಳ ಮೇಲೆ ಕುಳಿತಿದ್ದವರಿಗೆ ನ್ಯಾಯ ತೀರಿಸುವ ಅಧಿಕಾರವು ಕೊಡಲ್ಪಟ್ಟಿತು. ಇದಲ್ಲದೆ ಯೇಸುವಿನ ಸಾಕ್ಷಿಯ ನಿಮಿತ್ತವಾಗಿಯೂ, ದೇವರ ವಾಕ್ಯದ ನಿಮಿತ್ತವಾಗಿಯೂ ಶಿರಚ್ಛೇದನಗೊಂಡವರ ಆತ್ಮಗಳನ್ನೂ ಮೃಗಕ್ಕೂ ಅದರ ವಿಗ್ರಹಕ್ಕೂ ಆರಾಧನೆ ಮಾಡದೇ ತಮ್ಮ ಹಣೆಯ ಮೇಲೆ ಮತ್ತು ಕೈಗಳ ಮೇಲೆ ಅದರ ಗುರುತು ಹಾಕಿಸಿಕೊಳ್ಳದವರನ್ನೂ ಕಂಡೆನು. ಅವರು ಪುನಃ ಜೀವಿತರಾಗಿ ಎದ್ದು ಸಾವಿರ ವರ್ಷ ಕ್ರಿಸ್ತನೊಂದಿಗೆ ಆಳಿದರು. ಸತ್ತವರಲ್ಲಿ ಉಳಿದವರು ಆ ಸಾವಿರ ವರ್ಷಗಳ ಮುಗಿಯುವವರೆಗೂ ಜೀವಿತರಾಗಿ ಏಳಲಿಲ್ಲ. ಇದೇ ಮೊದಲನೇಯ ಪುನರುತ್ಥಾನವು. ಮೊದಲನೇಯ ಪುನರುತ್ಥಾನದಲ್ಲಿ ಸೇರಿದವರು ಧನ್ಯರೂ ಮತ್ತು ಪರಿಶುದ್ಧರೂ ಆಗಿದ್ದಾರೆ. ಇಂಥವರ ಮೇಲೆ ಎರಡನೆಯ ಮರಣಕ್ಕೆ ಅಧಿಕಾರವಿಲ್ಲ. ಆದರೆ ಅವರು ದೇವರಿಗೂ ಕ್ರಿಸ್ತನಿಗೂ ಯಾಜಕರಾಗಿ ಕ್ರಿಸ್ತನೊಂದಿಗೆ ಆ ಸಾವಿರ ವರ್ಷ ಆಳುವರು.

ಅವರ ಕಣ್ಣೀರನ್ನೆಲ್ಲಾ ಆತನೇ ಒರಸಿಬಿಡುವನು. ಇನ್ನು ಮರಣವಿರುವುದಿಲ್ಲ. ಇನ್ನು ದುಃಖವಾಗಲಿ, ಗೋಳಾಟವಾಗಲಿ, ಕಷ್ಟವಾಗಲಿ ಇರುವುದಿಲ್ಲ. ಮೊದಲಿದ್ದದ್ದೆಲ್ಲಾ ಇಲ್ಲದಂತಾಯಿತು” ಎಂದು ಹೇಳಿತು. ಆಗ ಸಿಂಹಾಸನದ ಮೇಲೆ ಕುಳಿತಿದ್ದಾತನು, “ಇಗೋ, ನಾನು ಎಲ್ಲವನ್ನು ನೂತನಗೊಳಿಸುತ್ತೇನೆ” ಎಂದನು. ಮತ್ತು ಒಬ್ಬನು ನನಗೆ, “ನೀನು ಇದನ್ನು ಬರೆ. ಏಕೆಂದರೆ ಈ ಮಾತುಗಳು ನಂಬತಕ್ಕವೂ, ಸತ್ಯವಾದವೂ ಆಗಿವೆ” ಎಂದು ಹೇಳಿದನು. ಆಗ ಸಿಂಹಾಸನದ ಮೇಲೆ ಕುಳಿತಿದ್ದಾತನು, “ಎಲ್ಲಾ ನೆರವೇರಿತು, ನಾನೇ ಆದಿಯು, ಅಂತ್ಯವೂ, ಪ್ರಾರಂಭವೂ, ಸಮಾಪ್ತಿಯೂ ಆಗಿದ್ದೇನೆ. ದಾಹವುಳ್ಳವನಿಗೆ ಜೀವಜಲದ ಬುಗ್ಗೆಯಿಂದ ಕ್ರಯವಿಲ್ಲದೆ ಕುಡಿಯುವುದಕ್ಕೆ ಕೊಡುವೆನು.

ಜಯ ಹೊಂದುವವನು ಇವುಗಳಿಗೆ ಬಾಧ್ಯನಾಗುವನು. ನಾನು ಅವನಿಗೆ ದೇವರಾಗಿರುವೆನು. ಅವನು ನನಗೆ ಮಗನಾಗಿರುವನು.

“ನೋಡು! ನಾನು ಬೇಗನೇ ಬರುತ್ತೇನೆ.ನಾನು ಪ್ರತಿಯೊಬ್ಬನಿಗೂ ಅವನವನ ನಡತೆಗೆ ತಕ್ಕಂತೆ ಕೊಡತಕ್ಕಪ್ರತಿಫಲವು ನನ್ನಲ್ಲಿದೆ. ನಾನೇಆದಿಯೂ, ಅಂತ್ಯವೂ,ಮೊದಲನೆಯವನೂ, ಕಡೆಯವನೂ,ಪ್ರಾರಂಭವೂ, ಸಮಾಪ್ತಿಯೂ ಆಗಿದ್ದೇನೆ.

Kannada - ಕನ್ನಡ - KN

KNIRV'19 - Kannada Indian Revised Version - 2019

This Bible text is from Kannada Indian Revised Version IRV 2019
https://open.bible/bibles/kannada-bridge-text-bible/
provided by: Bridge Connectivity Solutions Pvt Ltd, available by Creative Commons CC-BY-SA-4.0,
and this new compilation is shared as www.creativecommons.org/licenses/by-sa/4.0.
Languages are made available to you by www.ipedge.net