04 – ಸೃಷ್ಟಿ

ಇವು ಸರ್ವಶಕ್ತನಾದ ದೇವರ ಪವಿತ್ರ ಮಾತುಗಳು.
ಮಾನವರ ಮಾತುಗಳಲ್ಲಿ ನಮಗೆ ಆಸಕ್ತಿ ಇಲ್ಲ.
ದೇವರನ್ನು ಪ್ರೀತಿಸುವ ಯಾರಿಗಾದರೂ... ದೇವರು ಇದರ ಬಗ್ಗೆ ಹೀಗೆ ಹೇಳುತ್ತಾನೆ: ಸೃಷ್ಟಿ.

ಟಾಪ್ 3 ಅತ್ಯಂತ ಮಹತ್ವದ ಪದ್ಯಗಳು

ಆದಿಯಲ್ಲಿ ದೇವರು ಆಕಾಶವನ್ನು, ಭೂಮಿಯನ್ನು ಸೃಷ್ಟಿಮಾಡಿದನು.

ಆದರೆ ದೇವರು ತನ್ನ ಇಷ್ಟದಂತೆ ಅದಕ್ಕೆ ದೇಹವನ್ನು ಕೊಡುತ್ತಾನೆ. ಒಂದೊಂದು ಬೀಜಕ್ಕೂ ಅದಕ್ಕೆ ತಕ್ಕ ದೇಹವನ್ನು ಕೊಡುತ್ತಾನೆ. ಎಲ್ಲಾ ಶರೀರಗಳು ಒಂದೇ ವಿಧವಾದವುಗಳಲ್ಲ; ಮನುಷ್ಯನ ಶರೀರ ಬೇರೆ, ಪಶುಗಳ ಶರೀರ ಬೇರೆ, ಪಕ್ಷಿಗಳ ಶರೀರ ಬೇರೆ, ಮೀನುಗಳದು ಬೇರೆ.

ಹೇಗೆಂದರೆ ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯ ಶಕ್ತಿಯೂ, ದೈವತ್ವವೂ, ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತದೆ. ಹೀಗಿರುವುದರಿಂದ ಅವರು ನೆಪವನ್ನು ಹೇಳಲು ಆಗುವುದಿಲ್ಲ.

ಕ್ಯಾನೊನಿಕಲ್ ಕ್ರಮದಲ್ಲಿ ಪ್ರತಿ ವಚನ - 104 ಭಾಗಗಳು

ಆದಿಯಲ್ಲಿ ದೇವರು ಆಕಾಶವನ್ನು, ಭೂಮಿಯನ್ನು ಸೃಷ್ಟಿಮಾಡಿದನು. ಭೂಮಿಯು ಕ್ರಮವಿಲ್ಲದೆಯೂ ಬರಿದಾಗಿಯೂ ಇತ್ತು. ಆದಿಸಾಗರದ ಮೇಲೆ ಕತ್ತಲಿತ್ತು. ದೇವರಾತ್ಮವು ಸಾಗರದ ಮೇಲೆ ಚಲಿಸುತ್ತಿತ್ತು. ಅನಂತರ ದೇವರು “ಬೆಳಕಾಗಲಿ” ಎಂದು ಆಜ್ಞಾಪಿಸಲು ಬೆಳಕಾಯಿತು. ದೇವರು ಆ ಬೆಳಕನ್ನು ಒಳ್ಳೆಯದೆಂದು ಕಂಡನು. ದೇವರು ಬೆಳಕನ್ನೂ ಕತ್ತಲನ್ನೂ ಬೇರ್ಪಡಿಸಿ ಬೆಳಕಿಗೆ “ಹಗಲು” ಎಂದೂ, ಕತ್ತಲೆಗೆ “ಇರುಳು” ಎಂದೂ ಹೆಸರಿಟ್ಟನು. ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಮೊದಲನೆಯ ದಿನವಾಯಿತು.

ಬಳಿಕ ದೇವರು “ಜಲರಾಶಿಗಳ ನಡುವೆ ವಿಸ್ತಾರವಾದ ಗುಮ್ಮಟವು ಉಂಟಾಗಲಿ ಅದು ಕೆಳಗಿನ ನೀರುಗಳನ್ನೂ ಮೇಲಿನ ನೀರುಗಳನ್ನೂ ಬೇರೆ ಬೇರೆ ಮಾಡಲಿ” ಅಂದನು. ದೇವರು ವಿಸ್ತಾರವಾದ ಗುಮ್ಮಟವನ್ನು ಮಾಡಿ ಅದರ ಕೆಳಗಿದ್ದ ನೀರುಗಳನ್ನು ಅದರ ಮೇಲಿದ್ದ ನೀರುಗಳಿಂದ ವಿಂಗಡಿಸಿದನು. ಅದು ಹಾಗೆಯೇ ಆಯಿತು. ದೇವರು ಆ ಗುಮ್ಮಟಕ್ಕೆ “ಆಕಾಶ” ಎಂದು ಹೆಸರಿಟ್ಟನು. ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಎರಡನೆಯ ದಿನವಾಯಿತು.

ಅನಂತರ ದೇವರು, “ಆಕಾಶದ ಕೆಳಗಿರುವ ನೀರೆಲ್ಲಾ ಒಂದೇ ಸ್ಥಳದಲ್ಲಿ ಒಟ್ಟಿಗೆ ಕೂಡಿಕೊಳ್ಳಲಿ ಮತ್ತು ಒಣನೆಲವು ಕಾಣಿಸಲಿ” ಅಂದನು. ಹಾಗೆಯೇ ಆಯಿತು. ದೇವರು ಒಣನೆಲಕ್ಕೆ “ಭೂಮಿ” ಎಂದೂ ಜಲರಾಶಿಗೆ “ಸಮುದ್ರ” ಎಂದೂ ಹೆಸರಿಟ್ಟನು. ಆತನು ಅದನ್ನು ಒಳ್ಳೆಯದೆಂದು ನೋಡಿದನು. ತರುವಾಯ ದೇವರು, “ಭೂಮಿಯು ಹುಲ್ಲನ್ನು, ಸಸ್ಯಗಳನ್ನೂ, ಬೀಜಬಿಡುವ ಕಾಯಿಪಲ್ಯದ ಗಿಡಗಳನ್ನೂ ಬೆಳೆಯಿಸಲಿ ಮತ್ತು ಬೀಜವುಳ್ಳ ಹಣ್ಣಿನ ಮರಗಳನ್ನು ಅವುಗಳ ಜಾತಿಗನುಸಾರವಾಗಿ ಫಲಿಸಲಿ” ಎಂದು ಹೇಳಿದನು, ಹಾಗೆಯೇ ಆಯಿತು. ಭೂಮಿಯಲ್ಲಿ ಸಸ್ಯಗಳು ಬೆಳೆದವು. ತಮ್ಮ ತಮ್ಮ ಜಾತಿಯ ಪ್ರಕಾರ ಬೀಜಬಿಡುವ ಕಾಯಿಪಲ್ಯದ ಗಿಡಗಳು ಉಂಟಾದವು. ತಮ್ಮ ತಮ್ಮ ಜಾತಿಗನುಸಾರವಾಗಿ ಬೀಜವುಳ್ಳ ಹಣ್ಣಿನ ಮರಗಳು ಉತ್ಪತ್ತಿಯಾದವು. ದೇವರು ಅದನ್ನು ಒಳ್ಳೆಯದೆಂದು ಕಂಡನು ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಮೂರನೆಯ ದಿನವಾಯಿತು.

ಬಳಿಕ ದೇವರು, “ಆಕಾಶ ಮಂಡಲದಲ್ಲಿ ಬೆಳಕುಗಳು ಉಂಟಾಗಲಿ. ಅವು ಹಗಲಿರುಳುಗಳನ್ನು ಬೇರೆ ಬೇರೆ ಮಾಡಲಿ. ಅವು ಕಾಲಗಳನ್ನೂ, ದಿನಸಂವತ್ಸರಗಳನ್ನೂ ಸೂಚಿಸುವ ಗುರುತುಗಳಾಗಿರಲಿ. ಭೂಮಿಯ ಮೇಲೆ ಬೆಳಕು ಕೊಡುವುದಕ್ಕೆ ಅವು ಆಕಾಶಮಂಡಲದಲ್ಲಿ ದೀಪಗಳಂತಿರಲಿ” ಅಂದನು. ಹಾಗೆಯೇ ಆಯಿತು. ದೇವರು ಹಗಲನ್ನಾಳುವುದಕ್ಕೆ ದೊಡ್ಡ ದೀಪವನ್ನೂ ಇರುಳನ್ನಾಳುವುದಕ್ಕೆ ಚಿಕ್ಕ ದೀಪವನ್ನೂ ಹೀಗೆ ಎರಡು ದೊಡ್ಡ ದೀಪಗಳನ್ನು ಉಂಟು ಮಾಡಿದನು. ಆತನು ನಕ್ಷತ್ರಗಳನ್ನು ಸಹ ಉಂಟು ಮಾಡಿದನು. ದೇವರು ಆ ಬೆಳಕುಗಳನ್ನು ಆಕಾಶದಲ್ಲಿ ನಿಲ್ಲಿಸಿ ಭೂಮಿಯ ಮೇಲೆ ಬೆಳಕು ಕೊಡುವುದಕ್ಕೂ ಹಗಲಿರುಳುಗಳನ್ನು ಆಳುವುದಕ್ಕೂ ಬೆಳಕನ್ನು, ಕತ್ತಲನ್ನು ಬೇರೆ ಬೇರೆ ಮಾಡುವುದಕ್ಕೂ ಅವುಗಳನ್ನು ನೇಮಿಸಿದನು. ದೇವರು ಅದನ್ನು ಒಳ್ಳೆಯದೆಂದು ಕಂಡನು. ಸಾಯಂಕಾಲವೂ ಉದಯಕಾಲವೂ ಆಗಿ ನಾಲ್ಕನೆಯ ದಿನವಾಯಿತು.

ತರುವಾಯ ದೇವರು, “ಗುಂಪು ಗುಂಪಾಗಿ ಚಲಿಸುವ ಜಲಜಂತುಗಳು ನೀರಿನಲ್ಲಿ ತುಂಬಿಕೊಳ್ಳಲಿ, ಪಕ್ಷಿಗಳು ಭೂಮಿಯ ಮೇಲೆ ಅಂತರಿಕ್ಷದಲ್ಲಿ ಹಾರಾಡಲಿ” ಎಂದು ಹೇಳಿದನು. ಹೀಗೆ ದೇವರು ಮಹಾ ಜಲಚರಗಳನ್ನೂ ನೀರಿನಲ್ಲಿ ತುಂಬಿರುವ ಸಕಲ ವಿಧವಾದ ಜೀವಿಗಳನ್ನೂ ರೆಕ್ಕೆಗಳುಳ್ಳ ಸಕಲವಿಧವಾದ ಪಕ್ಷಿಗಳನ್ನೂ ಅವುಗಳ ಜಾತಿಗನುಸಾರವಾಗಿ ಉಂಟುಮಾಡಿದನು. ಆತನು ಅದನ್ನು ಒಳ್ಳೆಯದೆಂದು ಕಂಡನು. ಇದಲ್ಲದೆ ದೇವರು, “ಅವುಗಳಿಗೆ ನೀವು ಅಭಿವೃದ್ಧಿಯಾಗಿ ಹೆಚ್ಚಿರಿ, ಜಲಚರಗಳು ಸಮುದ್ರದ ನೀರಿನಲ್ಲಿ ತುಂಬಿಕೊಳ್ಳಲಿ, ಪಕ್ಷಿಗಳು ಭೂಮಿಯ ಮೇಲೆ ಹೆಚ್ಚಲಿ” ಎಂದು ಹೇಳಿ ಆಶೀರ್ವದಿಸಿದನು. ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಐದನೆಯ ದಿನವಾಯಿತು.

ಬಳಿಕ ದೇವರು, “ಭೂಮಿಯಿಂದ ಜೀವಜಂತುಗಳು ಉಂಟಾಗಲಿ; ಪಶು, ಕ್ರಿಮಿಗಳೂ ಕಾಡುಮೃಗಗಳು, ತಮ್ಮ ತಮ್ಮ ಜಾತಿಗನುಸಾರವಾಗಿ ಹುಟ್ಟಲಿ” ಅಂದನು. ಹಾಗೆಯೇ ಆಯಿತು. ದೇವರು ಕಾಡುಮೃಗಗಳನ್ನೂ, ಪಶುಗಳನ್ನೂ, ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳನ್ನೂ ಅವುಗಳ ಜಾತಿಗನುಸಾರವಾಗಿ ಉಂಟುಮಾಡಿದನು. ಆತನು ಅದನ್ನು ಒಳ್ಳೆಯದೆಂದು ಕಂಡನು.

ಆಮೇಲೆ ದೇವರು, ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟು ಮಾಡೋಣ. ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ, ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ, ಪ್ರಾಣಿಗಳ ಮೇಲೆಯೂ, ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಕೀಟಗಳ ಮೇಲೆಯೂ ಎಲ್ಲಾ ಭೂಮಿಯ ಮೇಲೆಯೂ ದೊರೆತನಮಾಡಲಿ ಅಂದನು. ಹೀಗೆ ದೇವರು; “ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು. ದೇವರ ಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು. ಅವರನ್ನು ಗಂಡುಹೆಣ್ಣಾಗಿ ಸೃಷ್ಟಿ ಮಾಡಿದನು.” ಇದಲ್ಲದೆ ದೇವರು ಅವರನ್ನು ಆಶೀರ್ವದಿಸಿ, “ನೀವು ಬಹು ಸಂತಾನವುಳ್ಳವರಾಗಿ ಹೆಚ್ಚಿರಿ. ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನ ಮಾಡಿರಿ” ಎಂದು ಅವರಿಗೆ ಹೇಳಿದನು. ಅಲ್ಲದೆ ದೇವರು, “ಇಗೋ, ಸಮಸ್ತ ಭೂಮಿಯ ಮೇಲಿರುವ ಬೀಜವುಳ್ಳ ಎಲ್ಲಾ ಪೈರುಗಳನ್ನೂ, ಬೀಜವುಳ್ಳ ಎಲ್ಲಾ ಹಣ್ಣಿನ ಮರಗಳನ್ನೂ ನಿಮಗೆ ಆಹಾರಕ್ಕಾಗಿ ಕೊಟ್ಟಿದ್ದೇನೆ ಇದಲ್ಲದೆ ಭೂಮಿಯ ಮೇಲೆ ತಿರುಗಾಡುವ ಮೃಗಗಳು, ಆಕಾಶದಲ್ಲಿ ಹಾರಾಡುವ ಪಕ್ಷಿಗಳು, ನೆಲದಲ್ಲಿ ಹರಿದಾಡುವ ಕ್ರಿಮಿಕೀಟಗಳು ಮೊದಲಾದ ಜೀವಿಗಳಿಗೆ ಹಸುರಾದ ಸಸ್ಯಗಳನ್ನೆಲ್ಲಾ ಆಹಾರಕ್ಕಾಗಿ ಕೊಟ್ಟಿದ್ದೇನೆ” ಎಂದು ಹೇಳಿದನು. ಅದು ಹಾಗೆಯೇ ಆಯಿತು. ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅವೆಲ್ಲವೂ ಬಹು ಒಳ್ಳೆಯದಾಗಿ ತೋರಿತು. ಸಾಯಂಕಾಲವೂ ಉದಯಕಾಲವೂ ಆಗಿ ಆರನೆಯ ದಿನವಾಯಿತು.

ಹೀಗೆ ಭೂಮಿಯು ಆಕಾಶಗಳು ಅವುಗಳಲ್ಲಿರುವ ಸಮಸ್ತವೂ ನಿರ್ಮಿತವಾದವು. ದೇವರು ತನ್ನ ಸೃಷ್ಟಿಕಾರ್ಯವನ್ನು ಮುಗಿಸಿಬಿಟ್ಟು ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು. ದೇವರು ತನ್ನ ಸೃಷ್ಟಿ ಕಾರ್ಯವನ್ನು ಮುಗಿಸಿದ ನಂತರ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡಿದ್ದರಿಂದ ಆ ದಿನವನ್ನು ಪರಿಶುದ್ಧ ದಿನವಾಗಿರಲಿ ಎಂದು ಆಶೀರ್ವದಿಸಿದನು.

ಯೆಹೋವನಾದ ದೇವರು ಭೂಮಿಯು ಆಕಾಶಗಳನ್ನು ನಿರ್ಮಾಣ ಮಾಡಿದ ಚರಿತ್ರೆ ಇದೇ. ಯೆಹೋವನಾದ ದೇವರು ಭೂಮ್ಯಾಕಾಶಗಳನ್ನು ಉಂಟುಮಾಡಿದಾಗ ಯಾವ ವಿಧವಾದ ಗಿಡವೂ ಭೂಮಿಯಲ್ಲಿ ಇರಲಿಲ್ಲ. ಯಾವ ಸಸ್ಯವೂ ಮೊಳೆತಿರಲಿಲ್ಲ. ಏಕೆಂದರೆ ಯೆಹೋವನಾದ ದೇವರು ಭೂಮಿಯ ಮೇಲೆ ಮಳೆಯನ್ನು ಸುರಿಸಿರಲಿಲ್ಲ. ಭೂಮಿಯನ್ನು ವ್ಯವಸಾಯ ಮಾಡುವುದಕ್ಕೆ ಮನುಷ್ಯನೂ ಇರಲಿಲ್ಲ. ಆದರೂ ಭೂಮಿಯಿಂದ ನೀರಿನ ಬುಗ್ಗೆ ಉಕ್ಕಿ ಮೇಲೆ ಬಂದು ನೆಲವನ್ನೆಲ್ಲಾ ತೋಯಿಸುತ್ತಿದವು. ಹೀಗಿರಲು ಯೆಹೋವನಾದ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ಸೃಷ್ಟಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು. ಆಗ ಮನುಷ್ಯನು ಬದುಕುವ ಪ್ರಾಣಿಯಾದನು. ಇದಲ್ಲದೆ ಯೆಹೋವನಾದ ದೇವರು ಮೂಡಣ ದಿಕ್ಕಿನಲ್ಲಿರುವ ಏದೆನ್ ಸೀಮೆಯಲ್ಲಿ ಒಂದು ಉದ್ಯಾನವನವನ್ನು ಸೃಷ್ಟಿಸಿ ತಾನು ಉಂಟುಮಾಡಿದ ಮನುಷ್ಯನನ್ನು ಅದರಲ್ಲಿ ತಂಗುವಂತೆ ಮಾಡಿದನು.

ಆದಾಮನ ವಂಶದವರ ದಾಖಲೆ: ದೇವರು ಸೃಷ್ಟಿಕಾಲದಲ್ಲಿ ಮನುಷ್ಯನನ್ನು ತನ್ನ ಹೋಲಿಕೆಗನುಸಾರವಾಗಿ ಸೃಷ್ಟಿ ಮಾಡಿದನು. ಅವರನ್ನು ಗಂಡು ಮತ್ತು ಹೆಣ್ಣಾಗಿ ಉಂಟು ಮಾಡಿದನು. ಇದಲ್ಲದೆ, ಅವರನ್ನು ಸೃಷ್ಟಿಸಿದ ದಿನದಲ್ಲಿ, ಅವರನ್ನು ಆಶೀರ್ವದಿಸಿ ಅವರಿಗೆ “ಮನುಷ್ಯ” ಎಂದು ಹೆಸರಿಟ್ಟನು. ಆದಾಮನು ನೂರಮೂವತ್ತು ವರ್ಷದವನಾದಾಗ, ರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾದ ಮಗನನ್ನು ಪಡೆದು ಅವನಿಗೆ ಸೇತನೆಂದು ಹೆಸರಿಟ್ಟನು.

ಆರು ದಿನಗಳಲ್ಲಿ ಯೆಹೋವನು ಭೂಮ್ಯಾಕಾಶಗಳನ್ನೂ, ಸಮುದ್ರವನ್ನೂ, ಅವುಗಳಲ್ಲಿರುವ ಸಮಸ್ತವನ್ನೂ ನಿರ್ಮಾಣ ಮಾಡಿ, ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು. ಆದುದರಿಂದ ಯೆಹೋವನು ಸಬ್ಬತ್ ದಿನವನ್ನು ತನ್ನ ಪರಿಶುದ್ಧ ದಿನವಾಗಿರಲಿ ಎಂದು ಆಶೀರ್ವದಿಸಿದನು.

ಇದು ನನಗೂ ಇಸ್ರಾಯೇಲರಿಗೂ ನಡುವೆಯಿರುವ ಸದಾಕಾಲದ ಗುರುತು. ಏಕೆಂದರೆ ಆರು ದಿನಗಳಲ್ಲಿ ಯೆಹೋವನು ಭೂಮ್ಯಾಕಾಶಗಳನ್ನು ಉಂಟುಮಾಡಿ ಏಳನೆಯ ದಿನದಲ್ಲಿ ಕೆಲಸವನ್ನು ಮಾಡದೇ ವಿಶ್ರಮಿಸಿಕೊಂಡನಲ್ಲವೇ?”

ಆದರೆ ನನ್ನ ಜೀವದಾಣೆ, ಯೆಹೋವನ ಮಹಿಮೆಯು ಭೂಲೋಕದಲ್ಲೆಲ್ಲಾ ತುಂಬಿರುವುದು.

ದೇವರು, ಮನುಷ್ಯರನ್ನು ಸೃಷ್ಟಿಸಿ ಭೂಮಿಯ ಮೇಲೆ ಇರಿಸಿದ ದಿನ ಮೊದಲುಗೊಂಡು ಇಂದಿನವರೆಗೂ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನವರೆಗೂ ಇಂತಹ ಅದ್ಭುತ ಕಾರ್ಯವು ನಡೆದದ್ದುಂಟೋ, ಇಲ್ಲವೆ ಇಂತಹ ಸುದ್ದಿ ಕೇಳಿದ್ದುಂಟೋ ಎಂದು ವಿಚಾರಿಸಿಕೊಳ್ಳಿರಿ.

ನಿಮ್ಮಿಂದ ಬೇರೇನೂ ಕೇಳಿಕೊಳ್ಳುತ್ತಾನೆ? ಆಲೋಚಿಸಿರಿ; ಉನ್ನತವಾದ ಆಕಾಶಮಂಡಲವೂ ಮತ್ತು ಭೂಮಿಯೂ, ಅದರಲ್ಲಿರುವ ಎಲ್ಲವೂ ನಿಮ್ಮ ದೇವರಾದ ಯೆಹೋವನವೇ.

ಆತನು ದೀನರನ್ನು ಧೂಳಿನಿಂದ ಎತ್ತಿ; ದರಿದ್ರರನ್ನು ತಿಪ್ಪೆಯಿಂದ ಎಬ್ಬಿಸಿ ಅಧಿಪತಿಗಳೊಂದಿಗೆ ಕುಳ್ಳಿರಿಸಿ ಅವನಿಗೆ ಮಹಿಮಾಸನವನ್ನು ಬಾಧ್ಯತೆಯಾಗಿ ಅನುಗ್ರಹಿಸುವವನಾಗಿದ್ದಾನೆ. ಭೂಮಿಯ ಆಧಾರಸ್ತಂಭಗಳು ಯೆಹೋವನವೇ; ಆತನೇ ಅವುಗಳ ಮೇಲೆ ಭೂಮಂಡಲವನ್ನು ಸ್ಥಾಪಿಸಿದ್ದಾನೆ.

ಆಗ ಯೆಹೋವನ ಗದರಿಕೆಯಿಂದಲೂ ಆತನ ಶ್ವಾಸಭರದಿಂದಲೂ ಸಮುದ್ರದ ತಳವು ಕಾಣಿಸಿತು. ಭೂಮಂಡಲದ ಅಸ್ಥಿವಾರವು ತೋರಿಬಂದವು.

ಹಿಜ್ಕೀಯನು ಯೆಹೋವನ ಮುಂದೆ ಪ್ರಾರ್ಥನೆ ಮಾಡಿ ಹೇಳಿದ್ದೇನೆಂದರೆ, “ಕೆರೂಬಿಗಳ ಮೇಲೆ ಆಸೀನನಾಗಿರುವಾತನೇ, ಇಸ್ರಾಯೇಲರ ದೇವರೇ, ಯೆಹೋವನೇ, ಎಲ್ಲಾ ಭೂರಾಜ್ಯಗಳನ್ನು ಆಳುವ ದೇವರು ನೀನೊಬ್ಬನೇ, ಪರಲೋಕಭೂಲೋಕಗಳನ್ನು ಉಂಟುಮಾಡಿದವನು ನೀನೇ.

ಯೆಹೋವನೇ, ಎಲ್ಲಾ ಮಹಿಮೆ, ವೈಭವ, ಪರಾಕ್ರಮ, ಪ್ರಭಾವ, ಪ್ರತಾಪ, ಪ್ರತಿಭೆ ಎಲ್ಲವೂ ನಿನ್ನವೆ. ಭೂಮ್ಯಾಕಾಶಗಳಲ್ಲಿ ಇರುವದೆಲ್ಲಾ ನಿನ್ನದೇ. ಯೆಹೋವನೇ ರಾಜ್ಯವು ನಿನ್ನದು. ನೀನು ಮಹೋನ್ನತನಾಗಿ ಸರ್ವವನ್ನು ಆಳುವವನಾಗಿರುತ್ತೀ.

ಯೆಹೋವನೇ ನೀನೊಬ್ಬನೇ ದೇವರು; ನೀನು ಉನ್ನತೋನ್ನತವಾದ ಆಕಾಶವನ್ನೂ, ಅದರ ಸೈನ್ಯವನ್ನೂ, ಭೂಮಿಯನ್ನೂ ಅದರ ಮೇಲಿರುವುದನ್ನೂ, ಸಮುದ್ರಗಳನ್ನೂ ಎಲ್ಲಾ ಜಲಚರಗಳನ್ನೂ ಉಂಟುಮಾಡಿ, ಸಮಸ್ತ ಪ್ರಾಣಿಗಳಿಗೂ ಜೀವಕೊಡುವಾತನಾಗಿರುತ್ತೀ. ಆಕಾಶಸೈನ್ಯದವರು ನಿನ್ನನ್ನು ಆರಾಧಿಸುತ್ತಾರೆ.

ಭೂಲೋಕವನ್ನು ಕದಲಿಸಿ ಅದರ ಸ್ತಂಭಗಳನ್ನು ನಡುಗಿಸುತ್ತಾನೆ. ಹುಟ್ಟಬೇಡವೆಂದು ಆತನು ಅಪ್ಪಣೆ ಕೊಟ್ಟರೆ ಸೂರ್ಯನು ಹುಟ್ಟುವುದಿಲ್ಲ; ನಕ್ಷತ್ರಗಳನ್ನು ಮುಚ್ಚಿಟ್ಟು ಮುದ್ರೆಹಾಕುತ್ತಾನೆ. ಆಕಾಶಮಂಡಲವನ್ನು ವಿಶಾಲಪಡಿಸಿದವನು ಆತನೊಬ್ಬನೇ. ಅಲ್ಲಕಲ್ಲೋಲವಾದ ಸಮುದ್ರದ ಮೇಲೆ ನಡೆಯುತ್ತಾನೆ. ನಕ್ಷತ್ರಮಂಡಲವನ್ನೂ, ಮೃಗಶಿರವನ್ನೂ, ಕೃತ್ತಿಕೆಯನ್ನೂ, ದಕ್ಷಿಣ ದಿಕ್ಕಿನ ನಕ್ಷತ್ರಗೃಹಗಳನ್ನೂ ನಿರ್ಮಿಸಿದವನು ಆತನೇ. ಅಪ್ರಮೇಯ ಮಹಾಕಾರ್ಯಗಳನ್ನೂ, ಅಸಂಖ್ಯಾತವಾದ ಅದ್ಭುತಕೃತ್ಯಗಳನ್ನೂ ಮಾಡುತ್ತಾನೆ.

ಆದರೆ ಮೃಗಗಳನ್ನು ವಿಚಾರಿಸು, ನಿನಗೆ ಉಪದೇಶ ಮಾಡುವವು; ಆಕಾಶದ ಪಕ್ಷಿಗಳನ್ನು ಕೇಳು, ನಿನಗೆ ತಿಳಿಸುವವು; ಭೂಮಿಯನ್ನು ಮಾತನಾಡಿಸು, ನಿನಗೆ ಬೋಧಿಸುವುದು; ಸಮುದ್ರದ ಮೀನುಗಳು ನಿನಗೆ ಹೇಳುವವು. ಈ ಎಲ್ಲವುಗಳ ಸಾಕ್ಷಿಯಿಂದ ಯೆಹೋವನ ಕೈಯೇ ಸಕಲ ಕಾರ್ಯಗಳನ್ನು ಮಾಡುತ್ತದೆ ಎಂದು ಯಾರಿಗೆ ತಾನೇ ಗೊತ್ತಾಗುವುದಿಲ್ಲ? ಪ್ರತಿ ಪ್ರಾಣಿಯ ಪ್ರಾಣವು, ಸಮಸ್ತ ಮನುಷ್ಯರ ಆತ್ಮಗಳೂ ಯೆಹೋವನ ಕೈಯಲ್ಲಿರುವವು.

ಆತನು ಶೂನ್ಯದ ಮೇಲೆ ಆಕಾಶದ ಉತ್ತರ ದಿಕ್ಕನ್ನು ವಿಸ್ತರಿಸಿ, ಭೂಲೋಕವನ್ನು ಯಾವ ಆಧಾರವೂ ಇಲ್ಲದೆ ತೂಗು ಹಾಕಿದ್ದಾನೆ. ತನ್ನ ಮೇಘಗಳೊಳಗೆ ನೀರನ್ನು ತುಂಬಿ ಕಟ್ಟುವನು, ಯಾವ ಮೋಡವೂ ಅದರ ಭಾರದಿಂದ ಒಡೆದು ಹೋಗದು. ತನ್ನ ಸಿಂಹಾಸನಕ್ಕೆ ಮರೆಯಾಗಿ, ಮುಂಭಾಗದಲ್ಲಿ ಮೋಡವನ್ನು ಕವಿಸಿರುವನು. ಬೆಳಕು ಕತ್ತಲುಗಳ ಸಂಧಿಸ್ಥಾನದಲ್ಲಿ ಸಮುದ್ರದ ಮೇಲೆ, ಸುತ್ತಲೂ ಮೇರೆಯನ್ನೂ ಹಾಕಿದ್ದಾನೆ. ಆಕಾಶಮಂಡಲದ ಸ್ತಂಭಗಳು, ಆತನ ಗದರಿಕೆಯಿಂದ ಬೆರಗಾಗಿ ಕದಲುವವು.

ನಾನು ದೇವರಾತ್ಮನಿಂದಲೇ ನಿರ್ಮಿತನಾಗಿದ್ದೇನೆ, ನನ್ನ ಜೀವವು ಸರ್ವಶಕ್ತನಾದ ದೇವರ ಶ್ವಾಸದಿಂದುಂಟಾಗಿದೆ.

ಆಗ ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರವಾಗಿ ಹೀಗೆಂದನು, “ಅಜ್ಞಾನದ ಮಾತುಗಳಿಂದ ಸತ್ಯಾಲೋಚನೆಯನ್ನು ಮಂಕುಮಾಡುವ ಇವನು ಯಾರು? ಶೂರನಂತೆ ನಡುಕಟ್ಟಿಕೋ; ನಾನು ಪ್ರಶ್ನೆಮಾಡುವೆನು, ನೀನೇ ನನಗೆ ಉಪದೇಶಿಸು. ನಾನು ಲೋಕಕ್ಕೆ ಅಸ್ತಿವಾರ ಹಾಕಿದಾಗ ನೀನು ಎಲ್ಲಿದ್ದಿ? ನೀನು ಜ್ಞಾನಿಯಾಗಿದ್ದರೆ ಹೇಳು. ಅದರ ಅಳತೆಗಳನ್ನು ಯಾರು ಗೊತ್ತುಮಾಡಿದರು? ನೀನೇ ಬಲ್ಲೆ. ಅದರ ಮೇಲೆ ನೂಲುಹಿಡಿದವರು ಯಾರು? ಭೂಲೋಕದ ಅಸ್ತಿವಾರವು ಯಾವುದರ ಮೇಲೆ ನೆಲೆಗೊಂಡವು? ಅದರ ಮೂಲೆಗಲ್ಲನ್ನು ಹಾಕಿದವರು ಯಾರು? ಮುಂಜಾನೆ ನಕ್ಷತ್ರಗಳು ಒಟ್ಟಾಗಿ ಉತ್ಸಾಹ ಧ್ವನಿಯೆತ್ತುತ್ತಾ ದೇವಕುಮಾರರೆಲ್ಲರೂ ಆನಂದ ಘೋಷಮಾಡುತ್ತಾ ಇರಲು, ಸಮುದ್ರವು ಭೂಗರ್ಭವನ್ನು ಭೇದಿಸಿಕೊಂಡು ಬರಲು, ಅದರ ದ್ವಾರಗಳನ್ನು ಮುಚ್ಚಿದವರು ಯಾರು? ಆ ಕಾಲದಲ್ಲಿ ನಾನು ಮೋಡಗಳನ್ನು ಅದಕ್ಕೆ ವಸ್ತ್ರವನ್ನಾಗಿಯೂ, ಕಾರ್ಗತ್ತಲನ್ನು ಸುತ್ತುಬಟ್ಟೆಯನ್ನಾಗಿಯೂ ಮಾಡಿದೆನಲ್ಲವೆ? ಇದಲ್ಲದೆ ಸಮುದ್ರಕ್ಕೆ ನನ್ನ ಇಷ್ಟದ ಮೇರೆಯನ್ನು ಕಟ್ಟಿ, ಅದಕ್ಕೆ ಅಗುಳಿ, ಕದಗಳನ್ನು ಹಾಕಿದೆನು ‘ಇಲ್ಲಿಯ ತನಕ ಬರಬಹುದು; ಮೀರಿ ಬರಬೇಡ, ನಿನ್ನ ತೆರೆಗಳ ಹೆಮ್ಮೆಗೆ ಇಲ್ಲೇ ತಡೆಯಾಗುವುದು’ ಎಂದು ಅಪ್ಪಣೆಕೊಟ್ಟೆನು.

ನಿನ್ನಂತೆ ನನ್ನ ಸೃಷ್ಟಿಯಾಗಿರುವ ನೀರಾನೆಯನ್ನು ನೋಡು; ಎತ್ತಿನ ಹಾಗೆ ಹುಲ್ಲನ್ನು ಮೇಯುವುದು. ಇಗೋ, ಅದರ ಬಲವು ಸೊಂಟದಲ್ಲಿಯೂ, ಅದರ ಶಕ್ತಿಯು ಹೊಟ್ಟೆಯ ನರಗಳಲ್ಲಿಯೂ ಸೇರಿಕೊಂಡಿವೆ. ತನ್ನ ಬಾಲವನ್ನು ದೇವದಾರುವಿನ ಮರದಂತೆ ಬಾಗಿಸುವುದು; ಅದರ ತೊಡೆಯ ನರಗಳು ಹೆಣೆದುಕೊಂಡಿವೆ.

ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ, ನೀನು ಉಂಟುಮಾಡಿದ ಚಂದ್ರ ಮತ್ತು ನಕ್ಷತ್ರಗಳನ್ನೂ ನಾನು ನೋಡುವಾಗ,

ಆಗ ಯೆಹೋವನೇ, ನಿನ್ನ ಗದರಿಕೆಯಿಂದಲೂ, ನಿನ್ನ ಶ್ವಾಸಭರದಿಂದಲೂ ಸಮುದ್ರದ ತಳವು ಕಾಣಿಸಿತು. ಭೂಮಂಡಲದ ಅಸ್ತಿವಾರಗಳು ಕಂಡುಬಂದವು.

ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ. ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ.

ಆದರೂ ಅವುಗಳ ಪ್ರಭುತ್ವವು ಭೂಮಿಯಲ್ಲೆಲ್ಲಾ ಪ್ರಸರಿಸಿದೆ; ಅವುಗಳ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿರುತ್ತವೆ. ಅಲ್ಲಿ ದೇವರು ಸೂರ್ಯನಿಗೋಸ್ಕರ ಗುಡಾರವನ್ನು ಏರ್ಪಡಿಸಿದ್ದಾನೆ.

ದಾವೀದನ ಕೀರ್ತನೆ. ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನದು; ಲೋಕವೂ ಮತ್ತು ಅದರ ನಿವಾಸಿಗಳೂ ಆತನವೇ. ಆತನೇ ಅದರ ಅಸ್ತಿವಾರವನ್ನು ಸಾಗರದ ಮೇಲೆ ಹಾಕಿದವನು; ಅದನ್ನು ಜಲರಾಶಿಗಳ ಮೇಲೆ ಸ್ಥಿರಪಡಿಸಿದವನು ಆತನೇ.

ಯೆಹೋವನ ಅಪ್ಪಣೆಯಿಂದಲೇ ಆಕಾಶವು ಉಂಟಾಯಿತು; ಅದರಲ್ಲಿರುವುದೆಲ್ಲವೂ ಆತನ ಶ್ವಾಸದಿಂದ ನಿರ್ಮಿತವಾಯಿತು.

ಆಕಾಶವೂ ನಿನ್ನದು, ಭೂಮಿಯೂ ನಿನ್ನದೇ; ಲೋಕವನ್ನೂ ಅದರಲ್ಲಿರುವುದೆಲ್ಲವನ್ನೂ ನಿರ್ಮಿಸಿದವನು ನೀನು. ದಕ್ಷಿಣೋತ್ತರ ದಿಕ್ಕುಗಳನ್ನು ಉಂಟುಮಾಡಿದವನು ನೀನು. ತಾಬೋರ್, ಹೆರ್ಮೋನ್ ಪರ್ವತಗಳು ನಿನ್ನ ನಾಮದಲ್ಲಿ ಆನಂದಧ್ವನಿ ಮಾಡುತ್ತವೆ.

ಬೆಟ್ಟಗಳು ಉಂಟಾಗುವುದಕ್ಕಿಂತ ಮೊದಲೇ, ಭೂಮಿಯೂ ಅದರ ದೇಶಗಳೂ ನಿರ್ಮಾಣವಾಗುವುದಕ್ಕಿಂತ ಮೊದಲೇ, ಯುಗಯುಗಾಂತರಗಳಲ್ಲಿಯೂ ನೀನೇ ದೇವರು.

ಆತನೇ ಸಮುದ್ರವನ್ನು ನಿರ್ಮಿಸಿದವನು; ಅದು ಆತನದೇ, ಒಣನೆಲವು ಆತನ ಕೈಕೆಲಸವೇ. ಬನ್ನಿರಿ; ನಮ್ಮ ನಿರ್ಮಾಣಿಕನಾದ ಯೆಹೋವನಿಗೆ ಸಾಷ್ಟಾಂಗವೆರಗಿ ಆರಾಧಿಸೋಣ.

ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದಿ; ಗಗನಮಂಡಲವು ನಿನ್ನ ಕೈಕೆಲಸವಾಗಿದೆ. ಅವು ನಾಶವಾಗುವವು; ಆದರೆ ನೀನು ಶಾಶ್ವತವಾಗಿರುತ್ತಿ. ಅವೆಲ್ಲವೂ ವಸ್ತ್ರದಂತೆ ಹಳೆಯದಾಗುವವು. ಉಡುಪಿನಂತೆ ಅವುಗಳನ್ನು ಬದಲಿಸುತ್ತಿ; ಅವು ಮಾರ್ಪಡುವವು.

ನನ್ನ ಮನವೇ, ಯೆಹೋವನನ್ನು ಕೊಂಡಾಡು. ಯೆಹೋವನೇ, ನನ್ನ ದೇವರೇ, ನೀನು ಸರ್ವೋತ್ತಮನು; ಪ್ರಭಾವ ಮತ್ತು ಮಹತ್ವಗಳಿಂದ ಭೂಷಿತನಾಗಿರುವೆ. ಬೆಳಕನ್ನು ವಸ್ತ್ರದಂತೆ ಹೊದ್ದುಕೊಂಡಿರುವೆ; ಆಕಾಶವನ್ನು ಗುಡಾರದಂತೆ ಎತ್ತಿ ಹರಡಿರುವೆ. ನೀರಿನ ಮೇಲೆ ತೊಳೆಗಳನ್ನು ನಿಲ್ಲಿಸಿ ಉಪ್ಪರಿಗೆಗಳನ್ನು ಕಟ್ಟಿಕೊಂಡು; ಮೋಡಗಳನ್ನು ವಾಹನವಾಗಿ ಮಾಡಿಕೊಂಡಿರುವೆ; ವಾಯುವಿನ ರೆಕ್ಕೆಗಳ ಮೇಲೆ ಸಂಚರಿಸುತ್ತೀ. ಗಾಳಿಯನ್ನು ನಿನ್ನ ದೂತರನ್ನಾಗಿಯೂ, ಅಗ್ನಿಜ್ವಾಲೆಯನ್ನು ಸೇವಕರನ್ನಾಗಿಯೂ ಮಾಡಿಕೊಳ್ಳುತ್ತೀ. ಭೂಮಿಯು ಯುಗಯುಗಾಂತರಕ್ಕೂ ಕದಲದ ಹಾಗೆ ಅದನ್ನು ದೃಢವಾದ ಅಸ್ತಿವಾರದ ಮೇಲೆ ಸ್ಥಾಪಿಸಿದ್ದೀ.

ಯೆಹೋವನೇ, ನಿನ್ನ ಕೈಕೆಲಸಗಳು ಬಗೆ ಬಗೆಯಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ ಮಾಡಿರುವೆ; ಭೂಲೋಕವು ನಿನ್ನ ಆಸ್ತಿಯಿಂದ ತುಂಬಿರುತ್ತದೆ. ಇಗೋ, ಬಹುವಿಶಾಲವಾದ ಸಮುದ್ರವು! ಅದರೊಳಗೆ ಲೆಕ್ಕವಿಲ್ಲದಷ್ಟು ಸಣ್ಣ, ದೊಡ್ಡ ಜೀವಜಂತುಗಳು ಚಲಿಸುತ್ತಿರುತ್ತವೆ.

ಯೆಹೋವನ ಕೃತ್ಯಗಳು ಮಹತ್ತಾದವುಗಳು; ಅವುಗಳಲ್ಲಿ ಸಂತೋಷಿಸುವವರು ಅವುಗಳನ್ನೇ ಧ್ಯಾನಿಸುವರು.

ಯೆಹೋವನಿಂದ ನಿಮಗೆ ಆಶೀರ್ವಾದವಾಗಲಿ. ಆತನು ಭೂಪರಲೋಕಗಳನ್ನು ಉಂಟುಮಾಡಿದ್ದಾನೆ. ಪರಲೋಕವು ಯೆಹೋವನದು; ಭೂಲೋಕವನ್ನು ಮಾನವ ಸಂತಾನಕ್ಕೆ ಕೊಟ್ಟಿದ್ದಾನೆ.

ಈ ದಿನವು ಯೆಹೋವನಿಂದಲೇ ನೇಮಕವಾದದ್ದು; ಇದರಲ್ಲಿ ನಾವು ಉಲ್ಲಾಸದಿಂದ ಆನಂದಿಸೋಣ.

ಭೂಮಿ, ಆಕಾಶಗಳನ್ನು ನಿರ್ಮಿಸಿದ ಯೆಹೋವನಿಂದಲೇ, ನನ್ನ ಸಹಾಯವು ಬರುತ್ತದೆ.

ಭೂಮಿ, ಆಕಾಶಗಳನ್ನು ಉಂಟುಮಾಡಿದ, ಯೆಹೋವನ ನಾಮದಲ್ಲಿ ನಮಗೆ ರಕ್ಷಣೆಯಾಗುವುದು.

ಯೆಹೋವನು ಭೂಮಿಯಲ್ಲಿಯೂ, ಆಕಾಶದಲ್ಲಿಯೂ, ಸಮುದ್ರಗಳಲ್ಲಿಯೂ, ಬೇರೆ ಎಲ್ಲಾ ಜಲರಾಶಿಗಳಲ್ಲಿಯೂ ತನಗೆ ಬೇಕಾದದ್ದನ್ನು ಮಾಡುತ್ತಾನೆ.

ಆತನು ಆಕಾಶವನ್ನು ಜ್ಞಾನದಿಂದ ನಿರ್ಮಿಸಿದ್ದಾನೆ, ಆತನ ಪ್ರೀತಿಯು ಶಾಶ್ವತವಾದದ್ದು. ಆತನು ಭೂಮಿಯನ್ನು ಜಲರಾಶಿಗಳ ಮೇಲೆ ಹಾಸಿದ್ದಾನೆ, ಆತನ ಪ್ರೀತಿಯು ಶಾಶ್ವತವಾದದ್ದು. ಆತನು ಮಹಾ ಜ್ಯೋತಿರ್ಮಂಡಲಗಳನ್ನು ಸೃಷ್ಟಿಸಿದ್ದಾನೆ, ಆತನ ಪ್ರೀತಿಯು ಶಾಶ್ವತವಾದದ್ದು. ಸೂರ್ಯನು ಹಗಲನ್ನು ಆಳುತ್ತಾನೆ, ಆತನ ಪ್ರೀತಿಯು ಶಾಶ್ವತವಾದದ್ದು. ಚಂದ್ರ, ನಕ್ಷತ್ರಗಳು ರಾತ್ರಿಯನ್ನು ಆಳುತ್ತವೆ, ಆತನ ಪ್ರೀತಿಯು ಶಾಶ್ವತವಾದದ್ದು.

ನನ್ನ ಅಂತರಿಂದ್ರಿಯಗಳನ್ನು ಉಂಟುಮಾಡಿದವನೂ, ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನಲ್ಲವೋ? ನೀನು ನನ್ನನ್ನು ಅದ್ಭುತವಾಗಿಯೂ, ವಿಚಿತ್ರವಾಗಿಯೂ ರಚಿಸಿದ್ದರಿಂದ, ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು, ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ.

ಭೂಮಿ, ಆಕಾಶ, ಸಾಗರ, ಜಲಚರ ಇವುಗಳನ್ನು ನಿರ್ಮಿಸಿದವನೂ, ವಾಗ್ದಾನವನ್ನು ಯಾವಾಗಲೂ ನೆರವೇರಿಸುವವನೂ,

ಅವನು ನಕ್ಷತ್ರಗಳ ಸಂಖ್ಯೆಯನ್ನು ಗೊತ್ತುಮಾಡಿ, ಪ್ರತಿಯೊಂದಕ್ಕೂ ಹೆಸರಿಟ್ಟಿದ್ದಾನೆ.

ಯೆಹೋವನು ಜ್ಞಾನದ ಮೂಲಕ ಭೂಮಿಯನ್ನು ಸ್ಥಾಪಿಸಿ, ವಿವೇಕದ ಮುಖಾಂತರ ಆಕಾಶಮಂಡಲವನ್ನು ಸ್ಥಿರಪಡಿಸಿದನು.

ಯೆಹೋವನು ತನ್ನ ಸೃಷ್ಟಿಕ್ರಮದಲ್ಲಿ ಮೊದಲು ನನ್ನನ್ನು ನಿರ್ಮಿಸಿದನು; ಆತನ ಪುರಾತನಕಾರ್ಯಗಳಲ್ಲಿ ನಾನೇ ಪ್ರಥಮ. ಪ್ರಾರಂಭದಲ್ಲಿ, ಭೂಮಿಯು ಹುಟ್ಟುವುದಕ್ಕಿಂತ ಮುಂಚೆ, ಅನಾದಿಕಾಲದಲ್ಲಿ ಸ್ಥಾಪಿಸಲ್ಪಟ್ಟೆನು. ಜಲನಿಧಿಗಳಾಗಲಿ, ನೀರು ತುಂಬಿದ ಬುಗ್ಗೆಗಳಾಗಲಿ ಇಲ್ಲದಿರುವಾಗ ನಾನು ಹುಟ್ಟಿದೆನು. ಬೆಟ್ಟಗುಡ್ಡಗಳು ಬೇರೂರಿ ನಿಲ್ಲುವುದಕ್ಕೆ ಮುಂಚೆ ಆತನು ಭೂಲೋಕವನ್ನಾಗಲಿ, ಬಯಲನ್ನಾಗಲಿ, ಭೂಮಿಯ ಮೊದಲನೆಯ ಅಣುರೇಣನ್ನಾಗಲಿ ನಿರ್ಮಿಸದೆ ಇರುವಾಗ ನಾನು ಹುಟ್ಟಿದೆನು. ಆತನು ಸಾಗರದ ಮೇಲೆ ಚಕ್ರಾಕಾರವಾದ ಗೆರೆಯನ್ನು ಎಳೆದು, ಆಕಾಶಮಂಡಲವನ್ನು ಸ್ಥಾಪಿಸುವಾಗ ಅಲ್ಲಿದ್ದೆನು. ಆತನು ಗಗನವನ್ನು ಮೇಲೆ ಸ್ಥಿರಪಡಿಸಿ, ಸಾಗರದ ಬುಗ್ಗೆಗಳನ್ನು ನೆಲೆಗೊಳಿಸಿದನು. ಪ್ರವಾಹಗಳು ತನ್ನ ಅಪ್ಪಣೆಯನ್ನು ಮೀರದ ಹಾಗೆ ಆತನು ಸಮುದ್ರಕ್ಕೆ ಮೇರೆಯನ್ನು ನೇಮಿಸಿ, ಭೂಮಿಯ ಅಸ್ತಿವಾರಗಳನ್ನು ಗೊತ್ತುಮಾಡುವಾಗ, ನಾನು ಆತನ ಹತ್ತಿರ ಶಿಲ್ಪಿಯಾಗಿದ್ದುಕೊಂಡು ಪ್ರತಿದಿನವೂ ಆನಂದಿಸುತ್ತಾ, ಯಾವಾಗಲೂ ಆತನ ಮುಂದೆ ವಿನೋದಿಸುತ್ತಾ, ಆತನ ಭೂಲೋಕದಲ್ಲಿ ಉಲ್ಲಾಸಿಸುತ್ತಾ, ಮಾನವಸಂತಾನದಲ್ಲಿ ಹರ್ಷಿಸುತ್ತಾ ಇದ್ದೆನು.

ಕೇಳುವ ಕಿವಿ, ನೋಡುವ ಕಣ್ಣು, ಇವೆರಡನ್ನೂ ಯೆಹೋವನು ನಿರ್ಮಿಸಿದ್ದಾನೆ.

ಆಗ ಒಬ್ಬನು ಮತ್ತೊಬ್ಬನಿಗೆ, “ಸೇನಾಧೀಶ್ವರನಾದ ಯೆಹೋವನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು, ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿದೆ” ಎಂದು ಕೂಗಿ ಹೇಳಿದನು.

ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವುದಿಲ್ಲ, ಯಾರೂ ಹಾಳು ಮಾಡುವುದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವುದು.

ಅಯ್ಯೋ, ನೀವು ಎಂಥಾ ಮೂರ್ಖರು! ನೀವು ತಲೆಕೆಳಗೆ ಮಾಡುವ ಸಂಗತಿಗಳು ಕುಂಬಾರನ ಜೇಡಿಮಣ್ಣಿನಂತೆ ಪರಿಗಣಿಸಲಾಗುವುದು. ಕೆಲಸ ಮಾಡಿದವನಿಗೆ ಮಾಡಲ್ಪಟ್ಟದ್ದು, “ಆತನು ಕೆಲಸ ಮಾಡಲಿಲ್ಲ” ಎಂದು ಹೇಳುವುದೋ? ಇಲ್ಲವೇ, ತನ್ನನ್ನು ನಿರ್ಮಿಸಿದವನಿಗೆ ನಿರ್ಮಿಸಲ್ಪಟ್ಟದ್ದು, “ಆತನಿಗೆ ವಿವೇಕವಿಲ್ಲ” ಎಂದು ಹೇಳುವುದೋ?

“ಕೆರೂಬಿಗಳ ಮೇಲೆ ಆಸೀನನಾಗಿರುವಾತನೇ, ಇಸ್ರಾಯೇಲ್ ದೇವರೇ, ಸೇನಾಧೀಶ್ವರನಾದ ಯೆಹೋವನೇ, ಎಲ್ಲಾ ಭೂರಾಜ್ಯಗಳನ್ನು ಆಳುವ ದೇವರು ನೀನೊಬ್ಬನೇ, ಪರಲೋಕ ಭೂಲೋಕಗಳನ್ನು ಉಂಟುಮಾಡಿದವನು ನೀನೇ.

ಯಾರು ಸಾಗರ ಸಮುದ್ರಗಳನ್ನು ಬರಿದಾದ ಕೈಯಿಂದ ಅಳತೆಮಾಡಿದವನು? ಯಾರು ಆಕಾಶಮಂಡಲದ ವ್ಯಾಪ್ತಿಯನ್ನು ಗೇಣಿನಿಂದ ನಿರ್ಣಯಿಸಿದವನು? ಭೂಲೋಕದ ಮಣ್ಣನ್ನೆಲ್ಲಾ ಕೊಳಗಕ್ಕೆ ತುಂಬಿದವನು ಯಾರು? ಬೆಟ್ಟಗಳನ್ನು ತ್ರಾಸಿನಿಂದಲೂ, ಗುಡ್ಡಗಳನ್ನು ತಕ್ಕಡಿಯಿಂದಲೂ ತೂಗಿದವನು ಯಾರು?

ನಿಮಗೆ ತಿಳಿದಿಲ್ಲವೋ? ನೀವು ಕೇಳಲಿಲ್ಲವೋ? ಆದಿಯಿಂದಲೇ ನಿಮಗೆ ಉಪದೇಶವಾಗಿ ಬಂದಿಲ್ಲವೋ? ಭೂಮಿಯು ನಿರ್ಮಾಣವಾದ ದಿನದಿಂದ ನೀವು ಗ್ರಹಿಸುತ್ತಿಲ್ಲವೋ? ಭೂಮಂಡಲ ನಿವಾಸಿಗಳು ಮಿಡತೆಗಳಂತೆ ಸಣ್ಣಗೆ ಕಾಣಿಸುವಷ್ಟು ಉನ್ನತವಾದ ಆಕಾಶದಲ್ಲಿ ಆತನು ಆಸೀನನಾಗಿದ್ದಾನೆ; ಆಕಾಶಮಂಡಲವನ್ನು ನಾರುಬಟ್ಟೆಯಂತೆ ಹರಡಿ ನಿವಾಸದ ಗುಡಾರದಂತೆ ಎತ್ತಿ ಕಟ್ಟಿದ್ದಾನೆ.

ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ನೋಡಿರಿ! ಈ ನಕ್ಷತ್ರಗಳನ್ನು ಸೃಷ್ಟಿಸಿದಾತನು ಯಾರು? ಈ ಸೈನ್ಯವನ್ನು ಲೆಕ್ಕಕ್ಕೆ ಸರಿಯಾಗಿ ಮುಂದುವರಿಸುತ್ತಾನೆ. ಎಲ್ಲವನ್ನೂ ಹೆಸರೆತ್ತಿ ಕರೆಯುತ್ತಾನೆ; ಆತನು ಅತಿ ಬಲಾಢ್ಯನೂ, ಮಹಾಶಕ್ತನೂ ಆಗಿರುವುದರಿಂದ ಅವುಗಳೊಳಗೆ ಒಂದೂ ಕಡಿಮೆಯಾಗದು.

ನೀನು ಗ್ರಹಿಸಲಿಲ್ಲವೋ? ಕೇಳಲಿಲ್ಲವೋ? ಯೆಹೋವನು ನಿರಂತರ ದೇವರೂ, ಭೂಮಿಯ ಕಟ್ಟಕಡೆಗಳನ್ನು ನಿರ್ಮಿಸಿದವನೂ ಆಗಿದ್ದಾನೆ. ಆತನು ದಣಿದು ಬಳಲುವುದಿಲ್ಲ, ಆತನ ವಿವೇಕವು ಪರಿಶೋಧನೆಗೆ ಅಗಮ್ಯ.

ಆಕಾಶಮಂಡಲವನ್ನು ಉಂಟುಮಾಡಿ ಹರಡಿ ಭೂಮಂಡಲವನ್ನೂ, ಅದರಲ್ಲಿನ ಉತ್ಪತ್ತಿಯನ್ನೂ ವಿಸ್ತರಿಸಿ ಲೋಕದ ಜನರಿಗೆ ಪ್ರಾಣವನ್ನು, ಹೌದು, ಭೂಜನರಿಗೆ ಜೀವಾತ್ಮವನ್ನೂ ದಯಪಾಲಿಸುವ ಯೆಹೋವನೆಂಬ ದೇವರು ಹೀಗೆನ್ನುತ್ತಾನೆ,

ನನ್ನ ಮಹಿಮೆಗಾಗಿ ನಾನು ಸೃಷ್ಟಿಸಿ ರೂಪಿಸಿ ಉಂಟುಮಾಡಿದ ನನ್ನ ಹೆಸರಿನವರೆಲ್ಲರನ್ನೂ ಬರಮಾಡಬೇಕೆಂದು ಅಪ್ಪಣೆಕೊಡುವೆನು.

ನಿನ್ನನ್ನು ಗರ್ಭದಿಂದಲೂ ರೂಪಿಸುತ್ತಾ ಬಂದಿರುವ ನಿನ್ನ ವಿಮೋಚಕನಾದ ಯೆಹೋವನು ಹೀಗೆನ್ನುತ್ತಾನೆ, “ಸರ್ವವನ್ನು ಉಂಟುಮಾಡಿದ ಕರ್ತನಾದ ಯೆಹೋವನು ನಾನೇ, ನಾನೊಬ್ಬನೇ ಗಗನಮಂಡಲವನ್ನು ಹರಡಿ, ಭೂಮಂಡಲವನ್ನು ವಿಸ್ತರಿಸಿದ್ದೇನೆ.

ಆದರೂ ಇಸ್ರಾಯೇಲರ ಸದಮಲಸ್ವಾಮಿಯೂ, ಸೃಷ್ಟಿಕರ್ತನೂ ಆದ ಯೆಹೋವನ ಮಾತನ್ನು ಕೇಳಿರಿ, ‘ಭವಿಷ್ಯತ್ತಿನ ವಿಷಯವಾಗಿ ನನ್ನನ್ನು ವಿಚಾರಿಸಿರಿ. ನಾನೇ ನಿರ್ಮಿಸಿದ ನನ್ನ ಮಕ್ಕಳ ವಿಷಯದಲ್ಲಿ ನನಗೆ ಏನನ್ನು ವಿಧಿಸಿದರೂ ವಿಧಿಸಿರಿ. ಭೂಲೋಕವನ್ನು ಉಂಟುಮಾಡಿ ಅದರಲ್ಲಿನ ಮನುಷ್ಯರನ್ನು ಸೃಷ್ಟಿಸಿದವನು ನಾನೇ. ನನ್ನ ಕೈಗಳೇ ಆಕಾಶಮಂಡಲವನ್ನು ಹರಡಿದವು, ನಕ್ಷತ್ರಸೈನ್ಯಕ್ಕೆ ಅಪ್ಪಣೆಕೊಟ್ಟವನೂ ನಾನೇ.

ಆಕಾಶಮಂಡಲವನ್ನು ಸೃಷ್ಟಿಸಿದ ಯೆಹೋವನ ಮಾತನ್ನು ಕೇಳಿರಿ, ಆತನೇ ದೇವರು. ಭೂಲೋಕವನ್ನು ನಿರ್ಮಿಸಿ ರೂಪಿಸಿ ಸ್ಥಾಪಿಸಿದನು. ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು. ಈತನು ಹೀಗೆನ್ನುತ್ತಾನೆ, “ನಾನೇ ಯೆಹೋವನು, ಇನ್ನು ಯಾರೂ ಇಲ್ಲ.

ಯಾಕೋಬೇ, ನಾನು ಕರೆದ ಇಸ್ರಾಯೇಲೇ, ನನ್ನ ಕಡೆಗೆ ಕಿವಿಗೊಡು. ನಾನೇ ಪರಮಾತ್ಮನು, ನಾನೇ ಆದಿಯೂ, ನಾನೇ ಅಂತ್ಯ ನನ್ನ ಕೈ ಭೂಮಿಗೆ ಅಸ್ತಿವಾರವನ್ನು ಹಾಕಿತು, ನನ್ನ ಬಲಗೈ ಆಕಾಶವನ್ನು ಹರಡಿತು, ನಾನು ಕರೆದ ಕೂಡಲೆ ಅವೆರಡೂ ಒಟ್ಟಾಗಿ ನಿಲ್ಲುವವು.

ಆಕಾಶಮಂಡಲವನ್ನು ಹರಡಿ, ಭೂಲೋಕವನ್ನು ಸ್ಥಾಪಿಸಿದ ನಿನ್ನ ಸೃಷ್ಟಿಕರ್ತನಾದ ಯೆಹೋವನನ್ನು ಮರೆತುಬಿಟ್ಟೆಯಾ? ನಾಶಮಾಡಬೇಕೆಂದು ಬಾಣವನ್ನು ಹೂಡುವ ಹಿಂಸಕನ ಕ್ರೋಧಕ್ಕೆ ದಿನವೆಲ್ಲಾ ಎಡೆಬಿಡದೆ ಅಂಜುತ್ತೀಯಾ? ಆ ಹಿಂಸಕನ ಕ್ರೋಧವು ಎಲ್ಲಿ ಇದೆ?

ಈಗಲಾದರೋ ಯೆಹೋವನೇ, ನೀನು ನಮ್ಮ ತಂದೆಯಾಗಿದ್ದಿ; ನೀನು ಕುಂಬಾರನು, ನಾವು ಜೇಡಿಮಣ್ಣು, ನಾವೆಲ್ಲರೂ ನಿನ್ನ ಕೈಕೆಲಸವೇ.

ಯೆಹೋವನು ಹೀಗೆನ್ನುತ್ತಾನೆ: “ಆಕಾಶವು ನನಗೆ ಸಿಂಹಾಸನ, ಭೂಮಿಯು ನನಗೆ ಪಾದಪೀಠ. ನೀವು ನನಗೆ ಇನ್ನೆಂಥಾ, ಮನೆಯನ್ನು ಕಟ್ಟಿಕೊಡುವಿರಿ? ನನ್ನ ವಿಶ್ರಾಂತಿಗೆ ತಕ್ಕ ಸ್ಥಳವು ಎಂಥದು? ಇವುಗಳನ್ನೆಲ್ಲಾ ನನ್ನ ಕೈಯೇ ನಿರ್ಮಿಸಿತು, ಹೌದು, ನನ್ನ ಕೈಯಿಂದಲೇ ಇವುಗಳೆಲ್ಲಾ ಉಂಟಾದವು. ನಾನು ಕಟಾಕ್ಷಿಸುವವನು ಎಂಥವನೆಂದರೆ ದೀನನೂ, ಮನಮುರಿದವನೂ ನನ್ನ ಮಾತಿಗೆ ಭಯಪಡುವವನೂ ಆಗಿರುವವನೇ.

ಯೆಹೋವನಾದರೋ ಸತ್ಯದೇವರು; ಆತನು ಚೈತನ್ಯಸ್ವರೂಪನಾದ ದೇವನೂ ಮತ್ತು ಶಾಶ್ವತ ರಾಜನೂ ಆಗಿದ್ದಾನೆ. ಆತನ ಕೋಪಕ್ಕೆ ಭೂಲೋಕವು ನಡುಗುತ್ತದೆ, ಜನಾಂಗಗಳು ಆತನ ರೋಷವನ್ನು ತಾಳಲಾರವು. ನೀವು ಅವುಗಳಿಗೆ, “ಭೂಮ್ಯಾಕಾಶಗಳನ್ನು ಸೃಷ್ಟಿಸದಿರುವ ದೇವರುಗಳು ಭೂಮಿಯ ಮೇಲಿನಿಂದ, ಆಕಾಶದ ಕೆಳಗಿನಿಂದ, ಅಳಿದುಹೋಗುವವು” ಎಂದು ಹೇಳಿರಿ. ಆತನು ತನ್ನ ಶಕ್ತಿಯಿಂದ ಭೂಮಿಯನ್ನು ನಿರ್ಮಿಸಿ, ತನ್ನ ಜ್ಞಾನದಿಂದ ಲೋಕವನ್ನು ಸ್ಥಾಪಿಸಿ, ತನ್ನ ವಿವೇಕದಿಂದ ಆಕಾಶಮಂಡಲವನ್ನು ಹರಡಿದ್ದಾನೆ.

‘ನಾನೇ ಕೈ ನೀಡಿ ನನ್ನ ಮಹಾ ಶಕ್ತಿಯಿಂದ ಲೋಕವನ್ನೂ ಭೂಮಿಯ ಮೇಲಣ ಮಾನವರನ್ನೂ ಪಶುಗಳನ್ನೂ ಸೃಷ್ಟಿಸಿದ್ದೇನೆ; ಈ ನನ್ನ ಸೃಷ್ಟಿಯನ್ನು ನನಗೆ ಸರಿತೋಚಿದವನಿಗೇ ಕೊಡಬಲ್ಲೆನು.

“ಆಹಾ! ಕರ್ತನಾದ ಯೆಹೋವನೇ! ನೀನು ಭುಜವನ್ನೆತ್ತಿ ನಿನ್ನ ಮಹಾ ಶಕ್ತಿಯಿಂದ ಭೂಮ್ಯಾಕಾಶಗಳನ್ನು ಸೃಷ್ಟಿಸಿದ್ದಿ; ಯಾವ ಕಾರ್ಯವೂ ನಿನಗೆ ಅಸಾಧ್ಯವಲ್ಲ.

ಆತನು ತನ್ನ ಶಕ್ತಿಯಿಂದ ಭೂಮಿಯನ್ನು ನಿರ್ಮಿಸಿ, ತನ್ನ ಜ್ಞಾನದಿಂದ ಲೋಕವನ್ನು ಸ್ಥಾಪಿಸಿ ತನ್ನ ವಿವೇಕದಿಂದ ಆಕಾಶಮಂಡಲವನ್ನು ವಿಸ್ತರಿಸಿದ್ದಾನೆ.

ಕೃತ್ತಿಕಾ ಮತ್ತು ಒರಿಯನ್ ಎಂಬ ಪ್ರಕಾಶಮಾನವಾದ ನಕ್ಷತ್ರಗಳನ್ನು ಸೃಷ್ಟಿಸಿ, ಕಾರ್ಗತ್ತಲನ್ನು ಬೆಳಕನ್ನಾಗಿ ಮಾಡಿ, ಹಗಲನ್ನು ಇರುಳಾಗಿ ಮಾರ್ಪಡಿಸಿ, ಸಾಗರದ ಜಲವನ್ನು ಬರಮಾಡಿಕೊಂಡು, ಭೂಮಂಡಲದ ಮೇಲೆ ಸುರಿಯುವಾತನ ಕಡೆಗೆ ತಿರುಗಿಕೊಳ್ಳಿರಿ, ಯೆಹೋವನೆಂಬುದೇ ಆತನ ನಾಮಧೇಯ!

ಉನ್ನತಲೋಕದಲ್ಲಿ ಉಪ್ಪರಿಗೆಯನ್ನು ಅನೇಕ ಅಂತಸ್ತನ್ನಾಗಿ ಕಟ್ಟಿಕೊಂಡು, ಭೂಲೋಕದ ಮೇಲೆ ಗುಮ್ಮಟವನ್ನು ಸ್ಥಾಪಿಸಿಕೊಂಡಿದ್ದಾನೆ. ಸಮುದ್ರದ ನೀರನ್ನು ಸೇದಿ, ಭೂಮಂಡಲದ ಮೇಲೆ ಹೊಯ್ಯುತ್ತಾನೆ, ಯೆಹೋವನೆಂಬುವುದೇ ಆತನ ನಾಮಧೇಯ.

ಅವನು ಅವರಿಗೆ “ನಾನು ಇಬ್ರಿಯನು; ಕಡಲನ್ನೂ ಒಣನೆಲವನ್ನೂ ಸೃಷ್ಟಿಸಿದ ಪರಲೋಕದ ದೇವರಾದ ಯೆಹೋವನ ಭಕ್ತನು” ಎಂದು ಹೇಳಿ,

ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಮಹಿಮೆಯ ಜ್ಞಾನವು ತುಂಬಿಕೊಂಡಿರುವುದು.’

ಇಸ್ರಾಯೇಲಿನ ವಿಷಯವಾಗಿ ಯೆಹೋವನು ನುಡಿದ ದೈವೋಕ್ತಿ. ಆಕಾಶ ಮಂಡಲವನ್ನು ಹರಡಿ, ಭೂಲೋಕಕ್ಕೆ ಅಸ್ತಿವಾರವನ್ನು ಹಾಕಿ, ಮನುಷ್ಯರೊಳಗೆ ಜೀವಾತ್ಮವನ್ನು ಸೃಷ್ಟಿಸುವ ಯೆಹೋವನು ಇಂತೆನ್ನುತ್ತಾನೆ,

ದೇವರಾದರೋ ಸೃಷ್ಟಿಯ ಮೊದಲಿನಿಂದಲೇಮನುಷ್ಯರನ್ನು ಗಂಡುಹೆಣ್ಣಾಗಿ ಉಂಟುಮಾಡಿದನು.

ಕಯಿನಾನನು ಎನೋಷನ ಮಗನು; ಎನೋಷನು ಸೇಥನ ಮಗನು; ಸೇಥನು ಆದಾಮನ ಮಗನು ಆದಾಮನು ದೇವರ ಮಗನು.

ಆದಿಯಲ್ಲಿ ವಾಕ್ಯವಿತ್ತು; ಆ ವಾಕ್ಯವು ದೇವರೊಂದಿಗಿತ್ತು; ಆ ವಾಕ್ಯವು ದೇವರಾಗಿತ್ತು. ಆ ವಾಕ್ಯವೆಂಬಾತನು ಆದಿಯಲ್ಲಿ ದೇವರೊಂದಿಗಿದ್ದನು. ಸಮಸ್ತವೂ ಆತನ ಮೂಲಕವಾಗಿ ಸೃಷ್ಟಿಯಾಯಿತು. ಸೃಷ್ಟಿಯಾದ ಎಲ್ಲವುಗಳಲ್ಲಿ ಆತನಿಲ್ಲದೆ ಒಂದಾದರೂ ಸೃಷ್ಟಿಯಾಗಲಿಲ್ಲ.

ಆತನು ಲೋಕದಲ್ಲಿ ಇದ್ದನು ಮತ್ತು ಲೋಕವು ಆತನ ಮೂಲಕ ಉಂಟಾಯಿತು, ಆದರೂ ಲೋಕವು ಆತನನ್ನು ಅರಿತುಕೊಳ್ಳಲಿಲ್ಲ.

ಔತಣದ ಮೇಲ್ವಿಚಾರಕನು ದ್ರಾಕ್ಷಾರಸವಾಗಿ ಮಾರ್ಪಟ್ಟಿದ್ದ ನೀರನ್ನು ರುಚಿನೋಡಿದಾಗ, ಅದು ಎಲ್ಲಿಂದ ಬಂದಿತೆಂದು ಅವನಿಗೆ ತಿಳಿದಿರಲಿಲ್ಲ, ಆದರೆ ನೀರನ್ನು ತೋಡಿಕೊಂಡು ತಂದ ಸೇವಕರಿಗೆ ತಿಳಿದಿತ್ತು. ಔತಣದ ಮೇಲ್ವಿಚಾರಕನು ಮದುಮಗನನ್ನು ಕರೆದು, “ಎಲ್ಲರೂ ಉತ್ತಮವಾದ ದ್ರಾಕ್ಷಾರಸವನ್ನು ಮೊದಲು ಕೊಟ್ಟು ಅಮಲೇರಿದ ಮೇಲೆ ಸಾಧಾರಣವಾದ ದ್ರಾಕ್ಷಾರಸವನ್ನು ಕೊಡುತ್ತಾರೆ. ನೀನಾದರೋ ಉತ್ತಮವಾದ ದ್ರಾಕ್ಷಾರಸವನ್ನು ಇದುವರೆಗೂ ಇಟ್ಟುಕೊಂಡಿರುವೆ” ಎಂದನು.

“‘ಆಕಾಶವು ನನಗೆ ಸಿಂಹಾಸನ, ಭೂಮಿಯು ನನ್ನ ಪಾದಗಳಿಗೆ ಪೀಠ; ನೀವು ನನಗೆ ಎಂಥ ಮನೆಯನ್ನು ಕಟ್ಟಿಕೊಡುವಿರಿ? ನನ್ನ ವಿಶ್ರಾಂತಿಗೆ ತಕ್ಕ ಸ್ಥಳವು ಯಾವುದು?

“ಜನರೇ, ನೀವು ಹೀಗೇಕೆ ಮಾಡುತ್ತೀರೀ? ನಾವೂ ಮನುಷ್ಯರೇ, ನಿಮ್ಮಂಥ ಸ್ವಭಾವವುಳ್ಳವರು. ನೀವು ಈ ವ್ಯರ್ಥವಾದ ಕೆಲಸಗಳನ್ನು ಬಿಟ್ಟುಬಿಟ್ಟು ಭೂಮ್ಯಾಕಾಶಗಳನ್ನೂ, ಸಮುದ್ರವನ್ನೂ, ಅವುಗಳಲ್ಲಿರುವ ಸಮಸ್ತವನ್ನೂ ಸೃಷ್ಟಿಮಾಡಿದ ಜೀವಸ್ವರೂಪನಾದ ದೇವರ ಕಡೆಗೆ ತಿರುಗಿಕೊಳ್ಳಬೇಕೆಂಬ ಸುವಾರ್ತೆಯನ್ನು ನಿಮಗೆ ಸಾರಿಹೇಳುವವರಾಗಿದ್ದೇವೆ.

“ಜಗತ್ತನ್ನೂ ಅದರಲ್ಲಿರುವ ಎಲ್ಲವುಗಳನ್ನೂ, ಉಂಟುಮಾಡಿದ ದೇವರು ಭೂಮ್ಯಾಕಾಶಗಳ ಒಡೆಯನಾಗಿರುವುದರಿಂದ ಆತನು ಕೈಯಿಂದ ಕಟ್ಟಿರುವ ಗುಡಿಗಳಲ್ಲಿ ವಾಸಮಾಡುವವನಲ್ಲ; ತಾನೇ ಎಲ್ಲರಿಗೂ ಜೀವಶ್ವಾಸ ಹಾಗೂ ಜೀವಿಸುವುದಕ್ಕೆ ಬೇಕಾದದ್ದೆಲ್ಲವನ್ನೂ ಕೊಡುವವನಾಗಿರಲಾಗಿ ಕೊರತೆಯಿದ್ದವನಂತೆ ಮನುಷ್ಯರ ಕೈಗಳಿಂದ ಸೇವೆಹೊಂದುವವನೂ ಅಲ್ಲ. ದೇವರು ಒಬ್ಬ ಮನುಷ್ಯನಿಂದ ಎಲ್ಲಾ ಜನಾಂಗಗಳನ್ನು ಸೃಷ್ಟಿಸಿ, ಅವರವರು ಇರತಕ್ಕ ಕಾಲಗಳನ್ನೂ ಹಾಗು ಅವರವರ ನಿವಾಸಗಳ ಮೇರೆಗಳನ್ನೂ ನಿಷ್ಕರ್ಷಿಸಿ ಭೂಮಂಡಲದಲ್ಲೆಲ್ಲಾ ಅವರನ್ನು ಇರಿಸಿ, ಒಂದು ವೇಳೆ ಅವರು ತಡವಾಗಿಯಾದರೂ ತನ್ನನ್ನು ಕಂಡುಕೊಂಡಾರೇನೋ ಎಂದು ತನ್ನನ್ನು ಹುಡುಕುವವರನ್ನಾಗಿ ಮಾಡಿದನು. ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ. ಏಕೆಂದರೆ ಆತನಲ್ಲಿಯೇ ನಾವು ಜೀವಿಸುತ್ತೇವೆ, ಚಲಿಸುತ್ತೇವೆ ಮತ್ತು ಇರುತ್ತೇವೆ. ನಿಮ್ಮ ಕವಿಗಳಲ್ಲಿ ಕೆಲವರು, ‘ನಾವು ಆತನ ಸಂತಾನದವರೇ’ ಎಂದು ಹೇಳಿದ್ದಾರೆ.

ಹೇಗೆಂದರೆ ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯ ಶಕ್ತಿಯೂ, ದೈವತ್ವವೂ, ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತದೆ. ಹೀಗಿರುವುದರಿಂದ ಅವರು ನೆಪವನ್ನು ಹೇಳಲು ಆಗುವುದಿಲ್ಲ.

“ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಪಿತನಾಗಿ ನೇಮಿಸಿದ್ದೇನೆಂದು” ಶಾಸ್ತ್ರದಲ್ಲಿ ಬರೆದಿದೆಯಲ್ಲ. ದೇವರು ಸತ್ತವರನ್ನು ಬದುಕಿಸುವವನಾಗಿಯೂ ಮತ್ತು ಅಸ್ತಿತ್ವದಲ್ಲಿ ಇಲ್ಲದ್ದನ್ನು ಅಸ್ತಿತ್ವಕ್ಕೆ ತರುವಂಥವನೂ ಆದ ದೇವರಲ್ಲಿ ಅಬ್ರಹಾಮನು ನಂಬಿಕೆಯಿಟ್ಟನು.

ಈ ವಿಷಯ ಹೇಗೆಂದರೆ ಒಬ್ಬ ಮನುಷ್ಯನಾದ ಆದಾಮನಿಂದಲೇ ಪಾಪವೂ ಲೋಕದೊಳಗೆ ಪ್ರವೇಶಿಸಿತು ಮತ್ತು ಮರಣವು ಪಾಪದ ನಿಮಿತ್ತ, ಹಾಗು, ಮರಣವು ಎಲ್ಲರು ಪಾಪಮಾಡಿದ್ದರಿಂದ ಎಲ್ಲರಿಗೂ ಪ್ರಾಪ್ತಿಯಾಯಿತು.

ದೇವರ ಮಕ್ಕಳ ಮಹಿಮೆಯು ಯಾವಾಗ ಪ್ರತ್ಯಕ್ಷವಾದೀತೆಂದು ಸೃಷ್ಟಿಯು ಬಹು ಕಾತುರದಿಂದ ಎದುರು ನೋಡುತ್ತಿದೆ. ಸೃಷ್ಟಿ ನಿರರ್ಥಕತೆಗೆ ಒಳಗಾಯಿತು; ಹೀಗೆ ಒಳಗಾದದ್ದು ಸ್ವೇಚ್ಛೆಯಿಂದಲ್ಲ, ಅದನ್ನು ಒಳಪಡಿಸಿದವನ ಸಂಕಲ್ಪದಿಂದಲೇ, ಆದರೂ ಅದಕ್ಕೊಂದು ನಿರೀಕ್ಷೆಯುಂಟು; ಏನೆಂದರೆ ಆ ಸೃಷ್ಟಿಯೂ ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುತ್ತವೆಂಬುದೇ. ಸೃಷ್ಟಿಯೆಲ್ಲಾ ಇಂದಿನವರೆಗೂ ನರಳುತ್ತಾ, ಪ್ರಸವ ವೇದನೆಪಡುತ್ತಾ ಇದೆಯೆಂದು ನಾವು ಬಲ್ಲೆವು. ಇದು ಮಾತ್ರವಲ್ಲದೆ

ಸಮಸ್ತವೂ ಆತನಿಂದ ಉತ್ಪತ್ತಿಯಾಗಿ, ಆತನಿಂದ ನಡೆಯುತ್ತಾ, ಇರುವುದೆಲ್ಲವೂ ಅತನಿಗೋಸ್ಕರವೇ. ಆತನಿಗೇ ಸದಾಕಾಲವೂ ಮಹಿಮೆಯುಂಟಾಗಲಿ ಸ್ತೋತ್ರ. ಅಮೆನ್.

“ನಮಗಾದರೋ ಒಬ್ಬನೇ ತಂದೆಯಾದ ದೇವರು; ಆತನೇ ಸಮಸ್ತಕ್ಕೂ ಮೂಲಕಾರಣನು; ನಾವು ಜೀವಿಸುವುದು ಆತನಿಗಾಗಿಯೇ, ಮತ್ತು ಒಬ್ಬನೇ ಕರ್ತನಾದ ಯೇಸು ಕ್ರಿಸ್ತನೆಂಬ ಏಕ ಕರ್ತನು ನಮಗಿದ್ದಾನೆ. ಆತನ ಮುಖಾಂತರವೇ ಸಮಸ್ತವೂ ಉಂಟಾಯಿತು. ನಾವೂ ಆತನ ಮುಖಾಂತರ ಉಂಟಾದೆವು.”

ಆದರೆ ದೇವರು ತನ್ನ ಇಷ್ಟದಂತೆ ಅದಕ್ಕೆ ದೇಹವನ್ನು ಕೊಡುತ್ತಾನೆ. ಒಂದೊಂದು ಬೀಜಕ್ಕೂ ಅದಕ್ಕೆ ತಕ್ಕ ದೇಹವನ್ನು ಕೊಡುತ್ತಾನೆ. ಎಲ್ಲಾ ಶರೀರಗಳು ಒಂದೇ ವಿಧವಾದವುಗಳಲ್ಲ; ಮನುಷ್ಯನ ಶರೀರ ಬೇರೆ, ಪಶುಗಳ ಶರೀರ ಬೇರೆ, ಪಕ್ಷಿಗಳ ಶರೀರ ಬೇರೆ, ಮೀನುಗಳದು ಬೇರೆ.

“ಮೊದಲನೆಯ ಮನುಷ್ಯನಾದ ಆದಾಮನು ಜೀವ ಪಡೆದ ವ್ಯಕ್ತಿ” ಎಂಬುದಾಗಿ ಪವಿತ್ರ ಗ್ರಂಥದಲ್ಲಿ ಬರೆದದೆಯಲ್ಲಾ. ಕಡೆ ಆದಾಮನಾದರೋ ಜೀವ ಕೊಡುವ ಆತ್ಮನಾದನು. ಆತ್ಮೀಕವಾದದ್ದು ಮೊದಲು ಬಂದದ್ದಲ್ಲಾ, ಪ್ರಾಕೃತವಾದದ್ದು ಮೊದಲನೆಯದು; ಅನಂತರ ಆತ್ಮೀಕವಾದದ್ದು. ಮೊದಲನೆಯ ಮನುಷ್ಯನು ಮಣ್ಣಿನಿಂದ ಮಾಡಲ್ಪಟ್ಟವನು; ಭೂಮಿಗೆ ಸೇರಿದವನು, ಎರಡನೆಯ ಮನುಷ್ಯನು ಪರಲೋಕದಿಂದ ಬಂದವನು. ಮಣ್ಣಿನಿಂದ ಹುಟ್ಟಿದವನು ಎಂಥವನೋ ಮಣ್ಣಿಗೆ ಸಂಬಂಧಪಟ್ಟವರೂ ಅಂಥವರೇ ಆಗಿರುತ್ತಾರೆ; ಪರಲೋಕದಿಂದ ಬಂದಾತನು ಎಂಥವನೋ ಪರಲೋಕಕ್ಕೆ ಸಂಬಂಧಪಟ್ಟವರೂ ಅಂಥವರೇ.

ಯಾಕೆಂದರೆ “ಕತ್ತಲೆಯೊಳಗಿನಿಂದ ಬೆಳಕು ಪ್ರಕಾಶಿಸಲಿ” ಎಂದು ಹೇಳಿದ ದೇವರು ತಾನೇ ಯೇಸು ಕ್ರಿಸ್ತನ ಮುಖದಲ್ಲಿ ತೋರುವ ದೇವಮಹಿಮೆಯ ಜ್ಞಾನವೆಂಬ ಪ್ರಕಾಶವು ಅನೇಕರಿಗೆ ಉಂಟಾಗುವುದಕ್ಕಾಗಿ ನಮ್ಮ ಹೃದಯಗಳಲ್ಲಿ ಪ್ರಕಾಶಿಸಿದನು.

ಹಾಗೂ ಸಮಸ್ತವನ್ನು ಸೃಷ್ಟಿಸಿದ ದೇವರಲ್ಲಿ ಆದಿಯಿಂದ ಗುಪ್ತವಾಗಿದ ಮರ್ಮದ ಯೋಜನೆಯನ್ನು ಎಲ್ಲಾರಿಗೂ ತಿಳಿಸುವಂತಹ ಕೃಪೆಯು ದೇವಜನರೊಳಗೆ ಅತ್ಯಲ್ಪನಾದ ನನಗೆ ಕೊಡಲ್ಪಟ್ಟಿತು.

ಕ್ರಿಸ್ತನು ಅದೃಶ್ಯನಾದ ದೇವರ ಪ್ರತಿರೂಪನೂ, ಸೃಷ್ಟಿಗೆಲ್ಲಾ ಜೇಷ್ಠಪುತ್ರನೂ ಆಗಿದ್ದಾನೆ. ಭೂಪರಲೋಕಗಳಲ್ಲಿರುವ ದೃಶ್ಯ ಅದೃಶ್ಯವಾದವುಗಳೆಲ್ಲವೂ, ಸಿಂಹಾಸನಗಳಾಗಲಿ, ಪ್ರಭುತ್ವಗಳಾಗಲಿ, ದೊರೆತನಗಳಾಗಲಿ, ಅಧಿಕಾರಗಳಾಗಲಿ ಆತನಿಂದ ಸೃಷ್ಟಿಸಲ್ಪಟ್ಟವು. ಸರ್ವವೂ ಆತನ ಮುಖಾಂತರವಾಗಿ ಆತನಿಗೋಸ್ಕರವಾಗಿ ಸೃಷ್ಟಿಸಲ್ಪಟ್ಟಿತು. ಆತನು ಎಲ್ಲಕ್ಕೂ ಮೊದಲು ಇದ್ದಾತನು, ಆತನಲ್ಲಿ ಸಮಸ್ತವು ಒಂದಾಗಿ ನೆಲೆಗೊಂಡಿದ್ದೆ.

ಆದರೆ ಈ ಅಂತ್ಯ ದಿನಗಳಲ್ಲಿ ನಮ್ಮ ಸಂಗಡ ಮಗನ ಮುಖಾಂತರ ಮಾತನಾಡಿದ್ದಾನೆ. ಆತನನ್ನು ಎಲ್ಲದಕ್ಕೂ ಬಾಧ್ಯಸ್ಥನನ್ನಾಗಿ ನೇಮಿಸಿದನು ಮತ್ತು ಆತನ ಮೂಲಕವೇ ಇಡೀ ವಿಶ್ವವನ್ನು ಉಂಟುಮಾಡಿದನು. ಈತನು ದೇವರ ಮಹಿಮೆಯ ಪ್ರಕಾಶವೂ, ಆತನ ವ್ಯಕ್ತಿತ್ವದ ಪ್ರತಿರೂಪವೂ, ತನ್ನ ಶಕ್ತಿಯುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ ಪಾಪಗಳನ್ನು ಶುದ್ಧಿಮಾಡಿ, ಉನ್ನತದಲ್ಲಿರುವ ಮಹೋನ್ನತನಾದ ದೇವರ ಬಲಗಡೆಯಲ್ಲಿ ಕುಳಿತುಕೊಂಡನು.

“ಕರ್ತನೇ ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದ್ದೀ. ಆಕಾಶವು ನಿನ್ನ ಕೈಕೆಲಸವಾಗಿದೆ,

ಪ್ರತಿಯೊಂದು ಮನೆಯನ್ನು ಯಾರೊಬ್ಬನು ಕಟ್ಟಿರುವನು, ಆದರೆ ಸಮಸ್ತವನ್ನು ಕಟ್ಟಿದಾತನು ದೇವರೇ.

ವಿಶ್ವವು ದೇವರ ಮಾತಿನಿಂದಲೇ ನಿರ್ಮಿತವಾಯಿತೆಂದು ನಾವು ನಂಬಿಕೆಯಿಂದಲೇ ತಿಳಿದುಕೊಂಡಿದ್ದೇವೆ. ಈ ಕಾರಣದಿಂದ ಕಾಣಿಸುವ ಈ ಜಗತ್ತು ದೃಶ್ಯವಸ್ತುಗಳಿಂದ ಉಂಟಾಗಲಿಲ್ಲವೆಂದು ಗ್ರಹಿಸುತ್ತೇವೆ.

ಕಡೆ ದಿನಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯ ಮಾಡುತ್ತಾ, “ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ನಮ್ಮ ಪೂರ್ವಿಕರು ನಿದ್ರೆಹೊಂದಿದ ನಂತರದಿಂದ; ಸಮಸ್ತವೂ ಸೃಷ್ಟಿಯ ಆರಂಭದಲ್ಲಿ ಇದ್ದ ಹಾಗೆಯೇ ಇದೆಯಲ್ಲಾ?” ಎಂದು ಪರಿಹಾಸ್ಯಮಾಡುತ್ತಾ ಕೇಳುವರೆಂಬುದಾಗಿ ನೀವು ಮೊದಲು ತಿಳಿದುಕೊಳ್ಳಬೇಕು. ಆದರೆ ಪೂರ್ವಕಾಲದಲ್ಲಿ ಭೂಮ್ಯಾಕಾಶಗಳು ದೇವರ ವಾಕ್ಯದ ಮೂಲಕ ನೀರಿನೊಳಗಿನಿಂದ ಹಾಗೂ ನೀರಿನಿಂದ ರೂಪಿಸಲ್ಪಟ್ಟಿತೆಂಬುದನ್ನು ಅವರು ಉದ್ದೇಶರ್ಪೂವಕವಾಗಿಯೇ ಮರೆತುಬಿಡುತ್ತಾರೆ. ಆ ನೀರಿನಿಂದಲೇ ಅಂದಿನ ಲೋಕವು ಜಲಪ್ರಳಯದಲ್ಲಿ ನಾಶವಾಯಿತು. ಆದರೆ ಈಗಿನ ಭೂಮ್ಯಾಕಾಶಗಳು ಅದೇ ವಾಕ್ಯದಿಂದ ಅಗ್ನಿನಾಶಕ್ಕಾಗಿ ಕಾದಿರಿಸಲ್ಪಟ್ಟಿವೆ. ಅವು ನ್ಯಾಯ ತೀರ್ಪಿನ ದಿನಕ್ಕಾಗಿ ಮತ್ತು ಭಕ್ತಿಹೀನರ ನಾಶಕ್ಕಾಗಿ ಉಳಿಸಲ್ಪಟ್ಟಿವೆ. ಪ್ರಿಯರೇ, ಕರ್ತನ ಎಣಿಕೆಯಲ್ಲಿ ಒಂದು ದಿನವು ಸಾವಿರ ವರ್ಷಗಳಂತೆಯೂ ಸಾವಿರ ವರ್ಷಗಳು ಒಂದು ದಿನದಂತೆಯೂ ಇವೆ ಎಂಬುದನ್ನು ಮಾತ್ರ ಮರೆಯಬೇಡಿರಿ.

ಆ ಇಪ್ಪತ್ನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಕುಳಿತಾತನ ಪಾದಕ್ಕೆ ಅಡ್ಡಬಿದ್ದು, ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ, “ಕರ್ತನೇ ನಮ್ಮ ದೇವರೇ ನೀನು ಮಹಿಮೆಯನ್ನು, ಗೌರವವನ್ನು, ಬಲವನ್ನು ಹೊಂದುವುದಕ್ಕೆ ಯೋಗ್ಯನಾಗಿದ್ದೀ, ಏಕೆಂದರೆ ಸಮಸ್ತವನ್ನು ಸೃಷ್ಟಿಸಿದಾತನು ನೀನೇ. ಎಲ್ಲವೂ ನಿನ್ನ ಚಿತ್ತದಿಂದಲೇ ಇದ್ದವು ಮತ್ತು ನಿನ್ನ ಚಿತ್ತದಿಂದಲೇ ನಿರ್ಮಿತವಾದವು” ಎಂದು ಹೇಳುತ್ತಾ ಯುಗಯುಗಾಂತರಗಳಲ್ಲಿಯೂ ಜೀವಿಸುವಾತನನ್ನು ಆರಾಧಿಸುತ್ತಿದ್ದರು.

ಪರಲೋಕವನ್ನೂ ಅದರಲ್ಲಿರುವ ಸಮಸ್ತವನ್ನೂ, ಭೂಮಿಯನ್ನೂ ಅದರಲ್ಲಿರುವ ಸಮಸ್ತವನ್ನೂ, ಸಮುದ್ರವನ್ನೂ ಅದರಲ್ಲಿರುವ ಸಮಸ್ತವನ್ನೂ ಸೃಷ್ಟಿಸಿ, ಯುಗಯುಗಾಂತರಗಳಲ್ಲಿಯೂ ಜೀವಿಸುವಾತನ ಮೇಲೆ ಆಣೆಯಿಟ್ಟು, “ಇನ್ನು ತಡಮಾಡದೆ,

ಮತ್ತೊಬ್ಬ ದೇವದೂತನು ಆಕಾಶಮಧ್ಯದಲ್ಲಿ ಹಾರಾಡುತ್ತಿರುವುದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜನಾಂಗ, ಕುಲ, ಭಾಷೆ, ಜನಗಳೆಲ್ಲರಿಗೆ ಸಾರಿಹೇಳುವುದಕ್ಕಾಗಿ ನಿತ್ಯವಾದ ಶುಭವರ್ತಮಾನವು ಆತನಲ್ಲಿತ್ತು. ಆ ದೂತನು, “ನೀವೆಲ್ಲರೂ ದೇವರಿಗೆ ಭಯಪಟ್ಟು ಆತನಿಗೆ ಮಹಿಮೆಯನ್ನು ಸಲ್ಲಿಸಿರಿ. ಏಕೆಂದರೆ ಆತನು ನ್ಯಾಯತೀರ್ಪು ಮಾಡುವ ಸಮಯವು ಬಂದಿದೆ. ಭೂಲೋಕ ಪರಲೋಕಗಳನ್ನೂ, ಸಮುದ್ರವನ್ನೂ, ನೀರಿನ ಬುಗ್ಗೆಗಳನ್ನೂ ಉಂಟುಮಾಡಿದಾತನನ್ನು ಆರಾಧಿಸಿರಿ” ಎಂದು ಮಹಾಧ್ವನಿಯಿಂದ ಹೇಳಿದನು.

Kannada - ಕನ್ನಡ - KN

KNIRV'19 - Kannada Indian Revised Version - 2019

This Bible text is from Kannada Indian Revised Version IRV 2019
https://open.bible/bibles/kannada-bridge-text-bible/
provided by: Bridge Connectivity Solutions Pvt Ltd, available by Creative Commons CC-BY-SA-4.0,
and this new compilation is shared as www.creativecommons.org/licenses/by-sa/4.0.
Languages are made available to you by www.ipedge.net