22 – ಪವಾಡಗಳು

ಇವು ಸರ್ವಶಕ್ತನಾದ ದೇವರ ಪವಿತ್ರ ಮಾತುಗಳು.
ಮಾನವರ ಮಾತುಗಳಲ್ಲಿ ನಮಗೆ ಆಸಕ್ತಿ ಇಲ್ಲ.
ದೇವರನ್ನು ಪ್ರೀತಿಸುವ ಯಾರಿಗಾದರೂ... ದೇವರು ಇದರ ಬಗ್ಗೆ ಹೀಗೆ ಹೇಳುತ್ತಾನೆ: ಪವಾಡಗಳು.

ಟಾಪ್ 3 ಅತ್ಯಂತ ಮಹತ್ವದ ಪದ್ಯಗಳು

ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ ದೆವ್ವಗಳನ್ನು ಬಿಡಿಸುವುದಕ್ಕೂ ಎಲ್ಲಾ ಬಗೆಯ ರೋಗಗಳನ್ನೂ ಎಲ್ಲಾ ರೀತಿಯ ಬೇನೆಗಳನ್ನೂ ವಾಸಿಮಾಡುವುದಕ್ಕೂ ಅಧಿಕಾರ ಕೊಟ್ಟನು.

ಯೇಸು ಹೇಳಿದ್ದೇನಂದರೆ, “ನಿಮಗೆ ದೇವರಲ್ಲಿ ನಂಬಿಕೆಯಿರಲಿ. ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾರಾದರೂ ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು!’ ಎಂದು ಹೇಳಿ ತನ್ನ ಮನಸ್ಸಿನಲ್ಲಿ ಸಂಶಯಪಡದೆ ತಾನು ಹೇಳಿದ್ದು ಆಗುವುದೆಂದು ನಂಬಿದರೆ ಅವನು ಹೇಳಿದಂತೆಯೇ ಆಗುವುದು. ಆದಕಾರಣ ನೀವು ಪ್ರಾರ್ಥನೆಮಾಡಿ ಏನೇನು ಬೇಡಿಕೊಳ್ಳುತ್ತೀರೋ ಅದನ್ನೆಲ್ಲಾ ಹೊಂದಿದ್ದೇವೆಂದು ನಂಬಿರಿ; ಅದು ನಿಮಗೆ ಸಿಕ್ಕುವುದೆಂದು ನಿಮಗೆ ಹೇಳುತ್ತೇನೆ.

ಇದಲ್ಲದೆ ಅಪೊಸ್ತಲರ ಕೈಯಿಂದ ಅನೇಕ ಸೂಚಕಕಾರ್ಯಗಳೂ, ಅದ್ಭುತಕಾರ್ಯಗಳೂ ಜನರೊಳಗೆ ನಡೆಯುತ್ತಾ ಇದ್ದವು. ಮತ್ತು ಎಲ್ಲರು ಒಗ್ಗಟ್ಟಾಗಿ ಸೊಲೊಮೋನನ ಮಂಟಪದಲ್ಲಿ ಸೇರಿಬರುತ್ತಿದ್ದರು. ಅವರ ಜೊತೆಯಲ್ಲಿರುವುದಕ್ಕೆ ಉಳಿದವರಲ್ಲಿ ಒಬ್ಬರಿಗೂ ಧೈರ್ಯವಿರಲಿಲ್ಲ. ಆದರೂ ಜನರು ಅವರನ್ನು ಬಹಳವಾಗಿ ಕೊಂಡಾಡುತ್ತಿದ್ದರು. ಮತ್ತು ಇನ್ನು ಎಷ್ಟೋ ಮಂದಿ ಸ್ತ್ರೀಪುರುಷರು ಕರ್ತನಲ್ಲಿ ನಂಬಿಕೆಯಿಟ್ಟು ಅವರ ಮಂಡಳಿಯಲ್ಲಿ ಸೇರಿಕೊಳ್ಳುತ್ತಿದ್ದರು. ಹೀಗಿರುವುದರಿಂದ ಜನರು ರೋಗಿಗಳನ್ನು ದೋಲಿಗಳ ಮೇಲೆಯೂ, ಹಾಸಿಗೆಗಳ ಮೇಲೆಯೂ ಇಟ್ಟು ಪೇತ್ರನು ಹಾದು ಹೋಗುವಾಗ, ಅವನ ನೆರಳಾದರೂ ಕೆಲವರ ಮೇಲಾದರೂ ಬೀಳಲಿ ಎಂದು ಅವರನ್ನು ಬೀದಿಗೆ ತೆಗೆದುಕೊಂಡು ಬರುತ್ತಿದ್ದರು. ಯೆರೂಸಲೇಮಿನ ಸುತ್ತಮುತ್ತಲಿನ ಊರುಗಳ ಜನರು ಸಹ ರೋಗಿಗಳನ್ನೂ, ದೆವ್ವ ಪೀಡಿತರನ್ನು ಹೊತ್ತುಕೊಂಡು ಗುಂಪುಗುಂಪಾಗಿ ಬರುತ್ತಿದ್ದರು; ಅವರೆಲ್ಲರೂ ಗುಣಮುಖರಾಗುತ್ತಿದ್ದರು.

ಕ್ಯಾನೊನಿಕಲ್ ಕ್ರಮದಲ್ಲಿ ಪ್ರತಿ ವಚನ - 266 ಭಾಗಗಳು

ಆದಿಯಲ್ಲಿ ದೇವರು ಆಕಾಶವನ್ನು, ಭೂಮಿಯನ್ನು ಸೃಷ್ಟಿಮಾಡಿದನು. ಭೂಮಿಯು ಕ್ರಮವಿಲ್ಲದೆಯೂ ಬರಿದಾಗಿಯೂ ಇತ್ತು. ಆದಿಸಾಗರದ ಮೇಲೆ ಕತ್ತಲಿತ್ತು. ದೇವರಾತ್ಮವು ಸಾಗರದ ಮೇಲೆ ಚಲಿಸುತ್ತಿತ್ತು. ಅನಂತರ ದೇವರು “ಬೆಳಕಾಗಲಿ” ಎಂದು ಆಜ್ಞಾಪಿಸಲು ಬೆಳಕಾಯಿತು.

ಹೀಗಿರಲು ಯೆಹೋವನಾದ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ಸೃಷ್ಟಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು. ಆಗ ಮನುಷ್ಯನು ಬದುಕುವ ಪ್ರಾಣಿಯಾದನು.

ಆಗ ಫರೋಹನು ಯೋಸೇಫನಿಗೆ, “ನಾನು ಒಂದು ಕನಸನ್ನು ಕಂಡಿದ್ದೇನೆ. ಅದರ ಅರ್ಥವನ್ನು ಹೇಳ ಬಲ್ಲವರು ಯಾರೂ ಇಲ್ಲ. ಆದರೆ ನೀನು ಕನಸನ್ನು ಕೇಳುತ್ತಲೇ ಅದರ ಅರ್ಥವನ್ನು ಹೇಳ ಬಲ್ಲವನೆಂಬ ವರ್ತಮಾನವನ್ನು ಕೇಳಿದ್ದೇನೆ” ಎಂದು ಹೇಳಿದನು. ಅದಕ್ಕೆ ಯೋಸೇಫನು, “ನನ್ನಲ್ಲಿ ಅಂಥ ಸಾಮರ್ಥ್ಯವೇನೂ ಇಲ್ಲ. ಆದರೆ ದೇವರು ಫರೋಹನಿಗೆ ಶುಭಕರವಾದ ಉತ್ತರವನ್ನೂ ಕೊಡುವನು” ಎಂದು ಹೇಳಿದನು.

ಆಗ ಯೆಹೋವನ ದೂತನು ಮುಳ್ಳಿನ ಪೊದೆಯೊಳಗಿನಿಂದ ಉರಿಯುವ ಬೆಂಕಿ ಜ್ವಾಲೆಯಲ್ಲಿ ಅವನಿಗೆ ಕಾಣಿಸಿಕೊಂಡನು. ಮೋಶೆಯು ಕಣ್ಣೆತ್ತಿ ನೋಡಿದಾಗ, ಆ ಮುಳ್ಳಿನ ಪೊದೆಯು ಬೆಂಕಿಯಿಂದ ಉರಿಯುತ್ತಿತ್ತು; ಆದರೆ ಅದು ಸುಟ್ಟು ಹೋಗಲಿಲ್ಲ. ಆಗ ಮೋಶೆ, “ಇದೇನು ಆಶ್ಚರ್ಯ! ಪೊದೆಯು ಸುಟ್ಟು ಹೋಗುತ್ತಿಲ್ಲವಲ್ಲಾ! ಇದನ್ನು ಹತ್ತಿರಕ್ಕೆ ಹೋಗಿ ನೋಡುವೆನು” ಅಂದುಕೊಂಡನು. ಅವನು ಅದನ್ನು ನೋಡುವುದಕ್ಕೆ ಹತ್ತಿರ ಬರುವುದನ್ನು ಯೆಹೋವನು ಕಂಡನು. ಆಗ ದೇವರು ಆ ಪೊದೆಯೊಳಗಿಂದ “ಮೋಶೆಯೇ, ಮೋಶೆಯೇ” ಎಂದು ಅವನನ್ನು ಕರೆದನು. ಅದಕ್ಕೆ ಮೋಶೆ, “ಇಗೋ ಇದ್ದೇನೆ” ಅಂದನು. ದೇವರು ಅವನಿಗೆ, “ನೀನು ಪೊದೆಯ ಹತ್ತಿರ ಬರಬೇಡ! ನಿನ್ನ ಕಾಲಿನ ಕೆರಗಳನ್ನು ತೆಗೆದುಹಾಕು, ಯಾಕೆಂದರೆ ನೀನು ನಿಂತಿರುವ ಸ್ಥಳವು ಪರಿಶುದ್ಧ ಸ್ಥಳವಾಗಿದೆ” ಎಂದು ಹೇಳಿದನು.

ಅದಕ್ಕೆ ಯೆಹೋವನು ಅವನಿಗೆ, “ನಿನ್ನ ಕೈಯಲ್ಲಿರುವುದೇನು?” ಎಂದು ಕೇಳಿದನು. ಅವನು, ಇದು “ಇದು ಒಂದು ಕೋಲು” ಅಂದನು. ಯೆಹೋವನು ಅವನಿಗೆ, “ಅದನ್ನು ನೆಲದ ಮೇಲೆ ಹಾಕು” ಎಂದನು. ಅವನು ನೆಲದಲ್ಲಿ ಹಾಕುತ್ತಲೇ ಅದು ಹಾವಾಯಿತು! ಮೋಶೆ ಅದಕ್ಕೆ ಭಯಪಟ್ಟು ಓಡಿಹೋದನು. ಯೆಹೋವನು ಮೋಶೆಗೆ, “ನಿನ್ನ ಕೈಚಾಚಿ ಅದರ ಬಾಲವನ್ನು ಹಿಡಿ” ಎಂದು ಹೇಳಿದನು. ಅವನು ಅದನ್ನು ಹಿಡಿದ ಕೂಡಲೇ ಅದು ಕೋಲಾಯಿತು. ಆಗ ಯೆಹೋವನು ಅವನಿಗೆ, “ಇದರಿಂದ ಅವರು ತಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್, ಯಾಕೋಬರ ದೇವರಾಗಿರುವ ಯೆಹೋವನು, ನಿನಗೆ ಕಾಣಿಸಿಕೊಂಡಿರುವುದು ನಿಜ ಎಂದು ನಂಬುವರು” ಎಂದು ಹೇಳಿದನು.

ಯೆಹೋವನು ತಿರುಗಿ ಅವನಿಗೆ, “ನಿನ್ನ ಕೈಯನ್ನು ಎದೆಯಭಾಗದೊಳಗೆ ಇಟ್ಟುಕೋ” ಎಂದು ಹೇಳಿದನು. ಅವನು ಹಾಗೆ ಇಟ್ಟುಕೊಂಡು ಹೊರಗೆ ತೆಗೆಯಲು ಅವನ ಕೈ ಕುಷ್ಠ ಹತ್ತಿ ಹಿಮದಂತೆ ಬೆಳ್ಳಗಾಗಿತ್ತು. ಯೆಹೋವನು ಅವನಿಗೆ ನಿನ್ನ ಕೈಯನ್ನು ತಿರುಗಿ ಎದೆಯಭಾಗದೊಳಗೆ “ಸೇರಿಸು” ಎಂದು ಹೇಳಿದನು. ಅವನು ಅದನ್ನು ತಿರುಗಿ ಎದೆಯಭಾಗದೊಳಗೆ ಸೇರಿಸಿ ತೆಗೆದು ನೋಡಿದಾಗ ಅದು ಉಳಿದ ದೇಹದಂತೆ ಆಗಿತ್ತು. ಆಗ ಯೆಹೋವನು ಅವನಿಗೆ, “ಅವರು ನಿನ್ನನ್ನು ನಂಬದೆ, ಮೊದಲನೆಯ ಸೂಚಕಕಾರ್ಯವನ್ನು ಗಮನಿಸದೆ ತಿರಸ್ಕರಿಸಿದರೂ, ಎರಡನೆಯ ಸೂಚಕಕಾರ್ಯವನ್ನು ನಂಬುವರು. ಆ ಎರಡು ಸೂಚಕಕಾರ್ಯಗಳನ್ನೂ, ಅವರು ನಂಬದೆಯೂ, ನಿನ್ನ ಮಾತನ್ನು ಕೇಳದೆಯೂ ಹೋದರೆ, ನೀನು ನೈಲ್ ನದಿಯ ನೀರನ್ನು ತೆಗೆದುಕೊಂಡು ಒಣಗಿದ ನೆಲದ ಮೇಲೆ ಸುರಿಯಬೇಕು. ಆಗ ಒಣಗಿದ ನೆಲದಲ್ಲಿ ಸುರಿದ ನೀರು ರಕ್ತವಾಗುವುದು” ಎಂದು ಹೇಳಿದನು.

ಯೆಹೋವನು ಮೋಶೆಗೆ ಹೇಳಿದ ಮಾತುಗಳನ್ನೆಲ್ಲಾ ಆರೋನನು ಅವರಿಗೆ ತಿಳಿಸಿ ಜನರ ಕಣ್ಣುಗಳ ಮುಂದೆ ಸೂಚಕಕಾರ್ಯಗಳನ್ನು ಮಾಡಿದನು. ಜನರು ನಂಬಿದರು. ಯೆಹೋವನು ಇಸ್ರಾಯೇಲರನ್ನು ಕಟಾಕ್ಷಿಸಿ ತಮ್ಮ ದುರವಸ್ಥೆಯನ್ನು ಮನಸ್ಸಿಗೆ ತಂದುಕೊಂಡನೆಂಬುದನ್ನು, ಇಸ್ರಾಯೇಲರು ಕೇಳಿದಾಗ ತಲೆಬಾಗಿಸಿ ಆರಾಧಿಸಿದರು.

ಆದರೂ ನಾನು ಫರೋಹನ ಮನಸ್ಸಿನಲ್ಲಿ ಹಠವನ್ನು ಹುಟ್ಟಿಸಿ, ಐಗುಪ್ತದೇಶದಲ್ಲಿ ಅನೇಕ ಸೂಚಕಕಾರ್ಯಗಳನ್ನೂ ಮತ್ತು ಅದ್ಭುತಕಾರ್ಯಗಳನ್ನೂ ಮಾಡಿ ನನ್ನ ಶಕ್ತಿಯನ್ನು ತೋರಿಸುವೆನು.

“ಫರೋಹನು ನಿಮಗೆ ‘ನಾನು ನಿಮ್ಮ ಮಾತನ್ನು ನಂಬುವಂತೆ ನೀವು ಮಹತ್ಕಾರ್ಯವನ್ನು ನನ್ನ ಮುಂದೆ ಮಾಡಬೇಕು’ ಎಂದು ಹೇಳಿದರೆ ಮೋಶೆಯು ಆರೋನನಿಗೆ, ‘ನಿನ್ನ ಕೈಯಲ್ಲಿರುವ ಕೋಲನ್ನು ಫರೋಹನ ಮುಂದೆ ನೆಲದಲ್ಲಿ ಹಾಕು’ ಎಂದು ಹೇಳಬೇಕು. ಅದು ಸರ್ಪವಾಗುವುದು” ಎಂದು ಆಜ್ಞಾಪಿಸಿದನು. ಮೋಶೆ ಆರೋನರು ಫರೋಹನ ಬಳಿಗೆ ಹೋಗಿ ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಆರೋನನು ತನ್ನ ಕೋಲನ್ನು ಫರೋಹನ ಮತ್ತು ಅವನ ಪರಿವಾರದವರ ಮುಂದೆ ನೆಲದಲ್ಲಿ ಹಾಕಿದಾಗ ಅದು ಸರ್ಪವಾಯಿತು. ಫರೋಹನು ಐಗುಪ್ತದೇಶದ ವಿದ್ವಾಂಸರನ್ನೂ ಮತ್ತು ಮಂತ್ರವಾದಿಗಳನ್ನೂ ಕರೆಯಿಸಿದಾಗ ಆ ಮಾಂತ್ರಿಕರು ತಮ್ಮ ಮಂತ್ರವಿದ್ಯೆಗಳಿಂದ ಅದೇ ರೀತಿಯಾಗಿ ಮಾಡಿದರು. ಅವರು ತಮ್ಮ ತಮ್ಮ ಕೋಲುಗಳನ್ನು ನೆಲಕ್ಕೆ ಹಾಕಲು ಅವು ಸರ್ಪಗಳಾದವು. ಆದರೆ ಆರೋನನ ಕೋಲು ಅವರ ಕೋಲುಗಳನ್ನು ನುಂಗಿಬಿಟ್ಟಿತು.

ಮೋಶೆ ಮತ್ತು ಆರೋನರು ಯೆಹೋವನು ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಆರೋನನು ಫರೋಹನ ಮತ್ತು ಅವನ ಪರಿವಾರದ ಮುಂದೆ ಕೋಲನ್ನು ಎತ್ತಿ, ನೈಲ್ ನದಿಯಲ್ಲಿರುವ ನೀರನ್ನು ಹೊಡೆಯಲು ಅದೆಲ್ಲಾ ರಕ್ತವಾಯಿತು. ಅದರಲ್ಲಿದ್ದ ಮೀನುಗಳು ಸತ್ತುಹೋದವು. ನದಿಯು ದುರ್ವಾಸನೆಗೊಂಡಿದ್ದರಿಂದ ಐಗುಪ್ತರು ನೈಲ್ ನದಿಯ ನೀರನ್ನು ಕುಡಿಯಲಾರದೆ ಹೋದರು. ಐಗುಪ್ತ ದೇಶದಲ್ಲೆಲ್ಲಾ ರಕ್ತವೇ ಕಾಣುತಿತ್ತು. ಆದರೆ ಐಗುಪ್ತ್ಯ ದೇಶದ ಮಾಂತ್ರಿಕರು ತಮ್ಮ ಮಂತ್ರವಿದ್ಯೆಗಳಿಂದ ಅದೇ ರೀತಿಯಾಗಿ ಮಾಡಿದ್ದರಿಂದ ಫರೋಹನ ಹೃದಯವು ಇನ್ನೂ ಕಠಿಣವಾಯಿತು. ಯೆಹೋವನು ಹೇಳಿದಂತೆಯೇ ಅವನು ಮೋಶೆ ಮತ್ತು ಆರೋನರ ಮಾತನ್ನು ಕೇಳದೆ ಹೋದನು. ಫರೋಹನು ಆ ಮಹತ್ಕಾರ್ಯವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ ತನ್ನ ಮನೆಗೆ ಹೊರಟುಹೋದನು.

ನಂತರ ಯೆಹೋವನು ಮೋಶೆಯ ಸಂಗಡ ಮಾತನಾಡಿ ಅವನಿಗೆ, “ನೀನು ಫರೋಹನ ಬಳಿಗೆ ಹೋಗಿ ಹೀಗೆ ಹೇಳಬೇಕು, ‘ಯೆಹೋವನು ಆಜ್ಞಾಪಿಸುವುದೇನೆಂದರೆ: ನನ್ನನ್ನು ಆರಾಧಿಸುವುದಕ್ಕೆ ನನ್ನ ಜನರಿಗೆ ಅಪ್ಪಣೆಕೊಡಬೇಕು. ಅಪ್ಪಣೆಕೊಡದೆ ಹೋದರೆ, ನಾನು ನಿನ್ನ ದೇಶದಲ್ಲೆಲ್ಲಾ ಕಪ್ಪೆಗಳಿಂದ ಉಪದ್ರವ ಕೊಡುವೆನು. ನೈಲ್ ನದಿಯಲ್ಲಿ ಕಪ್ಪೆಗಳು ಅಸಂಖ್ಯಾತವಾಗಿ ಹುಟ್ಟುವವು. ಅವು ಹೊರಟು ಬಂದು ನಿನ್ನ ಅರಮನೆಯಲ್ಲಿಯೂ, ಮಲಗುವ ಕೋಣೆಯಲ್ಲಿಯೂ, ಮಂಚದ ಮೇಲೆಯೂ ಬರುವುದಲ್ಲದೆ ನಿನ್ನ ಪರಿವಾರದವರ ಮನೆಗಳಲ್ಲಿಯೂ, ನಿನ್ನ ಪ್ರಜೆಗಳ ಮೇಲೆಯೂ, ಒಲೆಗಳಲ್ಲಿಯೂ, ಹಿಟ್ಟು ನಾದುವ ಪಾತ್ರೆಗಳಲ್ಲಿಯೂ ಬರುವವು. ನಿನ್ನ ಮೇಲೆಯೂ, ನಿನ್ನ ಪ್ರಜೆಗಳ ಮೇಲೆಯೂ ಮತ್ತು ಪರಿವಾರದವರ ಮೇಲೆಯೂ ಕಪ್ಪೆಗಳು ಹರಡಿಕೊಳ್ಳುವವು.’” ಎಂದನು. ಯೆಹೋವನು ಪುನಃ ಮೋಶೆಯ ಸಂಗಡ ಮಾತನಾಡಿ, “ನೀನು ಆರೋನನಿಗೆ, ನಿನ್ನ ಕೋಲನ್ನು ಹಿಡಿದುಕೊಂಡು ಹೊಳೆ, ಕಾಲುವೆ, ಕೆರೆ ಇವುಗಳ ಮೇಲೆ ಅದನ್ನು ಹಿಡಿದುಕೊಂಡು ಕೈಯನ್ನು ಚಾಚು. ಆಗ ಐಗುಪ್ತ ದೇಶದ ಮೇಲೆಲ್ಲಾ ಕಪ್ಪೆಗಳು ಬರುವವು” ಎಂದು ಹೇಳಬೇಕು ಎಂದನು. ಆರೋನನು ಐಗುಪ್ತ ದೇಶದಲ್ಲಿ ನೀರಿರುವ ಎಲ್ಲಾ ಸ್ಥಳಗಳ ಮೇಲೆ ತನ್ನ ಕೈಚಾಚಲು ಕಪ್ಪೆಗಳು ಹೊರಟು ಬಂದು ದೇಶವನ್ನೆಲ್ಲಾ ತುಂಬಿಕೊಂಡವು. ಮಂತ್ರವಾದಿಗಳು ತಮ್ಮ ಮಂತ್ರವಿದ್ಯೆಗಳಿಂದ ಹಾಗೆಯೇ ಮಾಡಿ, ಐಗುಪ್ತ ದೇಶದ ಮೇಲೆ ಕಪ್ಪೆಗಳನ್ನು ಬರಮಾಡಿದರು.

ತರುವಾಯ ಯೆಹೋವನು ಮೋಶೆಯ ಸಂಗಡ ಮಾತನಾಡಿ, “ನೀನು ಆರೋನನಿಗೆ, ‘ನಿನ್ನ ಕೋಲನ್ನು ಚಾಚಿ ಭೂಮಿಯ ಧೂಳನ್ನು ಹೊಡೆ, ಆಗ ಐಗುಪ್ತ ದೇಶದ ಭೂಮಿಯಲ್ಲಿದ್ದ ಧೂಳೆಲ್ಲಾ ಹೇನುಗಳಾಗುವುದು’” ಎಂದನು. ಅವರು ಹಾಗೆಯೇ ಮಾಡಿದರು. ಆರೋನನು ಕೋಲನ್ನು ಹಿಡಿದುಕೊಂಡು ಅದನ್ನು ಚಾಚಿ, ಭೂಮಿಯ ಧೂಳನ್ನು ಹೊಡೆದನು. ಆಗ ಮನುಷ್ಯರ ಮೇಲೆಯೂ, ಪಶುಗಳ ಮೇಲೆಯೂ ಹೇನುಗಳು ಬಂದವು. ಐಗುಪ್ತ ದೇಶದ ಭೂಮಿಯಲ್ಲಿದ್ದ ಧೂಳು ಹೇನುಗಳಾದವು. ಮಂತ್ರಗಾರರು ತಮ್ಮ ಮಂತ್ರವಿದ್ಯೆಗಳಿಂದ ಹಾಗೆಯೇ ಹೇನುಗಳನ್ನು ಉಂಟುಮಾಡುವುದಕ್ಕೆ ಪ್ರಯತ್ನಿಸಿದರೂ ಆಗದೆ ಹೋಯಿತು. ಆ ಹೇನುಗಳು ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಇದ್ದವು. ಆಗ ಆ ಮಂತ್ರಗಾರರು ಫರೋಹನಿಗೆ, “ಇದು ದೇವರ ಕೈಕೆಲಸವೇ ಸರಿ” ಎಂದು ಹೇಳಿದರು. ಆದರೂ ಫರೋಹನ ಹೃದಯವು ಕಠಿಣವಾಗಿತ್ತು. ಯೆಹೋವನು ಮೋಶೆಗೆ ಮುಂತಿಳಿಸಿದಂತೆಯೇ ಫರೋಹನು ಅವರ ಮಾತನ್ನು ಕೇಳದೆ ಹೋದನು.

ತರುವಾಯ ಯೆಹೋವನು ಮೋಶೆಗೆ, “ನೀನು ಬೆಳಿಗ್ಗೆ ಎದ್ದು ಫರೋಹನ ಮುಂದೆ ನಿಂತುಕೋ. ಅವನು ಹೊರಗೆ ನದಿಯ ಬಳಿಗೆ ಬರುತ್ತಾನೆ. ನೀನು ಅವನಿಗೆ ಹೀಗೆಂದು ಹೇಳು, ‘ಯೆಹೋವನು ಆಜ್ಞಾಪಿಸುವುದೇನೆಂದರೆ, ನನ್ನನ್ನು ಆರಾಧಿಸುವಂತೆ ನನ್ನ ಜನರಿಗೆ ಅಪ್ಪಣೆಕೊಡಬೇಕು. ಆದರೆ ನೀನು, ನನ್ನ ಜನರಿಗೆ ಅಪ್ಪಣೆಕೊಡದೇ ಹೋದರೆ, ನಾನು ನಿನಗೂ, ನಿನ್ನ ಪರಿವಾರದವರಿಗೂ, ನಿನ್ನ ಮನೆಗಳಿಗೂ ನೊಣಗಳ ಕಾಟವುಂಟಾಗುವಂತೆ ಮಾಡುವೆನು. ಐಗುಪ್ತ್ಯರ ಮನೆಗಳಲ್ಲಿಯೂ, ಅವರ ಎಲ್ಲಾ ಭೂಮಿಗಳಲ್ಲಿಯೂ ಆ ನೊಣಗಳು ತುಂಬಿಕೊಳ್ಳುವವು. ಆದರೆ ಆ ದಿನದಲ್ಲಿ ನಾನೇ, ಭೂಲೋಕದಲ್ಲಿ ಯೆಹೋವನೆಂದು ನೀನು ತಿಳಿದುಕೊಳ್ಳುವಂತೆ ನನ್ನ ಜನರು ವಾಸವಾಗಿರುವ ಗೋಷೆನ್ ಸೀಮೆಯನ್ನು ಪ್ರತ್ಯೇಕಿಸುವೆನು. ಅಲ್ಲಿ ಆ ನೊಣಗಳ ಕಾಟವು ಇರುವುದಿಲ್ಲ. ಹೀಗೆ ನನ್ನ ಜನಕ್ಕೂ, ನಿನ್ನ ಜನಕ್ಕೂ ನಡುವೆ ವ್ಯತ್ಯಾಸವನ್ನುಂಟು ಮಾಡುವೆನು. ನಾಳೆಯೇ ಈ ಮಹತ್ಕಾರ್ಯ ಉಂಟಾಗುವುದು’ ಎಂದು ಹೇಳಬೇಕು” ಎಂದನು. ಯೆಹೋವನು ಹಾಗೆಯೇ ಮಾಡಿದನು. ಬಾಧಿಸುವ ನೊಣಗಳು ಫರೋಹನ ಅರಮನೆಯಲ್ಲಿಯೂ, ಅವನ ಪರಿವಾರದವರ ಮನೆಗಳಲ್ಲಿಯೂ, ಸಮಸ್ತ ಐಗುಪ್ತ ದೇಶದಲ್ಲಿಯೂ ವಿಪರೀತವಾಗಿ ತುಂಬಿಕೊಂಡವು. ಅವುಗಳಿಂದ ದೇಶವು ಹಾಳಾಗಿಹೋಯಿತು.

ತರುವಾಯ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, “ನೀನು, ಫರೋಹನ ಬಳಿಗೆ ಹೋಗಿ ಅವನಿಗೆ, ‘ಇಬ್ರಿಯರ ದೇವರಾದ ಯೆಹೋವನು ತನ್ನನ್ನು ಆರಾಧಿಸುವಂತೆ ತನ್ನ ಜನರಿಗೆ ಅಪ್ಪಣೆಕೊಡಬೇಕೆಂಬುದಾಗಿ ಹೇಳಿದ್ದಾನೆ. ನೀನು ಅವರಿಗೆ ಅಪ್ಪಣೆ ಕೊಡದೆ ಇನ್ನೂ ಅವರನ್ನು ತಡೆದರೆ, ಯೆಹೋವನು ಅಡವಿಯಲ್ಲಿರುವ ನಿನ್ನ ಎಲ್ಲಾ ಪಶುಗಳಿಗೂ, ಕುದುರೆ, ಕತ್ತೆ, ಒಂಟೆ, ದನ, ಕುರಿ, ಆಡು ಇವೆಲ್ಲವುಗಳಿಗೂ ವಿರೋಧವಾಗಿ ತನ್ನ ಕೈಯನ್ನು ಎತ್ತಿ ಘೋರವ್ಯಾಧಿಯನ್ನು ಉಂಟುಮಾಡುವನೆಂದು ತಿಳಿದುಕೋ. ಯೆಹೋವನು ಇಸ್ರಾಯೇಲರ ಪಶುಗಳಿಗೂ, ಐಗುಪ್ತರ ಪಶುಗಳಿಗೂ ವ್ಯತ್ಯಾಸವನ್ನುಂಟು ಮಾಡುವನು. ಇಸ್ರಾಯೇಲರಿಗಿರುವ ಪಶುಗಳಲ್ಲಿ ಒಂದೂ ಸಾಯುವುದಿಲ್ಲ’ ಎಂದು ಹೇಳಬೇಕು” ಎಂದನು. ಇದಲ್ಲದೆ ಯೆಹೋವನು, “ನಿರ್ದಿಷ್ಟವಾದ ಸಮಯವನ್ನು ನೇಮಿಸಿ, ನಾಳೆಯೇ ಈ ಕಾರ್ಯವನ್ನು ಈ ದೇಶದಲ್ಲಿ ಮಾಡುವನು ಎಂದು ಹೇಳು” ಎಂದನು. ಮರುದಿನ ಯೆಹೋವನು ಆ ಕಾರ್ಯವುಂಟಾಗುವಂತೆ ಮಾಡಿದನು. ಐಗುಪ್ತ್ಯರ ಪಶುಗಳೆಲ್ಲಾ ಸತ್ತುಹೋದವು. ಇಸ್ರಾಯೇಲರ ಪಶುಗಳಲ್ಲಿ ಒಂದೂ ಸಾಯಲಿಲ್ಲ. ಫರೋಹನು ವಿಚಾರಿಸಿದಾಗ, ಇಸ್ರಾಯೇಲ್ಯರ ಪಶುಗಳಲ್ಲಿ ಒಂದೂ ಸಾಯಲಿಲ್ಲವೆಂಬುದನ್ನು ತಿಳಿದುಕೊಂಡನು. ಆದರೂ ಫರೋಹನ ಹೃದಯವು ಕಠಿಣವಾಗಿದ್ದರಿಂದ ಆ ಜನರಿಗೆ ಹೋಗುವುದಕ್ಕೆ ಅಪ್ಪಣೆಕೊಡಲಿಲ್ಲ.

ಯೆಹೋವನು ಮೋಶೆ ಮತ್ತು ಆರೋನರಿಗೆ, “ನೀವು ಒಲೆಯ ಬೂದಿಯನ್ನು ಕೈತುಂಬಾ ತೆಗೆದುಕೊಳ್ಳಿರಿ. ಮೋಶೆ ಅದನ್ನು ಫರೋಹನ ಕಣ್ಣುಗಳ ಮುಂದೆ ಆಕಾಶದ ಕಡೆಗೆ ತೂರಲಿ. ಆಗ ಅದು ಐಗುಪ್ತ ದೇಶದಲ್ಲೆಲ್ಲಾ ಧೂಳಿನ ಕಣಗಳಾಗಿ ಮಾರ್ಪಟ್ಟು ಅದು ಐಗುಪ್ತ ದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಹುಣ್ಣುಗಳಾಗುವ ಬೊಕ್ಕೆಗಳು ಏಳುವಂತೆ ಮಾಡುವವು” ಎಂದು ಹೇಳಿದನು. ಅದರಂತೆ ಮೋಶೆ ಮತ್ತು ಆರೋನರು ಒಲೆಯ ಬೂದಿಯನ್ನು ತೆಗೆದುಕೊಂಡು ಫರೋಹನ ಮುಂದೆ ನಿಂತರು. ಮೋಶೆಯು ಆ ಬೂದಿಯನ್ನು ಆಕಾಶದ ಕಡೆಗೆ ತೂರಿದನು. ಆಗ ಅದು ಮನುಷ್ಯರ ಮೇಲೆಯೂ, ಪಶುಗಳ ಮೇಲೆಯೂ ಹರಡಿ ಹುಣ್ಣುಗಳಾಗುವಂತೆ ಬೊಕ್ಕೆಗಳನ್ನೆಬ್ಬಿಸಿತು. ಇದಲ್ಲದೆ ಮಂತ್ರಗಾರರು, ಹುಣ್ಣುಗಳ ದೆಸೆಯಿಂದ ಮೋಶೆಯ ಮುಂದೆ ನಿಲ್ಲಲಾರದೆ ಹೋದರು. ಏಕೆಂದರೆ ಹುಣ್ಣುಗಳು ಮಂತ್ರಗಾರರ ಮೇಲೆಯೂ, ಐಗುಪ್ತ್ಯರ ಮೇಲೆಯೂ ಎದ್ದಿದ್ದವು. ಆದರೂ ಯೆಹೋವನು ಮೋಶೆಗೆ ಹೇಳಿದಂತೆಯೇ ಆಯಿತು. ಯೆಹೋವನು ಫರೋಹನ ಹೃದಯವನ್ನು ಕಠಿಣಮಾಡಿದ್ದರಿಂದ ಅವನು ಅವರ ಮಾತಿಗೆ ಕಿವಿಗೊಡದೆ ಹೋದನು.

ಯೆಹೋವನು ಮೋಶೆಗೆ, “ಆಕಾಶಕ್ಕೆ ನಿನ್ನ ಕೈಚಾಚು, ಆಗ ಐಗುಪ್ತ ದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ, ಪಶುಗಳ ಮೇಲೆಯೂ, ಹೊಲದಲ್ಲಿರುವ ಎಲ್ಲಾ ಪೈರುಗಳ ಮೇಲೆಯೂ ಆನೆಕಲ್ಲಿನ ಮಳೆ ಬೀಳುವುದು” ಎಂದು ಹೇಳಿದನು. ಮೋಶೆಯು ತನ್ನ ಕೋಲನ್ನು ಆಕಾಶದ ಕಡೆಗೆ ಚಾಚಿದಾಗ ಯೆಹೋವನು ಗುಡುಗನ್ನು, ಆನೆಕಲ್ಲಿನ ಮಳೆಯನ್ನು ಕಳುಹಿಸಿದನು. ಸಿಡಿಲುಗಳು ನೆಲಕ್ಕೆ ಅಪ್ಪಳಿಸಿದವು. ಯೆಹೋವನು ಐಗುಪ್ತ ದೇಶದ ಮೇಲೆ ಆನೆಕಲ್ಲಿನ ಮಳೆಯನ್ನು ಸುರಿಸಿದನು. ಆನೆಕಲ್ಲಿನ ಮಳೆಯು ಬಹು ರಭಸವಾಗಿತ್ತು. ಅದರೊಂದಿಗೆ ಮಿಂಚು ಫಳಫಳನೆ ಹೊಳೆಯುತಿತ್ತು. ಐಗುಪ್ತ್ಯದವರು ಒಂದು ರಾಷ್ಟ್ರವಾದಂದಿನಿಂದ ಆ ದೇಶದಲ್ಲಿ ಅಂಥ ಘೋರವಾದ ಆನೆಕಲ್ಲಿನ ಮಳೆ ಆಗಿರಲಿಲ್ಲ. ಆ ಮಳೆಯಿಂದ ಐಗುಪ್ತ ದೇಶದ ಎಲ್ಲಾ ಕಡೆಗಳಲ್ಲಿದ್ದ ಮನುಷ್ಯರು, ಪಶುಗಳು, ಬಯಲಿನಲ್ಲಿದ್ದ ಎಲ್ಲವೂ ನಾಶವಾದವು. ಆನೆಕಲ್ಲಿನ ಮಳೆಯಿಂದ ಹೊಲಗಳಲ್ಲಿದ್ದ ಪೈರುಗಳು ಹಾಳಾದವು. ಹೊಲಗಳಲ್ಲಿದ್ದ ಮರಗಳು ಮುರಿದುಹೋದವು. ಇಸ್ರಾಯೇಲರು ವಾಸವಾಗಿದ್ದ ಗೋಷೆನ್ ಸೀಮೆಯಲ್ಲಿ ಮಾತ್ರ ಆನೆಕಲ್ಲಿನ ಮಳೆ ಬೀಳಲಿಲ್ಲ. ಆಗ ಫರೋಹನು ಮೋಶೆ ಆರೋನರನ್ನು ಕರೆಯಿಸಿ ಅವರಿಗೆ, “ನಾನು ಅಪರಾಧಿಯೆಂದು ಈಗ ಒಪ್ಪಿಕೊಳ್ಳುತ್ತೇನೆ. ಯೆಹೋವನು ನ್ಯಾಯವಂತನು. ನಾನೂ ನನ್ನ ಜನರೂ ದೋಷಿಗಳು.

ಆಗ ಯೆಹೋವನು ಮೋಶೆಗೆ, “ಐಗುಪ್ತ ದೇಶದ ಮೇಲೆ ನಿನ್ನ ಕೈಯನ್ನು ಚಾಚಿ, ಮಿಡತೆಗಳನ್ನು ಬರಮಾಡು. ಆನೆಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿರುವ ಪೈರುಗಳನ್ನೆಲ್ಲಾ ಮಿಡತೆಗಳು ತಿಂದುಬಿಡಲಿ” ಎಂದು ಹೇಳಿದನು. ಮೋಶೆ ತನ್ನ ಕೋಲನ್ನು ಐಗುಪ್ತ ದೇಶದ ಮೇಲೆ ಚಾಚಿದಾಗ, ಯೆಹೋವನು ಹಗಲಿರುಳು ಮೂಡಣದಿಕ್ಕಿನಿಂದ ಗಾಳಿಯನ್ನು ಬೀಸುವಂತೆ ಮಾಡಿದನು. ಹೊತ್ತಾರೆ ಗಾಳಿಯ ದೆಸೆಯಿಂದ ಮಿಡತೆಗಳು ಬಂದಿದ್ದವು. ಮಿಡತೆಗಳು ಐಗುಪ್ತ ದೇಶದಲ್ಲೆಲ್ಲಾ ಬಂದಿಳಿದು ಐಗುಪ್ತ ದೇಶದ ಎಲ್ಲಾ ಕಡೆಯಲ್ಲಿಯೂ ಅಪರಿಮಿತವಾಗಿ ಮುತ್ತಿಕೊಂಡವು. ಅಂಥ ಮಿಡತೆಯ ದಂಡು ಹಿಂದೆಂದೂ ಬಂದಿರಲಿಲ್ಲ, ಮುಂದೆಯೂ ಬರಲು ಸಾಧ್ಯವಿಲ್ಲ. ಅವು ಭೂಮಿಯನ್ನೆಲ್ಲಾ ಮುಚ್ಚಿಕೊಂಡಿದ್ದರಿಂದ ನೆಲವು ಕಾಣದೇ ಹೋಯಿತು. ಆನೆಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿದ್ದ ಎಲ್ಲಾ ಪೈರುಗಳನ್ನೂ, ಮರಗಳಲ್ಲಿದ್ದ ಎಲ್ಲಾ ಕಾಯಿಗಳನ್ನೂ ಅವು ತಿಂದುಬಿಟ್ಟವು. ಐಗುಪ್ತ ದೇಶದಲ್ಲೆಲ್ಲಾ ಮರಗಳಲ್ಲಾಗಲಿ, ಹೊಲದ ಗಿಡಗಳಲ್ಲಾಗಲಿ ಹಸುರಾದದ್ದು ಒಂದೂ ಉಳಿಯಲಿಲ್ಲ. ಆಗ ಫರೋಹನು ಮೋಶೆ ಆರೋನರನ್ನು ತ್ವರೆಯಾಗಿ ಕರೆಯಿಸಿ, “ನಾನು ನಿಮ್ಮ ದೇವರಾದ ಯೆಹೋವನಿಗೂ, ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ.

ತರುವಾಯ ಯೆಹೋವನು ಮೋಶೆಗೆ, “ಆಕಾಶಕ್ಕೆ ನಿನ್ನ ಕೈಯನ್ನು ಚಾಚು. ಆಗ ಐಗುಪ್ತ ದೇಶದಲ್ಲೆಲ್ಲಾ ಕತ್ತಲು ಉಂಟಾಗುವುದು. ಆ ಕತ್ತಲೆಯಿಂದಾಗಿ ಜನರು ತಡವರಿಸುತ್ತಾ ನಡೆಯುವರು” ಎಂದು ಹೇಳಿದನು. ಮೋಶೆ ಆಕಾಶಕ್ಕೆ ಕೈಯನ್ನು ಚಾಚಿದಾಗ ಐಗುಪ್ತ ದೇಶದಲ್ಲೆಲ್ಲಾ ಮೂರು ದಿನ ಕಾರ್ಗತ್ತಲೆ ಮುಚ್ಚಿಕೊಂಡಿತು. ಮೂರು ದಿನಗಳವರೆಗೆ ಅವರು ಒಬ್ಬರನ್ನೊಬ್ಬರು ನೋಡಲಿಲ್ಲ. ಯಾರೂ ತಮ್ಮ ಸ್ಥಳದಿಂದ ಏಳಲೂ ಇಲ್ಲ. ಆದರೆ ಇಸ್ರಾಯೇಲರು ವಾಸವಾಗಿದ್ದ ಸ್ಥಳಗಳಲ್ಲಿ ಬೆಳಕು ಇತ್ತು.

ಮಧ್ಯರಾತ್ರಿಯಲ್ಲಿ ಯೆಹೋವನು ಸಿಂಹಾಸನದಲ್ಲಿರುವ ಫರೋಹನ ಚೊಚ್ಚಲು ಮಗನು ಮೊದಲುಗೊಂಡು ಸೆರೆಯಲ್ಲಿದ್ದ ಸೆರೆಯವನ ಚೊಚ್ಚಲು ಮಗನವರೆಗೂ, ಐಗುಪ್ತ ದೇಶದಲ್ಲಿದ್ದ ಎಲ್ಲಾ ಚೊಚ್ಚಲು ಮಕ್ಕಳನ್ನೂ ಸಂಹಾರ ಮಾಡಿದನು. ಪಶುಗಳ ಚೊಚ್ಚಲು ಮರಿಗಳನ್ನೂ ಸಂಹಾರಮಾಡಿದನು. ಆ ರಾತ್ರಿಯಲ್ಲಿ ಫರೋಹನೂ, ಅವನ ಪರಿವಾರದವರೂ, ಐಗುಪ್ತ್ಯರೆಲ್ಲರೂ ಎದ್ದು ನೋಡಲಾಗಿ ಸಾವಿಲ್ಲದ ಮನೆ ಒಂದೂ ಇರಲಿಲ್ಲ. ಐಗುಪ್ತ ದೇಶದಲ್ಲಿ ದೊಡ್ಡ ಗೋಳಾಟವಾಯಿತು. ಫರೋಹನು ಆ ರಾತ್ರಿಯಲ್ಲೇ ಮೋಶೆ ಮತ್ತು ಆರೋನರನ್ನು ಕರೆಯಿಸಿ ಅವರಿಗೆ, “ನೀವು ಎದ್ದು ನನ್ನ ಜನರ ಮಧ್ಯದಿಂದ ಹೊರಟುಹೋಗಿರಿ. ನೀವು ಕೇಳಿಕೊಂಡ ಮೇರೆಗೆ ಯೆಹೋವನನ್ನು ಆರಾಧಿಸುವುದಕ್ಕೆ ನೀವು ಮತ್ತು ಇಸ್ರಾಯೇಲರು ಹೊರಟುಹೋಗಿರಿ. ನೀವು ಕೇಳಿಕೊಂಡಂತೆ ನಿಮ್ಮ ಕುರಿದನಗಳ ಹಿಂಡುಗಳನ್ನು ತೆಗೆದುಕೊಂಡು ಹೋಗಿರಿ. ಅದಲ್ಲದೆ ನನ್ನನ್ನೂ ಸಹ ಆಶೀರ್ವದಿಸಿರಿ” ಎಂದನು. ಐಗುಪ್ತರು, “ನಾವೆಲ್ಲರು ಸಾಯುತ್ತೇವೆ” ಎಂದುಕೊಂಡು ಇಸ್ರಾಯೇಲರನ್ನು ತಮ್ಮ ದೇಶದಿಂದ ಬೇಗನೇ ಕಳುಹಿಸಿಬಿಡುವುದಕ್ಕೆ ಅಪೇಕ್ಷೆಪಟ್ಟು ಅವರನ್ನು ಬಲವಂತಮಾಡಿದರು.

ಆಗ ಇಸ್ರಾಯೇಲರ ದಂಡಿನ ಮುಂದೆ ಹೋಗುತ್ತಿದ್ದ ದೇವದೂತನು ತನ್ನ ಸ್ಥಳವನ್ನು ಬಿಟ್ಟು ಅವರ ಹಿಂದಕ್ಕೆ ಬಂದನು. ಅವರ ಮುಂದಾಗಿ ಹೋಗುತ್ತಿದ್ದ ಮೇಘಸ್ತಂಭವು ಅಲ್ಲಿಂದ ಬಂದು ಅವರ ಹಿಂದೆ ನಿಂತುಕೊಂಡಿತು. ಆ ಮೇಘಸ್ತಂಭವು ಐಗುಪ್ತ್ಯರ ಪಾಳೆಯಕ್ಕೂ, ಇಸ್ರಾಯೇಲರ ಪಾಳೆಯಕ್ಕೂ ನಡುವೆ ಬಂದಿತು. ಅದು ಐಗುಪ್ತ್ಯರಿಗೆ ಕತ್ತಲನ್ನೂ, ಇಸ್ರಾಯೇಲರಿಗೆ ರಾತ್ರಿಯಲ್ಲಿ ಬೆಳಕನ್ನು ಕೊಟ್ಟಿದ್ದರಿಂದ ಆ ರಾತ್ರಿಯೆಲ್ಲಾ ಒಬ್ಬರ ಹತ್ತಿರಕ್ಕೆ ಒಬ್ಬರು ಬರಲಾಗಲಿಲ್ಲ. ಮೋಶೆ ಸಮುದ್ರದ ಮೇಲೆ ಕೈಚಾಚಿದಾಗ, ಯೆಹೋವನು ಆ ರಾತ್ರಿಯೆಲ್ಲಾ ಮೂಡಣ ದಿಕ್ಕಿನಿಂದ ಬಲವಾದ ಬಿರುಗಾಳಿಯನ್ನು ಬೀಸುವಂತೆ ಮಾಡಿ ಸಮುದ್ರದ ನೀರನ್ನು ಒಂದು ಕಡೆಗೆ ನೂಕಿ ಅದರ ತಳದಲ್ಲಿ ಒಣನೆಲವು ಕಾಣಿಸುವಂತೆ ಮಾಡಿದನು. ನೀರು ಇಬ್ಭಾಗವಾಯಿತು. ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿ ಒಣನೆಲದಲ್ಲಿ ನಡೆದುಹೋದರು. ನೀರು ಅವರ ಎಡಗಡೆ ಮತ್ತು ಬಲಗಡೆಗಳಲ್ಲಿ ಗೋಡೆಯಂತೆ ನಿಂತುಕೊಂಡಿತು. ಐಗುಪ್ತ್ಯರೂ ಅಂದರೆ ಫರೋಹನ ಕುದುರೆಗಳೂ, ರಥಗಳೂ, ರಾಹುತರೂ ಅವರನ್ನು ಬೆನ್ನಟ್ಟುವವರಾಗಿ ಅವರ ಹಿಂದೆಯೇ ಸಮುದ್ರದೊಳಗೆ ಬಂದರು. ಬೆಳಗಿನ ಜಾವದಲ್ಲಿ ಯೆಹೋವನು ಆ ಅಗ್ನಿ ಸ್ತಂಭ ಮತ್ತು ಮೇಘ ಸ್ತಂಭದೊಳಗಿನಿಂದ ಐಗುಪ್ತ್ಯರ ದಂಡಿನ ಕಡೆಗೆ ನೋಡಿ ಅವರಲ್ಲಿ ಗಲಿಬಿಲಿಯನ್ನು ಉಂಟುಮಾಡಿದನು. ಯೆಹೋವನು ಅವರ ರಥಗಳ ಚಕ್ರದ ಕೀಲುಗಳಲ್ಲಿ ವ್ಯತ್ಯಾಸ ಮಾಡಿಬಿಟ್ಟದ್ದರಿಂದ ಐಗುಪ್ತರು ಬಹು ಕಷ್ಟದಿಂದ ರಥಗಳನ್ನು ಸಾಗಿಸಿಕೊಂಡು ಹೋಗಬೇಕಾಯಿತು. ಆಗ ಐಗುಪ್ತ್ಯರು, “ನಾವು ಇಸ್ರಾಯೇಲರ ಮುಂದೆ ನಿಲ್ಲಲಾರೆವು, ಓಡಿ ಹೋಗೋಣ, ಯೆಹೋವನು ಅವರಿಗೋಸ್ಕರ ನಮಗೆ ವಿರೋಧವಾಗಿ ಯುದ್ಧಮಾಡುತ್ತಿದ್ದಾನೆ” ಎಂದು ಹೇಳಿಕೊಂಡರು. ಅಷ್ಟರಲ್ಲಿ ಯೆಹೋವನು ಮೋಶೆಗೆ, “ಸಮುದ್ರದ ಮೇಲೆ ನಿನ್ನ ಕೈಚಾಚು, ಆಗ ಅದರ ನೀರು ಮೊದಲಿನಂತೆ ಬಂದು ಐಗುಪ್ತ್ಯರನ್ನೂ, ಅವರ ರಥಗಳನ್ನೂ, ರಾಹುತರನ್ನೂ ಮುಳುಗಿಸುವುದು” ಎಂದು ಹೇಳಿದನು. ಮೋಶೆ ಸಮುದ್ರದ ಮೇಲೆ ಕೈಚಾಚಿದನು. ಬೆಳಗಾಗುವಾಗಲೇ ಸಮುದ್ರದ ನೀರು ಮೊದಲಿದ್ದಂತೆಯೇ ತುಂಬಿಕೊಂಡಿತು. ಐಗುಪ್ತ್ಯರು ಓಡಿಹೋಗುತ್ತಾ ಅದರ ಎದುರಾಗಿಯೇ ಬಂದರು. ಹೀಗೆ ಯೆಹೋವನು ಐಗುಪ್ತ್ಯರನ್ನು ಸಮುದ್ರದೊಳಗೆ ತಳ್ಳಿಬಿಟ್ಟನು. ನೀರು ಮೊದಲಿನಂತೆ ಬಂದು ಆ ರಥಗಳನ್ನೂ, ರಾಹುತರನ್ನೂ, ಅವರ ಹಿಂದೆ ಸಮುದ್ರದೊಳಗೆ ಹೋಗಿದ್ದ ಫರೋಹನ ಸೈನ್ಯದವರೆಲ್ಲರನ್ನೂ ಮುಳುಗಿಸಿಬಿಟ್ಟಿತ್ತು, ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ. ಇಸ್ರಾಯೇಲರಾದರೋ, ಸಮುದ್ರದೊಳಗೆ ಒಣನೆಲದಲ್ಲೇ ನಡೆದುಹೋದರು. ನೀರು ಅವರ ಎಡಗಡೆ ಮತ್ತು ಬಲಗಡೆಗಳಲ್ಲಿ ಗೋಡೆಯಂತೆ ನಿಂತಿತ್ತು.

ಯೆಹೋವನು ಅವರಿಗೆ, “ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಶ್ರದ್ಧೆಯಿಂದ ಕೇಳಿ, ಆತನ ದೃಷ್ಟಿಗೆ ಸರಿಬೀಳುವುದನ್ನು ಮಾಡಿ, ಆತನ ಆಜ್ಞೆಗಳಿಗೆ ವಿಧೇಯರಾಗಿದ್ದು, ಆತನ ಕಟ್ಟಳೆಗಳನ್ನೆಲ್ಲಾ ಅನುಸರಿಸಿ ನಡೆದರೆ, ನಾನು ಐಗುಪ್ತ್ಯರಿಗೆ ಉಂಟುಮಾಡಿದ ವ್ಯಾಧಿಗಳಲ್ಲಿ ಒಂದನ್ನೂ ನಿಮಗೆ ಬರಗೊಡಿಸುವುದಿಲ್ಲ. ಯೆಹೋವನೆಂಬ ನಾನೇ ನಿಮಗೆ ಆರೋಗ್ಯದಾಯಕನೂ, ನಿಮ್ಮನ್ನು ಗುಣಪಡಿಸುವವನೂ ಆಗಿದ್ದೇನೆ” ಎಂದನು.

ಯೆಹೋವನು ಅವರಿಗೆ, “ನನ್ನ ಮಾತನ್ನು ಕೇಳಿರಿ. ನಿಮ್ಮಲ್ಲಿ ಪ್ರವಾದಿಯಿದ್ದರೆ ನಾನು ಅವನಿಗೆ ಜ್ಞಾನದೃಷ್ಟಿಯಲ್ಲಿ ಪ್ರಕಟಿಸುವೆನು, ಮತ್ತು ಕನಸಿನಲ್ಲಿ ಅವನ ಸಂಗಡ ಮಾತನಾಡುವೆನು.

ಈ ಮನುಷ್ಯರೆಲ್ಲರು ಐಗುಪ್ತ ದೇಶದಲ್ಲಿಯೂ, ಮರುಭೂಮಿಯಲ್ಲಿಯೂ, ನಾನು ನಡೆಸಿರುವ ಮಹತ್ಕಾರ್ಯಗಳನ್ನೂ, ನನ್ನ ಮಹಿಮೆಯನ್ನೂ ನೋಡಿದರೂ ನನ್ನ ಮಾತಿಗೆ ಕಿವಿಗೊಡದೆ, ಪದೇ ಪದೇ ನನ್ನನ್ನು ಪರೀಕ್ಷಿಸಿದ್ದರಿಂದ

ಆ ದಿನದಲ್ಲಿ ನೀವು ಹತ್ತಿರ ಬಂದು ಬೆಟ್ಟದ ಬುಡದಲ್ಲಿ ನಿಂತುಕೊಂಡಿರಲು ಕತ್ತಲೂ, ಮೋಡವೂ, ಕಾರ್ಗತ್ತಲೂ ಕವಿದು ಆ ಬೆಟ್ಟವು ಆಕಾಶದ ತುದಿಯವರೆಗೂ ಬೆಂಕಿಯಿಂದ ಉರಿಯಿತು. ಆಗ ಯೆಹೋವನು ಆ ಬೆಂಕಿಯ ಜ್ವಾಲೆಯೊಳಗಿಂದ ನಿಮ್ಮ ಸಂಗಡ ಮಾತನಾಡಿದನು. ಆತನು ಮಾತನಾಡಿದ ಸ್ವರ ನಿಮಗೆ ಕೇಳಿಸಿತೇ ಹೊರತು ಯಾವ ಆಕಾರವೂ ಕಾಣಿಸಲ್ಲಿಲ್ಲ. ನೀವು ಅನುಸರಿಸಬೇಕೆಂದು ಆತನು ನೇಮಿಸಿದ ನಿಬಂಧನೆಯನ್ನು ಅಂದರೆ ಹತ್ತು ಆಜ್ಞೆಗಳನ್ನು ನಿಮಗೆ ವಿವರಿಸಿ, ಎರಡು ಕಲ್ಲಿನ ಹಲಗೆಗಳಲ್ಲಿ ಅದನ್ನು ಕೆತ್ತಿಸಿದನು.

ದೇವರು ಬೆಂಕಿಯ ಜ್ವಾಲೆಯೊಳಗಿಂದ ಮಾತನಾಡಿದ ಸ್ವರವು ನಿಮಗೆ ಕೇಳಿಸಿತಲ್ಲಾ; ಬೇರೆ ಯಾವ ಜನರಾದರೂ ದೇವರ ಸ್ವರವನ್ನು ಕೇಳಿ ಬದುಕಿದ್ದುಂಟೋ? ಬೇರೆ ಯಾವ ದೇವರೂ ಮನಪರಿಶೋಧನೆ, ಮಹತ್ಕಾರ್ಯ, ಉತ್ಪಾತ, ಯುದ್ಧ, ಭುಜಪರಾಕ್ರಮ, ಶಿಕ್ಷಾಹಸ್ತ, ಮಹಾಭೀತಿ ಇವುಗಳನ್ನು ಪ್ರಯೋಗಿಸಿ, ಒಂದು ಜನಾಂಗವನ್ನು ಮತ್ತೊಂದು ಜನಾಂಗದ ಕೈಯೊಳಗಿಂದ ತಪ್ಪಿಸುವುದಕ್ಕೆ ಪ್ರಯತ್ನಿಸಿದ್ದಾನೇ? ನಿಮ್ಮ ದೇವರಾದ ಯೆಹೋವನಾದರೋ ಐಗುಪ್ತದೇಶದಲ್ಲಿ ನಿಮಗೋಸ್ಕರ ಇದನ್ನೆಲ್ಲಾ ನಿಮ್ಮ ಕಣ್ಣು ಮುಂದೆ ನಡಿಸಿದ್ದಾನಲ್ಲಾ.

ಆತನು ಐಗುಪ್ತ್ಯರನ್ನೂ, ಫರೋಹನನ್ನೂ ಮತ್ತು ಅವನ ಮನೆಯವರನ್ನೂ ಬಾಧಕವಾದ ದೊಡ್ಡ ಮಹತ್ಕಾರ್ಯಗಳಿಂದಲೂ, ಉತ್ಪಾತಗಳಿಂದಲೂ ನಮ್ಮ ಕಣ್ಣೆದುರಿನಲ್ಲಿ ಶಿಕ್ಷಿಸಿ,

ನಿಮ್ಮಲ್ಲಿ ಯಾವ ವ್ಯಾಧಿಯೂ ಉಂಟಾಗದಂತೆ ಯೆಹೋವನು ಮಾಡುವನು. ನಿಮ್ಮ ಅನುಭವಕ್ಕೆ ಬಂದ ಪ್ರಕಾರ ಐಗುಪ್ತದೇಶದಲ್ಲಿ ಪ್ರಬಲವಾಗಿರುವ ಕ್ರೂರವ್ಯಾಧಿಗಳನ್ನು ನಿಮಗೆ ಬರಗೊಡಿಸದೆ, ಅವುಗಳನ್ನು ನಿಮ್ಮ ಶತ್ರುಗಳ ಮೇಲೆಯೇ ಬರಮಾಡುವನು.

ಆಗ ನೀವು ಕಣ್ಣಾರೆ ನೋಡಿದ ಪ್ರಕಾರ ಆತನು ವಿಶೇಷ ಪರಿಶೋಧನೆ, ಮಹತ್ಕಾರ್ಯ, ಉತ್ಪಾತ, ಭುಜಪರಾಕ್ರಮ, ಶಿಕ್ಷೆ ಇವುಗಳನ್ನು ಪ್ರಯೋಗಿಸಿ ನಿಮ್ಮನ್ನು ಬಿಡುಗಡೆಮಾಡಿದನಲ್ಲಾ. ನೀವು ಹೆದರಿಕೊಳ್ಳುವ ಆ ಎಲ್ಲಾ ಜನಾಂಗಗಳಿಗೂ ಆತನು ಹಾಗೆಯೇ ಮಾಡುವನು.

ಮನುಷ್ಯರು ಆಹಾರದಿಂದ ಮಾತ್ರವಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ನುಡಿಯಿಂದಲೂ ಬದುಕುತ್ತಾರೆ ಎಂಬುದು ನಿಮಗೆ ತಿಳಿಯುವಂತೆ ಆತನು ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ, ಹಸಿವೆಯಿಂದ ಬಳಲಿಸಿ, ನಿಮಗೂ, ನಿಮ್ಮ ಪೂರ್ವಿಕರಿಗೂ ಗೊತ್ತಿಲ್ಲದ ಮನ್ನವನ್ನು ಕೊಟ್ಟು ಪೋಷಿಸಿದನು. ಆ ನಲವತ್ತು ವರ್ಷ ನಿಮ್ಮ ಮೈಮೇಲಿದ್ದ ಉಡುಪು ಹಳೇಯದಾಗಲಿಲ್ಲ; ನಿಮ್ಮ ಕಾಲುಗಳು ಬಾತುಹೋಗಲಿಲ್ಲ.

ಮೋಶೆಗೆ ಸಮಾನನಾದ ಮತ್ತೊಬ್ಬ ಪ್ರವಾದಿ ಇಸ್ರಾಯೇಲರಲ್ಲಿ ಮತ್ತೆ ಹುಟ್ಟಲೇ ಇಲ್ಲ, ಯೆಹೋವನು ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತನಾಡುತ್ತಿದ್ದನು. ಆತನು ಐಗುಪ್ತದೇಶದಲ್ಲಿ ಫರೋಹನ ಮುಂದೆಯೂ, ಅವನ ಪ್ರಜಾಪರಿವಾರದವರ ಮುಂದೆಯೂ ವಿಧವಿಧವಾದ ಅದ್ಭುತಕಾರ್ಯಗಳನ್ನು ಮತ್ತು ಮಹತ್ಕಾರ್ಯಗಳನ್ನು ನಡಿಸುವುದಕ್ಕೆ ಯೆಹೋವನು ಅವನನ್ನು ಕಳುಹಿಸಿದನು. ಅವನು ಇಸ್ರಾಯೇಲರ ಕಣ್ಣ ಮುಂದೆ ವಿಶೇಷವಾದ ಭುಜಪರಾಕ್ರಮವನ್ನೂ ಮತ್ತು ಆಶ್ಚರ್ಯಕರವಾದ ಕಾರ್ಯಗಳನ್ನೂ ನಡೆಸಿದನು.

ಜನರು ಯೊರ್ದನ್ ನದಿಯನ್ನು ದಾಟುವುದಕ್ಕೋಸ್ಕರ ತಮ್ಮ ಡೇರೆಗಳನ್ನು ಬಿಚ್ಚಿಕೊಂಡು ಹೊರಟರು. ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಅವರ ಮುಂದೆ ಇದ್ದರು. ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿಗೆ ಬಂದು, ನೀರಿನಲ್ಲಿ ತಮ್ಮ ಕಾಲುಗಳನ್ನು ಇಡುತ್ತಲೇ ಸುಗ್ಗೀ ಕಾಲದಲ್ಲೆಲ್ಲಾ ದಡಮೀರಿ ಹರಿಯುತ್ತಿದ್ದ ಯೊರ್ದನ್ ನದಿಯ ನೀರು ನಿಂತುಹೋಯಿತು. ಮೇಲಿನಿಂದ ಹರಿದು ಬರುತ್ತಿದ್ದ ನೀರು ಬಹುದೂರದಲ್ಲಿದ್ದ ಚಾರೆತಾನಿನ ಹತ್ತಿರವಿರುವ ಆದಾಮ್ ಊರಿನ ತನಕ ರಾಶಿಯಾಗಿ ನಿಂತಿತು. ಕೆಳಗಿನ ನೀರು ಅರಾಬಾ ತಗ್ಗಿನಲ್ಲಿರುವ ಲವಣಸಮುದ್ರಕ್ಕೆ ಹರಿದು ಹೋಯಿತು ಜನರು ಯೆರಿಕೋವಿನ ಎದುರಿನಲ್ಲಿ ಹೊಳೆದಾಟಿದರು. ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿನ ಮಧ್ಯದಲ್ಲಿ ಒಣನೆಲದ ಮೇಲೆ ನಿಂತಿದ್ದರು. ಅಷ್ಟರಲ್ಲಿ ಇಸ್ರಾಯೇಲ್ಯರೆಲ್ಲರೂ ಒಣನೆಲದ ಮೇಲೆ ನಡೆದು ಹೋದರು. ಈ ಪ್ರಕಾರ ಜನರೆಲ್ಲರೂ ಯೊರ್ದನಿನ ಆಚೆಗೆ ತಲುಪಿದರು.

ಆರು ದಿನ ಈ ಪ್ರಕಾರ ಮಾಡಿದರು. ಏಳನೆಯ ದಿನದಲ್ಲಿ ಅವರು ಸೂರ್ಯೋದಯವಾಗುತ್ತಲೇ ಎದ್ದು ಅದೇ ಕ್ರಮದಲ್ಲಿ ಪಟ್ಟಣವನ್ನು ಏಳು ಸಾರಿ ಸುತ್ತಿದರು. ಈ ದಿನದಲ್ಲಿ ಮಾತ್ರ ಅದನ್ನು ಏಳು ಸಾರಿ ಸುತ್ತಿದರು. ಏಳನೆಯ ಸಾರಿ ಸುತ್ತುವಾಗ ಯಾಜಕರು ಕೊಂಬುಗಳನ್ನು ಊದಲು ಯೆಹೋಶುವನು ಜನರಿಗೆ, “ಆರ್ಭಟಿಸಿರಿ, ಯೆಹೋವನು ನಿಮಗೆ ಈ ಪಟ್ಟಣವನ್ನು ಕೊಟ್ಟಿದ್ದಾನೆ. ಇದೂ ಇದರಲ್ಲಿರುವುದೆಲ್ಲವೂ ಯೆಹೋವನಿಗೆ ಅರ್ಪಿತವಾದವುಗಳೇ ಎಂದು ತಿಳಿಯಿರಿ. ವೇಶ್ಯೆಯಾದ ರಾಹಾಬಳೂ ಅವಳ ಸಂಗಡ ಮನೆಯಲ್ಲಿರುವವರೆಲ್ಲರೂ ಉಳಿಯಲಿ. ಏಕೆಂದರೆ ನಾವು ಕಳುಹಿಸಿದ ಗೂಢಚಾರರನ್ನು ಅವಳು ಅಡಗಿಸಿಟ್ಟಿದ್ದಳಲ್ಲಾ. ನೀವಾದರೋ ಯೆಹೋವನಿಗೆ ಅರ್ಪಿಸುವ ವಸ್ತುಗಳ ವಿಷಯದಲ್ಲಿ ಜಾಗರೂಕತೆಯಿಂದಿರಬೇಕು. ನೀವು ಅವುಗಳಲ್ಲಿ ಯಾವುದನ್ನಾದರೂ ತೆಗೆದುಕೊಂಡರೆ, ಇಸ್ರಾಯೇಲ್ಯರ ಪಾಳೆಯವು ಶಾಪಕ್ಕೆ ಗುರಿಯಾಗಿ ನಾಶವಾದೀತು. ಎಲ್ಲಾ ಬೆಳ್ಳಿ ಬಂಗಾರವೂ, ತಾಮ್ರ ಕಬ್ಬಿಣಗಳ ಪಾತ್ರೆಗಳೂ ಯೆಹೋವನಿಗೆ ಮೀಸಲಾಗಿದ್ದು ಆತನ ಭಂಡಾರಕ್ಕೆ ಸೇರತಕ್ಕವುಗಳು” ಎಂದನು. ಕೂಡಲೆ ಜನರ ಆರ್ಭಟವೂ ಕೊಂಬುಗಳ ಧ್ವನಿಯೂ ಉಂಟಾದವು. ಜನರು ಕೊಂಬಿನ ಧ್ವನಿಯನ್ನು ಕೇಳಿ ಗಟ್ಟಿಯಾಗಿ ಆರ್ಭಟಿಸಲು ಪಟ್ಟಣದ ಗೋಡೆಯು ತಾನೇ ಬಿದ್ದುಹೋಯಿತು. ಪ್ರತಿಯೊಬ್ಬನೂ ನೆಟ್ಟಗೆ ಪಟ್ಟಣದಲ್ಲಿ ನುಗ್ಗಿ ಹೋದನು. ಅದು ಅವರಿಗೆ ವಶವಾಯಿತು.

ಯೆಹೋವನು ಅಮೋರಿಯರನ್ನು ಇಸ್ರಾಯೇಲ್ಯರಿಗೆ ಒಪ್ಪಿಸಿದ ದಿನದಲ್ಲಿ ಯೆಹೋಶುವನು ಯೆಹೋವನಲ್ಲಿ ಒಂದು ವಿಜ್ಞಾಪನೆ ಮಾಡಿಕೊಂಡನು. “ಸೂರ್ಯನೇ, ನೀನು ಗಿಬ್ಯೋನಿನಲ್ಲೇ ನಿಲ್ಲು; ಚಂದ್ರನೇ, ನೀನು ಅಯ್ಯಾಲೋನ್ ಕಣಿವೆಯಲ್ಲೇ ನಿಲ್ಲು” ಎಂದು ಇಸ್ರಾಯೇಲ್ಯರ ಸಮಕ್ಷಮದಲ್ಲಿ ಆಜ್ಞಾಪಿಸಿದನು. ಇಸ್ರಾಯೇಲ್ಯರು ತಮ್ಮ ಶತ್ರುಗಳಿಗೆ ಮುಯ್ಯಿತೀರಿಸುವ ತನಕ ಸೂರ್ಯಚಂದ್ರರು ಹಾಗೆಯೇ ನಿಂತರು. ಈ ಮಾತು ಯಾಷಾರ್‌ ಗ್ರಂಥದಲ್ಲಿ ಬರೆದಿದೆಯಲ್ಲವೆ? ಹೀಗೆ ಸೂರ್ಯನು ಮುಳುಗಲು ಆತುರ ಪಡದೆ ಹೆಚ್ಚು ಕಡಿಮೆ ಒಂದು ದಿನ ಪೂರ್ತಿ ಆಕಾಶದ ಮಧ್ಯದಲ್ಲಿಯೇ ನಿಂತನು.

ಸಂಸೋನನು ತನ್ನ ತಂದೆತಾಯಿಗಳ ಸಹಿತ ತಿಮ್ನಾ ಊರಿಗೆ ಹೊರಟು ಅಲ್ಲಿನ ದ್ರಾಕ್ಷಿ ತೋಟಗಳ ಬಳಿಗೆ ಬಂದಾಗ, ಒಂದು ಪ್ರಾಯದ ಸಿಂಹವು ಗರ್ಜಿಸುತ್ತಾ ಅವನೆದುರಿಗೆ ಬಂದಿತು. ಅವನ ಕೈಯಲ್ಲಿ ಏನೂ ಇಲ್ಲದಿದ್ದರೂ, ಯೆಹೋವನ ಆತ್ಮವು ಅವನ ಮೇಲೆ ಫಕ್ಕನೆ ಬಂದದ್ದರಿಂದ ಆ ಸಿಂಹವನ್ನು ಹೋತ ಮರಿಯನ್ನೋ ಎಂಬಂತೆ ಸೀಳಿಬಿಟ್ಟನು. ಈ ಸಂಗತಿಯನ್ನು ತಂದೆತಾಯಿಗಳಿಗೆ ತಿಳಿಸಲಿಲ್ಲ.

ಮನೆಯ ಆಧಾರಸ್ತಂಭಗಳಲ್ಲಿ ಒಂದನ್ನು ಬಲಗೈಯಿಂದಲೂ, ಇನ್ನೊಂದನ್ನು ಎಡಗೈಯಿಂದಲೂ ಹಿಡಿದು, ಅವುಗಳನ್ನು ಒತ್ತಿ, “ನಾನೂ ಫಿಲಿಷ್ಟಿಯರ ಸಂಗಡ ಸಾಯುವೆನು” ಎಂದು ಹೇಳಿ ಬಲವಾಗಿ ಬಾಗಿಕೊಂಡನು. ಆಗ ಅ ಕಟ್ಟಡವು ಅಧಿಪತಿಗಳ ಮೇಲೆಯೂ ಅಲ್ಲಿ ಬಂದಿದ್ದ ಎಲ್ಲಾ ಜನರ ಮೇಲೆಯೂ ಬಿದ್ದಿತು. ಅವನು ಜೀವದಿಂದಿದ್ದಾಗ ಕೊಂದುಹಾಕಿದವರಿಗಿಂತ ಸಾಯುವಾಗ ಕೊಂದವರ ಸಂಖ್ಯೆಯೇ ಹೆಚ್ಚಾಗಿತ್ತು.

ದಾಗೋನನ ಗುಡಿಗೆ ತೆಗೆದುಕೊಂಡು ಹೋಗಿ ಅಲ್ಲಿ ದಾಗೋನನ ಮಗ್ಗುಲಲ್ಲೇ ಇಟ್ಟರು. ಅಷ್ಡೋದಿನವರು ಮರುದಿನ ಬೆಳಿಗ್ಗೆ ಎದ್ದು ನೋಡಲಾಗಿ ದಾಗೋನ್ ವಿಗ್ರಹವು ಯೆಹೋವನ ಮಂಜೂಷದ ಮುಂದೆ ಬೋರಲಬಿದ್ದಿರುವುದನ್ನು ಕಂಡು ಅದನ್ನು ಎತ್ತಿ ತಿರುಗಿ ಅದರ ಸ್ಥಳದಲ್ಲಿಟ್ಟರು. ಮಾರನೆಯ ದಿನ ಬೆಳಿಗ್ಗೆ ನೋಡುವಾಗ ದಾಗೋನನ ತಲೆಯೂ, ಕೈಗಳೂ ಕಡಿಯಲ್ಪಟ್ಟು ಹೊಸ್ತಿಲಿನ ಮೇಲೆ ಬಿದ್ದಿದ್ದವು; ಮುಂಡ ಮಾತ್ರ ಯೆಹೋವನ ಮಂಜೂಷದ ಮುಂದೆ ಬಿದ್ದಿತ್ತು;

ಯೆಹೋವನ ಹಸ್ತವು ಅಷ್ಡೋದಿನವರಿಗೆ ಬಾಧಕವಾಗಿತ್ತು; ಆತನು ಆ ನಗರದಲ್ಲಿಯೂ, ಅದರ ಗ್ರಾಮಗಳಲ್ಲಿಯೂ ಗಡ್ಡೆ ರೋಗವನ್ನು ಬರಮಾಡಿ ಅವರನ್ನು ನಾಶಮಾಡಿದನು. ಅಷ್ಡೋದಿನ ಜನರು ಅದನ್ನು ನೋಡಿ, “ಇಸ್ರಾಯೇಲಿನ ದೇವರ ಮಂಜೂಷವು ನಮ್ಮ ಬಳಿಯಲ್ಲಿ ಇರಬಾರದು; ಏಕೆಂದರೆ ಆತನ ಹಸ್ತವು ನಮಗೂ, ನಮ್ಮ ದೇವರಾದ ದಾಗೋನನಿಗೂ ಬಾಧಕವಾಗಿದೆ” ಎಂದು ಹೇಳಿ ಫಿಲಿಷ್ಟಿಯ ಪ್ರಭುಗಳೆಲ್ಲರನ್ನೂ ಕೂಡಿಸಿ, “ಇಸ್ರಾಯೇಲಿನ ದೇವರ ಮಂಜೂಷವನ್ನು ಏನು ಮಾಡೋಣ?” ಎಂದು ಕೇಳಲು ಅವರು, “ಅದನ್ನು ಗತ್ ಊರಿಗೆ ಕಳುಹಿಸಿ ಕೊಡಬೇಕೆಂದು ನಿರ್ಣಯಿಸಿದರು.” ಅವರು ಹಾಗೆಯೇ ಇಸ್ರಾಯೇಲಿನ ದೇವರ ಮಂಜೂಷವನ್ನು ಅಲ್ಲಿಗೆ ಕಳುಹಿಸಿದರು. ಮಂಜೂಷವು ಅಲ್ಲಿ ಹೋದ ಮೇಲೆ ಯೆಹೋವನ ಹಸ್ತವು ಆ ಊರಿನವರಿಗೂ ಬಾಧಕವಾದುದರಿಂದ ಅಲ್ಲಿ ದೊಡ್ಡ ಗದ್ದಲವಾಯಿತು. ಯೆಹೋವನು ಊರಿನ ಚಿಕ್ಕವರಲ್ಲಿಯೂ, ದೊಡ್ಡವರಲ್ಲಿಯೂ ಗಡ್ಡೆಗಳನ್ನು ಬರಮಾಡಿದನು. ಆದ್ದರಿಂದ ಅವರು ದೇವರ ಮಂಜೂಷವನ್ನು ಎಕ್ರೋನಿಗೆ ಕಳುಹಿಸಿದರು. ಅದು ಅಲ್ಲಿಗೆ ಬಂದಾಗ ಆ ಊರಿನವರು, “ನೋಡಿರಿ, ನಮ್ಮನ್ನೂ, ನಮಗೆ ಸೇರಿದವರನ್ನೂ ಕೊಲ್ಲುವುದಕ್ಕೋಸ್ಕರ ಇಸ್ರಾಯೇಲಿನ ದೇವರ ಮಂಜೂಷವನ್ನು ಇಲ್ಲಿಗೆ ಕಳುಹಿಸಿದ್ದಾರೆ” ಎಂದು ಕೂಗಿಕೊಂಡರು. ದೇವರ ಹಸ್ತವು ಅವರಿಗೂ ಬಾಧಕವಾಗಿದ್ದುದರಿಂದ ಅವರಿಗೆ ಮರಣಭಯವುಂಟಾಯಿತು. ಅವರು ಫಿಲಿಷ್ಟಿಯ ಪ್ರಭುಗಳೆಲ್ಲರನ್ನೂ ಕೂಡಿಸಿ ಅವರಿಗೆ, “ಇಸ್ರಾಯೇಲಿನ ದೇವರ ಮಂಜೂಷವನ್ನು ಹಾಗೆಯೇ ಅದರ ಸ್ಥಳಕ್ಕೆ ಕಳುಹಿಸಿಬಿಡಿರಿ” ಅಂದರು. ಸಾಯದೆ ಉಳಿದ ಜನರಿಗೂ ಗಡ್ಡೆರೋಗ ಬಂದಿತ್ತು. ಪಟ್ಟಣದ ಗೋಳಾಟವು ಆಕಾಶವನ್ನು ಮುಟ್ಟಿತು.

ಬೇತ್ ಷೆಮೆಷಿನವರು ಯೆಹೋವನ ಮಂಜೂಷದಲ್ಲಿ ಇಣಕಿ ನೋಡಿದ್ದರಿಂದ ಯೆಹೋವನು ಅವರಲ್ಲಿ ಎಪ್ಪತ್ತು ಮಂದಿಯನ್ನು ಸಾಯಿಸಿದನು. ಯೆಹೋವನು ತಮ್ಮಲ್ಲಿ ಮಹಾನಾಶನವನ್ನು ಉಂಟುಮಾಡಿದ್ದರಿಂದ ಬೇತ್ ಷೆಮೆಷಿನವರು ಗೋಳಾಡಿದರು. ಪರಿಶುದ್ಧ ದೇವರಾದ ಯೆಹೋವನ ಮುಂದೆ ಯಾರು ನಿಂತಾರು? ನಮ್ಮನ್ನು ಬಿಟ್ಟು ಈತನು ಹೋಗತಕ್ಕ ಸ್ಥಳ ಯಾವುದು ಎಂದು ಮಾತನಾಡಿಕೊಂಡು

ಆಗ ದಾವೀದನು ಅವನಿಗೆ, “ನಿನ್ನ ಸೇವಕನಾದ ನಾನು ನನ್ನ ತಂದೆಯ ಕುರಿಗಳನ್ನು ಕಾಯುತ್ತಿರುವಾಗ ಸಿಂಹವಾಗಲಿ, ಕರಡಿಯಾಗಲಿ ಹಿಂಡಿನಲ್ಲಿನ ಕುರಿಮರಿಯನ್ನು ಹಿಡಿದುಕೊಂಡು ಹೋಗಲು ಬಂದರೆ ನಾನು ಒಡನೇ ಬೆನ್ನಟ್ಟಿ, ಅದನ್ನು ಹೊಡೆದು, ಕುರಿಮರಿಯನ್ನು ಕಿತ್ತುಕೊಳ್ಳುತ್ತಿದ್ದೆನು. ಅದು ಹಿಂದಿರುಗಿ ನನ್ನ ಮೇಲೆ ಬೀಳಲು ಬಂದಾಗ ಅದರ ಗದ್ದಹಿಡಿದು ಬಡಿದು ಕೊಂದುಹಾಕುತ್ತಿದ್ದೆನು. ನಿನ್ನ ಸೇವಕನಿಂದ ಕೊಲ್ಲಲ್ಪಟ್ಟ ಸಿಂಹಕ್ಕೂ, ಕರಡಿಗೂ ಆದ ಗತಿಯೇ ಜೀವಸ್ವರೂಪನಾದ ದೇವರ ಸೈನ್ಯವನ್ನು ನಿಂದಿಸುವಂಥ ಈ ಸುನ್ನತಿಯಿಲ್ಲದ ಫಿಲಿಷ್ಟಿಯನಿಗೂ ಆಗಬೇಕು. ನನ್ನನ್ನು ಅಂಥ ಸಿಂಹದ ಮತ್ತು ಕರಡಿಯ ಉಗುರುಗಳಿಗೆ ತಪ್ಪಿಸಿದ ಯೆಹೋವನು ಈ ಫಿಲಿಷ್ಟಿಯನ ಕೈಯಿಂದಲೂ ತಪ್ಪಿಸುವನು” ಎಂದನು. ಆಗ ಸೌಲನು ದಾವೀದನಿಗೆ “ಹೋಗು ಯೆಹೋವನು ನಿನ್ನ ಸಂಗಡ ಇರಲಿ” ಎಂದು ಹೇಳಿ,

ಆಗ ದಾವೀದನು ಅವನಿಗೆ, “ನೀನು ಈಟಿ, ಕತ್ತಿ, ಬರ್ಜಿಗಳೊಡನೆ ನನ್ನ ಬಳಿಗೆ ಬರುತ್ತೀ. ನಾನಾದರೋ ನೀನು ಹೀಯಾಳಿಸಿದಂಥ ಸೇನಾಧೀಶ್ವರನೂ, ಇಸ್ರಾಯೇಲ್ಯರ ಯುದ್ಧಭಟರ ದೇವರೂ ಆಗಿರುವ ಯೆಹೋವನ ನಾಮದೊಡನೆ ನಿನ್ನ ಬಳಿಗೆ ಬಂದಿದ್ದೇನೆ. ಆತನು ಈ ಹೊತ್ತು ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಡುವನು. ನಾನು ನಿನ್ನನ್ನು ಕೊಂದು ನಿನ್ನ ತಲೆಯನ್ನು ಕಡಿದು ಹಾಕಿ ಫಿಲಿಷ್ಟಿಯ ಸೈನ್ಯದ ಶವಗಳನ್ನು ಮೃಗ ಪಕ್ಷಿಗಳಿಗೆ ಹಂಚಿಕೊಡುವೆನು. ಇದರಿಂದ ಇಸ್ರಾಯೇಲರೊಳಗೆ ದೇವರಿದ್ದಾನೆಂಬುದು ಭೂಲೋಕದವರಿಗೆಲ್ಲಾ ತಿಳಿದುಬರುವುದು. ಯೆಹೋವನು ಈಟಿಕತ್ತಿಗಳಿಲ್ಲದೇ ರಕ್ಷಿಸಬಲ್ಲನೆಂಬುದು ಇಲ್ಲಿ ಕೂಡಿರುವವರಿಗೆಲ್ಲಾ ತಿಳಿದುಬರುವುದು. ಯಾಕೆಂದರೆ ಯುದ್ಧಫಲವು ಯೆಹೋವನ ಕೈಯಲ್ಲಿದೆ. ಆತನು ನಿಮ್ಮನ್ನು ನಮ್ಮ ಕೈಗೆ ಒಪ್ಪಿಸಿಕೊಡುವನು” ಅಂದನು. ಕೂಡಲೇ ಆ ಫಿಲಿಷ್ಟಿಯನು ಹೊರಟು ದಾವೀದನೊಡನೆ ಯುದ್ಧಮಾಡುವುದಕ್ಕೆ ಸಮೀಪಿಸಿದಾಗ ದಾವೀದನು ಫಿಲಿಷ್ಟಿಯರ ಸೈನ್ಯದ ಕಡೆಗೆ ಓಡಿಹೋಗಿ ಆ ಫಿಲಿಷ್ಟಿಯನನ್ನು ಸಂಧಿಸಿ, ಚೀಲದಲ್ಲಿ ಕೈ ಹಾಕಿ, ಒಂದು ಕಲ್ಲನ್ನು ತೆಗೆದು ಅವನ ಹಣೆಗೆ ಗುರಿಯಿಟ್ಟು ಕವಣೆಯನ್ನು ಬೀಸಿ ಹೊಡೆಯಲು ಕಲ್ಲು ಅವನ ಹಣೆಯೊಳಗೆ ಹೊಕ್ಕಿತು. ಅವನು ಬೋರಲುಬಿದ್ದನು ಕೂಡಲೇ ಅವನು ಓಡಿಹೋಗಿ ಆ ಫಿಲಿಷ್ಟಿಯನ ಮೇಲೆ ನಿಂತು ಅವನ ಕತ್ತಿಯನ್ನು ತೆಗೆದುಕೊಂಡು, ಅದರಿಂದಲೇ ಅವನ ತಲೆಯನ್ನು ಕತ್ತರಿಸಿ, ಅವನನ್ನು ಸಾಯಿಸಿದನು. ಈ ಪ್ರಕಾರ ದಾವೀದನು ಕತ್ತಿಯಿಂದಲ್ಲ ಬರೀ ಒಂದು ಕವಣೆಯ ಕಲ್ಲಿನಿಂದ ಫಿಲಿಷ್ಟಿಯನನ್ನು ಸೋಲಿಸಿ, ಕೊಂದು ಹಾಕಿದನು ಫಿಲಿಷ್ಟಿಯರು ತಮ್ಮ ರಣವೀರನು ಸತ್ತುಹೋದದ್ದನ್ನು ಕಂಡು ಓಡಿಹೋದರು.

ಅವರು ನಾಕೋನನ ಕಣಕ್ಕೆ ಬಂದಾಗ ಎತ್ತುಗಳು ಎಡವಿದ್ದರಿಂದ ಉಜ್ಜನು ಕೈಚಾಚಿ ದೇವರ ಮಂಜೂಷವನ್ನು ಹಿಡಿದನು. ಆಗ ಯೆಹೋವನು ಉಜ್ಜನ ಮೇಲೆ ಕೋಪಗೊಂಡು, ಈ ತಪ್ಪಿಗೆ ಅವನನ್ನು ಸಂಹರಿಸಿದನು. ಅವನು ಅಲ್ಲೇ ದೇವರ ಮಂಜೂಷದ ಬಳಿಯಲ್ಲಿ ಸತ್ತನು.

ಗಿಲ್ಯಾದಿನ ತಿಷ್ಬೀಯ ಊರಿನವನಾದ ಎಲೀಯ ಎಂಬುವವನು ಅಹಾಬನಿಗೆ, “ನಾನು ಸನ್ನಿಧಿಸೇವೆ ಮಾಡುತ್ತಿರುವ ಇಸ್ರಾಯೇಲ್ ದೇವರಾದ ಯೆಹೋವನಾಣೆ,

ಆಕೆಯು ಅವನಿಗೆ, “ನಿನ್ನ ದೇವರಾದ ಯೆಹೋವನಾಣೆ, ನನ್ನ ಹತ್ತಿರ ರೊಟ್ಟಿ ಇರುವುದಿಲ್ಲ, ಮಡಿಕೆಯಲ್ಲಿ ಒಂದು ಹಿಡಿ ಹಿಟ್ಟು, ಮೊಗೆಯಲ್ಲಿ ಸ್ವಲ್ಪ ಎಣ್ಣೆ ಇವುಗಳ ಹೊರತಾಗಿ ಬೇರೇನೂ ಇರುವುದಿಲ್ಲ. ಈಗ ಎರಡು ಕಟ್ಟಿಗೆಗಳನ್ನು ಆರಿಸಿಕೊಂಡು ನನಗೋಸ್ಕರವೂ ನನ್ನ ಮಗನಿಗೋಸ್ಕರವೂ ರೊಟ್ಟಿ ಮಾಡುತ್ತೇನೆ, ಬೇರೆ ಹಿಟ್ಟು, ಎಣ್ಣೆ ಇಲ್ಲ ಇದನ್ನು ತಿಂದ ಮೇಲೆ ಆಹಾರವಿಲ್ಲದ ಕಾರಣ ನಾವು ಸಾಯಬೇಕೇ ಹೊರತು ಬೇರೆ ಗತಿಯಿಲ್ಲ” ಎಂದು ಉತ್ತರಕೊಟ್ಟಳು. ಆಗ ಎಲೀಯನು ಆಕೆಗೆ, “ಹೆದರಬೇಡ, ನೀನು ಹೇಳಿದಂತೆಯೇ ಮಾಡು. ಆದರೆ ಮೊದಲು ಅದರಿಂದ ನನಗೋಸ್ಕರ ಒಂದು ಚಿಕ್ಕ ರೊಟ್ಟಿಯನ್ನು ಮಾಡಿಕೊಂಡು ಬಾ. ತರುವಾಯ ನಿನಗೂ ನಿನ್ನ ಮಗನಿಗೂ ಮಾಡಿಕೋ. ಇಸ್ರಾಯೇಲ್ ದೇವರಾದ ಯೆಹೋವನು ನಿನಗೆ, ‘ನಾನು ದೇಶಕ್ಕೆ ಮಳೆಯನ್ನು ಕಳುಹಿಸುವವರೆಗೆ ನಿನ್ನ ಮಡಿಕೆಯಲ್ಲಿರುವ ಹಿಟ್ಟು ತೀರುವುದಿಲ್ಲ ಮತ್ತು ಮೊಗೆಯಲ್ಲಿರುವ ಎಣ್ಣೆಯು ಮುಗಿದುಹೋಗುವುದಿಲ್ಲ’” ಎಂದು ಹೇಳುತ್ತಾನೆ. ಆಕೆಯು ಹೋಗಿ ಅವನು ಹೇಳಿದಂತೆಯೇ ಮಾಡಿದಳು. ಆಕೆಯೂ, ಆಕೆಯ ಮನೆಯವರೂ ಮತ್ತು ಎಲೀಯನು ಅದನ್ನು ಅನೇಕ ದಿನಗಳವರೆಗೆ ಊಟಮಾಡಿದರು. ಯೆಹೋವನು ಎಲೀಯನ ಮುಖಾಂತರವಾಗಿ ಹೇಳಿದಂತೆ ಮಡಿಕೆಯಲ್ಲಿದ್ದ ಹಿಟ್ಟು ತೀರಲಿಲ್ಲ ಮತ್ತು ಮೊಗೆಯಲ್ಲಿದ್ದ ಎಣ್ಣೆಯು ಮುಗಿದುಹೋಗಲಿಲ್ಲ.

ಕೆಲವು ದಿನಗಳಾದನಂತರ ಆ ಸ್ತ್ರೀಯ ಮಗನು ಅಸ್ವಸ್ಥನಾದನು. ಹುಡುಗನಿಗೆ ರೋಗವು ಹೆಚ್ಚಾಗಿದ್ದುದರಿಂದ ಉಸಿರಾಡುವುದು ನಿಂತುಹೋಯಿತು. ಆಗ ಆ ಸ್ತ್ರೀಯು ಎಲೀಯನಿಗೆ, “ದೇವರ ಮನುಷ್ಯನೇ, ನನ್ನ ಗೊಡವೆ ನಿನಗೇಕೆ? ನೀನು ನನ್ನ ಪಾಪವನ್ನು ದೇವರ ನೆನಪಿಗೆ ತಂದು ನನ್ನ ಮಗನನ್ನು ಸಾಯಿಸುವುದಕ್ಕೆ ಬಂದಿರುವೆಯೋ?” ಎಂದಳು. ಅವನು ಆಕೆಗೆ, “ನಿನ್ನ ಮಗನನ್ನು ನನಗೆ ಕೊಡು” ಎಂದು ಹೇಳಿ ಅವನನ್ನು ಆಕೆಯ ಮಡಿಲಿನಿಂದ ತೆಗೆದುಕೊಂಡು, ತಾನು ವಾಸವಾಗಿದ್ದ ಮೇಲಿನ ಕೋಣೆಗೆ ಹೋಗಿ ತನ್ನ ಮಂಚದ ಮೇಲೆ ಮಲಗಿಸಿದನು. ಅನಂತರ ಅವನು ಯೆಹೋವನಿಗೆ, “ನನ್ನ ದೇವರಾದ ಯೆಹೋವನೇ, ನನಗೆ ಸ್ಥಳಕೊಟ್ಟ ಈ ವಿಧವೆಯ ಮಗನನ್ನು ನೀನು ಸಾಯಿಸಿ, ಆಕೆಗೆ ಕೇಡನ್ನುಂಟುಮಾಡಿದ್ದೇನು?” ಎಂದು ಕೇಳಿದನು. ಆನಂತರ ಹುಡುಗನ ಮೇಲೆ ಮೂರು ಸಾರಿ ಬೋರಲು ಬಿದ್ದು, “ನನ್ನ ದೇವರಾದ ಯೆಹೋವನೇ, ಈ ಹುಡುಗನ ಪ್ರಾಣವು ತಿರುಗಿ ಬರುವಂತೆ ಮಾಡು” ಎಂಬುದಾಗಿ ಆತನಿಗೆ ಮೊರೆಯಿಟ್ಟನು. ಯೆಹೋವನು ಅವನ ಪ್ರಾರ್ಥನೆಯನ್ನು ಕೇಳಿದ್ದರಿಂದ ಹುಡುಗನ ಪ್ರಾಣವು ತಿರುಗಿ ಬಂದು ಅವನು ಜೀವಿಸಿದನು. ಎಲೀಯನು ಆ ಹುಡುಗನನ್ನು ಅಲ್ಲಿಂದ ಕೆಳಗೆ ತೆಗೆದುಕೊಂಡು ಹೋಗಿ, ಅವನ ತಾಯಿಗೆ ಒಪ್ಪಿಸಿ, “ಇಗೋ, ನೋಡು ನಿನ್ನ ಮಗನು ಜೀವಿಸುತ್ತಿದ್ದಾನೆ” ಅಂದನು. ಆಗ ಆಕೆಯು ಎಲೀಯನಿಗೆ, “ನೀನು ದೇವರ ಮನುಷ್ಯನೆಂದೂ, ನಿನ್ನ ಬಾಯಿಂದ ಬಂದ ಯೆಹೋವನ ಮಾತು ಸತ್ಯವೆಂದೂ ಇದರಿಂದ ನನಗೆ ಗೊತ್ತಾಯಿತು” ಎಂದು ಹೇಳಿದಳು.

ಯೆಹೋವನ ಹೆಸರಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿಸಿ, ಅದರ ಸುತ್ತಲೂ ಇಪ್ಪತ್ತು ಸೇರು ಬೀಜಬಿತ್ತುವಷ್ಟು ನೆಲವನ್ನು ಅಗೆಸಿ ಕಾಲುವೆ ಮಾಡಿಸಿದನು. ಇದಲ್ಲದೆ ಕಟ್ಟಿಗೆಯನ್ನು ಯಜ್ಞವೇದಿಯ ಮೇಲೆ ಕ್ರಮಪಡಿಸಿ, ಹೋರಿಯನ್ನು ವಧಿಸಿ ತುಂಡು ಮಾಡಿ ಅದರ ಮೇಲಿಟ್ಟನು. ಅನಂತರ ಜನರಿಗೆ, “ನಾಲ್ಕು ಕೊಡ ನೀರು ತಂದು ಯಜ್ಞಮಾಂಸದ ಮೇಲೆಯೂ ಕಟ್ಟಿಗೆಯ ಮೇಲೆಯೂ ಸುರಿಯಿರಿ” ಎಂದು ಆಜ್ಞಾಪಿಸಿದನು. ಅವರು ತೆಗೆದುಕೊಂಡು ಬರಲು, “ಇನ್ನೊಂದು ಸಾರಿ ತನ್ನಿರಿ” ಎಂದು ಹೇಳಿದನು. ತಿರುಗಿ ತಂದರು. ಅವನು ಮೂರನೆಯ ಸಾರಿ ಅದೇ ಪ್ರಕಾರವಾಗಿ ಆಜ್ಞಾಪಿಸಿಲು ಅವರು ಮತ್ತೊಮ್ಮೆ ತಂದು ಸುರಿದರು ನೀರು ಯಜ್ಞವೇದಿಯ ಸುತ್ತಲೂ ತುಂಬಿ ಹರಿಯಿತು. ಇದಲ್ಲದೆ ಅವನು ಕಾಲುವೆಯನ್ನು ನೀರಿನಿಂದ ತುಂಬಿಸಿದನು. ಸಂಧ್ಯಾನೈವೇದ್ಯದ ಹೊತ್ತಿಗೆ ಪ್ರವಾದಿಯಾದ ಎಲೀಯನು ಯಜ್ಞವೇದಿಯ ಹತ್ತಿರ ಬಂದು, “ಅಬ್ರಹಾಮ, ಇಸಾಕ ಇಸ್ರಾಯೇಲರ ದೇವರೇ, ಯೆಹೋವನೇ, ನೀನೊಬ್ಬನೇ ಇಸ್ರಾಯೇಲರ ದೇವರಾಗಿರುತ್ತೀ ಎಂಬುದನ್ನೂ, ನಾನು ನಿನ್ನ ಸೇವಕನಾಗಿರುತ್ತೇನೆ ಎಂಬುದನ್ನೂ ಮತ್ತು ಇದನ್ನೆಲ್ಲಾ ನಿನ್ನ ಅಪ್ಪಣೆಯ ಮೇರೆಗೆ ಮಾಡಿದೆನೆಂಬುದನ್ನೂ ಈ ಹೊತ್ತು ತೋರಿಸಿಕೊಡು. ಕಿವಿಗೊಡು, ಯೆಹೋವನೇ ಕಿವಿಗೊಡು, ಯೆಹೋವನಾದ ನೀನೊಬ್ಬನೇ ದೇವರೂ! ಈ ಜನರ ಮನಸ್ಸನ್ನು ನಿನ್ನ ಕಡೆಗೆ ತಿರುಗಿಸಿಕೊಳ್ಳುವವನೂ ನೀನೇ ಆಗಿರುತ್ತೀ ಎಂಬುದನ್ನು ಇವರಿಗೆ ತಿಳಿಯಪಡಿಸು” ಎಂದು ಪ್ರಾರ್ಥಿಸಿದನು. ಕೂಡಲೇ ಯೆಹೋವನ ಕಡೆಯಿಂದ ಬೆಂಕಿಬಿದ್ದು ಯಜ್ಞಮಾಂಸವನ್ನೂ, ಕಟ್ಟಿಗೆ, ಕಲ್ಲು ಮಣ್ಣುಗಳನ್ನೂ ದಹಿಸಿಬಿಟ್ಟು ಕಾಲುವೆಯಲ್ಲಿದ್ದ ನೀರನ್ನೆಲ್ಲಾ ಹೀರಿಬಿಟ್ಟಿತು. ಜನರೆಲ್ಲರೂ ಅದನ್ನು ಕಂಡು ಬೋರ್ಲಬಿದ್ದು, “ಯೆಹೋವನೇ ದೇವರು! ಯೆಹೋವನೇ ದೇವರು!” ಎಂದು ಕೂಗಿದರು.

ಅನಂತರ ಎಲೀಯನು ತನ್ನ ಕಂಬಳಿಯನ್ನು ಮಡಚಿ ಅದರಿಂದ ನೀರನ್ನು ಹೊಡೆಯಲು ನೀರು ಎರಡು ಭಾಗವಾಯಿತು. ಇಬ್ಬರೂ ಒಣನೆಲದ ಮೇಲೆ ನಡೆದುಕೊಂಡು ಯೊರ್ದನನ್ನು ದಾಟಿದರು.

ಅವರು ಮಾತನಾಡುತ್ತಾ ಮುಂದೆ ಹೋಗುತ್ತಿರುವಾಗ, ಪಕ್ಕನೆ ಅಗ್ನಿಮಯವಾದ ರಥಗಳು ನಡುವೆ ಬಂದು ಅವರಿಬ್ಬರನ್ನು ಬೇರ್ಪಡಿಸಿದವು. ಎಲೀಯನು ಸುಂಟರಗಾಳಿಯ ಮುಖಾಂತರವಾಗಿ ಪರಲೋಕಕ್ಕೆ ಏರಿ ಹೋದನು. ಎಲೀಷನು ಅದನ್ನು ನೋಡುತ್ತಾ, “ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಾಯೇಲರಿಗೆ ರಥಾರಥಾಶ್ವಗಳಾಗಿದ್ದವನೇ” ಎಂದು ಕೂಗಿಕೊಂಡನು. ಎಲೀಯನು ತನಗೆ ಕಾಣಿಸದೆ ಹೋದ ಮೇಲೆ ತನ್ನ ಬಟ್ಟೆಗಳನ್ನು ಹರಿದು ಎರಡು ತುಂಡುಮಾಡಿದನು. ಅನಂತರ ಅವನು ಮೇಲಿನಿಂದ ಬಿದ್ದ ಎಲೀಯನ ಕಂಬಳಿಯನ್ನು ತೆಗೆದುಕೊಂಡು ಯೊರ್ದನ್ ನದಿ ತೀರಕ್ಕೆ ಬಂದು, “ಎಲೀಯನ ದೇವರಾದ ಯೆಹೋವನೆಲ್ಲಿ?” ಎಂದು ಅಂದುಕೊಂಡು, ಆ ಕಂಬಳಿಯಿಂದ ನೀರನ್ನು ಹೊಡೆಯಲು ಅದು ಎರಡು ಭಾಗವಾಯಿತು. ಎಲೀಷನು ಹೊಳೆಯನ್ನು ದಾಟಿಹೋದನು.

ಎಲೀಷನು ಅಲ್ಲಿಂದ ಬೇತೇಲಿಗೆ ಹೊರಟು ಅಲ್ಲಿನ ಗುಡ್ಡವನ್ನು ಹತ್ತುತ್ತಿರುವಾಗ, ಆ ಊರಿನ ಹುಡುಗರು ಹೊರಗೆ ಬಂದು, “ಬೋಳು ಮಂಡೆಯವನೇ ಏರಿ ಬಾ, ಬೋಳು ಮಂಡೆಯವನೇ ಏರಿ ಬಾ” ಎಂದು ಕೂಗಿ ಅವನನ್ನು ಪರಿಹಾಸ್ಯ ಮಾಡಿದರು. ಅವನು ಅವರ ಕಡೆಗೆ ತಿರುಗಿಕೊಂಡು ಯೆಹೋವನ ಹೆಸರಿನಲ್ಲಿ ಅವರನ್ನು ಶಪಿಸಿದನು. ಕೂಡಲೆ ಕಾಡಿನಿಂದ ಎರಡು ಹೆಣ್ಣು ಕರಡಿಗಳು ಬಂದು ಆ ಹುಡುಗರಲ್ಲಿ ನಲ್ವತ್ತೆರಡು ಮಂದಿಯನ್ನು ಹರಿದುಬಿಟ್ಟವು.

ಎಲೀಷನು ಆಕೆಗೆ, “ನಾನು ನಿನಗೇನು ಮಾಡಬೇಕೆನ್ನುತ್ತೀ? ನಿನ್ನ ಮನೆಯಲ್ಲಿ ಏನಿರುತ್ತದೆ? ಹೇಳು ಎಂದನು.” ಅದಕ್ಕೆ ಆಕೆಯು, “ನಿನ್ನ ದಾಸಿಯ ಮನೆಯಲ್ಲಿ ಒಂದು ಮೊಗೆ ಎಣ್ಣೆ ಹೊರತಾಗಿ ಏನೂ ಇಲ್ಲ” ಎಂದು ಉತ್ತರ ಕೊಟ್ಟಳು. ಆಗ ಎಲೀಷನು ಆಕೆಗೆ, “ಹೋಗಿ, ನಿನ್ನ ನೆರೆಯವರಿಂದ ಸಿಕ್ಕುವಷ್ಟು ಬರಿದಾದ ಪಾತ್ರೆಗಳನ್ನು ಕೇಳಿ ತೆಗೆದುಕೊಂಡು ಬಾ. ಅನಂತರ, ನೀನು, ನಿನ್ನ ಮಕ್ಕಳನ್ನು ಒಳಗೆ ಕರೆದುಕೊಂಡು ಬಾಗಿಲನ್ನು ಮುಚ್ಚಿ, ಎಣ್ಣೆಯನ್ನು ಪಾತ್ರೆಗಳಲ್ಲಿ ಹೊಯ್ದು ತುಂಬಿದವುಗಳನ್ನೆಲ್ಲಾ ಒಂದು ಕಡೆಯಿಡು” ಎಂದು ಹೇಳಿದನು. ಆಕೆಯು ಹೋಗಿ ಮಕ್ಕಳನ್ನು ಒಳಗೆ ಕರೆದುಕೊಂಡು, ಬಾಗಿಲನ್ನು ಮುಚ್ಚಿ, ಅವರು ಮುಂದಿಟ್ಟ ಪಾತ್ರೆಗಳಲ್ಲೆಲ್ಲಾ ಎಣ್ಣೆ ಹೊಯ್ದಳು. ಪಾತ್ರೆಗಳೆಲ್ಲಾ ತುಂಬಿದಾಗ ಆಕೆಯು ಮಗನಿಗೆ, “ಇನ್ನೊಂದು ಪಾತ್ರೆಯನ್ನು ತಂದಿಡು” ಎನ್ನಲು ಅವನು, “ಪಾತ್ರೆಗಳೆಲ್ಲ ಮುಗಿದು ಹೋದವು” ಎಂದು ಉತ್ತರಕೊಟ್ಟನು. ಕೂಡಲೇ ಎಣ್ಣೆ ಉಕ್ಕುವುದು ನಿಂತುಹೋಯಿತು. ತರುವಾಯ ಆಕೆಯು ದೇವರ ಮನುಷ್ಯನ ಹತ್ತಿರ ಬಂದು ನಡೆದದ್ದನ್ನೆಲ್ಲಾ ತಿಳಿಸಿದಳು. ಅವನು ಆಕೆಗೆ, “ಹೋಗಿ, ಎಣ್ಣೆಯನ್ನು ಮಾರಿ ಸಾಲತೀರಿಸು. ಉಳಿದ ಹಣದಿಂದ ನೀನೂ, ನಿನ್ನ ಮಕ್ಕಳು ಜೀವನಮಾಡಿರಿ” ಎಂದನು.

ಎಲೀಷನು ಆ ಮನೆಯನ್ನು ತಲುಪಿದಾಗ, ಸತ್ತ ಹುಡುಗನನ್ನು ತನ್ನ ಮಂಚದ ಮೇಲೆ ಮಲಗಿಸಿರುವುದನ್ನು ಕಂಡನು. ಎಲೀಷನು ಒಳಗೆ ಹೋಗಿ ಕೋಣೆಯ ಬಾಗಿಲನ್ನು ಮುಚ್ಚಿಕೊಂಡು ಯೆಹೋವನನ್ನು ಪ್ರಾರ್ಥಿಸಿದನು. ಅನಂತರ ಹುಡುಗನ ಮೇಲೆ ಬೋರಲುಬಿದ್ದು ತನ್ನ ಬಾಯಿ, ಕಣ್ಣು, ಕೈಗಳನ್ನು ಅವನ ಬಾಯಿ, ಕಣ್ಣು, ಕೈಗಳಿಗೆ ಮುಟ್ಟಿಸಿದ್ದರಿಂದ ಹುಡುಗನ ದೇಹವು ಬೆಚ್ಚಗಾಯಿತು. ಆಮೇಲೆ ಹುಡುಗನನ್ನು ಬಿಟ್ಟು ಎದ್ದು ಮನೆಯಲ್ಲಿ ತುಸುಹೊತ್ತು ಅತ್ತಿತ್ತ ಅಡ್ಡಾಡಿ ತಿರುಗಿ ಅವನ ಮೇಲೆ ಬೋರಲು ಬೀಳಲು ಹುಡುಗನು ಏಳು ಸಾರಿ ಸೀನಿ ಕಣ್ದೆರೆದನು.

ಜನರಿಗೆ ಅದನ್ನೇ ಊಟಕ್ಕೆ ಬಡಿಸಿದರು. ಅವರು ಅದನ್ನು ಬಾಯೊಳಗೆ ಹಾಕಿದ ಕೂಡಲೆ ತಿನ್ನಲಾರದೆ, “ದೇವರ ಮನುಷ್ಯನೇ ಪಾತ್ರೆಯಲ್ಲಿ ವಿಷ” ಎಂದು ಕೂಗಿದರು. ಅದನ್ನು ತಿನ್ನಲಾರದೆ ಹೋದರು. ಆಗ ಎಲೀಷನು, “ಹಿಟ್ಟನ್ನು ತಂದು ಕೊಡಿರಿ” ಎಂದು ಹೇಳಿದನು. ಅವರು ತಂದಾಗ, ಅದನ್ನು ಆ ಪಾತ್ರೆಯೊಳಗೆ ಹಾಕಿ, “ಈಗ ಇದನ್ನು ಬಡಿಸಬಹುದು. ಜನರು ಇದನ್ನು ಊಟಮಾಡಲಿ” ಎಂದನು. ಕೂಡಲೇ ಪಾತ್ರೆಯಲ್ಲಿದ್ದ ವಿಷವೆಲ್ಲಾ ಹೋಯಿತು. ಒಂದು ದಿನ ಬಾಳ್ ಷಾಲಿಷಾ ಊರಿನ ಒಬ್ಬ ಮನುಷ್ಯನು ಇಪ್ಪತ್ತು ಜವೆಗೋದಿಯ ರೊಟ್ಟಿಗಳನ್ನೂ, ಒಂದು ಚೀಲದ ತುಂಬಾ ಹಸೀ ತೆನೆಗಳನ್ನೂ, ಪ್ರಥಮಫಲದ ಕಾಣಿಕೆಯಾಗಿ ತೆಗೆದುಕೊಂಡು ಬಂದು ದೇವರ ಮನುಷ್ಯನಿಗೆ ಸಮರ್ಪಿಸಿದನು. ಎಲೀಷನು ತನ್ನ ಸೇವಕನಿಗೆ, “ಇದನ್ನು ಜನರಿಗೆ ಕೊಡು ಅವರು ಊಟಮಾಡಲಿ” ಎಂದು ಹೇಳಿದನು. ಅದಕ್ಕೆ ಅವನು, “ಇಷ್ಟನ್ನು ನೂರು ಮಂದಿಗೆ ಹೇಗೆ ಬಡಿಸಲಿ” ಎಂದನು. ಎಲೀಷನು ಅವನಿಗೆ, “ಇರಲಿ, ಕೊಡು. ಅವರು ಊಟಮಾಡಲಿ. ಅವರು ಅದನ್ನು ಊಟಮಾಡಿ ತೃಪ್ತರಾಗಿ ಇನ್ನೂ ಉಳಿಸಿಕೊಳ್ಳುವರೆಂದು ಯೆಹೋವನು ಎನ್ನುತ್ತಾನೆ” ಎಂದು ಹೇಳಿದನು. ಸೇವಕರು ಬಡಿಸಲು, ಯೆಹೋವನ ಮಾತಿನಂತೆ ಜನರು ಊಟಮಾಡಿ, ತೃಪ್ತರಾಗಿ, ಇನ್ನೂ ಉಳಿಸಿಕೊಂಡರು.

ಎಲೀಷನು ಅವನಿಗೆ, “ಹೋಗಿ ಯೊರ್ದನ್ ನದಿಯಲ್ಲಿ ಏಳು ಸಾರಿ ಮುಳುಗಿ ಬಾ, ಆಗ ನಿನ್ನ ದೇಹವು ಮೊದಲಿನಂತಾಗುವುದು; ನೀನು ಶುದ್ಧನಾಗುವಿ” ಎಂದು ಹೇಳಿ ಕಳುಹಿಸಿದನು. ನಾಮಾನನು ಇದನ್ನು ಕೇಳಿ ಕೋಪಗೊಂಡು, “ಇದೇನು? ಅವನು ಹೊರಗೆ ಬಂದು ತನ್ನ ದೇವರಾದ ಯೆಹೋವನ ಹೆಸರನ್ನು ಹೇಳಿ ನನ್ನ ಕುಷ್ಠದ ಮೇಲೆ ಕೈಯಾಡಿಸಿ ವಾಸಿಮಾಡುವನೆಂದು ನೆನಸಿದೆನು. ದಮಸ್ಕದ ಅಬಾನಾ ಮತ್ತು ಪರ್ಪರ್ ಎಂಬ ನದಿಗಳು ಇಸ್ರಾಯೇಲರ ಎಲ್ಲಾ ನದಿ ಹೊಳೆಹಳ್ಳಗಳಿಗಿಂತ ಉತ್ತಮವಾಗಿವೆಯಲ್ಲವೋ? ಸ್ನಾನದಿಂದ ಶುದ್ಧನಾಗುವ ಹಾಗಿದ್ದರೆ ನಾನು ಅವುಗಳಲ್ಲಿಯೇ ಸ್ನಾನಮಾಡಬಹುದಲ್ಲವೇ?” ಎಂದು ಹೇಳಿ, ಬಲು ಸಿಟ್ಟಿನಿಂದ ಹೊರಟುಹೋದನು. ಆಗ ಅವನ ಸೇವಕರು ಹತ್ತಿರ ಬಂದು ಅವನಿಗೆ, “ಸ್ವಾಮೀ, ಪ್ರವಾದಿಯು ಒಂದು ಕಠಿಣವಾದ ಕೆಲಸ ಹೇಳಿದ್ದರೆ, ಅದನ್ನು ನೀವು ಮಾಡುತ್ತಿದ್ದಿರಲ್ಲವೇ? ಹಾಗಾದರೆ ‘ಸ್ನಾನಮಾಡಿ ಶುದ್ಧನಾಗು’ ಎಂದು ಹೇಳಿದರೆ ಯಾಕೆ ಅದರಂತೆ ಮಾಡಬಾರದು” ಎಂದು ಹೇಳಿದರು. ಅವನು ಯೊರ್ದನ್ ನದಿಗೆ ಹೋಗಿ ಏಳು ಸಾರಿ ಅದರಲ್ಲಿ ಮುಳುಗಿ ಎದ್ದನು. ಕೂಡಲೆ ದೇವರ ಮನುಷ್ಯನ ಮಾತಿಗನುಸಾರವಾಗಿ ಅವನ ದೇಹವು ಕೂಸಿನ ದೇಹದಂತೆ ಶುದ್ಧವಾಯಿತು.

ಒಬ್ಬನ ಕೊಡಲಿಯು ಕೈಜಾರಿ ನೀರೊಳಗೆ ಬಿದ್ದಿತು. ಆಗ ಅವನು, “ಅಯ್ಯೋ, ಸ್ವಾಮಿ ನಾನು ಅದನ್ನು ಸಾಲವಾಗಿ ತಂದಿದ್ದೆನು” ಎಂದು ಕೂಗಿದನು. ದೇವರ ಮನುಷ್ಯನು ಅವನಿಗೆ, “ಅದು ಎಲ್ಲಿ ಬಿದ್ದಿತು?” ಎಂದು ಕೇಳಲು, ಅದು ಬಿದ್ದ ಸ್ಥಳವನ್ನು ಅವನು ತೋರಿಸಿದನು. ಆಗ ದೇವರ ಮನುಷ್ಯನು ಮರದಿಂದ ಒಂದು ತುಂಡು ಕಟ್ಟಿಗೆಯನ್ನು ಮುರಿದು ಅಲ್ಲಿ ಹಾಕಿದನು, ಕೂಡಲೆ ಕೊಡಲಿಯು ಮೇಲಕ್ಕೆ ಬಂದು ತೇಲಾಡಿತು. ಎಲೀಷನು “ಅದನ್ನು ತೆಗೆದುಕೋ” ಎಂದು ಆಜ್ಞಾಪಿಸಲು ಆ ಮನುಷ್ಯನು ಕೈಚಾಚಿ ಅದನ್ನು ತೆಗೆದುಕೊಂಡನು.

ಅರಾಮ್ಯರ ಅರಸನು ಇಸ್ರಾಯೇಲರಿಗೆ ವಿರೋಧವಾಗಿ ಯುದ್ಧಕ್ಕೆ ಬಂದನು. ಅವನು ತನ್ನ ಸೇನಾಧಿಪತಿಗಳಿಗೆ, “ಯುದ್ಧದಲ್ಲಿ ಹೊಂಚುಹಾಕತಕ್ಕ ಸ್ಥಳವನ್ನು ಗೊತ್ತುಮಾಡಬೇಕು” ಎಂದನು. ದೇವರ ಮನುಷ್ಯನು ಇಸ್ರಾಯೇಲರ ಅರಸನಿಗೆ, “ಜಾಗರೂಕತೆಯಿಂದಿರಿ, ನೀವು ಇಂಥಿಂಥ ಸ್ಥಳದಲ್ಲಿ ಹೋಗಬಾರದು. ಅಲ್ಲಿ ಅರಾಮ್ಯರು ಅಡಗಿಕೊಂಡಿದ್ದಾರೆ” ಎಂದು ತಿಳಿಸುತ್ತಿದ್ದನು. ದೇವರ ಮನುಷ್ಯನು ಸೂಚಿಸುವ ಎಲ್ಲಾ ಸ್ಥಳಗಳಿಗೂ ಇಸ್ರಾಯೇಲರ ಅರಸನು ಹೇಳಿ ಕಳುಹಿಸುತ್ತಿದ್ದನು. ಹೀಗೆ ಅವನು ಹಲವು ಸಾರಿ ಅರಾಮ್ಯರ ಅರಸನ ಕೈಗೆ ಸಿಕ್ಕದಂತೆ ತಪ್ಪಿಸಿಕೊಂಡನು. ಇದರ ದೆಸೆಯಿಂದ ಅರಾಮ್ಯರ ಅರಸನು ಕಳವಳಗೊಂಡು ತನ್ನ ಸೇನಾಧಿಪತಿಗಳನ್ನು ಕರೆದು ಅವರನ್ನು, “ನಮ್ಮವರಲ್ಲಿ ಇಸ್ರಾಯೇಲರ ಅರಸನ ಪಕ್ಷದವರು ಯಾರು? ನನಗೆ ತಿಳಿಸುವುದಿಲ್ಲವೋ” ಎಂದು ಕೇಳಿದನು. ಆಗ ಅವರಲ್ಲೊಬ್ಬನು ಅವನಿಗೆ, “ನನ್ನ ಒಡೆಯನಾದ ಅರಸನೇ, ಹಾಗಲ್ಲ, ಇಸ್ರಾಯೇಲರಲ್ಲಿ ಎಲೀಷನೆಂಬ ಒಬ್ಬ ಪ್ರವಾದಿಯಿರುತ್ತಾನೆ. ನೀನು ನಿನ್ನ ಮಲಗುವ ಕೋಣೆಯಲ್ಲಿ ಆಡುವ ಮಾತುಗಳನ್ನು ಸಹ ಅವನು ಅರಿತುಕೊಂಡು ಎಲ್ಲವನ್ನೂ ಇಸ್ರಾಯೇಲರ ಅರಸನಿಗೆ ತಿಳಿಸುತ್ತಾನೆ” ಎಂದನು.

ದೇವರ ಮನುಷ್ಯನ ಸೇವಕನು ಬೆಳಿಗ್ಗೆ ಎದ್ದು ಹೊರಗೆ ಬಂದು ನೋಡಿದಾಗ ರಥರಥಾಶ್ವಸಹಿತವಾದ ಮಹಾಸೈನ್ಯವು ಬಂದು ಪಟ್ಟಣದ ಸುತ್ತಲೂ ನಿಂತಿರುವುದನ್ನು ಕಂಡು ತನ್ನ ಯಜಮಾನನಿಗೆ, “ಅಯ್ಯೋ, ಸ್ವಾಮಿ ನಾವು ಏನು ಮಾಡೋಣ?” ಎಂದನು. ಆಗ ಎಲೀಷನು ಅವನಿಗೆ, “ಹೆದರಬೇಡ, ಅವರ ಕಡೆಯಲ್ಲಿರುವವರಿಗಿಂತಲೂ, ನಮ್ಮ ಕಡೆಯಲ್ಲಿರುವವರು ಹೆಚ್ಚಾಗಿದ್ದಾರೆ” ಎಂದು ಹೇಳಿ, “ಯೆಹೋವನೇ, ಇವನು ನೋಡುವಂತೆ ಇವನ ಕಣ್ಣುಗಳನ್ನು ತೆರೆ” ಎಂದು ಪ್ರಾರ್ಥಿಸಲು ಯೆಹೋವನು ಅವನ ಕಣ್ಣುಗಳನ್ನು ತೆರೆದನು. ಆಗ ಎಲೀಷನ ರಕ್ಷಣೆಗಾಗಿ ಸುತ್ತಣ ಗುಡ್ಡಗಳಲ್ಲಿ ಬಂದು ನಿಂತಿದ್ದ ಅಗ್ನಿಮಯವಾದ ರಥಾರಥಾಶ್ವಗಳು ಆ ಸೇವಕನಿಗೆ ಕಂಡವು. ಶತ್ರುಗಳಾದ ಅರಾಮ್ಯರು ಸಮೀಪಕ್ಕೆ ಬಂದಾಗ ಎಲೀಷನು, “ಸ್ವಾಮಿ, ಈ ಜನರನ್ನು ಕುರುಡರನ್ನಾಗಿ ಮಾಡು” ಎಂದು ಯೆಹೋವನನ್ನು ಪ್ರಾರ್ಥಿಸಿದನು. ಯೆಹೋವನು ಅವನ ಮೊರೆಯನ್ನು ಲಾಲಿಸಿ ಅವರನ್ನು ಕುರುಡರನ್ನಾಗಿ ಮಾಡಿದನು. ಆಗ ಎಲೀಷನು ಅವರಿಗೆ, “ನೀವು ಹೋಗಬೇಕೆಂದಿದ್ದ ಪಟ್ಟಣವೂ, ದಾರಿಯೂ ಇದಲ್ಲ, ನನ್ನ ಜೊತೆಯಲ್ಲಿ ಬನ್ನಿರಿ, ನೀವು ಹುಡುಕುತ್ತಿರುವ ಮನುಷ್ಯನ ಬಳಿಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ” ಎಂದು ಹೇಳಿ ಅವರನ್ನು ಸಮಾರ್ಯಕ್ಕೆ ಕರೆದುಕೊಂಡು ಹೋದನು. ಅವರು ಸಮಾರ್ಯದೊಳಗೆ ಬಂದಾಗ ಎಲೀಷನು, “ಇವರು ನೋಡುವಂತೆ ಇವರ ಕಣ್ಣುಗಳನ್ನು ತೆರೆ” ಎಂದು ಯೆಹೋವನನ್ನು ಬೇಡಿಕೊಂಡದ್ದರಿಂದ ಆತನು ಅವರ ಕಣ್ಣುಗಳನ್ನು ತೆರೆದನು. ಆಗ ಅವರಿಗೆ ತಾವು ಸಮಾರ್ಯದಲ್ಲಿದ್ದೇವೆಂದು ತಿಳಿದುಬಂತು.

ಒಂದು ದಿನ ಜನರು ಒಬ್ಬ ಸತ್ತವನನ್ನು ಸಮಾಧಿಮಾಡುವುದಕ್ಕೆ ಹೋದಾಗ, ಮೋವಾಬ್ಯರ ಗುಂಪು ಬರುತ್ತಿರುವುದನ್ನು ಕಂಡು ಶವವನ್ನು ಎಲೀಷನ ಸಮಾಧಿಯಲ್ಲಿ ಬಿಸಾಡಿ ಓಡಿಹೋದರು. ಸತ್ತ ಮನುಷ್ಯನ ದೇಹವು ಎಲೀಷನ ಎಲುಬುಗಳಿಗೆ ತಗಲಿದ ಕೂಡಲೆ ಅವನು ಜೀವ ಬಂದು ಎದ್ದು ನಿಂತನು.

ಅದಕ್ಕೆ ಯೆಶಾಯನು, “ಯೆಹೋವನು ನುಡಿದಿದ್ದನ್ನು ನೆರವೇರಿಸುವನು ಎಂಬುದಕ್ಕೆ ಯೆಹೋವನಿಂದ ಉಂಟಾದ ಗುರುತು ಕೇಳುತ್ತಿರುವೆ, ಹಾಗಾದರೆ ನೆರಳು ಹತ್ತು ಮೆಟ್ಟಲು ಮುಂದೆ ಹೋಗಬೇಕೋ? ಹಿಂದೆ ಬರಬೇಕೋ? ಹೇಳು ಹಿಂದೆ ಹೋಗಬೇಕೋ ಹೇಳು?” ಎಂದು ಕೇಳಿದನು. ಅದಕ್ಕೆ ಹಿಜ್ಕೀಯನು, “ನೆರಳು ಮುಂದೆ ಹೋಗುವುದು ಸುಲಭ, ಆದುದರಿಂದ ಹತ್ತು ಮೆಟ್ಟಲು ಹಿಂದೆ ಬರುವಂತೆ ಮಾಡು” ಎಂದು ಹೇಳಿದನು. ಆಗ ಪ್ರವಾದಿಯಾದ ಯೆಶಾಯನು ಯೆಹೋವನಿಗೆ ಮೊರೆಯಿಡಲು ಆತನು ಆಹಾಜನ ಗಡಿಯಾರದ ವೇಳಾನುಸಾರ ಹತ್ತು ಮೆಟ್ಟಲು ಮುಂದೆ ಹೋಗಿದ್ದ ನೆರಳನ್ನು ಹತ್ತು ಮೆಟ್ಟಲು ಹಿಂದೆ ಬರುವಂತೆ ಮಾಡಿದನು.

ಆಸನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಅವನ ಕಾಲುಗಳಿಗೆ ಬಹು ಕಠಿಣವಾದ ರೋಗ ತಗಲಿತು. ಈ ರೋಗದಲ್ಲೂ ಅವನು ಯೆಹೋವನ ಸಹಾಯವನ್ನು ಕೋರದೆ ವೈದ್ಯರ ಸಹಾಯವನ್ನೇ ಕೋರಿದನು.

ಆದರೆ ಅವನು ಬಲಿಷ್ಠನಾದ ಮೇಲೆ ಅವನ ಅವನತಿಗಾಗಿ ಗರ್ವಿಷ್ಠನಾಗಿ ಭ್ರಷ್ಟನಾದನು; ತನ್ನ ದೇವರಾದ ಯೆಹೋವನಿಗೆ ದ್ರೋಹಿಯಾಗಿ ಧೂಪವೇದಿಯ ಮೇಲೆ ತಾನೇ ಧೂಪ ಹಾಕಬೇಕೆಂದು ಯೆಹೋವನ ಆಲಯದೊಳಗೆ ಪ್ರವೇಶಿಸಿದನು. ಆಗ ಮಹಾಯಾಜಕನಾದ ಅಜರ್ಯನೂ ಹಾಗು ಧೈರ್ಯಶಾಲಿಗಳಾದ ಯೆಹೋವನ ಎಂಭತ್ತು ಮಂದಿ ಇತರ ಯಾಜಕರೂ ಅರಸನಾದ ಉಜ್ಜೀಯನ ಹಿಂದೆಯೇ ಹೋಗಿ ಅರಸನ ಎದುರಿಗೆ ನಿಂತು ಅವನಿಗೆ, “ಉಜ್ಜೀಯನೇ, ಯೆಹೋವನಿಗೋಸ್ಕರ ಧೂಪ ಹಾಕುವುದು ನಿನ್ನ ಕೆಲಸವಲ್ಲ; ಅದಕ್ಕೋಸ್ಕರ ಆರೋನನ ಸಂತಾನದವರಾದ ಯಾಜಕರು ಪ್ರತಿಷ್ಠಿತರಾಗಿದ್ದಾರೆ. ಪವಿತ್ರಾಲಯವನ್ನು ಬಿಟ್ಟುಹೋಗು; ನೀನು ಮಾಡುತ್ತಿರುವುದು ದ್ರೋಹ. ಇದಕ್ಕೆ ದೇವರಾದ ಯೆಹೋವನಿಂದ ನಿನಗೆ ಗೌರವ ದೊರಕಲಾರದು” ಎಂದರು. ಆಗ ಧೂಪ ಹಾಕಬೇಕೆಂದು ಕೈಯಲ್ಲಿ ಧೂಪಾರತಿಯನ್ನು ಹಿಡಿದುಕೊಂಡಿದ್ದ ಉಜ್ಜೀಯನು ಕೋಪಗೊಂಡನು. ಅವನು ಯೆಹೋವನ ಆಲಯದ ಧೂಪವೇದಿಯ ಬಳಿಯಲ್ಲಿ ನಿಂತು, ಯಾಜಕರೊಡನೆ ಸಿಟ್ಟಿನಿಂದ ಮಾತನಾಡುತ್ತಿರುವಾಗಲೆ ಯಾಜಕರ ಸಮಕ್ಷಮದಲ್ಲೇ, ಅವನ ಹಣೆಯ ಮೇಲೆ ಕುಷ್ಠವು ಕಾಣಿಸಿಕೊಂಡಿತು. ಮಹಾಯಾಜಕನಾದ ಅಜರ್ಯನೂ ಎಲ್ಲಾ ಯಾಜಕರೂ ಅವನನ್ನು ದೃಷ್ಟಿಸಿ ನೋಡಿದಾಗ, ಅವನ ಹಣೆಯಲ್ಲಿ ಕುಷ್ಠವು ಕಂಡುಬಂದ ಕಾರಣ, ಅವನನ್ನು ಶೀಘ್ರವಾಗಿ ಅಲ್ಲಿಂದ ಹೊರಡಿಸಿದರು. ಯೆಹೋವನು ತನ್ನನ್ನು ಬಾಧಿಸಿದ್ದಾನೆಂದು ಅವನಿಗೆ ತಿಳಿಯಿತು. ಅವನೂ ಶೀಘ್ರವಾಗಿ ಹೊರಗೆ ಹೋಗಲು ಆತುರಪಟ್ಟನು.

ಐಗುಪ್ತ್ಯರು ಗರ್ವಿಗಳಾಗಿ ನಮ್ಮ ಪೂರ್ವಿಕರನ್ನು ಕುಗ್ಗಿಸಿದಾಗ, ನೀನು ಫರೋಹನಲ್ಲಿಯೂ, ಅವನ ಸೇವಕರಲ್ಲಿಯು, ಅವನ ದೇಶದ ಜನರಲ್ಲಿಯೂ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನು ನಡೆಸಿ ಈಗ ನಿನಗಿರುವ ಕೀರ್ತಿಯನ್ನು ಸ್ಥಾಪಿಸಿಕೊಂಡಿರುವೆ.

(ಈ ಸಂದರ್ಭದಲ್ಲಿ) ನಾನಾದರೋ ದೇವರನ್ನೇ ಆಶ್ರಯಿಸುತ್ತಿದ್ದೆನು; ನನ್ನ ಸಂಗತಿಯನ್ನು ದೇವರಿಗೇ ಅರಿಕೆಮಾಡಿಕೊಳ್ಳುತ್ತಿದ್ದೆನು. ಆತನು ಅಪ್ರಮೇಯ ಮಹಾಕಾರ್ಯಗಳನ್ನೂ, ಅಸಂಖ್ಯಾತವಾದ ಅದ್ಭುತಕೃತ್ಯಗಳನ್ನೂ ಮಾಡುತ್ತಾನೆ.

ನೀವಾದರೋ ಸುಳ್ಳನ್ನು ಪ್ರತಿಪಾದಿಸುವವರಾಗಿದ್ದೀರಿ, ನೀವೆಲ್ಲರೂ ವ್ಯರ್ಥ ವೈದ್ಯರೇ.

ಯೆಹೋವನೇ, ನನ್ನ ದೇವರೇ, ನಿನಗೆ ಮೊರೆಯಿಡಲು ನನ್ನನ್ನು ಸ್ವಸ್ಥಮಾಡಿದಿ.

ಅವನು ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗ, ಯೆಹೋವನು ಅವನನ್ನು ಉದ್ಧರಿಸುವನು; ಅವನ ರೋಗವನ್ನೆಲ್ಲಾ ಪರಿಹರಿಸಿ, ಆರೋಗ್ಯವನ್ನು ಅನುಗ್ರಹಿಸಿದ್ದಿಯಲ್ಲಾ ಸ್ವಾಮೀ. ನಾನಂತೂ, “ಯೆಹೋವನೇ, ನಿನ್ನ ಆಜ್ಞೆಯನ್ನು ಮೀರಿ ಪಾಪಮಾಡಿದ್ದೇನೆ; ನನ್ನನ್ನು ಕರುಣಿಸಿ ಸ್ವಸ್ಥಮಾಡು” ಅಂದೆನು.

ಅದ್ಭುತಗಳನ್ನು ನಡೆಸುವ ದೇವರು ನೀನೇ; ಜನಾಂಗಗಳಲ್ಲಿ ಪರಾಕ್ರಮವನ್ನು ತೋರ್ಪಡಿಸಿದಿ.

ಆತನು ನಿನ್ನ ಎಲ್ಲಾ ಅಪರಾಧಗಳನ್ನು ಕ್ಷಮಿಸುವವನೂ, ಸಮಸ್ತ ರೋಗಗಳನ್ನು ವಾಸಿಮಾಡುವವನೂ, ನಿನ್ನ ಜೀವವನ್ನು ನಾಶನದಿಂದ ತಪ್ಪಿಸುವವನೂ, ಶಾಶ್ವತ ಪ್ರೀತಿ ಮತ್ತು ಕರುಣೆಯೆಂಬ ಕಿರೀಟದಿಂದ ನಿನ್ನನ್ನು ಶೃಂಗರಿಸುವವನೂ ಆಗಿದ್ದಾನೆ. ಶ್ರೇಷ್ಠ ವರಗಳಿಂದ ನಿನ್ನ ಆಶೆಯನ್ನು ಪೂರ್ಣಗೊಳಿಸುತ್ತಾನೆ; ಹದ್ದಿಗೆ ಬರುವಂತೆಯೇ ನಿನಗೆ ಯೌವನವನ್ನು ತಿರುಗಿ ಬರಮಾಡುತ್ತಾನೆ.

ಮುರಿದ ಮನಸ್ಸುಳ್ಳವರನ್ನು ವಾಸಿಮಾಡುತ್ತಾನೆ, ಅವರ ಗಾಯಗಳನ್ನು ಕಟ್ಟುತ್ತಾನೆ.

ಆದಕಾರಣ ಕರ್ತನು ತಾನೇ ನಿಮಗೆ ಒಂದು ಗುರುತನ್ನು ಕೊಡುವನು. ಇಗೋ ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಒಬ್ಬ ಮಗನನ್ನು ಹಡೆದು ಅವನಿಗೆ ಇಮ್ಮಾನುವೇಲ್ ಎಂದು ಹೆಸರಿಡುವರು.

ನಮ್ಮ ದ್ರೋಹಗಳ ದೆಸೆಯಿಂದ ಅವನಿಗೆ ಗಾಯವಾಯಿತು, ನಮ್ಮ ಅಪರಾಧಗಳ ನಿಮಿತ್ತ ಅವನು ಜಜ್ಜಲ್ಪಟ್ಟನು; ನಮಗೆ ಸುಕ್ಷೇಮವನ್ನು ಉಂಟುಮಾಡುವ ದಂಡನೆಯನ್ನು ಅವನು ಅನುಭವಿಸಿದನು; ಅವನ ಬಾಸುಂಡೆಗಳಿಂದ ನಮಗೆ ಗುಣವಾಯಿತು.

ಯೆಹೋವನು ಇಂತೆನ್ನುತ್ತಾನೆ, “ಇಗೋ, ‘ಇದು ಚೀಯೋನ್, ಯಾರಿಗೂ ಬೇಡವಾಗಿರುವ ನಗರ’ ಎಂದು ಜನರು ಹೇಳಿ, ನಿನ್ನನ್ನು ಭ್ರಷ್ಟಳೆಂದದ್ದನ್ನು ನಾನು ಸಹಿಸಲಾರದೆ, ನಿನ್ನನ್ನು ಗುಣಪಡಿಸಿ ನಿನ್ನ ಬಾಸುಂಡೆಗಳನ್ನು ವಾಸಿಮಾಡುವೆನು.”

ನೀನು ಐಗುಪ್ತದೇಶದಲ್ಲಿ ಮಹತ್ಕಾರ್ಯಗಳನ್ನೂ, ಅದ್ಭುತಗಳನ್ನೂ ನಡೆಸಿ ಈ ದಿನದವರೆಗೆ ಇಸ್ರಾಯೇಲರಲ್ಲಿಯೂ ಮತ್ತು ಇತರ ಜನರಲ್ಲಿಯೂ ಅವುಗಳನ್ನು ಮಾಡುತ್ತಾ ಬಂದು ಹೆಸರನ್ನು ಪಡೆದುಕೊಂಡಿದ್ದಿ. ಅದು ಈಗಲೂ ಸ್ಥಿರವಾಗಿದೆ; ನೀನು ಮಹತ್ಕಾರ್ಯಗಳನ್ನೂ, ಅದ್ಭುತಗಳನ್ನೂ ನಡೆಸಿ, ಭುಜಪರಾಕ್ರಮವನ್ನು ತೋರಿಸಿ, ಶಿಕ್ಷಾಹಸ್ತವನ್ನು ಎತ್ತಿ, ಮಹಾ ಭೀತಿಯನ್ನುಂಟುಮಾಡಿ ನಿನ್ನ ಜನರಾದ ಇಸ್ರಾಯೇಲರನ್ನು ಐಗುಪ್ತದೇಶದೊಳಗಿಂದ ಬರಮಾಡಿದಿ.

ನಾನು ಯೆಹೋವನ ಹಸ್ತಸ್ಪರ್ಶದಿಂದ ಪರವಶನಾಗಲು, ಆತನು ತನ್ನ ಆತ್ಮದ ಮೂಲಕ ನನ್ನನ್ನು ಒಯ್ದು ಎಲುಬುಗಳಿಂದ ತುಂಬಿದ್ದ ಒಂದು ಕಣಿವೆಯಲ್ಲಿ ಇಳಿಸಿದನು. ನಾನು ಆ ಎಲುಬುಗಳ ಮಧ್ಯೆ ಕಣಿವೆಯನ್ನು ದಾಟಿ ಬರುವಂತೆ ಮಾಡಿದನು. ಇಗೋ! ಕಣಿವೆಯಲ್ಲಿ ಒಣಗಿ ಹೋದ ಎಲುಬುಗಳು ಲೆಕ್ಕವಿಲ್ಲದಷ್ಟು ಬಿದ್ದಿದ್ದವು. ಆತನು ನನಗೆ “ನರಪುತ್ರನೆ, ಈ ಎಲುಬುಗಳಿಗೆ ಜೀವವು ಬರಬಹುದೋ?” ಎಂದು ಕೇಳಲು ನಾನು, “ಕರ್ತನಾದ ಯೆಹೋವನೇ, ನೀನೇ ಬಲ್ಲೆ” ಎಂದು ಉತ್ತರಕೊಟ್ಟೆನು. ಆಗ ಆತನು ನನಗೆ ಹೀಗೆ ಅಪ್ಪಣೆಮಾಡಿದನು, “ನೀನು ಈ ಎಲುಬುಗಳ ಮೇಲೆ ಪ್ರವಾದಿಸಿ, ಹೀಗೆ ನುಡಿ, ‘ಒಣಗಿದ ಎಲುಬುಗಳೇ, ಯೆಹೋವನ ವಾಕ್ಯವನ್ನು ಕೇಳಿರಿ’. ಕರ್ತನಾದ ಯೆಹೋವನು ನಿಮಗೆ ಹೀಗೆ ಹೇಳುತ್ತಾನೆ, ‘ಇಗೋ, ನಾನು ನಿಮ್ಮೊಳಗೆ ಶ್ವಾಸವನ್ನು ಊದುವೆನು; ನೀವು ಬದುಕುವಿರಿ. ನಾನು ನಿಮ್ಮ ಮೇಲೆ ನರಗಳನ್ನು ಹಬ್ಬಿಸಿ, ಮಾಂಸವನ್ನು ತಂದು, ಚರ್ಮವನ್ನು ಹೊದಿಸಿ, ನಿಮ್ಮಲ್ಲಿ ಶ್ವಾಸವನ್ನು ತುಂಬುವೆನು; ಆಗ ನೀವು ಬದುಕಿ ನಾನೇ ಯೆಹೋವನು ಎಂದು ತಿಳಿದುಕೊಳ್ಳುವಿರಿ.’” ನನಗೆ ಅಪ್ಪಣೆಯಾದಂತೆ ನಾನು ಆ ಪ್ರವಾದನೆಯನ್ನು ನುಡಿಯುತ್ತಿರಲು, ಅಲ್ಲಿ ಟಕಟಕ ಶಬ್ದವಾಯಿತು, ಇಗೋ, ಅದು ಕದಲುತ್ತಿತ್ತು. ಎಲುಬುಗಳೆಲ್ಲಾ ಒಂದುಗೂಡಿ ಎಲುಬಿಗೆ ಎಲುಬು ಜೋಡಣೆಯಾದವು. ನಾನು ನೋಡುತ್ತಿರುವಾಗ ಏನಾಶ್ಚರ್ಯ ಆಹಾ, ಅವುಗಳ ಮೇಲೆ ನರಗಳು ಹಬ್ಬಿಕೊಂಡವು, ಮಾಂಸವು ಹರಡಿಕೊಂಡಿತು, ಚರ್ಮವು ಮೇಲ್ಹೊದಿಕೆಯಾಯಿತು, ಶ್ವಾಸ ಮಾತ್ರ ಇರಲಿಲ್ಲ. ಆಗ ಆತನು ನನಗೆ, “ನರಪುತ್ರನೇ, ನೀನು ಶ್ವಾಸಕ್ಕೆ ನುಡಿ, ‘ಓ ಶ್ವಾಸವೇ,’ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನೀನು ಚತುರ್ದಿಕ್ಕುಗಳಿಂದ ಬೀಸಿ, ಈ ಹತಶರೀರಗಳು ಬದುಕುವಂತೆ ಅವುಗಳ ಮೇಲೆ ಊದು.’” ನನಗೆ ಕೊಟ್ಟ ಅಪ್ಪಣೆಯಂತೆ ನಾನು ನುಡಿದು, ಶ್ವಾಸ ಊದಿದೆ. ಇಗೋ, ಉಸಿರು ಅವುಗಳಲ್ಲಿ ಬಂದಿತು, ಅವು ಬದುಕಿದವು, ಕಾಲೂರಿ ನಿಂತವು, ಅತ್ಯಂತ ಮಹಾ ಸೈನ್ಯವಾದವು.

ರಾಜನು ಬೇಲ್ತೆಶಚ್ಚರನೆಂಬ ಅಡ್ಡಹೆಸರಿನ ದಾನಿಯೇಲನನ್ನು, “ನಾನು ಕಂಡ ಕನಸನ್ನೂ, ಅದರ ಅರ್ಥವನ್ನೂ ನನಗೆ ತಿಳಿಸಬಲ್ಲೆಯಾ?” ಎಂದು ಕೇಳಿದನು. ಅದಕ್ಕೆ ದಾನಿಯೇಲನು ರಾಜನನ್ನು ಕುರಿತು, “ರಾಜನು ಕೇಳುವ ರಹಸ್ಯವನ್ನು ವಿದ್ವಾಂಸರಾಗಲಿ, ಮಾಟಗಾರರಾಗಲಿ, ಜೋಯಿಸರಾಗಲಿ, ಶಕುನದವರಾಗಲಿ ಯಾರೂ ರಾಜನಿಗೆ ತಿಳಿಸಲಾರರು. ಆದರೆ ರಹಸ್ಯಗಳನ್ನು ಪ್ರಕಟಗೊಳಿಸುವ ಒಬ್ಬನಿದ್ದಾನೆ, ಆತನು ದೇವರು, ಆತನು ಪರಲೋಕದಲ್ಲಿದ್ದಾನೆ. ಮುಂದೆ ನಡೆಯತಕ್ಕದ್ದನ್ನು ಆತನೇ ರಾಜನಾದ ನೆಬೂಕದ್ನೆಚ್ಚರನಿಗೆ ತಿಳಿಯಪಡಿಸಿದ್ದಾನೆ. ನಿನ್ನ ಕನಸು, ಹಾಸಿಗೆಯ ಮೇಲೆ ನಿನ್ನ ಮನಸ್ಸಿನಲ್ಲಿ ಬಿದ್ದ ಸ್ವಪ್ನಗಳು ಇವೇ. “ರಾಜನೇ, ನೀನು ಹಾಸಿಗೆಯ ಮೇಲೆ ಮಲಗಿರುವಾಗ ಮುಂದೆ ಏನಾಗುವುದೋ? ಎಂಬ ಯೋಚನೆಯು ನಿನ್ನಲ್ಲಿ ಹುಟ್ಟಿತಲ್ಲಾ; ರಹಸ್ಯಗಳನ್ನು ವ್ಯಕ್ತಗೊಳಿಸುವಾತನು ಮುಂದೆ ಸಂಭವಿಸುವುದನ್ನು ನಿನಗೆ ಗೋಚರಮಾಡಿದ್ದಾನೆ. ನಾನೇ ಎಲ್ಲಾ ಮನುಷ್ಯರಿಗಿಂತ ಹೆಚ್ಚು ಬುದ್ಧಿವಂತನಲ್ಲ, ಕನಸಿನ ಅಭಿಪ್ರಾಯವು ರಾಜನಿಗೆ ಗೋಚರವಾಗಿ ನಿನ್ನ ಮನಸ್ಸಿನ ಯೋಚನೆಯ ವಿಷಯವು ನಿನಗೆ ತಿಳಿದು ಬರಲಿ ಎಂದು ಈ ರಹಸ್ಯವು ನನಗೂ ಪ್ರಕಟವಾಗಿದೆ.

ಆಗ ನೆಬೂಕದ್ನೆಚ್ಚರನು ಕೋಪೋದ್ರೇಕದಿಂದ ಮುಖಭಾವವನ್ನು ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರ ಕಡೆಗೆ ತಿರುಗಿಸಿಕೊಂಡು ಬೆಂಕಿಯನ್ನು ನಿತ್ಯಕ್ಕಿಂತ ಏಳರಷ್ಟು ಹೆಚ್ಚಾಗಿ ಉರಿಸಬೇಕು ಎಂದು ಆಜ್ಞಾಪಿಸಿದನು. ಇದಲ್ಲದೆ ತನ್ನ ಸೈನ್ಯದ ಕೆಲವು ಮಂದಿ ಶೂರರಿಗೆ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರನ್ನು ಕಟ್ಟಿ ಧಗಧಗನೆ ಉರಿಯುವ ಬೆಂಕಿಯೊಳಗೆ ಎತ್ತಿಹಾಕಬೇಕೆಂದು ಅಪ್ಪಣೆಕೊಟ್ಟನು. ಅದರಂತೆ ಶಲ್ಯ, ಇಜಾರು, ಮುಂಡಾಸ ಮೊದಲಾದ ಉಡುಪನ್ನು ಧರಿಸಿಕೊಂಡಿದ್ದ ಹಾಗೆಯೇ ಅವರನ್ನು ಕಟ್ಟಿ ಧಗಧಗನೆ ಉರಿಯುವ ಬೆಂಕಿಯೊಳಗೆ ಹಾಕಿಬಿಟ್ಟರು. ಹೀಗಾಗಿ ರಾಜಾಜ್ಞೆಯು ಖಂಡಿತವಾಗಿದ್ದುದರಿಂದಲೂ ಬೆಂಕಿಯ ಕಾವು ಅತಿ ತೀಕ್ಷ್ಣವಾಗಿದ್ದುದರಿಂದಲೂ ಅಗ್ನಿಜ್ವಾಲೆಯು ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರನ್ನು ಎತ್ತಿ ಹಾಕಿದವರನ್ನೇ ದಹಿಸಿಬಿಟ್ಟಿತು. ಶದ್ರಕ್, ಮೇಶಕ್, ಅಬೇದ್ನೆಗೋ ಈ ಮೂವರು ಕಟ್ಟಲ್ಪಟ್ಟವರಾಗಿ ಧಗಧಗನೆ ಉರಿಯುವ ಬೆಂಕಿಯ ಮಧ್ಯದಲ್ಲಿ ಬಿದ್ದುಬಿಟ್ಟರು. ಆಗ ರಾಜನಾದ ನೆಬೂಕದ್ನೆಚ್ಚರನು ಬೆಚ್ಚಿಬಿದ್ದು, ತಟ್ಟನೆ ಎದ್ದು ತನ್ನ ಮಂತ್ರಿಗಳಿಗೆ, “ಕಟ್ಟಿದ ಮೂವರನ್ನು ನಾವು ಬೆಂಕಿಯೊಳಗೆ ಹಾಕಿಸಲಿಲ್ಲವೋ?” ಎಂದು ಕೇಳಲು ಅವರು ರಾಜನಿಗೆ, “ಅರಸನೇ, ಹೌದು, ಹಾಕಿರುವುದು ಸತ್ಯ” ಎಂದು ಉತ್ತರಕೊಟ್ಟರು. ಅದಕ್ಕೆ ಅವನು, “ಇಗೋ, ಕಟ್ಟಿಲ್ಲದ ನಾಲ್ವರನ್ನು ನೋಡುತ್ತೇನೆ, ಬೆಂಕಿಯಲ್ಲಿ ತಿರುಗಾಡುತ್ತಿದ್ದಾರೆ, ಅವರಿಗೆ ಯಾವ ಹಾನಿಯೂ ಇಲ್ಲ; ನಾಲ್ಕನೆಯವನ ರೂಪವು ದೇವಕುಮಾರನ ರೂಪದಂತಿದೆ” ಎಂದು ಹೇಳಿದನು. ಆಗ ನೆಬೂಕದ್ನೆಚ್ಚರನು ಧಗಧಗನೆ ಉರಿಯುವ ಬೆಂಕಿಯ ಬಾಯಿಯ ಬಳಿಗೆ ಹೋಗಿ, “ಪರಾತ್ಪರದೇವರ ಸೇವಕರಾದ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರೇ ಬನ್ನಿ, ಹೊರಗೆ ಬನ್ನಿ ಎಂದು ಕೂಗಲು, ಶದ್ರಕ್ ಮೇಶಕ್ ಅಬೇದ್ನೆಗೋ ಎಂಬುವವರು ಬೆಂಕಿಯೊಳಗಿಂದ ಹೊರಟು ಬಂದರು. ಅಲ್ಲಿ ಕೂಡಿದ್ದ ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿಗಳು ಅವರನ್ನು ನೋಡಿ ಅವರ ಮೇಲೆ ಬೆಂಕಿಯ ಅಧಿಕಾರವು ನಡೆದಿಲ್ಲ, ಅವರ ತಲೆಕೂದಲೂ ಸುಟ್ಟಿಲ್ಲ, ಅವರ ಶಲ್ಯಗಳಿಗೆ ವಿಕಾರವಿಲ್ಲ, ಬೆಂಕಿಯ ವಾಸನೆಯೇ ಮುಟ್ಟಿಲ್ಲ” ಎಂದು ತಿಳಿದುಕೊಂಡರು. ಆಗ ನೆಬೂಕದ್ನೆಚ್ಚರನು, “ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರ ದೇವರಿಗೆ ಸ್ತೋತ್ರವಾಗಲಿ! ಆತನು ತನ್ನ ದೂತನನ್ನು ಕಳುಹಿಸಿ ತನ್ನಲ್ಲಿ ಭರವಸವಿಟ್ಟು ರಾಜಾಜ್ಞೆಯನ್ನು ಜಯಿಸಿ ತನ್ನನ್ನೇ ಹೊರತು ಇನ್ನಾವ ದೇವರನ್ನೂ ಸೇವಿಸಿ ಪೂಜಿಸಬಾರದೆಂದು ಸ್ವದೇಹಗಳನ್ನು ಮರಣಕ್ಕೆ ಒಪ್ಪಿಸಿದ ತನ್ನ ಸೇವಕರನ್ನು ಉದ್ಧರಿಸಿದ್ದಾನಲ್ಲವೇ. ಸಕಲ ಜನಾಂಗ, ಕುಲ, ಭಾಷೆಗಳವರಲ್ಲಿ ಯಾರಾದರೂ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರ ದೇವರ ವಿಷಯದಲ್ಲಿ ಅಲ್ಲ ಸಲ್ಲದ ಮಾತುಗಳನ್ನಾಡಿದರೆ ಅವರನ್ನು ತುಂಡುತುಂಡಾಗಿ ಕತ್ತರಿಸಿ, ಅವರ ಮನೆಗಳನ್ನು ತಿಪ್ಪೆಯನ್ನಾಗಿ ಮಾಡಬೇಕೆಂಬ ಆಜ್ಞೆಯನ್ನು ವಿಧಿಸುತ್ತೇನೆ; ಹೀಗೆ ಉದ್ಧರಿಸಲು ಸಮರ್ಥನಾದ ಇನ್ಯಾವ ದೇವರೂ ಇಲ್ಲವಲ್ಲಾ” ಎಂದು ಹೇಳಿದನು. ಬಳಿಕ ರಾಜನು ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರನ್ನು ಬಾಬೆಲ್ ಸಂಸ್ಥಾನದಲ್ಲಿ ಉನ್ನತ ಪದವಿ ನೀಡಿ ಗೌರವಿಸಿದನು.

ಲೋಕದಲ್ಲೆಲ್ಲಾ ವಾಸಿಸುವ ಸಕಲ ಜನಾಂಗ, ಕುಲ ಭಾಷೆಗಳವರಿಗೆ ರಾಜನಾದ ನೆಬೂಕದ್ನೆಚ್ಚರನ ಪ್ರಕಟನೆ, “ನಿಮಗೆ ಸುಖವು ಹೆಚ್ಚೆಚ್ಚಾಗಲಿ! ಪರಾತ್ಪರನಾದ ದೇವರು ನನ್ನ ವಿಷಯದಲ್ಲಿ ನಡೆಸಿರುವ ಮಹತ್ತುಗಳನ್ನೂ, ಅದ್ಭುತಗಳನ್ನೂ ಪ್ರಚುರಪಡಿಸಬೇಕೆಂಬುವುದು ನನಗೆ ಸ್ಪಷ್ಟವಾಗಿ ತೋರಿಬಂದಿದೆ. ಆತನ ಮಹತ್ತುಗಳು ಎಷ್ಟೋ ಅತಿಶಯ! ಆತನ ಅದ್ಭುತಗಳು ಎಷ್ಟೋ ವಿಶೇಷ! ಆತನ ರಾಜ್ಯವು ಶಾಶ್ವತರಾಜ್ಯ, ಆತನ ಆಳ್ವಿಕೆಯು ತಲತಲಾಂತರಕ್ಕೂ ಸ್ಥಿರವಾಗಿ ನಿಲ್ಲುವುದು.”

ಅದೇ ಸಮಯದಲ್ಲಿ ಒಬ್ಬನ ಕೈಯ ಬೆರಳುಗಳು ದೀಪಸ್ತಂಭದ ಎದುರಿಗೆ ಅರಮನೆಯ ಸುಣ್ಣದ ಗೋಡೆಯ ಮೇಲೆ ಬರೆಯಲು ತೊಡಗಿದವು; ಬರೆಯುತ್ತಿದ್ದ ಹಸ್ತವನ್ನು ರಾಜನು ನೋಡಿದನು. ಆಗ ಅವನ ಮುಖ ಕಳೆಗುಂದಿತು, ಮನಸ್ಸು ಕಳವಳಗೊಂಡಿತು, ಸೊಂಟದ ಕೀಲು ಸಡಿಲವಾಯಿತು, ಮೊಣಕಾಲುಗಳು ಒಂದಕ್ಕೊಂದು ಬಡಿದುಕೊಂಡವು.

ದಾನಿಯೇಲನನ್ನು ತಂದು ಸಿಂಹಗಳ ಗವಿಯಲ್ಲಿ ರಾಜನ ಅಪ್ಪಣೆಯಂತೆ ಹಾಕಿಬಿಟ್ಟರು. ಆಗ ರಾಜನು ದಾನಿಯೇಲನಿಗೆ, “ನೀನು ನಿತ್ಯವೂ ಆರಾಧಿಸುವ ದೇವರು ನಿನ್ನನ್ನುದ್ಧರಿಸಲಿ” ಎಂದು ಹರಸಿದನು. ಕೂಡಲೆ ಬಂಡೆಯನ್ನು ತಂದು ಗವಿಯ ಬಾಯನ್ನು ಮುಚ್ಚಿದರು. ದಾನಿಯೇಲನ ಈ ಶಿಕ್ಷೆಯನ್ನು ಯಾರು ಬದಲಾಯಿಸದಂತೆ ರಾಜನ ಮುದ್ರೆಯಿಂದಲೂ, ತನ್ನ ಮುಖಂಡರ ಮುದ್ರೆಯಿಂದಲೂ ಅದಕ್ಕೆ ಮುದ್ರೆಯನ್ನು ಹಾಕಿ ಭದ್ರ ಮಾಡಲಾಯಿತು. ರಾಜನು ಅರಮನೆಯಲ್ಲಿ ವಿನೋದವಾದ್ಯಗಳನ್ನು ತನ್ನ ಮುಂದೆ ತರಿಸದೆ, ಉಪವಾಸವಾಗಿ ರಾತ್ರಿಯನ್ನು ಕಳೆದನು; ಅವನಿಗೆ ನಿದ್ರೆ ಬರಲಿಲ್ಲ. ಮರುದಿನ ಬೆಳಿಗ್ಗೆ ರಾಜನು ಉದಯದಲ್ಲೇ ಎದ್ದು ಸಿಂಹಗಳ ಗವಿಯ ಬಳಿಗೆ ತ್ವರೆಯಾಗಿ ಹೋದನು. ದಾನಿಯೇಲನಿದ್ದ ಗವಿಯ ಸಮೀಪಕ್ಕೆ ಬಂದು, ಅವನು ದುಃಖ ಧ್ವನಿಯಿಂದ ದಾನಿಯೇಲನನ್ನು ಕೂಗಿ, “ದಾನಿಯೇಲನೇ, ಜೀವ ಸ್ವರೂಪನಾದ ದೇವರ ಸೇವಕನೇ, ನೀನು ನಿತ್ಯವೂ ಭಜಿಸುವ ನಿನ್ನ ದೇವರು ನಿನ್ನನ್ನು ಸಿಂಹಗಳಿಂದ ಉದ್ಧರಿಸಲು ಶಕ್ತನಾದನೋ?” ಎಂದು ಕೇಳಿದನು. ಅದಕ್ಕೆ ದಾನಿಯೇಲನು ರಾಜನಿಗೆ, “ಅರಸನೇ, ಚಿರಂಜೀವಿಯಾಗಿರು! ನನ್ನ ದೇವರು ತನ್ನ ದೂತನನ್ನು ಕಳುಹಿಸಿ ಸಿಂಹಗಳ ಬಾಯಿಗಳನ್ನು ಬಂಧಿಸಿದನು. ಅವುಗಳಿಂದ ನನಗೆ ಯಾವ ಹಾನಿಯೂ ಆಗಲಿಲ್ಲ. ಏಕೆಂದರೆ ಆತನ ದೃಷ್ಟಿಗೆ ನಾನು ನಿರ್ಮಲನಾಗಿ ಕಂಡುಬಂದೆನು. ರಾಜನಾದ ನಿನಗೂ ಯಾವ ದ್ರೋಹವನ್ನೂ ಮಾಡಲಿಲ್ಲ” ಎಂದು ಹೇಳಿದನು. ಅದನ್ನು ಕೇಳಿ ರಾಜನು ಬಹಳ ಸಂತೋಷಪಟ್ಟು, ದಾನಿಯೇಲನನ್ನು ಗವಿಯೊಳಗಿಂದ ಮೇಲಕ್ಕೆ ಎತ್ತಬೇಕೆಂದು ಅಪ್ಪಣೆಮಾಡಲು ಅವನನ್ನು ಅಲ್ಲಿಂದ ಮೇಲಕ್ಕೆತ್ತಿದರು. ಅವನು ತನ್ನ ದೇವರಲ್ಲಿ ಭರವಸವಿಟ್ಟ ಕಾರಣ ಅವನಿಗೆ ಯಾವ ಹಾನಿಯೂ ಆಗಿರಲಿಲ್ಲ. ಅನಂತರ ರಾಜನು ಆಜ್ಞಾಪಿಸಲು ದಾನಿಯೇಲನ ಮೇಲೆ ದೂರು ಹೊರಿಸಿದವರನ್ನು ತಂದು ಅವರನ್ನೂ, ಅವರ ಹೆಂಡತಿ ಮಕ್ಕಳನ್ನು ಸಿಂಹಗಳ ಗವಿಯಲ್ಲಿ ಹಾಕಿಬಿಟ್ಟರು. ಅವರು ಗವಿಯ ತಳವನ್ನು ಮುಟ್ಟುವುದರೊಳಗೆ ಸಿಂಹಗಳು ಅವರ ಮೇಲೆ ಹಾರಿ, ಅವರ ಎಲ್ಲಾ ಎಲುಬುಗಳನ್ನು ಚೂರುಚೂರು ಮಾಡಿದವು.

ಆಗ ರಾಜನಾದ ದಾರ್ಯಾವೆಷನು ಲೋಕದಲ್ಲೆಲ್ಲಾ ವಾಸಿಸುವ ಸಕಲ ಜನಾಂಗ, ಕುಲ, ಭಾಷೆಗಳವರಿಗೆ ಈ ಪ್ರಸಿದ್ಧ ಪತ್ರವನ್ನು ಬರೆಯಿಸಿ, ಅದನ್ನು ಅನುಸರಿಸಿ ನಡೆಯಲು ಆಜ್ಞೆಮಾಡಿದನು. ದಾನಿಯೇಲನ ದೇವರ ದಯೆಯಿಂದ ನಿಮಗೆ ಸುಖವು ಹೆಚ್ಚೆಚ್ಚಾಗಲಿ! “ನಾನು ಆಳುವ ರಾಜ್ಯದವರೆಲ್ಲರೂ ದಾನಿಯೇಲನ ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕೆಂದು ಆಜ್ಞಾಪಿಸುತ್ತೇನೆ; ಆತನೇ ಜೀವಸ್ವರೂಪನಾದ ಸನಾತನ ದೇವರು, ಆತನ ರಾಜ್ಯವು ಎಂದಿಗೂ ಅಳಿಯದು, ಆತನ ಆಳ್ವಿಕೆಯು ಶಾಶ್ವತವಾಗಿರುವುದು; ಆತನು ಉದ್ಧರಿಸುವವನೂ, ರಕ್ಷಿಸುವವನೂ, ಭೂಮ್ಯಾಕಾಶಗಳಲ್ಲಿ ಅದ್ಭುತಮಹತ್ವಗಳನ್ನು ನಡೆಸುವವನೂ ಆಗಿದ್ದಾನೆ; ಆತನೇ ದಾನಿಯೇಲನನ್ನು ಸಿಂಹಗಳ ಬಾಯಿಂದ ತಪ್ಪಿಸಿದನು.”

ತರುವಾಯ ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು. ನಿಮ್ಮ ಪುತ್ರಪುತ್ರಿಯರು ಪ್ರವಾದಿಸುವರು. ನಿಮ್ಮ ಹಿರಿಯರಿಗೆ ಕನಸುಗಳು ಬೀಳುವವು. ನಿಮ್ಮ ಯೌವನಸ್ಥರಿಗೆ ದಿವ್ಯದರ್ಶನಗಳಾಗುವವು. ಇದಲ್ಲದೆ ಆ ದಿನಗಳಲ್ಲಿ ದಾಸದಾಸಿಯರ ಮೇಲೆಯೂ ನನ್ನ ಆತ್ಮವನ್ನು ಸುರಿಸುವೆನು. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಅದ್ಭುತಗಳನ್ನು ಮಾಡುವೆನು. ರಕ್ತ, ಬೆಂಕಿ, ಧೂಮಸ್ತಂಭ ಈ ಉತ್ಪಾತಗಳನ್ನು ಉಂಟುಮಾಡುವೆನು. ಯೆಹೋವನ ಮಹಾ ಭಯಂಕರವಾದ ದಿನವು ಬರುವುದಕ್ಕಿಂತ ಮೊದಲು, ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು.

ಬಳಿಕ ಯೇಸು ಗಲಿಲಾಯದಲ್ಲೆಲ್ಲಾ ಸಂಚರಿಸಿ ಅಲ್ಲಿಯವರ ಸಭಾಮಂದಿರಗಳಲ್ಲಿ ಉಪದೇಶ ಮಾಡುತ್ತಾ, ದೇವರ ರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಜನರ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು. ಆತನ ಸುದ್ದಿಯು ಸಿರಿಯಾದಲ್ಲೆಲ್ಲಾ ಹಬ್ಬಿದ್ದರಿಂದ ಅಸ್ವಸ್ಥರಾದವರನ್ನು, ಅಂದರೆ ನಾನಾ ರೀತಿಯ ರೋಗಗಳಿಂದ ಮತ್ತು ವೇದನೆಗಳಿಂದ ಕಷ್ಟಪಡುವವರನ್ನೂ, ದೆವ್ವಹಿಡಿದವರನ್ನೂ ಮೂರ್ಛಾರೋಗಿಗಳನ್ನೂ ಪಾರ್ಶ್ವವಾಯುವಿನವರನ್ನೂ ಆತನ ಬಳಿಗೆ ಕರತಂದರು; ಆತನು ಅವರನ್ನು ಸ್ವಸ್ಥಮಾಡಿದನು.

ಆಗ ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು ಆತನಿಗೆ ಅಡ್ಡಬಿದ್ದು, “ಕರ್ತನೇ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಅಂದನು. ಆತನು ಕೈಚಾಚಿ ಆತನನ್ನು ಮುಟ್ಟಿ, “ನನಗೆ ಮನಸ್ಸುಂಟು; ಶುದ್ಧನಾಗು” ಅಂದನು. ಕೂಡಲೆ ಅವನು ಕುಷ್ಠದಿಂದ ಶುದ್ಧನಾದನು.

ತರುವಾಯ ಯೇಸು ಪೇತ್ರನ ಮನೆಗೆ ಬಂದಾಗ, ಪೇತ್ರನ ಅತ್ತೆ ಜ್ವರದಲ್ಲಿ ಮಲಗಿರುವುದನ್ನು ಕಂಡು, ಆತನು ಆಕೆಯ ಕೈಯನ್ನು ಮುಟ್ಟಿದನು ತಕ್ಷಣವೇ ಜ್ವರವು ಆಕೆಯನ್ನು ಬಿಟ್ಟುಹೋಯಿತು; ಆಕೆ ಎದ್ದು ಆತನಿಗೆ ಉಪಚಾರಮಾಡಿದಳು.

ಸಂಜೆಯಾಗಲು ದೆವ್ವಹಿಡಿದ ಬಹಳ ಜನರನ್ನು ಆತನ ಬಳಿಗೆ ಕರೆತಂದರು; ಆತನು ಮಾತು ಮಾತ್ರದಿಂದಲೇ ದೆವ್ವಗಳನ್ನು ಬಿಡಿಸಿದ್ದಲ್ಲದೆ ಅಸ್ವಸ್ಥರಾದವರೆಲ್ಲರನ್ನು ವಾಸಿಮಾಡಿದನು. ಇದರಿಂದ “ನಮ್ಮ ಬೇನೆಗಳನ್ನು ತಾನೇ ತೆಗೆದುಕೊಂಡು ನಮ್ಮ ರೋಗಗಳನ್ನು ಹೊತ್ತುಕೊಂಡನು” ಎಂದು ಯೆಶಾಯನೆಂಬ ಪ್ರವಾದಿ ನುಡಿದಂತಹ ಮಾತು ಹೀಗೆ ನೆರವೇರಿತು.

ಅವರು ಹೋಗುತ್ತಿರುವಾಗ ಸಮುದ್ರವು ಅಲ್ಲೋಲಕಲ್ಲೋಲವಾಗಿ ದೋಣಿಯು ಅಲೆಗಳಿಂದ ಮುಚ್ಚುವಂತೆ ಆಯಿತು; ಆದರೆ ಯೇಸು ನಿದ್ರಿಸುತ್ತಿದ್ದನು. ಆಗ ಶಿಷ್ಯರು ಆತನ ಹತ್ತಿರ ಬಂದು ಆತನನ್ನು ಎಬ್ಬಿಸಿ, “ಕರ್ತನೇ, ನಮ್ಮನ್ನು ಕಾಪಾಡು, ಸಾಯುತ್ತಿದ್ದೇವೆ” ಎಂದರು. ಆತನು ಅವರಿಗೆ, “ಅಲ್ಪ ವಿಶ್ವಾಸಿಗಳೇ, ಏಕೆ ಹೆದರುತ್ತೀರಿ?” ಎಂದು ಹೇಳಿ, ಎದ್ದು ಗಾಳಿಯನ್ನೂ ಸಮುದ್ರವನ್ನೂ ಗದರಿಸಿದನು; ಆಗ ಅಲ್ಲಿ ಸಂಪೂರ್ಣವಾಗಿ ಶಾಂತವಾಯಿತು. ಆ ಜನರು ಬೆರಗಾಗಿ, “ಈತನು ಎಂಥವನಾಗಿರಬಹುದು! ಗಾಳಿಯೂ ಸಮುದ್ರವೂ ಸಹ ಈತನಿಗೆ ವಿಧೇಯವಾಗುತ್ತವಲ್ಲಾ” ಅಂದರು.

ಆಮೇಲೆ ಆತನು ಆಚೇದಡಕ್ಕೆ ಗದರೇನರ ಸೀಮೆಗೆ ಬಂದಾಗ ದೆವ್ವಹಿಡಿದವರಿಬ್ಬರು ಸಮಾಧಿಯ ಗವಿಗಳೊಳಗಿಂದ ಹೊರಟು ಆತನೆದುರಿಗೆ ಬಂದರು. ಅವರು ಮಹಾಕ್ರೂರಿಗಳಾಗಿದ್ದುದರಿಂದ ಆ ದಾರಿಯಲ್ಲಿ ಯಾರೂ ತಿರುಗಾಡುತ್ತಿರಲಿಲ್ಲ. ಅವರು, “ದೇವರ ಕುಮಾರನೇ, ನಮ್ಮ ಗೊಡವೆ ನಿನಗೇಕೆ? ಕಾಲ ಬರುವುದಕ್ಕಿಂತ ಮೊದಲೇ ನಮ್ಮನ್ನು ದಂಡಿಸುವುದಕ್ಕೆ ಇಲ್ಲಿಗೆ ಬಂದಿರುವೆಯಾ” ಎಂದು ಕೂಗಿದರು. ಅವರಿಂದ ಸ್ವಲ್ಪ ದೂರದಲ್ಲಿ ಬಹಳ ಹಂದಿಗಳ ಒಂದು ಹಿಂಡು ಮೇಯುತ್ತಿತ್ತು. ಆ ದೆವ್ವಗಳು, “ನೀನು ನಮ್ಮನ್ನು ಇವರೊಳಗಿಂದ ಹೊರಡಿಸುವುದಾದರೆ ಆ ಹಂದಿಯ ಗುಂಪಿನೊಳಗೆ ನಮ್ಮನ್ನು ಕಳುಹಿಸಿಕೊಡು” ಎಂದು ಬೇಡಿಕೊಂಡವು. ಆತನು ಅವುಗಳಿಗೆ, “ಹೋಗಿರಿ” ಅನ್ನಲು ಅವು ಹೊರಗೆ ಬಂದು ಹಂದಿಗಳೊಳಗೆ ಹೊಕ್ಕವು; ಅ ಕ್ಷಣವೇ ಆ ಗುಂಪೆಲ್ಲಾ ಓಡಿ ಕಡಿದಾದ ಸ್ಥಳದಿಂದ ಸಮುದ್ರದೊಳಗೆ ಬಿದ್ದು ನೀರಿನಲ್ಲಿ ಮುಳುಗಿ ಸತ್ತು ಹೋದವು. ಹಂದಿಗಳನ್ನು ಮೇಯಿಸುವವರು ಊರೊಳಕ್ಕೆ ಓಡಿಹೋಗಿ ಇದೆಲ್ಲವನ್ನು ದೆವ್ವಹಿಡಿದವರ ಸಂಗತಿ ಸಹಿತವಾಗಿ ತಿಳಿಸಲು; ಆಗ ಊರಿನವರೆಲ್ಲರೂ ಯೇಸುವನ್ನು ಸಂಧಿಸಲು ಹೊರಟುಬಂದು ಆತನನ್ನು ಕಂಡು ತಮ್ಮ ಸೀಮೆಯನ್ನು ಬಿಟ್ಟು ಹೋಗಬೇಕೆಂದು ಬೇಡಿಕೊಂಡರು.

ಅಲ್ಲಿಗೆ ಯೇಸು ಬಂದಾಗ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದ ಒಬ್ಬ ಪಾರ್ಶ್ವವಾಯು ರೋಗಿಯನ್ನು ಆತನ ಬಳಿಗೆ ಹೊತ್ತುಕೊಂಡು ಬಂದರು. ಯೇಸು ರೋಗಿಯನ್ನು ಹೊತ್ತುಕೊಂಡು ಬಂದವರ ನಂಬಿಕೆಯನ್ನು ನೋಡಿ ಪಾರ್ಶ್ವವಾಯು ರೋಗಿಗೆ, “ಮಗನೇ ಧೈರ್ಯವಾಗಿರು, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು. ಅಲ್ಲಿದ್ದ ಶಾಸ್ತ್ರಿಗಳಲ್ಲಿ ಕೆಲವರು, “ಇವನು ದೇವದೂಷಣೆ ಮಾಡುತ್ತಾನೆಂದು” ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಯೇಸು ಅವರ ಆಲೋಚನೆಗಳನ್ನು ತಿಳಿದು, “ನೀವು ಏಕೆ ನಿಮ್ಮ ಮನಸ್ಸಿನಲ್ಲಿ ದುರಾಲೋಚನೆಯನ್ನು ಮಾಡುತ್ತಿದ್ದೀರಿ? ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎಂದು ಅನ್ನುವುದೋ? ಅಥವಾ ‘ಎದ್ದು ನಡೆ’ ಅನ್ನುವದೋ? ಆದರೆ ಪಾಪಗಳನ್ನು ಕ್ಷಮಿಸಿಬಿಡುವುದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬುದು ನಿಮಗೆ ತಿಳಿಯಬೇಕು” ಎಂದು ಹೇಳಿ ಪಾರ್ಶ್ವವಾಯು ರೋಗಿಗೆ, “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು” ಅಂದನು. ಆಗ ಅವನು ಎದ್ದು ತನ್ನ ಮನೆಗೆ ಹೊರಟುಹೋದನು. ಜನರು ಇದನ್ನು ನೋಡಿ ಆಶ್ಚರ್ಯಚಕಿತರಾಗಿ, ಮನುಷ್ಯರಿಗೆ ಇಂಥ ಅಧಿಕಾರವನ್ನು ಕೊಟ್ಟ ದೇವರನ್ನು ಕೊಂಡಾಡಿದರು.

ಆಗ ಹನ್ನೆರಡು ವರ್ಷದಿಂದ ರಕ್ತಕುಸುಮ ರೋಗವಿದ್ದ ಒಬ್ಬ ಹೆಂಗಸು, “ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ಸ್ವಸ್ಥಳಾಗುವೆ ಎಂದು ಮನಸ್ಸಿನಲ್ಲಿ” ಅಂದುಕೊಂಡು ಹಿಂದಿನಿಂದ ಬಂದು ಯೇಸುವಿನ ಉಡುಪಿನ ಅಂಚನ್ನು ಮುಟ್ಟಿದಳು. ಆಗ ಯೇಸು ಹಿಂತಿರುಗಿ ಆಕೆಯನ್ನು ನೋಡಿ, “ಮಗಳೇ, ಧೈರ್ಯವಾಗಿರು; ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು” ಅಂದನು. ಆ ಕ್ಷಣವೇ ಆ ಹೆಂಗಸು ಸ್ವಸ್ಥಳಾದಳು.

ಯೇಸು ಆ ಅಧಿಕಾರಿಯ ಮನೆಗೆ ಬಂದಾಗ ಕೊಳಲು ಊದುವವರನ್ನೂ ಗದ್ದಲ ಮಾಡುವ ಜನರ ಗುಂಪನ್ನೂ ಕಂಡು ಅವರಿಗೆ, “ಹೊರಗೆ ಹೋಗಿರಿ; ಹುಡುಗಿ ಸತ್ತಿಲ್ಲ ನಿದ್ರಿಸುತ್ತಿದ್ದಾಳೆ” ಅಂದನು. ಅದಕ್ಕೆ ಅವರು ಆತನನ್ನು ಪರಿಹಾಸ್ಯ ಮಾಡಿದರು. ಜನರನ್ನು ಹೊರಕ್ಕೆ ಕಳುಹಿಸಿದ ಮೇಲೆ ಆತನು ಒಳಗೆ ಹೋಗಿ ಆಕೆಯ ಕೈ ಹಿಡಿಯಲು ಆಕೆ ಎದ್ದಳು. ಈ ಸುದ್ದಿ ಆ ದೇಶದೊಳಗೆಲ್ಲಾ ಹಬ್ಬಿತು.

ಯೇಸು ಅಲ್ಲಿಂದ ಹಾದುಹೋಗುತ್ತಿರುವಾಗ ಇಬ್ಬರು ಕುರುಡರು, “ದಾವೀದ ಕುಮಾರನೇ, ನಮ್ಮನ್ನು ಕರುಣಿಸು” ಎಂದು ಕೂಗುತ್ತಾ ಆತನನ್ನು ಹಿಂಬಾಲಿಸಿದರು. ಯೇಸು ಮನೆಗೆ ಬಂದಾಗ ಆ ಕುರುಡರು ಆತನ ಬಳಿಗೆ ಬಂದರು. ಯೇಸು ಅವರನ್ನು, “ನಾನು ಇದನ್ನು ಮಾಡಬಲ್ಲೆನೆಂಬುದನ್ನು ನೀವು ನಂಬುತ್ತೀರೋ” ಎಂದು ಕೇಳಿದ್ದಕ್ಕೆ, ಅವರು “ಹೌದು, ಕರ್ತನೇ, ನಂಬುತ್ತೇವೆ” ಅಂದರು. ಆಗ ಆತನು ಅವರ ಕಣ್ಣುಗಳನ್ನು ಮುಟ್ಟಿ, “ನಿಮ್ಮ ನಂಬಿಕೆಯಂತೆ ನಿಮಗೆ ಆಗಲಿ” ಅಂದನು. ಆಗ ಅವರ ಕಣ್ಣುಗಳು ತೆರೆಯಲ್ಪಟ್ಟವು. ನಂತರ ಯೇಸು ಅವರಿಗೆ, “ಇದು ಯಾರಿಗೂ ತಿಳಿಯದಂತೆ ನೋಡಿಕೊಳ್ಳಿರಿ” ಎಂದು ಕಟ್ಟುನಿಟ್ಟಾಗಿ ಆದೇಶಿಸಿದನು. ಆದರೆ ಅವರು ಹೊರಟುಹೋಗಿ ಆ ದೇಶದೊಳಗೆಲ್ಲಾ ಆತನ ಸುದ್ದಿಯನ್ನು ಹಬ್ಬಿಸಿದರು.

ಅವರು ಹೊರಟುಹೋಗುತ್ತಿರುವಾಗ ದೆವ್ವಹಿಡಿದ ಒಬ್ಬ ಮೂಕನನ್ನು ಯೇಸುವಿನ ಬಳಿಗೆ ಕರೆತಂದರು. ದೆವ್ವ ಬಿಡಿಸಿದ ಮೇಲೆ ಮೂಕನಾಗಿದ್ದ ಅವನು ಮಾತನಾಡುವವನಾದನು. ಅದಕ್ಕೆ ಜನರು, “ಇಸ್ರಾಯೇಲಿನಲ್ಲಿ ಇಂಥ ಕಾರ್ಯವನ್ನು ಇದುವರೆಗೂ ಯಾರೂ ನೋಡಲಿಲ್ಲವೆಂದು” ಆಶ್ಚರ್ಯಚಕಿತರಾದರು.

ತರುವಾಯ ಯೇಸು ಎಲ್ಲಾ ಪಟ್ಟಣಗಳಲ್ಲೂ ಹಳ್ಳಿಗಳಲ್ಲೂ ಸಂಚರಿಸುತ್ತಾ ಅವರ ಸಭಾಮಂದಿರಗಳಲ್ಲಿ ಉಪದೇಶಮಾಡುತ್ತಾ ರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು.

ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ ದೆವ್ವಗಳನ್ನು ಬಿಡಿಸುವುದಕ್ಕೂ ಎಲ್ಲಾ ಬಗೆಯ ರೋಗಗಳನ್ನೂ ಎಲ್ಲಾ ರೀತಿಯ ಬೇನೆಗಳನ್ನೂ ವಾಸಿಮಾಡುವುದಕ್ಕೂ ಅಧಿಕಾರ ಕೊಟ್ಟನು.

ರೋಗಿಗಳನ್ನು ಸ್ವಸ್ಥಮಾಡಿರಿ, ಸತ್ತವರನ್ನು ಬದುಕಿಸಿರಿ, ಕುಷ್ಠರೋಗಿಗಳನ್ನು ಶುದ್ಧಮಾಡಿರಿ, ದೆವ್ವಗಳನ್ನು ಬಿಡಿಸಿರಿ; ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ.

ಕುರುಡರು ನೋಡುತ್ತಿದ್ದಾರೆ, ಕುಂಟರು ನಡೆಯುತ್ತಿದ್ದಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಿದ್ದಾರೆ, ಕಿವುಡರು ಕೇಳುತ್ತಿದ್ದಾರೆ, ಸತ್ತವರು ಜೀವದಿಂದ ಎಬ್ಬಿಸಲ್ಪಡುತ್ತಿದ್ದಾರೆ, ಮತ್ತು ಬಡವರಿಗೆ ಸುವಾರ್ತೆಯು ಸಾರಲ್ಪಡುತ್ತಿದ್ದೆ.

ಆಗ ಅಲ್ಲಿ ಕೈಬತ್ತಿದವನೊಬ್ಬನಿದ್ದನು. ಫರಿಸಾಯರು ಯೇಸುವಿನ ಮೇಲೆ ತಪ್ಪು ಹೊರಿಸಬೇಕೆಂದು ಆತನನ್ನು, “ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ನ್ಯಾಯವೋ?” ಎಂದು ಕೇಳಿದರು. ಅದಕ್ಕಾತನು, “ನಿಮ್ಮಲ್ಲಿ ಯಾರಿಗಾದರೂ ಒಂದೇ ಒಂದು ಕುರಿ ಇದ್ದು ಅದು ಸಬ್ಬತ್ ದಿನದಲ್ಲಿ ಗುಂಡಿಯೊಳಗೆ ಬಿದ್ದರೆ ಅವನು ಅದನ್ನು ಹಿಡಿದು ಮೇಲಕ್ಕೆ ಎತ್ತದೇ ಇರುವನೇ? ಕುರಿಗಿಂತ ಮನುಷ್ಯನು ಎಷ್ಟೋ ಮೌಲ್ಯವುಳ್ಳವನು. ಆದಕಾರಣ ಸಬ್ಬತ್ ದಿನದಲ್ಲಿ ಒಳ್ಳೆಯ ಕೆಲಸ ಮಾಡುವುದು ನ್ಯಾಯವಾದದ್ದೆ” ಎಂದು ಉತ್ತರ ಕೊಟ್ಟನು. ತರುವಾಯ ಯೇಸು ಆ ಮನುಷ್ಯನಿಗೆ “ನಿನ್ನ ಕೈ ಚಾಚು” ಎಂದು ಹೇಳಿದನು. ಅವನು ಚಾಚಿದನು. ಅದು ಸಂಪೂರ್ಣವಾಸಿಯಾಗಿ ಮತ್ತೊಂದು ಕೈಯಂತಾಯಿತು.

ಯೇಸು ಅದನ್ನು ತಿಳಿದು ಅಲ್ಲಿಂದ ಹೊರಟು ಹೋದನು.

ದೆವ್ವ ಹಿಡಿದ ಕುರುಡನೂ, ಮೂಕನೂ ಆಗಿರುವ ಒಬ್ಬನನ್ನು ಯೇಸುವಿನ ಬಳಿಗೆ ಕರೆತಂದರು. ಆತನು ಅವನನ್ನು ಸ್ವಸ್ಥಮಾಡಲು ಆ ಮೂಕನಿಗೆ ಮಾತು ಹಾಗೂ ದೃಷ್ಟಿ ಎರಡೂ ಬಂದವು. ಅದಕ್ಕೆ ಜನರೆಲ್ಲರೂ ಬೆರಗಾಗಿ, “ಈತನು ದಾವೀದನ ಕುಮಾರನೇ ಇರಬಹುದೇನೋ” ಎಂದು ಮಾತನಾಡಿಕೊಳ್ಳುತ್ತಿದ್ದರು.

ನಾನು ದೇವರ ಆತ್ಮನ ಬಲದಿಂದಲೇ ದೆವ್ವಗಳನ್ನು ಬಿಡಿಸುವುದಾದರೆ ದೇವರ ರಾಜ್ಯವು ನಿಮ್ಮ ಹತ್ತಿರಕ್ಕೆ ಬಂದಿತಲ್ಲಾ?

ಅವರ ಅಪನಂಬಿಕೆಯ ನಿಮಿತ್ತ ಆತನು ಅಲ್ಲಿ ಹೆಚ್ಚು ಮಹತ್ಕಾರ್ಯಗಳನ್ನು ಮಾಡಲಿಲ್ಲ.

ಆತನು ಅವರಿಗಿಂತ ಮುಂದಾಗಿ ಬಂದು ಬಹು ಜನರ ಗುಂಪನ್ನು ಕಂಡು ಅವರ ಮೇಲೆ ಕನಿಕರಪಟ್ಟು ಅವರಲ್ಲಿದ್ದ ರೋಗಿಗಳನ್ನು ಸ್ವಸ್ಥಮಾಡಿದನು.

ಸಂಜೆಯಾದಾಗ ಶಿಷ್ಯರು ಆತನ ಬಳಿಗೆ ಬಂದು, “ಇದು ಅಡವಿಯ ಸ್ಥಳ ಈಗ ಹೊತ್ತು ಮುಳುಗಿಹೋಯಿತು. ಅವರು ಹಳ್ಳಿಗಳಿಗೆ ಹೋಗಿ ತಮಗಾಗಿ ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳುವಂತೆ ಕಳುಹಿಸಿಕೊಡು” ಎಂದು ಹೇಳಿದರು. ಆದರೆ ಯೇಸು, “ಅವರು ಹೋಗುವ ಅಗತ್ಯವಿಲ್ಲ. ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿರಿ” ಅಂದನು. ಅದಕ್ಕವರು, “ಇಲ್ಲಿ ಐದು ರೊಟ್ಟಿ ಎರಡು ಮೀನು ಮಾತ್ರ ಇವೆ” ಅನ್ನಲಾಗಿ, ಆತನು, “ಅವುಗಳನ್ನು ನನಗೆ ತಂದು ಕೊಡಿರಿ” ಅಂದನು. ತರುವಾಯ ಜನರ ಗುಂಪಿಗೆ ಹುಲ್ಲಿನ ಮೇಲೆ ಕುಳಿತುಕೊಳ್ಳುವುದಕ್ಕೆ ಹೇಳಿ ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ದೇವರಿಗೆ ಸ್ತೋತ್ರ ಮಾಡಿ ರೊಟ್ಟಿಗಳನ್ನು ಮುರಿದು ಶಿಷ್ಯರಿಗೆ ಕೊಟ್ಟನು. ಶಿಷ್ಯರು ಜನರಿಗೆ ಕೊಟ್ಟರು. ಅವರೆಲ್ಲರೂ ಊಟಮಾಡಿ ತೃಪ್ತರಾದರು. ಉಳಿದ ತುಂಡುಗಳನ್ನು ಕೂಡಿಸಲಾಗಿ ಹನ್ನೆರಡು ಪುಟ್ಟಿ ತುಂಬಿತು. ಊಟಮಾಡಿದವರು ಹೆಂಗಸರೂ ಮಕ್ಕಳನ್ನು ಬಿಟ್ಟು ಗಂಡಸರೇ ಸುಮಾರು ಐದು ಸಾವಿರವಿದ್ದರು.

ರಾತ್ರಿಯ ನಾಲ್ಕನೆಯ ಜಾವದಲ್ಲಿ ಯೇಸು ಸಮುದ್ರದ ಮೇಲೆ ನಡೆಯುತ್ತಾ ಅವರ ಕಡೆಗೆ ಬಂದನು. ಸಮುದ್ರದ ಮೇಲೆ ನಡೆಯುವ ಆತನನ್ನು ನೋಡಿದ ಶಿಷ್ಯರು “ಭೂತವೆಂದು” ದಿಗಿಲುಬಿದ್ದು ಭಯದಿಂದ ಕೂಗಿದರು. ಕೂಡಲೆ ಯೇಸು ಮಾತನಾಡಿ ಅವರಿಗೆ, “ಧೈರ್ಯವಾಗಿರಿ ನಾನೇ ಭಯಪಡಬೇಡಿರಿ” ಎಂದು ಹೇಳಿದನು.

ಅದಕ್ಕೆ ಪೇತ್ರನು, “ಕರ್ತನೇ ನೀನೇ ಆದರೆ ನಾನು ನೀರಿನ ಮೇಲೆ ನಡೆದು ನಿನ್ನ ಬಳಿಗೆ ಬರುವುದಕ್ಕೆ ಅಪ್ಪಣೆ ಕೊಡು” ಅನ್ನಲು, ಆತನು, “ಬಾ” ಅಂದನು. ಆಗ ಪೇತ್ರನು ಯೇಸುವಿನ ಬಳಿಗೆ ಹೋಗುವುದಕ್ಕೆ ದೋಣಿಯಿಂದ ಇಳಿದು ನೀರಿನ ಮೇಲೆ ನಡೆದನು. ಆದರೆ ಅವನು ಗಾಳಿಯನ್ನು ನೋಡಿದಾಗ ಭಯಪಟ್ಟು ಮುಳುಗಲಾರಂಭಿಸಿದಾಗ, “ಕರ್ತನೇ, ನನ್ನನ್ನು ಕಾಪಾಡು” ಎಂದು ಕೂಗಿಕೊಂಡನು. ತಕ್ಷಣವೇ ಯೇಸು ಕೈಚಾಚಿ ಅವನನ್ನು ಹಿಡಿದು, “ಅಲ್ಪ ವಿಶ್ವಾಸಿಯೇ ಏಕೆ ಸಂದೇಹ ಪಟ್ಟೆ” ಎಂದು ಹೇಳಿದನು. ತರುವಾಯ ಅವರು ದೋಣಿಯನ್ನು ಹತ್ತಿದ ಮೇಲೆ ಗಾಳಿ ನಿಂತು ಹೋಯಿತು. ಆಗ ದೋಣಿಯಲ್ಲಿದ್ದ ಶಿಷ್ಯರು “ನಿಜವಾಗಿ ನೀನು ದೇವಕುಮಾರನು” ಎಂದು ಹೇಳಿ ಆತನನ್ನು ಆರಾಧಿಸಿದರು.

ಆ ಸ್ಥಳದ ಜನರು ಆತನ ಗುರುತನ್ನು ಹಿಡಿದು ಆ ಸುತ್ತಲಿನ ಸೀಮೆಗೆಲ್ಲಾ ಹೇಳಿ ಕಳುಹಿಸಿದರು ಮತ್ತು ಅವರು ಅಸ್ವಸ್ಥರಾದವರೆಲ್ಲರನ್ನು ಆತನ ಬಳಿಗೆ ಕರೆತಂದರು. ಅವರು ಆತನನ್ನು ನಿನ್ನ ಉಡುಪಿನ ಅಂಚನ್ನಾದರೂ ಮುಟ್ಟಗೊಡಿಸಬೇಕೆಂದು ಬೇಡಿಕೊಂಡರು, ಮತ್ತು ಮುಟ್ಟಿದವರೆಲ್ಲರು ಸ್ವಸ್ಥರಾದರು.

ಆ ಸೀಮೆಯಿಂದ ಕಾನಾನ್ಯಳಾದ ಸ್ತ್ರೀಯೊಬ್ಬಳು ಹೊರಟು ಬಂದು, “ಕರ್ತನೇ, ದಾವೀದನ ಕುಮಾರನೇ, ನನ್ನ ಮೇಲೆ ಕರುಣೆಯಿಡು, ನನ್ನ ಮಗಳಿಗೆ ದೆವ್ವಹಿಡಿದು ಬಹಳ ಯಾತನೆಪಡುತ್ತಿದ್ದಾಳೆ” ಎಂದು ಕೂಗಿಕೊಂಡಳು. ಆದರೆ ಆತನು ಆಕೆಗೆ ಏನೂ ಉತ್ತರ ಕೊಡಲಿಲ್ಲ. ಆಗ ಆತನ ಶಿಷ್ಯರು ಬಂದು, “ಅವಳು ನಮ್ಮ ಹಿಂದೆ ಕೂಗಿಕೊಂಡು ಬರುತ್ತಿದ್ದಾಳೆ. ಆಕೆಯನ್ನು ಕಳುಹಿಸಿಬಿಡು” ಎಂದು ಆತನನ್ನು ಬೇಡಿಕೊಂಡರು. ಆದರೆ ಯೇಸು ಹೇಳಿದ್ದೇನೆಂದರೆ “ಕಳೆದುಹೋದ ಕುರಿಗಳಂತಿರುವ ಇಸ್ರಾಯೇಲ್ ಮನೆತನದವರ ಬಳಿಗೇ ಹೊರತು ಮತ್ತಾರ ಬಳಿಗೂ ನಾನು ಕಳುಹಿಸಲ್ಪಟ್ಟವನಲ್ಲ” ಅಂದನು. ಆಗ ಆಕೆ ಬಂದು ಆತನ ಮುಂದೆ ಅಡ್ಡ ಬಿದ್ದು, “ಕರ್ತನೇ ನನಗೆ ಸಹಾಯಮಾಡು” ಅಂದಳು. ಅದಕ್ಕಾತನು, “ಮಕ್ಕಳ ರೊಟ್ಟಿಯನ್ನು ತೆಗೆದುಕೊಂಡು ನಾಯಿಮರಿಗಳಿಗೆ ಹಾಕುವುದು ಸರಿಯಲ್ಲ” ಎಂದು ಉತ್ತರಕೊಟ್ಟನು. ಆಕೆಯು, “ಹೌದು, ಕರ್ತನೇ, ಆದರೆ ನಾಯಿಮರಿಗಳಂತೂ ತಮ್ಮ ಯಜಮಾನನ ಮೇಜಿನಿಂದ ಬೀಳುವ ರೊಟ್ಟಿಯ ತುಂಡುಗಳನ್ನು ತಿನ್ನುತ್ತವಲ್ಲಾ” ಅಂದಳು. ಆಗ ಯೇಸು ಆಕೆಗೆ, “ಸ್ತ್ರೀಯೇ ನಿನ್ನ ನಂಬಿಕೆ ದೊಡ್ಡದು. ನಿನ್ನ ಇಷ್ಟದಂತೆಯೇ ನಿನಗಾಗಲಿ” ಎಂದು ಉತ್ತರಕೊಟ್ಟನು. ಅದೇ ಗಳಿಗೆಯಲ್ಲಿ ಆಕೆಯ ಮಗಳು ಸ್ವಸ್ಥವಾದಳು.

ಆಗ ಜನರು ದೊಡ್ಡ ಗುಂಪುಗಳಾಗಿ ಆತನ ಬಳಿಗೆ ಬಂದುದಲ್ಲದೆ ಕುಂಟರು, ಕುರುಡರು, ಮೂಕರು, ಕೈಕಾಲಿಲ್ಲದವರು ಈ ಮುಂತಾದ ಅನೇಕರನ್ನು ತಮ್ಮೊಂದಿಗೆ ಕರೆತಂದು ಅವರನ್ನು ಆತನ ಪಾದಗಳ ಬಳಿಯಲ್ಲಿ ಬಿಟ್ಟರು. ಆತನು ಅವರನ್ನು ಸ್ವಸ್ಥಮಾಡಿದನು. ಮೂಕರಾಗಿದ್ದವರು ಮಾತನಾಡುವುದನ್ನೂ ಕೈಕಾಲಿಲ್ಲದವರು ಸ್ವಸ್ಥವಾದದ್ದನ್ನೂ, ಕುಂಟರು ನಡೆದಾಡುವುದನ್ನೂ, ಕುರುಡರು ನೋಡುವುದನ್ನೂ ಜನರು ಕಂಡು ಆಶ್ಚರ್ಯಪಟ್ಟು ಇಸ್ರಾಯೇಲ್ಯರ ದೇವರನ್ನು ಕೊಂಡಾಡಿದರು.

ಆಗ ಯೇಸು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ, “ನಾನು ಈ ಜನರನ್ನು ನೋಡಿ ಕನಿಕರಪಡುತ್ತೇನೆ. ಏಕೆಂದರೆ ಅವರು ಮೂರು ದಿನಗಳಿಂದಲೂ ನನ್ನ ಜೊತೆಯಲ್ಲಿದ್ದಾರೆ. ಅವರಿಗೆ ತಿನ್ನುವುದಕ್ಕೆ ಏನೂ ಇಲ್ಲ. ಅವರನ್ನು ಹಸಿವಿನಿಂದ ಕಳುಹಿಸಿಬಿಡುವುದಕ್ಕೆ ನನಗೆ ಇಷ್ಟವಿಲ್ಲ. ಅವರು ದಾರಿಯಲ್ಲಿ ಬಳಲಿ ಹೋದಾರು” ಎಂದು ಹೇಳಿದನು. ಶಿಷ್ಯರು ಆತನಿಗೆ, “ಇಷ್ಟು ದೊಡ್ಡ ಜನರ ಗುಂಪನ್ನು ತೃಪ್ತಿಪಡಿಸಲಾಗುವಷ್ಟು ರೊಟ್ಟಿಯು ಈ ಅಡವಿಯಲ್ಲಿ ನಮಗೆ ಎಲ್ಲಿಂದ ಸಿಕ್ಕೀತು?” ಎಂದು ಹೇಳಿದರು. ಅದಕ್ಕೆ ಯೇಸು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಿದ್ದಕ್ಕೆ ಅವರು, “ಏಳು ರೊಟ್ಟಿಗಳಿವೆ ಮತ್ತು ಕೆಲವು ಸಣ್ಣ ಮೀನುಗಳು ಅವೆ” ಅಂದರು. ಆಗ ಆತನು ಜನರ ಗುಂಪಿಗೆ, ನೆಲದ ಮೇಲೆ ಕುಳಿತುಕೊಳ್ಳಿರಿ ಎಂದು ಅಪ್ಪಣೆ ಕೊಟ್ಟನು. ಆತನು ಆ ಏಳು ರೊಟ್ಟಿಗಳನ್ನೂ ಆ ಮೀನುಗಳನ್ನೂ ತೆಗೆದುಕೊಂಡು ದೇವರಿಗೆ ಸ್ತೋತ್ರ ಮಾಡಿ ಅವುಗಳನ್ನು ಮುರಿದು ಶಿಷ್ಯರಿಗೆ ಕೊಟ್ಟನು. ಶಿಷ್ಯರು ಜನರಿಗೆ ಹಂಚಿಕೊಟ್ಟರು. ಆ ಜನರೆಲ್ಲರೂ ಊಟಮಾಡಿ ತೃಪ್ತರಾದರು. ಉಳಿದ ತುಂಡುಗಳನ್ನು ಕೂಡಿಸಲಾಗಿ ಏಳು ಪುಟ್ಟಿಗಳು ತುಂಬಿದವು. ಊಟಮಾಡಿದವರು ಹೆಂಗಸರು ಮಕ್ಕಳು ಅಲ್ಲದೆ ಗಂಡಸರೇ ನಾಲ್ಕು ಸಾವಿರವಿದ್ದರು.

ಅಲ್ಲಿ ಆತನು ಅವರ ಮುಂದೆ ರೂಪಾಂತರಗೊಂಡನು. ಆತನ ಮುಖವು ಸೂರ್ಯನ ಹಾಗೆ ಪ್ರಕಾಶಿಸಿತು. ಆತನ ವಸ್ತ್ರಗಳು ಬೆಳಕಿನಂತೆ ಬೆಳ್ಳಗಾದವು.

ಅವರು ಜನರ ಗುಂಪಿನ ಬಳಿಗೆ ಬಂದಾಗ ಒಬ್ಬನು ಆತನ ಹತ್ತಿರಕ್ಕೆ ಬಂದು ಆತನ ಮುಂದೆ ಮೊಣಕಾಲೂರಿ, “ಕರ್ತನೇ ನನ್ನ ಮಗನನ್ನು ಕರುಣಿಸು, ಅವನು ಮೂರ್ಛೆರೋಗದಿಂದ ಬಹಳ ಕಷ್ಟಪಡುತ್ತಿದ್ದಾನೆ. ಅನೇಕ ಬಾರಿ ಬೆಂಕಿಯಲ್ಲಿಯೂ, ನೀರಿನಲ್ಲಿಯೂ ಬೀಳುತ್ತಾನೆ. ಅವನನ್ನು ನಿನ್ನ ಶಿಷ್ಯರ ಬಳಿಗೆ ಕರತಂದಿದ್ದೆನು. ಆದರೆ ಗುಣಪಡಿಸುವುದಕ್ಕೆ ಅವರಿಂದ ಆಗಲಿಲ್ಲ” ಅಂದನು. ಅದಕ್ಕೆ ಯೇಸು, “ಎಲಾ ಅಪನಂಬಿಕೆಯುಳ್ಳ ವಕ್ರಬುದ್ಧಿಯುಳ್ಳ ಸಂತಾನವೇ, ನಾನು ಇನ್ನೆಷ್ಟು ಕಾಲ ನಿಮ್ಮ ಸಂಗಡ ಇರಲಿ? ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ? ಅವನನ್ನು ಇಲ್ಲಿ ನನ್ನ ಬಳಿಗೆ ಕರತನ್ನಿರಿ” ಅಂದನು. ಯೇಸು ಅವನ ಮೇಲಿದ್ದ ದೆವ್ವವನ್ನು ಗದರಿಸಲು ಆ ದೆವ್ವವು ಅವನನ್ನು ಬಿಟ್ಟುಹೋಯಿತು. ಆ ಕ್ಷಣವೇ ಆ ಹುಡುಗನಿಗೆ ಸ್ವಸ್ಥವಾಯಿತು.

ತರುವಾಯ ಶಿಷ್ಯರು ಏಕಾಂತವಾಗಿ ಯೇಸುವಿನ ಬಳಿಗೆ ಬಂದು, “ಅದನ್ನು ಬಿಡಿಸಲಿಕ್ಕೆ ನಮ್ಮಿಂದ ಏಕೆ ಆಗಲಿಲ್ಲವೆಂದು ಕೇಳಿದರು?” ಆತನು ಅವರಿಗೆ, “ನಿಮ್ಮ ಅಪನಂಬಿಕೆಯಿಂದಲೇ ಆಗಲಿಲ್ಲ.ಸಾಸಿವೇ ಕಾಳಿನಷ್ಟು ನಂಬಿಕೆ ನಿಮಗೆ ಇರುವುದಾದರೆ,

ಆದರೂ ನಾವು ಅವರಿಗೆ ಅಡ್ಡಿಯಾಗದಂತೆ, ನೀನು ಸಮುದ್ರಕ್ಕೆ ಹೋಗಿ ಗಾಳವನ್ನು ಹಾಕಿ ಮೊದಲು ಸಿಕ್ಕುವ ಮೀನನ್ನು ಹಿಡಿದು, ಅದರ ಬಾಯಿ ತೆರೆದು ನೋಡು ಅದರಲ್ಲಿ ಒಂದುಬೆಳ್ಳಿ ನಾಣ್ಯ ಸಿಕ್ಕುವುದು. ಅದನ್ನು ತೆಗೆದುಕೊಂಡು ನನಗೋಸ್ಕರ ಮತ್ತು ನಿನಗೋಸ್ಕರ ತೆರಿಗೆ ಹಣ ಕೊಡು” ಎಂದು ಹೇಳಿದನು.

“ಭೂಲೋಕದಲ್ಲಿ ನೀವು ಏನೇನು ಕಟ್ಟುತ್ತೀರೋ ಅದು ಪರಲೋಕದಲ್ಲಿಯೂ ಕಟ್ಟಲ್ಪಡುವುದು. ಮತ್ತು ಭೂಲೋಕದಲ್ಲಿ ಏನೇನು ಬಿಚ್ಚುತ್ತೀರೋ ಅದು ಪರಲೋಕದಲ್ಲಿಯೂ ಬಿಚ್ಚಲ್ಪಡುವುದು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಇದಲ್ಲದೆ ನಿಮ್ಮಲ್ಲಿ ಇಬ್ಬರು ಬೇಡಿಕೊಳ್ಳತಕ್ಕ ಯಾವುದಾದರು ಒಂದು ವಿಷಯವಾಗಿ ಭೂಲೋಕದಲ್ಲಿ ಒಂದೇ ಮನಸ್ಸುಳ್ಳವರಾಗಿದ್ದರೆ ಅದು ಪರಲೋಕದಲ್ಲಿರುವ ನನ್ನ ತಂದೆಯಿಂದ ಅವರಿಗೆ ಆಗುವುದೆಂದು ನಿಮಗೆ ಹೇಳುತ್ತೇನೆ. ಏಕೆಂದರೆ ಇಬ್ಬರಾಗಲೀ ಮೂವರಾಗಲೀ ನನ್ನ ಹೆಸರಿನಲ್ಲಿ ಎಲ್ಲಿ ಕೂಡಿ ಬರುತ್ತಾರೋ ಅಲ್ಲಿ ಅವರ ಮಧ್ಯದಲ್ಲಿ ನಾನು ಇದ್ದೇನೆ” ಅಂದನು.

ಯೇಸು ಅವರನ್ನು ದೃಷ್ಟಿಸಿ ನೋಡಿ “ಇದು ಮನುಷ್ಯರಿಂದ ಅಸಾಧ್ಯ. ಆದರೆ ದೇವರಿಗೆ ಎಲ್ಲವು ಸಾಧ್ಯವೇ” ಅಂದನು.

ಆಗ ದಾರಿಯ ಮಗ್ಗುಲಲ್ಲಿ ಕುಳಿತಿದ್ದ ಕುರುಡರಿಬ್ಬರು ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾನೆಂದು ಕೇಳಿ, “ಕರ್ತನೇ, ದಾವೀದ ಕುಮಾರನೇ ನಮ್ಮನ್ನು ಕರುಣಿಸು” ಎಂದು ಕೂಗಿಕೊಂಡರು. ಆದರೆ ಆ ಗುಂಪಿನವರು, ಸುಮ್ಮನಿರಿ ಎಂದು ಅವರನ್ನು ಗದರಿಸಿದರು. ಅವರಾದರೋ, “ಕರ್ತನೇ, ದಾವೀದ ಕುಮಾರನೇ, ನಮ್ಮನ್ನು ಕರುಣಿಸು” ಎಂದು ಗಟ್ಟಿಯಾಗಿ ಕೂಗಿಕೊಂಡರು. ಆಗ ಯೇಸು ನಿಂತು ಅವರನ್ನು ಕರೆದು, “ನಾನು ನಿಮಗೆ ಏನು ಮಾಡಬೇಕೆಂದು ಕೋರುತ್ತೀರಿ?” ಎಂದು ಕೇಳಿದನು. ಅವರು, “ಕರ್ತನೇ, ನಮ್ಮ ಕಣ್ಣುಗಳು ಕಾಣುವಂತೆ ಮಾಡು” ಅಂದರು. ಆಗ ಯೇಸು ಕನಿಕರಪಟ್ಟು, ಅವರ ಕಣ್ಣುಗಳನ್ನು ಮುಟ್ಟಿದನು. ಕೂಡಲೇ ಅವರು ದೃಷ್ಟಿಯನ್ನು ಹೊಂದಿಕೊಂಡು ಆತನನ್ನು ಹಿಂಬಾಲಿಸಿದರು.

ಆಗ ಅಲ್ಲಿದ್ದ ಕುರುಡರೂ ಕುಂಟರೂ ದೇವಾಲಯದಲ್ಲಿ ಆತನ ಬಳಿಗೆ ಬರಲು ಆತನು ಅವರನ್ನು ಸ್ವಸ್ಥಮಾಡಿದನು.

ದಾರಿಯಲ್ಲಿ ಒಂದು ಅಂಜೂರದ ಮರವನ್ನು ಕಂಡು ಅದರ ಹತ್ತಿರಕ್ಕೆ ಹೋಗಿ ಅದರಲ್ಲಿ ಬರೀ ಎಲೆಗಳು ಮಾತ್ರ ಇರುವುದನ್ನು ಕಂಡು ಅದಕ್ಕೆ, “ಇನ್ನು ಮೇಲೆ ನಿನ್ನಲ್ಲಿ ಎಂದೆಂದಿಗೂ ಫಲವು ಫಲಿಸದೆ ಹೋಗಲಿ” ಎಂದು ಹೇಳಿದನು. ಆ ಕ್ಷಣವೇ ಆ ಅಂಜೂರದ ಮರವು ಒಣಗಿಹೋಯಿತು. ಶಿಷ್ಯರು ಅದನ್ನು ನೋಡಿ ಬೆರಗಾಗಿ, “ಈ ಅಂಜೂರದ ಮರವು ಒಂದು ಕ್ಷಣದಲ್ಲೇ ಒಣಗಿಹೋಯಿತಲ್ಲಾ” ಎಂದು ಆಶ್ಚರ್ಯಗೊಂಡರು. ಅದಕ್ಕೆ ಯೇಸು, “ನಿಮಗೆ ಸತ್ಯವಾಗಿ ಹೇಳುತ್ತೇನೆ ನೀವು ಸಂಶಯಪಡದೆ ನಂಬಿದರೆ ಈ ಅಂಜೂರದ ಮರಕ್ಕೆ ಮಾಡಿದಂಥದನ್ನು ನೀವು ಮಾಡುವಿರಿ ಮಾತ್ರವಲ್ಲದೆ ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು’ ಎಂದು ಹೇಳಿದರೆ ಅದೂ ಆಗುವುದು. ನೀವು ನಂಬಿಕೊಂಡು ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುವಿರೋ ಅದನ್ನೆಲ್ಲಾ ಹೊಂದುವಿರಿ” ಅಂದನು.

ಇಗೋ, ಮಹಾ ಭೂಕಂಪವುಂಟಾಯಿತು, ಕರ್ತನ ದೂತನು ಆಕಾಶದಿಂದ ಇಳಿದು ಬಂದು ಆ ಕಲ್ಲನ್ನು ಬಾಗಿಲಿನಿಂದ ಉರುಳಿಸಿ ಅದರ ಮೇಲೆ ಕುಳಿತುಕೊಂಡಿದ್ದನು.

ಆತನು ಇಲ್ಲಿ ಇಲ್ಲ, ತಾನು ಹೇಳಿದಂತೆಯೇ ಎದ್ದಿದ್ದಾನೆ. ಬನ್ನಿ, ಕರ್ತನು ಮಲಗಿದ್ದ ಸ್ಥಳವನ್ನು ನೋಡಿರಿ; ಮತ್ತು ಬೇಗ ಹೋಗಿ ಆತನ ಶಿಷ್ಯರಿಗೆ, ‘ಆತನು ಸತ್ತವರೊಳಗಿಂದ ಎದ್ದಿದ್ದಾನೆಂದು, ಆತನು ನಿಮಗಿಂತಲೂ ಮೊದಲೇ ಗಲಿಲಾಯಕ್ಕೆ ಹೋಗುತ್ತಾನೆ, ಅಲ್ಲಿ ಆತನನ್ನು ಕಾಣುವಿರಿ’ ಎಂದು ತಿಳಿಸಿರಿ; ನೋಡಿರಿ, ನಾನು ನಿಮಗೆ ಹೇಳಿದ್ದೇನೆ,” ಎಂದು ಹೇಳಿದನು.

ಯೇಸು ಅವರ ಹತ್ತಿರಕ್ಕೆ ಬಂದು, “ಪರಲೋಕದಲ್ಲಿಯೂ, ಭೂಲೋಕದಲ್ಲಿಯೂ ಇರುವ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ.

ಆಗ ಅವರ ಸಭಾಮಂದಿರದಲ್ಲಿ ದೆವ್ವಹಿಡಿದ ಒಬ್ಬ ಮನುಷ್ಯನಿದ್ದನು. ಆ ದೆವ್ವವು, “ನಜರೇತಿನ ಯೇಸುವೇ, ನಮ್ಮ ಗೊಡವೆ ನಿನಗೇಕೆ? ನೀನು ನಮ್ಮನ್ನು ನಾಶಮಾಡುವುದಕ್ಕೆ ಬಂದೆಯಾ? ನೀನು ಯಾರೆಂದು ನಾನು ಬಲ್ಲೆನು. ನೀನು ದೇವರಿಂದ ಬಂದ ಪರಿಶುದ್ಧನು” ಎಂದು ಕೂಗಿ ಹೇಳಿತು. ಯೇಸು ಅದನ್ನು ಗದರಿಸಿ, “ಸುಮ್ಮನಿರು, ಅವನನ್ನು ಬಿಟ್ಟು ಹೊರಗೆ ಬಾ” ಎಂದನು. ಆ ದೆವ್ವವು ಅವನನ್ನು ಒದ್ದಾಡಿಸಿ ಗಟ್ಟಿಯಾಗಿ ಕೂಗುತ್ತಾ, ಅವನೊಳಗಿಂದ ಹೊರಗೆ ಬಂದಿತು. ಜನರೆಲ್ಲರೂ ಬೆರಗಾಗಿ, “ಇದೇನು? ಅಧಿಕಾರಸಹಿತವಾದ ಹೊಸ ಬೋಧನೆ! ಈತನು ದೆವ್ವಗಳಿಗೂ ಸಹ ಆಜ್ಞಾಪಿಸುತ್ತಾನೆ, ಅವು ಈತನಿಗೆ ವಿಧೇಯವಾಗುತ್ತವೆ!” ಎಂದು ತಮ್ಮತಮ್ಮೊಳಗೆ ವಿಚಾರಮಾಡಿಕೊಂಡರು. ಕೂಡಲೆ ಆತನ ಸುದ್ದಿಯು ಗಲಿಲಾಯ ಸೀಮೆಯಲ್ಲೆಲ್ಲಾ ಹಬ್ಬಿತು.

ಆ ಮೇಲೆ ಅವರು ಸಭಾಮಂದಿರದಿಂದ ಹೊರಟು ಯಾಕೋಬ ಯೋಹಾನರ ಸಂಗಡ ಸೀಮೋನ ಅಂದ್ರೆಯರ ಮನೆಗೆ ಹೋದರು. ಅಲ್ಲಿ ಸೀಮೋನನ ಅತ್ತೆ ಜ್ವರದಿಂದ ಮಲಗಿರಲಾಗಿ ಅವರು ಆಕೆಯ ಸಂಗತಿಯನ್ನು ಆತನಿಗೆ ತಿಳಿಸಿದರು. ಆತನು ಹತ್ತಿರಕ್ಕೆ ಬಂದು ಆಕೆಯ ಕೈಯನ್ನು ಹಿಡಿದು ಎಬ್ಬಿಸಲು ಜ್ವರವು ಆಕೆಯನ್ನು ಬಿಟ್ಟುಹೋಯಿತು; ಆಕೆಯು ಅವರಿಗೆ ಉಪಚಾರಮಾಡಿದಳು.

ಸಂಜೆಯಾಗಿ ಹೊತ್ತು ಮುಳುಗಿದ ಮೇಲೆ ಜನರು ಅಸ್ವಸ್ಥರಾದವರನ್ನೂ, ದೆವ್ವಹಿಡಿದವರನ್ನೂ ಆತನ ಬಳಿಗೆ ಕರತಂದರು. ಊರಿನವರೆಲ್ಲಾ ಬಾಗಿಲಿನ ಮುಂದೆ ಒಟ್ಟುಗೂಡಿದ್ದರು. ಆಗ ಆತನು ನಾನಾ ರೀತಿಯ ರೋಗಗಳಿಂದ ಅಸ್ವಸ್ಥರಾಗಿದ್ದ ಬಹು ಜನರನ್ನು ಸ್ವಸ್ಥಮಾಡಿ ಅನೇಕ ದೆವ್ವಗಳನ್ನು ಬಿಡಿಸಿದನು. ಆದರೆ ಅವುಗಳಿಗೆ ತಾನು ಇಂಥವನೆಂದು ತಿಳಿದಿದ್ದರಿಂದ ಆತನು ಅವುಗಳನ್ನು ಮಾತನಾಡಗೊಡಿಸಲಿಲ್ಲ.

ಬಳಿಕ ಆತನು ಗಲಿಲಾಯದಲ್ಲೆಲ್ಲಾ ಹೋಗಿ ಅವರ ಸಭಾಮಂದಿರಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ದೆವ್ವಗಳನ್ನು ಬಿಡಿಸುತ್ತಾ ಇದ್ದನು.

ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು ಆತನ ಮುಂದೆ ಮೊಣಕಾಲೂರಿಕೊಂಡು, “ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಎಂದು ಬೇಡಿಕೊಂಡನು. ಯೇಸು ಕನಿಕರಪಟ್ಟು ತನ್ನ ಕೈ ಚಾಚಿ ಅವನನ್ನು ಮುಟ್ಟಿ, “ನನಗೆ ಮನಸ್ಸುಂಟು; ಶುದ್ಧನಾಗು” ಅಂದನು. ಕೂಡಲೆ ಅವನ ಕುಷ್ಠವು ಹೋಗಿ, ಅವನು ಶುದ್ಧನಾದನು. ಆಗ ಯೇಸು ಅವನಿಗೆ, “ಯಾರಿಗೂ ಏನೂ ಹೇಳಬೇಡ ನೋಡು; ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ನಿನ್ನ ಶುದ್ಧಿಗಾಗಿಮೋಶೆಯು ಆಜ್ಞಾಪಿಸಿರುವಂಥವುಗಳನ್ನು ಅರ್ಪಿಸು. ಅದು ಜನರಿಗೆ ಸಾಕ್ಷಿಯಾಗಿರಲಿ ಎಂದು ಖಂಡಿತವಾಗಿ” ಹೇಳಿ ಅವನನ್ನು ಕೂಡಲೆ ಕಳುಹಿಸಿ ಬಿಟ್ಟನು. ಆದರೆ ಅವನು ಹೊರಟುಹೋಗಿ ಎಲ್ಲಾ ಕಡೆಗೂ ಈ ಸಂಗತಿಯನ್ನು ಬಹಳವಾಗಿ ಸಾರಿ ಹಬ್ಬಿಸುವುದಕ್ಕೆ ಪ್ರಾರಂಭಿಸಿದ್ದರಿಂದ ಯೇಸು ಬಹಿರಂಗವಾಗಿ ಬೇರೆ ಊರುಗಳಿಗೆ ಹೋಗಲಾರದೆ ನಿರ್ಜನ ಸ್ಥಳಗಳಲ್ಲಿ ಇದ್ದನು. ಆದರೂ ಜನರು ಎಲ್ಲಾ ಕಡೆಯಿಂದಲೂ ಆತನ ಬಳಿಗೆ ಬರುತ್ತಿದ್ದರು.

ಅಷ್ಟರಲ್ಲಿ ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಆತನ ಬಳಿಗೆ ತಂದರು; ನಾಲ್ಕು ಮಂದಿಯು ಆತನನ್ನು ಹೊತ್ತುಕೊಂಡಿದರು. ಜನರು ಗುಂಪಾಗಿದ್ದುದರಿಂದ ಅವರು ಆತನ ಹತ್ತಿರಕ್ಕೆ ಬರಲು ಸಾಧ್ಯವಾಗದೆ ಆತನು ನಿಂತ ಸ್ಥಳಕ್ಕೆ ಸರಿಯಾಗಿ ಮನೆಯ ಮೇಲ್ಛಾವಣಿಯನ್ನು ತೆರೆದು ಕಿಂಡಿಯೊಂದನ್ನು ಮಾಡಿ ಪಾರ್ಶ್ವವಾಯು ರೋಗಿಯನ್ನು ಮಲಗಿದ್ದ ಹಾಸಿಗೆಯ ಸಮೇತ ಕೆಳಗಿಳಿಸಿದರು. ಯೇಸು ಅವರ ನಂಬಿಕೆಯನ್ನು ನೋಡಿ ಆ ಪಾರ್ಶ್ವವಾಯು ರೋಗಿಗೆ, “ಮಗನೇ, ನಿನ್ನಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು. ಆದರೆ ಶಾಸ್ತ್ರಿಗಳಲ್ಲಿ ಕೆಲವರು ಅಲ್ಲಿ ಕುಳಿತುಕೊಂಡಿದ್ದು; “ಈತನು ಯಾಕೆ ಹೀಗೆ ಮಾತನಾಡುತ್ತಾನೆ? ಇದು ದೇವದೂಷಣೆ. ದೇವರೊಬ್ಬನೇ ಹೊರತು ಮತ್ತಾರು ಪಾಪಗಳನ್ನು ಕ್ಷಮಿಸಬಲ್ಲರು?” ಎಂದು ತಮ್ಮ ಮನಸ್ಸಿನಲ್ಲಿ ಆಲೋಚಿಸಿಕೊಳ್ಳುತ್ತಿದ್ದರು. ಹೀಗೆ ಆಲೋಚಿಸಿಕೊಳ್ಳುತ್ತಿದ್ದುದನ್ನು ಕೂಡಲೆ ಯೇಸು ತನ್ನ ಆತ್ಮದಲ್ಲಿ ತಿಳಿದುಕೊಂಡು ಅವರಿಗೆ, “ನೀವು ನಿಮ್ಮ ಮನಸ್ಸಿನಲ್ಲಿ ಯಾಕೆ ಹೀಗೆ ಯೋಚಿಸುತ್ತೀರಿ? ಯಾವುದು ಸುಲಭ? ಪಾರ್ಶ್ವವಾಯು ರೋಗಿಗೆ ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅನ್ನುವುದೋ’ ಅಥವಾ ‘ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ’ ಅನ್ನುವುದೋ? ಆದರೆ ಪಾಪಗಳನ್ನು ಕ್ಷಮಿಸಿಬಿಡುವುದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬುದನ್ನು ನೀವು ತಿಳಿಯಬೇಕು” ಎಂದು ಹೇಳಿ ಪಾರ್ಶ್ವವಾಯು ರೋಗಿಯನ್ನು ನೋಡಿ “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಿನ್ನ ಮನೆಗೆ ಹೋಗೆಂದು ನಿನಗೆ ಹೇಳುತ್ತೇನೆ” ಅಂದನು. ಅವನು ಕೂಡಲೆ ಎದ್ದು ತನ್ನ ಹಾಸಿಗೆಯನ್ನು ತೆಗೆದುಕೊಂಡು ಎಲ್ಲರ ಮುಂದೆ ಹೊರಟುಹೋದನು. ಅದನ್ನು ನೋಡಿದವರೆಲ್ಲರು ಆಶ್ಚರ್ಯಚಕಿತರಾದರು, “ಇದುವರೆಗೆ ನಾವು ಇಂಥದನ್ನು ಎಂದಿಗೂ ನೋಡಿದ್ದೇ” ಇಲ್ಲವೆಂದು ಹೇಳುತ್ತಾ ದೇವರಿಗೆ ಮಹಿಮೆ ಸಲ್ಲಿಸಿದರು.

ಇನ್ನೊಂದು ಸಾರಿ ಯೇಸು ಸಭಾಮಂದಿರಕ್ಕೆ ಹೋದಾಗ ಅಲ್ಲಿ ಕೈ ಬತ್ತಿಹೋದ ಮನುಷ್ಯನೊಬ್ಬನಿದ್ದನು. ಕೆಲವರು ಯೇಸುವಿನ ಮೇಲೆ ತಪ್ಪುಹೊರಿಸುವುದಕ್ಕೆ, ಸಬ್ಬತ್ ದಿನದಲ್ಲಿ ಅವನನ್ನು ಸ್ವಸ್ಥಮಾಡುವನೋ ಏನೋ ಎಂದು ಆತನನ್ನು ಹೊಂಚುಹಾಕಿ ನೋಡುತ್ತಾ ಇದ್ದರು. ಆತನು ಕೈಬತ್ತಿದ್ದವನಿಗೆ, “ಎದ್ದು ನಡುವೆ ನಿಂತುಕೋ” ಎಂದು ಹೇಳಿದನು. ಆಗ ಅವರಿಗೆ, “ಸಬ್ಬತ್ ದಿನದಲ್ಲಿ ಧರ್ಮಸಮ್ಮತವಾದದು ಯಾವುದು? ಮೇಲನ್ನು ಮಾಡುವುದೋ, ಕೇಡನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ, ತೆಗೆಯುವುದೋ?” ಎಂದು ಹೇಳಲು ಅವರು ಸುಮ್ಮನಿದ್ದರು. ಆಗ ಯೇಸು ಅವರ ಹೃದಯ ಕಾಠಿಣ್ಯಕ್ಕಾಗಿ ದುಃಖಪಟ್ಟು, ಕೋಪದಿಂದ ಸುತ್ತಲೂ ಅವರನ್ನು ದೃಷ್ಟಿಸಿ ನೋಡಿ ಆ ಮನುಷ್ಯನಿಗೆ, “ನಿನ್ನ ಕೈ ಚಾಚು” ಎಂದು ಹೇಳಲು ಅವನು ಕೈ ಚಾಚಿದನು; ಅವನ ಕೈ ವಾಸಿಯಾಯಿತು.

ಏಕೆಂದರೆ ಆತನು ಅನೇಕರನ್ನು ಸ್ವಸ್ಥಮಾಡಿದ್ದರಿಂದ ರೋಗಪೀಡಿತರಾಗಿದ್ದವರೆಲ್ಲರೂ ಯೇಸುವನ್ನು ಮುಟ್ಟಬೇಕೆಂದು ಮೇಲೆ ಬೀಳುತ್ತಿದ್ದರು. ಮತ್ತು ದೆವ್ವಗಳು ಆತನನ್ನು ಕಂಡಾಗಲ್ಲೆಲ್ಲಾ ಆತನ ಪಾದಕ್ಕೆ ಬಿದ್ದು “ನೀನು ದೇವಕುಮಾರನು” ಎಂದು ಕೂಗುತ್ತಿದ್ದವು. ಆದರೆ ಆತನು ತಾನು ಇಂಥವನೆಂಬುದಾಗಿ ಯಾರಿಗೂ ಪ್ರಕಟಿಸಬಾರದೆಂದು ಅವರಿಗೆ ಬಹು ಖಂಡಿತವಾಗಿ ಆಜ್ಞಾಪಿಸಿದನು.

ಆತನು ಅಪೊಸ್ತಲರೆಂದು ಹೆಸರಿಟ್ಟಂಥ ಹನ್ನೆರಡು ಮಂದಿಯನ್ನು ತನ್ನ ಸಂಗಡ ಇರಬೇಕೆಂತಲೂ, ಸುವಾರ್ತೆಯನ್ನು ಸಾರುವುದಕ್ಕೆ ಅವರನ್ನು ಕಳುಹಿಸಬೇಕೆಂತಲೂ, ದೆವ್ವಗಳನ್ನು ಬಿಡಿಸುವ ಅಧಿಕಾರ ಉಳ್ಳವರಾಗಿರಬೇಕೆಂತಲೂ ನೇಮಿಸಿದನು.

ತರುವಾಯ ದೊಡ್ಡ ಬಿರುಗಾಳಿ ಎದ್ದು ಅಲೆಗಳು ಆ ದೋಣಿಗೆ ಬಡಿದು ನೀರು ಒಳಗೆ ನುಗ್ಗಿದ್ದರಿಂದ ಆ ದೋಣಿ ಆಗಲೇ ತುಂಬುವುದಕ್ಕೆ ಬಂದಿತ್ತು. ಆದರೆ ಆತನು ದೋಣಿಯ ಹಿಂಭಾಗದಲ್ಲಿ ತಲೆದಿಂಬನ್ನು ಒರಗಿ ನಿದ್ದೆಮಾಡುತ್ತಿದ್ದನು. ಅವರು ಆತನನ್ನು ಎಬ್ಬಿಸಿ, “ಗುರುವೇ, ನಾವು ಮುಳುಗಿಹೋಗುವುದರಲ್ಲಿ ನಿನಗೆ ಚಿಂತೆಯಿಲ್ಲವೇ” ಎಂದು ಕೇಳಿದರು. ಆತನು ಎದ್ದು ಗಾಳಿಯನ್ನು ಗದರಿಸಿ, ಸಮುದ್ರಕ್ಕೆ “ಶಾಂತವಾಗಿರು, ಮೊರೆಯಬೇಡ” ಎಂದು ಅಪ್ಪಣೆಕೊಡುತ್ತಲೇ ಗಾಳಿ ನಿಂತುಹೋಗಿ ಸಮುದ್ರವು ಶಾಂತವಾಯಿತು. ತರುವಾಯ ಆತನು ಅವರನ್ನು, “ಯಾಕೆ ಭಯಪಡುತ್ತೀರಿ? ಇನ್ನೂ ನಿಮಗೆ ನಂಬಿಕೆಯಿಲ್ಲವೇ?” ಎಂದು ಕೇಳಲು ಅವರು ಬಹು ಭಯಪಟ್ಟು, “ಈತನು ಯಾರಿರಬಹುದು? ಗಾಳಿಯೂ, ಸಮುದ್ರವೂ ಸಹ ಈತನು ಹೇಳಿದ ಹಾಗೆ ಕೇಳುತ್ತವಲ್ಲಾ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.

ಯೇಸು ದೋಣಿಯಿಂದ ಇಳಿದು ಬಂದ ಕೂಡಲೆ ದೆವ್ವ ಹಿಡಿದ ಒಬ್ಬ ಮನುಷ್ಯನು ಸಮಾಧಿಯ ಗವಿಗಳೊಳಗಿಂದ ಬಂದು ಆತನನ್ನು ಸಂಧಿಸಿದನು. ಅವನಿಗೆ ಸಮಾಧಿಯಲ್ಲಿನ ಗವಿಗಳೇ ವಾಸಸ್ಥಳವಾಗಿತ್ತು. ಅವನನ್ನು ಅನೇಕಸಾರಿ ಬೇಡಿಗಳಿಂದ ಮತ್ತು ಸರಪಣಿಗಳಿಂದ ಕಟ್ಟಿದ್ದರೂ ಅವನು ಸರಪಣಿಗಳನ್ನು ಕಿತ್ತು ಬೇಡಿಗಳನ್ನು ತುಂಡುತುಂಡು ಮಾಡುಬಿಡುತಿದ್ದನು; ಅವನನ್ನು ಯಾರೂ ಯಾವ ಸರಪಣಿಯಿಂದಲೂ ಕಟ್ಟಲಾರದೆ ಹೋದರು; ಅವನನ್ನು ಹತೋಟಿಗೆ ತರುವುದಕ್ಕೆ ಯಾರಿಂದಲೂ ಆಗಲಿಲ್ಲ. ಅವನು ರಾತ್ರಿ ಮತ್ತು ಹಗಲು ಸಮಾಧಿಯ ಗವಿಗಳಲ್ಲಿ ಮತ್ತು ಗುಡ್ಡಗಳ ಮೇಲೆ ಆರ್ಭಟಿಸುತ್ತಾ ಚೂಪಾದ ಕಲ್ಲುಗಳಿಂದ ತನ್ನನ್ನು ಗಾಯಮಾಡಿಕೊಳ್ಳುತ್ತಾ ಇದ್ದನು. ಅವನು ಯೇಸುವನ್ನು ದೂರದಿಂದ ಕಂಡು ಓಡಿಬಂದು ಆತನಿಗೆ ಅಡ್ಡಬಿದ್ದು, ಮಹಾಶಬ್ದದಿಂದ ಆರ್ಭಟಿಸಿ, “ಯೇಸುವೇ, ಮಹೋನ್ನತನಾದ ದೇವರ ಮಗನೇ, ನನ್ನ ಗೊಡವೆ ನಿನಗೇಕೆ? ದೇವರಾಣೆ ನನ್ನನ್ನು ಹಿಂಸಿಸಬೇಡ ಎಂದು ನಿನ್ನನ್ನು ನಾನು ಬೇಡಿಕೊಳ್ಳುತ್ತೇನೆ” ಎಂದು ಹೇಳಿದನು. ಏಕೆಂದರೆ ಯೇಸು, “ಅಶುದ್ಧಾತ್ಮವೇ ಇವನನ್ನು ಬಿಟ್ಟುಹೋಗು” ಎಂದು ಆಜ್ಞಾಪಿಸಿದ್ದನು. ಯೇಸು, “ನಿನ್ನ ಹೆಸರು ಏನೆಂದು” ಅವನನ್ನು ಕೇಳಿದ್ದಕ್ಕೆ ಅವನು, “ನನ್ನ ಹೆಸರು ದಂಡು; ಯಾಕೆಂದರೆ ನಾವು ಬಹು ಮಂದಿ ಇದ್ದೇವೆ” ಎಂದು ಹೇಳಿ, ನಮ್ಮನ್ನು ಈ ಪ್ರಾಂತ್ಯದಿಂದ ಹೊರಡಿಸಬೇಡ ಎಂದು ಆತನನ್ನು ಬಹಳವಾಗಿ ಬೇಡಿಕೊಂಡವು. ಅಲ್ಲಿಯ ಗುಡ್ಡದಲ್ಲಿ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು. ಆ ಅಶುದ್ಧಾತ್ಮಗಳು, “ಆ ಹಂದಿಗಳೊಳಗೆ ಸೇರಿಕೊಳ್ಳುವುದಕ್ಕೆ ನಮ್ಮನ್ನು ಕಳುಹಿಸಿಕೊಡು” ಎಂದು ಆತನನ್ನು ಬೇಡಿಕೊಂಡವು. ಆತನು ಅವುಗಳಿಗೆ ಅನುಮತಿಸಲು ಆ ದೆವ್ವಗಳು ಆ ಮನುಷ್ಯನಿಂದ ಹೊರಗೆ ಬಂದು ಹಂದಿಗಳೊಳಗೆ ಪ್ರವೇಶಿಸಿದವು; ಅಲ್ಲಿ ಹೆಚ್ಚುಕಡಿಮೆ ಎರಡು ಸಾವಿರ ಹಂದಿಗಳಿದ್ದವು. ಆ ಹಂದಿಗಳು ಓಡಿ ಹೋಗಿ ಇಳಿಜಾರು ಸ್ಥಳದಿಂದ ಸಮುದ್ರದೊಳಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರು ಕಟ್ಟಿ ಸತ್ತುಹೋದವು. ಅವುಗಳನ್ನು ಮೇಯಿಸುವವರು ಓಡಿಹೋಗಿ ನಡೆದಿರುವ ಸಂಗತಿಯನ್ನು ಆ ಊರಲ್ಲಿಯೂ ಪಕ್ಕದ ಹಳ್ಳಿಗಳಲ್ಲಿಯೂ ತಿಳಿಸಲು ಜನರು ನಡೆದ ಸಂಗತಿ ಏನೆಂದು ನೋಡುವುದಕ್ಕೆ ಹೊರಟು ಯೇಸು ಇದ್ದಲ್ಲಿಗೆ ಬಂದರು. ಆ ದೆವ್ವಹಿಡಿದಿದ್ದವನು ಅಂದರೆ ದೆವ್ವಗಳ ದಂಡಿನಿಂದ ಬಂಧಿಸಲ್ಪಟ್ಟವನು, ಬಟ್ಟೆಗಳನ್ನು ಹಾಕಿಕೊಂಡು ಸುಬುದ್ಧಿಯಿಂದ ಕುಳಿತಿರುವುದನ್ನು ನೋಡಿ ಹೆದರಿದರು. ನಡೆದ ಸಂಗತಿಯನ್ನು ನೋಡಿದ್ದವರು ಆ ದೆವ್ವಹಿಡಿದವನಿಗೆ ಸಂಭವಿಸಿದೆಲ್ಲವನ್ನು ಮತ್ತು ಹಂದಿಗಳ ವಿಷಯವನ್ನೂ ಅವರಿಗೆ ವಿವರಿಸಿದರು. ಆಗ ಅವರು ಯೇಸುವಿಗೆ ತಮ್ಮ ಸೀಮೆಯನ್ನು ಬಿಟ್ಟು ಹೋಗಬೇಕೆಂದು ಬೇಡಿಕೊಂಡರು.

ಆಗ ಅಲ್ಲಿ ಹನ್ನೆರಡು ವರ್ಷದಿಂದ ರಕ್ತಕುಸುಮ ರೋಗವಿದ್ದ ಒಬ್ಬ ಹೆಂಗಸು ಇದ್ದಳು. ಅನೇಕ ವೈದ್ಯರ ಚಿಕಿತ್ಸೆಯಿಂದ ಆಕೆಯು ಬಹು ಕಷ್ಟವನ್ನು ಅನುಭವಿಸಿ, ಕೈಯಲ್ಲಿದ್ದ ಹಣವನ್ನೆಲ್ಲಾ ವ್ಯಯಮಾಡಿದ್ದರೂ ಅವಳ ರೋಗ ಮಾತ್ರ ಹೆಚ್ಚುತ್ತಾ ಬಂದಿತ್ತೇ ಹೊರತು ಸ್ವಲ್ಪವೂ ಗುಣಮುಖ ಆಗುತ್ತಿರಲಿಲ್ಲ. ಆ ಹೆಂಗಸು ಯೇಸುವಿನ ಸಮಾಚಾರವನ್ನು ಕೇಳಿದ್ದರಿಂದ, “ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ಸ್ವಸ್ಥಳಾಗುವೆನು” ಎಂದು ಆಲೋಚಿಸಿ ಗುಂಪಿನಲ್ಲಿ ಹಿಂದಿನಿಂದ ಬಂದು ಆತನ ಉಡುಪನ್ನು ಮುಟ್ಟಿದಳು. ಮುಟ್ಟಿದ ಕೂಡಲೆ ಆಕೆಯ ರಕ್ತಸ್ರಾವವು ನಿಂತುಹೋದುದರಿಂದ ಆಕೆಯು, ನನ್ನನ್ನು ಕಾಡಿದ ರೋಗವು ಹೋಗಿ ನನಗೆ ಗುಣವಾಯಿತು ಎಂದು ತನ್ನ ಮನಸ್ಸಿನಲ್ಲಿ ತಿಳಿದುಕೊಂಡಳು. ಆ ಕ್ಷಣವೇ ಯೇಸು ತನ್ನಿಂದ ಶಕ್ತಿಯು ಹೊರಟಿತೆಂದು ತನ್ನಲ್ಲಿ ತಿಳಿದುಕೊಂಡು ಗುಂಪಿನಲ್ಲಿ ಹಿಂತಿರುಗಿ, “ನನ್ನ ಉಡುಪನ್ನು ಮುಟ್ಟಿದವರು ಯಾರು?” ಎಂದು ಕೇಳಲು ಆತನ ಶಿಷ್ಯರು ಆತನಿಗೆ, “ನಿನ್ನ ಸುತ್ತಲೂ ಜನರು ಮುತ್ತಿಕೊಂಡು ನೂಕುವುದು ನಿನಗೆ ತಿಳಿದೇ ಇದೆ. ಆದರೂ ‘ನನ್ನನ್ನು ಮುಟ್ಟಿದವರು ಯಾರು’ ಎಂದು ಕೇಳುತ್ತೀಯಲ್ಲಾ?” ಎಂದರು. ಆದರೆ ಯೇಸು ಈ ಕೆಲಸ ಮಾಡಿದವರನ್ನು ನೋಡಬೇಕೆಂದು ಸುತ್ತಲು ನೋಡುತ್ತಾ ಇರಲಾಗಿ, ಆ ಮಹಿಳೆ ತನಗೆ ಸಂಭವಿಸಿದ್ದನ್ನು ಗ್ರಹಿಸಿ, ಭಯದಿಂದ ನಡುಗುತ್ತಾ ಬಂದು ಆತನಿಗೆ ಅಡ್ಡಬಿದ್ದು ನಡೆದ ಸಂಗತಿಯನ್ನೆಲ್ಲಾ ತಿಳಿಸಿದಳು. ಆತನು ಆಕೆಗೆ, “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು; ನಿನ್ನ ರೋಗದಿಂದ ನೀನು ಸ್ವಸ್ಥಳಾಗಿರುವೆ” ಎಂದು ಹೇಳಿದನು.

ಆತನು ಇನ್ನೂ ಮಾತನಾಡುತ್ತಿರುವಾಗಲೇ ಸಭಾಮಂದಿರದ ಅಧಿಕಾರಿಯ ಕಡೆಯವರು ಬಂದು, “ನಿನ್ನ ಮಗಳು ತೀರಿಹೋದಳು; ಇನ್ನೇಕೆ ಗುರುವಿಗೆ ತೊಂದರೆ ಕೊಡುವಿ?” ಅಂದರು. ಅವರು ಆಡಿದ ಮಾತನ್ನು ಯೇಸು ಗಣನೆಗೆ ತಂದುಕೊಳ್ಳದೆ ಸಭಾಮಂದಿರದ ಅಧಿಕಾರಿಗೆ, “ಅಂಜಬೇಡ, ನಂಬಿಕೆ ಮಾತ್ರ ಇರಲಿ” ಎಂದು ಹೇಳಿದನು. ಮತ್ತು ಆತನು ಪೇತ್ರ, ಯಾಕೋಬ, ಮತ್ತು ಯಾಕೋಬನ ತಮ್ಮನಾದ ಯೋಹಾನ ಇವರನ್ನೇ ಹೊರತು ಬೇರೆ ಯಾರನ್ನೂ ತನ್ನೊಂದಿಗೆ ಬರುವುದಕ್ಕೆ ಅನುಮತಿಸಲಿಲ್ಲ. ಅವರು ಆ ಸಭಾಮಂದಿರದ ಅಧಿಕಾರಿಯ ಮನೆಗೆ ಬಂದಾಗ ಅಲ್ಲಿ ಜನರ ಗದ್ದಲವನ್ನೂ ಕೆಲವರು ಅಳುವುದನ್ನೂ ಗೋಳಾಡುವುದನ್ನೂ ಆತನು ಕಂಡನು. ಆತನು ಒಳಕ್ಕೆ ಹೋಗಿ, “ನೀವು ಗದ್ದಲ ಮಾಡುವುದೂ ಅಳುವುದೂ ಯಾಕೆ? ಹುಡುಗಿ ಸತ್ತಿಲ್ಲ; ಅವಳು ನಿದ್ದೆಮಾಡುತ್ತಿದ್ದಾಳೆ” ಅನ್ನಲು, ಅವರು ಆತನನ್ನು ಪರಿಹಾಸ್ಯಮಾಡಿದರು. ಆದರೆ ಆತನು ಎಲ್ಲರನ್ನು ಹೊರಕ್ಕೆ ಕಳುಹಿಸಿ ಆ ಹುಡುಗಿಯ ತಂದೆತಾಯಿಗಳನ್ನೂ ತನ್ನೊಂದಿಗಿದ್ದವರನ್ನೂ ಹುಡುಗಿಯಿದ್ದಲ್ಲಿಗೆ ಕರೆದುಕೊಂಡು ಹೋಗಿ, ಅವಳ ಕೈಹಿಡಿದು, “ತಲಿಥಾಕೂಮ್” ಅಂದನು. ಈ ಮಾತಿಗೆ “ಅಮ್ಮಣ್ಣೀ, ಎದ್ದೇಳು ಎಂದು ನಾನು ಹೇಳುತ್ತೇನೆ” ಎಂದರ್ಥ. ಕೂಡಲೆ ಆ ಹುಡುಗಿ ಎದ್ದು ನಡೆದಾಡಿದಳು; ಆಕೆಯು ಹನ್ನೆರಡು ವರ್ಷ ವಯಸ್ಸಿನವಳು.

ಸಬ್ಬತ್ ದಿನ ಬಂದಾಗ ಆತನು ಅಲ್ಲಿಯ ಸಭಾಮಂದಿರದಲ್ಲಿ ಉಪದೇಶಮಾಡತೊಡಗಿದನು. ಅಲ್ಲಿ ನೆರದಿದ್ದ ಜನರು ಯೇಸುವಿನ ಬೋಧನೆಯನ್ನು ಕೇಳಿ ಬೆರಗಾದರು. “ಈತನಿಗೆ ಈ ಬೋಧನೆಯ ಮಾತುಗಳು ಎಲ್ಲಿಂದ ಬಂದಿತು? ಈತನು ಪಡೆದಿರುವ ಜ್ಞಾನವಾದರೂ ಎಂಥದ್ದು? ಈತನ ಕೈಯಿಂದ ಇಂತಹ ಅದ್ಭುತಕಾರ್ಯಗಳು ಆಗುವುದಾದರು ಹೇಗೆ?

ಆತನು ಅಲ್ಲಿ ಕೆಲವು ರೋಗಿಗಳ ಮೇಲೆ ಕೈಯಿಟ್ಟು ಸ್ವಸ್ಥಮಾಡಿದನೇ ಹೊರತು ಬೇರೆ ಯಾವ ಮಹತ್ಕಾರ್ಯವನ್ನೂ ಮಾಡುವುದಕ್ಕಾಗಲಿಲ್ಲ.

ತಾನು ಆಯ್ಕೆಮಾಡಿಕೊಂಡ ಹನ್ನೆರಡು ಮಂದಿ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದನು. ಕಳುಹಿಸುವಾಗ ಆತನು ಅವರಿಗೆ ದೆವ್ವಗಳ ಮೇಲೆ ಅಧಿಕಾರ ಕೊಟ್ಟು,

ಅನೇಕ ದೆವ್ವಗಳನ್ನು ಬಿಡಿಸಿ ಅನೇಕ ರೋಗಿಗಳಿಗೆ ಎಣ್ಣೆ ಹಚ್ಚಿ ಗುಣಪಡಿಸಿದರು.

ಅಷ್ಟರಲ್ಲಿ ಸಂಜೆ ಆಗಿದ್ದರಿಂದ ಆತನ ಶಿಷ್ಯರು ಆತನ ಬಳಿಗೆ ಬಂದು, “ಇದು ನಿರ್ಜನ ಸ್ಥಳ, ಈಗ ಹೊತ್ತು ಬಹಳವಾಯಿತು; ಈ ಜನರಿಗೆ ಅಪ್ಪಣೆಕೊಡು; ಇವರು ಸುತ್ತಲಿರುವ ಸೀಮೆಗೂ ಹಳ್ಳಿಗಳಿಗೂ ಹೋಗಿ ತಮ್ಮ ಊಟಕ್ಕೆ ಏನಾದರೂ ಕೊಂಡುಕೊಳ್ಳಲಿ” ಎಂದು ಹೇಳಿದರು. ಅದಕ್ಕೆ ಯೇಸು, “ನೀವೇ ಅವರಿಗೆ ಊಟಕ್ಕೇನಾದರೂ ಕೊಡಿರಿ” ಎಂದು ಉತ್ತರಕೊಟ್ಟನು. ಅದಕ್ಕವರು, “ನಾವು ಹೋಗಿ ಇನ್ನೂರು ದಿನಾರಿ ನಾಣ್ಯಗಳ ಬೆಲೆಯಷ್ಟು ರೊಟ್ಟಿಯನ್ನು ಕೊಂಡುಕೊಂಡು ಅವರಿಗೆ ಊಟ ಕೊಡಬೇಕೋ?” ಎಂದು ಹೇಳಲು ಆತನು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿ” ಅಂದನು. ಅವರು ವಿಚಾರಿಸಿಕೊಂಡು ಬಂದು, “ನಮ್ಮಲ್ಲಿ ಐದು ರೊಟ್ಟಿ ಮತ್ತು ಎರಡು ಮೀನುಗಳಿವೆ” ಅಂದರು. ಆಗ ಆತನು ಅವರಿಗೆ, ಎಲ್ಲರೂ ಹಸಿರುಹುಲ್ಲಿನ ಮೇಲೆ ಪಂಕ್ತಿಪಂಕ್ತಿಯಾಗಿ ಕುಳಿತುಕೊಳ್ಳಲಿ ಎಂದು ಅಪ್ಪಣೆಕೊಟ್ಟಾಗ, ಜನರು ಪಂಕ್ತಿಗೆ ನೂರರಂತೆ ಐವತ್ತರಂತೆ ಸಾಲುಸಾಲಾಗಿ ಕುಳಿತುಕೊಂಡರು. ಆ ಮೇಲೆ ಆತನು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಪರಲೋಕದ ಕಡೆಗೆ ನೋಡಿ ದೇವರಿಗೆ ಸ್ತೋತ್ರಮಾಡಿ ಆ ರೊಟ್ಟಿಗಳನ್ನು ಮುರಿದು ಇದನ್ನು ನೀವು ಜನರಿಗೆ ಹಂಚಿರಿ ಎಂದು ಶಿಷ್ಯರ ಕೈಗೆ ಕೊಟ್ಟನು, ಅದೇ ರೀತಿಯಲ್ಲಿ ಆ ಎರಡು ಮೀನುಗಳನ್ನೂ ಆತನು ಎಲ್ಲರಿಗೂ ಹಂಚಿಸಿದನು. ಅವರೆಲ್ಲರೂ ತೃಪ್ತರಾಗುವವರೆಗೂ ಊಟಮಾಡಿದರು. ರೊಟ್ಟಿಯ ತುಂಡುಗಳನ್ನೂ ಮೀನಿನ ತುಂಡುಗಳನ್ನೂ ಕೂಡಿಸಲಾಗಿ ಹನ್ನೆರಡು ಪುಟ್ಟಿಗಳು ತುಂಬಿದವು. ಊಟಮಾಡಿದವರು ಐದು ಸಾವಿರ ಮಂದಿ ಗಂಡಸರು.

ಎದುರು ಗಾಳಿ ಬೀಸುತ್ತಿದ್ದುದರಿಂದ ಶಿಷ್ಯರು ಹುಟ್ಟುಗೋಲು ಹಾಕಿ ದಣಿದು ಹೋದದ್ದನ್ನು ಯೇಸು ಕಂಡು ಹೆಚ್ಚುಕಡಿಮೆ ರಾತ್ರಿಯ ನಾಲ್ಕನೆಯ ಜಾವದಲ್ಲಿ ಸಮುದ್ರದ ಮೇಲೆ ನಡೆದು ಅವರ ಕಡೆಗೆ ಬಂದು ಅವರನ್ನು ದಾಟಿ ಮುಂದಕ್ಕೆ ಹೋಗಬೇಕೆಂದಿದ್ದನು. ಆದರೆ ಸಮುದ್ರದ ಮೇಲೆ ನಡೆಯುವ ಆತನನ್ನು ಅವರು ಕಂಡು ಭೂತವೆಂದು ಭಾವಿಸಿ ಅಬ್ಬರಿಸಿ ಕೂಗಿದರು; ಏಕೆಂದರೆ ಅವರೆಲ್ಲರೂ ಆತನನ್ನು ನೋಡಿ ಭಯಭೀತರಾಗಿದ್ದರು. ಕೂಡಲೆ ಆತನು ಅವರನ್ನು ಮಾತನಾಡಿಸಿ ಅವರಿಗೆ, “ಧೈರ್ಯವಾಗಿರಿ, ನಾನೇ, ಹೆದರಬೇಡಿರಿ” ಎಂದು ಹೇಳಿದನು. ತರುವಾಯ ಆತನು ದೋಣಿಯನ್ನು ಹತ್ತಿ ಅವರ ಬಳಿಗೆ ಬರಲು ಆ ಬಿರುಗಾಳಿಯು ನಿಂತುಹೋಯಿತು. ಆಗ ಅವರು ತಮ್ಮೊಳಗೆ ಬಹು ಆಶ್ಚರ್ಯಪಟ್ಟರು.

ಅವರು ದೋಣಿಯಿಂದ ಇಳಿದ ಕೂಡಲೇ ಅಲ್ಲಿಯ ಜನರು ಯೇಸುವಿನ ಗುರುತು ಹಿಡಿದು, ಆ ಸೀಮೆಯಲ್ಲೆಲ್ಲಾ ಓಡಾಡಿ ರೋಗಿಯಾಗಿದ್ದವರನ್ನು ದೋಲಿಯ ಮೇಲೆ ಹಾಕಿಕೊಂಡು ಆತನು ಎಲ್ಲಿದ್ದಾನೆಂದು ಕೇಳಿದರೋ ಅಲ್ಲಿಗೆ ತೆಗೆದುಕೊಂಡು ಹೋದರು. ಆತನು ಯಾವ ಗ್ರಾಮಗಳಿಗೆ, ಯಾವ ಊರು ಹಳ್ಳಿಗಳಿಗೆ ಹೋದರೂ ಅಲ್ಲಿಯವರು ರೋಗಿಗಳನ್ನು ತಂದು ಸಂತೆಬೀದಿಗಳಲ್ಲಿ ಇಟ್ಟು, ಆತನ ಉಡುಪಿನ ಅಂಚನ್ನಾದರೂ ಮುಟ್ಟಗೊಡಿಸಬೇಕೆಂದು ಆತನನ್ನು ಬೇಡಿಕೊಂಡರು; ಆತನನ್ನು ಮುಟ್ಟಿದವರೆಲ್ಲರೂ ಗುಣಹೊಂದಿದರು.

ಯೇಸು ಅಲ್ಲಿಂದ ಹೊರಟು ತೂರ್ ಪಟ್ಟಣದ ಪ್ರಾಂತ್ಯಗಳಿಗೆ ಹೋಗಿ ಒಂದು ಮನೆಯೊಳಗೆ ಇಳಿದುಕೊಂಡು ಅದು ಯಾರಿಗೂ ತಿಳಿಯಬಾರದೆಂದು ಬಯಸಿದನು; ಆದರೆ ಆತನು ಗುಪ್ತವಾಗಿರುವುದಕ್ಕೆ ಸಾಧ್ಯವಾಗದೆ ಹೋಯಿತು. ಕೂಡಲೆ ಒಬ್ಬ ಹೆಂಗಸು ಆತನ ಸುದ್ದಿಯನ್ನು ಕೇಳಿ ಬಂದು ಆತನ ಪಾದಕ್ಕೆ ಬಿದ್ದಳು. ಆಕೆಯ ಮಗಳಿಗೆ ದೆವ್ವ ಹಿಡಿದಿತ್ತು. ಆ ಹೆಂಗಸು ಸುರೋಪೊಯಿನಿಕ್ಯದಲ್ಲಿ ಹುಟ್ಟಿದ ಗ್ರೀಕಳಾಗಿದ್ದಳು. ಆಕೆಯು ತನ್ನ ಮಗಳಿಗೆ ಹಿಡಿದಿದ್ದ ದೆವ್ವವನ್ನು ಬಿಡಿಸಬೇಕೆಂದು ಆತನನ್ನು ಬೇಡಿಕೊಂಡಾಗ, ಆತನು ಆಕೆಗೆ, “ಮೊದಲು ಮಕ್ಕಳು ತಿಂದು ತೃಪ್ತಿಯಾಗಲಿ; ಮಕ್ಕಳು ತಿನ್ನುವ ರೊಟ್ಟಿಯನ್ನು ತೆಗೆದು ನಾಯಿಮರಿಗಳಿಗೆ ಹಾಕುವುದು ಸರಿಯಲ್ಲ” ಎಂದು ಹೇಳಿದನು. ಆದರೆ ಅದಕ್ಕೆ ಆಕೆಯು, “ಹೌದು ಕರ್ತನೇ, ಮೇಜಿನ ಕೆಳಗಿರುವ ನಾಯಿಮರಿಗಳಂತೂ ಮಕ್ಕಳ ಕೈಯಿಂದ ಬೀಳುವ ರೊಟ್ಟೀತುಂಡುಗಳನ್ನು ತಿನ್ನುತ್ತವಲ್ಲಾ” ಎಂದು ಉತ್ತರಕೊಡಲು ಆತನು, “ಆಕೆಗೆ ನೀನು ಕೊಟ್ಟಿರುವ ಈ ಉತ್ತರದ ನಿಮಿತ್ತ ದೆವ್ವವು ನಿನ್ನ ಮಗಳನ್ನು ಬಿಟ್ಟು ಹೋಗಿದೆ, ನೀನು ಹೋಗು” ಅಂದನು. ಆಕೆಯು ತನ್ನ ಮನೆಗೆ ಹೋಗಿ ನೋಡಲಾಗಿ ಆ ಹುಡುಗಿಯು ಹಾಸಿಗೆಯ ಮೇಲೆ ಮಲಗಿದ್ದಳು; ದೆವ್ವ ಅವಳನ್ನು ಬಿಟ್ಟು ಹೋಗಿತ್ತು.

ಆಗ ಕೆಲವರು ತೊದಲು ಮಾತನಾಡುವ ಒಬ್ಬ ಕಿವುಡನನ್ನು ಆತನ ಬಳಿಗೆ ಕರೆದುಕೊಂಡು ಬಂದು, ಇವನ ಮೇಲೆ ನಿನ್ನ ಕೈಯಿಡಬೇಕು ಎಂದು ಆತನನ್ನು ಬೇಡಿಕೊಂಡರು. ಆತನು ಅವನನ್ನು ಜನರ ಗುಂಪಿನಿಂದ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ, ತನ್ನ ಬೆರಳುಗಳನ್ನು ಅವನ ಕಿವಿಗಳಲ್ಲಿ ಇಟ್ಟನು ಮತ್ತು ಉಗುಳಿ ನಂತರ ಅವನ ನಾಲಿಗೆಯನ್ನು ಮುಟ್ಟಿ, ಆಕಾಶದ ಕಡೆಗೆ ನೋಡಿ ದೀರ್ಘವಾಗಿ ನಿಟ್ಟುಸಿರುಬಿಟ್ಟು ಅವನಿಗೆ, “ಎಪ್ಫಥಾ” ಎಂದು ಹೇಳಿದನು. ಆ ಶಬ್ದಕ್ಕೆ “ತೆರೆಯಲಿ” ಎಂದರ್ಥ. ಹೇಳುತ್ತಲೇ ಅವನ ಕಿವಿಗಳು ತೆರೆದವು; ಅವನ ನಾಲಿಗೆಯು ಸಡಿಲವಾಯಿತು; ಅವನು ಸ್ಪಷ್ಟವಾಗಿ ಮಾತನಾಡಿದನು. ಆಗ ಆತನು, ಇದನ್ನು ಯಾರಿಗೂ ತಿಳಿಸಬಾರದೆಂದು ಅವರಿಗೆ ಕಟ್ಟಪ್ಪಣೆ ಮಾಡಿದನು. ಆದರೆ ಎಷ್ಟು ಹೇಳಿದರೂ ಕೇಳದೆ ಅವರು ಮತ್ತಷ್ಟು ಹೆಚ್ಚಾಗಿ ಅದನ್ನು ಪ್ರಚಾರ ಮಾಡಿದರು. ಅವರು ಅತ್ಯಂತ ಆಶ್ಚರ್ಯಪಟ್ಟು, “ಆತನು ಎಲ್ಲವನ್ನು ಚೆನ್ನಾಗಿ ಮಾಡಿದ್ದಾನೆ; ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡುತ್ತಾನೆ” ಎಂದು ಅಂದುಕೊಂಡರು.

ಆ ದಿನಗಳಲ್ಲಿ ಜನರು ಪುನಃ ದೊಡ್ಡಗುಂಪಾಗಿ ಬಂದು ನೆರೆದಿದ್ದರು. ಊಟಮಾಡಲು ಅವರಲ್ಲಿ ಆಹಾರವಿರಲಿಲ್ಲ. ಆಗ ಯೇಸು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು, “ಈ ಜನರನ್ನು ನೋಡಿ ಕನಿಕರಪಡುತ್ತೇನೆ, ಏಕೆಂದರೆ ಮೂರು ದಿನಗಳಿಂದ ಇವರು ನನ್ನ ಬಳಿಯಲ್ಲಿದ್ದಾರೆ; ಇವರಿಗೆ ಊಟಕ್ಕೆ ಏನೂ ಇಲ್ಲ. ಇವರನ್ನು ಹಸಿವೆಯಿಂದ ಮನೆಗೆ ಕಳುಹಿಸಿದರೆ ದಾರಿಯಲ್ಲಿ ಬಳಲಿ ಬಿದ್ದಾರು. ಇವರಲ್ಲಿ ಕೆಲವರು ದೂರದಿಂದ ಬಂದಿದ್ದಾರಲ್ಲಾ” ಎಂದು ಅವರಿಗೆ ಹೇಳಿದನು. ಅದಕ್ಕೆ ಶಿಷ್ಯರು, “ಈ ಅಡವಿಯಲ್ಲಿ ಸಾಕಷ್ಟು ರೊಟ್ಟಿಯನ್ನು ಎಲ್ಲಿಂದ ತಂದು ಈ ಜನರನ್ನು ತೃಪ್ತಿಪಡಿಸುವುದಕ್ಕಾದೀತು?” ಅಂದರು. ಆತನು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?” ಎಂದು ಅವರನ್ನು ಕೇಳಿದ್ದಕ್ಕೆ ಅವರು, “ಏಳು ರೊಟ್ಟಿಗಳು ಇವೆ” ಅಂದರು. ಆಗ ಯೇಸು ಜನರ ಗುಂಪಿಗೆ, ನೆಲದ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಕೊಟ್ಟು, ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರಮಾಡಿ ಅವುಗಳನ್ನು ಮುರಿದು ಜನರಿಗೆ ಹಂಚಲು ತನ್ನ ಶಿಷ್ಯರ ಕೈಗೆ ಕೊಟ್ಟನು; ಅವರು ಗುಂಪಿನವರಿಗೆ ಹಂಚಿಕೊಟ್ಟರು. ಇದಲ್ಲದೆ ಅವರಲ್ಲಿ ಕೆಲವು ಸಣ್ಣ ಮೀನುಗಳಿದ್ದವು; ಆತನು ಅವುಗಳಿಗಾಗಿ ದೇವರಿಗೆ ಸ್ತೋತ್ರಮಾಡಿ, ಇವುಗಳನ್ನೂ ಹಂಚಿಕೊಡಿರಿ ಎಂದು ಶಿಷ್ಯರಿಗೆ ಅಪ್ಪಣೆ ಕೊಟ್ಟನು. ಜನರು ತಿಂದು ತೃಪ್ತರಾದರು. ಉಳಿದ ತುಂಡುಗಳನ್ನು ಒಟ್ಟುಗೂಡಿಸಲಾಗಿ ಏಳು ಬುಟ್ಟಿಗಳು ತುಂಬಿದವು. ಊಟಮಾಡಿದವರು ಹೆಚ್ಚುಕಡಿಮೆ ನಾಲ್ಕು ಸಾವಿರ ಗಂಡಸರಿದ್ದರು.

ಮತ್ತು ಅವರು ಬೇತ್ಸಾಯಿದ ಊರಿಗೆ ಬಂದರು. ಅಲ್ಲಿ ಜನರು ಒಬ್ಬ ಕುರುಡನನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದು, ಇವನನ್ನು ಮುಟ್ಟಬೇಕು ಎಂದು ಆತನನ್ನು ಬೇಡಿಕೊಂಡರು. ಆತನು ಕುರುಡನ ಕೈ ಹಿಡಿದು ಊರ ಹೊರಗೆ ಕರೆದುಕೊಂಡು ಹೋಗಿ ಅವನ ಕಣ್ಣುಗಳ ಮೇಲೆ ಉಗುಳು ಹಚ್ಚಿ, ಅವನ ಮೇಲೆ ತನ್ನ ಕೈಗಳನ್ನಿಟ್ಟು, “ನಿನಗೆ ಏನಾದರೂ ಕಾಣುತ್ತದೆಯೋ?” ಎಂದು ಅವನನ್ನು ಕೇಳಿದನು. ಅವನು ತಲೆಯೆತ್ತಿ ನೋಡಿ, “ನನಗೆ ಜನರು ಕಾಣುತ್ತಾರೆ; ಆದರೆ ಅವರು ನಡೆದಾಡುವ ಮರಗಳಂತೆ ಕಾಣಿಸುತ್ತಿದ್ದಾರೆ” ಎಂದನು. ತನ್ನ ಕೈಗಳನ್ನು ಪುನಃ ಅವನ ಕಣ್ಣುಗಳ ಮೇಲಿಟ್ಟನು; ಆಗ ಅವನು ಕಣ್ಣರಳಿಸಿ ನೋಡಿ ಪೂರ್ಣ ದೃಷ್ಟಿಯನ್ನು ಹೊಂದಿದನು. ಅವನು ನೋಡಲು ಎಲ್ಲವೂ ಸ್ಪಷ್ಟವಾಗಿ ಕಾಣಿಸಿತು.

ಆರು ದಿನಗಳಾದ ಮೇಲೆ ಯೇಸು ಪೇತ್ರ, ಯಾಕೋಬ, ಯೋಹಾನ ಇವರನ್ನು ಮಾತ್ರ ತನ್ನೊಡನೆ ಕರೆದುಕೊಂಡು ಎತ್ತರವಾದ ಬೆಟ್ಟಕ್ಕೆ ಹೋದನು. ಅಲ್ಲಿ ಅವರ ಕಣ್ಣೆದುರಿಗೇ ಯೇಸುವು ರೂಪಾಂತರಗೊಂಡನು. ಆತನ ವಸ್ತ್ರಗಳು ಅತ್ಯಂತ ಶುಭ್ರವಾಗಿ ಬೆಳ್ಳಗೆ ಹೊಳೆಯಿತು. ಭೂಲೋಕದಲ್ಲಿರುವ ಯಾವ ಅಗಸನಾದರೂ ಅಷ್ಟು ಬೆಳ್ಳಗೆ ಮಾಡಲಾಗದಷ್ಟು ಅದು ಬಿಳುಪಾಗಿತ್ತು.

ಅದಕ್ಕೆ ಆ ಗುಂಪಿನಲ್ಲಿ ಒಬ್ಬನು, “ಬೋಧಕನೇ, ನನ್ನ ಮಗನನ್ನು ನಿನ್ನ ಬಳಿಗೆ ಕರೆದುಕೊಂಡು ಬಂದೆನು; ಅವನಿಗೊಂದು ದೆವ್ವ ಹಿಡಿದದೆ ಅದು ಅವನನ್ನು ಮೂಗನನ್ನಾಗಿಸಿದೆ. ಅದು ಎಲ್ಲಿ ಅವನ ಮೇಲೆ ಬಂದರೂ ಅವನನ್ನು ನೆಲಕ್ಕೆ ಕೆಡವುತ್ತದೆ; ಆಗ ಅವನು ನೊರೆಸುರಿಸುತ್ತಾನೆ, ಕರಕರನೆ ಹಲ್ಲು ಕಡಿಯುತ್ತಾನೆ ಮತ್ತು ಮರಗಟ್ಟಿದವನಂತೆ ಆಗುತ್ತಾನೆ. ಅದನ್ನು ಬಿಡಿಸಬೇಕೆಂದು ನಿನ್ನ ಶಿಷ್ಯರಿಗೆ ಕೇಳಿಕೊಂಡೆನು, ಆದರೆ ಅವರ ಕೈಯಿಂದ ಆಗದೆಹೋಯಿತು” ಎಂದು ಉತ್ತರ ಕೊಟ್ಟನು. ಅದಕ್ಕಾತನು, “ಎಲಾ, ಅಪನಂಬಿಕೆಯುಳ್ಳಂಥ ಸಂತಾನವೇ, ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇರಲಿ! ಇನ್ನೆಷ್ಟು ದಿನ ನಿಮ್ಮನ್ನು ಸಹಿಸಿಕೊಳ್ಳಲಿ? ಅವನನ್ನು ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ” ಅಂದನು. ಆಗ ಅವರು ಆ ಹುಡುಗನನ್ನು ಯೇಸುವಿನ ಬಳಿಗೆ ತೆಗೆದುಕೊಂಡು ಬಂದರು. ಆತನನ್ನು ಕಂಡಕೂಡಲೆ ಆ ದೆವ್ವವು ಹುಡುಗನನ್ನು ಬಹಳವಾಗಿ ಒದ್ದಾಡಿಸಲು ಅವನು ನೆಲಕ್ಕೆ ಬಿದ್ದು ನೊರೆಸುರಿಸುತ್ತಾ ಹೊರಳಾಡಿದನು. ಯೇಸು ಅವನ ತಂದೆಯನ್ನು, “ಇವನಿಗೆ ಹೀಗಾಗಿ ಎಷ್ಟು ಕಾಲವಾಯಿತು?” ಎಂದು ಕೇಳಿದಾಗ ಅವನು, “ಚಿಕ್ಕಂದಿನಲ್ಲಿಯೇ ಬಂದಿದೆ; ಮತ್ತು ಇವನನ್ನು ಕೊಲ್ಲಬೇಕೆಂದು ಪದೇಪದೇ ಬೆಂಕಿಯಲ್ಲಿಯೂ ನೀರಿನಲ್ಲಿಯೂ ಕೆಡವಿತು; ನಿನ್ನ ಕೈಯಲ್ಲಿ ಏನಾದರೂ ಆಗುವ ಹಾಗಿದ್ದರೆ ನಮ್ಮ ಮೇಲೆ ಕನಿಕರವಿಟ್ಟು ನಮಗೆ ಸಹಾಯಮಾಡು” ಅಂದನು. ಯೇಸು ಅವನಿಗೆ, “‘ನಿನ್ನ ಕೈಯಲ್ಲಿ ಆಗುವ ಹಾಗಿದ್ದರೆ ಅನ್ನುತ್ತೀಯೋ’? ನಂಬುವವನಿಗೆ ಎಲ್ಲವೂ ಸಾಧ್ಯ!” ಎಂದು ಹೇಳಿದನು. ಕೂಡಲೆ ಆ ಹುಡುಗನ ತಂದೆಯು, “ನಂಬುತ್ತೇನೆ, ನನಗೆ ಅಪನಂಬಿಕೆ ಇಲ್ಲದಂತೆ ಸಹಾಯಮಾಡು” ಎಂದು ಕೂಗಿ ಹೇಳಿದನು. ಆಗ ಯೇಸು ಜನರ ಗುಂಪು ಓಡಿಬರುವುದನ್ನು ಕಂಡು ಆ ದೆವ್ವವನ್ನು ಗದರಿಸಿ, “ಎಲೈ, ಕಿವುಡಾದ ಮೂಗದೆವ್ವವೇ, ಇವನನ್ನು ಬಿಟ್ಟು ಹೋಗು; ಇನ್ನೆಂದಿಗೂ ಇವನೊಳಗೆ ಪ್ರವೇಶಿಸಕೂಡದೆಂದು ನಾನು ನಿನಗೆ ಅಪ್ಪಣೆಕೊಡುತ್ತೇನೆ” ಅಂದನು. ಆಗ ಅದು ಅಬ್ಬರಿಸಿ ಹುಡುಗನನ್ನು ಒದ್ದಾಡಿಸಿ ಬಿಟ್ಟುಹೋಯಿತು. ಆ ಹುಡುಗನು ಸತ್ತಹಾಗೆ ಬಿದ್ದಿದ್ದರಿಂದ ಬಹುಜನರು, “ಸತ್ತುಹೋದನು” ಎಂದು ಅಂದುಕೊಂಡರು. ಆದರೆ ಯೇಸು ಅವನನ್ನು ಕೈಹಿಡಿದು ಎಬ್ಬಿಸಲು ಹುಡುಗನು ಎದ್ದು ನಿಂತನು.

ಯೇಸು ಅವರನ್ನು ದೃಷ್ಟಿಸಿ ನೋಡಿ “ಇದು ಮನುಷ್ಯರಿಗೆ ಅಸಾಧ್ಯ; ದೇವರಿಗೆ ಅಸಾಧ್ಯವಲ್ಲ. ದೇವರಿಗೆ ಎಲ್ಲವೂ ಸಾಧ್ಯವೇ” ಅಂದನು.

ತರುವಾಯ ಅವರು ಯೆರಿಕೋವಿಗೆ ಬಂದರು. ಯೇಸುವೂ ತನ್ನ ಶಿಷ್ಯರೂ ಬಹು ಜನರ ಗುಂಪಿನೊಂದಿಗೆ ಆ ಊರಿನಿಂದ ಹೊರಟುಹೋಗುತ್ತಿರುವಾಗ ತಿಮಾಯನ ಮಗನಾದ ಬಾರ್ತಿಮಾಯನು ದಾರಿಯ ಬದಿಯಲ್ಲಿ ಕುಳಿತಿದ್ದನು. ಅವನು ಒಬ್ಬ ಕುರುಡ ಭಿಕ್ಷುಕನಾಗಿದ್ದನು. ಈ ಮಾರ್ಗವಾಗಿ ಹೋಗುತ್ತಿರುವವನು ನಜರೇತಿನ ಯೇಸುವೆಂದು ಅವನು ಕೇಳಿದಾಗ ಅವನು, “ಯೇಸುವೇ, ದಾವೀದನ ಕುಮಾರನೇ, ನನ್ನನ್ನು ಕರುಣಿಸು” ಎಂದು ಕೂಗಿಕೊಳ್ಳುವುದಕ್ಕೆ ಪ್ರಾರಂಭಿಸಿದನು. ಅನೇಕರು, ಅವನಿಗೆ ಸುಮ್ಮನಿರು ಎಂದು ಗದರಿಸಲು ಅವನು, “ದಾವೀದನ ಕುಮಾರನೇ ನನ್ನನ್ನು ಕರುಣಿಸು” ಎಂದು ಮತ್ತಷ್ಟು ಕೂಗಿಕೊಂಡನು. ಆಗ ಯೇಸು ನಿಂತು, “ಅವನನ್ನು ಕರೆಯಿರಿ” ಅನ್ನಲು ಅವರು ಆ ಕುರುಡನನ್ನು ಕರೆದು, “ಧೈರ್ಯವಾಗಿರು, ಏಳು, ಯೇಸು ನಿನ್ನನ್ನು ಕರೆಯುತ್ತಾನೆ” ಅಂದರು. ಅವನು ತನ್ನ ಹೊದಿಕೆಯನ್ನು ತೆಗೆದುಹಾಕಿ ತಟ್ಟನೆ ಎದ್ದು ಯೇಸುವಿನ ಬಳಿಗೆ ಬಂದನು. ಯೇಸು ಅವನನ್ನು, “ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ” ಎಂದು ಕೇಳಲು ಆ ಕುರುಡನು, “ಗುರುವೇ, ನನಗೆ ಕಣ್ಣಿನ ದೃಷ್ಟಿ ಬರುವಂತೆ ಮಾಡಬೇಕು” ಅಂದನು. ಯೇಸು ಅವನಿಗೆ, “ಹೋಗು,ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ” ಎಂದು ಹೇಳಿದನು. ಕೂಡಲೇ ಅವನಿಗೆ ಕಣ್ಣಿನ ದೃಷ್ಟಿ ಬಂದಿತು. ಅವನು ಆ ದಾರಿಯಲ್ಲಿ ಆತನನ್ನು ಹಿಂಬಾಲಿಸಿದನು.

ಯೇಸು ಹೇಳಿದ್ದೇನಂದರೆ, “ನಿಮಗೆ ದೇವರಲ್ಲಿ ನಂಬಿಕೆಯಿರಲಿ. ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾರಾದರೂ ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು!’ ಎಂದು ಹೇಳಿ ತನ್ನ ಮನಸ್ಸಿನಲ್ಲಿ ಸಂಶಯಪಡದೆ ತಾನು ಹೇಳಿದ್ದು ಆಗುವುದೆಂದು ನಂಬಿದರೆ ಅವನು ಹೇಳಿದಂತೆಯೇ ಆಗುವುದು. ಆದಕಾರಣ ನೀವು ಪ್ರಾರ್ಥನೆಮಾಡಿ ಏನೇನು ಬೇಡಿಕೊಳ್ಳುತ್ತೀರೋ ಅದನ್ನೆಲ್ಲಾ ಹೊಂದಿದ್ದೇವೆಂದು ನಂಬಿರಿ; ಅದು ನಿಮಗೆ ಸಿಕ್ಕುವುದೆಂದು ನಿಮಗೆ ಹೇಳುತ್ತೇನೆ.

ಅವನು ಅವರಿಗೆ, “ಭಯಪಡಬೇಡಿರಿ, ಶಿಲುಬೆಗೆ ಹಾಕಲ್ಪಟ್ಟಿದ್ದ ನಜರೇತಿನ ಯೇಸುವನ್ನು ಹುಡುಕುತ್ತಿರಲ್ಲವೇ. ಆತನು ಇಲ್ಲಿ ಇಲ್ಲ, ಜೀವಿತನಾಗಿ ಎದ್ದಿದ್ದಾನೆ; ಆತನನ್ನು ಇಟ್ಟಿದ್ದ ಸ್ಥಳ ಇದೇ ನೋಡಿರಿ,

“ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು, ಹೊಸ ಭಾಷೆಗಳಲ್ಲಿ ಮಾತನಾಡುವರು; ಹಾವುಗಳನ್ನು ಕೈಗಳಿಂದ ಎತ್ತಿಕೊಳ್ಳುವರು; ವಿಷಪದಾರ್ಥಗಳನ್ನೇನಾದರು ಕುಡಿದರೂ ಅವರಿಗೆ ಯಾವ ಹಾನಿಯೂ ಆಗುವುದಿಲ್ಲ. ಅವರು ರೋಗಿಗಳ ಮೇಲೆ ಕೈಯಿಟ್ಟರೆ ಅವರಿಗೆ ಸ್ವಸ್ಥವಾಗುವುದು” ಎಂದು ಹೇಳಿದನು.

ಕರ್ತನಾದ ಯೇಸು ಅವರೊಂದಿಗೆ ಮಾತನಾಡಿದ ಮೇಲೆ ಪರಲೋಕಕ್ಕೆ ಒಯ್ಯಲ್ಪಟ್ಟು ದೇವರ ಬಲಗಡೆಯಲ್ಲಿ ಆಸನಾರೂಢನಾದನು.

ಅನಂತರ ಅವರು ಹೊರಟುಹೋಗಿ ಎಲ್ಲಾ ಕಡೆಗಳಲ್ಲಿಯೂ ಸುವಾರ್ತೆಯನ್ನು ಸಾರಿದರು; ಮತ್ತು ಕರ್ತನು ಅವರ ಸಂಗಡ ಕೆಲಸ ಮಾಡುತ್ತಾ ಸೂಚಕಕಾರ್ಯಗಳಿಂದ ಸುವಾರ್ತೆಯ ವಾಕ್ಯವನ್ನು ದೃಢಪಡಿಸುತ್ತಾ ಇದ್ದನು.

ದೇವರಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ” ಅಂದನು.

ಆ ಸಭಾಮಂದಿರದಲ್ಲಿ ದೆವ್ವಹಿಡಿದ ಒಬ್ಬ ಮನುಷ್ಯನಿದ್ದನು. ಆತನು, “ನಜರೇತಿನ ಯೇಸುವೇ, ನಮ್ಮ ಗೊಡವೆ ನಿನಗೇಕೆ? ನಮ್ಮನ್ನು ನಾಶಮಾಡುವುದಕ್ಕೆ ಬಂದೆಯಾ? ನಿನ್ನನ್ನು ಬಲ್ಲೆವು. ನೀನು ದೇವರಿಂದ ಬಂದ ಪರಿಶುದ್ಧನೇ” ಎಂದು ಜೋರಾಗಿ ಕೂಗಿ ಹೇಳಿದನು. ಯೇಸು ದೆವ್ವವನ್ನು ಗದರಿಸಿ, “ಸುಮ್ಮನಿರು, ಇವನನ್ನು ಬಿಟ್ಟು ಹೋಗು” ಎನ್ನಲಾಗಿ ಆ ದೆವ್ವವು ಅವನನ್ನು ಎಲ್ಲರ ನಡುವೆ ಬೀಳಿಸಿ ಅವನಿಗೆ ಯಾವ ಕೇಡನ್ನೂ ಮಾಡದೆ ಬಿಟ್ಟುಹೋಯಿತು. ಅದಕ್ಕೆ ಎಲ್ಲರು ಬೆರಗಾಗಿ, “ಇದೆಂಥ ಮಾತಾಗಿರಬಹುದು? ಈತನು ಅಧಿಕಾರದಿಂದಲೂ, ಬಲದಿಂದಲೂ ದೆವ್ವಗಳಿಗೆ ಅಪ್ಪಣೆಕೊಡುತ್ತಾನೆ, ಅವು ಬಿಟ್ಟು ಹೋಗುತ್ತವೆ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಮತ್ತು ಆತನ ಸುದ್ದಿಯು ಸುತ್ತಲಿರುವ ಪ್ರಾಂತ್ಯದ ಊರುಗಳಲ್ಲೆಲ್ಲಾ ಹರಡಿತು.

ಆತನು ಸಭಾಮಂದಿರದಿಂದೆದ್ದು ಸೀಮೋನನ ಮನೆಗೆ ಬಂದನು. ಅಲ್ಲಿ ಸೀಮೋನನ ಅತ್ತೆಯು ವಿಪರೀತ ಜ್ವರದಿಂದ ಕಷ್ಟಪಡುತ್ತಿರಲಾಗಿ; ಆಕೆಯ ವಿಷಯದಲ್ಲಿ ಅಲಿದ್ದವರು ಆತನನ್ನು ಬೇಡಿಕೊಂಡರು. ಆತನು ಆಕೆಯ ಬಳಿ ನಿಂತು ಬಾಗಿ, ಜ್ವರವನ್ನು ಬಿಟ್ಟುಹೋಗೆಂದು ಗದರಿಸಲು; ಅದು ಆಕೆಯನ್ನು ಬಿಟ್ಟುಹೋಯಿತು. ಕೂಡಲೆ ಆಕೆಯು ಎದ್ದು ಅವರೆಲ್ಲರಿಗೆ ಉಪಚಾರಮಾಡಿದಳು.

ಸಂಜೆಯಾದಂತೆ ಜನರು ವಿವಿಧ ರೋಗಗಳಿಂದ ಅಸ್ವಸ್ಥವಾದವರನ್ನೆಲ್ಲಾ ಆತನ ಹತ್ತಿರಕ್ಕೆ ಕರತರಲು; ಆತನು ಪ್ರತಿಯೊಬ್ಬರ ಮೇಲೆಯೂ ಕೈಯಿಟ್ಟು ಅವರನ್ನು ವಾಸಿಮಾಡಿದನು. ದೆವ್ವಗಳು ಸಹ, ನೀನು ದೇವಕುಮಾರನು ಎಂದು ಅಬ್ಬರಿಸಿ, ಅನೇಕರನ್ನು ಬಿಟ್ಟುಹೋದವು. ಆತನು ಕ್ರಿಸ್ತನೆಂದು ದೆವ್ವಗಳಿಗೆ ಸ್ಪಷ್ಟವಾಗಿ ತಿಳಿದಿದ್ದರಿಂದ ಆತನು ಅವುಗಳನ್ನು ಮಾತನಾಡದಂತೆ ಗದರಿಸಿದನು.

ಮಾತನಾಡುವುದನ್ನು ಮುಗಿಸಿದ ಮೇಲೆ ಸೀಮೋನನಿಗೆ, “ಆಳವಾದ ಸ್ಥಳಕ್ಕೆ ದೋಣಿಯನ್ನು ನಡೆಸಿ ಮೀನುಹಿಡಿಯಲು ನಿಮ್ಮ ಬಲೆಗಳನ್ನು ಬೀಸಿರಿ” ಎಂದು ಹೇಳಿದನು. ಅದಕ್ಕೆ ಸೀಮೋನನು, “ಗುರುವೇ, ನಾವು ರಾತ್ರಿಯೆಲ್ಲಾ ಪ್ರಯತ್ನಪಟ್ಟರೂ ಏನೂ ಸಿಕ್ಕಲಿಲ್ಲ; ಆದರೆ ನಿನ್ನ ಮಾತಿನ ಮೇಲೆ ಬಲೆಗಳನ್ನು ಬೀಸುತ್ತೇವೆ” ಅಂದನು. ಅವರು ಬಲೆಗಳನ್ನು ಬೀಸಿದ ಮೇಲೆ ಮೀನುಗಳು ರಾಶಿರಾಶಿಯಾಗಿ ಬಲೆಗೆ ಸಿಕ್ಕಿಕೊಂಡಿದ್ದರ ಪರಿಣಾಮ ಬಲೆಗಳು ಹರಿದುಹೋಗುವಂತ್ತಿದವು. ಆಗ ಅವರು ಮತ್ತೊಂದು ದೋಣಿಯಲ್ಲಿದ್ದ ತಮ್ಮ ಸಂಗಡಿಗರನ್ನೂ ಕರೆದು, ನೀವು ಬಂದು ನಮಗೆ ನೆರವಾಗಬೇಕೆಂದು ಸನ್ನೆಮಾಡಿದರು. ಅವರು ಬಂದು ಆ ಎರಡು ದೋಣಿಗಳಲ್ಲಿ ಮೀನುಗಳನ್ನು ತುಂಬಿಸಲು, ಅವು ಮುಳುಗುವ ಹಾಗಾದವು. ಸೀಮೋನ್ ಪೇತ್ರನು ಇದನ್ನು ಕಂಡು ಯೇಸುವಿನ ಮೊಣಕಾಲಿಗೆ ಬಿದ್ದು, “ಕರ್ತನೇ, ನಾನು ಪಾಪಾತ್ಮನು; ನನ್ನನ್ನು ಬಿಟ್ಟುಹೋಗು” ಅಂದನು. ಏಕೆಂದರೆ ಅವನಿಗೂ ಅವನ ಸಂಗಡ ಇದ್ದವರೆಲ್ಲರಿಗೂ ತಾವು ಹಿಡಿದ ಮೀನುಗಳ ನಿಮಿತ್ತ ಆಶ್ಚರ್ಯಪಟ್ಟಿದ್ದರು.

ಆತನು ಒಂದಾನೊಂದು ಊರಿನಲ್ಲಿದ್ದಾಗ ಮೈಯೆಲ್ಲಾ ಕುಷ್ಠರೋಗ ತುಂಬಿದ್ದ ಒಬ್ಬ ಮನುಷ್ಯನು ಯೇಸುವನ್ನು ಕಂಡು ಸಾಷ್ಟಾಂಗವೆರಗಿ, “ಕರ್ತನೇ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಎಂದು ಬೇಡಿಕೊಂಡನು. ಆತನು ಕೈನೀಡಿ ಅವನನ್ನು ಮುಟ್ಟಿ, “ನನಗೆ ಮನಸ್ಸುಂಟು, ಶುದ್ಧನಾಗು” ಅಂದನು. ಕೂಡಲೆ ಅವನ ಕುಷ್ಠವು ವಾಸಿಯಾಯಿತು. ಆಗ ಆತನು ಅವನಿಗೆ, “ನೀನು ಯಾರಿಗೂ ಹೇಳಬೇಡ; ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆಯು ಆಜ್ಞಾಪಿಸಿರುವ ಕಾಣಿಕೆಯನ್ನು ಅರ್ಪಿಸಿ ನಿನ್ನ ಶುದ್ಧಾಚಾರವನ್ನು ನೆರವೇರಿಸು, ಅದು ಜನರಿಗೆ ಸಾಕ್ಷಿಯಾಗಲಿ” ಎಂದು ಅಪ್ಪಣೆಕೊಟ್ಟನು. ಆದರೂ ಆತನ ಸುದ್ದಿಯು ಮತ್ತಷ್ಟು ಹಬ್ಬಿತು, ಮತ್ತು ಜನರು ಯೇಸುವಿನ ಉಪದೇಶವನ್ನು ಕೇಳುವುದಕ್ಕೂ, ತಮ್ಮ ತಮ್ಮ ರೋಗರುಜಿನಗಳನ್ನು ವಾಸಿಮಾಡಿಸಿಕೊಳ್ಳುವುದಕ್ಕೂ, ಗುಂಪುಗುಂಪಾಗಿ ಬಂದು ಸೇರಿದರು.

ಒಮ್ಮೆ ಆತನು ಉಪದೇಶಮಾಡುತ್ತಿರಲು ಗಲಿಲಾಯ ಮತ್ತು ಯೂದಾಯದ ಎಲ್ಲಾ ಗ್ರಾಮಗಳಿಂದಲೂ ಯೆರೂಸಲೇಮಿನಿಂದಲೂ ಬಂದಿದ್ದ ಫರಿಸಾಯರೂ ಧರ್ಮೋಪದೇಶಕರೂ ಆತನ ಹತ್ತಿರ ಕುಳಿತುಕೊಂಡಿದ್ದರು. ಮತ್ತು ಅವರನ್ನು ಗುಣಮಾಡುವ ದೇವರ ಶಕ್ತಿಯು ಆತನಲ್ಲಿತ್ತು. ಹೀಗಿರುವಲ್ಲಿ ಕೆಲವು ಮಂದಿ ಗಂಡಸರು ಒಬ್ಬ ಪಾರ್ಶ್ವವಾಯು ರೋಗಿಯನ್ನು ದೋಲಿಯಲ್ಲಿ ಹೊತ್ತುಕೊಂಡು ಬಂದರು. ಅವನನ್ನು ಒಳಗೆ ತೆಗೆದುಕೊಂಡು ಹೋಗಿ ಆತನ ಮುಂದೆ ಇರಿಸಬೇಕೆಂದು ಪ್ರಯತ್ನಿಸಿದರು. ಜನರ ಗುಂಪು ದಟ್ಟವಾಗಿದ್ದ ಕಾರಣ ಅವನನ್ನು ಒಳಗೆ ತೆಗೆದುಕೊಂಡುಹೋಗುವ ಮಾರ್ಗವನ್ನು ಕಾಣದೆ ಮನೆಯ ಮೇಲೆ ಹತ್ತಿ ಹಂಚುಗಳನ್ನು ತೆಗೆದು ಅವನನ್ನು ಹಾಸಿಗೆಯ ಸಹಿತವಾಗಿ ಜನರ ನಡುವೆ ಯೇಸುವಿನ ಮುಂದೆ ಇಳಿಸಿದರು. ಯೇಸು ಅವರ ನಂಬಿಕೆಯನ್ನು ನೋಡಿ, “ಸ್ನೇಹಿತನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಅಂದನು. ಅದಕ್ಕೆ ಆ ಶಾಸ್ತ್ರಿಗಳೂ ಮತ್ತು ಫರಿಸಾಯರೂ, “ದೇವದೂಷಣೆಯ ಮಾತನಾಡುವ ಇವನು ಎಷ್ಟರವನು? ಪಾಪಗಳನ್ನು ಕ್ಷಮಿಸಲು ದೇವರೊಬ್ಬನಿಂದ ಹೊರತು ಮತ್ತಾರಿಂದಾದೀತು?” ಎಂದು ಅಂದುಕೊಳ್ಳುತ್ತಿದ್ದರು. ಆದರೆ ಅವರು ಹಾಗಂದುಕೊಳ್ಳುವುದನ್ನು ಯೇಸುವು ತಿಳಿದುಕೊಂಡು ಅವರಿಗೆ, “ನೀವು ನಿಮ್ಮ ಮನಸ್ಸಿನಲ್ಲಿ ಅಂದುಕೊಳ್ಳುವುದೇನು? ಯಾವುದು ಸುಲಭ? ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅನ್ನುವುದೋ? ಎದ್ದು ನಡೆ ಅನ್ನುವುದೋ? ಆದರೆ ಪಾಪಗಳನ್ನು ಕ್ಷಮಿಸುವುದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬುದು ನಿಮಗೆ ತಿಳಿಯಬೇಕು” ಎಂದು ಹೇಳಿ, ಆ ಪಾರ್ಶ್ವವಾಯು ರೋಗಿಯನ್ನು ನೋಡಿ, “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು” ಎಂದು ಹೇಳಿದನು. ಕೂಡಲೆ ಅವನು ಅವರ ಮುಂದೆ ಎದ್ದು ತಾನು ಮಲಗಿದ್ದ ಹಾಸಿಗೆಯನ್ನು ಎತ್ತಿಕೊಂಡು ದೇವರನ್ನು ಕೊಂಡಾಡುತ್ತಾ ಮನೆಗೆ ಹೋದನು. ನೋಡಿದವರೆಲ್ಲರೂ ಬೆರಗಾಗಿ ದೇವರನ್ನು ಕೊಂಡಾಡಿದರು ಮತ್ತು ಅವರು ಭಯ ಹಿಡಿದವರಾಗಿ, “ನಾವು ಈ ಹೊತ್ತು ಅಪೂರ್ವ ಸಂಗತಿಯನ್ನು ಕಂಡೆವು” ಅಂದರು.

ಮತ್ತೊಂದು ಸಬ್ಬತ್ ದಿನದಲ್ಲಿ ಆತನು ಸಭಾಮಂದಿರಕ್ಕೆ ಹೋಗಿ ಉಪದೇಶಮಾಡುತ್ತಿರುವಾಗ, ಅಲ್ಲಿ ಬಲಗೈ ಬತ್ತಿದವನೊಬ್ಬನು ಇದ್ದನು. ಶಾಸ್ತ್ರಿಗಳೂ ಫರಿಸಾಯರೂ ಆತನ ಮೇಲೆ ತಪ್ಪುಹೊರಿಸುವುದಕ್ಕೆ ಕಾರಣ ಸಿಕ್ಕಬೇಕೆಂದು ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವನೋ ಇಲ್ಲವೋ ಎಂದು ಆತನನ್ನು ಹೊಂಚಿನೋಡುತ್ತಿದ್ದರು. ಆದರೆ ಆತನು ಅವರ ಯೋಚನೆಗಳನ್ನು ತಿಳಿದು ಕೈ ಬತ್ತಿಹೋಗಿದ್ದ ಆ ಮನುಷ್ಯನಿಗೆ, “ಎದ್ದು ನಡುವೆ ಬಂದು ನಿಂತುಕೋ” ಎಂದು ಹೇಳಿದನು. ಅವನು ಎದ್ದುಬಂದು ನಿಂತುಕೊಂಡನು. ಆಗ ಯೇಸು ಅವರಿಗೆ, “ನಿಮ್ಮನ್ನು ಒಂದು ಮಾತು ಕೇಳುತ್ತೇನೆ, ಸಬ್ಬತ್ ದಿನದಲ್ಲಿ ಯಾವುದನ್ನು ಮಾಡುವುದು ನ್ಯಾಯ? ಮೇಲನ್ನು ಮಾಡುವುದೋ ಅಥವಾ ಕೇಡನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ ಅಥವಾ ಹಾಳುಮಾಡುವುದೋ?” ಎಂದು ಕೇಳಿ, ಸುತ್ತಲೂ ಇದ್ದವರೆಲ್ಲರನ್ನೂ ನೋಡಿ ಆ ಮನುಷ್ಯನಿಗೆ, “ನಿನ್ನ ಕೈಚಾಚು” ಎಂದು ಹೇಳಿದನು. ಅವನು ಹಾಗೆಯೇ ಮಾಡಿದನು, ಕೈ ವಾಸಿಯಾಯಿತು.

ಆ ಮೇಲೆ ಯೇಸು ಅವರೊಂದಿಗೆ ಬೆಟ್ಟದಿಂದ ಇಳಿದು ಸಮಭೂಮಿಯಲ್ಲಿ ಬಂದು ನಿಂತನು. ಆತನ ಶಿಷ್ಯರ ದೊಡ್ಡಗುಂಪು ಮತ್ತು ಎಲ್ಲಾ ಯೂದಾಯದಿಂದಲೂ, ಯೆರೂಸಲೇಮಿನಿಂದಲೂ, ತೂರ್, ಸೀದೋನ್ ಪಟ್ಟಣಗಳ ಕರಾವಳಿತೀರದಿಂದಲೂ ಬಂದಿದ್ದ ಜನರ ಮಹಾಸಮೂಹವು ಆತನ ಸಂಗಡ ಇದ್ದಿತು. ಆ ಜನರು ಆತನ ಉಪದೇಶವನ್ನು ಕೇಳುವುದಕ್ಕೂ ತಮ್ಮ ರೋಗಗಳನ್ನು ವಾಡಿಸಿಮಾಡಿಸಿಕೊಳ್ಳುವುದಕ್ಕೂ ಬಂದಿದ್ದರು. ದೆವ್ವಪೀಡಿತರು ಸಹ ಬಂದು ಸ್ವಸ್ಥರಾದರು. ಮತ್ತು ಆತನಿಂದ ಶಕ್ತಿ ಹೊರಟು ಎಲ್ಲರನ್ನೂ ವಾಸಿಮಾಡುತ್ತಿದ್ದುದರಿಂದ, ಆ ಗುಂಪಿನ ಜನರೆಲ್ಲಾ ಆತನನ್ನು ಮುಟ್ಟುವುದಕ್ಕೆ ಪ್ರಯತ್ನಪಟ್ಟರು.

ಅಲ್ಲಿ ದಂಡಿನ ಶತಾಧಿಪತಿಗೆ ಇಷ್ಟನಾದ ಒಬ್ಬ ಆಳು ಕ್ಷೇಮವಿಲ್ಲದೆ ಸಾಯುವ ಹಾಗಿದ್ದನು. ಅವನು ಯೇಸುವಿನ ಸುದ್ದಿಯನ್ನು ಕೇಳಿ ಆತನ ಬಳಿಗೆ ಬಂದು ನನ್ನ ಆಳನ್ನು ಸ್ವಸ್ಥಮಾಡಬೇಕೆಂದು ಆತನನ್ನು ಬೇಡಿಕೊಳ್ಳುವ ಹಾಗೆ ಯೆಹೂದ್ಯರ ಹಿರಿಯರನ್ನು ಕಳುಹಿಸಿದನು. ಅವರು ಯೇಸುವಿನ ಬಳಿಗೆ ಬಂದು, “ನಿನ್ನಿಂದ ಇಂಥ ಉಪಕಾರ ಹೊಂದುವುದಕ್ಕೆ ಅವನು ಯೋಗ್ಯನು, ಅವನು ನಮ್ಮ ದೇಶವನ್ನು ಪ್ರೀತಿಸಿ ಪ್ರಾರ್ಥನೆಗಾಗಿ ನಮಗೆ ಸಭಾಮಂದಿರವನ್ನು ಕಟ್ಟಿಸಿಕೊಟ್ಟಿರುವನು” ಎಂದು ಆತನನ್ನು ಬಹಳವಾಗಿ ಬೇಡಿಕೊಳ್ಳಲು, ಯೇಸು ಅವರ ಸಂಗಡ ಹೋದನು. ಆತನು ಇನ್ನೂ ಮನೆಗೆ ಮುಟ್ಟುವುದಕ್ಕೆ ಸ್ವಲ್ಪ ದೂರವಿರುವಾಗಲೇ ಶತಾಧಿಪತಿಯು ಅವನ ಸ್ನೇಹಿತರನ್ನು ಆತನ ಬಳಿಗೆ ಕಳುಹಿಸಿ, “ಕರ್ತನೇ, ತೊಂದರೆ ತೆಗೆದುಕೊಳ್ಳಬೇಡ. ನೀವು ನನ್ನ ಮನೆಗೆ ಬರತಕ್ಕಷ್ಟು ಯೋಗ್ಯತೆ ನನಗಿಲ್ಲ. ಈ ಕಾರಣದಿಂದ ನಾನು ನಿಮ್ಮ ಬಳಿಗೆ ಬರುವುದಕ್ಕೆ ನನ್ನನ್ನೇ ಯೋಗ್ಯನೆಂದು ಎಣಿಸಿಕೊಳ್ಳಲಿಲ್ಲ. ಆದರೆ ನೀವು ಒಂದು ಮಾತು ಹೇಳಿದರೆ ಸಾಕು, ನನ್ನ ಆಳಿಗೆ ಗುಣವಾಗುವುದು. ನಾನು ಸಹ ಮತ್ತೊಬ್ಬರ ಅಧಿಕಾರದ ಕೆಳಗಿರುವವನು; ನನ್ನ ಕೈ ಕೆಳಗೆ ಸಿಪಾಯಿಗಳಿದ್ದಾರೆ. ನಾನು ಅವರಲ್ಲಿ ಒಬ್ಬನಿಗೆ ‘ಹೋಗು’ ಎಂದು ಹೇಳಿದರೆ ಅವನು ಹೋಗುತ್ತಾನೆ. ಮತ್ತೊಬ್ಬನಿಗೆ ‘ಬಾ’ ಎಂದು ಹೇಳಿದರೆ ಅವನು ಬರುತ್ತಾನೆ; ನನ್ನ ಆಳಿಗೆ ‘ಇಂಥಿಂಥದನ್ನು ಮಾಡು’ ಎಂದು ಹೇಳಿದರೆ ಮಾಡುತ್ತಾನೆ” ಎಂಬುದಾಗಿ ಹೇಳಿಸಿದನು. ಯೇಸು ಈ ಮಾತನ್ನು ಕೇಳಿ ಅವನ ವಿಷಯದಲ್ಲಿ ಆಶ್ಚರ್ಯಪಟ್ಟು ತನ್ನ ಹಿಂದೆ ಬರುತ್ತಿರುವ ಗುಂಪನ್ನು ನೋಡಿ, “ನಾನು ಇಂಥ ದೊಡ್ಡ ನಂಬಿಕೆಯನ್ನು ಇಸ್ರಾಯೇಲ್ ಜನರಲ್ಲೂ ಕಾಣಲಿಲ್ಲವೆಂದು ನಿಮಗೆ ಹೇಳುತ್ತೇನೆ” ಅಂದನು. ತರುವಾಯ ಆ ಶತಾಧಿಪತಿಯ ಕಡೆಯಿಂದ ಬಂದವರು ತಿರುಗಿ ಮನೆಗೆ ಹೋಗಿ ಆಳು ಸ್ವಸ್ಥನಾಗಿರುವುದನ್ನು ಕಂಡರು.

ಆತನು ಊರು ಬಾಗಿಲಿನ ಹತ್ತಿರಕ್ಕೆ ಬಂದಾಗ ಸತ್ತುಹೋಗಿದ್ದ ಒಬ್ಬನನ್ನು ಹೊತ್ತುಕೊಂಡು ಹೊರಗೆ ತರುತ್ತಿದ್ದರು. ಅವನು ತನ್ನ ತಾಯಿಗೆ ಒಬ್ಬನೇ ಮಗನಾಗಿದ್ದನು; ಆಕೆಯು ವಿಧವೆಯಾಗಿದ್ದಳು. ಆಕೆಯ ಸಂಗಡ ಊರಿನವರು ಅನೇಕರಿದ್ದರು. ಕರ್ತನು ಆಕೆಯನ್ನು ಕಂಡು ಕನಿಕರಿಸಿ, “ಅಳಬೇಡ” ಎಂದು ಆಕೆಗೆ ಹೇಳಿ, ಚಟ್ಟದ ಹತ್ತಿರಕ್ಕೆ ಹೋಗಿ ಅದನ್ನು ಮುಟ್ಟಲು ಹೊತ್ತುಕೊಂಡವರು ನಿಂತರು. ಆಗ ಆತನು, “ಯೌವನಸ್ಥನೇ, ಏಳು ಎಂದು ನಿನಗೆ ಹೇಳುತ್ತೇನೆ” ಅಂದನು. ಅನ್ನುತ್ತಲೇ ಸತ್ತಿದ್ದವನು ಎದ್ದು ಕುಳಿತುಕೊಂಡು ಮಾತನಾಡುವುದಕ್ಕೆ ತೊಡಗಿದನು. ಯೇಸು ಅವನನ್ನು ಅವನ ತಾಯಿಗೆ ಒಪ್ಪಿಸಿದನು. ಎಲ್ಲರು ಭಯಹಿಡಿದವರಾಗಿ, “ಮಹಾಪ್ರವಾದಿಯು ನಮ್ಮಲ್ಲಿ ಎದ್ದಿದ್ದಾನೆ, ದೇವರು ತನ್ನ ಜನರನ್ನು ಸಂದರ್ಶಿಸಲು ಬಂದಿದ್ದಾನೆ” ಎಂದು ದೇವರನ್ನು ಕೊಂಡಾಡಿದರು. ಈ ಸುದ್ದಿಯು ಯೂದಾಯದಲ್ಲಿಯೂ ಸುತ್ತಲಿರುವ ಎಲ್ಲಾ ಪ್ರಾಂತ್ಯದಲ್ಲಿಯೂ ಹಬ್ಬಿತು.

ಅದೇ ಗಳಿಗೆಯಲ್ಲಿ ಆತನು ಅನೇಕರನ್ನು ರೋಗ, ಕಾಯಿಲೆ, ದೆವ್ವ ಇಂಥವುಗಳಿಂದ ಪೀಡಿತರಾದವರನ್ನು ವಾಸಿಮಾಡಿದನು ಮತ್ತು ಅನೇಕ ಕುರುಡರಿಗೆ ಕಣ್ಣಿನ ದೃಷ್ಟಿ ದಯಪಾಲಿಸಿದನು. ಹೀಗಿರಲು ಯೇಸು ಅವರಿಗೆ ಪ್ರತ್ಯುತ್ತರವಾಗಿ, “ನೀವು ಹೋಗಿ ಕಂಡು ಕೇಳಿದವುಗಳನ್ನು ಯೋಹಾನನಿಗೆ ತಿಳಿಸಿರಿ; ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಜೀವದಿಂದ ಎಬ್ಬಿಸಲ್ಪಡುತ್ತಾರೆ, ಬಡವರಿಗೆ ಸುವಾರ್ತೆಯು ಸಾರಲ್ಪಡುತ್ತಿದೆ.

ದೆವ್ವಗಳ ಕಾಟದಿಂದಲೂ ರೋಗಗಳಿಂದಲೂ ಗುಣಹೊಂದಿದ ಕೆಲವು ಮಂದಿ ಹೆಂಗಸರು ಸಹ ಇದ್ದರು. ಈ ಹೆಂಗಸರು ಯಾರಾರೆಂದರೆ, ಏಳು ದುರಾತ್ಮಗಳಿಂದ ಬಿಡುಗಡೆ ಹೊಂದಿದ್ದ ಮಗ್ದಲದ ಮರಿಯಳು,

ಒಂದು ದಿನ ಯೇಸು ತನ್ನ ಶಿಷ್ಯರೊಂದಿಗೆ ದೋಣಿಯನ್ನು ಹತ್ತಿ, “ಸಮುದ್ರದ ಆಚೇ ದಡಕ್ಕೆ ಹೋಗೋಣ” ಎಂದು ಹೇಳಲು, ಅವರು ದೋಣಿಯನ್ನು ಸಾಗಿಸಿ ಹೊರಟರು. ಅವರು ಹೋಗುತ್ತಿರುವಾಗ ಆತನಿಗೆ ನಿದ್ರೆ ಹತ್ತಿತು, ಅಷ್ಟರಲ್ಲಿ ಬಿರುಗಾಳಿ ಸಮುದ್ರದಲ್ಲಿ ಬೀಸಿ ದೋಣಿಯೊಳಗೆ ನೀರು ತುಂಬಿಕೊಂಡದ್ದರಿಂದ ಅವರೆಲ್ಲರು ಅಪಾಯಕ್ಕೆ ಗುರಿಯಾದರು. ಹೀಗಿರಲಾಗಿ ಅವರು ಆತನ ಹತ್ತಿರ ಬಂದು, “ಗುರುವೇ, ಗುರುವೇ, ನಾವು ಸಾಯುತ್ತಿದ್ದೇವೆ” ಎಂದು ಹೇಳಿ ಆತನನ್ನು ಎಬ್ಬಿಸಿದರು. ಆಗ ಆತನು ಎದ್ದು ಗಾಳಿಯನ್ನೂ ಏರಿ ಬರುತ್ತಿದ್ದ ನೀರಿನ ಅಲೆಗಳನ್ನೂ ಗದರಿಸಿದನು. ಆಗ ಅವು ನಿಂತು, ಶಾಂತವಾಯಿತು. ತರುವಾಯ ಆತನು, “ನಿಮ್ಮ ನಂಬಿಕೆ ಎಲ್ಲಿ?” ಎಂದು ಅವರನ್ನು ಕೇಳಿದನು. ಅವರು ಭಯಪಟ್ಟು, “ಈತನು ಯಾರಿರಬಹುದು? ಗಾಳಿಗೂ ನೀರಿಗೂ ಅಪ್ಪಣೆ ಕೊಡುತ್ತಾನೆ. ಅವು ಕೂಡ ಈತನು ಹೇಳಿದ ಹಾಗೆ ಕೇಳುತ್ತವಲ್ಲಾ?” ಎಂದು ಆಶ್ಚರ್ಯಪಟ್ಟು ಒಬ್ಬರಿಗೊಬ್ಬರು ಮಾತನಾಡಿಕೊಂಡು.

ಯೇಸು ದಡಕ್ಕೆ ಇಳಿಯುತ್ತಲೇ ಆ ಊರಿನವನಾದ ಒಬ್ಬ ಮನುಷ್ಯನು ಆತನೆದುರಿಗೆ ಬಂದನು. ಅವನಿಗೆ ದೆವ್ವಗಳು ಹಿಡಿದಿದ್ದವು. ಅವನು ಬಹುಕಾಲದಿಂದ ವಸ್ತ್ರವನ್ನೇ ಧರಿಸದೆ ಮನೆಯಲ್ಲಿ ವಾಸಿಸದೆ ಸಮಾಧಿಯ ಗವಿಗಳಲ್ಲಿಯೇ ಇರುತ್ತಿದ್ದನು. ಇವನು ಯೇಸುವನ್ನು ಕಂಡು ಆರ್ಭಟಿಸಿ ಆತನ ಮುಂದೆ ಅಡ್ಡಬಿದ್ದು ಮಹಾಶಬ್ದದಿಂದ, “ಯೇಸುವೇ, ಪರಾತ್ಪರನಾದ ದೇವರ ಮಗನೇ, ನನ್ನ ಗೊಡವೆ ನಿನಗೇಕೆ? ನನ್ನನ್ನು ಕಾಡಬೇಡವೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ” ಅಂದನು. ಏಕೆಂದರೆ, ಈ ಮನುಷ್ಯನನ್ನು ಬಿಟ್ಟುಹೋಗಬೇಕೆಂದು ಆತನು ಆ ದೆವ್ವಕ್ಕೆ ಅಪ್ಪಣೆ ಕೊಟ್ಟಿದ್ದನು. ಅದು ಬಹು ಕಾಲದಿಂದ ಅವನನ್ನು ಹಿಡಿದಿತ್ತು; ಇದಲ್ಲದೆ ಅವನನ್ನು ಕಾವಲಲ್ಲಿಟ್ಟು ಸರಪಣಿಗಳಿಂದಲೂ ಬೇಡಿಗಳಿಂದಲೂ ಬಂಧಿಸಿದ್ದರೂ ಅವನು ಅವುಗಳನ್ನು ಮುರಿದುಹಾಕುತ್ತಿದ್ದನು; ಮತ್ತು ಆ ದೆವ್ವವು ಅವನನ್ನು ನಿರ್ಜನ ಪ್ರದೇಶಗಳಿಗೆ ಓಡಿಸುತ್ತಿತ್ತು. ಯೇಸುವು ಅವನಿಗೆ, “ನಿನ್ನ ಹೆಸರೇನೆಂದು?” ಕೇಳಲು ಅವನು, “ನನ್ನ ಹೆಸರು ದಂಡು” ಅಂದನು, ಏಕೆಂದರೆ ಬಹಳ ದೆವ್ವಗಳು ಅವನೊಳಗೆ ಹೊಕ್ಕಿದವು. ಪಾತಾಳಕ್ಕೆ ಹೋಗಿಬಿಡುವಂತೆ ನಮಗೆ ಆಜ್ಞೆಮಾಡಬೇಡವೆಂದು ಅವು ಆತನನ್ನು ಬೇಡಿಕೊಂಡವು. ಅಲ್ಲಿಯ ಗುಡ್ಡದ ಮೇಲೆ ಹಂದಿಗಳ ಹಿಂಡು ಮೇಯುತ್ತಿತ್ತು. ಆ ದೆವ್ವಗಳು, ಆ ಹಂದಿಗಳೊಳಗೆ ಸೇರಿಕೊಳ್ಳುವುದಕ್ಕೆ ನಮಗೆ ಅಪ್ಪಣೆಕೊಡಬೇಕೆಂದು ಯೇಸುವನ್ನು ಬೇಡಿಕೊಂಡವು. ಆತನು ಆಗಲಿ ಎಂದು ಅವುಗಳಿಗೆ ಅಪ್ಪಣೆಕೊಡಲು, ದೆವ್ವಗಳು ಆ ಮನುಷ್ಯನೊಳಗಿಂದ ಹೊರಗೆ ಬಂದು ಹಂದಿಗಳೊಳಗೆ ಹೊಕ್ಕವು. ಆ ಹಂದಿಗಳು ಉಗ್ರವಾಗಿ ಓಡಿ ಕಡಿದಾದ ಸ್ಥಳದಿಂದ ಕೆರೆಯೊಳಗೆ ಬಿದ್ದು ಉಸಿರುಕಟ್ಟಿ ಸತ್ತು ಹೋದವು. ಮೇಯಿಸುವವರು ನಡೆದದ್ದನ್ನು ಕಂಡು ಓಡಿ ಹೋಗಿ ಆ ಊರಲ್ಲಿಯೂ ಹಳ್ಳಿಗಳಲ್ಲಿಯೂ ಅದನ್ನು ತಿಳಿಸಲು, ಜನರು ನಡೆದ ಸಂಗತಿಯನ್ನು ನೋಡುವುದಕ್ಕೆ ಹೊರಟು ಯೇಸುವಿದ್ದಲ್ಲಿಗೆ ಬಂದಾಗ ದೆವ್ವಗಳು ಬಿಟ್ಟುಹೋಗಿದ್ದ ಆ ಮನುಷ್ಯನು ಬಟ್ಟೆಯನ್ನು ಧರಿಸಿಕೊಂಡು ಸ್ವಸ್ಥಬುದ್ಧಿಯಿಂದ ಯೇಸುವಿನ ಪಾದಗಳ ಬಳಿಯಲ್ಲಿ ಕುಳಿತಿರುವುದನ್ನು ಕಂಡು ಹೆದರಿದರು. ನಡೆದ ಸಂಗತಿಯನ್ನು ನೋಡಿದವರು ಆ ದೆವ್ವಹಿಡಿದಿದ್ದವನಿಗೆ ಬಿಡುಗಡೆಯಾದ ರೀತಿಯನ್ನು ಅವರಿಗೆ ತಿಳಿಸಲು, ಗೆರಸೇನರ ಸುತ್ತಲಿರುವ ಸೀಮೆಯವರಿಗೆಲ್ಲಾ ಮಹಾ ಭಯ ಉಂಟಾದದ್ದರಿಂದ ಅವರು ಆತನನ್ನು, ನೀನು ನಮ್ಮನ್ನು ಬಿಟ್ಟುಹೋಗಬೇಕೆಂದು ಬೇಡಿಕೊಂಡರು. ಆತನು ದೋಣಿಯನ್ನು ಹತ್ತಿ ಹಿಂತಿರುಗಿ ಹೋದನು.

ಆಗ ಹನ್ನೆರಡು ವರ್ಷದಿಂದ ರಕ್ತಸ್ರಾವ ರೋಗವಿದ್ದ ಒಬ್ಬ ಹೆಂಗಸು ಅಲ್ಲಿಗೆ ಬಂದಿದ್ದಳು. ಆಕೆಯು ತನ್ನ ಬಳಿ ಇದ್ದ ಹಣವನ್ನೆಲ್ಲಾ ವೆಚ್ಚಮಾಡಿದರೂ ಒಬ್ಬ ವೈದ್ಯರಿಂದಲೂ ಗುಣಹೊಂದಲಾರದೆ ಇದ್ದಳು. ಆಕೆಯು ಹಿಂದಿನಿಂದ ಬಂದು ಆತನ ಅಂಗಿಯ ಅಂಚನ್ನು ಮುಟ್ಟಿದಳು; ಮುಟ್ಟುತ್ತಲೇ ಆಕೆಗೆ ರಕ್ತಸ್ರಾವವಾಗುವುದು ನಿಂತಿತು. ಆಗ ಯೇಸುವು, “ನನ್ನನ್ನು ಮುಟ್ಟಿದವರಾರು?” ಎಂದು ಕೇಳಲು ಎಲ್ಲರೂ, ನಾನಲ್ಲ, ನಾನಲ್ಲ ಅನ್ನಲು ಪೇತ್ರನು, “ಗುರುವೇ, ಎಷ್ಟೋ ಜನರು ನಿನ್ನನ್ನು ಮೈಮೇಲೆ ಬೀಳುತ್ತಾ ನೂಕುತ್ತಿದ್ದಾರಲ್ಲಾ” ಅಂದನು. ಆದರೆ ಯೇಸುವು, “ಯಾರೋ ಒಬ್ಬರು ನನ್ನನ್ನು ಮುಟ್ಟಿದರು; ನನ್ನಿಂದ ಶಕ್ತಿಯು ಹೊರಟಿತೆಂಬುದು ನನಗೆ ಗೊತ್ತಾಯಿತು” ಅಂದಾಗ, ಆ ಹೆಂಗಸು ತಾನು ಮರೆಯಾಗಿಲ್ಲವೆಂದು ತಿಳಿದು ನಡುಗುತ್ತಾ ಬಂದು ಯೇಸುವಿಗೆ ಅಡ್ಡಬಿದ್ದು ತಾನು ಇಂಥ ಕಾರಣದಿಂದ ಮುಟ್ಟಿದೆನೆಂತಲೂ ಮುಟ್ಟಿದ ಕೂಡಲೆ ತನಗೆ ವಾಸಿಯಾಯಿತೆಂದೂ ಎಲ್ಲರ ಮುಂದೆ ತಿಳಿಸಿದಳು. ಯೇಸು ಆಕೆಗೆ, “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು” ಎಂದು ಹೇಳಿದನು.

ಆತನು ಇನ್ನೂ ಮಾತನಾಡುತ್ತಿರುವಲ್ಲಿ ಸಭಾಮಂದಿರದ ಅಧಿಕಾರಿಯ ಕಡೆಯವನೊಬ್ಬನು ಬಂದು, “ನಿನ್ನ ಮಗಳು ಸತ್ತುಹೋದಳು, ಗುರುವಿಗೆ ತೊಂದರೆ ಕೊಡಬೇಡ” ಅಂದನು. ಆದರೆ ಯೇಸು ಅದನ್ನು ಕೇಳಿ ಸಭಾಮಂದಿರದ ಅಧಿಕಾರಿಗೆ, “ಅಂಜಬೇಡ, ನಂಬಿಕೆ ಮಾತ್ರ ಇರಲಿ, ಆಕೆ ಬದುಕುವಳು” ಎಂದು ಉತ್ತರಕೊಟ್ಟನು. ತರುವಾಯ ಆತನು ಆ ಅಧಿಕಾರಿಯ ಮನೆಗೆ ಹೋಗಿ, ಪೇತ್ರ ಯೋಹಾನ ಯಾಕೋಬ ಮತ್ತು ಆ ಹುಡುಗಿಯ ತಂದೆತಾಯಿಯರನ್ನು ಹೊರತು ಬೇರೆ ಯಾರನ್ನೂ ತನ್ನ ಸಂಗಡ ಒಳಕ್ಕೆ ಬರಗೊಡಿಸಲಿಲ್ಲ. ಎಲ್ಲರು ಅಳುತ್ತಾ ಆಕೆಗೋಸ್ಕರ ಎದೆಬಡಿದುಕೊಳ್ಳುತ್ತಾ ಇದ್ದರು. ಯೇಸು ಅವರಿಗೆ, “ಅಳಬೇಡಿರಿ, ಆಕೆ ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ” ಅನ್ನಲು, ಜನರು ಆಕೆ ಸತ್ತಳೆಂದು ತಿಳಿದುಕೊಂಡಿದ್ದರಿಂದ ಆತನನ್ನು ಪರಿಹಾಸ್ಯಮಾಡಿದರು. ಆದರೆ ಆತನು ಆಕೆಯ ಕೈ ಹಿಡಿದು, “ಮಗಳೇ, ಎದ್ದೇಳು” ಎಂದು ಕೂಗಿ ಹೇಳಿದನು. ಆಕೆಯ ಆತ್ಮವು ತಿರುಗಿ ಬಂದು ತಕ್ಷಣವೇ ಆಕೆ ಎದ್ದಳು. ತರುವಾಯ ಆತನು, ಈಕೆಗೆ ಊಟಮಾಡಿಸಿರಿ ಎಂದು ಅಪ್ಪಣೆಕೊಟ್ಟನು. ಆಕೆಯ ತಂದೆತಾಯಿಗಳು ಬೆರಗಾದರು. ಆತನು, ಈ ನಡೆದ ಸಂಗತಿಯನ್ನು ಯಾರಿಗೂ ತಿಳಿಸಬೇಡಿರೆಂದು ಅವರಿಗೆ ಆಜ್ಞಾಪಿಸಿದನು.

ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು ಅವರಿಗೆ ಎಲ್ಲಾ ದೆವ್ವಗಳನ್ನು ಬಿಡಿಸುವ ಮತ್ತು ರೋಗಗಳನ್ನು ವಾಸಿಮಾಡುವ ಶಕ್ತಿ ಮತ್ತು ಅಧಿಕಾರಗಳನ್ನು ಕೊಟ್ಟು, ದೇವರ ರಾಜ್ಯದ ವಿಷಯವನ್ನು ಸಾರುವುದಕ್ಕೂ ಅಸ್ವಸ್ಥರಾದವರನ್ನು ಸ್ವಸ್ಥಮಾಡುವುದಕ್ಕೂ ಅವರನ್ನು ಕಳುಹಿಸಿದನು.

ಆಗ ಅವರು ಹೊರಟು ಗ್ರಾಮಗಳಿಗೆ ಹೋಗಿ, ಸುವಾರ್ತೆಯನ್ನು ಸಾರುತ್ತಾ ಎಲ್ಲಾ ಕಡೆಗಳಲ್ಲಿಯೂ ರೋಗಿಗಳನ್ನು ವಾಸಿಮಾಡುತ್ತಿದ್ದರು.

ಜನರ ಗುಂಪು ಇದನ್ನು ತಿಳಿದು ಯೇಸುವಿನ ಹಿಂದೆ ಬರಲು ಆತನು ಅವರನ್ನು ಪ್ರೀತಿಯಿಂದ ಸೇರಿಸಿಕೊಂಡು ದೇವರ ರಾಜ್ಯದ ವಿಷಯವಾಗಿ ಅವರ ಸಂಗಡ ಮಾತನಾಡಿ, ಸ್ವಸ್ಥತೆ ಅಗತ್ಯವಿದ್ದವರನ್ನು ಗುಣಪಡಿಸಿದನು.

ಸಂಜೆಯಾಗುತ್ತಿರಲು, ಆ ಹನ್ನೆರಡು ಮಂದಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಈ ಗುಂಪಿಗೆ ಅಪ್ಪಣೆಕೊಡು; ಇವರು ಸುತ್ತಲಿರುವ ಹಳ್ಳಿಪಳ್ಳಿಗಳಿಗೆ ಹೋಗಿ ಅವರಿಗೋಸ್ಕರ ಊಟವಸತಿಗಳನ್ನು ಏರ್ಪಡಿಸಿಕೊಳ್ಳಲಿ; ನಾವು ಇಲ್ಲಿ ನಿರ್ಜನ ಪ್ರದೇಶದಲ್ಲಿ ಇದ್ದೇವಲ್ಲಾ” ಎಂದು ಆತನಿಗೆ ಹೇಳಲಾಗಿ, ಆತನು, “ನೀವೇ ಅವರಿಗೆ ಊಟಕ್ಕೆ ಕೊಡಿರಿ” ಅಂದನು. ಅದಕ್ಕವರು, “ನಮ್ಮಲ್ಲಿ ಐದು ರೊಟ್ಟಿ ಎರಡು ಮೀನು ಹೊರತು ಹೆಚ್ಚೇನೂ ಇಲ್ಲ, ನಾವು ಹೋಗಿ ಈ ಜನರಿಗೆಲ್ಲಾ ಆಹಾರವನ್ನು ಕೊಂಡು ತರಬೇಕೋ?” ಅಂದರು. ಅಲ್ಲಿ ಗಂಡಸರೇ ಹೆಚ್ಚು ಕಡಿಮೆ ಐದು ಸಾವಿರ ಮಂದಿಯಿದ್ದರು. ಆಗ ಯೇಸುವು ತನ್ನ ಶಿಷ್ಯರಿಗೆ, “ಇವರನ್ನು ಒಂದೊಂದು ಪಂಕ್ತಿಗೆ ಹೆಚ್ಚುಕಡಿಮೆ ಐವತ್ತೈವತ್ತರಂತೆ ಕೂರಿಸಿರಿ” ಎಂದು ಹೇಳಲು, ಅವರು ಅದರಂತೆ ಮಾಡಿ ಎಲ್ಲರನ್ನೂ ಕುಳ್ಳಿರಿಸಿದರು. ಆ ಮೇಲೆ ಯೇಸುವು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ಅವುಗಳನ್ನು ಆಶೀರ್ವದಿಸಿ, ಮುರಿದು ಶಿಷ್ಯರ ಕೈಗೆ ಕೊಟ್ಟು, ಇದನ್ನು ಜನರ ಗುಂಪಿಗೆ ಹಂಚಿರಿ ಅಂದನು. ಅವರೆಲ್ಲರು ಊಟಮಾಡಿ ತೃಪ್ತರಾದರು; ನಂತರ ಉಳಿದ ತುಂಡುಗಳನ್ನು ಕೂಡಿಸಲಾಗಿ ಅವು ಹನ್ನೆರಡು ಪುಟ್ಟಿ ಆದವು.

ಆತನು ಪ್ರಾರ್ಥನೆಮಾಡುತ್ತಿರಲಾಗಿ ಆತನ ಮುಖಭಾವವು ಬದಲಾಯಿತು. ಆತನ ಉಡುಪು ಬೆಳ್ಳಗಾಗಿ ಮಿಂಚುತ್ತಾ ಬಂದಿತು.

ಆಗ ಆ ಗುಂಪಿನಲ್ಲಿದ್ದ ಒಬ್ಬನು, “ಬೋಧಕನೇ, ನನ್ನ ಮಗನನ್ನು ಕಟಾಕ್ಷಿಸು ಎಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. ನನಗೆ ಇವನೊಬ್ಬನೇ ಮಗನು. ಇವನನ್ನು ದೆವ್ವಹಿಡಿಯುತ್ತದೆ, ಹಿಡಿಯುತ್ತಲೇ ಕೂಗಿಕೊಳ್ಳುತ್ತಾನೆ. ಅದು ಬಾಯಲ್ಲಿ ನೊರೆ ಬರುವಷ್ಟು ಇವನನ್ನು ಒದ್ದಾಡಿಸುತ್ತದೆ ಮತ್ತು ಬಹು ಕಷ್ಟಕೊಟ್ಟು ತೊಂದರೆಪಡಿಸಿದ ಹೊರತು ಬಿಟ್ಟುಬಿಡುವುದಿಲ್ಲ. ಅದನ್ನು ಬಿಡಿಸಬೇಕೆಂದು ನಿನ್ನ ಶಿಷ್ಯರನ್ನು ಬೇಡಿಕೊಂಡೆನು. ಆದರೆ ಅವರಿಂದ ಆಗದೆಹೋಯಿತು” ಎಂದು ಹೇಳಿದನು. ಅದಕ್ಕೆ ಯೇಸು, “ಎಲಾ ಅಪನಂಬಿಕೆಯುಳ್ಳಂಥ ಮೂರ್ಖಸಂತಾನವೇ, ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇದ್ದು ನಿಮ್ಮನ್ನು ಸಹಿಸಿಕೊಳ್ಳಲಿ?” ಎಂದು ಹೇಳಿದನು. ಮತ್ತು ಆ ಮನುಷ್ಯನಿಗೆ “ನಿನ್ನ ಮಗನನ್ನು ಇಲ್ಲಿಗೆ ಕರೆದುಕೊಂಡು ಬಾ” ಅಂದನು. ಆ ಹುಡುಗನು ಇನ್ನೂ ಬರುತ್ತಿರುವಾಗಲೇ ಆ ದೆವ್ವವು ಅವನನ್ನು ನೆಲಕ್ಕೆ ಅಪ್ಪಳಿಸಿ ಬಹಳವಾಗಿ ಒದ್ದಾಡಿಸಿತು. ಆದರೆ ಯೇಸು ಆ ದೆವ್ವವನ್ನು ಗದರಿಸಿ ಆ ಹುಡುಗನಿಗೆ ವಾಸಿಮಾಡಿ ಅವನ ತಂದೆಗೆ ಒಪ್ಪಿಸಿದನು. ಅದನ್ನು ನೋಡಿ ಎಲ್ಲರು ದೇವರ ಮಹತ್ಕಾರ್ಯಕ್ಕೆ ಬೆರಗಾದರು. ಯೇಸುಮಾಡಿದ ಎಲ್ಲಾ ಮಹತ್ಕಾರ್ಯಗಳಿಗೆ ಎಲ್ಲರೂ ಆಶ್ಚರ್ಯಪಡುತ್ತಿರಲಾಗಿ, ಆತನು ತನ್ನ ಶಿಷ್ಯರಿಗೆ,

ಮತ್ತು ನೀವು ಯಾವ ಊರಿಗಾದರೂ ಹೋದ ಮೇಲೆ ಆ ಊರಿನ ಜನರು ನಿಮ್ಮನ್ನು ಸೇರಿಸಿಕೊಂಡರೆ ಅವರು ನಿಮಗೆ ಬಡಿಸಿದ್ದನ್ನು ಊಟಮಾಡಿರಿ. ಅಲ್ಲಿರುವ ರೋಗಿಗಳನ್ನು ವಾಸಿಮಾಡಿ ಅವರಿಗೆ, ‘ದೇವರ ರಾಜ್ಯವು ನಿಮ್ಮ ಸಮೀಪಕ್ಕೆ ಬಂದಿದೆ’ ಎಂದು ಹೇಳಿರಿ.

ನೋಡಿರಿ, ಹಾವುಗಳನ್ನೂ ಚೇಳುಗಳನ್ನೂ ವೈರಿಯ ಸಮಸ್ತ ಬಲವನ್ನೂ ತುಳಿಯುವುದಕ್ಕೆ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವುದೂ ನಿಮಗೆ ಕೇಡು ಮಾಡುವುದೇ ಇಲ್ಲ. ಆದರೂ ದೆವ್ವಗಳು ನಮಗೆ ಅಧೀನವಾಗಿವೆ ಎಂದು ಸಂತೋಷಪಡದೆ ನಿಮ್ಮ ಹೆಸರುಗಳು ಪರಲೋಕದಲ್ಲಿ ಬರೆಯಲ್ಪಟ್ಟಿವೆ ಎಂದು ಸಂತೋಷಪಡಿರಿ” ಎಂದು ಹೇಳಿದನು.

ಒಮ್ಮೆ ಯೇಸು ಮೂಗದೆವ್ವವನ್ನು ಬಿಡಿಸುತ್ತಿದ್ದನು. ಆ ದೆವ್ವವು ಬಿಟ್ಟು ಹೋದ ಮೇಲೆ ಮೂಕನು ಮಾತನಾಡಿದನು; ಅದನ್ನು ನೋಡಿದ ಜನರು ಆಶ್ಚರ್ಯಪಟ್ಟರು.

ಒಂದು ಸಬ್ಬತ್ ದಿನದಲ್ಲಿ ಯೇಸು ಒಂದು ಸಭಾಮಂದಿರದೊಳಗೆ ಉಪದೇಶಮಾಡುತ್ತಾ ಇದ್ದನು. ಅಲ್ಲಿ ಹದಿನೆಂಟು ವರ್ಷಗಳಿಂದ ದುರಾತ್ಮನಿಂದ ಬಾಧಿತಳಾಗಿ ಬೆನ್ನು ಬಗ್ಗಿ ಹೋಗಿ ಗೂನಿಯಾಗಿದ್ದು ಸ್ವಲ್ಪವಾದರೂ ಮೈಯನ್ನು ಮೇಲಕ್ಕೆ ಎತ್ತಲಾರದೆ ಇದ್ದ ಒಬ್ಬ ಹೆಂಗಸು ಇದ್ದಳು. ಯೇಸು ಆಕೆಯನ್ನು ನೋಡಿ ಹತ್ತಿರಕ್ಕೆ ಕರೆದು ಆಕೆಗೆ, “ನಿನ್ನ ರೋಗವು ಬಿಡುಗಡೆಯಾಯಿತು” ಎಂದು ಹೇಳಿ ಆಕೆಯ ಮೇಲೆ ತನ್ನ ಕೈಗಳನ್ನಿಟ್ಟನು. ಇಟ್ಟಕೂಡಲೆ ಆಕೆ ನೆಟ್ಟಗಾದಳು, ದೇವರನ್ನು ಕೊಂಡಾಡಿದಳು. ಆದರೆ ಆ ಸಭಾಮಂದಿರದ ಅಧಿಕಾರಿಯು ನಡೆದ ಸಂಗತಿಯನ್ನು ನೋಡಿ, ಸಬ್ಬತ್ ದಿನದಲ್ಲಿ ಯೇಸು ಸ್ವಸ್ಥ ಮಾಡಿದನಲ್ಲಾ ಎಂದು ಸಿಟ್ಟುಗೊಂಡು ಜನರಿಗೆ, “ಕೆಲಸ ಮಾಡುವುದಕ್ಕೆ ಆರು ದಿನಗಳು ಅವೆಯಷ್ಟೆ. ಆ ದಿನಗಳಲ್ಲಿ ಬಂದು ವಾಸಿಮಾಡಿಸಿಕೊಳ್ಳಿರಿ, ಸಬ್ಬತ್ ದಿನದಲ್ಲಿ ಮಾತ್ರ ಬೇಡ” ಎಂದು ಹೇಳಿದನು. ಆ ಮಾತನ್ನು ಕೇಳಿ ಕರ್ತನು ಅವನಿಗೆ, “ಕಪಟಿಗಳೇ, ನಿಮ್ಮಲ್ಲಿ ಪ್ರತಿಯೊಬ್ಬನು ಸಬ್ಬತ್ ದಿನದಲ್ಲಿ ತನ್ನ ಎತ್ತನ್ನಾಗಲಿ ಕತ್ತೆಯನ್ನಾಗಲಿ ಗೋದಲಿಯಿಂದ ಬಿಚ್ಚಿ ನೀರು ಕುಡಿಸುವುದಕ್ಕಾಗಿ ಹಿಡಿದುಕೊಂಡು ಹೋಗುತ್ತಾನಲ್ಲವೇ. ಹಾಗಾದರೆ ಹದಿನೆಂಟು ವರ್ಷಗಳ ತನಕ ಸೈತಾನನು ಕಟ್ಟಿ ಹಾಕಿದ್ದವಳೂ ಅಬ್ರಹಾಮನ ವಂಶದವಳೂ ಆಗಿರುವ ಈಕೆಯನ್ನು ಸಬ್ಬತ್ ದಿನದಲ್ಲಿ ಈ ಬಂಧನದಿಂದ ಬಿಡಿಸಬಾರದೋ?” ಎಂದು ಕೇಳಿದನು. ಈ ಮಾತುಗಳನ್ನು ಆತನು ಹೇಳುತ್ತಿರಲಾಗಿ ಆತನ ವಿರೋಧಿಗಳೆಲ್ಲರೂ ಅವಮಾನಿತರಾದರು. ಗುಂಪು ಕೂಡಿದ್ದ ಜನರೆಲ್ಲರೂ ಆತನಿಂದಾಗುತ್ತಿದ್ದ ಎಲ್ಲಾ ಮಹತ್ತಾದ ಕಾರ್ಯಗಳಿಗೆ ಸಂತೋಷಪಟ್ಟರು.

ಆತನು ಅವರಿಗೆ, “ನೀವು ಹೋಗಿ ‘ಇಗೋ, ನಾನು ಈಹೊತ್ತು ನಾಳೆ ದೆವ್ವಗಳನ್ನು ಬಿಡಿಸುತ್ತಾ ರೋಗಿಗಳನ್ನು ವಾಸಿಮಾಡುತ್ತಾ ಇದ್ದು, ಮೂರನೆಯ ದಿನದಲ್ಲಿ ಸಿದ್ಧಿಗೆ ಬರುತ್ತೇನೆ’ ಎಂದು ಆ ನರಿಗೆ ಹೇಳಿರಿ.

ಆಗ ಯೇಸು ತನ್ನೆದುರಿಗೆ ಜಲೋದರವುಳ್ಳ ಒಬ್ಬ ಮನುಷ್ಯನಿರುವುದನ್ನು ನೋಡಿ, “ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ಸರಿಯೋ ಅಥವಾ ಸರಿಯಲ್ಲವೋ?” ಎಂದು ಧರ್ಮೋಪದೇಶಕರನ್ನೂ ಫರಿಸಾಯರನ್ನೂ ಕೇಳಿದನು. ಅವರು ಸುಮ್ಮನೇ ಇರಲು ಆತನು ಅವನ ಕೈ ಹಿಡಿದು ಅವನನ್ನು ವಾಸಿಮಾಡಿ ಕಳುಹಿಸಿ,

ಅಪೊಸ್ತಲರು ಕರ್ತನಿಗೆ, “ನಮ್ಮ ನಂಬಿಕೆಯನ್ನು ಹೆಚ್ಚಿಸು” ಎಂದು ಹೇಳಲು, ಕರ್ತನು, “ಸಾಸಿವೇ ಕಾಳಷ್ಟು ನಂಬಿಕೆ ನಿಮಗಿರುವುದಾದರೆ ನೀವು ಈ ಅತ್ತಿಮರಕ್ಕೆ, ‘ನೀನು ಬೇರುಸಹಿತ ಕಿತ್ತುಕೊಂಡುಹೋಗಿ ಸಮುದ್ರದಲ್ಲಿ ನಾಟಿಕೊ’ ಎಂದು ಹೇಳಿದರೂ ಅದು ನಿಮ್ಮ ಮಾತನ್ನು ಕೇಳುವುದು” ಅಂದನು.

ಒಂದು ಹಳ್ಳಿಗೆ ಬಂದಾಗ ಹತ್ತುಮಂದಿ ಕುಷ್ಠರೋಗಿಗಳು ಆತನ ಎದುರಿಗೆ ಬಂದು ದೂರದಲ್ಲಿ ನಿಂತು, “ಯೇಸುವೇ, ಗುರುವೇ, ನಮ್ಮ ಮೇಲೆ ದಯವಿಡು” ಎಂದು ಕೂಗಿ ಹೇಳಿದರು. ಆತನು ಅವರನ್ನು ನೋಡಿ, “ನೀವು ಹೋಗಿ ಯಾಜಕರಿಗೆ ನಿಮ್ಮ ಮೈ ತೋರಿಸಿಕೊಳ್ಳಿರಿ” ಎಂದು ಹೇಳಿದನು. ಅವರು ಹೋಗುತ್ತಿರುವಾಗಲೇ ಶುದ್ಧರಾದರು. ಅವರಲ್ಲಿ ಒಬ್ಬನು ತನಗೆ ಗುಣವಾದದ್ದನ್ನು ನೋಡಿ, ಮಹಾಶಬ್ದದಿಂದ ದೇವರನ್ನು ಕೊಂಡಾಡುತ್ತಾ ಹಿಂತಿರುಗಿ ಬಂದು, ಯೇಸುವಿನ ಪಾದಗಳಿಗೆ ಅಡ್ಡಬಿದ್ದು, ಆತನಿಗೆ ಕೃತಜ್ಞತಾಸುತ್ತಿಯನ್ನು ಸಲ್ಲಿಸಿದನು. ಅವನು ಸಮಾರ್ಯದವನು. ಯೇಸು ಇದನ್ನು ನೋಡಿ, “ಹತ್ತು ಮಂದಿ ಶುದ್ಧರಾದರಲ್ಲವೇ. ಮಿಕ್ಕ ಒಂಭತ್ತು ಮಂದಿ ಎಲ್ಲಿ? ದೇವರನ್ನು ಸ್ತುತಿಸುವುದಕ್ಕೆ ಈ ಅನ್ಯದೇಶದವನೇ ಹೊರತು ಇನ್ನಾರೂ ಹಿಂತಿರುಗಿ ಬರಲಿಲ್ಲವೇ?” ಎಂದು ಹೇಳಿ, ಅವನಿಗೆ, “ಎದ್ದು ಹೋಗು, ನಿನ್ನ ನಂಬಿಕೆಯು ನಿನ್ನನ್ನು ಸ್ವಸ್ಥಮಾಡಿಯದೆ” ಎಂದು ಹೇಳಿದನು.

ಆತನು, “ಮನುಷ್ಯರಿಗೆ ಅಸಾಧ್ಯವಾದ ಕಾರ್ಯಗಳು ದೇವರಿಗೆ ಸಾಧ್ಯವಾಗಿವೆ” ಅಂದನು.

ಆತನು ಯೆರಿಕೋವಿನ ಸಮೀಪಕ್ಕೆ ಬಂದಾಗ ದಾರಿಯ ಬಳಿಯಲ್ಲಿ ಕುಳಿತು ಭಿಕ್ಷೆಬೇಡುತ್ತಿದ್ದ ಒಬ್ಬ ಕುರುಡನು, ಗುಂಪಾಗಿ ಹೋಗುತ್ತಿದ್ದ ಜನರ ಶಬ್ದವನ್ನು ಕೇಳಿ ಇದೇನು ಎಂದು ವಿಚಾರಿಸಿದನು. ಅವರು ಅವನಿಗೆ, ನಜರೇತಿನ ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾನೆಂದು ತಿಳಿಸಿದಾಗ, ಅವನು, “ಯೇಸುವೇ, ದಾವೀದನ ಕುಮಾರನೇ, ನನ್ನನ್ನು ಕರುಣಿಸು” ಎಂದು ಕೂಗಿಕೊಂಡನು. ಮುಂದೆ ಹೋಗುತ್ತಿದ್ದವರು ಸುಮ್ಮನಿರು ಎಂದು ಅವನನ್ನು ಗದರಿಸಲು ಅವನು, “ದಾವೀದನ ಕುಮಾರನೇ, ನನ್ನನ್ನು ಕರುಣಿಸು” ಎಂದು ಮತ್ತಷ್ಟು ಬೇಡಿಕೊಂಡನು. ಆಗ ಯೇಸು ನಿಂತು, ಅವನನ್ನು ತನ್ನ ಬಳಿಗೆ ಕರೆತರುವುದಕ್ಕೆ ಅಪ್ಪಣೆಕೊಟ್ಟನು. ಅವನು ಹತ್ತಿರಕ್ಕೆ ಬಂದಾಗ, ಆತನು ಅವನಿಗೆ, “ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ?” ಎಂದು ಕೇಳಲು, ಅವನು, “ನನಗೆ ಕಣ್ಣುಕಾಣುವಂತೆ ಮಾಡು ಕರ್ತನೇ” ಅಂದನು. ಯೇಸು ಅವನಿಗೆ, “ನಿನಗೆ ಕಣ್ಣುಕಾಣುವಂತಾಗಲಿ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿದೆ” ಎಂದು ಹೇಳಿದನು. ತಕ್ಷಣವೇ ಅವನಿಗೆ ಕಣ್ಣು ಕಾಣಿಸಿದವು, ಅವನು ದೇವರನ್ನು ಕೊಂಡಾಡುತ್ತಾ ಯೇಸುವಿನ ಹಿಂದೆ ಹೋದನು. ಜನರೆಲ್ಲರು ನಡೆದ ಸಂಗತಿಯನ್ನು ನೋಡಿ ದೇವರನ್ನು ಸ್ತುತಿಸಿದರು.

ಅಷ್ಟರಲ್ಲಿ ಅವರಲ್ಲಿ ಒಬ್ಬನು ಮಹಾಯಾಜಕನ ಆಳನ್ನು ಕತ್ತಿಯಿಂದ ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿ ಹಾಕಿದನು. ಆದರೆ ಯೇಸು, “ಇಷ್ಟಕ್ಕೇ ಬಿಡಿರಿ” ಎಂದು ಹೇಳಿ ಆ ಆಳಿನ ಕಿವಿಯನ್ನು ಮುಟ್ಟಿ ವಾಸಿಮಾಡಿದನು.

ಆತನು ಇಲ್ಲಿ ಇಲ್ಲ, ಜೀವಿತನಾಗಿ ಎದ್ದಿದ್ದಾನೆ. ಆತನು ಇನ್ನೂ ಗಲಿಲಾಯದಲ್ಲಿದ್ದಾಗ, ಮನುಷ್ಯಕುಮಾರನು ಪಾಪಿಗಳಾದ ಮನುಷ್ಯರ ಕೈಗೆ ಒಪ್ಪಿಸಲ್ಪಟ್ಟು, ಶಿಲುಬೆಗೆ ಹಾಕಲ್ಪಟ್ಟು, ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದು ಬರುವುದು ಅಗತ್ಯವೆಂದು ನಿಮಗೆ ಹೇಳಿದ್ದನ್ನು ನೆನಪಿಗೆ ತಂದುಕೊಳ್ಳಿರಿ” ಎಂದು ಹೇಳಿದನು.

ಅಲ್ಲಿ ದ್ರಾಕ್ಷಾರಸವು ಸಾಲದೆ ಹೋದಾಗ, ಯೇಸುವಿನ ತಾಯಿಯು ಆತನಿಗೆ “ಅವರಲ್ಲಿ ದ್ರಾಕ್ಷಾರಸವು ಮುಗಿದುಹೋಗಿದೆ” ಎಂದು ತಿಳಿದಳು. ಯೇಸು ಆಕೆಗೆ “ಅಮ್ಮಾ, ಅದಕ್ಕೆ ನಾನೇನು ಮಾಡಲಿ? ನನ್ನ ಸಮಯವು ಇನ್ನೂ ಬಂದಿಲ್ಲ” ಎಂದು ಉತ್ತರಕೊಟ್ಟನು. ಆತನ ತಾಯಿಯು ಸೇವಕರಿಗೆ “ಆತನು ನಿಮಗೆ ಏನು ಹೇಳುತ್ತಾನೋ ಅದನ್ನು ಮಾಡಿರಿ” ಎಂದಳು. ಯೆಹೂದ್ಯರ ಶುದ್ಧಾಚಾರ ಪದ್ಧತಿಯ ಪ್ರಕಾರ ಅಲ್ಲಿ ಆರು ಕಲ್ಲಿನ ಬಾನೆಗಳು ಇದ್ದವು. ಪ್ರತಿಯೊಂದು ಬಾನೆಯೂ ಎರಡು ಇಲ್ಲವೆ ಮೂರು ಕೊಳಗ ನೀರು ಹಿಡಿಯುವ ಅಳತೆಯುಳ್ಳದ್ದಾಗಿತ್ತು. ಯೇಸು ಅವರಿಗೆ, “ಆ ಬಾನೆಗಳಲ್ಲಿ ನೀರು ತುಂಬಿರಿ” ಎಂದನು. ಅವರು ಅವುಗಳನ್ನು ಕಂಠದವರೆಗೆ ತುಂಬಿದರು. ಅನಂತರ ಆತನು ಸೇವಕರಿಗೆ, “ಈಗ ಇದನ್ನು ತೆಗೆದುಕೊಂಡು ಹೋಗಿ ಔತಣದ ಮೇಲ್ವಿಚಾರಕನಿಗೆ ಕೊಡಿರಿ” ಎಂದು ಹೇಳಿದಾಗ, ಅವರು ತೆಗೆದುಕೊಂಡು ಹೋಗಿ ಕೊಟ್ಟರು. ಔತಣದ ಮೇಲ್ವಿಚಾರಕನು ದ್ರಾಕ್ಷಾರಸವಾಗಿ ಮಾರ್ಪಟ್ಟಿದ್ದ ನೀರನ್ನು ರುಚಿನೋಡಿದಾಗ, ಅದು ಎಲ್ಲಿಂದ ಬಂದಿತೆಂದು ಅವನಿಗೆ ತಿಳಿದಿರಲಿಲ್ಲ, ಆದರೆ ನೀರನ್ನು ತೋಡಿಕೊಂಡು ತಂದ ಸೇವಕರಿಗೆ ತಿಳಿದಿತ್ತು. ಔತಣದ ಮೇಲ್ವಿಚಾರಕನು ಮದುಮಗನನ್ನು ಕರೆದು, “ಎಲ್ಲರೂ ಉತ್ತಮವಾದ ದ್ರಾಕ್ಷಾರಸವನ್ನು ಮೊದಲು ಕೊಟ್ಟು ಅಮಲೇರಿದ ಮೇಲೆ ಸಾಧಾರಣವಾದ ದ್ರಾಕ್ಷಾರಸವನ್ನು ಕೊಡುತ್ತಾರೆ. ನೀನಾದರೋ ಉತ್ತಮವಾದ ದ್ರಾಕ್ಷಾರಸವನ್ನು ಇದುವರೆಗೂ ಇಟ್ಟುಕೊಂಡಿರುವೆ” ಎಂದನು. ಯೇಸು ಈ ಮೊದಲನೆಯ ಸೂಚಕ ಕಾರ್ಯವನ್ನು ಗಲಿಲಾಯದ ಕಾನಾ ಊರಿನಲ್ಲಿ ಮಾಡಿ, ತನ್ನ ಮಹಿಮೆಯನ್ನು ತೋರ್ಪಡಿಸಿದನು. ಇದರಿಂದ ಆತನ ಶಿಷ್ಯರು ಆತನಲ್ಲಿ ನಂಬಿಕೆಯಿಟ್ಟರು.

ಆತನು ಪಸ್ಕಹಬ್ಬದ ಜಾತ್ರೆಯಲ್ಲಿ ಯೆರೂಸಲೇಮಿನಲ್ಲಿ ಇದ್ದಾಗ ಬಹು ಜನರು ಆತನು ಮಾಡಿದ ಸೂಚಕಕಾರ್ಯಗಳನ್ನು ನೋಡಿ ಆತನ ಹೆಸರಿನಲ್ಲಿ ನಂಬಿಕೆ ಇಟ್ಟರು.

ಅವನು ರಾತ್ರಿಯಲ್ಲಿ ಯೇಸುವಿನ ಬಳಿಗೆ ಬಂದು ಆತನಿಗೆ, “ಗುರುವೇ, ನೀನು ದೇವರ ಬಳಿಯಿಂದ ಬಂದ ಬೋಧಕನೆಂದು ನಾವು ಬಲ್ಲೆವು. ನೀನು ಮಾಡುವಂಥ ಈ ಸೂಚಕ ಕಾರ್ಯಗಳನ್ನು ದೇವರ ಸಹಾಯವಿಲ್ಲದೆ ಮಾಡುವುದು ಯಾರಿಂದಲೂ ಆಗದು” ಎಂದು ಹೇಳಿದನು.

ಹೀಗಿರಲಾಗಿ, ಯೇಸು ತಾನು ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ ಗಲಿಲಾಯದ ಕಾನಾ ಊರಿಗೆ ಹಿಂತಿರುಗಿ ಬಂದನು. ಆಗ ಕಪೆರ್ನೌಮಿನಲ್ಲಿದ್ದ ಅರಮನೆಯ ಒಬ್ಬ ಅಧಿಕಾರಿಯ ಮಗನು ಅಸ್ವಸ್ಥನಾಗಿದ್ದನು. ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದ ಸುದ್ದಿಯನ್ನು ಆ ಅಧಿಕಾರಿಯು ಕೇಳಿದಾಗ ತನ್ನ ಮಗನು ಸಾಯುವ ಸ್ಥಿತಿಯಲ್ಲಿದುದ್ದರಿಂದ ಯೇಸುವಿನ ಬಳಿಗೆ ಹೋಗಿ, “ನೀನು ಬಂದು ನನ್ನ ಮಗನನ್ನು ಸ್ವಸ್ಥಮಾಡು” ಎಂದು ಬೇಡಿಕೊಂಡನು. ಯೇಸು ಅವನಿಗೆ “ನೀವು ಸೂಚಕ ಕಾರ್ಯಗಳನ್ನೂ ಮತ್ತು ಅದ್ಭುತ ಕಾರ್ಯಗಳನ್ನೂ ನೋಡದಿದ್ದರೆ ನಂಬುವುದೇ ಇಲ್ಲ” ಎಂದು ಹೇಳಿದನು. ಆ ಅರಮನೆಯ ಅಧಿಕಾರಿಯು “ಆಯ್ಯಾ, ನನ್ನ ಮಗನು ಸಾಯುವುದಕ್ಕೆ ಮುಂಚೆ ನೀನು ಬರಬೇಕು” ಅನ್ನಲು ಯೇಸು ಅವನಿಗೆ “ಹೋಗು ನಿನ್ನ ಮಗನು ಬದುಕುತ್ತಾನೆ” ಎಂದು ಹೇಳಿದನು. ಆ ಮನುಷ್ಯನು ಯೇಸು ತನಗೆ ಹೇಳಿದ ಮಾತನ್ನು ನಂಬಿ ಹೊರಟು ಹೋದನು. ಅವನು ಇನ್ನೂ ಘಟ್ಟಾ ಇಳಿದು ಹೋಗುತ್ತಿರುವಾಗಲೇ ಅವನ ಆಳುಗಳು ಅವನೆದುರಿಗೆ ಬಂದು ಅವನ ಮಗನು ಬದುಕಿರುವುದಾಗಿ ಅವನಿಗೆ ಹೇಳಿದರು. ಅವನು ಎಷ್ಟು ಘಂಟೆಯಲ್ಲಿ ಚೇತರಿಸಿಕೊಂಡನು ಎಂದು ಅವರನ್ನು ಕೇಳಿದಾಗ ಅವರು, “ನಿನ್ನೆ ಮಧ್ಯಾಹ್ನ ಒಂದು ಘಂಟೆಗೆ ಜ್ವರವು ಅವನನ್ನು ಬಿಟ್ಟಿತು” ಎಂದರು. ಆಗ “ನಿನ್ನ ಮಗನು ಬದುಕುತ್ತಾನೆ” ಎಂದು ಯೇಸು ತನಗೆ ಹೇಳಿದ ತಾಸಿನಲ್ಲಿಯೇ ಅದು ಸಂಭವಿಸಿತೆಂದು ಆ ತಂದೆಯು ತಿಳಿದುಕೊಂಡದ್ದರಿಂದ ಅವನೂ ಅವನ ಮನೆಯವರೆಲ್ಲರೂ ಯೇಸುವನ್ನು ನಂಬಿದರು.

ಅಲ್ಲಿ ಕುರಿಬಾಗಿಲು ಎಂಬ ಸ್ಥಳದ ಬಳಿ ಐದು ಮಂಟಪಗಳಿಂದ ಕೂಡಿದ ಒಂದು ಕೊಳವಿದೆ. ಅದನ್ನು ಇಬ್ರಿಯ ಭಾಷೆಯಲ್ಲಿ ಬೇತ್ಸಥಾ ಎಂದು ಕರೆಯುತ್ತಾರೆ. ಇವುಗಳಲ್ಲಿ ಅಸ್ವಸ್ಥರೂ, ರೋಗಿಗಳೂ, ಕುರುಡರೂ, ಕುಂಟರೂ, ಪಾರ್ಶ್ವವಾಯು ಪೀಡಿತರು ಮೊದಲಾದ ಅನೇಕ ರೋಗಿಗಳು ಅಲ್ಲಿ ಬಿದ್ದುಕೊಂಡಿರುತ್ತಿದ್ದರು. (ನೀರು ಕಲಕುವುದನ್ನು ಕಾದುಕೊಂಡು ಅಲ್ಲಿ ಬಿದ್ದುಕೊಂಡಿರುತ್ತಿದ್ದರು. ಆಗಾಗ ಒಬ್ಬ ದೂತನು ಬಂದು ಕೊಳದ ನೀರನ್ನು ಕಲಕಿಹೊಗುತ್ತಿದ್ದನು. ಆಗ ಮೊದಲು ಯಾರು ಕೊಳದೊಳಗೆ ಇಳಿಯುತ್ತಿದ್ದರೋ ಅವರ ರೋಗವು ವಾಸಿಯಾಗುತ್ತಿತ್ತು.) ಅಲ್ಲಿ ಮೂವತ್ತೆಂಟು ವರ್ಷಗಳಿಂದ ರೋಗಿಯಾಗಿದ್ದ ಒಬ್ಬ ಮನುಷ್ಯನಿದ್ದನು. ಅವನು ಬಿದ್ದುಕೊಂಡಿರುವುದನ್ನು ಯೇಸು ನೋಡಿ ಇವನಿಗೆ ಹೀಗಾಗಿ ಬಹು ಕಾಲವಾಗಿದೆ ಎಂದು ಅರಿತು ಅವನಿಗೆ “ನಿನಗೆ ಗುಣಹೊಂದಲು ಮನಸ್ಸಿದೆಯೋ?” ಎಂದು ಕೇಳಿದನು. ಅದಕ್ಕೆ ಆ ರೋಗಿಯು “ಆಯ್ಯಾ, ನೀರು ಉಕ್ಕುವಾಗ ನನ್ನನ್ನು ಕೊಳದೊಳಗೆ ಇಳಿಸುವುದಕ್ಕೆ ಯಾರೂ ಇಲ್ಲ. ನಾನು ಹೋಗುವುದರೊಳಗೆ ನನಗಿಂತ ಮೊದಲು ಮತ್ತೊಬ್ಬನು ಇಳಿಯುತ್ತಾನೆ” ಎಂದನು. ಯೇಸು ಅವನಿಗೆ, “ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ” ಎಂದು ಹೇಳಿದನು. ಕೂಡಲೇ ಆ ಮನುಷ್ಯನು ಸ್ವಸ್ಥನಾಗಿ ತನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆದನು. ಅಂದು ಸಬ್ಬತ್ ದಿನವಾಗಿತ್ತು,

ಬಹು ಜನರು ಆತನು ರೋಗಿಗಳಲ್ಲಿ ಮಾಡಿದ ಸೂಚಕಕಾರ್ಯಗಳನ್ನು ನೋಡಿದ್ದರಿಂದ, ಜನರ ದೊಡ್ಡಗುಂಪು ಆತನನ್ನು ಹಿಂಬಾಲಿಸುತ್ತಿತ್ತು.

ಹೀಗಿರಲಾಗಿ ಯೇಸು ಕಣ್ಣೆತ್ತಿ ನೋಡಿದಾಗ ಜನರ ದೊಡ್ಡಗುಂಪು ತನ್ನ ಕಡೆಗೆ ಬರುವುದನ್ನು ನೋಡಿ “ಇವರ ಊಟಕ್ಕೆ ನಾವು ಎಲ್ಲಿಂದ ರೊಟ್ಟಿ ಕೊಂಡು ತರೋಣ?” ಎಂದು ಫಿಲಿಪ್ಪನನ್ನು ಕೇಳಿದನು. ತಾನು ಮಾಡಲಿದ್ದಕಾರ್ಯ ಯೇಸುವಿಗೆ ತಿಳಿದಿದ್ದರೂ, ಫಿಲಿಪ್ಪನನ್ನು ಪರೀಕ್ಷಿಸುವ ಸಲುವಾಗಿ, ಆ ಪ್ರಶ್ನೆಯನ್ನು ಕೇಳಿದನು. ಅದಕ್ಕೆ ಫಿಲಿಪ್ಪನು, “ಪ್ರತಿಯೊಬ್ಬನಿಗೆ ಸ್ವಲ್ಪ ಸ್ವಲ್ಪ ಸಿಕ್ಕಬೇಕಾದರೂ ಇನ್ನೂರು ದಿನಾರಿ ಮೌಲ್ಯದ ರೊಟ್ಟಿಯಾದರೂ ಅವರಿಗೆ ಸಾಲುವುದಿಲ್ಲ” ಎಂದನು. ಆಗ ಆತನ ಶಿಷ್ಯರಲ್ಲಿ ಒಬ್ಬನಾಗಿರುವ ಸೀಮೋನ್ ಪೇತ್ರನ ತಮ್ಮನಾದ ಅಂದ್ರೆಯನು ಆತನಿಗೆ; “ಇಲ್ಲಿ ಒಬ್ಬ ಹುಡುಗನ ಬಳಿಯಲ್ಲಿ ಐದು ಜವೆಗೋದಿಯ ರೊಟ್ಟಿಗಳೂ, ಎರಡು ಮೀನುಗಳೂ ಇವೆ. ಆದರೆ ಇಷ್ಟೊಂದು ಜನರಿಗೆ ಅವು ಯಾತಕ್ಕಾದಾವು?” ಎಂದು ಹೇಳಲು, ಯೇಸು “ಆ ಜನರನ್ನು ಊಟಕ್ಕೆ ಕುಳ್ಳಿರಿಸಿರಿ” ಎಂದನು. ಆ ಸ್ಥಳದಲ್ಲಿ ಬಹಳ ಹುಲ್ಲು ಬೆಳೆದಿತ್ತು. ಜನರು ಹುಲ್ಲಿನ ಮೇಲೆ ಕುಳಿತುಕೊಂಡರು. ಗಂಡಸರ ಸಂಖ್ಯೆ ಹೆಚ್ಚುಕಡಿಮೆ ಐದು ಸಾವಿರವಿತ್ತು. ಆಮೇಲೆ ಯೇಸು ಆ ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿ, ಕುಳಿತಿದ್ದವರಿಗೆ ಹಂಚಿದನು. ಅದೇ ರೀತಿ ಮೀನುಗಳನ್ನು ಅವರಿಗೆ ಬೇಕಾದಷ್ಟು ಹಂಚಿದನು. ಅವರಿಗೆ ತೃಪ್ತಿಯಾದ ಮೇಲೆ ಯೇಸು ತನ್ನ ಶಿಷ್ಯರಿಗೆ, “ಮಿಕ್ಕ ತುಂಡುಗಳನ್ನು ಕೂಡಿಸಿರಿ, ಇದರಲ್ಲಿ ಯಾವುದೂ ವ್ಯರ್ಥವಾಗಬಾರದು” ಎಂದು ಹೇಳಿದನು. ಅವರು ಆ ಐದು ಜವೆಗೋದಿಯ ರೊಟ್ಟಿಗಳಲ್ಲಿ ಜನರು ತಿಂದು ಮಿಕ್ಕ ತುಂಡುಗಳನ್ನು ಕೂಡಿಸಿ, ಹನ್ನೆರಡು ಪುಟ್ಟಿಗಳಿಗೆ ತುಂಬಿಸಿದರು. ಆತನು ಮಾಡಿದ ಈ ಸೂಚಕಕಾರ್ಯವನ್ನು ಆ ಜನರು ನೋಡಿ, “ನಿಜವಾಗಿಯೂ ಲೋಕಕ್ಕೆ ಬರಬೇಕಾಗಿದ್ದ ಪ್ರವಾದಿಯು ಈತನೇ” ಎಂದು ಹೇಳಿಕೊಂಡರು.

ಹೀಗಿರಲಾಗಿ ಅವರು ಹುಟ್ಟು ಹಾಕುತ್ತಾ ಸುಮಾರು ಒಂದು ಹರದಾರಿ ದೂರ ಹೋದ ಬಳಿಕ ಯೇಸು ನೀರಿನ ಮೇಲೆ ನಡೆಯುತ್ತಾ ದೋಣಿಯ ಸಮೀಪಕ್ಕೆ ಬರುವುದನ್ನು ನೋಡಿ ಭಯಪಟ್ಟರು. ಆದರೆ ಯೇಸು ಅವರಿಗೆ, “ಭಯಪಡಬೇಡಿರಿ, ನಾನೇ!” ಎಂದನು. ಆಗ ಆತನನ್ನು ದೋಣಿಯಲ್ಲಿ ಸೇರಿಸಿಕೊಳ್ಳಬೇಕೆಂದಿದ್ದರು. ಆ ಕ್ಷಣವೇ ದೋಣಿಯು ಅವರು ಹೋಗಬೇಕಾಗಿದ್ದ ದಡಕ್ಕೆ ಮುಟ್ಟಿತು.

ಆಗ ಅವರು ಆತನ ಮೇಲೆ ಎಸೆಯಲು, ಕಲ್ಲುಗಳನ್ನು ಎತ್ತಿಕೊಂಡರು. ಆದರೆ ಯೇಸು ಮರೆಯಾಗಿ ದೇವಾಲಯದೊಳಗಿನಿಂದ ಹೊರಗೆ ಹೊರಟು ಹೋದನು.

ಯೇಸು ಹಾದು ಹೋಗುತ್ತಿದ್ದಾಗ, ಹುಟ್ಟು ಕುರುಡನಾಗಿದ್ದ ಒಬ್ಬ ಮನುಷ್ಯನನ್ನು ಕಂಡನು. ಆತನ ಶಿಷ್ಯರು, “ಗುರುವೇ, ಇವನು ಕುರುಡನಾಗಿ ಹುಟ್ಟಿರುವುದಕ್ಕೆ ಯಾರು ಪಾಪಮಾಡಿದರು? ಇವನೋ ಅಥವಾ ಇವನ ತಂದೆತಾಯಿಗಳೋ?” ಎಂದು ಆತನನ್ನು ಕೇಳಿದರು. ಯೇಸು, “ಇವನಾಗಲಿ ಇವನ ತಂದೆತಾಯಿಗಳಾಗಲಿ ಪಾಪ ಮಾಡಲಿಲ್ಲ. ಆದರೆ ದೇವರ ಕ್ರಿಯೆಗಳು ಇವನಲ್ಲಿ ತೋರಿಬರುವುದಕ್ಕಾಗಿ ಹೀಗಾಯಿತು. ನನ್ನನ್ನು ಕಳುಹಿಸಿದಾತನ ಕ್ರಿಯೆಗಳನ್ನು ನಾವು ಹಗಲಿರುವಾಗಲೇ ಮಾಡಬೇಕು. ರಾತ್ರಿ ಬರುತ್ತದೆ, ಅದು ಬಂದಾಗ ಯಾರೂ ಕೆಲಸ ಮಾಡಲಾರರು. ನಾನು ಲೋಕದಲ್ಲಿರುವಾಗ ಲೋಕಕ್ಕೆ ಬೆಳಕಾಗಿದ್ದೇನೆ” ಎಂದನು. ಆತನು ಹೀಗೆ ಹೇಳಿ ನೆಲದ ಮೇಲೆ ಉಗುಳಿ ಆ ಉಗುಳಿನಿಂದ ಕೆಸರು ಮಾಡಿ, ಆ ಕೆಸರನ್ನು ಕುರುಡನ ಕಣ್ಣುಗಳಿಗೆ ಹಚ್ಚಿದನು. ಆತನು ಅವನಿಗೆ, “ನೀನು ಹೋಗಿ ಸಿಲೋವ (ಸಿಲೋವ ಎಂದರೆ ‘ಕಳುಹಿಸಲ್ಪಟ್ಟವನು’ ಎಂದರ್ಥ) ಕೊಳದಲ್ಲಿ ತೊಳೆದುಕೋ” ಎಂದನು. ಅವನು ಹೋಗಿ ತೊಳೆದುಕೊಂಡು ದೃಷ್ಟಿಯುಳ್ಳವನಾಗಿ ಬಂದನು. ಆಗ ನೆರೆಹೊರೆಯವರು ಅವನು ಮೊದಲು ಭಿಕ್ಷುಕನಾಗಿದ್ದಾಗ ಅವನನ್ನು ನೋಡಿದ್ದವರೂ, “ಭಿಕ್ಷೆಬೇಡುತ್ತಾ ಕುಳಿತುಕೊಂಡಿದ್ದವನು ಇವನೇ ಅಲ್ಲವೇ?” ಎಂದು ವಿಚಾರಿಸಿದರು.

ಹುಟ್ಟು ಕುರುಡನಾಗಿದ್ದ ಒಬ್ಬ ಮನುಷ್ಯನ ಕಣ್ಣುಗಳನ್ನು ಯಾವನಾದರೂ ತೆರೆದಿದ್ದನ್ನು ಲೋಕಾದಿಯಿಂದ ಒಬ್ಬನಾದರೂ ಕೇಳಲಿಲ್ಲ. ಈತನು ದೇವರಿಂದ ಬಂದವನಲ್ಲದಿದ್ದರೆ ಏನೂ ಮಾಡಲಾರದೆ ಇರುತ್ತಿದ್ದನು” ಎಂದನು.

ಯೇಸು, “ಆ ಕಲ್ಲನ್ನು ತೆಗೆದು ಹಾಕಿರಿ” ಎನ್ನಲು, ತೀರಿಹೋದವನ ಸಹೋದರಿಯಾದ ಮಾರ್ಥಳು ಆತನಿಗೆ, “ಕರ್ತನೇ, ಅವನು ಸತ್ತು ನಾಲ್ಕು ದಿನಗಳಾದವು, ಈಗ ದುರ್ವಾಸನೆ ಬಂದಿರಬಹುದು” ಎಂದಳು. ಯೇಸು ಆಕೆಗೆ, “ನೀನು ನಂಬಿದರೆ ದೇವರ ಮಹಿಮೆಯನ್ನು ಕಾಣುವಿ ಎಂದು ನಾನು ನಿನಗೆ ಹೇಳಲಿಲ್ಲವೇ?” ಎಂದು ಉತ್ತರ ಕೊಟ್ಟನು ಆಗ ಅವರು ಕಲ್ಲನ್ನು ತೆಗೆದು ಹಾಕಿದರು. ಯೇಸು ಕಣ್ಣೆತ್ತಿ ಮೇಲಕ್ಕೆ ನೋಡಿ, “ತಂದೆಯೇ ನೀನು ನನಗೆ ಕಿವಿಗೊಟ್ಟಿದ್ದಕ್ಕಾಗಿ ನಿನಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನೀನು ನನಗೆ ಯಾವಾಗಲೂ ಕಿವಿಗೊಡುತ್ತೀ ಎಂದು ನನಗೆ ತಿಳಿದೇ ಇದೆ. ಆದರೂ ನೀನೇ ನನ್ನನ್ನು ಕಳುಹಿಸಿಕೊಟ್ಟಿರುವಿ ಎಂದು ಸುತ್ತಲೂ ನಿಂತಿರುವ ಈ ಜನರು ನಂಬುವಂತೆ ಅವರಿಗೋಸ್ಕರ ಈ ಮಾತುಗಳನ್ನಾಡಿದ್ದೇನೆ” ಎಂದು ಹೇಳಿದನು. ಆತನು ಹೀಗೆ ಹೇಳಿದ ಮೇಲೆ, “ಲಾಜರನೇ, ಹೊರಗೆ ಬಾ!” ಎಂದು ಗಟ್ಟಿಯಾದ ಸ್ವರದಿಂದ ಕೂಗಿದನು. ಸತ್ತಿದ್ದವನು ಹೊರಗೆ ಬಂದನು. ಅವನ ಕೈಕಾಲುಗಳು ಶವ ವಸ್ತ್ರಗಳಿಂದ ಸುತ್ತಿದ್ದವು. ಅವನ ಮುಖಕ್ಕೆ ವಸ್ತ್ರ ಸುತ್ತಲಾಗಿತ್ತು. ಯೇಸು ಅವರಿಗೆ, “ಅವನನ್ನು ಬಿಡಿಸಿರಿ, ಅವನು ಹೋಗಲಿ” ಎಂದು ಹೇಳಿದನು.

ಆಗ ಮುಖ್ಯಯಾಜಕರೂ ಫರಿಸಾಯರೂ ಹಿರೀಸಭೆಯನ್ನು ಕೂಡಿಸಿ, “ನಾವು ಈಗ ಏನುಮಾಡಬೇಕು? ಈ ಮನುಷ್ಯನು ಬಹು ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ.

ಯೇಸು ಅನೇಕ ಸೂಚಕಕಾರ್ಯಗಳನ್ನು ಅವರ ಎದುರಿನಲ್ಲಿ ಮಾಡಿದರೂ ಅವರು ಆತನನ್ನು ನಂಬಲಿಲ್ಲ.

ನಾನು ತಂದೆಯಲ್ಲಿಯೂ, ತಂದೆಯು ನನ್ನಲ್ಲಿಯೂ ಇದ್ದಾನೆಂದು ತಿಳಿದು ನೀವು ನನ್ನನ್ನು ನಂಬಿರಿ.ಇಲ್ಲವೇ ನಾನು ಮಾಡಿದ ಕಾರ್ಯಗಳ ನಿಮಿತ್ತದಿಂದಾದರೂ ನೀವು ನನ್ನನ್ನು ನಂಬಿರಿ. “ನಿಮಗೆ ನಿಜನಿಜವಾಗಿ ಹೇಳುತ್ತೇನೆ. ನನ್ನನ್ನು ನಂಬುವವನು ನಾನು ಮಾಡುವ ಕಾರ್ಯಗಳನ್ನು ತಾನು ಸಹ ಮಾಡುತ್ತಾನೆ;ಮತ್ತು ಇವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ಮಾಡುವನು, ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ.

ಇದಲ್ಲದೆ ನೀವು ನನ್ನ ಹೆಸರಿನಲ್ಲಿ ಏನೇನು ಬೇಡಿಕೊಳ್ಳುವಿರೋ ಅದನ್ನು ನಾನು ನೆರವೇರಿಸುವೆನು. ಹೀಗೆ ಮಗನ ಮೂಲಕವಾಗಿ ತಂದೆಗೆ ಮಹಿಮೆ ಉಂಟಾಗುವುದು. ನೀವು ನನ್ನ ಹೆಸರಿನಲ್ಲಿ ನನ್ನನ್ನು ಏನಾದರೂ ಬೇಡಿಕೊಂಡರೆ ನಾನು ಅದನ್ನು ನೆರವೇರಿಸುವೆನು.

ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನೀವು ಏನಾದರೂ ಬೇಡಿಕೊಳ್ಳಿರಿ ಅದು ನಿಮಗೆ ದೊರೆಯುವುದು.

ಅದೇ ದಿನ ಎಂದರೆ ವಾರದ ಮೊದಲನೆಯ ದಿನದ ಸಂಜೆಯಲ್ಲಿ ಶಿಷ್ಯರು ಯೆಹೂದ್ಯರ ಭಯದಿಂದ ತಾವು ಇದ್ದ ಮನೆಯ ಬಾಗಿಲುಗಳನ್ನು ಮುಚ್ಚಿಕೊಂಡಿರಲು, ಆಗ ಯೇಸು ಬಂದು ಅವರ ನಡುವೆ ನಿಂತು, “ನಿಮಗೆಸಮಾಧಾನವಾಗಲಿ” ಎಂದನು. ಇದನ್ನು ಹೇಳಿದ ಮೇಲೆ ಅವರಿಗೆ ತನ್ನ ಕೈಗಳನ್ನೂ ಪಕ್ಕೆಯನ್ನೂ ತೋರಿಸಿದನು. ಆಗ ಶಿಷ್ಯರು ಕರ್ತನನ್ನು ನೋಡಿ ಸಂತೋಷಪಟ್ಟರು.

ಉಳಿದ ಶಿಷ್ಯರು ಅವನಿಗೆ, “ನಾವು ಕರ್ತನನ್ನು ನೋಡಿದ್ದೇವೆ” ಎಂದು ಹೇಳಿದರು. ಅದಕ್ಕೆ ಅವನು, “ನಾನು ಆತನ ಕೈಗಳಲ್ಲಿ ಮೊಳೆಗಳಿಂದಾದ ಗಾಯವನ್ನು ನೋಡಿ, ಆ ಮೊಳೆಯ ಗಾಯದಲ್ಲಿ ನನ್ನ ಬೆರಳನ್ನು ಇಟ್ಟು ಆತನ ಪಕ್ಕೆಯಲ್ಲಿ ನನ್ನ ಕೈಯನ್ನು ಹಾಕದ ಹೊರತು ನಿಮ್ಮ ಮಾತನ್ನು ನಂಬುವುದೇ ಇಲ್ಲ” ಎಂದನು. ಎಂಟು ದಿನಗಳಾದ ಮೇಲೆ ಆತನ ಶಿಷ್ಯರು ಪುನಃ ಒಳಗಿದ್ದಾಗ ತೋಮನೂ ಅವರ ಜೊತೆ ಇದ್ದನು. ಬಾಗಿಲುಗಳು ಮುಚ್ಚಿದ್ದವು ಆಗ ಯೇಸು ಬಂದು ನಡುವೆ ನಿಂತು ನಿಮಗೆ “ಸಮಾಧಾನವಾಗಲಿ ಎಂದನು” ಆ ಮೇಲೆ ತೋಮನಿಗೆ, “ನಿನ್ನ ಬೆರಳನ್ನು ಈ ಕಡೆ ಚಾಚಿ ನನ್ನ ಕೈಗಳನ್ನು ಮುಟ್ಟಿ ನೋಡು, ನಿನ್ನ ಕೈ ಚಾಚಿ ನನ್ನ ಪಕ್ಕೆಯಲ್ಲಿ ಹಾಕು. ಅಪನಂಬಿಕೆಯಳ್ಳವನಾಗಿರಬೇಡ, ನಂಬುವವನಾಗು” ಎಂದು ಹೇಳಿದನು. ತೋಮನು ಆತನಿಗೆ, “ನನ್ನ ಕರ್ತನೇ, ನನ್ನ ದೇವರೇ” ಎಂದು ಹೇಳಿದನು.

ಯೇಸು ಇನ್ನು ಬೇರೆ ಎಷ್ಟೋ ಸೂಚಕಕಾರ್ಯಗಳನ್ನು ತನ್ನ ಶಿಷ್ಯರ ಮುಂದೆ ಮಾಡಿದನು. ಅವುಗಳನ್ನೆಲ್ಲಾ ಈ ಗ್ರಂಥದಲ್ಲಿ ಬರೆದಿರುವುದಿಲ್ಲಾ.

ಆಗ ಅವರಿಗೆ ಸೀಮೋನ ಪೇತ್ರನು, “ನಾನು ಮೀನು ಹಿಡಿಯಲು ಹೋಗುತ್ತೇನೆ” ಎಂದು ಹೇಳಲು ಅವರು ಅವನಿಗೆ, “ನಾವೂ ಸಹ ನಿನ್ನ ಜೊತೆಯಲ್ಲಿ ಬರುತ್ತೇವೆ” ಎಂದರು. ಅವರು ಹೊರಟು ದೋಣಿಯನ್ನು ಹತ್ತಿದರು. ಆದರೆ ಆ ರಾತ್ರಿ ಅವರಿಗೆ ಏನೂ ಸಿಗಲಿಲ್ಲ. ಬೆಳಗಾಗುವಾಗ ಯೇಸು ದಡದಲ್ಲಿ ನಿಂತಿದ್ದನು. ಆದಾಗ್ಯೂ ಶಿಷ್ಯರು ಆತನನ್ನು ಯೇಸುವೇ ಎಂದು ಗುರುತಿಸಲಿಲ್ಲ. ಆಗ ಯೇಸು ಅವರನ್ನು, “ಮಕ್ಕಳಿರಾ, ನಿಮ್ಮಲ್ಲಿ ಮೀನುಗಳು ಉಂಟೋ?” ಎಂದು ಕೇಳಲು, ಅವರು ಆತನಿಗೆ “ಇಲ್ಲ” ಎಂದು ಉತ್ತರಕೊಟ್ಟರು. ಆತನು ಅವರಿಗೆ, “ನೀವು ದೋಣಿಯ ಬಲಗಡೆಯಲ್ಲಿ ಬಲೆಯನ್ನು ಬೀಸಿರಿ; ಆಗ ನಿಮಗೆ ಸಿಕ್ಕುತ್ತವೆ” ಎಂದು ಹೇಳಿದನು. ಅವರು ಬಲೆ ಬೀಸಿದಾಗ ಮೀನುಗಳು ರಾಶಿ ರಾಶಿಯಾಗಿ ಬಲೆಗೆ ಬಂದು ಸೇರಿದ್ದರಿಂದ, ಅವರಿಗೆ ಬಲೆಯನ್ನು ಎಳೆಯುವುದಕ್ಕೆ ಸಾಧ್ಯವಾಗದೆ ಹೋಯಿತು. ಆಗ ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು ಪೇತ್ರನಿಗೆ, “ಆತನು ಕರ್ತನೇ” ಎಂದು ಹೇಳಿದನು. ಸೀಮೋನ್ ಪೇತ್ರನು ಅದನ್ನು ಕೇಳಿ ತಾನು ತೆಗೆದು ಬಿಟ್ಟಿದ್ದ ತನ್ನ ಮೇಲಂಗಿಯನ್ನು ಸುತ್ತಿಕೊಂಡು ಸಮುದ್ರದೊಳಗೆ ಧುಮುಕಿದನು. ದಡವು ದೂರವಿರಲಿಲ್ಲ, ಹೆಚ್ಚು ಕಡಿಮೆ ಇನ್ನೂರು ಅಡಿ ದೂರವಿತ್ತು. ಉಳಿದ ಶಿಷ್ಯರು ಮೀನು ತುಂಬಿದ್ದ ಆ ಬಲೆಯನ್ನು ಎಳೆಯುತ್ತಾ ದೋಣಿಯಲ್ಲಿಯೇ ಬಂದರು. ಅವರು ದಡಕ್ಕೆ ಬಂದು ಸೇರಿದಾಗ, ಕೆಂಡಗಳನ್ನೂ ಅವುಗಳ ಮೇಲೆ ಇಟ್ಟಿದ್ದ ಮೀನುಗಳನ್ನು ಮತ್ತು ರೊಟ್ಟಿಯನ್ನು ಕಂಡರು. ಯೇಸು ಅವರಿಗೆ, “ನೀವು ಈಗ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿರಿ” ಎಂದು ಹೇಳಲು, ಸೀಮೋನ್ ಪೇತ್ರನು ದೋಣಿಯನ್ನು ಹತ್ತಿ ಬಲೆಯನ್ನು ದಡಕ್ಕೆ ಎಳದುಕೊಂಡು ಬಂದನು. ಅದು ನೂರೈವತ್ಮೂರು ದೊಡ್ಡ ಮೀನುಗಳಿಂದ ತುಂಬಿತ್ತು. ಅಷ್ಟು ಮೀನುಗಳು ಇದ್ದರೂ ಬಲೆಯು ಹರಿದಿರಲಿಲ್ಲ.

ಪೇತ್ರನು ಹಿಂತಿರುಗಿ ನೋಡಿದಾಗ, ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು ಹಿಂದೆ ಬರುವುದನ್ನು ಕಂಡನು. ಆ ಶಿಷ್ಯನು ಊಟದ ಸಮಯದಲ್ಲಿ ಯೇಸುವಿನ ಎದೆಗೆ ಒರಗಿಕೊಂಡು, “ಕರ್ತನೇ, ನಿನ್ನನ್ನು ಹಿಡಿದುಕೊಡುವವನು ಯಾರು?” ಎಂದು ಕೇಳಿದವನೇ. ಇವನನ್ನು ಪೇತ್ರನು ನೋಡಿ ಯೇಸುವಿಗೆ, “ಕರ್ತನೇ, ಇವನ ಬಗ್ಗೆ ಏನು ಹೇಳುತ್ತೀಯಾ?” ಎಂದು ಕೇಳಲು, ಯೇಸು ಅವನಿಗೆ “ನಾನು ಬರುವ ತನಕ ಇವನು ಉಳಿದಿರಬೇಕೆಂಬುದು ನನಗೆ ಮನಸ್ಸಾಗಿದ್ದರೆ ಅದರಿಂದ ನಿನಗೇನು? ನೀನು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. ಆದುದರಿಂದ ಆ ಶಿಷ್ಯನು ಸಾಯುವುದಿಲ್ಲವೆಂಬ ಮಾತು ಸಹೋದರರಲ್ಲಿ ಹಬ್ಬಿತು. ಆದರೆ ಅವನು ಸಾಯುವುದಿಲ್ಲವೆಂದು ಯೇಸು ಅವನಿಗೆ ಹೇಳಲಿಲ್ಲ. “ನಾನು ಬರುವ ತನಕ ಅವನು ಉಳಿದಿರಬೇಕೆಂದು ನನಗೆ ಮನಸ್ಸಿದ್ದರೆ ಅದು ನಿನಗೇನು?” ಎಂದು ಮಾತ್ರ ಹೇಳಿದನು.

ಇದಲ್ಲದೆ ಯೇಸುವು ಮಾಡಿದ ಇನ್ನೂ ಬೇರೆ ಅನೇಕ ಸಂಗತಿಗಳು ಸಹ ಇವೆ. ಅವುಗಳನ್ನೆಲ್ಲಾ ಒಂದೊಂದಾಗಿ ಬರೆಯುವುದಾದರೆ, ಆ ಪುಸ್ತಕಗಳು ಲೋಕವೇ ಹಿಡಿಸಲಾರದಷ್ಟಾಗುವುದು ಎಂದು ನಾನು ಭಾವಿಸುತ್ತೇನೆ.

ಯೇಸುವು ಬಾಧೆಪಟ್ಟು ಸತ್ತ ನಂತರ ತಾನು ಜೀವಂತನಾಗಿ ಎದ್ದು ಬಂದಿದ್ದೇನೆ ಎಂದು ಅನೇಕ ಸಂಭವಗಳ ಮೂಲಕ ತಾನು ಆರಿಸಿಕೊಂಡಿದ್ದ ಅಪೊಸ್ತಲರಿಗೆ ಸ್ಪಷ್ಟಪಡಿಸಿದನು. ಸತತವಾಗಿ ನಲವತ್ತು ದಿನಗಳ ತನಕ ಅವರಿಗೆ ಕಾಣಿಸಿಕೊಳ್ಳುತ್ತಾ ದೇವರ ರಾಜ್ಯದ ವಿಷಯವನ್ನು ಕುರಿತು ಅವರಿಗೆ ಬೋಧಿಸಿದನು.

ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬರಲು ನೀವು ಶಕ್ತಿಯನ್ನು ಹೊಂದಿದವರಾಗಿ ಯೆರೂಸಲೇಮಿನಲ್ಲಿಯೂ, ಯೂದಾಯದ ಎಲ್ಲಾ ಸ್ಥಳದಲ್ಲಿಯು, ಸಮಾರ್ಯ ಸೀಮೆಗಳಲ್ಲಿಯೂ, ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರುವಿರಿ” ಅಂದನು. ಈ ಮಾತುಗಳನ್ನು ಅವನು ಹೇಳಿದ ಬಳಿಕ ಅವರು ನೋಡುತ್ತಿದ್ದ ಹಾಗೆಯೇ ಆತನು ಪರಲೋಕಕ್ಕೆ ಎತ್ತಲ್ಪಟ್ಟನು, ಮೋಡವೊಂದು ಆತನನ್ನು ಕವಿದುಕೊಂಡಿದ್ದರಿಂದ, ಯೇಸುವು ಅವರ ಕಣ್ಣಿಗೆ ಮರೆಯಾದನು.

ಆಗ ಬಿರುಗಾಳಿ ಬೀಸುತ್ತಿದೆಯೋ ಎಂಬಂತೆ ಫಕ್ಕನೆ ಆಕಾಶದೊಳಗಿಂದ ಒಂದು ಶಬ್ದವುಂಟಾಗಿ ಅವರು ಕುಳಿತಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು. ಉರಿಯುವ ಬೆಂಕಿಯೂ ವಿಂಗಡಿಸಿಕೊಳ್ಳುವ ನಾಲಿಗೆಗಳ ಹಾಗೆ ಅವರಿಗೆ ಕಾಣಿಸಿ ಕೊಂಡು ಅವರಲ್ಲಿ ಒಬ್ಬೊಬ್ಬರ ಮೇಲೆ ಒಂದೊಂದಾಗಿ ಕುಳಿತುಕೊಂಡವು. ಆಗ ಅವರೆಲ್ಲರೂ ಪವಿತ್ರಾತ್ಮಭರಿತರಾದರು, ಅವರಿಗೆ ಆ ಪವಿತ್ರಾತ್ಮನು ನೀಡಿದ ಶಕ್ತಿಯ ಪ್ರಕಾರ ಬೇರೆಬೇರೆ ಭಾಷೆಗಳಲ್ಲಿ ಮಾತನಾಡುವುದಕ್ಕೆ ಪ್ರಾರಂಭಿಸಿದರು. ಆಕಾಶದ ಕೆಳಗಿರುವ ಎಲ್ಲಾ ದೇಶಗಳಿಂದ ಬಂದ ಸದ್ಭಕ್ತರಾದ ಯೆಹೂದ್ಯರು ಯೆರೂಸಲೇಮಿನಲ್ಲಿ ವಾಸವಾಗಿದ್ದರು. ಆ ಸಪ್ಪಳವಾದಾಗ ಆ ಜನರೆಲ್ಲರೂ ಗುಂಪು ಗುಂಪಾಗಿ ಕೂಡಿಬಂದು ಪ್ರತಿಯೊಬ್ಬರೂ ತಮ್ಮತಮ್ಮ ಭಾಷೆಯಲ್ಲೇ ಇವರು ಮಾತನಾಡುವುದನ್ನು ಕೇಳಿ ದಿಗ್ಭ್ರಮೆಗೊಂಡರು.

“ಕಡೆ ದಿನಗಳಲ್ಲಿ ನಾನು ಎಲ್ಲಾ ಜನರ ಮೇಲೆ ನನ್ನ ಆತ್ಮವನ್ನು ಸುರಿಸುವೆನು, ಆಗ ನಿಮ್ಮಲ್ಲಿರುವ ಗಂಡಸರೂ ಹೆಂಗಸರೂ ಪ್ರವಾದಿಸುವರು; ನಿಮ್ಮ ಯೌವನಸ್ಥರಿಗೆ ದಿವ್ಯದರ್ಶನಗಳಾಗುವವು; ನಿಮ್ಮ ಹಿರಿಯರಿಗೆ ಕನಸುಗಳು ಬೀಳುವವು; ಇದಲ್ಲದೆ ಆ ದಿನಗಳಲ್ಲಿ ನನ್ನ ದಾಸದಾಸಿಯರ ಮೇಲೆಯೂ ನನ್ನ ಆತ್ಮವನ್ನು ಸುರಿಸುವೆನು, ಅವರೂ ಪ್ರವಾದಿಸುವರು. ಕರ್ತನ ಆಗಮನದ ಗಂಭೀರವಾದ ಮಹಾ ದಿನವು ಬರುವುದಕ್ಕೆ ಮೊದಲೇ ಮೇಲೆ ಆಕಾಶದಲ್ಲಿ ಅದ್ಭುತಕಾರ್ಯಗಳನ್ನೂ ಕೆಳಗೆ ಭೂಮಿಯಲ್ಲಿ ಸೂಚಕಕಾರ್ಯಗಳನ್ನೂ ಉಂಟುಮಾಡುವೆನು. ರಕ್ತ, ಬೆಂಕಿ, ಹಬೆಯಂತೆ ಏರುವ ಹೊಗೆ ಇವು ಉಂಟಾಗುವವು. ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು.

“ಇಸ್ರಾಯೇಲ್ ಜನರೇ, ನನ್ನ ಮಾತುಗಳನ್ನು ಕೇಳಿರಿ;, ನಜರೇತಿನ ಯೇಸು ಇದ್ದನಲ್ಲಾ, ನಿಮಗೂ ತಿಳಿದಿರುವಂತೆ ದೇವರು ಆತನ ಕೈಯಿಂದ ಮಹತ್ತುಗಳನ್ನೂ ಅದ್ಭುತಗಳನ್ನೂ ಸೂಚಕಕಾರ್ಯಗಳನ್ನೂ ನಿಮ್ಮಲ್ಲಿ ನಡಿಸಿ ಆತನನ್ನು ತನಗೆ ಮೆಚ್ಚಿಕೆಯಾದವನೆಂದು ನಿಮಗೆ ತೋರಿಸಿಕೊಟ್ಟನು.

ಎಲ್ಲರೂ ಭಯ ಪರವಶರಾದರು. ಇದಲ್ಲದೆ ಅನೇಕ ಅದ್ಭುತಕಾರ್ಯಗಳೂ, ಸೂಚಕಕಾರ್ಯಗಳೂ ಅಪೊಸ್ತಲರ ಮುಖಾಂತರ ನಡೆದವು.

ಅಲ್ಲಿ ಹುಟ್ಟು ಕುಂಟನಾಗಿದ್ದ ಒಬ್ಬ ಮನುಷ್ಯನನ್ನು ಕೆಲವರು ಹೊತ್ತುಕೊಂಡು ಬಂದರು; ದೇವಾಲಯದೊಳಕ್ಕೆ ಹೋಗುವವರಿಂದ ಭಿಕ್ಷೆಬೇಡುವುದಕ್ಕಾಗಿ ದೇವಾಲಯದ ಸುಂದರದ್ವಾರವೆಂಬ ಬಾಗಿಲಿನಲ್ಲಿ ಅವನನ್ನು ಪ್ರತಿದಿನ ಕೂರಿಸುತ್ತಿದ್ದರು. ಅವನು ದೇವಾಲಯದೊಳಕ್ಕೆ ಹೋಗುತ್ತಿರುವ ಪೇತ್ರ ಮತ್ತು ಯೋಹಾನರನ್ನು ಕಂಡು ಭಿಕ್ಷೆ ಬೇಡಿದನು. ಪೇತ್ರ, ಯೋಹಾನರಿಬ್ಬರೂ ಅವನನ್ನು ದೃಷ್ಟಿಸಿ ನೋಡಿದರು. ಪೇತ್ರನು ಅವನಿಗೆ “ನಮ್ಮನ್ನು ನೋಡು” ಅಂದನು. ಅವನು ಅವರಿಂದ ಏನಾದರೂ ದೊರಕೀತೆಂದು ನಿರೀಕ್ಷಿಸಿ, ಅವರನ್ನು ಲಕ್ಷ್ಯವಿಟ್ಟು ನೋಡಿದನು. ಆಗ ಪೇತ್ರನು “ಬೆಳ್ಳಿ ಬಂಗಾರವಂತೂ ನನ್ನಲ್ಲಿಲ್ಲ, ನನ್ನಲ್ಲಿರುವುದನ್ನು ನಿನಗೆ ಕೊಡುತ್ತೇನೆ; ನಜರೇತಿನ ಯೇಸು ಕ್ರಿಸ್ತನ ಹೆಸರಿನಲ್ಲಿ ಎದ್ದು ನಡೆ” ಎಂದು ಹೇಳಿ, ಅವನನ್ನು ಬಲಗೈಹಿಡಿದು ಎತ್ತಿದನು. ತಕ್ಷಣವೇ ಅವನ ಅಂಗಾಲುಗಳಿಗೆ, ಮುಂಗಾಲುಗಳಿಗೆ ಹಾಗು ಹಿಮ್ಮಡಿಗಳಿಗೂ ಬಲಬಂದಿತು. ಅವನು ಹಾರಿ ನಿಂತು ನಡೆದಾಡಿದನು; ನಡೆಯುತ್ತಾ, ಕುಣಿಯುತ್ತಾ ದೇವರನ್ನು ಕೊಂಡಾಡುತ್ತಾ ಅವರ ಜೊತೆಯಲ್ಲಿ ದೇವಾಲಯದೊಳಗೆ ಹೋದನು. ಅವನು ನಡೆಯುತ್ತಾ ದೇವರನ್ನು ಕೊಂಡಾಡುತ್ತಾ ಇರುವದನ್ನು ಜನರೆಲ್ಲರು ನೋಡಿ; ಇವನು ದೇವಾಲಯದ ಸುಂದರ ದ್ವಾರವೆಂಬ ಬಾಗಿಲಿನಲ್ಲಿ ಕುಳಿತು ಭಿಕ್ಷೆಬೇಡುತ್ತಿದ್ದವನೆಂದು ಗುರುತುಹಿಡಿದು, ಅವನಿಗೆ ಸಂಭವಿಸಿರುವ ಅದ್ಭುತಕಾರ್ಯಕ್ಕೆ ವಿಸ್ಮಯಗೊಂಡು ಬಹಳ ಬೆರಗಾದರು. ಗುಣಹೊಂದಿದ ಕುಂಟನು ಪೇತ್ರ ಮತ್ತು ಯೋಹಾನನ್ನು ಹಿಡುಕೊಂಡೇ ಇರುವಾಗ, ಆಶ್ಚರ್ಯಪಡುತ್ತಿರುವ ಆ ಜನರೆಲ್ಲರು ಸೊಲೊಮೋನನದೆಂದು ಹೆಸರುಳ್ಳ ಮಂಟಪಕ್ಕೆ ಒಟ್ಟಾಗಿ ಓಡಿಬಂದರು.

ಪೇತ್ರನು ಇದನ್ನು ನೋಡಿ ಜನರಿಗೆ; “ಇಸ್ರಾಯೇಲ್ ಜನರೇ, ಈ ಘಟನೆಯಿಂದ ನೀವೇಕೆ ಆಶ್ಚರ್ಯಚಕಿತರಾಗಿದ್ದೀರಿ? ನೀವು ನಮ್ಮನೇಕೆ ಈ ರೀತಿ ದೃಷ್ಟಿಯಿಟ್ಟು ನೋಡುತ್ತಿದ್ದಿರಿ? ನಾವು ನಮ್ಮ ಸ್ವಂತ ಶಕ್ತಿಯಿಂದಾಗಲಿ, ನಮ್ಮ ದೈವಭಕ್ತಿಯಿಂದಾಗಲಿ ಇವನನ್ನು ನಡೆಯುವಂತೆ ಮಾಡಿದೆವೆಂದು ಭಾವಿಸಬೇಡಿರಿ.

ನೀವು ನೋಡುತ್ತಿರುವಂತಹ, ನಿಮಗೆ ಗುರುತಿರುವಂತಹ ಈ ಮನುಷ್ಯನು ಗುಣವಾಗುವುದಕ್ಕೆ ಯೇಸುವಿನ ಹೆಸರಿನಲ್ಲಿ ಇಟ್ಟ ಅವನ ನಂಬಿಕೆಯೇ ಕಾರಣ; ಆ ಹೆಸರೇ ಇವನನ್ನು ಬಲಪಡಿಸಿತು. ಆತನ ಮೂಲಕ ಉಂಟಾಗಿರುವ ನಂಬಿಕೆಯೇ ಇವನಿಗೆ ನಿಮ್ಮೆಲ್ಲರ ಮುಂದೆ ಸಂಪೂರ್ಣಸೌಖ್ಯವನ್ನು ಕೊಟ್ಟಿತು.

ಪೇತ್ರ ಮತ್ತು ಯೋಹಾನನ್ನು ಧೈರ್ಯದಿಂದ ಮಾತನಾಡುವುದನ್ನು ಆ ಜನರೆಲ್ಲರೂ ನೋಡಿ ಅವರು ಶಾಸ್ತ್ರಭ್ಯಾಸಮಾಡದ ಸಾಮಾನ್ಯರೆಂದು ತಿಳಿದು ಆಶ್ಚರ್ಯಪಟ್ಟರು. ಇವರು ಯೇಸುವಿನ ಸಂಗಡ ಇದ್ದವರೆಂದು ಗುರುತು ಹಿಡಿದರು. ಮತ್ತು ಕ್ಷೇಮ ಹೊಂದಿದ ಆ ಮನುಷ್ಯನು ಅವರ ಸಂಗಡ ನಿಂತಿರುವುದನ್ನು ನೋಡಿ ಪ್ರತಿಯಾಗಿ ಏನೂ ಮಾತನಾಡಲಾರದೆ ಇದ್ದರು. ಆ ಮೇಲೆ ಸಭೆಯಿಂದ ಸ್ವಲ್ಪ ಹೊರಗೆ ಹೋಗಿರೆಂದು ಅವರಿಗೆ ಅಪ್ಪಣೆ ಕೊಟ್ಟು,, “ಇವರನ್ನು ನಾವೇನು ಮಾಡೋಣ? ಬಹು ಅಪರೂಪವಾದ ಒಂದು ಸೂಚಕಕಾರ್ಯವು ಇವರ ಮೂಲಕವಾಗಿ ನಡೆಯಿತೆಂಬುದು ಯೆರೂಸಲೇಮಿನ ಜನರೆಲ್ಲರಿಗೂ ಗೊತ್ತಾಗಿದೆ, ಅದನ್ನು ಅಲ್ಲಗಳೆಯುವಂತಿಲ್ಲ.

ಕರ್ತನೇ, ಈಗ ನೀನು ಅವರ ಬೆದರಿಕೆಗಳನ್ನು ನೋಡಿ ನಿನ್ನ ಪವಿತ್ರ ಸೇವಕನಾದ ಯೇಸುವಿನ ಹೆಸರಿನ ಮೂಲಕವಾಗಿ ರೋಗ ಪರಿಹಾರವೂ, ಸೂಚಕಕಾರ್ಯಗಳೂ, ಅದ್ಭುತಕಾರ್ಯಗಳೂ ಜರಗುವಂತೆ ನಿನ್ನ ಕೈಚಾಚುತ್ತಿರುವಲ್ಲಿ, ನಿನ್ನ ದಾಸರು, ನಿನ್ನ ವಾಕ್ಯವನ್ನು ಧೈರ್ಯದಿಂದ ಹೇಳುವ ಹಾಗೆ ಅನುಗ್ರಹಿಸು” ಅಂದರು. ಹೀಗೆ ಪ್ರಾರ್ಥನೆ ಮಾಡಿದ ಕೂಡಲೇ ಅವರು ನೆರೆದಿದ್ದ ಸ್ಥಳವು ನಡುಗಿತು. ಅವರೆಲ್ಲರು ಪವಿತ್ರಾತ್ಮ ಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಹೇಳತೊಡಗಿದರು.

ಅನನೀಯನೆಂಬ ಒಬ್ಬ ಮನುಷ್ಯನು ತನ್ನ ಹೆಂಡತಿ ಸಪ್ಫೈರಳೊಂದಿಗೆ ತನ್ನ ಒಂದು ಭೂಮಿಯನ್ನು ಮಾರಿ ಹೆಂಡತಿಯ ಸಮ್ಮತಿಯಿಂದ ಅದರ ಕ್ರಯದಲ್ಲಿ ಒಂದು ಭಾಗವನ್ನು ಬಚ್ಚಿಟ್ಟುಕೊಂಡು ಉಳಿದ ಭಾಗವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಟ್ಟನು. ಆಗ ಪೇತ್ರನು; “ಅನನೀಯನೇ, ನೀನು ಆ ಹೊಲದ ಕ್ರಯದಲ್ಲಿ ಒಂದು ಭಾಗವನ್ನು ಬಚ್ಚಿಟ್ಟುಕೊಂಡು ಪವಿತ್ರಾತ್ಮನನ್ನು ವಂಚಿಸುವಂತೆ ಸೈತಾನನು ನಿನ್ನ ಹೃದಯದಲ್ಲಿ ಏಕೆ ತುಂಬಿಸಿಕೊಂಡಿ? ಆ ಆಸ್ತಿ ಮೊದಲು ನಿನ್ನದಾಗಿಯೇ ಇತ್ತಲ್ಲವೇ. ಮಾರಿದ ಮೇಲೆ ಬಂದ ಹಣವು ನಿನ್ನ ಅಧೀನದಲ್ಲೇ ಇತ್ತಲ್ಲವೇ, ನೀನು ಈ ಕಾರ್ಯವನ್ನು ನಿನ್ನ ಹೃದಯದಲ್ಲಿ ಯೋಚಿಸಿಕೊಂಡದ್ದು ಏಕೆ? ನೀನು ಸುಳ್ಳಾಡಿದ್ದು ಮನುಷ್ಯರಿಗಲ್ಲ, ದೇವರಿಗೆ” ಅಂದನು. ಈ ಮಾತುಗಳನ್ನು ಅನನೀಯನು ಕೇಳಿದ ತಕ್ಷಣವೇ ಬಿದ್ದು ಪ್ರಾಣಬಿಟ್ಟನು; ಕೇಳಿದವರೆಲ್ಲರಿಗೂ ಮಹಾ ಭಯ ಉಂಟಾಯಿತು. ಆಗ ಯೌವನಸ್ಥರು ಎದ್ದು ಅವನ ಶವವನ್ನು ವಸ್ತ್ರದಲ್ಲಿ ಸುತ್ತಿ ಹೊತ್ತುಕೊಂಡು ಹೋಗಿ ಸಮಾಧಿಮಾಡಿದರು. ಇದಾದ ಸುಮಾರು ಮೂರು ಗಂಟೆಗಳ ನಂತರ ಅವನ ಹೆಂಡತಿಯು ನಡೆದ ಸಂಗತಿಯನ್ನು ತಿಳಿಯದೆ ಒಳಗೆ ಬಂದಳು. ಪೇತ್ರನು ಆಕೆಯನ್ನು ನೋಡಿ, “ನೀವು ಆ ಹೊಲವನ್ನು ಮಾರಿದ್ದು ಇಷ್ಟೇ ಹಣಕ್ಕೋ? ನನಗೆ ಹೇಳು” ಎಂದು ಕೇಳಲು ಆಕೆಯು, “ಹೌದು, ಇಷ್ಟಕ್ಕೇ” ಅಂದಳು. ಆಗ ಪೇತ್ರನು ಆಕೆಗೆ, “ನೀವಿಬ್ಬರೂ ಕರ್ತನ ಆತ್ಮನನ್ನು ಪರೀಕ್ಷಿಸುವುದಕ್ಕೆ ಏಕೆ ಒಡಂಬಟ್ಟಿರಿ? ಅಗೋ, ನಿನ್ನ ಗಂಡನನ್ನು ಸಮಾಧಿಮಾಡಿದವರು ಬಂದು ಬಾಗಿಲಿನಲ್ಲಿ ಕಾಲಿಟ್ಟಿದ್ದಾರೆ, ನಿನ್ನನ್ನೂ ಹೊತ್ತುಕೊಂಡು ಹೋಗುವರು” ಎಂದು ಹೇಳಿದನು. ಕೂಡಲೆ ಆಕೆಯು ಅವನ ಪಾದಗಳ ಮುಂದೆ ಬಿದ್ದು ಪ್ರಾಣಬಿಟ್ಟಳು. ಆ ಯೌವನಸ್ಥರು ಒಳಗೆ ಬಂದು ಆಕೆಯು ಸತ್ತಿರುವುದನ್ನು ಕಂಡು ಆಕೆಯನ್ನು ಹೊತ್ತುಕೊಂಡು ಹೋಗಿ ಗಂಡನ ಮಗ್ಗುಲಲ್ಲಿ ಹೂಣಿಟ್ಟರು. ಮತ್ತು ಸರ್ವ ಸಭೆಯವರೂ ಈ ಸಂಗತಿಗಳನ್ನು ಕೇಳಿದವರೆಲ್ಲರೂ ಭಯ ಭ್ರಾಂತರಾದರು.

ಇದಲ್ಲದೆ ಅಪೊಸ್ತಲರ ಕೈಯಿಂದ ಅನೇಕ ಸೂಚಕಕಾರ್ಯಗಳೂ, ಅದ್ಭುತಕಾರ್ಯಗಳೂ ಜನರೊಳಗೆ ನಡೆಯುತ್ತಾ ಇದ್ದವು. ಮತ್ತು ಎಲ್ಲರು ಒಗ್ಗಟ್ಟಾಗಿ ಸೊಲೊಮೋನನ ಮಂಟಪದಲ್ಲಿ ಸೇರಿಬರುತ್ತಿದ್ದರು. ಅವರ ಜೊತೆಯಲ್ಲಿರುವುದಕ್ಕೆ ಉಳಿದವರಲ್ಲಿ ಒಬ್ಬರಿಗೂ ಧೈರ್ಯವಿರಲಿಲ್ಲ. ಆದರೂ ಜನರು ಅವರನ್ನು ಬಹಳವಾಗಿ ಕೊಂಡಾಡುತ್ತಿದ್ದರು. ಮತ್ತು ಇನ್ನು ಎಷ್ಟೋ ಮಂದಿ ಸ್ತ್ರೀಪುರುಷರು ಕರ್ತನಲ್ಲಿ ನಂಬಿಕೆಯಿಟ್ಟು ಅವರ ಮಂಡಳಿಯಲ್ಲಿ ಸೇರಿಕೊಳ್ಳುತ್ತಿದ್ದರು. ಹೀಗಿರುವುದರಿಂದ ಜನರು ರೋಗಿಗಳನ್ನು ದೋಲಿಗಳ ಮೇಲೆಯೂ, ಹಾಸಿಗೆಗಳ ಮೇಲೆಯೂ ಇಟ್ಟು ಪೇತ್ರನು ಹಾದು ಹೋಗುವಾಗ, ಅವನ ನೆರಳಾದರೂ ಕೆಲವರ ಮೇಲಾದರೂ ಬೀಳಲಿ ಎಂದು ಅವರನ್ನು ಬೀದಿಗೆ ತೆಗೆದುಕೊಂಡು ಬರುತ್ತಿದ್ದರು. ಯೆರೂಸಲೇಮಿನ ಸುತ್ತಮುತ್ತಲಿನ ಊರುಗಳ ಜನರು ಸಹ ರೋಗಿಗಳನ್ನೂ, ದೆವ್ವ ಪೀಡಿತರನ್ನು ಹೊತ್ತುಕೊಂಡು ಗುಂಪುಗುಂಪಾಗಿ ಬರುತ್ತಿದ್ದರು; ಅವರೆಲ್ಲರೂ ಗುಣಮುಖರಾಗುತ್ತಿದ್ದರು.

ಆದರೆ ಕರ್ತನ ದೂತನು ರಾತ್ರಿಯಲ್ಲಿ ಸೆರೆಮನೆಯ ದ್ವಾರಗಳನ್ನು ತೆರೆದು ಅವರನ್ನು ಹೊರಕ್ಕೆ ಕರೆದುಕೊಂಡು ಬಂದು, “ನೀವು ಹೋಗಿ, ದೇವಾಲಯದಲ್ಲಿ ನಿಂತುಕೊಂಡು ಈ ಜೀವ ವಾಕ್ಯಗಳನ್ನು ಜನರಿಗೆಲ್ಲಾ ತಿಳಿಸಿರಿ” ಅಂದನು. ಅದನ್ನು ಕೇಳಿದ ಅವರು ಬೆಳಗಿನ ಜಾವದಲ್ಲಿಯೇ ದೇವಾಲಯದೊಳಗೆ ಹೋಗಿ ಸುವಾರ್ತೆಯನ್ನು ಸಾರಿದರು. ಇತ್ತ ಮಹಾಯಾಜಕನೂ, ಅವನ ಜೊತೆಯಲ್ಲಿದ್ದವರೂ ಬಂದು ಹಿರೀಸಭೆಯನ್ನೂ, ಇಸ್ರಾಯೇಲ್ಯರ ಹಿರಿಯರೆಲ್ಲರನ್ನೂ ಕೂಡಿಸಿ, ಅವರನ್ನು ಕರತರುವುದಕ್ಕೆ ಓಲೇಕಾರರನ್ನು ಸೆರೆಮನೆಗೆ ಕಳುಹಿಸಿದರು. ಓಲೇಕಾರರು ಹೋಗಿ ಅವರನ್ನು ಸೆರೆಮನೆಯಲ್ಲಿ ಕಾಣದೆ ಹಿಂತಿರುಗಿ ಬಂದು, “ಸೆರೆಮನೆಯು ಭದ್ರವಾಗಿ ಮುಚ್ಚಿರುವುದನ್ನೂ, ಕಾವಲುಗಾರರು ಬಾಗಿಲುಗಳಲ್ಲಿ ನಿಂತಿರುವುದನ್ನೂ ಕಂಡೆವು; ಆದರೆ ತೆರೆದಾಗ ಒಳಗೆ ಒಬ್ಬರನ್ನೂ ಕಾಣಲಿಲ್ಲ” ಎಂದು ತಿಳಿಸಿದರು. ದೇವಾಲಯದ ಅಧಿಪತಿಯೂ, ಮುಖ್ಯಯಾಜಕರೂ ಈ ಮಾತುಗಳನ್ನು ಕೇಳಿ ಇದರಿಂದ ಏನು ಪರಿಣಾಮವಾದೀತೋ ಎಂದು ಕಳವಳಗೊಂಡರು. ಅಷ್ಟರಲ್ಲಿ ಒಬ್ಬನು ಬಂದು; “ಅಗೋ, ನೀವು ಸೆರೆಮನೆಯಲ್ಲಿಟ್ಟಿದ್ದ ಆ ಮನುಷ್ಯರು ದೇವಾಲಯದಲ್ಲಿ ನಿಂತುಕೊಂಡು ಜನರಿಗೆ ಉಪದೇಶಮಾಡುತ್ತಿದ್ದಾರೆಂದು” ಅವರಿಗೆ ತಿಳಿಸಿದನು.

ಸ್ತೆಫನನು ದೇವರ ಕೃಪೆಯಿಂದಲೂ, ಬಲದಿಂದಲೂ ತುಂಬಿದವನಾಗಿ ಜನರಲ್ಲಿ ಮಹಾ ಅದ್ಭುತ ಕಾರ್ಯಗಳನ್ನೂ, ಸೂಚಕಕಾರ್ಯಗಳನ್ನೂ ಮಾಡುತ್ತಾ ಇದ್ದನು.

ಆಗ ಹಿರೀಸಭೆಯಲ್ಲಿ ಕುಳಿತಿದ್ದವರೆಲ್ಲರೂ ಅವನನ್ನು ದೃಷ್ಟಿಸಿ ನೋಡಲು ಅವನ ಮುಖವು ದೇವದೂತನ ಮುಖದಂತೆ ಇರುವುದನ್ನು ಕಂಡರು.

“ನಲವತ್ತು ವರ್ಷ ತುಂಬಿದ ಮೇಲೆ ದೇವದೂತನು ಸೀನಾಯಿಬೆಟ್ಟದ ಅಡವಿಯಲ್ಲಿ ಮುಳ್ಳಿನ ಪೊದೆಯೊಳಗೆ ಉರಿಯುವ ಬೆಂಕಿಯಲ್ಲಿ ಅವನಿಗೆ ಕಾಣಿಸಿಕೊಂಡನು.

ಅವನೇ ಐಗುಪ್ತ ದೇಶದಲ್ಲಿಯೂ, ಕೆಂಪು ಸಮುದ್ರದಲ್ಲಿಯೂ, ನಲವತ್ತು ವರ್ಷ ಮರುಭೂಮಿಯಲ್ಲಿಯೂ, ಅದ್ಭುತಕಾರ್ಯಗಳನ್ನೂ ಸೂಚಕ ಕಾರ್ಯಗಳನ್ನೂ ಮಾಡುತ್ತಾ ಅವರನ್ನು ನಡೆಸಿಕೊಂಡು ಬಂದನು.

ಗುಂಪಾಗಿ ಕೂಡಿದ ಜನಗಳು ಫಿಲಿಪ್ಪನ ಮಾತುಗಳನ್ನು ಕೇಳಿ ಅವನು ಮಾಡಿದ ಸೂಚಕಕಾರ್ಯಗಳನ್ನು ನೋಡಿ ಅವನು ಹೇಳಿದ ಸಂಗತಿಗಳಿಗೆ ಒಮ್ಮನಸ್ಸಿನಿಂದ ಗಮನಕೊಟ್ಟರು. ಏಕೆಂದರೆ ಅನೇಕರೊಳಗಿಂದ ದೆವ್ವಗಳು ಮಹಾಶಬ್ದದಿಂದ ಕೂಗಿ ಹೊರಗೆ ಬಂದವು; ಮತ್ತು ಅನೇಕ ಪಾರ್ಶ್ವವಾಯು ರೋಗಿಗಳೂ ವಿಕಲಾಂಗರು ಸ್ವಸ್ಥರಾದರು. ಆ ಪಟ್ಟಣದಲ್ಲಿ ಬಹು ಸಂತೋಷವುಂಟಾಯಿತು.

ಆಗ ಸೀಮೋನನೂ ಕೂಡ ನಂಬಿ ದೀಕ್ಷಾಸ್ನಾನಮಾಡಿಸಿಕೊಂಡು ಫಿಲಿಪ್ಪನ ಸಂಗಡ ಯಾವಾಗಲೂ ಇದ್ದು ಸೂಚಕಕಾರ್ಯಗಳೂ ಮಹತ್ಕಾರ್ಯಗಳೂ ಆಗುತ್ತಿದ್ದುದನ್ನು ನೋಡಿ ಬೆರಗಾಗುತ್ತಿದ್ದನು.

ಅವರು ನೀರನ್ನು ಬಿಟ್ಟು ಮೇಲಕ್ಕೆ ಬಂದಾಗ ಕರ್ತನ ಆತ್ಮ ಫಿಲಿಪ್ಪನನ್ನು ಎತ್ತಿಕೊಂಡು ಹೋಗಲಾಗಿ ಆ ಕಂಚುಕಿಯು ಫಿಲಿಪ್ಪನನ್ನು ಪುನಃ ಕಾಣಲಿಲ್ಲ. ಅವನು ಸಂತೋಷವುಳ್ಳವನಾಗಿ ತನ್ನ ಪ್ರಯಾಣವನ್ನು ಮುಂದುವರಿಸಿದನು. ತರುವಾಯ ಫಿಲಿಪ್ಪನು ಅಜೋತ್ ಎಂಬಲ್ಲಿ ಕಾಣಿಸಿಕೊಂಡು ಅಲ್ಲಿಂದ ಕೈಸರೈಯದ ತನಕ ಎಲ್ಲಾ ಊರುಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ಹೋದನು.

ಅವನು ಪ್ರಯಾಣ ಮಾಡುತ್ತಾ ದಮಸ್ಕದ ಹತ್ತಿರಕ್ಕೆ ಬರಲು, ಫಕ್ಕನೆ ಆಕಾಶದಿಂದ ಒಂದು ಬೆಳಕು ಅವನ ಸುತ್ತಲು ಮಿಂಚಿತು. ಅವನು ನೆಲಕ್ಕೆ ಬಿದ್ದನು. ಆಗ, “ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸೆಪಡಿಸುತ್ತೀ?” ಎಂದು ಹೇಳುವ ವಾಣಿಯನ್ನು ಕೇಳಿದನು. ಅದಕ್ಕೆ ಸೌಲನು;, “ಕರ್ತನೇ, ನೀನಾರು?” ಎಂದು ಕೇಳಿದ್ದಕ್ಕೆ, ಕರ್ತನು, “ನೀನು ಹಿಂಸೆಪಡಿಸುವ ಯೇಸುವೇ ನಾನು; ನೀನೆದ್ದು ಊರೊಳಕ್ಕೆ ಹೋಗು, ನೀನು ಮಾಡಬೇಕಾದದ್ದು ಅಲ್ಲಿ ನಿನಗೆ ತಿಳಿಸಲ್ಪಡುವುದು” ಎಂದು ಹೇಳಿದನು. ಅವನ ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದವರು ಧ್ವನಿಯನ್ನು ಮಾತ್ರ ಕೇಳಿ, ಯಾರನ್ನೂ ಕಾಣದೆ ಮೂಕರಂತೆ ವಿಸ್ಮಿತರಾಗಿ ನಿಂತರು. ಸೌಲನು ನೆಲದಿಂದ ಎದ್ದು ಕಣ್ಣು ತೆರೆದಾಗ ಏನೂ ಕಾಣಿಸಲಿಲ್ಲ. ಆಗ ಅವರು ಅವನನ್ನು ಕೈಹಿಡಿದು ದಮಸ್ಕದೊಳಕ್ಕೆ ಕರೆದುಕೊಂಡು ಹೋದರು. ಅವನು ಮೂರು ದಿನಗಳು ಕಣ್ಣುಕಾಣದೆ, ಏನೂ ತಿನ್ನಲಿಲ್ಲ ಮತ್ತು ಏನೂ ಕುಡಿಯದೇ ಇದ್ದನು.

ಆಗ ಅನನೀಯನು ಹೊರಟು ಆ ಮನೆಯೊಳಗೆ ಹೋಗಿ ಅವನ ಮೇಲೆ ತನ್ನ ಕೈಗಳನ್ನಿಟ್ಟು, “ಸಹೋದರನಾದ ಸೌಲನೇ, ನೀನು ಬಂದ ದಾರಿಯಲ್ಲಿ ನಿನಗೆ ಕಾಣಿಸಿಕೊಂಡ ಕರ್ತನಾದ ಯೇಸು ನಿನಗೆ ಕಣ್ಣು ಕಾಣುವಂತೆಯೂ, ನೀನು ಪವಿತ್ರಾತ್ಮಭರಿತನಾಗುವಂತೆಯೂ ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ” ಎಂದು ಹೇಳಿದನು. ಕೂಡಲೇ ಅವನ ಕಣ್ಣುಗಳಿಂದ ಪರೆಗಳಂತೆ ಏನೋ ಬಿದ್ದು ಅವನ ಕಣ್ಣು ಕಾಣಿಸಿದವು. ಅವನು ಎದ್ದು ದೀಕ್ಷಾಸ್ನಾನ ಮಾಡಿಸಿಕೊಂಡನು.

ಅಲ್ಲಿ ಪಾರ್ಶ್ವವಾಯುರೋಗಿಯಾಗಿ ಎಂಟು ವರ್ಷಗಳಿಂದ ಹಾಸಿಗೆಯ ಮೇಲೆ ಬಿದ್ದಿದ್ದ ಐನೇಯನೆಂಬ ಒಬ್ಬ ಮನುಷ್ಯನನ್ನು ಕಂಡನು. ಪೇತ್ರನು ಅವನಿಗೆ, “ಐನೇಯನೇ, ಯೇಸು ಕ್ರಿಸ್ತನು ನಿನ್ನನ್ನು ವಾಸಿಮಾಡುತ್ತಾನೆ; ಎದ್ದು ನಿನ್ನ ಹಾಸಿಗೆಯನ್ನು ನೀನೇ ಹಾಸಿಕೋ” ಎಂದು ಹೇಳಿದನು. ಕೂಡಲೆ ಅವನು ಎದ್ದನು. ಮತ್ತು ಲುದ್ದದಲ್ಲಿಯೂ, ಶಾರೋನಿನಲ್ಲಿಯೂ ವಾಸವಾಗಿದ್ದವರೆಲ್ಲರು ಅವನನ್ನು ನೋಡಿ, ಅವರು ಕರ್ತನ ಕಡೆಗೆ ತಿರುಗಿಕೊಂಡರು.

ಆ ಕಾಲದಲ್ಲಿ ಆಕೆ ರೋಗಕ್ಕೆ ತುತ್ತಾಗಿ ಸತ್ತಳು. ಆಕೆಯ ಶವವನ್ನು ಸ್ನಾನಮಾಡಿಸಿ ಮೇಲಂತಸ್ತಿನಲ್ಲಿಟ್ಟರು. ಯೊಪ್ಪಕ್ಕೆ ಲುದ್ದವು ಹತ್ತಿರವಾಗಿರಲಾಗಿ ಪೇತ್ರನು ಅಲ್ಲಿ ಇದ್ದಾನೆಂದು ಶಿಷ್ಯರು ಕೇಳಿ ಇಬ್ಬರು ಮನುಷ್ಯರನ್ನು ಅವನ ಬಳಿಗೆ ಕಳುಹಿಸಿ, “ತಡಮಾಡದೆ ನಮ್ಮ ಹತ್ತಿರಕ್ಕೆ ಬರಬೇಕೆಂದು” ಬೇಡಿಕೊಂಡರು. ಪೇತ್ರನು ಎದ್ದು ಅವರ ಜೊತೆಯಲ್ಲಿ ಹೋದನು. ಅವನು ಬಂದ ಕೂಡಲೆ ಅವರು ಅವನನ್ನು ಮೇಲಂತಸ್ತಿಗೆ ಕರೆದುಕೊಂಡು ಹೋದರು. ಅಲ್ಲಿ ವಿಧವೆಯರೆಲ್ಲ ಅಳುತ್ತಾ, ಅವನ ಹತ್ತಿರ ನಿಂತುಕೊಂಡು ದೊರ್ಕಳು ತಮ್ಮ ಸಂಗಡ ಇದ್ದಾಗ ಮಾಡಿಕೊಟ್ಟಿದ್ದ ಒಳಂಗಿಗಳನ್ನೂ, ಮೇಲಂಗಿಗಳನ್ನೂ ತೋರಿಸಿದರು. ಪೇತ್ರನು ಅವರೆಲ್ಲರನ್ನು ಹೊರಕ್ಕೆ ಕಳುಹಿಸಿ, ಮೊಣಕಾಲೂರಿ ಪ್ರಾರ್ಥನೆಮಾಡಿ ಶವದ ಕಡೆಗೆ ತಿರುಗಿಕೊಂಡು; “ತಬಿಥಾ, ಎದ್ದೇಳು” ಅಂದನು. ಆಕೆಯು ಕಣ್ಣು ತೆರೆದು ಪೇತ್ರನನ್ನು ನೋಡಿ ಎದ್ದು ಕುಳಿತುಕೊಂಡಳು. ಅವನು ಆಕೆಯನ್ನು ಕೈಹಿಡಿದು ಎಬ್ಬಿಸಿ, ಅಲ್ಲಿದ್ದ ವಿಧವೆಯರನ್ನು ಮತ್ತು ದೇವಜನರನ್ನೂ ಕರೆದು, ಜೀವಿತಳಾದ ಆಕೆಯನ್ನು ಅವರೆದುರಿಗೆ ನಿಲ್ಲಿಸಿದನು. ಈ ಸಂಗತಿಯು ಯೊಪ್ಪದಲ್ಲೆಲ್ಲಾ ಹರಡಿ ಅನೇಕರು ಕರ್ತನ ಮೇಲೆ ನಂಬಿಕೆಯಿಟ್ಟರು.

ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮದಿಂದಲೂ, ಬಲದಿಂದಲೂ ಅಭಿಷೇಕಿಸಿದನು; ದೇವರು ಆತನ ಸಂಗಡ ಇದ್ದುದರಿಂದ ಆತನು ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾ; ಸೈತಾನನಿಂದ ಬಾಧಿಸಲ್ಪಟ್ಟವರನ್ನು ಗುಣಪಡಿಸುತ್ತಾ ಸಂಚರಿಸಿದನು; ಇದೆಲ್ಲಾ ನಿಮಗೆ ಗೊತ್ತಾಗಿರುವ ಸಂಗತಿಯೇ.

ಅವನನ್ನು ಪಸ್ಕ ಹಬ್ಬವಾದ ಮೇಲೆ ಜನರ ಮುಂದೆ ತರಿಸಬೇಕೆಂಬ ಯೋಚನೆಯಿಂದ ಸೆರೆಯಲ್ಲಿ ಹಾಕಿಸಿ ಅವನನ್ನು ಕಾಯಲಿಕ್ಕೆ ನಾಲ್ಕು ನಾಲ್ಕು ಸಿಪಾಯಿಗಳಿದ್ದ ನಾಲ್ಕು ಗುಂಪುಗಳ ವಶಕ್ಕೆ ಕೊಟ್ಟನು. ಪೇತ್ರನು ಸೆರೆಮನೆಯೊಳಗೆ ಕಾವಲಲ್ಲಿದ್ದಾಗ, ಸಭೆಯವರು ಅವನಿಗೋಸ್ಕರ ಆಸಕ್ತಿಯಿಂದ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದರು. ಹೆರೋದನು ಅವನನ್ನು ಜನರ ಮುಂದೆ ತರಿಸಬೇಕೆಂದಿದ್ದ ದಿನದ ಹಿಂದಿನ ರಾತ್ರಿಯಲ್ಲಿ, ಪೇತ್ರನು ಎರಡು ಸರಪಣಿಗಳಿಂದ ಕಟ್ಟಲ್ಪಟ್ಟವನಾಗಿ, ಇಬ್ಬರು ಸಿಪಾಯಿಗಳ ನಡುವೆ ನಿದ್ದೆಮಾಡುತ್ತಿದ್ದನು. ಕಾವಲುಗಾರರು ಬಾಗಿಲ ಮುಂದೆ ನಿಂತು ಸೆರೆಮನೆಯನ್ನು ಕಾಯುತ್ತಿದ್ದರು. ಫಕ್ಕನೆ ಕರ್ತನ ದೂತನು ಪೇತ್ರನೆದುರಿಗೆ ನಿಂತನು; ಅವನಿದ್ದ ಕೋಣೆಯಲ್ಲಿ ಬೆಳಕು ಹೊಳೆಯಿತು. ಅವನು ಪೇತ್ರನ ಪಕ್ಕೆಯನ್ನು ತಟ್ಟಿ ಎಬ್ಬಿಸಿ; “ತಟ್ಟನೆ ಏಳು” ಅಂದನು. ಆಗಲೇ ಅವನ ಕೈಗಳಿಗೆ ಹಾಕಿದ್ದ ಸರಪಣಿಗಳು ಕಳಚಿಬಿದ್ದವು. ಆ ದೂತನು ಅವನಿಗೆ; “ನಡುಕಟ್ಟಿಕೊಂಡು, ನಿನ್ನ ಕೆರಗಳನ್ನು ಮೆಟ್ಟಿಕೋ” ಎಂದು ಹೇಳಲು, ಅವನು ಹಾಗೆಯೇ ಮಾಡಿದನು. “ನಿನ್ನ ಮೇಲಂಗಿಯನ್ನು ಹಾಕಿಕೊಂಡು ನನ್ನ ಹಿಂದೆ ಬಾ” ಅಂದನು. ಅವನು ಹೊರಗೆ ಬಂದು ಆ ದೂತನ ಹಿಂದೆಯೇ ಹೋಗುತ್ತಾ, ದೂತನ ಮೂಲಕವಾಗಿ ನಡೆದ ಸಂಗತಿ ನಿಜವಾದದ್ದೆಂದು ತಿಳಿಯದೆ ತಾನು ನೋಡಿದ್ದು ಕನಸು ಎಂದು ತಿಳಿದನು. ಅವರು ಮೊದಲನೆಯ ಮತ್ತು ಎರಡನೆಯ ಕಾವಲುಗಳನ್ನು ದಾಟಿ, ಪಟ್ಟಣಕ್ಕೆ ಹೋಗುವ ಕಬ್ಬಿಣದ ಬಾಗಿಲಿಗೆ ಬಂದಾಗ ಅದು ತನ್ನಷ್ಟಕ್ಕೆ ತಾನೇ ಅವರಿಗೆ ತೆರೆಯಿತು; ಅವರು ಹೊರಗೆ ಬಂದು ಒಂದು ಬೀದಿಯನ್ನು ದಾಟಿದರು; ಕೂಡಲೇ ಆ ದೂತನು ಅವನನ್ನು ಬಿಟ್ಟು ಹೋದನು. ಆಗ ಪೇತ್ರನು ಎಚ್ಚರಗೊಂಡು; “ಕರ್ತನು ತನ್ನ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ, ಯೆಹೂದ್ಯಜನರು ನನಗೆ ಮಾಡಬೇಕೆಂದಿದ್ದ ಕೇಡಿನಿಂದಲೂ, ನನ್ನನ್ನು ಬಿಡಿಸಿದನೆಂದು ನನಗೀಗ ನಿಜವಾಗಿ ತಿಳಿಯಿತು” ಎಂದು ಅಂದುಕೊಂಡನು.

ಆದರೆ ಆ ಮಂತ್ರವಾದಿಯಾದ ಎಲುಮನು (ಎಲುಮನೆಂಬ ಹೆಸರಿಗೆ ಮಂತ್ರವಾದಿಯೆಂದರ್ಥ) ಅವರನ್ನು ವಿರೋಧಿಸಿದನು; ಅಧಿಪತಿಯು ಕ್ರಿಸ್ತನಲ್ಲಿ ನಂಬಿಕೆಯಿಡದಂತೆ ಅಡ್ಡಿಮಾಡಲು ಪ್ರಯತ್ನಿಸಿದನು. ಆಗ ಪೌಲನೆನಿಸಿಕೊಳ್ಳುವ ಸೌಲನು ಪವಿತ್ರಾತ್ಮಭರಿತನಾಗಿ, ಅವನನ್ನು ದೃಷ್ಟಿಸಿನೋಡಿ; “ಸೈತಾನನ ಮಗನೇ, ಮೋಸದಿಂದಲೂ, ಎಲ್ಲಾ ಕೆಟ್ಟತನದಿಂದಲೂ ತುಂಬಿರುವವನೇ, ಎಲ್ಲಾ ನೀತಿಗೂ ವಿರೋಧಿಯೇ, ನೀನು ಕರ್ತನ ನೇರವಾದ ಮಾರ್ಗಗಳನ್ನು ಡೊಂಕು ಮಾಡುವುದನ್ನು ಬಿಡುವುದಿಲ್ಲವೋ? ಇಗೋ, ಕರ್ತನು ನಿನಗೆ ವಿರುದ್ಧವಾಗಿ ಕೈ ಎತ್ತಿದ್ದಾನೆ; ನೀನು ಕುರುಡನಾಗಿ ಕೆಲವು ಕಾಲ ಸೂರ್ಯನನ್ನು ನೋಡದೆ ಇರುವಿ” ಎಂದು ಹೇಳಿದನು. ಆ ಕ್ಷಣವೇ ಅವನಿಗೆ ಕಣ್ಣು ಮೊಬ್ಬಾಗಿ ಕತ್ತಲೆ ಕವಿಯಿತು; ಅವನು ಕೈಹಿಡಿದು ಆಧಾರ ಕೊಡುವವರನ್ನು ಹುಡುಕುತ್ತಾ ತಿರುಗಾಡಿದನು. ಅಧಿಪತಿಯು ಆ ಸಂಗತಿಯನ್ನು ನೋಡಿ ಕರ್ತನ ಬೋಧನೆಗೆ ಅತ್ಯಾಶ್ಚರ್ಯಪಟ್ಟು ನಂಬುವವನಾದನು.

ಹೀಗಿರಲಾಗಿ ಅವರು ಬಹುಕಾಲ ಅಲ್ಲಿದ್ದು ಕರ್ತನು ಅವರ ಕೈಯಿಂದ ಸೂಚಕಕಾರ್ಯಗಳೂ, ಅದ್ಭುತಕಾರ್ಯಗಳೂ ನಡೆಯುವಂತೆ ದಯಪಾಲಿಸಿ ತನ್ನ ಕೃಪಾವಾಕ್ಯಕ್ಕೆ ಸಾಕ್ಷಿಕೊಟ್ಟಿದ್ದರಿಂದ ಆತನ ಮೇಲೆ ಭರವಸವಿಟ್ಟು ಧೈರ್ಯದಿಂದ ಮಾತನಾಡುತ್ತಿದ್ದರು.

ಲುಸ್ತ್ರ ಪಟ್ಟಣದಲ್ಲಿ ಕಾಲುಗಳಲ್ಲಿ ಬಲವಿಲ್ಲದ ಒಬ್ಬ ಮನುಷ್ಯನು ಕುಳಿತಿದ್ದನು. ಅವನು ಹುಟ್ಟುಕುಂಟನಾಗಿದ್ದು, ಅದುವರೆಗೂ ನಡೆಯಲಾರದೆ ಇದ್ದವನು. ಪೌಲನು ಆಡುವ ಮಾತುಗಳನ್ನು ಅವನು ಕಿವಿಗೊಟ್ಟು ಕೇಳುತ್ತಿದ್ದನು. ಪೌಲನು ಅವನನ್ನು ದಿಟ್ಟಿಸಿ ನೋಡಿ ವಾಸಿಯಾಗುವುದಕ್ಕೆ ಬೇಕಾದ ನಂಬಿಕೆಯು ಅವನಲ್ಲಿ ಉಂಟೆಂದು ತಿಳಿದು; “ನಿನ್ನ ಕಾಲೂರಿ ನೆಟ್ಟಗೆ ನಿಂತುಕೋ” ಎಂದು ಮಹಾಧ್ವನಿಯಿಂದ ಹೇಳಿದನು. ಕೂಡಲೆ ಆ ಮನುಷ್ಯನು ಹಾರಿ ನಡೆದಾಡಿದನು.

ಗುಂಪುಸೇರಿದ್ದವರೆಲ್ಲರೂ ಈ ಮಾತುಗಳನ್ನು ಕೇಳಿ ಮೌನವಾಗಿದ್ದು ಬಾರ್ನಬನೂ ಪೌಲನೂ ತಮ್ಮ ಮೂಲಕವಾಗಿ ದೇವರು ಅನ್ಯಜನರಲ್ಲಿ ಮಾಡಿದ್ದ ಎಲ್ಲಾ ಸೂಚಕ ಕಾರ್ಯಗಳನ್ನೂ, ಅದ್ಭುತಕಾರ್ಯಗಳನ್ನೂ ವಿವರಿಸಿದ್ದನ್ನು ಕಿವಿಗೊಟ್ಟು ಕೇಳಿದರು.

ಮಧ್ಯರಾತ್ರಿಯಲ್ಲಿ ಪೌಲನೂ ಮತ್ತು ಸೀಲನೂ ಪ್ರಾರ್ಥನೆಮಾಡುತ್ತಾ ದೇವರಿಗೆ ಸ್ತುತಿಗೀತೆಗಳನ್ನು ಹಾಡುತ್ತಿದ್ದರು; ಸೆರೆಯಲ್ಲಿದ್ದವರು ಲಕ್ಷ್ಯವಿಟ್ಟು ಕೇಳುತ್ತಿದ್ದರು. ಆಕಸ್ಮಾತ್ತಾಗಿ ಮಹಾಭೂಕಂಪವುಂಟಾಯಿತು; ಸೆರೆಮನೆಯ ಅಸ್ತಿವಾರಗಳು ಕದಲಿದವು. ಅದೇ ಕ್ಷಣದಲ್ಲಿ ಕದಗಳೆಲ್ಲಾ ತೆರೆದವು, ಎಲ್ಲರ ಬೇಡಿಗಳು ಕಳಚಿಬಿದ್ದವು. ಸೆರೆಯ ಯಜಮಾನನು ನಿದ್ದೆಯಿಂದ ಎಚ್ಚೆತ್ತು ಸೆರೆಮನೆಯ ಕದಗಳು ತೆರೆದಿರುವುದನ್ನು ಕಂಡು ಸೆರೆಯಲ್ಲಿದ್ದವರು ಓಡಿಹೋದರೆಂದು ಭಾವಿಸಿ ಕತ್ತಿಯನ್ನು ಹಿರಿದು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದನು.

ದೇವರು ಪೌಲನ ಕೈಯಿಂದ ವಿಶೇಷವಾದ ಮಹತ್ಕಾರ್ಯಗಳನ್ನು ನಡಿಸುತ್ತಾ ಇದ್ದುದರಿಂದ, ಜನರು ಅವನ ಮೈಮೇಲಿನಿಂದ ಕೈವಸ್ತ್ರಗಳನ್ನೂ, ರುಮಾಲುಗಳನ್ನೂ ತಂದು ರೋಗಿಗಳ ಮೇಲೆ ಹಾಕಲು ಅವರ ರೋಗಗಳು ವಾಸಿಯಾದವು, ದುರಾತ್ಮಗಳೂ ಬಿಟ್ಟುಹೋದವು.

ಯೂತಿಖನೆಂಬ ಒಬ್ಬ ಯೌವನಸ್ಥನು ಕಿಟಿಕಿಯ ಹೊಸ್ತಿಲಿನಲ್ಲಿ ಕುಳಿತುಕೊಂಡು ಗಾಢನಿದ್ರೆಯಿಂದ ತೂಕಡಿಸುತ್ತಿದ್ದನು. ಪೌಲನು ಇನ್ನೂ ಬೋಧನೆ ಮಾಡುತ್ತಾ ಇದ್ದಾಗ ಆ ಯೌವನಸ್ಥನು ಗಾಢವಾದ ನಿದ್ರೆಯಿಂದ ತೂಕಡಿಸಿ ಮೂರನೆಯ ಅಂತಸ್ತಿನಿಂದ ಕೆಳಕ್ಕೆ ಬಿದ್ದುಬಿಟ್ಟನು; ಅವನನ್ನು ಎಬ್ಬಿಸಲು ಹೋದಾಗ ಅವನು ಸತ್ತುಹೋಗಿದ್ದನು. ಆದರೆ ಪೌಲನು ಇಳಿದು ಹೋಗಿ ಅವನ ಮೇಲೆ ಬಿದ್ದು ತಬ್ಬಿಕೊಂಡು; “ಗೋಳಾಡಬೇಡಿರಿ, ಅವನು ಜೀವಂತವಾಗಿದ್ದಾನೆ” ಎಂದು ಹೇಳಿದನು. ಆಗ ಅವನು ಮೇಲಕ್ಕೆ ಹೋಗಿ ರೊಟ್ಟಿ ಮುರಿದು ಊಟಮಾಡಿ ಬಹಳ ಹೊತ್ತು ಬೆಳಗಾಗುವ ತನಕ ಮಾತನಾಡಿ ಹೊರಟುಹೋದನು. ಅವರು ಜೀವಿತನಾದ ಆ ಹುಡುಗನನ್ನು ಕರೆದುಕೊಂಡು ಬರಲು ಅವರಿಗೆ ಬಹಳ ಸಮಾಧಾನವಾಯಿತು.

ಪೌಲನು ಒಂದು ಹೊರೆ ಕಟ್ಟಿಗೆಯನ್ನು ಕೂಡಿಸಿ, ತಂದು ಬೆಂಕಿಯ ಮೇಲೆ ಹಾಕಲು, ಆ ಶಾಖಕ್ಕೆ ಒಂದು ಸರ್ಪವು ಹೊರಗೆ ಬಂದು, ಅವನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿತು. ಆ ಸರ್ಪವು ಅವನ ಕೈಯಿಂದ ಜೋತಾಡುವುದನ್ನು ದ್ವೀಪದವರು ನೋಡಿ; “ಈ ಮನುಷ್ಯನು ಕೊಲೆಪಾತಕನೇ ಸರಿ; ಸಮುದ್ರದಿಂದ ತಪ್ಪಿಸಿಕೊಂಡು ಬಂದರೂ ನ್ಯಾಯದೇವತೆಯು ಇವನನ್ನು ಬದುಕಗೊಡಿಸುವುದಿಲ್ಲವೆಂದು” ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಆದರೆ ಪೌಲನು ಆ ಸರ್ಪವನ್ನು ಬೆಂಕಿಯೊಳಕ್ಕೆ ಝಾಡಿಸಿಬಿಟ್ಟನು; ಅವನಿಗೆ ಏನೂ ಅಪಾಯ ಉಂಟಾಗಲಿಲ್ಲ. ಅವರು; “ಇವನ ಮೈ ಈಗ ಊದಿಕೊಳ್ಳುತ್ತದೆ, ಇಲ್ಲವೆ ಇವನು ಫಕ್ಕನೆ ಸತ್ತುಬೀಳುತ್ತಾನೆ” ಎಂದು ಕಾದಿದ್ದರು. ಎಷ್ಟು ಹೊತ್ತು ಕಾದರು ಅವನಿಗೆ ಯಾವ ಹಾನಿಯೂ ಆಗಲಿಲ್ಲ. ಇದನ್ನು ಕಂಡ ಅವರು ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡು “ಇವನೊಬ್ಬ ದೇವನೇ” ಇರಬೇಕು ಎಂದುಕೊಂಡರು.

ಆ ದ್ವೀಪದ ಮುಖ್ಯಸ್ಥನಾದ ಪೊಪ್ಲಿಯನ ಹೊಲಗದ್ದೆಗಳು ನಾವಿದ್ದ ಸ್ಥಳದ ಸಮೀಪದಲ್ಲಿ ಇದ್ದವು. ಅವನು ನಮ್ಮನ್ನು ಸ್ವಾಗತಿಸಿ ಮೂರು ದಿನಗಳವರೆಗೆ ಆದರದಿಂದ ಸತ್ಕರಿಸಿದನು. ಅವನ ತಂದೆಯು ಜ್ವರದಿಂದಲೂ ರಕ್ತಭೇದಿಯಿಂದಲೂ ಹಾಸಿಗೆ ಹಿಡಿದಿದ್ದನು. ಪೌಲನು ಅವನ ಬಳಿಗೆ ಹೋಗಿ ಪ್ರಾರ್ಥನೆ ಮಾಡಿ ಅವನ ಮೇಲೆ ಕೈಗಳನ್ನಿಟ್ಟು ಅವನನ್ನು ಗುಣಪಡಿಸಿದನು. ಇದಾದ, ನಂತರ ಆ ದ್ವೀಪದಲ್ಲಿದ್ದ ಉಳಿದ ರೋಗಿಗಳು, ಪೌಲನ ಬಳಿಗೆ ಬಂದು ಸ್ವಸ್ಥರಾದರು.

ಆದಕಾರಣ ಸಾರಿದ ಸುವಾರ್ತೆಯನ್ನು ಕೇಳುವುದರಿಂದ ನಂಬಿಕೆಯು ಹುಟ್ಟುತ್ತದೆ, ಕೇಳಿಸಿಕೊಳ್ಳುವುದು ಕ್ರಿಸ್ತನ ವಾಕ್ಯವಾಗಿದೆ.

ನಾನು ಯೆರೂಸಲೇಮ್ ಮೊದಲುಗೊಂಡು ಇಲ್ಲುರಿಕ ಸೀಮೆಯ ಸುತ್ತಮುತ್ತ ಪ್ರಯಾಣಿಸಿ ಕ್ರಿಸ್ತನ ಸುವಾರ್ತೆಯ ಸಾರೋಣವನ್ನು ಪೂರೈಸಿದ್ದೇನೆ.

ಯೆಹೂದ್ಯರು ಸೂಚಕಕಾರ್ಯಗಳನ್ನು ಕೇಳುತ್ತಾರೆ, ಗ್ರೀಕರು ಜ್ಞಾನವನ್ನು ಹುಡುಕುತ್ತಾರೆ; ನಾವಾದರೋ ಶಿಲುಬೆಗೆ ಹಾಕಲ್ಪಟ್ಟ ಕ್ರಿಸ್ತನನ್ನು ಸಾರುತ್ತೇವೆ; ಕ್ರಿಸ್ತನ ಸಂದೇಶವು ಯೆಹೂದ್ಯರಿಗೆ ವಿಘ್ನವೂ ಮತ್ತು ಗ್ರೀಕರಿಗೆ ಮೂರ್ಖತನವೂ ಆಗಿದೆ. ಆದರೆ ದೇವರಿಂದ ಕರಿಸಿಕೊಂಡವರಾದ ಯೆಹೂದ್ಯರಿಗಾಗಲಿ, ಗ್ರೀಕರಿಗಾಗಲಿ ಕ್ರಿಸ್ತನೇ ದೇವರ ಶಕ್ತಿಯೂ ಮತ್ತು ದೇವರ ಜ್ಞಾನವೂ ಆಗಿರುವಾತನೆಂದು ನಾವು ಸಾರುತ್ತೇವೆ.

ಸಹೋದರರೇ, ನಾನು ಗುಪ್ತವಾಗಿದ್ದ ದೇವರ ಸತ್ಯಾರ್ಥಗಳನ್ನು ತಿಳಿಸುವವನಾಗಿ ನಿಮ್ಮ ಬಳಿಗೆ ಬಂದಾಗ ವಾಕ್ಚಾತುರ್ಯದಿಂದಾಗಲಿ, ಜ್ಞಾನದಿಂದಾಗಲಿ ಬರಲಿಲ್ಲ. ನಾನು ಶಿಲುಬೆಗೆ ಹಾಕಲ್ಪಟ್ಟ ಯೇಸು ಕ್ರಿಸ್ತನನ್ನೇ ಹೊರತು ಬೇರೆ ಯಾವುದನ್ನೂ ತಿಳಿಯದವನಾಗಿ ನಿಮ್ಮಲ್ಲಿ ಇರುವೆನೆಂದು ತೀರ್ಮಾನಿಸಿಕೊಂಡೆನು. ಇದಲ್ಲದೆ ನಾನು ನಿಮ್ಮಲ್ಲಿಗೆ ಬಂದಾಗ ನಿಮ್ಮ ಬಳಿಯಲ್ಲಿ ಬಲಹೀನನೂ, ಭಯಪಡುವವನೂ, ಬಹು ನಡುಗುವವನೂ ಆಗಿದ್ದೆನು. ನಿಮ್ಮ ನಂಬಿಕೆಯು ಮನುಷ್ಯಜ್ಞಾನವನ್ನು ಆಧಾರ ಮಾಡಿಕೊಳ್ಳದೆ ದೇವರ ಶಕ್ತಿಯನ್ನು ಆಧಾರಮಾಡಿಕೊಳ್ಳಬೇಕೆಂದು ನನ್ನ ಬೋಧನೆಯಲ್ಲಿಯೂ, ಪ್ರಸಂಗದಲ್ಲಿಯೂ ಮನವೊಲಿಸುವ ಜ್ಞಾನವಾಕ್ಯಗಳನ್ನು ನಾನು ಪ್ರಯೋಗಿಸದೇ ದೇವರಾತ್ಮನ ಬಲವನ್ನು ತೋರ್ಪಡಿಸುವ ವಾಕ್ಯಗಳನ್ನೇ ಪ್ರಯೋಗಿಸಿದೆನು.

ಆದರೆ ಪ್ರತಿಯೊಬ್ಬನಲ್ಲಿ ತೋರಿಬರುವ ದೇವರಾತ್ಮನ ವರಗಳು ಸರ್ವರ ಪ್ರಯೋಜನಕ್ಕಾಗಿ ಕೊಡಲ್ಪಟ್ಟಿವೆ. ಒಬ್ಬನಿಗೆ ದೇವರಾತ್ಮನ ಮೂಲಕ ಜ್ಞಾನವಾಕ್ಯವು ಮತ್ತೊಬ್ಬನಿಗೆ ಆ ಆತ್ಮನಿಂದಲೇ ತಿಳಿವಳಿಕೆಯ ವಾಕ್ಯವು ಒಬ್ಬನಿಗೆ ಆ ಆತ್ಮನಿಂದಲೇ ನಂಬಿಕೆಯು ಮತ್ತೊಬ್ಬನಿಗೆ ಆ ಒಬ್ಬ ಆತ್ಮನಿಂದಲೇ ನಾನಾ ರೋಗಗಳನ್ನು ವಾಸಿಮಾಡುವ ವರವು, ಮತ್ತೊಬ್ಬನಿಗೆ ಮಹತ್ಕಾರ್ಯಗಳನ್ನು ಮಾಡುವ ವರವು, ಇನ್ನೊಬ್ಬನಿಗೆ ಪ್ರವಾದನೆಯ ವರವು, ಒಬ್ಬನಿಗೆ ಆತ್ಮವನ್ನು ವಿವೇಚಿಸುವ ವರವು, ಮತ್ತೊಬ್ಬನಿಗೆ ವಿವಿಧ ಭಾಷೆಗಳನ್ನಾಡುವ ವರವು, ಒಬ್ಬನಿಗೆ ಭಾಷೆಗಳ ಅರ್ಥವನ್ನು ಬಿಡಿಸಿ ಹೇಳುವ ವರವು ಕೊಡಲ್ಪಡುತ್ತದೆ. ಆದರೆ ಈ ಎಲ್ಲವುಗಳಲ್ಲಿ ಕಾರ್ಯ ಮಾಡುವ ಆ ಒಬ್ಬ ಆತ್ಮನೇ ವರಗಳನ್ನೆಲ್ಲಾ ತನ್ನ ಚಿತ್ತಾನುಸಾರವಾಗಿ ಒಬ್ಬೊಬ್ಬನಿಗೆ ಹಂಚಿಕೊಡುವವನಾಗಿದ್ದಾನೆ.

ದೇವರು ತನ್ನ ಸಭೆಯಲ್ಲಿ ಮೊದಲನೆಯದಾಗಿ ಅಪೊಸ್ತಲರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಬೋಧಕರನ್ನು ಇಟ್ಟಿದ್ದಾನೆ. ಆ ಮೇಲೆ ಮಹತ್ಕಾರ್ಯ ಮಾಡುವ ಶಕ್ತಿಯನ್ನು, ನಾನಾ ರೋಗಗಳನ್ನು ವಾಸಿಮಾಡುವ ವರವನ್ನೂ, ಪರಸಹಾಯ ಮಾಡುವ ಗುಣವನ್ನೂ, ಕಾರ್ಯಗಳನ್ನು ನಿರ್ವಹಿಸುವ ಜ್ಞಾನವನ್ನು ಮತ್ತು ವಿವಿಧ ಭಾಷೆಗಳನ್ನಾಡುವ ವರವನ್ನೂ ಅವರವರಿಗೆ ಬೇರೆ ಬೇರೆಯಾಗಿ ಕೊಟ್ಟಿದ್ದಾನೆ. ಎಲ್ಲರು ಅಪೊಸ್ತಲರೋ? ಎಲ್ಲರು ಪ್ರವಾದಿಗಳೋ? ಎಲ್ಲರೂ ಬೋಧಕರೋ? ಎಲ್ಲರೂ ಮಹತ್ಕಾರ್ಯಗಳನ್ನು ಮಾಡುವವರೋ? ರೋಗ ವಾಸಿಮಾಡುವ ವರಗಳು ಎಲ್ಲರಿಗೂ ಉಂಟೋ? ಎಲ್ಲರೂ ಅನ್ಯಭಾಷೆಗಳನ್ನಾಡುವರೋ? ಅನ್ಯಭಾಷೆಗಳ ಅರ್ಥವನ್ನು ಹೇಳುವುದಕ್ಕೆ ಎಲ್ಲರಿಗೂ ಶಕ್ತಿಯುಂಟೋ? ಇವುಗಳಲ್ಲಿ ಶ್ರೇಷ್ಠ ವರಗಳನ್ನು ಆಸಕ್ತಿಯಿಂದ ಅಪೇಕ್ಷಿಸಿರಿ. ಇನ್ನೂ ಸರ್ವೋತ್ತಮವಾದ ಮಾರ್ಗವೊಂದನ್ನು ನಿಮಗೆ ತೋರಿಸುತ್ತೇನೆ.

ನಾನು ಮನುಷ್ಯರ ಭಾಷೆಗಳನ್ನೂ, ದೇವದೂತರ ಭಾಷೆಗಳನ್ನೂ ಮಾತನಾಡುವವನಾದರೂ ಪ್ರೀತಿಯಿಲ್ಲದವನಾಗಿದ್ದರೆ ನಾದಕೊಡುವ ಕಂಚಿನ ಜಾಗಟೆ, ಗಣಗಣಿಸುವ ಘಂಟೆ ಆಗಿದ್ದೇನೆ. ನನಗೆ ಪ್ರವಾದನ ವರವಿದ್ದರೂ, ಎಲ್ಲಾ ರಹಸ್ಯಗಳೂ, ಸಕಲ ವಿಧವಾದ ವಿದ್ಯೆಗಳನ್ನು ತಿಳಿದ್ದರೂ, ಬೆಟ್ಟಗಳನ್ನೂ ತೆಗೆದಿಡುವುಷ್ಟು ನಂಬಿಕೆಯಿದ್ದರೂ, ಪ್ರೀತಿಯಿಲ್ಲದವನಾಗಿದ್ದರೆ ನಾನು ಏನೂ ಅಲ್ಲದವನಾಗಿದ್ದೇನೆ.

ಪ್ರತಿನಿತ್ಯ ಪ್ರೀತಿಯಿಂದ ಜೀವಿಸಲು ಆಶಿಸಿರಿ ಮತ್ತು ಪವಿತ್ರಾತ್ಮನಿಂದುಂಟಾಗುವ ವರಗಳನ್ನು, ಅದರೊಳಗೂ ವಿಶೇಷವಾಗಿ ಪ್ರವಾದನಾ ವರವನ್ನೇ ಆಸಕ್ತಿಯಿಂದ ಅಪೇಕ್ಷಿಸಿರಿ. ಅನ್ಯಭಾಷೆಗಳನ್ನಾಡುವವನು ದೇವರ ಸಂಗಡ ಮಾತನಾಡುತ್ತಾನೆಯೇ ಹೊರತು ಮನುಷ್ಯರ ಸಂಗಡ ಅಲ್ಲ. ಅವನು ಆತ್ಮ ಪ್ರೇರಿತನಾಗಿ ಗುಪ್ತ ವಿಷಯಗಳನ್ನಾಡುತ್ತಾನೆ. ಅವನು ಮಾತನಾಡುವ ಮಾತುಗಳನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ. ಆದರೆ ಪ್ರವಾದಿಸುವವನಾದರೋ, ಅವನ ಮಾತುಗಳಿಂದ ಭಕ್ತಿವೃದ್ಧಿಯನ್ನೂ, ಪ್ರೋತ್ಸಾಹವನ್ನೂ ಸಂತೈಸುವಿಕೆಯನ್ನೂ ಉಂಟುಮಾಡುವವು. ಅನ್ಯಭಾಷೆಗಳನ್ನಾಡುವವನು ತನಗೆ ತಾನೇ ಆತ್ಮೀಕ ವೃದ್ಧಿಯನ್ನುಂಟುಮಾಡಿಕೊಳ್ಳುತ್ತಾನೆ, ಆದರೆ ಪ್ರವಾದಿಸುವವನು ಸಭೆಗೆ ಭಕ್ತಿವೃದ್ಧಿಯನ್ನುಂಟು ಮಾಡುತ್ತಾನೆ. ನೀವೆಲ್ಲರೂ ಅನ್ಯಭಾಷೆಗಳನ್ನಾಡಬೇಕೆಂದು ನಾನು ಅಪೇಕ್ಷಿಸಿದರೂ, ಅದಕ್ಕಿಂತಲೂ ನೀವು ಪ್ರವಾದಿಸಬೇಕೆಂಬುದೆ ನನ್ನಿಷ್ಟವಾಗಿದೆ. ಅನ್ಯಭಾಷೆಗಳನ್ನಾಡುವವನು ಸಭೆಯು ಅಭಿವೃದ್ಧಿಯಾಗುವುದಕ್ಕಾಗಿ ಆ ಅನ್ಯಭಾಷೆಯ ಅರ್ಥವನ್ನು ವಿವೇಚಿಸಿ ಹೇಳದೆ ಹೋದರೆ ಅವನಿಗಿಂತ ಪ್ರವಾದಿಸುವವನು ಶ್ರೇಷ್ಠನು. ಆದರೆ ಸಹೋದರರೇ, ನಾನು ನಿಮ್ಮ ಬಳಿಗೆ ಬಂದು ದೇವರು ತಿಳಿಸಿದ್ದನ್ನು ಪ್ರಕಟಿಸದೆ, ಜ್ಞಾನವಾಕ್ಯಗಳನ್ನಾಡದೆ, ಪ್ರವಾದನೆಯನ್ನು ಹೇಳದೆ, ಉಪದೇಶಮಾಡದೆ, ಅನ್ಯಭಾಷೆಗಳನ್ನು ಮಾತ್ರ ಮಾತನಾಡುವವನಾಗಿದ್ದರೆ ನನ್ನಿಂದ ನಿಮಗೇನು ಪ್ರಯೋಜನವಾದೀತು?

ಆದ್ದರಿಂದ ಅನ್ಯಭಾಷೆಗಳನ್ನಾಡುವುದು ಯೇಸುವನ್ನು ನಂಬದವರಿಗೆ ಸೂಚನೆಯಾಗಿದೆಯೇ ಹೊರತು ಯೇಸುವನ್ನು ನಂಬುವವರಿಗೆ ಸೂಚನೆಯಲ್ಲವೆಂದು ನಾವು ತಿಳಿದುಕೊಳ್ಳಬೇಕು. ಆದರೆ ಪ್ರವಾದನೆಯು ಯೇಸುವನ್ನು ನಂಬದವರಿಗಾಗಿಯಲ್ಲ ನಂಬುವವರಿಗಾಗಿಯೇ ಇದೆ. ಹೀಗಿರುವಲ್ಲಿ ಸಭೆಯೆಲ್ಲಾ ಒಂದೇ ಸ್ಥಳದಲ್ಲಿ ಸೇರಿಬಂದಾಗ ಎಲ್ಲರೂ ಅನ್ಯಭಾಷೆಗಳನ್ನಾಡಿದರೆ ಈ ಭಾಷೆಯನ್ನು ತಿಳಿಯದ ಬೇರೆಯವರು ಅಥವಾ ಕ್ರಿಸ್ತ ನಂಬಿಕೆಯಿಲ್ಲದವರು ಒಳಗೆ ಬಂದು ನೋಡಿ, ನಿಮಗೆ ಹುಚ್ಚು ಹಿಡಿದಿದೆ ಎಂದು ಹೇಳುವುದಿಲ್ಲವೋ? ಆದರೆ ನೀವೆಲ್ಲರು ಪ್ರವಾದಿಸುತ್ತಿರಲು ಕ್ರಿಸ್ತ ನಂಬಿಕೆಯಿಲ್ಲದವನಾಗಲಿ, ಅಪರಿಚಿತನಾಗಲಿ ಒಳಗೆ ಬಂದರೆ ಅವನು ಎಲ್ಲರ ಮಾತನ್ನು ಕೇಳಿ ತಾನು ಪಾಪಿಯೆಂಬ ಅರುಹನ್ನು ಹೊಂದುವನು, ಎಲ್ಲರ ಮಾತಿನಿಂದ ಪರಿಶೋಧಿತನಾಗುವನು, ಅವನ ಹೃದಯದ ರಹಸ್ಯಗಳು ಬಯಲಾಗುವವು; ಅವನು ಅಡ್ಡಬಿದ್ದು ದೇವರನ್ನು ಆರಾಧಿಸಿ, ದೇವರು ನಿಜವಾಗಿ ನಿಮ್ಮಲ್ಲಿದ್ದಾನೆಂಬುದನ್ನು ಘೋಷಿಸುವನು.

ಆದಕಾರಣ ನನ್ನ ಸಹೋದರರೇ, ಪ್ರವಾದನಾವರವನ್ನು ಆಸಕ್ತಿಯಿಂದ ಅಪೇಕ್ಷಿಸಿರಿ, ಮತ್ತು ಅನ್ಯಭಾಷೆಗಳನ್ನಾಡುವವರಿಗೆ ಅಡ್ಡಿಮಾಡಬೇಡಿರಿ.

ನಾನು ಹಿಂಸೆಯನ್ನು ಸ್ಥಿರಚಿತ್ತದಿಂದ ತಾಳಿಕೊಳ್ಳುವುದರಲ್ಲಿಯೂ, ಸೂಚಕಕಾರ್ಯಗಳನ್ನೂ ಮತ್ತು ಅದ್ಭುತಗಳನ್ನೂ, ಹಾಗೂ ಮಹತ್ಕಾರ್ಯಗಳನ್ನೂ ನಡಿಸಿದ್ದರಲ್ಲಿಯೂ ಒಬ್ಬ ಅಪೊಸ್ತಲನಿಗೆ ಇರತಕ್ಕ ಲಕ್ಷಣಗಳು ನಿಮ್ಮ ಮಧ್ಯದಲ್ಲಿ ಪ್ರಕಟವಾದವಲ್ಲಾ.

ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಈ ಶಕ್ತಿಯ ಪ್ರಕಾರ ನಾವು ಬೇಡುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದ ದೇವರಿಗೆ

ಸೂಚಕ ಕಾರ್ಯಗಳಿಂದಲೂ, ಅದ್ಭುತಕಾರ್ಯಗಳಿಂದಲೂ, ನಾನಾ ವಿಧವಾದ ಮಹತ್ಕಾರ್ಯಗಳಿಂದಲೂ ಮತ್ತು ತನ್ನಿಚ್ಛೆಯಂತೆ ಪವಿತ್ರಾತ್ಮವರಗಳನ್ನು ನೀಡುವುದರ ಮೂಲಕವೂ ದೇವರು ತಾನೇ ಅದನ್ನು ಸಾಕ್ಷಿಕರಿಸಿದನು.

ನಂಬಿಕೆಯೋ ನಾವು ನಿರೀಕ್ಷಿಸುವಂಥವುಗಳ ಭರವಸೆಯೂ, ಇನ್ನೂ ಕಣ್ಣಿಗೆ ಕಾಣದವುಗಳ ಮೇಲಿನ ನಿಶ್ಚಯವೂ ಆಗಿದೆ.

ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ. ಏಕೆಂದರೆ ದೇವರ ಬಳಿಗೆ ಬರುವವನು ದೇವರು ಇದ್ದಾನೆ ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬಬೇಕು.

ಆದರೆ ದೇವರ ಬಳಿ ಬೇಡುವವನು ಸ್ವಲ್ಪವೂ ಸಂದೇಹಪಡದೆ ನಂಬಿಕೆಯಿಂದ ಬೇಡಿಕೊಳ್ಳಲಿ. ಸಂದೇಹಪಡುವವನು ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ಅಲೆಯಂತೆ ಅತ್ತಿತ್ತ ಅಲೆಯುತ್ತಿರುತ್ತಾನೆ.

ನಿಮ್ಮಲ್ಲಿ ಯಾವನಾದರೂ ಅಸ್ವಸ್ಥನಾಗಿರುವವನು ಇದ್ದರೆ, ಅವನು ಸಭೆಯ ಹಿರಿಯರನ್ನು ಕರೆದು ಪ್ರಾರ್ಥಿಸುವಂತೆ ವಿನಂತಿಸಲಿ. ಅವರು ಕರ್ತನ ಹೆಸರಿನಲ್ಲಿ ಅವನಿಗೆ ಎಣ್ಣೆ ಹಚ್ಚಿ ಅವನಿಗೋಸ್ಕರ ದೇವರನ್ನು ಪ್ರಾರ್ಥಿಸಲಿ. ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ಗುಣಪಡಿಸುವುದು ಮತ್ತು ಕರ್ತನು ಅವನನ್ನು ಎಬ್ಬಿಸುವನು; ಅವನು ಪಾಪ ಮಾಡಿದವನಾಗಿದ್ದರೆ, ದೇವರು ಆ ಪಾಪಗಳನ್ನು ಕ್ಷಮಿಸುವನು. ಹೀಗಿರಲು ನೀವು ಸ್ವಸ್ಥವಾಗಬೇಕಾದರೆ ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಅರಿಕೆ ಮಾಡಿ,, ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸಿರಿ. ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಹು ಸಾಮರ್ಥ್ಯವುಳ್ಳದಾಗಿರುತ್ತದೆ.

ಎಲೀಯನು ನಮಗೆ ಸಮಾನವಾದ ಸ್ವಭಾವವುಳ್ಳವನಾಗಿದ್ದನು, ಅವನು ಮಳೆ ಬರಬಾರದೆಂದು ಭಕ್ತಿಯಿಂದ ಪ್ರಾರ್ಥಿಸಲು ಮೂರು ವರ್ಷ ಆರು ತಿಂಗಳವರೆಗೂ ಭೂಮಿಯ ಮೇಲೆ ಮಳೆ ಬೀಳಲಿಲ್ಲ. ತಿರುಗಿ ಅವನು ಪ್ರಾರ್ಥನೆ ಮಾಡಲು ಆಕಾಶವು ಮಳೆಗರೆಯಿತು, ಭೂಮಿಯು ಫಲಕೊಟ್ಟಿತು.

ನನ್ನ ಸಂಗಡ ಮಾತನಾಡುತ್ತಿದ್ದ ಶಬ್ದವು ಯಾರದೆಂದು ನೋಡುವುದಕ್ಕೆ ನಾನು ಹಿಂದಕ್ಕೆ ತಿರುಗಿದೆನು. ತಿರುಗಿದಾಗ ಏಳು ಚಿನ್ನದ ದೀಪಸ್ತಂಭಗಳನ್ನೂ ಆ ದೀಪಸ್ತಂಭಗಳ ಮಧ್ಯದಲ್ಲಿ ಮನುಷ್ಯಕುಮಾರನಂತೆ ಇರುವವನನ್ನೂ ಕಂಡೆನು. ಆತನು ನಿಲುವಂಗಿಯನ್ನು ಧರಿಸಿ ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು. ಆತನ ತಲೆಯ ಕೂದಲು ಬಿಳೀ ಉಣ್ಣೆಯಂತೆಯೂ ಹಿಮದಂತೆಯೂ ಬೆಳ್ಳಗಿತ್ತು. ಆತನ ಕಣ್ಣುಗಳು ಬೆಂಕಿಯ ಜ್ವಾಲೆಯಂತೆಯೂ, ಆತನ ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತೆಯೂ, ಆತನ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು. ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು, ಆತನ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಡುತ್ತಿತ್ತು. ಆತನ ಮುಖವು ಪ್ರಬಲವಾಗಿ ಪ್ರಕಾಶಿಸುವ ಸೂರ್ಯನಂತಿತ್ತು.

ತರುವಾಯ ನೂತನ ಆಕಾಶವನ್ನೂ ನೂತನ ಭೂಮಿಯನ್ನೂ ಕಂಡೆನು. ಮೊದಲಿನ ಆಕಾಶವೂ ಮೊದಲಿನ ಭೂಮಿಯೂ ಗತಿಸಿ ಹೋದವು. ಇನ್ನು ಸಮುದ್ರವು ಇಲ್ಲ. ಇದಲ್ಲದೆ ಪರಲೋಕದಿಂದ ಪರಿಶುದ್ಧ ಪಟ್ಟಣವಾದ ಹೊಸ ಯೆರೂಸಲೇಮ್ ದೇವರ ಬಳಿಯಿಂದ ಇಳಿದು ಬರುವುದನ್ನು ಕಂಡೆನು. ಅದು ತನ್ನ ಪತಿಗೋಸ್ಕರ ಸಿದ್ಧಳಾಗಿರುವ ಮದಲಗಿತ್ತಿಯಂತೆ ಶೃಂಗರಿಸಲ್ಪಟ್ಟಿತ್ತು.

Kannada - ಕನ್ನಡ - KN

KNIRV'19 - Kannada Indian Revised Version - 2019

This Bible text is from Kannada Indian Revised Version IRV 2019
https://open.bible/bibles/kannada-bridge-text-bible/
provided by: Bridge Connectivity Solutions Pvt Ltd, available by Creative Commons CC-BY-SA-4.0,
and this new compilation is shared as www.creativecommons.org/licenses/by-sa/4.0.
Languages are made available to you by www.ipedge.net